ಗುರುವಾರ, ಏಪ್ರಿಲ್ 18, 2024

ಪರಂಪರೆಯ ಪೊರೆವುದು ಹ್ಯಾಂಗ?

ಏಪ್ರಿಲ್ ೧೮, 'ವಿಶ್ವ ಪಾರಂಪರಿಕ ದಿನಾಚರಣೆ' ಅಂತಾರಪ. ವರ್ಷಪೂರ್ತಿ ಏನೇನೋ ದಿನಾಚರಣೆ ಅದ್ರಲ್ಲಿ ಇದೂ ಒಂದು. ಆದ್ರೆ ಏನು ದಿನಾಚರಣೆ ಇದು?  ಯಾವುದೋ ಇಲಾಖೆಗೆ ಸಂಬಂಧ ಪಟ್ಟಿದ್ದಿರಬೇಕು.. ಏನಂದ್ರಿ..? ನಾವೆಲ್ಲಾ ಆಚರಿಸೋ ಹಬ್ಬನಾ? ಯಾವ್ ಧರ್ಮದ ಹಬ್ಬರೀ ಇದು? ನೋಡ್ರಿ, ನಾವು ಸಾಮಾನ್ಯ ಮನುಷ್ಯರು, ಮನೇಲಿ ಕೂತೋರು, ಆಫೀಸ್ ಹೋಗೋರು, ಮಕ್ಕಳು ದೊಡ್ಡೋರು ಎಲ್ಲ ಇದೀವಿ, 'ಪಾರಂಪರಿಕ ದಿನ' ನ ಹೆಂಗೆ 'ಆಚರಣೆ' ಮಾಡ್ಬೇಕು ಅಂತೆಲ್ಲ ನಮಗೆ ಗೊತ್ತೇ ಇಲ್ಲಪಾ.. ಅಷ್ಟಕ್ಕೂ ಯಾಕೆ ಬೇಕಿದು?



ಯಾಕೆ ಬೇಕಿದು?

ನಮ್ಮ ಜೀವನದಲ್ಲಿ ನಮ್ಮ ಇರುವಿಕೆ, ನಮ್ಮ ವ್ಯಕ್ತಿತ್ವದ ಗುರುತು ಮತ್ತು ಮುಂದುವರೆಸುವ ಜೀವನ ಶೈಲಿಗೆ, ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮವರು ಹಿಂದಿನಿಂದಲೂ ಪರಂಪರೆಯನ್ನು, ಅದಕ್ಕೆ ಸಂಬಂಧ ಪಟ್ಟ ಸ್ಥಳ, ವಾಸ್ತು ಶಿಲ್ಪ, ಭೌಗೋಳಿಕ ಪುರಾವೆ, ಆಚಾರ ವಿಚಾರ, ಆಚರಣೆಗಳ ಮೂಲಕ ದಾಖಲಿಸುತ್ತಾ ಬಂದಿದ್ದಾರೆ ಮತ್ತು ಅವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅದನ್ನು ಸಂರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ವಿಷಯಗಳ ಕುರಿತಾಗಿ ಮಾಹಿತಿ ಕೊರತೆ, ಅದರ ಬಗ್ಗೆ ತಿಳಿದುಕೊಳ್ಳುವ ಮತ್ತು ಆಚರಣೆ ಮಾಡುವ ನಿರಾಸಕ್ತಿಯಿಂದಾಗಿ, ನಾವು ನಮ್ಮ ಅದೆಷ್ಟೋ ಅತ್ಯಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಎಷ್ಟು ಜನರಿಗೆ ನಮ್ಮದೇ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಪ್ರಮುಖ ಪಾರಂಪರಿಕ ತಾಣಗಳ ಮಹತ್ವ ಗೊತ್ತು? ನಮಗೆ ಸಂಭಂದಿಸದ ಪಾಳು ಬಿದ್ದ ಜಾಗಗಳು ಟೂರಿಸ್ಟ್ ಪಾಯಿಂಟ್ಸ್ಗಳು ಅವೆಲ್ಲ ಎಂಬ ಕನಿಷ್ಠ ಜ್ಞಾನಕ್ಕೆ ನಮ್ಮನ್ನು ನಾವೇ ಸೀಮಿತಗೊಳಿಸಿಕೊಂಡು ಕೂತಿದ್ದೇವೆ. 



 ಈ  'ವಿಶ್ವ ಪರಂಪರೆಯ ದಿನ'ವು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯಿಂದ, ಐತಿಹಾಸಿಕ ಮಹತ್ವದ ತಾಣಗಳನ್ನು ರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸುವ ಪ್ರಯತ್ನವೇ ಈ ದಿನಾಚರಣೆಯ ಉದ್ದೇಶ. 1982 ರಲ್ಲಿ, ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ಮಂಡಳಿ (ICOMOS) ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವೆಂದು ಘೋಷಿಸಿತು. ಇದನ್ನು 1983 ರಲ್ಲಿ UNESCO ನ ಜನರಲ್ ಅಸೆಂಬ್ಲಿ ಅನುಮೋದಿಸಿತು. ಈ ವರೆಗೆ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO), ಪ್ರಪಂಚದಾದ್ಯಂತದ  ಒಟ್ಟು 1,154 ಸ್ಮಾರಕಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಿದೆ. ಅದರಲ್ಲಿ ಭಾರತದ ೪೨ ಪ್ರಮುಖ ಪಾರಂಪರಿಕ ಸ್ಥಳಗಳು ಈಗಾಗಲೇ ಪಟ್ಟಿಯಲ್ಲಿ ಸೇರಿವೆ. ಇದು ಭಾರತಕ್ಕೆ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರಯಾಣಿಕರನ್ನು ಆಕರ್ಷಿಸಲು ಭಾರತಕ್ಕೆ ದೊಡ್ಡ ಸಾಮರ್ಥ್ಯವನ್ನು ಒದಗಿಸುತ್ತದೆ. ಇನ್ನೂ ೫೨ ತಾಣಗಳು ಭಾರತದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿವೆ. ಈ ಗುರುತಿಸುವಿಕೆಯ ಹೊರತಾಗಿಯೂ, ಭಾರತ ಇನ್ನೂ ಅನೇಕ ಸಂಸ್ಕೃತಿ ಮತ್ತು ಪರಂಪರೆಯ ಪೊರೆವ, ಕಲೆ ಮತ್ತು ವಾಸ್ತುಶಿಲ್ಪ ಹೊತ್ತ ದೇವಾಲಯಗಳು, ಗುಹೆ,ಕೋಟೆ, ಅರಮನೆಗಳು, ಸ್ಮಾರಕ ಕಟ್ಟಡಗಳು ನೈಸರ್ಗಿಕ ತಾಣಗಳು, ವನ್ಯಜೀವಿ ಸಂರಕ್ಷಣಾ ಸ್ಥಳಗಳ ಹೊಂದಿರುವ ಶ್ರೀಮಂತ ದೇಶವಾಗಿದೆ.  ಈ ರೀತಿಯ ನಮ್ಮ ಪರಂಪರೆಯತಾಣಗಳು ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಜಾಗತಿಕ ಮಟ್ಟದಲ್ಲಿ ನಮ್ಮ ಪ್ರಾಮುಖ್ಯತೆಯನ್ನು ಕಂಡುಕೊಳ್ಳುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. 

ಆಚರಣೆ ಹೇಗೆ?

ವಿಶ್ವ ಪರಂಪರೆಯ ದಿನದಂದು, ದೇಶದ ನಿವಾಸಿಗಳು ಈ ಅದ್ಭುತ ಸ್ಥಳಗಳನ್ನು ಪ್ರಶಂಸಿಸಲು, ಸಂರಕ್ಷಣೆಯ ಪ್ರಯತ್ನಗಳ ಬಗ್ಗೆ ತಿಳುವಳಿಕೆಯುಳ್ಳ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರ ಪರಂಪರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ಒಂದು ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ವಸ್ತುಸಂಗ್ರಹಾಲಯಗಳು ಉತ್ತಮ ಅವಕಾಶ. ವಿಶ್ವ ಪರಂಪರೆಯ ದಿನದಂದು ಅನೇಕ ವಸ್ತುಸಂಗ್ರಹಾಲಯಗಳು ಮಾರ್ಗದರ್ಶಿ ಪ್ರವಾಸಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತವೆ. ಅನೇಕ ಶಾಲಾ ಕಾಲೇಜುಗಳು ಈ ದಿನಕ್ಕೆ, ಪಾರಂಪರಿಕ ಸ್ಥಳಗಳ ಮಹತ್ವವನ್ನು ಸಾರುವ ಉದ್ದೇಶದಿಂದ ವಿವಿಧ ಬಗೆಯ ಶೈಕ್ಷಣಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಥಾ ನಡುಗೆಗಳ ಹಮ್ಮಿಕೊಳ್ಳುತ್ತವೆ. ಕೆಲವು ಸಾಮಾಜಿಕ ಸಂಸ್ಥೆಗಳು ವಿಶೇಷ ಪಾರಂಪರಿಕ ಪ್ರವಾಸ ಸ್ಥಳಗಳಿಗೆ ಭೇಟಿ ಮತ್ತು ಅಲ್ಲಿನ ವಾಸ್ತುಶಿಲ್ಪದ ಕುರಿತಾದ ಚರ್ಚೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಇಲಾಖೆಗಳ ವತಿಯಿಂದ ತಜ್ಞರ ಮಾತುಕತೆಗಳು, ನೃತ್ಯ, ಸಂಗೀತ, ಪ್ರವಾಸೀ ತಾಣಗಳ ಕುರಿತಾದ ಡಾಕ್ಯುಮೆಂಟರಿಗಳ ಪ್ರದರ್ಶನಗಳಿರುತ್ತವೆ. ಸೇವಾ ಸಂಸ್ಥೆಗಳು ಈ ದಿನದ ಪ್ರಾಮುಖ್ಯತೆ ಬಿಂಬಿಸಲು, ಚಿತ್ರಕಲೆ, ಛಾಯಾಚಿತ್ರಗ್ರಹಣ, ಶಿಲ್ಪಕಲೆ ಅಥವಾ ಕರಕುಶಲತೆಯಂತಹ ಮಾಧ್ಯಮದ ಮೂಲಕ ಕಲಾಪ್ರದರ್ಶನ, ವಿವಿಧ ಬಗೆಯ ಸ್ಪರ್ಧೆಗಳ ಚಟುವಟಿಕೆಯನ್ನು ನಡೆಸುತ್ತವೆ. ಟೀವಿ, ಪತ್ರಿಕೆ ಮಾಧ್ಯಮಗಳಲ್ಲಿ, ಪ್ರಮುಖ ಪರಂಪರಾ ತಾಣಗಳು ಮತ್ತು ಅವುಗಳ ವಿಶೇಷತೆಯ ಕುರಿತು ಮಾಹಿತಿಯನ್ನು ಹಂಚುತ್ತಾರೆ. 



