ಶನಿವಾರ, ಅಕ್ಟೋಬರ್ 28, 2017

ಮಕ್ಕಳ ಕಾರ್ಯಕ್ರಮ

ಮಗಳ ಶಾಲೆಯಲ್ಲಿ ಇವತ್ತು 'ಸ್ಪೋರ್ಟ್ಸ್ ಡೇ'. ಹೆಚ್ಚಿನ ಮಕ್ಕಳಿರುವ ಶಾಲೆಯಾದ್ದರಿಂದ ಇಂದು ಕೇವಲ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೋಸ್ಕರ ಮಾತ್ರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಒಂದೇ ಮಾದರಿಯ ಯುನಿಫಾರ್ಮ್ಪು ಧರಿಸಿ ಕಂಗೊಳಿಸುತ್ತಿದ್ದ ಪುಟ್ಟ ಪುಟ್ಟ ಮುದ್ದು ಮುದ್ದು ಮಕ್ಕಳು, ಅವರುಗಳನ್ನೆಲ್ಲ ಶಿಸ್ತಿನಲ್ಲಿ ನಿಲ್ಲಿಸಲು ಶ್ರಮಿಸಿ ಕಡೆಗೂ ಯಶಸ್ವಿಗೊಂಡಿದ್ದ ಟೀಚೆರ್ರುಗಳು, ತಮ್ಮ ತಮ್ಮ ಮಕ್ಕಳ ಕವಾಯಿತು-ಆಟ-ಸ್ಪರ್ಧೆ ಎಲ್ಲವನ್ನೂ ನೋಡಿ ಸಂಭ್ರಮಿಸಲು ಕಣ್ಣು, ಕಣ್ಣಿಗಿಂತ ಹೆಚ್ಚಾಗಿ ಫೋಟೋಗೋಸ್ಕರ ಮೊಬೈಲ್ ಮತ್ತು ಕ್ಯಾಮೆರಾ ಎಲ್ಲವನ್ನೂ ರೆಡೀ ಹಿಡಿದು ನಿಂತ ನಮ್ಮಂತಹ ಪಾಲಕರು, ಮುಖ್ಯ ಅತಿಥಿಗಳಿಗೋಸ್ಕರ ಸಿಂಗಾರಗೊಂಡಿದ್ದ ವೇದಿಕೆ ಎಂಬಲ್ಲಿಗೆ ಸಕಲ ಸಿದ್ಧತೆಗಳೂ ಆಗಿದ್ದವು. ಸ್ಪೋರ್ಟ್ಸ್ ಡೇ ಕಾರ್ಯಕ್ರಮದ ಪ್ರಾರಂಭವಾಯಿತು. ಬಣ್ಣ ಬಣ್ಣದ ಟೇಪನ್ನು ಹಿಡಿದುಕೊಂಡ ನಮ್ಮ ನಮ್ಮ ಮಕ್ಕಳು ನೀಡಿದ ವಿನೋದಾವಳಿ ನಾವು ಪಾಲಕರೆಲ್ಲ ಬೀಗುವಂತೆ ಮಾಡಿತು. ಅಷ್ಟು ಚಿಕ್ಕ ಚಿಕ್ಕ ಮಕ್ಕಳ ಹಿಡಿದು, ಅವರಿಗೆ ಬಗೆ ಬಗೆಯ ತರಬೇತಿ ನೀಡಿ, ಕವಾಯಿತು ಮಾಡಿಸುವಲ್ಲಿನ ಶಿಕ್ಷಕರ ಪ್ರಯತ್ನ ಖಂಡಿತವಾಗಿಯೂ ಮೆಚ್ಚುವಂತದ್ದೇ. ನಂತರದಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಏರ್ಪಡಿಸಿದ್ದ ಒಂದಷ್ಟು ಆಟೋಟ ಸ್ಪರ್ಧೆಗಳು ನೆರೆದಿದ್ದ ಸಭಿಕರನ್ನೆಲ್ಲ ಅತೀವವಾಗಿ ರಂಜಿಸಿತು. ಖುಷಿ, ಉತ್ಸಾಹ, ಮಕ್ಕಳನ್ನು ಪ್ರೋತ್ಸಾಹಿಸಲು ಸಭಿಕರ ಚಪ್ಪಾಳೆ, ಮುಖ್ಯವಾಗಿ ಮಕ್ಕಳ ಕಾರ್ಯಕ್ರಮದೆಡೆಗೆ ಎಲ್ಲರ ಗಮನ ಆ ಕಾರ್ಯಕ್ರಮವನ್ನು ಒಂದೆಡೆ ಕೇಂದೀಕೃತಗೊಳಿಸಿತ್ತು.  

ಒಂದೆಡೆ ಶಾಲಾ ಆಟದ ಬಯಲಿನ ಮಧ್ಯದಲ್ಲಿ ಎಲ್ಲ ಸ್ಪರ್ಧೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಉಳಿದ ಮಕ್ಕಳನ್ನು ಬಯಲಿನಲ್ಲಿ ಆಟದ ವೀಕ್ಷಣೆಗಾಗಿ ಕೂರಿಸಲಾಗಿತ್ತು. ಅದೊಂದು ಮರಳು ಮಣ್ಣು ಮಿಶ್ರಿತ ಆಟದ ಬಯಲು. ಮಕ್ಕಳಿಗೆ ಮಣ್ಣಿನ ಸ್ಪರ್ಶತೆಯಾದ ಮೇಲೆ ಕೇಳಬೇಕೆ? ಹೆಚ್ಚಿನ ಮಕ್ಕಳು ಮಣ್ಣಲ್ಲಿ ಆಡಲು ಶುರು ಮಾಡಿದ್ದರು. ಅವರಿಗೆ ಬಟ್ಟೆ ಗಲೀಜಾಗುತ್ತದೆ, ಕೈ ಕೊಳಕಾಗುತ್ತದೆ ಎಂಬೆಲ್ಲ ಪರಿಕಲ್ಪನೆ ಇರುತ್ತದೆಯೇ? "ಡೋಂಟ್ ಟಚ್ ದಿ ಮಡ್, ಯು ವಿಲ್ ನಾಟ್ ಗೆಟ್ ದಿ ಗಿಫ್ಟ್ ಅದರವೈಸ್" ಎನ್ನೋ ಟೀಚರ್ರಿನ ಬೆದರಿಕೆ ಕೂಡ ಯಾವ ಮಕ್ಕಳಿಗೂ ತಾಗುತ್ತಿರುವಂತೆ ಕಾಣಲಿಲ್ಲ..ಮಕ್ಕಳು ಮಕ್ಕಳಾಗಿದ್ದರು ಅಲ್ಲಿ..ಕಾರ್ಯಕ್ರಮದ ಪಟ್ಟಿಯ ಪ್ರಕಾರ ಮಕ್ಕಳಿಗೆ ಬಹುಮಾನ ವಿತರಣೆಗೂ ಮುಂಚಿತವಾಗಿ ಮುಖ್ಯ ಅತಿಥಿಗಳ ಭಾಷಣಇದೊಂದು ಎಲ್ಲಾ ಕಾರ್ಯಕ್ರಮದಲ್ಲೂ ಇದ್ದದ್ದೇ. ಸುಧೀರ್ಘ ೨೫ ನಿಮಿಷಗಳ ಕಾಲ ಮುಖ್ಯ ಅತಿಥಿಗಳ ನಾಲ್ಕು ಮಾತುಗಳು ಮುಂದುವರೆಯಿತು. ೪ ರಿಂದ ೫ ವರ್ಷದ ಪ್ರಾಯದ ಮಕ್ಕಳ ಉದ್ದೇಶಿಸಿ ನಡೆಸಿದ ಕಾರ್ಯಕ್ರಮವದು. ಮಣ್ಣು-ಮರಳು-ಆಟ ಇಷ್ಟು ಕಣ್ಣೆದುರಿರುವ ಕಂದಮ್ಮಗಳವು. ೫೦ ನಿಮಿಷಗಳಿಗಿಂತಲೂ ಹೆಚ್ಚಿನ ಸಮಯ ಕೂತಲ್ಲೇ ಏನನ್ನೂ ಮಾಡದೇ ಕೂತಿರಿ ಎಂದು ಮಕ್ಕಳಿಗೆ ಆಜ್ಞೆ ಹೊರಡಿಸುತ್ತಿರುವ ದೊಡ್ಡವರು. ಪಾಪ ಆ ಮಕ್ಕಳ ಪಾಡೇನು? ಕೆಲವು  ಪಾಲಕರು  ತಮ್ಮ ಮಕ್ಕಳಿಗೆ ಎಚ್ಚರಿಸಿ, ಮಣ್ಣಾಡುವುದರಿಂದ ತಪ್ಪಿಸಿದರೂ, ಆ ಮಕ್ಕಳ ಮುಖದಲ್ಲಿ ಅತೃಪ್ತಿ ಎದ್ದುಕಾಣುತ್ತಿತ್ತು. ಕೂತಲ್ಲೇ ಆಟ, ಕಿತ್ತಾಟ, ಕಿರುಚಾಟ ಎಲ್ಲವನ್ನೂ ನಡೆಸಿದ್ದವು ಆ ಪಿಳ್ಳೆಗಳು. ಸಮಯ ಕಳೆದಂತೆ ಬಿಸಿಲೇರುತ್ತಿತ್ತು. ಮಕ್ಕಳನ್ನು ನೆರಳಿರುವ ಜಾಗಕ್ಕೆ ಸರಿಸಿ ಕೂರಿಸಲು, ಮಕ್ಕಳು ಗಲಾಟೆ ಮಾಡದಂತೆ ನೋಡಿಕೊಳ್ಳುವುದು ಇದೇ ಕಾರ್ಯದಲ್ಲಿ ಶಿಕ್ಷಕ ವೃಂದ ಹೆಣಗಾಡುತ್ತಿತ್ತು. ಅಲ್ಲಿಯವರೆಗೂ ಕಾರ್ಯಕ್ರಮವನ್ನು ವೀಕ್ಷಿಸಿದ್ದ ಪೋಷಕರೂ ಕೂಡ ಭಾಷಣ ಸಮಯದಲ್ಲಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತ, ಮೊಬೈಲ್ನಲ್ಲಿ ತೂರಿಕೊಳ್ಳುತ್ತಾ, ತಮ್ಮ ಮಕ್ಕಳ ಕಡೆಗೆ ಕಣ್ಣನ್ನು ನೆಟ್ಟು ಕುಳಿತಿದ್ದರು. ಆಸಕ್ತಿಯಿಂದ ಭಾಷಣ ಆಲೈಸಿದವರ ಸಂಖ್ಯೆ ಬೆರಳಣಿಕೆಯಷ್ಟು. ಭಾಷಣಾಕಾರರ ಭಾಷಣ ಹಾಗೂ ಮುಂದುವರೆದೇ  ಇತ್ತುಭಾಷಣಕಾರರ ಮಾತನ್ನು ಅರ್ಥಮಾಡಿಕೊಳ್ಳುವಷ್ಟು ಜ್ಞಾನ ಈ ಮಕ್ಕಳದ್ದಲ್ಲ, ಏಕಾಗ್ರತೆಯ ವಯಸ್ಸೂ ಕೂಡ ಅಲ್ಲ, ಕುಳಿತು ಕೇಳುವಷ್ಟು ವ್ಯವಧಾನ ಈ ಮಕ್ಕಳ ತಂದೆ-ತಾಯರಿಗಿಲ್ಲ ಎಂದಾಗಿತ್ತು ಅಲ್ಲಿಯ ಪರಿಸ್ಥಿತಿ. ಇದಿಷ್ಟರ ನಂತರಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ, ಮಕ್ಕಳಿಗೆ ಉಡುಗೊರೆ, ಸ್ವೀಟ್ಸ್ ಹಂಚಿಕೆ ಎಲ್ಲವೂ ಸಾಂಘವಾಗಿ ನಡೆದು, ಅದೊಂದು ಯಶಸ್ವೀ ಕಾರ್ಯಕ್ರಮವಾಗಿ ಮುಕ್ತಾಯಗೊಂಡಿದ್ದೂ ಹೌದು. 





 ಆದರೆ ಈ ಭಾಷಣ ಮಾಡುವವರೆಲ್ಲಾ ತಮ್ಮ ಶ್ರೋತೃಗಳು ಯಾರು, ಯಾವ ಮನಸ್ಕರರು ಎಂಬ ಕನಿಷ್ಠ ಜ್ಞಾನವನ್ನಾದರೂ ಹೊಂದಿದವರಾಗಿರಬೇಕು ಎಂದು ಇವತ್ತು ನನಗನ್ನಿಸಿದ್ದು ನಿಜ. ಖಂಡಿತವಾಗಿಯೂ ನಾನು ಯಾವುದೇ ಒಂದು ನಿರ್ದಿಷ್ಟ ಶಿಕ್ಷಣ ಸಂಸ್ಥೆ ಅಥವಾ ವ್ಯಕ್ತಿಯೊಬ್ಬರ ಕುರಿತಾಗಿ ಈ ಮಾತನ್ನು ಹೇಳುತ್ತಿರುವುದಲ್ಲ. ನಮ್ಮಲ್ಲಿ ಎಲ್ಲೆಡೆ ಈ ರೀತಿಯದೊಂದು ಪರಿಸ್ಥಿತಿ ಇದ್ದೇ ಇದೆ. ನಾವೂ ಕೂಡ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ತಲೆ ಕೆಳಗೆ ಹಾಕಿ ಗುಸು ಗುಸು ಗುಟ್ಟಿದವರೇ,  ಭಾಷಣ ಮುಗಿಯುವವರೆಗೆ ಆ ಮಕ್ಕಳನ್ನು ಸುಮ್ಮನಿರಿಸಲು ಒದ್ದಾಡಬೇಕಾದ ಶಾಲಾ ಸಿಬ್ಬಂದಿಗಳ ಕಷ್ಟ ಪರಿಸ್ಥಿತಿ, ಗಲಾಟೆ ಮಾಡಿ ಶಾಲೆಯ ಮರ್ಯಾದೆ ತೆಗಿತೀರಿ ಎಂದು ಮರುದಿನ ಶಾಲೆಯಲ್ಲಿ ಬೈಸಿಕೊಳ್ಳುವ ಪಾಡು ಇವೆಲ್ಲ ನಾವು ಸಣ್ಣವರಿದ್ದಾಗ ಅನುಭವಿಸಿದ್ದೇ...ಇದೇ ಕಾರಣಕ್ಕೋ ಏನೋ ಅಪ್ಪಾಜಿ ಶಿಕ್ಷಣಾಧಿಕಾರಿಯಾಗಿದ್ದ ಸಮಯದಲ್ಲಿ, ಶಾಲಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಮಂತ್ರಿತನಾದರೆ ಕೆಲವು ಚಿಕ್ಕ ಮಕ್ಕಳ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ 'ಚಿಕ್ಕಮಕ್ಕಳನ್ನು ಕೂರಿಸಿಕೊಂಡು ಭಾಷಣ ಮಾಡಬಾರದು' ಎಂದು ನೇರವಾಗಿ ತಿಳಿಸಿ ನಯವಾಗಿ ನಿರಾಕರಿಸುತ್ತಿದ್ದರು ಅಥವಾ ಹೇಳಿಕೆಗೆ ಎಣಿಸಿ ನಾಲ್ಕೇ
ನಾಲ್ಕು ಮಾತಿಗೆ ತಮ್ಮ ಭಾಷಣ ಮುಗಿಸಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಂದುವರೆಸಲು ತಿಳಿಸಿಬಿಡುತ್ತಿದ್ದರು. ಆದ್ದರಿಂದಲೇ ನನ್ನನಿಸಿಕೆಯ ಪ್ರಕಾರ ಚಿಕ್ಕ ಮಕ್ಕಳ ಕಾರ್ಯಕ್ರಮವನ್ನು ಮಕ್ಕಳಿಗೆ ಹಿತಕರವಾಗಿಯೂ, ಅನುಕೂಲಕರವಾಗಿಯೂ, ಹೆಚ್ಚಿನ ಸಮಯದ ವ್ಯಯವಿಲ್ಲದಂತೆ ನಡೆಸುವ ನಿಟ್ಟಿನಲ್ಲಿ ಯೋಚಿಸಿ ಕಾರ್ಯಕ್ರಮದ ಏರ್ಪಾಡು ಮಾಡಿಕೊಳ್ಳಬೇಕು. ಮಕ್ಕಳ ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡುವ ಸಂದರ್ಭವಿದ್ದರೆ ಅದನ್ನು ಆದಷ್ಟು ಮಕ್ಕಳಿಗ್ಯಾರ್ಥವಾಗುವ ವಿಷಯಕ್ಕೆ ಹೊಂದಿಸಿ, ಅವರ ಪ್ರತಿಕ್ರಿಯೆ ಬರುವಂತಹ ಮಾತುಗಳನ್ನಾಡಿ ಮಕ್ಕಳನ್ನು ಪ್ರೋತ್ಸಾಹಿಸುವಂತಿರಬೇಕು. ಏನಂತೀರಿ??  




ಶನಿವಾರ, ಅಕ್ಟೋಬರ್ 7, 2017

ಕುಂದಾದ್ರಿ ಬೆಟ್ಟ ಹತ್ತಿದ್ರೇನ್ರೀ??

ಸಮುದ್ರ ಮಟ್ಟಕ್ಕಿಂತ ೨೭೧೦ ಫೀಟ್ ಎತ್ತರದ ಬೆಟ್ಟವೊಂದರ ತುದಿಯಲ್ಲಿ ನೀವು ನಿಂತಿದ್ದೀರಿ. ನಿಮ್ಮೆದುರು 270 ಡಿಗ್ರಿ ಕೋನದಷ್ಟು ವಿಸ್ತಾರವಾಗಿ ಕಾಣಸಿಗುತ್ತಿರುವ ಪ್ರಕೃತಿಯ ವಿಹಂಗಮ ನೋಟ. ಕಣ್ಣು ಹಾಯಿಸಿದಷ್ಟೂ ಕಾಣುತ್ತಿರುವುದು ಹಾಸು ಹೊಕ್ಕಾಗಿರುವ ಹಸಿರು. ಕೆಳಗೆ ನೋಡಿದರೆ ಈ ಭುವಿಯೇ ಸ್ವರ್ಗ  ಎಂದೆನಿಸುವಂತೆ ಅಲ್ಲಲ್ಲಿ ಮಳೆ ಬಿದ್ದು ತುಂಬಿಕೊಂಡ ಕಂದು-ಕೇಸರಿ ಬಣ್ಣದ ನೀರಿನ ಕೋಡಿಗಳು, ಹರಿಯುತ್ತಿರುವ ನೀಲ ನದಿ, ತನ್ನದೇ ಆದ ರೀತಿಯಲ್ಲಿ ರಂಗವಲ್ಲಿ ಹಾಕಿಕೊಂಡ ಗಿಳಿಹಸಿರು ಗದ್ದೆಗಳ ಸಾಲು, ವರ್ಣಮಯ ಊರು-ಕೇರಿ ಹೀಗೆ ಮುಗಿಯದ ನೋಟ...ಹಾಂ! ಈ ನೋಟ ಅರೆಗಳಿಗೆ ಮಾತ್ರ; ಮತ್ತೊಂದು ಕ್ಷಣಕ್ಕೆ, ಬೆಳ್ಳನೆಯ ಹತ್ತಿಯಂತಹ ಮೇಘಗಳ ಹಿಂಡಿಂಡು ಸಾಲುಗಳು ನಮ್ಮನ್ನೂ ಕೂಡ ಆವರಿಸಿ, ಮುಸುಕು ಮುಚ್ಚಿಬಿಡುವ ಇಬ್ಬನಿಯ ಸುಂದರ ದೃಶ್ಯದ ಅನಾವರಣ. ಮಂಜಿನ ತಂಪಿನಿಂದುಂಟಾದ ಚಳಿಯ ಜೊತೆಗೆ, ಆ ಕ್ಷಣಕ್ಕೆ ಅಲ್ಲಿ ನಿಂತು ಕಾಣುತ್ತಿರುವ ಸಹ್ಯಾದ್ರಿಯ ಮಡಿಲ ನೋಡಿ ನವಿರೇಳುತ್ತಾ ಹೋಗುತ್ತದೆ ನಮ್ಮ ಮೈ ಮನ. ಇನ್ನು ಅಲ್ಲಿಂದ ನಿಂತು ನೋಡಲು ಕಾಣಸಿಗುವ ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯದ ವರ್ಣನೆಗೆ ಶಬ್ಧಗಳು ಸಿಗುವುದೇ ಕಷ್ಟ - ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವ ಆ ಚೆಲುವನ್ನು 'ಬಂಗಾರವೇ' ಸರಿ, ಎಂದು ಸುಮ್ಮನೆ ಕಣ್ತುಂಬ ಹೀರಿಕೊಂಡು ಮೌನಕ್ಕೆ ಶರಣಾಗುವುದೇ ಒಳಿತು. ಇಷ್ಟೇ ಅಲ್ಲದೇ , ಅದೊಂದು ಪವಿತ್ರವಾದ ಪುಟ್ಟ ಜೈನ ಬಸದಿ ಇರುವ ಪುಣ್ಯ ಸ್ಥಳವೂ ಹೌದು. ಇಂತದ್ದೊಂದು ಮನಸ್ಸಿಗೆ ಚೈತನ್ಯವನ್ನೀಯುವ ಸ್ಥಳವೇ, ಕುಂದಾದ್ರಿ ಬೆಟ್ಟ.









 ಏಕ ಶಿಲಾ ಬೆಟ್ಟ - ಕುಂದಾದ್ರಿ 

"ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ ಹಸುರ್ಗಟ್ಟಿತೊ ಕವಿಯಾತ್ಮಮ್ ಹಸುರ್ನೆತ್ತರ್ ಒಡಲಿನಲಿ... " ಕವಿಯೊಬ್ಬನ ನರನಾಡಿಗಳಲ್ಲಿ ಹರಿವ ರಕ್ತದ ಬಣ್ಣವೂ ಹಸಿರು ಎಂದು ತಮ್ಮ ಕವಿತೆಯ ಸಾಲುಗಳಲ್ಲಿ ವರ್ಣಿಸಿದ ರಾಷ್ಟ್ರಕವಿ ಕುವೆಂಪು ರವರ ಊರು ಕುಪ್ಪಳ್ಳಿಯ ಸಮೀಪದಲ್ಲೇ ಇರುವ  ಈ ಕುಂದಾದ್ರಿ ಬೆಟ್ಟ, ಒಂದು ಏಕ ಶಿಲೆಯಲ್ಲಿ ರೂಪುಗೊಂಡು ಅದರ ಮೇಲೆ ಅಮೋಘ ಸಸ್ಯರಾಶಿಯ ಸಂಪನ್ನತೆಯನ್ನು ಹೊಂದಿದೆ.

ಸಹ್ಯಾದ್ರಿ ಶ್ರೇಣಿಯ ಅಪ್ಪಟ ಮಲೆನಾಡ ಊರುಗಳ ಬೆಲ್ಟಿನಲ್ಲಿ ತೀರ್ಥಹಳ್ಳಿಯೂ ಒಂದು ಪ್ರಮುಖವಾದ ಊರು. ಇಲ್ಲಿಂದ ಆಗುಂಬೆ ಕಡೆಗೆ ಹೋಗುವ ದಾರಿಯಲ್ಲಿ, ಸುಮಾರು ೩೨ ಕಿ.ಮೀ ದೂರದಲ್ಲಿದೆ ಈ ಕುಂದಾದ್ರಿ ಬೆಟ್ಟ.ಮಳೆಗಾಲದ ಸಮಯದಲ್ಲಂತೂ ಕುಂದಾದ್ರಿಗೆ ಪಯಣಿಸುವ ಹಾದಿಯೇ ಒಂದು ರೀತಿಯ ಹಬ್ಬ. ನೀರಿನಿಂದ ತೊಯ್ದ ಕಡುಗಪ್ಪು ಡಾಂಬರು ರಸ್ತೆ, ಮೈ ನಡುಗಿಸುವಷ್ಟು ತಂಪಾದ ಸ್ವಚ್ಛವಾದ ಗಾಳಿ, ದಟ್ಟ ಇಬ್ಬನಿಯ ನಡುವೆ ಹಾವಿನಂತೆ ಸರಸರನೆ ಮೂಡುವ ರಸ್ತೆ. ಹಾದಿಯ ಇಕ್ಕೆಲಗಳಲ್ಲೂ ಕಾಣಸಿಗುವ ಪುಟ್ಟ ಪುಟ್ಟ ಹಳ್ಳಿಗಳು, ಆಗಷ್ಟೇ ಬತ್ತದ ನೆಟ್ಟಿ ಮಾಡಿಸಿಕೊಂಡು ಮೈದುಂಬಿಕೊಂಡ ಗಿಳಿ ಹಸಿರು ಬಣ್ಣದ ಗದ್ದೆಗಳು, ತೋಟಗಳು, ಜೊತೆಯಲ್ಲೇ ಹರಿವ ಚಿಕ್ಕ ಚಿಕ್ಕ ನೀರಿನ ಕೋಡಿಗಳ ಜುಳು ಜುಳು ನಾದ, ಕಣ್ಣಿಗೆ ತಂಪನ್ನೀಯುವ ಸೊಂಪಾದ ಹಚ್ಚ ಹಸಿರು ಅರಣ್ಯ.

ದಶಕಗಳ ಹಿಂದಿನಿಂದಲೂ ಕಾಲುದಾರಿಯಷ್ಟೇ ಇದ್ದ ಈ ಬೃಹತ್ ಕುಂದಾದ್ರಿ ಬೆಟ್ಟಕ್ಕೆ ಸುಗಮ ಹಾದಿ ಸಿಕ್ಕಿದ್ದು ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಪವಿತ್ರವಾದ ಜೈನ ಬಸದಿಯ ಅಭಿವೃದ್ಧಿಗೆ ಮತ್ತು ಬೆಟ್ಟವನ್ನೇರಲು ಡಾಂಬರು ರಸ್ತೆಯ ಅನುಕೂಲತೆಗೆ ಸರ್ಕಾರದೊಂದಿಗೆ ಕೈಜೋಡಿಸಿ ಕೊಡುಗೆಯನ್ನೀಡಿದವರು ಮುಂಬೈ ಮೂಲದ ಲೋಕೋಪಕಾರಿ ಉದ್ಯಮಿಯೊಬ್ಬರು. ಕುಂದಾದ್ರಿಗೆ ಸಾರ್ವಜನಿಕ ವಾಹನದಲ್ಲಿ ಪಯಣಿಸುವುದಾದರೆ, ಸಾರಿಗೆ ಸೇವೆ ಕುಂದಾದ್ರಿಯ ಬುಡದಲ್ಲಿರುವ ಮಹಾದ್ವಾರದವರೆಗೆ ಮಾತ್ರ. ಖಾಸಗಿ ವಾಹನಗಳಲ್ಲಿ ಬೆಟ್ಟದ ಮೇಲ್ತುದಿಯವರೆಗೆ ಸಾಗಬಹುದು. ಈ ಕಠಿಣವಾದ ಬೆಟ್ಟವನ್ನು ಕಡಿದು ಮಾಡಿದ ಸುಮಾರು ೩ ಕಿ.ಮೀ ನಷ್ಟು ಉದ್ದದ ರಸ್ತೆ ಮಾತ್ರ ಅತ್ಯಂತ  ಕಿರಿದಾಗಿದ್ದು, ವಾಹನವನ್ನು ಚಲಾಯಿಸಲು ನುರಿತ ಚಾಲಕರೇ ಬೇಕು.  ಘಾಟಿ ಹಾದಿಯನ್ನು ಏರುವಾಗ ಕೇಳಿಸುವ ಹಕ್ಕಿಯ ಕಲರವ, ಮಳೆಗಾಲದ ವಟರು ಕಪ್ಪೆಗಳ, ಜೀರುಂಡೆಗಳ, ಮಳೆಜಿರಳೆಗಳ ಲಯಬದ್ಧವಾಗಿ ಕೇಳಿಸುವ ಚೀತ್ಕಾರಗಳು ನಗರದ ಯಾಂತ್ರಿಕ ಬದುಕಿನ ಜಂಜಾಟದಿಂದ ಬೇಸತ್ತವರಿಗೆ, ಚಾರಣದ ಮಜವನ್ನನುಭವಿಸುವವರಿಗೆ, ಪ್ರಕೃತಿಯ ಬೆನ್ನಿಡಿದು ಛಾಯಾಗ್ರಹಣ ಮಾಡುವವರಿಗೆ ಸಿಗುವ ಒಂದು ಚೇತೋಹಾರಿ ಅನುಭವ.

ಕುಂದಾದ್ರಿ - ಸ್ಥಳದ ವಿಶೇಷತೆ

ಜೈನರ ಪವಿತ್ರ ಸ್ಥಳವಾದ ಈ ಕುಂದಾದ್ರಿ ಬೆಟ್ಟದಲ್ಲಿ ೧೭ ಶತಮಾನದಲ್ಲಿ ನಿರ್ಮಿತವಾದ ಪಾರ್ಶ್ವನಾಥ ಚೈತ್ಯಾಲಯವಿದೆ. ಕುಂದ ಕುಂದ ಜೈನಸನ್ಯಾಸಿಯೋರ್ವರು ತಪಸ್ಸು ಮಾಡಲಾಯ್ದುಕೊಂಡ ಸ್ಥಳ ಇದಾಗಿದ್ದರಿಂದ, ಅವರದೇ ಹೆಸರಿನಿಂದ ಈ ಬೆಟ್ಟ ನಾಮಾಕಿಂತವಾಗಿದೆ. ಇಲ್ಲಿ ನಿರ್ಮಿತವಾದ ಜೈನ ದೇವಾಲಯವು ಪುಟ್ಟದಾಗಿದ್ದರೂ, ಆಕರ್ಷಣೀಯವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ವರ್ಷಪೂರ್ತಿ ಆಗಮಿಸುವುದರಿಂದ, ಬೆಟ್ಟದ ತುತ್ತತುದಿಯಲ್ಲಿರುವ ಈ ವೀಕ್ಷಣಾ ಸ್ಥಳವನ್ನು ಕಬ್ಬಿಣದ ಬೇಲಿಗಳಿಂದ ಸುತ್ತುವರೆಸಿ ಸುರಕ್ಷತೆಯ ಮುತುವರ್ಜಿ ವಹಿಸಲಾಗಿದೆ. ಜೈನ ಮಂದಿರದ ಆವರಣದಲ್ಲಿ ಎರಡು ಸಣ್ಣ ಕೊಳಗಳಿದ್ದರೂ, ಆಹಾರ ಪೂರೈಕೆಗೆ ಇಲ್ಲಿ ಯಾವ ಸೌಲಭ್ಯವೂ ಇಲ್ಲದಿರುವುದು, ಈ ಸ್ಥಳವಿನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಲಿನಗೊಂಡಿಲ್ಲದಿರುವುದಕ್ಕೆ ಕಾರಣ.

