ಬುಧವಾರ, ಜೂನ್ 28, 2017

'ಸಾಗರ' ವೆಂಬ ಮೋಹ

ಎಂದಿನಂತೆ ಇಂದಿನ ದಿನಚರಿ ಪ್ರಾರಂಭವಾಗಿದೆ. ಮುಂಜಾವಿನ 5 ಗಂಟೆಯ ಚುಮು ಚುಮು ಚಳಿ, ಬೆಳಕಾಗುತ್ತಿದ್ದರೂ ಕಾಣದ ಸೂರ್ಯ, ಮಳೆಗಾಲದ ಮೋಡ. ನಮ್ಮ ಊರ ಕಡೆಯಂತಲ್ಲ ಬೆಂಗಳೂರಿನ ಮಳೆ. ಇಲ್ಲಿ ಹೇಗೆಂದರೆ "ದಿಸ್ ಇಸ್ ರೈನಿ ಸೀಸನ್" ಎಂಬ ಹೇಳಿಕೆಗೆ ಆಗೊಮ್ಮೆ ಈಗೊಮ್ಮೆ ಸುರಿವ ಮಳೆ ಮತ್ತದರ ನೆನಪಿಗೆ ಎರಡು ದಿನ ನಿಲ್ಲುವ ನೀರು. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸಿಗದಿರುವ ವಸ್ತುವಿಲ್ಲ. ಈ ಊರು ಬದುಕನ್ನು ಕಟ್ಟುಕೊಟ್ಟಿದೆ. ಭವಿಷ್ಯ ರೂಪಿಸಿಕೊಡುವ ಕೆಲಸ, ಪುಟ್ಟ ಮನೆ ಮತ್ತು ಸಂಸಾರ, ಮಗಳೆಂಬ ಶಕ್ತಿ, ಓಡಾಡಲು, ತಿನ್ನಲು, ಹಾರಾಡಲು, ವೀಕೆಂಡ್ ಮಸ್ತಿ, ನೆಂಟರಿಷ್ಟರು, ಸ್ನೇಹಿತರು ಎಲ್ಲವೂ, ಎಲ್ಲರೂ ಇದ್ದಾರೆ ನಿಜ. ಇಷ್ಟಾಗ್ಯೂ ಯಾರಾದರೂ ಮಾತಿಗೆ ಸಿಕ್ಕಿ, ಯಾವೂರು ನಿಮ್ಮದು ಎಂದು ಕೇಳಿದಾಗ ಮಾತ್ರ, "ನಮ್ಮೂರು ಸಾಗರ" ಎಂದು ಲೀಲಾಜಾಲವಾಗಿ ಉತ್ತರಿಸಿಯಾಗಿರುತ್ತದೆ ಮನ.
ಅಂಥದ್ದೇನಿದೆಯಪ್ಪಾ ಸಾಗರದಲ್ಲಿ ಇಲ್ಲಿ ಬೆಂಗಳೂರಿನಲ್ಲಿಲ್ಲದಿರುವುದು? ಎಂದು ನೀವು ಪ್ರಶ್ನಿಸಬಹುದು. ಖಂಡಿತವಾಗಿಯೂ ಪ್ರತಿಯೊಂದು ಪ್ರದೇಶವೂ ವಿಶಿಷ್ಟ ಮತ್ತು ವಿಭಿನ್ನ. ಆದರೂ ತುಲನೆ ಕೇವಲ ಭೌಗೋಳಿಕವಾಗಿ ಅಥವಾ ಭೌತಿಕವಾಗಿ ಅಲ್ಲ. ಈ ಹುಟ್ಟೂರು ಎನ್ನುವ ಮಾಯೆ ಮಾನಸಿಕವಾಗಿ ಮೂಡಿ ಬರುವಂತದ್ದು. ಮಳೆ ಬರುತ್ತಿಲ್ಲವೇ ಬೆಂಗಳೂರಿನಲ್ಲಿ? ಇದೆ. ಆದರೂ, ಅಪ್ಪಟ ಮಲೆನಾಡಿನ ಹಗಲು-ರಾತ್ರಿ ಧೋ ಎಂದು ಎಡೆಬಿಡದೆ ಸುರಿವ ಮಳೆಯ ಸದ್ದಿಗೆ ಮನ ಮುದಗೊಳ್ಳುವುದು ಸಾಗರದಲ್ಲಿಯೇ. ಈಗ ನೋಡಿ, ಬೆಂಗಳೂರಿನಲ್ಲಿ ಸಾಕಷ್ಟು ಅಪರೂಪದ ಹಣ್ಣುಗಲೆಲ್ಲವೂ ಸಿಗುತ್ತದೆ.ಮಾವು-ಹಲಸು ಮೇಳವೇ ನಡೆಯುತ್ತದೆ. ಆದರೂ ಊರಲ್ಲಿ ಹಿತ್ತಲ ಕಡೆ ಎಲ್ಲರೂ ಕೂತು, ಕೈಗೊಂದಷ್ಟು ಕೊಬ್ಬರಿ ಎಣ್ಣೆ ಮೆತ್ತಿಕೊಂಡು,ಹಲಸಿನ ಸೊಳೆಯನ್ನು ಬಿಡಿಸಿ, ಮಾವಿನಕಾಯಿ ಕಡಗಾಯಿ ಜೊತೆ ಹಚ್ಚಿಕೊಂಡು ಹರಟುತ್ತ ತಿನ್ನುವ ಮಜ ಇಲ್ಲಿ ಬರುವುದಿಲ್ಲ. ಒಂದು ಪಕ್ಷದಲ್ಲಿ, ಹಲಸಿನ ಕಂಬಳ ನಡೆಸೇ ಬಿಡೋಣ ಎಂದು ಪ್ರಯತ್ನಿಸಿ ಹಲಸು ತಂದು ಕೊಚ್ಚಿದರೂ, ಕಡೆಗೆ ಮೆಲಕು ಹಾಕುವುದು ಊರ ಕಡೆಯ ಸುದ್ದಿಯೇ . ನೇರಳೆ ಹಣ್ಣನ್ನು ಕೊಂಡು ತಂದು ತಿಂದದ್ದಾಯಿತು, ಬಾಯಿ ಚಪಲಕ್ಕೆ. ಆದರೆ ಎತ್ತರದ ನೇರಳೆ ಮರದಿಂದ ಬಡಚಿ, ಕೆಳಗೆ ಬಿದ್ದ ಹಣ್ಣನ್ನು ನಾ ಮುಂದೆ ತಾ ಮುಂದೆ ಎಂದು ಓಡಿ ಹೋಗಿ ಹೆಕ್ಕಿ ತಿಂದ ಮಜ ಸಿಗಲಿಲ್ಲ. ಮರ ಹತ್ತಿ ಸಳ್ಳೆ ಹಣ್ಣನ್ನು ತಿನ್ನುವ ಸುಖ, ಸಂಪಿಗೆ ಹಣ್ಣು, ಕೌಳಿ ಹಣ್ಣು, ಪರಿಗೆ ಹಣ್ಣು ಎಲ್ಲ ಹುಡುಕಿಕೊಂಡು ಗುಡ್ಡ ಸುತ್ತುವ ಸಂಭ್ರಮ ಎಲ್ಲ ಊರಲ್ಲೇ..ಪೇರಳೆ ಹಣ್ಣಿಗೆ ಉಪ್ಪು ಹಾಕಿ ಕಚ್ಚಿ ತಿನ್ನುವ ಸಮಯದಲ್ಲಿ ಮನದಲ್ಲಿ ಮೂಡಿದ ಚಿತ್ರಣಗಳೆಂದರೆ, ಮನೆಯ ಹಿತ್ತಲ ಪೇರಳೆ ಮರ ಮತ್ತದಕ್ಕೆ ಸಿಕ್ಕಿಸಿಕೊಂಡಿರುವ ದೋಟಿಕೋಲು, ಅಜ್ಜನ ಮನೆಯ ಚಂದ್ರ ಪೇರಳೆ ಹಣ್ಣಿಗೆ ನಾವು ಮೊಮ್ಮಕ್ಕಳು ಮಾಡಿಕೊಳ್ಳುತ್ತಿದ್ದ ಪಂಚಾಯ್ತಿ!
