ಶನಿವಾರ, ಮಾರ್ಚ್ 17, 2018

ಬಾಲ್ಯದ ಯುಗಾದಿ

ನನ್ನ ವಯಸ್ಸಿನ ಆಸುಪಾಸಿನವರೇ ಮಾವನ ಮಕ್ಕಳು ಇರ್ತಿದ್ರಿಂದ  ನನ್ನ ಬಾಲ್ಯದ  ದಿನಗಳೆಲ್ಲ ಹೆಚ್ಚು ಕಳೆದದ್ದು ಅಜ್ಜನ ಮನೆಯಲ್ಲೇ. ಬೆಳಕು ಹರಿಯುವುದಕ್ಕೂ ಮುಂಚೆ ಪ್ರಾರಂಭವಾಗುತ್ತಿದ್ದ ಹಕ್ಕಿಪಿಕ್ಕಿಗಳ ಚಿಲಿಪಿಲಿ, 'ನಂಗಳನ್ನ ಮಾತಾಡ್ಸೋ' ಎಂದು ಮಾವನನ್ನು ಕೂಗಿ ಕರೆಯುತ್ತಿದ್ದ ದನಕರ್ಗಗಳ ಏರು ಧ್ವನಿಗೆ ನಾವು ಮಕ್ಕಳಿಗೂ ಕೂಡ ಎಚ್ಚರವಾಗಿ ಹೋಗುತ್ತಿತ್ತು. ೪. ೩೦ - ೫ ಗಂಟೆಗೆ ಎದ್ದುಕೊಂಡು, ಕತ್ತಲಲ್ಲಿ ಅಜ್ಜ ಅಮ್ಮುಮ್ಮ ಚುಂನೆಣ್ಣೆ ದೀಪ ಹಿಡ್ಕೊಂಡು ಅವ್ರವ್ರ ಕೆಲ್ಸ ಮಾಡ್ಕೋತ ಇದ್ರೆ, ಅರೆಗಣ್ಣು ಮಾಡಿಕೊಂಡು ಅವರ ಹಿಂಬಾಲಕರಾಗಿ ನಾವೆಲ್ಲಾ ಓಡಾಡ್ಕೊಂಡು ಇರುತ್ತಿದ್ದೆವು. ಹಿತ್ಲಕಡೆ ಒಲೆ ಉರಿಯ ಚಿಟಿ ಚಿಟಿ ಶಬ್ದ, ಅಡ್ಗೆ ಮನೆಲಿ ಅಮ್ಮುಮ್ಮ ಮಜ್ಜಿಗೆ ಕಡೆಯುವ ಶಬ್ದ, ಅತ್ತೆ ಹೆಬ್ಬಾಗಿಲ ಅಂಗಳವನ್ನು ಚರ್ ಚರ್ ಎಂದು ಕಡ್ಡಿಹಿಡಿಲಿ ಗುಡಿಸಿ ಸಗಣಿ ಹಾಕಿ ಹಾಳೆಕುಂಟಿನಿಂದ ಸಾರಿಸುವ ಶಬ್ದ, ದೇವ್ರ ಕೋಣೇಲಿ ಅಜ್ಜನ ಪೂಜೆಯ ಮಂತ್ರ,  ದನಕರುಗಳ ಕತ್ತಿನ ಗಂಟೆಗಳ ನಾದ ಇವೆಲ್ಲಾ ನನ್ನಲ್ಲಿ ಅಂತರ್ಗತವಾಗಿರುತ್ತಿದ್ದ ಅಜ್ಜನಮನೆಯ ನಿತ್ಯದ ದಿನಚರಿಯ ಶಬ್ದಗಳು. ಇವೆಲ್ಲದರ ಮಧ್ಯೆ,  "ಇವತ್ತು ತೋಲಾಗಿ ಹೂವು ಕೊಯ್ಕ್ಯ ಬನ್ನಿ ಹುಡ್ರಾ, ಹಬ್ಬ ಇವತ್ತು.. " ಎಂದೆನ್ನುವ ಅಮ್ಮಮ್ಮನ ಧ್ವನಿಗೆ ಥಟ್ ಎಂದು ಎಚ್ಚರಗೊಳ್ಳುತಿತ್ತು ಮನಸ್ಸು.  




