ಸೋಮವಾರ, ಫೆಬ್ರವರಿ 12, 2018

ಮಕ್ಕಳನ್ನು ದಂಡಿಸದಿರಿ

ಸರಿಯಾದ ಕ್ರಮದಲ್ಲಿ ಕುಳಿತು ಅಭ್ಯಾಸ ಮಾಡು' ಎಂದು ತಾಕೀತು ಮಾಡಿ ಶಿಕ್ಷೆ ನೀಡಿದ ತಾಯಿಯ ಮೇಲೆ ಕೋಪಗೊಂಡು ಹದಿನಾರು ವರ್ಷದ ಬಾಲಕನೊಬ್ಬ ಅಮ್ಮ ಕೊಡಿಸಿದ ಬ್ಯಾಟಿನಿಂದಲೇ ತಾಯಿಯನ್ನು ಹೊಡೆದು ಸಾಯಿಸಿದ ದಾರುಣ ಘಟನೆ ಉತ್ತರ ಪ್ರದೇಶದ ನೋಯಿಡಾ ದಿಂದ ವರದಿಯಾಗಿದೆ. ಕೀಳರಿಮೆ ಹಾಗೂ ಮತ್ಸರದಿಂದ ಹನ್ನೆರಡು ವರ್ಷದ ತನ್ನ ತಂಗಿಯನ್ನೂ ಜೊತೆಯಲ್ಲಿಯೇ ಕೊಂದಿದ್ದಾನೆ.

ಘಟನೆಯ ವಿವರಣೆಯ ಹೀಗಿದೆ -  ನೋಯಿಡಾದ ಪ್ಲಾಟ್ ಒಂದರಲ್ಲಿ ಮಗ ಹಾಗೂ ಮಗಳಿನೊಂದಿಗೆ ತಂದೆ ತಾಯಿ ವಾಸವಿದ್ದಾರೆ. ಮಗನಿಗೆ ಓದಿನಲ್ಲಿ ಆಸಕ್ತಿ ಇಲ್ಲ. ಪರಿಣಾಮವಾಗಿ ಶೆಕ್ಷಣಿಕ ಪ್ರಗತಿ ಕಡಿಮೆ. ಮಗಳು ಓದಿನಲ್ಲಿ ಜಾಣೆ. ಪರಿಣಾಮ ಮನೆಯಲ್ಲಿ ಮಗಳಿಗೆ ಹೆಚ್ಚು ಪ್ರೀತಿ ಸಿಗುತ್ತಿದೆ. ತಂಗಿಯ ಪ್ರಗತಿಗೆ ಹೋಲಿಕೆ ಮಾಡಿ ಮಗನಿಗೆ ಯಾವಾಗಲೂ ನಿಂದನೆ, ಬೈಗುಳ. ಈ ಘಟನೆ ನಡೆದ ದಿನ ರಾತ್ರಿ ಊಟಕ್ಕೂ ಮೊದಲು ಮಗ ಅನಿಲ್ (ಹೆಸರು ಬದಲಾಯಿಸಲಾಗಿದೆ) ಸೋಫಾದ ಮೇಲೆ ಕುಳಿತು ಟೀವಿ ನೋಡುತ್ತಾ ಅಭ್ಯಾಸ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ತಾಯಿ ಕೊಠಡಿಗೆ ಹೋಗಿ, ಓದಿಕೊಳ್ಳುವಂತೆ ಮಗನಿಗೆ ತಾಕೀತು ಮಾಡಿದ್ದಾಳೆ. ಆದರೆ ಮಗ ತಾಯಿಯ ಮಾತನ್ನು ಕೇಳದೆ ಸೋಫಾ ಮೇಲೆ ಕುಳಿತು ಟಿವಿ ನೋಡುವುದನ್ನು ಮುಂದುವರೆಸಿಯೇ ಇದ್ದ. ಇದರಿಂದ ಕೋಪಗೊಂಡ ತಾಯಿ ಮಗನಿಗೆ ನಾಲ್ಕು ಏಟು ಕೊಟ್ಟು ಕೊಠಡಿಗೆ ಹೋಗಿ ಓದಿಕೊಳ್ಳುವಂತೆ ಮತ್ತೊಮ್ಮೆ ಎಚ್ಚರಿಸಿದ್ದಾಳೆ. ತಾಯಿಯ ಈ ಕ್ರಮಕ್ಕೂ ಮಗ ಬಗ್ಗದಿದ್ದಾಗ ಇನ್ನೊಂದು ನಾಲ್ಕು ಬಾರಿಸಿ ಮಗನಿಗೆ ಕುಳಿತೇಳುವ  ಶಿಕ್ಷೆ ನೀಡಿದ್ದಾಳೆ. ಸ್ವಲ್ಪ ಸಮಯದ ನಂತರ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ರಾತ್ರೆ ಹತ್ತು ಗಂಟೆಯ ನಂತರ ಅಮ್ಮ ಮತ್ತು ತಂಗಿಯವರು ಕೊಠಡಿಯಲ್ಲಿ ಮಲಗಿದ್ದಾಗ ಅನಿಲ್ ಬ್ಯಾಟ್ ಮತ್ತು ಪಿಜ್ಜಾ ಕಟರ್ ನೊಂದಿಗೆ ಅವರ ಕೊಠಡಿ ಪ್ರವೇಶಿಸಿ ಹಲ್ಲೆ ಮಾಡಿದ್ದಲ್ಲದೆ, ಇಬ್ಬರನ್ನೂ ಕೊಂಡು ಮನೆಯಿಂದ ಪರಾರಿಯಾಗದ್ದಾನೆ. ನಾಲ್ಕು ದಿನಗಳವರೆಗೆ ಊರೂರು ಸುತ್ತಿ, ನಂತರ ವಾರಣಾಸಿಗೆ ಬಂದು ಅಲ್ಲಿಂದ ತಂದೆಗೆ ಫೋನ್ ಮಾಡಿದ್ದಾನೆ. ಫೋನ್ ಲೊಕೇಶನನ್ನು ಆಧಾರಿಸಿ ಪೊಲೀಸರು ಆತನನ್ನು ನೋಯಿಡಾಕ್ಕೆ ಕರೆತಂದಿದ್ದಾರೆ. ಕೋಪದಲ್ಲಿ ತಾನೇ ತಾಯಿ ಹಾಗೂ ತಂಗಿಯನ್ನು ಕೊಂಡು ಹಾಕಿದ್ದೇನೆಂದು ಅನಿಲ್ ಒಪ್ಪಿಕೊಂಡಿದ್ದಾನೆ. 