ನಮ್ಮ ಆಚರಣೆ ಮತ್ತು ಕರ್ತವ್ಯಗಳೇನು?  

ಆಚರಣೆಗೂ ಮೊದಲು ಅರಿವು ಅಗತ್ಯ. ನಮ್ಮ ಪರಂಪರೆಯ ಪ್ರತಿಬಿಂಬಿಸುವ ಸ್ಥಳಗಳಿವು ಎಂಬ ಹೆಮ್ಮೆಯ ಭಾವನೆಯ ಅಗತ್ಯತೆ ಕೂಡ ಬೇಕಾಗಿದೆ. 

ಮೊದಲಿಗೆ ಸಾಧ್ಯವಾದಷ್ಟರ ಮಟ್ಟಿಗೆ ಪರಂಪರೆಯ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಿಳಿದುಕೊಳ್ಳೋಣ. ನಾವಿರುವ ಊರು ಮತ್ತು ಸುತ್ತಮುತ್ತಲಿನ ಊರುಗಳಿಂದಲೇ ತಿಳುವಳಿಕೆ ಪ್ರಾರಂಭವಾಗಲಿ. 

ಮಕ್ಕಳನ್ನು ರಜದ ದಿನಗಳಲ್ಲಿ ಬಿಡುವಿನ ಸಮಯದಲ್ಲಿ ಮಾಲ್, ರೆಸಾರ್ಟ್ ಸುತ್ತಿಸುವ ಬದಲು, ಟೀವಿ ಮುಂದೆ ಕೂರಿಸುವ ಬದಲು, ಹತ್ತಿರದ ಪ್ರಮುಖ ಐತಿಹಾಸಿಕ, ನೈಸರ್ಗಿಕ ಪ್ರವಾಸೀ ಸ್ಥಳಕ್ಕೆ ಭೇಟಿ ನೀಡಿ ಅದು ಯಾವುದಕ್ಕೆ ಪ್ರಸಿದ್ಧ ಅದರ ಹಿನ್ನಲೆ ಏನು ಎಂಬಿತ್ಯಾದಿ ಕತೆಗಳ, ವಿಷಯಗಳ ಕುರಿತು ಚರ್ಚಿಸೋಣ. ಮಕ್ಕಳಿಗೆ ಅದರ ಕುರಿತಾಗಿ ಚಿತ್ರಗಳನ್ನು ಬಿಡಿಸಲು, ಅನುಭವ ಬರವಣಿಗೆ ಮಾಡಲು ಪ್ರೋತ್ಸಾಹಿಸಬಹುದು. 

ಕಲೆ ಸಂಸ್ಕೃತಿ ನಾಡು ನುಡಿ ಪರಂಪರೆಯ ಕುರಿತಾಗಿ ಸಾವಿರಾರು ಪುಸ್ತಕಗಳು ಲೈಬರಿಯಲ್ಲಿ ಲಭ್ಯವಿರುತ್ತದೆ. ಕುಳಿತಲ್ಲಿಯೇ ಇಂಟರ್ನೆಟ್ ಮೂಲಕ ನಿಮಿಷಾರ್ಧದಲ್ಲಿ ಮಾಹಿತಿ ದೊರೆಯುತ್ತದೆ. ಟೀವಿಯಲ್ಲಿ ಬರುವ ವಿಶೇಷ ಕಾರ್ಯಕ್ರಮವನ್ನು ಮನೆಯವರೆಲ್ಲ ಒಂದುಗೂಡಿ ನೋಡಿದರೆ, ಅದುವೇ ಆಚರಣೆ ಆಗುತ್ತದೆ. 

ಮೇಲೆ ಹೇಳಿದಂತೆ ಪರಂಪರೆಯ ದಿನಾಚರಣೆಯ ಸಂಭ್ರಮೋತ್ಸವಕ್ಕೆ ಸಾಕಷ್ಟು ಕಾರ್ಯಕ್ರಮಗಳು ನಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುತ್ತಿರುತ್ತದೆ, ಆಸಕ್ತಿಯಿಂದ ಭಾಗವಹಿಸುವುದೂ ಕೂಡ ಈ ದಿನದ ಆಚರಣೆಯ ಒಂದು ಭಾಗ. 

ಪಾರಂಪರಿಕವಾಗಿ ವಿಶೇಷತೆ  ಇರುವ ಸ್ಥಳಗಳಿಗೆ ಹೋಗಿ ಒಂದಷ್ಟು ಸೆಲ್ಫಿ ತೆಗೆದುಕೊಂಡು ಬಂದು, ದಿನಾಚರಣೆಯ ದಿನ ಸೋಶಿಯಲ್ ಮೀಡಿಯಾಕೆ ಹಾಕುವ ಪ್ರವಾಸಿಗರಾಗಬೇಡಿ. ಸಾಧ್ಯವಾದರೆ, ನೀವು ನೋಡಿದ್ದನ್ನು, ತಿಳಿದುಕೊಂಡದ್ದನ್ನು, ಮಾಹಿತಿಯುಕ್ತ ಫೋಟೋ ತೆಗೆದುಕೊಂಡು ಹಂಚುವ ಮೂಲಕ, ಅದರ ಕುರಿತು ತಿಳಿದು ಬರವಣಿಗೆ ಅಥವಾ ಮಾತಿನ ಮೂಲಕ ಇತರರೊಂದಿಗೆ ಹಂಚಿಕೊಳ್ಳುವ ಜವಾಬ್ಧಾರಿಯುವ ಪ್ರವಾಸಿಗರಾಗುವುದು ಕೂಡ ಆಚರಣೆಯೇ!

ಪ್ರಸಿದ್ಧ ಪ್ರವಾಸೀ ಸ್ಥಳಗಳಿಗೆ ಹೋದಾಗ, ಅಲ್ಲಿನ ವಿಶೇಷತೆಯನ್ನು ಕೇವಲ ಕಣ್ಣಿನಿಂದ ಆನಂದಿಸಿ, ಅಲ್ಲಿಯ  ಅವಶೇಷಗಳ ಭಗ್ನಗೊಳಿಸದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಅನುಚಿತವಾಗಿ ವರ್ತಿಸದೆ, ಆವರಣವನ್ನು ಮಲಿನಗೊಳಿಸದೇ ಬರುವುದು ಕೂಡ ಆಚರಣೆಯೇ. 

ಪ್ರತಿಯೊಂದು ಸಂಸ್ಕೃತಿಯು, ಪರಂಪರೆಯೂ ತನ್ನದೇ ಆದ ಸಂಗೀತ, ಸಾಹಿತ್ಯ, ಹಬ್ಬಗಳು, ಬಟ್ಟೆ, ಆಹಾರ ಪದ್ಧತಿ ಮತ್ತು ಇತರ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ಅವುಗಳನ್ನು ಹೆಚ್ಚಾಗಿ ಬಳಸಿವುದು ಮತ್ತು ಆನಂದಿಸಿವುದು, ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಪ್ರಮುಖ ರಜಾದಿನಗಳನ್ನು ಆಚರಿಸುವುದು, ಕುಟುಂಬದ ಹಿರಿಯರಿಂದ ಮಾರ್ಗದರ್ಶನ ಪಡೆದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಳೆದು ಹೋಗಬಹುದಾದ ಮಾಹಿತಿಯ ಚಾಲ್ತಿಯಲ್ಲಿಡುವುದು ಕೂಡ ಆಚರಣೆಯೇ! 



ಈ ವರ್ಷದ 'ವಿಶ್ವ ಪರಂಪರೆಯ ದಿನ' ದ ಘೋಷವಾಕ್ಯ - "ವೈವಿದ್ಯತೆಯನ್ನು ಅನ್ವೇಷಿಸಿ ಮತ್ತು ಅನುಭವಿಸಿ". ಈ ವರ್ಷ ಕೇವಲ ಆಚರಣೆಯಲ್ಲ; ನಮ್ಮ ಭಾರತದ ವಿಶಾಲವಾದ ಮತ್ತು ವೈವಿಧ್ಯಮಯ ಐತಿಹಾಸಿಕ ಸಂಪತ್ತುಗಳ ಕುರಿತಾಗಿ ಆಳವಾದ ತಿಳುವಳಿಕೆಯನ್ನು ಅನ್ವೇಷಿಸಿ ಅನುಭವಿಸೋಣ!   



ಗುರುವಾರ, ಮಾರ್ಚ್ 28, 2024

ಮಕ್ಕಳಿರಲಿ ಅಡುಗೆ ಅರಮನೆಯಲ್ಲಿ..

ಇನ್ನೇನು ಮಕ್ಕಳ ಬೇಸಿಗೆ ರಜೆಪ್ರಾರಂಭವಾಗಲಿದೆ. ಮಕ್ಕಳ ಪಾಲಿಸಬೇಕಾದ ನಿತ್ಯದ ದಿನಚರಿಯಿಂದ ವಿರಾಮವನ್ನು ನೀಡುತ್ತದೆ. ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ವಿಶ್ರಮಿಸಲು, ಹೊಸ ವಿಷಯಗಳ ಅನ್ವೇಷಿಸಲು ಮತ್ತು ಶಾಶ್ವತವಾದ ನೆನಪುಗಳನ್ನು ರಚಿಸಲು ಉತ್ತಮ ಸಮಯ. ಇಂತಹ  ದಿನಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಬಹುದಾದ ಚಟುವಟಿಕೆಗಳಲ್ಲಿ ಅಡುಗೆಯೂ ಒಂದು. ಮಕ್ಕಳನ್ನು ಅಡುಗೆ ಮನೆಯಿಂದ ಹೊರಗಿಡುವ ದಿನಗಳು ಹೋಗಿವೆ. ಇಂದಿನ ಪಾಲನೆ ಶೈಲಿಯು ಮಕ್ಕಳು ಅಡುಗೆ ಮತ್ತು ಶುಚಿಗೊಳಿಸುವಿಕೆಯ ಕೌಶಲ್ಯಗಳನ್ನು ಕಲಿತಿರಬೇಕು ಎನ್ನುತ್ತದೆ. ಅಡುಗೆ ಲಿಂಗ ನಿರ್ಧಿಷ್ಟವೇನಲ್ಲ. ಅದು ಕೇವಲ ಹೊಟ್ಟೆ ತುಂಬಿಸುವ ಕಾರ್ಯವಲ್ಲದೆ, ವ್ಯಕ್ತಿತ್ವ ಅಭಿವೃದ್ಧಿಗೆ ಸಹಾಯ ಮಾಡುವಂತಹ  ಹವ್ಯಾಸ. ಇದನ್ನು ಚಿಕ್ಕಂದಿನಿಂದಲೇ ಅನುಸರಿಸುವುದರಿಂದ ಮಕ್ಕಳು ಬಹಳಷ್ಟು ವಿಷಯಗಳನ್ನು ಕಲಿಯಬಹುದು. 






ಮಕ್ಕಳು ಅಡುಗೆ ಕಲಿಯುವುದರ ಉಪಯೋಗ : 

ಪ್ರಾಯೋಗಿಕ ಜ್ಞಾನ : ಅಡುಗೆ ಪದಾರ್ಥವನ್ನು ಮಾಡಲು ಬೇಕಾಗುವ ಸಲಕರಣೆಗಳ ಕುರಿತಾದ ಜ್ಞಾನ ವೃದ್ಧಿಯಾಗುತ್ತದೆ. 

ಸಂಯೋಜನಾ ಕೌಶಲ್ಯ ಮತ್ತು ಗ್ರಹಿಕೆ :  ಆಹಾರ ವಸ್ತುಗಳ ಎತ್ತುವ, ಮಡಚುವ, ಮಗಚುವಾಗ ಕಣ್ಣು ಕೈಗಳ ಸಂಯೋಜನೆ, ಹಿಟ್ಟನ್ನು ಕಲೆಸುವಾಗ, ಕಾಯಿ ತುರಿಯಬೇಕಾದಾಗ, ತರಕಾರಿ ಹೆಚ್ಚುವಾಗ, ಕ್ಯಾರೆಟ್ ತುರಿಯುವಾಗ, ಬೆಂಕಿ ಹಚ್ಚುವಾಗ, , ಯಾವ ವಸ್ತು ಯಾವ ಪ್ರಮಾಣದಲ್ಲಿ ಹಾಕಬೇಕು, ಎಷ್ಟು ವಸ್ತುಗಳು ಬೇಕು, ೩ ಚಮಚ, ಒಂದು ಕಪ್, ೧೦ ಗ್ರಾಮ್ಸ್, ಅರ್ಧ ಲೀಟರ್ ಎಂಬಿತ್ಯಾದಿ ಗಣಿತದ ಕೌಶಲ್ಯದ ವೃದ್ಧಿಯಾಗುತ್ತದೆ. ಹೊಸ ಪದಗಳ ಬಳಕೆಗೆ ಅವಕಾಶವಾಗಿ, ಭಾಷಾ ಜ್ಞಾನ ಹೆಚ್ಚುತ್ತದೆ.  

ಇಂದ್ರಿಯಗಳ ಬಳಕೆ : ವಾಸನೆ, ರುಚಿ, ಸ್ಪರ್ಶಜ್ಞಾನ ಇತ್ಯಾದಿ ತಮ್ಮ ಇಂದ್ರಿಯಗಳ ಅನ್ವೇಷಿಸಲು ಮಕ್ಕಳಿಗೆ ಅಡುಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಸಾಂದ್ರತೆ, ಬೆರಿಕೆ, ಬೇಯುವುದು, ಹುರಿಯುವುದು, ಕಡೆಯುವುದು  ಇತ್ಯಾದಿ ವಿಷಯಗಳನ್ನು ಕಣ್ಣು ಕಾಣುತ್ತದೆ. ಒಗ್ಗರಣೆ, ಕರಿಯುವುದು, ಬೆಂದಿರುವ ಆಹಾರ ಇತ್ಯಾದಿ ವಾಸನೆಗಳ ಮಕ್ಕಳು ನೋಡಿದಾಗ ಮಕ್ಕಳ ಘರಾನಾ ಇಂದ್ರಿಯ ಚುರುಕಾಗುತ್ತದೆ. ರುಚಿಯನ್ನು ಧೃಡೀಕರಿಸಿಕೊಳ್ಳುತ್ತ ಮಕ್ಕಳು ಅಡುಗೆಯ ಕೌಶಲ್ಯವನ್ನು ಸುಧಾರಿಸಿಕೊಳ್ಳುತ್ತ ಹೋಗುತ್ತಾರೆ. ಅಡುಗೆಮನೆಯಲ್ಲಿ ಕೆಲಸ ಮಾಡುವುದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅತ್ಯುತ್ತಮ ಮೂಲವಾಗಿದೆ. 

ಕುಟುಂಬ ಸಂಪ್ರದಾಯಗಳು : ತಲೆಮಾರುಗಳಿಂದ ಬಂದಿರುವ ಆಹಾರದ ಪಾಕ ವಿಧಾನಗಳನ್ನು ಸಂರಕ್ಷಿಸಲು, ಅವುಗಳ ಬಳಕೆಯೇ ಸರಿಯಾದ ಮಾರ್ಗ. ಸಂಸ್ಕೃತಿ ಪರಂಪರೆಗಳನ್ನು ಮೆರೆಯುವಲ್ಲಿ ನಾವು ಸ್ಥಳೀಯವಾಗಿ ತಿನ್ನುವ ಆಹಾರವೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅಜ್ಜಿಯ ಕೈರುಚಿಯ ತೊವ್ವೆ, ಚಿಕ್ಕಪ್ಪನ ಮೈಸೂರು ಪಾಕದ ಹದ, ಅಪ್ಪ ಮಾಡುವ ಬಿರ್ಯಾನಿ, ಅಮ್ಮನ ಪೇಟೆಂಟ್ ತಂಬುಳಿ ಇತ್ಯಾದಿ ಮನೆಯ ಹಿರಿಯರಿಗೆ ಗೊತ್ತಿರುವ ಅಪರೂಪದ ಖಾದ್ಯಗಳನ್ನು, ತಿಂಡಿ ಅಡುಗೆಗಳನ್ನು ಮಾಡಲು ಕಲಿಯುವುದು ಕುಟುಂಬ ಬೇರುಗಳ ಅರಿವು ಸಿಗುವಂತೆ ಮಾಡುತ್ತದೆ. 

ತಾಳ್ಮೆ, ಸ್ವಯಂ ಸುಧಾರಣೆಯ ಕಲಿಕೆ : ಬ್ರೆಡ್ ಮಾಡುವಾಗ ಹಿಟ್ಟು ಹುದುಗುವಿಕೆ, ಸಲಾಡ್ ಮಾಡಲು ಕಾಳುಗಳು ಮೊಳಕೆ ಒಡೆಯುವುದು, ಹಾಲು ಕಾಯಿಸುವುದು, ಎಣ್ಣೆ ಕಾಯುವುದು, ಸಿಪ್ಪೆ ತೆಗೆಯುವುದು ಇತ್ಯಾದಿ ಅಡುಗೆಯ ಸಾಕಷ್ಟು ಸಣ್ಣ ಪುಟ್ಟ ಕೆಲಸಗಳಲ್ಲಿಯೂ ತಾಳ್ಮೆ ಅತೀಮುಖ್ಯ. ಮಕ್ಕಳಿಗೆ ಕಾಯುವುದರ ಅರಿವಿನ ಜೊತೆಗೆ, ಅದೇ ಸಮಯದಲ್ಲಿ ಇನ್ಯಾವುದೋ ಮುಂದಿನ ಹಂತದ ತಯಾರಿ  ಅಥವಾ ಉಳಿದ ಸ್ವಚ್ಛತೆಗಳನ್ನು ಮಾಡಿ ಮುಗಿಸಿಕೊಳ್ಳುವ ಪ್ಲಾನಿಂಗ್ ಸಿಗುತ್ತಾ ಹೋಗುತ್ತದೆ. ಪ್ರಾರಂಭದಲ್ಲಿ ಪ್ರಾಯೋಗಿಕ ಅಡುಗೆಗಳು ಶುಚಿ ರುಚಿಯಾಗಿ ಬರಲಿಕ್ಕಿಲ್ಲ. ತಾನೆಲ್ಲಿ ಎಡವಿದೆ ಹೇಗೆ ಅದನ್ನು ಸರಿ ಪಡಿಸಬಹುದು, ಮುಂದಿನ ಸಲ ಯಾವುದಕ್ಕೆ ಜಾಗರೂಕನಾಗಿರಬೇಕು ಎಂಬಿತ್ಯಾದಿ  ಆತ್ಮಾವಲೋಕನ ಮಕ್ಕಳು ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಅದು ಭವಿಷ್ಯದಲ್ಲಿ ಜೀವನದ ಅನೇಕ ಬಗೆಯ ಸವಾಲುಗಳಿಗೆ ತಮ್ಮನ್ನು ತಾವೇ ಆತ್ಮವಿಶ್ವಾಸದಿಂದ ಒಡ್ಡಿಕೊಳ್ಳಲು ಸಹಾಯ ಮಾಡುತ್ತದೆ. 

ಆಹಾರದ ಬಗೆಗಿನ ಗೌರವ : ತಟ್ಟೆ ಮುಂದೆ ಕುಳಿತು ತಿಂಡಿ ಈಗಿಂದೀಗಲೇ ಬರಬೇಕು, ಬಿಸಿಯಿರಬೇಕು, ತಣ್ಣಗಿರಬೇಕು, ಖಾರ ಹೆಚ್ಚು, ಚೆನ್ನಾಗಿಲ್ಲ ಇತ್ಯಾದಿ ನಕಾರಾತ್ಮಕ ಟೀಕೆಗಳನ್ನು ನೀಡುವ ಮಕ್ಕಳು, ತಾವೇ ಸ್ವಯಂಪಾಕ ಮಾಡುವಾಗ ಅಡುಗೆ ತಯಾರಿಯಲ್ಲಿನ ಶ್ರಮವನ್ನು ಅರಿಯುತ್ತಾರೆ. ತಾವು ಸಮಯ ಮತ್ತು ಅನೇಕ ಸಾಮಗ್ರಿಗಳನ್ನು ಬಳಸಿ ಮಾಡಿದ ಅಡುಗೆ ಯಾರೂ ತಿನ್ನದೇ ಕಸದಬುಟ್ಟಿಗೆ ಹೋದರೆ ಅದೆಷ್ಟು ಬೇಸರ ಎಂಬಿತ್ಯಾದಿ ಭಾವನಾತ್ಮಕ ಮೌಲ್ಯ ತಿಳಿಯುತ್ತದೆ. ಇದು ಮಕ್ಕಳಲ್ಲಿ ಇತರರಿಗೆ ಒಗ್ಗಿಕೊಂಡು ಮುನ್ನಡಡೆಯುವ ಸಹಕಾರ್ಯಾಚರಣೆ ಮತ್ತು ಸಮನ್ವಯ ಮನೋಭಾವವನ್ನು ಬೆಳೆಸುತ್ತದೆ. ಹಾಗೆಯೇ ತಾವಾಗಿಯೇ ಅಡುಗೆ ಮಾಡುವಾಗ ಅಡುಗೆಗೆ ಬಳಸುವ ವಸ್ತುಗಳಲ್ಲಿರುವ ಘಟಕಾಂಶದ ಮಾಹಿತಿ ಬಗ್ಗೆ ಮಾಹಿತಿ ಸಿಕ್ಕುತ್ತಾ ಹೋದಂತೆಯೂ, ಯಾವುದು ಒಳ್ಳೆಯದು ಯಾವುದು ತಮಗೆ ಕೆಟ್ಟದ್ದು ಎಂಬ ಅರಿವು ಸಿಕ್ಕಿ ಮಕ್ಕಳು ಆಹಾರವನ್ನು ಗೌರವಿಸಲು ಪ್ರಾರಂಭಿಸುತ್ತಾರೆ.   

