ಚಂದ್ರಕಾಣಿ ಪಾಸ್ ಚಾರಣ, ಕುಲು - ಭಾಗ 1

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ದೆಹಲಿ, ಸಂಸ್ಕೃತ ಭಾರತಿ ಶಿವಮೊಗ್ಗ, ಯೂಥ್ ಹಾಸ್ಟೆಲ್ಸ್ ಅಸ್ಸೊಸಿಯೆಷನ್ ಆಫ್ ಇಂಡಿಯಾ ತರಣೋದಯ ಘಟಕ ಇವರುಗಳ ಸಹಭಾಗಿತ್ವದಲ್ಲಿ ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ನ ೧೨೫೦೦ ಅಡಿ ಎತ್ತರದ ಪ್ರದೇಶಕ್ಕೆ ನಾವು ೪೨ ಜನರು, ಮೇ ತಿಂಗಳಿನಲ್ಲಿ ಪರ್ವತಾರೋಹಣ ಮಾಡಿದ್ದೆವು.



ಚಂದ್ರಕಾಣಿ ಪಾಸ್ ಹಿಮಾಲಯ ಶ್ರೇಣಿಯ ಚಾರಣ ಹೋಗುವವರಿಗೆ ಮಾಹಿತಿ ಉಪಯುಕ್ತವಾಗಬಹುದು ಎಂಬ ಅನಿಸಿಕೆಯಿಂದ ಅನುಭವ ಕಥನ ಹಂಚಿಕೆ. 

ದಿನ ೧ :

ಚಾರಣಕ್ಕೆ ಹೋಗಿ ಸೇರಿಕೊಳ್ಳುವ ದಿನ. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಾಗಗಳಿಂದ ಎಲ್ಲರೂ ಒಟ್ಟು ಸೇರಿ ಡೆಲ್ಲಿಯವರೆಗೆ, ಡೆಲ್ಲಿಯಿಂದ ಚಂಡಿಗರ್ವರೆಗೆ ರೈಲು ಪ್ರಯಾಣದೊಂದಿಗೆ ನಮ್ಮ ಚಾರಣ ತಂಡ ಹೊರಟಿತ್ತು. ನಾವಿಬ್ಬರು ಆಫೀಸು ರಜೆಗಳ ಉಳಿಸುವುದಕ್ಕಾಗಿ ವಿಮಾನದಲ್ಲಿ ಪ್ರಯಾಣಿಸಿ ನಮ್ಮ ತಂಡವನ್ನು ಸೇರಿಕೊಂಡೆವು.  ಬೇರೆ ಬೇರೆ ಭಾಷೆ, ಬೇರೆ ಬೇರೆ ಸಂಸ್ಕೃತಿ, ದೇಶವೊಂದೇ ಭಾರತ. ದೆಹಲಿ, ಉತ್ತರಾಖಂಡ, ಉತ್ತರಪ್ರದೇಶ, ಝಾರ್ಖಂಡ್ ಇನ್ನಿತರ ಸ್ಥಳಗಳಿಂದ ಕೇಂದ್ರೀಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೂಡ ಭಾಗವಹಿಸುತ್ತಿದ್ದಾದ್ದರಿಂದ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಸಂಸ್ಕೃತ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಇದಾಗಿತ್ತು.  ಚಂಡೀಘರ್ಇಂದ ಬಸ್ ಮಾಡಿಕೊಂಡು ರಾತ್ರಿ ಪ್ರಯಾಣ ಬೆಳೆಸಿದ್ದು,  ಹಾದಿಯುದ್ದಕ್ಕೂ ಎತ್ತರೆತ್ತರ ಪರ್ವತಗಳ ಮಧ್ಯೆ, ಬಿಯಾಸ್ ನದಿಯ ಪಕ್ಕದಲ್ಲಿ, ಕಣಿವೆಗಳ ಮಧ್ಯೆ ಅಂಕುಡೊಂಕಾದ, ಚೂರು ತಪ್ಪಿದರೂ ಕಂದಕಕ್ಕೇ ಬೀಳುತ್ತೇವೆನೋ ಎಂಬಂತಹ ರಸ್ತೆಗಳಲ್ಲಿ, ನೈಸರ್ಗಿಕ ವಿಪತ್ತುಗಳ ಆಗೀಗ ಅನುಭವಿಸಿದರೂ ಕೂಡ ಒತ್ತೊತ್ತಾಗಿ ಮನೆಗಳ ಕಟ್ಟಿಕೊಂಡು, ಕಷ್ಟಪಟ್ಟು ಜೀವನ ಸಾಗಿಸುವ ಜನರಿರುವ ಊರುಗಳ ದಾಟುತ್ತ, ಅಟಲ್ ಸುರಂಗಗಳಲ್ಲಿ, ಪ್ರಯಾಣ ಅನುಭವ ಪಡೆದು,  ಬೆಳಿಗ್ಗೆ ತಲುಪಿದ್ದು ಕುಲು ಜಿಲ್ಲೆಯ ೧೪ನೇ ಮೈಲು ಎಂಬ ಪುಟ್ಟ ಹಳ್ಳಿಗೆ. 


