ಭಾನುವಾರ, ಜೂನ್ 18, 2023

ಡಬ್ಬಿ ತುಂಬುವ ಮುನ್ನ

 


"ಅಯ್ಯೋ ಶಾಲೆ ಶುರು ಆಯ್ತು, ಮಕ್ಕಳ ಬಾಕ್ಸ್ ಮಾಡೋ ಕರ್ಮ ಶುರುಆಯ್ತಲ್ರೀ", "ಏನ್ ಡಬ್ಬಿಗೆ ಹಾಕೋದು ಅನ್ನೋದೇ ಗೊತ್ತಾಗಲ್ಲ, ಊಟ ಬೇಜಾರು, ವೆರೈಟಿ ತಿಂಡಿ ಹಾಕು, ಎಲ್ರೂ ಎಷ್ಟು ಒಳ್ಳೊಳ್ಳೆ ತಿಂಡಿ ತರ್ತಾರೆ ಗೊತ್ತಾ ಅಂತಾಳೆ ಮಗಳು", "ಏನ್ ಕಳಿಸಿದ್ರೂ ಅರ್ಧಕ್ಕರ್ಧ ಡಬ್ಬೀಲಿ ಹಂಗೆ ಬಿಟ್ಕೊಂಡ್ ಬರ್ತಾನೆ"," ಸ್ಕೂಲಲ್ಲಿ ಊಟಾನೇ ಮಾಡಲ್ಲ, ಮನೆಗ್ ಬಂದು, ಕುರ್ಕುರೆ ಅದು ಇದು ತಿಂದು ಹೊಟ್ಟೆ ತುಂಬಿಸಿಕೊಂಡು ಆಡಕ್ಕೆ ಓಡ್ತಾಳೆ, ಮೋಶನ್ನು ಸರಿಯಾಗಾಗ್ದೆ ಆಮೇಲೆ ಹೊಟ್ಟೆನೋವಿಗೆಅಳ್ತಾಳೆ" ಇವೆಲ್ಲ ಮಾತುಗಳು ನಮ್ಮ ನಿಮ್ಮವೇ ಅಲ್ವ? ತಾಯಂದಿರ ಕಳಕಳಿಯ ಕಂಪ್ಲೇಯಿಂಟ್ಗಳು ಇವು. ಮಕ್ಕಳು ಊಟದ ಡಬ್ಬಿಯ ಆಹಾರ ಸಂತೋಷದಿಂದ ತಿನ್ನುತ್ತಿಲ್ಲವೆಂದರೆ ಅದಕ್ಕೆ ಮಕ್ಕಳನ್ನು ದೂಷಿಸುವ ಮುನ್ನ ಒಮ್ಮೆ ಯೋಚಿಸಿ, ನಾವು ಮಕ್ಕಳು ನಿಜವಾಗಿಯೂ ಎಂಜಾಯ್ ಮಾಡುವ ಆಹಾರವನ್ನು ನೀಡುತ್ತಿದೇವೆಯೇ? 

ಮಕ್ಕಳ ಡಬ್ಬಿ ಬಗ್ಗೆ ಸ್ಪೆಷಲ್ ಗಮನ ಏಕೆ ಬೇಕು ?

'ಆಹಾರ' ಎಂದರೆ ಸುಮ್ಮನೆ ಹಸಿವು ನೀಗಿಸುವ ಹಿಟ್ಟು ಎಂದಲ್ಲ. ನಮ್ಮ ದೇಹ ಮತ್ತು ಮನಸ್ಸು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನಾವು ನೀಡಬೇಕಾದ ಸತ್ವಗಳು.  ಮಕ್ಕಳು ಇಡೀದಿನ  ಶಾಲೆಯಲ್ಲಿಯೇ ಕಳೆಯುವಂತಿದ್ದರೆ, ಅವರಿಗೆ ಅವಶ್ಯಕತೆ ಇರುವಷ್ಟು ಪೌಷ್ಟಿಕಾಂಶ ಪಡೆಯುವುದು ಊಟದ ಡಬ್ಬಿಯಲ್ಲಿಯೇ. ಈಗಿನ ಬಿಡುವಿಲ್ಲದ ಜೀವನದಲ್ಲಿ, ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಆಹಾರ ಸೇವಿಸುವ ಚಟುವಟಿಕೆ ಅತ್ಯಂತ ವಿರಳ. ಅದೇ ಶಾಲೆಯಲ್ಲಿ ಮಕ್ಕಳು ತಮ್ಮ ಫ್ರೆಂಡ್ಸ್ ಜೊತೆ ಕುಳಿತು ನಗುತ್ತಾ ಆಡುತ್ತಾ ತಿನ್ನುತ್ತಾರಾದ್ದರಿಂದ, ಕಳಿಸುವ ಲಾಂಚ್ಬ್ಯಾಕ್ಸ್, ಮಕ್ಕಳ ಬೆಳವಣಿಗೆಗೆ ಅತಿಮುಖ್ಯ. 

ವಿದ್ಯಾರ್ಥಿ ದೆಸೆಯಲ್ಲಿ ಸ್ಕೂಲ್ ಡಬ್ಬಿ ಎಂಬುದು ನಿರಂತರವಾಗಿ ಮಕ್ಕಳ ಜೊತೆಗಿರುವುದು. ಅತಿರೇಕದ ರುಚಿಗಳಿಂದ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಮಕ್ಕಳ ಏಕಾಗ್ರತೆಗೆ ಸಾತ್ವಿಕ ಆಹಾರ ಅತ್ಯವಶ್ಯಕ. ಸಾಧ್ಯವಾದಾಗಲೆಲ್ಲ ಡಬ್ಬಿಯ ತಿಂಡಿಗಳ ಆಯ್ಕೆ, ತಯಾರು ಮಾಡುವುದು ಮತ್ತು ತುಂಬಿಕೊಳ್ಳುವ ಬಗೆಗೆ ಮಕ್ಕಳಿಗೆ ಚಾಯ್ಸ್ ನೀಡಿದರೆ, ಮಕ್ಕಳು ಆಹಾರವನ್ನು 'ಇಷ್ಟಪಟ್ಟು' ತಿನ್ನುತ್ತಾರೆ. ಅವರ ಅಪೇಕ್ಷೆ ಮತ್ತು ಅನಿಸಿಕೆಗಳಿಗೆ ಬೆಲೆನೀಡಿದಂತಾಗಿ, ಹಠಮಾರಿತನ ಕಡಿಮೆಯಾಗುತ್ತದೆ. ಹಾಂ! ಮಕ್ಕಳ ಏಳಿಗೆ ಬಯಸಿ, ಬೆಳಗ್ಗಿನ ನಿಯಮಿತ ಸಮಯದಲ್ಲಿ ಮಕ್ಕಳ ಡಬ್ಬಿಗೆ ಫ್ರೆಶ್ ಆಹಾರವನ್ನು ತಯಾರಿಸಿಕೊಡಲು ನಾವು ಮಾಡುವ ಪ್ರಯತ್ನ, ನಮ್ಮ ದೇಹ ಮತ್ತುಮನಸ್ಸನ್ನು ಚುರುಕುಗೊಳಿಸುವ ಆರೋಗ್ಯಕರ ಚಟುವಟಿಕೆಯದು. 

ಮಕ್ಕಳು ಸರಿಯಾಗಿ ಡಬ್ಬಿಯ ಆಹಾರವನ್ನು ತಿನ್ನದಿರುವುದರ ಕಾರಣಗಳು ಮತ್ತು ಪರಿಹಾರ :

