ಸಾಮಾನ್ಯರಲ್ಲಿ ಅಸಾಮಾನ್ಯರು..!

ನನ್ನ ಕರ್ಮಯೋಗ ನಾನು ಚಾರಣಕ್ಕೆ ಹೋದ ಸ್ಥಳವನ್ನು ಕಂಡು ಆಹ್ಲಾದಿಸಿ ವಾಪಸು ಬರುವಾಗ, ನನ್ನ ಕೈಲಾದಷ್ಟು ಅಲ್ಲಿ ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸಗಳನ್ನು ಎತ್ತಿ ತಂದು ಕಸದಬುಟ್ಟಿಗೆ ಸೇರಿಸುವುದು. ಪರ್ವತಗಳನ್ನು ಹತ್ತುವಾಗ, ಹಸಿರು ಗುಡ್ಡ ಬೆಟ್ಟಗಳ ಕಣ್ತುಂಬಿಕೊಳ್ಳುವಾಗ, ನದಿಗಳ ನಾದವನ್ನು ಕೇಳುವಾಗ, ಹೂವು ಹುಲ್ಲುಗಳ ಸುಗಂಧವನ್ನು ಎಲ್ಲಕ್ಕಿಂತ ಮಿಗಿಲಾಗಿ ಸ್ವಚ್ಛ ಆರೋಗ್ಯಕರ ಗಾಳಿಯನ್ನು ಸೇವಿಸಿರುವಾಗ ನಮ್ಮ ದೇಹ ಮತ್ತು ಮನಸ್ಸಿಗೆ ಸಿಗುವ ಆ ಆನಂದಕ್ಕೆ ಪ್ರತ್ಯುಪಕಾರವಾಗಿ, ಅದನ್ನು ಸ್ವಚ್ಛವಾಗಿ ಉಳಿಸುವುದು ನಮ್ಮದೊಂದು ಕರ್ತವ್ಯ. ನನ್ನೊಡನೆ ಯಾರು ಮಾಡುತ್ತಾರೆ ಬಿಡುತ್ತಾರೆ ಎಂಬುದ ನೋಡುವುದಿಲ್ಲ, ನನ್ನ ಪಾಡಿಗೆ ನಾನು ಶಕ್ತಿ ಇದ್ದಷ್ಟೂ ಹೊತ್ತು, ಹಾದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ಗಳನ್ನು ಆರಿಸಿಕೊಂಡು ಬರುತ್ತೇನೆ. 


ಕಳೆದ ವಾರ ಸಮಾನ ಮನಸ್ಕರರ ಗುಂಪಿನೊಂದಿಗೆ ನಮ್ಮ ಚಾರಣ ಪ್ರವಾಸ ಏರ್ಪಟ್ಟಿತ್ತು. ಚಾರಣವನ್ನು ಏರ್ಪಡಿಸಿದ ಸ್ನೇಹಿತರಾದ ಮಹಾವೀರ್ ಅವರೂ ಕೂಡ ಪರಿಸರ ಪ್ರೇಮಿಯೇ ಆದ ಕಾರಣ, ಸಾಧ್ಯವಾದಷ್ಟು ಪ್ಲಾಸ್ಟಿಕ್ ಕಡಿಮೆ ಬಳಸುವ ಉದ್ದೇಶದಿಂದ, ಚಾರಣಿಗರೆಲ್ಲರಿಗೂ ಅವರವರದ್ದೇ ಆದ ಸ್ಟೀಲ್ ಡಬ್ಬಿಗಳನ್ನು ತರಬೇಕೆಂದು ಆದೇಶಿಸಿ, ಅದರಲ್ಲಿ ನಮಗೆ ನಮ್ಮ ಆಹಾರವನ್ನು ನೀಡಿದ ವಿಧಾನ ಮೆಚ್ಚುಗೆಯಾಯಿತು. ೨೫-೩೦ ಜನರ ಗುಂಪೊಂದರ ಒಂದೊಂದು ಹೊತ್ತಿನ ಒನೆಟೈಮ್ ಪ್ಲಾಸ್ಟಿಕ್ ಬಾಕ್ಸುಗಳ ಉಳಿತಾಯವೇ ಸಾಕಷ್ಟಾಗುತ್ತದೆ.