ಸಣ್ಣಾಕಿದ್ದಾಗಿಂದ್ಲೂ, 'ಇವತ್ತು ಹಬ್ಬ' ಅನ್ನೋದೇ ಒಂದು ಸ್ಪೆಷಲ್ ಫೀಲಿಂಗು. ದೊಡ್ದಬ್ಬಗಳಿಗೆ ಸಿಗುತ್ತಿದ್ದ ಹೊಸಬಟ್ಟೆಯ ಸಂಭ್ರಮದಿಂದ ಪ್ರಾರಂಭವಾಗಿ, ಬೇರೆ ಬೇರೆ ಹಬ್ಬದ ಆಚರಣೆಗಳನ್ನು ಬೆರಗು ಗಣ್ಣಿನಿಂದ ನೋಡುವುದು, ದೊಡ್ಡವರಷ್ಟೇ ತರಾತುರಿಯಲ್ಲಿ ನಾವು ಚಿಕ್ಕವರೂ ಏನೇನೋ ತಾಟುಪಾಟು ಕೆಲಸ ಮಾಡುತ್ತಾ, ಹಬ್ಬಕ್ಕೆ ಮಾಡೋ ಸಿಹಿತಿಂಡಿಗಳು ಯಾವಾಗ ದೇವರ ನೈವೇದ್ಯ ಆಗಿ ನಮ್ಮ ಬಾಯಿಗೆ ಸಿಗುವುದೋ ಎಂದು ಕಾದು ಕುಳಿತಿರುವವರೆಗೂ, ಹಬ್ಬದ ದಿನದ ಪ್ರತಿಯೊಂದು ಅನುಭವವೂ ಖುಷಿ ಕೊಡುತ್ತಿತ್ತು. ಮನೆ ಮಂದಿ ನೆಂಟರಿಷ್ಟರೆಲ್ಲ ಸೇರಿಕೊಂಡು ಒಟ್ಟಿಗೆ ಹರಟು ಸಿಹಿ ಊಟ ಮಾಡುವುದೇ ಒಂದು ಮಜಾ.  ಅದರಲ್ಲೂ ಈ ಯುಗಾದಿ ಹಬ್ಬ ಹೊಸ ವರ್ಷಾರಂಭ.  ಬ್ರಹ್ಮನು  ಚೈತ್ರ ಮಾಸದ ಪಾಡ್ಯ ದಿನದ ಸೂರ್ಯೋದಯದ ಸಮಯದಲ್ಲಿ ಈ ಇಡೀ ವಿಶ್ವವನ್ನು ಸೃಷ್ಟಿಸಿದ ದಿನವಿದು...ರಾಮಾಯಣದ ಕಥೆಗಳಲ್ಲಿ, ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದಾಗ, ರಾಮನನ್ನು ಚಕ್ರವರ್ತಿಯನ್ನಾಗಿ ಪಟ್ಟಾಭಿಷೇಕ ಮಾಡಿದ ದಿನವಿದು ಎಂದೆಲ್ಲ ವೈಭವೀಕರಿಸಿ ಅಜ್ಜ ಕಥೆಗಳನ್ನು ಹೇಳುತ್ತಿದ್ದರೆ, ನಮ್ಮಲ್ಲಿ ಏನೋ ಒಂದು ರೀತಿಯ ಪುಳಕ ಇರುತ್ತಿತ್ತು.


ಹಬ್ಬದ ದಿನ, ನಿತ್ಯಕ್ಕಿಂತ ಹೆಚ್ಚೆಚ್ಚು ಹೂವುಕೊಯ್ಯುವುದೂ ಒಂದು ಸ್ಪರ್ಧೆ ಎನ್ನುವಂತೆ ನಾವೆಲ್ಲಾ ಮಕ್ಕಳು ಒಂದೊಂದು ಸಿಬ್ಬಲು(ಹೂವು ಹಾಕಿಕೊಳ್ಳುವ ಬುಟ್ಟಿ ) ಹಿಡಿದು ಓದುತ್ತಿದ್ದೆವು. ಮೊದಲು ಪಣತು ಮನೆಯ ಕಡೆಗೆ ಓಡುವುದಿತ್ತು ಏಕೆಂದರೆ ಬಗೆ ಬಗೆಯ ದಾಸವಾಳ ಗಿಡಗಳು ಆ ಕಡೆಗೇ ಇದ್ದುದರಿಂದ, ಮುಕ್ಕಾಲು ಸಿಬ್ಬಲು ಅಲ್ಲಿಯೇ ತುಂಬಿ ಹೋಗುತ್ತದೆ ಎಂಬ ಯೋಚನೆ ನಮ್ಮಲ್ಲಿರುತ್ತಿತ್ತು. ಭಾವಯ್ಯಂದಿರೆಲ್ಲ ಸರ ಸರನೆ ಮರ ಹತ್ತಿದರೆ, ದೋಟಿ ಕೋಲಿನಿಂದ ಕೊಯ್ಯಲು ನಾ ಓಡುತ್ತಿದ್ದೆ.  