ಕುಂದಾದ್ರಿ ಬೆಟ್ಟದಿಂದ ಕಣ್ಣು ಹಾಯಿಸಿದಲ್ಲಿಯವರೆಗೆ, ಸಹ್ಯಾದ್ರಿ ಬೆಟ್ಟಗಳ ಕಡುಹಸಿರು ಸಾಲು, ತೋಟ ಹೊಲ ಗದ್ದೆಗಳು, ಸುಂದರವಾಗಿ ಕಾಣುವ ವಾರಾಹಿ ಆಣೆಕಟ್ಟು, ತೀರ್ಥಹಳ್ಳಿಯ ಸುತ್ತಮುತ್ತಲಿನ ಪ್ರದೇಶದ ವೈವಿಧ್ಯಮಯ ವರ್ಣಗಳು, ನೀರಿನ ಒಡಲು, ರಂಗೇರುವ ಸೂರ್ಯಾಸ್ತ, ಮನಸೂರೆಗೊಳ್ಳುವ ಸೂರ್ಯೋದಯ, ಇಬ್ಬನಿ, ಮೋಡ, ಮುಂಗಾರಿನ ಮಳೆ ಹೀಗೆ ಈ ಕುಂದಾದ್ರಿ ಬೆಟ್ಟ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ, ತನ್ನಷ್ಟಕ್ಕೆ ತಾನೇ ಒಂದು ಅದ್ಭುತವಾಗಿ ಮಲೆನಾಡಿನ ಮಡಿಲಲ್ಲಿ ವಿರಾಜಿಸುತ್ತದೆ.

ಇಂತಹ ಒಂದು ಪ್ರಕೃತಿಯನ್ನು ಮೈಮನಸ್ಸಿನಾಳಕ್ಕೆ ತುಂಬಿಕೊಳ್ಳಬೇಕೆಂದರೆ, ಕುಂದಾದ್ರಿಗೆ ಭೇಟಿ ನೀಡಬಹುದಾದ ಸೂಕ್ತ ಸಮಯವೆಂದರೆ ಮಳೆಗಾಲ ಅಥವಾ ಮಳೆಗಾಲ ಮುಗಿಯುವ ಕಾಲ. ಅತ್ಯಂತ ಶೀತಗಾಳಿ ಬೀಸುವುದರಿಂದ ಮಕ್ಕಳಿಗೆ ಬೆಚ್ಚಗಿರಿಸಲು ಹೆಚ್ಚಿನ ಧಿರಿಸು ತೆಗೆದುಕೊಂಡು ಹೋಗಲು ಮರೆಯಬೇಡಿ.



ಮಂಗಳವಾರ, ಅಕ್ಟೋಬರ್ 3, 2017

ಬತುಕಮ್ಮ ಹಬ್ಬ

ಬಿರು ಬಿಸಿಲಿನ ಊರು ಹೈದರಾಬಾದ್ ನ ನಂಟು ನನಗೆ ಪ್ರಾರಂಭವಾದ್ದು ೫ ವರ್ಷಗಳ ಹಿಂದೆ. ಅಕ್ಕ ನ ಕುಟುಂಬ ಹೈದರಾಬಾದಿನಲ್ಲಿ ವಾಸಿಸಲಾರಂಭಿಸಿದಾಗಿನಿಂದ, ವರ್ಷಕ್ಕೊಂದು ಸರ್ತಿಯಾದರೂ ರಜೆಗೆಂದು ಅಲ್ಲಿಗೆ ತೆರಳುವುದು ಸಾಮಾನ್ಯವಾಗಿದೆ ನನಗೆ. ಪ್ರತಿ ಸಲವೂ ಮಕ್ಕಳನ್ನು ಕಟ್ಟಿಕೊಂಡು ಸಿಕ್ಕ ಸಿಕ್ಕ ಸಂದರ್ಭ, ಸಿಕ್ಕ ಸಿಕ್ಕ ಸಮಯವನ್ನು ಹೈದರಾಬಾದ್ ಓಡಾಡಲು ಬಳಸಿಕೊಳ್ಳುತ್ತಿದ್ದೆವು. ಅಂತೆಯೇ ಈ ಸರ್ತಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಲ್ಲಿಗೆ ಪ್ರಯಾಣ ಬಳಸಿದೆನಾದ್ದರಿಂದ, ಅಲ್ಲಿನ ಅತ್ಯಂತ ಸಡಗರದ ಮತ್ತು ಸ್ಥಳೀಯ ಹಬ್ಬವೊಂದರ ಪರಿಚಯ ನನಗಾಯಿತು. ಅದುವೇ, ಬತುಕಮ್ಮ ಹಬ್ಬ.



ಬತುಕಮ್ಮ ಹಬ್ಬ ತೆಲಂಗಣಿಗರ ಒಂದು ವಿಶಿಷ್ಟವಾದ ಮತ್ತು ಅನನ್ಯವಾದ ನವರಾತ್ರಿ ಹಬ್ಬ. ಹಬ್ಬ ಎನ್ನುವುದಕ್ಕಿಂತಲೂ ಇದೊಂದು ಅಲ್ಲಿನ ಸಂಸ್ಕೃತಿಯ ಸ್ವರೂಪವಾಗಿದೆ. ತೆಲುಗು ಭಾಷೆಯ ಪ್ರಕಾರ, ಬತುಕು ಎಂದರೆ ಜೀವ ಮತ್ತು ಅಮ್ಮ ಎಂದರೆ ತಾಯಿ. ಜನನಿ ಎಂದು ಕರೆಯಲ್ಪಡುವ ಶಕ್ತಿ ದೇವತೆ ಮಹಾ ಗೌರಿಯನ್ನು ನಿಸರ್ಗ ದೇವತೆಯ ರೂಪದಲ್ಲಿ ಪೂಜಿಸಲ್ಪಡುವ ಆಚರಣೆ. ಮಹಾಲಯ ಅಮಾವಾಸ್ಯೆ ದಿನದಿಂದ ಪ್ರಾರಂಭವಾಗುವ ಈ ಹಬ್ಬಕ್ಕೆ, ಗೋಪುರದ ಮಾದರಿಯಲ್ಲಿ, ಬಿದಿರಿನ ಕಟ್ಟನ್ನು ನಿರ್ಮಿಸಿಕೊಂಡು ಅದರ ಸುತ್ತಲೂ ಏಳು ಹಂತಗಳಲ್ಲಿ, ಋತುಮಾನಕ್ಕೆ ತಕ್ಕಂತೆ ದೊರೆಯುವ, ಚೆಂಡು ಹೂವು, ಕನ್ನೇ  ಹೂವು, ಆವರಿಕೆ ಗಿಡದ ಹೂಗಳು ಮತ್ತಿತರ ವಿಶೇಷ ವರ್ಣರಂಜಿತ ಹೂಗಳಿಂದ ಸಿಂಗರಿಸುತ್ತಾರೆ. ಅದರಲ್ಲೂ ಹೆಚ್ಚಿನ ಭಾಗದಲ್ಲಿ ಔಷಧೀಯ ಮಹತ್ವವಿರುವಂತಹ ಹೂಗಳನ್ನು ಅತ್ಯಂತ ಒಪ್ಪವಾಗಿ ಜೋಡಿಸುತ್ತಾರೆ. ಮೇಲ್ತುದಿಯಲ್ಲಿ ಅರಿಶಿಣ ಕೊಂಬಿನಿಂದ ನಾದಿದ ಮಿಶ್ರಣವನ್ನು ಲೇಪಿಸಿ ಗೌರಮ್ಮನ ಸ್ವರೂಪವನ್ನು ನಿರ್ಮಿಸುತ್ತಾರೆ. ಹೆಂಗಳೆಯರು ಈ ಗೋಪುರವನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುವ ದೃಶ್ಯವೇ ಒಂದು ತರಹದ ಸುಗ್ಗಿ. ಜರಿತಾರಿ ಲಂಗ ದಾವಣಿ, ಬಣ್ಣ ಬಣ್ಣದ ರೇಷ್ಮೆ ಸೀರೆಗಳನ್ನುಟ್ಟು, ಆಭರಣಗಳನ್ನು ತೊಟ್ಟು, ತಲೆಗೆ ವರ್ಣಮಯ ಹೂವನ್ನು ಮುಡಿದು ಅಲಂಕಾರಗೊಂಡ ಹೆಣ್ಣುಮಕ್ಕಳು ಮತ್ತು ಹೆಂಗಸರು, ತಮಗೆ ಹತ್ತಿರದಲ್ಲಿನ ಸ್ಥಳೀಯ ಬತುಕಮ್ಮ ಹಬ್ಬದ ಆಚರಣೆಯ ಸ್ಥಳಕ್ಕೆ ಈ ಹೂಬುಟ್ಟಿಯ  ಹೊತ್ತುಕೊಂಡು ಹೋಗುತ್ತಾರೆ. ರಂಗವಲ್ಲಿ ಹಾಕಿ ಸಿದ್ಧಗೊಳಿಸಿಕೊಂಡ ಹಬ್ಬ ನಡೆಸುವ ಜಾಗದಲ್ಲಿ ಒಂದೆಡೆ ಸ್ಥಾಪಿಸುತ್ತಾರೆ. ನಂತರದಲ್ಲಿ, ಎಲ್ಲರೂ ವರ್ತುಲದ ಮಾದರಿಯಲ್ಲಿ ಸುತ್ತುವರೆಯುತ್ತಾರೆ. ಲಯಬದ್ಧವಾಗಿ ಹಾಡುವ ಬತುಕಮ್ಮನ ಕುರಿತಾದ ಹಲವು ಸಾಂಪ್ರದಾಯಿಕ ಹಾಡು ಮತ್ತು ಅದಕ್ಕನುಗುಣವಾಗಿ ಸರಳವಾಗಿ ಚಪ್ಪಾಳೆಯೊಂದಿಗೆ ಒಂದೇ ಹದದಲ್ಲಿ ಹೆಜ್ಜೆ ಹಾಕಿ ಮಾಡುವ ನೃತ್ಯ  ಅಲ್ಲಿನ ಕಲೆ-ಸಂಸ್ಕೃತಿಯ ಜೀವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಉಯ್ಯಾಲು (ಉಯ್ಯಾಲೆ), ಚಂದಮಾಮ (ಚಂದ್ರ) ಮತ್ತು ಗೌರಮ್ಮ ಇವುಗಳು ಪ್ರಮುಖವಾದ ಸಾಂಪ್ರದಾಯಿಕ ಹಾಡುಗಳು. ತಾಯಿ ಗೌರಿಯ ಆಶೀರ್ವಾದವನ್ನು ತಮ್ಮ ಹಾಡು ಮತ್ತು ನೃತ್ಯದ ಮೂಲಕ ಯಾಚಿಸುತ್ತಾರೆ. ಹೀಗೆ ೯ ದಿನಗಳ ವರೆಗೆ  ಪ್ರತಿದಿನವೂ ಬತುಕಮ್ಮನ ಪೂಜೆ, ಹಾಡು-ನೃತ್ಯ, ವಿವಿಧ ಬಗೆಯ ನೈವೇದ್ಯ ಸಿಹಿ ತಿನಿಸು ತಯಾರಿಕೆ ಎಲ್ಲವೂ ಉಲ್ಲಾಸದಿಂದ ಸಾಗುತ್ತದೆ.








ಬತುಕಮ್ಮ ಹಬ್ಬದ ಆಚರಣೆಗೂ ಒಂದು ಹಿನ್ನಲೆಯಿದೆ. ಪುರಾಣ ಕಥೆಯಲ್ಲಿ, ದಕ್ಷ ಮಹಾರಾಜ ಯಜ್ಞ ಮಾಡುವ ಸಂದರ್ಭದಲ್ಲಿ, ಮಗಳು ಗೌರಿಯು ತನ್ನ  ಇಚ್ಛೆಯ ವಿರುದ್ಧವಾಗಿ ಈಶ್ವರನ ಮದುವೆಯಾದ ಕೋಪದಿಂದ, ಈಶ್ವರನನ್ನು ಯಜ್ಞಕ್ಕೂ ಆಹ್ವಾನಿಸದೇ, ಅವನ ಕುರಿತು ಆಡಿದ ಅವಹೇಳನಾ ಮಾತುಗಳಿಂದ ಅವಮಾನಿತಳಾದಗೌರಿಯು, ಯಾಗದ ಬೆಂಕಿಗೆ ಹಾರುತ್ತಾಳೆ. ಹೀಗೆ ಉರಿವ ಬೆಂಕಿಯಲ್ಲಿಗೌರಿಯು ಒಂಭತ್ತು ದಿನಗಳವರೆಗೆ ಇದ್ದಳು ಎಂಬ ಪೌರಾಣಿಕ  ನಂಬಿಕೆಗೆ ಪೂರಕವಾಗಿ, ತಾಯೇ ಗೌರಮ್ಮ, ಮತ್ತೆ ಬದುಕಿ ಬಾ, ನಮಗೆಲ್ಲ ಸದ್ಗತಿಯನ್ನು ನೀಡಲು ಬಾ ಎಂಬ ಬೇಡಿಕೆಯನ್ನಿಡುತ್ತಾರೆ. ಇನ್ನೊಂದು ಕಥೆಯ ಹಿನ್ನಲೆಯಲ್ಲಿ ಪರ್ವತಗಳ ರಾಜ ಹಿಮವಂತಹ ಮಗಳು  ಪಾರ್ವತಿಯನ್ನು ಪ್ರತಿಬಿಂಬಿಸುವ ಸಲುವಾಗಿ ಹೂವಿನಿಂದ ಅಲಂಕರಿಸಿದ ಹೂಗುಡ್ಡೆಗಳನ್ನು ಮಾಡಿ ಅರಿಶಿನದ ಪಾರ್ವತಿಯ ಸ್ವರೂಪವನ್ನು ನೀಡಲಾಗುತ್ತದೆ. ೯ ದಿನಗಳವರೆಗೆ ಬತುಕಮ್ಮ ಸ್ಥಾಪಿಸಿದ ಸ್ಥಳದ ಸುತ್ತಲೂ ನಿತ್ಯ ಪೂಜೆ, ಹಾಡು ನೃತ್ಯದ ಸೇವೆ ನಡೆಯುತ್ತದೆ.  ಕೊನೆಯ ದಿನ, ತಾಯಿ ಗೌರಮ್ಮನನ್ನು ನೀರಿನಲ್ಲಿ ಕಳುಹಿಸುವುದು ಎಂಬ ಪದ್ಧತಿಯಂತೆ, ಬತುಕಮ್ಮನನ್ನು ನೀರಿನಲ್ಲಿ ಮುಳುಗಿಸುತ್ತಾರೆ.



ಬತುಕಮ್ಮ ಹಬ್ಬ ಕೇವಲ ಒಂದು ಕೋಮಿಗೆ ಸಂಬಂಧಿಸಿದ್ದಲ್ಲ. ಇದೊಂದು ಆಂಧ್ರ ಪ್ರದೇಶದ ಕಡೆಗಿನ ಒಂದು ವರ್ಣಮಯ ಪುಷ್ಪಾಲಂಕೃತ ನಾಡ  ಹಬ್ಬ. ಸಾಮಾನ್ಯವಾಗಿ ಈ ಹಬ್ಬದ ಸಮಯದಲ್ಲಿ ಊರಿಗೆ ಊರೇ ಅಲಂಕಾರಗೊಳ್ಳುತ್ತದೆ. ಎಲ್ಲಿ ನೋಡಿದರೂ ಸಣ್ಣ-ದೊಡ್ಡ  ಬತುಕಮ್ಮನ ಹೂವಿನ ದಿಬ್ಬವೇ ಎಲ್ಲೆಡೆ ರಾರಾಜಿಸುತ್ತಿರುತ್ತದೆ. ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ನಗರ ಪ್ರದೇಶದ ರಸ್ತೆಯ ಮುಖ್ಯ ಸ್ಥಳಗಳಲ್ಲಿ, ಕಡೆಗೆ ಸಿನಿಮಾ ಸ್ಥಳ- ಮಾಲುಗಳಲ್ಲಿಯೂ ಬತುಕಮ್ಮನದೇ ಭರಾಟೆ! ಅಂಗಡಿಗಳಲ್ಲಿ ಬತುಕಮ್ಮ ಹಬ್ಬದ ಪ್ರತೀಕವಾಗಿ ಹೂವಿನಿಂದ ಅಥವಾ ಬಣ್ಣದ ಪೇಪರ್ರುಗಳಿಂದ ಅಲಂಕೃತಗೊಂಡ ಗೋಪುರಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಸಾಮಾನ್ಯವಾಗಿ ಶಾಲೆ-ಕಾಲೇಜುಗಳಲ್ಲಿಯೂ ಬತುಕಮ್ಮನ ಗೋಪುರವನ್ನು ನಿರ್ಮಿಸಿ, ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಹಚ್ಚಿ, ಕಾಲುಗಳಿಗೆ ಅರಿಶಿಣ ಲೇಪಿಸಿ, ಮಕ್ಕಳನ್ನೇ ದೇವರ ರೀತಿಯಲ್ಲಿ ಪೂಜಿಸುತ್ತಾರೆ. ಕೆಲವು ಶಾಲೆಗಳಲ್ಲಿ  ಹೂಗಳಿಂದ ರಂಗೋಲಿ ಮಾಡುವುದು, ಅಲಂಕಾರಿಕ ಕರ ಕೌಶಲ್ಯ ವಸ್ತುಗಳನ್ನು ತಯಾರಿಕೆ ಕಲಿಕೆ ಇತ್ಯಾದಿ ಕಲಿಕೆ ನಡೆಸುತ್ತಾರೆ. ಇದರಿಂದ ಮಕ್ಕಳಿಗೆ ವಿವಿಧ ಬಗೆಯ ಹೂವು, ಸಸ್ಯ ಜಾತಿಯ ಕುರಿತಾಗಿ ಜ್ಞಾನ ಹೆಚ್ಚುತ್ತದೆ. ಕೆಲವು ಶಾಲೆಗಳಲ್ಲಿ ಮಕ್ಕಳೊಡಗೂಡಿ ಬತುಕಮ್ಮ ಜಾನಪದ ನೃತ್ಯ ಕಾರ್ಯಕ್ರಮ ನಡೆಸುತ್ತಾರೆ. ಈ ವರ್ಷ ಒಂದು ಶಾಲೆಯಲ್ಲಿ ಮಕ್ಕಳನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ವಿವಿಧ ಬಗೆಯ ಔಷಧೀಯ ಮೂಲದ ಸಸ್ಯ ಜಾತಿಯ ಪರಿಚಯ ನೀಡಿ, ಕಾಡನಿಂದ ಹೂಗಳ ಹೆಕ್ಕಿ ತರುವ ಕಾರ್ಯಕ್ರಮ ನಡೆಸಿದರಂತೆ.

ಮಳೆಗಾಲದ ಕೊನೆಯಲ್ಲಿ ಬರುವ ಈ ಹಬ್ಬದ ಅಂತಿಮವಾಗಿ, ದುರ್ಗಾಷ್ಟಮಿ ದಿನದಂದು ವೈಭವದಿಂದ ಬತುಕಮ್ಮನನ್ನು ಪೂಜಿಸಿ, ನೀರಿಗೆ ತೇಲಿ ಬಿಡುತ್ತಾರೆ. ಔಷಧೀಯ ಗುಣಗಳುಳ್ಳ ಹೂವಿನ ಪಕಳೆಗಳು ಮತ್ತು ಅರಿಶಿಣ ನೀರಿನಲ್ಲಿ ಕರಗಿ ಹರಿವ ನೀರಿನ್ನು ಇನ್ನಷ್ಟು ಸ್ವಚ್ಛವಾಗಿಸುತ್ತದೆ ಎಂಬುದು ಕೂಡ ಒಂದು ವೈಜ್ಞಾನಿಕ ವಿಶ್ಲೇಷಣೆ.  ಒಟ್ಟಿನಲ್ಲಿ ಆಂಧ್ರದಲ್ಲಿ, ಬತುಕಮ್ಮ ಹಬ್ಬದ ಪದ್ದತಿ ಮತ್ತು ಆಚರಣೆಯು ಅಲ್ಲಿನ ಜನರನ್ನು ಪಾರಂಪರ್ಯವಾಗಿ  ನೀರು ನೆಲ ಮತ್ತು ಜನರೊಡನೆ ಸಂಬಂಧವನ್ನು ಬೆಸೆಯುವ ನಿಟ್ಟಿನಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

(ವಿ.ಸೂ : ಚಿತ್ರಗಳು ಇಂಟರ್ನೆಟ್ ಆಧಾರಿತ)




ಗುರುವಾರ, ಆಗಸ್ಟ್ 31, 2017

ಕ್ವಿಲ್ಲಿಂಗ್ ಎಂಬ ಕೌಶಲ್ಯದ ಗರಿ

ಒಂದಷ್ಟು ವರ್ತುಲ, ಒಂದಷ್ಟು ತ್ರಿಭುಜ, ಮತ್ತೊಂದಷ್ಟು ಚೌಕ, ಆಯತ..ಒಮ್ಮೆ ಒತ್ತೊತ್ತಾಗಿ ಸುತ್ತಿಕೊಳ್ಳುವ ಬಿಗುಮಾನ, ಮತ್ತೊಮ್ಮೆ ಉದುರುದುರಾಗಿ ಅರಳಿಕೊಳ್ಳುವ ಸೌಂದರ್ಯ..ಒಮ್ಮೆ ಒಪ್ಪ ನೇರದ ದಿಟ್ಟೆ, ಮತ್ತೊಮ್ಮೆ ನಸು ನಾಚುವ ಓರೇ..ಬಳುಕಿನ ಬಳ್ಳಿಯಾಗಿ, ಮಿನುಗುವ ನಕ್ಷತ್ರವಾಗಿ, ಪ್ರೀತಿ ಹುಟ್ಟಿಸುವಂತಹ ಹೃದಯವಾಗಿ..ಹೀಗೆ ಸಾಗುತ್ತದೆ, ಕಾಗದವರಳಿ ಹೂವಾಗುವ ಕಥೆ..

ಬಣ್ಣ ಬಣ್ಣದ ತೆಳ್ಳನೆಯ ಪೇಪರ್ರಿನ ಪಟ್ಟಿಗಳು, ಸರ ಸರನೆ ಆಡಿಕೊಂಡು ಸುರುಳಿಯಾಗಿ ಸುತ್ತಿಕೊಂಡು, ನಮ್ಮ ಕೈಬೆರಳುಗಳ ಹಿತಸ್ಪರ್ಶಕ್ಕೊಳಗಾಗಿ ಮೆದುವಾಗಿ ಒತ್ತಿಸಿಕೊಂಡು, ವೈಯಾರದ ಆಕೃತಿಯನ್ನು ತಾಳಿ, ಅಂತಿಮವಾಗಿ ಅಂಟಿನೊಡನೆ ತನ್ನನ್ನು ತಾನೇ ಹೊಂದಿಸಿಕೊಂಡು ಕ್ಷಣಮಾತ್ರದಲ್ಲಿ ಸುಂದರ ಕಲಾಕೃತಿಯಾಗಿ ಅರಳಿಕೊಳ್ಳುವ ಒಂದು ಸುಂದರ ಮಾಯೆಯೇ ಕ್ವಿಲ್ಲಿಂಗ್ ಎಂಬ ಚಿತ್ತಾರ.



ಈ ಕಲೆಯ ಸೃಷ್ಟಿಯ ಹಿಂದೆಯೂ ಒಂದು ರೋಚಕ ಕಥೆಯಿದೆ.ಇದೊಂದು ಒಟ್ಟಾರೆಯಾಗಿ ಹುಟ್ಟಿದ ಕುಶಲ ಕಲೆ. ಫ್ರಾನ್ಸ್ ಮತ್ತು ಇಟಲಿಯಲ್ಲಿ ಮೊಟ್ಟ ಮೊದಲು ಪ್ರಾರಂಭವಾದ ಕ್ವಿಲ್ಲಿಂಗ್ ಅಲ್ಲಿನ ಸನ್ಯಾಸಿನಿಯರು ತಾವು ಪುಸ್ತಕದ ಮೇಲ್ಪದರವನ್ನು ಮಡಚಿ ಹಾಕುವಾಗ, ಹೆಚ್ಚಾಗಿ ಉಳಿದು ಹರಿದ ನಿರುಪಯುಕ್ತ ಉದ್ದದ ಕಾಗದಗಳನ್ನು ಸುಮ್ಮನೆ ಸುರುಳಿಯಾಗಿಸಿ ಮಡಚಲಾರಂಭಿಸದರಂತೆ. ಅದರಿಂದ ದೊರೆತ ವಿನೂತನ ಸ್ವರೂಪದಿಂದ ಆಕರ್ಷಿತರಾಗಿ, ತಮ್ಮ ಗ್ರಂಥ ಪುಸ್ತಕಗಳ ಮೇಲಪುಟಗಳಿಗೆ ಅಲಂಕರಿಸಿ ಸಂಭ್ರಮಿಸಿದರಂತೆ. ಜೊತೆಗೆ ಇನ್ನಷ್ಟು ಬಗೆಯಲ್ಲಿ ಈ ರೀತಿಯ ಕಾಗದದ ಹರಿವನ್ನು ಬಳಸಿ, ಸುತ್ತಿ, ಇತರ ಧಾರ್ಮಿಕ ವಸ್ತುಗಳ ಅಂದವನ್ನು ಹೆಚ್ಚಿಸಲೆತ್ನಿಸಿದ ಕಲಾತ್ಮಕತೆ ಈ ಕ್ವಿಲ್ಲಿಂಗ್ ನ ಹುಟ್ಟು ಎಂಬುದಾಗಿ ತಿಳಿದುಬಂದಿದೆ. ಅಲ್ಲಿಂದ ಪ್ರಾರಂಭವಾದ ಈ ವಿನ್ಯಾಸವು, ರಚಿಸಲು ಅತ್ಯಂತ ಸರಳವಾದುದರಿಂದ, ವ್ಯಾಪಕವಾಗಿ ಎಲ್ಲೆಡೆ ಹರಡಿ, ಕ್ರಮೇಣವಾಗಿ ಕ್ವಿಲ್ಲಿಂಗ್ ನ ರಚನಾತ್ಮಕ ವಸ್ತುಗಳನ್ನು ತಯಾರಿಸಲು ಬೇಕಾಗುವ ಪೇಪರ್ ಅನ್ನು ಸುತ್ತುವ ಸೂಜಿಮೊನೆ, ಅಂಕು ಡೊಂಕಿನ ಬಣಾವತ್ತಿನ ಉಪಕರಣಗಳೆಲ್ಲವೂ ಅನ್ವೇಷಣೆಗೊಂಡವು.



ಕ್ವಿಲ್ ಎಂಬ ಪದಕ್ಕೆ ಸಮಾನಾರ್ಥಕವಾಗಿ ಕಾಗದದ ತೆಳುವಾದ ಬಹು ಬಣ್ಣದ ಗರಿಗಳನ್ನು, ವಿವಿಧ ಬಗೆಯ ಆಕೃತಿಯಲ್ಲಿ ಸುತ್ತಿ, ಒಂದೊಂದು ಹದದಲ್ಲಿ ಜೋಡಣೆ ಮಾಡುವ ನೈಪುಣ್ಯತೆಯಿಂದ ಸಾಕಷ್ಟು  ಮನಸೆಳೆಯುವ ವಸ್ತುಗಳನ್ನು ತಯಾರಿಸಬಹುದು.  ಎಲೆ, ಮೊಗ್ಗು, ಹೂವಿನ ಎಸಳಿನಾಕೃತಿ, ಚಂದ್ರ, ಸೂರ್ಯ,ಹೂವು- ಹಕ್ಕಿ-ಹಣ್ಣುಗಳ ಆಕಾರವನ್ನು ನೀಡಿ ಅಂದದ ಚಿತ್ತಾರವನ್ನು ಸೃಷ್ಟಿಸಬಹುದು. ಅನೇಕ ಬಗೆಯ ಚಿತ್ತಾರಗಳನ್ನೊಳಗೊಂಡ ಸೀಸನಲ್ ಗ್ರೀಟಿಂಗ್ ಕಾರ್ಡ್ಗಳು, ಮನೆಯ ಒಳಾಂಗಣ ಅಲಂಕಾರಕ್ಕೆಂದು ಗೋಡೆಗೆ ಹಾಕುವಂತಹ ಹೂವು ಬಳ್ಳಿಗಳಿಂದ, ವಿಶಿಷ್ಟ ಡಿಸೈನ್ ಗಳಿಂದ ತಯಾರು ಮಾಡಲಾದ ಫೋಟೋ ಫ್ರೆಮ್ಗಳು, ಮಂಡಲ, ರಂಗವಲ್ಲಿಯಂತಹ ವಿನ್ಯಾಸಗಳು, ೩-ಡಿ ಪ್ರಭಾವವನ್ನುಂಟು ಮಾಡುವಂತಹ ಬುಟ್ಟಿ, ಮಕ್ಕಳ ಆಟಿಕೆ, ಷೋ ಪೀಸ್ಗಳು ಹೀಗೆ ಹತ್ತು ಹಲವು ಬಗೆಗಳಲ್ಲಿ ನಮ್ಮ ಕಲ್ಪನೆಗನುಗುಣವಾಗಿ ಕ್ವಿಲ್ಲಿಂಗ್ ಪೇಪರ್ ನ ಕಲಾತ್ಮಕತೆಯ ಪ್ರಯೋಗ ನಾವು ಮಾಡಬಹುದು. ಅದರಲ್ಲೂ  ಮುಖ್ಯವಾಗಿ ಕ್ವಿಲ್ಲಿಂಗ್ ಪೇಪರ್ ನಿಂದ ತಯಾರಿಸಿದ ಹೆಣ್ಮಕ್ಕಳ ಆಭರಣಗಳು ಈಗ ಬಹು ಬೇಡಿಕೆಯಲ್ಲಿವೆ. ತಮ್ಮ ವಸ್ತ್ರಕ್ಕೆ ಸರಿಹೊಂದುವ, ತಮಗೆ ಬೇಕಾದ ಮಾದರಿಯಲ್ಲಿ, ಬೇಕಾದ ವರ್ಣಗಳಿಂದ ಮಾಡಲ್ಪಟ್ಟ ಪೇಪರ್ರಿನ ಡಿಸೈನ್ ಕಿವಿಯೋಲೆ, ಸರಗಳನ್ನು ಮಾಡಿಕೊಳ್ಳುವ ಅಥವಾ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಟ್ರೆಂಡ್ ಈಗ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ, ಕ್ವಿಲ್ಲ್ಡ್ ರಾಖಿಗಳು, ಹಬ್ಬಲಂಕಾರಕ್ಕೆ ಬೇಕಾಗುವಂತಹ ಸಿಂಗರಿಸುವ ದೀಪಗಳು, ರಂಗೋಲಿಗಳು ಹೀಗೆ ಹೊಸತನದ ಅನ್ವೇಷಣೆ ಜನರಲ್ಲಿ ಹೆಚ್ಚಿದೆ.