ಮೊದಲಿನಿಂದಲೂ ಓದಿನಲ್ಲಿ ಹಿಂದಕ್ಕುಳಿಯುತ್ತಿದ ಅನಿಲ್, ಶಾಲೆಯಲ್ಲಿ ಇತರ ವಿದ್ಯಾರ್ಥಿಗಳ ಜೊತೆ ಜಗಳ, ಹಿಂಸಾ ಪ್ರವೃತ್ತಿಬೆಳೆಸಿಕೊಂಡಿದ್ದ. ಮಗನ ವರ್ತನೆಯಿಂದ ಪಾಲಕರು ಕೂಡ ವಿಪರೀತ ಬೇಸತ್ತಿದ್ದರು. ಮನೆಯಲ್ಲಿ ಬೈದು ತಿದ್ದಿ ಬುದ್ದಿ ಹೇಳಲು ಪ್ರಯತ್ನಿಸುತ್ತಲೇ ಇದ್ದರು. ಶಿಕ್ಷೆ ಬುದ್ಧಿ ಮಾತಿನಿಂದ ಏನೂ ಪ್ರಯೋಜನವಾಗುತ್ತಿಲ್ಲ ಎಂದು ತಿಳಿದ ಮೇಲೆ ಮನೆ ಹತ್ತಿರದ ಜ್ಯೋತಿಷಿಯೊ ಬ್ಬರ ಸಲಹೆಯಂತೆ ಮಗನ ಹೆಸರನ್ನೂ ಬದಲಾಯಿಸಿದ್ದರು. ಶಾಲಾ ದಾಖಲೆಗಳಲ್ಲಿ ಹೆಸರು ಬದಲಾಯಿಸಲು ಶಾಲೆಯವರು ಒಪ್ಪಿರಲಿಲ್ಲ. ಇವೆಲ್ಲವೂ ಅವನಲ್ಲಿ ತನ್ನ ಕುಟುಂಬದವರೆಡೆಗೆ ದ್ವೇಷವನ್ನು ಒಟ್ಟುಗೂಡಿಸುತ್ತಲೇ ಇತ್ತು.

ಶೈಕ್ಷಣಿಕವಾಗಿ ಹಿಂದುಳಿದಿವುರುವ ಮಕ್ಕಳು ಅತ್ಯಂತ ದುರ್ದೈವಿಗಳು.ಮೊದಲನೆಯದಾಗಿ ಅವರು ಮನೆ ಮತ್ತು ಶಾಲೆಯಲ್ಲಿ ಸಿಗುವ ಪ್ರೀತಿಯಿಂದ ವಂಚಿತರಾಗುತ್ತಾರೆ. ಶಿಕ್ಷೆ ನಿಂದನೆಗಳಿಂದ ಕುಗ್ಗಿ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಬೈಗುಳ, ಅವಮಾನವೇ ಅವರ ವ್ಯಕ್ತಿತ್ವವನ್ನು ಕೊಲ್ಲುತ್ತಿರುತ್ತದೆ. ಅವರು ಶಿಕ್ಷಕರು ಹಾಗೂ ಪಾಲಕರನ್ನು ಸಹಜವಾಗಿಯೇ ದ್ವೇಷಿಸಲು ಪ್ರಾರಂಭಿಸುತ್ತಾರೆ. ದುರದೃಷ್ಟವಶಾತ್ ಕಲಿಕೆಯನ್ನೂ ಸಹ. ಕೆಲವು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಡಲು ಇದೇ  ಮುಖ್ಯ ಕಾರಣವಾಗುತ್ತದೆ. ಹಾಗಾದರೆ ಕಲಿಕೆಯಲ್ಲಿ ಹಿಂದಕ್ಕುಳಿಯುವ ಮಕ್ಕಳ ಸಮಸ್ಯೆಗಳೇನು? ವಾಸ್ತವಿಕವಾಗಿ ಎಲ್ಲಿ ತಪ್ಪಾಗುತ್ತಿದೆ?