(ಬಿಯಾಸ್ ನದಿಯ ಆಗರ - ಆಕಾಶಮಾರ್ಗದಿಂದ ಕಂಡಂತೆ)

  
   (ಎರಡು ಕಟ್ಟಡಗಳ ನಡುವೆ ಅಂತರವೇ ಇಲ್ಲದಷ್ಟು ಒತ್ತೊತ್ತಾಗಿ ಮನೆಗಳಿರುವ ಕುಲು ಜಿಲ್ಲೆಯ ಊರುಗಳು)

                                             

(ಕಡಿದಾದ ಕಣಿವೆಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿಗಳು)


(ಬಿಯಾಸ್ ನದಿಯಲ್ಲಿ ಕೊಚ್ಚಿ ಹೋದ ಸರ್ಕಾರಿ ಶಾಲೆ!)


(ನಮ್ಮ ಪ್ರಯಾಣದ ಹಾದಿಯಲ್ಲಿ - ಹೆದ್ದಾರಿಯ ಅಕ್ಕ ಪಕ್ಕದ ಪ್ರಾಕೃತಿಕ ನೋಟ) 


(ಬೆಟ್ಟಗಳ ಕೊರೆದು ಮಾಡಿರುವ ಊರೂರು ಜೋಡಿಸುವ, ಮೈಜುಮ್ಮೆನಿಸುವ ಭಯಾನಕ ರಸ್ತೆಗಳು)



(Aut ಟನಲ್,  ಚಂಡೀಘರ್ ಮತ್ತು ಮನಾಲಿಯನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ೨೧ರಲ್ಲಿನ, ೨.೮ ಕಿಮೀ ಉದ್ದದ ಸುರಂಗ ರಸ್ತೆ!)





(ಬೆಟ್ಟ ಕರಗುತ್ತದೆ, ಊರು ಬೆಳೆಯುತ್ತದೆ, ನಾಗರೀಕತೆಯ ನಿಯಮ)



                        (ಅಲ್ಲಲ್ಲಿ ಉಳಿದಿರುವ ಹಿಮಾಲಯದ ಸಾಂಪ್ರದಾಯಿಕ ಕಾತ್ ಕುನಿ ಮನೆಗಳು - ಮರ, ಕಲ್ಲು, ಚಾಪೆ ಮತ್ತು ಮಣ್ಣಿನಿಂದ ಮಾಡಲ್ಪಟ್ಟಿರುತ್ತದೆ)  


(  ಮೇ ತಿಂಗಳಿನ ಸಮಯಕ್ಕೆ ರಸ್ತೆ ಬದಿ ಕಾಣಸಿಗುವ ಸ್ವಚ್ಛ ನೀಲಿ ಬಾನು, ಬಿಳಿ ಮೋಡ, ಮತ್ತು ಸುತ್ತಲೂ ಹಸಿರಿನಿಂದ ಕೂಡಿದ ಹಿಮಾವೃತ್ತ ಟೊಪ್ಪಿಗೆ ಹೊತ್ತ ಬೆಟ್ಟಗಳು)


(ನಮ್ಮ ವಸತಿ ವ್ಯವಸ್ಥಗೆ ಕ್ಯಾಮ್ಪಿಂಗ್ ಜಾಗದ ಟೆಂಟ್ ಮನೆಗಳು)

ದಿನ ೨ :

ಎಂಟು ದಿನಗಳ ಈ ಚಾರಣಕ್ಕೆ ಕುಲು ಸಮೀಪದ ೧೪ ನೇ ಮೈಲಿ ಎಂಬ ಊರಿನಲ್ಲಿ ನಮಗೆ ಟೆಂಟ್ಗಳಲ್ಲಿ ಆಶ್ರಯ. ಹಿಂದುಗಡೆಯೇ ಜುಳುಜುಳು ನಾದದೊಂದಿಗೆ ಹರಿಯುವ ಬಿಯಾಸ್ ನದಿ. (ಇದು ಕುಲು ಮನಾಲಿಯ ಹೃದಯಭಾಗವಾಗಿದ್ದು ಇದು ವಿವಿಧ ಕ್ಯಾಂಪಿಂಗ್ ತಾಣಗಳನ್ನು ಹೊಂದಿದೆ ಮತ್ತು ಇದು ರಿವರ್ ರಾಫ್ಟಿಂಗ್ ಸ್ಪೋರ್ಟ್ ನಂತಹ ಜಲ ಸಾಹಸ ಕ್ರೀಡೆ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸೋದ್ಯಮಕ್ಕೆ ಮುಖ್ಯ ಆಸರೆ. ಇದು ಹಿಮಾಲಯದಿಂದ ಹುಟ್ಟಿ ಪಂಜಾಬಿನ ಸಟ್ಲೆಜ್ ನದಿಗೆ ಹರಿಯುತ್ತದೆ. ಇದು ಪಶ್ಚಿಮ ಹಿಮಾಲಯದ ರೋಹ್ಟಾಂಗ್ ಪಾಸ್ನಲ್ಲಿ 14, 308 ಅಡಿ ಎತ್ತರದಲ್ಲಿ ಏರುತ್ತದೆ. ಇದು ಹಿಮಾಚಲ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆಯ ಉತ್ತಮ ಮೂಲವಾಗಿದೆ) 
 ದೂರದಿಂದ ನಿರ್ಮಲವೆನಿಸುವ ನೀರಿನ ಒಳಗೆ ಕಾಲಿಡುತ್ತಿದ್ದಂತೆಯೇ ಗೊತ್ತಾಗುತ್ತದೆ ಅದರ ಪರಾಶಕ್ತಿ! ಮನುಷ್ಯ ಕೊಚ್ಚಿಹೋಗುವಷ್ಟು ರಭಸದಲ್ಲಿ ಹರಿಯುತ್ತದೆ ನೀರು. ನದಿಯ ಪಕ್ಕದಲ್ಲಿ ಕೂತು ಪಟ್ಟಂಗ ಹೊಡೆಯುವ ಸುಖ ಬಲ್ಲವನೇ ಬಲ್ಲ. ಹೊರಗಡೆ ಎಷ್ಟೇ ಉರಿಬಿಸಿಲಿರಲಿ ನೀರು ಮಾತ್ರ ಹಿಮ ಕರಗಿದ ನೀರು -  ಯಾರು ಹೆಚ್ಚು ಹೊತ್ತು ಕಾಲಿಟ್ಟುಕೊಳ್ಳುತ್ತಾರೆ ಎಂಬಿತ್ಯಾದಿ ಆಟ, ಫೋಟೋ ಸೆಷನ್ಸ್, ಅಲ್ಲಿನ ಸ್ಥಳೀಯರೊಡನೆ ಮಾತುಕತೆ ಇತ್ಯಾದಿ ಮೋಜು ಮಸ್ತಿಯಲ್ಲಿ ನಮ್ಮ ಮೊದಲ ದಿನ ಕಳೆಯಿತು. ಸುತ್ತಮುತ್ತಲಿನ ಸಸ್ಯರಾಶಿ, ಪ್ರವಾಸೀ ಊರಿನ ಜನರ ಗುಲಾಬಿ ಹೂ ಬೆಳೆಸುವ ಹವ್ಯಾಸ, ಕೆಲವು ಸುಂದರ ಪಕ್ಷಿಗಳನ್ನೂ ಗಮನಿಸಿದೆವು. 