ಕ್ವಿಲ್ಲಿಂಗ್ ನಿಂದ ಕ್ರಿಯಾತ್ಮಕತೆಯೋ, ಕ್ರಿಯಾತ್ಮಕತೆಯಿಂದಾಗಿ ಕ್ವಿಲ್ಲಿಂಗ್ ಕೌಶಲ್ಯವೋ ತಿಳಿಯದಷ್ಟು ಬಗೆಬಗೆಯ ಸುಂದರ ಕಲಾಕೃತಿಗಳು ಅನಾವರಣಗೊಳ್ಳುವುದು ಈ ಕ್ವಿಲ್ಲಿಂಗ್ ನ ಒಂದು ಹವ್ಯಾಸದಲ್ಲಿ. ಹೆಚ್ಚಿನ ಶ್ರಮವಿಲ್ಲದ, ಈ ಕಲೆಯನ್ನು ಕಲಿಯಲು ಬಹಳ ಸರಳ. ಕ್ವಿಲ್ಲಿಂಗ್ ಕಿಟ್ ಗಳು ಮಾರುಕಟ್ಟೆಯಲ್ಲಿ ಎಲ್ಲೆಡೆ ಲಭ್ಯ. ಹೊಸತನ್ನು ಕಲಿಯಲು ಬಯಸುವವರಿಗೆ, ಕಲ್ಪಾತ್ಮಕಥೆಯನ್ನು ಇಷ್ಟಪಡುವವರಿಗೆ ಇದೊಂದು ಸುಂದರ ಅನುಭವ ನೀಡುತ್ತದೆ. ತಕ್ಕಮಟ್ಟಿನ ಕ್ರಿಯಾತ್ಮಕ ಮೋನೋಭಾವದವರು ಕ್ವಿಲ್ಲಿಂಗ್ ಅನ್ನು ಕೇವಲ ಒಂದು ಹವ್ಯಾಸವೊಂದೇ ಅಲ್ಲದೆ, ಸಣ್ಣ ಪ್ರಮಾಣದಲ್ಲಿ ಉದ್ಯಮವಾಗಿಯೂ ಕಂಡು ಕೊಳ್ಳಬಹುದು. ಹ್ಯಾಂಡ್ ಮೇಡ್ ವಸ್ತುಗಳೆಡೆಗೆ ಜನರ ಒಲವಿರುವ ಈ ದಿನಗಳಲ್ಲಿ, ಇಂತಹ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇಂಟರ್ನೆಟ್ ಮೂಲಕ ಹಲವು ಆರ್ಟ್ ಸೈಟ್ ಗಳಿಗೆ ಕ್ವಿಲ್ಲಿಂಗ್ ನಿಂದ ತಯಾರಿಸಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡಬಹುದು. ನಮ್ಮದೇ ಆದ ರೀತಿಯ ಹ್ಯಾಂಡ್ ಮೇಡ್ ಗ್ರೀಟಿಂಗ್ ಕಾರ್ಡ್ಗಳು, ವಾಲ್ ಹ್ಯಾಂಗಿಗಳು, ಆತ್ಮೀಯರಿಗೆ ಉಡುಗೊರೆಯಾಗಿ ನೀಡುವಂತಹ ಶೋ ಪೀಸ್ಗಳು,  ಹೆಣ್ಮಕ್ಕಳ ಅಲಂಕಾರಿಕ ವಸ್ತುಗಳ, ಪೂಜಾ ಅಲಂಕಾರಿಕ ವಸ್ತುಗಳಾದ ದೀಪದ ಆರತಿ ತಟ್ಟೆ ಹೀಗೆ ಅನೇಕ ಬಗೆಯಲ್ಲಿ  ಕಲ್ಪನೆಗೆ ತಕ್ಕಂತೆ ಪ್ರತಿಭೆಯನ್ನು ಮೂಡಿಸಿಕೊಳ್ಳಬಹುದಾಗಿದೆ.


ಬುಧವಾರ, ಜುಲೈ 5, 2017

ನಿಮ್ಮ ಮಗು ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲವೇ?



"ನಮ್ ಹುಡ್ಗ ಏನೂ ಸರಿ ಊಟನೇ ಮಾಡಲ್ಲ ಕಣ್ರೀ", "ತುಂಬಾ ಹಠ ನಂ ಮಗಳದ್ದು ಊಟ ತಿಂಡಿಗೆ,  ಅರ್ಧಕ್ಕರ್ಧ ಚೆಲ್ಲಿ ರಂಪಾಟ ಮಾಡ್ತಾಳೆ", "ಕಾರ್ಟೂನ್ ಇಲ್ಲ ಅಂದ್ರೆ ಊಟ ತಿಂಡೀನೇ ಮಾಡಲ್ಲ, ಮಗು ತಿಂದ್ರೆ ಸಾಕು ಅಂತ ಟಿ.ವಿ ಹಾಕ್ಕೊಂಡು, ಹೇಗೋ ಹೊಟ್ಟೆ ತುಂಬಿಸೋದು", "ಮನೆ ಊಟ ಸೇರಲ್ಲ, ಹೊರಗಡೆ ತಿಂಡಿ, ಕ್ಯಾನ್ಡಿ, ಚೊಕೊಲೇಟ್ಸ್ ಎಲ್ಲ, ಎಷ್ಟು ಚೆನ್ನಾಗಿ ತಿನ್ತಾಳೆ"."ಸ್ಕೂಲ್ ಇಂದ ಡಬ್ಬಿ ಹೇಗೆ ಕಳ್ಸಿದೀನೋ ಹಾಗೇ ವಾಪಸ್ ಬರತ್ತೆ", "ನಮ್ಮ ಮಗುವಿನದು, ಶಾಲೆಯಲ್ಲಿ ಡಬ್ಬಿ ಖಾಲಿಯಾಗತ್ತೆ, ಮನೇಲಿ ಊಟ ತಿಂಡಿಗೆ ರಗಳೆ", "ಊಟದ ಜೊತೆ ಚಿಪ್ಸ್ ಏನಾದ್ರು ಕುರುಕಲು ಬೇಕೇ ಬೇಕು ಇವನಿಗೆ, ಇಲ್ಲಾಂದ್ರೆ ಊಟನೇ ಆಗಲ್ಲ", "ಮಗು ಚೆನ್ನಾಗಿ ತಿಂತಾನೇ ಇಲ್ಲ,  ಡಾಕ್ಟರ್  ಕೇಳ್ಬೇಕ್ರಿ  ನಾನು, ತಿನ್ನಕ್ಕೆ ಏನಾದ್ರು ಟಾನಿಕ್ ಕೊಡ್ಸಬೇಕು", "ಹಾಲು ಕಂಡ್ರೆ ಮಾರು ದೂರ ಓಡ್ತಾಳೆ, ಬೈದು ಹೊಡೆದು ಎಲ್ಲಾ ಮುಗೀತು, ಪ್ರಯೋಜನವೇ ಇಲ್ಲ", "ಇತರರ ಮನೆಗಳಿಗೆ ಹೋದ್ರೆ ಮಾತ್ರ ಸ್ವಲ್ಪವೂ ತಕರಾರಿಲ್ಲದೆ ಚೆನ್ನಾಗಿ ತಿಂದು ಬರುತ್ತಾನೇರೀ ನಮ್ಮ ಮಗ, ಮನೇಲಿ ಮಾತ್ರ ಗಲಾಟೆ ಎಲ್ಲಾ ತಿಂಡಿಗಳಿಗೂ", "ಮನೇಲಿ ಯಾವ ತಿಂಡಿ ನೋಡಿದರೂ ಬೋರ್ ಅಂತಾಳೆ ಮಗಳು" ... ಅಬ್ಬಾ! ಇವೆಲ್ಲಾ ಮಕ್ಕಳ ಪೋಷಕರಾಗಿ ನಾವು ನಡೆಸುವ ಅತ್ಯಂತ ಸರ್ವೇ ಸಾಮಾನ್ಯವಾದ ಸಂಭಾಷಣೆಗಳು, ಕಳವಳದ ಆಕ್ಷೇಪಣೆಗಳು.

ಪೋಷಕರ ಚಿಂತೆ ಏನು ?

ತಮ್ಮ ಮಕ್ಕಳು ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು ಯಾವುದೇ ಪೋಷಕರಲ್ಲಿಯೂ ಕಾಡುವ ಸಾರ್ವತ್ರಿಕ ಸಮಸ್ಯೆ. ಪಾಲಕರಾಗಿ ನಮ್ಮಲ್ಲುಂಟಾಗುವ ತಲ್ಲಣ ಮತ್ತು ಕಳಕಳಿಯೇನೆಂದರೆ,
  • ಹೆಚ್ಚಿನ ಚಟುವಟಿಕೆಯಿಂದಿರುವ ನನ್ನ ಮಗುವಿಗೆ ಆಹಾರದ ಪ್ರಾಮಾಣ ತುಸು ಜಾಸ್ತಿ ಬೇಕಲ್ಲವೇ? ಆದರವನು/ಳು  ಸಂಪೂರ್ಣ ಊಟವನ್ನು ಮಾಡುವುದಿಲ್ಲವಲ್ಲ?
  • ಹಣ್ಣು-ತರಕಾರಿ ಗಳ್ಯಾವುದನ್ನೂ ತಿನ್ನುವುದಿಲ್ಲ. ಪೌಷ್ಟಿಕಾಂಶದ ಕೊರತೆಯಾಗಿ  ಪದೇ ಪದೇ ಮಗುವಿನ ಆರೋಗ್ಯ ಕೆಡುತ್ತದೆಯಲ್ಲ?
  • ಎಷ್ಟು ಬಲವಂತವಾಗಿ ತಿನ್ನಿಸಿದರೂ, ನಮ್ಮ ಮಗು ತೆಳ್ಳಗೆ, ಸಣ್ಣಗೆ ಇದ್ದಾನೆ, ಇತರ ಮಕ್ಕಳಂತೆ ದಷ್ಟಪುಷ್ಟವಾಗಿಲ್ಲವಲ್ಲ?
  •  ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ತೋರಿಸಿ ಉಣ್ಣಿಸದಿದ್ದರೆ, ಉಣ್ಣುವುದೇ ಕಷ್ಟ, ಹಠ, ರಗಳೆ ಜಾಸ್ತಿ.
  •  ಮಕ್ಕಳಿಗೆ ಸ್ವತಃ ತಾವೇ ತಿನ್ನಲು ಬಿಟ್ಟರೆ, ಬಟ್ಟೆ-ಮೈ, ತಿನ್ನುವ ಸ್ಥಳ ಎಲ್ಲವೂ ಗಲೀಜು ಮಾಡುತ್ತಾರೆ. ನಮಗೆ ಸ್ವಚ್ಛತೆಯ ಶ್ರಮವೇ ಹೆಚ್ಚು ಮತ್ತು ಮಕ್ಕಳು ತಿನ್ನುವ ಪ್ರಮಾಣವೂ ಕಡಿಮೆ. 
  • ಕಷ್ಟಪಟ್ಟು ಸಾಕಷ್ಟು ಪ್ರಯಾಸ ತೆಗೆದುಕೊಂಡು ತಯಾರಿಸಿದ ಪದಾರ್ಥವನ್ನು ಮಕ್ಕಳು ಧಿಕ್ಕರಿಸಿದಾಗ ನಮಗಾಗುವ ನಿರಾಸೆ.
  • ಮನೆಯಲ್ಲಿ ಏನೂ ತಿನ್ನದೇ ಮುಷ್ಕರ ಮಾಡುವ ಮಗು, ಬೇರೆಯವರ ಮನೆಗೆ ಹೋದಾಗ ಮಾತ್ರ ಸಂತೋಷದಿಂದ ಉಂಡು, ನಮಗಾಗಿಸುವ ಅವಮಾನ. 
  • ಊಟ ತಿಂಡಿಗಳ ಮಧ್ಯೆ, ಹಲವು ಜಂಕ್ ಫುಡ್ ತಿಂದು ಬಿಡುವುದು ಮತ್ತು ಸರಿಯಾದ ಸಮಯಕ್ಕೆ ಊಟ ತಿಂಡಿಗೆ ಬಾರದೇ ಇರುವುದು. 

ವಾಸ್ತವಿಕತೆ :

ಮೊಟ್ಟಮೊದಲನೆಯದಾಗಿ ನಾವು ಒಪ್ಪಿಕೊಳ್ಳಬೇಕಾದ ನಿಜ ಅಂಶವೇನೆಂದರೆ, 'ಮಕ್ಕಳು' ಎಂದರೆ, ಅವರು 'ನಮ್ಮಂತೆಯೇ ಮನುಷ್ಯರು'; ಶಾರೀರಿಕವಾಗಿ, ಭೌತಿಕವಾಗಿ ವಯಸ್ಸಿನಲ್ಲಿ ಚಿಕ್ಕವರು ಅಷ್ಟೇ. ಅವರುಗಳಿಗೆ ನಮಗಿರುವಂತೆಯೇ ರುಚಿಯ ಗ್ರಹಣ ಶಕ್ತಿಯಿರುತ್ತದೆ. ಮಕ್ಕಳಲ್ಲಿ ತುಸು ಜಾಸ್ತಿಯೇ ಇರುತ್ತದೆ. ನಮ್ಮಲ್ಲಿ ಹೇಗೆ ಕೆಲವು ಆಹಾರಗಳ ಕುರಿತಾಗಿ ಆಸಕ್ತಿ/ನಿರಾಸಕ್ತಿ/ರುಚಿ/ಆಹ್ಲಾದ ಇತ್ಯಾದಿ ಭಾವನೆಗಳು ಬೇರೂರಿತ್ತವೆಯೋ ಹಾಗೆಯೇ ಮಕ್ಕಳಲ್ಲೂ ಕೂಡ ತಮಗೆ ದೊರಕುವ ಆಹಾರದ ಕುರಿತಾಗಿ ತಮ್ಮದೇ ರೀತಿಯಾದ ಅನಿಸಿಕೆಗಳು ಉದ್ಭವಗೊಂಡಿರುತ್ತದೆ. ಮಕ್ಕಳ ಆಹಾರದ ಆಸಕ್ತಿಯ ಕುರಿತು, ಅವರಿಗೊಪ್ಪುವ ಟೇಸ್ಟ್ ನ ಕಡೆಗೆ, 'ಗೌರವ' ಕೊಡಬೇಕಾದದ್ದು ನಾವು ಅರಿತುಕೊಳ್ಳಬೇಕಾದ ಮೊದಲನೆಯ ವಿಷಯ.

ಮನೆಯಲ್ಲಿ ಕೊನೆಯ ಪಕ್ಷ ಒಂದು ಹೊತ್ತಿನಲ್ಲಿಯಾದರೂ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಅಭ್ಯಾಸವೇ ಇಲ್ಲದಿದ್ದ ಪರಿಸರದಲ್ಲಿ, ಮಕ್ಕಳು ಊಟ ತಿಂಡಿಯ ಕುರಿತಾಗಿ ತಕರಾರೆತ್ತುವ ಸಮಸ್ಯೆ ಹೆಚ್ಚು. ಈಗಿನ ತಾಂತ್ರಿಕ ಜೀವನದಲ್ಲಿ, ಸಮಯದ ಅಭಾವ ಎಂಬ ಧೋರಣೆ ನಮ್ಮದು. ಮನೆಯ ಒಬ್ಬೊಬ್ಬ ಮಂದಿ ಒಂದೊಂದು ಹೊತ್ತಿನಲ್ಲಿ ಊಟ ಮಾಡುವುದು, ಟಿವಿ, ಪೇಪರ್, ಮೊಬೈಲ್, ಕಂಪ್ಯೂಟರ್ ನೋಡುತ್ತಾ ಆಹಾರ ಸೇವಿಸುವುದು, ಕೆಲಸದ ಮಧ್ಯೆ ಊಟಕ್ಕೆ ಸಮಯವಿಲ್ಲ ಎಂದು ಕೆಲಸ ಮಾಡುತ್ತಿರುವ ಜಾಗಕ್ಕೆ ತಟ್ಟೆ ತೆಗೆದುಕೊಂಡು ಹೋಗಿ ತಿನ್ನುವುದು ಹೀಗೆ ಪ್ರತಿಯೊಂದು ಹವ್ಯಾಸವನ್ನೂ, ನಾವು ನಮಗರಿವಿಲ್ಲದೆಯೇ ನಡೆಸುತ್ತಾ, ನಮ್ಮ ಮಕ್ಕಳಲ್ಲಿ ಮಾತ್ರ ಎಲ್ಲಾ ಆದರ್ಶವನ್ನೂ ನಿರೀಕ್ಷಿಸುತ್ತೇವೆ. ಮಕ್ಕಳು ಕೇವಲ ನಮ್ಮ ಅನುಕರಣೆ ಮಾಡುತ್ತಿರುತ್ತಾರಲ್ಲವೇ?

 ನಾವು ಮನುಷ್ಯರ ಸಹಜ ಗುಣವೆಂದರೆ, ಎಲ್ಲಿ ಕೆಲಸ ಸುಲಭವಾಗಬಹುದು ಆ ಕಡೆಗೆ ಹೆಚ್ಚಿನ ಒಲವು ತೋರುವುದು. ನಮ್ಮ ಸಾಮರ್ಥ್ಯಕ್ಕೆ ಸುಲಭವಾಗಿ ಏನಾದರೂ ದೊರಕುವುದಾದರೆ, ವ್ಯರ್ಥ ಶ್ರಮ ಪಡುವುದೆಂತು? ಈಗಿನ ಮಾಡರ್ನ್ ಕಾಲಕ್ಕೆ ತಕ್ಕಂತೆ ಮನೆಯಲ್ಲಿ ಆಹಾರವನ್ನು ಬಹಳ ಸಮಯದ ವರೆಗೆ ಹಾಳಾಗದಂತೆ ಶೇಖರಿಸಿಡಲು ಫ್ರಿಡ್ಜ್ ಅಂತೂ ಇದ್ದೇ ಇದೆ. ಪ್ರತಿಯೊಂದು ಪ್ಯಾಕ್ಡ್ ಫುಡ್ ಆಗಿ ಮಾರ್ಕೆಟ್ ನಲ್ಲಿ ಧಾರಾಳವಾಗಿ ದೊರೆಯುತ್ತಿರುವುದರಿಂದ, ಫ್ರೆಶ್ ಫುಡ್ ಪ್ರತಿ ಹೊತ್ತಿಗೂ ಮಾಡುವ ಜಂಜಾಟ ಬೇಕೇ ಎಂಬ ನಿಲುವು ನಮ್ಮಲ್ಲಿ ಹಲವರದ್ದು. ಇದಕ್ಕೆ ಪೂರಕವಾಗಿ ಎಲ್ಲೆಡೆ ಬಿತ್ತರವಾಗುವ ಮಾರ್ಕೆಟಿಂಗ್ ಪ್ರಾಡಕ್ಟ್ ಗಳ ಟ್ರಿಕ್ಸ್. ಹಣ್ಣಿನ ಜ್ಯೂಸು ಅಂತೂ, ಸಂಪೂರ್ಣ ಪರಿಶುದ್ಧ ರಸ ಜೊತೆಗೆ ನೋ ಆಡೆಡ್ ಶುಗರ್ ಅಂಡ್ ಕಲರ್ ಎಂಬ ಶುಗರ್ ಕೋಟೆಡ್ ಜಾಹಿರಾತಿನ ವರಸೆ! ಮಕ್ಕಳಿಗೆ ಊಟ ತಿಂಡಿಯ ಹೊರತಾಗಿ ಇತರ ಸಮಯದ ಲಘು ಆಹಾರಕ್ಕೆ, ನಾವು ಸಂಪೂರ್ಣವಾಗಿ ಅವಲಂಬಿತವಾಗಿರುವುದು ತ್ವರಿತವಾಗಿ ತಯಾರು ಮಾಡಬಹುದಾದ ಪ್ಯಾಕ್ಡ್ ಫುಡ್ ಅಥವಾ ತತ್ ತಕ್ಕ್ಷಣಕ್ಕೆ ನೀಡಬಹುದಾದಂತಹ ಹೊರಗಿನಿಂದ ಕೊಂಡು ತಂದ ತಿಂಡಿಗಳ ಮೇಲೆಯೇ. ಇದರ ಜೊತೆಗೆ, ಫ್ರಿಡ್ಜ್ ತುಂಬಾ ಏನಾದರೂ ಕುರುಕಲು, ಕೊಂಡು ತಂದ ಸ್ವೀಟ್ಗಳು, ಪ್ಯಾಕೆಟ್ ಜ್ಯುಸ್, ಕೇಕು, ಐಸ್ಕ್ರೀಂ ಗಳು ತುಂಬಿಟ್ಟಿರುತ್ತೇವೆ. ಇಂತಹ ಆಹಾರಗಳನ್ನು ನಾವೇ ನಮ್ಮ ಮಕ್ಕಳಿಗೆ ಅಂತರ್ಗತಗೊಳ್ಳಿಸಿ, ಮಕ್ಕಳಿಗೆ ಹೊತ್ತಲ್ಲದ ಹೊತ್ತಿನಲ್ಲಿ ತಿನ್ನಲು ಅನುಕೂಲವಾಗುವಂತೆ ಲಭ್ಯವಿರಿಸಿ, ನಂತರದಲ್ಲಿ "ಮಗು ಕೇವಲ ಚಾಕಲೇಟ್, ಬಿಸ್ಕತ್ ,ಕುರುಕಲು ಇದರಲ್ಲಿಯೇ ದಿನವಿಡೀ ಕಳೆಯುತ್ತದೆ, ಆರೋಗ್ಯಕರ ಆಹಾರವನ್ನು ಸೇವಿಸುವುದಿಲ್ಲ" ಎಂದು ಸಂಕಟ ಪಡುವುದು ಯೋಗ್ಯವೇ?

ಇದರ ಜೊತೆಗೆ ನಾವು ಮಾಡುವ ಸಹಜ ತಪ್ಪೆಂದರೆ , ಮಕ್ಕಳ ಪ್ರತಿ ಹೊತ್ತಿನ ಆಹಾರದ ಮಧ್ಯೆ ಅಂತರವಿಡದೇ ಮಗುವನ್ನು ಸರಿ ಊಟಮಾಡದಿರುವ ಬಗ್ಗೆ ದೂಷಿಸುವುದು. ಹೀಗೊಂದು ಸಂದರ್ಭವನ್ನು ಗಮನಿಸಿ ಊಟದ ಹೊತ್ತಿನ ಒಂದು ತಾಸು ಮುಂಚೆಯಷ್ಟೇ, ಉದ್ದದೊಂದು ಲೋಟದಲ್ಲಿ ಹಾಲನ್ನು ಕುಡಿಯಲು ನೀಡಿ, ಮಗು ಸರಿಯಾಗಿ ಊಟ ಮಾಡದಿದ್ದಾಗ ಗದರುವುದುತಪ್ಪಲ್ಲವೇ? ಕುಡಿಯಲು ಕೊಟ್ಟ ಹಾಲು ದ್ರವ್ಯವಾಗಿದ್ದರೂ ಸಹ, ಅದರ ಜೀರ್ಣವಾಗುವ ಪ್ರಕ್ರಿಯೆ ನಿಧಾನ. ಹಸಿವೇ ಇಲ್ಲದೆ ಮಗು ಹೇಗೆ ತಾನೇ ಉಣ್ಣಲು ಅಣಿಯಾದೀತು?

ಸರಾಗ ಜೀವನ ಮಾರ್ಗಕ್ಕೆ ನಾವು ಹುಡುಕಿಕೊಳ್ಳುವ ಶಾರ್ಟ್ ಕಟ್ ಗಳಲ್ಲಿ, ಮಕ್ಕಳಿಗೆ ತಾವೇ ಉಣ್ಣಿಸುವುದೂ ಕೂಡ ಒಂದು. ಮಕ್ಕಳು ತಮ್ಮ ಊಟ ತಿಂಡಿಯ ಉಪಾಸನೆಯ ಸಮಯದಲ್ಲಿ ಎಲ್ಲೆಡೆ ಊಟವನ್ನು ಹರಡಿ, ಮೈಯೆಲ್ಲಾ ರಾಡಿ ಮಾಡಿಕೊಳ್ಳುವ ಅವತಾರಕ್ಕಿಂತ ನಾವೇ ಉಣ್ಣಿಸಿ ಬಿಡುವುದು ಸುಖ ಎಂಬುದು ನಮ್ಮ ಯೋಚನೆ. ೧.೫ ವರ್ಷದ ಮಗು, ತಾನೇ ಕೈಯಾರೆ ತಿನ್ನುತ್ತೇನೆಂದು ಹಠಮಾಡುವುದನ್ನು ಗಮನಿಸಿರುತ್ತೀರಿ. ನಮ್ಮನ್ನೇ ಅನುಸರಿಸಿ ಕಲಿಯಲು ಪ್ರಯತ್ನಿಸುತ್ತಿರುವ ಮಗುವಿಗೆ ನಾವು ಮೊದಲಾಡುವ ನಕಾರಾತ್ಮಕ ವಾಕ್ಯವೇ, "ಬೇಡ ಕಂದ, ನಿನಗೆ ತಾನೇ ತಿನ್ನಲು ಬರುವುದಿಲ್ಲ, ನಾನೇ ತಿನ್ನಿಸುತ್ತೇನೆ", "ಅಯ್ಯೋ, ಮೈ ಕೈ ಮೇಲೆಲ್ಲಾ ಚೆಲ್ಲಿ ರಾಡಿ ಮಾಡ್ಕೊಳ್ತಿ ನೀನು, ಇರು ನಾನೇ ತಿನ್ನಿಸ್ತೀನಿ", "ಅರ್ಧ ಗಂಟೆಯಿಂದ ತಟ್ಟೆ ಮುಂದೆ ಕುಳಿತ್ತಿದ್ದೀಯಲ್ಲೋ, ನಾನೇ ಬೇಗ ಬೇಗ ತಿನ್ನುಸುತ್ತೇನೆ" ಇತ್ಯಾದಿ. ನಮ್ಮನ್ನು ನೋಡಿ ತಾನೇ ಕೈಯಾರೆ ಊಟ ಮಾಡುವ ಸ್ವಂತಿಕೆಯನ್ನು ಬಯಸುವ ಮಗುವು, ನಾವು ಹಿರಿಯರು ಮೈ ಮೇಲೆ ಚೆಲ್ಲಿಕೊಳ್ಳದೆ, ಚೆನ್ನಾಗಿ ಊಟ ಮಾಡುವುದನ್ನೂ ಕೂಡ ಅಷ್ಟೇ ಗ್ರಹಿಸಿ ಕಲಿಯುತ್ತದೆ. ಆ ಕಲಿಕೆ ಪೂರ್ಣಗೊಳ್ಳುವ ವರೆಗೆ, ನಮ್ಮ ಮಗುವಿಗೆ ನೀಟಾಗಿ ತಿನ್ನಲು ರೂಢಿಯಾಗುವ ವರೆಗೆ, ಅಭ್ಯಸಿಸಲು ಬಿಡುವಷ್ಟೂ ಕೂಡ ವ್ಯವಧಾನ ನಮ್ಮಲ್ಲಿಲ್ಲವೇ? ಊಟದ ಜಾಗ, ಮೈಯೆಲ್ಲಾ ರಾಡಿ ಮಾಡಿಕೊಂಡ ಮಗುವನ್ನು ಶುಚಿಗೊಳಿಸುವ ಗೊಡವೆ ನಮಗೇಕೆ ಎಂಬ ಭಾವನೆ ನಮ್ಮಗಳದ್ದು. 

ಮಕ್ಕಳ ಊಟ ತಿಂಡಿಯ ಹರಸಾಹಸಕ್ಕೆ, ತಂತ್ರಜ್ಞಾನದ ಎಲ್ಲಾ ಸೌಲಭ್ಯಗಳಿರುವ ಈ ಕಾಲದಲ್ಲಿ ಹೆಚ್ಚಿನ ಪೋಷಕರು ಕಂಡು ಕೊಂಡಿರುವ ಪರಿಹಾರವೆಂದರೆ, ಮಗುವನ್ನು ಕುರ್ಚಿಯೊಂದರ ಮೇಲೆ ಕುಳ್ಳಿರಿಸಿ, ಟಿ.ವಿ/ಮೊಬೈಲ್/ಲ್ಯಾಪ್ಟಾಪ್/ಟ್ಯಾಬ್ ಅನ್ನು  ಎದುರಿಗಿಟ್ಟು, ಊಟವನ್ನು ಮಗುವಿನ ಬಾಯಿಗೆ ತುರಿಕಿಸುತ್ತಾ ಹೋಗುವುದು. ಒಟ್ಟಿನಲ್ಲಿ ಪೋಷಕರು, ಆ ಮಗುವಿಗೆ ತಾನು ಏನು ತಿನ್ನುತ್ತಿದ್ದೇನೆ, ಆ ಪದಾರ್ಥದ ಭೌತಿಕ ಸ್ವರೂಪವೇನು, ಷಡ್ರಸಗಳಲ್ಲಿ ಯಾವ ರುಚಿಯ ಅನುಭವ ತನಗಾಗುತ್ತಿದೆ, ತನಗೆ ಎಷ್ಟು ಹಸಿವಾಗಿದೆ, ಹೊಟ್ಟೆ ತುಂಬಿದೆಯೇ ಎಂಬಿತ್ಯಾದಿಯ ಅರಿವೇ ಮೂಡದಂತೆ ಮಾಡುತ್ತಾರೆ. ತಿನ್ನುತ್ತಿರುವ ಆಹಾರದ ರುಚಿಯ ಕುರಿತು ಮೆದುಳು ಸಂವಹನೆ ಮಾಡುವುದನ್ನೇ ಅಡ್ಡಗಟ್ಟಿ, ನಾಲಿಗೆಯೂ ತಕರಾರೆತ್ತದಂತೆ, ಮಗು ಎದುರಿಗಿನ ಮಾಯಾಪೆಟ್ಟಿಗೆಯಿಂದ ಕಣ್ಣು,ಕಿವಿಯಾರೆ ಏನನ್ನು ಹೀರಿಕೊಳ್ಳುತ್ತಿದೆಯೋ ಅದರ ಲಾಭ ಪಡೆಯುತ್ತಾರೆ. ತಾತ್ಕಾಲಿಕವಾಗಿ ಇದು ಅತ್ಯುತ್ತಮ ಪರಿಹಾರವಾಗಿ ಕಂಡರೂ, ಮುಂದೆ ಭವಿಷ್ಯದಲ್ಲಿ, ತನಗೆ ಪರಿಚಯಿಸಿದ ಮೊದಲ ಆಹಾರದ ಕುರಿತಾದ ಸಂವೇದನೆಯ ಕೊಂಡಿಯೇ ಕಳಚಿ ಹೋಗಿರುತ್ತದೆ. 

