ಮಂಗಳವಾರ, ಮೇ 9, 2017

ರಜೆ ಎಂದರೆ ಸಮಯದ ಸದುಪಯೋಗ


ಮಕ್ಕಳಿಗೆ ಪರೀಕ್ಷೆಗಳು ಮುಗಿದವು, ಇನ್ನು ಸಾಕಷ್ಟು ದಿನ ಬೇಸಿಗೆ ರಜೆ, ಮಕ್ಕಳು ಸ್ವಲ್ಪ ರೆಸ್ಟ್ ಮಾಡ್ಲಿ, ಅವರಿಗೆ ಬೇಕಾದ್ದನ್ನು ಮಾಡಿಕೊಳ್ಳಲಿ, ಊಟ ತಿಂಡಿಗೊಂದು ಬಂದರೆ ಸಾಕು ಎಂಬುದು ಸಾಮಾನ್ಯವಾಗಿ ನಾವು ಪೋಷಕರ ಮನಸ್ಸಿನಲ್ಲಿ ಬರುವ ವಿಚಾರ.  ಆದರೆ ಈ ಬೇಸಿಗೆ ರಜೆ ಯ ನಿಜವಾದ ಅರ್ಥವೇನು? ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳುವ ವಿಧಾನಗಳೇನು? ನಾವು ಹೇಗೆ ನಮ್ಮ ಮಕ್ಕಳಿಗೆ ರಜೆಯ ಸದುಪಯೋಗದ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಬಹುದು ಎಂದುದರ ಕುರಿತು ಇಲ್ಲಿದೆ ಒಂದು ಸಮಗ್ರವಾದ ಟಿಪ್ಪಣಿ.


ರಜೆ ಎಂದರೆ ವಿಶ್ರಾಂತಿ ಎಂದರ್ಥವಲ್ಲ. ರಜೆ ಎಂದರೆ ನಮ್ಮ ನಿತ್ಯ ಚಟುವಟಿಕೆಗಳಿಗಿಂತ, ಸ್ಥಿತ ಜೀವನ ಶೈಲಿಗಳಿಂದ ಸ್ವಲ್ಪ ಭಿನ್ನವಾಗಿ, ಮನಸ್ಸಿಗೆ ಖುಷಿಯೆನಿಸಿದ್ದನ್ನು,  ಉಪಯುಕ್ತವಾದ್ದನ್ನು, ಅಪೂರ್ಣವಾಗಿಟ್ಟುಕೊಂಡ ಕಾರ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುವುದು ಎಂದೂ ಅರ್ಥೈಸಬಹುದು. ಒಂದೇ ಮಾತಿನಲ್ಲೇ ಹೇಳುವುದಾದರೆ ರಜೆ ಎಂದರೆ, ಸಿಕ್ಕಿರುವ ಬಿಡುವಿನ ಸಮಯದ ಸದುಪಯೋಗ. ವಾಸ್ತವವಾಗಿ, ರಜೆ ಬಂದರೆ, ಮಕ್ಕಳು ಆ  ವರೆಗೆ ಒಗ್ಗಿಕೊಂಡ ಶಾಲೆ, ಶಿಕ್ಷಣ, ಹೊಂವರ್ಕ್, ಪರೀಕ್ಷಾ ಸಮಯದಲ್ಲಿ ಮಾಡಬೇಕಾಗುವ ಹೆಚ್ಚಿನ ತಯಾರಿ ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಿಂದ ಹೊರಬಂದು, ತಮಗಿಷ್ಟವಾದ್ದನ್ನು ಮಾಡಿಕೊಂಡು, ಸ್ನೇಹಿತರೊಡನೆ ಹೆಚ್ಚಿನ ಸಮಯ ಆಟವಾಡಿಕೊಂಡು, ಕುಣಿದು ಕುಪ್ಪಳಿಸುವ ಸಮಯ. ಆದರೆ ಮಕ್ಕಳಲ್ಲಿ ಕಲಿಕೆ ಎಂಬುದು ನಿರಂತರ. ಅದು ಕೇವಲ ಪಠ್ಯಪುಸ್ತಕದಿಂದಲೇ ಬರಬೇಕಂತಿಲ್ಲ. ಮೋಜು ಮಾಡುತ್ತಲೇ, ತಮಗರಿವಿಲ್ಲದಂತೆಯೇ ನಮ್ಮ ಮಕ್ಕಳು, ರಜೆಯ ಸಮಯದಲ್ಲಿ ಜೀವನ ಶಿಕ್ಷಣವನ್ನು ಕಲಿಯುತ್ತಿರುತ್ತಾರೆ. ಹಾಗಾಗಿ ಅವರ ರಜಾ ಸಮಯವನ್ನು ಇನ್ನೂ ಹೆಚ್ಚು ಅರ್ಥಪೂರ್ಣವನ್ನಾಗಿ ಮಾಡುವುದು ನಮ್ಮ ಕರ್ತವ್ಯ. 

ಬೆಳಗಿನ ಎಳೆ ಬಿಸಿಲು  : 

 ಇತರ ದಿನಗಳಲ್ಲಿ, ಶಾಲೆಗೆ ಬೇಗನೆ ಎದ್ದು ಓಡಬೇಕಾಗುವ ಅನಿವಾರ್ಯತೆಯಲ್ಲಿ ಮಕ್ಕಳು ಬೆಳಗ್ಗಿನ ಎಳೆ ಬಿಸಿಲಿಗೆ ತಮ್ಮನ್ನು ತಾವೇ ಒಡ್ಡುವ ಪ್ರಸಂಗವೇ ಇರುವುದಿಲ್ಲ. ಹಾಗಾಗಿ ಮಕ್ಕಳಿಗೆ ಅವಶ್ಯಕವಾದ ವಿಟಮಿನ್ ಡಿ ದೊರೆಯುವ ಎಳೆ ಬಿಸಿಲಿಗೆ ಆಟವಾಡಲು ಅವಕಾಶ ಮಾಡಿಕೊಡಿ, ಚಿಕ್ಕದಾದ ವಾಕಿಂಗ್, ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳೂ ಕೂಡ ಆಗಬಹುದು. ಇದರಿಂದ ಮಕ್ಕಳ ದೇಹ ಮತ್ತು ಮನಸ್ಸು ಚುರುಕುಗುಗೊಳ್ಳುತ್ತದೆ.