ಬೆಂಗಳೂರಿನಲ್ಲಿ ಒಳ್ಳೊಳ್ಳೆ ಸ್ನೇಹಿತರಿದ್ದಾರೆ,ತಿರುಗಾಟ-ತಿನ್ನುವುದು ಎಲ್ಲವೂ ಇರುತ್ತದೆ. ರುಚಿ ರುಚಿ ಫೇಮಸ್ ತಿಂಡಿ ಪಾಯಿಂಟ್ ಗಳನ್ನೂ ಹುಡುಕಿ ಹೋಗಿ ತಿನ್ನುವುದು, ಚ್ಯಾಟ್ಗಳದ್ದೆಂತು ಲೆಕ್ಕವೇ ಇಲ್ಲ ವಿ.ವಿ ಪುರಂ ನ ತಿಂಡಿ ಬೀದಿ, ಬ್ರಾಹ್ಮಣ ಕೆಫೆ ಕಾಫಿ..ಕಡೆಗೆ ಪಿಜ್ಜಾ-ಬರ್ಗರ್, ಟ್ಯಾಕೋ ಬೆಲ್, ಸಿಝ್ಲೆರ್ಸ್, ಇಟಾಲಿಯನ್ ಫುಡ್ ಏನೇನಿಲ್ಲ. ಆದರೂ ಸಾಗರದ ಪೋಸ್ಟ್ ಆಫೀಸ್ ಸರ್ಕಲ್ ಗೆ ಸಂಜೆ ಕಡೆ ಹೋಗಿ, ಒಂದು ರೌಂಡ್ ಮಸಲ್ ಪುರಿ, ಗೋಭಿ ಮಂಚೂರಿ ಗಾಡಿಗಳಿಗೆ ಭೇಟಿ ನೀಡಿ ಮನಸೋ ಇಚ್ಛೆ ತಿನ್ನುವುದೇ ಒಂದು ಸಂತೃಪ್ತಿ. ಕಾತ್ಯಾಯಿನಿ ಸೋಡಾ ಶಾಪಿನವನ ಮಸಾಲೆ ಮಂಡಕ್ಕಿ ಮತ್ತು ವಿವಿಧ ಬಗೆಯ ಸೋಡಾ ಕೂಡಿದೆ ಬರುವುದಾದರೂ ಎಂತು..!? ಊರ ಕಡೆಗಿನ ಯಾವುದಾದರೂ ಮದುವೆ ಮನೆಯ ಸೊಗಸಾದ ಬಾಳೆ ಎಲೆ ಊಟ ಸಿಕ್ಕಿಬಿಟ್ಟರೆಂತೂ ಕೇಳುವುದೇ ಬೇಡ.. ಕಟ್ಟನೆ ಕೆಂಪಿ ಸಾರು, ಅನಾನಸ್ ಕಾಯಿರಸ, ಮಜ್ಗೆಹುಳಿ, ಕಂಚಿಕಾಯಿ ಉಪ್ಪಿನಕಾಯಿ, ಜೀರಿಗೆ ಮಾವಿನ ಮಿಡಿ, ಶೇಂಗಾಬೀಜ ಜಾಸ್ತಿ ಬಿದ್ದಿರುವ ಮಾವಿನಕಾಯಿ ಚಿತ್ರಾನ್ನ, ಹಲಸಿನಕಾಯಿ ಹಪ್ಪಳ, ಇಂಗಿನ ಒಗ್ಗರಣೆಯ ನೀರುಗೊಜ್ಜು, ಖಾರ ಮೆಣಸ್ಸಾರು, ಅಕ್ಕಿ ಪಾಯ್ಸ, ಕೇಸರಿ...ಆಹಾ ಬಾರ್ಬೆಕ್ ನೇಷನ್ ಯಾವ ಲೆಕ್ಕ ಇದರ ಮುಂದೆ!