ಇನ್ನೊಂದು ಭರಪೂರ ಪೈಪೋಟಿ (ಮಕ್ಕಳಲ್ಲಿ ಅಲ್ಲ) ನಾವು ಪಾಲಕರಲ್ಲಿ ಎಂದರೆ, ನಮ್ಮ ಮಗು ಪಕ್ಕದ ಮನೆಯ ಮಗುವಿನಂತೆ, ಸಂಬಂಧಿಕರ ಮಗುವಿನಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತಿಲ್ಲವಲ್ಲ, ಮಗುವಿನ ದೇಹದ ತೂಕ ಸಾಲುತ್ತಿಲ್ಲವಲ್ಲ ಎಂಬಿತ್ಯಾದಿ ಅನಾವಶ್ಯಕ ಆತಂಕಗಳು. ಆದರೆ ಪೋಷಕರಾಗಿ ಈ ಕುರಿತು ಚಿಂತಿಸುವ ಬದಲಾಗಿ, ನಾವು ಮಾಡಬೇಕಾದ ಚಿಂತನೆಯೆಂದರೆ, ಮಗುವಿನ ದೇಹದ ಆರೋಗ್ಯವನ್ನು, ಮಗುವಿನ ಅತ್ಯುತ್ತಮ ಶಾರೀರಿಕ ಗಾತ್ರದಿಂದ ಅಳೆಯಬೇಕಾಗಿಲ್ಲ. ಮಗುವಿನ ದೇಹ ಗಾತ್ರಕ್ಕೆ ಆ ಮಗುವಿನ ಜೆನೆಟಿಕ್ ಪೊಟೆನ್ಶಿಯಲ್ ಕೂಡ ಒಂದು ಪ್ರಸ್ತುತವಾದ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ವಂಶ ಪಾರಂಪರ್ಯವಾಗಿ ಮಗುವಿನ ತಂದೆ/ತಾಯಿ/ಚಿಕ್ಕಪ್ಪ/ಮಾವ/ಅಜ್ಜ /ಅಜ್ಜಿ ಇನ್ಯಾರದ್ದಾದರೂ ಆಳ್ತನ ಮಗುವಿಗೆ ಬರುವ ಸಾಧ್ಯತೆ ಇರುತ್ತದೆ. ಎಷ್ಟೇ ತಿಂದರೂ ನಮ್ಮ ಮಗು ದಪ್ಪಗಾಗ್ತಿಲ್ಲ ಎಂದು ದೂರುವ ಪೋಷಕರೇ, ನೀವು ಚಿಕ್ಕಂದಿನಲ್ಲಿ ಹೇಗಿದ್ದಿರಿ ಎಂಬುದನ್ನೂ ಕೂಡ ಒಮ್ಮೆ ನೆನಪಿಸಿಕೊಳ್ಳಿ. ನಮ್ಮ ಮಕ್ಕಳ ದೇಹ ಸದೃಢವಾಗಿದ್ದು, ಅವರ ಎತ್ತರ,ತೂಕದ ಅನುಪಾತ ಸರಿಯಿದ್ದಲ್ಲಿ, ಮಗುವಿನ ಬೆಳವಣಿಗೆ ಹುಟ್ಟಿನಿಂದಲೂ ಒಂದೇ ಹದದಲ್ಲಿ ನಡೆಯುತ್ತಿದ್ದರೆ, ಮಗುವಿನ ಆರೋಗ್ಯದಲ್ಲಿ ಅತೀವ ಏರು ಪೇರು ಕಂಡಿಲ್ಲದ ಪಕ್ಷದಲ್ಲಿ, ನಾವು ಚಿಂತಿಸಬೇಕಾಗಿಲ್ಲ.  

ಮಕ್ಕಳು ಹೆಚ್ಚೆಚ್ಚು ತಿಂದರೆ ಮಾತ್ರ ಆರೋಗ್ಯ ಎಂಬುದೊಂದು ಮೂಢ ನಂಬಿಕೆ ನಮ್ಮಲ್ಲಿ  ಹಲವರಿಗಿದೆ. ಅದಕ್ಕೋಸ್ಕರ ಮಕ್ಕಳಿಗೆ ಖುಷಿಯಿದೆಯೋ ಇಲ್ಲವೋ ಬಲವಂತ ಮಾಡಿಸಿ ತಿನ್ನಿಸುವ ನಾವು ಬೆಂಬಿಡದೆ ಪ್ರಯತ್ನಿಸುತ್ತಿರುತ್ತೇವೆ. ಇದರ ಫಲಿತಾಂಶವಾಗಿ ಮಕ್ಕಳಲ್ಲಿ ಊಟ ತಿಂಡಿ ಎಂದರೆ ವರ್ಜ್ಯ ಭಾವನೆ, ಊಟದ ಸಮಯಕ್ಕೆ ರಗಳೆ-ರಂಪಾಟ ಎಲ್ಲವೂ ಶುರು! ಹಾಗಾಗಿ, ನಾವು ಮಾಡಬೇಕಾದುದೆಂದರೆ, ನಾವು ನಿತ್ಯ ಉಪಯೋಗಿಸುವ ದವಸ-ಧಾನ್ಯಗಳು, ಬೇಳೆ-ಕಾಳುಗಳು, ಹಣ್ಣು-ತರಕಾರಿ,ಹಾಲು, ಮೊಟ್ಟೆ, ಮಾಂಸ ಹೀಗೆ ಯಾವ್ಯಾವ ಪದಾರ್ಥಗಳಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಇನ್ನಿತರ ಪೌಷ್ಟಿಕಾಂಶಗಳು ಹೇರಳವಾಗಿ ದೊರೆಯುತ್ತವೆ ಎಂಬುದರ ಕುರಿತು ಕನಿಷ್ಠ ಅರಿವು ನಮ್ಮಲ್ಲಿ ಮೂಡಿಸಿ ಕೊಂಡು, ಅಂತಹ ಆಹಾರ ವಸ್ತುಗಳಿಂದಲೇ ಮಕ್ಕಳು ಇಷ್ಟಪಡುವಂತಹ ಅಡುಗೆ ಪದಾರ್ಥಗಳನ್ನು ತಯಾರಿಸಿ ಅಪೌಷ್ಠಿಕತೆಯನ್ನು ನೀಗಿಸಬಹುದು. ಮಕ್ಕಳು ತಿನ್ನುವ ಪ್ರಮಾಣದಲ್ಲಿಯೇ, ಹೆಚ್ಚೆಚ್ಚು ಆರೋಗ್ಯಕರವಾದ ಆಹಾರಪದಾರ್ಥವನ್ನು ಪೂರೈಕೆಯಾಗುವಂತೆ ನೋಡಿಕೊಂಡರೆ ಸಾಕು.

ಬಾಲ್ಯದ ಹಂತದಿಂದಲೂ ಪ್ರತಿಯೊಂದು ರುಚಿಯನ್ನು ಗ್ರಹಿಸುವ ಶಕ್ತಿಯಿರುವ ಮಕ್ಕಳಿಗೆ, ದಿನನಿತ್ಯದ ಒಂದೇ ರೀತಿಯ ಆಹಾರ ಬೇಸರ ಬರಿಸುವುದು ಅತ್ಯಂತ ಸಹಜ. ಹಾಗಾಗಿ ಮಕ್ಕಳ ಬೇಸರಿಕೆಯನ್ನು ಅರ್ಥ ಮಾಡಿಕೊಂಡು,  ಚಿಕ್ಕ ಪುಟ್ಟ ಪರ್ಯಾಯ ಮಾರ್ಗವನ್ನು ಕಂಡು ಹಿಡಿದುಕೊಂಡರೆ, ನಮ್ಮ ಕೆಲಸ ಸುಲಭವಾಗುತ್ತದೆ .ಉದಾಹರಣೆಗೆ ಚಟ್ನಿ , ಸಾಂಬಾರ್ ಪದಾರ್ಥಗಳ ರುಚಿಯನ್ನು ಆಗ್ಗಾಗ್ಗೆ ಬದಲಾಯಿಸುತ್ತಿರುವುದು, ಅಪರೂಪಕ್ಕೊಮ್ಮೊಮ್ಮೆ ಮಕ್ಕಳಿಗೆ ಪ್ರಿಯವಾದ ಸ್ವೀಟ್, ಕುರುಕಲು ತಿಂಡಿಗಳನ್ನು ಮನೆಯಲ್ಲಿಯೇ ಶುಚಿ-ರುಚಿಯಾಗಿ ಮಾಡಿ ಊಟದ ಜೊತೆ ನೀಡಿದರೆ ಮಕ್ಕಳು ತಮ್ಮ ಬೆರಳು ಚೀಪುವಲ್ಲಿಯವರೆಗೆ ಉಣ್ಣುವುದಂತೂ ಖಾತ್ರಿ. ಮಕ್ಕಳು ಒಮ್ಮೊಮ್ಮೆ ಒಂದೊಂದು ರೀತಿಯ ಆಹಾರ ಪದಾರ್ಥವನ್ನು ಇಷ್ಟ ಪಡದಿದ್ದಾಗ, ಅದಕ್ಕೆ ಸಮನಾದ ಇತರ ಪೌಷ್ಟಿಕ ಆಹಾರವನ್ನು ನೀಡಿ ಸರಿದೂಗಿಸಬಹುದು. ಉದಾಹರಣೆಗೆ, ನಮ್ಮ ಮಗು ಸಾದಾ ಹಾಲು ಇಷ್ಟಪಡದಿದ್ದ ಪಕ್ಷದಲ್ಲಿ, ಮೊಸರು, ಚೀಸ್, ಪನ್ನೀರ್, ಬೆಣ್ಣೆಯ ರೂಪದಲ್ಲಿ ಮಗುವಿಗೆ ಕ್ಯಾಲ್ಸಿಯಂ ಹಾಗೂ ದೇಹಕ್ಕೆ ಬೇಕಾಗುವಷ್ಟು ಕೊಬ್ಬಿನಂಶವನ್ನು ಪೂರೈಸಬಹುದು. ಹಣ್ಣುಗಳನ್ನು ಹೆಚ್ಚು ಇಷ್ಟಪಡದ ಮಕ್ಕಳಿಗೆ, ವಾರಕ್ಕೊಮ್ಮೆ ವಿವಿಧ ಹಣ್ಣುಗಳನ್ನು ಕತ್ತರಿಸಿ, ಸ್ವಲ್ಪ ಪ್ರಾಮಾಣದ ಜೇನುತುಪ್ಪ, ಐಸ್ಕ್ರೀಂ ಅಥವಾ ಕಸ್ಟರ್ಡ್ ಜೊತೆ ಕೊಟ್ಟರೆ, ಅತ್ಯಂತ ಸರಳವಾಗಿ ಹಣ್ಣು ಮಕ್ಕಳ ಹೊಟ್ಟೆ ಸೇರುತ್ತದೆ.  ಹೀಗೆ ಹೆಚ್ಚೆಚ್ಚು ಆಕರ್ಷಣೀಯ ಮತ್ತು ರುಚಿಯಲ್ಲಿನ ವೈವಿದ್ಯತೆ ಮಕ್ಕಳಿಗೆ ಆಹಾರದ ಕಡೆಗೆ ಆಸಕ್ತಿ ದೊರಕುವಲ್ಲಿ ಸಹಾಯಕವಾಗುತ್ತದೆ.

ನಾವು ಅಡುಗೆ ಮಾಡುವ ವಿಧಾನಗಳನ್ನು ನೋಡಿ, ಆಗಷ್ಟೇ ಬೌದ್ಧಿಕ ಬೆಳವಣಿಗೆಯನ್ನು ಪಡೆಯುತ್ತಿರುವ ಮಗುವು, ದೊಡ್ಡವರನ್ನು ಅನುಸರಿಸುವ ಪ್ರಯತ್ನ ಮಾಡುತ್ತದೆ. ನಾವು ನೋಡಿದಂತೆ, ಸಣ್ಣ ಮಕ್ಕಳು ಚಪಾತಿ ಹಿಟ್ಟನ್ನು  ಕಂಡೊಡನೆ ಅದನ್ನೊಂದಷ್ಟು ಸರ್ತಿ ತಿರುವಿ ಹಾಕಿ, ಏನೇನೋ ಸಂಶೋಧನೆ ನಡೆಸಿ, ಅಂತೂ ತಾವೂ ಕೂಡ ಒಂದು ಚಪಾತಿ ಲಟ್ಟಿಸುವಲ್ಲಿಯವರೆಗೆ ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಹಲವರು ಮಾಡುವ ತಪ್ಪೆಂದರೆ, ಮಕ್ಕಳು ಅಡುಗೆ ಮನೆಗೆ ಬಂದು ತೊಂದರೆ ನೀಡುತ್ತಾರೆ, ಬೆಂಕಿ, ಚಾಕು-ಚೂರಿಗಳಿಂದ ಅಪಾಯವಾದೀತು ಎಂಬ ಆಲೋಚನೆಯಿಂದ ಅಡುಗೆಯ ಪದಾರ್ಥದ ಯಾವೊಂದು ಅಣುವನ್ನೂ ಅವರಿಗೆ ತಾಕಿಸದೆ ಇರುವುದು.  ಒಂದರ್ಥದಲ್ಲಿ ಮಕ್ಕಳ ಸುರಕ್ಷತೆಯ ಕಾಳಜಿ ಸರಿಯಾದರೂ, ಮಕ್ಕಳನ್ನು ನಮ್ಮ ಜೊತೆ ಅಡುಗೆ ತಯಾರಿಕೆಯಲ್ಲಿ ತೊಡಗಿಸಿಕೊಳ್ಳದಿರುವುದೂ ಕೂಡ ತಪ್ಪೇ. ಮನೆಕೆಲಸ ಮಾಡಿಸಬೇಕೆಂದಲ್ಲ. ತರಕಾರಿ ಸ್ವಚ್ಛಗೊಳಿಸುವಾಗ, ಹೆಚ್ಚುವಾಗ, ಚಪಾತಿ ಉಂಡೆ ಮಾಡಲು ಇತ್ಯಾದಿ ಚಿಕ್ಕಪುಟ್ಟ ಕಾರ್ಯಗಳಿಗೆ, ಮಕ್ಕಳ ವಯಸ್ಸಿಗೆ ತಕ್ಕನಾಗಿ, ಸುರಕ್ಷತೆಯ ಕ್ರಮಗಳನ್ನು ಪೂರಕವಾಗಿ ಕೈಗೊಂಡು, ಅವರನ್ನು ನಮ್ಮ ಜೊತೆ ತೊಡಗಿಸಿಕೊಂಡರೆ, ಮಕ್ಕಳಿಗೆ ಆಹಾರದ ಕಡೆಗೆ ಒಲವು ಸಹಜವಾಗಿಯೇ ಬರುತ್ತದೆ.

ಮಕ್ಕಳು ಸರಿಯಾಗಿ ತಿನ್ನುವುದಿಲ್ಲ ಎಂಬ ಕಾರಣಕ್ಕಾಗಿ ನಮ್ಮಲ್ಲಿ ಹಲವರು ಮಾಡುವ ತಪ್ಪೆಂದರೆ, ಡಾಕ್ಟರ್ ರವರನ್ನು ಸಮಾಲೋಚಿಸದೇ ತಮ್ಮ ಮಕ್ಕಳಿಗೆ ತಾವೇ ಸ್ವತಃ  ವೈದ್ಯಕೀಯ ಚಿಕಿತ್ಸೆಯನ್ನು ನೀಡುವುದು. ಉದಾಹರಣೆಗೆ ಪದೇ ಪದೇ ಜಂತು ಹುಳುವಿಗೆ ಮೆಡಿಸಿನ್ ಕೊಡಿಸುವುದು ಕೂಡ ಒಳಿತಲ್ಲ, ವರ್ಷಕ್ಕೊಮ್ಮೆ ಕೊಟ್ಟರೆ ಸಾಕು. ದಯವಿಟ್ಟು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿರುವುದೆಂದರೆ, ಮಕ್ಕಳು ಆಹಾರ ತಿನ್ನದಿರುವ ತೊಂದರೆಗೆ (ಪಾಲಕರ ಪಾಲಿಗೆ ಅದೊಂದು ಖಾಯಿಲೆ!!??) ಯಾವುದೇ ನಿರ್ಧಿಷ್ಟ ಮದ್ದು ಎಂಬುದಿಲ್ಲ. ಡಾಕ್ಟರ್ ಬಳಿ ಹೋಗಿ ನಾವು ಸಮಸ್ಯೆ ಹೇಳಿಕೊಂಡಾಗ ಡಾಕ್ಟರ್ ಗಳು ನೀಡುವ ಪರಿಹಾರವೆಂದರೆ, ಕೆಲವು ವಿಟಮಿನ್ಸ್, ಜಿಂಕ್ ಅಂಶ ವಿರುವ ಸಿರಪ್ ಗಳು. ಇವು ಕೇವಲ ಪೂರಕವಾಗಿ ನೀಡುವಂತದ್ದಷ್ಟೇ. ನಮ್ಮ ಮಗುವಿನ ಹಸಿವಿನ ಸ್ವಭಾವವನ್ನು ಮರುಕಳಿಸಲು, ನಾವೇ ಒಳ್ಳೆಯ ರೀತಿಯ ಆಹಾರ, ವ್ಯವಸ್ಥಿತವಾದ ದಿನಚರಿ, ವೈವಿದ್ಯತೆ ಇತ್ಯಾದಿ ಸಂಗತಿಗಳನ್ನು ಅಳವಡಿಸಿಕೊಳ್ಳುವುದು ಒಳಿತು.



ಮಕ್ಕಳಿಗೆ  ಮನೆ  ಆಹಾರಕ್ಕೆ ನಿರಾಸಕ್ತಿ/ಹಠ ಕ್ಕೆ ಪರಿಹಾರವೇನು ?

ಪ್ರತಿಯೊಂದು ಮಗುವೂ ಭಿನ್ನ. ಪ್ರತಿ ಮನೆಯಲ್ಲೂ ಒಂದೇ ರೀತಿಯ ಪರಿಸರ, ಆಹಾರ  ಕ್ರಮ ಇತ್ಯಾದಿ ಇರುವುದಿಲ್ಲ. ಹಾಗಾಗಿ ಎಲ್ಲರಂತೆಯೇ ನಮ್ಮ ಮಕ್ಕಳು ತಿನ್ನಬೇಕು ಎಂಬ ಧೋರಣೆಯೇ ನಮ್ಮ ಮಕ್ಕಳಲ್ಲಿ ಹೆಚ್ಚಿನ ಒತ್ತಡವನ್ನು ನೀಡುತ್ತದೆ. ಹೀಗೊಂದಷ್ಟು ಟಿಪ್ಸ್, ಮಕ್ಕಳ ಆಹಾರದ ಕುರಿತಾಗಿ 'ನಮಗಿರುವ' ಸಮಸ್ಯೆಗೆ ಮತ್ತು ಮಕ್ಕಳ ಹಠಮಾರಿತನದ ಪರಿಸ್ಥಿತಿಯನ್ನು ಹದಗೊಳಿಸಲು. 
  • ಊಟ ತಿಂಡಿಗಳ ಸಮಯದ ನಡುವೆ ಅಂತರವಿರಲಿ, ಮಧ್ಯೆ ಮಧ್ಯೆ ಬಾಯಾಡಲು ಕೊಡುವುದು ಒಳ್ಳೆಯ ಅಭ್ಯಾಸವಲ್ಲ. ಹಾಗಾಗಿಯೂ ಕೊಡಲೇ ಬೇಕಾದ ಪ್ರಸಂಗ ಬಂದರೆ, ಕತ್ತರಿಸಿದ ಹಣ್ಣುಗಳು, ಸೌತೆಕಾಯಿ, ಟೊಮೇಟೊ, ನೆನೆಸಿಟ್ಟ ದ್ರಾಕ್ಷಿ, ಡ್ರೈ ಫ್ರೂಟ್ಸ್,  ಹೀಗೆ  ಸಣ್ಣ ಪ್ರಮಾಣದ ಆಹಾರವನ್ನು ನೀಡಿ. 
  • ಮಕ್ಕಳ ಆಹಾರ ತಕ್ಕಮಟ್ಟಿಗೆ ಸುಂದರವಾಗಿರಲಿ, ಅಲಂಕೃತಗೊಂಡಿರಲಿ. ದೋಸೆ, ಚಪಾತಿ ಇತ್ಯಾದಿ ಮಕ್ಕಳ  ಆಸಕ್ತಿಯ ಆಕೃತಿಯಲ್ಲಿ ತಯಾರು ಮಾಡಬಹುದಾಗಿದೆ , ಕೆಚಪ್ ಗಳಿಂದ ಅಲಂಕರಿಸುವುದು, ಸ್ಕೂಲ್ ಡಬ್ಬಿಗಳಿಗೆ ರೋಲ್ ಮಾಡಿ ಕೊಡುವುದು, ಕಾರ್ಟೂನ್ ಆಕೃತಿಗಳನ್ನು ಮಾಡುವುದು ಹೀಗೆ. ಸ್ವಲ್ಪ ದೊಡ್ಡ ಮಕ್ಕಳಾದರೆ, ಹಣ್ಣಿನ ಜ್ಯೂಸು, ಹಣ್ಣಿನ ಸ್ಮೂದಿ, ಹೆಚ್ಚಿದ ತರಕಾರಿಗಳ ಸಲಾಡ್ ಇನ್ನಿತರ ಸ್ನ್ಯಾಕ್ ಗಳನ್ನು ಪಾರದರ್ಶಕ ಗಾಜಿನ ಬಟ್ಟಲಿನಲ್ಲಿ ಹಾಕಿ ಕೊಡುವುದರಿಂದ, ಹಣ್ಣು ತರಕಾರಿಗಳ ಬಣ್ಣವು ಮಕ್ಕಳನ್ನು ಆಕರ್ಷಿಸುತ್ತದೆ.  ಉಪ್ಪಿಟ್ಟು, ಪಲಾವ್, ರೈಸ್ ಬಾತ್ ಗಳನ್ನು ಸುಮ್ಮನೆ ತಟ್ಟೆಯಲ್ಲಿಡುವುದಕ್ಕಿಂತಲೂ, ಬಟ್ಟಲಿನ ಆಕೃತಿಯಲ್ಲಿ ಇಟ್ಟುಕೊಟ್ಟು, ಸುತ್ತಲೂ ಅವರಿಷ್ಟವಾಗುವ ಸೌತೆಕಾಯಿ, ಈರುಳ್ಳಿ, ಟೊಮ್ಯಾಟೋ ಗಳನ್ನು ತೆಳ್ಳನೆ ಕತ್ತಿರಿಸಿ ಅಲಂಕರಿಸಿ ಕೊಡುವುದರಿಂದ, ಸಾಮಾನ್ಯ ತಿಂಡಿ ಊಟಗಳೂ ಕೂಡ ವಿಶಿಷ್ಟವೆನಿಸತೊಡಗುತ್ತದೆ. 
  •  ಮಕ್ಕಳನ್ನು ಇತರರೊಡನೆ ಅವರ ಆಹಾರ ಬಳಕೆಯ ಕುರಿತಾಗಿ,ಶಾರೀರಿಕ ಸಾಮರ್ಥ್ಯದ ಕುರಿತಾಗಿ ಹೋಲಿಕೆ ಮಾಡಲೇಬೇಡಿ. 
  • ಒಳ್ಳೆಯ ಮನೆಯ ಆಹಾರ ಪದಾರ್ಥವನ್ನು ತಿನ್ನಲಿ ಮಗು ಎಂಬ ಇಚ್ಛೆಯಿಂದ ಮಗುವಿಗೆ ಇತರ ಜಂಕ್ ಫುಡ್ ಗಳ ಲಂಚವನ್ನು ತೋರಿಸುವ ಪ್ರಯತ್ನ, ಉದಾಹರಣೆಗೆ, ಊಟ ಮಾಡಿದ್ರೆ ಮಾತ್ರ ಈ ಚಾಕೊಲೇಟ್ ನಿನಗೆ ಸಿಗುತ್ತದೆ ಎಂಬಿತ್ಯಾದಿ ನೈತಿಕ ಬಲಾತ್ಕಾರ ಬೇಡ. ಅತಿಯಾದ ಸೂಕ್ಷ್ಮತೆಯೂ ಸಲ್ಲ. ಅಪರೂಪಕ್ಕೆ ಹೊರಗಡೆ  ಕರೆದುಕೊಂಡು ಹೋಗಿ ಶುಚಿ-ರುಚಿಯಾದ ಪದಾರ್ಥವನ್ನು ತಿನ್ನಿಸುವುದು ತಪ್ಪಲ್ಲ. ಆದರೆ ಅದೇ ಅತಿಯಾಗುವುದು ಬೇಡ. 
  •  ಕೇವಲ  ಗೋಧಿ ಹಿಟ್ಟಿನಿಂದ ಮಾಡುವ ತಿಂಡಿಗಳಿಗಿಂತ, ಅದಕ್ಕೆ ಜೋಳ, ರಾಗಿ, ಭಾಜರಾ, ಸೋಯಾ ಹಿಟ್ಟುಗಳನ್ನು ಸೇರಿಸಿ ಮಾಡಿದ ತಿಂಡಿಗಳಲ್ಲಿ ಪೌಷ್ಟಿಕತೆ ಅಧಿಕವಾಗಿರುತ್ತದೆ. ಇದರ ಜೊತೆಗೆ ದಿನಕ್ಕೊಂದೊಂದು ಬಗೆಯ ತರಕಾರಿಗಳನ್ನು ತುಂಬಿ ಸ್ಟಫ್ಡ್ ಪರೋಟ ರೀತಿಯಲ್ಲಿ ಮಾಡಿದರೆ, ಮಕ್ಕಳಲ್ಲಿ ತರಕಾರಿಗಳ ಸೇವನೆ ಅಧಿಕವಾಗುತ್ತದೆ. ದೋಸೆ ಹಿಟ್ಟನ್ನು ತಯಾರು ಮಾಡುವಾಗ ವಿವಿಧ ಬಗೆಯ ಕಾಳುಗಳನ್ನು ಹಾಕಿ ನೆನೆಸಿ ಮಾಡಿದರೆ, ಪ್ರೋಟೀನ್ ನ ಪೂರೈಕೆ ಹೆಚ್ಚುತ್ತದೆ. ಮಕ್ಕಳು ಇಷ್ಟ ಪಡುವ ಪೂರಿಯನ್ನೂ ಕೂಡ, ಬೇಯಿಸಿದ ಕ್ಯಾರಟ್, ಬೇಯಿಸಿದ ಪಾಲಕ್ ಸೊಪ್ಪನ್ನು ಅರೆದು ಹಾಕಿ, ಕಲರ್ಫುಲ್ ಪೂರಿಯಾಗಿ ನೀಡಬಹುದು. 
  • ಮಕ್ಕಳು ಹಾಲನ್ನು ಇಷ್ಟ ಪಡದಿದ್ದಲ್ಲಿ, ಮಜ್ಜಿಗೆ ಮೊಸರಿನ ಬಳಕೆಯಾದರೂ ಹೆಚ್ಚಿಸಿ. ಬಿಸಿಲ ಬೇಗೆಗೆ ಕುಡಿಯಲು ಮಸಾಲ ಮಜ್ಜಿಗೆ, ಊಟವಾದ ನಂತರ ತಿನ್ನಲೊಂದು ಕಪ್ ಮೊಸರು ಸಕ್ಕರೆ/ಉಪ್ಪು, ಸ್ವೀಟ್ ಇಷ್ಟ ಪಡುವ ಮಕ್ಕಳಿಗಾದರೆ, ಹಾಲಿನ ಗಿಣ್ಣ, ಖೋವಾ, ಶ್ರೀಖಂಡ್ ಈ ರೀತಿಯ ಸಿಹಿಗಳನ್ನು ಅಪರೂಪಕ್ಕೆ ಮನೆಯಲ್ಲೇ ತಯಾರಿಸಿ ನೀಡಬಹುದು.   
  • ಅಪರೂಪಕ್ಕೊಮ್ಮೊಮ್ಮೆ ನಿಮ್ಮ ಮಗು ಶೆಫ್ ಆಗಲಿ. ಅಂದರೆ ಮಗುವಿನ ವಯಸ್ಸಿಗನುಗುಣವಾಗಿ,  ಮಗುವಿಗೆ ಅಡುಗೆಮನೆಯಲ್ಲಿ ಏನಾದರು ತಯಾರಿಸಲು ಸಮ್ಮತಿ ಮತ್ತು ಸಹಕಾರ ನೀಡಿ. ಮನೆಮಂದಿಗೆಲ್ಲ ಸಮಾನವಾಗಿ ಹಂಚಲು ಕೇಳಿ. ಅದು ಬೇಕಿದ್ದರೆ ನಿಂಬೆ ಹಣ್ಣಿನ ಶರಬತ್ತಾಗಿರಬಹುದು, ಮಗು ತಯಾರಿಸಿದ ಆಕಾರವೇ ಇಲ್ಲದ ರೊಟ್ಟಿಯಾಗಿರಬಹುದು, ಏನೇ ಆಗಲಿ, ಹೇಗೆ ಆಗಲಿ ಮಗುವನ್ನು ಅವರ ಅಂದಿನಅಡುಗೆ ಕೆಲಸದ  ಕುರಿತು ಒಂದು ಮೆಚ್ಚುಗೆಯನ್ನು ನೀಡಿ, ಸ್ವಚ್ಛತೆಯ ಕುರಿತು ಮಗು ತೆಗೆದುಕೊಂಡ ಬಗ್ಗೆ ಶ್ಲಾಘಿಸಿ. ಸ್ವತಃ ನಡೆಸಿದ ಪರಿಶ್ರಮದಿಂದ ದೊರಕಿದ ಫಲಿತಾಂಶದಿಂದಾಗಿ, ಮಗುವಿಗೆ ಆಹಾರದ ಕಡೆಗೆ ಆಸಕ್ತಿ ಉಂಟಾಗುತ್ತದೆ.