ರುಚಿಯ ಗ್ರಹಣದ ಅನ್ವೇಷಣೆ : ಶಾಲೆಯಲ್ಲಿ ಹಂಚಿ ತಿನ್ನುವುದು ಮಕ್ಕಳ ಸಹಜ ವಾಡಿಕೆ. ಇತರರ ಮನೆಯ ಆಹಾರದಲ್ಲಿ ರುಚಿ ಬದಲಾವಣೆ ಕಾಣುವುದರಿಂದ ಮಕ್ಕಳಿಗೆ ತಮ್ಮ ಮನೆಯ ಅಡುಗೆ ಹಿಡಿಸುವುದಿಲ್ಲ. ಅವರ ಆ ಭಾವನೆಯನ್ನು ತಪ್ಪೆಂದು ಹೀಯಾಳಿಸದೆ, ಮಕ್ಕಳ ಇಷ್ಟ ಕಷ್ಟಗಳನ್ನು ಚರ್ಚಿಸಿ ಮಕ್ಕಳ ಡಬ್ಬಿಗೆ ಪೌಷ್ಟಿಕಾಂಶದ ಚೌಕಟ್ಟಿನಲ್ಲಿಯೇ ರುಚಿ ಮತ್ತು ನೋಟದಲ್ಲಿ ವೈವಿದ್ಯತೆ ತರಲು ಪ್ರಯತ್ನಿಸುವುದು ನಮ್ಮ ಕರ್ತವ್ಯವಾಗಿರಬೇಕು. ಮಕ್ಕಳ ತಿಂಡಿ ನಾವು ಟೇಸ್ಟ್ ನೋಡಿಯೇ ಕಳಿಸಬೇಕು, ಮಧ್ಯಾಹ್ನಕ್ಕೆ ತಣ್ಣಗೆ ತಿನ್ನಲು ಸಹ್ಯವೇ ಎಂದು ಪರಿಶೀಲಿಸಬೇಕು. ಫ್ರಿಡ್ಜ್ನಲ್ಲಿಟ್ಟ ಆಹಾರ  ಕೆಡುವುದಿಲ್ಲ ಎಂದು ಮಕ್ಕಳ ಡಬ್ಬಿಗೆ ಹಾಕಿದರೆ ಒಮ್ಮೊಮ್ಮೆ ಬ್ಯಾಕ್ಟೀರಿಯಾಗಳು ನಮಗೆ ಅರಿವಿಲ್ಲದಂತೆ ನಮ್ಮ ಮಕ್ಕಳ ಆಹಾರದಲ್ಲಿ ಬೆಳೆದು, ಮಧ್ಯಾಹ್ನಕ್ಕೆ ರುಚಿಗೆಡುವ ಸಾಧ್ಯತೆ ಇರುತ್ತದೆ ಮತ್ತದು ಆರೋಗ್ಯಕ್ಕೂ ತೊಂದರೆ.  

ಪ್ಯಾಕೆಟ್ ಫುಡ್ಗಳ ಹಾವಳಿ : ಬಣ್ಣಬಣ್ಣದ ಪ್ಯಾಕೆಟ್, ಕರುಮ್ಕುರುಮ್ ತಿಂಡಿ, ಉಪ್ಪು ಹುಳಿ ಖಾರ ಸಿಹಿ ಎಲ್ಲವೂ ಹೆಚ್ಚಿರುವ ಅಂಗಡಿ ಪದಾರ್ಥಗಳು ಮಕ್ಕಳ ಸಹಜ ಆಸೆ. ಈ ಕೃತಕ ಆಹಾರಗಳಲ್ಲಿರುವ ಟ್ರಾನ್ಸ್ ಕೊಬ್ಬು, ಸಕ್ಕರೆ, ಸೋಡಿಯಂ ಮತ್ತು ರುಚಿ-ಬಣ್ಣ ಹೆಚ್ಚಿಸುವ ರಾಸಾಯನಿಕಗಳು, ಮಕ್ಕಳಲ್ಲಿ ಜಂಕ್ ಫುಡ್ ತಿನ್ನುವ ಚಟವಾಗಿ ಪರಿಣಮಿಸುತ್ತದೆ. ಪೋಷಕರಾಗಿ ಜಂಕ್ಫುಡ್ಗಳ ಕೊಳ್ಳುಬಾಕರು ನಾವಾಗಿದ್ದರೆ, ಮಕ್ಕಳನ್ನು ದೂಷಿಸಿ ಪ್ರಯೋಜನವಿಲ್ಲ. ಮಕ್ಕಳ ಬಾಕ್ಸ್ ತಯಾರಿಸಲು ಸಮಯ ಹೊಂದಿಸಿಕೊಳ್ಳಲಾಗದ ಅನಿವಾರ್ಯತೆ, ಆಲಸ್ಯತನದ ಪರಿಣಾಮವೇ ನಾವು ನಮ್ಮ ಮಕ್ಕಳಿಗೆ ಫಾಸ್ಟ್ ಫುಡ್ ಗಳ ಗೀಳು ಹತ್ತಿಸುವುದು. ಸಾವಯವ ಪದಾರ್ಥಗಳನ್ನು ಬಳಸಿ, ಪ್ಯಾಕೆಟ್ ಫುಡ್ ಗಳನ್ನು ಮೀರಿಸುವ ಸ್ನ್ಯಾಕ್ ಗಳನ್ನು ನಾವು ತಯಾರು ಮಾಡಲು ಕಲಿತರೆ, ಮಕ್ಕಳ ವಿರೋಧ ಇರುವುದಿಲ್ಲ. ಊಟದ ಡಬ್ಬಿಯಲ್ಲಿ ಬಣ್ಣ ಬಣ್ಣದ ಹಣ್ಣು ತರಕಾರಿ ಇರುವ ರುಚಿಯಾದ ಸಲಾಡ್, ಆರೋಗ್ಯಕರ ಎಡಿಬಲ್ ಬಣ್ಣಗಳುಳ್ಳ ಪದಾರ್ಥ ಬಳಸಿ ತಯಾರಿಸಿದ ಮನೆಯ ಹಪ್ಪಳ ಸಂಡಿಗೆಗಳು, ಮನೆಯಲ್ಲೇ ತಯಾರಿಸಿದ ಸಿಹಿ ಹೀಗೆ ವೈವಿದ್ಯತೆಯನ್ನು ನಾವು ನೀಡಿದರೆ, ಮಕ್ಕಳಿಗೆ ಜಂಕ್ ಫುಡ್ ಅಪೇಕ್ಷೆ ಬರುವುದಿಲ್ಲ.

