ಶನಿವಾರ, ಜನವರಿ 28, 2017

ಮಕ್ಕಳ ಬೆರಳು ಚೀಪುವಿಕೆ

ನಾವು ಕಂಡಂತೆ ಸಾಮಾನ್ಯವಾಗಿ ಸಣ್ಣ ಪಾಪುಗಳು ಬಾಯಿಗೆ ಬೆರಳು ಹಾಕುವದನ್ನು ನೀವು ಗಮನಿಸಿರುತ್ತೀರಿ. ಅದರಲ್ಲೂ ಸುಮಾರು ೨೦% ಚಿಕ್ಕ ಮಕ್ಕಳು ಬೆರಳನ್ನು ಚೀಪುವುದನ್ನು ನಂತರದಲ್ಲೂ ಮುಂದುವರೆಸಿರುತ್ತಾರೆ. ಕೆಲವು ಮಕ್ಕಳು ಹೆಬ್ಬೆಟ್ಟನ್ನು ಚೀಪಿದರೆ, ಕೆಲ ಮಕ್ಕಳು ತೋರುಬೆರಳು, ಕಿರಿಬೆರಳುಗಳನ್ನೂ ಚೀಪುವುದು ಮಾಡುತ್ತಾರೆ.  ಹೇಗೆ ಮಗು ಈ ಅಭ್ಯಾಸವನ್ನು ಕಲಿಯುತ್ತದೆ? ಬೆರಳು ಚೀಪುವುದು ಒಳ್ಳೆಯದೇ ಕೆಟ್ಟದ್ದೇ? ನಾವು ಮಾಡಬೇಕಾದ್ದೇನು? ತಪ್ಪಿಸಲು ಮಾಡುವ ಪ್ರಯತ್ನಗಳು ಇತರ ವಿಷಯಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ.





ಬೆರಳು ಚೀಪುವ ಕಲಿಕೆ ಹೇಗೆ ಮತ್ತು ಯಾಕೆ?

ಮಕ್ಕಳಲ್ಲಿ ಚೀಪುವ ಕ್ರಿಯೆ ಆ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಪ್ರಾರಂಭವಾಗಿರುತ್ತದೆ. ಜನನದ ನಂತರದಲ್ಲಿ ಸ್ತನ್ಯಪಾನ ಮಾಡುವ ಕೌಶಲ್ಯವನ್ನು ಹೊಂದಿರುವ ಮಗು ಅದೇ ಪ್ರಕಾರದಲ್ಲಿ, ತನ್ನ ಬಾಯನ್ನು ಮತ್ತು ನಾಲಿಗೆಯನ್ನು ಬಳಸಿ ಪ್ರತಿಯೊಂದು ವಸ್ತುವನ್ನು ಜೋರಾಗಿ ಜೀಪುವ (urge) ಸತತ ಪ್ರಯತ್ನದಲ್ಲಿರುತ್ತದೆ. ತಮ್ಮ ಕೈ, ಕೈ ಬೆರಳುಗಳು, ಆಡಿಸುತ್ತಾ ಬಾಯಿಯ ಬಳಿ ಸಿಕ್ಕ ಕಾಲು ಎಲ್ಲವನ್ನೂ ಇದೇ  ರೀತಿಯಲ್ಲಿ ಬಾಯಿಗೆ ಹಾಕಲು ಪ್ರಯತ್ನಿಸಿರುತ್ತದೆ. ಒಂದು ಸರಿ ತಮ್ಮ ಕೈಯ ಬೆರಳುಗಳ ಚೀಪುವಿಕೆಯನ್ನು ಕಂಡುಕೊಂಡ ಮೇಲೆ, ಮಗುವು ಅದನ್ನು ತನ್ನ ಆರಾಮಕ್ಕಾಗಿ ಮತ್ತೆ ಮತ್ತೆ ಬಳಸಲು ಪ್ರಯತ್ನಿಸುತ್ತದೆ. 

ಒಂದು ೬ ತಿಂಗಳವರೆಗೆ ತನಗೆ ಸಿಗುವ ಹಾಲಿನ ಮಾಧ್ಯಮ ಮತ್ತು ತಾನು ಚೀಪುವ ಕೈಯ ವ್ಯತ್ಯಾಸ ಹೆಚ್ಚಿನ ಮಟ್ಟಿಗೆ ತಿಳಿಯದಿದ್ದರೂ, ತನ್ನ ಆರಾಮಕ್ಕಾಗಿ ಬೆರಳುಗಳನ್ನು ಚೀಪುತ್ತಿರತ್ತದೆ. ನಂತರದಲ್ಲಿ ಮಗುವಿಗೆ ಬೆರಳು ಚೀಪುವುದು ಒಂದು ರೀತಿಯ ಹವ್ಯಾಸವಾಗಿಬಿಡುತ್ತದೆ. ತನ್ನ ಆರಾಮಕ್ಕಾಗಿ (comfort), ಹಸಿವಿಗಾಗಿ, ಭಯ - ಆತಂಕಗಳನ್ನು ನಿವಾರಿಸಿಕೊಳ್ಳಲು, ತನಗೆ ತಾನೇ ಶಾಂತವಾಗಿರಿಸಿಕೊಳ್ಳಲು, ನಿದ್ದೆ ಬರುವ ಸಮಯದಲ್ಲಿ, ಅಥವಾ ಏನೂ ಮಾಡಲು ತಿಳಿಯದ ಸಮಯದಲ್ಲಿ ಈ ರೀತಿಯ ಬೆರಳು ಚೀಪುವುದು ಮಕ್ಕಳಿಗೆ ಒಂದು ರೀತಿಯ ಸಂತೋಷವನ್ನು ನೀಡುತ್ತದೆ. ಬೆರಳು ಚೀಪುವುದು ಆ ಮಗುವಿಗೆ ಎಷ್ಟು ಮುದವಾಗಿಬಿಡುತ್ತದೆಯೆಂದರೆ ತಾಯಿಯೇ ಬಳಿಯಿರುವ ಅನುಭವ!! 

ಮಕ್ಕಳು ಬೆರಳು ಚೀಪುವುದು ಒಂದು ತೊಂದರೆಯೇ ? ತಪ್ಪೇ ಸರಿಯೇ?

ಮಗುವು ಬೆರಳು ಚೀಪುವುದು ಯಾವುದೇ ರೀತಿಯ ನ್ಯೂನ್ಯತೆಯಲ್ಲ. ಅದೊಂದು ಸುಂದರ ಅನುಭವವಷ್ಟೇ. ಸುಮಾರಾಗಿ ೩ ಅಥವಾ ೪ ವರ್ಷದವರೆಗೂ ಅನೇಕ ಮಕ್ಕಳು ಬೆರಳು ಚೀಪಿ ನಂತರದಲ್ಲಿ ತಾವಾಗಿಯೇ ನಿಲ್ಲಿಸುವ ಸಾಧ್ಯತೆಯಿರುತ್ತದೆ. ೫ ವರ್ಷದವರೆಗೆ ಮಗುವು ಸತತವಾಗಿ ಬೆರಳು ಚೀಪುವಿಕೆಯನ್ನು ಮಾಡುತ್ತಿದ್ದರೂ ಅದು ಒಂದು ತಾತ್ಕಾಲಿಕ ಕ್ರಿಯೆಯೇ ಆಗಿದ್ದಿರುತ್ತದೆ. ಆದರೆ ಅದಕ್ಕೂ ಮೀರಿ ಮುಂದುವರೆದರೆ, ಆ ಹವ್ಯಾಸದ ತೀವ್ರತೆ ಹೆಚ್ಚುತ್ತದೆ ದೀರ್ಘಕಾಲಿಕ ಹವ್ಯಾಸವಾಗುವ ಸಾಧ್ಯತೆಯಿರುತ್ತದೆ. 

ಶುರುವಿನ ಹಂತದಲ್ಲಿ ಮಗುವಿಗೆ ಬೆರಳು ಚೀಪುವ ಹವ್ಯಾಸ ಪ್ರಾರಂಭವಾದರೆ ತಕ್ಷಣಕ್ಕೇ ಗಾಬರಿಯಾಗಿ ಅದನ್ನು ಬಿಡಿಸುವ ಅವಸರಕ್ಕೆ ಹೋಗಬೇಕಾಗಿಲ್ಲ. ಮಗುವು ತನ್ನನ್ನು ತಾನೇ ಸಂತೈಸಿಕೊಳ್ಳಲು-ಸಮಾಧಾನಿಸಿಕೊಳ್ಳಲು ಬಳಸುವ ವಿಧಾನವದು. ಇನ್ನೂ ತನಗಿಷ್ಟವಾದ ಕಡೆಯಲ್ಲಿ ಓಡಾಡುವ ಸಾಮರ್ಥ್ಯವನ್ನು ಪಡೆಯದ ಮಗುವು, ಮಲಗಿದಲ್ಲೇ ಹೆಚ್ಚಿನ ಗಮನಿಸುವಿಕೆ ಮತ್ತು ಕಲಿಕೆಯನ್ನು ಮಾಡುತ್ತಿರುತ್ತದೆ. ಹಾಗಾಗಿ ಅಂತಹ ಸಮಯದಲ್ಲಿ ಮಗುವಿಗೆ ಹತ್ತಿರಕ್ಕೆ ಸಿಗುವ ಉಪಶಾಮಕ ತನ್ನ ಕೈ ಬೆರಳು ಚೀಪುವುದು. ೨ ವರ್ಷಗಳ ನಂತರ ಮಕ್ಕಳು ಓಡಾಡಿಕೊಂಡು, ಅನೇಕ ವಸ್ತುಗಳನ್ನು ಹಿಡಿದು ಆಟಾಡುವ ಪ್ರಕ್ರಿಯೆಗೆ ತೊಡಗುವುದರಿಂದ, ಸತತವಾಗಿ ಬೆರಳು ಚೀಪುವ ಅಭ್ಯಾಸ ಕೆಲವು ಮಕ್ಕಳಲ್ಲಿ ತಾನಾಗಿಯೇ ಕಡಿಮೆಯಾಗುತ್ತದೆ. ಇನ್ನೂ ಅನೇಕ ಸಂದರ್ಭಗಳಲ್ಲಿ ಉದಾಹರಣೆಗೆ, ಮಕ್ಕಳಿಗೆ ಬೇಸರವಾದಾಗ ಮಗು ಚೀರಿ ಅತ್ತು ಏನು ಮಾಡುವುದೆಂದು ಅರಿಯದ ದ್ವಂದ್ವದಲ್ಲಿದ್ದಾಗ ಮಗುವಿಗೆ ಬೆರಳು ಚೀಪುವುದು, ಸ್ವಂತಿಕೆಯಿಂದ ಶಾಂತತೆಯನ್ನು ತಂದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ 