ಬುಧವಾರ, ಜೂನ್ 28, 2017

'ಸಾಗರ' ವೆಂಬ ಮೋಹ

ಎಂದಿನಂತೆ ಇಂದಿನ ದಿನಚರಿ ಪ್ರಾರಂಭವಾಗಿದೆ. ಮುಂಜಾವಿನ 5 ಗಂಟೆಯ ಚುಮು ಚುಮು ಚಳಿ, ಬೆಳಕಾಗುತ್ತಿದ್ದರೂ ಕಾಣದ ಸೂರ್ಯ, ಮಳೆಗಾಲದ ಮೋಡ. ನಮ್ಮ ಊರ ಕಡೆಯಂತಲ್ಲ ಬೆಂಗಳೂರಿನ ಮಳೆ. ಇಲ್ಲಿ ಹೇಗೆಂದರೆ "ದಿಸ್ ಇಸ್ ರೈನಿ ಸೀಸನ್" ಎಂಬ ಹೇಳಿಕೆಗೆ ಆಗೊಮ್ಮೆ ಈಗೊಮ್ಮೆ ಸುರಿವ ಮಳೆ ಮತ್ತದರ ನೆನಪಿಗೆ ಎರಡು ದಿನ ನಿಲ್ಲುವ ನೀರು. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸಿಗದಿರುವ ವಸ್ತುವಿಲ್ಲ. ಈ ಊರು ಬದುಕನ್ನು ಕಟ್ಟುಕೊಟ್ಟಿದೆ. ಭವಿಷ್ಯ ರೂಪಿಸಿಕೊಡುವ ಕೆಲಸ, ಪುಟ್ಟ ಮನೆ ಮತ್ತು ಸಂಸಾರ, ಮಗಳೆಂಬ ಶಕ್ತಿ, ಓಡಾಡಲು, ತಿನ್ನಲು, ಹಾರಾಡಲು, ವೀಕೆಂಡ್ ಮಸ್ತಿ, ನೆಂಟರಿಷ್ಟರು, ಸ್ನೇಹಿತರು ಎಲ್ಲವೂ, ಎಲ್ಲರೂ ಇದ್ದಾರೆ ನಿಜ. ಇಷ್ಟಾಗ್ಯೂ ಯಾರಾದರೂ ಮಾತಿಗೆ ಸಿಕ್ಕಿ, ಯಾವೂರು ನಿಮ್ಮದು ಎಂದು ಕೇಳಿದಾಗ ಮಾತ್ರ, "ನಮ್ಮೂರು ಸಾಗರ" ಎಂದು ಲೀಲಾಜಾಲವಾಗಿ ಉತ್ತರಿಸಿಯಾಗಿರುತ್ತದೆ ಮನ.
ಅಂಥದ್ದೇನಿದೆಯಪ್ಪಾ ಸಾಗರದಲ್ಲಿ ಇಲ್ಲಿ ಬೆಂಗಳೂರಿನಲ್ಲಿಲ್ಲದಿರುವುದು? ಎಂದು ನೀವು ಪ್ರಶ್ನಿಸಬಹುದು. ಖಂಡಿತವಾಗಿಯೂ ಪ್ರತಿಯೊಂದು ಪ್ರದೇಶವೂ ವಿಶಿಷ್ಟ ಮತ್ತು ವಿಭಿನ್ನ. ಆದರೂ ತುಲನೆ ಕೇವಲ ಭೌಗೋಳಿಕವಾಗಿ ಅಥವಾ ಭೌತಿಕವಾಗಿ ಅಲ್ಲ. ಈ ಹುಟ್ಟೂರು ಎನ್ನುವ ಮಾಯೆ ಮಾನಸಿಕವಾಗಿ ಮೂಡಿ ಬರುವಂತದ್ದು. ಮಳೆ ಬರುತ್ತಿಲ್ಲವೇ ಬೆಂಗಳೂರಿನಲ್ಲಿ? ಇದೆ. ಆದರೂ, ಅಪ್ಪಟ ಮಲೆನಾಡಿನ ಹಗಲು-ರಾತ್ರಿ ಧೋ ಎಂದು ಎಡೆಬಿಡದೆ ಸುರಿವ ಮಳೆಯ ಸದ್ದಿಗೆ ಮನ ಮುದಗೊಳ್ಳುವುದು ಸಾಗರದಲ್ಲಿಯೇ. ಈಗ ನೋಡಿ, ಬೆಂಗಳೂರಿನಲ್ಲಿ ಸಾಕಷ್ಟು ಅಪರೂಪದ ಹಣ್ಣುಗಲೆಲ್ಲವೂ ಸಿಗುತ್ತದೆ.ಮಾವು-ಹಲಸು ಮೇಳವೇ ನಡೆಯುತ್ತದೆ. ಆದರೂ ಊರಲ್ಲಿ ಹಿತ್ತಲ ಕಡೆ ಎಲ್ಲರೂ ಕೂತು, ಕೈಗೊಂದಷ್ಟು ಕೊಬ್ಬರಿ ಎಣ್ಣೆ ಮೆತ್ತಿಕೊಂಡು,ಹಲಸಿನ ಸೊಳೆಯನ್ನು ಬಿಡಿಸಿ, ಮಾವಿನಕಾಯಿ ಕಡಗಾಯಿ ಜೊತೆ ಹಚ್ಚಿಕೊಂಡು ಹರಟುತ್ತ ತಿನ್ನುವ ಮಜ ಇಲ್ಲಿ ಬರುವುದಿಲ್ಲ. ಒಂದು ಪಕ್ಷದಲ್ಲಿ, ಹಲಸಿನ ಕಂಬಳ ನಡೆಸೇ ಬಿಡೋಣ ಎಂದು ಪ್ರಯತ್ನಿಸಿ ಹಲಸು ತಂದು ಕೊಚ್ಚಿದರೂ, ಕಡೆಗೆ ಮೆಲಕು ಹಾಕುವುದು ಊರ ಕಡೆಯ ಸುದ್ದಿಯೇ . ನೇರಳೆ ಹಣ್ಣನ್ನು ಕೊಂಡು ತಂದು ತಿಂದದ್ದಾಯಿತು, ಬಾಯಿ ಚಪಲಕ್ಕೆ. ಆದರೆ ಎತ್ತರದ ನೇರಳೆ ಮರದಿಂದ ಬಡಚಿ, ಕೆಳಗೆ ಬಿದ್ದ ಹಣ್ಣನ್ನು ನಾ ಮುಂದೆ ತಾ ಮುಂದೆ ಎಂದು ಓಡಿ ಹೋಗಿ ಹೆಕ್ಕಿ ತಿಂದ ಮಜ ಸಿಗಲಿಲ್ಲ. ಮರ ಹತ್ತಿ ಸಳ್ಳೆ ಹಣ್ಣನ್ನು ತಿನ್ನುವ ಸುಖ, ಸಂಪಿಗೆ ಹಣ್ಣು, ಕೌಳಿ ಹಣ್ಣು, ಪರಿಗೆ ಹಣ್ಣು ಎಲ್ಲ ಹುಡುಕಿಕೊಂಡು ಗುಡ್ಡ ಸುತ್ತುವ ಸಂಭ್ರಮ ಎಲ್ಲ ಊರಲ್ಲೇ..ಪೇರಳೆ ಹಣ್ಣಿಗೆ ಉಪ್ಪು ಹಾಕಿ ಕಚ್ಚಿ ತಿನ್ನುವ ಸಮಯದಲ್ಲಿ ಮನದಲ್ಲಿ ಮೂಡಿದ ಚಿತ್ರಣಗಳೆಂದರೆ, ಮನೆಯ ಹಿತ್ತಲ ಪೇರಳೆ ಮರ ಮತ್ತದಕ್ಕೆ ಸಿಕ್ಕಿಸಿಕೊಂಡಿರುವ ದೋಟಿಕೋಲು, ಅಜ್ಜನ ಮನೆಯ ಚಂದ್ರ ಪೇರಳೆ ಹಣ್ಣಿಗೆ ನಾವು ಮೊಮ್ಮಕ್ಕಳು ಮಾಡಿಕೊಳ್ಳುತ್ತಿದ್ದ ಪಂಚಾಯ್ತಿ!
ಬೆಂಗಳೂರಿನಲ್ಲಿ ಒಳ್ಳೊಳ್ಳೆ ಸ್ನೇಹಿತರಿದ್ದಾರೆ,ತಿರುಗಾಟ-ತಿನ್ನುವುದು ಎಲ್ಲವೂ ಇರುತ್ತದೆ. ರುಚಿ ರುಚಿ ಫೇಮಸ್ ತಿಂಡಿ ಪಾಯಿಂಟ್ ಗಳನ್ನೂ ಹುಡುಕಿ ಹೋಗಿ ತಿನ್ನುವುದು, ಚ್ಯಾಟ್ಗಳದ್ದೆಂತು ಲೆಕ್ಕವೇ ಇಲ್ಲ ವಿ.ವಿ ಪುರಂ ನ ತಿಂಡಿ ಬೀದಿ, ಬ್ರಾಹ್ಮಣ ಕೆಫೆ ಕಾಫಿ..ಕಡೆಗೆ ಪಿಜ್ಜಾ-ಬರ್ಗರ್, ಟ್ಯಾಕೋ ಬೆಲ್, ಸಿಝ್ಲೆರ್ಸ್, ಇಟಾಲಿಯನ್ ಫುಡ್ ಏನೇನಿಲ್ಲ. ಆದರೂ ಸಾಗರದ ಪೋಸ್ಟ್ ಆಫೀಸ್ ಸರ್ಕಲ್ ಗೆ ಸಂಜೆ ಕಡೆ ಹೋಗಿ, ಒಂದು ರೌಂಡ್ ಮಸಲ್ ಪುರಿ, ಗೋಭಿ ಮಂಚೂರಿ ಗಾಡಿಗಳಿಗೆ ಭೇಟಿ ನೀಡಿ ಮನಸೋ ಇಚ್ಛೆ ತಿನ್ನುವುದೇ ಒಂದು ಸಂತೃಪ್ತಿ. ಕಾತ್ಯಾಯಿನಿ ಸೋಡಾ ಶಾಪಿನವನ ಮಸಾಲೆ ಮಂಡಕ್ಕಿ ಮತ್ತು ವಿವಿಧ ಬಗೆಯ ಸೋಡಾ ಕೂಡಿದೆ ಬರುವುದಾದರೂ ಎಂತು..!? ಊರ ಕಡೆಗಿನ ಯಾವುದಾದರೂ ಮದುವೆ ಮನೆಯ ಸೊಗಸಾದ ಬಾಳೆ ಎಲೆ ಊಟ ಸಿಕ್ಕಿಬಿಟ್ಟರೆಂತೂ ಕೇಳುವುದೇ ಬೇಡ.. ಕಟ್ಟನೆ ಕೆಂಪಿ ಸಾರು, ಅನಾನಸ್ ಕಾಯಿರಸ, ಮಜ್ಗೆಹುಳಿ, ಕಂಚಿಕಾಯಿ ಉಪ್ಪಿನಕಾಯಿ, ಜೀರಿಗೆ ಮಾವಿನ ಮಿಡಿ, ಶೇಂಗಾಬೀಜ ಜಾಸ್ತಿ ಬಿದ್ದಿರುವ ಮಾವಿನಕಾಯಿ ಚಿತ್ರಾನ್ನ, ಹಲಸಿನಕಾಯಿ ಹಪ್ಪಳ, ಇಂಗಿನ ಒಗ್ಗರಣೆಯ ನೀರುಗೊಜ್ಜು, ಖಾರ ಮೆಣಸ್ಸಾರು, ಅಕ್ಕಿ ಪಾಯ್ಸ, ಕೇಸರಿ...ಆಹಾ ಬಾರ್ಬೆಕ್ ನೇಷನ್ ಯಾವ ಲೆಕ್ಕ ಇದರ ಮುಂದೆ!
ಇನ್ನು ನಮ್ಮ ಲೇಡೀಸ್ ಸ್ಪೆಷಲ್, ಶಾಪ್ಪಿಂಗ್!! ಶಾಪಿಂಗ್ ಗಳಿಗೆಂತೂ ಬೆಂಗಳೂರಿನಲ್ಲಿ ಏನೇನೂ ಕೊರತೆಯಿಲ್ಲ. ಚಿಕ್ಪೇಟೆ, ಗಾಂಧಿ ಬಜಾರ್, ಜಯನಗರದಲ್ಲಿನ ರೋಡ್ ಸೈಡ್ ನ ಅಂಗಡಿಗಳಿಂದ ಹಿಡಿದು, ದೊಡ್ಡ ದೊಡ್ಡ ಮಾಲ್ ಗಳೆಲ್ಲವಕ್ಕೂ ಸುತ್ತು ಹೊಡೆಯುವುದೇ ನಮ್ಮ ಕಾಯಕ. ಇದಿಷ್ಟಲ್ಲದೆ ಆನ್ಲೈನ್ ಶಾಪಿಂಗ್ ಬೇರೆ...ಯಾವುದೋ ಒಂದು ಮ್ಯಾಚಿಂಗ್ ಕಿವಿಯೋಲೆಗಾಗಿ ಒಂದೊಂದು ಶಾಪಿಂಗ್ ಏರಿಯಾ ಸುತ್ತಿ ಸಿಗದೇ ವಾಪಸು ಬಂದದ್ದೂ ಇದೆ. ಆದ್ರೆ ಪರಮಾಶ್ಚರ್ಯವೆಂದರೆ, ಸಾಗರದಲ್ಲಿ ಪೇಟೆ ಕೆಲಸ ಮುಗ್ಸಿ ಬರುತ್ತೇನೆ ಎಂದು ಒಂದ್ ಸರ್ತಿ ಹಾರ್ಟ್ ಆ ದಿ ಸಿಟಿ - ಮಾರಿಗುಡಿ ಸರ್ಕಲ್ ಸುತ್ತಮುತ್ತಲೂ ಓಡಾಡಿ ಬಂದರೆ ಮುಗೀತು, ಬೇಕಾದ್ದೆಲ್ಲ ನನ್ನ ಬ್ಯಾಗಿನಲ್ಲಿ.. ಬೆಂಗಳೂರಿನಲ್ಲಿ ಇಷ್ಟು ಅಂಗಡಿಗಳಿದ್ದರೂ, ನನ್ನ ಕೂಸಿಗೆ ಒಳ್ಳೆ ಕಾಟನ್ ಬಟ್ಟೆ ಪಾಪು ಆಗಿದ್ದಾಗಿನಿಂದಲೂ ಸಿಕ್ಕಿದ್ದು ಸಾಗರದಲ್ಲಿಯೇ...
ಇದರ ಜೊತೆಗೆ, ಬೆಂಗಳೂರಿನಲ್ಲಿ ವ್ಯಾಪಾರಕ್ಕೆಂದು ನಡೆಸುವ ಫೇರ್ ಗಳಿಗೇನೂ ಕೊರತೆಯಿಲ್ಲ, ಆ ಡಿಸ್ಕೌಂಟ್ ಈ ಡಿಸ್ಕೌಂಟ್ ಎಂದು ಸಾವಿರ ಅಡ್ವರ್ಟೈಸೆಮೆಂಟ್ ಗಳು, ಅನೇಕ ಪ್ರಸಿದ್ಧ ಸ್ಥಳಗಳ, ಪ್ರಸಿದ್ಧ ವಸ್ತುಗಳೂ ಕೂಡ ಬಂದು ವಕ್ಕರಿಸಿ ನಮ್ಮ ಶಾಪಿಂಗ್ ಆಕರ್ಷಣೆಗೆ ಒಂದಷ್ಟು ಗಿಮಿಕ್ ಕೊಡುತ್ತೆ. ಏನೇ ಆದ್ರೂ, ಎಷ್ಟೇ ಓಡಾಡಿದ್ರೂ, ಊರಿನ ಜಾತ್ರೆಯ ಮುಂದೆ ಇವೆಲ್ಲ ನೆಲಸಮ. ಸಾಗರ ಜಾತ್ರೆ ಒಂದು ದಿನಕ್ಕೆಲ್ಲ ನೋಡಿ ಮುಗಿಸುವಂತದ್ದೇ ಅಲ್ಲ, ಇದ್ದಷ್ಟು ದಿನವೂ ದಿನನಿತ್ಯ ಓಡಾಡಲೇ ಬೇಕೆಂಬ ನಿಯಮ. ಸಾಗರ ಜಾತ್ರೆಯ ತೊಟ್ಟಿಲು, ಟೋರ-ಟೋರ, ಸರ್ಕಸ್, ನಾಟಕ ಕಂಪೆನಿಯ ನಾಟಕ, ಅಕ್ಕಿ ಹಪ್ಪಳ, ಬೆಂಡು ಬತ್ತಾಸು ಇವೆಲ್ಲ ಓಡಾಡ್ಕೊಂಡ್ ಬರೋದ್ರಲ್ಲಿ ಸಿಗೋ ಕಿಕ್ ಬಹುಶಃ ವನ್ದರ್ಲ್ಯಾ ದಲ್ಲೂ ಸಿಗಲಿಕ್ಕಿಲ್ಲ.
ಅಬ್ಬಾ! ಹೀಗೆ ಯೋಚಿಸುತ್ತ ಹೋದರೆ ಮುಗಿಯುವುದಿಲ್ಲ ಸಾಗರದ ಕಥೆ. ಇವೆಲ್ಲ ಏನೂ ಮಹಾ? ಹಲವು ವರ್ಷಗಳು ನಾವಿರುವ ಸ್ಥಳದ ಕುರಿತಾಗಿ ಖುಷಿ, ಸಂಭ್ರಮ ಹುಟ್ಟಿಕೊಳ್ಳುವುದು ಸಹಜ, ಸ್ವಲ್ಪ ದಿನ ಕಳೆದರೆ, ವಾಸ ಸ್ಥಳವಾಗಿರುವ ಬೆಂಗಳೂರು ಕೂಡ 'ನನ್ನೂರು' ಎಂದೆನಿಸಬಹುದು ಎಂದು ಗೆಳತಿಯೊಬ್ಬಳು ಹೇಳುತ್ತಿದ್ದಳು. ಆದರೆ ನನಗೆ ಹಾಗೆ ಅನ್ನಿಸುವುದಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನ ಬಗ್ಗೆ ಹೆಮ್ಮೆ ಇದೆ. ಏಕೆಂದರೆ ಬೆಂಗಳೂರು ಪ್ರತಿ ದಿನ, ಪ್ರತಿ ಸಣ್ಣ-ದೊಡ್ಡ ಕ್ಷೇತ್ರದಲ್ಲಿಯೂ ಮುಂದುವರೆಯುತ್ತಲೇ ಇದೆ. ಏನಿದೆ ಬೆಂಗಳೂರಿನಲ್ಲಿ ಎಂದು ಯಾರಾದರೂ ಕೇಳಿದರೆ, ಅವರ ಆಸಕ್ತಿಗನುಗುಣವಾಗಿ ಉದ್ದ ಪಟ್ಟಿಯನ್ನೇ ಮಾಡಿ ಕೊಡಬಹುದೇನೋ. ಆದರೂ, ಇಲ್ಲಿ ಕುಳಿತು, ಜಗತ್ಪ್ರಸಿದ್ಧ ಜೋಗ ಜಲಪಾತ ಮತ್ತು ಲಿಂಗನಮಕ್ಕಿ ಡ್ಯಾಮ್ ನ ಸುದ್ದಿ, ಎಲ್ಲವೂ ಟಿ.ವಿ ಯಲ್ಲಿ ನೋಡುವಾಗ, ಇತರರಿಗೆ ಹೇಳುವಾಗ ಏನೋ ಒಂದು ರೀತಿಯ ಜಂಬ ನನಗರಿವಿಲ್ಲದೆ ನನ್ನನ್ನು ಆವರಿಸುತ್ತದೆ, ಸಾಹಿತ್ಯ-ಸಂಸ್ಕೃತಿ ಯನ್ನು ಸಾಕಿ ಸಲಹಿದ ಊರು, ಅಪ್ಪಟ ಮಲೆನಾಡು. ನಾನು ಹುಟ್ಟಿದ, ಬಾಲ್ಯವನ್ನು ಕಳೆದ, ವಿದ್ಯಾಭ್ಯಾಸ ಮಾಡಿದ, ಸುಂದರ ಪ್ರಕೃತಿಯ ಸಹಜತೆಯನ್ನು ಹತ್ತಿರದಿಂದ ನೋಡಿ ಅನುಭವಿಸಿದ, ಎಲ್ಲಕ್ಕಿಂತ ಹೆಚ್ಚಾಗಿ ಜೀವನದ ವಿಧಾನವನ್ನು ಕಲಿತ, ಮನಸ್ಸನ್ನು ಸಂತೋಷವಾಗಿಡುವ ಊರು...ಎಂದಿಗೂ "ಸಾಗರವೇ ನನ್ನೂರು"  

ಮಂಗಳವಾರ, ಮೇ 9, 2017

ರಜೆ ಎಂದರೆ ಸಮಯದ ಸದುಪಯೋಗ


ಮಕ್ಕಳಿಗೆ ಪರೀಕ್ಷೆಗಳು ಮುಗಿದವು, ಇನ್ನು ಸಾಕಷ್ಟು ದಿನ ಬೇಸಿಗೆ ರಜೆ, ಮಕ್ಕಳು ಸ್ವಲ್ಪ ರೆಸ್ಟ್ ಮಾಡ್ಲಿ, ಅವರಿಗೆ ಬೇಕಾದ್ದನ್ನು ಮಾಡಿಕೊಳ್ಳಲಿ, ಊಟ ತಿಂಡಿಗೊಂದು ಬಂದರೆ ಸಾಕು ಎಂಬುದು ಸಾಮಾನ್ಯವಾಗಿ ನಾವು ಪೋಷಕರ ಮನಸ್ಸಿನಲ್ಲಿ ಬರುವ ವಿಚಾರ.  ಆದರೆ ಈ ಬೇಸಿಗೆ ರಜೆ ಯ ನಿಜವಾದ ಅರ್ಥವೇನು? ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳುವ ವಿಧಾನಗಳೇನು? ನಾವು ಹೇಗೆ ನಮ್ಮ ಮಕ್ಕಳಿಗೆ ರಜೆಯ ಸದುಪಯೋಗದ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಬಹುದು ಎಂದುದರ ಕುರಿತು ಇಲ್ಲಿದೆ ಒಂದು ಸಮಗ್ರವಾದ ಟಿಪ್ಪಣಿ.


ರಜೆ ಎಂದರೆ ವಿಶ್ರಾಂತಿ ಎಂದರ್ಥವಲ್ಲ. ರಜೆ ಎಂದರೆ ನಮ್ಮ ನಿತ್ಯ ಚಟುವಟಿಕೆಗಳಿಗಿಂತ, ಸ್ಥಿತ ಜೀವನ ಶೈಲಿಗಳಿಂದ ಸ್ವಲ್ಪ ಭಿನ್ನವಾಗಿ, ಮನಸ್ಸಿಗೆ ಖುಷಿಯೆನಿಸಿದ್ದನ್ನು,  ಉಪಯುಕ್ತವಾದ್ದನ್ನು, ಅಪೂರ್ಣವಾಗಿಟ್ಟುಕೊಂಡ ಕಾರ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುವುದು ಎಂದೂ ಅರ್ಥೈಸಬಹುದು. ಒಂದೇ ಮಾತಿನಲ್ಲೇ ಹೇಳುವುದಾದರೆ ರಜೆ ಎಂದರೆ, ಸಿಕ್ಕಿರುವ ಬಿಡುವಿನ ಸಮಯದ ಸದುಪಯೋಗ. ವಾಸ್ತವವಾಗಿ, ರಜೆ ಬಂದರೆ, ಮಕ್ಕಳು ಆ  ವರೆಗೆ ಒಗ್ಗಿಕೊಂಡ ಶಾಲೆ, ಶಿಕ್ಷಣ, ಹೊಂವರ್ಕ್, ಪರೀಕ್ಷಾ ಸಮಯದಲ್ಲಿ ಮಾಡಬೇಕಾಗುವ ಹೆಚ್ಚಿನ ತಯಾರಿ ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಿಂದ ಹೊರಬಂದು, ತಮಗಿಷ್ಟವಾದ್ದನ್ನು ಮಾಡಿಕೊಂಡು, ಸ್ನೇಹಿತರೊಡನೆ ಹೆಚ್ಚಿನ ಸಮಯ ಆಟವಾಡಿಕೊಂಡು, ಕುಣಿದು ಕುಪ್ಪಳಿಸುವ ಸಮಯ. ಆದರೆ ಮಕ್ಕಳಲ್ಲಿ ಕಲಿಕೆ ಎಂಬುದು ನಿರಂತರ. ಅದು ಕೇವಲ ಪಠ್ಯಪುಸ್ತಕದಿಂದಲೇ ಬರಬೇಕಂತಿಲ್ಲ. ಮೋಜು ಮಾಡುತ್ತಲೇ, ತಮಗರಿವಿಲ್ಲದಂತೆಯೇ ನಮ್ಮ ಮಕ್ಕಳು, ರಜೆಯ ಸಮಯದಲ್ಲಿ ಜೀವನ ಶಿಕ್ಷಣವನ್ನು ಕಲಿಯುತ್ತಿರುತ್ತಾರೆ. ಹಾಗಾಗಿ ಅವರ ರಜಾ ಸಮಯವನ್ನು ಇನ್ನೂ ಹೆಚ್ಚು ಅರ್ಥಪೂರ್ಣವನ್ನಾಗಿ ಮಾಡುವುದು ನಮ್ಮ ಕರ್ತವ್ಯ. 

ಬೆಳಗಿನ ಎಳೆ ಬಿಸಿಲು  : 

 ಇತರ ದಿನಗಳಲ್ಲಿ, ಶಾಲೆಗೆ ಬೇಗನೆ ಎದ್ದು ಓಡಬೇಕಾಗುವ ಅನಿವಾರ್ಯತೆಯಲ್ಲಿ ಮಕ್ಕಳು ಬೆಳಗ್ಗಿನ ಎಳೆ ಬಿಸಿಲಿಗೆ ತಮ್ಮನ್ನು ತಾವೇ ಒಡ್ಡುವ ಪ್ರಸಂಗವೇ ಇರುವುದಿಲ್ಲ. ಹಾಗಾಗಿ ಮಕ್ಕಳಿಗೆ ಅವಶ್ಯಕವಾದ ವಿಟಮಿನ್ ಡಿ ದೊರೆಯುವ ಎಳೆ ಬಿಸಿಲಿಗೆ ಆಟವಾಡಲು ಅವಕಾಶ ಮಾಡಿಕೊಡಿ, ಚಿಕ್ಕದಾದ ವಾಕಿಂಗ್, ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳೂ ಕೂಡ ಆಗಬಹುದು. ಇದರಿಂದ ಮಕ್ಕಳ ದೇಹ ಮತ್ತು ಮನಸ್ಸು ಚುರುಕುಗುಗೊಳ್ಳುತ್ತದೆ.

ಶಿಸ್ತಿನ ಸ್ಥಿರ ದಿನಚರಿಯಲ್ಲಿ ವ್ಯತ್ಯಯ ಬೇಡ :

ವರ್ಷವಿಡೀ ಶಾಲೆಯ, ಕಲಿಕೆಯ ದಿನಚರಿಗೆ ಹೊಂದಿಕೊಂಡು/ಒಗ್ಗಿಕೊಂಡು ಬೇಗನೆ ಮಲಗಿ ಬೇಗನೆ ಏಳುವ ರೂಢಿಯಿದ್ದರೂ ಮಕ್ಕಳು ರಜೆಯಲ್ಲಿ ತಡರಾತ್ರಿ ವರೆಗೆ ಆಡುತ್ತ, ಟಿವಿ, ಕಂಪ್ಯೂಟರ್  ನೋಡುತ್ತಾ ಕಾಲಕಳೆದು, ಬೆಳಿಗ್ಗೆ ಅತೀವ ತಡವಾಗಿ ಎದ್ದು ತಿಂಡಿ ಊಟಗಳ ಸಮಯವನ್ನು ವ್ಯತ್ಯಾಸ ಮಾಡಿಕೊಳ್ಳುವುದೂ ಕೂಡ ಸರಿಯಲ್ಲ. ದೈಹಿಕ ವ್ಯಾಯಾಮ, ಆಹಾರ ಕ್ರಮಗಳು, ನಿತ್ಯ ಪ್ರಾರ್ಥನೆ ಇತ್ಯಾದಿ ನಿಯಮಿತವಾಗಿ ನಡೆಸಿಕೊಂಡು ಹೋಗುವ ಆರೋಗ್ಯಕರ ಚಟುವಟಿಕೆಗಳನ್ನು ನಿತ್ಯ ಕ್ರಮದಂತೆಯೇ ನಡೆಸಿಕೊಂಡು ಹೋಗಬಹುದೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಿ. 

ಆಟ , ದೈಹಿಕ ಶ್ರಮ ಮತ್ತು ಮನೋರಂಜನೆ :

ರಜೆಯೆಂದರೆ ಮಕ್ಕಳಿಗೆ ಪೂರ್ವನಿಯೋಜಿತವಾಗಿಯೇ ಆಟದ ಆಲೋಚನೆಯಿರುತ್ತದೆ. ಮಕ್ಕಳಿಗೆ ಹೆಚ್ಚೆಚ್ಚು ಹೊರಾಂಗಣ ಆಟಗಳು, ದೈಹಿಕವಾಗಿ-ದೇಹ ದಣಿಯುವಂತಹ ಆಟಗಳನ್ನು ಆಡಲು ಉತ್ತೇಜಿಸಿ. ಇದರಿಂದ ಮಕ್ಕಳ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ, ಇತ್ತೀಚೆಗೆ ಮಕ್ಕಳಲ್ಲಿ ಕಂಡು ವರುವ ಅಧಿಕವಾದ ಬೊಜ್ಜಿನ ಸಮಸ್ಯೆ ಪರಿಹಾರವಾಗುತ್ತದೆ. ಹೆಚ್ಚಿನ ಬಿಸಿಲಿನ ಅವಧಿಯಲ್ಲಿ ಹಾಗೂ ಮುಸ್ಸಂಜೆ ಕತ್ತಲಿನ ಸಮಯದಲ್ಲಿ, ಒಳಾಂಗಣ ಆಟಗಳನ್ನು ಆಡಲು ಪ್ರೋತ್ಸಾಹಿಸಿ. ಒಟ್ಟಿನಲ್ಲಿ ಹೆಚ್ಚೆಚ್ಚು ಆಟಗಳು ಮಕ್ಕಳ ಮನೋವಿಕಾಸಕ್ಕೆ ಅತ್ಯಂತ ಫಲಕಾರಿಯಾಗಿ ಪರಿಣಮಿಸುತ್ತದೆ. ಮನೆಯಲ್ಲಿ ಹಿರಿಯರಿಗೆ ಸಹಾಯ ಮಾಡುವುದು, ಕೈತೋಟದ ಕೆಲಸ, ಇನ್ನಿತರ ಚಿಕ್ಕಪುಟ್ಟ ದೈಹಿಕ ಶ್ರಮಕ್ಕೆ ಮಕ್ಕಳನ್ನು ಕೈಜೋಡಿಸಲು ಕೇಳಿದರೆ, ಮಕ್ಕಳಿಗೆ ಅದೊಂದು ರೀತಿಯ ಪ್ರಯೋಗಾತ್ಮಕ ಚಟುವಟಿಕೆಗಳಾಗಿ ಪರಿಣಮಿಸಿ, ಇವುಗಳಿಗೆ ಸಂಬಂಧಿಸಿದಂತೆ ಮಕ್ಕಳ ಕ್ರಿಯಾಶೀಲತೆ ಹೆಚ್ಚುತ್ತದೆ.  

ನೈಸರ್ಗಿಕವಾಗಿ ಏನೇ ಇದ್ದರೂ ಅದು ಒಳ್ಳೆಯದೇ :

ರಜೆ ಎಂದರೆ ಮಕ್ಕಳಿಗೆ ಆಟೋಟದ ಯೋಚನೆ. ಬಿಸಿಲು, ಮಣ್ಣು-ಧೂಳು, ನೀರು, ಸವೆತ, ಗಾಯ, ಜಗಳ, ಸುಸ್ತು, ಅನಾರೋಗ್ಯ ಇವೆಲ್ಲವೂ ಮಕ್ಕಳ ರಜೆಯ ಅವಿಭಾಜ್ಯ ಅಂಗಗಳು. ನೈಸರ್ಗಿಕವಾದುದು ಮತ್ತು ಸಹಜದತ್ತವಾದುದು. ಹಾಗೆಯೇ ಇರಲಿ ಬಿಟ್ಟುಬಿಡಿ. ಮಕ್ಕಳ ಸ್ವಚ್ಛತೆ ಮತ್ತು ಸುರಕ್ಷತೆ ಕಾಯ್ದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಅದಕ್ಕೆ ಅನುಗುಣವಾದ ಕ್ರಮಗಳನ್ನು ಕೈಗೊಂಡು, ಇವೆಲ್ಲವಕ್ಕೆ ಮಕ್ಕಳಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೊತ್ಸಾಹವನ್ನು ನೀಡಿ. ಉದಾಹರಣೆಗೆ ನೀರಾಟ, ಮಣ್ಣಿನಲ್ಲಿ ಮನೆ ಆಕೃತಿಗಳನ್ನು ಮಾಡುವುದು, ಹೊರಗಡೆ ಮರಳು ಇತ್ಯಾದಿ ಆಟಗಳನ್ನು ಆಡುವುದರಿಂದ, ಮಕ್ಕಳಲ್ಲಿ ಪ್ರತಿರೋಧ ಶಕ್ತಿ ಹೆಚ್ಚುತ್ತದೆ. 