ಶಿಸ್ತಿನ ಸ್ಥಿರ ದಿನಚರಿಯಲ್ಲಿ ವ್ಯತ್ಯಯ ಬೇಡ :

ವರ್ಷವಿಡೀ ಶಾಲೆಯ, ಕಲಿಕೆಯ ದಿನಚರಿಗೆ ಹೊಂದಿಕೊಂಡು/ಒಗ್ಗಿಕೊಂಡು ಬೇಗನೆ ಮಲಗಿ ಬೇಗನೆ ಏಳುವ ರೂಢಿಯಿದ್ದರೂ ಮಕ್ಕಳು ರಜೆಯಲ್ಲಿ ತಡರಾತ್ರಿ ವರೆಗೆ ಆಡುತ್ತ, ಟಿವಿ, ಕಂಪ್ಯೂಟರ್  ನೋಡುತ್ತಾ ಕಾಲಕಳೆದು, ಬೆಳಿಗ್ಗೆ ಅತೀವ ತಡವಾಗಿ ಎದ್ದು ತಿಂಡಿ ಊಟಗಳ ಸಮಯವನ್ನು ವ್ಯತ್ಯಾಸ ಮಾಡಿಕೊಳ್ಳುವುದೂ ಕೂಡ ಸರಿಯಲ್ಲ. ದೈಹಿಕ ವ್ಯಾಯಾಮ, ಆಹಾರ ಕ್ರಮಗಳು, ನಿತ್ಯ ಪ್ರಾರ್ಥನೆ ಇತ್ಯಾದಿ ನಿಯಮಿತವಾಗಿ ನಡೆಸಿಕೊಂಡು ಹೋಗುವ ಆರೋಗ್ಯಕರ ಚಟುವಟಿಕೆಗಳನ್ನು ನಿತ್ಯ ಕ್ರಮದಂತೆಯೇ ನಡೆಸಿಕೊಂಡು ಹೋಗಬಹುದೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಿ. 

ಆಟ , ದೈಹಿಕ ಶ್ರಮ ಮತ್ತು ಮನೋರಂಜನೆ :

ರಜೆಯೆಂದರೆ ಮಕ್ಕಳಿಗೆ ಪೂರ್ವನಿಯೋಜಿತವಾಗಿಯೇ ಆಟದ ಆಲೋಚನೆಯಿರುತ್ತದೆ. ಮಕ್ಕಳಿಗೆ ಹೆಚ್ಚೆಚ್ಚು ಹೊರಾಂಗಣ ಆಟಗಳು, ದೈಹಿಕವಾಗಿ-ದೇಹ ದಣಿಯುವಂತಹ ಆಟಗಳನ್ನು ಆಡಲು ಉತ್ತೇಜಿಸಿ. ಇದರಿಂದ ಮಕ್ಕಳ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ, ಇತ್ತೀಚೆಗೆ ಮಕ್ಕಳಲ್ಲಿ ಕಂಡು ವರುವ ಅಧಿಕವಾದ ಬೊಜ್ಜಿನ ಸಮಸ್ಯೆ ಪರಿಹಾರವಾಗುತ್ತದೆ. ಹೆಚ್ಚಿನ ಬಿಸಿಲಿನ ಅವಧಿಯಲ್ಲಿ ಹಾಗೂ ಮುಸ್ಸಂಜೆ ಕತ್ತಲಿನ ಸಮಯದಲ್ಲಿ, ಒಳಾಂಗಣ ಆಟಗಳನ್ನು ಆಡಲು ಪ್ರೋತ್ಸಾಹಿಸಿ. ಒಟ್ಟಿನಲ್ಲಿ ಹೆಚ್ಚೆಚ್ಚು ಆಟಗಳು ಮಕ್ಕಳ ಮನೋವಿಕಾಸಕ್ಕೆ ಅತ್ಯಂತ ಫಲಕಾರಿಯಾಗಿ ಪರಿಣಮಿಸುತ್ತದೆ. ಮನೆಯಲ್ಲಿ ಹಿರಿಯರಿಗೆ ಸಹಾಯ ಮಾಡುವುದು, ಕೈತೋಟದ ಕೆಲಸ, ಇನ್ನಿತರ ಚಿಕ್ಕಪುಟ್ಟ ದೈಹಿಕ ಶ್ರಮಕ್ಕೆ ಮಕ್ಕಳನ್ನು ಕೈಜೋಡಿಸಲು ಕೇಳಿದರೆ, ಮಕ್ಕಳಿಗೆ ಅದೊಂದು ರೀತಿಯ ಪ್ರಯೋಗಾತ್ಮಕ ಚಟುವಟಿಕೆಗಳಾಗಿ ಪರಿಣಮಿಸಿ, ಇವುಗಳಿಗೆ ಸಂಬಂಧಿಸಿದಂತೆ ಮಕ್ಕಳ ಕ್ರಿಯಾಶೀಲತೆ ಹೆಚ್ಚುತ್ತದೆ.  

ನೈಸರ್ಗಿಕವಾಗಿ ಏನೇ ಇದ್ದರೂ ಅದು ಒಳ್ಳೆಯದೇ :

ರಜೆ ಎಂದರೆ ಮಕ್ಕಳಿಗೆ ಆಟೋಟದ ಯೋಚನೆ. ಬಿಸಿಲು, ಮಣ್ಣು-ಧೂಳು, ನೀರು, ಸವೆತ, ಗಾಯ, ಜಗಳ, ಸುಸ್ತು, ಅನಾರೋಗ್ಯ ಇವೆಲ್ಲವೂ ಮಕ್ಕಳ ರಜೆಯ ಅವಿಭಾಜ್ಯ ಅಂಗಗಳು. ನೈಸರ್ಗಿಕವಾದುದು ಮತ್ತು ಸಹಜದತ್ತವಾದುದು. ಹಾಗೆಯೇ ಇರಲಿ ಬಿಟ್ಟುಬಿಡಿ. ಮಕ್ಕಳ ಸ್ವಚ್ಛತೆ ಮತ್ತು ಸುರಕ್ಷತೆ ಕಾಯ್ದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಅದಕ್ಕೆ ಅನುಗುಣವಾದ ಕ್ರಮಗಳನ್ನು ಕೈಗೊಂಡು, ಇವೆಲ್ಲವಕ್ಕೆ ಮಕ್ಕಳಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೊತ್ಸಾಹವನ್ನು ನೀಡಿ. ಉದಾಹರಣೆಗೆ ನೀರಾಟ, ಮಣ್ಣಿನಲ್ಲಿ ಮನೆ ಆಕೃತಿಗಳನ್ನು ಮಾಡುವುದು, ಹೊರಗಡೆ ಮರಳು ಇತ್ಯಾದಿ ಆಟಗಳನ್ನು ಆಡುವುದರಿಂದ, ಮಕ್ಕಳಲ್ಲಿ ಪ್ರತಿರೋಧ ಶಕ್ತಿ ಹೆಚ್ಚುತ್ತದೆ. 