ಮಕ್ಕಳ ಅಡುಗೆಗೆ ನಮ್ಮ ಸಹಕಾರ : 

ಮಕ್ಕಳು ಅವರ ವಯಸ್ಸಿಗೆ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅಡುಗೆ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಬಿಡಿ. ಒತ್ತಾಯ ಬೇಡ, ಆಟಗಳ ಮೂಲಕ, ಮಕ್ಕಳ ಸ್ವಚ್ಛವಾದ ಆಟಿಕೆಗಳನ್ನು ಬಳಸಿಕೊಂಡು ಜೊತೆಗೂಡಿ ಮಾಡುವ ಅಡುಗೆಮನೆಯ ಕೆಲಸಗಳ ಆಕರ್ಷಿಸಿ. 

ಪ್ರಾರಂಭದಲ್ಲಿ ಅಡುಗೆಮನೆಯ ಕಡೆಗೆ ಆಸಕ್ತಿ ಬರಲು, ಮಕ್ಕಳಿಗೆ ಅವರಿಷ್ಟದ ಆಹಾರ ಮಾಡಿಕೊಳ್ಳುವ ಅನುಮತಿ ನೀಡಿ. ಇದರಿಂದ ಮಕ್ಕಳು ಅಡುಗೆಯ ಕಡೆಗೆ ಉತ್ಸಾಹಭರಿತರಾಗುತ್ತಾರೆ ಜೊತೆಗೆ, ಅಡುಗೆ ಮನೆ ಸ್ವಚ್ಛವಾಗಿಟ್ಟು , ನಿಯಮಿತವಾಗಿ ಬಳಸುವ ವಸ್ತುಗಳನ್ನು ಸುಲಭವಾಗಿ ದಕ್ಕುವಂತೆ ಇಟ್ಟು ಪ್ರೇರಣೆ ನೀಡಿ. 

ಮಕ್ಕಳು ಮೊದಲ ಬಾರಿಗೆ ಅಡುಗೆ ಮನೆ ಕಡೆ ಬಂದಾಗ ಅದೆಷ್ಟೋ ವಿಷಯಗಳು ತಿಳಿದಿರುವುದಿಲ್ಲ. ಬೆಚ್ಚಬಹುದು, ತಪ್ಪಬಹುದು, ಚೆಲ್ಲಬಹುದು, ರಾಡಿ ಮಾಡಬಹುದು. ಅವರ ಪ್ರಯತ್ನ ಮತ್ತು ಆಸಕ್ತಿಯನ್ನು ಯಾವ ಕಾರಣಕ್ಕೂ ಹೀಯಾಳಿಸದೆ, ಬೈಯದೆ, ಮುಕ್ತವಾಗಿ ಅವರ ಸಹಾಯವನ್ನು ಪ್ರಶಂಸಿಸಿ. ಕೆಲವೊಂದು ಕೆಟ್ಟರೂ ಒಳ್ಳೆಯದೇ, ಅದನ್ನು ಹೇಗೆ ಸರಿಪಡಿಸಬಹುದು ಅಥವಾ ಸ್ವಚ್ಛಗೊಳಿಸಬಹುದು ಎಂಬ ಶಿಕ್ಷಣವನ್ನೂ ನಾವು ನೀಡಲು ಅವಕಾಶ ಆಗುತ್ತದೆ. ಶಾಂತವಾಗಿ ತಿಳಿಸಿ ಹೇಳುವ ತಾಳ್ಮೆ ನಮಗೆ ಬೇಕಷ್ಟೆ.  

ಮಗುವು ಮೊದಲ ಸಾರಿ ಮಾಡಿಕೊಟ್ಟ ಆಹಾರವನ್ನು ಮನೆಮಂದಿಯೆಲ್ಲ  ಸ್ವೀಕರಿಸಿ ಒಂದು ಥಾಂಕ್ ಯು ಹೇಳಿದರೆ, ಮೆಚ್ಚಿಗೆ ತಿಳಿಸಿದರೆ, ಊಟವನ್ನು ಒದಗಿಸುವ ವ್ಯಕ್ತಿಗೆ ನೀಡಬಹುದಾದ ಮೌಲ್ಯ ಮತ್ತು ಗೌರವವನ್ನು ನೀವು ಮಗುವಿಗೆ ತೋರಿಸಿಕೊಟ್ಟಂತಾಗುತ್ತದೆ. 

ಬೆಂಕಿ ಹಚ್ಚುವುದು, ಬಿಸಿ ಎಣ್ಣೆ, ಎಲೆಕ್ಟ್ರಿಕಲ್ ತಂತ್ರಜ್ಞಾನ ಉಪಕರಣಗಳ ಬಗ್ಗೆ ಹೆದರಿಸದೆ, ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿಕೊಟ್ಟರೆ ಸರಿ. ಶುರುವಿನಲ್ಲಿ ಜಾಗರೂಕತೆಗೆಂದು ನಮ್ಮ ಇರುವಿಕೆ ಅವಶ್ಯಕ. ಆದರೆ ನಮ್ಮ ಮುತುವರ್ಜಿ, ಅಧಿಕವಾದ ಆತಂಕ ತೋರ್ಪಡಿಕೆಯಾಗಿರದೆ, ಮಕ್ಕಳ ಜೊತೆ ನಿಂತು ಅವರೊಡನೆ ಉತ್ಸಾಹಭರಿತ ಮಾತುಕತೆಯಾಗಿದ್ದರ್, ಮಕ್ಕಳು ನಮ್ಮೊಡನೆ ಅಡುಗೆ ಮಾಡುವುದನ್ನು ಸಂಭ್ರಮಿಸುತ್ತಾರೆ. 


ಮಂಗಳವಾರ, ಮಾರ್ಚ್ 26, 2024

ತಿನ್ನಕ್ಕೇನಿದ್ದು?

ಮಕ್ಕಳ ಪರೀಕ್ಷಾ ಸಮಯ. ಸ್ಕೂಲಿಗೆ ರಜಾ, ಮಕ್ಕಳಿಗೆ ಮಜಾ.. ಓದಲಿಕ್ಕೆ ಕೂರಲು ಅವರಿಂದಾಗದು. ಓದದೇ ಕುಣಿಯಲು ಬಿಡಲು ನಮ್ಮಿಂದಾಗದು. ಈಗೆಂತು ಮಕ್ಕಳಿಗೆ ಪರೀಕ್ಷೆಗೆ ಓದಲು ಕುಳಿತರೆ ಬೋರ್ ಆಗಿಯೇ ಹಸಿವು ಜಾಸ್ತಿ. ಗಂಟೆಗಂಟೆಗೆ ಏನಾದರೂ ತಿನ್ನಲು ಕೊಡಬೇಕು.. ಹೊರಗಡೆಯ ಆಹಾರ ನೀಡಿ, ಪರೀಕ್ಷಾ ಸಮಯದಲ್ಲಿ ತೊಂದರೆ ತೆಗೆದುಕೊಳ್ಳಲು ನಮಗೆ ಇಷ್ಟವಿರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಮಕ್ಕಳ ಬಾಯಿ ಬಡುಗೆಗೆ ಅಂಗಡಿಯಿಂದ ತಂದ ಪೊಟ್ಟಣ ಆಹಾರವೆಂತೂ ಅವಶ್ಯಕತೆಕಿಂತ ಹೆಚ್ಚಿನ ಸಕ್ಕರೆ ಮತ್ತು ಕೆಟ್ಟ ಜಿಡ್ಡಿನ ಅಂಶದ್ದಾಗಿದ್ದು, ಮಕ್ಕಳಿಗೆ ಓದಲು ಮನಸ್ಸಾಗದಂತೆ ಇನ್ನಷ್ಟು ಆಲಸ್ಯತನವನ್ನು ಒಡ್ಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅದು ಇದು 'ತಿನ್ನಕ್ಕೇನಿದ್ದು' ಗೆ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ. ಹೀಗೊಂದು ಇವತ್ತಿನ ರೆಸಿಪಿ ಬರೆದಿಟ್ಟು ಹಂಚುವ ಎನಿಸಿತು. ಇದು ಮಕ್ಕಳನ್ನು ಓದಲು ಕೂರಿಸಿಕೊಂಡು ಪ್ರಶ್ನೋತ್ತರ ಕೇಳುವ ಸಮಯದಲ್ಲೇ ಮಾಡಬಹುದಾದ ಒಂದು ಸುಲಭವಾದ ಪೌಷ್ಟಿಕವಾದ ಹಲ್ವಾ. 

ವಿ.ಸೂ : ಇದು ನನ್ನ ಸಸ್ಯಜನ್ಯ ಆಹಾರದ ರೆಸಿಪಿ

ಒಂದು ದೊಡ್ಡ ಕಪ್ ಗೋಡಂಬಿ ಒಂದು ಗಂಟೆಗಳ ಕಾಲ ನೆನೆಸಿಕೊಂಡು, ಕನಿಷ್ಠ ನೀರಿನಲ್ಲಿ ಮಿಕ್ಸರ್ ಗ್ರೇನ್ದರ್ ಗೆ ಹಾಕಿ ಬೀಸಿಟ್ಟುಕೊಳ್ಳಬೇಕು. 

ಸಣ್ಣಗೆ ತುರಿದ ಕ್ಯಾರೆಟ್  ಅರ್ಧ ಕಪ್ 

ತುರಿದ ಕಾಯಿ ಕಾಲು ಕಪ್ (ಹಲ್ವಾ ತರಿತರಿಯಾದ  ಟೆಕ್ಸ್ಚರ್ಬೇಕಿದ್ದಲ್ಲಿ)

ನಾಲ್ಕು ಚಮಚ ಸಕ್ಕರೆ. 

ಬಿಸಿನೀರಿನಲ್ಲಿ ಕುದಿಸಿ, ಆರಿಸಿ, ಮಿಕ್ಸರ್ನಲ್ಲಿ ಬೀಸಿದ ಖರ್ಜೂರ ಹಣ್ಣಿನ ಪೇಸ್ಟ್ ಒಂದು ಕಪ್. ( ಬಿಳಿ ಸಕ್ಕರೆಯ ಕಡಿಮೆ ಬಳಸುವ ಉದ್ದೇಶದಿಂದ) 

ಕತ್ತರಿಸಿದ ಬಾದಾಮಿಯ ಸಣ್ಣ ಚೂರುಗಳು, ಹಲ್ವದ ಡೆಕೋರೇಷನ್ ಗೆ ಇಡೀ ಗೋಡಂಬಿ ೧೦-೧೫

ಜಿಡ್ಡಿನ ಅಂಶಕ್ಕೆ ೪-೫ ಚಮಚೆ ಕೊಬ್ಬರಿ ಎಣ್ಣೆ. 


ಬಾಣಲೆಗೆ ಒಂದೆರಡು ಚಮಚೆ ಕೊಬ್ಬರಿ ಎಣ್ಣೆ ಹಾಕಿ, ಬಾದಾಮಿಯ ಚೂರುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಂಡು, ಅದಕ್ಕೆ ತುರಿದ ಕ್ಯಾರೆಟ್ ಹಾಕಿ ಒಂದೈದು ನಿಮಿಷಗಳ ಕಾಲ ಹಸಿ ಅಂಶ ಹೋಗುವಷ್ಟು ಹುರಿದುಕೊಂಡು ಅದಕ್ಕೆ ಗೋಡಂಬಿ ಪೇಸ್ಟ್, ಖರ್ಜೂರದ ಪೇಸ್ಟ್, ೩-೪ ಚಮಚ ಸಕ್ಕರೆ ಎಲ್ಲವನ್ನೂ ಹಾಕಿ ಹದವಾಗಿ ಮಿಶ್ರಣ ಮಾಡಿಕೊಂಡು ಕೈಯಾಡಿಸುತ್ತ ಬರಬೇಕು. ಹಲ್ವಕ್ಕೆ ಹೆಚ್ಚಿನ ಬಿಳಿಸಕ್ಕರೆ ಬಳಸುವುದು ಬೇಡ ಎಂದು ಖರ್ಜೂರ ಹಾಕಿರುವುದರಿಂದ ಅದು ಬಲು ಬೇಗ ತಳ ಹಿಡಿಯುವ ಸಾಧ್ಯತೆ ಇರುತ್ತದೆ. ಸಾಧ್ಯವಾದಷ್ಟು, ಸಣ್ಣ ಉರಿಯಲ್ಲಿ ನಿರಂತರವಾಗಿ ಸೌಟಿನಿಂದ ಕೈಯಾಡಿಸುತ್ತಲೇ ನಾನೆಂತೂ ಅಷ್ಟರಲ್ಲಿ ಮಗಳ ಪರೀಕ್ಷೆಯ ಪುನರಾವರ್ತನೆ ಮುಗಿಸಿಕೊಂಡೆ. ಹಲ್ವಾ ತುಸು ಗಟ್ಟಿಯಾಗುವ ಹಂತಕ್ಕೆ ಬಂದಾಗ, ಒಂದೆರಡು ಚಮಚೆ ಕೊಬ್ಬರಿ ಎಣ್ಣೆ ಹಾಕಿಕೊಂಡು ಹಲ್ವಾ ಪಾತ್ರೆಗೆ ಹಿಡಿಯದಂತೆ ಮಾಡಬಹುದು. ಅಮ್ಮ ನನಗಾಗಿ ಏನೋ ಮಾಡುತ್ತಿದ್ದಾಳೆ, ಘಮ್ ಎನ್ನುವ ಪರಿಮಳವ ಹೀರುತ್ತಾ, ಮಗಳು ಉತ್ತರಿಸಿ ಮುಗಿಯುವದೋರಳಗಾಗಿ ರುಚಿಯಾದ ಹಲ್ವಾ ತಯಾರು. ಗಟ್ಟಿಯಾದ ಹಲ್ವಾವನ್ನು, ಎಣ್ಣೆ ಸವರಿದ ತಟ್ಟೆಯೊಂದಕ್ಕೆ ಹರಡಿಕೊಂಡು, ಮೇಲಿನಿಂದ ಹುರಿದ ಗೋಡಂಬಿಯ ಸಿಂಗರಿಸಿ, ಚಾಕುವಿನಲ್ಲಿ ಕಟ್ ಮಾಡಿ ಖುಷಿ ಪಟ್ಟಳು ಮಗಳು. 

ಯಾವುದೇ ಹಿಟ್ಟನ್ನು ಹಾಕದಿರುವುದರಿಂದ, ಈ ಹಲ್ವಾ ಮೆತ್ತಗಿರುತ್ತದೆ. ಎರಡ್ಮೂರು ದಿನದ ಮಟ್ಟಿಗೆ ಫ್ರಿಡ್ಜ್ ಅಥವಾ ಫ್ರೀಜರ್ ನಲ್ಲಿಟ್ಟು ಬಳಸಬಹುದು. ಮಕ್ಕಳಿಗೆ ಬಾಯಾಡಲು ರುಚಿ ಮತ್ತು ಪೌಷ್ಟಿಕ ಆಹಾರವಿದು. 



ಸೋಮವಾರ, ಮಾರ್ಚ್ 11, 2024

ಮಕ್ಕಳ ಪರೀಕ್ಷಾ ತಯಾರಿ - ವಿರಾಮದ ಆಟಗಳು

 ಮಕ್ಕಳ ಪರೀಕ್ಷಾ ತಯಾರಿ - ವಿರಾಮದ ಆಟಗಳು :

ಮಕ್ಕಳಿಗೀಗ ಪರೀಕ್ಷಾಸಮಯ. ತುಸು ಹೆಚ್ಚೇ ಓದುವ ಸಮಯ ಬೇಕು. ಕಲಿಕೆ, ಮನನ, ಪುನರಾವರ್ತನೆ ಎಂದು ಅಧಿಕ ಸಮಯ ಕುಳಿತು ಓದುವ ಅನಿವಾರ್ಯತೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡುವ ಅದೆಷ್ಟೋ ಮಕ್ಕಳಿಗೆ ಈಗ ಒಂದೇ ಸಲಕ್ಕೆ ಓದಿ ಅರಗಿಸಿಕೊಳ್ಳುವ ಸವಾಲು. ಇಂತಹ ಸಮಯದಲ್ಲಿ ನಿರಂತರವಾಗಿ ಓದುವ ಮಕ್ಕಳಿಗೆ ಮಧ್ಯೆ ಮಧ್ಯೆ ವಿರಾಮ ಬೇಕಾಗುತ್ತದೆ. ಸಣ್ಣ ಸಣ್ಣ ವಿರಾಮದ ಸಮಯದಲ್ಲಿ ಮಕ್ಕಳಿಗೆ ಸಂತೋಷವೂ ಆಗಬೇಕು, ಹಾಗೆಯೆ ಅವರ ಬುದ್ಧಿಗೆ ವ್ಯಾಯಾಮವೂ ಆಗುವಂತಹ ಒಂದಷ್ಟು ಮಕ್ಕಳ ಆಟಗಳು, ಮಕ್ಕಳಿಗೂ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುತ್ತಿರುವ ಪಾಲಕರಿಗೂ..

ರೇನ್ಬೋ ಆಟ :

ನೆಲ, ಬೋರ್ಡ್ ಅಥವಾ ಒಂದು ಪೇಪರ್ರಿನ ಮೇಲೆ, ಕೆಳಗೆ ಕಾಣುವಂತೆ ಐದರಿಂದ ಏಳು ಮನೆಗಳ ಚೌಕಟ್ಟನ್ನು ಚಿತ್ರಿಸಿಕೊಳ್ಳಿ. ಈಗ ಮಗುವಿಗೆ ಕಣ್ಣು ಕಟ್ಟಿ. ವಿವಿಧ ಬಣ್ಣಗಳು ಕಾಣುವಂತಹ ಯಾವುದೇ ವಸ್ತು ಉದಾಹರಣೆಗೆ, ಸ್ಕೇಚ್ಪೆನ್ಸ್, ಕ್ರೆಯಾನ್ಸ್, ಲೆಗೋ ಬಿಲ್ಡಿಂಗ್ಆ ಬ್ಲಾಕ್ಸ್ ಇನ್ನಿತರ ಯಾವುದೇ ಬಣ್ಣದ ವಸುಗಳನ್ನು ಚಿತ್ರದಲ್ಲಿ  ತೋರಿಸಿದಂತೆ ಮನೆಗಳಲ್ಲಿ ಜೋಡಿಸಿಡಿ. ಮಗುವಿಗೆ ಕಣ್ಣಿಗೆ ಕಟ್ಟಿದ ಬಟ್ಟೆ ತೆಗೆದು, ೫ - ೮ ಸೆಕೆಂಡುಗಳ ಕಾಲ, ನೋಡಲು ತಿಳಿಸುವುದು. ಆನಂತರ ಮತ್ತೆ ಮಗುವಿಗೆ ಕಣ್ಣು ಮುಚ್ಚಲು ಹೇಳಿ, ಈ ಎಲ್ಲ ಬಣ್ಣದ ವಸ್ತುಗಳನ್ನು ತೆಗೆದು ಬದಿಯಲ್ಲಿ ಇಡುವುದು. ಈಗ ಸವಾಲು ತಯಾರು. ಮುಂಚೆ ನೋಡಿದ ಮಾದರಿಯಲ್ಲಿಯೇ ಮಗು ಬಣ್ಣದ ವಸ್ತುಗಳನ್ನು ಜೋಡಿಸಿಡಬೇಕು. ಆಟಕ್ಕೆ ಆಟ, ಬುದ್ಧಿಗೆ ಕಸರತ್ತು 



ಸುಡುಕೊ :

ಸುಡುಕೊ ಒಂದು ಜನಪ್ರಿಯ ಸಂಖ್ಯೆಯ ಒಗಟಿನ ಆಟ ಎನ್ನಬಹುದು. ೯X ೯ ಗ್ರಿಡ್ ಅನ್ನು ಅಂಕೆಗಳಿಂದ ತುಂಬಬೇಕು. ಅಲ್ಲಲ್ಲಿ ಕೆಲವೊಂದು ಸಂಖ್ಯೆಗಳನ್ನು ಮೊದಲೇ ಬರೆದಿರಲಾಗುತ್ತದೆ. ಅದನ್ನು ಗಮನಿಸುತ್ತಾ, ನಿಯಮದಂತೆ, ಅಡ್ಡ ಸಾಲು ಮತ್ತು ಉದ್ದ ಸಾಲಿನಲ್ಲಿ ೧ ರಿಂದ ೯ ವರೆಗಿನ ಸಂಖ್ಯೆ ಎಲ್ಲಿಯೂ ಪುನರಾವರ್ತನೆ ಆಗದಂತೆ ಭರ್ತಿ ಮಾಡಬೇಕು. ನಾವು ಭರ್ತಿ ಮಾಡುವ ಸಂಖ್ಯೆಗಳು, ಯಾವುದೇ  ೩X ೩ ರ  ಚೌಕಿಮನೆಯಲ್ಲಿಯೂ  ೧ ರಿಂದ ೯ ವರೆಗಿನ ಸಂಖ್ಯೆಗಳಲ್ಲಿಯೇ ಭರ್ತಿಯಾಗಿರಬೇಕು ಎಂಬ ಇನ್ನೊಂದು ನಿಯಮವೂ ಇದೆ. ಇದು ಮಕ್ಕಳ ಮೆದುಳನ್ನು ಚುರುಕು ಮಾಡಲು ಜೊತೆಗೆ ಓದಿನಿಂದ ವಿರಾಮ ಸಿಕ್ಕಂತೆಯೂ ಕಾಣುವ ಮಜವಾದ ಆಟ. 



