Saturday, October 7, 2017

ಕುಂದಾದ್ರಿ ಬೆಟ್ಟ ಹತ್ತಿದ್ರೇನ್ರೀ??

ಸಮುದ್ರ ಮಟ್ಟಕ್ಕಿಂತ ೨೭೧೦ ಫೀಟ್ ಎತ್ತರದ ಬೆಟ್ಟವೊಂದರ ತುದಿಯಲ್ಲಿ ನೀವು ನಿಂತಿದ್ದೀರಿ. ನಿಮ್ಮೆದುರು 270 ಡಿಗ್ರಿ ಕೋನದಷ್ಟು ವಿಸ್ತಾರವಾಗಿ ಕಾಣಸಿಗುತ್ತಿರುವ ಪ್ರಕೃತಿಯ ವಿಹಂಗಮ ನೋಟ. ಕಣ್ಣು ಹಾಯಿಸಿದಷ್ಟೂ ಕಾಣುತ್ತಿರುವುದು ಹಾಸು ಹೊಕ್ಕಾಗಿರುವ ಹಸಿರು. ಕೆಳಗೆ ನೋಡಿದರೆ ಈ ಭುವಿಯೇ ಸ್ವರ್ಗ  ಎಂದೆನಿಸುವಂತೆ ಅಲ್ಲಲ್ಲಿ ಮಳೆ ಬಿದ್ದು ತುಂಬಿಕೊಂಡ ಕಂದು-ಕೇಸರಿ ಬಣ್ಣದ ನೀರಿನ ಕೋಡಿಗಳು, ಹರಿಯುತ್ತಿರುವ ನೀಲ ನದಿ, ತನ್ನದೇ ಆದ ರೀತಿಯಲ್ಲಿ ರಂಗವಲ್ಲಿ ಹಾಕಿಕೊಂಡ ಗಿಳಿಹಸಿರು ಗದ್ದೆಗಳ ಸಾಲು, ವರ್ಣಮಯ ಊರು-ಕೇರಿ ಹೀಗೆ ಮುಗಿಯದ ನೋಟ...ಹಾಂ! ಈ ನೋಟ ಅರೆಗಳಿಗೆ ಮಾತ್ರ; ಮತ್ತೊಂದು ಕ್ಷಣಕ್ಕೆ, ಬೆಳ್ಳನೆಯ ಹತ್ತಿಯಂತಹ ಮೇಘಗಳ ಹಿಂಡಿಂಡು ಸಾಲುಗಳು ನಮ್ಮನ್ನೂ ಕೂಡ ಆವರಿಸಿ, ಮುಸುಕು ಮುಚ್ಚಿಬಿಡುವ ಇಬ್ಬನಿಯ ಸುಂದರ ದೃಶ್ಯದ ಅನಾವರಣ. ಮಂಜಿನ ತಂಪಿನಿಂದುಂಟಾದ ಚಳಿಯ ಜೊತೆಗೆ, ಆ ಕ್ಷಣಕ್ಕೆ ಅಲ್ಲಿ ನಿಂತು ಕಾಣುತ್ತಿರುವ ಸಹ್ಯಾದ್ರಿಯ ಮಡಿಲ ನೋಡಿ ನವಿರೇಳುತ್ತಾ ಹೋಗುತ್ತದೆ ನಮ್ಮ ಮೈ ಮನ. ಇನ್ನು ಅಲ್ಲಿಂದ ನಿಂತು ನೋಡಲು ಕಾಣಸಿಗುವ ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯದ ವರ್ಣನೆಗೆ ಶಬ್ಧಗಳು ಸಿಗುವುದೇ ಕಷ್ಟ - ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವ ಆ ಚೆಲುವನ್ನು 'ಬಂಗಾರವೇ' ಸರಿ, ಎಂದು ಸುಮ್ಮನೆ ಕಣ್ತುಂಬ ಹೀರಿಕೊಂಡು ಮೌನಕ್ಕೆ ಶರಣಾಗುವುದೇ ಒಳಿತು. ಇಷ್ಟೇ ಅಲ್ಲದೇ , ಅದೊಂದು ಪವಿತ್ರವಾದ ಪುಟ್ಟ ಜೈನ ಬಸದಿ ಇರುವ ಪುಣ್ಯ ಸ್ಥಳವೂ ಹೌದು. ಇಂತದ್ದೊಂದು ಮನಸ್ಸಿಗೆ ಚೈತನ್ಯವನ್ನೀಯುವ ಸ್ಥಳವೇ, ಕುಂದಾದ್ರಿ ಬೆಟ್ಟ.

