ಕಾಶಿಯ ಅತಿಥಿಯಾಗಿ!
ಉತ್ತರಪ್ರದೇಶದ ೨೦೨೪ ರ ' ದೇವ್ ದೀಪಾವಳಿ' ಹಬ್ಬಕ್ಕೆ ನಾನು ಬನಾರಸ್ನಲ್ಲಿದ್ದೆ. ಮೊದಲ ಬಾರಿ ಕಾಶಿ ನೋಡಿದ ಅನುಭವ, ಅದರಲ್ಲೂ ಸೊಲೊಟ್ರಿಪ್. ಆ ಎರಡು ದಿನದಲ್ಲಿ ಕಾಶಿಗೆ ಹರಿದು ಬಂದ ಜನಸಂಖ್ಯೆ ೧೨-೧೪ ಲಕ್ಷವಂತೆ! literally 'ಒನ್ ಇನ್ ಮಿಲಿಯನ್' ಆಗಿದ್ದೆ ನಾನಲ್ಲಿ. ದಿನಕ್ಕೆ ೧೦-೧೨ ಕಿಮೀ ನಡುಗೆ, ನಡೆದಷ್ಟೂ ನೋಡಿದಷ್ಟೂ ಚಂದ ಆ ಊರು! ಕಾಶಿ ವಿಶ್ವನಾಥನ ದರುಶನಕ್ಕೆ ಹೋಗಿ ಹೊರಬರುವಲ್ಲಿ ಅರ್ಧ ದಿನಕ್ಕಿಂತಲೂ ಹೆಚ್ಚು ಸಮಯ ಆಗಿತ್ತು. ಮುಂದಕ್ಕೆ ಸಂಧ್ಯಾಕಾಲದ ಒಳಗೆ ನಾನು ಹೋಗಬೇಕಿದ್ದ ಸ್ಥಳ ೫-೬ ಕಿಮೀ ದೂರವೂ ಇದ್ದುದ್ದರಿಂದ, ಯಾವುದಾದರೂ ಬಾಡಿಗೆ ಹಿಡಿದು ಅಕ್ಷಣಕ್ಕೆ ಹೋಗಬೇಕಿತ್ತು. ಕಾಶಿ ವಿಶ್ವನಾಥನ ದೇವಾಲಯದ ಹಾದಿಯಿಂದ ಒಂದು ಕಿಮೀ ನಡೆದು ಒಂದು ಸರ್ಕಲ್ಗೆ ಬಂದು ನೋಡಿದರೆ ಅಲ್ಲಿಂದ, ಟ್ರಾಫಿಕ್ ಸಲುವಾಗಿ ರಸ್ತೆ ಬಂದ್ ಮಾಡಲಾಗಿತ್ತು. ರಸ್ತೆ ತುಂಬಾ ಜನಜಂಗುಳಿ, ಸುಮ್ಮನೆ ನಿಂತರೆ ನಾವೇ ತಳ್ಳಿ ಹೋಗುವಷ್ಟು! ಹತ್ತಿರವೇ ಇದ್ದ ಪೊಲೀಸೊಬ್ಬನನ್ನು ಕೇಳಲಾಗಿ, ನಾನು ೧.೫ ಕಿಮೀ ವಾಪಸು ನಡೆದು ಹೋಗಿ ಇನ್ನೊಂದು ಸರ್ಕಲ್ ನಿಂದ ಗಾಡಿ ಹಿಡಿಯಬೇಕಾಗುತ್ತದೆ ಎಂದರು. "ಅರ್ರೆ ಮುಝೆ ಧೇರ್ ಹೊರಹೀ ಹೈ ಕೊಯಿ ಶಾರ್ಟ್ಕಟ್ ಹೋಗ ಕ್ಯಾ ಚಲ್ಕೆ ಜಾನೇ ಕೇಲಿಯೇ" ಎಂದು ವಿಚಾರಿಸಿದೆ. "ಅಪ್ಕೋ ಕಂಹಾ ಜಾನಾಹೈ?" ಎಂದೆಲ್ಲ ವಿವರಗಳನ್ನು ವಿಚಾರಿಸಿದವನೇ, ಆ ಕಡೆಯಿಂದ ಬರುತ್ತಿದ್ದ ಒಂದು ಬೈಕ್ ಸವಾರನಿಗೆ ಕೈ ...