ಇನ್ನು ನಮ್ಮ ಲೇಡೀಸ್ ಸ್ಪೆಷಲ್, ಶಾಪ್ಪಿಂಗ್!! ಶಾಪಿಂಗ್ ಗಳಿಗೆಂತೂ ಬೆಂಗಳೂರಿನಲ್ಲಿ ಏನೇನೂ ಕೊರತೆಯಿಲ್ಲ. ಚಿಕ್ಪೇಟೆ, ಗಾಂಧಿ ಬಜಾರ್, ಜಯನಗರದಲ್ಲಿನ ರೋಡ್ ಸೈಡ್ ನ ಅಂಗಡಿಗಳಿಂದ ಹಿಡಿದು, ದೊಡ್ಡ ದೊಡ್ಡ ಮಾಲ್ ಗಳೆಲ್ಲವಕ್ಕೂ ಸುತ್ತು ಹೊಡೆಯುವುದೇ ನಮ್ಮ ಕಾಯಕ. ಇದಿಷ್ಟಲ್ಲದೆ ಆನ್ಲೈನ್ ಶಾಪಿಂಗ್ ಬೇರೆ...ಯಾವುದೋ ಒಂದು ಮ್ಯಾಚಿಂಗ್ ಕಿವಿಯೋಲೆಗಾಗಿ ಒಂದೊಂದು ಶಾಪಿಂಗ್ ಏರಿಯಾ ಸುತ್ತಿ ಸಿಗದೇ ವಾಪಸು ಬಂದದ್ದೂ ಇದೆ. ಆದ್ರೆ ಪರಮಾಶ್ಚರ್ಯವೆಂದರೆ, ಸಾಗರದಲ್ಲಿ ಪೇಟೆ ಕೆಲಸ ಮುಗ್ಸಿ ಬರುತ್ತೇನೆ ಎಂದು ಒಂದ್ ಸರ್ತಿ ಹಾರ್ಟ್ ಆ ದಿ ಸಿಟಿ - ಮಾರಿಗುಡಿ ಸರ್ಕಲ್ ಸುತ್ತಮುತ್ತಲೂ ಓಡಾಡಿ ಬಂದರೆ ಮುಗೀತು, ಬೇಕಾದ್ದೆಲ್ಲ ನನ್ನ ಬ್ಯಾಗಿನಲ್ಲಿ.. ಬೆಂಗಳೂರಿನಲ್ಲಿ ಇಷ್ಟು ಅಂಗಡಿಗಳಿದ್ದರೂ, ನನ್ನ ಕೂಸಿಗೆ ಒಳ್ಳೆ ಕಾಟನ್ ಬಟ್ಟೆ ಪಾಪು ಆಗಿದ್ದಾಗಿನಿಂದಲೂ ಸಿಕ್ಕಿದ್ದು ಸಾಗರದಲ್ಲಿಯೇ...
ಇದರ ಜೊತೆಗೆ, ಬೆಂಗಳೂರಿನಲ್ಲಿ ವ್ಯಾಪಾರಕ್ಕೆಂದು ನಡೆಸುವ ಫೇರ್ ಗಳಿಗೇನೂ ಕೊರತೆಯಿಲ್ಲ, ಆ ಡಿಸ್ಕೌಂಟ್ ಈ ಡಿಸ್ಕೌಂಟ್ ಎಂದು ಸಾವಿರ ಅಡ್ವರ್ಟೈಸೆಮೆಂಟ್ ಗಳು, ಅನೇಕ ಪ್ರಸಿದ್ಧ ಸ್ಥಳಗಳ, ಪ್ರಸಿದ್ಧ ವಸ್ತುಗಳೂ ಕೂಡ ಬಂದು ವಕ್ಕರಿಸಿ ನಮ್ಮ ಶಾಪಿಂಗ್ ಆಕರ್ಷಣೆಗೆ ಒಂದಷ್ಟು ಗಿಮಿಕ್ ಕೊಡುತ್ತೆ. ಏನೇ ಆದ್ರೂ, ಎಷ್ಟೇ ಓಡಾಡಿದ್ರೂ, ಊರಿನ ಜಾತ್ರೆಯ ಮುಂದೆ ಇವೆಲ್ಲ ನೆಲಸಮ. ಸಾಗರ ಜಾತ್ರೆ ಒಂದು ದಿನಕ್ಕೆಲ್ಲ ನೋಡಿ ಮುಗಿಸುವಂತದ್ದೇ ಅಲ್ಲ, ಇದ್ದಷ್ಟು ದಿನವೂ ದಿನನಿತ್ಯ ಓಡಾಡಲೇ ಬೇಕೆಂಬ ನಿಯಮ. ಸಾಗರ ಜಾತ್ರೆಯ ತೊಟ್ಟಿಲು, ಟೋರ-ಟೋರ, ಸರ್ಕಸ್, ನಾಟಕ ಕಂಪೆನಿಯ ನಾಟಕ, ಅಕ್ಕಿ ಹಪ್ಪಳ, ಬೆಂಡು ಬತ್ತಾಸು ಇವೆಲ್ಲ ಓಡಾಡ್ಕೊಂಡ್ ಬರೋದ್ರಲ್ಲಿ ಸಿಗೋ ಕಿಕ್ ಬಹುಶಃ ವನ್ದರ್ಲ್ಯಾ ದಲ್ಲೂ ಸಿಗಲಿಕ್ಕಿಲ್ಲ.