ಗಮ್ಯಸ್ಥಾನವನ್ನು ತಲುಪಿ ಪ್ರಕೃತಿಯ ದೃಶ್ಯಗಳನ್ನೊಂದಷ್ಟು ಸವಿದು, ಫೋಟೋ ಸೆಷನ್ನುಗಳನ್ನೆಲ್ಲ ಮುಗಿಸಿ, ತಂದಿದ್ದ ನಮ್ಮ ನಮ್ಮ ಸ್ನ್ಯಾಕ್ಸ್ ಗಳನ್ನುತಿಂದರೂ ಕೂಡ ನನ್ನ ವಿನಂತಿಗೆ ಗೌರವಿಸಿ ಅಲ್ಲಿದ್ದವರೆಲ್ಲರೂ ಎಲ್ಲ ಪ್ಲಾಸ್ಟಿಕ್ ರ್ಯಾಪರ್ರುಗಳನ್ನು ನನಗೆ ನೀಡಿದ್ದಲ್ಲದೆ, ಮತ್ತೊಂದೆರಡು ಜನ ಅಲ್ಲಿಯ ಸ್ವಚ್ಛತೆ ಮಾಡಲು ಸಹಾಯ ಮಾಡಿದರು, ಬೆಟ್ಟ ಇಳಿಯಲು ಪ್ರಾರಂಭಿಸಿದಾಗಿನಿಂದ, ಕೈಯಲ್ಲೊಂದು ಪ್ಲಾಸ್ಟಿಕ್ ಕೊಟ್ಟೆ ಹಿಡಿದು ಹಾದಿಯಲ್ಲಿ ಕಾಣುವ ಸಣ್ಣ ಪುಟ್ಟ ಚಾಕೊಲೇಟು ಕವರುಗಳಿಂದ ಹಿಡಿದು ನೀರಿನ ಬಾಟಲುಗಳವರೆಗೆ ಸಿಕ್ಕಿದ್ದೆಲ್ಲಾ ತುಂಬಿಕೊಳ್ಳುತ್ತಿದ್ದೆ. ನಮ್ಮ ಗುಂಪಿನಲ್ಲಿದ್ದ ಕೆಲವರು ತಾವಾಗಿಯೇ ಮುಂದೆ ಬಂದು, ಒಂದಷ್ಟು ಕಸಗಳನ್ನು ಒಂದೆರಡು ನಿಮಿಷ ಸಮಯ ನೀಡಿ, ಹೆಕ್ಕಿ ನೀಡಲಾರಂಭಿಸಿದರು. 


"ಎಲ್ಲೋ ಹಿಮಾಲಯದ ಕಡೆಗೆ ಹೋದಾಗ ಅಲ್ಲಿ ಬೇರೆಯವರ ಜೊತೆ ಗುರುತು ಪರಿಚಯ ಇಲ್ಲದ ನಾಡಿನಲ್ಲಿ ಇಂತದ್ದೆಲ್ಲಾ ಸೋಷಿಯಲ್ ಸರ್ವಿಸ್ ಮಾಡಲು ಏನೂ ಅನ್ನಿಸುವುದಿಲ್ಲ, ನಮ್ಮದೇ ನಾಡಿಗೆ ಬಂದಾದ ಮೇಲೆ, ಯಾರು ಏನು ಅಂದುಕೊಳ್ತಾರೋ ಅಂತ ಏನೋ ಒಂದು ರೀತಿಯ ಸಂಕೋಚ" ಎಂದೊಬ್ಬ ಹೇಳಿಕೊಂಡರೆ, "ನೀವು ಹೆಕ್ತಿರದು ನೋಡಿದ್ರೆ ಮಾಡೋಣ ಅನ್ಸತ್ತೆ, ಆದ್ರೆ ಯಾರ್ಯಾರೋ ಕುಡಿದು ಬಿಟ್ಟು ಹೋಗಿರ ನೀರಿನ ಬಾಟಲ್ಲು ನಾನ್ಯಾಕೆ ಎತ್ಬೇಕು ಅನ್ಸತ್ತೆ" ಎಂದರು ಇನ್ನೊಬ್ಬರು. ನಮ್ಮ ಗುಂಪಿನಲ್ಲಿ ನನ್ನ ಮಗಳನ್ನೂ ಒಳಗೊಂಡಂತೆ, ೬-೭ ಜನ ಮಕ್ಕಳು ಇದ್ದವು. ಅವರುಗಳು ಹಾಗೆಯೇ ನನ್ನನ್ನು ಗಮನಿಸಿಕೊಂಡಿದ್ದವು. ಚಾರಣದ ಮುನ್ನಾದಿನ, ನಾನೇ ಕಣ್ಣಾರೆ ಕಂಡಂತೆ ಹುಡುಗನೊಬ್ಬ ಚಾಕಲೇಟನ್ನು ತಿಂದು ಅದರ ಕವರನ್ನು ಅಲ್ಲಿಯೇ ಕೆಳಗಡೆ ಬಿಸಾಡಿ ಬಸ್ಸು ಹತ್ತಿದ್ದವ, ಚಾರಣದ ಅವರೋಹಣದ ಸಮಯದ ಎರಡನೇ ಬ್ರೇಕಿನಲ್ಲಿ, ಚಾಕೊಲೇಟು ತಿಂದವ, ಚಾಕಲೇಟು ಜರಿಯನ್ನು ತನ್ನ ಕಿಸಿಯಲ್ಲಿ ಇಟ್ಟುಕೊಂಡಿದ್ದನ್ನು ಕಂಡೆ. ಹಿರಿಯರು ಒಂದೆರಡು ಜನರು ನನಗೆ ಅಲ್ಲಲ್ಲಿ ಬಿದ್ದಿದ್ದ ನೀರಿನ ಬಾಟಲುಗಳನ್ನು ಹೆಕ್ಕಿ ತಂದು ಕೊಡುತ್ತಿದ್ದರು, ಹನಿ ಹನಿ ಸೇರಿದರೆ ಹಳ್ಳವೆಂಬಂತೆ, ಸಣ್ಣ ಚಾಕಲೇಟಿನ ಕವರುಗಳೇ ಸುಮಾರು ೨೫೦ ಕ್ಕೂ ಹೆಚ್ಚು ಅದಾಗಲೇ ನನ್ನ ಕೈಯಲ್ಲಿದ್ದ ಚೀಲವನ್ನು ಸೇರಿತ್ತು. 


ಅಲ್ಲಿ ಯಾರಿಗೂ ನನ್ನಿಂದ ಯಾವುದೇ ಕರೆ ಇರಲಿಲ್ಲ, ಕೇವಲ ನನ್ನ ಕೆಲಸವೊಂದೇ ಅವರ ಕಣ್ಣಿಗೆ ಕಂಡದ್ದು. ತೋಚಿದವರು ತಾವಾಗಿಯೇ ಸಹಾಯ ಮಾಡಿದ್ದರು. ಸಣ್ಣ ಎಂಟು ವರ್ಷದ ಕೂಸೊಂದು ನನ್ನನ್ನು ಗಮನಿಸುತ್ತಾ ಬರುತ್ತಿದ್ದವಳು, ನಾನು