ನೀವು ಪ್ರೋತ್ಸಾಹಿಸುವ ಹವ್ಯಾಸಗಳಿಗೆ, ಮಕ್ಕಳಿಗೆ ಇರಲಿ ಆಸಕ್ತಿ :

ಕೇವಲ ಪಠ್ಯ ಪುಸ್ತಕದ ವಿಷಯಗಳಷ್ಟೇ ಮಕ್ಕಳ ಜ್ಞಾನವನ್ನು ವೃದ್ಧಿಗೊಳಿಸದು. ಪಠ್ಯೇತರ ಹವ್ಯಾಸಿ ಚಟುವಟಿಕೆಗಳೂ ಕೂಡ ಮಕ್ಕಳಿಗೆ ಅತ್ಯವಶ್ಯಕ.  ಎಲ್ಲ ಮಕ್ಕಳು ಸಮಾನ ಮನಸ್ಕರರಾಗಿರುವುದಿಲ್ಲ. ನೆರೆಯವನು ತನ್ನ ಮಗುವನ್ನು ಡ್ರಾಯಿಂಗ್ ಕಲಿಯಲು ಹಾಬಿ ಕ್ಲಾಸ್ ಗೆ ಹಾಕಿದ್ದಾರೆಂದು, ನೀವೂ ಕೂಡ ನಿಮ್ಮ ಮಗುವನ್ನು ನಿಮ್ಮಿಚ್ಛೆಯ ಪ್ರಕಾರ ಕಳುಹಿಸಬೇಕಂತಿಲ್ಲ. ತುಂಟ ಮಕ್ಕಳ ಕಾಟ ತಪ್ಪಿದರೆ ಸಾಕೆಂದು, ಮಕ್ಕಳಿಗೆ ಮನಸ್ಸಿಗೆ ಇಚ್ಛೆ ಮತ್ತು ಆಸಕ್ತಿಯಿಲ್ಲದ ಹವ್ಯಾಸ ಚಟುವಟಿಕೆಗಳಿಗೆ ಒತ್ತಾಯಿಸಬೇಡಿ. ಪ್ರತಿಕ್ರಿಯೆ ಕೊಡಬಹುದಾದ ವಯಸ್ಸಿನ ಮಕ್ಕಳು ನಿಮ್ಮವರಾಗಿದ್ದರೆ, ಕಲೆ, ಸಾಹಿತ್ಯ, ವಿಜ್ಞಾನ, ಕಂಪ್ಯೂಟರ್, ಹೊಲಿಗೆ, ಹಾಡು, ನೃತ್ಯ ಹೀಗೆ ಯಾವುದೇ ಹೊಸ ವಿಷಯಗಳನ್ನು ಕಲಿಸಲು ಕಲಿಸುವ ಮುನ್ನ ನಿಮ್ಮ ಮಕ್ಕಳಿಗೆ ಅದರೆಡೆಗೆ ಆಸಕ್ತಿಯಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅವರ ಇಚ್ಛೆಯನ್ನು ಪರಿಶೀಲಿಸಿ, ನಿಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಲಗತ್ತಾಗಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಧ್ಯವಾದಷ್ಟು ಸ್ಪಂದಿಸಿ. 

ಸಾಮಾಜಿಕ ಸಂಪರ್ಕ/ಬಾಂಧವ್ಯ ಒದಗಿಸುವುದು :

ಮಕ್ಕಳ ರಜಾ ದಿನಗಳಲ್ಲಿ, ಸಾಧ್ಯವಾದಷ್ಟು ನಿಮ್ಮ ಮಕ್ಕಳನ್ನು, ಅಜ್ಜನ ಮನೆ, ಇತರ ಕುಟುಂಬದವರ ಮನೆಗೆ, ನೆಂಟರಿಷ್ಟರ ಮನೆಗಳಿಗೆ ಕರೆದೊಯ್ಯಿರಿ. ಇದರಿಂದ ಮಕ್ಕಳಿಗೆ ಒಂದು ರೀತಿಯ ಬದಲಾವಣೆ ಸಿಗುವುದರ ಜೊತೆಗೆ, ಮಕ್ಕಳು ಹತ್ತು ಹಲವು ವಿಷಯಗಳನ್ನು ನೋಡಿ, ಕೇಳಿ, ಅನುಭವಿಸಿ ತಿಳಿಯಲು ಸಹಾಯಕವಾಗುತ್ತದೆ. ಮಕ್ಕಳ ಸಂಭಾಷಣಾ ಕೌಶಲ್ಯ ಹೆಚ್ಚುತ್ತದೆ. ಬಂಧು-ಬಾಂಧವರ ಪ್ರೀತಿ ವಿಶ್ವಾಸ ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ. ಇತರ ಮಕ್ಕಳ ಜೊತೆಗಿನ ಆಟ -ಒಡನಾಟ ಮಕ್ಕಳಿಗೆ ಅವರಿಗರಿವಿಲ್ಲದಂತೆಯೇ, ಹೊಂದಾಣಿಕೆ, ಇತರರೆಡೆಗೆ ಪ್ರೀತಿ-ಬೆಸುಗೆ, ಗೌರವ ಇತ್ಯಾದಿ ಮನೋಭಾವವನ್ನು ಹೆಚ್ಚುವಂತೆ ಮಾಡುತ್ತದೆ.


ಪರಿಸರದ ಜೊತೆ ಇರಲಿ ನಂಟು :

ಮಕ್ಕಳಿಗೆ ಆದಷ್ಟು ನೈಸರ್ಗಿಕ ಪರಿಸರಕ್ಕೆ ಹೊಂದಿಕೊಂಡಂತೆ ಬೆಳೆಸಲು ಪ್ರಯತ್ನಿಸಿ. ಗಿಡ-ಮರ, ಪ್ರಾಣಿ-ಪಕ್ಷಿ, ಗುಡ್ಡ-ಬೆಟ್ಟ, ನೆಲ-ಜಲ, ಹೀಗೆ ವಿವಿಧ ಪ್ರಾಕೃತಿಕ ವಿಷಯಗಳೆಡೆಗೆ ಮಕ್ಕಳನ್ನು ಪರಿಚಯಿಸಿ. ಗ್ರಾಮೀಣ ಪ್ರದೇಶಗಳಲ್ಲಿದ್ದರೆಂತೂ ಮಕ್ಕಳಿಗೆ ಇವೆಲ್ಲದರೆಡೆಗೆ ಒಡನಾಟ ಸಿಗುವುದು ಖಂಡಿತಾ. ತೋಟ-ಗದ್ದೆ, ಕೈತೋಟ, ಹಿತ್ತಲು, ಅರಣ್ಯ ಪ್ರದೇಶ ಗಳಿಗೆ ಕರೆದೊಯ್ದು, ಮಕ್ಕಳಿಗೆ ಸಸ್ಯ ಸಂಕುಲಗಳ ಗುರುತಿಸುವಿಕೆ, ಬೆಳೆಸುವಿಕೆ, ಪೋಷಣೆ, ಅವುಗಳ ಮಹತ್ವ, ಬಳಕೆ, ದುರುಪಯೋಗಗಳು ಹೀಗೆ ಹತ್ತು ಹಲವು ವಿಚಾರಗಳನ್ನು ತಿಳಿಸಬಹುದು.

ಓದು ಬರಹ ಕೂಡ ಇರಲಿ

ಇಲ್ಲಿ ಓದು ಬರಹ ಎಂದರೆ ಪಠ್ಯ ಪುಸ್ತಕದ ಪಾಠವೇ ಆಗಬೇಕಿಲ್ಲ. ಮಕ್ಕಳಿಗೆ ರಜೆಯಲ್ಲಿ ಸಣ್ಣ ಪುಟ್ಟ ಕಥೆ ಪುಸ್ತಕಗಳನ್ನು ಓದಲು ಕೊಡುವುದು, ಹೆಚ್ಚಿನ ಆಸಕ್ತಿಯಿದ್ದರೆ ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳುವುದು, ಸಣ್ಣ ಪುಟ್ಟ ಪ್ರವಾಸ ಅಥವಾ ಮಗುವಿಗೆ ಸಂತೋಷ ನೀಡಿದ ವಿಷಯದ ಬಗ್ಗೆ ಒಂದು ನಾಲ್ಕು ಸಾಲುಗಳನ್ನು ದಿನವೂ ಬರೆಯಲು ಕೇಳಿದರೆ, ಸತಃ ಮಕ್ಕಳೇ ತಮ್ಮ ರಜೆಯನ್ನು ಇನ್ನೂ ಹೆಚ್ಚೆಚ್ಚು ಆಸಕ್ತಿದಾಯಕವಾಗಿ ಮಾಡಿಕೊಳ್ಳಲು ಮಾರ್ಗಗಳನ್ನು ಕಂಡುಹಿಡಿದು, ಸಂತೋಷವಾಗಿರಲು ಪ್ರಯತ್ನಿಸುತ್ತಾರೆ.

ಪ್ರಾಯೋಗಿಕ ಚಟುವಟಿಕೆಗಳು

ಟಿವಿ, ಮೊಬೈಲ್ ಗಳಿಂದ ಮಕ್ಕಳನ್ನು ದೂರವಿಡಬೇಕೆಂದಾದರೆ, ಮಕ್ಕಳಿಗೆ ಅವುಗಳನ್ನೆಲ್ಲ ಮೀರಿ ಬೇರೆ ಆಸಕ್ತಿದಾಯಕ ವಿಷಯಗಳಿವೆ ಎಂಬುದನ್ನು ನಾವು ತೋರಿಸಿಕೊಡಬೇಕಾಗುತ್ತದೆ. ಮನೆಯ ಹಿಂಬಾಗದಲ್ಲಿ ಸ್ವಲ್ಪ ಮಣ್ಣಿನ ಜಾಗ ದೊರೆತರೆ, ಮಕ್ಕಳಿಗೆ ಹೂವು ತರಕಾರಿಗಳ ಬೀಜಗಳನ್ನು ನೀಡಿ, ಬಿತ್ತಿ ಬೆಳೆಯುವ ಪೋಷಿಸುವ, ಅದರ ಬೆಳವಣಿಗೆಯ ಕುರಿತಾಗಿ ನಿಯಮಿತವಾಗಿ ಗಮನಿಸಿ ಆರೈಕೆ ಮಾಡುವ ವಿಷಯಗಳನ್ನು ತೋರಿಸಿಕೊಟ್ಟರೆ, ಮಕ್ಕಳಿಗೆ ಅದೊಂದು ಆಸಕ್ತಿದಾಯಕ ಚಟುವಟಿಕೆಯಾಗುತ್ತದೆ. ಅಂತೆಯೇ, ಮನೆಯಲ್ಲಿ ದೊಡ್ಡವರ ವ್ಯಾವಹಾರಿಕ ಉದ್ದಿಮೆಯಲ್ಲಿ, ಚಿಕ್ಕ ಪುಟ್ಟ ಮಕ್ಕಳೇ ಮಾಡಬಹುದಾದ ಸಣ್ಣ ಸಣ್ಣ ಜವಾಬ್ಧಾರಿಯುತ ಕೆಲಸಗಳನ್ನು ಅವರಿಗೆ ವಹಿಸಿದರೆ, ಮಕ್ಕಳ ಲೋಕಜ್ಞಾನ ಹೆಚ್ಚುವುದರ ಜೊತೆಗೆ, ಮಕ್ಕಳಿಗೆ ತಮಗೆ ಸಿಗುವ ಗೌರವ, ವಹಿಸಿರುವ ಜವಾಬ್ಧಾರಿ ಕೆಲಸಗಳನ್ನು ಮಾಡುವಲ್ಲಿ ಬದ್ಧರಾಗುತ್ತಾರೆ. ಮನೆಯಲ್ಲೇ ಮಾಡಬಹುದಾದ ವೈಜ್ಞಾನಿಕ ಪ್ರಯೋಗಗಳಿಗೆ ಮಕ್ಕಳ ಸಾಥ್ ಕೊಡಿ, ಉದಾಹರಣೆಗೆ, ನೀರಿನ ಶುದ್ಧೀಕರಣ ಘಟಕ ತಯಾರಿಕೆ, ಕಬ್ಬಿಣ-ಆಯಸ್ಕಾನ್ಥದ ಪ್ರಯೋಗಗಳು, ಸಣ್ಣ ಮೋಟಾರ್ ತಯಾರಿಕೆ ಹೀಗೆ ಮಕ್ಕಳು ತಮಗೆ ತೊಂದರೆ ಮಾಡಿಕೊಳ್ಳದೆ ಮಾಡುವಂತಹ ಪ್ರಯೋಗಗಳಿಗೆ ನಿಮ್ಮ ಬೆಂಬಲವಿರಲಿ.

ಮನೆಕೆಲಸ ನಮ್ಮ ಕೆಲಸವೇ :

ಇತರ ಶಾಲಾ ದಿನಗಳಲ್ಲಿ ಮಕ್ಕಳಿಗೆ ಇರುವ ಓದು-ಬರಹದ ಹೊರೆಯಲ್ಲಿ, ಅವರಿಗೆ ಹೊತ್ತಿಗೆ ಸರಿಯಾಗಿ ಊಟ ತಿಂಡಿ ಕೊಟ್ಟು ಶಾಲೆಗೆ ಕಳುಹಿಸುವುದೇ ಒಂದು ದೊಡ್ಡ ಪರಿ ಪಾಡಾಗಿರುತ್ತದೆ. ಹಾಗಾಗಿ ಮಕ್ಕಳಿಗೆ ರಜೆಯಲ್ಲಾದರೂ, ತಮ್ಮ ತಮ್ಮ ಖಾಸಗಿ ವಸ್ತುಗಳ ನಿರ್ವಹಣೆ, ಅಡುಗೆ ಮಾಡುವಾಗ ಅಮ್ಮನಿಗೆ ಸಹಾಯ ಮಾಡುವುದು, ಮನೆಯ ಸ್ವಚ್ಛತೆಯಲ್ಲಿ ಭಾಗಿಯಾಗುವುದು,  ಮನೆಯ ವಾಹನಗಳನ್ನು ಸ್ವಚ್ಛಗೊಳಿಸುವುದು, ಗಿಡಗಳಿಗೆ ನೀರುಣಿಸುವುದು, ಬಟ್ಟೆ ಮಡಚಿ ಎತ್ತಿಡುವುದು ಹೀಗೆ ಅನೇಕ ಸಣ್ಣ ಪುಟ್ಟ ಕೆಲಸಗಳನ್ನು ಹೆಣ್ಣುಮಕ್ಕಳು-ಗಂಡುಮಕ್ಕಳು ಎಂಬ ಬೇಧ-ಭಾವವಿಲ್ಲದೆ, ಮಕ್ಕಳು ಮಾಡಿದಾಗ ಅವರಿಗೆ ಚಿಕ್ಕ ಚಿಕ್ಕ ಬಹುಮಾನ ಅಥವಾ ಮೆಚ್ಚುಗೆ ಸೂಚಿಸುವುದರಿಂದ ಮಕ್ಕಳಿಗೆ ತಮ್ಮ ಮನೆಯವರ ಜೊತೆಯಲ್ಲಿ ಸಹಭಾಗಿತ್ವದ ಮಹತ್ವ ತಿಳಿಯಲು ಅವಕಾಶವಾಗುತ್ತದೆ.

ಕಸದಿಂದ ರಸ, ಪೋಷಕರು-ಮಕ್ಕಳು ನಿತ್ಯಕ್ಕಿಂತಲೂ ತುಸು ಹೆಚ್ಚಿನ ಸಮಯ ಕಳೆಯುವಿಕೆ, ಹೊಸ ಹೊಸ ಸ್ವಯಂ ರಕ್ಷಣಾ ವಿಧಾನಗಳ ಕಲಿಕೆ, ಓದು-ಸಾಹಿತ್ಯ, ಸಂಗೀತ, ನೃತ್ಯ, ಕರಕುಶಲ ವಸ್ತುಗಳ ತಯಾರಿಕೆ, ಈ ಹಿಂದೆ ನಮಗೆ ಸಹಾಯ ಮಾಡಿದವರನ್ನು/ ಆಪ್ತರನ್ನು ಕಂಡು ಭೇಟಿ ಮಾಡುವುದು ಹೀಗೆ ಹತ್ತು ಹಲವು ಉಪಯುಕ್ತವಾದ ಕೆಲಸಗಳನ್ನು, ನಮಗೆ ಸಾಧ್ಯವಾದಷ್ಟರ ಮಟ್ಟಿಗೆ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ನಾವು ಮಾಡಿದರೆ, ಮಕ್ಕಳ ಬೇಸಿಗೆ ರಜೆ ಯಶಸ್ವಿ ಗೊಳ್ಳುವುದರಲ್ಲಿ ಅನುಮಾನವಿಲ್ಲ.


ಶುಕ್ರವಾರ, ಮೇ 5, 2017

ಉಡುಗೊರೆ ನೀಡುವ ಮುನ್ನ

"ವಸಂತ ಮಾಸ ಬಂದಾಗ ಮಾವು ಚಿಗರಲೇ ಬೇಕು, ಕೋಗಿಲೆ ಹಾಡಲೇ ಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇ ಬೇಕು.... " ಎಂದು ನನಗರಿವಿಲ್ಲದಂತೆಯೇ ಹಾಡು ಗುನುಗುತ್ತಲಿತ್ತು ಕೈಯಲ್ಲಿದ್ಯಾವುದೋ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿ.. ಹೌದು! ಈಗೆಲ್ಲ ಮಂಗಳ ಕಾರ್ಯಗಳು ನಡೆಯುವ ಸಕಾಲ... ಆಮಂತ್ರಣ ಪಡೆದ ನಮಗೂ ಅತಿಥಿಗಳಾಗಿ ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವುದು, ತುಂಬಾ ಹತ್ತಿರದ ಕೌಟುಂಬಿಕ ಕಾರ್ಯಕ್ರಮಗಳಾಗಿದ್ದರೆ ಮನೆಯವರಾಗಿ ಅವುಗಳ ಸಡಗರ - ಸಂಭ್ರಮಗಳಲ್ಲಿ ಪಾಲ್ಗೊಳ್ಳುವುದು ಎಲ್ಲವೂ ನಡೆದೇ ಇರುತ್ತದೆ. ಇವೆಲ್ಲದರ ಜೊತೆಗೆ, ಕಾರ್ಯಕ್ರಮಗಳಲ್ಲಿ, ಉಡುಗೊರೆ ನೀಡುವುದು ಕೂಡ ನಮ್ಮಲ್ಲಿ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಯಾರ್ಯಾರಿಗೆ, ಯಾವ ಯಾವ ಕಾರ್ಯಕ್ರಮಗಳಿಗೆ, ಎಷ್ಟೆಷ್ಟು ಮೌಲ್ಯದ ಉಡುಗೊರೆ ನೀಡುವುದು,  ಒಟ್ಟಾರೆ  ಏನು ಉಡುಗೊರೆ ಕೊಡುವುದು ಎಂಬುದು ಸಾಮಾನ್ಯವಾಗಿ ನಮಲ್ಲಿ ಉಧ್ಭವವಾಗುವ, ಅನೇಕ ಸಲ ಗೊಂದಲ ಉಂಟುಮಾಡುವ ಪ್ರಶ್ನೆ. ಹೀಗೊಂದು ಚಿಕ್ಕ ಟಿಪ್ಪಣಿ, ಉಪಯುಕ್ತ ಉಡುಗೊರೆಗಳ ಕುರಿತು.

ಸಂದರ್ಭ ೧ : 
ಲತಾ ಒಂದು ಟೆಲಿಫೋನ್ ಆಫೀಸ್ ನಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ಮಹಿಳೆ. ಉನ್ನತ ಹುದ್ದೆಯಲ್ಲಿರುವ ಸಹೋದ್ಯೋಗಿಯ ಮಗನ ಮದುವೆಗೆ ಕರೆಯೋಲೆ ಸಿಕ್ಕಿದೆ. ಧಾಮ್ ಧೂಮ್ ಮದುವೆಯಂತೆ ಎಂಬ ಸುದ್ದಿ ಗಾಳಿಯಲ್ಲಿದೆ. ಚೆನ್ನಾಗಿ ಸಿಂಗಾರಗೊಂಡು ಹೋಗಬೇಕು, ಮದುವೆಗೆ ಉಡುಗೊರೆ ತೆಗೆದುಕೊಂಡು ಹೋಗಬೇಕು. ಸರ್ವೇಸಾಮಾನ್ಯ ಉಡುಗೊರೆ ಸರಿ ಹೊಂದೀತೇ? ಛೇ ಛೇ, ಏನಂದುಕೊಂಡಾರು ಸಹೋದ್ಯೋಗಿ! ನಮ್ಮ ಲೆವೆಲ್ ಅಲ್ಲ, ಅವರ ಸ್ಟೇಟಸ್ ಗೆ ತಕ್ಕಂತೆ ಉಡುಗೊರೆ ಮಾಡಲೇ ಬೇಕು, ಅನಿವಾರ್ಯ!

ಸಂದರ್ಭ ೨ :
ಗಣಪತಿ ರಾಯರು ಮುಂಚಿನಿಂದಲೂ ತಮ್ಮನ್ನು ತಾವೇ ಸಾಹಿತ್ಯ ಲೋಕದಲ್ಲಿ ತೊಡಗಿಸಿಕೊಂಡವರು. ಯಾವುದಾದರೂ ಮದುವೆ ಮುಂಜಿ ಇನ್ನಿತರ ಕಾರ್ಯಕ್ರಮಗಳಿದ್ದರೆ, ಯಾವುದಾದರೂ ತಮ್ಮ ಬಳಿ ಇರುವ ಪುಸ್ತಕವನ್ನೇ ಉಡುಗೊರೆಯಾಗಿ ನೀಡುವ ಅಭ್ಯಾಸ. ಹೊಸತಾಗಿ ಉಡುಗೊರೆ ಕೊಂಡು ತರುವ ಹವ್ಯಾಸವಿಟ್ಟುಕೊಳ್ಳುವುದಿಲ್ಲ.  

ಸಂದರ್ಭ ೩ : 
ಶೇಖರ್ ಮತ್ತು ಸರಳ, ತಮ್ಮ ದೂರ ಸಂಬಂಧಿಯ ಮಗನ ಮುಂಜಿಗೆ ಹೊರಡಲನುವಾಗಿದ್ದಾರೆ. ಉಡುಗೊರೆಯೊಂದು ಪ್ಯಾಕ್ ಮಾಡಿಕೊಳ್ಳಬೇಕು. ತಮ್ಮ ಹೊಸಮನೆಯ ಪ್ರವೇಶದ ಸಮಯದಲ್ಲಿ ಭರಪೂರ ಹರಿದು ಬಂದ ಉಡುಗೊರೆಗಳ ಭಂಡಾರವೇ ಇದೆಯಲ್ಲ, ಷೋ ಪೀಸ್ ಗಳು ಇವೆಯಲ್ಲ, ಯಾವದಾದರೊಂದು ಆಯ್ದುಕೊಂಡು ಗಿಫ್ಟ್ ಮಾಡಿದರಾಯಿತು ಎಂದು ಮಾತನಾಡಿಕೊಳ್ಳುತ್ತಾರೆ. 

ಸಂದರ್ಭ ೪ :
ವ್ಯಾಸಂಗದ ಸಮಯದಲ್ಲಿ ಅತ್ಯಂತ ನಿಕಟವಾದ ಸ್ನೇಹಿತನಾಗಿದ್ದ ನರೇಶ್ ಮನೆಯ ಪ್ರವೇಶವಿದೆ. ಕೋಟಿ ಬೆಲೆಬಾಳುವ ಮನೆಯದು. ಬಾಲು ಆರ್ಥಿಕವಾಗಿ ಹೆಚ್ಚು ಉಳ್ಳವನಲ್ಲ. ತನ್ನಸಾಮರ್ಥ್ಯಕ್ಕೆ ಸಾಧ್ಯವಾದಷ್ಟು ಕೊಡೋಣವೆಂದು ಯೋಚಿಸಿ ಹೊಸ ಬಟ್ಟೆಯ ಖರೀದಿಸಿ ಹೊರಡುತ್ತಾನೆ. ಆದರೆ ತಾನು ಕೊಡುವ ದರ್ಜೆಯ ಬಟ್ಟೆಯ ಪ್ರಯೋಜನ ಅವರು ಪಡೆಯುತ್ತಾರೆ ಎಂಬ ನೀರಿಕ್ಷೆಯಿಲ್ಲ.

  ಈ ಮೇಲಿನ ಸಂದರ್ಭಗಳನ್ನೆಲ್ಲ ನೋಡಿದಾಗ,  ನಾವು ಸಾಮಾನ್ಯವಾಗಿ ಉಡುಗೊರೆಯ ಆಯ್ಕೆಯಲ್ಲಿ ನಮ್ಮ ಮನೋಭಾವ, ನಮ್ಮ ಅನುಕೂಲ, ಪರರ ಅಂತಸ್ತಿಕೆ ಎಲ್ಲವನ್ನೂ ಗಮನದಲ್ಲಿರಿಸುತ್ತೇವೆ. ಆದರೆ ಉಡುಗೊರೆಯನ್ನು ಪಡೆಯುವ ವ್ಯಕ್ತಿಗೆ ಅದು ಎಷ್ಟರ ಮಟ್ಟಿಗೆ ಬಳಕೆಗೆ ಬರುತ್ತದೆ ಎಂಬುದನ್ನು ಗಮನಿಸುವ ಜನರು ಬೆರಳೆಣಿಕೆಯಷ್ಟೇ . ಸ್ವಲ್ಪ ಬುದ್ಧಿವಂತಿಕೆ ವಹಿಸಿದರೆ, ನಮ್ಮ ಕೊಳ್ಳುವ ಸಾಮರ್ಥ್ಯದ  ಮಿತಿಯಲ್ಲಿಯೇ, ಉಪಯುಕ್ತವಾದ ಉಡುಗೊರೆಯನ್ನು ನಾವು ನೀಡಬಹುದು.

ಮೊಟ್ಟ ಮೊದಲನೆಯದಾಗಿ, ಕಾರ್ಯಕ್ರಮ ನಡೆಸುತ್ತಿರುವವರು ಕುಟುಂಬದವರೇ ಆಗಿದ್ದರೆ ಅಥವಾ ನಿಮಗೆ ತೀರಾ ಹತ್ತಿರವಾದವರೆನಿಸಿದ್ದರೆ, ಸಂಕೋಚ-ಬಿಗುಮಾನವನ್ನು ಬದಿಗೊತ್ತಿ, ಅವರಿಗೆ ನಿಮ್ಮಿಂದ ಯಾವ ರೀತಿಯ ಸಹಾಯವಾಗಬಹುದು ಎಂಬುದನ್ನು ಸ್ಪಷ್ಟವಾಗಿ ವಿಚಾರಿಸಿಕೊಳ್ಳಿ. ಉಡುಗೊರೆ ಎಂಬುದು ಕೇವಲ ಥಳ-ಥಳಿಸುವ ಬಣ್ಣ ಬಣ್ಣದ ಹೊದಿಕೆಯಿಂದ ಕೂಡಿರುವಂತಹ ವಸ್ತುವಾಗಿರಬೇಕಾಗಿಲ್ಲ ಅಥವಾ ಅಂತಸ್ತಿಕೆಯ ಪ್ರದರ್ಶನವಾಬೇಕೆಂಬುದಿಲ್ಲ, ಬಳಕೆಗೆ ಯೋಗ್ಯವಾಗಿದ್ದರೆ ಅಷ್ಟೇ ಸಾಕು. ಉದಾಹರಣೆಗೆ, ಮದುವೆಯಾದ ಹೆಣ್ಣುಮಗಳು ತನ್ನ ತವರು ಮನೆಯ ಕಾರ್ಯಕ್ರಮದ ಪ್ರಯುಕ್ತವಾಗಿ ಉಡುಗೊರೆ ನೀಡುವ ಸಂದರ್ಭ, ಆ ಮನೆಗೆ ಅವಶ್ಯಕವಾದ ವಸ್ತುವಿನ ಬಗೆಗೆ ಅರಿವಿದ್ದು, ಅಂತಹ ವಸ್ತುಗಳನ್ನೇ ನೀಡುವುದರಿಂದ ಮನೆಯವರಿಗೂ ಹೆಚ್ಚಿನ ಲಾಭವಾಗುತ್ತದೆ. ಸಲಿಗೆಯಿಂದ ಇರುವ ವ್ಯಕ್ತಿಗಳ ಮನೆಯ ಕಾರ್ಯಕ್ರಮವಾದರೆಂತೂ, ನೀವು ಉಡುಗೊರೆ ನೀಡಲು ಸಾಧ್ಯವಾಗುವಷ್ಟು ಮೊತ್ತವನ್ನು ಕರಾರುವಕ್ಕಾಗಿ ತಿಳಿಸಿದರೆ, ಅದಕ್ಕೆ ತಕ್ಕದಾದ ತಮಗನುಕೂಲಕರವಾದ ಗ್ರಹೋಪಯೋಗಿ ವಸ್ತುಗಳು, ಅಥವಾ ಇನ್ನಿತರ ಪರಿಕರಗಳನ್ನು ತೆಗೆದುಕೊಳ್ಳಲೂ ಕೂಡ ಪ್ರಯೋಜನವೆನಿಸುತ್ತದೆ.

ಕೇವಲ ಉಡುಗೊರೆ ನೀಡಬೇಕು ಎಂಬ ಸಂಪ್ರದಾಯಕ್ಕೆ ಕಟ್ಟು ಬಿದ್ದು, ಯಾವುದೇ ಯೋಚನೆ ಇಲ್ಲದೇ, ಗಿಫ್ಟ್ ಸೆಂಟರ್ ಗಳಿಂದ ಉಡುಗೊರೆಯನ್ನು ಆಯ್ದುಕೊಳ್ಳಬೇಡಿ. ಉದಾಹರಣೆಗೆ, ಅಲಂಕಾರಿಕ ವಸ್ತುಗಳನ್ನು ಮನೆಗಳಲ್ಲಿ ಇಡುವ ಅಭ್ಯಾಸ ಇತ್ತೀಚಿಗೆ ಕಡಿಮೆಯಾಗಿದೆ. ಹೊಸ ಮನೆ ಪ್ರವೇಶ ಎಂದ ಕೂಡಲೇ, ಶೋ ಪೀಸ್ ಗಳು, ಗಡಿಯಾರ, ದೇವರ ಪಟಗಳು, ಫೋಟೋಫ್ರೇಮ್, ಅಡುಗೆ ಮನೆಯ ಪರಿಕರಗಳು, ಗಾಜಿನ ವಸ್ತುಗಳು, ಅಧ್ಯಾತ್ಮದ ಪುಸ್ತಕಗಳು ಇತ್ಯಾದಿ ನಮ್ಮ ಮನಸ್ಸಿಗೆ ಸೂಚಿಸುವುದು ಸಹಜ. ಆದರೆ ಎಲ್ಲರೂ ಸಾಮಾನ್ಯವಾಗಿ ಹೀಗೇ ಯೋಚಿಸುವುದರಿಂದ ಸಾಮಾಗ್ರಿಗಳ ಪುನರಾವರ್ತನೆಯಾಗಿ, ಪ್ರಯೋಜನಕ್ಕೆ ಬರದಂತಾಗುವ ಸಂಭವವಿರುತ್ತದೆ. ಅದರ ಬದಲು ನಿಮ್ಮಿಂದ ಸಾಧ್ಯವಾದರೆ, ಅನನ್ಯವಾಗಿರುವಂತಹ ಉಡುಗೊರೆಗಳು ಅಥವಾ ಯಾವ ಕಾಲಕ್ಕೂ ತನ್ನ ಸೊಬಗು ಮತ್ತು ಬಳಕೆಯ ಮೌಲ್ಯವನ್ನು ಕಳೆದುಕೊಳ್ಳದಂತಿರುವ ವಸ್ತುಗಳನ್ನು ನೀಡುವುದು ಸೂಕ್ತ.

