ಬಿಜಲಿ ಮಹಾದೇವ್!!
ಚಂದ್ರಖಾನಿ ಪಾಸ್ ನ ಒಟ್ಟು ೬೫ ಕಿಮೀ ಚಾರಣದ ಭಾಗವಾಗಿ, ಮೂರನೇ ದಿನದ ನಮ್ಮ ಚಾರಣ, ಮೊದಲ ನಾಲ್ಕು ಕಿಲೋಮೀಟರ್ - ಬಿಜಲಿ ಮಹಾದೇವ್ ಎಂಬ ಧಾರ್ಮಿಕ ಪ್ರೇಕ್ಷಣೀಯ ಪುಣ್ಯ ಸ್ಥಳಕ್ಕೆ ಮೂಲಕ ಹಾದು, ನಂತರಕ್ಕೆ ಏಳು ಕಿಲೋಮೀಟರ್ ಸೋಲಾಟಂಕಿ ಎಂಬ ಬೇಸ್ ಕ್ಯಾಮ್ಪ್ ತಲುಪುವ ಯೋಜನೆಯೊಂದಿಗೆ ಕೂಡಿತ್ತು. ೬೫೦೦ ಫೀಟ್ ಎತ್ತರದಲ್ಲಿರುವ ಚಾನ್ಸರಿ ಎಂಬ ಹಳ್ಳಿಯಿಂದ ನಮ್ಮ ಆ ದಿನದ ಚಾರಣವನ್ನು ಪ್ರಾರಂಭಿಸಿದೆವು. ಅಲ್ಲಿಯವರೆಗೆ ಹಿಂದಿನ ಬೆಸ್ಕ್ಯಾಮ್ಪ್ ನಿಂದ ಮಿನಿ ಬಸ್ಸಿನಲ್ಲಿ ೩೦ ಕಿಮೀ ಗಳ ಪ್ರಯಾಣ ಬೆಳೆಸಿದ್ದೆವು. ಏಕಕಾಲಕ್ಕೆ ಒಂದೇ ವಾಹನ ಹೋಗಲು ಸಾಧ್ಯವಿರುವ ಕೊರಕಲು ರಸ್ತೆ, ಮೇಲೇರಿದ ಹಾಗೆಯೂ ಜೀವ ಝಲ್ಲೆನಿಸುತ್ತದೆ. ರಸ್ತೆಯ ತುತ್ತತುದಿಯಲ್ಲಿ ಬಸ್ಸಿನ ಒಂದು ಚಕ್ರ ಇರುತ್ತದೆ, ಕೆಳಗಡೆ ಪ್ರಪಾತ. ಅಷ್ಟಾದರೂ ಎದುರುಬದರು ವಾಹನವನ್ನು ದಾಟಿಸಿಕೊಳ್ಳುವ ಅಲ್ಲಿನ ವಾಹನ ಚಾಲಕರಿಗೆ ಒಂದು ಸಲಾಂ.
ಕಲು ಜಿಲ್ಲೆಯ ಸುತ್ತಮುತ್ತಲೂ ಎತ್ತರೆತ್ತರಕಣಿವೆಗಳೇ ಎಲ್ಲವೂ ಅವುಗಳ ಮೇಲಿರುವ ಹಳ್ಳಿಗಳು! ಮರದಿಂದ ಮಾಡಿದ ಸಣ್ಣ ಸಣ್ಣ ಹಳೆಯ ಮನೆಗಳು, ಅಲ್ಲಲ್ಲಿ ಇತ್ತೀಚಿನ ಸಿಮೆಂಟ್ ಮನೆಗಳು, ಹೆಚ್ಚಾಗಿ ಕಲ್ಲಿನ ಹೆಂಚುಗಳನ್ನು ಮನೆಯ ಮೇಲೆ ಮುಚ್ಚಿಗೆಯ ರೂಪದಲ್ಲಿ ಹಾಕುತ್ತಾರೆ, ಹಿಮಪಾತದಿಂದ ಸುರಕ್ಷಿತವಾಗಿರಲು. ಕೆಲವರದ್ದು ದನ, ಕುರಿ ಪಶು ಸಂಗೋಪನೆ ಎಂಬುದು ಜಾನುವಾರುಗಳ ನೋಡಿ ತಿಳಿಯುತ್ತದೆ. ಕೆಲವರದ್ದು ಮನೆ ಸುತ್ತಲೇ ಎಲ್ಲೆಲ್ಲಿ ಜಾಗ ಸಿಗುತ್ತದೆಯೋ ಅಲ್ಲೆಲ್ಲ ಉಳುಮೆ ಮಾಡಿ ತರಕಾರಿ ಗೆಡ್ಡೆಗೆಣಸು ಬೆಳೆದುಕೊಳ್ಳುವ ಜೀವನೋಪಾಯದ ಪ್ರಕ್ರಿಯೆ.. ಕುಲು ಕಣಿವೆಯ ಶೀತ ಹವೆ ಸೇಬು ಬೆಳೆಗೆ ಹೇಳಿ ಮಾಡಿಸಿದ ಜಾಗ. ಅಂತೆಯೇ ದಾಳಿಂಬೆ ಕೂಡ. ಹಾಗಾಗಿ ಸೇಬು ಪ್ಲಾಟ್ ಗಳು ಅಲ್ಲಲ್ಲಿ ರಸ್ತೆ ಪಕ್ಕದಲ್ಲಿ ಕಾಣಸಿಗುತ್ತದೆ, ಸಾಕಷ್ಟು ಮನೆಗಳ ಆವರಣದಲ್ಲಿ ನಮ್ಮ ಮನೆಗಳಲ್ಲಿ ತುಳಸಿ ಇದ್ದಂತೆ, ಒಂದಾದರೂ ಸೇಬು ಅಥವಾ ದಾಳಿಂಬೆ ಮರವನ್ನು ಕಂಡೆವು. ನಮ್ಮ ಕೊಡಚಾದ್ರಿ, ಆಗುಂಬೆ ಘಾಟಿ ರಸ್ತೆಗಳಂತೆ ಅಲ್ಲಿನ ಟಾರೋಡಿನ ಸಿಮೆಂಟಿನ ರಸ್ತೆಗಳು, ಏರು ತುಸು ಜಾಸ್ತಿಯೇ! ತುಸುದೂರ ಹತ್ತುವಾಗಲೇ ಏದುಸಿರು ಪ್ರಾರಂಭವಾಗುತ್ತದೆ, ಫಿಟ್ನೆಸ್ ಅಭ್ಯಾಸವಿಲ್ಲದೆ ಹೋದರೆ... ಇಲ್ಲಿಂದ ಹೊರಟ ನಮ್ಮ ಪಯಣ, ಭಕ್ತಿಯ ಧಾರ್ಮಿಕ ರೂಪದ ಆಸ್ಥೆಯಾಗಿ ಇತರ ಯಾತ್ರಿಗಳ ಜೊತೆ ಆ ಭಕ್ತಿಯ ಅನುಭವಿಸುತ್ತ ಚಾರಣದ ರೂಪದಲ್ಲಿ ಸಾಗುತ್ತಿದ್ದುದರಿಂದ ನಮಗೆ ಇದೊಂದು ವಿಶೇಷ ಚಾರಣವೆನಿಸಿತು.