ನಮ್ಮ ಆಹಾರವೇ ನಮಗೆ ಔಷಧಿ
ಮೇಲಿಂದ ಮೇಲೆ ಬರುವ ಸಾಂಕ್ರಾಮಿಕ ರೋಗಗಳು , ಹೃದಯ ಸಂಬಂಧೀ ಕಾಯಿಲೆಗಳ ಅನುಭವ ಪಡೆದ ಮೇಲೆ, ಸಾವು ನೋವುಗಳ ಸುದ್ದಿಗಳ ಕೇಳಿದ ಮೇಲೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯ ಎಂಬುದು ಅರಿವಾಗಿದೆ. ಆದರೇನು ಮಾಡುವುದು? ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಳತೆಯಲ್ಲಿ ಬೇಕಾಗಿದ್ದೆಲ್ಲ ಸಿಗುವ ಮಾರಾಟ ಸೌಲಭ್ಯ, ಹೆಚ್ಚಾದ ಮನುಷ್ಯನ ಆಸೆಗಳು, ಮೆಚ್ಚುಗೆಯಾದ ಕಷ್ಟಪಡದ ಬದುಕು ಇತ್ಯಾದಿ ಅಂಶಗಳಿಂದ, ಆಹಾರ ಸಾಮಗ್ರಿಗಳು ಸ್ಥಳೀಯತೆ ಕಳೆದುಕೊಂಡು, ಹೆಚ್ಚೆಚ್ಚು ರೆಡಿ ಟು ಈಟ್, ಪ್ಯಾಕಡ್ ಫುಡ್ಸುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಿ ಹೋಗಿವೆ. ಮನೆಯ ಮೆಟ್ಟಿಲಿಳಿ್ದರೆ ಹೊರಗಿನ ತಿಂಡಿ ಕಣ್ಣು ಕುಕ್ಕುತ್ತದೆ. ಆ ಮೋಹದಿಂದ ಹೊರಬರುವುದು ಹೇಗೆ? ಅದಕ್ಕೆ ಒಂದೇ ಪರಿಹಾರ. ನಾವು ಮನೆಯಲ್ಲಿ ತಿನ್ನುವ ಆಹಾರವನ್ನು ಅರಿತುಕೊಳ್ಳುವುದು. ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿಯೂ ವಿಭಿನ್ನ. ನಮ್ಮ ದೇಹಕ್ಕೆ ಯಾವುದು ಹಿತ ಅಹಿತ ಎಂಬುದು ನಾವೇ ಅಧ್ಯಯನ ಮಾಡಿಕೊಳ್ಳಬೇಕು. ಆಹಾರ ಎಂದರೆ ಕೇವಲ ಹೊಟ್ಟೆ ತುಂಬಿಸುವುದು ಎಂದರ್ಥವಲ್ಲ. ದೇಹವನ್ನು ರೋಗಮುಕ್ತವನ್ನಾಗಿಸಿ, ಸ್ವಾಸ್ಥತೆಯಿಂದ ಇಡಲು ಬೇಕಾದ ಪೋಷಕಾಂಶಗಳನ್ನು ನೀಡುವುದೇ ಆಹಾರ. ಹಾಗಾಗಿ ಎಷ್ಟು ಪ್ರಮಾಣದ ಆಹಾರ, ಯಾವ ಬಗೆಯ ಆಹಾರ, ಯಾವ ಕ್ರಮದಲ್ಲಿ, ಯಾವಾಗ ತೆಗೆದುಕೊಳ್ಳಬೇಕು ಎಂಬ ವಿಷಯಗಳೂ ಇಲ್ಲಿ ಮುಖ್ಯ. ಆಹಾರವನ್ನು ಔಷಧಿಯೇ ಎಂದುಕೊಂಡು ಬಳಸಿದರೆ, ಮುಂದೆ...