"ಅವರುಣಿಸಿದ ಪ್ರೀತಿಯ ಪಾಠ"

ಅವರುಣಿಸಿದ ಪ್ರೀತಿಯ ಪಾಠ"

28 ಕಿಲೋಮೀಟರ್‌ಗಳ ಕಠಿಣ ಟ್ರೆಕ್ಕಿಂಗ್‌ ಮುಗಿಸಿ ಟ್ರೇನ್ ಹತ್ತುವಾಗ, ದೇಹ ತನ್ನ ಒಂದೊಂದೇ ಭಾಗ ಕಳಚಿ ಇಟ್ಟು ಬಿಡಲೇ ಎಂದು ಕೇಳುತ್ತಿರುವಂತೆ ಭಾಸವಾಗುತ್ತಿದ್ದರೂ, ಮನಸ್ಸು ಮಾತ್ರ ನಗು, ಹರಟೆ, ಮೋಜಿನಿಂದ ಉಕ್ಕುತ್ತಿದ್ದಿತ್ತು. ಸಿಕ್ಕಷ್ಟು ಸಮಯದಲ್ಲೇ ಇನ್ನೂ ಎರಡಾಟ ಮುಗಿಸಿ ಬಿಡೋಣ ಎನ್ನುವ ಹುಮ್ಮಸ್ಸು ಎಲ್ಲರದ್ದಿತ್ತು. ಕುಳಿತು ಪಟ್ಟಂಗ ಹೊಡೆಯುತ್ತಿದ್ದ ನಾವು ಹದಿನೈದು ಮಂದಿ ಸ್ನೇಹಿತರ ಗುಂಪಿನ ಮಧ್ಯೆ ಅಲ್ಲಿ ಸಹಪ್ರಯಾಣಿಕರೊಬ್ಬರು ಕಿಟಕಿಯ ಬುಡ ಹಿಡಿದು ತಣ್ಣಗೆ ಕುಳಿತಿದ್ದರು. ನೋಡಲು ಸರ್ವೇ ಸಾಮಾನ್ಯ ವ್ಯಕ್ತಿ, ಹಾವ-ಭಾವ, ಬಟ್ಟೆಬರೆ ಯಾವುದರಲ್ಲೂ ವಿಶೇಷತೆ ಇಲ್ಲ; ಆದರೆ, ಅವರ ಕಣ್ಣುಗಳಲ್ಲಿ ಒಂಥರ ಕುತೂಹಲದ ಹೊಳೆ ನಮಗೆ ತಟ್ಟಿತು. ಅವರೊಂದಿಗೆ ಸಣ್ಣದೊಂದು ನಗು ವಿನಿಮಯ ಮಾಡಿಕೊಂಡು, ನಾವು ನಮ್ಮ ನಮ್ಮ ಕತೆ ಪುರಾಣಗಳಲ್ಲಿ ಮುಳುಗಿದ್ದೆವು. ನಿಧಾನಕ್ಕೆ ಆ ಜನ ನಮ್ಮನ್ನು ಮಾತನಾಡಿಸಲು ಪ್ರಾರಂಭಿಸಿದರು. ಪ್ರಯಾಣ ಎಂದ ಮೇಲೆ ಕೇಳಬೇಕೆ? ನಮ್ಮ ಗುಂಪಿನವರೂ ಕೂಡ ಹುರುಪಿನಿಂದ ಮಾತಿಗಿಳಿದದ್ದಾಯಿತು. ಪರಸ್ಪರ ಪರಿಚಯ, ಲೋಕಾಭಿರಾಮ ಮಾತು ಅಷ್ಟೇ. ಅಲ್ಲಿಗೆ ಮುಗಿಯಿತು. ನಾವುಗಳು ಮತ್ತೆ ನಮ್ಮದೇ ಲೋಕದೊಳಗೆ.. 


