ಮಂದರಗಿರಿ ಬೆಟ್ಟ - ಮಕ್ಕಳೊಡನೆ ಚಾರಣ ನಡೆಸಲೊಂದು ವೀಕೆಂಡ್ ಗೇಟ್ವೆ

ಮಕ್ಕಳೊಡನೆ ಚಾರಣ ನಡೆಸಲೊಂದು ವೀಕೆಂಡ್ ಗೇಟ್ವೆ - ಮಂದರಗಿರಿ ಬೆಟ್ಟ!


ಮಂದರಗಿರಿ ಬೆಟ್ಟ ಅಥವಾ ಬಸದಿ ಬೆಟ್ಟ ಎಂಬ ಹೆಸರಿನ ಈ ಬೆಟ್ಟವು ತುಮಕೂರಿನಿಂದ ೧೨ ಕಿಮೀ ಮತ್ತು ಬೆಂಗಳೂರಿನಿಂದ ೭೦ ಕಿಮೀ ದೂರದಲ್ಲಿದೆ. ಪ್ರಯಾಣದ ಅವಧಿ - ಬೆಳಿಗ್ಗೆ ಬೇಗನೆ ಹೊರಟು, ಸಂಚಾರ ದಟ್ಟಣೆ ಹೆಚ್ಚೇನೂ ಎದುರಿಸದೆ, ೧.೫ ಗಂಟೆಗಳಲ್ಲಿ ತಲುಪಬಹುದು. ಈ ಜಾಗದ ಪರಿಚಯ ಹೇಳುವುದಾದರೆ, ಪಂಡಿತನಹಳ್ಳಿ/ ಪುರೋಹಿತರ ಗ್ರಾಮ ಎಂಬ ಹಳ್ಳಿಯಲ್ಲಿ, ಒಂದು ದೈತ್ಯ ಏಕಶಿಲೆಯ ಬಲು ಎತ್ತರವಾದ ಬಂಡೆಯೊಂದಿದೆ. ಈ ಬೆಟ್ಟದ ಮೇಲೊಂದು ಜೈನ ಬಸದಿ. ಹಾಗಾಗಿಯೇ, 'ಬಸದಿ ಬೆಟ್ಟ' ಎಂಬ ಹೆಸರೂ ಕೂಡ ಇದಕ್ಕಿದೆ. ೮ ರಿಂದ ೧೨ ವರ್ಷದ ಮಕ್ಕಳಿಗೆ ಸುತ್ತು ಹಾಕಿದರೆ ಆರಾಮದಲ್ಲಿ ೭-೮ ಕಿಮೀ ಚಾರಣ, ಅದೂ ನೈಸರ್ಗಿಕ ಸ್ಥಳದ ಪರಿಚಯ ಮಾಡಿಸುತ್ತ ಓಡಾಡಿಸಲು ಹೇಳಿ ಮಾಡಿಸಿದಂತಹ ಜಾಗ!



ಪಿಂಚಿ ಧ್ಯಾನ ಮಂದಿರ :
ಈ ಬ್ರಹತ್ ಬೆಟ್ಟದ ಬುಡದಲ್ಲಿ ಒಂದು ಮಹಾವೀರನ ದೈತ್ಯ ಪ್ರತಿಮೆ ಇದೆ. ಬೆಳಗಿನ ಎಳೆಬಿಸಿಲಿಗೆ ಮತ್ತು ಸಂಜೆಯ ಇಳಿತಂಪಿಗೆ, ಇಲ್ಲಿ ಕೂತು ಧ್ಯಾನ ಮಾಡುವುದು ಆಹ್ಲಾದಕರವೆನಿಸುತ್ತದೆ.  ಈ ಬ್ರಹತ್ ಪೂರ್ತಿಯ ಕೆಳಗಡೆ, ಹುಲಿಯೊಂದು ಆಕಳಿನ ಕರುವಿಗೆ ಹಾಲನ್ನುಣಿಸುವುದು, ಹುಲಿಯ ಮರಿಗೆ ಆಕಳು ಹಾಲನ್ನುಣಿಸುವ ಪ್ರಾತ್ಯಕ್ಷಿಕೆ ಮೂರ್ತಿಗಳು, ಪ್ರೀತಿ ಮತ್ತು ಶಾಂತಿಯ ಪಾಠವನ್ನು ತಿಳಿಸುತ್ತದೆ. ಅದರ ಪಕ್ಕದಲ್ಲಿಯೇ  ಧ್ಯಾನ ಮಂದಿರ ಒಂದಿದೆ. ಜೈನ ಸಂಪ್ರದಾಯಗಳಲ್ಲಿ, ಬಟ್ಟೆ ಧರಿಸದ ಸನ್ಯಾಸಿಗಳು, ತಮ್ಮೊಡನೆ ಕೊಂಡೊಯ್ಯುವ ಪಿಂಚಿ (ನೈಸರ್ಗಿಕವಾಗಿ ನೆಲಕ್ಕೆ ಬಿದ್ದ ನವಿಲಿನ ಗರಿಗಳಿಂದ ಮಾಡುವ ಪೊರಕೆ)  ಮಾದರಿಯಲ್ಲಿ ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾದ, ಧ್ಯಾನ ಮಂದಿರವು 81 ಅಡಿ ಎತ್ತರದ ನವಿಲುಗರಿಯ ಬಣ್ಣಗಳ ಧ್ಯಾನಮಂದಿರವದು. ಜೈನ ಧರ್ಮದ ಸಾಮಾನ್ಯ ಬಸದಿಗಳ ಪೈಕಿ, ಈ ಗುಮ್ಮಟ ವಿಶೇಷವೆನಿಸುತ್ತದೆ. ಈ ನಿರ್ದಿಷ್ಟ ದೇವಾಲಯವನ್ನು ದಿಗಂಬರ ಜೈನ ತಪಸ್ವಿ ಶ್ರೀ ಶಾಂತಿನ್ ಸಾಗರ್ಜಿ ಮಹಾರಾಜರ ಗೌರವಾರ್ಥವಾಗಿ ನಿರ್ಮಿಸಲಾಗಿದೆ.  ಅವರು ದಿಗಂಬರ ಪಂಥಗಳ ಆಚರಣೆಗಳನ್ನು ಅದರ ಮೂಲ ರೂಪದಲ್ಲಿ ಪುನರುಜ್ಜೀವನಗೊಳಿಸಿದರು.  ಅವರ ಜೀವನ ಚರಿತ್ರೆಯ ಶಿಲ್ಪಕಲಾರೂಪವನ್ನು ಧ್ಯಾನಮಂದಿರದೊಳಗೆ ಕಾಣಬಹುದು.
ಬೆಟ್ಟದ ತುದಿಗೆ ಹತ್ತುವುದು ಕಷ್ಟಕರವಾದ ಚಾರಣವೇನಲ್ಲ ಬೆಳಿಗ್ಗೆ ಅಥವಾ ಸಂಜೆಯ ಸಮಯದ ಹೊರತಾಗಿ, ಬೇರೆ ಸಮಯಕ್ಕೆ ಭೇಟಿ ನೀಡಿದರೆ ಬಿಸಿಲು ತೀಕ್ಷವಾಗಿರುತ್ತದೆಯಷ್ಟೆ. ನಾವು ಬೆಳಿಗ್ಗೆ ಬೇಗನೆ ತಲುಪಿದೆವಾದ್ದರಿಂದ, ಗಾಡಿ ಇಳಿದ ಕೂಡಲೇ, ಸ್ವಚ್ಛ ಸ್ಥಳವೊಂದನ್ನು ಹುಡುಕಿಕೊಂಡು ಕಟ್ಟಿಕೊಂಡು ಬಂದಿದ್ದ ತಿಂಡಿಯನ್ನು ತಿಂದು, ಚಾರಣಕ್ಕೆ ತಯಾರಾದೆವು. ಬೆಟ್ಟದ ಬುಡದಲ್ಲಿರುವ ಪ್ರವೇಶದ್ವಾರದಿಂದ ಆ ಬೆಟ್ಟದಲ್ಲೇ ಕೊರೆದು ಮಾಡಿದ 435 ಮೆಟ್ಟಿಲುಗಳಿವೆ. ಬೆಟ್ಟದ ತುದಿಯನ್ನು ತಲುಪಲು ಸುಮಾರು 15-20 ನಿಮಿಷಗಳು ಬೇಕಾಗುತ್ತದೆ. ಬೆಟ್ಟವೇರುತ್ತ ಹೋದಂತೆ, ಎತ್ತರದಿಂದ ಕೆಳಗಿನ ಪರಿಸರ ಮನೋಹರವಾಗಿ ಕಾಣಲಾರಂಭಿಸುತ್ತದೆ. ಬೆಟ್ಟ ಏರುವಾಗ ಬೀಸುವ ಜೋರಾದ ಗಾಳಿಯೂ ಕೂಡ ದೇಹ ಮತ್ತು ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಮೇಲೆ ತಿಂಡಿ ತೀರ್ಥಗಳ ವ್ಯವಸ್ಥೆ, ಆಹಾರದ ವ್ಯವಸ್ಥೆ ನಿರೀಕ್ಷೆ ಬೇಡ. ನೀರಿನ ಬಾಟಲಿ ಹಿಡಿದು ಹತ್ತುವುದು ಒಳಿತು. ದೇವಾಲಯದ ಹಿಂಬಾಗದಿಂದಲೇ ಹಿಂದಿನ ಸರೋವರದ ಬಳಿ ಸಾಗುವುದಾದರೆ, ಪಿಕ್ನಿಕ್ ಬ್ಯಾಗನ್ನು ಹಿಡಿದೇ ಹೋಗುವುದು ಸೂಕ್ತ. ಸಧ್ಯಕ್ಕಂತೂ ಮಂಗಗಳ ಕಾಟವಿಲ್ಲ. ಹತ್ತಲಿಕ್ಕೆ ಆಗದಿದ್ದರೆ, ಕೆರೆಯ ಪಕ್ಕದವರೆಗೆ ವಾಹನದಲ್ಲಿ ಬಂದು ಕೂಡಾ ಈ ಬಸದಿಗೆ ಭೇಟಿ ನೀಡಬಹುದು. 



ದೇವಾಲಯದ ಆವರಣದಲ್ಲಿ, ಎತ್ತರದ ಪಾದಚಾರಿ ಮಾರ್ಗದ ಮೇಲೆ ದಿಗಂಬರ ಚಂದ್ರನಾಥ ತೀರ್ಥಂಕರರ ನೈಸರ್ಗಿಕ ರೂಪದಲ್ಲಿ ಬೃಹತ್ ಪ್ರತಿಮೆಯನ್ನು ನೋಡಬಹುದು. ಅಹಿಂಸ ತತ್ವವನ್ನು ಅನುಸರಿಸುವ ಅನುಯಾಯಿಗಳ, ಪ್ರಾಣಿ ಪಕ್ಷಿಗಳ ಮೂರ್ತಿಗಳನ್ನು ರೂಪಿಸಲಾಗಿದೆ.  ಬೆಟ್ಟದ ಮೇಲೆ ಸುತ್ತಮುತ್ತಲೆಲ್ಲೂ ಮರಗಿಡಗಳ ನೆರಳು ಇಲ್ಲ. ದೇವಾಲಯದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾತ್ರ ಇರುತ್ತದೆ. ಮೇಲ್ಭಾಗದಲ್ಲಿರುವ ಜೈನ ದೇವಾಲಯವು ಭಗವಾನ್ ಚಂದ್ರನಾಥ, ಭಗವಾನ್ ಪಾರ್ಶ್ವನಾಥ ಮತ್ತು ಭಗವಾನ್ ಸುಪಾರ್ಶ್ವನಾಥ ಎಂಬ ಮೂವರು ಸಂತರ ಗೌರವಾರ್ಥವಾಗಿ ಸಣ್ಣ ದೇವಾಲಯಗಳು ಅಥವಾ ಬಸದಿಗಳಿದ್ದು, ವಾಸ್ತವವಾಗಿ, ಒಳಗಿರುವ ಎರಡು ಸಣ್ಣ ಬಸದಿಗಳು 12 ನೇ ಶತಮಾನದ ಆರಂಭದಿಂದಲೂ, ಉಳಿದ ಎರಡು 14 ನೇ ಶತಮಾನದಿಂದಲೂ ಇವೆ ಎಂದು ನಂಬಲಾಗಿದೆ.

