ಹೆರಿಟೇಜ್ ವಿಲೇಜ್ - ರಘುರಾಜ್ಪುರ
ಒಡಿಶಾ ಪ್ರವಾಸ ಮಾಡಿದ್ದ ಗೆಳೆಯನೊಬ್ಬ, ನೀ ಅಲ್ಲಿ ಆರ್ಟ್ ವಿಲ್ಲೇಜ್ ಗೆ ಹೋಗಕ್ಕೇ.. ನಿಂಗ್ ಭಾರೀ ಇಷ್ಟ ಆಗ್ತು ಎಂದು ಹೇಳಿದ್ದು ವರ್ಷಗಳಿಂದ ಮನಸ್ಸಿನಲ್ಲಿ ಬರೆದಿಟ್ಟ ಷರಾ ಆಗಿತ್ತು. ಕಲೆಯ ಕುರಿತು ಆಸಕ್ತಿ ಇರುವ ನನಗಂತೂ, ಇಡೀ ಊರಿಗೆ ಊರೇ ಪೇಂಟಿಂಗ್ ಮತ್ತು ಆರ್ಟ್ ಗಳಿಂದ ತುಂಬಿರುತ್ತದೆ, ಎಂಬ ವಿಷಯವೇ ಪುಳಕವಾಗಿತ್ತು. ನಮ್ಮ ಪ್ರವಾಸದ ಸಮಯದಲ್ಲಿ ಇಂಟರ್ನೆಟ್ ಮಾಹಿತಿ ಒಟ್ಟು ಮಾಡಿಕೊಂಡು ತಯಾರಾಗಿ ಹೋದೆವು. ಪುರಿ ನಗರಿಯ ಹೊರಗೆ, ಭುವನೇಶ್ವರ್ ಕಡೆಗೆ ಹೈವೆಯಲ್ಲಿ ೧೪ ಕಿಮೀ ಮುಂದಕ್ಕೆ ಹೋದರೆ, ಚಂದನಾಪುರ್ ಸಿಗುತ್ತದೆ, ಅಲ್ಲಿಯ ಮಾರುಕಟ್ಟೆಯ ಪಕ್ಕದಲ್ಲಿ ಒಳ ರಸ್ತೆ ಹಿಡಿದು ೨೦೦ ಮೀ ಮುಂದಕ್ಕೆ ಹೋದರೆ ಸಿಗುವುದೇ ರಘರಾಜಪುರ್ ಹಳ್ಳಿ. ೧೦೦-೧೨೦ ಸಣ್ಣ ದೊಡ್ಡ ಮನೆಗಳಿರುವ ಈ ಊರಿನ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಬ್ಬರಾದರೂ ಕಲಾವಿದರು! ಇಡೀ ಊರಿನ ಎಲ್ಲ ಮನೆಗಳ ಗೋಡೆಗಳ ಮೇಲೂ ಸಾಂಪ್ರದಾಯಿಕ ಚಿತ್ರಕಲೆಗಳು! ಕೆಲವರ ಮನೆ ಎಷ್ಟು ಸಣ್ಣದೆಂದರೆ, ಮನೆ ಹೊರಗಿನ ಜಗಲಿಯಲ್ಲೇ ಕಾಲವಸ್ತುಗಳ ನೇತು ಹಾಕಿ ಪ್ರದರ್ಶನಕ್ಕಿಟ್ಟಿರುತ್ತಾರೆ. ಭಾರತೀಯ ರಾಷ್ಟ್ರೀಯ ರಾಷ್ಟ್ರೀಯ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಚ್) ರಘುರಾಜ್ಪುರವನ್ನು ಒಂದು ಪರಂಪರೆ ಗ್ರಾಮವಾಗಿ ಅಭಿವೃದ್ಧಿಪಡಿಸಿದೆ, ' ಹೆರಿಟೇಜ್ ವಿಲೇಜ್' ಎಂದು ಘೋಷಿಸಿದೆ. ಇದನ್ನು ಒಡಿಶಾದ ಪ್ರಾಚೀನ ಗೋಡೆ ವರ್ಣಚ...