ತುಸು ಹೊತ್ತಿನಲ್ಲೆ, ನಾವು ರಾತ್ರಿ ಊಟಕ್ಕೆಂದು ಕಟ್ಟಿಕೊಂಡ ಪಾರ್ಸೆಲ್‌ಗಳನ್ನು ತೆರೆದು ಊಟ ಪ್ರಾರಂಭಿಸಿದ್ದಾಗ, ಅವರೂ ಕೂಡ ನಿಧಾನವಾಗಿ ತಮ್ಮ ಕೈಚೀಲ ತೆರೆದರು. ಆ ಚೀಲದಿಂದ ಹೊರಬಂದದ್ದು ಜೋಳದ ರೊಟ್ಟಿ ಮತ್ತು ಗಟ್ಟಿ ಭಾಜಿಯ ಡಬ್ಬ. ತಾವು ತಿನ್ನಲು ಪ್ರಾರಂಭಿಸುವ ಮುಂಚೆ, ನಿಮಗ್ಯಾರಿಗಾದರೂ ರೊಟ್ಟಿ ಬೇಕೇ, ತಗೊಳ್ರಿ ಎಂದು ಕೇಳಿದರು. ಸೀದಾ ಸಾದಾ ಪ್ಯಾಂಟು ಶರ್ಟು, ಮಾತನಾಡುವ ಭಾಷೆಯಲ್ಲಿ, ಅಪ್ಪಟ ಹಳ್ಳಿಯ ಸೊಗಡು. ಇದ್ಯಾವುದೋ ಲೋಕಲ್ಲು ಎಂದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಅವರ ಪಕ್ಕ ಕೂತಿದ್ದ ನಮ್ಮ ತುಂಟ ಹುಡಗರೋ, ಅದಾಗಲೇ ಅವರ ಊಟದ ಅದ್ಭುತ ಪರಿಮಳವನ್ನು ಅರ್ಧಕ್ಕೆ ಎಳೆದುಕೊಂಡಿದ್ದವರಾಗಿದ್ದರಿಂದ, ಸಂಕೋಚಕ್ಕೂ ಸಂಕೋಚವಾಗುವಂತೆ, ಎಗ್ಗಿಲ್ಲದೆ ಕೊಡ್ರಿ "ಅಂಕಲ್ ಟೆಸ್ಟಿಗೆ ಚೂರು" ಎಂದು ಒಂದು ಮಾತು ಎಸೆದಿದ್ದೇ ತಡ, ಅವರ ಕಣ್ಣಿನಲ್ಲಿ ಮಿಂಚು ಮತ್ತು ಅವರ ಕೈ ಎಡಬಿಡದೆ ತನ್ನ ಚೀಲ ಶೋಧನಾ ಕಾರ್ಯಾಚರಣೆ ಪ್ರಾರಂಭಿಸಿತು. ಪಕ್ಕದಲ್ಲಿದ್ದ ದೊಡ್ಡ ಚೀಲದಿಂದ ಜೋಳದ ಕಟಿ ರೊಟ್ಟಿ, ಸಜ್ಜೆ ರೊಟ್ಟಿ, ಕಾಳಿನ ಪಲ್ಯ, ಶೇಂಗಾ ಹಿಂಡಿ, ನವಣೆ ಲಾಡು, ಬೇಳೆ ಅಮ್ಮಟ, ಜೋಳದ ಹಿಟ್ಟಿನ ಕರ್ಜಿಕಾಯಿ… ಅಪ್ಪಟ ಬಯಲುಸೀಮೆ ಕಡೆಯ ಎಲ್ಲ ವಿಶಿಷ್ಟ ಆಹಾರವನ್ನೂ ಒಂದೊಂದಾಗಿಯೇ ತೆಗೆದು ತೆಗೆದು ನಮಗೆ ಕೊಡಲು ಪ್ರಾರಂಭಿಸಿದರು. ನಾವು ಅದೆಲ್ಲವೂ ಬೇಡವೆಂದರೂ ಅವರ ಒತ್ತಾಯ, ಮಂದಸ್ಮಿತ , ಆ ಮುದ್ದಾದ ತಾಳ್ಮೆಗೆ ಬಾಗಿ, ಕೆಲವರು ರೊಟ್ಟಿ–ಬಾಜಿಯ ರುಚಿ ನೋಡಿದರು. ಉಂಹೂನ್ ಕೆಲವರಷ್ಟೇ ತೆಗೆದುಕೊಂಡರೆ ಅವರಿಗೆ ಸಮಾಧಾನ ಆಗುತ್ತಿರಲಿಲ್ಲ, ಅಕಿನೂ ತಿನ್ಲಿ, ಇವನಿಗೂ ಕೊಡಿ ಎನ್ನುತ್ತಾ, ಬಿಡದೇ ನಮ್ಮೆಲ್ಲರಿಗೂ ತಮ್ಮ ತಿಂಡಿಯ ನೈವೇದ್ಯವನ್ನೇ ಅರ್ಪಿಸಿಬಿಟ್ಟರು. ಆ ರುಚಿಯೊಳಗೆ ಅಮ್ಮನ ಅಡುಗೆ, ಹಳ್ಳಿಯ ನೆನೆಪು, ಮಣ್ಣಿನ ಪರಿಮಳ ಎಲ್ಲವೂ ಅಡಕವಾಗಿತ್ತು. ತಿಂದ ಒಂದು ಸಣ್ಣ ಚೂರಿಗೂ ಮತ್ತೆ ಮತ್ತೆ ಕೈ ಮೂಸಿ ನೋಡಿಕೊಳ್ಳುವಷ್ಟು ರುಚಿ!

"ಎಲ್ಲಾ ನಮಗೆ ಕೊಟ್ಟರೆ ನೀವೆಂತಾ ತಿಂತೀರಿ?" ಎಂದು ಪ್ರಶ್ನಿಸಿದಾಗ, "ನಾನು ಒಬ್ಬನೇ ಯಾವಾಗಲೂ ತಿನ್ನಂಗಿಲ್ರಿ, ಹಂಚಿ ಉಣ್ಣೋದೆ ನಮ್ಮ ಧರ್ಮ. “ಹಂಚಿದರೆ ಸಂತೋಷವು ಹೆಚ್ಚುವುದು, ಸ್ವಾರ್ಥದಿಂದ ಹರಿಯನು ಕಾಣಲಾರೆವು.” ಅಂತಾರೆ ಪುರುಂದರ ದಾಸ್ರು. ಕಾಕೆ ನೋಡ್ರಿ, ಅದೊಂದ ಕೂತು ತಿಂನಾಂಗಿಲ್ಲ, ತನ್ ಬಳಗ ಕರದೇ ಕರಿತದ, ನಾಲ್ಕೇ ನಾಲ್ಕು ಅಗಳು ನೆಲಕ್ಕೆ ಬಿದ್ದಿದ್ರೂ.. .ನಾನೀಗ ನಮ್ಮ ಕ್ಯಾಮ್ಪಿಗೆ ಹೋಗಿ ನಮ್ಮ ಮಂದಿಗೆಲ್ಲ ಹಂಚ್ವ್ನಿದೀರಿ, ನಮ್ಮ ಮನೆಯರಿಗೂ ಗೊತ್ತಿರತ್ರಿ ನಾನು ಹಂಚ್ತೀನಿ ಅಂತ್ಲೆ ಇನ್ನಷ್ಟು ತುಂಬಿ ಹಾಕ್ತಳ ಅಕಿ ಎನ್ನುತ್ತಾ ಸಂತೃಪ್ತಿಯ ನಗು ಹೊತ್ತು ಕುಳಿತು ತಾವು ಇಟ್ಟುಕೊಂಡಿದ್ದ ಸಣ್ಣ ಡಬ್ಬಿಯಿಂದನೂ ಮತ್ತೆ ಮತ್ತೆ ನಮಗೆ ಆಹಾರ ಒದಗಿಸಲು ಪ್ರಯತ್ನಿಸುತ್ತಿದ್ದರು.. ಅನ್ನಧಾತೋ ಸುಖೀಭವ, ಎಲ್ಲರೂ ತಿಂದು ಕೈತೊಳೆದು ಒಂದಷ್ಟು ಜನ ಆಟಗಳಲ್ಲಿ ಮಗ್ನರಾದರೆ ನಾವು ಒಂದೆರಡು ಜನ, ಅವರೊಂದಿಗೆ ಮಾತನಾಡುತ್ತ ಕುಳಿತೆವು. ಅವರ ಬಗ್ಗೆ ನಾವು ಕೇಳುತ್ತಾ ಹೋದಂತೆಯೂ, ತೆರೆದುಕೊಳ್ಳುತ್ತಾ ಹೋಯಿತು ಆ ಜ್ಞಾನ ಭಂಡಾರ!