ಅತಿಯಾದ ಶಿಸ್ತು : 'ಆಹಾರ' ಎನ್ನುವುದು ಮಕ್ಕಳಿಗೆ ಬಲವಂತವಾಗಿರಬಾರದು. "ಡಬ್ಬಿ ಖಾಲಿ ಮಾಡಿಲ್ಲ ಎಂದರೆ ಬಾರಿಸ್ತೀನಿ ನಿಂಗೆ" ಎಂದು ಹೆದರಿಸಿದರೆ, ಆ ಭಯಕ್ಕೆ ಮಕ್ಕಳು ಸುಳ್ಳು ಹೇಳಲು ಪ್ರಾರಂಭಿಸುತ್ತಾರೆ. ಒಮ್ಮೊಮ್ಮೆ ಅನಾರೋಗ್ಯವಾಗಿ ಊಟ ರುಚಿಸುವುದಿಲ್ಲ, ಹೊಟ್ಟೆಯಲ್ಲಿನ ಜಂತು, ಜ್ವರದ ಲಕ್ಷಣ, ಹೊಸ ಹಲ್ಲು ಬರುವ ಸಮಯ ಇತ್ಯಾದಿ ಸಂಬಂಧಿತ ವಿಷಯಗಳೂ ಕೂಡ ಮಕ್ಕಳು ಊಟ ಬಿಡಲು ಕಾರಣಗಳಾಗಿರುತ್ತವೆ. ಮನುಷ್ಯ ಭಾವಜೀವಿ. ಪುಟ್ಟ ಮನಸ್ಸುಗಳಿಗೂ ಒತ್ತಡಗಳಿರುತ್ತವೆ. ಸುಸ್ತು, ಅವಮಾನ, ಹತಾಶೆ, ಇತ್ಯಾದಿ ಭಾವನೆಗಳಿಂದಲೂ ಒಮ್ಮೊಮ್ಮೆ ಊಟ ರುಚಿಸುವುದಿಲ್ಲ. ಮಕ್ಕಳನ್ನು ಮಾತನಾಡಿಸಿ ಅವರ ಆಹಾರ ನಿರಾಸಕ್ತಿಗೆ ಕಾರಣವನ್ನು ಕೇಳಿ, ಅವಶ್ಯಕ ಬದಲಾವಣೆಯನ್ನು ತರಬೇಕಾದ್ದೂ ಕೂಡ ನಮ್ಮ ಕರ್ತವ್ಯ.    

ಕೃತಜ್ಞತಾ ಭಾವನೆ ಇಲ್ಲದಿರುವುದು : ಮಕ್ಕಳಿಗೆ ತಮಗೆ ದೊರಕಿರುವ ಆಹಾರವನ್ನು ತಯಾರಿಸಲು ಯಾರು ಎಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯಿಸಿರುತ್ತಾರೆ ಎಂಬ ಅರಿವಿರುವುದಿಲ್ಲ. ಸಕಾರಣವಿಲ್ಲದಿದ್ದಲ್ಲಿ ಊಟ ಬಿಟ್ಟರೂ ತೊಂದರೆಯಿಲ್ಲ ಎಂಬ ಸಲಿಗೆ ಸರಿಯಲ್ಲ. ನಿತ್ಯ ಊಟ ಸೇವಿಸುವಾಗ ನಮಗೆ ದೊರಕಿರುವ ಆಹಾರದ ಕುರಿತಾಗಿ ಒಂದು ಕೃತಜ್ಞತೆ, ಎಲ್ಲೋ ಒಮ್ಮೊಮ್ಮೆ ರುಚಿ ಹೆಚ್ಚು ಕಮ್ಮಿಯಾದರೂ ಸಹಿಸಿಕೊಂಡು ಧನಾತ್ಮಕ ಪ್ರತಿಕ್ರಿಯೆ ನೀಡುವ ಅಭ್ಯಾಸ, ಪರಿಹಾರ ಕಂಡುಕೊಂಡು ತಟ್ಟೆಯಲ್ಲಿರುವ ಆಹಾರವನ್ನು ಖಾಲಿ ಮಾಡಬೇಕೆಂಬ ಶಿಸ್ತು, ಅಡುಗೆ ರುಚಿಯಾದಾಗ ತಯಾರಿಸಿದವರಿಗೆ ಪ್ರಶಂಸೆ, ಆಹಾರ ಸಾಮಗ್ರಿಗಳ ಮೂಲ ಮತ್ತು ಲಭ್ಯತೆಯ ಕುರಿತು ಚರ್ಚೆ, ಯಾವ ಆಹಾರ ನಮ್ಮ ಯಾವ ದೇಹದ ಅಂಗಾಂಗಕ್ಕೆ ಸಹಾಯಕ ಎಂಬ ಪುನರಾವರ್ತನೆ ಮಾಡುವುದು,  ಆಗಾಗ್ಗೆ ಮಕ್ಕಳಿಗೆ  ಅವರ ಸಾಮರ್ಥ್ಯಕ್ಕೆ ತಕ್ಕಂತೆ ಏನಾದರೂ ಅಡುಗೆ ಮಾಡುವ ಅವಕಾಶ ಇತ್ಯಾದಿ ಸಂವಹನಾಶೀಲ ಚಟುವಟಿಕೆಗಳನ್ನು ನಾವು ರೂಢಿಸಿಕೊಂಡರೆ ತಂತಾನೇ ಮಕ್ಕಳು ಊಟದ ಡಬ್ಬಿಯ ರಗಳೆ ನಿಲ್ಲುತ್ತದೆ. 


ಬುಧವಾರ, ಜೂನ್ 14, 2023

ಮಲ್ಲಿಕಾ ಮತ್ತು ಮನೆಯವರು

ಮಲ್ಲಿಕಾ ಮತ್ತು ಮನೆಯವರು ಪ್ರೀತಿಯನ್ನು ಹಂಚಿದ ಬಗೆ 

ವಸಂತ ಋತು, ಎಲ್ಲೆಡೆ ಮಾವಿನ ಹಣ್ಣಿನ ಘಮಲು. ಕೇಜಿಗಟ್ಟಲೆ ಮಾವಿನಹಣ್ಣು ತಂದು ತಿನ್ನುವುದು, ಮಾವಿನ ತರಹೇವಾರಿ ಪದಾರ್ಥ ಮಾಡುವುದು, ಹಲಸು ಮತ್ತು ಮಾವಿನ ಹಣ್ಣಿನ ಮೇಳಕ್ಕೆ ಭೇಟಿ..ಹೀಗೆ ಪ್ರತೀ ವರ್ಷ ಅವವೇ ತಪ್ಪದ ವಾರ್ಷಿಕ ಕಾರ್ಯಕ್ರಮಗಳು.. 

ಆದರೂ ಕೂಡಾ.. 