ಹನುಮತನ ಬಾಲ :

ಈ ಆಟದಲ್ಲಿ ನಾವು ಮೊದಲಿಗೆ ಸೂಚಿಸಿಕೊಂಡಂತೆ ಯಾವುದಾದರೂ ಒಂದು ವಿಷಯವನ್ನು ಕುರಿತಾಗಿ ಅದಕ್ಕೆ ಸಂಬಂಧಿಸಿದ ಪದಗಳ ಒಂದಕ್ಕೊಂದು ಜೋಡಿಸುತ್ತಾ ಪುನರಾವರ್ತಿಸುವ  ಬಂಡಿಯಾಟ. ಉದಾಹರಣೆಗೆ, ಪ್ರಾಣಿಗಳು ಎಂದಾದರೆ, ಒಬ್ಬ ವ್ಯಕ್ತಿ "ಹುಲಿ" ಎಂದರೆ, ಎರಡನೇ ವ್ಯಕ್ತಿ, " ಹುಲಿ, ಸಿಂಹ" ಎನ್ನಬೇಕು. ಮತ್ತೆ ಮೊದಲನೇ ವ್ಯಕ್ತಿ,  ಈ ವ್ಯಕ್ತಿ ಸೇರಿಸಿಕೊಂಡ ಪ್ರಾಣಿಯ ಹೆಸರನ್ನೂ ನೆನಪಿಟ್ಟುಕೊಂಡು ಅದಕ್ಕೆ ತಾನೊಂದು ಪದ ಸೇರಿಸಿ ಹೇಳಬೇಕು, "ಹುಲಿ, ಸಿಂಹ, ಎಮ್ಮೆ" ಎಂದು. ಹೀಗೆ ಪದಗಳ ಬಂಡಿ, ನೆನಪಿನ ಶಕ್ತಿಯ ಪ್ರಯೋಗ ಮುಂದುವರೆಯುತ್ತ ಹೋಗುತ್ತದೆ. 


ಅಕ್ಷರ ಮಣಿಸರ : 

ಈ ಆಟದಲ್ಲಿ ಮಕ್ಕಳಿಗೆ ಒಂದಷ್ಟು ಸುಲಭದ ಸ್ವರ ಮತ್ತು ವ್ಯಂಜನಗಳನ್ನು ಬರೆದುಕೊಟ್ಟು ಅದರಿಂದ ಸಾಧ್ಯವಾದಷ್ಟು ಪದಗಳನ್ನು ಮಾಡಲು ತಿಳಿಸುವುದು. ಇಂಗ್ಲೀಷ್ ಅಕ್ಷರಗಳನ್ನೂ ಕೂಡ ಇದೇ ಮಾದರಿಯಲ್ಲಿ ಸಣ್ಣ ದೊಡ್ಡ ಪದಗಳನ್ನು ಮಾಡಲು ನೀಡಬಹುದು.

ಉದಾ : ಆ ಸ ಟ ಗ ರ ಅ ಪ
              ಆಟ, ಆಗಸ. ಅಗಸ, ಅರ, ಪಟ, ಗರಗಸ, ಸರ ಇತ್ಯಾದಿ

             M T A E S I R
             mat, meat, sit, sir, ate, seat, sim, sire, team etc

ಮೂರು ಪದ ಒಂದು ಕಥೆ :

ಮಕ್ಕಳಿಗೆ ಅವರ ವಯಸ್ಸಿನ ಮಿತಿಗೆ ಅನುಗುಣವಾಗಿ, ಸುಲಭವಾಗಿ ಮಕ್ಕಳು ಗುರುತಿಸಲ್ಪಡುವ ಯಾವುದಾದರೂ ಮೂರು ಪದಗಳನ್ನು ಕೊಟ್ಟು, ಅವುಗಳನ್ನು ಬಳಸಿ ಕಥೆಯೊಂದನ್ನು ಹೆಣೆಯಲು ತಿಳಿಸಬೇಕು. ೫-೬ ವರ್ಷದ ಮಕ್ಕಳ ಕಥೆ ಅರ್ಥಪೂರ್ಣವಾಗಿಯೇ ಇರಬೇಕೆಂಬ ಅಪೇಕ್ಷೆಯಿಲ್ಲ. ಮಕ್ಕಳಿಗೆ ಆ ಪದಗಳನ್ನು ಬಳಸಿ ವಾಕ್ಯ ರಚನೆ ಮಾಡುವುದು ಮತ್ತು ಒಂದಕ್ಕೊಂದು ಸಂಬಂಧ ಹೆಣೆಯುವ ಚಾಕ್ಷತೆ ಸಿಕ್ಕರೆ ಸಾಕು. ಓದಿನ ಒತ್ತಡದಿಂದ ಹೊರಬಂದು ಕಲ್ಪನೆಯ ಯೋಚನೆಗಳನ್ನು ಮಕ್ಕಳು ಕೈಗೊಂಡರೆ, ಅದುವೇ ವಿಶ್ರಾಂತಿಯ ಭಾವವಾಗುತ್ತದೆ.  

ಉದಾ : ಮೋಡ, ನೀರು, ಛತ್ರಿ
              ಕಾಗೆ, ನರಿ, ರೊಟ್ಟಿ


ಒಂದು ಹುಂಡಿ ಅಕ್ಷರ - 

ಈ ಆಟವನ್ನು ಬಾಯ್ದೆರೆಯಾಗಿಯೂ ಆಡಬಹುದು ಅಥವಾ ಬರೆದು ಕೂಡ ಆಡಬಹುದು. ಯಾವುದಾದರೊಂದು ಕನ್ನಡ ಅಕ್ಷರವನ್ನು ಮಗುವಿಗೆ ನೀಡುವುದು. ಆ ಅಕ್ಷರ ಅಥವಾ ಅದರ ಕಾಗುಣಿತಾಕ್ಷರದಿಂದ ಉಚ್ಚಾರವಾಗುವ ಎಲ್ಲ ಪದಗಳನ್ನು ಮಗುವು ಎರಡು ಅಥವಾ ಮೂರು ನಿಮಿಷದ ಸಮಯದಲ್ಲಿ ಹೇಳುತ್ತಾ ಹೋಗಬೇಕು. ಪರೀಕ್ಷೆಯಲ್ಲಿ ಕಡಿಮೆ ಅವಧಿಯಲ್ಲಿ ಇನ್ನೆಷ್ಟು ಬರೆಯಬೇಕು ಎಂಬ ಅಂದಾಜು ಮಕ್ಕಳಿಗೆ ಈ ರೀತಿಯ ಆಟಗಳಿಂದ ಸಿಗುತ್ತದೆ. ಇಂಗ್ಲಿಷ್ ಪದಗಳನ್ನೂ ಕೂಡ ಇದೆ ರೀತಿಯಲ್ಲಿ ಹುಡುಕಿ ಹೇಳಬಹುದು. ಸ್ವಲ್ಪ ದೊಡ್ಡ ಮಕ್ಕಳಿಗಾದರೆ ಸಮಯದ ಗಡುವು ನೀಡಿ ಅವರ ಚುರುಕುತನ ಪರೀಕ್ಷಿಸಬಹುದು.


ಉದಾ : ೧೦ ನಿಮಿಷಗಳಲ್ಲಿ 'ರ' ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಹುಂಡಿಗೆ ಹಾಕು
              'ವ' ಕಾಗುಣಿತಾಕ್ಷರದ ಎಲ್ಲ ಪದಗಳನ್ನು ಬರೆಯೋಣ ಇತ್ಯಾದಿ


ಮೆಮೊರಿ ಚಾಲೆಂಜ್ :

ಒಂದೊಂದು ಚೀಟಿಯಲ್ಲಿ ಅನಿರ್ಧಿಷ್ಟವಾಗಿ ಮನೆಯ ಅಥವಾ ಸುತ್ತಮುತ್ತಲಿನ ವಸ್ತುಗಳ ಒಂದು ೧೦ ಹೆಸರುಗಳನ್ನು ಬರೆದಿಡುವುದು. ಈ ರೀತಿಯ ಅನೇಕ ಚೀಟಿಗಳನ್ನು ಮಾಡಿಡುವುದು. ಎಲ್ಲ ಚೀಟಿ ಹಾರಿಸಿ ಮಗುವಿಗೆ ಒಂದು ಆಯ್ಕೆ ಮಾಡಲು ಹೇಳಿ, ಸಿಕ್ಕ ಚೀಟಿಯನ್ನು ೨೦ ಸೆಕೆಂಡುಗಳ ಕಾಲ ಓದಿ ಮನನ ಮಾಡಿಕೊಂಡು ನಂತರ ನೋಡದೆ ಆ ಹೆಸರುಗಳನ್ನು ಹೇಳಲು ತಿಳಿಸುವುದು. 


ಚೆಂಡಿನಾಟ :

ಪುಟಿಯುವ ಚೆಂಡನ್ನು ಗೋಡೆಗೆ ಚಿಮ್ಮಿಸಿ ಕೆಳಗಡೆ ಬೀಳದಂತೆ ಕ್ಯಾಚ್ ಹಿಡಿಯುವುದು ಮತ್ತು ೨ ನಿಮಿಷದಲ್ಲಿ ಯಾರು ಹೆಚ್ಚಿನ ಸಲ ಚೆಂಡನ್ನು ಹಿಡಿಯುತ್ತಾರೆ ಎಂಬಿತ್ಯಾದಿ ಆಟಗಳು ಮಕ್ಕಳ ಏಕಾಗ್ರತೆ ಹೆಚ್ಚಿಸಲು ಸಹಾಯಕವಾಗುತ್ತದೆ. 