ನಡೆಯುತ್ತಿದ್ದ ಹಾದಿಯಲ್ಲಿ ಎಲ್ಲಿಯಾದರೂ ನಾನು ಕಾಣದೆ ಬಿಟ್ಟ ಪ್ಲಾಸ್ಟಿಕ್ ಕವರುಗಳು ಇದ್ದರೆ, "ಆಂಟಿ, ಇಲ್ಲೊಂದು ಚಾಕ್ಲೆಟ್ ಕವರಿದೆ, ಅಲ್ಲೊಂದು ಚಿಪ್ಸ್ ಪ್ಯಾಕೆಟ್ಟಿದೆ.. " ಎನ್ನುತ್ತಾ ತಿಳಿಸಿ ತೋರಿಸುತ್ತಿದ್ದಳು. ಆಕೆ ರಸ್ತೆಯಲ್ಲಿ 'ಕಸವನ್ನು ಹುಡುಕುತ್ತಿದ್ದಾಳೆ' ಎಂಬುದೇ ನನ್ನ ಮೊದಲ ಜಯ. "ಒಹ್ ಥಾಂಕ್ಯೂ" ಎನ್ನುತ್ತಾ ಮತ್ತೆ ಮುಂದಕ್ಕಿಟ್ಟ ನನ್ನ ಎರಡು ಹೆಜ್ಜೆಗಳನ್ನು ಹಿಂತೆಗೆದುಕೊಂಡು, ಅವಳು ಹೇಳಿದ ಪ್ರತೀ ಕಸವನ್ನೂ ನಿರ್ಲಕ್ಷಿಸದೇ ಹೆಕ್ಕಿಕೊಂಡೆ. ಚಾರಣದಲ್ಲಿ ಜನರು ಅವರವರ ವೇಗದಲ್ಲಿ ನಡೆಯುತ್ತಿರುತ್ತಾರೆ. ಒಂದಷ್ಟು ಜನ ಮುಂದಕ್ಕೆ ಒಂದಷ್ಟು ಜನ ಹಿಂದಕ್ಕೆ ಹೀಗೆ ನೆಡಿಗೆ ಸಾಗುತ್ತಿರುತ್ತದೆ. ನಾನು ಕಸ ಹೆಕ್ಕುತ್ತಾ ಬರುವವಳು, ಸ್ವಲ್ಪ ಹಿಂದಕ್ಕೆಯೇ ಉಳಿದಿದ್ದೆ, ಅದ್ಯಾವುದೋ ಹಂತದಲ್ಲಿ ಮತ್ತೆ ಅದೇ ಕೂಸು ನನ್ನ ಕಾಲ್ನಡಿಗೆಯ ಜೊತೆ ಸಿಕ್ಕಿತು. ಇದೀಗ ಒಂದು ಹಂತ ಮುಂದಕ್ಕೆ ಹೋಗಿ, ಕೋಲೊಂದನ್ನು ಕೈಯಲ್ಲಿ ಹಿಡಿದವಳು, ಮಣ್ಣಿನಲ್ಲಿ ಹುದುಗಿ ಹೋದ, ಕವರ್ಗಳನ್ನು ಕುಕ್ಕಿ ಮೇಲಕ್ಕೆ ಎತ್ತಿ ನಾನು ನಡೆವ ಹಾದಿಗೆ ಮುಂದಕ್ಕೆ ತಂದು ಹಾಕುತ್ತಿದ್ದಳು. " ಥಾಂಕ್ ಯು" ಎಂದು ನನ್ನ ಕೆಲಸ ಮುಂದುವರೆಸಿದೆ. 