 







ದಿನ ೩ :

ಮೂರನೆಯ ದಿನ, ಬೆಳಿಗ್ಗೆ ಮುಂಚೆ ಬಿಯಾಸ್ಯಂ ನದಿ ತೀರದಲ್ಲಿ ಬೆಳಗ್ಗಿನ ಯೋಗ ಮತ್ತು ಸ್ಟ್ರೆಚಿಂಗ್ಗ್ ಅಭ್ಯಾಸ ಮಾಡಿಸಿದರು.




 ಆ ದಿನಕ್ಕೆ ನಮಗಿದ್ದ ದಿನಚರಿ - acclimatisation trek (ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಿಕೆ). ೬ ಕಿಮೀ ನ ಈ ಚಾರಣ ಅಲ್ಲಿಯೇ ಸಮೀಪದ ಬೆಟ್ಟವೊಂದಕ್ಕೆ, ಗೈಡ್ಸ್ ನಮ್ಮನ್ನು ಕರೆದುಕೊಂಡು ಹೋಗಿ ಪ್ರತಿಯೊಬ್ಬರ ದೇಹ ಸಾಮರ್ಥ್ಯದ ಬಗ್ಗೆ ದೃಢೀಕರಣ ತೆಗೆದುಕೊಳ್ಳುತ್ತಾರೆ. ಇಲ್ಲಿ ಬಳಲಿ ಸೋತರೆ, ಮುಂದಿನ ಚಾರಣಕ್ಕೆ ಹೋಗುವ ಕುರಿತು ಇನ್ನೊಮ್ಮೆ ಯೋಚಿಸುವುದು ಸೂಕ್ತ.  ಯಂಗ್  ಅಂಡ್ ಎನರ್ಜೆಟಿಕ್ ಜನರ ಟೀಮ್ ನಮ್ಮದಾಗಿದ್ದರಿಂದ ಎಲ್ಲರೂ ಇದನ್ನು ಪಾಸು ಮಾಡಿದೆವು. 






(ಹಿಮಾಲಯನ್ ಫೇಸಸ್)














(ಪರ್ವತ ಶ್ರೇಣಿಯ ಸಾಂಪ್ರದಾಯಿಕ ಮರದ ದಿಮ್ಮಿಗಳಿಂದ ಮಾಡಿದ ಮನೆಯೂ, ಮತ್ತವರ ದಾಳಿಂಬೆ, ಸೇಬು, ಕೋಸು ಸೊಪ್ಪುಗಳ ಕೈತೋಟವೂ)



(ನಡೆದು ಸುಸ್ತಾಗಬಹುದು, ನೋಡಿ ಕಣ್ತಣಿಯುವುದಿಲ್ಲ ಮಾತ್ರ!)



(ಹಳ್ಳಿಗಳೆಲ್ಲವೂ ಬೆಟ್ಟಗಳ ಮೇಲೆಯೇ ಇರುವುದರಿಂದ, ಅಲ್ಲಿನ ಜನರಿಗೆ ಈ ನಮ್ಮ ಏದುಸಿರ ಹತ್ತಿ ಇಳಿಯುವ ಚಾರಣದ ಹಾದಿಗಳು, ಅವರುಗಳ ನಿತ್ಯ ನಡುಗೆ, ಸಹಜ ಬದುಕು) 




(ಕಾತ್ ಕುನಿ ಶೈಲಿಯ ಮರದ ದಿಮ್ಮಿಗಳಿಂದ ನಿರ್ಮಿಸಲ್ಪಟ್ಟ ಮನೆಗಳು)





(ಕುಲು ಮನಾಲಿ ಗಿರಿಧಾಮಗಳ ಪ್ರಮುಖ ಬೆಳೆ ಸೇಬು)


(ಹಿಮ ಕರಗಿ ಖನಿಜಶಗಳನ್ನೊಳಗೊಂಡ ನೀರಾಗಿ ಹಳ್ಳಿಗಳ ಕಾಲುವೆಗಳಲ್ಲಿ ಹರಿಯುತ್ತವೆ!)