ಶನಿವಾರ, ಮಾರ್ಚ್ 9, 2024

ಒರಿಸ್ಸಾದ ದೇಶದಲ್ಲೇ ಅತ್ಯುತ್ತಮ ಆದಿವಾಸಿ ಸಂಗ್ರಹಾಲಯ

ನಮ್ಮ ಒರಿಸ್ಸಾ ಪ್ರವಾಸದಲ್ಲಿ ತಪ್ಪಿಸಲೇ ಬಾರದು ಎಂದುಕೊಂಡು ಭೇಟಿ ನೀಡಿದ ಸ್ಥಳ - ಒರಿಸ್ಸಾ ಸ್ಟೇಟ್ ಟ್ರೈಬಲ್ ಮ್ಯೂಸಿಯಂ! ಒರಿಸ್ಸಾ ಮೂಲತಃ ಆದಿವಾಸಿಗಳ ನಾಡಾಗಿದ್ದರಿಂದ, ಅಲ್ಲಿನ ಅನೇಕ ಆದಿವಾಸಿಗಳ ಜೀವನಶೈಲಿ ಸಂಸ್ಕೃತಿ ಆಚರಣೆ ಕುರಿತಾದ ಹಲವು ಕುರುಹುಗಳನ್ನು ಕಾಪಿಟ್ಟುಕೊಂಡ ಅದ್ಭುತ ಸಂಗ್ರಹಾಲಯವಿದು. ತಾಳ್ಮೆಯಿಂದ ನೋಡುತ್ತಾ ಹೋದರೆ ಕನಿಷ್ಠ ೩ ತಾಸುಗಳ ಕಾಲ ಇಲ್ಲಿನ ಸಂಗ್ರಹಾಲಯವನ್ನು ನೋಡಬಹುದು. ಹಿಂದೆ ಆದಿವಾಸಿಗಳು ಯಾವ ಮೂಲ ಭೂತ ಸೌಕರ್ಯವೂ ಇಲ್ಲದಿದ್ದ ಸಮಯದಲ್ಲಿ ಗುಡ್ಡ ಬೆಟ್ಟ, ಕಾಡನ್ನಾವರಿಸಿದ ನಾಡುಗಳಲ್ಲಿ ವಾಸಿಸುವಾಗ ತಮ್ಮ ದಿನಬಳಕೆಗೆ ಮತ್ತು ಕೆಲಸ ಕಾರ್ಯಗಳಿಗೆ ಯಾವ್ಯಾವ ರೀತಿಯ ವಸ್ತುಗಳ ಬಳಕೆ ಮಾಡುತ್ತಿದ್ದರು, ಯಾವ್ಯಾವ ಉಪಕರಣಗಳ ಆವಿಷ್ಕಾರ ಮಾಡಿಕೊಂಡಿದ್ದರು, ಹಬ್ಬಹರಿದಿನಗಳು ಆಚರಣೆಗಳ ಕುರಿತು ಜನರ ವೈವಿದ್ಯತೆ ಹೇಗಿತ್ತು ಇತ್ಯಾದಿ ವಿಷಯಗಳನ್ನು ತಿಳಿಯಲು ಇಂತಹದೊಂದು ಸಂಗ್ರಹಾಲಯ ಮಾಡಿರುವುದು ನಿಜಕ್ಕೂ ಪ್ರಶಂಸನೀಯ. 


ಉತ್ತಮ ಬುಡಕಟ್ಟು ಚಿತ್ತಾರದೊಂದಿಗೆ ಅನಾವರಣಗೊಳ್ಳುತ್ತದೆ ಸಂಗ್ರಹಾಲಯ. ಸುತ್ತಮುತ್ತಲು ಹಚ್ಚಹಸುರಿನ ಹುಲ್ಲು ಹಾಸು ಚಂದದ ಉದ್ಯಾನವನ ಅವುಗಳ ಜೊತೆಗೆ ಕಾಂಪೌಂಡ್ ಗೋಡೆಗಳು, ಮರದ ಬುಡಗಳು, ಸಂಗ್ರಹಾಲಯದ ಕಟ್ಟಡದ ಗೋಡೆಗಳು ಎಲ್ಲವೂ ಜಾನಪದ ಚಿತ್ತಾರದ ಪೇಂಟಿಂಗ್ಗಳು ಮ್ಯೂಸಿಯಂನ ಹೊರಾಂಗಣ ವಿನ್ಯಾಸವನ್ನು ಮೆಚ್ಚುವಂತೆ ಮಾಡಿದೆ.  




ಮ್ಯೂಸಿಯಂ ಕಟ್ಟಡವನ್ನು, ವ್ಯವಸ್ಥಿತವಾಗಿ ಆದಿವಾಸಿಗಳ ಬೇರೆ ಬೇರೆ ವಿಷಯ ವಸ್ತುಗಳಿಗೆ ವಿಶಾಲ  ಒಂದೊಂದು ಕೋಣೆಗಳ ಮೂಲಕ ಬೇರ್ಪಡಿಸಿ, ನಾವು ಸಮರ್ಪಕ ಮಾಹಿತಿ ಪಡೆಯಲು ಸಹಾಯವಾಗುವಂತೆ ಮಾಡಿದ್ದಾರೆ. ಮೊದಲನೇ  ಕೋಣೆಯಲ್ಲಿರುವ ಆದಿವಾಸಿಗಳ ಉಡುಪು, ವಸ್ತ್ರವಿನ್ಯಾಸ ಮತ್ತು ಆಭರಣಗಳ ಸಂಗ್ರಹ ತುಂಬಾ ಚೆನ್ನಾಗಿದೆ. ಕಾಸಿನ ವಿವಿಧ ಬಗೆಯ ಸರಗಳ ಡಿಸೈನ್ಸ್ಗಳು, ಬೊಂಡ, ಗಡಬ ಇನ್ನಿತರ ಆದಿವಾಸಿ ಜನರ ಸಣ್ಣ ಮೂಗು ಬೊಟ್ಟಿನಿಂದ ಹಿಡಿದು, ಲೋಹದ ಬಳೆಗಳು, ಕೈಗಡಗಗಳು, ೨೦ಕ್ಕೂ ಹೆಚ್ಚು ಬಗೆಯ ಬಾಚಣಿಕೆಗಳು, ೫೦ಕ್ಕೂ ಹೆಚ್ಚು ಕುತ್ತಿಗೆಯ ನೆಕ್ಕ್ಲೆಸುಗಳು, ಕವಡೆಗಳಿಂದ ಮಾಡಿದ ಸುಂದರ ಹಾರಗಳು ಇತ್ಯಾದಿ ನೂರಾರು ಸುಂದರ ಆಭರಣಗಳ ಸಂಗ್ರಹವಿದೆ. ಬೊಂಡ ಬುಡಕಟ್ಟು ಜನಾಂಗದವರು ಸಣ್ಣ ಮಣಿಗಳಿಂದ ಸರಗಳನ್ನು ಮಾಡಿಕೊಂಡು ಅದನ್ನೇ ವಸ್ತ್ರದಂತೆ ಧರಿಸಿರುವ ಚಿತ್ರಗಳು ಮತ್ತು ವಿವಿಧ ಮಣಿಗಳ ಹಾರಗಳು ನೋಡಲು ಅದ್ಭುತವಾಗಿದೆ. ನಾವೇನು ಫ್ಯಾಶನ್ ಎಂದು ಈಗ ಸಣ್ಣ ಮಣಿಗಳ ಗೊಂಚಲುಗಳ ಹಾರವನ್ನು ಬಳಸುತ್ತೇವೆಯೋ ಅದು ಅದೆಷ್ಟೋ ವರ್ಷಗಳ ಹಿಂದಿನ ಕಾಲದಲ್ಲೇ ಸೃಷ್ಟಿಯಾಗಿದ್ದ ವಿಶಿಷ್ಟ ವಿನ್ಯಾಸಗಳು ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತ ಮುಂದೆ ಸಾಗಿದೆವು.








ಇನ್ನೊಂದು ಕೋಣೆಯಲ್ಲಿ, ಗೊಂಡ ಮತ್ತಿತರ ಆದಿವಾಸಿ ಜನರ ವರ್ಣಚಿತ್ರಕಲೆಗಳ ಅನಾವರಣವಾಗಿತ್ತು. ಅವರ ಜಾನಪದ ಕಲೆಗಳು ಮುಖ್ಯವಾಗಿ, ಪ್ರಕೃತಿಯ ದೃಶ್ಯಾವಳಿಗಳಾದ, ಪ್ರಾಣಿ ಪಕ್ಷಿಗಳ ಚಿತ್ರಗಳ ತೋರ್ಪಡಿಸಿದರೆ, ಲಂಜ ಸಾವೊರಾ, ಸಂತಾಲ್, ಸಾವೊರಾ ಮತ್ತು ಜುವಾಂಗ್ ಜನಾಂಗದ ಚಿತ್ರಗಳು ಹೆಚ್ಚಾಗಿ ವಿನ್ಯಾಸಗಳು, ಜನರ ದೈನಂದಿನ ಜೀವನ, ಆಚರಣೆಗಳ ಚಿತ್ರಣ, ಸಾಮಾಜಿಕ ವ್ಯವಸ್ಥೆ ಇನ್ನಿತರ ವಿಷಯಗಳ ಚಿತ್ರಗಳ ತೋರಿಸುತ್ತವೆ. ಪ್ರತೀ ಕೋಣೆಯಲ್ಲಿ ಸಂಗ್ರಹಾಲಯದ ವಸ್ತುಗಳ ಮಾಹಿತಿ ಪಟ್ಟಿಯ ಜೊತೆಗೆ, ಅಲ್ಲಿಯೇ ಮೀಸಲಿಟ್ಟಿರುವ ಸ್ವಸಹಾಯ ಕಂಪ್ಯೂಟರ್ ನಲ್ಲಿ
ಬುಡಕಟ್ಟು ಜನಾಂಗದವರ ಹಬ್ಬಗಳ ಕುರಿತಾದ ಆಚರಣೆ, ಧಾಂಗ್ರಿಯ, ಭುಮ್ಜಿ, ಕುಟಿಯ ಇತ್ಯಾದಿ ಕಾಂಧಾ ಎಂಬ್ರಾಯಿಡರಿ, ಓರಾವೊನ್ ಟೆಕ್ಸ್ಟ್ಟೈಲ್ಸ್, ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಒದಗಿಸಿದ್ದಾರೆ. ಹಾಗೆಯೆ, ಅತ್ಯಂತ ಹಳೆಯ ಸಾಂಪ್ರದಾಯಿಕ ಬಿದಿರಿನ ಕಲಾಕೃತಿಗಳು, ಭತ್ತದ ಕಲಾಕೃತಿಗಳು, ಗೊಂಡ ವಾಲ್ಕ ಪೇಂಟಿಂಗ್ಲೆ ಬಗ್ಗೆ ಮಾಹಿತಿ, ಹೀಗೆ ಅನೇಕ ಬಗೆಯ ಕಲೆ ಮತ್ತು ಕೈಗಾರಿಕೆಗೆ ಸಂಬಂಧ ಪಟ್ಟ ಅನೇಕ ಆಸಕ್ತಕರ ವಿಡಿಯೋಗಳನ್ನು ನೋಡಲು ಇಲ್ಲಿ ಸಿಗುತ್ತದೆ. ಅದರದ್ದೇ ಒಂದು ವಿಭಾಗದಲ್ಲಿ, ವೈನ್ ಬಳಕೆ ಮತ್ತು ತಂಬಾಕು ಬಳಕೆಗೆ ಜನರು ಬಳಸುತ್ತಿದ್ದ ನೈಸರ್ಗಿಕ ವಿಶಿಷ್ಟ ಬಗೆಯ ಕೊಳವೆಗಳ ಸಂಗ್ರವಿದೆ.