ಅಜ್ಜನ ಮನೆಯ ಹಿಂಬದಿಯ 'ಗೋಟಿಂಕಣ' (ಗೋಟು  ಅಡಕೆಗಳನ್ನೆಲ್ಲ ಒಣಗಿಸುತ್ತಿದ ಜಾಗದ ಹೆಸರು) ಎಂಬ ಎತ್ತರದ ಸ್ಥಳಕ್ಕೂ ಹತ್ತಿ ಹೋಗಿ, ಕಟ್ಟಿಗೆ ಮನೆ ಪಕ್ಕಕ್ಕೆ ಚಾಚಿಕೊಂಡ ಬೊಂಬಾಯ್ ಮಲ್ಲಿಗೆ ಹೂವನ್ನು ಬಹು ಪ್ರಯಾಸದಿಂದ ಕೊಯ್ದು ತರುತ್ತಿದ್ದೆವು. ಸಿಬ್ಬಲು ತುಂಬಾ ಬಣ್ಣಬಣ್ಣದ ದಾಸವಾಳ-ದೂರ್ವೆಗಳ  ಜೊತೆಯಲ್ಲಿ, ಚಿಗಳಿ ಇರುವೆಗಳು ಇರುತ್ತಿದ್ದ ಸಂಪಿಗೆ ಮರದಿಂದ ಸಂಪಿಗೆ ಹೂವು, ತೋಟದ ದಾರಿಯ ಸಂದಿ ಮೂಲೆಯಲ್ಲಿ ಇರುತ್ತಿದ್ದ ಸುಳಿ ಹೂವು ಹೀಗೆ ತರಹೇವಾರಿ ಹೂಗಳನ್ನು ಕಷ್ಟಪಟ್ಟು ಕೊಯ್ದು ತಂದು ಪೂಜೆಗೆ ನೀಡುವ ಜವಾಬ್ಧಾರಿಯುತ ಕೆಲಸ ನಾವು ಮಾಡಿದ್ದೇವೆಂದು ಬೀಗಿಕೊಳ್ಳುತ್ತಿದ್ದೆವು. ಹಬ್ಬದ ದಿನ ಅಜ್ಜನ ಜೊತೆ 'ಉದ್ದ ಕಟ್ಟೆ ಬೈಲು'(ಅಜ್ಜನ ಮನೆಗೆ ಸಮೀಪದಲ್ಲಿರುವ ಅರಳಿ ಕಟ್ಟೆಯ ಸ್ಥಳ) ಗೆ ಹೋಗಿ, ಅಜ್ಜನ ಪೂಜೆಗೆ ನಾವೆಲ್ಲಾ ಜಾಗಟೆ ಹೊಡೆದು, ಹೊಸ ಸಂವತ್ಸರದ ಮೊದಲ ಸೂರ್ಯೋದಯಕ್ಕೆ ವಿಧಿವತ್ತಾಗಿ  'ಸೂರ್ಯ ನಮಸ್ಕಾರ' ಮಾಡಿ ಬರುವ ವಾಡಿಕೆಯಿತ್ತು. ಅಲ್ಲೂ ನಮ್ಮ ಮಕ್ಕಳಾಟ ಬಿಡದೆ, ಬರುವ ದಾರಿಯಲ್ಲಿ ಹೊಳೆದಾಸವಾಳ  ಹಣ್ಣನ್ನು ಹುಡುಕುತ್ತ, ಹೊಸತಾಗಿ ಚಿಗುರಿದ ನೇರಳೆ ಮರದ ಚಿಗುರು ಎಲೆಗಳನ್ನು  ಕೊಯ್ದುಕೊಂಡು ಸುರುಳಿ ಸುತ್ತಿ ಪೀಪಿಯ ಮಾದರಿಯಲ್ಲಿ ಊದುತ್ತ ಬರುತ್ತಿದ್ದೆವು. 


ಚಿತ್ರ ಬರೆಯಲು ಆಸಕ್ತಿ ಇದ್ದ ನಾನು ಸಣ್ಣಕಿರುವಾಗ ನ್ಯೂಸ್ ಪೇಪರ್ಗಳಲ್ಲಿ ಬರುತ್ತಿದ್ದ ರಂಗೋಲಿ ಚಿತ್ರಗಳನ್ನು ನೋಡಿ ನನ್ನ ರಂಗೋಲಿ ಪುಸ್ತಕ್ಕಕ್ಕೆ ಬರೆದಿಟ್ಟುಕೊಂಡು, ಬಣ್ಣದ ಪೆನ್ಸಿಲ್ ಗಳಿಂದ ಕಲರಿಂಗ್ ಮಾಡಿರುತ್ತಿದ್ದೆ. ಹಬ್ಬದ ದಿನ "ಯಾವದಾದ್ರು ಚೊಲೋ ರಂಗೋಲಿ ಗೊತ್ತಿದ್ರೆ ಹಾಕೇ" ಎಂದು ಅತ್ತೆ ಕೇಳಿದಾಗ ನನಗೆ ಅದೊಂದು ಸಿಕ್ಕಿರುವ ಗೌರವೆಂಬಂತೆ, ಮೊದಲೇ ಸಾಗರದಿಂದ ಬರುವಾಗ ತಂದುಕೊಂಡ ನನ್ನ ರಂಗೋಲಿ ಪುಸ್ತಕವನ್ನು ತಡಕಾಡಿ ಇಷ್ಟವಾದ ರಂಗೋಲಿ ಹಾಕಿ, ಅರಿಶಿನ-ಕುಂಕುಮದಲ್ಲೇ ಒಂದಷ್ಟು ಬಣ್ಣ ತುಂಬಿ ಸಂಭ್ರಮಿಸುತ್ತಿದ್ದೆ. 