ಈ ಎತ್ತರದ ಸ್ಥಳದಿಂದ, ದೇವಾಲಯದ ಪಕ್ಕದಲ್ಲಿ ಕಲ್ಲು ಕಟ್ಟಿ ನಿರ್ಮಿಸಿದ ಕೆರೆ ಕಾಣುತ್ತದೆ. ಕೆರೆ ಸ್ವಚ್ಛವಾಗಿದೆ. ಸುತ್ತಲಿನ ಬೆಟ್ಟಗಳ ನೋಟ ಅತ್ಯಂತ ವಿಹಂಗಮವಾಗಿ ಕಾಣಿಸಿಕೊಳ್ಳುತ್ತದೆ. ದೇವಾಲಯದ ಹಿಂಬಾಗದ ಬಾಗಿಲಿನಿಂದ ನಿರ್ಗಮಿಸಿದರೆ, ಒಂದು ೮೦೦ ಮೀ ದೂರಕ್ಕೆ ಕ್ರಮಿಸಿದರೆ, ವಿಶಾಲವಾದ ಮೈದಾಳ ಸರೋವರ ಮತ್ತು ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಬೆಟ್ಟಗಳ ನೋಟಗಳನ್ನು ಕಾಣಬಹುದು.  ಮಳೆಗಾಲದ ಮರುದಿನವಾದ್ದರಿಂದ ಸರೋವರ ತುಂಬಿಕೊಂಡು ಸುಂದರವಾಗಿ ಕಾಣುತ್ತಿತ್ತು. ಪ್ರಾರಂಭದಲ್ಲಿ ತೀರಾ ಆಳವಿಲ್ಲದ ಕಾರಣ, ಎಲ್ಲರಿಗೂ ನೀರಾಟ ಆಡಲು ಅನುಕೂಲಕರವಾಗುವಂತಿದೆ. ಅಲ್ಲಲ್ಲಿ ದೈತ್ಯಾಕಾರದ ಬಂಡೆಕಲ್ಲುಗಳು. ಮಕ್ಕಳು ಹತ್ತಿ ಇಳಿದು ಆಟವಾಡಿ ಸಂತೋಷ ಪಟ್ಟರು.  ಆದರೂ ಮಕ್ಕಳಿದ್ದಾಗ ಎಲ್ಲೆಡೆ ಮುತುವರ್ಜಿ ಅವಶ್ಯಕ. ನಿಸರ್ಗದ ಮಡಿಲಲ್ಲಿ ಕುಳಿತು, ಸುತ್ತಮುತ್ತಲಿನ ನೀರಿನ ಪರಿಸರ ನೋಡುತ್ತಾ, ತಿಂಡಿ ತಿನ್ನುತ್ತಾ ತಮ್ಮವರೊಡನೆ ಹರಟುತ್ತ  ಕೂತ ಅನೇಕ ಕುಟುಂಬಗಳನ್ನು ಅಲ್ಲಿ ಕಂಡೆವು. ಆದರೆ ಇದೇ ರೀತಿ ತಿಂಡಿಗಳನ್ನು ತಂದು ತಿನ್ನುವ ಜನ ಅಲ್ಲಲ್ಲೇ ಸುತ್ತಮುತ್ತ ಪೇಪರು ಪ್ಲೇಟು, ಪ್ಯಾಕೇಟು ಆಹಾರದ ಪ್ಲಾಸ್ಟಿಕ್ ಪೊಟ್ಟಣಗಳ ಬಿಸಾಡಿರುವುದು ಕಂಡು ಖೇದವೆನಿಸಿತು. ಈ ಸ್ಥಳವನ್ನು ಪ್ಲಾಸ್ಟಿಕ್ ಮುಕ್ತವಾಗಿರಿಸಲು, ಪ್ರವಾಸಿಗರಿಗೆ ಬಿಗು ನಿಯಮದ ಅವಶ್ಯಕತೆಯಿದೆ ಎನಿಸಿತು. ಏನೇ ಆಗಲಿ, ಇನ್ನೊಬ್ಬರಿಂದ ಕೇಳಿ ತಿಳಿಯಬೇಕಾದ ವಿಷಯವಲ್ಲವಿದು. ನಮ್ಮದೇ ಕರ್ತವ್ಯವದು! 