ಹಾಗೆಂದು ಬೆರಳು ಚೀಪಲು ಬಿಟ್ಟುಬಿಡುವು ಸರಿಯೆಂದೇನಲ್ಲ. ದೀರ್ಘಕಾಲಿಕ ಬೆರಳು ಚೀಪುವ ಹವ್ಯಾಸದಿಂದ, ಕಡಿಮೆ ಪ್ರತಿರೋಧ ಶಕ್ತಿಯಿರುವ ಮಕ್ಕಳಿಗೆ, ರೋಗಾಣುಗಳು ಬೆರಳ ಮುಖಾಂತರ ಬಾಯನ್ನು ಪ್ರವೇಶಿಸಿ, ಮಕ್ಕಳು ಖಾಯಿಲೆ ಬೀಳುವ ಸಾಧ್ಯತೆಯಿದೆ. ಅಂತೆಯೇ ಆಗಷ್ಟೇ ಮೂಡಿರುವ-ಮೂಡುತ್ತಿರುವ ಹಾಲು ಹಲ್ಲುಗಳ ಬೆಳವಣಿಗೆ ಹಂತದಲ್ಲಿ, ಒಂದೇ ಸಮನೆ ಬೆರಳಿನಿಂದ ಉಂಟಾಗುವ ಒತ್ತುವಿಕೆ, ಹಲ್ಲುಗಳ ಜೋಡಣೆಯಲ್ಲಿ ವ್ಯತ್ಯಾಸವುಂಟುಮಾಡುವ ಮತ್ತು ಮುಂಬಲ್ಲು ಆಗುವ ಸಾಧ್ಯತೆಯಿದೆ. ಇದರ ಜೊತೆಗೆ, ಕೆಲವು ಮಕ್ಕಳಿಗೆ ಬಾಯಿಗೆ ಬೆರಳು ಹಾಕಿ ಕೂರುವ ಆರಾಮವು ಅವರ ಇತರ ಕ್ರಿಯಾತ್ಮಕ ಆಟಗಳಿಗಿಂತ ಹೆಚ್ಚಿನ ಮೋಜು ಎಂದೆನಿಸಿ, ಸುಮ್ಮನೆ ಕುಳಿತಲ್ಲೇ ಕುಳಿತು, ತಮ್ಮ ಸಕ್ರೀಯ ಆಟಗಳಲ್ಲಿ ಪಾಲ್ಗೊಳ್ಳುವಿಕೆಯನ್ನು ಕಡಿತಗೊಳಿಸಿಕೊಳ್ಳುತ್ತಾರೆ. ಮಗುವಿನ ಬೆರಳು ಚೀಪುವಿಕೆ ಮುಂದುವರೆದಂತೆ, ಮಗುವಿಗೆ ಮತ್ತವರ ಪೋಷಕರಿಗೆ ಇತರರು ಈ ರೂಢಿಯ ಬಗ್ಗೆ ತೋರ್ಪಡಿಸುವ ಇರಿಸುಮುರಿಸು, ಅವರಲ್ಲಿ ಒಂದು ರೀತಿಯ ಅವಮಾನ ಮತ್ತು ಸಂಕುಚಿತ ಭಾವನೆಯನ್ನು ತಂದೊಡ್ಡುತ್ತದೆ. 

ದೀರ್ಘಕಾಲಿಕ ಬೆರಳು ಚೀಪುವಿಕೆಯ ತಡೆ ಹೇಗೆ ??

ಪ್ರತಿಯೊಂದು ಮಗುವು ಭಿನ್ನ ಮತ್ತು ಅನನ್ಯ; ಬೆರಳು ಚೀಪುವಿಕೆ ಕೆಲವು ಮಕ್ಕಳಲ್ಲಿ ಸಹಜವಾಗಿಯೇ, ಕೆಲ ಸಮಯದ ನಂತರ ನಿಂತುಹೋದರೆ, ಕೆಲ ಮಕ್ಕಳಲ್ಲಿ  ಈ ರೂಢಿಯನ್ನು ಬಿಡಿಸಲಿ ಹರಸಾಹಸ ಮಾಡಬೇಕಾಗುತ್ತದೆ. ಈ ಕೆಲವು ವಿಧಾನಗಳನ್ನು ಅನುಸರಿಸಿದರೆ ನಮ್ಮ ಮಗುವಿನ ಬೆರಳು ಚೀಪುವಿಕೆಯ ರೂಡಿಯನ್ನು ತಪ್ಪಿಸಬಹುದು.   

* ನಿಮ್ಮ ಮಗುವಿಗೆ ಬೆರಳು ಚೀಪುವುದು ಕೆಟ್ಟದ್ದು ಎಂಬ ಪದದ ಬಳಕೆ ಬೇಡ, ಆದರೆ ಬೆರಳು ಚೀಪುವುದರಿಂದ ಏನೇನು ತೊಂದರೆಯಾಗುತ್ತದೆ ಎಂದು ತಿಳಿಸಿ ಹೇಳಿ. 
* ನಿಮ್ಮ ಮಗುವು ಪುನ್ಹ ಮತ್ತು ಸತತವಾಗಿ ಬೆರಳು ಚೀಪುವುದನ್ನು ಕಂಡು ಬಂದರೆ, ಹೀಯಾಳಿಸದೆ ಮಗುವನ್ನು ಮಾತನಾಡಿಸಲು, ಮಗುವಿನ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿ. 
* ನಿದ್ದೆಗೆ ಜಾರುವ ಸಮಯದ ಹೊರತಾಗಿ, ಹಗಲಿನಲ್ಲಿ ಬೆರೆಳು ಚೀಪುತ್ತಿದ್ದರೆ, ಮಗುವಿನ ಕೈಗೆ ಬೇರೇನಾದರೂ ಅದಕ್ಕೆ ಆಕರ್ಷಣೀಯವೆನಿಸುವ ವಸ್ತುಗಳನ್ನು ಹಿಡಿಸಿ ಆಡಿಸುವ ಪ್ರಯತ್ನ ಮಾಡಬಹುದು. 
* ಅನೇಕ ಸಾರಿ ಮಗುವು ಬೇಸರದಲ್ಲಿದ್ದಾಗ, ಹೆದರಿಕೆಯಿಂದ ಕೂಡಿದ್ದಾಗ, ಬಳಲಿದ್ದಾಗ, ಏಕಾಂಗಿತನದ ತೊಂದರೆಯಲ್ಲಿದ್ದಾಗ ಬೆರಳನ್ನು ಚೀಪಬಹುದು. ಅಂತಹ ಸಂದರ್ಭಗಳನ್ನು ಗಮನಿಸಿ,  ಮಕ್ಕಳೊಂದಿಗೆ ಬೆರೆತು, ಮಾತನಾಡಿಸಿ ಮಕ್ಕಳಿಗೆ ಅವಶ್ಯಕವಾದ ಮಾನಸಿಕ ಬೆಂಬಲವನ್ನು ನೀಡಿ.
* ಗದರುವುದು, ಹೊಡೆಯುವುದು, ಬಲವಂತವಾಗಿ ಚೀಪುತ್ತಿರುವ ಬೆರಳನ್ನು ಬಿಡಿಸುವ ಪಯತ್ನಕ್ಕೆ ಕೈ ಹಾಕುವುದು ಸಲ್ಲದು. ಮಗುವಿಗೆ ಇದರಿಂದ ಹಠಮಾರಿತನ ಮತ್ತು ಬಲವಂತ ಮಾಡುವ ಗುಣ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು. 
* ಚೀಪುವುದು ಬಿಡಿಸಲೆಂದು ಕೈಗೆ ಪ್ಲಾಸ್ಟಿಕ್ ಕಟ್ಟುವುದು, ರಬ್ಬರ್ ಬ್ಯಾಡ್ ಸುತ್ತಿ ಬಿಗಿಮಾಡುವುದು ಇತ್ಯಾದಿ ಮಾರ್ಗದಿಂದ ಮಗುವಿಗೆ ಅಹಿತರಕ ಶಿಕ್ಷಾ ಭಾವನೆ ಕೊಡುವುದಲ್ಲದೆ, ತನ್ನ ಆರಾಮವನ್ನು ಕಸಿಯುವ ವ್ಯಕ್ತಿಯಾಗಿ ನೀವು ಕಂಡುಬಂದು ಮಗುವಿಗೆ ನಿಮ್ಮೆಡೆಗೆ ವಿಶ್ವಾಸ ಕಡಿಮೆಯಾಗುವ ಸಾಧ್ಯತೆಯಿರುತ್ತದೆ. 
* ಬದಲಿ ವ್ಯವಸ್ಥೆಯಾಗಿ, ಮಗುವಿಗೆ ತಿಳಿಹೇಳುವುದು, ಮತ್ತು ಮಗುವು ಅದನ್ನು ಅನುಸರಿಸಿದ ಸಮಯದಲ್ಲಿ, ಒಂದು ಮೆಚ್ಚುಗೆಯನ್ನು ನೀಡಿ ಪ್ರೋತ್ಸಾಹಿಸಿವುದು ಒಳಿತು. ಮಗುವು ಬೆರಳು ಹಾಕುತ್ತದೆ ಎಂದು ಬೇಸರ ಹೇಳಿಕೊಳ್ಳುವುದಕ್ಕಿಂತ, ಕಡಿಮೆ ಮಾಡಿದ್ದಾಳೆ/ಮಾಡಿದ್ದಾನೆ ಎಂದು ನೀವು ಇತರರೊಡನೆ ಸಂತೋಷ ಹಂಚಿಕೊಳ್ಳುವುದು ಮಗುವಿಗೆ ಹೆಚ್ಚಿನ ಧನಾತ್ಮಕ ಪರಿಣಾಮ ಬೀರುತ್ತದೆ. 