ನೀವು ಪ್ರೋತ್ಸಾಹಿಸುವ ಹವ್ಯಾಸಗಳಿಗೆ, ಮಕ್ಕಳಿಗೆ ಇರಲಿ ಆಸಕ್ತಿ :

ಕೇವಲ ಪಠ್ಯ ಪುಸ್ತಕದ ವಿಷಯಗಳಷ್ಟೇ ಮಕ್ಕಳ ಜ್ಞಾನವನ್ನು ವೃದ್ಧಿಗೊಳಿಸದು. ಪಠ್ಯೇತರ ಹವ್ಯಾಸಿ ಚಟುವಟಿಕೆಗಳೂ ಕೂಡ ಮಕ್ಕಳಿಗೆ ಅತ್ಯವಶ್ಯಕ.  ಎಲ್ಲ ಮಕ್ಕಳು ಸಮಾನ ಮನಸ್ಕರರಾಗಿರುವುದಿಲ್ಲ. ನೆರೆಯವನು ತನ್ನ ಮಗುವನ್ನು ಡ್ರಾಯಿಂಗ್ ಕಲಿಯಲು ಹಾಬಿ ಕ್ಲಾಸ್ ಗೆ ಹಾಕಿದ್ದಾರೆಂದು, ನೀವೂ ಕೂಡ ನಿಮ್ಮ ಮಗುವನ್ನು ನಿಮ್ಮಿಚ್ಛೆಯ ಪ್ರಕಾರ ಕಳುಹಿಸಬೇಕಂತಿಲ್ಲ. ತುಂಟ ಮಕ್ಕಳ ಕಾಟ ತಪ್ಪಿದರೆ ಸಾಕೆಂದು, ಮಕ್ಕಳಿಗೆ ಮನಸ್ಸಿಗೆ ಇಚ್ಛೆ ಮತ್ತು ಆಸಕ್ತಿಯಿಲ್ಲದ ಹವ್ಯಾಸ ಚಟುವಟಿಕೆಗಳಿಗೆ ಒತ್ತಾಯಿಸಬೇಡಿ. ಪ್ರತಿಕ್ರಿಯೆ ಕೊಡಬಹುದಾದ ವಯಸ್ಸಿನ ಮಕ್ಕಳು ನಿಮ್ಮವರಾಗಿದ್ದರೆ, ಕಲೆ, ಸಾಹಿತ್ಯ, ವಿಜ್ಞಾನ, ಕಂಪ್ಯೂಟರ್, ಹೊಲಿಗೆ, ಹಾಡು, ನೃತ್ಯ ಹೀಗೆ ಯಾವುದೇ ಹೊಸ ವಿಷಯಗಳನ್ನು ಕಲಿಸಲು ಕಲಿಸುವ ಮುನ್ನ ನಿಮ್ಮ ಮಕ್ಕಳಿಗೆ ಅದರೆಡೆಗೆ ಆಸಕ್ತಿಯಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅವರ ಇಚ್ಛೆಯನ್ನು ಪರಿಶೀಲಿಸಿ, ನಿಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಲಗತ್ತಾಗಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಧ್ಯವಾದಷ್ಟು ಸ್ಪಂದಿಸಿ. 

ಸಾಮಾಜಿಕ ಸಂಪರ್ಕ/ಬಾಂಧವ್ಯ ಒದಗಿಸುವುದು :

ಮಕ್ಕಳ ರಜಾ ದಿನಗಳಲ್ಲಿ, ಸಾಧ್ಯವಾದಷ್ಟು ನಿಮ್ಮ ಮಕ್ಕಳನ್ನು, ಅಜ್ಜನ ಮನೆ, ಇತರ ಕುಟುಂಬದವರ ಮನೆಗೆ, ನೆಂಟರಿಷ್ಟರ ಮನೆಗಳಿಗೆ ಕರೆದೊಯ್ಯಿರಿ. ಇದರಿಂದ ಮಕ್ಕಳಿಗೆ ಒಂದು ರೀತಿಯ ಬದಲಾವಣೆ ಸಿಗುವುದರ ಜೊತೆಗೆ, ಮಕ್ಕಳು ಹತ್ತು ಹಲವು ವಿಷಯಗಳನ್ನು ನೋಡಿ, ಕೇಳಿ, ಅನುಭವಿಸಿ ತಿಳಿಯಲು ಸಹಾಯಕವಾಗುತ್ತದೆ. ಮಕ್ಕಳ ಸಂಭಾಷಣಾ ಕೌಶಲ್ಯ ಹೆಚ್ಚುತ್ತದೆ. ಬಂಧು-ಬಾಂಧವರ ಪ್ರೀತಿ ವಿಶ್ವಾಸ ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ. ಇತರ ಮಕ್ಕಳ ಜೊತೆಗಿನ ಆಟ -ಒಡನಾಟ ಮಕ್ಕಳಿಗೆ ಅವರಿಗರಿವಿಲ್ಲದಂತೆಯೇ, ಹೊಂದಾಣಿಕೆ, ಇತರರೆಡೆಗೆ ಪ್ರೀತಿ-ಬೆಸುಗೆ, ಗೌರವ ಇತ್ಯಾದಿ ಮನೋಭಾವವನ್ನು ಹೆಚ್ಚುವಂತೆ ಮಾಡುತ್ತದೆ.


ಪರಿಸರದ ಜೊತೆ ಇರಲಿ ನಂಟು :

ಮಕ್ಕಳಿಗೆ ಆದಷ್ಟು ನೈಸರ್ಗಿಕ ಪರಿಸರಕ್ಕೆ ಹೊಂದಿಕೊಂಡಂತೆ ಬೆಳೆಸಲು ಪ್ರಯತ್ನಿಸಿ. ಗಿಡ-ಮರ, ಪ್ರಾಣಿ-ಪಕ್ಷಿ, ಗುಡ್ಡ-ಬೆಟ್ಟ, ನೆಲ-ಜಲ, ಹೀಗೆ ವಿವಿಧ ಪ್ರಾಕೃತಿಕ ವಿಷಯಗಳೆಡೆಗೆ ಮಕ್ಕಳನ್ನು ಪರಿಚಯಿಸಿ. ಗ್ರಾಮೀಣ ಪ್ರದೇಶಗಳಲ್ಲಿದ್ದರೆಂತೂ ಮಕ್ಕಳಿಗೆ ಇವೆಲ್ಲದರೆಡೆಗೆ ಒಡನಾಟ ಸಿಗುವುದು ಖಂಡಿತಾ. ತೋಟ-ಗದ್ದೆ, ಕೈತೋಟ, ಹಿತ್ತಲು, ಅರಣ್ಯ ಪ್ರದೇಶ ಗಳಿಗೆ ಕರೆದೊಯ್ದು, ಮಕ್ಕಳಿಗೆ ಸಸ್ಯ ಸಂಕುಲಗಳ ಗುರುತಿಸುವಿಕೆ, ಬೆಳೆಸುವಿಕೆ, ಪೋಷಣೆ, ಅವುಗಳ ಮಹತ್ವ, ಬಳಕೆ, ದುರುಪಯೋಗಗಳು ಹೀಗೆ ಹತ್ತು ಹಲವು ವಿಚಾರಗಳನ್ನು ತಿಳಿಸಬಹುದು.

