ಗುರುವಾರ, ಅಕ್ಟೋಬರ್ 20, 2016

ಭೂಮಿ ಹುಣ್ಣಿಮೆ

ಭೂಮಿ ಹುಣ್ಣಿಮೆ ಒಂದು ಅಪರೂಪದಲ್ಲಿ ಅಪರೂಪದ ಹಬ್ಬ. ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಭೂಮಿ ತಾಯಿಗೆ ಸಲ್ಲಿಸುವ ಪೂಜಾ ಕ್ರಮ. 'ಸೀಗೆ ಹುಣ್ಣಿಮೆ' ಎಂತಲೂ ಕರೆಯಲ್ಪಡುವ ಈ ಹಬ್ಬದಲ್ಲಿ, ಭೂಮಿಯನ್ನು ದೇವತೆ ಎಂದೇ ಭಾವಿಸಿ ಕೃಷಿಕರೆಲ್ಲ ವರ್ಷಪೂರ್ತಿ ತಮಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವ ತಮ್ಮ ನೆಲಕ್ಕೆ ವರ್ಷಕ್ಕೂಮ್ಮೆ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವಾಗಿದೆ. ಇನ್ನೂ ಕೆಲವರ ಪ್ರಕಾರ ಈ ಹಬ್ಬವು, ಭತ್ತ ಮೊಳಕೆಯೊಡೆದು ಪೈರು ಹಿಡಿಯುವ ಈ ಸಂದರ್ಭದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವುದು ಎಂಬ ಪ್ರತೀತಿಯೂ ಇದೆ.




ಭೂಮಿ ಹುಣ್ಣಿಮೆ ಹಬ್ಬದಂದು, ತೋಟ ಗದ್ದೆಗಳಲ್ಲಿ ಪೂಜೆಗೆ ಸೂಕ್ತವಾದ ಜಾಗವೊಂದನ್ನು  ಆಯ್ಕೆ ಮಾಡಿಕೊಂಡು ಹಿಂದಿನ ದಿನವೇ ಆ ಜಾಗವನ್ನು ಸ್ವಚ್ಛಗೊಳಿಸಿ, ಪೂಜಾ ಕಲ್ಲನ್ನು ಪ್ರತಿಷ್ಠಾಪಿಸಿ ಹಸನು ಮಾಡಿಕೊಳ್ಳುತ್ತಾರೆ. ಮರುದಿನ ಮುಂಜಾವಿನಲ್ಲೇ ಮಾವಿನ ತೋರಣ, ಬಾಳೆ ದಿಂಡು, ಕಬ್ಬು, ಹೂವು, ತೆಂಗಿನ ಸಿಂಗಾರ, ಹೂವುಗಳಿಂದ ಸಿಂಗರಿಸುತ್ತಾರೆ. ಮನೆಯ ಮಂದಿಯೆಲ್ಲ ಸೇರಿ ಪೂಜೆಗೆ ಪಾಲ್ಗೊಳ್ಳಲು ಅನುವಾಗುವಂತೆ ಬಾಳೆ ಎಲೆಗಳನ್ನು ತೋಟದಲ್ಲಿ ಹಾಸಿ ಕುಳಿತುಕೊಳ್ಳಲು ಅಣಿಮಾಡಲಾಗುತ್ತದೆ. ಪೂಜೆ, ಮಂಗಳಾರತಿ, ಬಾಗಿನ ಸಮರ್ಪಣೆ ಮತ್ತು ಹಬ್ಬದಡುಗೆಯ ನೈವೇದ್ಯ ಮಾಡಲಾಗುತ್ತದೆ. ಅದರಲ್ಲೂ ಚೀನಿಕಾಯಿ 'ಕಡುಬು', ಸಾಂಬಾರ 'ಬುತ್ತಿ' ಇವೆರಡು ಪ್ರಮುಖವಾದದ್ದು. ಕೋಸಂಬರಿ, ಪಾಯಸ, ಚಿತ್ರಾನ್ನ ಇನ್ನಿತರ ಅಡುಗೆ ಪದಾರ್ಥವನ್ನು ತಯಾರಿಸಿ,  ಭೂತಾಯಿಗೆ ನಮನ ಸಲ್ಲಿಸಿ, ವರ್ಷಪೂರ್ತಿ ಬೆಳೆದ ಬೆಳೆಯನ್ನು ರಕ್ಷಿಸು ತಾಯಿ ಎಂದು ಪ್ರಾರ್ಥಿಸುತ್ತಾರೆ. ಮಾಡಿದ ನೈವೇದ್ಯ ಅಡುಗೆ ಪದಾರ್ಥವನ್ನು, ಮುಂಜಾವಿನಲ್ಲೇ ಬೇಯಿಸಿಟ್ಟ ಸಾಕಷ್ಟು ಜಾತಿಯ ಸೊಪ್ಪಿನೊಡನೆ ಬೆರೆಸಿ, ಗದ್ದೆ ತೋಟಗಳಿಗೆ ಅಲ್ಲಲ್ಲಿ ಬೀರುತ್ತಾರೆ (ಹರಡುತ್ತಾರೆ). ಇನ್ನೂ ಕೆಲವು ಕಡೆ, ತೆಂಗಿನ ಹಾಗೂ ಪ್ರಮುಖ ಇಳುವರಿ ಕೊಡುವ ಮರಗಳ ಬುಡದಲ್ಲಿ ನೈವೇದ್ಯ ಮೃಷ್ಟಾನ್ನವನ್ನು ನೆಲದಲ್ಲಿ ಹುದುಗಿಸಿ, ಭೂಮಿಗೆ ಸಮರ್ಪಣೆ ಮಾಡುತ್ತಾರೆ. ಅದಾದ ನಂತರದಲ್ಲಿ, ಮನೆ ಮಂದಿ ಮತ್ತು ನೆಂಟರಿಷ್ಟರೊಡಗೂಡಿ, ಸಂತಸದಿಂದ ತೋಟದಲ್ಲೇ ಹಬ್ಬದಡುಗೆಯ ಊಟ ಬಡಿಸಿ ತಾವೂ ಸವಿಯುತ್ತಾರೆ.

ನಾವೆಲ್ಲಾ ಚಿಕ್ಕವರಿದ್ದಾಗ ತೋಟದೂಟ ಎಂದು ಸಂಭ್ರಮಿಸುತ್ತಿದ್ದೆವು. ಆ ದಿನ ೭ ಊಟ ಮಾಡಬೇಕು ಎಂಬ ಮಾತಿದೆ.. ಏನೇ ಆಗಲಿ, ಒಬ್ಬರ ಮನೆಯ ಪೂಜೆ ಮುಗಿದ ಮೇಲೆ ಪಕ್ಕದವರ ತೋಟದ ದಿಬ್ಬಕ್ಕೆ ಚಂಗನೆ ಹಾರಿ, ಅವರ ಮನೆಯ ಪೂಜೆ ಮತ್ತು ಪ್ರಸಾದ ಎರಡಕ್ಕೂ ನಾವು ರೆಡಿ ಆಗಿಬಿಡುತ್ತಿದ್ದೆವು. ಮಕ್ಕಳ ವಯಸ್ಸಿನ ನಮಗೆ, ಅಲ್ಲಲ್ಲೇ ಮಂಗಳಾರತಿಗೆ ಜಾಗಟೆ ಯಾರು ಹೆಚ್ಚಿನ ಸಮಯ ಬಾರಿಸುತ್ತಾರೆ, ಎಲ್ಲರ ಮನೆಯ ಊಟ ಮುಗಿಸಿ ಫಸ್ಟ್ ಮನೆ ತಲುಪುವುದು ಯಾರು, ಈ ತರದ ಸ್ಪರ್ಧೆ ಆಟೋಟಗಳು ಹಬ್ಬದ ಸಡಗರಕ್ಕೆ ಜೊತೆಯಾಗಿರುತ್ತಿದ್ದವು. ಆ ವಯಸ್ಸಿನಲ್ಲಿ, ಈ ಹಬ್ಬದ ಪ್ರಾಮುಖ್ಯತೆ ತಿಳಿದಿತ್ತೋ ಇಲ್ಲವೋ ನೆನಪು ಸಾಲ. ಆದರೂ ಊರವರು ನೆಂಟರಿಷ್ಟರು ಬಂಧು ಬಳಗ ಎಲ್ಲರೊಡಗೂಡಿ ಹಬ್ಬ ಆಚರಿಸುವುದೇ ಮಜವಾಗಿರುತ್ತಿತ್ತು. ಕಡುಬು, ಪಾಯಸ ಬೇಯಿಸಿದ ಸೊಪ್ಪು ಸದೆ ಎಲ್ಲವನ್ನೂ ತೋಟದಲ್ಲಿ, ಅಲ್ಲಲ್ಲಿ ಸಿಂಪಡಿಸಿವುದು ನೋಡಿ ಖುಷಿಯಾಗುತ್ತಿತ್ತು...

