ಕೈವಾರ ಬೆಟ್ಟ ಮತ್ತು ಕೈಲಾಸಗಿರಿ ಗುಹೆ
ಬೆಂಗಳೂರಿನಿಂದ ೬೫ ಕಿಮೀ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿದೆ ಕೈವಾರವೆಂಬ ಊರು. ಆಸ್ತಿಕರಿಗೆ ಇದೊಂದು ಪುಣ್ಯಕ್ಷೇತ್ರ, ಚಾರಣಿಗರಿಗೆ ಮತ್ತೊಂದು ಸ್ವರ್ಗ. ಕರ್ನಾಟಕ ಅರಣ್ಯ ಇಲಾಖೆಯವರ ನಿರ್ವಹಣೆಯಲ್ಲಿರುವ ಇಲ್ಲಿನ ಕೈವಾರ ಬೆಟ್ಟಕ್ಕೆ ಟ್ರೆಕಿಂಗ್ ಹೋಗಲು ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ. karnatakatourism.org ನಲ್ಲಿ ಕೂಡ ಆನ್ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹೊರಟು ಹೊಸಕೋಟೆ ಮಾರ್ಗವಾಗಿ ಅಥವಾ ದೇವನಹಳ್ಳಿ-ಬಿಜಯಪುರ ಮಾರ್ಗವಾಗಿ ಬಸ್ಸು ಅಥವಾ ಸ್ವಂತ ವಾಹನದಲ್ಲಿ ಕೈವಾರವನ್ನು ತಲುಪಬಹುದು. ನಾವು ಹೋದದ್ದು ನಮ್ಮ ಯೋಗ ಶಿಕ್ಷಣ ಕೇಂದ್ರದ ವತಿಯಿಂದ, ಸಂಚಾರದ ವ್ಯವಸ್ಥೆ, ಊಟ ತಿಂಡಿಗಳ ವ್ಯವಸ್ಥೆ ಮುಂಚಿತವಾಗಿಯೇ ನಮ್ಮ ತಂಡದ ನೇಕಾರರಿಂದ ಆದ್ದ ಕಾರಣ, ನಮಗೆ ಹೆಚ್ಚಿನ ನಿರ್ವಹಣಾ ಜವಾಬ್ಧಾರಿ ಬೀಳಲಿಲ್ಲ. ಚಾರಣ ಯೋಗಬಂಧುಗಳ ಜೊತೆಯಾದ್ದರಿಂದ ದೇಹದ ಸ್ನಾಯುಗಳನ್ನು ಚಲನಶೀಲವಾಗಿರಿಸಲು ಆಸಕ್ತಿ ಹೊಂದಿರುವ ಸಮಾನ ಮನಸ್ಕರರ ಗುಂಪು ದೊರೆತಂತಾಗಿತ್ತು. ಇದರ ಜೊತೆಯಲ್ಲಿ, ಈ ಸ್ಥಳದ ಮಹಿಮೆಯನ್ನು ಅತ್ಯಂತ ನಿಖರವಾಗಿ ಬಲ್ಲವರಾದ ನಮ್ಮ ಗುರುಗಳಾದ ಸುಬ್ಬು ಬೈಯ್ಯ ಮತ್ತು ಅಶೋಕ್ ಸರ್ ನ ನೇತೃತ್ವದ ಯೋಗಯಾತ್ರೆ ಇದಾದ್ದರಿಂದ, ಸ್ಥಳ ಮಹಿಮೆಯನ್ನು ವಿಸ್ತಾರವಾಗಿ ತಿಳಿಯಲು ಇನ್ನಷ್ಟು ಸಹಾಯಕವಾಯಿತು. ಈ ಸ್ಥಳ ಸಂತ ಕೈವಾರ ತಾತಯ್ಯ ಆಶ್ರಮ ಮತ್ತು ದೇವಾಲಯದ ಸಂಕೀರ್ಣಕ್ಕೆ ಹೆಸ...