 ಏಕ ಶಿಲಾ ಬೆಟ್ಟ - ಕುಂದಾದ್ರಿ 

"ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ ಹಸುರ್ಗಟ್ಟಿತೊ ಕವಿಯಾತ್ಮಮ್ ಹಸುರ್ನೆತ್ತರ್ ಒಡಲಿನಲಿ... " ಕವಿಯೊಬ್ಬನ ನರನಾಡಿಗಳಲ್ಲಿ ಹರಿವ ರಕ್ತದ ಬಣ್ಣವೂ ಹಸಿರು ಎಂದು ತಮ್ಮ ಕವಿತೆಯ ಸಾಲುಗಳಲ್ಲಿ ವರ್ಣಿಸಿದ ರಾಷ್ಟ್ರಕವಿ ಕುವೆಂಪು ರವರ ಊರು ಕುಪ್ಪಳ್ಳಿಯ ಸಮೀಪದಲ್ಲೇ ಇರುವ  ಈ ಕುಂದಾದ್ರಿ ಬೆಟ್ಟ, ಒಂದು ಏಕ ಶಿಲೆಯಲ್ಲಿ ರೂಪುಗೊಂಡು ಅದರ ಮೇಲೆ ಅಮೋಘ ಸಸ್ಯರಾಶಿಯ ಸಂಪನ್ನತೆಯನ್ನು ಹೊಂದಿದೆ.

ಸಹ್ಯಾದ್ರಿ ಶ್ರೇಣಿಯ ಅಪ್ಪಟ ಮಲೆನಾಡ ಊರುಗಳ ಬೆಲ್ಟಿನಲ್ಲಿ ತೀರ್ಥಹಳ್ಳಿಯೂ ಒಂದು ಪ್ರಮುಖವಾದ ಊರು. ಇಲ್ಲಿಂದ ಆಗುಂಬೆ ಕಡೆಗೆ ಹೋಗುವ ದಾರಿಯಲ್ಲಿ, ಸುಮಾರು ೩೨ ಕಿ.ಮೀ ದೂರದಲ್ಲಿದೆ ಈ ಕುಂದಾದ್ರಿ ಬೆಟ್ಟ.ಮಳೆಗಾಲದ ಸಮಯದಲ್ಲಂತೂ ಕುಂದಾದ್ರಿಗೆ ಪಯಣಿಸುವ ಹಾದಿಯೇ ಒಂದು ರೀತಿಯ ಹಬ್ಬ. ನೀರಿನಿಂದ ತೊಯ್ದ ಕಡುಗಪ್ಪು ಡಾಂಬರು ರಸ್ತೆ, ಮೈ ನಡುಗಿಸುವಷ್ಟು ತಂಪಾದ ಸ್ವಚ್ಛವಾದ ಗಾಳಿ, ದಟ್ಟ ಇಬ್ಬನಿಯ ನಡುವೆ ಹಾವಿನಂತೆ ಸರಸರನೆ ಮೂಡುವ ರಸ್ತೆ. ಹಾದಿಯ ಇಕ್ಕೆಲಗಳಲ್ಲೂ ಕಾಣಸಿಗುವ ಪುಟ್ಟ ಪುಟ್ಟ ಹಳ್ಳಿಗಳು, ಆಗಷ್ಟೇ ಬತ್ತದ ನೆಟ್ಟಿ ಮಾಡಿಸಿಕೊಂಡು ಮೈದುಂಬಿಕೊಂಡ ಗಿಳಿ ಹಸಿರು ಬಣ್ಣದ ಗದ್ದೆಗಳು, ತೋಟಗಳು, ಜೊತೆಯಲ್ಲೇ ಹರಿವ ಚಿಕ್ಕ ಚಿಕ್ಕ ನೀರಿನ ಕೋಡಿಗಳ ಜುಳು ಜುಳು ನಾದ, ಕಣ್ಣಿಗೆ ತಂಪನ್ನೀಯುವ ಸೊಂಪಾದ ಹಚ್ಚ ಹಸಿರು ಅರಣ್ಯ.