೧೨ ವರ್ಷದ ಆಸುಪಾಸಿನ ಮಕ್ಕಳನ್ನು ಕರೆದುಕೊಂಡು ಹೋಗಿದ್ದೆವಾದ್ದರಿಂದ, ಮಕ್ಕಳು ಅವರ ಸುತ್ತಮುತ್ತಲು ಕಾಣಸಿಗುವ ಅದೆಷ್ಟು ಬಗೆಯ ಕಾಡು ಸಸ್ಯಗಳನ್ನು ಅವರು ಒಟ್ಟು ಮಾಡಬಹುದು ಅಥವಾ ತೋರಿಸಬಹುದು ಎಂಬ ಟಾಸ್ಕ್ ಕೊಟ್ಟಿದ್ದೆವು. ಮಕ್ಕಳು ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಹೂವುಗಳ ಗುರುತಿಸಲು ಪ್ರಯತ್ನಿಸಿದ್ದು, ಮಕ್ಕಳು ನಿಸರ್ಗದೊಂದಿಗೆ ಬೆರೆಯಲು ಒಳ್ಳೆಯ ಅವಕಾಶವಾಯಿತು. ಹಾದಿ ಬದಿ, ದನಕರುಗಳು, ಕುರಿ ಮೇಕೆಗಳು, ಅದೃಷ್ಟವಿದ್ದರೆ, ಕಲ್ಲುಬಂಡೆಗಳ ನಡುವೆ ನವಿಲುಗಳು ಕಾಣುವುದು ಮಕ್ಕಳಿಗೆ ಉತ್ಸಾಹವನ್ನು ನೀಡುತ್ತಿತ್ತು. ಸರೋವರದ ಪಕ್ಕದಲ್ಲಿನ ಡಾಂಬರು ರಸ್ತೆ, ಆ ಏಕಶಿಲಾ ಬೆಟ್ಟದ ಪಕ್ಕದಲ್ಲಿ ಹಾದುಹೋಗಿ ಮತ್ತೆ ಬೆಟ್ಟವನ್ನೇರುವ ಪ್ರಾರಂಭದ ಜಾಗಕ್ಕೆ ಬಂದು ಸೇರುತ್ತದೆ. ಆರಾಮದಲ್ಲಿ ೬-೭ ಕಿಮೀ ಕಾಲ್ನಡಿಗೆಯ ಪ್ರವಾಸದ ನಂತರ, ಚುಟುಗುಟ್ಟುತ್ತಿರುವ ಹೊಟ್ಟೆಗೆ, ನಾವು ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬುತ್ತಿಯನ್ನು ಅಲ್ಲೇ ಸಮೀಪದಲ್ಲಿದ್ದ ಬಂಡೆ ಕಲ್ಲಿನ ಮೇಲೆ ಕುಳಿತು ತಿಂದೆವು. ಈ ಬಸದಿ ಬೆಟ್ಟದ ಬುಡದಲ್ಲಿ, ಹೆಚ್ಚೇನೂ ತಿಂಡಿಗಳು ದೊರೆಯದಿದ್ದರೂ, ಹಣ್ಣುಗಳು, ಕಬ್ಬಿನಹಾಲು, ಸೋಡಾ, ಜೋಳ ಇತ್ಯಾದಿ ಬಾಯ್ಬಾಡಿಗೆಗೆ ತಿಂಡಿಗಳು ಸಿಗುತ್ತವೆ. ಅಲ್ಲಿಯೂ ಕೂಡ ಪ್ಲಾಸ್ಟಿಕ್ ಕಸಗಳ ನಿಗಾ ಇನ್ನಷ್ಟು ಬೇಕು ಎನಿಸಿತು.

ಪ್ರವಾಸಿಗರಾಗಿ ಕರ್ತವ್ಯಪ್ರಜ್ಞೆಯನ್ನು ಕಾದುಕೊಂಡು, ಮಾಲಿನ್ಯ ಮುಕ್ತ ಪ್ರವಾಸವನ್ನಾಗಿಸಿ, ಅರ್ಧ ದಿನದ ಮಟ್ಟಿಗೆ ಮಕ್ಕಳೊಂದಿಗೆ ಭೇಟಿ ನೀಡಲು ಇದೊಂದು ಸೂಕ್ತ ಸ್ಥಳ

#ವಿಶ್ವಪ್ರವಾಸದಿನ #ತಿರುಗಾಡಿಕಥೆಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಸಾಮಾನ್ಯರಲ್ಲಿ ಅಸಾಮಾನ್ಯರು..!