ಸುಮಾರು ಮೊಮ್ಮಕ್ಕಳಿರುತ್ತಿದ್ದ ಆ ಕಾಲಕ್ಕೆ, ಬೇಗ ಮಕ್ಳನ್ನೆಲ್ಲ ಹಿಡಿದು ಸ್ನಾನ ಮಾಡಿಸಿ ಕಳಿಸಿಬಿಟ್ಟರೆ ಒಂದು ದೊಡ್ಡ ಕೆಲಸ ಮುಗಿದಂತಾಗುತ್ತಿತ್ತು ಹಿರಿಯರಿಗೆ. ನಂಗೀಗಲೂ ನೆನಪಿದೆ. ಸುಮಾರೇ ಸಣ್ಣ ವಯಸ್ಸು ನನಗಾಗ. ಯುಗಾದಿ ಹಬ್ಬಕ್ಕೆ ಹರಳೆಣ್ಣೆ ಹಾಕಿಕೊಂಡು ತಲೆಗೆ ಸ್ನಾನ ಮಾಡುವುದು ಒಳ್ಳೆಯದು ಎಂಬ ಪ್ರತೀತಿಯಿದೆ. ಆದರೆ ಅತ್ಯಂತ ಜಿಡ್ಡುಜಿಡ್ಡಾಗಿರುತ್ತಿದ್ದ ಮತ್ತು ಅದರ ವಾಸನೆ ಹಿಡಿಸದ ನನಗೆ, ಒಂದು ಸರ್ತಿ ಅಮ್ಮುಮ್ಮ ಕೈಯಲ್ಲಿ ತಂದು ಹರಳೆಣ್ಣೆ ನನ್ನ ತಲೆಗೆ ಹಾಕಿ ತಟ್ಟಿದಾಗ,  ಗಟ್ಟಿಯಾಗಿ ಬೇಡ ಎಂದು ಹಠ ಮಾಡಲೂ ಧೈರ್ಯವಿರದೇ, ಕಣ್ಣು ತುಂಬಾ ನೀರನ್ನು ತುಂಬಿಕೊಂಡು ಕುಳಿತಿದ್ದೆ. ದುಃಖ ಗಂಟಲಲ್ಲಿ ಕಟ್ಟಿತ್ತು. ಕಣ್ಣಲ್ಲಿ ಧಾರಾಕಾರ ನೀರು ಆದರೂ ಅಮ್ಮನೆದುರೆಲ್ಲ ಹಟಮಾಡುವಂತೆ, ಹಠವೊಡ್ಡಲು ನಾಚಿಕೆ. ಕಡೆಗೆ ಅಮ್ಮಮ್ಮನಿಗೇ ನನ್ನ ಅಪರಾವತಾರದ ಅರಿವಾಗಿ, "ಅಷ್ಟಕ್ಕೆಲ್ಲ ಅಳ್ತವನೇ ಪುಟಿ, ಹಾಕ್ಟ್ನಲ್ಲೇ ಬಿಡು, ಕೊಬ್ರಿ ಎಣ್ಣೆನೇ ಹಾಕನ ಅಡ್ಡಿಲ್ಯಾ" ಎಂದ ಮೇಲೇ ನನಗೆ ಸಮಾಧಾನವಾಗಿದ್ದು. 




ಯುಗಾದಿ ಹಬ್ಬದ ದಿನ ಅಜ್ಜ ಹೊಸ ಪಂಚಾಂಗಕ್ಕೆ ಪೂಜೆ ನೆರವೇರಿಸುತ್ತಿದ್ದರು. ಪೂಜೆ ನಂತರಕ್ಕೆ "ಚೂರೇ ಕೊಡು" ಎಂದು ಕೇಳಿ ಪಡೆದರೂ, ಒಲ್ಲದ ಮನಸ್ಸಿನಿಂದ ತಿನ್ನುತ್ತಿದ್ದ 'ಬೇವು-ಬೆಲ್ಲ' ದ ಕಹಿಗೆ ದೇಹ ಕೊಸರಾಡುತ್ತಿತ್ತು. ಆದರೂ, ಎದುರಿಗೆ ಮಾತ್ರ 'ನಾ ಎಷ್ಟು ಬೇಕಾರೂ ತಿನ್ತಿ ' ಎಂದು ಒಬ್ಬರಿಗೊಬ್ಬರು ಸ್ಕೊಪ್ ಹೊಡೆದುಕೊಳ್ಳುವುದಕ್ಕೇನೂ ಕಡಿಮೆಯಿರುತ್ತಿರಲಿಲ್ಲ.ಮತ್ತೊಂದು ಕಡೆ,  'ಮಡಿ-ಮುಟ್ಟಲಾಗ' ಎಂದು ಹೇಳಿಸಿಕೊಂಡರೂ, ಮತ್ತೆ ಮತ್ತೆ ಕಾಲು ಸಂದಿಗೆ ಓಡಾಡಿಕೊಂಡಿರುವ ಬೆಕ್ಕಿನ ಮರಿಗಳಂತೆ, ಹಿತ್ಲಕಡೆ ಹೋಳಿಗೆ ಮಾಡುವ ಜಾಗದ ಸುತ್ತ ಮುತ್ತ ಹೋಳಿಗೆಯ ಘಮ ವನ್ನೇ ಹೀರುತ್ತಾ, ಕಾಯುತ್ತ ಓಡಾಡಿಕೊಂಡು ಇರುತ್ತಿದ್ದೆವು.  ಅಂತೂ ಊಟಕ್ಕೆ "ಅನ್ನ ಕಮ್ಮಿ ಹಾಕ್ಯಂಡ್ರೂ ಅಡ್ಡಿಲ್ಲೆ, ಹೋಳ್ಗೆ ಪಾಯ್ಸ ತಿನ್ನಿ" ಎಂದು ಒತ್ತಾಯಿಸಿ ನಮಗೆಲ್ಲ ಅತ್ತೆ, ಅಮ್ಮುಮ್ಮ ಬಡಿಸುತ್ತಿದ್ದರೆ,  ಹೋಳಿಗೆ-ಬಿಸಿತುಪ್ಪ ಮತ್ತು 'ಜಾಸ್ತಿ ಸಕ್ರೆಪಾಕ' ದ ಜೊತೆ ಹೊಟ್ಟೆಗಿಳಿಯುತ್ತಿತ್ತು. 




ಇದಿಷ್ಟು ಅಜ್ಜನ ಮನೆಯ ಯುಗಾದಿಯ ನೆನಪಾದರೆ, ಮತ್ತೊಂದಷ್ಟು ನನ್ನೂರು ಕಾನುಗೋಡಿನಲ್ಲಿ ನಮ್ಮ ಮೂಲ ಮನೆಯಲ್ಲಿ ನಡೆಯುತ್ತಿದ್ದ ಯುಗಾದಿ ಹಬ್ಬದ ಒಂದಷ್ಟು ಬಾಲ್ಯದ  ಸವಿಬುತ್ತಿಯಿದೆ.  ನನ್ನ ಅಪ್ಪಾಜಿಯವರು ಒಟ್ಟು ೮ ಮಕ್ಕಳಲ್ಲಿ ೬ ಜನ ಗಂಡು ಮಕ್ಕಳು. ಎಲ್ಲರೂ ಒಂದೊಂದು ದಿಕ್ಕಿನಲ್ಲಿದ್ದರೂ, ಸಂಸಾರ ಸಮೇತರಾಗಿ ಸಾಧ್ಯವಾದ ಹಬ್ಬಕ್ಕೆಲ್ಲ ಒಟ್ಟು ಸೇರುತ್ತಿದ್ದರು. ಮನೆ ತುಂಬಾ ಜನ. ಹಾಗಾಗಿ ಅಲ್ಲೆಂತೂ ಎಲ್ಲ ಹಬ್ಬವೂ ದೊಡ್ದಬ್ಬವೇ ಆಗುತ್ತಿತ್ತು. ಕೇವಲ ಆಚರಣೆ ಎಂಬ ಕಟ್ಟುಪಾಡಿನ ಹಬ್ಬದ ಆಚರಣೆ ಅಲ್ಲದೆ ನಗು-ಖುಷಿ-ತಮಾಷೆ ನಾವೆಲ್ಲಾ ಸೇರಿದೆಡೆ ಇರುತ್ತಿತ್ತು. ಯುಗಾದಿಗೆ ದೀಪಾವಳಿಗೆಲ್ಲ ಅಪ್ಪಾಜಿ-ಚಿಕ್ಕಪ್ಪಂದಿರೆಲ್ಲ ಸೇರಿ ದೊಡ್ಡ ಬಾನಿಯನ್ನು ಹಿತ್ಲಕಡೆಯ ಅಂಗಳಕ್ಕೆ ಇಳಿಸಿ, ಅದರ ತುಂಬಾ ಹಂಡೆ ನೀರು ತುಂಬುತ್ತಿದ್ದರು. ಚರ್ಮ ಸಂಬಂಧೀ ಖಾಯಿಲೆಗಳನ್ನು ಹೋಗಲಾಡಿಸುವ ಗುಣವುಳ್ಳ ಕಹಿಬೇವಿನ ಸೊಪ್ಪಿನ ರಸವನ್ನು ಅಥವಾ ಸೊಪ್ಪನ್ನು ಆ ಬಾನಿಯಲ್ಲಿ ತೇಲಿ ಬಿಡಲಾಗುತ್ತಿತ್ತು. ನೀರಲ್ಲಿ ಗಂಟೆಗಟ್ಟಲೆ ಈಜು-ಮೋಜು ಎಲ್ಲವೂ ಇರುತ್ತಿತ್ತು.  ನಾವು ಮಕ್ಕಳನ್ನೆಲ್ಲ ನೀರಿಗೆ ಎತ್ತಿ ಒಗೆಯುತ್ತಿದ್ದರು. ಖುಷಿಯ ಗಲಾಟೆ ಮುಗಿಲೇರುತ್ತಿತ್ತು.  




ಯಾವುದೇ ಹಬ್ಬದ ದಿನ ನಮ್ಮ ಮನೆಯಲ್ಲಿ ಬೆಳಗ್ಗೆಯ ತಿಂಡಿ 'ತರಕಾರಿ-ಉಪ್ಪಿಟ್ಟು'. ಸ್ನಾನ-ತಿಂಡಿ ಶಾಸ್ತ್ರ ಮುಗಿಸಿ ಹೊಸಬಟ್ಟೆಯ ತೊಟ್ಟು ಮನೆ ಪಕ್ಕದ್ದೇ ದೇವಸ್ಥಾನಕ್ಕೆ ಹೋಗಿ ನೀಲಕಂಠೇಶ್ವರನಿಗೆ ಕೈ ಮುಗಿದರೆ ನಮ್ಮ ಮನೆಯೊಳಗಿರುವ ಕಾರ್ಯ ಮುಗಿದಂತೆ. ನಂತರಕ್ಕೆ ಆಟ. ಏನೇನೋ ಆಟಗಳು - ತರತರದ ಆಟಗಳು. ಮನೆಯ ಪಣತುವಿನ ಪಕ್ಕದ ಜಾಗದಲ್ಲಿ, ಬಾವಿ ಹಗ್ಗ-ಗೋಣಿಚೀಲ ಕ್ಷಣಮಾತ್ರದಲ್ಲಿ ನಮ್ಮೆಲ್ಲರ ಪ್ರಿಯವಾದ ಜೋಕಾಲಿಯಾಗಿ ಪರಿವರ್ತನೆಯಾಗುತ್ತಿತ್ತು. ಯಾರು ಅತೀ ಎತ್ತರಕ್ಕೆ ಜಿಗಿಯುತ್ತಾರೆ ಎಂಬೆಲ್ಲ ಸ್ಪರ್ಧೆಗಳು ದೊಡ್ಡವರು-ಸಣ್ಣವರು, ಹೆಂಗಸರು-ಗಂಡಸರು ಎಂಬೆಲ್ಲ ತಾರತಮ್ಯವಿಲ್ಲದೇ ನಡೆಯುತ್ತಿತ್ತು. ಅಂಗಳದಲ್ಲಿ ಕಂಬಕಂಬದಾಟ, ಕುಂಟಾಬಿಲ್ಲೆ ಹೀಗೆ ಆಟಗಳೂ ಕೂಡ ಹಬ್ಬದಾಚರಣೆಯೊಳಗೊಂದಾಗಿ ಇರುತ್ತಿದ್ದರಿಂದ, ನಮ್ಮ ಮನೆಯ ಕೇಕೆ-ಗಲಾಟೆ ೪ ಮನೆಗೆ ಕೇಳುವಷ್ಟಿರುತ್ತಿತ್ತು. ಒಮ್ಮೆ ನಾವು ಮಕ್ಕಳನ್ನೆಲ್ಲ ಕೂಕಾಟಕ್ಕೆ (ಕಣ್ಣಾ-ಮುಚ್ಚಾಲೆ) ಕರೆದು, ಕಣ್ಣು ಕಟ್ಟಿಕೊಳ್ಳಲು ತಿಳಿಸಿ, ಅಪ್ಪಾಜಿ ಚಿಕ್ಕಪ್ಪನ್ಡಿರೆಲ್ಲ 'ಅಡಗುತ್ತೇವೆ ಹುಡುಕಿ' ಎಂದು ತಿಳಿಸಿದರು. ನಾವೋ ಬೆಪ್ಪರು; ಕಣ್ಣು ಬಿಟ್ಟು ಹುಡುಕಿದ್ದೆ ಹುಡುಕಿದ್ದು.. ಇಡೀ ಮನೆಯಲ್ಲಿ ಎಲ್ಲೆಲ್ಲೂ ಯಾರೊಬ್ಬ ಅಡಗಿಕೊಂಡವನೂ ಕೈಗೆ ಸಿಗಲಿಲ್ಲ. ತಾಸುಗಟ್ಟಲೆ ಹುಡುಕಿ ಹುಡುಕಿ ಸುಸ್ತಾಗಿ ಸೊಲುಪ್ಪಿಕೊಂಡ ಪರಿಸ್ಥಿತಿಯಲ್ಲಿ ನಾವಿದ್ದರೆ, ಒಬ್ಬ ಪಣತುವಿನಿಂದ ಹೊರಬಂದ.  