ಬುಧವಾರ, ಸೆಪ್ಟೆಂಬರ್ 19, 2018

ಅಡುಗೆ ಸಂಭ್ರಮ

ನಾನು ನಮ್ಮ ಮನೆಯಲ್ಲಿನ ಮುದ್ದಿನ ತನುಜೆ, ಅಕ್ಕನ ಅನುಜೆ. ಚಿಕ್ಕಂದಿನಲ್ಲಿ ಅಮ್ಮ ಎಲ್ಲಾದರೂ ಹೊರಗಡೆ ಹೋದರೆ ಅಪ್ಪಾಜಿಯ ನಳಪಾಕ, ಅಪ್ಪಾಜಿಯೂ ಇಲ್ಲದಿದ್ದ ಪಕ್ಷದಲ್ಲಿ ಅಕ್ಕನ ಅಡುಗೆ ಪ್ರಯೋಗಗಳಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೊರತೆಯೂ ಆಗುತ್ತಿರಲಿಲ್ಲ. ಇದೆ ಕಾರಣಕ್ಕೋ ಏನೋ ಸುಮಾರು ೭-೮ ನೇ ತರಗತಿಗೆ ಬರುವ ವರೆಗೂ ಅಡುಗೆ ತಯಾರಿಸಲು ಸಹಾಯ ಮಾಡುವ ಕೆಲಸ ಮಾಡಿದ್ದಿದ್ದರೂ, ನಾನಾಗಿಯೇ ಯಾವುದೇ ಮುಖ್ಯ ಅಡುಗೆ ತಯಾರಿಸುವ ಗೋಜಿಗೆ ಹೋಗಿಯೇ ಇರಲಿಲ್ಲ. ಹಾಗೊಂದು ದಿನ ಅಪ್ಪಾಜಿ ಅಮ್ಮ ಕಡೆಗೆ ಅಕ್ಕನೂ ಮನೆಯಲ್ಲಿರದ ದಿನ. ಅಂದು ಗೆಳತಿಯೊಬ್ಬಳನ್ನು ಮನೆಗೆ ಕರೆತಂದಿದ್ದೆ. ಮನೆಯಲ್ಲಿ ಅಮ್ಮ ಅಡುಗೆ ತಯಾರಿಸಿಟ್ಟಿದ್ದರೆಂಬ ನೆನಪು. ಯಾವುದೋ ಮಾತಿನ ಮಧ್ಯೆ ಗೆಳತಿಯು ತನಗೆ ಅಲ್ಪಸ್ವಲ್ಪ ಪದಾರ್ಥಗಳನ್ನು ಮಾಡಲು ಬರುತ್ತದೆ ಎಂದು ತನ್ನ ಬಗ್ಗೆ ಹೇಳಿಕೊಂಡಾಗ, ನನ್ನ ಬಗ್ಗೆ ನನಗೆ ಸಂಕೋಚವೆನಿಸಿತು. ನಂತರಕ್ಕೆ, ಅದೆಲ್ಲಿಂದ ಬಂದ ಶೂರತನವೋ ತಿಳಿಯದು, "ನೀನು ನನಗೆ ಗೈಡ್ ಮಾಡು , ನಾನು ಪದಾರ್ಥ ತಯಾರು ಮಾಡುತ್ತೇನೆ" ಎಂದು ಅವಳಲ್ಲಿ ಕೇಳಿಕೊಂಡು, ಬದನೆ ಮತ್ತು ಬೆಳ್ಳುಳ್ಳಿ ಹಾಕಿ ಕಾಯಿ ಗೊಜ್ಜು ಮಾಡುವ ಪ್ಲಾನ್ ಮಾಡಿದೆವು. ತೆಂಗಿನ ತುರಿ ಸಿದ್ಧವಾಯಿತು. ಬದನೇಕಾಯಿ ಪಾತ್ರೆಯಲ್ಲಿಟ್ಟು ಬೇಯಿಸಿಕೊಂಡಿದ್ದಾಯಿತು. ಬೆಳ್ಳುಳ್ಳಿ ತಂದು ಬಿಡಿಸಿಕೊಂಡಿದ್ದಾಯಿತು. ಏನೂ ಅಡುಗೆ ಬಾರದ ನಾನು, ಚಿಟಿಕೆ ಉಪ್ಪಿಗೂ  ಗೆಳತಿಯ ಸೂಚನೆಗಳನ್ನು ತೆಗೆದುಕೊಂಡು, ಸಾಕ್ಷಾತ್ ಸಂಜೀವ್ ಕಪೂರ್ ನ ಮಾರ್ಗದರ್ಶನದಲ್ಲಿ ಅಡುಗೆ ತಯಾರಿಸುತ್ತಿರುವಷ್ಟು ಧನ್ಯತಾ ಭಾವನೆಯಿಂದ ನನ್ನ ಕೆಲಸವನ್ನು ಮಾಡುತ್ತಿದೆ. 'ಇಂದು ಮನೆಯವರೆಲ್ಲ ಬಂದ ನಂತರ ನನ್ನ ಅಡುಗೆ ಕೈಚಳಕವನ್ನು ನೋಡಿ ಶಬ್ಬಾಶ್ ಎನ್ನುತ್ತಾರೆ' ಎಂದು ಮನಸ್ಸಿನಲ್ಲಿಯೇ ಮಣೆ ಹಾಕಿಕೊಂಡಿದ್ದಾಯಿತು. ಸಕಲ ಸಿದ್ಧತೆಯೂ ಆದ ನಂತರಕ್ಕೆ ಉಳಿದಿದ್ದ ಮಹತ್ಕಾರ್ಯ - ಎಲ್ಲವನ್ನೂ ಮಿಕ್ಸರ್ ಗೆ ಹಾಕಿ ರುಬ್ಬುವುದು. ಅಡುಗೆ ಮನೆ ಕಟ್ಟೆ ಹತ್ತಿ ಕೂತು ಮಿಕ್ಸರ್ ಗೆ ಬದನೆಯಾಯಿ ಗೊಜ್ಜಿನ ಮಿಶ್ರಣವನ್ನೆಲ್ಲ ಹಾಕಿ ನೀರು ಸುರಿದದ್ದೇ..! ಹೌದು, ನೀರು ಗೊಜ್ಜು ಬೀಸುವ ತಕ್ಕಷ್ಟು ಹಾಕಿದ್ದಲ್ಲ, ಸಾಕಷ್ಟು ಸುರಿದು ಬಿಟ್ಟಿದ್ದೆ ನಾನು. ಮೊದಲ ಬಾರಿಗೆ ಮಿಕ್ಸರ್ ಗ್ರೈಂಡರ್ ಚಾಲೂ ಮಾಡುವ ಭಯ ಒಂದೆಡೆ, ಯಶಸ್ವಿ ಅಡುಗೆಯ ಉತ್ಸಾಹ ಇನ್ನೊಂದೆಡೆ. ಮುಂದಕ್ಕೇನಾಯಿತು