ರಾಕ್ಷಸಿಗೊಂದು ದೇವಾಲಯ - ಹಡಿಂಬ ದೇವಿ ದೇವಾಲಯ, ಮನಾಲಿ
ಚಂದ್ರಕಾಣಿ ಪಾಸ್ ಚಾರಣದ ನೆಪದಲ್ಲಿ ಕುಲು ತಲುಪಿಯಾಗಿತ್ತು. ಚಾರಣದ ಹಿಂದಿನ acclimatisation ಟ್ರೆಕ್ ದಿನವನ್ನು ಅರ್ಧ ದಿನ ಮುಗಿಸಿ ಇನ್ನರ್ಧ ದಿನ, ೪-೫ ತಾಸುಗಳ ಮಟ್ಟಿಗೆ ಹಿಮಾಚಲ ಪ್ರದೇಶದ ಸುಂದರ ಗಿರಿಧಾಮ ಮನಾಲಿ ಸುತ್ತುವುದು ಎಂಬ ಪ್ಲಾನ್ ಮಾಡಿಕೊಂಡೆವು. ಅಲ್ಲಿ ಭೇಟಿ ನೀಡಬೇಕೆಂದು ಸೂಚಿಸಲಾದ ಸ್ಥಳಗಳು ಹಡಿಂಬ ದೇವಿ ದೇವಾಲಯ ಮತ್ತು ಒಂದಷ್ಟು ಶಾಪಿಂಗ್ಗಾಗಿ ಮಾಲ್ ರೋಡ್ ಸುತ್ತುವುದು ಎಂದು ತಿಳಿಸಿದರು. ಯಾಕೋ ಅನುಮಾನವಾಯಿತು ಮತ್ತೆ ಮತ್ತೆ ಕೇಳಿದೆ. ಮಹಾಭಾರತದಲ್ಲಿ, ಭೀಮ ಮದುವೆಯಾಗಿದ್ದ ಆ ರಾಕ್ಷಸ ಕುಲದ ಹಿಡಿಂಬೆಗೆ ದೇವಸ್ಥಾನವೇ? ಎಂದು ಎರಡು-ಮೂರು ಗೈಡ್ ಗಳನ್ನು ಕೇಳಿದೆ. ಹೌದು ಹೌದು ಎಂದರು. ೧೪ ವರ್ಷಗಳ ಹಿಂದೊಮ್ಮೆ ಮನಾಲಿಗೆ ಬಂದಿದ್ದಾಗ ವಿಷ್ಣುವಿನ ದೇವಾಲಯದಕ್ಕೆ ಭೇಟಿ ನೀಡಿದ್ದೆವು, ಈ ದೇವಾಲಯದ ಬಗ್ಗೆ ಕೇಳಿರಲಿಲ್ಲ. ಆಶ್ಚರ್ಯವಾಯಿತು.
ಹಡಿಂಬ ದೇವಿ ದೇವಾಲಯ ಹುಟ್ಟಿದ್ದು ಹೇಗೆ?
ಸುಮಾರು ೫೦೦ ವರ್ಷಕ್ಕಿಂತಲೂ ಹಳೆಯದಾದ ಈ ದೇವಾಲಯ ೧೫೫೩ ರಲ್ಲಿ ಮನಾಲಿಯ ರಾಜ ಬಹಾದ್ದೂರ್ ಸಿಂಗ್ ನಿರ್ಮಿಸಿದನಂತೆ. ರಾಕ್ಷಸ ಕುಲಕ್ಕೆ ಸೇರಿದ ಹಿಡಿಂಬೆ, ಮಹಾ ಕ್ರೂರಿ ಮತ್ತು ಸಾಹಸಿಯಾದ, ಆ ಸ್ಥಳವನ್ನು ಆಳುತ್ತಿದ್ದ ತನ್ನ ಅಣ್ಣನೊಡನೆ ಯುದ್ಧ ಮಾಡಿ ಯಾರು ಗೆಲ್ಲುತ್ತಾರೋ ಅವರನ್ನು ವರಿಸುವುದು ಎಂಬ ಪ್ರತಿಜ್ಞೆ ಇಟ್ಟುಕೊಂಡಿದ್ದಳಂತೆ. ಪಾಂಡವರು ಅರಗಿನ ಅರಮನೆಯಿಂದ ಪಾರಾಗಿ ಇದೇ ದುಂಘರಿ ವನದಲ್ಲಿ ಇದ್ದಾಗ, ಭೀಮನು ಹಿಡಿಂಬೆಯ ಅಣ್ಣನ್ನನ್ನು ಸಂಹರಿಸಿದನು. ಅದಾಗಲೇ ಭೀಮನ ಸೌಂದರ್ಯ ಮತ್ತು ವೀರತನಕ್ಕೆ ಮನಸೊತ್ತಿದ್ದ ಹಿಡಿಂಬೆ ಭೀಮನನ್ನು ವರಿಸಿದಳು. ಹಿಡಿಂಬೆ ಮತ್ತು ಭೀಮನ ಪ್ರೀತಿಯ ಪ್ರತೀಕವಾಗಿ ಜನಿಸಿದವ ಘಟೋತ್ಕಚ. ಕೇವಲ ಒಂದು ವರ್ಷ ಅವಳೊಡನೆ ತಾನು ಇರಲು ಸಾಧ್ಯ ಎಂದು ಅದಾಗಲೇ ಷರತ್ತು ಹಾಕಿದ್ದ ಭೀಮ ಮುಂದಕ್ಕೆ ಅಲ್ಲಿಂದ ಹೊರಡುತ್ತಾನೆ. ಮಗನನ್ನು ಕಾಳಜಿಯಿಂದ ಬೆಳೆಸಿ, ಕುಲು ಮನಾಲಿ ಸಾಮ್ರಾಜ್ಯವನ್ನು ತಾನೇ ಧೈರ್ಯದಿಂದ ಆಳಿ, ಅಲ್ಲಿನ ಜನರ ಸರ್ವ ಆಡಳಿತವನ್ನೂ ನೋಡಿಕೊಂಡಳು. ಮುಂದಕ್ಕೆ ಮಗನಿಗೆ ಪಟ್ಟಕಟ್ಟಿ, ತನ್ನ ರಾಕ್ಷಸ ಗುಣಗಳ ಕ್ರೂರತನಕ್ಕೆ ಪಶ್ಚಾತ್ತಾಪವಾಗಿ ಆಕೆ ಅಲ್ಲಿಯೇ ಕುಳಿತು ತಪಸ್ಸುಗೈದು, ತನ್ನ ತಪೋಬಲದಿಂದ ಅಸಾಮಾನ್ಯ ಶಕ್ತಿಯನ್ನೂ ಪಡೆದಳು. ಅಂದಿನಿಂದ ಆಕೆಯನ್ನು ' ಹಡಿಂಬ ದೇವಿ ' ಎಂದು ಜನರು ಆರಾಧಿಸಲು ಪ್ರಾರಂಭಿಸಿದರು ಎಂಬುದು ಈ ದೇವಾಲಯಕ್ಕಿರುವ ಐತಿಹಾಸಿಕ ಕಥೆ!
ದೇವಾಲಯ ಎಲ್ಲಿದೆ? ಹೇಗಿದೆ?
ಮನಾಲಿ ಬಸ್ಸ್ಟ್ಯಾಂಡಿನಿಂದ ಹೊರಬಿದ್ದರೆ ಶಾಪಿಂಗ್ ಗೆ ಹೇಳಿ ಮಾಡಿಸಿದ ಮಾಲ್ ರೋಡ್. ಅಲ್ಲಿಂದ ಮುಂದಕ್ಕೆ ೧ ಕಿಮೀ ಮುಂದಕ್ಕೆ ಇದೆ ಹಡಿಮ್ಬಾ ದೇವಿ ದೇವಾಲಯ. ನಡೆದುಕೊಂಡು ಕೂಡಾ ಹೋಗಬಹುದು. ಮುಂದಕ್ಕೆ ಹೋದಂತೆಯೂ ನಗರೀಕರಣದ ಕುರುಹುಗಳು ಕಡಿಮೆಯಾಗಿ, ಎತ್ತರೆತ್ತರದ ಪೈನ್ ಮರಗಳ ಒತ್ತು ಸಾಲುಗಳು ರಸ್ತೆಯ ಇಕ್ಕೆಲಗಳಲ್ಲಿಯೂ ಕಾಣಸಿಗುತ್ತದೆ. 'ದುಂಘಿರಿ ವನ ವಿಹಾರ' ಎಂಬ ಬೋರ್ಡ್ ನೊಂದಿಗೆ ನೂರಾರು ವರ್ಷಗಳಿಂದ ನೈಸರ್ಗಿಕವಾಗಿ ಇದ್ದ ಮತ್ತೊಂದಷ್ಟು ಮಾನವ ನಿರ್ಮಿತ ದಟ್ಟ ಕಾಡಿನ ಆವರಣ ಪ್ರಾರಂಭವಾಗುತ್ತದೆ. ಸುಮಾರು ೧೦೦ ಮೀಟರ್ನಷ್ಟು ಈ ಆವರಣದ ಮೆಟ್ಟಿಲುಗಳನ್ನು ದಟ್ಟ ಹಚ್ಚ ಹಸಿರು ಪರಿಸರ ಇರುವ ದೇವದಾರು ಮರಗಳ ಮಧ್ಯದಲ್ಲೇ ಹಾದುಕೊಂಡು ಹತ್ತಬೇಕು. ಬಿಸಿಲಿನ ಕಿರಣಗಳು ನೆಲಕ್ಕೆ ತಾಕುವುದೇ ಅನುಮಾನ ಎನ್ನುವಷ್ಟು ದೊಡ್ಡ-ಎತ್ತರೆತ್ತರದ ದೇವದಾರು ಮರಗಳ ನೋಡುವುದೇ ಚಂದ.