ಮತ್ತೊಂದಷ್ಟು ಸಮಯ ಬಿಟ್ಟು, ಮತ್ತೊಬ್ಬ ಚಿಕ್ಕಪ್ಪ ಆಗೆಲ್ಲ ಮನೆಯಿಂದ ಹೊರಬದಿಯಿರುತ್ತಿದ್ದ ಪಾಯಿಖಾನೆ ಯಿಂದ ತನ್ನ 'ಕೆಲಸ' ಮುಗಿಸಿ ಹೊರಬರುತ್ತಿದ್ದರೆ, ಅಪ್ಪಾಜಿ ಒಂದು ತಾಸಿನ ನಂತರ ತೋಟದ ಕಡೆಯಿಂದ ಬಾಳೆ ಎಲೆ ಕೊಯ್ದುಕೊಂಡು ಹೊತ್ತುತರುತ್ತಿದ್ದ!!



ಇವುಗಳ ಜೊತೆ ಇನ್ನೊಂದು ಇಂಟೆರೆಸ್ಟಿಂಗ್ ಆಟವೆಂದರೆ, ಚೈತ್ರಮಾಸದಿಂದ ವಸಂತ ಋತು ಆಗಮನವಾಗುವ ಕಾಲಕ್ಕೆ ಗಿಡಮರಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನುನೀಡುತ್ತವೆ. ಎಲ್ಲ ಕಡೆ ಮರಗಿಡಬಳ್ಳಿಗಳು ಹಸಿರು ಬಣ್ಣದ ತಳಿರುಗಳಿಂದ ನಳನಳಿಸುತ್ತಿರುತ್ತದೆ. ಈ ಸಮಯದಲ್ಲೇ ಹೂಬಿಡುವ ಕಾಡು ಜಾತಿಯ ಗಿಡವೊಂದು, ತಿಳಿ ಹಸಿರು ಬಣ್ಣದ ಗುಚ್ಛಗಳನ್ನು ಮೈದುಂಬಿ ನಿಲ್ಲುತ್ತದೆ. ಆ ಕಾಡು ಹೂವಿನ ಹೆಸರು ಇಂದಿಗೂ ನನಗೆ ತಿಳಿಯದು. 'ಹೊಸವರ್ಷದ ಹೂ' ಎಂದೇ ನಾವು ಅಕ್ಕ ತಮ್ಮಂದಿರೆಲ್ಲ ಕರೆಯುತ್ತಿದ್ದೆವು. ನಮ್ಮೂರಿನ ಬಸ್ ನಿಲ್ದಾಣ ಶಿವಮೊಗ್ಗ ಹೆದ್ದಾರಿಗೆ ಅಂಟಿಕೊಂಡಂತೆ ಇರುವುದರಿಂದ, ದೊಡ್ಡ ದೊಡ್ಡ ವಾಹನಗಳ ಓಡಾಟ ಸರ್ವೇ ಸಾಮಾನ್ಯ. ನಾವೆಲ್ಲರೂ ಆ ಹಸಿರು ಹಗುರಾದ ಹೂಗಳನ್ನು ಗುಚ್ಛಗಳಿಂದ ಬಿಡಿಸಿ, ಬೊಗಸೆ ಕೈಗಳಲ್ಲಿ ತುಂಬಿಕೊಂಡು ಯಾವುದಾದರೂ ದೊಡ್ಡ ಲಾರಿ, ಟ್ರಕ್ ನಂತಹ ಗಾಡಿ ಬರುವುದಕ್ಕೆ ಸ್ವಲ್ಪ ಮುಂಚೆ  ರಸ್ತೆಗೆ ಬೀರುತ್ತಿದ್ದೆವು. ಆ ದೊಡ್ಡ ಗಾಡಿಗಳ ವೇಗದ ಸವಾರಿಗೆ ಈ ಹಗುರಾದ ಹೂಗಳು ಮೇಲೆತ್ತೆರಕ್ಕೆ ಹಾರುತ್ತಿದ್ದವು.  ಆಕಾಶಕ್ಕೆ ಚಿಮ್ಮುವ ಹೂಗಳ ಕಂಡು ನಾವು ಖುಷಿಯಿಂದ ನಲಿಯುತ್ತಿದ್ದೆವು.