ಕೇಳುವುದೇ ಬೇಡ.. ನಾವು ನೋಡನೋಡುತ್ತಿದ್ದಂತೆಯೇ, "ಗರ್ರ್ರ್.." ಎಂಬ ಶಬ್ದದೊಂದಿಗೆ ಕ್ಷಣಮಾತ್ರದಲ್ಲಿ ಮಿಕ್ಸರ್ ಪಾತ್ರೆಯಲ್ಲಿದ್ದವೆಲ್ಲ ಅರ್ಧಕ್ಕರ್ಧ ಅಡುಗೆ ಮನೆಗೆ ಕಾರಂಜಿಯಾಗಿ ಚಿಮ್ಮಿಯಾಗಿತ್ತು. ಮಿಕ್ಸರ್ ಚಾಲೂ ಮಾಡಿದೊಡನೆ, ನೀರು ಹೆಚ್ಚಾಗಿ ಹೊರ ಉಕ್ಕುತ್ತಿದ್ದದ್ದನ್ನು ಕಂಡು ಹೆದರಿ, ನಾನು ಮಿಕ್ಸರ್ ಮುಚ್ಚಳವನ್ನು ಬಿಗಿಯಾಗಿ ಹಿಡಿಯದೇ ಅಲ್ಲಿಂದ ಕಾಲ್ಕಿತ್ತಿದ್ದೆ. ಅಡುಗೆ ಮನೆಯ ಕಿಟಕಿ, ಕಪಾಟು, ನೆಲ, ಪಾತ್ರೆಯ ಸ್ಟ್ಯಾಂಡ್ ಎಲ್ಲ ಕಡೆ ಗೊಜ್ಜು ಅಕ್ಷರಶಃ 'ಬೀಸಿಕೊಂಡಿತ್ತು'! ಕಡೆಗೆ ಹೇಗೋ ಮಾಡಿ ಸಾವರಿಸಿಕೊಂಡು, ಮನೆಯವರೆಲ್ಲ ಬರುವ ಮೊದಲು, ನಾನು ನನ್ನ ಗೆಳತೀ ಸೇರಿ, ಅತ್ಯಂತ ಪ್ರಯಾಸದಿಂದ ಮನೆಯನ್ನು ಸ್ವಚ್ಛ ಮಾಡಿದೆವು. ಎಷ್ಟು ಸ್ವಚ್ಛ ಮಾಡಿದರೂ, ನಮ್ಮ ಅವಘಡದ ಕುರುಹಿನಿಂದ ಮನೆಯವರಿಗೆ ನಡೆದ ವಿಷಯವನ್ನು ತಿಳಿಸಬೇಕಾಗಿ ಬಂತು. ನಂತರಕ್ಕೆ ಸ್ವಲ್ಪ ಬೈಗುಳ, ವಹಿಸಬೇಕಾದ ಜಾಗರೂಕತೆಯ ಪಾಠ, ಜೊತೆಗೆ ನಮ್ಮ ಹೊಸ ರುಚಿ ಸಂಹಿತದ ಮೊದಲ ಪ್ರಯೋಗದ ಕುರಿತಾಗಿ ನಡೆದ ಘಟನೆಯ ತಮಾಷೆಯೊಂದಿಗೆ ಅಂದಿನ ಆ ಅಧ್ಯಾಯ ಮುಕ್ತಾಯಗೊಂಡರೂ, ಈಗಲೂ ಬದನೇಕಾಯಿ ಬೀಸುಗೊಜ್ಜು ಮಾಡುವಾಗಲೆಲ್ಲಾ ನೆನಪು ಬಂದು ನಗು ಮರುಕಳಿಸುತ್ತದೆ. 