ಓದು ಬರಹ ಕೂಡ ಇರಲಿ

ಇಲ್ಲಿ ಓದು ಬರಹ ಎಂದರೆ ಪಠ್ಯ ಪುಸ್ತಕದ ಪಾಠವೇ ಆಗಬೇಕಿಲ್ಲ. ಮಕ್ಕಳಿಗೆ ರಜೆಯಲ್ಲಿ ಸಣ್ಣ ಪುಟ್ಟ ಕಥೆ ಪುಸ್ತಕಗಳನ್ನು ಓದಲು ಕೊಡುವುದು, ಹೆಚ್ಚಿನ ಆಸಕ್ತಿಯಿದ್ದರೆ ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳುವುದು, ಸಣ್ಣ ಪುಟ್ಟ ಪ್ರವಾಸ ಅಥವಾ ಮಗುವಿಗೆ ಸಂತೋಷ ನೀಡಿದ ವಿಷಯದ ಬಗ್ಗೆ ಒಂದು ನಾಲ್ಕು ಸಾಲುಗಳನ್ನು ದಿನವೂ ಬರೆಯಲು ಕೇಳಿದರೆ, ಸತಃ ಮಕ್ಕಳೇ ತಮ್ಮ ರಜೆಯನ್ನು ಇನ್ನೂ ಹೆಚ್ಚೆಚ್ಚು ಆಸಕ್ತಿದಾಯಕವಾಗಿ ಮಾಡಿಕೊಳ್ಳಲು ಮಾರ್ಗಗಳನ್ನು ಕಂಡುಹಿಡಿದು, ಸಂತೋಷವಾಗಿರಲು ಪ್ರಯತ್ನಿಸುತ್ತಾರೆ.

ಪ್ರಾಯೋಗಿಕ ಚಟುವಟಿಕೆಗಳು

ಟಿವಿ, ಮೊಬೈಲ್ ಗಳಿಂದ ಮಕ್ಕಳನ್ನು ದೂರವಿಡಬೇಕೆಂದಾದರೆ, ಮಕ್ಕಳಿಗೆ ಅವುಗಳನ್ನೆಲ್ಲ ಮೀರಿ ಬೇರೆ ಆಸಕ್ತಿದಾಯಕ ವಿಷಯಗಳಿವೆ ಎಂಬುದನ್ನು ನಾವು ತೋರಿಸಿಕೊಡಬೇಕಾಗುತ್ತದೆ. ಮನೆಯ ಹಿಂಬಾಗದಲ್ಲಿ ಸ್ವಲ್ಪ ಮಣ್ಣಿನ ಜಾಗ ದೊರೆತರೆ, ಮಕ್ಕಳಿಗೆ ಹೂವು ತರಕಾರಿಗಳ ಬೀಜಗಳನ್ನು ನೀಡಿ, ಬಿತ್ತಿ ಬೆಳೆಯುವ ಪೋಷಿಸುವ, ಅದರ ಬೆಳವಣಿಗೆಯ ಕುರಿತಾಗಿ ನಿಯಮಿತವಾಗಿ ಗಮನಿಸಿ ಆರೈಕೆ ಮಾಡುವ ವಿಷಯಗಳನ್ನು ತೋರಿಸಿಕೊಟ್ಟರೆ, ಮಕ್ಕಳಿಗೆ ಅದೊಂದು ಆಸಕ್ತಿದಾಯಕ ಚಟುವಟಿಕೆಯಾಗುತ್ತದೆ. ಅಂತೆಯೇ, ಮನೆಯಲ್ಲಿ ದೊಡ್ಡವರ ವ್ಯಾವಹಾರಿಕ ಉದ್ದಿಮೆಯಲ್ಲಿ, ಚಿಕ್ಕ ಪುಟ್ಟ ಮಕ್ಕಳೇ ಮಾಡಬಹುದಾದ ಸಣ್ಣ ಸಣ್ಣ ಜವಾಬ್ಧಾರಿಯುತ ಕೆಲಸಗಳನ್ನು ಅವರಿಗೆ ವಹಿಸಿದರೆ, ಮಕ್ಕಳ ಲೋಕಜ್ಞಾನ ಹೆಚ್ಚುವುದರ ಜೊತೆಗೆ, ಮಕ್ಕಳಿಗೆ ತಮಗೆ ಸಿಗುವ ಗೌರವ, ವಹಿಸಿರುವ ಜವಾಬ್ಧಾರಿ ಕೆಲಸಗಳನ್ನು ಮಾಡುವಲ್ಲಿ ಬದ್ಧರಾಗುತ್ತಾರೆ. ಮನೆಯಲ್ಲೇ ಮಾಡಬಹುದಾದ ವೈಜ್ಞಾನಿಕ ಪ್ರಯೋಗಗಳಿಗೆ ಮಕ್ಕಳ ಸಾಥ್ ಕೊಡಿ, ಉದಾಹರಣೆಗೆ, ನೀರಿನ ಶುದ್ಧೀಕರಣ ಘಟಕ ತಯಾರಿಕೆ, ಕಬ್ಬಿಣ-ಆಯಸ್ಕಾನ್ಥದ ಪ್ರಯೋಗಗಳು, ಸಣ್ಣ ಮೋಟಾರ್ ತಯಾರಿಕೆ ಹೀಗೆ ಮಕ್ಕಳು ತಮಗೆ ತೊಂದರೆ ಮಾಡಿಕೊಳ್ಳದೆ ಮಾಡುವಂತಹ ಪ್ರಯೋಗಗಳಿಗೆ ನಿಮ್ಮ ಬೆಂಬಲವಿರಲಿ.

ಮನೆಕೆಲಸ ನಮ್ಮ ಕೆಲಸವೇ :