ದಶಕಗಳ ಹಿಂದಿನಿಂದಲೂ ಕಾಲುದಾರಿಯಷ್ಟೇ ಇದ್ದ ಈ ಬೃಹತ್ ಕುಂದಾದ್ರಿ ಬೆಟ್ಟಕ್ಕೆ ಸುಗಮ ಹಾದಿ ಸಿಕ್ಕಿದ್ದು ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಪವಿತ್ರವಾದ ಜೈನ ಬಸದಿಯ ಅಭಿವೃದ್ಧಿಗೆ ಮತ್ತು ಬೆಟ್ಟವನ್ನೇರಲು ಡಾಂಬರು ರಸ್ತೆಯ ಅನುಕೂಲತೆಗೆ ಸರ್ಕಾರದೊಂದಿಗೆ ಕೈಜೋಡಿಸಿ ಕೊಡುಗೆಯನ್ನೀಡಿದವರು ಮುಂಬೈ ಮೂಲದ ಲೋಕೋಪಕಾರಿ ಉದ್ಯಮಿಯೊಬ್ಬರು. ಕುಂದಾದ್ರಿಗೆ ಸಾರ್ವಜನಿಕ ವಾಹನದಲ್ಲಿ ಪಯಣಿಸುವುದಾದರೆ, ಸಾರಿಗೆ ಸೇವೆ ಕುಂದಾದ್ರಿಯ ಬುಡದಲ್ಲಿರುವ ಮಹಾದ್ವಾರದವರೆಗೆ ಮಾತ್ರ. ಖಾಸಗಿ ವಾಹನಗಳಲ್ಲಿ ಬೆಟ್ಟದ ಮೇಲ್ತುದಿಯವರೆಗೆ ಸಾಗಬಹುದು. ಈ ಕಠಿಣವಾದ ಬೆಟ್ಟವನ್ನು ಕಡಿದು ಮಾಡಿದ ಸುಮಾರು ೩ ಕಿ.ಮೀ ನಷ್ಟು ಉದ್ದದ ರಸ್ತೆ ಮಾತ್ರ ಅತ್ಯಂತ  ಕಿರಿದಾಗಿದ್ದು, ವಾಹನವನ್ನು ಚಲಾಯಿಸಲು ನುರಿತ ಚಾಲಕರೇ ಬೇಕು.  ಘಾಟಿ ಹಾದಿಯನ್ನು ಏರುವಾಗ ಕೇಳಿಸುವ ಹಕ್ಕಿಯ ಕಲರವ, ಮಳೆಗಾಲದ ವಟರು ಕಪ್ಪೆಗಳ, ಜೀರುಂಡೆಗಳ, ಮಳೆಜಿರಳೆಗಳ ಲಯಬದ್ಧವಾಗಿ ಕೇಳಿಸುವ ಚೀತ್ಕಾರಗಳು ನಗರದ ಯಾಂತ್ರಿಕ ಬದುಕಿನ ಜಂಜಾಟದಿಂದ ಬೇಸತ್ತವರಿಗೆ, ಚಾರಣದ ಮಜವನ್ನನುಭವಿಸುವವರಿಗೆ, ಪ್ರಕೃತಿಯ ಬೆನ್ನಿಡಿದು ಛಾಯಾಗ್ರಹಣ ಮಾಡುವವರಿಗೆ ಸಿಗುವ ಒಂದು ಚೇತೋಹಾರಿ ಅನುಭವ.

