ಸಾಮಾನ್ಯರಲ್ಲಿ ಅಸಾಮಾನ್ಯರು..!
ನನ್ನ ಕರ್ಮಯೋಗ ನಾನು ಚಾರಣಕ್ಕೆ ಹೋದ ಸ್ಥಳವನ್ನು ಕಂಡು ಆಹ್ಲಾದಿಸಿ ವಾಪಸು ಬರುವಾಗ, ನನ್ನ ಕೈಲಾದಷ್ಟು ಅಲ್ಲಿ ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸಗಳನ್ನು ಎತ್ತಿ ತಂದು ಕಸದಬುಟ್ಟಿಗೆ ಸೇರಿಸುವುದು. ಪರ್ವತಗಳನ್ನು ಹತ್ತುವಾಗ, ಹಸಿರು ಗುಡ್ಡ ಬೆಟ್ಟಗಳ ಕಣ್ತುಂಬಿಕೊಳ್ಳುವಾಗ, ನದಿಗಳ ನಾದವನ್ನು ಕೇಳುವಾಗ, ಹೂವು ಹುಲ್ಲುಗಳ ಸುಗಂಧವನ್ನು ಎಲ್ಲಕ್ಕಿಂತ ಮಿಗಿಲಾಗಿ ಸ್ವಚ್ಛ ಆರೋಗ್ಯಕರ ಗಾಳಿಯನ್ನು ಸೇವಿಸಿರುವಾಗ ನಮ್ಮ ದೇಹ ಮತ್ತು ಮನಸ್ಸಿಗೆ ಸಿಗುವ ಆ ಆನಂದಕ್ಕೆ ಪ್ರತ್ಯುಪಕಾರವಾಗಿ, ಅದನ್ನು ಸ್ವಚ್ಛವಾಗಿ ಉಳಿಸುವುದು ನಮ್ಮದೊಂದು ಕರ್ತವ್ಯ. ನನ್ನೊಡನೆ ಯಾರು ಮಾಡುತ್ತಾರೆ ಬಿಡುತ್ತಾರೆ ಎಂಬುದ ನೋಡುವುದಿಲ್ಲ, ನನ್ನ ಪಾಡಿಗೆ ನಾನು ಶಕ್ತಿ ಇದ್ದಷ್ಟೂ ಹೊತ್ತು, ಹಾದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ಗಳನ್ನು ಆರಿಸಿಕೊಂಡು ಬರುತ್ತೇನೆ. ಕಳೆದ ವಾರ ಸಮಾನ ಮನಸ್ಕರರ ಗುಂಪಿನೊಂದಿಗೆ ನಮ್ಮ ಚಾರಣ ಪ್ರವಾಸ ಏರ್ಪಟ್ಟಿತ್ತು. ಚಾರಣವನ್ನು ಏರ್ಪಡಿಸಿದ ಸ್ನೇಹಿತರಾದ ಮಹಾವೀರ್ ಅವರೂ ಕೂಡ ಪರಿಸರ ಪ್ರೇಮಿಯೇ ಆದ ಕಾರಣ, ಸಾಧ್ಯವಾದಷ್ಟು ಪ್ಲಾಸ್ಟಿಕ್ ಕಡಿಮೆ ಬಳಸುವ ಉದ್ದೇಶದಿಂದ, ಚಾರಣಿಗರೆಲ್ಲರಿಗೂ ಅವರವರದ್ದೇ ಆದ ಸ್ಟೀಲ್ ಡಬ್ಬಿಗಳನ್ನು ತರಬೇಕೆಂದು ಆದೇಶಿಸಿ, ಅದರಲ್ಲಿ ನಮಗೆ ನಮ್ಮ ಆಹಾರವನ್ನು ನೀಡಿದ ವಿಧಾನ ಮೆಚ್ಚುಗೆಯಾಯಿತು. ೨೫-೩೦ ಜನರ ಗುಂಪೊಂದರ ಒಂದೊಂದು ಹೊತ್ತಿನ ಒನೆಟೈಮ್ ಪ್ಲಾಸ್ಟಿಕ್ ಬಾಕ್ಸುಗಳ ಉಳಿತಾಯವೇ ಸಾಕಷ್ಟಾಗುತ್ತದ...