'ಮಾಸ್ಟರ್ ಮೈಂಡ್'!!
ಮಗಳು ಹುಟ್ಟಿದ ಮೇಲೆ ಮತ್ತೊಮ್ಮೆ ಬಾಲ್ಯವನ್ನು ಅನುಭವಿಸುತ್ತಿರುವ ನನಗೆ ಮತ್ತು ನನ್ನ ಮನೆಯವರಿಗೆ, ಈಗಿನ ಕಾಲಕ್ಕೆ ಸಿಗುತ್ತಿರುವ ಮಕ್ಕಳ ಬಗೆ ಬಗೆಯ ಬೋರ್ಡ್ ಗೇಮ್ ಗಳು ಒಂದು ಸೋಜಿಗ. ಮಗಳಿಗೆ ಚಿಕ್ಕಂದಿನಿಂದ್ಲೂ ಜೋಡಣೆಯ ಮಾದರಿಯ ಆಟಗಳು ಹೆಚ್ಚಾಗಿ ಆಸಕ್ತಿಯಿರುವುದರಿಂದ, ಅವಳ ಕಪಾಟಿನ ತುಂಬಾ ಬೋರ್ಡ್ ಗೇಮ್ ಗಳ ಬಾಕ್ಸ್ ಗಳೇ ತುಂಬಿಕೊಂಡಿವೆ. ನಾವು (ವಯಸ್ಸಿನಲ್ಲಿ) ಮಕ್ಕಳಾಗಿದ್ದ ಕಾಲಕ್ಕೆ ಜೂಟಾಟ, ಕಣ್ಣಾಮುಚ್ಚಾಲೆ, ಮರಕೋತಿ ಆಟ, ಕುಂಟಾಬಿಲ್ಲೆ, ಅಡುಗೆ ಆಟ, ಮಣ್ಣಿನಲ್ಲಿ ದೇವಸ್ಥಾನ ಕಟ್ಟುವುದು, ಶಟಲ್ ಬ್ಯಾಡ್ಮಿಂಟನ್, ಸೈಕಲ್ಲು, ಖೋ ಖೋ, ಬಾಲು-ಬ್ಯಾಟು, ಕ್ರಿಕೆಟ್ ಹೀಗೆ ಎಲ್ಲ ಓಡಾಡಿ ಆಡುವ ಹೊರಾಂಗಣ ಆಟಗಳೇ ಹೆಚ್ಚಾಗಿ ರೂಡಿಯಲ್ಲಿದ್ದವು. ಆಟಿಕೆಗಳ ಕೊರತೆಯಿಲ್ಲದಿದ್ದರೂ ಸಾಗರದಂತ ಊರಲ್ಲಿ ವಿಶೇಷ ಆಟಿಕೆಗಳೇನೂ ಸಿಗ್ತಿರ್ಲಿಲ್ಲ. ಸಾಮಾನ್ಯವಾಗಿ ಸಿಗುತ್ತಿದ್ದ ಒಂದಷ್ಟು ಗೊಂಬೆಗಳು, ಕವಡೆ, ಚನ್ನೆಮಣೆ, ಹಾವು-ಏಣಿ, ಚದುರಂಗ, ಕೇರಂ ಬೋರ್ಡ್ ಇವೇ ಎಲ್ಲಾ ಎಲ್ಲರ ಮನೆಯಲ್ಲೂ ಲಭ್ಯವಿರುತ್ತಿದ್ದಆಟದ ಸಾಮಾನುಗಳು. ಬೆಂಗಳೂರಿನಿಂದ ಸೋದರಮಾವ ರಜೆಯಲ್ಲಿ ಮಕ್ಕಳು ಆಡ್ಕೊಳ್ಳಿ ಎಂದು 'ಬಿಸಿನೆಸ್ ಬೋರ್ಡ್' ಆಟದ ಬಾಕ್ಸ್ ಅನ್ನು ಅಜ್ಜನ ಮನೆಗೆ ತಂದಾಗ, ಅದೇ ಒಂದು ದೊಡ್ಡ ವಿಶೇಷವಾದ ಆಟ ನಮಗಾಗ.. ಈಗೆಂತು ಬಿಡಿ, ಮಾರುಕಟ್ಟೆಯಲ್ಲಿ ನೂರಾರು ...