ಮತ್ತೊಂದಷ್ಟು ದೂರಕ್ಕೆ ಹೋಗುವಷ್ಟರಲ್ಲಿ ಚಾರಣ ಮುಗಿಸುವ ಹಂತಕ್ಕೆ ಇನ್ನೇನ್ನು ಬರಲಿದ್ದೇವೆ, ಇನ್ನೊಂದೆರಡು ಕಿಮೀ ಇದೆ ಎನ್ನುವಾಗ ಮಳೆ ಬರುವ ಲಕ್ಷಣ ಕಾಣತೊಡಗಿತು. ನನ್ನ ಕೈಯಲ್ಲೋ, ಕಸಗಳೆಲ್ಲ ತುಂಬಿ ತುಂಬಿ ಇನ್ನೆಲ್ಲಿಯೂ ಜಾಗವಿಲ್ಲ ಎಂಬಷ್ಟು ತುಂಬಿದ ಕಸದ ದೊಡ್ಡ ಕವರು. ಅವೆಲ್ಲ ಹಿಡಿದುಕೊಂಡು ರೈನ್ಕೋಟ್ ಹಾಕಿಕೊಳ್ಳುವ ಸಾಹಸ, ಅದಕ್ಕಿಂತಲೂ ಮುಖ್ಯವಾಗಿ ಅವೆಲ್ಲ ವ್ಯವಸ್ಥೆ ಮಾಡುತ್ತ ನಿಂತರೆ, ನಿಂತಲ್ಲಿಯೇ ಹತ್ತಾರು ಉಂಬಳ ಹತ್ತುವ ಸಂಕಷ್ಟಗಳನ್ನೆಲ್ಲ ಯೋಚಿಸಿಕೊಂಡು, ಬಿರುನಡಿಗೆಯ ಹೆಜ್ಜೆ ಹಾಕತೊಡಗಿದೆ. ಅಲ್ಲಿಂದ ಮುಂದಕ್ಕೆ ನನ್ನಿಂದ ಹೆಚ್ಚು ಕಸಗಳನ್ನು ಹೆಕ್ಕಲು ಸಾಧ್ಯವಾಗಲಿಲ್ಲ. ಬಿರುನಡಿಗೆಯ ಹೆಜ್ಜೆ ಹಾಕುತ್ತ ಮುಂದಕ್ಕೆ ಹೋಗುವಾಗ ಹಿಂದಿನಿಂದ ಒಂದು ಧ್ವನಿ "ಆಂಟಿ ಆಂಟಿ.. " ಎಂದು. ತಿರುಗಿ ನೋಡಿದರೆ ಇದೇ ಕೂಸು, ಹಿರಿಯ ಚಾರಣಿಗ ಸ್ನೇಹಿತನ ಜೊತೆ ಸಾಧ್ಯವಾದಷ್ಟು ಬೇಗಬೇಗನೆ ಹೆಜ್ಜೆ ಹಾಕುತ್ತ ಓಡಿ ಬರುತ್ತಿತ್ತು. ಅದರ ಕೈಯಲ್ಲಿ ೮-೧೦ ಚಾಕಲೇಟು ಕವರುಗಳು! "ಆಂಟಿ ಇವಿಷ್ಟು ಕಸ ಹಾಕ್ಲ ನಿಮ್ ಕವರಿಗೆ.. " ಎಂಬ ಪ್ರಶ್ನೆ! ಅಲ್ಲಿಯೇ ಹಿಡಿದು ಮುದ್ದಾಡಿ ಬಿಡೋಣ ಎನ್ನುವಷ್ಟು ಪ್ರೀತಿ ಉಕ್ಕಿತು. ತುಂಬಿ ಹೋದ ಕಸದ ಚೀಲದಲ್ಲಿಯೂ ಅವಳು ಕೊಟ್ಟಷ್ಟು ಕವರುಗಳ ಹಂಗೋ ಹಿಂಗೋ ತುರುಕಿಕೊಂಡೆ. ಆ ಮಗುವಿಗೆ ಚಾರಣ ಮುಗಿವಷ್ಟರಲ್ಲಿ ಹಾದಿಬದಿಗಳ ಪ್ಲಾಸ್ಟಿಕ್ ಕಸಗಳ ಕಂಡರೆ ಹೆಕ್ಕಿ ತೆಗೆದು ಒಟ್ಟು ಮಾಡುತ್ತಿರುವವರಿಗೆ ನೀಡುವಷ್ಟು ಕಲೆ ಕರಗತವಾಗಿಬಿಟ್ಟಿತ್ತು!  