ಕಲಿಕೆಯಲ್ಲಿ ಮಕ್ಕಳು ಹಿಂದುಳಿಯಲು ಹಲವಾರು ಕಾರಣಗಳಿವೆ. ಮನೆಯಲ್ಲಿ ಮಕ್ಕಳನ್ನು ಬೆಳೆಸುವುದು (parenting) ದೋಷಪೂರಿತವಾಗಿರುವುದು ಪ್ರಧಾನ ಕಾರಣವಾಗಿರುತ್ತದೆ. ಮಕ್ಕಳನ್ನು ಅತಿಯಾದ ಶಿಸ್ತಿನಿಂದ ಬೆಳೆಸಲು ಪ್ರಯತ್ನಿಸುವುದು ಅಥವಾ ಅತೀ ಪ್ರೀತಿಯಿಂದ ಸ್ವೇಚ್ಛಾರೀತಿಯಲ್ಲಿರಲು ಬಿಡುವುದು  - ಈ ಎರಡೂ ಕ್ರಮ ಸರಿಯಲ್ಲ. ಕೆಲವು ಕುಟುಂಬಗಳಲ್ಲಿ ಮಕ್ಕಳಲ್ಲಿ ಲಿಂಗ ತಾರತಮ್ಯತೆ ಅನುಸರಿಸುತ್ತಾರೆ. ಹೋಲಿಕೆ ಮಾಡುತ್ತಾರೆ.  ಶಿಕ್ಷಣ ಎಂಬುದು ಮನಸ್ಸಿಗೆ ಸಂಬಂಧಿಸಿದ ವಿಚಾರ. ಕಲಿಕೆಯ ಬಗ್ಗೆ ಮಕ್ಕಳಿಗೆ ಆಸಕ್ತಿ ಬರಬೇಕು. ಆಸಕ್ತಿ ಮೂಡಿಸುವ ಪ್ರಯತ್ನ ಮನೆಯಲ್ಲಿ ಆಗದಿದ್ದರೆ ಮಕ್ಕಳು ಕಲಿಕೆಯನ್ನು ಇಷ್ಟಪಡದೆ ತನಗೆ ಸಂತೋಷ ಕೊಡುವ ಟಿ.ವಿ ಮೊದಲಾದವುಗಳಲ್ಲಿಹೆಚ್ಚಿನ ಸಮಯ ಕಳೆಯಲು ಇಚ್ಛಿಸುತ್ತಾರೆ. ಇನ್ನು, ಎಲ್ಲ ಮಕ್ಕಳ ಬುದ್ಧಿಮತ್ತೆ (IQ) ಒಂದೇ ರೀತಿ ಇರುವುದಿಲ್ಲ. ಬುದ್ದಿ ಮತ್ತೆ ಕಡಿಮೆ ಇರುವ ಮಕ್ಕಳಿಗೆ ಅರ್ಥೈಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ.ಇದನ್ನು ಅರ್ಥಮಾಡಿಕೊಳ್ಳದೆ ಬೇರೆಯವರಂತೆ ನೀನೂ ಕಲಿಯಬೇಕು ಎಂಬ ಒತ್ತಡ ಮಕ್ಕಳನ್ನು ಇನ್ನಷ್ಟು ಆತಂಕಕ್ಕೀಡು ಮಾಡುತ್ತದೆ. ಅನಾರೋಗ್ಯದ ಸಮಸ್ಯೆಗಳಾದ ಉಸಿರಾಟದ ಸಮಸ್ಯೆ , ರಕ್ತ ಹೀನತೆ, ಅಂಟು ಜಾಡ್ಯ ಖಾಯಿಲೆ ಮೊದಲಾದ ತೊಂದರೆಗಳು ಖಂಡಿತವಾಗ್ಯೂ ಕಲಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದರೆ ಮಕ್ಕಳು ನಾಚಿಕೆ ಮತ್ತು ಹಿಂಜರಿಕೆಯಿಂದ ಮನೆಯಲ್ಲಿ ಪಾಲಕರಿಗೆ ತಿಳಿಸದೇ ಇರುವ ಪ್ರಕರಣಗಳು ಸಾಕಷ್ಟು ಇರುತ್ತವೆ. ಇಂತಹ ಪ್ರಕರಣಗಳಿಂದಾಗಿ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದಲ್ಲದೆ ಮಕ್ಕಳ ಕಲಿಕಾ ಸಾಧನೆಯು ಸ್ಪರ್ಧಾತ್ಮಕವಾಗಿರಬೇಕೆಂದು ಅತೀವ ಒತ್ತಡವನ್ನು ಹೇರಿದರೆ, ಪಾಲಕರ ಇಚ್ಛೆ ಪೂರೈಕೆಯಾಗುವುದೋ ಇಲ್ಲವೋ ಎಂಬ ಆತಂಕದಲ್ಲಿ ಮಕ್ಕಳಿದ್ದರೆ, ಆತಂಕದ ಮನಸ್ಥಿತಿ ಕಲಿಕೆಯ ವೇಗವನ್ನು ತಗ್ಗಿಸುತ್ತದೆ. ಮನೆಯಿಂದ ಹೊರಗೆ ಮಕ್ಕಳಿಗೆ ದೊರೆಯುವ ಸ್ನೇಹಿತರೂ ಕೂಡ ಅಷ್ಟೇ ಮುಖ್ಯ. ಕೆಟ್ಟ ನಡವಳಿಕೆಯ ಸ್ನೇಹಿತರು ದೊರಕಿದರೆ ಮಕ್ಕಳು ಅವರನ್ನೇ ಅನುಸರಿಸುತ್ತಾರೆ. ಕೆಟ್ಟ ನಡವಳಿಕೆಗೆ ಒಮ್ಮೆ ಒಗ್ಗಿ ಹೋದರೆ, ಇಂತಹ ಮಕ್ಕಳು ಪಾಲಕರಿಗೆ ಮತ್ತು ಶಿಕ್ಷಕರಿಗೆ ವಿಧೇಯರಾಗಿರುವುದಿಲ್ಲ, ಹಠದ ಸ್ವಭಾವವನ್ನು ಬೆಳೆಸಿಕೊಂಡು ಕಲಿಕೆಯ ಬಗ್ಗೆ ನಿರಾಸಕ್ತಿ ಹೊಂದುತ್ತಾರೆ.