(ಬಟಾಹರ್ ಊರಿನ ನಾಗ ಪ್ರತಿಷ್ಠಿತ ದೇವಾಲಯದ ಬಳಿ ವಿಶ್ರಮಿಸಿ, ಪರಸ್ಪರ ಪರಿಚಯ ಕಾರ್ಯಕ್ರಮ, ಸಂಸ್ಕೃತ ಸಂಭಾಷಣೆ ಇತ್ಯಾದಿ ಚಟುವಟಿಕೆಗಳ ನಡೆಸಿದೆವು)


(ನೆಲಕ್ಕೆ ಬಿಸಿಲೇ ತಾಗದಂತಹ ಹಳ್ಳಿ ರಸ್ತೆಗಳು!)



(ಕುಲು ಜಿಲ್ಲೆಯ ಊರುಗಳ ಒಬ್ಬೊಬ್ಬರ ಮನೆಯೂ ಮಿನಿ ಲಾಲ್ಭಾಗ್)



ಹೇಗೆಂದರೂ ಕರ್ನಾಟಕದಿಂದ ಅಷ್ಟು ದೂರಕ್ಕೆ ಹೋಗಿದ್ದೆವಲ್ಲ, ಸಂಜೆಯ ವಿಶ್ರಾಂತಿ ಸಮಯವನ್ನು ಪೋಲು ಮಾಡದೇ, ನಾವೆಲ್ಲರೂ ಲೋಕಲ್ ಬಸ್ಸನ್ನು ಹಿಡಿದು 'ಮನಾಲಿ' ಗೆ ಹೋದೆವು (). ಅಲ್ಲಿನ ಪ್ರಸಿದ್ಧ  ಹಡಿಂಬದೇವಿಯದೇವಾಲಯವನ್ನು ನೋಡಿದೆವು. ಮುಂದಕ್ಕೆ ಮನಾಲಿ ಸಿಟಿ ಮಾರ್ಕೆಟ್ ಸುತ್ತಾಡಿಕೊಂಡು ಬಂದೆವು. ಚಾರಣಕ್ಕೆ ಅವಶ್ಯಕ ವಸ್ತುಗಳ ಖರೀದಿ ಮಾಡಿಕೊಂಡೆವು. ಅಪರಿಚಿತರಂತೆ ಎಲ್ಲರೂ ಸೇರಿಕೊಂಡರೂ ಇಂತಹ ಓಡಾಟಗಳು ಒಂದೊಳ್ಳೆ ಆತ್ಮೀಯತೆಯನ್ನು ತಂದುಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ದೂರದ ಚಾರಣಗಳಲ್ಲಿ, ಹಾದಿ ಕ್ರಮಿಸುವಾಗ ಪರಸ್ಪರ ಸ್ನೇಹ ಸಹಕಾರ ಅವಶ್ಯಕ ಕೂಡ. ರಾತ್ರಿ ಊಟದ ನಂತರ, ಮುಂದಿನ ಚಾರಣದ ಕುರಿತಾಗಿ ವಿವರಣೆ, ಬೆನ್ನಿನ ಬ್ಯಾಗ್ ವಿತರಣೆ ಇತರ ಚಟುವಟಿಕೆಗಳು ನಡೆದವು. 


ಮುಂದುವರೆಯುವುದು.. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಸಾಮಾನ್ಯರಲ್ಲಿ ಅಸಾಮಾನ್ಯರು..!

ನಮ್ಮ ಭಾಷೆ ಕನ್ನಡ - ಅಕ್ಷರಕ್ಕೊಂದು ಗಾದೆ ಮಾತು