ಸ್ನೇಹಿತರ ಮನೆಯ ಕಾರ್ಯಕ್ರಮಗಳಿಗೆ ಹೋಗುವುದಾದರೆ, ಪ್ರತಿಯೊಬ್ಬ ಸ್ನೇಹಿತನೂ ವೈಯುಕ್ತಿಕವಾಗಿ ತರಹೇವಾರಿ ಉಡುಗೊರೆ ನೀಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ಇದಕ್ಕೆ ಪರ್ಯಾಯವಾಗಿ, ಇತರ ಆತ್ಮೀಯ ಸ್ನೇಹಿತರೊಡಗೂಡಿ, ನಿಮ್ಮ ಕೈಲಾದಷ್ಟು ಉಡುಗೊರೆಯ ಹಣ ಒಟ್ಟು ಮಾಡಿ, ಒಂದು ಉತ್ತಮವಾದ ಹಾಗೂ ಹೆಚ್ಚಿನ ಬೆಲೆಯುಳ್ಳ ಸಮಾಗ್ರಿಯನ್ನೇ ಕೊಂಡುಕೊಳ್ಳಬಹುದು. ಉದಾಹರಣೆಗೆ, ಮದುವೆಯ ಸಂದರ್ಭವಿದ್ದರೆ , ಹೊಸ ಸಂಸಾರ ಹೂಡುವವರಿಗೆ ಬೇಕಾಗುವ ಗ್ರಹೋಪಯೋಗಿ ವಸ್ತುಗಳನ್ನು ಮುಂಚಿತವಾಗಿಯೇ ಚರ್ಚಿಸಿ, ಉಡುಗೊರೆಯ ರೂಪದಲ್ಲಿ ತೆಗೆಸಿ ಕೊಡಬಹುದು ಅಥವಾ ಸ್ನೇಹಿತರನ್ನು ಅವರಗತ್ಯತೆಯ ವಸ್ತುಗಳ ಪಟ್ಟಿಯಲ್ಲಿ ನೀವು ಯೋಚಸಿರುವಂತಹ ಮೌಲ್ಯದ ಉಡುಗೊರೆಯ ವಸ್ತುವನ್ನು ಆಯ್ದುಕೊಂಡು  ಕೊಡಿಸಬಹುದು ಉದಾಹರಣೆಗೆ ಹೊಸ ಮನೆಯ ವಸ್ತು ವಿನ್ಯಾಸಗಳಿಗೆ ಸಹಾಯವಾಗುವಂತಹ ವಸ್ತುಗಳು, ಅಗತ್ಯವಿರುವ ಪೀಠೋಪಕರಣಗಳು, ಫ್ಯಾನ್ಗಳು, ವಿದ್ಯುತ್ ಉಪಕರಣಗಳು, ಕಿಟಕಿಯ ಪರದೆಗಳು, ಹಾಸಿಗೆ-ಹೊದೆಯುವ ಚಾದರಗಳು ಹೀಗೆ ಹತ್ತು ಹಲವು ಬಗೆಯಲ್ಲಿ ನಾವು ಸ್ವಲ್ಪ ಯೋಚಿಸಿ ಕೊಡುವ ವಸ್ತುಗಳು, ಸ್ವೀಕರಿಸುವವರಿಗೆ ಅತ್ಯಂತ ಸಹಕಾರಿಯಾಗುತ್ತದೆ.

ಉಡುಗೊರೆಯ ವಿಷಯಕ್ಕೆ ಬಂದರೆ, ನಮ್ಮಿಂದ ವ್ಯವಸ್ಥೆ ಮಾಡಲಾಗುವಷ್ಟು ಮೌಲ್ಯದ ಹಣವನ್ನು ನೇರವಾಗಿ ನೀಡುವುದೂ ಕೂಡ ಒಂದು ರೀತಿಯಲ್ಲಿ ಒಳ್ಳೆಯದೇ.  ದುಡ್ಡು ಎಲ್ಲರಿಗೂ ಎಂದಿಗೂ ಸದ್ಬಳಕೆಗೆ ಬರುವಂತದ್ದು, ಕೆಲವೊಮ್ಮೆ ನಾವು ಪ್ರೀತಿಯಿಂದ ನೀಡಿದ ಭೌತಿಕ ವಸ್ತುಗಳಿಗಿಂತಲೂ ಹಣದ ರೂಪದಲ್ಲಿ ನೀಡಿದ ಉಡುಗೊರೆ, ಕೇವಲ ಸಂತೋಷವನ್ನಷ್ಟೇ ಅಲ್ಲ, ಇತರರ ಕಷ್ಟ-ಕಾರ್ಪಣ್ಯಗಳಿಗೂ, ಅವರ ಆರ್ಥಿಕ ಮುಕ್ಕಟ್ಟಿನ ಪರಿಸ್ಥಿತಿಯಲ್ಲಿ ಅತ್ಯಂತ ಸಹಾಯಕವಾಗುತ್ತದೆ. ಉದಾಹರಣೆಗೆ, ಮಗುವಿನ ನಾಮಕರಣ, ಚೌಲ (ಚೂಡಾ ಕರ್ಮಾ), ಬ್ರಹ್ಮೋಪದೇಶ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗುವುದಾದರೆ, ಹೆಚ್ಚೇನೂ ಉಪಯುಕ್ತವಾದ ಉಡುಗೊರೆ ಸೂಚಿಸದಿದ್ದಲ್ಲಿ, ನಿಮ್ಮ ಕೈಲಾದಷ್ಟು ಉಡುಗೊರೆಯನ್ನು ಹಣದ ರೂಪದಲ್ಲಿಯೇ ನೀಡಿರಿ. ಇದು ಭವಿಷ್ಯತ್ ಕಾಲದಲ್ಲಿ ಆ ಮಕ್ಕಳ  ವಿದ್ಯಾಭ್ಯಾಸಕ್ಕೆ, ಅರೋಗ್ಯಕ್ಕೆ ನಿಸ್ಸಂಶಯವಾಗಿ ಬಳಕೆಯಾಗುತ್ತದೆ.

ಪಟ್ಟಣ ಪ್ರದೇಶಗಳಲ್ಲಾದರೆ, ಅನೇಕ ಈ-ಕಾಮರ್ಸ್ ಮಾರಾಟ ಸಂಸ್ಥೆಗಳ ಗಿಫ್ಟ್ ವೌಚೆರ್ ಗಳು ಲಭ್ಯವಿರುತ್ತದೆ. ಅನೇಕ ಬ್ಯಾಂಕ್ ಗಳು, ಕ್ಯಾಶ್ ಕಾರ್ಡ್ ಎಂಬ ಮಾದರಿಯಲ್ಲಿ ನೀಡುವ ವ್ಯವಸ್ಥೆಯನ್ನು, ನಾವು ಇತರರಿಗೆ ದುಡ್ಡನ್ನು ಉಡುಗೊರೆಯಾಗಿ ನೀಡಲು ಉಪಯೋಗಿಸಿಕೊಳಬಹುದು. ಪ್ರವಾಸ ಕೈಗೊಳ್ಳುವವರಿಗೆ, ಪ್ರವಾಸದ ಪ್ಯಾಕೇಜ್ ಅನ್ನು ಉಡುಗೊರೆಯಾಗಿ ನೀಡಬಹುದು. ಪರಿಸರ ಪ್ರಿಯರಿಗೆ, ಟೆರ್ರೆಸ್ ಗಾರ್ಡೆನ್ ಮಾದರಿಯ ವ್ಯವಸ್ಥೆಯನ್ನೂ ಉಡುಗೊರೆಯಾಗಿ ನೀಡಬಹುದು. ವೈದ್ಯಕೀಯ ಸಂಸ್ಥೆಗಳಿಂದ ಅರೋಗ್ಯ ತಪಾಸಣೆ ಮತ್ತು ಇತರ ವೈದ್ಯಕೀಯ ಸೇವೆಗಳ ಕಾರ್ಡ್ ಕೂಡ ಉಡುಗೊರೆಯಾಗಿ ನೀಡಬಹುದು.

ಒಟ್ಟಿನಲ್ಲಿ ಕಾರ್ಯಕ್ರಮಗಳಲ್ಲಿ ಉಡುಗೊರೆಯ ರೂಪದಲ್ಲಿ ನಾವು ನೀಡುವ ಪ್ರೀತಿಯ ಆಶಯ, ಇತರರಿಗೆ ಉಪಯುಕ್ತವಾಗುವಂತಿರಬೇಕು ಮತ್ತು ನಮ್ಮ ಸ್ನೇಹಿತರು ಅದರ ಬಳಕೆಯಿಂದ ನಮ್ಮನ್ನು ನೆನೆಯುವಂತಾದರೆ ನಮ್ಮ ಉಡುಗೊರೆ ಸಾರ್ಥವಾದಂತೆ.










ಶನಿವಾರ, ಏಪ್ರಿಲ್ 1, 2017

ಸಿರಿಕಲ್ಚರ್ - ರೇಷ್ಮೆ ಸಾಕಾಣಿಕೆ

ಬೇಸಿಗೆ ರಜೆಗೆ ಸಾಮಾನ್ಯವಾಗಿ ಅಕ್ಕ ಮತ್ತು ನಾನು ಊರ ಕಡೆ ಸಿಕ್ಕೇ ಸಿಗುತ್ತೇವೆ.  ನಮ್ಮ ನಮ್ಮ ಮಕ್ಕಳು ಕೂಡ ಒಬ್ಬರಿಗೊಬ್ಬರು ಹೊಂದಿಕೊಂಡು ಪ್ರೀತಿಯಿಂದ ರಜೆಯನ್ನು ಕಳೆಯುತ್ತಾರೆ. ಪ್ರತಿ ಸಲವೂ, ಹೊಸತನ್ನು ಹುಡುಕುತ್ತೇವೆ ಸಂಭ್ರಮಿಸಲು, ಕಲಿಯಲು. ಈ ಸರ್ತಿಯ ರಜೆಯಲ್ಲಿ, ಸಂಬಂಧಿಕರೊಬ್ಬರು ಮಾಡಿಕೊಂಡಿರುವ ರೇಷ್ಮೆ ಸಾಕಾಣಿಕೆ ಕೃಷಿಯನ್ನು ನೋಡಲು ಹೋಗಿದ್ದೆವು. ಇದರ ಬಗ್ಗೆ ಕಂಡು, ಕೇಳಿ, ತಿಳಿದುಕೊಂಡ ವಿಷಯಗಳ ಪುಟ್ಟ ಸಾರಾಂಶ.

ನಾಗೇಶ ಭಟ್ಟರು, ಹೊಡಬಟ್ಟೆ ಇವರು ಮೂಲತಃ ಕೃಷಿಕರು, ಅಡಿಕೆ, ಬಾಳೆ, ತೆಂಗು, ರಬ್ಬರ್, ಫೈನ್ಯಾಪಲ್ ಹೀಗೆ ವಿವಿಧ ಬಗೆಯ ಬೆಳೆಯನ್ನು ಬೆಳೆಯುತ್ತಿರುವ ಇವರು ಹೊಸತಾಗಿ ರೇಷ್ಮೆ ಹುಳುಗಳ ಸಾಕಾಣಿಕೆಯನ್ನು ಪ್ರಾರಂಭಿಸಿದ್ದಾರೆ ಎಂದು ಕೇಳಿಬಂದಾಗ, ಸಹಜವಾಗಿಯೇ ಕಿವಿ ನೆಟ್ಟಗಾಯಿತು. ಮಕ್ಕಳೆಂತೂ ಪಿಕ್ನಿಕ್ ಗೆ ಯಾವಾಗಲೂ ತಯಾರು. ಸರಿ, ಒಂದು ಹೊತ್ತಿನ ಭೇಟಿ ನಿರ್ಧರಿಸಿ ಹೊರೆಟೆವು.




ಸಿರಿಕಲ್ಚರ್ (ರೇಷ್ಮೆ ಸಾಕಾಣಿಕೆ) ಜಾಗದ ಮುಂಭಾಗಕ್ಕೆಯೇ ನಮ್ಮನ್ನು ಹಚ್ಚಹಸಿರಿನಿಂದ ಸ್ವಾಗತಿಸಿದ್ದು, ಸಾಲಾಗಿ ತಲೆ ಎತ್ತಿ ನಿಂತ ಹಿಪ್ಪು ನೇರಳೆ ಗಿಡಗಳು (Mulberry plants). ಒಳ್ಳೆಯ ಜಾಗ ಮತ್ತು ನೀರಿನ ವ್ಯವಸ್ಥೆಯಿದ್ದರೆ, ರೇಷ್ಮೆ ಸಾಕಾಣಿಕೆ ಸುಲಭ ಸಾಧ್ಯ ಎಂದೇ ಮಾತು ಶುರುಮಾಡಿದ, ನಾಗೇಶಣ್ಣ, ನಮ್ಮನೆಲ್ಲಾ, ರೇಷ್ಮೆ ಸಾಕಾಣಿಕಾ ಮನೆಗೆ ಕರೆದೊಯ್ದರು. ಹೆಚ್ಚು ಬಿಸಿಲಿನ ಝಳ ತಾಗದಂತೆ ಎಲ್ಲ ಬದಿಯಿಂದಲೂ ಹಸಿರು ಬಟ್ಟೆಯಿಂದ ಆವರಿಸಿ ನಿರ್ಮಿಸಿದ ಮನೆ ಅದಾಗಿತ್ತು.



ರೇಷ್ಮೆ ಹುಳು ಸಾಕಾಣಿಕೆಗೆ ಮತ್ತು ನಿರ್ವಹಣೆಗೆ ಮೊದಲು ನೀಡಬೇಕ್ಕಾದ್ದು ಆ ಜಾಗದ ಸ್ವಚ್ಛತೆಯೆಡೆಗಿನ ಗಮನ. ಪ್ರತೀ ಕಾರ್ಮಿಕರು/ರೈತರು ಹುಳು ಸಾಕಾಣಿಕೆ ಮನೆಯ ಒಳಹೊಕ್ಕುವ ಮೊದಲು, ಪ್ರವೇಶ ದ್ವಾರದಲ್ಲಿಯೇ ಚೆನ್ನಾಗಿ ಕೈ ಕಾಲನ್ನು ತಿಳಿ ಸುಣ್ಣದ ನೀರಿನಲ್ಲಿ ಅಥವಾ ಡೆಟಾಲ್ ನೀರಿನಲ್ಲಿ ತೊಳೆದುಕೊಂಡು. ಒಣ ಕಾಟನ್ ಬಟ್ಟೆಯಲ್ಲಿ ಒರೆಸಿಕೊಂಡು ಒಳಹೋಗುವುದು ಸೂಕ್ತ, ಇದೊಂದು ಸೋಂಕು ನಿವಾರಣೆಯ ಮಹತ್ವವಾದ ಮತ್ತು ಪ್ರಮುಖವಾದ ಅಂಶ. ಇದರಿಂದ ರೇಷ್ಮೆ ಹುಳುಗಳಿಗೆ ಹೊರಗಿನಿಂದ ಯಾವುದೇ ರೀತಿಯ ರೋಗಾಣುವಿನ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ತಿಳಿಸುತ್ತ ನಮ್ಮನ್ನು ಒಳ ಕರೆದೊಯ್ದರು.





ಅಲ್ಲಿ ಒಳ ಹೊಕ್ಕ ನಂತರ ನಮಗೆ ಯಾವುದೊ ಬೇರೆಯ ಲೋಕಕ್ಕೆ ಹೋಗಿ ನಿಂತಂತಾಗಿತ್ತು, ಹಸಿರು ಮನೆಯ ಉದ್ದಗಲಕ್ಕೂ, ನೇರವಾಗಿ ಅಡಿಕೆ ದಬ್ಬೆಯಿಂದ ನಿರ್ಮಿತವಾಗ ರೇಷ್ಮೆ ಹುಳುವಿನ ಸಾಕಾಣಿಕಾ ಸ್ಟಾಂಡ್ ಗಳು. ನಮ್ಮಗಳ ಮಾತಿಲ್ಲದಿದ್ದರೆ, ವಿಚಿತ್ರವಾದ ಚರಚರ ಶಬ್ಧವೊಂದೇ ಅಲ್ಲಿ ಕೇಳುತ್ತಿತ್ತು. ಆಲೈಸಿದಾಗ ತಿಳಿಯಿತು, ಅದು ಹುಳುಗಳು, ಎಲೆಗಳನ್ನು ಒಂದೇ ಸಮನೆ ತಿನ್ನುತ್ತಿರುವ ಭರಾಟೆ! ಲಾರ್ವ ಹಂತದಲ್ಲಿದ್ದ ಆ ಹುಳುಗಳು, ಕೇವಲ ತಿನ್ನುವುದೊಂದೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದು ಮೊದಲ ನೋಟಕ್ಕೆ ನಮ್ಮನ್ನು ಅಶ್ಚ್ಯರ್ಯ ಚಕಿತರನ್ನಾಗಿ ಮಾಡಿತು.


ನಾಗೇಶಣ್ಣ ಮತ್ತು ಸಿರಿಕಲ್ಚರ್ ಉಸ್ತುವಾರಿ ನಡೆಸುತ್ತಿರುವ ಅವರ ಮಗನಾದ ಕೇಶವ ಭಟ್ ಹೇಳುವಂತೆ,  ಅವರು ರೇಷ್ಮೆ ಹುಳುಗಳ ಮೇಲೆ, ನೆಟ್ ಒಂದನ್ನು ಹಾಸಿ, ಅದರ ಮೇಲೆ ಹಿಪ್ಪು ನೇರಳೆ ಸೊಪ್ಪಿನ ಹೊದಿಕೆಯನ್ನು ಹಾಕಿ, ಸೊಪ್ಪನ್ನು ತಿನ್ನುತ್ತಾ ಹುಳುಗಳು ಮೇಲೆ ಬಂದ ನಂತರದಲ್ಲಿ, ಕೆಳಗಿನ ಹೊದಿಕೆಯಲ್ಲಿ ಒಟ್ಟುಗೂಡುವ ರೇಷ್ಮೆ ಹುಳುವಿನ ಕಸ ಸ್ವಚ್ಛಮಾಡುತ್ತಾರೆ ಮತ್ತು ಈ ನೆಟ್ ಅನ್ನು ನಿಯಮಿತವಾಗಿ ಬದಲಾಯಿಸುತ್ತಾರೆ. ಹುಳುವಿನ ಕಸವನ್ನು, ಗೊಬ್ಬರವಾಗಿ ಮಾರ್ಪಾಡು ಮಾಡಿ ಕೃಷಿಗೆ ಬಳಸಲಾಗುತ್ತದೆ. ಹುಳುವಿನ ಬೆಳವಣಿಗೆಯ ಪ್ರತಿ ಹಂತವನ್ನು 'ಜ್ವರ' ಎಂದು ಕರೆಯುತ್ತಾರೆ. ಹೀಗೆ ಸೊಪ್ಪನ್ನು ತಿನ್ನುತ್ತಾ ರೇಷ್ಮೆ ಹುಳುವಿನ ದೈಹಿಕ ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಹುಳುವಿಗೆ ಯಾವುದೇ ರೀತಿಯ ಸೋಂಕು ಉಂಟಾಗದಂತೆ ತಿಳಿ ಸುಣ್ಣದ ಪುಡಿಯನ್ನು, ನಾಲ್ಕನೇ ಜ್ವರದ ನಂತರ, ಹಂತಹಂತವಾಗಿ ಅವಶ್ಯಕವಾಗಿರುವ ರಾಸಾಯನಿಕವನ್ನು ತಿಳಿ ಹಿಟ್ಟಿನಂತೆ ಸಿಂಪಡಿಸಿ, ಹುಳುಗಳಿಗೆ ಉಂಟಾಗುವ ಸೋಂಕನ್ನು ನಿವಾರಿಸುತ್ತಾರೆ.  ಸೊಪ್ಪನ್ನು ತಿಂದು ಮೇಲೆ ಬರಲಾಗದ ಹುಳುಗಳನ್ನು ಸೋಂಕಿಗೆ ಒಳಗಾಗಿರುವ ಹುಳುಗಳೆಂದು ಗುರುತಿಸಲ್ಪಡುತ್ತದೆ. ನಾವು ಹೋದ ಸಮಯಕ್ಕೆ, ಹುಳುವಿನ ಮೇಲೆ ಆಗಷ್ಟೇ ಹಾಸಿದ್ದ ಸೊಪ್ಪುಗಳ ಹೊದಿಕೆಯಿತ್ತು. ನಾವು ಸುತ್ತುವರೆದು ಮಾತನಾಡಿ ಮತ್ತೆ ವಾಪಸು ಬರುವಷ್ಟರಲ್ಲಿ, ಆ ಒಂದು ಸೊಪ್ಪಿನ ಹೊದಿಕೆ ಸಂಪೂರ್ಣವಾಗಿ ಮುಕ್ತಾಯವಾಗಿತ್ತು, ಅಷ್ಟು ಭರದಲ್ಲಿ, ವೇಗವಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ ಆ ಹುಳುಗಳು.





ಹೀಗೆ ಸ್ವಲ್ಪ ಸಮಯ, ಆಹಾರವನ್ನು ಸೇವಿಸಿ ದೈಹಿಕವಾಗಿ ಪ್ರೌಢಿಮೆ ಪಡೆದ ಹುಳುಗಳು (pupa stage) ನಂತರದಲ್ಲಿ ಕ್ರಮೇಣ ಆಹಾರವನ್ನು ನಿಲ್ಲಿಸಿ, ಕಕೂನ್ ಅಥವಾ ತನ್ನ ಸುತ್ತ ರೇಶಿಮೆ ತತ್ತಿಯನ್ನು ಹೆಣೆಯಲು ಪ್ರಾರಂಭಿಸುತ್ತದೆ ಎಂದು ಕೇಳಿ ತಿಳಿದೆವು. ಆ ಸಮಯಕ್ಕೆ ತತ್ತಿಯನ್ನು ಹೆಣೆಯಲು ಸಹಾಯಕವಾಗುವಂತೆ, ರೆಕ್ ಗಳನ್ನೂ ಆಧಾರವಾಗಿ ಇಡುತ್ತೇವೆ, ರೇಷ್ಮೆ ತತ್ತಿ ಪೂರ್ಣ ಗೊಂಡ ನಂತರ, ಅದನ್ನು ರಾಮನಗರಕ್ಕೆ ರಫ್ತು ಮಾಡುತ್ತೇವೆ, ವರ್ಷಕ್ಕೆ ೪-೫ ಬಾರಿ ಬೆಳೆಯನ್ನು ಪಡೆಯಬಹುದು ಎಂಬುದಾಗಿ ನಮಗೆ ತಿಳಿಸಿದರು




ಬಿರು ಬೇಸಿಗೆಯಲ್ಲಿ ರೇಷ್ಮೆ ಹುಳುವಿಗೆ ಬೇಕಾಗುವ ತಂಪಿನ ವಾತಾವರಣ ಕಾಯ್ದುಕೊಳ್ಳುವುದೂ ಕೂಡ ಅಷ್ಟೇ ಅವಶ್ಯಕ. ರೇಷ್ಮೆ ಹುಳುವಿನ ಮನೆಯನ್ನ, ತಂಪಾಗಿರಿಸಲು, ಮೇಲ್ಚಾವಣಿಗೆ, ಅಡಿಕೆ ಸೋಂಗೆಯ ಹೊದಿಕೆಯ ಮೇಲೆ, ದಿನನಿತ್ಯ ನೀರು ಸಿಂಪಡಿಸಿ, ತೇವಾಂಶವನ್ನು ಕಾಯ್ದಿರಿಸಿಕೊಳ್ಳುವ ಪ್ರಯತ್ನವನ್ನು ಪ್ರತ್ಯಕ್ಷವಾಗಿ ಗಮನಿಸಿದೆವು.



ರೇಷ್ಮೆ ಹುಳುವಿನ ಸಾಕಾಣಿಕೆಯ ಜೊತೆಗೆ, ಅದರ ಆಹಾರವಾಗಿ ಬೆಳೆಸುವ , ಹಿಪ್ಪು ನೇರಳೆ ಗಿಡವನ್ನು ಬೆಳೆಸುವಲ್ಲಿಯೂ ಕೂಡ ಅಷ್ಟೇ ಶ್ರಮವಿದೆ ಎಂದು ತಿಳಿಯಲ್ಪಟ್ಟೆವು. ಹದವಾದ ಮಣ್ಣು, ನೀರು, ಗೊಬ್ಬರ, ರಾಸಾಯನಿಕಗಳು, ಸ್ಲರಿ, ಇತ್ಯಾದಿ ವಿಷಯಗಳ ಕುರಿತು ನಾಗೇಶಣ್ಣ ನಮಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.





ಸೊಪ್ಪನ್ನು ತಿನ್ನಲು ನೀಡಿ, ಹುಳುಗಳು ಸೊಪ್ಪನ್ನು ತಿನ್ನುವ ಪ್ರಕ್ರಿಯೆಯನ್ನು ನಮ್ಮ ಮೂರು ಮಕ್ಕಳು ಬಹಳ  ಕೌತುಕದಿಂದ ನೋಡಿ ಆಶ್ಚರ್ಯಪಟ್ಟರು, ಸಂತೋಷಪಟ್ಟರು. ನನ್ನ ಮಗಳಿಗೆ ಅವಳ ಪ್ಲೇ ಹೋಂ ನಲ್ಲಿ ಹೇಳಿಕೊಟ್ಟ, ಕ್ಯಾಟರ್ಪಿಲ್ಲರ್ ಸ್ಟೋರಿ - worm ಎಷ್ಟು ತಿಂದರೂ , but still hungry..ಯಾಗಿರುತ್ತಿದ್ದುದು, ನಂತರದಲ್ಲಿ cocoon ನ್ನು ಮಾಡಿ, ಅದರಲ್ಲಿ ೩ ದಿನವಿದ್ದು, ಆಮೇಲೆ caterpillar ಆಗಿ ಹೊರಗೆ ಹಾರಿ ಹೋಗುವ ಕಥೆಯ ನೈಜತೆಯ ಹಂತವನ್ನು ನೋಡುವಾಗ, ಅವಳಿಗೆ ಎಲ್ಲಿಲ್ಲದ ಸಂತೋಷವಾಯಿತು. ರೇಷ್ಮೆ ಉಡುಪುಗಳ ಉತ್ಪಾದನೆಯ ನಂತರದ ಹಂತಗಳು, ರೇಷ್ಮೆ ಹುಳುವಿನ ಅಂತ್ಯ ಇವೆಲ್ಲವೂ ಕಠಿಣ ಸತ್ಯವಾಗಿದ್ದರೂ, ಬಾಲ್ಯದ ವಯಸ್ಸಿನಲ್ಲಿರುವ ನಮ್ಮ ಮಕ್ಕಳಿಗೆ ಹೊಸತನ್ನು ತಿಳಿಯಲು, ತೋರಿಸಲು ನಮಗಿವಿಷ್ಟು ಸಹಾಯಕವಾಯಿತು.