ಸಂಗ್ರಹಾಲಯದಲ್ಲಿ ಕೇವಲ ವಸ್ತುಪ್ರದರ್ಶನ ಒಂದೇ ಅಲ್ಲದೆ, ಅಲ್ಲಿನ ಸ್ಥಳೀಯ ಕರಕುಶಲ ಕಲಾವಿದರಿಗೆ, ಕಲೆಯನ್ನು ಪ್ರಾಯೋಗಿಕವಾಗಿ ತೋರಿಸಿ ತಮ್ಮ ಕಲಾವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕೂಡ ಮಾಡಿದ್ದಾರೆ. ನಾವು ಭೇಟಿಕೊಟ್ಟ ಸಮಯಕ್ಕೆ ನುರಿತ ಕರ್ಮಿಯೊಬ್ಬರು ಭತ್ತದ ಕಲಾಕೃತಿಗಳನ್ನು ಮಾಡುತ್ತಿದ್ದರು. ಪ್ರತಿ ಹಂತವನ್ನು ಆಸಕ್ತರಿಗೆ ತಾಳ್ಮೆಯಿಂದ ವಿವರಿಸಿ ಹೇಳುತ್ತಿದ್ದರು. ಹತ್ತಿಯ ತೆಳುವಾದ ದಾರವನ್ನು ಬಳಸಿ, ನೆನೆಸಿಟ್ಟ ತೆಂಗಿನ ಕಡ್ಡಿಗೆ ಬಟ್ಟಗಳನ್ನು ಒಪ್ಪ ಓರಣವಾಗಿ ನೇಯ್ದು, ಬತ್ತದ ಸರಪಳಿ ತಯಾರಿಸುತ್ತಾರೆ. ನಂತರದಲ್ಲಿ ಅದು ಹಸಿಯಾಗಿದ್ದಾಗಲೇ ಬೇಕಾದ ಆಕೃತಿಗೆ ಬಗ್ಗಿಸಿ ಹೆಣೆದು, ದೇವತೆಗಳ ವಿಗ್ರಹ, ಪ್ರಾಣಿ ಪಕ್ಷಿಗಳ ಆಕೃತಿಗಳು, ಹೂಮಾಲೆಗಳು, ಬಳೆಗಳು, ತಲೆಗೆ ಹಾಕುವ ಕ್ಲಿಪ್, ಕೈಗನ್ನಡಿ ಇತ್ಯಾದಿ ಕರಕುಶಲ ವಸ್ತುಗಳ ತಯಾರು ಮಾಡುತ್ತಾರೆ. ನೈಸರ್ಗಿಕ ವಸ್ತುಗಳನ್ನಷ್ಟೇ ಬಳಸಿ ಮಾಡುವ ಮಾಡುವ ವಸ್ತುಗಳು ಇಷ್ಟ ಮತ್ತು ಅಪರೂಪವೆನಿಸಿ, ಮಗಳಿಗೆ ಇಷ್ಟವಾದ ಪ್ರಾಣಿ ಪಕ್ಷಿಗಳ ಕಲಾಕೃತಿಗಳನ್ನು ಮಗಳಿಗೆ ಕೊಡಿಸಿ ಬಂದೆವು. 











ಎರಡನೇಯದರಲ್ಲಿ ಮೀನುಗಾರಿಕೆ ಮತ್ತು ಬೇಟೆಯಾಡುವ ಆಯುಧಗಳನ್ನೊಳಗೊಂಡ ವಸ್ತುಗಳ ಸಂಗ್ರಹವಿದೆ. ಹೆಚ್ಚಾಗಿ ಬೆತ್ತ ವಿಶಿಷ್ಟವಾದ ಆಕಾರಗಳಲ್ಲಿ ರಚಿತ, ಕೂಲಿ, ಗೊಂಬೊಲೆಗಳನ್ನು ಬಳಸಿ ಮೀನು ಏಡಿಗಳನ್ನು ಹಿಡಿಯುವ ವಸ್ತುಗಳ ಸಂಗ್ರಹ ಚೆನ್ನಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ, ವಿಷವನ್ನು ಲೇಪಿಸುವ ಜಾಗವನ್ನೊಳಗೊಂಡ ಬಿಲ್ಲು ಮತ್ತು ಬಾಣ, ಚಾಟಿ, ವ್ಯವಸಾಯಕ್ಕೂ, ಸಮರಗಳಿಗೂ ಬಳಸಬಹುದಾದ ವಿವಿಧ ಬಗೆಯ ಕತ್ತಿಗಳನ್ನು ಕಂಡೆವು. ರಹಸ್ಯವಾಗಿಟ್ಟುಕೊಳ್ಳಬಹುದಾದ ಸಣ್ಣ ಕತ್ತಿಗಳು, ಬರ್ಜಿ, ಗುರಾಣಿಗಳು ಇನ್ನೂ ಅನೇಕ ಬಗೆಯ ಆಯುಧಗಳು ಪ್ರದರ್ಶಿತವಾಗಿದ್ದವು. ನೈಸರ್ಗಿಕವಾಗಿ ದೊರೆಯುವ ಪೊಳ್ಳಾಗಿರುವ ಕಾಯಿ ಬೀಜಗಳ ಬಳಸಿ, ತೆಂಗಿನ ಚಿಪ್ಪು ಗಳನ್ನು ಬಳಸಿ ಹಿಂದಿನ ಕಾಲದ ಜನರು ತಯಾರಿಸುತ್ತಿದ್ದ ಸೌಟುಗಳು, ನೀರಿನ ಬಾಟಲು ಇತ್ಯಾದಿ, ಬೆತ್ತದ ವಿವಿಧ ಬಳಕೆಯ ಬುಟ್ಟಿಗಳು, ಕಾಯಿಗಳ ಬಳಸಿ ದನಗಳಿಗೆ ಕಟ್ಟುವ ಶಬ್ದ ಮಾಡುವ ಘಂಟೆಗಳು, ನೇಗಿಲುಗಳು, ಕೇವಲ ಎಲೆಗಳಿಂದ ಮಾಡಿದ ಮಳೆಗೆ ರೈನ್ಕೋಟು, ಮರದ ಒರಳು ಮತ್ತು ಹಿಟ್ಟು ಬೀಸುವ ಸಾಧನಗಳನ್ನೆಲ್ಲ ನೋಡಿದೆವು . ೧೦ ವರ್ಷದ ಮಗಳಿಗೆ ತೋರಿಸಿ ನಾಗರೀಕತೆ ಹೇಗೆ ಮುಂದುವರೆಯುತ್ತ ಬಂದಿತು, ಇರುವ ವಸ್ತುಗಳಲ್ಲಿಯೇ, ಸಿಕ್ಕಿದ ವಾತಾವರಣದಲ್ಲಿಯೇ ಜನರು ಹೇಗೆ ಬಾಳಿ ಬದುಕುವ ಕೌಶಲ್ಯವನ್ನು ಪಡೆದಿದ್ದರು ಇತ್ಯಾದಿ ವಿಷಯಗಳ ಕುರಿತಾಗಿ ಚರ್ಚೆ ಮಾಡಲು ಅತ್ಯಂತ ಸಹಾಯಕವಾಯಿತು. ಇನ್ನೊಂದು ಕೋಣೆಯಲ್ಲಿ, ನಿತ್ಯಜೀವನಕ್ಕೆ ಬಳಸುವ ಗ್ರಹೋಪಕರಣಗಳು ಮತ್ತು ವ್ಯವಸಾಯಕ್ಕೆ ಬಳಸುವ ವಸ್ತುಗಳ ಸಂಗ್ರಹವಿದೆ. ನೃತ್ಯ ಮತ್ತು ಸಂಗೀತಕ್ಕೆ ಸಂಬಂಧಪಟ್ಟ ಮರದ, ಚರ್ಮದ ವಾದ್ಯ ಸಲಕರಣೆಗಳ ಸಂಗ್ರಹ ಇನ್ನೊಂದು ಕೋಣೆಯಲ್ಲಿದೆ.














ಇವೆಲ್ಲ ಸಂಗ್ರಹಗಳನ್ನು ನೋಡಿ ಹೊರಗೆ ಬಂದರೆ, ಮಧ್ಯದ ಅಂಗಳದಲ್ಲಿ, ಬುಡಕಟ್ಟು ಜನಾಂಗದವರ ದೇವರುಗಳು, ಗುಡಿಸಲುಗಳ ಮಾದರಿಯನ್ನು ಮಾಡಿಟ್ಟಿದ್ದಾರೆ. ಇನ್ನೊಂದೆಡೆ ಸಾಂಸ್ಕೃತಿಕವಾಗಿ ಹೆಚ್ಚಿನ ಪ್ರಾಮುಖ್ಯತಿ ಇರುವ ಬುಡಕಟ್ಟು ಜನಾಂಗದ ಹೆಸರು ಮತ್ತು ಅವರ ಪ್ರಾಂತ್ಯದ ಪಟ್ಟಿ ಮಾಡಿರುವ ದೊಡ್ಡದೊಂದು ಬೋರ್ಡ್ ಇಟ್ಟಿದ್ದು, ಪ್ರತೀ ಬುಡಕಟ್ಟು ಜನಾಂಗದ ಕುರಿತಾಗಿಯೂ ಮಾಹಿತಿ ಸಂಗ್ರಹ ಮಾಡಿ, ಅದರ ಕುರಿತಾದ ವಿಷಯಗಳನ್ನು ನೋಡಿ ತಿಳಿಯಲು ಸ್ಕ್ಯಾನ್ನರ್ ಗುರುತು ಹಚ್ಚಿದ್ದಾರೆ. ಅಲ್ಲಿಯೇ ಇರುವ ಸ್ಮಾರ್ಟ್ ಫೋನ್ ಗಳನ್ನು ಬಳಸಿ, ಯಾವುದೇ ಮಾಹಿತಿಯನ್ನೂ ನಿಂತು ಓದಿ ತಿಳಿದುಕೊಳ್ಳಬಹುದು.








ಒಟ್ಟಾರೆಯಾಗಿ ನಮ್ಮ ಹಿಂದಿನವರ ನೆಲೆ, ಜೀವನಶೈಲಿ, ಕೌಶಲ್ಯವನ್ನು ತಿಳಿಯಲು ಮಕ್ಕಳಿಗೆ ತಿಳಿಸಲು ಇಂತಹ ವಸ್ತು ಸಂಗ್ರಹಾಯಲ ಅತ್ಯಂತ ಯೋಗ್ಯವಾಗಿದೆ. ನಾವು ಸುಮಾರು ೩. ೫ ತಾಸು ಅಲ್ಲಿಯೇ ಕಳೆದು ಬಂದೆವು. ಅತ್ಯಂತ ಆಪ್ತತೆಯಿಂದ ವಸ್ತು ಸಂಗ್ರಹಾಲಯದ ಕುರಿತಾಗಿ ಮೆಚ್ಚುಗೆಯನ್ನು ಪ್ರತಿಕ್ರಿಯೆಯ ಪುಸ್ತಕದಲ್ಲಿ ಮಗಳು ಬರೆದು ಬಂದಳು. ಚಿತ್ರಕಲೆ ಹವ್ಯಾಸವಿರುವ ನನಗೆ ಮತ್ತು ಮಗಳಿಗೆ, ಇಲ್ಲಿನ ಪ್ರದರ್ಶಿತ ಪ್ರತಿ ಚಿತ್ರವೂ ಮನಸ್ಸಿಗೆ ಇನ್ನಷ್ಟು ಮತ್ತಷ್ಟು ಸಂತೋಷವನ್ನು ತುಂಬಿ ಕಳಿಸಿತು.