ಕುಂದಾದ್ರಿ - ಸ್ಥಳದ ವಿಶೇಷತೆ

ಜೈನರ ಪವಿತ್ರ ಸ್ಥಳವಾದ ಈ ಕುಂದಾದ್ರಿ ಬೆಟ್ಟದಲ್ಲಿ ೧೭ ಶತಮಾನದಲ್ಲಿ ನಿರ್ಮಿತವಾದ ಪಾರ್ಶ್ವನಾಥ ಚೈತ್ಯಾಲಯವಿದೆ. ಕುಂದ ಕುಂದ ಜೈನಸನ್ಯಾಸಿಯೋರ್ವರು ತಪಸ್ಸು ಮಾಡಲಾಯ್ದುಕೊಂಡ ಸ್ಥಳ ಇದಾಗಿದ್ದರಿಂದ, ಅವರದೇ ಹೆಸರಿನಿಂದ ಈ ಬೆಟ್ಟ ನಾಮಾಕಿಂತವಾಗಿದೆ. ಇಲ್ಲಿ ನಿರ್ಮಿತವಾದ ಜೈನ ದೇವಾಲಯವು ಪುಟ್ಟದಾಗಿದ್ದರೂ, ಆಕರ್ಷಣೀಯವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ವರ್ಷಪೂರ್ತಿ ಆಗಮಿಸುವುದರಿಂದ, ಬೆಟ್ಟದ ತುತ್ತತುದಿಯಲ್ಲಿರುವ ಈ ವೀಕ್ಷಣಾ ಸ್ಥಳವನ್ನು ಕಬ್ಬಿಣದ ಬೇಲಿಗಳಿಂದ ಸುತ್ತುವರೆಸಿ ಸುರಕ್ಷತೆಯ ಮುತುವರ್ಜಿ ವಹಿಸಲಾಗಿದೆ. ಜೈನ ಮಂದಿರದ ಆವರಣದಲ್ಲಿ ಎರಡು ಸಣ್ಣ ಕೊಳಗಳಿದ್ದರೂ, ಆಹಾರ ಪೂರೈಕೆಗೆ ಇಲ್ಲಿ ಯಾವ ಸೌಲಭ್ಯವೂ ಇಲ್ಲದಿರುವುದು, ಈ ಸ್ಥಳವಿನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಲಿನಗೊಂಡಿಲ್ಲದಿರುವುದಕ್ಕೆ ಕಾರಣ.

ಕುಂದಾದ್ರಿ ಬೆಟ್ಟದಿಂದ ಕಣ್ಣು ಹಾಯಿಸಿದಲ್ಲಿಯವರೆಗೆ, ಸಹ್ಯಾದ್ರಿ ಬೆಟ್ಟಗಳ ಕಡುಹಸಿರು ಸಾಲು, ತೋಟ ಹೊಲ ಗದ್ದೆಗಳು, ಸುಂದರವಾಗಿ ಕಾಣುವ ವಾರಾಹಿ ಆಣೆಕಟ್ಟು, ತೀರ್ಥಹಳ್ಳಿಯ ಸುತ್ತಮುತ್ತಲಿನ ಪ್ರದೇಶದ ವೈವಿಧ್ಯಮಯ ವರ್ಣಗಳು, ನೀರಿನ ಒಡಲು, ರಂಗೇರುವ ಸೂರ್ಯಾಸ್ತ, ಮನಸೂರೆಗೊಳ್ಳುವ ಸೂರ್ಯೋದಯ, ಇಬ್ಬನಿ, ಮೋಡ, ಮುಂಗಾರಿನ ಮಳೆ ಹೀಗೆ ಈ ಕುಂದಾದ್ರಿ ಬೆಟ್ಟ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ, ತನ್ನಷ್ಟಕ್ಕೆ ತಾನೇ ಒಂದು ಅದ್ಭುತವಾಗಿ ಮಲೆನಾಡಿನ ಮಡಿಲಲ್ಲಿ ವಿರಾಜಿಸುತ್ತದೆ.

ಇಂತಹ ಒಂದು ಪ್ರಕೃತಿಯನ್ನು ಮೈಮನಸ್ಸಿನಾಳಕ್ಕೆ ತುಂಬಿಕೊಳ್ಳಬೇಕೆಂದರೆ, ಕುಂದಾದ್ರಿಗೆ ಭೇಟಿ ನೀಡಬಹುದಾದ ಸೂಕ್ತ ಸಮಯವೆಂದರೆ ಮಳೆಗಾಲ ಅಥವಾ ಮಳೆಗಾಲ ಮುಗಿಯುವ ಕಾಲ. ಅತ್ಯಂತ ಶೀತಗಾಳಿ ಬೀಸುವುದರಿಂದ ಮಕ್ಕಳಿಗೆ ಬೆಚ್ಚಗಿರಿಸಲು ಹೆಚ್ಚಿನ ಧಿರಿಸು ತೆಗೆದುಕೊಂಡು ಹೋಗಲು ಮರೆಯಬೇಡಿ.No comments:

Post a Comment