ಭಾನುವಾರ, ಮಾರ್ಚ್ 26, 2017

ಹಿರಿಯ ಜೀವದ ಶ್ರೀಮಂತಿಕೆ

ಪೂರಾ ಎಲುಬಿನ ಹಂದರ, ಸುಕ್ಕುಗಟ್ಟಿ ಹೋದ ಮುಖ, ಸುಮಾರಾಗಿ ಬಾಗಿ ಹೋದ ಬೆನ್ನು ಆದರೂ ಛಲವಿಟ್ಟು ಇಟ್ಟಿಗೆಯನ್ನೆಲ್ಲ ಹೊರುವ ಜವಾಬ್ದಾರಿ, ವಯಸ್ಸು ಸುಮಾರು ೬೫-೭೦ ಆಸುಪಾಸಿನಲ್ಲಿದ್ದಿರಬಹುದು. ಆ ಹಿರಿಯ ದೇಹಕ್ಕೆ ಜೀವನಾಂಶವೇ ಗಾರೆ ಕೆಲಸ. ಪ್ರತಿದಿನವೂ ನಾನು ನನ್ನ ಕೆಲಸಕ್ಕೆ ಹೋಗುವಾಗ ನಮ್ಮ ಮನೆಯ ಹತ್ತಿರದಲ್ಲಿ ಈ ವ್ಯಕ್ತಿಯನ್ನು ಗಮನಿಸುತ್ತಿದ್ದೆ. ಇತರರೆಲ್ಲ ತಮ್ಮ ಕೆಲಸಗಳನ್ನು ಮುಗಿಸಿ ತಮ್ಮ ತಮ್ಮ ಗೂಡಿಗೆ ಮರಳುತ್ತಿದ್ದರೆ, ಈತನದು ಮಾತ್ರ ಅಲ್ಲಿ ಮನೆ ಕಟ್ಟುವ ಸ್ಥಳದಲ್ಲೇ ಆಶ್ರಯ. ಒಬ್ಬನೇ ಒಂದು ತಾತ್ಕಾಲಿಕ ಶೆಡ್ ಮಾಡಿಕೊಂಡು, ಅವನ ಮಲಗುವ ಜಾಗ ಅಲ್ಲೇ ಮೂರು ದೊಡ್ಡ ಕಲ್ಲುಗಳನ್ನಿಟ್ಟುಕೊಂಡು, ೨-೩ ಪಾತ್ರೆಗಳನ್ನಿಟ್ಟುಕೊಂಡು ಗಂಜಿಯೇನೋ ಕಾಯಿಸಿ ಕುಡಿಯುತ್ತಿದ್ದ. ತಾನು ತಯಾರು ಮಾಡುವ ಅಡುಗೆಯಲ್ಲೇ ಒಂದಷ್ಟು ನಾಯಿಗೆ, ಹತ್ತಿರಕ್ಕೆ ಬರುವ ಬಿಡಾಡಿ ದನಕ್ಕೆ ಕೊಡುತ್ತಿದ್ದ. ನೋಡಿದಾಗ ಮರುಕವುಂಟಾಗುತ್ತಿತ್ತು. ದಿನನಿತ್ಯದ ನೋಟ, ಗಮನ - ಮುಗುಳ್ನಗೆವರೆಗೆ ತಲುಪಿ, ಮಗಳನ್ನು ಬೆಳಿಗ್ಗೆ ಬಿಸಲಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅಲ್ಲೇ ನಿಂತು ಮಾತನಾಡಿಸುತ್ತಿದ್ದೆ. ಆತ ನನ್ನ ಮಗಳನ್ನು ಮಾತನಾಡಿಸಿ ಆಡಿಸಲು ಪ್ರಯತ್ನಿಸುತ್ತಿದ್ದ. ನನ್ನದು ಕನ್ನಡ ಭಾಷೆ. ಆತನದು ತಮಿಳು. ಹಾಗಾಗಿ ಇಬ್ಬರಿಗೂ ಪರಸ್ಪರರ ಭಾಷೆ ಹೆಚ್ಚು ತಿಳಿಯದಿದ್ದರೂ,  ಹೇಗೋ ಹರುಕು ಸಂಭಾಷಣೆ ನಡೆಯುತ್ತಿತ್ತು. ಇದ್ದೊಬ್ಬ ಗಂಡು ಮಗನನ್ನೂ ಅನಾರೋಗ್ಯದ ಕಾರಣ ಕಳೆದುಕೊಂಡಿದ್ದು,  ಹೆಣ್ಮಗಳನ್ನು ತಮ್ಮೂರಿನ ಹತ್ತಿರಕ್ಕೆಲ್ಲೋ ಮದುವೆ ಮಾಡಿಕೊಟ್ಟು, ಅಳಿಯನ ಬೇಜವಾಬ್ದಾರಿತನಕ್ಕೆ ಮಗಳು ಮನೆಗೆ ವಾಪಸಾಗಿರುವುದು, ಹೆಂಡತಿ ಹೆಚ್ಚು ಮೈಯಲ್ಲಿ ಶಕ್ತಿಯಿಲ್ಲದವಳಾದ್ದರಿಂದ ಊರಲ್ಲೇ ಬಿಟ್ಟು ಈತ ದುಡಿಮೆಗೊಸ್ಕರ ಇಲ್ಲಿದ್ದೇನೆಂದು ಅಂತೂ ತಮಿಳು ಬಲ್ಲ ನೆರೆಯ ಪರಿಚಯದವರ ಸಹಾಯದಿಂದ ತಿಳಿದುಕೊಂಡೆ. ಪಾಪವೆನ್ನಿಸುತ್ತಿತ್ತು, ಈ ಇಳಿ ವಯಸ್ಸಿನಲ್ಲಿ ಜೀವನ ಎಷ್ಟು ಕಷ್ಟಮಯ ಈ ವ್ಯಕ್ತಿಗೆ ಎಂದು. ಆಗಾಗ ಮನೆಯಿಂದ ಅಡುಗೆ ಪದಾರ್ಥವನ್ನು ಕೊಡುತ್ತಿದ್ದೆ. ಹಬ್ಬದ ದಿನಗಳಲ್ಲಿ ವಿಶೇಷ ಪದಾರ್ಥವನ್ನು ಮಾಡಿದಾಗ ಕೊಟ್ಟರೆ "ರೊಂಬ ನಂದ್ರಿ" ಎಂದು ಬಾಯಿ ತುಂಬಾ ಹರಸುತ್ತಿದ್ದ . ಭಾಷೆ ಎಲ್ಲವೂ ತಿಳಿಯದಿದ್ದರೂ, ಭಾವ ಗೊತ್ತಾಗದೆ ಇರುತ್ತಿರಲಿಲ್ಲ. ಸಂತೃಪ್ತಿ ನನ್ನದಾಗಿರುತ್ತಿತ್ತು. "ನಲ್ಲಾಮಾ..?", " ಪಾಪ ನಲ್ಲಾ ಇರಕ...?" ಎಂದೆಲ್ಲ ಕಂಡಲ್ಲಿ ಕೇಳದೆ ಇರುತ್ತಿರಲಿಲ್ಲ ಆ ವ್ಯಕ್ತಿ. ಮಗಳಿಗೆ ಥ್ಯಾಂಕ್ಸ್ ಕೊಡುವುದು ಅವನ ಅತ್ಯಂತ ಸಂತೋಷದ ಸಂಗತಿಯಾಗಿತ್ತು. ಮೊನ್ನೆಯೊಂದು ದಿವಸ ನನ್ನ ಕೆಲಸ ಮುಗಿಸಿ ಮನೆಗೆ ವಾಪಸಾದಾಗ, ಬೀಗ ಹಾಕಿದ್ದ ಮನೆಯ ಬಾಗಿಲ ಬಳಿ ಒಂದು ಪ್ಲಾಸ್ಟಿಕ್ ಕೊಟ್ಟೆಯಿದ್ದಿತ್ತು. ಯಾರದ್ದೂ ಎಂಬ ಸ್ವಲ್ಪವೂ ಸುಳಿವಿಲ್ಲದೆ ತೆಗೆದು ನೋಡಿದರೆ ಅದರಲ್ಲೊಂದು ಪುಟ್ಟ ಪ್ಲಾಸ್ಟಿಕ್ ಗೊಂಬೆ ಮತ್ತು ೪ ಕಿತ್ತಳೆ ಹಣ್ಣುಗಳಿದ್ದವು. ಬಿಲ್ಡಿಂಗ್ ಕೆಲ್ಸಕ್ಕೆ ಬರುವ ಗೌರಮ್ಮ ಬಿಟ್ಟು ಹೋಗಿದ್ದಾಳೆ ಎಂದು ಯೋಚಿಸಿ ಅಲ್ಲಿಯೇ ಇಟ್ಟು ಒಳ ನಡೆದೆ. ಸುಮಾರು ಸಂಜೆಯ ವೇಳೆಗೆ ನೆರೆಯವರಿಂದ ತಿಳಿಯಿತು, ಅದೇ ಹಿರಿಯನ ಹೆಂಡತಿ ತೀರಿ ಹೋದಳೆಂದು ಹಾಗಾಗಿ ತನ್ನೆಲ್ಲ ಬಿಡಾರ ಸುತ್ತಿಕೊಂಡು ಆತುರದಲ್ಲಿ ಆತ ಊರಿಗೆ ಹೊರಟು ಹೋದನೆಂದು. ಅಪಾರ ದುಃಖವಾಯಿತು. ಅಂತಹ ಪರಿಸ್ಥಿತಿಯಲ್ಲೂ ತಾನು ವಾಪಸು ಬರದೇ ಹೋಗುವ ಯೋಚನೆಯಿಂದ ನನ್ನ ಮಗಳ ನೆನೆದು ಹತ್ತಿರದ ಅಂಗಡಿಯಿಂದ ಮಗಳಿಗೆ ಒಂದು ಗೊಂಬೆ ಉಡುಗೊರೆಯಾಗಿ ಕೊಟ್ಟು ಹೋಗುವ ಮನಸ್ಸಿನ ಆ ವ್ಯಕ್ತಿ ಎಷ್ಟು ಶ್ರೀಮಂತನಿರಬಹುದು!! ನಾನು ಕೆಲಸದಿಂದ ವಾಪಸು ಬಂದಿರಲಿಲ್ಲವಾದ್ದರಿಂದ, ಮನೆಯ ಬಾಗಿಲಲ್ಲಿ ಉಡುಗೊರೆಯನ್ನಿತ್ತು ಹೋಗಿದ್ದ ಆ ವ್ಯಕ್ತಿ, ಸಂಬಂಧಿಕನಿಗಿಂತಲೂ ಹೆಚ್ಚಿನ ಆಪ್ತನೆನಿಸಿದ. 

ಗುರುವಾರ, ಫೆಬ್ರವರಿ 9, 2017

ಮಕ್ಕಳ ಪರೀಕ್ಷೆ - ಪಾಲಕರ ತಯಾರಿ ಹೇಗೆ?

ಮಕ್ಕಳ ಶಿಕ್ಷಣದ ವಾರ್ಷಿಕ ಅವಧಿಯ ಕೊನೆಯ ಹಂತ, ಪರೀಕ್ಷಾ ಸಮಯ.. ಅತ್ಯಂತ ಮುಖ್ಯವಾದ ಘಟ್ಟ. ಈಗಿನ ಶಿಕ್ಷಣ ವಿಧಾನದ ಪರಿಸ್ಥಿತಿ ನೋಡಿದರೆ, ಮಕ್ಕಳಿಗೆ ಎಷ್ಟರ ಮಟ್ಟಿಗೆ ಪರೀಕ್ಷಾ ಆತಂಕವಿರುತ್ತದೋ ಅದಕ್ಕಿಂತ ದುಪ್ಪಟ್ಟು ಆತಂಕ ಪೋಷಕರಲ್ಲಿ ಇರುತ್ತದೆ. ತಮ್ಮ ಮಗು ಓದಿನಲ್ಲಿ ಮುಂಚೂಣಿಯಲ್ಲಿರಬೇಕೆಂಬ ಅಭಿಲಾಷೆ ಪ್ರತಿಯೊಬ್ಬ ಪಾಲಕನ ಒತ್ತಾಸೆಯಾಗಿರುತ್ತದೆ. ಎಲ್ಲಾ ಮಕ್ಕಳ ಬುದ್ಧಿ ಮಟ್ಟವು ಒಂದೇ ರೀತಿಯಲ್ಲಿ ಇರುವುದಿಲ್ಲವಾದ್ದರಿಂದ, ಹೆಚ್ಚಿನ ಸಿದ್ಧತೆ ಖಂಡಿತ ಅವಶ್ಯಕ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆಯ ಕೊನೆಯ ವಾರದಲ್ಲಿ ಪುಸ್ತಕ ಹಿಡಿಯುವ ಮಕ್ಕಳಿಗೂ, ಗಾಬರಿಸಿ ಗದರಿಸಿ ಇನ್ನಷ್ಟು ಆತಂಕ ಪಟ್ಟು ಒತ್ತಡ ಹಾಕುವ ಪೋಷಕರಿಗೂ, ಇದೋ ಒಂದು ಚಿಕ್ಕ ಟಿಪ್ಪಣಿ, ಪರೀಕ್ಷೆ ಎಂಬುದಕ್ಕೆ ಮಕ್ಕಳ ಜೊತೆ ನಮ್ಮ ತಯಾರಿ, ಜವಾಬ್ದಾರಿಗಳೇನು ಎಂಬುದರ ಬಗ್ಗೆ.

೧. ಮಗುವಿನ ಶೈಕ್ಷಣಿಕ ಪ್ರಗತಿ ಬಗ್ಗೆ ಶಾಲೆಯಲ್ಲಿ ವಿಚಾರಣೆ. 
ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಡುವ ಭರವಸೆಯನ್ನೀಡುವ ಶಾಲೆಗೆ ಸೇರಿಸಿದರೆ ನಮ್ಮ ಜವಾಬ್ಧಾರಿ ಮುಗಿದೀತೇ? ಖಂಡಿತವಾಗಿಯೂ ಅಷ್ಟೇ ಸಾಲದು. ಮಕ್ಕಳ ಕಲಿಕೆಯ ಹಂತದಲ್ಲಿ ಅವರಷ್ಟೇ ನಾವು ಕೂಡ ಭಾಗಿಯಾಗಬೇಕು. ಪರೀಕ್ಷೆಗೆ ಇನ್ನೂ ಎರಡು ತಿಂಗಳಿರುವಂತೆಯೇ ಒಮ್ಮೆ ಶಾಲೆಯಲ್ಲಿ ಮಗುವಿನ ಪ್ರಗತಿಯ ಬಗ್ಗೆ ವಿಚಾರಿಸಿ, ನಮ್ಮ ಮಗುವಿಗೆ ಯಾವ ವಿಷಯ ಕಷ್ಟವಾಗುತ್ತಿದೆ, ಶಾಲೆಯಲ್ಲಿ ಕಲಿಕಾ ಸಾಮರ್ಥ್ಯ, ಮಿತಿ, ಕೊರತೆಗಳ ಬಗ್ಗೆ ವಿಚಾರಿಸಿಕೊಳ್ಳುವುದು ಒಳಿತು. ಇದರಿಂದ ನಮ್ಮ ಮಕ್ಕಳ ಪರೀಕ್ಷಾ ತಯಾರಿಗೆ ನಿಗದಿತ ಸಮಯ ಮತ್ತು ಯಾವ ವಿಷಯಗಳಿಗೆ ಹೆಚ್ಚಿನ ಗಮನ ಕೊಡುವ ಅವಶ್ಯಕತೆಯಿದೆ ಎಂಬುದರ ಪಾರದರ್ಶಕತೆ ನಮಗೆ ದೊರೆಯುತ್ತದೆ. ಆದರೆ ಈ ವಿಚಾರಣೆ ನಮ್ಮ ಮಗುವಿನ ಜೊತೆ ಮುಂಚಿತವಾಗಿಯೇ ಅವರಿಂದ ತೆಗೆದುಕೊಂಡ ಸಮ್ಮತಿಯಿಂದ ಅವರ ಸಮ್ಮುಖದಲ್ಲಿಯೇ ಆದರೆ ಅನುಕೂಲ. ಇದರಿಂದ,  ನೀವು ಯಾವುದೇ ರೀತಿಯ ದೂರಿನ ಭಾವನೆಯಲ್ಲಿಲ್ಲ ಎಂಬುದು ನಿಮ್ಮ ಮಗುವಿಗೆ ಮನದಟ್ಟಾಗುತ್ತದೆ.

೨. ಮಕ್ಕಳ ಪರೀಕ್ಷಾ ತಯಾರಿಗೊಂದು ವೇಳಾಪಟ್ಟಿಯ ತಯಾರಿಕೆ
ನಮ್ಮ ಮಗುವಿನ ಜೊತೆ ಕುಳಿತುಕೊಂಡು, ಅವರಿಗೆ ಸಹಾಯವಾಗುವಂತೆ ಓದುವ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ವೇಳಾಪಟ್ಟಿಯನ್ನು ಮಾಡಲು ಸಹಕರಿಸಿದರೆ, ಮಗುವಿಗೆ ಒಂದು ನಿರ್ಧಿಷ್ಟವಾದ ಗುರಿಯನ್ನು ಹಾಕಿಕೊಟ್ಟಂತಾಗುತ್ತದೆ. ಶಾಲಾ ಸಮಯವನ್ನು ಹೊರತು ಪಡಿಸಿ ನಮ್ಮ ಮಗುವಿಗೆ ನಾವು ಕೊಡಬೇಕಾದ ಮತ್ತು ಸಹಕರಿಸಬೇಕಾದ ಓದಿನ ಸಮಯ ಯಾವುದು, ಪಾಠದ ಜೊತೆಗೆ ನಿದ್ದೆ, ಆಟ, ಪಠ್ಯೇತರ ಚಟುವಟಿಕೆಗಳು ಎಲ್ಲದಕ್ಕೂ ಸರಿಹೊಂದಾಣಿಕೆ ಬರುವಂತೆಯೂ ಗಮನಿಸಿ ಚರ್ಚಿಸಿ ವೇಳಾಪಟ್ಟಿಯನ್ನು ತಯಾರಿಸಿ. ಮಗುವಿಗೆ ಯಾವ ವಿಷಯಗಳು  ಕಲಿಯಲು ಸುಲಭವಾದದ್ದು, ಯಾವುದು ಕಷ್ಟಕರವಾಗಿದ್ದು ಹೆಚ್ಚಿನ ಸಮಯ ಮೀಸಲಿಡಬೇಕು. ಯಾವ ಐಚ್ಛಿಕ ವಿಷಯವನ್ನು ಹುರುಪಿನ ಸಮಯದಲ್ಲಿ ಓದಬಹುದು ಮತ್ತು ಯಾವ ಪಾಠವು ಮಗುವಿಗೆ ಸಾಮಾನ್ಯ ಸಮಯದಲ್ಲೂ ಕೂಡ ಓದಿ ಮುಗಿಸಲು ಸಾಧ್ಯ? ವಾರದ ಕೊನೆಯಲ್ಲಿ ಮತ್ತೊಮ್ಮೆ ಮನನ ಮಾಡಿಕೊಳ್ಳಲು ಬಳಸಿಕೊಳ್ಳಬಹುದಾದ ಸಮಯ ಇತ್ಯಾದಿ ವಿಷಯಗಳನ್ನು ಮನಸ್ಸಿನಲ್ಲಿರಿಸಿಕೊಂಡು, ಯಾವುದೇ ರೀತಿಯ ಒತ್ತಡ ವಿಧಿಸದೆ, ಮಗುವಿನ ಜೊತೆ ಚರ್ಚಿಸಿ ವೇಳಾಪಟ್ಟಿ ತಯಾರಿಸಿಕೊಡಿ.

೩. ಓದುವ ವಾತಾವರಣ ನಿರ್ಮಾಣ
ಮುಂದಿನ ಎರಡು ತಿಂಗಳು ನಿಮ್ಮ ಮಗುವಿಗೆ ಹೆಚ್ಚಿನ ಏಕಾಗ್ರತೆ ಮತ್ತು ಶಾಂತತೆಯ ಅವಶ್ಯಕತೆ ಸಾಮಾನ್ಯ ದಿನಗಳಿಗಿಂತ ಸ್ವಲ್ಪ ಜಾಸ್ತಿಯೇ ಬೇಕಾಗುವುದರಿಂದ, ಮಗುವಿಗೆ ಓದಲು ಒಂದು ಪೂರಕವಾದ ವಾತಾವರಣ ಮಾಡಿಕೊಡುವುದು ಕೂಡ ಅಷ್ಟೇ ಅವಶ್ಯಕ. "ಮಗನೇ ನೀನು ಚೆನ್ನಾಗಿ ಓದಿಕೋ" ಎಂದು ಬೋಧಿಸಿ, ಹೊರಾಂಗಣದಲ್ಲಿ ನೀವು ದೊಡ್ಡ ಧ್ವನಿಯಲ್ಲಿ ಟೀವಿ ಹಾಕಿಕೊಂಡು ಧಾರಾವಾಹಿ ನೋಡಲು ಕುಳಿತರೆ ಆದೀತೆ? ನಮ್ಮ ಮಗುವಿನ ಓದು ನಮಗೂ ಕೂಡ ಒಂದು ಯಜ್ಞ. ಉತ್ತಮವಾದ ಗಾಳಿ ಬೆಳಕಿರುವ ಕೊಠಡಿ ಅಥವಾ ಸೂಕ್ತವಾದ ಸ್ಥಳವನ್ನು ಗೊತ್ತು ಮಾಡಿಕೊಡಿ, ಆ ಸ್ಥಳವೂ ಆದಷ್ಟು ಮಗುವಿಗೆ ವೈಯುಕ್ತಿಕ ಸ್ಥಳವಾಗಿರಲಿ, ಪದೇ ಪದೇ ಆ ಕೋಣೆಗೆ, ಮನೆ ಮಂದಿಯ ಓಡಾಟ ಸರಿಯಲ್ಲ. ಮಗುವು ಕೂತು ಓದುವ ಭಂಗಿಯನ್ನು ಗಮನಿಸಿ, ಅವಶ್ಯಕತೆಯಿದ್ದರೆ ನೇರವಾಗಿ ಕುಳಿತು ಓದಲು ಬೆನ್ನಿಗೆ ದಿಂಬು ಇತರ ಆಧಾರವನ್ನು ನೀಡಿ. ವಿಪರಿಮೀತ ಶಬ್ಧವನ್ನಿಟ್ಟು ನೋಡುವ ಟೀವಿ, ಏರು ಧ್ವನಿಯಲ್ಲಿ ಮನೆ ಮಂದಿಯ ಪರಸ್ಪರ ಕೂಗಾಟ, ಇತರ ಗಲಭೆ-ಗದ್ದಲವನ್ನುಂಟು ಮಾಡುವ ಅಹಿತಕರ ಸಂದರ್ಭಗಳನ್ನು ಆದಷ್ಟು ತಪ್ಪಿಸಲು ತೆಗೆದುಕೊಳ್ಳಬಹುದಾದ ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಮಗುವಿನ ರೂಮಿನಲ್ಲಿ ಬಳಸುವ ವಿದ್ಯುದ್ದೀಪ ಪ್ರಕಾಶಮಾನವಾಗಿದೆಯೇ ಇಲ್ಲವೇ ಗಮನಿಸಿ. ಹೆಚ್ಚಿನ ಮಕ್ಕಳಿಗೆ ಈಗ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ, ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇವುಗಳ ಲಭ್ಯತೆ ತುಂಬಾ ಸರ್ವೇ ಸಾಮಾನ್ಯವಾಗಿರುವುದರಿಂದ, ಪರೀಕ್ಷಾ ಸಮಯದಲ್ಲಿ ಆದಷ್ಟು ಈ ರೀತಿಯ ಮಕ್ಕಳ ಏಕಾಗ್ರತೆಯನ್ನು ಕಮ್ಮಿಯಾಗಿಸುವ ಗ್ಯಾಡ್ಜೆಟ್ ಗಳನನ್ನು, ಓದಿನ ಸಮಯದಲ್ಲಿ ದೂರವಿಡಿ.

೪. ಮಗುವಿನ ಆರೋಗ್ಯ ಸಂರಕ್ಷಣೆ
ಯಾವುದೇ ಕೆಲಸ ಮಾಡಲು ಕೂಡ ಆರೋಗ್ಯವಾಗಿರುವುದು ಅತ್ಯಂತ ಅವಶ್ಯಕ. ಪದೇ ಪದೇ ಕೆಡುವ ಆರೋಗ್ಯದಿಂದ ಅಥವಾ ಇನ್ನಿತರ ದೈಹಿಕ ತೊಂದರೆಯಿಂದಾಗಿ, ಮಕ್ಕಳಿಗೆ ಪರೀಕ್ಷಾ ತಯಾರಿ ಸಮಯದಲ್ಲಿ ಹೆಚ್ಚಿನ ಏಕಾಗ್ರತೆ ತಂದುಕೊಳ್ಳಲು ಕಷ್ಟವಾಗುತ್ತದೆ. ನಿಯಮಿತವಾಗಿ ಮಕ್ಕಳ ದೃಷ್ಟಿ ಪರೀಕ್ಷೆ, ಉತ್ತಮವಾದ ಪೌಷ್ಟಿಕ ಆಹಾರದ ಪೂರೈಕೆ, ಚಿಕ್ಕಪುಟ್ಟ ಅರೋಗ್ಯ ತೊಂದರೆ ಏನಾದರೂ ಕಂಡು ಬಂದಿದ್ದರೆ, ಅದನ್ನು ನಿರ್ಲಕ್ಷಿಸದೇ, ವೈದ್ಯರನ್ನು ಕಂಡು ನಿವಾರಿಸಿಕೊಳ್ಳಿ. ಹಣ್ಣು, ಹಾಲು, ಹೆಚ್ಚಿನ ಪ್ರೋಟೀನ್ ಯುಕ್ತ ಪದಾರ್ಥಗಳಾದ ಕಾಳು - ಧಾನ್ಯಗಳು, ಹಸಿರು ತರಕಾರಿ ಇತ್ಯಾದಿ ಪೋಷಕಾಂಶ ನೀಡುವ ಆಹಾರ ಪದಾರ್ಥಗಳು ಮಕ್ಕಳ ನಿತ್ಯದ ಊಟ-ತಿಂಡಿಗಳಲ್ಲಿರಲಿ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಲು ಪ್ರೋತ್ಸಾಹಿಸಿ. ಇದರಿಂದ ಆತಂಕ ಕಡಿಮೆಯಾಗುತ್ತದೆ. ಆದಷ್ಟು ಈ ಸಮಯದಲ್ಲಿ ಮಕ್ಕಳು ಹೊರಗಿನ ಕುರುಕಲು ತಿಂಡಿಗಳನ್ನು ತಿನ್ನದಂತೆ ನೋಡಿಕೊಳ್ಳಿ. ಮನೆಯಲ್ಲೇ ಆದಷ್ಟು ಶುಚಿಯಾಗಿ ರುಚಿಕರವಾದ ಆಕರ್ಷಣೀಯ ಪದಾರ್ಥಗಳನ್ನು ಮಾಡಿ. ರಾತ್ರೆಯ ಸಮಯವನ್ನು ವಿಸ್ತರಿಸಿ ಅಥವಾ ಬೆಳಗ್ಗಿನ ಮುಂಜಾವಿನಲಿ ಓದುವ ಸಮಯಕ್ಕೆ, ಮಕ್ಕಳಿಗೆ ಬಿಸಿ ಪಾನೀಯಗಳು, ಬಿಸ್ಕಿಟ್ ಹೀಗೆ ಹಗುರವಾದ ಹಾನಿಕಾರವಲ್ಲದ, ತ್ವರಿತ ಸಮಯಕ್ಕೆ ಹಸಿವನ್ನು ನೀಗಿಸಿಕೊಳ್ಳಲು ನೀಡಬಹುದಾದಂತ ಆಹಾರವನ್ನು ಶೇಖರಿಸಿಟ್ಟು ನೀಡಿ.

೫, ಪೋಷಕರ ಪಾಲ್ಗೊಳ್ಳುವಿಕೆ
ಕೇವಲ ವೇಳಾಪಟ್ಟಿ ಹಾಕಿಕೊಟ್ಟರೆ ಸಾಲದು. ಮಕ್ಕಳಿಗೆ ನಾವು ಅವರ ಜೊತೆಯಿದ್ದೇವೆ ಎಂಬ ಭಾವನೆ ತರುವುದು ಕೂಡ ಅಷ್ಟೇ ಮುಖ್ಯವಾದದ್ದು. ಓದಿನ ಸಮಯದ ಹೊರತಾಗಿ ಬಿಡುವಿನ ಸಮಯದಲ್ಲಿ ನಿಮ್ಮ ಮಕ್ಕಳ ಜೊತೆ ಇತರ ವಿಷಯಗಳ ಬಗ್ಗೆ ಸಂವಾದ, ಅವರ ಜೊತೆ ಒಂದು ಸಣ್ಣ ವಾಕ್ ಅಥವಾ ಮಗುವಿನ ಆಟದ ಸಮಯದಲ್ಲಿ ನಮ್ಮ ಪಾಲ್ಗೊಳ್ಳುವಿಕೆ, ಮಕ್ಕಳಿಗೆ ಅವರ ಒತ್ತಡವನ್ನು ನೀಗಿಸುವುದರ ಜೊತೆಗೆ, ನಿಮ್ಮ ಶಿಸ್ತು ಅವರಿಗೆ ಕಟ್ಟುನಿಟ್ಟಣಿಸದು. ಸಾಧ್ಯವಾದರೆ ಸಮಯವಿದ್ದಾಗ ನಿಮ್ಮ ಮಗುವಿನ ಜೊತೆ ತಡರಾತ್ರಿ ಅಥವಾ ಬೆಳಗಿನ ಜಾವ ಸ್ವಲ್ಪ ಸಮಯ ಕುಳಿತುಕೊಳ್ಳಿ. ನೀವೇ ಕೂತು ಓದಿಸಬೇಕಾದ ವಯಸ್ಸಿನ ಮಕ್ಕಳಿದ್ದರೆ, ಪಾಠ ಹೇಳಿಕೊಡವಾಗ ಮಧ್ಯೆ ಮಧ್ಯೆ ನಗು ತಮಾಷೆ ಕೂಡ ಇರಲಿ. ನಿಯಮಿತವಾಗಿ ಮಕ್ಕಳ ಓದಿನ ಬಗೆಗೆ ಕಳಕಳಿಯಿಂದ ವಿಚಾರಿಸಿ, ಹೆಚ್ಚಿನ ಪ್ರಗತಿ ಕಂಡುಬರದಿದ್ದಲ್ಲಿ, ಗದರಿಸಿ-ಅವಮಾನಿಸುವ ಬದಲು, ಮಕ್ಕಳಿಗೆ ಬೋಧಕರ ಸಹಾಯದ ಅವಶ್ಯಕತೆಯಿದೆಯೇ ಎಂದು ಪರೀಕ್ಷಿಸಿ.

೬. ಇತರ ಮುಖ್ಯ ಅಂಶಗಳು
ಯಾವುದೇ ಕಾರಣಕ್ಕೂ ನಮ್ಮ ಮಗುವನ್ನು ಇತರ ಮಕ್ಕಳೊಡನೆ ಹೋಲಿಸಿ ಹೀಯಾಳಿಸಬೇಡಿ. ಅದರಿಂದ ಮಕ್ಕಳ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಪಾಠದ ಜೊತೆಗೆ ಆಟ ಮತ್ತು ಇತರ ಮಕ್ಕಳ ಮೋಜಿನ ಹವ್ಯಾಸಗಳಿಗೂ ಸ್ವಲ್ಪ ಸಮಯ ಸೀಮಿತವಿದ್ದೇ ಇರಲಿ. ಉತ್ತಮವಾದ ಆಹಾರ ಪೂರೈಕೆ ಮತ್ತು ನಿಮ್ಮ ಕಾಳಜಿ ಮಗುವಿಗೆ ತಿಳಿಯುವಂತಿರಲಿ. ಯಾವುದೇ ಕಾರಣಕ್ಕೂ ಮಗು ಅನುತ್ತೀರ್ಣನಾದರೆ ಎಂಬ ಕಲ್ಪನೆಗೆ, ಮಕ್ಕಳನ್ನು ಬೆದರಿಸಲು ಹೋಗಬೇಡಿ. ನಿಮ್ಮ ಬಿಡುವಿನ ಸಮಯದಲ್ಲಿ ಮಗುವಿನ ಜೊತೆ ಆದಷ್ಟು ಓದಿಸಲು ಸಹಾಯ ಮಾಡಿ  ಮತ್ತು ಅವಧಿಗೂ ಮೀರಿ ಓದ ಬೇಕಾದ ಸಮಯವಿದ್ದರೆ, ಮಕ್ಕಳ ಓದಿಗೆ ಜೊತೆಯಾಗುವಂತೆ, ನೀವು ಒಂದು ಕಥೆ ಪುಸ್ತಕ ಹಿಡಿದು ಕುಳಿತು ಸಾಂಗತ್ಯವನ್ನು ನೀಡಿ. ಮಗುವಿಗೆ ಅವಶ್ಯಕ ಓದಿ ಬರೆಯಲು ಬೇಕಾಗುವ ಪರಿಕರಗಳನ್ನು ಒದಗಿಸಿಕೊಡಿ. ತನ್ನ ಜವಾಬ್ಧಾರಿಯನ್ನು ಅರಿತು ಓದುತ್ತಿರುವ ಮಗುವಿನೆಡೆಗೆ ಮೆಚ್ಚುಗೆಯ ಮಾತಿರಲಿ. ಒಮ್ಮೆ ತಲೆ ನೇವರಿಸುವುದು, ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರೂ ಆದೀತು.

ನಮ್ಮ ಮಗುವಿನ ಭವಿಷ್ಯಕ್ಕಾಗಿ ಹಂಬಲಿಸುವ ನಾವು, ಮಗುವಿನ ಶ್ರಮದ ಸಮಯದಲ್ಲಿ ಇಷ್ಟು ಮಾತ್ರವಾದರೂಸಹಾಯ ನೀಡಿದರೆ, ನಮ್ಮ ಮಕ್ಕಳಲ್ಲಿ ಓದಿನೆಡೆಗೆ ಆಸಕ್ತಿ ಖಂಡಿತವಾಗಿಯೂ ಬರುತ್ತದೆ. ಜೊತೆಗೆ ಮಕ್ಕಳ ಪರೀಕ್ಷಾ ಫಲಿತಾಂಶದಲ್ಲೂ ಉತ್ತಮವಾದ ಪ್ರಗತಿಯನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.