“ನಾನು ಸೇನೆಗೆ ಸೇರಿದವನು. ಗದಗ್‌ನಿಂದ ಅಂಡಮಾನ್‌ವರೆಗೆ ನನ್ನ ಪಯಣ. ವರ್ಷಕ್ಕೆ ಎರಡು ಬಾರಿಗೆ ಮಾತ್ರ ಮನೆಗೆ ಹೋಗಿ ಬರುವ ಅವಕಾಶ. ನಂಗೆ ಮೂರ್ ಜನ ಮಕ್ಳು. ಹಿರೆವಳನ್ನ ಮದ್ವಿ ಮಾಡಿ ಹತ್ರದೂರಿಗೆ ಕಳಿಸೀವಿ. ಅವಳ ಬೆನ್ನಿಗೆ ಬಿದ್ದವ ನಮ್ಮ ಹುಡ್ಗ ಈಗ ವಿದ್ಯಾಭ್ಯಾಸ ಮುಗದು ನೌಕರಿ ಮಾಡ್ಲಿಕ್ ಹತ್ಯಾನ. ಇನ್ನ ಮೂರ್ನಿ ಕೂಸು ನಮ್ಮನಿ ಲಕ್ಷ್ಮಿ, ಕಾಲೇಜು ಓದ್ತಾಳ ಶಾಣೆ ಅದಾಳ. ಮನೆಗೆ ಹೋದ್ರ ನನ್ನ ಮಗಳು–ಮಕ್ಕಳು ಇನ್ನೂ ನನ್ನ ಮಡಿಲಲ್ಲೇ ಮಲಗ್ತಾವ. ಮೂರೂ ಜನನೂ ಕಳೆದ ೧೨ ವರ್ಷದಿಂದ ಒಂದಿನಕ್ಕೂ ಫೋನಲ್ಲಿ ಮಾತಾಡದು ತಪ್ಪಿಸಿಲ್ರಿ. ನಾನು ಅಷ್ಟೇರಿ, ಎಷ್ಟೋ ದಿನ ಫೋನ್ ಹಚ್ಕೊಂಡ್ ಮಕ್ಳು ಮಾತಾಡ್ತಾ ಇದ್ರೆ, ನಾನು ಸುಮ್ನೆ ಕೇಳ್ತಾ ಇರತೀನ್ರಿ. ಮನೇಲಿ ಹಿಂಗ ಅರಾಮ್ ಕುರ್ಚಿದಾಗ ಕೂತ್ರ, ನನ್ ತೊಡಿ ಮ್ಯಾಲೆ ತಲೆ ಇಟ್ಟು ಕಥೆ ಹೊಡಿತಾವ್ ನಮ್ ಮಕ್ಳು. ನೀವ್ ಇಷ್ಟು ಮಂದಿ ಅದಿರಲ, ಎಲ್ರಗ್ ಮುಖದಗೂ ನನ್ನ ಮಕ್ಕಳೇ ಕಾಂತಾವ್" ಎಂದು ಹೇಳುವಾಗ, ಆ ಅಪ್ಪನ ಕಣ್ಣಲ್ಲಿ ಮತ್ತಷ್ಟು ಹೊಳಪು - ತುಂಬಿಕೊಂಡ ಕಣ್ಣೇರಿನೊಂದಿಗೆ. ಮತ್ತೆ ಮರುಕ್ಷಣದಲ್ಲಿ, "ಆದ್ರೆ ಅದಕ್ಕಿಂತ ಜಾಸ್ತಿ ನಮ್ದೇಶದೇ ಕೆಲ್ಸ ಇಷ್ಟರೀ ನಂಗ. ಮತ್ತೆ ಆ ದಿಕ್ಕಿಗೆ ತಲೆ ಹಾಕ್ರೆ ಈಕಡೆ ತಿರಗಾಂಗಿಲ್ಲ" ಈ ಮಧ್ಯೆ ನಮ್ಮವರಲ್ಲೊಬ್ಬ ಫೋನಿನಲ್ಲಿ ಕೊಂಕಣಿ ಭಾಷೆಯಲ್ಲಿ ತನ್ನ ಕುಟುಂಬದವರೊಡನೆ ಮಾತನಾಡುತ್ತಿದ್ದುದ ಕೇಳಿ ಅವರು ಒಂದು ಮುಗಳ್ನಗೆ ನಕ್ಕಿದ್ದನ್ನು ಕಂಡು, ನಾನು ಪ್ರಶ್ನಿಸಿದೆ. "ನಿಮಗೆ ಯಾವ್ಯಾವ್ ಭಾಷೆ ಗೊತ್ತು?" ಎಂದು. "ಭಾರತದಾಗ್ ಯಾವ್ಯಾವ್ ಭಾಷೆ ಇದ್ಯೋ ಎಲ್ಲದೂ ಸುಮಾರಾಗ್ಗೊತ್ರಿ, ಜ್ಯಾದ ಮಾತಾಡ್ತೀನ್ರಿ ನಾನು. ಇಂಗ್ಲಿಷೂ ಚೆನಾಗ್ ಬರ್ತೇತ್ರಿ, ಬಳಸಾಕ್ ಅವಶ್ಯಕತಿ ಇರದಿಲ್ಲ ನಮ್ಮ್ ಕಡಿಗೆಲ್ಲ" ಎಂದಾಗ "ಇದು ಖಂಡಿತಾ ಲೋಕಲ್ ಅಲ್ಲ ಭಾರೀ ದೊಡ್ಡ ವೋಕಲ್" ಎಂದು ಮನದಟ್ಟಾಯಿತು. 

ಒಬ್ಬೊಬ್ಬರ ಪ್ರಶ್ನೆಯೂ ಒಂದೊಂದು ತರದಲ್ಲಿತ್ತು, ಆ ಹಿರಿಯರು, ತಮ್ಮ ಜೀವನದ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಹೇಳುತ್ತಾ ಹೋಗುತ್ತಿದ್ದರೆ, ಯಾವುದೋ ಗುರುವಿನ ವಾಕ್ಯಗಳು ಸಿಗುತ್ತಿವೆ ಎಂಬಂತೆ ಭಾಸವಾಗುತ್ತಿತ್ತು. "ಅಂಕಲ್, ಈಗಿನ ಮಕ್ಕಳು ಮೊಬೈಲ್, ಟಿವಿ ಬಿಟ್ಟರೆ ಪೋಷಕರ ಜೊತೆ ಇರೋದಿಲ್ಲ. ಜೊತೆಗೆ ಅಸಾಧ್ಯ ಕೋಪ, ರಿಪೇರಿ ಮಾಡಕ್ಕೇನೆ ಆಗಲ್ಲ ಈಗಿನ ಮಕ್ಳನ್ನ, ಅವ್ರು ಹೇಳಿದಂಗೆ ನಾವು ಕುಣಿಬೇಕು. ನಾವ್ ಏನ್ ಸಾಯಣ ” ಎಂಬ ಪ್ರಶ್ನೆಗೆ, ಅವರು ನಕ್ಕು ಹೇಳಿದ ಮಾತು ಎಲ್ಲರಿಗೂ ಒಂದು ರೀತಿ ಅಚ್ಚರಿಯೇ: “ಕೋಪ ತಲಿಗೆ ಹತ್ತಿದ್ ಟೈಮ್ ನಲ್ಲಿ ಮಕ್ಕಳಿಗೆ ಪಾಠ ಹೇಳಿದ್ರೆ ಅದು ಕಿವಿಯಿಂದ ಹಾರ್ ಹೋಗ್ತದ್ರಿ. ಅವರು ಸಂತೋಷದಲ್ಲಿ ಇರೋ ಟೈಮ್ ನೋಡ್ಕಂಡು, ಲಘುನ ಹೇಳಿದ ಮಾತು, ಒಮ್ಮೆಲೇ ಎದಿಗೇ ಹೋಗ್ತದ್ರಿ. ಆಗ ಬೇಕಿದ್ದರ ಒಂದು ಬಾರಿ ಕಿವಿ ಎಳೆದರೂ, ಮಕ್ಳು ಬ್ಯಾಸ್ರ ಮಾಡಾಂಗಿಲ್ಲ. ಬಸವಣ್ಣರು ಹೇಳ್ಯಾರ್ರಿ, "ಅಧಿಕಾರ ದೊಡ್ಡದಲ್ಲ, ಅಭಿಮಾನ ದೊಡ್ಡದು" ಮಕ್ಳಿಗೆ ಕೋಪ ಬಂದಾಗ್ ಅವರಿಗೆ ತಿರ್ಗ ಕೋಪ ತೋರಬಾರದು. ಆ ಟೈಂನಾಗ್ ಹತ್ರ ಕೂತು ಕೈ ಚಾಚಿ ನಮ್ಮ ತೋಳಿಗೆ ತಗೋಬೇಕು ಅವ್ರ್ನ. ಮಕ್ಕಳಿಗೆ ಮನ್ಸಿಗೆ ತ್ರಾಸಾದಾಗ ನಾವ ಅಲ್ಲೇನ್ರಿ ಅವ್ರಿಗೆ ಬೇಕಾದ್ದು. ತುಸು ಶಾಂತ್ ಆದ್ಮೇಲೆ ಅದೇನಾರ ಅರ್ಜೆಂಟ್ ವಿಷ್ಯ ಆಗಿದ್ರ ಹೇಳ್ಬೇಕು, ಇಲ್ಲಾಂದ್ರೆ ಇನ್ನೊಂದಿನ ಸಮಾಧಾನ್ ದಲ್ಲಿದ್ದಾಗ ಹೇಳ್ಬೇಕು - ಇಂತವು ತಿದ್ಕೊಬೇಕಪಾ ನೀನು, ಸುಖವಾಗಿರ್ತಿ ಅಂತ" ಎಂದೆಲ್ಲ ಹೇಳುತ್ತಾ ಇದ್ದ ಆ ಅಂಕಲ್ಲಿಗೆ ಮನೆಯಿಂದ ಫೋನ್ ಬಂದಿತು. "ಹೂಂ, ಹೂಂ, ಅರೆ..!? ಹೊಟ್ ತುಂಬಾ ತಿಂದು ಹೆಬ್ಬಾವಾಗೀನಿ ಈಗ, ಇನ್ನೆಂಗ್ ಹೇಳ್ಳಿ ಚೊಲೋಯಿತ್ತು ಅಂತ" ಎಂದು ಮನೆಯಾಕೆಗೆ ಅವರು ಕಟ್ಟಿಕೊಟ್ಟ ಡಬ್ಬಿಯ ಕುರಿತಾಗಿ ಹೇಳುತ್ತಿದ್ದ ಈ ಕಡೆಯ ಮಾತು, ರೈಲಿನಿಂದಾಚೆ ರಸ್ತೆ ಬದಿಯಲ್ಲಿ ದಾಟಿದ ದೇವಸ್ಥಾನದ ಗಂಟೆಯ ಧ್ವನಿಯೊಂದಿಗೆ ಮಿಳಿತಗೊಳ್ಳುತ್ತಿತ್ತು... ಇತ್ತ ಸಜ್ಜೆ ಉಂಡೆ ನಮ್ಮಗಳ ಬಾಯಲ್ಲಿ ಕರಗುತ್ತಲಿತ್ತು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಸಾಮಾನ್ಯರಲ್ಲಿ ಅಸಾಮಾನ್ಯರು..!