ಕೆಲವು ಪಾಲಕರು ತಮ್ಮ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯಲು ಸ್ವತಃ ಮಕ್ಕಳೇ ಕಾರಣ, ಸೋಮಾರಿತನವನ್ನು ಮೈಗೂಡಿಸಿಕೊಂಡು ಕಲಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಭಾವಿಸಿ ಬೈದು ಬುದ್ದಿ ಹೇಳಿ ಶಿಕ್ಷಿಸಿ ಹೋಲಿಕೆ ಮಾಡಿ ಅವರನ್ನು ಸರಿದಾರಿಗೆ ತರಲು ಮುಂದಾಗುತ್ತಾರೆ. ಅವರ ಉದ್ದೇಶ ಒಳ್ಳೆಯದಿರಬಹುದು ಆದರೆ ಪರಿಣಾಮ ಪರಿಸ್ಥಿತಿ ಇನ್ನಷ್ಟು ಉಲ್ಬಣವಾಗುವುದೇ ವಿನಃ ಸುಧಾರಿಸುವುದಿಲ್ಲ . ಕಲಿಕಾ ಸಮಸ್ಯೆಯ ಕಾರಣವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳಲುಪ್ರಯತ್ನಿಸುವುದೇ ಇಲ್ಲ. ಇಂತಹ ಸಂದರ್ಭಗಳಲ್ಲಿ ಕೋಪಗೊಳ್ಳುವ ಬದಲು ಸಮಾಧಾನವಾಗಿ ಯೋಚಿಸಿದರೆ ಯಶಸ್ಸು ದೊರೆಯುತ್ತದೆ.


ತಪ್ಪು ಮಾಡಿದ ಮಕ್ಕಳಿಗೆ ಶಿಕ್ಷೆ ನೀಡಲೇ ಬಾರದೆ? ಹಾಗೇನೂ ಇಲ್ಲ. ಸರಿಯಲ್ಲದ ನಡವಳಿಕೆಗಳು ಕಂಡುಬಂದಲ್ಲಿ ಲಘು ಶಿಕ್ಷೆ ನೀಡಬಹುದು. ಆದರೆ ಶಿಕ್ಷಿಸಿದ ನಂತರ ಯಾಕಾಗಿ ಶಿಕ್ಷಿಸಲಾಯಿತು ಎಂಬುದನ್ನು ತಿಳಿಸಿಕೊಡುವುದರ ಜೊತೆಗೆ,  ಸರಿಯಾದ ನಡವಳಿಕೆ ಯಾವುದು ಎಂಬುದನ್ನೂ ಕೂಡ ತಿಳಿಸಿಕೊಡಬೇಕು. ಶಿಕ್ಷೆ ಎಂಬುದು ಮಕ್ಕಳ ಆತ್ಮಗೌರವಕ್ಕೆ ಚ್ಯುತಿ ಉಂಟುಮಾಡಬಹುದು ಎಂಬುದನ್ನು ಮರೆಯಬಾರದು. ಪರಿಣಾಮವಾಗಿ ವಿಶ್ವಾಸ ಕಡಿಮೆಯಾಗುವುದು. ಕಲಿಕೆಗೆ ಸಂಬಂಧ ಪಟ್ಟಂತೆ ಶಿಕ್ಷಿಸುವ ಬದಲು ಕಲಿಕೆಯ ಕುರಿತು ನಿರಾಸಕ್ತಿಯನ್ನು ಏಕೆ ಹೊಂದಿದ್ದಾನೆ ಎಂಬುದು ತಿಳಿಯಲು ಪ್ರಯತ್ನಿಸಿ, ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಸೂಕ್ತ. ಶಿಕ್ಷೆಗಿಂತ ಪ್ರೀತಿ ವಿಶ್ವಾಸದಿಂದ ಗೆಲ್ಲುವುದೇ ಪರ್ಯಾಯ ಮಾರ್ಗ.

ಈ ಮೊದಲೇ ತಿಳಿಸಿದಂತೆ ಕಲಿಕೆ ಎಂಬುದು ಮನಸ್ಸಿಗೆ ಸಂಬಂದಿಸಿದ ವಿಚಾರ. ಅದನ್ನು ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ. ಕಲಿಕೆಯ ಕುರಿತು ಮಕ್ಕಳಿಗೆ ಆಸಕ್ತಿ ಬಂದರೆ ಯಾವುದೇ ಬಾಹ್ಯ ಪ್ರಚೋದನೆಗಳಿಲ್ಲದೇ ತಾನಾಗಿಯೇ ಕಲಿಯಲು ಇಷ್ಟ ಪಡುತ್ತಾರೆ. ಕಲಿಕೆಯ ಕುರಿತು ಆಸಕ್ತಿ ಬರುವಂತೆ ಮಾಡುವುದೇ ಪಾಲಕರ ಮೊದಲ ಕೆಲಸ. ಮಕ್ಕಳ ಶಿಕ್ಷಣದಲ್ಲಿ ಪಾಲಕರೂ ಸಹಭಾಗಿಗಳಾಗಬೇಕು. ಅಂದರೆ ಎಲ್ಲ ಭೌತಿಕ ಸೌಲಭ್ಯಗಳು, ಡೊನೇಶನ್, ಸ್ಕೂಲ್ ವ್ಯಾನ್ ಇವುಗಳು ಸಹಭಾಗಿತ್ವವಾಗಲಾರದು. ಅಭ್ಯಾಸಕ್ಕೆ ಸಮಯ ನಿಗದಿ ಪಡಿಸಿ ಮಕ್ಕಳು ಅಭ್ಯಾಸ ಅಥವಾ ಮನೆಕೆಲಸ (homework)  ಮಾಡುವಾಗ ಸ್ವಲ್ಪ ಸಮಯ ಅವರ ಜೊತೆ ಕುಳಿತುಕೊಳ್ಳಬೇಕು. ಪ್ರತಿದಿನ ಮಕ್ಕಳ ಅನುಭವ ಹೇಗಿತ್ತು ಎಂಬುದನ್ನು ವಿಚಾರಿಸಿ ಅವರುತ್ತರಿಸುವಾಗ ಆಸಕ್ತಿಯಿಂದ ಆಲೈಸಿ ಪ್ರತಿಕ್ರಿಯಿಸಿ ಮನೆಯಲ್ಲಿ ಮಕ್ಕಳಿಗೆ ಅಗತ್ಯ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡಬೇಕು. ಮಕ್ಕಳಿಗೆ ಆಟವಾಡಲು ಪ್ರೋತ್ಸಾಹಿಸಿ ಅವರೊಂದಿಗೆ ನೀವೂ ಆಟವಾಡಿ. ಆಗಾಗ ಶಾಲೆಗೇ ಭೇಟಿ ನೀಡಿ ಮಕ್ಕಳ ಕಲಿಕೆ ಹಾಗೂ ವರ್ತನೆಯ ಕುರಿತು ಹಿಮ್ಮಾಹಿತಿ ಪಡೆಯಿರಿ. ಶಾಲೆಯ ಕಾರ್ಯಕ್ರಮಗಳಲ್ಲಿ ಆಹ್ವಾನವಿದ್ದರೆ ಖಂಡಿತವಾಗಿಯೂ ಭಾಗವಹಿಸಿ . ಮಕ್ಕಳಿಗಾಗಿ ಮನೆಯಲ್ಲಿ ಸ್ವಲ್ಪ ಸಮಯ ಕೊಡಿ. ಅವರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ವಿಶ್ವಾಸಗಳಿಸಿಕೊಳ್ಳಿ. ಟೆಸ್ಟ್/ಪರೀಕ್ಷೆ ಮಾರ್ಕ್ಸ್ ಕಾರ್ಡ್ ಗಳು ನಿಮಗೆ ತಲುಪಿದಾಗ ಗಳಿಕೆಯಾಗಿರುವುದನ್ನು ಪ್ರಶಂಸಿರಿ. ಗಳಿಕೆಯಾಗದಿದ್ದಲ್ಲಿ ಅತೀವ ನಿಂದಿಸಬೇಡಿ ಬದಲಿಗೆ ಯಾವ ವಿಷಯದಲ್ಲಿ ಕಡಿಮೆ ಗಳಿಕೆಯಾಗಿದೆ ಎಂಬುದನ್ನು ತಿಳಿದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳೋಣ, ಅಧೈರ್ಯಗೆಡಬೇಡ ಎಂದು ಹುರಿದುಂಬಿಸಿ. ಕಡಿಮೆ ಸಾಮರ್ಥ್ಯದ ಮಕ್ಕಳಿಗೆ ಕಲಿಯಲು ಜಾಸ್ತಿ ಸಮಯ ಬೇಕಾಗುತ್ತದೆ. ಸಂಯಮವಿರಲಿ ಅವಸರಪಡಬೇಡಿ. ಶಾಲೆಯ ಶಿಕ್ಷಕರೊಂದಿಗೆ ಉತ್ತಮ ಸಂಬಂಧವಿರಲಿ. ಮಕ್ಕಳೆದುರು ಶಿಕ್ಷಕರನ್ನು ನಿಂದಿಸಬಾರದು. ಮನೆಯಲ್ಲಿರುವ ಮಕ್ಕಳಲ್ಲಿ ವಿಭಿನ್ನ ಸಾಮರ್ಥ್ಯವಿರುತ್ತದೆ. ಪರಸ್ಪರ ಹೋಲಿಕೆ ಮಾಡಿ ನಿಂದಿಸಬಾರದು. ಮಕ್ಕಳ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಿ. ಮಕ್ಕಳ ಸ್ನೇಹಿತರ ಪಾಲಕರು ನಿಮ್ಮ ಸ್ನೇಹಿತರಾಗಿರಬೇಕು.

ಮಕ್ಕಳು ಸರಿಯಾದ ಅಭ್ಯಾಸ ಕ್ರಮ ಅನುಸರಿಸಿದರೂ ಉತ್ತಮ ಗಳಿಕೆಯಾಗುವುದಿಲ್ಲ. ಎಷ್ಟು ಸಮಯ ಅಭ್ಯಾಸ  ಎಂಬುದು ಮುಖ್ಯವಲ್ಲ. ಬದಲಿಗೆ ಎಷ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿದರು ಎಂಬುದು ಮುಖ್ಯ. ಬರಿ ಹೋಂವರ್ಕ್ ಮುಗಿಸಿದರೆ ಅಭ್ಯಾಸ ಮುಗಿಯಿತು ಎಂದೆನಿಸಬಾರದು. ಮಕ್ಕಳು ಪಠ್ಯಪುಸ್ತಕಗಳನ್ನು ಓದಬೇಕು, ಪದಗಳನ್ನು ಕಲಿಯಬೇಕು. ಸಾಕಷ್ಟು ಲೆಕ್ಕಗಳನ್ನು ಮಾಡಬೇಕು. ಕೆಲವೊಮ್ಮೆ ಗಟ್ಟಿಯಾಗಿ ಓದಲು ಅಭ್ಯಸಿಸಬೇಕು. ಮಕ್ಕಳ ಬರವಣಿಗೆಯನ್ನು ಪರಿಶೀಲಿಸಿ, ಸರಿ ಇಲ್ಲದಿದ್ದರೆ ಅಗತ್ಯ ಮಾರ್ಗದರ್ಶನ ನೀಡಿ ಸರಿಪಡಿಸಿಕೊಳ್ಳಲು ತಿಳಿಸಬೇಕು. ಯಾವುದೇ ಕಾರಣಕ್ಕೆ ಮಕ್ಕಳು ಸರಿಯಾಗಿ ಅಭ್ಯಸಿಸುತ್ತಿಲ್ಲವೆಂದು ಗದರುವುದು ಸರಿಯಲ್ಲ. ಮಗುವಿಗೆ ಹೋಮ್ ವರ್ಕ್ ಮಾಡಲು ಬರುತ್ತಿಲ್ಲವಿರಬಹುದು, ತಿಳಿಯದೇ ಅನಾವಶ್ಯಕ ಬೈಯುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.

ನೋಯಿಡಾದ ದ ಅನಿಲ್ ವಿಷಯದಲ್ಲಿ ಪಾಲಕರು ಅವನ ಶೆಕ್ಷಣಿಕ ನಿರಾಸಕ್ತಿಗೆ ಕಾರಣವನ್ನು ಕಂಡುಕೊಳ್ಳಲು ವಿಫಲರಾಗಿ, ಸೋಮಾರಿತನದಿಂದ ನಿರಾಸಕ್ತನಾಗಿದ್ದನೆಂದು ಭಾವಿಸಿ, ಶಿಕ್ಷೆಗೊಳಪಡಿಸಿ ತಿದ್ದಲು ಪ್ರಯತ್ನಿಸಿದ್ದಾರೆ. ಹದಿನಾರು ವರ್ಷದ ತಾರುಣ್ಯಾವಸ್ಥೆಯಲ್ಲಿರುವ ಮಗನನ್ನು ದಂಡಿಸಬಾರದೆಂದೂ ತಾಯಿಗೆ ತಿಳಿದಿಲ್ಲ. ಕಲಿಕೆಯಲ್ಲಿ ಆಸಕ್ತಿವಹಿಸದ ಜೊತೆಯಲ್ಲಿ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಕ್ರೌರ್ಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದನ್ನು ತಿಳಿದ ಮೇಲೂ ಶಿಕ್ಷಣ ತಜ್ಞರನ್ನೋ ಶಿಕ್ಷಣ ಮನೋವಿಜ್ಞಾನಿಗಳನ್ನೋ ಕಂಡು ಸಮಾಲೋಚಿಸುವ ಬದಲು ಜ್ಯೋತಿಷಿಯ ಮೊರೆ ಹೋಗುವುದು ಉಪಯುಕ್ತವಲ್ಲ. ಬಹುಶ ಮನೆಯಲ್ಲಿ ತಂಗಿಯ ಶೈಕ್ಷಣಿಕ ಪ್ರಗತಿಗೆ ಹೋಲಿಸಿ ಹಂಗಿಸುತ್ತಿರಬೇಕು. ಇದರಿಂದ ಅನಿಲನಿಗೆ ಸಹಜವಾಗಿಯೇ ದ್ವೇಷ ಭಾವನೆ ಬೆಳೆದು ತಾಯಿಯ ಜೊತೆ ತಂಗಿಯನ್ನೂ ಹತ್ಯೆ ಮಾಡಿದ್ದಾನೆ. ಇಂತಹ ಪರಿಸ್ಥಿತಿ ಎಲ್ಲ ಪಾಲಕರಿಗೂ ಬರುತ್ತದೆ ಎಂದು ಹೇಳಲಾಗುವುದಿಲ್ಲ.ಆದರೆ ಶಿಕ್ಷೆ ನೀಡಿ ಶಿಸ್ತು ಕಲಿಸುತ್ತೇವೆಂಬ ಕ್ರಮವನ್ನು ಪಾಲಕರು ಬಿಟ್ಟು ಮಕ್ಕಳನ್ನು ವಿಶ್ವಾಸಕ್ಕೆ ಪಡೆದು ಅವರ ಸಮಸ್ಯೆಗಳಿಗೆ ಹೃದಯ ಪೂರ್ವಕವಾಗಿ ಸ್ಪಂದಿಸಿದರೆ ಮಕ್ಕಳು ಖಂಡಿತವಾಗಿಯೂ ಪಾಲಕರ ಜೊತೆಗಿರುತ್ತಾರೆ.