   

ಗುರುವಾರ, ಜನವರಿ 26, 2017

ಇವತ್ ಯಾವ ಹಣ್ಣು ತಿಂದ್ರಿ??


ಹಣ್ಣು ಅಂದ್ರೆ ಯಾರಿಗೆ ಪ್ರಿಯವಲ್ಲ.. ಇಂದು ಈ ವರ್ಷದ ಮೊದಲ ಸ್ಟ್ರಾಬೆರಿ ಹಣ್ಣೊಂದನ್ನು ಬಾಯಿಗೆ ಹಾಕಿಕೊಂಡಾಗ ತಿಂದ ಮೊದಲ ಹಣ್ಣಿನ ಅತ್ಯಂತ ಹುಳಿಯಾದ ರುಚಿಯಿಂದಾಗಿ ಮುಖ ಕಿವುಚಿ ಹೋಯಿತು. 'ಅಬ್ಬಬ್ಬಾ..' ಎಂದು ಅಂತೂ ಸಾವರಿಸಿಕೊಂಡು ತಿನ್ನುವುದನ್ನು ಮುಂದುವರೆಸಿದೆ. ಮತ್ತೆ ೩ ಹಣ್ಣು ಮುಗಿಯುವರ್ಷ್ಟರಲ್ಲಿ, ಈ ಸೂಪರ್ ಸ್ಪೀಡ್ ಬ್ರೈನ್ ಎಷ್ಟೊಂದು ವಿಷಯಗಳನ್ನು ಯೋಚಿಸಿ ಗುಡ್ಡೆ ಹಾಕಿ, ನೆನಪುಗಳನ್ನು ಮೆಲಕು ಹಾಕಿ, ಒಂದಷ್ಟು ಭಾವನೆಗಳನ್ನು ಮಗಚಿ ಎತ್ತಿ ತಂದುಕೊಟ್ಟಿತ್ತು..!!
ಹಣ್ಣುಗಳನ್ನು ತಿನ್ನುವುದಕ್ಕೆ ನನಗೇನೂ ಹೆಚ್ಚಿನ ಬೇಸರವಿರಲಿಲ್ಲ..ಹಾಗೆಂದು ಗಾಬರಿಸಿ ಹೋಗಿ ತಿನ್ನುವಷ್ಟು ವ್ಯಾಮೋಹವೂ ಕೂಡ ಕಡಿಮೆ. ಚಿಕ್ಕಂದಿನಿಂದಲೂ ಮಕ್ಕಳು ಹಣ್ಣು ತಿನ್ನಲೆಂದು ಅಪ್ಪಾಜಿ ಪಡುತ್ತಿದ್ದ ಸಾಹಸ ಅಷ್ಟಿಷ್ಟಲ್ಲ. ಹಣ್ಣು ತಿನ್ನೀ ಎಂದು ಕೇಳಬೇಕಿತ್ತು, ಸಿಪ್ಪೆ ಬಿಡಿಸಿ ನಾವಿಬ್ಬರು ಹೆಣ್ಮಕ್ಕಳ ಮುಂದೆ ತರಬೇಕಿತ್ತು..ಅಕ್ಕಂಗೆ ತಿನ್ನಿಸಲೆಂತೂ..ಆಕರ್ಷಕವಾಗಿ ಕತ್ತರಿಸಿ ಬೌಲ್ ಅಲ್ಲಿ ಹಾಕಿ ತಂದು ಕೊಡುವ ಜವಾಬ್ಧಾರಿ !! ನಾವು ತಿನ್ನಲು ಸೋಮಾರಿತನ ತೋರಿಸಿದಾಗ, ಅಪ್ಪಾಜಿ ಚಿಕ್ಕಪ್ಪಂದಿರೆಲ್ಲ ಹೇಗೆ ಊರಲ್ಲಿ ಚಿಕ್ಕಂದಿನಲ್ಲಿ ಯಾವುದೇ ಬಾಳೆಹಣ್ಣಿನ ಚಿಪ್ಪನ್ನು ಒಂದು ಕ್ಷಣದಲ್ಲಿ ಇಲ್ಲವಾಗಿಸುತ್ತಿದ್ದರು, ಕಡೆಗೆ ಅದು ಹುಳಿ ಹುಳಿ ಸೇಲಂ ಜಾತಿಯ ಬಾಳೆಹಣ್ಣಾದರೂ ಸರಿ, ಸಿಪ್ಪೆ ಕೂಡ ಬಿಡಿಸಿ ತಿನ್ನವಷ್ಟು ವ್ಯವಧಾನವಿಲ್ಲದೆ, ಸಿಪ್ಪೆ ಸಹಿತ ನುಂಗಿ ಬಿಡುತ್ತಿದ್ದ ರೋಚಕ ಕಥೆಗಳೆಲ್ಲ ಹೊರ ಬರುತ್ತಿತ್ತು. ಮತ್ತೆ ಇವತ್ತಿನವರೆಗೂ ಅಷ್ಟೇ, ನಮ್ಮ ಇಚ್ಚೆಯನ್ನೂ ಕೇಳದೆ, ತನಗೆ ನೆನಪಾದಷ್ಟೊತ್ತಿಗೆಲ್ಲ ನಮ್ಮ ಅಮ್ಮ ಹಣ್ಣಿನ ಸಿಪ್ಪೆ ಬಿಡಿಸಿ ತಂದು, ಹಣ್ಣನ್ನು ಕೈಗೆ ಹಿಡಿಸಿಯೇ ನಂತರದಲ್ಲಿ ಉವಾಚ "ಏ ಹಣ್ಣು ತಿನ್ನಿರೆ..." ಎಂದು!! :D :D ಆ ಸಮಯದಲ್ಲಿ ರಗಳೆ ಎಂದೆನಿಸಿದರೂ ಈಗ ಮನೆಯಲ್ಲಿ ನಾವೇ ತೆಗೆದು ತಿನ್ನಬೇಕೆಂದಾಗ ಪಾಲಕರ ಕಾಳಜಿ ಪ್ರೀತಿ ತುಂಬಾ ನೆನಪಾಗುತ್ತದೆ.
ಹೀಗೆ ಎರಡನೇ ಸ್ಟ್ರಾಬೆರಿ ತಿನ್ನುತ್ತಾ, ಯೋಚನೆ ಮುಂದುವರೆಯಿತು..ಈ ಹಣ್ಣು ತಿನ್ನುವುದಕ್ಕೆ ಯಾವುದೇ ನಿಯಮಗಳೆಲ್ಲ ಇದ್ದಂತಿಲ್ಲ...ಇದ್ದರೂ ನನಗದು ಎಂದೂ ಅನ್ವ್ಯಯಿಸುವುದಿಲ್ಲ. ಹಸಿವಾದಾಗ ಕೈಗೆ ಸಿಕ್ಕಿದ ಹಣ್ಣು ಹೆಕ್ಕಿ ತಿನ್ನುವುದಷ್ಟೇ!! ಆದರೂ, ಹಣ್ಣಿನ ಬಗ್ಗೆ ಕೆಲವರು ಕೆಲವೊಂದು ಪ್ರಸಂಗದಲ್ಲಿ ಹೇಳಿದ ಮಾತು ಮನಸ್ಸು ಹೆಕ್ಕಿ ಕೊಟ್ಟೆ ಬಿಟ್ಟಿತು. "ಹಣ್ಣು ಹುಳಿ ಇರಲಿ, ಸಿಹಿ ಇರಲಿ, ಸಪ್ಪೆ ಇರಲಿ..ಹಣ್ಣು ಹಣ್ಣೇ...ಅದಕ್ಕೆ ಅದರದ್ದೇ ಆದ ಗೌರವ ಕೊಡ್ಲೇ ಬೇಕು.." ಅಪ್ಪಾಜಿ ಯಾವಾಗಲೂ ತಿಳಿಸುವ ಮಾತಿದು. ಎಷ್ಟು ಸತ್ಯವಾದ ಮಾತು!! ನಾವು ತಿನ್ನುವ ಹಣ್ಣು ಸ್ವೀಟ್ ಆಗಿಯೇ ಇರಬೇಕೆಂದೇನೂ ನಿಯಮವಿಲ್ಲ..ಅದರಲ್ಲೂ ಈಗಿನ ಕಾಲದಲ್ಲಿ ಕಲ್ಲಂಗಡಿಯಂತ ಕೆಲವೊಂದು ಹಣ್ಣುಗಳು ಸ್ವೀಟ್ ಇದ್ದರೇನೇ ಭಯ ಶುರುವಾಗುತ್ತದೆ ಎಲ್ಲಿ ಕೃತಕ ಸಿಹಿ ಅಂಶವನ್ನು ಸೇರಿಸಿದ್ದರೂ ಎಂದು! ಹಣ್ಣಿನ ರುಚಿ ಹೇಗೆ ಇರಲಿ ಅದರ ಪರಿಮಳವನ್ನು ಆಹ್ಲಾದಿಸಬೇಕು ಎಂದು ಹೋದ ಸರ್ತಿ ಹಲಸು ಮಾವು ಮೇಳಕ್ಕೆ ಹೋದಾಗ ಬುಟ್ಟಿಮಾವಿನ ಹಣ್ಣಿನ ಮುಂದೆ ಕೂತಿದ್ದ ಬೆಳೆಗಾರ ಹೇಳಿದ್ದ, ಸಿಹಿಯಲ್ಲ ಹಣ್ಣಿನ ಜಾತಿಯ ಬಗ್ಗೆ ಭರವಸೆ ನೀಡುತ್ತಾ..ಒಪ್ಪುವಂತಹ ಮಾತು! ಖಂಡಿಕ ಅಜ್ಜನ ಮನೆಯ ಬಕ್ಕೆ ಹಲಸು, ಮಲೆನಾಡ ಪ್ರಾಂತ್ಯದಲ್ಲೇ ಪ್ರಸಿದ್ಧವಾದದ್ದು. ಎಲ್ಲರೂ ಹಂಬಲಿಸುತ್ತಾರೆ ಪ್ರತಿವರ್ಷವೂ ಅಲ್ಲಿನ ಹಣ್ಣು ಸಿಗಬಹುದೇ ಎಂದು. ಮನಸೋಲುವುದು ಅದರ ರುಚಿಗೆ, ಪರಿಮಳಕ್ಕೆ. ಹಲಸು ಬಿಡಿಸಿ, ಒಂದು ಸೊಳೆಗೆ ಕೊಬ್ಬರಿ ಎಣ್ಣೆ ಮತ್ತು ಮಾವಿನಕಾಯಿ ಉಪ್ಪಿನಕಾಯಿ ಹಚ್ಚಿ ತಿಂದರೆ, ಆಹಾಹಾ ಧನ್ಯೋಸ್ಮಿ ಅನ್ನೋ ಭಾವನೆ!! ಇನ್ನು ಹಣ್ಣು ತಿನ್ನುವ ವಿಧಾನದ ಬಗ್ಗೆ ಆತ್ಮೀಯ ಗೆಳೆಯನ ಸಲಹೆ. ಅಂದು ಫ್ರೂಟ್ ಸಲಾಡ್ ಗೆಂದು ಹಣ್ಣನ್ನು ಕತ್ತರಿಸಿಟ್ಟ ದಿನ. "ಹಣ್ಣನ್ನ ಕತ್ತರಿಸಿ ಕೊಚ್ಚಿ ತಿನ್ಬಾರ್ದು ಕಣೆ, ಹೇಗಿದೆಯೋ ಹಾಗೇ ತಿನ್ನಬೇಕು, ಮಾವಿನ ಹಣ್ಣನ್ನು ಹೇಗೆ ಪೂರ್ಣವಾಗಿ ಬಾಯಾಕಿ ತಿಂತೀಯಾ ಹಾಗೆ.." :) ಅದು ಸರಿಯೇ ನೈಸರ್ಗಿಕವಾಗಿರಲಿ ಎಂಬ ಆಶಯ ನನ್ನ ಗೆಳೆಯನದು..! ಸಾಧ್ಯವಾದ ಹಣ್ಣುಗಳನ್ನು ಸಂಪೂರ್ಣವಾಗಿ ನಮ್ಮ ಕೈಯಲ್ಲಿ ಹಿಡಿದು, ಬಾಯಲ್ಲಿ ಕಚ್ಚಿ ಆ ಹಣ್ಣಿನ ರಸವನ್ನು, ಸ್ವಾದವನ್ನು ಹೀರುವುದೇ ಒಂದು ಗಮ್ಮತ್ತು.. ಹಣ್ಣನ್ನು 'ಆನಂದಿಸಿ' ತಿನ್ನುವ ಬಗೆ..