ಪ್ರವಾಸೋದ್ಯಮದ ಮುಖ್ಯ ಸರಕು ಸಾಮಾಗ್ರಿಗಳ ಸಣ್ಣ ವ್ಯಾಪಾರಿಗಳ ಸಾಲು ಮಾತ್ರ ಇಕ್ಕೆಲಗಳಲ್ಲಿ ದೇವಾಲಯದ ಆವರಣದವರೆಗೂ ಸಾಗುತ್ತದೆ. ಹಿಮಾಚಲ ಹಣ್ಣುಗಳು, ಹಿಮಾಚಲದ ಬಟ್ಟೆಬರೆ, ಮರದಿಂದ ಕೆತ್ತಿರುವ ಕ್ರಾಫ್ಟ್ ಗಿಫ್ಟ್ ವಸ್ತುಗಳು, ಸರ ಬಳೆ ಅಲಂಕಾರಿಕ ವಸ್ತುಗಳು, ದುಡ್ಡು ಕೊಟ್ಟು ಯಾಕ್ ಪ್ರಾಣಿಯ ಜೊತೆ ಮೈಮೇಲೆ ಕುಳಿತು ಫೋಟೋ ಹೊಡೆಸಿಕೊಳ್ಳುವ, ತುಪ್ಪಳ ತುಪ್ಪಳವುಳ್ಳ ಮೊಲಗಳ ಹಿಡಿದುಕೊಂಡು ಫೋಟೋ ತೆಗೆಸಿಕೊಳ್ಳುವ, ಹಿಮಾಚಲದ ಸಾಂಪ್ರದಾಯಿಕ ಬಟ್ಟೆಗಳ ತೊಟ್ಟು, ಹೂವಿನ ಗುಚ್ಛ ಹಿಡಿದುಕೊಂಡು ಫೋಟೋ ತೆಗಿಸಿಕೊಳ್ಳುವ ಅವಕಾಶ ಇರುತ್ತದೆ. ನಾವು ಹೋದ ದಿನವಂತೂ ಯಾವುದೋ ಹಬ್ಬದ ಜಾತ್ರೆ ಮುಗಿಯುವ ಸಂದರ್ಭವಾಗಿತ್ತೇನೋ, ಸಣ್ಣ ಪುಟ್ಟ ತೊಟ್ಟಿಲುಗಳೂ ಕೂಡ ಇದ್ದವು ಮತ್ತು ಜನಜಂಗುಳಿ ಸಾಕಷ್ಟಿತ್ತು.
ಈ ದೇವಾಲಯದ ಅಣತಿ ದೂರದಲ್ಲಿರುವ ಇನ್ನೊಂದು ದೊಡ್ಡ ವೃಕ್ಷಕ್ಕೆ ಅದರ ಸುತ್ತಲೂ ಖಡ್ಗ, ಚಾಕು ಇನ್ನಿತರ ಆಯುಧಗಳು, ಪ್ರಾಣಿಗಳ ಕೋಡು ಮತ್ತು ತಲೆ ಬುರುಡೆಗಳನ್ನು ಕಟ್ಟಲಾಗಿದೆ. ಅದು ಹಡಿಂಬ ದೇವಿಯ ಮಗ ಘಟೋದ್ಗಜನಿಗಾಗಿ ಗುಡಿ ಎಂದು ಜನರು ಅಲ್ಲಿಯೂ ನಮಸ್ಕರಿಸುತ್ತಾರೆ.
ಇಲ್ಲಿನ ಜನರ ಆರಾಧ್ಯದೈವವಾದ ಹಡಿಂಬ ದೇವಿಯ ಹಬ್ಬಕ್ಕೆ ಪ್ರಾಣಿಬಲಿ ಇಂದಿಗೂ ಜಾರಿಯಲ್ಲಿದೆ ಎನ್ನುತ್ತಾರೆ ಅಲ್ಲಿಯ ಸ್ಥಳೀಯರು. ಹಬ್ಬದ ಸಂದರ್ಭದಲ್ಲಿ, ಪ್ರಾಣಿಬಲಿಯ ರಕ್ತವನ್ನು ಒಳಗಡೆ ಸುರಿಯುತ್ತಾರೆ ಎಂಬ ವಿಚಿತ್ರ ಸತ್ಯವನ್ನೂ ಕೇಳ್ಪಟ್ಟೆವು. ವರ್ಷಕ್ಕೊಮ್ಮೆ ಉತ್ಸವ ಮೆರವಣಿಗೆ ಕೂಡ ನಡೆಯುತ್ತದೆಯಂತೆ. ಸಾರ್ವಜನಿಕವಾಗಿ ವಿಶಿಷ್ಟ ಪೂಜೆ ಕೂಡ ನಡೆಯುತ್ತದೆ ಈ ದೇವಿಗೆ. ಘೋರ್ ಪೂಜೆ ಇದರ ಹೆಸರು. ಮನಾಲಿಯ ಸಾಂಪ್ರದಾಯಿಕ ಹಾಡು, ನೃತ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಈ ಹಬ್ಬದ ಆಚರಣೆಯ ಅಂಗವಾಗಿ ನಡೆಸುವುದು ಇಲ್ಲಿನ ಪ್ರತೀತಿ. ಕುಲು ಮನಾಲಿಯನ್ನು ಆಕೆಯೇ ಕಾಯುತ್ತಾಳೆ ಎಂಬುದು ಜನರ ನಂಬಿಕೆ. ಹಡಿಂಬ ದೇವಿ ದೇವಾಲಯ ಕಟ್ಟಿದ ಕುರಿತು ಇತಿಹಾಸವನ್ನು ಕೇಳಿದರೆ, ಆಕೆ ಕೊನೆಯಲ್ಲಿ ತನ್ನ ಪಾಪಕರ್ಮಗಳ ತಪಸ್ಸಿನ ಮೂಲಕ ತೊಡೆದು ಜನರಿಗೆ ಸಹಾಯ ಮಾಡಿ ಸದ್ಗತಿ ಹೊಂದಿದಳು ಎಂಬುದಾಗಿ ತಿಳಿದರೂ, ಜನರ ಆಚರಣೆಗಳು ಇಂದಿಗೂ ಮೂಢನಂಬಿಕೆಗಳ ಸೋಗಿನಲ್ಲಿಯೇ ನಡೆಯುತ್ತಿರುವುದು ಖೇದವೆನಿಸುತ್ತದೆ.
ಏನೇ ಆಗಲಿ ಪ್ರತೀ ಸ್ಥಳಕ್ಕೆ ಅದರದ್ದೇ ಆದ ಮಹತ್ವ ಮತ್ತು ಸಂಸ್ಕೃತಿಯ ಮೌಲ್ಯವಿರುತ್ತದೆ. ಮೇ ಇಂದ ಅಕ್ಟೊಬರ್ ವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯ, ಆಮೇಲೆ ಪೂರ್ತಿ ಹಿಮದ ಮುಚ್ಚುಗೆಯಲ್ಲಿರುತ್ತದೆ ಈ ಜಾಗ! ಹೊಸ ಜಾಗದ ಅನುಭವ, ಹೊಸ ವಿಷಯಗಳ ಮಾಹಿತಿ, ನಮ್ಮ ಹೊಸ ಚಾರಣ ಸ್ನೇಹಿತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ನಾವು ಮನಾಲಿ ಪೇಟೆಯ ಕಡೆಗೆ ಸಾಗಿದೆವು.
(ಇಂಟರ್ನೆಟ್ ಆಧಾರಿತ ಚಿತ್ರ)


















ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