ಲೇಖಕರು
ಬಿ . ಎನ್ . ರಾಮಚಂದ್ರ




ಮಲೆಗಳಲ್ಲಿ ಮದುಮಗಳು

ಇಡೀ ರಾತ್ರಿ ನಾಟಕ ನಡೆಯುತ್ತಂತೆ...! ಕೊರೆವ ಚಳಿಯಲ್ಲಿ, ಬಿಂದಿಗೆ ಚಂದಿರನ ಬೆಳಕಿನಲಿ ಕುಳಿತು ಬೆಳಗಾಗುವ ವರೆಗೂ ನಾಟಕದಲ್ಲಿ ತಲ್ಲೀನಗೊಳ್ಳುವ ಅನುಭವವಂತೆ..ಅಮೋಘವಾದ ನಾಟಕ, ಪಾತ್ರಧಾರಿಗಳ ಅದ್ಭುತ ಅಭಿನಯ ೪ ಸ್ಟೇಜ್ ಗಳಲ್ಲಿ ಸಾಗುತ್ತದೆಯಂತೆ..ಎಂಬೆಲ್ಲ ಉತ್ಸಾಹಭರಿತ ವಿಷಯಗಳು ಕಳೆದ ಜನವರಿಯಿಂದಲೂ ಕೇಳುತ್ತಿದ್ದೆನಾದರೂ, ನಾಟಕವನ್ನು ನೋಡುವ ಸಂದರ್ಭ ಈ ಸರ್ತಿ ಸಿಕ್ಕಿಲ್ಲವೆಂದು ಸಣ್ಣ ನಿರಾಸೆ ಪಟ್ಟಿದ್ದು ನಿಜ. .ನಾಟಕ ಪ್ರದರ್ಶನದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬ ಸಿಹಿ ಸುದ್ದಿಯೊಂದಿಗೆ ಫೋನಿನಲ್ಲಿ ಮಾತನಾಡಿದ ಗೆಳತಿ ಸ್ವರ್ಣ ಜೊತೆ ಕಡೆಗೂ ಎಂದಾದರೂ ನೋಡಲೇ ಬೇಕು ಎಂದೆನಿಸಿದ್ದ ನಾಟಕವನ್ನು ನೋಡುವ ಅವಕಾಶ ನಿನ್ನೆಗೆ ನನ್ನದಾಯಿತು. ೧೦ ತಾಸುಗಳ ನಾಟಕ ನೋಡಲು, ಮಗಳನ್ನು ರಾತ್ರಿ ಬಿಟ್ಟು ಹೋಗುವುದು ಹೇಗಪ್ಪಾ ಎಂದು ಯೋಚಿಸುತ್ತಿರುವಾಗ, ನೀನು ಹೋಗಿ ಬಾ ಎಂದು ಮನೆಯವರು ಬೆಂಬಲಿಸಿದಾಗ ಮನಸ್ಸು ಹಿರಿಹಿಗ್ಗಿತ್ತು.
ಹಿಂದೆ ಓದಿದ್ದ ರಾಷ್ಟ್ರಕವಿ ಕುವೆಂಪು ರಚನೆಯ 'ಮಲೆಗಳಲ್ಲಿ ಮದುಮಗಳು' ಪುಸ್ತಕವನ್ನು ನಾಟಕದ ರೂಪದಲ್ಲಿ ನೋಡುವ ಅನುಭವವೇ super..!! ರಾತ್ರಿ ಎಲ್ಲ ಎಚ್ಚರವಿದ್ದು ಹೊರಾಂಗಣ ವೇದಿಕೆಯಲ್ಲಿ ಯಕ್ಷಗಾನ, ಬಯಲಾಟ ನೋಡುವ ಕಾಲವೇ ಈಗ ಕಡಿಮೆಯಾಗುತ್ತಿರುವಾಗ, ೮೧ ನೆಯ ಪ್ರದರ್ಶಕ್ಕೇರುತ್ತಿದ್ದ ನಾಟಕವೊಂದನ್ನು ನೋಡಲು ನಿನ್ನೆಗೂ ನೆರೆದ ಜನ ಸುಮಾರು ೬೦೦! ನನಗೋ ಇವೆಲ್ಲ ಮೊದಲ ಸಲದ ಅನುಭವ. ಜಾಕೆಟ್ ಏರಿಸಿಕೊಂಡಿದ್ದರೂ, ಇಬ್ಬನಿಯ ಮುಸುಕಲ್ಲಿ ಚಳಿಗೆ ಮುದುಡಿ ಕುಳಿತಿರಬೇಕಾದ ಸ್ಥಿತಿಯಲ್ಲೂ, ನಾಟಕದ ಸನ್ನಿವೇಶಗಳಿಗೆ, ಪಾತ್ರದೊಂದಿಗೂ ನಾವೂ ಕೂಡ ಅಷ್ಟೇ ಕಳೆದು ಹೋಗುವ ಪುಳಕ!