ಇತರ ಶಾಲಾ ದಿನಗಳಲ್ಲಿ ಮಕ್ಕಳಿಗೆ ಇರುವ ಓದು-ಬರಹದ ಹೊರೆಯಲ್ಲಿ, ಅವರಿಗೆ ಹೊತ್ತಿಗೆ ಸರಿಯಾಗಿ ಊಟ ತಿಂಡಿ ಕೊಟ್ಟು ಶಾಲೆಗೆ ಕಳುಹಿಸುವುದೇ ಒಂದು ದೊಡ್ಡ ಪರಿ ಪಾಡಾಗಿರುತ್ತದೆ. ಹಾಗಾಗಿ ಮಕ್ಕಳಿಗೆ ರಜೆಯಲ್ಲಾದರೂ, ತಮ್ಮ ತಮ್ಮ ಖಾಸಗಿ ವಸ್ತುಗಳ ನಿರ್ವಹಣೆ, ಅಡುಗೆ ಮಾಡುವಾಗ ಅಮ್ಮನಿಗೆ ಸಹಾಯ ಮಾಡುವುದು, ಮನೆಯ ಸ್ವಚ್ಛತೆಯಲ್ಲಿ ಭಾಗಿಯಾಗುವುದು,  ಮನೆಯ ವಾಹನಗಳನ್ನು ಸ್ವಚ್ಛಗೊಳಿಸುವುದು, ಗಿಡಗಳಿಗೆ ನೀರುಣಿಸುವುದು, ಬಟ್ಟೆ ಮಡಚಿ ಎತ್ತಿಡುವುದು ಹೀಗೆ ಅನೇಕ ಸಣ್ಣ ಪುಟ್ಟ ಕೆಲಸಗಳನ್ನು ಹೆಣ್ಣುಮಕ್ಕಳು-ಗಂಡುಮಕ್ಕಳು ಎಂಬ ಬೇಧ-ಭಾವವಿಲ್ಲದೆ, ಮಕ್ಕಳು ಮಾಡಿದಾಗ ಅವರಿಗೆ ಚಿಕ್ಕ ಚಿಕ್ಕ ಬಹುಮಾನ ಅಥವಾ ಮೆಚ್ಚುಗೆ ಸೂಚಿಸುವುದರಿಂದ ಮಕ್ಕಳಿಗೆ ತಮ್ಮ ಮನೆಯವರ ಜೊತೆಯಲ್ಲಿ ಸಹಭಾಗಿತ್ವದ ಮಹತ್ವ ತಿಳಿಯಲು ಅವಕಾಶವಾಗುತ್ತದೆ.

ಕಸದಿಂದ ರಸ, ಪೋಷಕರು-ಮಕ್ಕಳು ನಿತ್ಯಕ್ಕಿಂತಲೂ ತುಸು ಹೆಚ್ಚಿನ ಸಮಯ ಕಳೆಯುವಿಕೆ, ಹೊಸ ಹೊಸ ಸ್ವಯಂ ರಕ್ಷಣಾ ವಿಧಾನಗಳ ಕಲಿಕೆ, ಓದು-ಸಾಹಿತ್ಯ, ಸಂಗೀತ, ನೃತ್ಯ, ಕರಕುಶಲ ವಸ್ತುಗಳ ತಯಾರಿಕೆ, ಈ ಹಿಂದೆ ನಮಗೆ ಸಹಾಯ ಮಾಡಿದವರನ್ನು/ ಆಪ್ತರನ್ನು ಕಂಡು ಭೇಟಿ ಮಾಡುವುದು ಹೀಗೆ ಹತ್ತು ಹಲವು ಉಪಯುಕ್ತವಾದ ಕೆಲಸಗಳನ್ನು, ನಮಗೆ ಸಾಧ್ಯವಾದಷ್ಟರ ಮಟ್ಟಿಗೆ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ನಾವು ಮಾಡಿದರೆ, ಮಕ್ಕಳ ಬೇಸಿಗೆ ರಜೆ ಯಶಸ್ವಿ ಗೊಳ್ಳುವುದರಲ್ಲಿ ಅನುಮಾನವಿಲ್ಲ.


ಶುಕ್ರವಾರ, ಮೇ 5, 2017

ಉಡುಗೊರೆ ನೀಡುವ ಮುನ್ನ

"ವಸಂತ ಮಾಸ ಬಂದಾಗ ಮಾವು ಚಿಗರಲೇ ಬೇಕು, ಕೋಗಿಲೆ ಹಾಡಲೇ ಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇ ಬೇಕು.... " ಎಂದು ನನಗರಿವಿಲ್ಲದಂತೆಯೇ ಹಾಡು ಗುನುಗುತ್ತಲಿತ್ತು ಕೈಯಲ್ಲಿದ್ಯಾವುದೋ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿ.. ಹೌದು! ಈಗೆಲ್ಲ ಮಂಗಳ ಕಾರ್ಯಗಳು ನಡೆಯುವ ಸಕಾಲ... ಆಮಂತ್ರಣ ಪಡೆದ ನಮಗೂ ಅತಿಥಿಗಳಾಗಿ ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವುದು, ತುಂಬಾ ಹತ್ತಿರದ ಕೌಟುಂಬಿಕ ಕಾರ್ಯಕ್ರಮಗಳಾಗಿದ್ದರೆ ಮನೆಯವರಾಗಿ ಅವುಗಳ ಸಡಗರ - ಸಂಭ್ರಮಗಳಲ್ಲಿ ಪಾಲ್ಗೊಳ್ಳುವುದು ಎಲ್ಲವೂ ನಡೆದೇ ಇರುತ್ತದೆ. ಇವೆಲ್ಲದರ ಜೊತೆಗೆ, ಕಾರ್ಯಕ್ರಮಗಳಲ್ಲಿ, ಉಡುಗೊರೆ ನೀಡುವುದು ಕೂಡ ನಮ್ಮಲ್ಲಿ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಯಾರ್ಯಾರಿಗೆ, ಯಾವ ಯಾವ ಕಾರ್ಯಕ್ರಮಗಳಿಗೆ, ಎಷ್ಟೆಷ್ಟು ಮೌಲ್ಯದ ಉಡುಗೊರೆ ನೀಡುವುದು,  ಒಟ್ಟಾರೆ  ಏನು ಉಡುಗೊರೆ ಕೊಡುವುದು ಎಂಬುದು ಸಾಮಾನ್ಯವಾಗಿ ನಮಲ್ಲಿ ಉಧ್ಭವವಾಗುವ, ಅನೇಕ ಸಲ ಗೊಂದಲ ಉಂಟುಮಾಡುವ ಪ್ರಶ್ನೆ. ಹೀಗೊಂದು ಚಿಕ್ಕ ಟಿಪ್ಪಣಿ, ಉಪಯುಕ್ತ ಉಡುಗೊರೆಗಳ ಕುರಿತು.

ಸಂದರ್ಭ ೧ : 
ಲತಾ ಒಂದು ಟೆಲಿಫೋನ್ ಆಫೀಸ್ ನಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ಮಹಿಳೆ. ಉನ್ನತ ಹುದ್ದೆಯಲ್ಲಿರುವ ಸಹೋದ್ಯೋಗಿಯ ಮಗನ ಮದುವೆಗೆ ಕರೆಯೋಲೆ ಸಿಕ್ಕಿದೆ. ಧಾಮ್ ಧೂಮ್ ಮದುವೆಯಂತೆ ಎಂಬ ಸುದ್ದಿ ಗಾಳಿಯಲ್ಲಿದೆ. ಚೆನ್ನಾಗಿ ಸಿಂಗಾರಗೊಂಡು ಹೋಗಬೇಕು, ಮದುವೆಗೆ ಉಡುಗೊರೆ ತೆಗೆದುಕೊಂಡು ಹೋಗಬೇಕು. ಸರ್ವೇಸಾಮಾನ್ಯ ಉಡುಗೊರೆ ಸರಿ ಹೊಂದೀತೇ? ಛೇ ಛೇ, ಏನಂದುಕೊಂಡಾರು ಸಹೋದ್ಯೋಗಿ! ನಮ್ಮ ಲೆವೆಲ್ ಅಲ್ಲ, ಅವರ ಸ್ಟೇಟಸ್ ಗೆ ತಕ್ಕಂತೆ ಉಡುಗೊರೆ ಮಾಡಲೇ ಬೇಕು, ಅನಿವಾರ್ಯ!