ಅಬ್ಬಾ! ಹೀಗೆ ಯೋಚಿಸುತ್ತ ಹೋದರೆ ಮುಗಿಯುವುದಿಲ್ಲ ಸಾಗರದ ಕಥೆ. ಇವೆಲ್ಲ ಏನೂ ಮಹಾ? ಹಲವು ವರ್ಷಗಳು ನಾವಿರುವ ಸ್ಥಳದ ಕುರಿತಾಗಿ ಖುಷಿ, ಸಂಭ್ರಮ ಹುಟ್ಟಿಕೊಳ್ಳುವುದು ಸಹಜ, ಸ್ವಲ್ಪ ದಿನ ಕಳೆದರೆ, ವಾಸ ಸ್ಥಳವಾಗಿರುವ ಬೆಂಗಳೂರು ಕೂಡ 'ನನ್ನೂರು' ಎಂದೆನಿಸಬಹುದು ಎಂದು ಗೆಳತಿಯೊಬ್ಬಳು ಹೇಳುತ್ತಿದ್ದಳು. ಆದರೆ ನನಗೆ ಹಾಗೆ ಅನ್ನಿಸುವುದಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನ ಬಗ್ಗೆ ಹೆಮ್ಮೆ ಇದೆ. ಏಕೆಂದರೆ ಬೆಂಗಳೂರು ಪ್ರತಿ ದಿನ, ಪ್ರತಿ ಸಣ್ಣ-ದೊಡ್ಡ ಕ್ಷೇತ್ರದಲ್ಲಿಯೂ ಮುಂದುವರೆಯುತ್ತಲೇ ಇದೆ. ಏನಿದೆ ಬೆಂಗಳೂರಿನಲ್ಲಿ ಎಂದು ಯಾರಾದರೂ ಕೇಳಿದರೆ, ಅವರ ಆಸಕ್ತಿಗನುಗುಣವಾಗಿ ಉದ್ದ ಪಟ್ಟಿಯನ್ನೇ ಮಾಡಿ ಕೊಡಬಹುದೇನೋ. ಆದರೂ, ಇಲ್ಲಿ ಕುಳಿತು, ಜಗತ್ಪ್ರಸಿದ್ಧ ಜೋಗ ಜಲಪಾತ ಮತ್ತು ಲಿಂಗನಮಕ್ಕಿ ಡ್ಯಾಮ್ ನ ಸುದ್ದಿ, ಎಲ್ಲವೂ ಟಿ.ವಿ ಯಲ್ಲಿ ನೋಡುವಾಗ, ಇತರರಿಗೆ ಹೇಳುವಾಗ ಏನೋ ಒಂದು ರೀತಿಯ ಜಂಬ ನನಗರಿವಿಲ್ಲದೆ ನನ್ನನ್ನು ಆವರಿಸುತ್ತದೆ, ಸಾಹಿತ್ಯ-ಸಂಸ್ಕೃತಿ ಯನ್ನು ಸಾಕಿ ಸಲಹಿದ ಊರು, ಅಪ್ಪಟ ಮಲೆನಾಡು. ನಾನು ಹುಟ್ಟಿದ, ಬಾಲ್ಯವನ್ನು ಕಳೆದ, ವಿದ್ಯಾಭ್ಯಾಸ ಮಾಡಿದ, ಸುಂದರ ಪ್ರಕೃತಿಯ ಸಹಜತೆಯನ್ನು ಹತ್ತಿರದಿಂದ ನೋಡಿ ಅನುಭವಿಸಿದ, ಎಲ್ಲಕ್ಕಿಂತ ಹೆಚ್ಚಾಗಿ ಜೀವನದ ವಿಧಾನವನ್ನು ಕಲಿತ, ಮನಸ್ಸನ್ನು ಸಂತೋಷವಾಗಿಡುವ ಊರು...ಎಂದಿಗೂ "ಸಾಗರವೇ ನನ್ನೂರು"