ಅಂತೆಯೇ ಅಪ್ಪಾಜಿ ಹೇಳುವ ಇನ್ನೊಂದು ಮಾತು, "ಯಾವ್ಯಾವ ಹಣ್ಣು ಯಾವ್ಯಾವ ಸೀಸನ್ ಅಲ್ಲಿ ಸಿಗತ್ತೋ ಅದನ್ನ ಚೆನ್ನಾಗಿ ತಿನ್ನಬೇಕು, ಸೀಸನ್ ಅಲ್ಲದ ಸಂಸ್ಕರಿಸಿದ ಹಣ್ಣು ಉಚಿತವಲ್ಲ...", ಹೌದು ಅನೇಕ ವೈದ್ಯರೂ ಕೂಡ ಹೇಳುವುದನ್ನು ಕೇಳಿದ್ದೇನೆ ನಾನು..ನೈಸರ್ಗಿಕವಲ್ಲದ ಪ್ರಕ್ರಿಯೆಯಿಂದ ಸಂಸ್ಕರಿಸಿಟ್ಟ ಹಣ್ಣುಗಳು ತಮ್ಮೆಲ್ಲ ಪೋಷಕಾಂಶಗಳನ್ನು ಒಂದೂ ಮೂಡಿಸಿಕೊಂಡಿರುವುದಿಲ್ಲ ಅಥವಾ ಉಳಿಸಿಕೊಂಡಿರುವುದಿಲ್ಲ!
ಇದೆಲ್ಲದರ ಜೊತೆಗೆ, ಸುಮಾರು ೪-೫ ವರ್ಷಗಳ ಕೆಳಗೆ ನಡೆದ ಘಟನೆಯೊಂದನ್ನು ಕೂಡ ಮನಸ್ಸು ರಪ್ಪ ಎತ್ತಿ ಹಾಕಿತು. ಶಿವಮೊಗ್ಗದಿಂದ ಸಾಗರಕ್ಕೆ ಮರಳುತ್ತಿದ್ದ ದಾರಿ. ರಸ್ತೆ ಬದಿಯಲ್ಲಿ ರೈತರು ತಮ್ಮ ಗದ್ದೆಯಿಂದ ಕೊಯ್ದು ನ್ಯಾಷನಲ್ ಹೈವೇಯಲ್ಲಿ ಮಾರಾಟಕ್ಕಿಟ್ಟುಕೊಳ್ಳುವುದು ಸರ್ವೇ ಸಾಮಾನ್ಯ ದೃಶ್ಯ ಆ ಬದಿಯ ರಸ್ತೆಗಳಲ್ಲಿ. ಕಂಡಲ್ಲಿ ಗಾಡಿ ನಿಲ್ಲಿಸಿ, ಅನಾನಸ್, ತರಬೂಜ, ಕಲ್ಲಂಗಡಿ ಈ ರೀತಿಯಾಗಿ ಹಣ್ಣನ್ನು ಅಲ್ಲಿಯೇ ತಾಜಾವಾಗಿ ಕತ್ತರಿಸಲು ಕೇಳಿ ತಿನ್ನುವುದು ನಮಗೆಲ್ಲರಿಗೂ ಇಷ್ಟವಾದ ಕಾಯಕ. ಒಮ್ಮೆ ಹೀಗಾಯಿತು. ತಾಜಾ ಕಲ್ಲಂಗಡಿ ಹಣ್ಣುಗಳ ಗುಡ್ಡೆ ಹಾಕಿದ್ದನ್ನು ಒಂದೆಡೆ ನೋಡಿ ನಾವು ಅಲ್ಲಿಯೇ ನಿಂತು, ಹಣ್ಣನ್ನು ಆ ಕ್ಷಣಕ್ಕೇ ಕತ್ತರಿಸಿ ತಿನ್ನಲು ಕೊಡಲು ಕೇಳಿದೆವು. ರಾಚುವ ಕೆಂಪು ಬಣ್ಣ, ಸೊಗಸಾದ ಸ್ವಾದ, ಸಾಮಾನ್ಯಕ್ಕಿಂತಲೂ ತುಸು ಹೆಚ್ಚಿನ ಸಿಹಿಯೇ ಅನಿಸಿತ್ತು ನಮ್ಮೆಲ್ಲರಿಗೂ..ಆದರೂ ತಾಜಾ ಹಣ್ಣನ್ನು ತಿಂದು ಬೀಗುತ್ತ ಬೆಳೆದವನಿಗೊಂದು ಮೆಚ್ಚುಗೆ ನೀಡಬೇಕಲ್ಲವೇ ಎಂದು, ವ್ಯಾಪಾರ ನೋಡಿಕೊಳ್ಳುತ್ತಿದ್ದ ಸಣ್ಣ ವಯಸ್ಸಿನ ಹುಡುಗನಿಗೇ ಹೇಳಿದೆವು. "ಅದ್ಭುತವಾದ ಹಣ್ಣು ಕಣಪ್ಪ. ಹೇಗೆ ಇಷ್ಟೊಂದು ಒಳ್ಳೆಯ ಕಲರ್ ಮತ್ತು ಸ್ವೀಟ್..ತುಂಬಾ ಚೆನ್ನಾಗಿದೆ.." ಎಂದು. ವ್ಯಾಪಾರ ತಂತ್ರಗಳನ್ನು ಆಗಷ್ಟೇ ಕಲಿಯಬೇಕಿದ್ದ ವಯಸ್ಸಿನ ಪೋರ ಕೊಟ್ಟ ಉತ್ತರ ನಮಗೆ ಒಮ್ಮೆಲೇ ದಂಗು ಬಡಿಸಿತು. "ಹಾಕಿವಲ ಇಂಜೆಕ್ಷನ್ನು.. ಒಳ್ಳೆ ಸೈಜು ಬರ್ತದೆ, ಬೇಗ ಹಣ್ಣೂ ಆಕೈತಿ..". ಅಂತೂ ಸತ್ಯತೆಯ ಪರಾಕಾಷ್ಠೆ.."ತಮ್ಮಾ ಬೆರೆವರಿಗೆ ಹೇಳ್ಬೇಡ" ಎಂದಂದು ಗಾಡಿ ಹತ್ತಿದೆವು :D :D
ಅಂತೂ ಮೂರನೇ ಹಣ್ಣಿಗೆ ಬಂದೆ. ಈ ಮಕ್ಕಳ ಪುಸ್ತಕದ ಬಗ್ಗೆ ಯೋಚನೆ ಬಂತು... ಎ ಫಾರ್ ಆಪಲ್, ಓ ಫಾರ್ ಒರೆಂಜ್, ಪಿ ಫಾರ್ ಫೈನ್ಯಾಪಲ್, ಏಸ್ ಫಾರ್ ಸ್ಟ್ರಾಬೆರಿ ಇವಿಷ್ಟು ಎಬಿಸಿಡಿ ಪುಸ್ತಕದಲ್ಲಿ ಸಾಮಾನ್ಯವಾಗಿ ಮಕ್ಕಳಿಗೆ ಮೊದಲು ಪರಿಚಯಗೊಳ್ಳುವ ಹಣ್ಣುಗಳು. ಪೇಟೆ ಕಡೆ ಸಾಮಾನ್ಯವಾಗಿ ಸಿಗದ ಹಣ್ಣಿಲ್ಲ ಎನ್ನುತ್ತಾರೆ. ಬೇರೆ ಬೇರೆ ದೇಶದಿಂದ ಆಮದುಗೊಂಡ ಹಣ್ಣುಗಳೂ ಕೂಡ ಲಭ್ಯ..ಮಕ್ಕಳನ್ನು ಮಾರ್ಕೆಟ್ಟಿಗೆ ಕರೆದುಕೊಂಡು ಹೋಗಿ ಪರಿಚಯಿಸಿ ಕೊಂಡು ತಂದು ತಿನ್ನಿಸಿವುದು ಹೇಗೆಂದರೂ ನಡೆದಿದೆ..ಆದ್ರೂ ನಾವೇ ಲಕ್ಕಿ ಅನುಸ್ತು. ಸಾಮಾನ್ಯವಾಗಿ ಅಂಗಡಿಯಲ್ಲಿ ದೊರೆಯುವ ಹಣ್ಣುಗಳ ಹೊರತಾಗಿ ನಮಗೆ ಸಣ್ಣಕಿದ್ದಾಗ ಸಿಗುತ್ತಿದ್ದ ಹಣ್ಣುಗಳೆಂದರೆ, ನೇರಳೆ, ಬಗೆ ಬಗೆಯ ಹಲಸು, ಬೋರೆ ಹಣ್ಣು, ಪರಿಗೆ ಹಣ್ಣು, ಗೇರನ್ನು ಸಳ್ಳೆ ಹಣ್ಣು, ಪುನ್ನೇರಳೆ, ಪೇರಳೆ, ಸಂಪಿಗೆ ಹಣ್ಣು, ಕೋಕಂ, ಹೊಳೆದಾಸಾಳ ಹಣ್ಣು, ಮುಳ್ಳಣ್ಣು ಅಯ್ಯೋ ಇನ್ನೂ ಅನೇಕ ಅನೇಕ ಹಣ್ಣುಗಳು. ಮಾವನ ಮಕ್ಕಳು, ಅಕ್ಕ-ತಮ್ಮಂದಿರ ಜೊತೆಗೂಡಿ, ಗುಡ್ಡ ಬೆಟ್ಟ ಅಲೆದು, ತೋಟ ಬ್ಯಾಣ ಸುತ್ತಿ ಹುಡುಕಿ ಹೆಕ್ಕಿ ತಿನ್ನುತ್ತಿದ್ದ ರುಚಿಕರವಾದ ಹಣ್ಣುಗಳವು. ನಮಗೆ ಬೇಕಾದ ಹಣ್ಣನ್ನು ನಾವೇ ಸಂಪಾದಿಸುವ ಸ್ವತಂತ್ರತೆ, ಸಂತೋಷ, ಚಪಲ ಎಲ್ಲವೂ ಇರುತ್ತಿದ್ದವು. ಮರ ಹತ್ತಿ ಕಷ್ಟ ಪಟ್ಟು ಹಣ್ಣನ್ನು ಕೊಯ್ಯಳೊಬ್ಬರು, ದೋಟಿ ಕೋಲಲ್ಲಿ ಬಡಚಿಗೆ ಹಾಕಿ (ಕೋಲಿನಿಂದ ಹಣ್ಣನ್ನು ಕೆಳಗೆ ಬೀಳಿಸುವ ಬಗೆ) ಹಣ್ಣುದುರಿಸುವ ಕಲೆ, ಬಿದ್ದ ಹಣ್ಣನ್ನು ಹೆಕ್ಕಿ ಒಟ್ಟು ಮಾಡುವ ಕೆಲಸ, ಮತ್ತು ಕೊನೆಯಲ್ಲಿ ಎಲ್ಲರೂ ಕೂತು, ಸರಿ ಸಮಾನವಾಗಿ ಹಂಚಿಕೊಳ್ಳುವ/ಜಗಳವಾಡುವ ಪಂಚಾಯಿತಿಗೆ. ಇವೆಲ್ಲವನ್ನೂ ಮಾಡಿದ್ದೇವೆ ನಾವು. ಮಧುರ ಬಾಲ್ಯದ ನೆನಪಿಗೆ ಕ್ಷಣಮಾತ್ರದಲ್ಲಿ ಬೆಸೆದುಕೊಂಡ ಕೊಂಡಿಯನ್ನು ಎತ್ತಿ ಹಿಡಿದಿತ್ತು ಈ ಹಣ್ಣು.


ಒಟ್ಟಿನಲ್ಲಿ ತಿಂದ ೩ ಸ್ಟ್ರಾಬೆರ್ರಿ ಹಣ್ಣಿಗೆ, ರಭಸದ ಮನಸ್ಸು ಎತ್ತಿಕೊಟ್ಟ ಒಂದೆಂಟು ನಿಮಿಷದ ಯೋಚನೆಗಳು, ಅವಷ್ಟನ್ನು ಬರವಣಿಗೆಗಿಳಿಸಬೇಕೆಂದು ಕೂತು ನಾ ಬರೆದ ನನ್ನ ೩೫ ನಿಮಿಷಗಳು. ಇವೆಲ್ಲದರ ಪರಿಣಾಮ ಇಷ್ಟೆಲ್ಲಾ ವಿಷಯಗಳು. ಇಷ್ಟು ಅನುಭವ ಹಂಚಿಕೊಂಡ ಮೇಲೆ, ಬರಹದ ಸಾರಾಂಶ ಒಂದು ತಿಳಿಸಿಯೇ ಬಿಡುತ್ತೇನೆ.
# ಹಣ್ಣು ತಿನ್ರಪ್ಪ ಯಾವ್ದಾದ್ರೂ, ಆರೋಗ್ಯಕ್ಕೆ ಒಳ್ಳೆಯದು.
# ಹಣ್ಣು ತಿನ್ನಕ್ಕೆ ನಿಯಮಗಳಿಲ್ಲ ಅಂತ ನನ್ನ ಭಾವನೆ..ತಿನ್ಬೇಕಂಸಿದ್ರೆ ತಿನ್ನಿ ಅಷ್ಟೇ..(ಕೆಲವೊಂದು ಹಣ್ಣಿನ ಆಮ್ಲ ಸ್ವಭಾವದಿಂದ ದೇಹಕ್ಕೆ ಪರಿಣಾಮ, ತಿನ್ನುವ ಸಮಯ ಅಂತೆಲ್ಲ ಯೋಚ್ನೆ ಇದ್ರೆ, ನಿಮ್ಮ ನುರಿತ ತಜ್ಞರನ್ನು ಕೇಳಿಕೊಳ್ಳಿ, ಆಮೇಲೆ ನಂಗೆ ಬೈಬೇಡಿ)
# ಶುಚಿ ಮುಖ್ಯ, ರುಚಿ ಇದ್ರೆ ಒಳ್ಳೇದು ಇಲ್ದೆ ಹೋದ್ರೆ, ಹಣ್ಣಿನ ಬಗೆಗಿನ ಪ್ರೀತಿಗಾದ್ರೂ ತಿಂದ್ಬಿಡಿ.
# ಸಾಧ್ಯವಿದ್ರೆ ಹಣ್ಣನ್ನ ಇಡೀ ಇಡಿಯಾಗಿ ತಿನ್ನಣ, ಏನೋ ಒಂತರ ಪೂರ್ಣತೆ ಅನ್ಸತ್ತೆ..ಅದರ ಭೌತಿಕ ಅಂದ, ರುಚಿ, # ಪರಿಮಳ, ಆಹ್ಲಾದ ಎಲ್ಲವೂ ಇಡಿಯಾಗೆ ಸಿಗತ್ತಲ್ಲಾ...(ಇನ್ನು ಸಿಪ್ಪೆ ತೆಗಿಯುವಂತದ್ದು ತೆಕ್ಕೊಳಿ :P )
# ಸೀಸನ್ ಅಲ್ಲಿ ಸಿಗುವ ಹಣ್ಣಿಗೆ ಪ್ರಾಮುಖ್ಯತೆ ಕೊಡೋಣ.
# ಅಪರೂಪದ ಹಣ್ಣನ್ನು ಸ್ವಲ್ಪ ಪ್ರಯತ್ನ ಪಟ್ಟು, ಹುಡುಕಿ ಹೋಗಿ ತಿನ್ನಿ, ಮಜಾ ಬರತ್ತೆ..
# ಬರಿ ಅಂಗಡಿಗಷ್ಟೇ ಅಲ್ಲ, ಹಣ್ಣಿನ ಮರದ ಬುಡಕ್ಕೆ ಹೋಗಿ, ಮರವನ್ನ ಕೇಳಿ ತಿನ್ನಿ, ಕಡೆಗೊಂದು ಥ್ಯಾಂಕ್ಸ್ ಹೇಳಿ.
ಹಣ್ಣಿನ ಶೈನು, ಅಂದ-ಚಂದ, ರುಚಿ ಎಲ್ಲಕ್ಕಿಂತ ಆದಷ್ಟೂ ನೈಸರ್ಗಿಕವಾದ ಕೃತಕವಲ್ಲದ ಮಾದರಿಯ ಬೆಳೆಯ ಕಡೆ ಇರಲಿ ನಮ್ಮ ಆಕರ್ಷಣೆ.