ಸಂದರ್ಭ ೨ :
ಗಣಪತಿ ರಾಯರು ಮುಂಚಿನಿಂದಲೂ ತಮ್ಮನ್ನು ತಾವೇ ಸಾಹಿತ್ಯ ಲೋಕದಲ್ಲಿ ತೊಡಗಿಸಿಕೊಂಡವರು. ಯಾವುದಾದರೂ ಮದುವೆ ಮುಂಜಿ ಇನ್ನಿತರ ಕಾರ್ಯಕ್ರಮಗಳಿದ್ದರೆ, ಯಾವುದಾದರೂ ತಮ್ಮ ಬಳಿ ಇರುವ ಪುಸ್ತಕವನ್ನೇ ಉಡುಗೊರೆಯಾಗಿ ನೀಡುವ ಅಭ್ಯಾಸ. ಹೊಸತಾಗಿ ಉಡುಗೊರೆ ಕೊಂಡು ತರುವ ಹವ್ಯಾಸವಿಟ್ಟುಕೊಳ್ಳುವುದಿಲ್ಲ.  

ಸಂದರ್ಭ ೩ : 
ಶೇಖರ್ ಮತ್ತು ಸರಳ, ತಮ್ಮ ದೂರ ಸಂಬಂಧಿಯ ಮಗನ ಮುಂಜಿಗೆ ಹೊರಡಲನುವಾಗಿದ್ದಾರೆ. ಉಡುಗೊರೆಯೊಂದು ಪ್ಯಾಕ್ ಮಾಡಿಕೊಳ್ಳಬೇಕು. ತಮ್ಮ ಹೊಸಮನೆಯ ಪ್ರವೇಶದ ಸಮಯದಲ್ಲಿ ಭರಪೂರ ಹರಿದು ಬಂದ ಉಡುಗೊರೆಗಳ ಭಂಡಾರವೇ ಇದೆಯಲ್ಲ, ಷೋ ಪೀಸ್ ಗಳು ಇವೆಯಲ್ಲ, ಯಾವದಾದರೊಂದು ಆಯ್ದುಕೊಂಡು ಗಿಫ್ಟ್ ಮಾಡಿದರಾಯಿತು ಎಂದು ಮಾತನಾಡಿಕೊಳ್ಳುತ್ತಾರೆ. 

ಸಂದರ್ಭ ೪ :
ವ್ಯಾಸಂಗದ ಸಮಯದಲ್ಲಿ ಅತ್ಯಂತ ನಿಕಟವಾದ ಸ್ನೇಹಿತನಾಗಿದ್ದ ನರೇಶ್ ಮನೆಯ ಪ್ರವೇಶವಿದೆ. ಕೋಟಿ ಬೆಲೆಬಾಳುವ ಮನೆಯದು. ಬಾಲು ಆರ್ಥಿಕವಾಗಿ ಹೆಚ್ಚು ಉಳ್ಳವನಲ್ಲ. ತನ್ನಸಾಮರ್ಥ್ಯಕ್ಕೆ ಸಾಧ್ಯವಾದಷ್ಟು ಕೊಡೋಣವೆಂದು ಯೋಚಿಸಿ ಹೊಸ ಬಟ್ಟೆಯ ಖರೀದಿಸಿ ಹೊರಡುತ್ತಾನೆ. ಆದರೆ ತಾನು ಕೊಡುವ ದರ್ಜೆಯ ಬಟ್ಟೆಯ ಪ್ರಯೋಜನ ಅವರು ಪಡೆಯುತ್ತಾರೆ ಎಂಬ ನೀರಿಕ್ಷೆಯಿಲ್ಲ.

  ಈ ಮೇಲಿನ ಸಂದರ್ಭಗಳನ್ನೆಲ್ಲ ನೋಡಿದಾಗ,  ನಾವು ಸಾಮಾನ್ಯವಾಗಿ ಉಡುಗೊರೆಯ ಆಯ್ಕೆಯಲ್ಲಿ ನಮ್ಮ ಮನೋಭಾವ, ನಮ್ಮ ಅನುಕೂಲ, ಪರರ ಅಂತಸ್ತಿಕೆ ಎಲ್ಲವನ್ನೂ ಗಮನದಲ್ಲಿರಿಸುತ್ತೇವೆ. ಆದರೆ ಉಡುಗೊರೆಯನ್ನು ಪಡೆಯುವ ವ್ಯಕ್ತಿಗೆ ಅದು ಎಷ್ಟರ ಮಟ್ಟಿಗೆ ಬಳಕೆಗೆ ಬರುತ್ತದೆ ಎಂಬುದನ್ನು ಗಮನಿಸುವ ಜನರು ಬೆರಳೆಣಿಕೆಯಷ್ಟೇ . ಸ್ವಲ್ಪ ಬುದ್ಧಿವಂತಿಕೆ ವಹಿಸಿದರೆ, ನಮ್ಮ ಕೊಳ್ಳುವ ಸಾಮರ್ಥ್ಯದ  ಮಿತಿಯಲ್ಲಿಯೇ, ಉಪಯುಕ್ತವಾದ ಉಡುಗೊರೆಯನ್ನು ನಾವು ನೀಡಬಹುದು.