ಚಾರಣದ ಗಡಿ ದಾಟಿ ಹೊರಗೆ ಬಂದು ಅಲ್ಲಿನ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಕಸ ನಿರ್ವಹಣೆ ಮಾಡಿಯಾಯಿತು. ಹಿಂದಕ್ಕೆ ತಿರುಗಿ ನೋಡಿದರೆ, ಇನ್ನೊಬ್ಬ ಚಾರಣ ಸ್ನೇಹಿತ ನರಸಿಂಹ ತನ್ನ ಕೈಗಳಲ್ಲಿ ಸಾಧ್ಯವಾದಷ್ಟು ಹಾದಿ ತುಂಬಾ ಜನರು ಎತ್ತಿ ಬಿಸಾಡಿದ್ದ ನೀರಿನ ಬಾಟಲ್ಲುಗಳನ್ನು ತೆಗೆದುಕೊಂಡು ಬರುತ್ತಲಿದ್ದ. ಜೊತೆಗಿದ್ದ ಶಿಲ್ಪ ಇನ್ನಿತರು ಅವನೊಡನೆ ಸಹಾಯ ಮಾಡುತ್ತಾ ಇನ್ನೊಂದೆರಡು ಬಾಟಲ್ಲುಗಳನ್ನು ಹಿಡಿದುಕೊಂಡು ಬರುತ್ತಲಿದ್ದರು. ಅವರಿಗೆಲ್ಲ ಮನಸಾರೆ ಧನ್ಯವಾದ ತಿಳಿಸಿದೆ. ನಂತರಕ್ಕೆ ತಿಳಿದ ವಿಷಯವೆಂದರೆ, ಆತ ಒಂದು ಹಂತದಲ್ಲಿ ಚಾರಣ ಹಾದಿಯಲ್ಲಿ ಆಯಾ ತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡನಾದರೂ, ಕೈಯಲ್ಲಿರುವ ಪ್ಲಾಸ್ಟಿಕ್ ಕಸಗಳನ್ನು ಅಲ್ಲಿಯೇ ಬಿಡದೇ ಸಾವರಿಸಿಕೊಂಡು, ಮತ್ತೆ ಎಲ್ಲವನ್ನೂ ಹೆಕ್ಕಿಕೊಂಡು ಕುಂಟುತ್ತಾ ಹೆಜ್ಜೆ ಹಾಕಿ ನಡೆದು ಬಂದಿದ್ದ!

Every small step forward is still progress—keep stepping! ಎನ್ನುವ ಇತ್ತೀಚಿಗೆ ಓದಿದ್ದ ಒಳ್ಳೆಯ ವ್ಯಾಖ್ಯಾನ ಪದೇ ಪದೇ ನೆನಪಾಗುತ್ತಲಿತ್ತು.

ಇದರ ಜೊತೆಗೆ, ನಮ್ಮ ಯಶಸ್ವೀ ಟ್ರೆಕಿಂಗ್ ನ ದಿನ ರಾತ್ರಿ ಬೆಂಕಿ ಕಾಯಿಸಿಕೊಂಡು ಎಲ್ಲರೂ ಸಂಭ್ರಮಾಚರಣೆ ಮಾಡುವಾಗ, ಟ್ರೆಕಿಂಗ್ ನಿರ್ವಾಹಕರ ಕೋರಿಕೆಯ ಮೇರೆಗೆ, ನಮ್ಮ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಕಡಿಮೆ ಮಾಡುವ ಕುರಿತಾಗಿ ಟಿಪ್ಸ್ ಗಳನ್ನು ಹಂಚಿಕೊಂಡೆ. ಆಶ್ಚರ್ಯ ಮತ್ತು ಸಂತೋಷವೆಂದರೆ, ಅಲ್ಲಿ ಇದ್ದವರೆಲ್ಲರೂ ಕೂಡ ಸಹಮತ ಸೂಚಿಸಿ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದು. ಆ ಒಕ್ಕೊರಲ ಧ್ವನಿಯಲ್ಲಿ ಶೇಕಡಾ ೨೦ ರಷ್ಟಾದರೂ ಕರ್ಮಯೋಗವಾದರೆ, ಮತ್ತೊಂದಷ್ಟು ಅಸಾಮಾನ್ಯರು ತಯಾರಾದರು ಎಂಬ ಸಂತೋಷ ನನಗೆ!


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು