ಬುಧವಾರ, ಜುಲೈ 5, 2017

ನಿಮ್ಮ ಮಗು ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲವೇ?



"ನಮ್ ಹುಡ್ಗ ಏನೂ ಸರಿ ಊಟನೇ ಮಾಡಲ್ಲ ಕಣ್ರೀ", "ತುಂಬಾ ಹಠ ನಂ ಮಗಳದ್ದು ಊಟ ತಿಂಡಿಗೆ,  ಅರ್ಧಕ್ಕರ್ಧ ಚೆಲ್ಲಿ ರಂಪಾಟ ಮಾಡ್ತಾಳೆ", "ಕಾರ್ಟೂನ್ ಇಲ್ಲ ಅಂದ್ರೆ ಊಟ ತಿಂಡೀನೇ ಮಾಡಲ್ಲ, ಮಗು ತಿಂದ್ರೆ ಸಾಕು ಅಂತ ಟಿ.ವಿ ಹಾಕ್ಕೊಂಡು, ಹೇಗೋ ಹೊಟ್ಟೆ ತುಂಬಿಸೋದು", "ಮನೆ ಊಟ ಸೇರಲ್ಲ, ಹೊರಗಡೆ ತಿಂಡಿ, ಕ್ಯಾನ್ಡಿ, ಚೊಕೊಲೇಟ್ಸ್ ಎಲ್ಲ, ಎಷ್ಟು ಚೆನ್ನಾಗಿ ತಿನ್ತಾಳೆ"."ಸ್ಕೂಲ್ ಇಂದ ಡಬ್ಬಿ ಹೇಗೆ ಕಳ್ಸಿದೀನೋ ಹಾಗೇ ವಾಪಸ್ ಬರತ್ತೆ", "ನಮ್ಮ ಮಗುವಿನದು, ಶಾಲೆಯಲ್ಲಿ ಡಬ್ಬಿ ಖಾಲಿಯಾಗತ್ತೆ, ಮನೇಲಿ ಊಟ ತಿಂಡಿಗೆ ರಗಳೆ", "ಊಟದ ಜೊತೆ ಚಿಪ್ಸ್ ಏನಾದ್ರು ಕುರುಕಲು ಬೇಕೇ ಬೇಕು ಇವನಿಗೆ, ಇಲ್ಲಾಂದ್ರೆ ಊಟನೇ ಆಗಲ್ಲ", "ಮಗು ಚೆನ್ನಾಗಿ ತಿಂತಾನೇ ಇಲ್ಲ,  ಡಾಕ್ಟರ್  ಕೇಳ್ಬೇಕ್ರಿ  ನಾನು, ತಿನ್ನಕ್ಕೆ ಏನಾದ್ರು ಟಾನಿಕ್ ಕೊಡ್ಸಬೇಕು", "ಹಾಲು ಕಂಡ್ರೆ ಮಾರು ದೂರ ಓಡ್ತಾಳೆ, ಬೈದು ಹೊಡೆದು ಎಲ್ಲಾ ಮುಗೀತು, ಪ್ರಯೋಜನವೇ ಇಲ್ಲ", "ಇತರರ ಮನೆಗಳಿಗೆ ಹೋದ್ರೆ ಮಾತ್ರ ಸ್ವಲ್ಪವೂ ತಕರಾರಿಲ್ಲದೆ ಚೆನ್ನಾಗಿ ತಿಂದು ಬರುತ್ತಾನೇರೀ ನಮ್ಮ ಮಗ, ಮನೇಲಿ ಮಾತ್ರ ಗಲಾಟೆ ಎಲ್ಲಾ ತಿಂಡಿಗಳಿಗೂ", "ಮನೇಲಿ ಯಾವ ತಿಂಡಿ ನೋಡಿದರೂ ಬೋರ್ ಅಂತಾಳೆ ಮಗಳು" ... ಅಬ್ಬಾ! ಇವೆಲ್ಲಾ ಮಕ್ಕಳ ಪೋಷಕರಾಗಿ ನಾವು ನಡೆಸುವ ಅತ್ಯಂತ ಸರ್ವೇ ಸಾಮಾನ್ಯವಾದ ಸಂಭಾಷಣೆಗಳು, ಕಳವಳದ ಆಕ್ಷೇಪಣೆಗಳು.

ಪೋಷಕರ ಚಿಂತೆ ಏನು ?

ತಮ್ಮ ಮಕ್ಕಳು ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು ಯಾವುದೇ ಪೋಷಕರಲ್ಲಿಯೂ ಕಾಡುವ ಸಾರ್ವತ್ರಿಕ ಸಮಸ್ಯೆ. ಪಾಲಕರಾಗಿ ನಮ್ಮಲ್ಲುಂಟಾಗುವ ತಲ್ಲಣ ಮತ್ತು ಕಳಕಳಿಯೇನೆಂದರೆ,
  • ಹೆಚ್ಚಿನ ಚಟುವಟಿಕೆಯಿಂದಿರುವ ನನ್ನ ಮಗುವಿಗೆ ಆಹಾರದ ಪ್ರಾಮಾಣ ತುಸು ಜಾಸ್ತಿ ಬೇಕಲ್ಲವೇ? ಆದರವನು/ಳು  ಸಂಪೂರ್ಣ ಊಟವನ್ನು ಮಾಡುವುದಿಲ್ಲವಲ್ಲ?
  • ಹಣ್ಣು-ತರಕಾರಿ ಗಳ್ಯಾವುದನ್ನೂ ತಿನ್ನುವುದಿಲ್ಲ. ಪೌಷ್ಟಿಕಾಂಶದ ಕೊರತೆಯಾಗಿ  ಪದೇ ಪದೇ ಮಗುವಿನ ಆರೋಗ್ಯ ಕೆಡುತ್ತದೆಯಲ್ಲ?
  • ಎಷ್ಟು ಬಲವಂತವಾಗಿ ತಿನ್ನಿಸಿದರೂ, ನಮ್ಮ ಮಗು ತೆಳ್ಳಗೆ, ಸಣ್ಣಗೆ ಇದ್ದಾನೆ, ಇತರ ಮಕ್ಕಳಂತೆ ದಷ್ಟಪುಷ್ಟವಾಗಿಲ್ಲವಲ್ಲ?
  •  ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ತೋರಿಸಿ ಉಣ್ಣಿಸದಿದ್ದರೆ, ಉಣ್ಣುವುದೇ ಕಷ್ಟ, ಹಠ, ರಗಳೆ ಜಾಸ್ತಿ.
  •  ಮಕ್ಕಳಿಗೆ ಸ್ವತಃ ತಾವೇ ತಿನ್ನಲು ಬಿಟ್ಟರೆ, ಬಟ್ಟೆ-ಮೈ, ತಿನ್ನುವ ಸ್ಥಳ ಎಲ್ಲವೂ ಗಲೀಜು ಮಾಡುತ್ತಾರೆ. ನಮಗೆ ಸ್ವಚ್ಛತೆಯ ಶ್ರಮವೇ ಹೆಚ್ಚು ಮತ್ತು ಮಕ್ಕಳು ತಿನ್ನುವ ಪ್ರಮಾಣವೂ ಕಡಿಮೆ. 
  • ಕಷ್ಟಪಟ್ಟು ಸಾಕಷ್ಟು ಪ್ರಯಾಸ ತೆಗೆದುಕೊಂಡು ತಯಾರಿಸಿದ ಪದಾರ್ಥವನ್ನು ಮಕ್ಕಳು ಧಿಕ್ಕರಿಸಿದಾಗ ನಮಗಾಗುವ ನಿರಾಸೆ.
  • ಮನೆಯಲ್ಲಿ ಏನೂ ತಿನ್ನದೇ ಮುಷ್ಕರ ಮಾಡುವ ಮಗು, ಬೇರೆಯವರ ಮನೆಗೆ ಹೋದಾಗ ಮಾತ್ರ ಸಂತೋಷದಿಂದ ಉಂಡು, ನಮಗಾಗಿಸುವ ಅವಮಾನ. 
  • ಊಟ ತಿಂಡಿಗಳ ಮಧ್ಯೆ, ಹಲವು ಜಂಕ್ ಫುಡ್ ತಿಂದು ಬಿಡುವುದು ಮತ್ತು ಸರಿಯಾದ ಸಮಯಕ್ಕೆ ಊಟ ತಿಂಡಿಗೆ ಬಾರದೇ ಇರುವುದು. 

ವಾಸ್ತವಿಕತೆ :

ಮೊಟ್ಟಮೊದಲನೆಯದಾಗಿ ನಾವು ಒಪ್ಪಿಕೊಳ್ಳಬೇಕಾದ ನಿಜ ಅಂಶವೇನೆಂದರೆ, 'ಮಕ್ಕಳು' ಎಂದರೆ, ಅವರು 'ನಮ್ಮಂತೆಯೇ ಮನುಷ್ಯರು'; ಶಾರೀರಿಕವಾಗಿ, ಭೌತಿಕವಾಗಿ ವಯಸ್ಸಿನಲ್ಲಿ ಚಿಕ್ಕವರು ಅಷ್ಟೇ. ಅವರುಗಳಿಗೆ ನಮಗಿರುವಂತೆಯೇ ರುಚಿಯ ಗ್ರಹಣ ಶಕ್ತಿಯಿರುತ್ತದೆ. ಮಕ್ಕಳಲ್ಲಿ ತುಸು ಜಾಸ್ತಿಯೇ ಇರುತ್ತದೆ. ನಮ್ಮಲ್ಲಿ ಹೇಗೆ ಕೆಲವು ಆಹಾರಗಳ ಕುರಿತಾಗಿ ಆಸಕ್ತಿ/ನಿರಾಸಕ್ತಿ/ರುಚಿ/ಆಹ್ಲಾದ ಇತ್ಯಾದಿ ಭಾವನೆಗಳು ಬೇರೂರಿತ್ತವೆಯೋ ಹಾಗೆಯೇ ಮಕ್ಕಳಲ್ಲೂ ಕೂಡ ತಮಗೆ ದೊರಕುವ ಆಹಾರದ ಕುರಿತಾಗಿ ತಮ್ಮದೇ ರೀತಿಯಾದ ಅನಿಸಿಕೆಗಳು ಉದ್ಭವಗೊಂಡಿರುತ್ತದೆ. ಮಕ್ಕಳ ಆಹಾರದ ಆಸಕ್ತಿಯ ಕುರಿತು, ಅವರಿಗೊಪ್ಪುವ ಟೇಸ್ಟ್ ನ ಕಡೆಗೆ, 'ಗೌರವ' ಕೊಡಬೇಕಾದದ್ದು ನಾವು ಅರಿತುಕೊಳ್ಳಬೇಕಾದ ಮೊದಲನೆಯ ವಿಷಯ.

ಮನೆಯಲ್ಲಿ ಕೊನೆಯ ಪಕ್ಷ ಒಂದು ಹೊತ್ತಿನಲ್ಲಿಯಾದರೂ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಅಭ್ಯಾಸವೇ ಇಲ್ಲದಿದ್ದ ಪರಿಸರದಲ್ಲಿ, ಮಕ್ಕಳು ಊಟ ತಿಂಡಿಯ ಕುರಿತಾಗಿ ತಕರಾರೆತ್ತುವ ಸಮಸ್ಯೆ ಹೆಚ್ಚು. ಈಗಿನ ತಾಂತ್ರಿಕ ಜೀವನದಲ್ಲಿ, ಸಮಯದ ಅಭಾವ ಎಂಬ ಧೋರಣೆ ನಮ್ಮದು. ಮನೆಯ ಒಬ್ಬೊಬ್ಬ ಮಂದಿ ಒಂದೊಂದು ಹೊತ್ತಿನಲ್ಲಿ ಊಟ ಮಾಡುವುದು, ಟಿವಿ, ಪೇಪರ್, ಮೊಬೈಲ್, ಕಂಪ್ಯೂಟರ್ ನೋಡುತ್ತಾ ಆಹಾರ ಸೇವಿಸುವುದು, ಕೆಲಸದ ಮಧ್ಯೆ ಊಟಕ್ಕೆ ಸಮಯವಿಲ್ಲ ಎಂದು ಕೆಲಸ ಮಾಡುತ್ತಿರುವ ಜಾಗಕ್ಕೆ ತಟ್ಟೆ ತೆಗೆದುಕೊಂಡು ಹೋಗಿ ತಿನ್ನುವುದು ಹೀಗೆ ಪ್ರತಿಯೊಂದು ಹವ್ಯಾಸವನ್ನೂ, ನಾವು ನಮಗರಿವಿಲ್ಲದೆಯೇ ನಡೆಸುತ್ತಾ, ನಮ್ಮ ಮಕ್ಕಳಲ್ಲಿ ಮಾತ್ರ ಎಲ್ಲಾ ಆದರ್ಶವನ್ನೂ ನಿರೀಕ್ಷಿಸುತ್ತೇವೆ. ಮಕ್ಕಳು ಕೇವಲ ನಮ್ಮ ಅನುಕರಣೆ ಮಾಡುತ್ತಿರುತ್ತಾರಲ್ಲವೇ?

 ನಾವು ಮನುಷ್ಯರ ಸಹಜ ಗುಣವೆಂದರೆ, ಎಲ್ಲಿ ಕೆಲಸ ಸುಲಭವಾಗಬಹುದು ಆ ಕಡೆಗೆ ಹೆಚ್ಚಿನ ಒಲವು ತೋರುವುದು. ನಮ್ಮ ಸಾಮರ್ಥ್ಯಕ್ಕೆ ಸುಲಭವಾಗಿ ಏನಾದರೂ ದೊರಕುವುದಾದರೆ, ವ್ಯರ್ಥ ಶ್ರಮ ಪಡುವುದೆಂತು? ಈಗಿನ ಮಾಡರ್ನ್ ಕಾಲಕ್ಕೆ ತಕ್ಕಂತೆ ಮನೆಯಲ್ಲಿ ಆಹಾರವನ್ನು ಬಹಳ ಸಮಯದ ವರೆಗೆ ಹಾಳಾಗದಂತೆ ಶೇಖರಿಸಿಡಲು ಫ್ರಿಡ್ಜ್ ಅಂತೂ ಇದ್ದೇ ಇದೆ. ಪ್ರತಿಯೊಂದು ಪ್ಯಾಕ್ಡ್ ಫುಡ್ ಆಗಿ ಮಾರ್ಕೆಟ್ ನಲ್ಲಿ ಧಾರಾಳವಾಗಿ ದೊರೆಯುತ್ತಿರುವುದರಿಂದ, ಫ್ರೆಶ್ ಫುಡ್ ಪ್ರತಿ ಹೊತ್ತಿಗೂ ಮಾಡುವ ಜಂಜಾಟ ಬೇಕೇ ಎಂಬ ನಿಲುವು ನಮ್ಮಲ್ಲಿ ಹಲವರದ್ದು. ಇದಕ್ಕೆ ಪೂರಕವಾಗಿ ಎಲ್ಲೆಡೆ ಬಿತ್ತರವಾಗುವ ಮಾರ್ಕೆಟಿಂಗ್ ಪ್ರಾಡಕ್ಟ್ ಗಳ ಟ್ರಿಕ್ಸ್. ಹಣ್ಣಿನ ಜ್ಯೂಸು ಅಂತೂ, ಸಂಪೂರ್ಣ ಪರಿಶುದ್ಧ ರಸ ಜೊತೆಗೆ ನೋ ಆಡೆಡ್ ಶುಗರ್ ಅಂಡ್ ಕಲರ್ ಎಂಬ ಶುಗರ್ ಕೋಟೆಡ್ ಜಾಹಿರಾತಿನ ವರಸೆ! ಮಕ್ಕಳಿಗೆ ಊಟ ತಿಂಡಿಯ ಹೊರತಾಗಿ ಇತರ ಸಮಯದ ಲಘು ಆಹಾರಕ್ಕೆ, ನಾವು ಸಂಪೂರ್ಣವಾಗಿ ಅವಲಂಬಿತವಾಗಿರುವುದು ತ್ವರಿತವಾಗಿ ತಯಾರು ಮಾಡಬಹುದಾದ ಪ್ಯಾಕ್ಡ್ ಫುಡ್ ಅಥವಾ ತತ್ ತಕ್ಕ್ಷಣಕ್ಕೆ ನೀಡಬಹುದಾದಂತಹ ಹೊರಗಿನಿಂದ ಕೊಂಡು ತಂದ ತಿಂಡಿಗಳ ಮೇಲೆಯೇ. ಇದರ ಜೊತೆಗೆ, ಫ್ರಿಡ್ಜ್ ತುಂಬಾ ಏನಾದರೂ ಕುರುಕಲು, ಕೊಂಡು ತಂದ ಸ್ವೀಟ್ಗಳು, ಪ್ಯಾಕೆಟ್ ಜ್ಯುಸ್, ಕೇಕು, ಐಸ್ಕ್ರೀಂ ಗಳು ತುಂಬಿಟ್ಟಿರುತ್ತೇವೆ. ಇಂತಹ ಆಹಾರಗಳನ್ನು ನಾವೇ ನಮ್ಮ ಮಕ್ಕಳಿಗೆ ಅಂತರ್ಗತಗೊಳ್ಳಿಸಿ, ಮಕ್ಕಳಿಗೆ ಹೊತ್ತಲ್ಲದ ಹೊತ್ತಿನಲ್ಲಿ ತಿನ್ನಲು ಅನುಕೂಲವಾಗುವಂತೆ ಲಭ್ಯವಿರಿಸಿ, ನಂತರದಲ್ಲಿ "ಮಗು ಕೇವಲ ಚಾಕಲೇಟ್, ಬಿಸ್ಕತ್ ,ಕುರುಕಲು ಇದರಲ್ಲಿಯೇ ದಿನವಿಡೀ ಕಳೆಯುತ್ತದೆ, ಆರೋಗ್ಯಕರ ಆಹಾರವನ್ನು ಸೇವಿಸುವುದಿಲ್ಲ" ಎಂದು ಸಂಕಟ ಪಡುವುದು ಯೋಗ್ಯವೇ?

ಇದರ ಜೊತೆಗೆ ನಾವು ಮಾಡುವ ಸಹಜ ತಪ್ಪೆಂದರೆ , ಮಕ್ಕಳ ಪ್ರತಿ ಹೊತ್ತಿನ ಆಹಾರದ ಮಧ್ಯೆ ಅಂತರವಿಡದೇ ಮಗುವನ್ನು ಸರಿ ಊಟಮಾಡದಿರುವ ಬಗ್ಗೆ ದೂಷಿಸುವುದು. ಹೀಗೊಂದು ಸಂದರ್ಭವನ್ನು ಗಮನಿಸಿ ಊಟದ ಹೊತ್ತಿನ ಒಂದು ತಾಸು ಮುಂಚೆಯಷ್ಟೇ, ಉದ್ದದೊಂದು ಲೋಟದಲ್ಲಿ ಹಾಲನ್ನು ಕುಡಿಯಲು ನೀಡಿ, ಮಗು ಸರಿಯಾಗಿ ಊಟ ಮಾಡದಿದ್ದಾಗ ಗದರುವುದುತಪ್ಪಲ್ಲವೇ? ಕುಡಿಯಲು ಕೊಟ್ಟ ಹಾಲು ದ್ರವ್ಯವಾಗಿದ್ದರೂ ಸಹ, ಅದರ ಜೀರ್ಣವಾಗುವ ಪ್ರಕ್ರಿಯೆ ನಿಧಾನ. ಹಸಿವೇ ಇಲ್ಲದೆ ಮಗು ಹೇಗೆ ತಾನೇ ಉಣ್ಣಲು ಅಣಿಯಾದೀತು?

ಸರಾಗ ಜೀವನ ಮಾರ್ಗಕ್ಕೆ ನಾವು ಹುಡುಕಿಕೊಳ್ಳುವ ಶಾರ್ಟ್ ಕಟ್ ಗಳಲ್ಲಿ, ಮಕ್ಕಳಿಗೆ ತಾವೇ ಉಣ್ಣಿಸುವುದೂ ಕೂಡ ಒಂದು. ಮಕ್ಕಳು ತಮ್ಮ ಊಟ ತಿಂಡಿಯ ಉಪಾಸನೆಯ ಸಮಯದಲ್ಲಿ ಎಲ್ಲೆಡೆ ಊಟವನ್ನು ಹರಡಿ, ಮೈಯೆಲ್ಲಾ ರಾಡಿ ಮಾಡಿಕೊಳ್ಳುವ ಅವತಾರಕ್ಕಿಂತ ನಾವೇ ಉಣ್ಣಿಸಿ ಬಿಡುವುದು ಸುಖ ಎಂಬುದು ನಮ್ಮ ಯೋಚನೆ. ೧.೫ ವರ್ಷದ ಮಗು, ತಾನೇ ಕೈಯಾರೆ ತಿನ್ನುತ್ತೇನೆಂದು ಹಠಮಾಡುವುದನ್ನು ಗಮನಿಸಿರುತ್ತೀರಿ. ನಮ್ಮನ್ನೇ ಅನುಸರಿಸಿ ಕಲಿಯಲು ಪ್ರಯತ್ನಿಸುತ್ತಿರುವ ಮಗುವಿಗೆ ನಾವು ಮೊದಲಾಡುವ ನಕಾರಾತ್ಮಕ ವಾಕ್ಯವೇ, "ಬೇಡ ಕಂದ, ನಿನಗೆ ತಾನೇ ತಿನ್ನಲು ಬರುವುದಿಲ್ಲ, ನಾನೇ ತಿನ್ನಿಸುತ್ತೇನೆ", "ಅಯ್ಯೋ, ಮೈ ಕೈ ಮೇಲೆಲ್ಲಾ ಚೆಲ್ಲಿ ರಾಡಿ ಮಾಡ್ಕೊಳ್ತಿ ನೀನು, ಇರು ನಾನೇ ತಿನ್ನಿಸ್ತೀನಿ", "ಅರ್ಧ ಗಂಟೆಯಿಂದ ತಟ್ಟೆ ಮುಂದೆ ಕುಳಿತ್ತಿದ್ದೀಯಲ್ಲೋ, ನಾನೇ ಬೇಗ ಬೇಗ ತಿನ್ನುಸುತ್ತೇನೆ" ಇತ್ಯಾದಿ. ನಮ್ಮನ್ನು ನೋಡಿ ತಾನೇ ಕೈಯಾರೆ ಊಟ ಮಾಡುವ ಸ್ವಂತಿಕೆಯನ್ನು ಬಯಸುವ ಮಗುವು, ನಾವು ಹಿರಿಯರು ಮೈ ಮೇಲೆ ಚೆಲ್ಲಿಕೊಳ್ಳದೆ, ಚೆನ್ನಾಗಿ ಊಟ ಮಾಡುವುದನ್ನೂ ಕೂಡ ಅಷ್ಟೇ ಗ್ರಹಿಸಿ ಕಲಿಯುತ್ತದೆ. ಆ ಕಲಿಕೆ ಪೂರ್ಣಗೊಳ್ಳುವ ವರೆಗೆ, ನಮ್ಮ ಮಗುವಿಗೆ ನೀಟಾಗಿ ತಿನ್ನಲು ರೂಢಿಯಾಗುವ ವರೆಗೆ, ಅಭ್ಯಸಿಸಲು ಬಿಡುವಷ್ಟೂ ಕೂಡ ವ್ಯವಧಾನ ನಮ್ಮಲ್ಲಿಲ್ಲವೇ? ಊಟದ ಜಾಗ, ಮೈಯೆಲ್ಲಾ ರಾಡಿ ಮಾಡಿಕೊಂಡ ಮಗುವನ್ನು ಶುಚಿಗೊಳಿಸುವ ಗೊಡವೆ ನಮಗೇಕೆ ಎಂಬ ಭಾವನೆ ನಮ್ಮಗಳದ್ದು. 

ಮಕ್ಕಳ ಊಟ ತಿಂಡಿಯ ಹರಸಾಹಸಕ್ಕೆ, ತಂತ್ರಜ್ಞಾನದ ಎಲ್ಲಾ ಸೌಲಭ್ಯಗಳಿರುವ ಈ ಕಾಲದಲ್ಲಿ ಹೆಚ್ಚಿನ ಪೋಷಕರು ಕಂಡು ಕೊಂಡಿರುವ ಪರಿಹಾರವೆಂದರೆ, ಮಗುವನ್ನು ಕುರ್ಚಿಯೊಂದರ ಮೇಲೆ ಕುಳ್ಳಿರಿಸಿ, ಟಿ.ವಿ/ಮೊಬೈಲ್/ಲ್ಯಾಪ್ಟಾಪ್/ಟ್ಯಾಬ್ ಅನ್ನು  ಎದುರಿಗಿಟ್ಟು, ಊಟವನ್ನು ಮಗುವಿನ ಬಾಯಿಗೆ ತುರಿಕಿಸುತ್ತಾ ಹೋಗುವುದು. ಒಟ್ಟಿನಲ್ಲಿ ಪೋಷಕರು, ಆ ಮಗುವಿಗೆ ತಾನು ಏನು ತಿನ್ನುತ್ತಿದ್ದೇನೆ, ಆ ಪದಾರ್ಥದ ಭೌತಿಕ ಸ್ವರೂಪವೇನು, ಷಡ್ರಸಗಳಲ್ಲಿ ಯಾವ ರುಚಿಯ ಅನುಭವ ತನಗಾಗುತ್ತಿದೆ, ತನಗೆ ಎಷ್ಟು ಹಸಿವಾಗಿದೆ, ಹೊಟ್ಟೆ ತುಂಬಿದೆಯೇ ಎಂಬಿತ್ಯಾದಿಯ ಅರಿವೇ ಮೂಡದಂತೆ ಮಾಡುತ್ತಾರೆ. ತಿನ್ನುತ್ತಿರುವ ಆಹಾರದ ರುಚಿಯ ಕುರಿತು ಮೆದುಳು ಸಂವಹನೆ ಮಾಡುವುದನ್ನೇ ಅಡ್ಡಗಟ್ಟಿ, ನಾಲಿಗೆಯೂ ತಕರಾರೆತ್ತದಂತೆ, ಮಗು ಎದುರಿಗಿನ ಮಾಯಾಪೆಟ್ಟಿಗೆಯಿಂದ ಕಣ್ಣು,ಕಿವಿಯಾರೆ ಏನನ್ನು ಹೀರಿಕೊಳ್ಳುತ್ತಿದೆಯೋ ಅದರ ಲಾಭ ಪಡೆಯುತ್ತಾರೆ. ತಾತ್ಕಾಲಿಕವಾಗಿ ಇದು ಅತ್ಯುತ್ತಮ ಪರಿಹಾರವಾಗಿ ಕಂಡರೂ, ಮುಂದೆ ಭವಿಷ್ಯದಲ್ಲಿ, ತನಗೆ ಪರಿಚಯಿಸಿದ ಮೊದಲ ಆಹಾರದ ಕುರಿತಾದ ಸಂವೇದನೆಯ ಕೊಂಡಿಯೇ ಕಳಚಿ ಹೋಗಿರುತ್ತದೆ. 

ಇನ್ನೊಂದು ಭರಪೂರ ಪೈಪೋಟಿ (ಮಕ್ಕಳಲ್ಲಿ ಅಲ್ಲ) ನಾವು ಪಾಲಕರಲ್ಲಿ ಎಂದರೆ, ನಮ್ಮ ಮಗು ಪಕ್ಕದ ಮನೆಯ ಮಗುವಿನಂತೆ, ಸಂಬಂಧಿಕರ ಮಗುವಿನಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತಿಲ್ಲವಲ್ಲ, ಮಗುವಿನ ದೇಹದ ತೂಕ ಸಾಲುತ್ತಿಲ್ಲವಲ್ಲ ಎಂಬಿತ್ಯಾದಿ ಅನಾವಶ್ಯಕ ಆತಂಕಗಳು. ಆದರೆ ಪೋಷಕರಾಗಿ ಈ ಕುರಿತು ಚಿಂತಿಸುವ ಬದಲಾಗಿ, ನಾವು ಮಾಡಬೇಕಾದ ಚಿಂತನೆಯೆಂದರೆ, ಮಗುವಿನ ದೇಹದ ಆರೋಗ್ಯವನ್ನು, ಮಗುವಿನ ಅತ್ಯುತ್ತಮ ಶಾರೀರಿಕ ಗಾತ್ರದಿಂದ ಅಳೆಯಬೇಕಾಗಿಲ್ಲ. ಮಗುವಿನ ದೇಹ ಗಾತ್ರಕ್ಕೆ ಆ ಮಗುವಿನ ಜೆನೆಟಿಕ್ ಪೊಟೆನ್ಶಿಯಲ್ ಕೂಡ ಒಂದು ಪ್ರಸ್ತುತವಾದ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ವಂಶ ಪಾರಂಪರ್ಯವಾಗಿ ಮಗುವಿನ ತಂದೆ/ತಾಯಿ/ಚಿಕ್ಕಪ್ಪ/ಮಾವ/ಅಜ್ಜ /ಅಜ್ಜಿ ಇನ್ಯಾರದ್ದಾದರೂ ಆಳ್ತನ ಮಗುವಿಗೆ ಬರುವ ಸಾಧ್ಯತೆ ಇರುತ್ತದೆ. ಎಷ್ಟೇ ತಿಂದರೂ ನಮ್ಮ ಮಗು ದಪ್ಪಗಾಗ್ತಿಲ್ಲ ಎಂದು ದೂರುವ ಪೋಷಕರೇ, ನೀವು ಚಿಕ್ಕಂದಿನಲ್ಲಿ ಹೇಗಿದ್ದಿರಿ ಎಂಬುದನ್ನೂ ಕೂಡ ಒಮ್ಮೆ ನೆನಪಿಸಿಕೊಳ್ಳಿ. ನಮ್ಮ ಮಕ್ಕಳ ದೇಹ ಸದೃಢವಾಗಿದ್ದು, ಅವರ ಎತ್ತರ,ತೂಕದ ಅನುಪಾತ ಸರಿಯಿದ್ದಲ್ಲಿ, ಮಗುವಿನ ಬೆಳವಣಿಗೆ ಹುಟ್ಟಿನಿಂದಲೂ ಒಂದೇ ಹದದಲ್ಲಿ ನಡೆಯುತ್ತಿದ್ದರೆ, ಮಗುವಿನ ಆರೋಗ್ಯದಲ್ಲಿ ಅತೀವ ಏರು ಪೇರು ಕಂಡಿಲ್ಲದ ಪಕ್ಷದಲ್ಲಿ, ನಾವು ಚಿಂತಿಸಬೇಕಾಗಿಲ್ಲ.  

ಮಕ್ಕಳು ಹೆಚ್ಚೆಚ್ಚು ತಿಂದರೆ ಮಾತ್ರ ಆರೋಗ್ಯ ಎಂಬುದೊಂದು ಮೂಢ ನಂಬಿಕೆ ನಮ್ಮಲ್ಲಿ  ಹಲವರಿಗಿದೆ. ಅದಕ್ಕೋಸ್ಕರ ಮಕ್ಕಳಿಗೆ ಖುಷಿಯಿದೆಯೋ ಇಲ್ಲವೋ ಬಲವಂತ ಮಾಡಿಸಿ ತಿನ್ನಿಸುವ ನಾವು ಬೆಂಬಿಡದೆ ಪ್ರಯತ್ನಿಸುತ್ತಿರುತ್ತೇವೆ. ಇದರ ಫಲಿತಾಂಶವಾಗಿ ಮಕ್ಕಳಲ್ಲಿ ಊಟ ತಿಂಡಿ ಎಂದರೆ ವರ್ಜ್ಯ ಭಾವನೆ, ಊಟದ ಸಮಯಕ್ಕೆ ರಗಳೆ-ರಂಪಾಟ ಎಲ್ಲವೂ ಶುರು! ಹಾಗಾಗಿ, ನಾವು ಮಾಡಬೇಕಾದುದೆಂದರೆ, ನಾವು ನಿತ್ಯ ಉಪಯೋಗಿಸುವ ದವಸ-ಧಾನ್ಯಗಳು, ಬೇಳೆ-ಕಾಳುಗಳು, ಹಣ್ಣು-ತರಕಾರಿ,ಹಾಲು, ಮೊಟ್ಟೆ, ಮಾಂಸ ಹೀಗೆ ಯಾವ್ಯಾವ ಪದಾರ್ಥಗಳಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಇನ್ನಿತರ ಪೌಷ್ಟಿಕಾಂಶಗಳು ಹೇರಳವಾಗಿ ದೊರೆಯುತ್ತವೆ ಎಂಬುದರ ಕುರಿತು ಕನಿಷ್ಠ ಅರಿವು ನಮ್ಮಲ್ಲಿ ಮೂಡಿಸಿ ಕೊಂಡು, ಅಂತಹ ಆಹಾರ ವಸ್ತುಗಳಿಂದಲೇ ಮಕ್ಕಳು ಇಷ್ಟಪಡುವಂತಹ ಅಡುಗೆ ಪದಾರ್ಥಗಳನ್ನು ತಯಾರಿಸಿ ಅಪೌಷ್ಠಿಕತೆಯನ್ನು ನೀಗಿಸಬಹುದು. ಮಕ್ಕಳು ತಿನ್ನುವ ಪ್ರಮಾಣದಲ್ಲಿಯೇ, ಹೆಚ್ಚೆಚ್ಚು ಆರೋಗ್ಯಕರವಾದ ಆಹಾರಪದಾರ್ಥವನ್ನು ಪೂರೈಕೆಯಾಗುವಂತೆ ನೋಡಿಕೊಂಡರೆ ಸಾಕು.

ಬಾಲ್ಯದ ಹಂತದಿಂದಲೂ ಪ್ರತಿಯೊಂದು ರುಚಿಯನ್ನು ಗ್ರಹಿಸುವ ಶಕ್ತಿಯಿರುವ ಮಕ್ಕಳಿಗೆ, ದಿನನಿತ್ಯದ ಒಂದೇ ರೀತಿಯ ಆಹಾರ ಬೇಸರ ಬರಿಸುವುದು ಅತ್ಯಂತ ಸಹಜ. ಹಾಗಾಗಿ ಮಕ್ಕಳ ಬೇಸರಿಕೆಯನ್ನು ಅರ್ಥ ಮಾಡಿಕೊಂಡು,  ಚಿಕ್ಕ ಪುಟ್ಟ ಪರ್ಯಾಯ ಮಾರ್ಗವನ್ನು ಕಂಡು ಹಿಡಿದುಕೊಂಡರೆ, ನಮ್ಮ ಕೆಲಸ ಸುಲಭವಾಗುತ್ತದೆ .ಉದಾಹರಣೆಗೆ ಚಟ್ನಿ , ಸಾಂಬಾರ್ ಪದಾರ್ಥಗಳ ರುಚಿಯನ್ನು ಆಗ್ಗಾಗ್ಗೆ ಬದಲಾಯಿಸುತ್ತಿರುವುದು, ಅಪರೂಪಕ್ಕೊಮ್ಮೊಮ್ಮೆ ಮಕ್ಕಳಿಗೆ ಪ್ರಿಯವಾದ ಸ್ವೀಟ್, ಕುರುಕಲು ತಿಂಡಿಗಳನ್ನು ಮನೆಯಲ್ಲಿಯೇ ಶುಚಿ-ರುಚಿಯಾಗಿ ಮಾಡಿ ಊಟದ ಜೊತೆ ನೀಡಿದರೆ ಮಕ್ಕಳು ತಮ್ಮ ಬೆರಳು ಚೀಪುವಲ್ಲಿಯವರೆಗೆ ಉಣ್ಣುವುದಂತೂ ಖಾತ್ರಿ. ಮಕ್ಕಳು ಒಮ್ಮೊಮ್ಮೆ ಒಂದೊಂದು ರೀತಿಯ ಆಹಾರ ಪದಾರ್ಥವನ್ನು ಇಷ್ಟ ಪಡದಿದ್ದಾಗ, ಅದಕ್ಕೆ ಸಮನಾದ ಇತರ ಪೌಷ್ಟಿಕ ಆಹಾರವನ್ನು ನೀಡಿ ಸರಿದೂಗಿಸಬಹುದು. ಉದಾಹರಣೆಗೆ, ನಮ್ಮ ಮಗು ಸಾದಾ ಹಾಲು ಇಷ್ಟಪಡದಿದ್ದ ಪಕ್ಷದಲ್ಲಿ, ಮೊಸರು, ಚೀಸ್, ಪನ್ನೀರ್, ಬೆಣ್ಣೆಯ ರೂಪದಲ್ಲಿ ಮಗುವಿಗೆ ಕ್ಯಾಲ್ಸಿಯಂ ಹಾಗೂ ದೇಹಕ್ಕೆ ಬೇಕಾಗುವಷ್ಟು ಕೊಬ್ಬಿನಂಶವನ್ನು ಪೂರೈಸಬಹುದು. ಹಣ್ಣುಗಳನ್ನು ಹೆಚ್ಚು ಇಷ್ಟಪಡದ ಮಕ್ಕಳಿಗೆ, ವಾರಕ್ಕೊಮ್ಮೆ ವಿವಿಧ ಹಣ್ಣುಗಳನ್ನು ಕತ್ತರಿಸಿ, ಸ್ವಲ್ಪ ಪ್ರಾಮಾಣದ ಜೇನುತುಪ್ಪ, ಐಸ್ಕ್ರೀಂ ಅಥವಾ ಕಸ್ಟರ್ಡ್ ಜೊತೆ ಕೊಟ್ಟರೆ, ಅತ್ಯಂತ ಸರಳವಾಗಿ ಹಣ್ಣು ಮಕ್ಕಳ ಹೊಟ್ಟೆ ಸೇರುತ್ತದೆ.  ಹೀಗೆ ಹೆಚ್ಚೆಚ್ಚು ಆಕರ್ಷಣೀಯ ಮತ್ತು ರುಚಿಯಲ್ಲಿನ ವೈವಿದ್ಯತೆ ಮಕ್ಕಳಿಗೆ ಆಹಾರದ ಕಡೆಗೆ ಆಸಕ್ತಿ ದೊರಕುವಲ್ಲಿ ಸಹಾಯಕವಾಗುತ್ತದೆ.

ನಾವು ಅಡುಗೆ ಮಾಡುವ ವಿಧಾನಗಳನ್ನು ನೋಡಿ, ಆಗಷ್ಟೇ ಬೌದ್ಧಿಕ ಬೆಳವಣಿಗೆಯನ್ನು ಪಡೆಯುತ್ತಿರುವ ಮಗುವು, ದೊಡ್ಡವರನ್ನು ಅನುಸರಿಸುವ ಪ್ರಯತ್ನ ಮಾಡುತ್ತದೆ. ನಾವು ನೋಡಿದಂತೆ, ಸಣ್ಣ ಮಕ್ಕಳು ಚಪಾತಿ ಹಿಟ್ಟನ್ನು  ಕಂಡೊಡನೆ ಅದನ್ನೊಂದಷ್ಟು ಸರ್ತಿ ತಿರುವಿ ಹಾಕಿ, ಏನೇನೋ ಸಂಶೋಧನೆ ನಡೆಸಿ, ಅಂತೂ ತಾವೂ ಕೂಡ ಒಂದು ಚಪಾತಿ ಲಟ್ಟಿಸುವಲ್ಲಿಯವರೆಗೆ ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಹಲವರು ಮಾಡುವ ತಪ್ಪೆಂದರೆ, ಮಕ್ಕಳು ಅಡುಗೆ ಮನೆಗೆ ಬಂದು ತೊಂದರೆ ನೀಡುತ್ತಾರೆ, ಬೆಂಕಿ, ಚಾಕು-ಚೂರಿಗಳಿಂದ ಅಪಾಯವಾದೀತು ಎಂಬ ಆಲೋಚನೆಯಿಂದ ಅಡುಗೆಯ ಪದಾರ್ಥದ ಯಾವೊಂದು ಅಣುವನ್ನೂ ಅವರಿಗೆ ತಾಕಿಸದೆ ಇರುವುದು.  ಒಂದರ್ಥದಲ್ಲಿ ಮಕ್ಕಳ ಸುರಕ್ಷತೆಯ ಕಾಳಜಿ ಸರಿಯಾದರೂ, ಮಕ್ಕಳನ್ನು ನಮ್ಮ ಜೊತೆ ಅಡುಗೆ ತಯಾರಿಕೆಯಲ್ಲಿ ತೊಡಗಿಸಿಕೊಳ್ಳದಿರುವುದೂ ಕೂಡ ತಪ್ಪೇ. ಮನೆಕೆಲಸ ಮಾಡಿಸಬೇಕೆಂದಲ್ಲ. ತರಕಾರಿ ಸ್ವಚ್ಛಗೊಳಿಸುವಾಗ, ಹೆಚ್ಚುವಾಗ, ಚಪಾತಿ ಉಂಡೆ ಮಾಡಲು ಇತ್ಯಾದಿ ಚಿಕ್ಕಪುಟ್ಟ ಕಾರ್ಯಗಳಿಗೆ, ಮಕ್ಕಳ ವಯಸ್ಸಿಗೆ ತಕ್ಕನಾಗಿ, ಸುರಕ್ಷತೆಯ ಕ್ರಮಗಳನ್ನು ಪೂರಕವಾಗಿ ಕೈಗೊಂಡು, ಅವರನ್ನು ನಮ್ಮ ಜೊತೆ ತೊಡಗಿಸಿಕೊಂಡರೆ, ಮಕ್ಕಳಿಗೆ ಆಹಾರದ ಕಡೆಗೆ ಒಲವು ಸಹಜವಾಗಿಯೇ ಬರುತ್ತದೆ.

ಮಕ್ಕಳು ಸರಿಯಾಗಿ ತಿನ್ನುವುದಿಲ್ಲ ಎಂಬ ಕಾರಣಕ್ಕಾಗಿ ನಮ್ಮಲ್ಲಿ ಹಲವರು ಮಾಡುವ ತಪ್ಪೆಂದರೆ, ಡಾಕ್ಟರ್ ರವರನ್ನು ಸಮಾಲೋಚಿಸದೇ ತಮ್ಮ ಮಕ್ಕಳಿಗೆ ತಾವೇ ಸ್ವತಃ  ವೈದ್ಯಕೀಯ ಚಿಕಿತ್ಸೆಯನ್ನು ನೀಡುವುದು. ಉದಾಹರಣೆಗೆ ಪದೇ ಪದೇ ಜಂತು ಹುಳುವಿಗೆ ಮೆಡಿಸಿನ್ ಕೊಡಿಸುವುದು ಕೂಡ ಒಳಿತಲ್ಲ, ವರ್ಷಕ್ಕೊಮ್ಮೆ ಕೊಟ್ಟರೆ ಸಾಕು. ದಯವಿಟ್ಟು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿರುವುದೆಂದರೆ, ಮಕ್ಕಳು ಆಹಾರ ತಿನ್ನದಿರುವ ತೊಂದರೆಗೆ (ಪಾಲಕರ ಪಾಲಿಗೆ ಅದೊಂದು ಖಾಯಿಲೆ!!??) ಯಾವುದೇ ನಿರ್ಧಿಷ್ಟ ಮದ್ದು ಎಂಬುದಿಲ್ಲ. ಡಾಕ್ಟರ್ ಬಳಿ ಹೋಗಿ ನಾವು ಸಮಸ್ಯೆ ಹೇಳಿಕೊಂಡಾಗ ಡಾಕ್ಟರ್ ಗಳು ನೀಡುವ ಪರಿಹಾರವೆಂದರೆ, ಕೆಲವು ವಿಟಮಿನ್ಸ್, ಜಿಂಕ್ ಅಂಶ ವಿರುವ ಸಿರಪ್ ಗಳು. ಇವು ಕೇವಲ ಪೂರಕವಾಗಿ ನೀಡುವಂತದ್ದಷ್ಟೇ. ನಮ್ಮ ಮಗುವಿನ ಹಸಿವಿನ ಸ್ವಭಾವವನ್ನು ಮರುಕಳಿಸಲು, ನಾವೇ ಒಳ್ಳೆಯ ರೀತಿಯ ಆಹಾರ, ವ್ಯವಸ್ಥಿತವಾದ ದಿನಚರಿ, ವೈವಿದ್ಯತೆ ಇತ್ಯಾದಿ ಸಂಗತಿಗಳನ್ನು ಅಳವಡಿಸಿಕೊಳ್ಳುವುದು ಒಳಿತು.



ಮಕ್ಕಳಿಗೆ  ಮನೆ  ಆಹಾರಕ್ಕೆ ನಿರಾಸಕ್ತಿ/ಹಠ ಕ್ಕೆ ಪರಿಹಾರವೇನು ?

ಪ್ರತಿಯೊಂದು ಮಗುವೂ ಭಿನ್ನ. ಪ್ರತಿ ಮನೆಯಲ್ಲೂ ಒಂದೇ ರೀತಿಯ ಪರಿಸರ, ಆಹಾರ  ಕ್ರಮ ಇತ್ಯಾದಿ ಇರುವುದಿಲ್ಲ. ಹಾಗಾಗಿ ಎಲ್ಲರಂತೆಯೇ ನಮ್ಮ ಮಕ್ಕಳು ತಿನ್ನಬೇಕು ಎಂಬ ಧೋರಣೆಯೇ ನಮ್ಮ ಮಕ್ಕಳಲ್ಲಿ ಹೆಚ್ಚಿನ ಒತ್ತಡವನ್ನು ನೀಡುತ್ತದೆ. ಹೀಗೊಂದಷ್ಟು ಟಿಪ್ಸ್, ಮಕ್ಕಳ ಆಹಾರದ ಕುರಿತಾಗಿ 'ನಮಗಿರುವ' ಸಮಸ್ಯೆಗೆ ಮತ್ತು ಮಕ್ಕಳ ಹಠಮಾರಿತನದ ಪರಿಸ್ಥಿತಿಯನ್ನು ಹದಗೊಳಿಸಲು. 
  • ಊಟ ತಿಂಡಿಗಳ ಸಮಯದ ನಡುವೆ ಅಂತರವಿರಲಿ, ಮಧ್ಯೆ ಮಧ್ಯೆ ಬಾಯಾಡಲು ಕೊಡುವುದು ಒಳ್ಳೆಯ ಅಭ್ಯಾಸವಲ್ಲ. ಹಾಗಾಗಿಯೂ ಕೊಡಲೇ ಬೇಕಾದ ಪ್ರಸಂಗ ಬಂದರೆ, ಕತ್ತರಿಸಿದ ಹಣ್ಣುಗಳು, ಸೌತೆಕಾಯಿ, ಟೊಮೇಟೊ, ನೆನೆಸಿಟ್ಟ ದ್ರಾಕ್ಷಿ, ಡ್ರೈ ಫ್ರೂಟ್ಸ್,  ಹೀಗೆ  ಸಣ್ಣ ಪ್ರಮಾಣದ ಆಹಾರವನ್ನು ನೀಡಿ. 
  • ಮಕ್ಕಳ ಆಹಾರ ತಕ್ಕಮಟ್ಟಿಗೆ ಸುಂದರವಾಗಿರಲಿ, ಅಲಂಕೃತಗೊಂಡಿರಲಿ. ದೋಸೆ, ಚಪಾತಿ ಇತ್ಯಾದಿ ಮಕ್ಕಳ  ಆಸಕ್ತಿಯ ಆಕೃತಿಯಲ್ಲಿ ತಯಾರು ಮಾಡಬಹುದಾಗಿದೆ , ಕೆಚಪ್ ಗಳಿಂದ ಅಲಂಕರಿಸುವುದು, ಸ್ಕೂಲ್ ಡಬ್ಬಿಗಳಿಗೆ ರೋಲ್ ಮಾಡಿ ಕೊಡುವುದು, ಕಾರ್ಟೂನ್ ಆಕೃತಿಗಳನ್ನು ಮಾಡುವುದು ಹೀಗೆ. ಸ್ವಲ್ಪ ದೊಡ್ಡ ಮಕ್ಕಳಾದರೆ, ಹಣ್ಣಿನ ಜ್ಯೂಸು, ಹಣ್ಣಿನ ಸ್ಮೂದಿ, ಹೆಚ್ಚಿದ ತರಕಾರಿಗಳ ಸಲಾಡ್ ಇನ್ನಿತರ ಸ್ನ್ಯಾಕ್ ಗಳನ್ನು ಪಾರದರ್ಶಕ ಗಾಜಿನ ಬಟ್ಟಲಿನಲ್ಲಿ ಹಾಕಿ ಕೊಡುವುದರಿಂದ, ಹಣ್ಣು ತರಕಾರಿಗಳ ಬಣ್ಣವು ಮಕ್ಕಳನ್ನು ಆಕರ್ಷಿಸುತ್ತದೆ.  ಉಪ್ಪಿಟ್ಟು, ಪಲಾವ್, ರೈಸ್ ಬಾತ್ ಗಳನ್ನು ಸುಮ್ಮನೆ ತಟ್ಟೆಯಲ್ಲಿಡುವುದಕ್ಕಿಂತಲೂ, ಬಟ್ಟಲಿನ ಆಕೃತಿಯಲ್ಲಿ ಇಟ್ಟುಕೊಟ್ಟು, ಸುತ್ತಲೂ ಅವರಿಷ್ಟವಾಗುವ ಸೌತೆಕಾಯಿ, ಈರುಳ್ಳಿ, ಟೊಮ್ಯಾಟೋ ಗಳನ್ನು ತೆಳ್ಳನೆ ಕತ್ತಿರಿಸಿ ಅಲಂಕರಿಸಿ ಕೊಡುವುದರಿಂದ, ಸಾಮಾನ್ಯ ತಿಂಡಿ ಊಟಗಳೂ ಕೂಡ ವಿಶಿಷ್ಟವೆನಿಸತೊಡಗುತ್ತದೆ. 
  •  ಮಕ್ಕಳನ್ನು ಇತರರೊಡನೆ ಅವರ ಆಹಾರ ಬಳಕೆಯ ಕುರಿತಾಗಿ,ಶಾರೀರಿಕ ಸಾಮರ್ಥ್ಯದ ಕುರಿತಾಗಿ ಹೋಲಿಕೆ ಮಾಡಲೇಬೇಡಿ. 
  • ಒಳ್ಳೆಯ ಮನೆಯ ಆಹಾರ ಪದಾರ್ಥವನ್ನು ತಿನ್ನಲಿ ಮಗು ಎಂಬ ಇಚ್ಛೆಯಿಂದ ಮಗುವಿಗೆ ಇತರ ಜಂಕ್ ಫುಡ್ ಗಳ ಲಂಚವನ್ನು ತೋರಿಸುವ ಪ್ರಯತ್ನ, ಉದಾಹರಣೆಗೆ, ಊಟ ಮಾಡಿದ್ರೆ ಮಾತ್ರ ಈ ಚಾಕೊಲೇಟ್ ನಿನಗೆ ಸಿಗುತ್ತದೆ ಎಂಬಿತ್ಯಾದಿ ನೈತಿಕ ಬಲಾತ್ಕಾರ ಬೇಡ. ಅತಿಯಾದ ಸೂಕ್ಷ್ಮತೆಯೂ ಸಲ್ಲ. ಅಪರೂಪಕ್ಕೆ ಹೊರಗಡೆ  ಕರೆದುಕೊಂಡು ಹೋಗಿ ಶುಚಿ-ರುಚಿಯಾದ ಪದಾರ್ಥವನ್ನು ತಿನ್ನಿಸುವುದು ತಪ್ಪಲ್ಲ. ಆದರೆ ಅದೇ ಅತಿಯಾಗುವುದು ಬೇಡ. 
  •  ಕೇವಲ  ಗೋಧಿ ಹಿಟ್ಟಿನಿಂದ ಮಾಡುವ ತಿಂಡಿಗಳಿಗಿಂತ, ಅದಕ್ಕೆ ಜೋಳ, ರಾಗಿ, ಭಾಜರಾ, ಸೋಯಾ ಹಿಟ್ಟುಗಳನ್ನು ಸೇರಿಸಿ ಮಾಡಿದ ತಿಂಡಿಗಳಲ್ಲಿ ಪೌಷ್ಟಿಕತೆ ಅಧಿಕವಾಗಿರುತ್ತದೆ. ಇದರ ಜೊತೆಗೆ ದಿನಕ್ಕೊಂದೊಂದು ಬಗೆಯ ತರಕಾರಿಗಳನ್ನು ತುಂಬಿ ಸ್ಟಫ್ಡ್ ಪರೋಟ ರೀತಿಯಲ್ಲಿ ಮಾಡಿದರೆ, ಮಕ್ಕಳಲ್ಲಿ ತರಕಾರಿಗಳ ಸೇವನೆ ಅಧಿಕವಾಗುತ್ತದೆ. ದೋಸೆ ಹಿಟ್ಟನ್ನು ತಯಾರು ಮಾಡುವಾಗ ವಿವಿಧ ಬಗೆಯ ಕಾಳುಗಳನ್ನು ಹಾಕಿ ನೆನೆಸಿ ಮಾಡಿದರೆ, ಪ್ರೋಟೀನ್ ನ ಪೂರೈಕೆ ಹೆಚ್ಚುತ್ತದೆ. ಮಕ್ಕಳು ಇಷ್ಟ ಪಡುವ ಪೂರಿಯನ್ನೂ ಕೂಡ, ಬೇಯಿಸಿದ ಕ್ಯಾರಟ್, ಬೇಯಿಸಿದ ಪಾಲಕ್ ಸೊಪ್ಪನ್ನು ಅರೆದು ಹಾಕಿ, ಕಲರ್ಫುಲ್ ಪೂರಿಯಾಗಿ ನೀಡಬಹುದು. 
  • ಮಕ್ಕಳು ಹಾಲನ್ನು ಇಷ್ಟ ಪಡದಿದ್ದಲ್ಲಿ, ಮಜ್ಜಿಗೆ ಮೊಸರಿನ ಬಳಕೆಯಾದರೂ ಹೆಚ್ಚಿಸಿ. ಬಿಸಿಲ ಬೇಗೆಗೆ ಕುಡಿಯಲು ಮಸಾಲ ಮಜ್ಜಿಗೆ, ಊಟವಾದ ನಂತರ ತಿನ್ನಲೊಂದು ಕಪ್ ಮೊಸರು ಸಕ್ಕರೆ/ಉಪ್ಪು, ಸ್ವೀಟ್ ಇಷ್ಟ ಪಡುವ ಮಕ್ಕಳಿಗಾದರೆ, ಹಾಲಿನ ಗಿಣ್ಣ, ಖೋವಾ, ಶ್ರೀಖಂಡ್ ಈ ರೀತಿಯ ಸಿಹಿಗಳನ್ನು ಅಪರೂಪಕ್ಕೆ ಮನೆಯಲ್ಲೇ ತಯಾರಿಸಿ ನೀಡಬಹುದು.   
  • ಅಪರೂಪಕ್ಕೊಮ್ಮೊಮ್ಮೆ ನಿಮ್ಮ ಮಗು ಶೆಫ್ ಆಗಲಿ. ಅಂದರೆ ಮಗುವಿನ ವಯಸ್ಸಿಗನುಗುಣವಾಗಿ,  ಮಗುವಿಗೆ ಅಡುಗೆಮನೆಯಲ್ಲಿ ಏನಾದರು ತಯಾರಿಸಲು ಸಮ್ಮತಿ ಮತ್ತು ಸಹಕಾರ ನೀಡಿ. ಮನೆಮಂದಿಗೆಲ್ಲ ಸಮಾನವಾಗಿ ಹಂಚಲು ಕೇಳಿ. ಅದು ಬೇಕಿದ್ದರೆ ನಿಂಬೆ ಹಣ್ಣಿನ ಶರಬತ್ತಾಗಿರಬಹುದು, ಮಗು ತಯಾರಿಸಿದ ಆಕಾರವೇ ಇಲ್ಲದ ರೊಟ್ಟಿಯಾಗಿರಬಹುದು, ಏನೇ ಆಗಲಿ, ಹೇಗೆ ಆಗಲಿ ಮಗುವನ್ನು ಅವರ ಅಂದಿನಅಡುಗೆ ಕೆಲಸದ  ಕುರಿತು ಒಂದು ಮೆಚ್ಚುಗೆಯನ್ನು ನೀಡಿ, ಸ್ವಚ್ಛತೆಯ ಕುರಿತು ಮಗು ತೆಗೆದುಕೊಂಡ ಬಗ್ಗೆ ಶ್ಲಾಘಿಸಿ. ಸ್ವತಃ ನಡೆಸಿದ ಪರಿಶ್ರಮದಿಂದ ದೊರಕಿದ ಫಲಿತಾಂಶದಿಂದಾಗಿ, ಮಗುವಿಗೆ ಆಹಾರದ ಕಡೆಗೆ ಆಸಕ್ತಿ ಉಂಟಾಗುತ್ತದೆ.