ಮಕ್ಕಳ ಪರೀಕ್ಷೆ - ಪಾಲಕರ ತಯಾರಿ ಹೇಗೆ?
ಮಕ್ಕಳ ಶಿಕ್ಷಣದ ವಾರ್ಷಿಕ ಅವಧಿಯ ಕೊನೆಯ ಹಂತ, ಪರೀಕ್ಷಾ ಸಮಯ.. ಅತ್ಯಂತ ಮುಖ್ಯವಾದ ಘಟ್ಟ. ಈಗಿನ ಶಿಕ್ಷಣ ವಿಧಾನದ ಪರಿಸ್ಥಿತಿ ನೋಡಿದರೆ, ಮಕ್ಕಳಿಗೆ ಎಷ್ಟರ ಮಟ್ಟಿಗೆ ಪರೀಕ್ಷಾ ಆತಂಕವಿರುತ್ತದೋ ಅದಕ್ಕಿಂತ ದುಪ್ಪಟ್ಟು ಆತಂಕ ಪೋಷಕರಲ್ಲಿ ಇರುತ್ತದೆ. ತಮ್ಮ ಮಗು ಓದಿನಲ್ಲಿ ಮುಂಚೂಣಿಯಲ್ಲಿರಬೇಕೆಂಬ ಅಭಿಲಾಷೆ ಪ್ರತಿಯೊಬ್ಬ ಪಾಲಕನ ಒತ್ತಾಸೆಯಾಗಿರುತ್ತದೆ. ಎಲ್ಲಾ ಮಕ್ಕಳ ಬುದ್ಧಿ ಮಟ್ಟವು ಒಂದೇ ರೀತಿಯಲ್ಲಿ ಇರುವುದಿಲ್ಲವಾದ್ದರಿಂದ, ಹೆಚ್ಚಿನ ಸಿದ್ಧತೆ ಖಂಡಿತ ಅವಶ್ಯಕ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆಯ ಕೊನೆಯ ವಾರದಲ್ಲಿ ಪುಸ್ತಕ ಹಿಡಿಯುವ ಮಕ್ಕಳಿಗೂ, ಗಾಬರಿಸಿ ಗದರಿಸಿ ಇನ್ನಷ್ಟು ಆತಂಕ ಪಟ್ಟು ಒತ್ತಡ ಹಾಕುವ ಪೋಷಕರಿಗೂ, ಇದೋ ಒಂದು ಚಿಕ್ಕ ಟಿಪ್ಪಣಿ, ಪರೀಕ್ಷೆ ಎಂಬುದಕ್ಕೆ ಮಕ್ಕಳ ಜೊತೆ ನಮ್ಮ ತಯಾರಿ, ಜವಾಬ್ದಾರಿಗಳೇನು ಎಂಬುದರ ಬಗ್ಗೆ. ೧. ಮಗುವಿನ ಶೈಕ್ಷಣಿಕ ಪ್ರಗತಿ ಬಗ್ಗೆ ಶಾಲೆಯಲ್ಲಿ ವಿಚಾರಣೆ. ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಡುವ ಭರವಸೆಯನ್ನೀಡುವ ಶಾಲೆಗೆ ಸೇರಿಸಿದರೆ ನಮ್ಮ ಜವಾಬ್ಧಾರಿ ಮುಗಿದೀತೇ? ಖಂಡಿತವಾಗಿಯೂ ಅಷ್ಟೇ ಸಾಲದು. ಮಕ್ಕಳ ಕಲಿಕೆಯ ಹಂತದಲ್ಲಿ ಅವರಷ್ಟೇ ನಾವು ಕೂಡ ಭಾಗಿಯಾಗಬೇಕು. ಪರೀಕ್ಷೆಗೆ ಇನ್ನೂ ಎರಡು ತಿಂಗಳಿರುವಂತೆಯೇ ಒಮ್ಮೆ ಶಾಲೆಯಲ್ಲಿ ಮಗುವಿನ ಪ್ರಗತಿಯ ಬಗ್ಗೆ ವಿಚಾರಿಸಿ, ನಮ್ಮ ಮಗುವಿಗೆ ಯಾವ ವಿಷಯ ಕಷ್ಟವಾಗುತ್ತಿದೆ, ಶಾಲೆಯಲ್ಲಿ ಕಲಿಕಾ ಸಾಮರ್ಥ್ಯ,...