ಮೊಟ್ಟ ಮೊದಲನೆಯದಾಗಿ, ಕಾರ್ಯಕ್ರಮ ನಡೆಸುತ್ತಿರುವವರು ಕುಟುಂಬದವರೇ ಆಗಿದ್ದರೆ ಅಥವಾ ನಿಮಗೆ ತೀರಾ ಹತ್ತಿರವಾದವರೆನಿಸಿದ್ದರೆ, ಸಂಕೋಚ-ಬಿಗುಮಾನವನ್ನು ಬದಿಗೊತ್ತಿ, ಅವರಿಗೆ ನಿಮ್ಮಿಂದ ಯಾವ ರೀತಿಯ ಸಹಾಯವಾಗಬಹುದು ಎಂಬುದನ್ನು ಸ್ಪಷ್ಟವಾಗಿ ವಿಚಾರಿಸಿಕೊಳ್ಳಿ. ಉಡುಗೊರೆ ಎಂಬುದು ಕೇವಲ ಥಳ-ಥಳಿಸುವ ಬಣ್ಣ ಬಣ್ಣದ ಹೊದಿಕೆಯಿಂದ ಕೂಡಿರುವಂತಹ ವಸ್ತುವಾಗಿರಬೇಕಾಗಿಲ್ಲ ಅಥವಾ ಅಂತಸ್ತಿಕೆಯ ಪ್ರದರ್ಶನವಾಬೇಕೆಂಬುದಿಲ್ಲ, ಬಳಕೆಗೆ ಯೋಗ್ಯವಾಗಿದ್ದರೆ ಅಷ್ಟೇ ಸಾಕು. ಉದಾಹರಣೆಗೆ, ಮದುವೆಯಾದ ಹೆಣ್ಣುಮಗಳು ತನ್ನ ತವರು ಮನೆಯ ಕಾರ್ಯಕ್ರಮದ ಪ್ರಯುಕ್ತವಾಗಿ ಉಡುಗೊರೆ ನೀಡುವ ಸಂದರ್ಭ, ಆ ಮನೆಗೆ ಅವಶ್ಯಕವಾದ ವಸ್ತುವಿನ ಬಗೆಗೆ ಅರಿವಿದ್ದು, ಅಂತಹ ವಸ್ತುಗಳನ್ನೇ ನೀಡುವುದರಿಂದ ಮನೆಯವರಿಗೂ ಹೆಚ್ಚಿನ ಲಾಭವಾಗುತ್ತದೆ. ಸಲಿಗೆಯಿಂದ ಇರುವ ವ್ಯಕ್ತಿಗಳ ಮನೆಯ ಕಾರ್ಯಕ್ರಮವಾದರೆಂತೂ, ನೀವು ಉಡುಗೊರೆ ನೀಡಲು ಸಾಧ್ಯವಾಗುವಷ್ಟು ಮೊತ್ತವನ್ನು ಕರಾರುವಕ್ಕಾಗಿ ತಿಳಿಸಿದರೆ, ಅದಕ್ಕೆ ತಕ್ಕದಾದ ತಮಗನುಕೂಲಕರವಾದ ಗ್ರಹೋಪಯೋಗಿ ವಸ್ತುಗಳು, ಅಥವಾ ಇನ್ನಿತರ ಪರಿಕರಗಳನ್ನು ತೆಗೆದುಕೊಳ್ಳಲೂ ಕೂಡ ಪ್ರಯೋಜನವೆನಿಸುತ್ತದೆ.

ಕೇವಲ ಉಡುಗೊರೆ ನೀಡಬೇಕು ಎಂಬ ಸಂಪ್ರದಾಯಕ್ಕೆ ಕಟ್ಟು ಬಿದ್ದು, ಯಾವುದೇ ಯೋಚನೆ ಇಲ್ಲದೇ, ಗಿಫ್ಟ್ ಸೆಂಟರ್ ಗಳಿಂದ ಉಡುಗೊರೆಯನ್ನು ಆಯ್ದುಕೊಳ್ಳಬೇಡಿ. ಉದಾಹರಣೆಗೆ, ಅಲಂಕಾರಿಕ ವಸ್ತುಗಳನ್ನು ಮನೆಗಳಲ್ಲಿ ಇಡುವ ಅಭ್ಯಾಸ ಇತ್ತೀಚಿಗೆ ಕಡಿಮೆಯಾಗಿದೆ. ಹೊಸ ಮನೆ ಪ್ರವೇಶ ಎಂದ ಕೂಡಲೇ, ಶೋ ಪೀಸ್ ಗಳು, ಗಡಿಯಾರ, ದೇವರ ಪಟಗಳು, ಫೋಟೋಫ್ರೇಮ್, ಅಡುಗೆ ಮನೆಯ ಪರಿಕರಗಳು, ಗಾಜಿನ ವಸ್ತುಗಳು, ಅಧ್ಯಾತ್ಮದ ಪುಸ್ತಕಗಳು ಇತ್ಯಾದಿ ನಮ್ಮ ಮನಸ್ಸಿಗೆ ಸೂಚಿಸುವುದು ಸಹಜ. ಆದರೆ ಎಲ್ಲರೂ ಸಾಮಾನ್ಯವಾಗಿ ಹೀಗೇ ಯೋಚಿಸುವುದರಿಂದ ಸಾಮಾಗ್ರಿಗಳ ಪುನರಾವರ್ತನೆಯಾಗಿ, ಪ್ರಯೋಜನಕ್ಕೆ ಬರದಂತಾಗುವ ಸಂಭವವಿರುತ್ತದೆ. ಅದರ ಬದಲು ನಿಮ್ಮಿಂದ ಸಾಧ್ಯವಾದರೆ, ಅನನ್ಯವಾಗಿರುವಂತಹ ಉಡುಗೊರೆಗಳು ಅಥವಾ ಯಾವ ಕಾಲಕ್ಕೂ ತನ್ನ ಸೊಬಗು ಮತ್ತು ಬಳಕೆಯ ಮೌಲ್ಯವನ್ನು ಕಳೆದುಕೊಳ್ಳದಂತಿರುವ ವಸ್ತುಗಳನ್ನು ನೀಡುವುದು ಸೂಕ್ತ.

ಸ್ನೇಹಿತರ ಮನೆಯ ಕಾರ್ಯಕ್ರಮಗಳಿಗೆ ಹೋಗುವುದಾದರೆ, ಪ್ರತಿಯೊಬ್ಬ ಸ್ನೇಹಿತನೂ ವೈಯುಕ್ತಿಕವಾಗಿ ತರಹೇವಾರಿ ಉಡುಗೊರೆ ನೀಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ಇದಕ್ಕೆ ಪರ್ಯಾಯವಾಗಿ, ಇತರ ಆತ್ಮೀಯ ಸ್ನೇಹಿತರೊಡಗೂಡಿ, ನಿಮ್ಮ ಕೈಲಾದಷ್ಟು ಉಡುಗೊರೆಯ ಹಣ ಒಟ್ಟು ಮಾಡಿ, ಒಂದು ಉತ್ತಮವಾದ ಹಾಗೂ ಹೆಚ್ಚಿನ ಬೆಲೆಯುಳ್ಳ ಸಮಾಗ್ರಿಯನ್ನೇ ಕೊಂಡುಕೊಳ್ಳಬಹುದು. ಉದಾಹರಣೆಗೆ, ಮದುವೆಯ ಸಂದರ್ಭವಿದ್ದರೆ , ಹೊಸ ಸಂಸಾರ ಹೂಡುವವರಿಗೆ ಬೇಕಾಗುವ ಗ್ರಹೋಪಯೋಗಿ ವಸ್ತುಗಳನ್ನು ಮುಂಚಿತವಾಗಿಯೇ ಚರ್ಚಿಸಿ, ಉಡುಗೊರೆಯ ರೂಪದಲ್ಲಿ ತೆಗೆಸಿ ಕೊಡಬಹುದು ಅಥವಾ ಸ್ನೇಹಿತರನ್ನು ಅವರಗತ್ಯತೆಯ ವಸ್ತುಗಳ ಪಟ್ಟಿಯಲ್ಲಿ ನೀವು ಯೋಚಸಿರುವಂತಹ ಮೌಲ್ಯದ ಉಡುಗೊರೆಯ ವಸ್ತುವನ್ನು ಆಯ್ದುಕೊಂಡು  ಕೊಡಿಸಬಹುದು ಉದಾಹರಣೆಗೆ ಹೊಸ ಮನೆಯ ವಸ್ತು ವಿನ್ಯಾಸಗಳಿಗೆ ಸಹಾಯವಾಗುವಂತಹ ವಸ್ತುಗಳು, ಅಗತ್ಯವಿರುವ ಪೀಠೋಪಕರಣಗಳು, ಫ್ಯಾನ್ಗಳು, ವಿದ್ಯುತ್ ಉಪಕರಣಗಳು, ಕಿಟಕಿಯ ಪರದೆಗಳು, ಹಾಸಿಗೆ-ಹೊದೆಯುವ ಚಾದರಗಳು ಹೀಗೆ ಹತ್ತು ಹಲವು ಬಗೆಯಲ್ಲಿ ನಾವು ಸ್ವಲ್ಪ ಯೋಚಿಸಿ ಕೊಡುವ ವಸ್ತುಗಳು, ಸ್ವೀಕರಿಸುವವರಿಗೆ ಅತ್ಯಂತ ಸಹಕಾರಿಯಾಗುತ್ತದೆ.

ಉಡುಗೊರೆಯ ವಿಷಯಕ್ಕೆ ಬಂದರೆ, ನಮ್ಮಿಂದ ವ್ಯವಸ್ಥೆ ಮಾಡಲಾಗುವಷ್ಟು ಮೌಲ್ಯದ ಹಣವನ್ನು ನೇರವಾಗಿ ನೀಡುವುದೂ ಕೂಡ ಒಂದು ರೀತಿಯಲ್ಲಿ ಒಳ್ಳೆಯದೇ.  ದುಡ್ಡು ಎಲ್ಲರಿಗೂ ಎಂದಿಗೂ ಸದ್ಬಳಕೆಗೆ ಬರುವಂತದ್ದು, ಕೆಲವೊಮ್ಮೆ ನಾವು ಪ್ರೀತಿಯಿಂದ ನೀಡಿದ ಭೌತಿಕ ವಸ್ತುಗಳಿಗಿಂತಲೂ ಹಣದ ರೂಪದಲ್ಲಿ ನೀಡಿದ ಉಡುಗೊರೆ, ಕೇವಲ ಸಂತೋಷವನ್ನಷ್ಟೇ ಅಲ್ಲ, ಇತರರ ಕಷ್ಟ-ಕಾರ್ಪಣ್ಯಗಳಿಗೂ, ಅವರ ಆರ್ಥಿಕ ಮುಕ್ಕಟ್ಟಿನ ಪರಿಸ್ಥಿತಿಯಲ್ಲಿ ಅತ್ಯಂತ ಸಹಾಯಕವಾಗುತ್ತದೆ. ಉದಾಹರಣೆಗೆ, ಮಗುವಿನ ನಾಮಕರಣ, ಚೌಲ (ಚೂಡಾ ಕರ್ಮಾ), ಬ್ರಹ್ಮೋಪದೇಶ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗುವುದಾದರೆ, ಹೆಚ್ಚೇನೂ ಉಪಯುಕ್ತವಾದ ಉಡುಗೊರೆ ಸೂಚಿಸದಿದ್ದಲ್ಲಿ, ನಿಮ್ಮ ಕೈಲಾದಷ್ಟು ಉಡುಗೊರೆಯನ್ನು ಹಣದ ರೂಪದಲ್ಲಿಯೇ ನೀಡಿರಿ. ಇದು ಭವಿಷ್ಯತ್ ಕಾಲದಲ್ಲಿ ಆ ಮಕ್ಕಳ  ವಿದ್ಯಾಭ್ಯಾಸಕ್ಕೆ, ಅರೋಗ್ಯಕ್ಕೆ ನಿಸ್ಸಂಶಯವಾಗಿ ಬಳಕೆಯಾಗುತ್ತದೆ.

ಪಟ್ಟಣ ಪ್ರದೇಶಗಳಲ್ಲಾದರೆ, ಅನೇಕ ಈ-ಕಾಮರ್ಸ್ ಮಾರಾಟ ಸಂಸ್ಥೆಗಳ ಗಿಫ್ಟ್ ವೌಚೆರ್ ಗಳು ಲಭ್ಯವಿರುತ್ತದೆ. ಅನೇಕ ಬ್ಯಾಂಕ್ ಗಳು, ಕ್ಯಾಶ್ ಕಾರ್ಡ್ ಎಂಬ ಮಾದರಿಯಲ್ಲಿ ನೀಡುವ ವ್ಯವಸ್ಥೆಯನ್ನು, ನಾವು ಇತರರಿಗೆ ದುಡ್ಡನ್ನು ಉಡುಗೊರೆಯಾಗಿ ನೀಡಲು ಉಪಯೋಗಿಸಿಕೊಳಬಹುದು. ಪ್ರವಾಸ ಕೈಗೊಳ್ಳುವವರಿಗೆ, ಪ್ರವಾಸದ ಪ್ಯಾಕೇಜ್ ಅನ್ನು ಉಡುಗೊರೆಯಾಗಿ ನೀಡಬಹುದು. ಪರಿಸರ ಪ್ರಿಯರಿಗೆ, ಟೆರ್ರೆಸ್ ಗಾರ್ಡೆನ್ ಮಾದರಿಯ ವ್ಯವಸ್ಥೆಯನ್ನೂ ಉಡುಗೊರೆಯಾಗಿ ನೀಡಬಹುದು. ವೈದ್ಯಕೀಯ ಸಂಸ್ಥೆಗಳಿಂದ ಅರೋಗ್ಯ ತಪಾಸಣೆ ಮತ್ತು ಇತರ ವೈದ್ಯಕೀಯ ಸೇವೆಗಳ ಕಾರ್ಡ್ ಕೂಡ ಉಡುಗೊರೆಯಾಗಿ ನೀಡಬಹುದು.

ಒಟ್ಟಿನಲ್ಲಿ ಕಾರ್ಯಕ್ರಮಗಳಲ್ಲಿ ಉಡುಗೊರೆಯ ರೂಪದಲ್ಲಿ ನಾವು ನೀಡುವ ಪ್ರೀತಿಯ ಆಶಯ, ಇತರರಿಗೆ ಉಪಯುಕ್ತವಾಗುವಂತಿರಬೇಕು ಮತ್ತು ನಮ್ಮ ಸ್ನೇಹಿತರು ಅದರ ಬಳಕೆಯಿಂದ ನಮ್ಮನ್ನು ನೆನೆಯುವಂತಾದರೆ ನಮ್ಮ ಉಡುಗೊರೆ ಸಾರ್ಥವಾದಂತೆ.