ಮಂಗಳವಾರ, ಸೆಪ್ಟೆಂಬರ್ 4, 2018

ಕೃಷ್ಣನ ಅವಲಕ್ಕಿ

ಆಗ ನಂಗೆ ಎಷ್ಟು ವರ್ಷ ಎಂದು ಸರಿ ನೆನಪಿಲ್ಲ. ಒಟ್ನಲ್ಲಿ ಸಣ್ಣಕ್ಕಿದ್ದೆ. ನಾವು ಮೊಮ್ಮಕ್ಕಳೆಲ್ಲ ಅಜ್ಜನ ಕೋಣೆಯಲ್ಲಿ ಸರಿದುಕೊಂಡು ಅಜ್ಜನ ಬಳಿ ಕೇಳಿ, ಪೌರಾಣಿಕ ಕಥೆ ಹೇಳಿಸಿಕೊಳ್ಳುವುದು ರೂಢಿಯಿತ್ತು. ಹಾಗೊಂದು ಸಾರಿ ಅಜ್ಜ ಕೃಷ್ಣ-ಸುಧಾಮರ ಗಾಢವಾದ ಗೆಳೆತನ, ಪ್ರೀತಿ, ಕೃಷ್ಣನ ಅವಲಕ್ಕಿಯ ಆಸೆ ಎಲ್ಲದರ ಕುರಿತು ಕಥೆಯನ್ನು ಹೇಳಿದ್ದ. ಕಥೆ ಕೇಳಿ ಸಾಕಷ್ಟು ದಿನಗಳು ಕಳೆದಿದ್ದರೂ, ಕೃಷ್ಣ ಹೇಗೆ ಸಣ್ಣ ಮಕ್ಕಳಂತೆ ಸುಧಾಮನ ಹೆಗಲಿನಿಂದ ಅವಲಕ್ಕಿ ಗಂಟನ್ನು ಅತ್ಯಂತ ಸಲಿಗೆಯಿಂದ ಕಸಿದುಕೊಂಡು ತೆಗೆದು ತಿಂದು ಖುಷಿ ಪಟ್ಟಿದ್ದ ಎಂಬ ಕಥೆಯ ಕಲ್ಪನಾ ಚಿತ್ರಣ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು. ಒಂದು ದಿನ ಅದೇನು ಭಯಂಕರ ಆಲೋಚನೆ ಬಂದಿತೋ ಏನೋ, ಮಧ್ಯಾಹ್ನ ಅಮ್ಮುಮ್ಮ ಎಲ್ಲರೂ ಮಲಗಿದ್ದ ಸಮಯಕ್ಕೆ, ಎದ್ದು ಹೋಗಿ ಕಪಾಟಿನಲ್ಲಿ ಅವಲಕ್ಕಿಗಾಗಿ ಹುಡುಕಾಟ ನಡೆಸಿದೆ. ಕಡೆಗೆ ಮೇಲ್ಮೆತ್ತಿನ 'ಹೊಗೆ ಅಟ್ಟ' ದಲ್ಲಿ ಹುಡುಕಾಟದ ಅವಿರತ ಪ್ರಯತ್ನಕ್ಕೆ 'ಅರಳುಕಾಳು ಡಬ್ಬ' ಕೈಗೆ ಸಿಕ್ಕಿತ್ತು. ಚೂರು ಶಬ್ದ ಮಾಡದೆ, ಅಷ್ಟೊತ್ತು ಹುಡುಕಿದ್ದ ಶ್ರಮಕ್ಕೆ "ಕೃಷ್ಣ ನಿಗೆ ಅರಳಕಾಳು ಕೂಡ ಇಷ್ಟವಾಗುತ್ತದೆ' ಎಂಬ ನಿರ್ಧಾರವನ್ನು ನಾನೇ ತೆಗೆದುಕೊಂಡು, ಒಂದು ಲೋಟಕ್ಕೆ ಸ್ವಲ್ಪ ಅರಳಕಾಳು ಹಾಕಿಕೊಂಡು ಜಗಲಿಗೆ ಹೋದೆ. ಹಿಂದೆಲ್ಲ ಮನೆಯ ಜಗಲಿಯ ಗೋಡೆಗೆ ಸಾಲಾಗಿ ದೇವರ ಫೋಟೋಗಳನ್ನು ನೇತು ಹಾಕಿರುತ್ತಿದ್ದರು. ಕೃಷ್ಣನ ದೇವರ ಪಟದ ಕೆಳಗೋ ಅಥವಾ ಜಗಲಿ ಕೋಣೆಯಲ್ಲಿದ್ದ ಕೃಷ್ಣನ ಕ್ಯಾಲೆಂಡರಿನ ಬಳಿಯೋ, ಆ ಲೋಟವನ್ನಿಟ್ಟು ಬಂದು ಮತ್ತೆ ಮಲಗಿಬಿಟ್ಟಿದ್ದೆ. ಬಹುಶಹ ಕೃಷ್ಣ ಬಂದು ತಿಂದಿರುತ್ತಾನೆ ಎಂಬ ನಿಲುಕು ನನ್ನದಾಗಿತ್ತೇನೋ. ಸಂಜೆಗೆ ಅತ್ತೆ "ಇಲ್ಯಾರು ಲೋಟದಲ್ಲಿ ಅಲಕಾಳು ಇಟ್ಟಿದ್ದು" ಎಂದು ಕೇಳ್ತಾ ಇದ್ರೆ, ಉತ್ತರ ಹೇಳಲು ನನಗೆ ಸಂಕೋಚ, ಜೊತೆಗೆ ಆ ಲೋಟದಲ್ಲಿ ಇಟ್ಟಿದ್ದ ಅರಳಕಾಳು ಎಷ್ಟು ಖಾಲಿಯಾಗಿತ್ತೋ ಏನೋ, ನೋಡಕ್ಕಾಗಿತ್ತು ಎಂಬ ಕ್ಯೂರಿಯೋಸಿಟಿ ಬೇರೆ ಒಂದು ಕಡೆ.. ಕಡೆಗೂ ಗೊತ್ತಿಲ್ಲ ಆ ಲೋಟದಲ್ಲಿರ ಅರಳಕಾಳು ಕಡೆಗೆ ಕೃಷ್ಣ ಗಮನ ಕೊಟ್ಟಿದ್ನೋ ಇಲ್ಲವೋ ಎಂದು..
 
ಇಷ್ಟೆಲ್ಲಾ ಮುಸುಕು ನೆನಪುಗಳು ಯಾಕೆ ಮರುಕಳಿಸಿದವೆಂದರೆ, ಕೃಷ್ಣ ಜನ್ಮಾಷ್ಟಮಿ ಗೆ ಸಾನ್ವಿಗೆ ಕೃಷ್ಣ- ಕುಚೇಲರ ಕಥೆ ಹೇಳಿದ್ದೆ. ನಿನ್ನೆ ಇಸ್ಕಾನ್ ಟೆಂಪಲ್ಲಿಗೆ ಭೇಟಿ ನೀಡಿದ್ದೆವು. ಮಗಳು ಕೃಷ್ಣನಿಗೆ ಕೊಡಲೆಂದು ಅವಲಕ್ಕಿ ತುಂಬಿಕೊಳ್ಳೋಣ ಎಂದಿದ್ದಕ್ಕಾಗಿ ಅದೂ ಕೂಡ ಕಟ್ಟಿಕೊಂಡು ಹೋಗಿಯಾಯಿತು. ಆದರೆ ಅಲ್ಲಿ, ಅಷ್ಟು ಜನರ ಮಧ್ಯೆ ಅವಲಕ್ಕಿ ಕೊಡುವುದು ಹೋಗಲಿ, ಕೃಷ್ಣನ ಮೂರ್ತಿಯಿರುವ ಸ್ಥಳದವರೆಗೂ ನಮಗೆ ತಲಪಲಾಗಲಿಲ್ಲ. ಭಜನೆಗೆ ದೂರದಲ್ಲಿಯೇ ಸ್ವಲ್ಪ ಹೊತ್ತು ಕುಳಿತು ಬಂದದ್ದಾಯಿತು. ಅವಲಕ್ಕಿ ತಲುಪಿಸಲಾಗಲಿಲ್ಲ ಎಂಬುದರ ಕುರಿತು ಮಗಳಿಗೆ ನಿರಾಸೆ. ಇವತ್ತು ಸ್ಕೂಲಿನಿಂದ ಬಂದವಳಿಗೆ ಊಟದ ನೀಡುವ ತಯಾರಿಯಲ್ಲಿ ನಾನಿದ್ದರೆ, ಮಗಳು ಅಡುಗೆ ಮನೆಯಿಂದ ಬಟ್ಟಲೊಂದನ್ನು ತೆಗೆದುಕೊಂಡು ಸರ ಸರನೆ ನಡೆದಳು. ಮುಂದಕ್ಕೆ ಈ ಚಿತ್ರದಲ್ಲಿದ್ದಂತಾಯಿತು..