ನನ್ನ ಪ್ರಕಾರ, ಭೂಮಿ ಹುಣ್ಣಿಮೆ ಹಬ್ಬವು ನಿಜವಾಗಿಯೂ ಒಂದು ಒಳ್ಳೆಯ ಹಬ್ಬ. ಒಂದು ನಿರ್ಧಿಷ್ಟ ದಿನವನ್ನು ಭೂಮಿ ತಾಯಿಗಾಗೇ ಮೀಸಲಿಟ್ಟು, ಅದಕ್ಕೆ ವಂದಿಸಿ ಉಣಿಸುವುದು ಎಂಬ ಪರಿಕಲ್ಪನೆಯೇ ಸುಂದರ. ಆದರೆ ನಾವು ಈ ಹಬ್ಬವನ್ನು ಒಂದು ಆಚರಿಸಬೇಕಾದ ಸಂಪ್ರದಾಯ ಎಂದಷ್ಟೇ ಭಾವಿಸದೇ, ಇದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದರ ಅಷ್ಟೇ ಅನಿವಾರ್ಯತೆ ಇದೆ. ಮೊದಲನೆಯದಾಗಿ, ನಮ್ಮ ನೆಲ, ನಾವು ತಿನ್ನುವ ಆಹಾರವನ್ನು ಕೊಡುವ ನಮ್ಮ ಭೂಮಿಯನ್ನು, ನಾವು ಅತ್ಯಂತ ಒಳ್ಳೆ ರೀತಿಯಲ್ಲಿ ನೋಡಿಕೊಳ್ಳಬೇಕು. ಪೂಜೆ ಪುನಸ್ಕಾರವನ್ನೇನ್ನೂ ಮಾಡುತ್ತೇವೆ ನಿಜ, ಅದರ ಮರುದಿನವೇ ಮತ್ತೆ ಪ್ಲಾಸ್ಟಿಕ್ ಕವರ್ ಗಳನ್ನು ಅದೇ ಭೂಮಿಯ ಒಡಲಿಗೆ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಸಹಜವಾಗಿಯೇ ನಾವೆಷ್ಟು ಜನರು ಮಳೆಗಾಲದಲ್ಲಿ ದೊರೆಯುವ ನೀರನ್ನು ಇಂಗು ಗುಂಡಿಗಳ ಮೂಲಕ ಭೂಮಿಗೆ ಇಂಗಿಸುತ್ತೇವೆ? ಎಷ್ಟು ಮರಗಿಡಗಳನ್ನು ಉಳಿಸಿದ್ದೇವೆ ಮತ್ತು ಬೆಳೆಸಲು ಪ್ರಯತ್ನಿಸುತ್ತೇವೆ? ದೊಡ್ಡ ಪ್ರಾಮಾಣದಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಲಾಗದಿದ್ದರೂ, ನಮ್ಮ ನಮ್ಮ ಮನೆಯ ಹಿತ್ತಲ ಜಾಗವನ್ನು ಹಸನು ಮಾಡಿಕೊಂಡರೆ ಸಾಕಲ್ಲವೇ? ಎರಡನೆಯದಾಗಿ ಈಗಾಗಲೇ ಬಹುತೇಕವಾಗಿ ನಶಿಸಿ ಹೋಗುತ್ತಿರುವ ಈ ಹಬ್ಬದ ಆಚರಣೆಯ ಪ್ರಾಮುಖ್ಯತೆಯನ್ನು ನಮ್ಮ ಮಕ್ಕಳಲ್ಲಿ ಬೆಳೆಸುವುದು. ಮಕ್ಕಳ ವಯಸ್ಸಿಗೆ ತಕ್ಕಂತೆ, ಅವರಿಗೆ ಅರಿವಾಗುವ ಶಬ್ದಗಳನ್ನು ಬಳಸಿ,  ನಮಗೆಲಾ ಹಣ್ಣು ತರಕಾರಿಗಳನ್ನು ಬೆಳೆಯಲು ಸಹಾಯ ಮಾಡುವ ನೆಲಕ್ಕೆ ಇವತ್ತೊಂದು ಥ್ಯಾಂಕ್ಸ್ ಹೇಳೋಣ ಎಂದು ತಿಳಿಸಬಹುದು. ಮಕ್ಕಳಿಂದಲೇ ಅಂದು ಪೂಜೆ ಮಾಡಿಸಬಹುದು. ಇವೆಲ್ಲವನ್ನೂ ಕೊಡುತ್ತಿರುವ ಈ ಭೂಮಿಗೆ ನಾವು ಹೇಗೆ ಸಹಾಯ ಮಾಡೋಣ ಎಂಬುದರ ಕುರಿತಾಗಿ ಮಕ್ಕಳ ಜೊತೆ ಚರ್ಚಿಸಬಹುದು. ನಮ್ಮದೇ ಮನೆಯಂಗಳದ ಉದ್ಯಾನವನದಲ್ಲಿ ಒಂದು ದಿನದ ಶ್ರಮದಾನ, ಗಿಡಕ್ಕೆ ನೀರು ಹಾಕಿಸುವುದು ಇತ್ಯಾದಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಅವಕಾಶ ನೀಡಿದರೆ, ಮಕ್ಕಳಲ್ಲಿ ಈ ಕುರಿತಾಗಿ ಜವಾಬ್ದಾರಿ ಹೆಚ್ಚುತ್ತದೆ ಸಾಧ್ಯವಾದಲ್ಲಿ ಮಕ್ಕಳನ್ನು ಈ ಹಬ್ಬದ ದಿನದಂದು ಆದಷ್ಟು ತೋಟ ಗದ್ದೆಗಳಿಗೆ ಕರೆದುಕೊಂಡು ಹೋದರೆ,  ಮಕ್ಕಳಲ್ಲಿ ಪ್ರಾಯೋಗಿಕವಾಗಿ ನಮ್ಮ ಆಚರಣೆಗಳ ಕುರಿತಾಗಿ ತಿಳಿಯುವಂತಾಗುತ್ತದೆ. ಅದರಲ್ಲೂ ಹಿತ್ತಲು, ತೋಟ ಗದ್ದೆ ಇನ್ನಿತರ ನೈಸರ್ಗಿಕಾದ ಜಾಗದಲ್ಲೇ ಅಂದು ಮನೆ ಮಂದಿಯೆಲ್ಲರೂ ಹಾಯಾಗಿ ಒಟ್ಟಿಗೆ ಕುಳಿತು ಉಣ್ಣುವುದರಿಂದ ಮಕ್ಕಳಿಗೆಲ್ಲ ಒಂದು ರೀತಿಯ ಪಿಕ್ನಿಕ್ ಎನ್ನುವಷ್ಟು ಸಂತಸ ಉಂಟಾಗುತ್ತದೆ.