ಮಲೆನಾಡ ಸೊಬಗನ್ನು ಕಥೆಯಲ್ಲಿ ಕಣ್ಣಿಗೆ ಕಟ್ಟುವಂತೆ ಹೆಣೆದಿಟ್ಟಿದ್ದ ಕುವೆಂಪುರವರವರಿಗೆ ನನ್ನ ನಮನ. ಕಾದಂಬರಿ ಆಧಾರಿತ ಈ ನಾಟಕವು, ಇಷ್ಟೆಲ್ಲಾ ಜನಪ್ರಿಯಗೊಳ್ಳಲು, 'ಕುವೆಂಪು' ಎಂಬ ಹೆಸರೇ ನಾಟಕಕ್ಕೆ ಹೆಚ್ಚು ಮೌಲ್ಯವನ್ನು ಕೊಟ್ಟಿದ್ದಿರಬಹುದು ಎಂಬುದು ನನ್ನ ತಪ್ಪು ಗ್ರಹಿಕೆ ಎಂಬುದು ನಿನ್ನೆಯ ರಂಗಪ್ರಯೋಗವನ್ನು ನೋಡಿದ ಮೇಲೆ ನನ್ನನುಭವಕ್ಕೆ ಬಂದ ವಿಷಯ. ಜೋಗಪ್ಪಂದಿರು ಹೇಳುತ್ತಾ ಬರುವ ಕಥೆಯಾಗಿ ಮೂಡಿ ಬರುವ ಈ ನಾಟಕದಲ್ಲಿ, ನಮ್ಮ ಮುಂದೆ ಬರುವ ಗುತ್ತಿ - ಹುಲಿಯಾ (ನಾಯಿ), ಐತೂ-ಪೀನ್ಚಲು, ತಿಮ್ಮಿ, ನಾಗತ್ತೆ-ನಾಗಕ್ಕ, ಕುಂಟು ವೆಂಕಟಪ್ಪನಾಯಕ, ಚೀನ್ಕ್ರ, ಸಾಬರು, ಪಾದ್ರಿ, ಎಲ್ಲ ಎಲ್ಲಾ ಪಾತ್ರಗಳೂ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ನಾಟುವಂತೆ ನಟಿಸಿ, ಕಲಾವಿದರು ತಮ್ಮ ಅಭಿನಯದ ಕೈಚಳಕವನ್ನು ತೋರಿಸಿದ್ದಾರೆ. ಸಂಭಾಷಣೆಯೇ ಇಲ್ಲದ ಗುತ್ತಿಯ ನಾಯಿ ಹುಲಿಯನ ಪಾತ್ರ, ಕೇವಲ ಅಭಿನಯದಿಂದಲೇ ಅಲ್ಲಿ ನೆರೆದಿದ್ದ ನಮ್ಮಂತ ಪ್ರೇಕ್ಷಕರಿಗೆ ಪ್ರಿಯವಾಗಿ ಹೋಯಿತು. ನಾಟಕದ ಕೊನೆಯ ಭಾಗದಲ್ಲಿ, ಗುತ್ತಿಯ ನಾಯಿ ನೀರಿಗೆ ಬಿದ್ದು ಹೋಗಿ, ಅದನ್ನುಳಿಸಿಕೊಳ್ಳಲ್ಲಾಗದ ಗುತ್ತಿಯ ಅಸಹಾಯಕತೆಯ ಚೀತ್ಕಾರವಂತೂ, ಬೆವರಿಳಿಸಿಬಿಟ್ಟಿತು. ೯ ತಾಸಿನ ಸುಧೀರ್ಘ ನಾಟಕವನ್ನು ಕುತೂಹಲಕಾರಿಯಾಗಿಡಲು, ಅಲ್ಲಲ್ಲಿ ನಡೆಸುವ ತಮಾಷೆ, ವ್ಯಂಗ್ಯ ಸಂಭಾಷಣೆಗಳು, ಕಾಲದ-ಸಮಾಜದ ಕಟುಸತ್ಯಗಳು, ನಟನೆಗೆ ಇನ್ನಷ್ಟು ನೈಜತೆಯನ್ನು ತರುವ ಪ್ರಯತ್ನಕ್ಕಾಗಿ, ಕತ್ತರಿಸುವ ಚಳಿಯಲ್ಲೂ, ನೀರಿಗೆ ಮೈಯೊಡ್ಡುವ ಕಲಾವಿದರ ಪ್ರಯತ್ನ ಪ್ರಶಂಸನೀಯ. ಹಾಡುಗಳೆಂತೂ ಒಂದಕ್ಕಿಂತ ಒಂದು ಇಷ್ಟವಾದವು. ಒಟ್ಟಾರೆಯಾಗಿ ಹೇಳುವುದಾದರೆ ನಿನ್ನೆಯ ನಾಟಕ ವೀಕ್ಷಣೆ ನನಗೊಂದು ಮರೆಯಲಾರದ ಅನನ್ಯ ಅನುಭವ.
ನಿಸರ್ಗದ ಮಡಿಲು, ರಾತಿಯ್ರ ತೆರೆದ ಆಕಾಶ. ಹುಚ್ಚು ಚಳಿಗೆ ಬೆಚ್ಚಗೆ ಹೊದ್ದು ಕುಳಿತು, ಮಂಡಕ್ಕಿ-ಬಿಸಿ ಕಾಪಿ-ಖಾರ ಕಷಾಯ ಸವಿಯುತ್ತ, ನಗುತ್ತ, ಖುಷಿಪಡುತ್ತಾ ಆಸಕ್ತರ ಸಂಗಡ ನೋಡಬಹುದಾದೊಂದು ಸೊಗಸಾದ ನಾಟಕ 'ಮಲೆಗಳಲ್ಲಿ ಮದುಮಗಳು'