ಬುಧವಾರ, ಜನವರಿ 4, 2017

ಹೊಸದಾಗಿ ಮನೆ ನಿರ್ಮಿಸುತ್ತಿದ್ದೀರಾ? ನಿಮ್ಮ ಮಕ್ಕಳ ಹಿತವನ್ನೂ ಗಮನದಲ್ಲಿರಿಸಿ - ಬಿ. ಏನ್. ರಾಮಚಂದ್ರ

ನೀವು ಹೊಸದಾಗಿ ಮನೆ ನಿರ್ಮಿಸಲು ತೀರ್ಮಾನಿಸಿದೊಡನೆ ನಿಮ್ಮ ಮನಸ್ಸಿಗೆ ಬರುವುದು ಮನೆ ನೋಡುವುದಕ್ಕೆ ಸುಂದರವಾಗಿರಬೇಕು ಹಾಗೂ ವಿಭಿನ್ನವಾಗಿರಬೇಕು ಎಂದು. ನಿಮ್ಮ ಅಭಿರುಚಿಯನ್ನು ಮನೆ ನಿರ್ಮಾಣ ವಿನ್ಯಾಸಕರಿಗೆ ತಿಳಿಸುತ್ತೀರಿ. ಅವರು ತಮ್ಮ ಅಭಿಪ್ರಾಯಗಳನ್ನು ಸೇರಿಸಿ ನಿಮಗೆ ಮನೆ ವಿನ್ಯಾಸವನ್ನು ಮಾಡಿಕೊಡುತ್ತಾರೆ, ಕೆಲಸ ಮುಂದುವರೆಯುತ್ತದೆ. ಆದರೆ, ಆ ಮನೆಯಲ್ಲಿ ವಾಸ ಮಾಡುವವರು ನೀವು ಅಂದರೆ ದೊಡ್ಡವರಷ್ಟೇ ಅಲ್ಲ, ನಿಮ್ಮ ಮಕ್ಕಳು ಹಾಗೂ ಮುಂದೆ ನಿಮ್ಮ ಮನೆ ಪ್ರವೇಶಿಸುವ ಮೊಮ್ಮಕ್ಕಳೂ ಕೂಡ. ನೀವು ಕಟ್ಟಿದ ಮನೆ ಅವರೆಲ್ಲರಿಗೂ ಅಪ್ಯಾಯಮಾನವಾಗಿರಬೇಕು ಮತ್ತು ಅವರ ಸುರಕ್ಷತೆಗೂ ಪೂರಕವಾಗಿರಬೇಕು. ಮನೆ ಅಷ್ಟೇ ಅಲ್ಲ, ನೀವು ಮನೆಗೆ ಹೊಂದಿಸುವ ಪೀಠೋಪಕರಣ ಹಾಗೂ ಸೌಲಭ್ಯಗಳು ಕೂಡ ಮಕ್ಕಳಿಗೆ ಅನುಕೂಲಕರವಾಗಿರಬೇಕು. ನಿಜ, ಅನೇಕರು ಈ ಕುರಿತು ಯೋಚಿಸುವುದೇ ಇಲ್ಲ. ಮಕ್ಕಳಿಗೆ ಸಹಕಾರಿಯಾಗುವ ಹಾಗೂ ಅವರ ಸುರಕ್ಷತೆ ಸಂಭಂದಿಸಿದಂತೆ ಗಮನಿಸಬೇಕಾದ ಅಂಶಗಳು ಇಲ್ಲಿದೆ ನೋಡಿ.

1. ಮನೆಯ ಬಾಗಿಲುಗಳು ಮೆಟ್ಟಿಲ ಅಂಚು ಚೂಪು ರಹಿತವಾಗಿರಲಿ :
             ಮನೆಯ ಒಳಗೆ ವೇಗವಾಗಿ ಓಡಿ ಬರುವುದು, ಸೋಫಾ ಮಂಚದಿಂದ ಕುಪ್ಪಳಿಸುವುದು, ಮನೆಯೊಳಗೆ ಆಟವಾಡುತ್ತ ವೇಗವಾಗಿ ಓಡುವುದು - ಇವೆಲ್ಲಾ ಮಕ್ಕಳ ಸಹಜ ಗುಣ. ಮಕ್ಕಳು ಒಂದು ಕ್ಷಣವೂ ಸುಮ್ಮನಿರುವುದಿಲ್ಲ, ಏನಾದರೊಂದು ಚಟುವಟಿಕೆಯಲ್ಲಿ ಯಾವಾಗಲೂ ತೊಡಗಿರುತ್ತಾರೆ. ಹೀಗೆಲ್ಲ ಮಾಡುವಾಗ ಆಕಸ್ಮಿಕವಾಗಿ ಗೋಡೆ, ಬಾಗಿಲು ಅಥವಾ ಮೆಟ್ಟಿಲಿಗೆ ಡಿಕ್ಕಿ ಹೊಡೆದರೆ, ಗೋಡೆ ಬಾಗಿಲು ಹಾಗೂ ಮೆಟ್ಟಿಲುಗಳ ಅಂಚು ಚೂಪುರಹಿತವಾಗಿದ್ದರೆ, ಆಗುವ ಗಾಯದ ಪ್ರಮಾಣ ಕಡಿಮೆ ಇರುತ್ತದೆ. ಪೀಠೋಪಕರಣ ಟಿ.ವಿ ಸ್ಟ್ಯಾಂಡ್ ಮೊದಲಾದವುಗಳ ಅಂಚುಗಳು ಕೂಡ ಚೂಪುರಹಿತವಾಗಿರಬೇಕು. ಮನೆಯ ಹೊರಗಿನ ಗೇಟ್, ಗ್ರಿಲ್, ಕಲ್ಲು ಬೆಂಚ್ ಯಾವುದೂ ಕೂಡ ಇದಕ್ಕೆ ಹೊರತಲ್ಲ.

2. ಮನೆಯ ನೆಲ ಏರಿಳಿತವಿಲ್ಲದೆ ಮಟ್ಟವಾಗಿರಲಿ :
              ಮಗು ಅಂಬೆಹರಿಯುವುದು ಅದರ ಬೆಳವಣಿಗೆಯ ಒಂದು ಹಂತ. ಅಂಬೆ ಹರಿಯಲು ಸಾಕಷ್ಟು ವಿಶಾಲವಾದ ಹಾಗೂ ಮಟ್ಟವಾದ ನೆಲವಿರಬೇಕು. ಕೆಲವು ಮನೆ ವಿನ್ಯಾಸಕರು, ನಿಮ್ಮ ಟಿ.ವಿ ಹಾಲನ್ನು ತುಸು ತಗ್ಗಿಸೋಣ ಚೆನ್ನಾಗಿ ಕಾಣುತ್ತದೆ ಎಂದು ಸಲಹೆ ನೀಡಬಹುದು. ಆದರೆ, ಹಾಗೆ ಮಾಡುವುದರಿಂದ ಮಕ್ಕಳು ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚು. ವಯಸ್ಸಾದ ಮೇಲೆ ಮನೆಯ ಏರಿಳಿತವಿರುವ ನೆಲ ನಿಮಗೂ ಕೂಡ ಅಪಾಯ. ಹಾಗೆಯೇ ಹೊಸ್ತಿಲ ಪಟ್ಟಿಯನ್ನು ಇರಿಸಿಕೊಳ್ಳುವ ಬಗ್ಗೆಯೂ ತುಸು ಯೋಚಿಸಿ.

