ಮಕ್ಕಳ ಪರೀಕ್ಷಾ ತಯಾರಿ - ವಿರಾಮದ ಆಟಗಳು
ಮಕ್ಕಳ ಪರೀಕ್ಷಾ ತಯಾರಿ - ವಿರಾಮದ ಆಟಗಳು : ಮಕ್ಕಳಿಗೀಗ ಪರೀಕ್ಷಾಸಮಯ. ತುಸು ಹೆಚ್ಚೇ ಓದುವ ಸಮಯ ಬೇಕು. ಕಲಿಕೆ, ಮನನ, ಪುನರಾವರ್ತನೆ ಎಂದು ಅಧಿಕ ಸಮಯ ಕುಳಿತು ಓದುವ ಅನಿವಾರ್ಯತೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡುವ ಅದೆಷ್ಟೋ ಮಕ್ಕಳಿಗೆ ಈಗ ಒಂದೇ ಸಲಕ್ಕೆ ಓದಿ ಅರಗಿಸಿಕೊಳ್ಳುವ ಸವಾಲು. ಇಂತಹ ಸಮಯದಲ್ಲಿ ನಿರಂತರವಾಗಿ ಓದುವ ಮಕ್ಕಳಿಗೆ ಮಧ್ಯೆ ಮಧ್ಯೆ ವಿರಾಮ ಬೇಕಾಗುತ್ತದೆ. ಸಣ್ಣ ಸಣ್ಣ ವಿರಾಮದ ಸಮಯದಲ್ಲಿ ಮಕ್ಕಳಿಗೆ ಸಂತೋಷವೂ ಆಗಬೇಕು, ಹಾಗೆಯೆ ಅವರ ಬುದ್ಧಿಗೆ ವ್ಯಾಯಾಮವೂ ಆಗುವಂತಹ ಒಂದಷ್ಟು ಮಕ್ಕಳ ಆಟಗಳು, ಮಕ್ಕಳಿಗೂ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುತ್ತಿರುವ ಪಾಲಕರಿಗೂ.. ರೇನ್ಬೋ ಆಟ : ನೆಲ, ಬೋರ್ಡ್ ಅಥವಾ ಒಂದು ಪೇಪರ್ರಿನ ಮೇಲೆ, ಕೆಳಗೆ ಕಾಣುವಂತೆ ಐದರಿಂದ ಏಳು ಮನೆಗಳ ಚೌಕಟ್ಟನ್ನು ಚಿತ್ರಿಸಿಕೊಳ್ಳಿ. ಈಗ ಮಗುವಿಗೆ ಕಣ್ಣು ಕಟ್ಟಿ. ವಿವಿಧ ಬಣ್ಣಗಳು ಕಾಣುವಂತಹ ಯಾವುದೇ ವಸ್ತು ಉದಾಹರಣೆಗೆ, ಸ್ಕೇಚ್ಪೆನ್ಸ್, ಕ್ರೆಯಾನ್ಸ್, ಲೆಗೋ ಬಿಲ್ಡಿಂಗ್ಆ ಬ್ಲಾಕ್ಸ್ ಇನ್ನಿತರ ಯಾವುದೇ ಬಣ್ಣದ ವಸುಗಳನ್ನು ಚಿತ್ರದಲ್ಲಿ ತೋರಿಸಿದಂತೆ ಮನೆಗಳಲ್ಲಿ ಜೋಡಿಸಿಡಿ. ಮಗುವಿಗೆ ಕಣ್ಣಿಗೆ ಕಟ್ಟಿದ ಬಟ್ಟೆ ತೆಗೆದು, ೫ - ೮ ಸೆಕೆಂಡುಗಳ ಕಾಲ, ನೋಡಲು ತಿಳಿಸುವುದು. ಆನಂತರ ಮತ್ತೆ ಮಗುವಿಗೆ ಕಣ್ಣು ಮುಚ್ಚಲು ಹೇಳಿ, ಈ ಎಲ್ಲ ಬಣ್ಣದ ವಸ್ತುಗಳನ್ನು ತೆಗೆದು ಬದಿಯಲ್ಲಿ ಇಡುವುದು. ಈಗ ಸವಾಲು ತಯಾರು. ಮುಂಚೆ ನೋಡಿದ ಮಾದರಿಯಲ್ಲಿಯೇ ಮಗು ಬಣ್...