ಇಷ್ಟಕ್ಕೂ ಮುಗಿಯದೇ , ಹಿತ್ತಲ ಕಡೆ ಎಲ್ಲ ಸೊಸೆಯಂದಿರು ಸೇರಿ ಹೋಳಿಗೆ ಮಾಡಲು ಕಣಕ್ಕಿಳಿದಿದ್ದರೆ, ನಾವು ಮೊಮ್ಮಕ್ಕಳು ಅಲ್ಲಿಗೆ ನುಗ್ಗಿ, ಹಾಗೂ ಹೀಗೂ ಮಾಡಿ ಹುರಾಣ ಕಟ್ಟಿ ಕೊಡುವ ಕೆಲಸವನ್ನು ಗಿಟ್ಟಿಸಿಕೊಂಡು, ಅವರುಗಳ ಸಹಾಯಕ ಕೆಲಸಗಳ ಮಧ್ಯೆ ಒಂದೊಂದು ಹುರಾಣದುಂಡೆ ಗುಳುಮ್ಮೆನಿಸುತ್ತಿದ್ದೆವು. ಬಿಸಿ ಬಿಸಿ ಹೋಳಿಗೆ ಪ್ರಿಯರಿಗೆ, ಊಟದ ಸಮಯಕ್ಕೆ ಹೋಳಿಗೆ ಕಾವಲಿಯಿಂದ ಡೈರೆಕ್ಟ್ ಬಾಳೆಗೆ ಬಂದು ಬೀಳುತ್ತಿತ್ತು. ಬಿಸಿ ಹೋಳಿಗೆ-ತುಪ್ಪ ಅದರ ಜೊತೆ ಮಾವಿನಕಾಯಿ ತುರಿದು ಹಾಕಿ ಮಾಡಿದ ಚಿತ್ರಾನ್ನ ತಿನ್ನುತ್ತಿದರೆ, ಈಗಿನ 'ಒಗ್ಗರಣೆ' ಸಿನಿಮಾದ 'ಈ ಜನುಮವೇ ಆಹಾ.. " ಹಾಡಿನ ಫೀಲಿಂಗನ್ನು ಕೊಡುತ್ತಿತ್ತು. 

ಸಂಜೆ ಯುಗಾದಿ ಚಂದ್ರನನ್ನು ನೋಡುವುದರಿಂದ ಸರ್ವ ಪಾಪ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯಿದ್ದರಿಂದ ಎಲ್ಲರೂ ಆಕಾಶದ ಕಡೆಗೆ ಹಣುಕುತ್ತಿದ್ದೆವು. ಕೆಲವೊಮ್ಮೆ ಚಂದ್ರ ಕಾಣುತ್ತಿದ್ದ ಕೆಲವೊಮ್ಮೆ ಇಲ್ಲ. ಆದರೂ ಅಮ್ಮುಮ್ಮ ಮಾತ್ರ ಹುಡುಕುವ ಸಮಯಕ್ಕೆ, ಎಲ್ಲರೂ ಸೇರಿ ಅಲ್ಲಿದೆ ಇಲ್ಲಿದೆ ಎಂದು ಆ ಸಲಕ್ಕೆ ಕಾಣದೇ ಇದ್ದ ಚಂದ್ರನನ್ನು ಪರಿಕಲ್ಪಿಸಿ, ಅಂತೂ ಕಡೆಗೂ ಅಮ್ಮುಮ್ಮ "ಹಮ್ ಹೌದು ಅಲ್ಲೆಲ್ಲೋ ಚೂರು ಕಾಣ್ಚು" ಎಂದಾಗ ಎಲ್ಲರ ತುಟಿಯಲ್ಲಿರುತ್ತಿದ್ದ ತುಂಟ ಕಿರುನಗೆ ಮಾತ್ರ ಮರೆಯಲಸಾಧ್ಯ.. !! 

ಇಂದು ನನಗೆ ಯುಗಾದಿ ಹಬ್ಬದ ಸಿಹಿಯ ಜೊತೆಗೆ ಬಾಲ್ಯದ ನೆನಪುಗಳ ಸಿಹಿಯೂಟ. ಸಿಹಿ-ಕಹಿ ನೆನಪುಗಳೊಂದಿಗೆ, ಹಳೆಯ ಅನುಭವಗಳೊಂದಿಗೆ, ಹೊಸತನದ ಆರಂಭವಿರಲಿ ಎಂದು ಆಶಿಸುತ್ತಾ ನಿಮ್ಮೆಲ್ಲರಿಗೂ 'ವಿಳಂಬಿ ಸಂವತ್ಸರದ' ಹೊಸ ವರ್ಷದ ಶುಭಾಶಯಗಳು.