3. ಕಡಿಮೆ ಪೀಠೋಪಕರಣ ಅಧಿಕ ಪ್ರಯೋಜನ :
             ಶ್ರೀಮಂತಿಕೆಯನ್ನು ಪ್ರದರ್ಶಿಸಲೋ ಅಥವಾ ಲಗ್ಝುರಿಗಾಗಿಯೋ ಹಲವರು ಮನೆಯ ಹಾಲಿನ ಸುಮಾರು ಅರ್ಧದಷ್ಟು ಭಾಗಳನ್ನು ಭಾರೀ ಪೀಠೋಪಕರಣಗಳಿಂದ ತುಂಬಿರುತ್ತಾರೆ. ಇದಲ್ಲದೆ ಟಿ.ವಿ ಸ್ಟಾಂಡ್ ಹಾಗೂ ಹೂದಾನಿ ಮೊದಲಾದವುಗಳಿಗೆ ಇನ್ನಷ್ಟು ಜಾಗ. ಆದರೆ ಒಮ್ಮೆ ಯೋಚಿಸಿ, ಮನೆಯಲ್ಲಿ ವಿಶಾಲ ಜಾಗವೆಂದರೆ ಹಾಲ್. ಅದನ್ನೂ ಕೂಡ ಪೀಠೋಪರಕಾರಣ ಹಾಗೂ ವಸ್ತುಗಳಿಂದ ಭರ್ತಿ ಮಾಡಿದರೆ ಉಳಿದ ಜಾಗವೆಷ್ಟು? ಚಿಕ್ಕಮಕ್ಕಳಿಗೆ ಆಡಲು ಜಾಗವೆಲ್ಲಿ?? ಒಂದು ಕೇರಂ ಬೋರ್ಡನ್ನು ನೆಲದ ಮೇಲಿರಿಸಿ ನಾಲ್ಕು ಜನ ಆಟಗಾರರು ಕುಳಿತುಕೊಳ್ಳುವಷ್ಟು ಜಾಗವಾದರೂ ಹಾಲಿನಲ್ಲಿರಬೇಡವೇ? ಚಿಕ್ಕ ಮಕ್ಕಳು ತಮ್ಮ ಆಟಿಕೆಯನ್ನು ನೆಲಕ್ಕೆ ಹರಡಿಕೊಂಡು ಆಟವಾಡಲು, ಮೂರುಗಾಲಿ ಸೈಕಲ್ ಓಡಿಸಲು ಅಥವಾ ನೆಲದ ಮೇಲೆ ಚೆಂಡನ್ನು ಉರುಳಿಸಲು ಮಕ್ಕಳಿಗೆ ಜಾಗ ಬೇಡವೇ? ಕಡಿಮೆ ಹಾಗೂ ಸರಳ ಪೀಠೋಪರಕಾರಣಗಳೇ ಇದಕ್ಕೆ ಪರಿಹಾರ. ಅಗತ್ಯ ಬಿದ್ದಾಗ ಎತ್ತಿಟ್ಟುಕೊಳ್ಳಬಹುದು. 

4.  ಸುರಕ್ಷಿತವಾದ ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ :
             ಮನೆ ನಿರ್ಮಾಣದ ಸಮಯದಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಸ್ವಿಚ್ ಹಾಗೂ ಸಾಕೇಟ್ಗಳನ್ನು ಅಳವಡಿಸದಿದ್ದರೆ, ಮುಂದೆ ಶಾರ್ಟ್ ಸರ್ಕ್ಯೂಟ್ ಆಗಿ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆಗಳಿವೆ. ಇದಲ್ಲದೆ ಸ್ವಿಚ್ ಹಾಗೂ ಸಾಕೇಟ್ಗಳನ್ನು ಚಿಕ್ಕ ಮಕ್ಕಳ ಕೈಗೆಟುಕದಂತೆ ಸ್ವಲ್ಪ ಮೇಲಿರಿಸಬೇಕು. ಕೆಲವರು ಮೊಬೈಲ್ ಫೋನ್ ಚಾರ್ಜ್ ಮಾಡಲು ಅನುಕೂಲವಾಗುವಂತೆ ಸಾಕೇಟನ್ನು ಅತೀ ಕೆಳಭಾಗದಲ್ಲಿ ಇರಿಸುತ್ತಾರೆ. ಚಿಕ್ಕ ಮಕ್ಕಳು ಚೇಷ್ಟೆಗಾಗಿ ಸಕೇಟಿನೊಳಗೆ ಏನನ್ನಾದರೂ ತೂರಿಸಲು ಪ್ರಯತ್ನಿಸಿ ಅಪಾಯ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಟಿ.ವಿ ಕಂಪ್ಯೂಟರ್ ಇನ್ನಿತರ ಎಲ್ಕ್ಟ್ರಾನಿಕ್ ವಸ್ತುಗಳ ವೈರ್ ಗಳನ್ನು ವಿಪರೀತ ಅಡ್ಡಾದಿಡ್ಡಿಯಾಗಿರಿಸದಂತೆ ನೋಡಿಕೊಳ್ಳುವದು ಉತ್ತಮ. 

5. ಬಾಗಿಲುಗಳಿಗೆ ಸರಿಯಾದ ರೀತಿಯ ಚಿಲಕಗಳು ಹಾಗೂ ಬೋಲ್ಟ್ ಗಳನ್ನು ಅಳವಡಿಸುವುದು :
             ಕೆಲವೊಮ್ಮೆ ಚಿಕ್ಕ ಮಕ್ಕಳು ಕೊಠಡಿ, ಸ್ನಾನದ ಮನೆ ಅಥವಾ ಟಾಯ್ಲೆಟ್ಗಳ ಬಾಗಿಲುಗಳ ಚಿಲಕಗಳನ್ನು ಅಚಾನಕ್ಕಾಗಿ ಹಾಕಿ ನಂತರ ತೆಗೆಯಲು ತಿಳಿಯದೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ, ದೊಡ್ಡವರು ಒಳಗಡೆ ಹೋದಾಗಲೂ ಹೊರಗಿನಿಂದ ಚಿಲಕ ಹಾಕಿ ತೆಗೆಯಲು ತಿಳಿಯದೇ ಇದ್ದರೆ ವಿಪರೀತ ತೊಂದರೆಯಾದ ನಿದರ್ಶನಗಳಿವೆ. ಆದ್ದರಿಂದ ಉದ್ದ ರಾಡ್ ರೀತಿಯ ಚಿಲಕಕ್ಕೆ ಬದಲಾಗಿ ಒಳಗೆ ಹೊರಗೆ ಎರಡೂ ಕಡೆ ಬಾಗಿಲು ತೆರೆಯಲು ಬರಬಹುದಾದ ಮೇಲೆ ಕೆಳಗೆ ಚಲಿಸುವ ರೀತಿಯ ಚಿಲಕಗಳನ್ನು ಬಾಗಿಲುಗಳಿಗೆ ಅಳವಡಿಸುವುದು ಸೂಕ್ತ. ಬಾಗಿಲಿನ ಬೋಲ್ಟ್ ಕೂಡ ಮಕ್ಕಳ ಕೈಗೆ ಸಿಗದಂತೆ ಬಾಗಿಲಿನ ಮೇಲೆ ಇರಿಸಬೇಕು. 
6. ವಸ್ತುಗಳನ್ನಿಡಲು ಕೆಳಮಟ್ಟದಲ್ಲಿ ಡ್ರಾಯೆರ್ ಗಳನ್ನಿಡಬಾರದು :
              ಸಣ್ಣ ಪುಟ್ಟ ವಸ್ತುಗಳನ್ನಿಡಲು ಟಿ.ವಿ ಸ್ಟಾಂಡ್ ನ ಕೆಳಭಾಗ, ವಾರ್ಡ್ ರೋಬಿನ ಕೆಳ ಭಾಗದಲ್ಲಿ ಡ್ರಾಯೆರ್ ಗಳನ್ನಿಡುವುದು ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳು ತಮ್ಮ ಕೈಗೆಟಕುವ ಯಾವುದೇ ವಸ್ತುಗಳನ್ನು ಎಳೆಯುತ್ತಾರೆ. ಕೆಳ ಹಂತದಲ್ಲಿರುವ ಡ್ರಾಯೆರ್ ಗಳನ್ನು ಖಂಡಿತ ಎಳೆದು ಹಾಕುತ್ತಾರೆ. ಹೀಗೆ ಮಾಡುವಾಗ ತಮಗರಿವಿಲ್ಲದೆ ಕೈ ಬೆರಳುಗಳನ್ನು ಒಳಕ್ಕಿಟ್ಟುಕೊಂಡು ಜೋರಾಗಿ ಡ್ರಾಯೆರ್ ಬಾಗಿಲನ್ನು ಹಾಕುತ್ತಾರೆ. ಮಕ್ಕಳ ಮೃದು ಬೆರಳುಗಳಿಗೆ ಖಂಡಿತ ಅಪಾಯವಾಗುತ್ತದೆ. ಕೆಳಹಂತದಲ್ಲಿ ಡ್ರಾಯೆರ್ ರ್ಗಳೇ ಬೇಡ. ಅನಿವಾರ್ಯವಾಗಿ ಡ್ರಾಯೆರ್ರ್ಗಳನ್ನಿರಿಸಿಕೊಂಡರೆ, ಅವುಗಳಿಗೆ ಲಾಕ್ ಮಾಡುವ ವ್ಯವಸ್ಥೆ ಇರಬೇಕು ಅಥವಾ ಡ್ರಾಯರ್ ಗಳಿಗೆ ಬಾಗಿಲುಗಳಿಲ್ಲದೆ ಹಾಗೆ ಬಿಟ್ಟಿದ್ದರೂ ಚಿಂತೆಯಿಲ್ಲ.