2 ಕಾಮೆಂಟ್‌ಗಳು:

  1. ನಿಜ ಸೌಮ್ಯ, ಭೂಮಿ ಹುಣ್ಣಿಮೆ ಒಳ್ಳೆಯ ಹಬ್ಬ. ನನಗೂ ಇದು ಫೇವರೇಟ್ ಹಬ್ಬವಾಗಿತ್ತು. ಕೊನೆಯ ಪ್ಯಾರಾದಲ್ಲಿನ ಮಾತುಗಳು ತುಂಬಾ ಸತ್ಯ, ಇದು ಎಲ್ಲರಿಗೂ ಅರಿವಾಗಬೇಕಿದೆ.

    ಪ್ರತ್ಯುತ್ತರಅಳಿಸಿ
  2. ಹೌದು ಸುಮಕ್ಕ...ಈ ಸರ್ತಿ ಸಾನ್ವಿಗೆ ಭೂಮಿ ಹುಣ್ಣಿಮೆ ಹಬ್ಬದ ಮೊದಲ ಅನುಭವ. ತುಂಬಾ ಎಂಜಾಯ್ ಮಾಡಿದ್ರ ಜೊತೆಗೆ, ಮಣ್ಣಿಗೆ ಅಜ್ಜನ ಮನೆಯಲ್ಲಿ ಒಳ್ಳೆ ಚಿಕ್ಕು ಹಣ್ಣು ಕೊಟ್ಟಿದ್ಕ್ ಥ್ಯಾಂಕ್ಸ್ ಅಂತಾನೂ ಹೇಳಿದ :)

    ಪ್ರತ್ಯುತ್ತರಅಳಿಸಿ