7. ಬಿಸಿನೀರಿನ ನಲ್ಲಿಗಳು :
           ಸ್ನಾನದ ಕೊಠಡಿಯಲ್ಲಿ ಬಿಸಿನೀರಿಗೋಸ್ಕರ ಸೋಲಾರ್ ಅಥವಾ ಗೀಜರ್ ವ್ಯವಸ್ಥೆ ಮಾಡಿಕೊಳ್ಳುತ್ತೀರಿ. ನಲ್ಲಿಯಿಂದ ನೀರು ಬಿಟ್ಟುಕೊಳ್ಳುವುದು ಚಿಕ್ಕ ಮಕ್ಕಳಿಗೆ ಪ್ರಿಯವಾದ ಕೆಲಸ. ದೊಡ್ಡವರು ಸ್ನಾನದ ಕೊಠಡಿಯಲ್ಲಿಲ್ಲದಾಗ ಮಗು ತಿಳಿಯದೇ ಕೈಗೆ ಸಿಗುವ ಬಿಸಿನೀರಿನ ನಲ್ಲಿ ಬಿಟ್ಟುಕೊಂಡು ಕೈ ಸುಟ್ಟುಕೊಳ್ಳಬಹುದು. ಶವರ್ ಆನ್ ಮಾಡಿ ತಲೆಯ ಮೇಲೆ ಬಿಸಿನೀರು ಬೀಳಿಸಿಕೊಳ್ಳುವ ಅಪಾಯವಿದೆ. ಇದನ್ನು ತಪ್ಪಿಸಲು ಬಿಸಿನೀರು ಬರುವ ನಲ್ಲಿಯ ಮೇಲ್ಬಾಗದಲ್ಲಿ ಒಂದು ವಾಲ್ಟ್ ಇರಿಸಿಕೊಂಡು ಸ್ನಾನದ ಕೆಲಸ ಮುಗಿದ ಮೇಲೆ ವಾಲ್ಟ್ ಅನ್ನು ನೀರು ಬರದಂತೆ ತಿರುಗಿಸಿಡುವುದು ಸೂಕ್ತ. 

8. ಅಡುಗೆ ಮನೆಯ ಎಲ್. ಪಿ.ಜಿ ಗ್ಯಾಸ್ ಸಿಲಿಂಡರ್
              ಅಡುಗೆ ಮನೆಗೆ ಎಲ್.ಪಿ.ಜಿ ಗ್ಯಾಸ್ ವ್ಯವಸ್ಥೆ ಮಾಡುವಾಗ ಸಾದ್ಯವಾದರೆ ಸಿಲಿಂಡರ್ ಅಡುಗೆ ಮನೆಯಿಂದ ಹೊರಬಾಗದಲ್ಲಿ ಇರಿಸುವುದು, ಅಥವಾ ಪ್ರತ್ಯೇಕವಾಗಿ ಮಕ್ಕಳಿಗೆಟುಕದಂತೆ ಇಡಿಸಿ, ಪೈಪ್ ಮೂಲಕ ಸ್ಟವ್ ಗೆ ಗ್ಯಾಸ್ ಸರಬರಾಜಿಗೆ ವ್ಯವಸ್ಥೆ ಮಾಡುವುದು ಉತ್ತಮ. ಇಲ್ಲವಾದಲ್ಲಿ, ಮಕ್ಕಳು ಗ್ಯಾಸ್ ಸಿಲಿಂಡರ್ ಪೈಪ್ ಅನ್ನು ಹಿಡಿದು ಜಗ್ಗಿ ಆಟದಾಡುವ ಸಾಧ್ಯತೆ ಇರುತ್ತದೆ.

9. ಮನೆಯ ಜಾಗದಲ್ಲೇ ಮಕ್ಕಳಿಗೆ ಆಡಲು ಜಾಗ ಕಲ್ಪಿಸಲು ಸಾಧ್ಯವೇ?
              ಈಗೆಲ್ಲ ನಾವು ನೋಡುವಂತೆ, ಮನೆಯ ಗೇಟ್ ತೆಗೆದರೆ ಮುಂದಕ್ಕಿರುವುದು ವಾಹನಗಳು ಓಡಾಡುವ ರಸ್ತೆ. ಮಕ್ಕಳು ಅಲ್ಲಿ ಆಟವಾಡುವುದು ಅಪಾಯ. ಇರುವ ಸೈಟ್ ಜಾಗದಲ್ಲೆ ಮನೆ ನಿರ್ಮಿಸಲು ಸ್ವಲ್ಪ ಕಡಿಮೆ ಜಾಗ ಬಳಸಿಕೊಂಡು, ಒಂದಷ್ಟು ಜಾಗವನ್ನುಮಕ್ಕಳಿಗೆ ಆಟವಾಡಲು ಮೀಸಲಿಡಬಹುದು. ನಮ್ಮ ಕಣ್ಮುಂದೆ ನಮ್ಮ ಮಕ್ಕಳು ಅಂಗಳದಲ್ಲಿ ಆಡಲು ನೋಡುವುದು ಎಷ್ಟು ಚಂದವಲ್ಲವೇ? ಮಕ್ಕಳಿಗೆ ಆಟವಾಡಲು ಜಾಗ ಬಿಡಬೇಕೆಂದು ಯೋಚಿಸುವವರು ತುಂಬಾ ವಿರಳ. ಸಾಧ್ಯವಿದ್ದರೆ ಅವಕಾಶ ಕಲ್ಪಿಸಿ.

10.  ಮಕ್ಕಳ ಅಭ್ಯಾಸ ಕೊಠಡಿ/ ಸ್ಥಳಾವಕಾಶ :
                   ಮನೆಯಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿದ್ದರೆ, ಅವರಿಗಾಗಿ ಪ್ರತ್ಯೇಕ ಸ್ಥಳಾವಕಾಶವನ್ನು ಮೀಸಲಿಡಬೇಕಾಗುತ್ತದೆ. ಅವರು ತಮ್ಮ ಪುಸ್ತಕಗಳನ್ನು ಹಾಗೂ ಅಭ್ಯಾಸ ಸಲಕರಣೆಗಳನ್ನು ಇಟ್ಟುಕೊಳ್ಳಲು ಓಪನ್ ಕಪಾಟು ಬೇಕಾಗುತ್ತದೆ. ಅಭ್ಯಾಸ ಮಾಡಲು ಕುರ್ಚಿ ಟೇಬಲ್ ವ್ಯವಸ್ಥೆ ಮಾಡಬೇಕು. ಪ್ರತ್ಯೇಕ ಕೋಣೆಯನ್ನು ನೀಡಲು ಸಾಧ್ಯವಾಗದಿದ್ದರೆ ಪ್ರತ್ಯೇಕ ಸ್ಥಳಾವಕಾಶವನ್ನಾದರೂ ಮಾಡಿಕೊಡಬೇಕು. ಹೀಗೆ ಸ್ವಲ್ಪವಾದರೂ ಸ್ಥಳಾವಕಾಶ ಸಿಗದಿದ್ದಲ್ಲಿ, ಮಕ್ಕಳು ತಮ್ಮ ಸ್ಕೂಲ್ ಬ್ಯಾಗ್, ಪುಸ್ತಕ, ಯೂನಿಫಾರ್ಮ್ ಗಳನ್ನು ಎಲ್ಲೆಂದರಲ್ಲಿ ಇಟ್ಟು, ನಂತರ ಶಾಲೆಗೆ ಹೋಗುವ ಸಮಯಕ್ಕೆ ಅವುಗಳನ್ನು ಹುಡುಕುತ್ತ ಗೊಂದಲಕ್ಕೆ ಒಳಗಾಗುತ್ತಾರೆ. ಅವರಿಗಾಗಿ ಇರುವ ಕೊಠಡಿ ಅಥವಾ ಜಾಗದ ಒಂದು ಭಾಗದ ಗೋಡೆಗೆ ಸಿಮೆಂಟ್ ನಿಂದ ಬ್ಲಾಕ್ ಬೋರ್ಡ್ ಮಾಡಿಕೊಟ್ಟರೆ ಲೆಕ್ಕ ಹಾಗೂ ಸ್ಪೆಲ್ಲಿಂಗ್ ಪ್ರಾಕ್ಟಿಸ್ ಮಾಡಿಕೊಳ್ಳಲು ಅನುಕೂಲ.

                    ನೀವು ಕಟ್ಟುತ್ತಿರುವ ಮನೆಯು ನಿಮ್ಮ ಮಕ್ಕಳಿಗೆ ಪೂರಕವಾಗದಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮಕ್ಕಳ ನಡುವೆ ವಸ್ತು ಜೋಡಣೆ ಮತ್ತು ಅಪಾಯದ ಕುರಿತಾಗಿ ಸಂಘರ್ಷಗಳೇ ಜಾಸ್ತಿಯಾಗುತ್ತದೆ. ಈ ಕುರಿತು ತುಸು ಯೋಚಿಸಿ ನಿರ್ಣಯ ಕೈಗೊಳ್ಳಿ.


ಲೇಖಕರು,
  ಬಿ. ಏನ್. ರಾಮಚಂದ್ರ