ಊರಲ್ಲಿ ಮನೆಯಲ್ಲಿ ಮಲ್ಲಿಕಾ ಮಾವಿನ ಹಣ್ಣುಗಳು ತಿನ್ನಲು ಸಿದ್ಧವಾಗುತ್ತಿದೆ ಎಂಬ ವಿಷಯ ಕೇಳಿ, ತುಂಬಿದ ಹೊಟ್ಟೆಯ ನಂತರವೂ ಬಾಯಲ್ಲಿ ಜೊಲ್ಲು. ಯಾಕಷ್ಟು ಪ್ರಾಮುಖ್ಯತೆ? ಕಾರಣಗಳು ಸಾಕಷ್ಟು. ಮೊದಲನೆಯದಾಗಿ, ಅಪ್ಪಾಜಿಯ ಪ್ರೀತಿ ಮತ್ತು ಆರೈಕೆಯಲ್ಲಿ ಸಿಗುವ ರಾಸಾಯನಿಕ ಮುಕ್ತ ಹಣ್ಣುಗಳವು. ಮನೆಯ ಹಸಿ ತ್ಯಾಜ್ಯದ ಗೊಬ್ಬರದಲ್ಲೇ ಆ ಪುಟ್ಟ ಮರ ಸಿಹಿಯಾದ ಮಾವಿನ ಹಣ್ಣುಗಳನ್ನು ಕೊಡುತ್ತದೆ. ಶ್ರಮಕ್ಕೆ ತಕ್ಕ ಫಲ, ತಾಳ್ಮೆಗೆ ಸಿಕ್ಕ ಸಿಹಿ ಎಲ್ಲವೂ ನಿಜ ಆದರೆ ಈ ಸೀಸನ್ನಿನಲ್ಲಿ ನಮ್ಮ ಮಲ್ಲಿಕಾರನ್ನು ದಕ್ಕಿಸಿಕೊಳ್ಳುವುದು ಮಾತ್ರ ಬಲು ಕಷ್ಟದ ಕೆಲಸ. ಶುರುವಿಗೆ ಮೈ ತುಂಬಾ ಹೂವು ಬಿಟ್ಟು ಸೊಕ್ಕಿದರೂ, ಕಡೆಗೆ ಬರುವ ಹಳೆಮಳೆಗೆ ಸುಮಾರಷ್ಟು ಹೂವನ್ನು ಉದುರಿಸಿಕೊಂಡು ತನ್ನ ಫಸಲನ್ನು ಮಿತಿಗೊಳಿಸಿ ಮುಂದಕ್ಕೆ ದಕ್ಕುವ ಕಾಯಿಗಳೆಲ್ಲವನ್ನೂ ಮಕ್ಕಳಂತೆ ಕಾಪಾಡಿಕೊಳ್ಳುವಷ್ಟು ನಮ್ಮ ಪರಿಸ್ಥಿತಿಯನ್ನು ಅನಿವಾರ್ಯಗೊಳಿಸುತ್ತದೆ. ಹಂಗೂ ಹಿಂಗೂ ಕಾಯಿ ಹಿಡಿದು ಸುಮಾರು ೨೦೦ ಹಣ್ಣು ಸಿಗಬಹುದು ಎಂದು ಲೆಕ್ಕಾಚಾರ ಹಾಕುವುದಷ್ಟೇ, ಮತ್ತೊಂದಷ್ಟು ಇಬ್ಬನಿಗೆ ಮಳೆಗೆ ಮಿಡಿಗಳು ಉದುರಿ ನಾ ಹೋಗಿಬರುವೆ ಎಂದು ಹೇಳುತ್ತವೆ.  ಉಳಿದಷ್ಟು ಮಿಡಿಯನ್ನು ನೋಡಿಕೊಂಡು ಸಾಂತ್ವನಿಸಿಕೊಂಡು ಪ್ರತಿದಿನ ಮಾವಿನ ಕಾಯಿಗಳು ಇಷ್ಟಿಷ್ಟೇ ಇಷ್ಟಿಷ್ಟೇ ದೊಡ್ಡದಾಗುವುದನ್ನು ನೋಡುವ ಖುಷಿಯೊಂದು ಕಡೆಗಾದರೆ, ಕಳ್ಳಕಾಕರಿಂದ ಕಾಪಾಡಿಕೊಳ್ಳುವ  ಜತನ ಇನ್ನೊಂದೆಡೆ. ಕಾಂಪೌಂಡಿನ ಬದಿಯಲ್ಲಿರುವ ಮರ ಅರ್ಧಕ್ಕರ್ಧಕಾಂಪೌಡಿನ ಹೊರಕ್ಕೆ ಚಾಚಿಕೊಂಡಿರುವುದಕ್ಕಾಗಿ,  ಈ ಸರ್ತಿ ಹಸಿರು ಬಣ್ಣದ ಗಟ್ಟಿ ಗಟ್ಟಿ ಕಾಯಿಗಳು ರಸ್ತೆ ಬದಿ ಓಡಾಡುವವರೆಲ್ಲರನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುತ್ತಿತ್ತು. ಬೇಸಿಗೆಯಲ್ಲಿ ಸಿಗುವ ಹುಳ್ಳನೆಯ ಮಾವಿನ ಕಾಯಿಗೆ ಉಪ್ಪು ಖಾರ ಹಾಕಿ ತಿಂದು ಚಪ್ಪರಿಸದವರ್ಯಾರು? ಬೆಳಗಿನ ಜಾವ ಹೂವು ಕೊಯ್ಯಲು ಓಡಾಡುವ ದೊಡ್ಡವರು ಕೈ ಹಾಕಿ ಕೊಯ್ಯುವ ಕಾಟವಾದರೆ, ಮಧ್ಯಾಹ್ನ ಉರಿಬಿಸಿಲಿನ ವೇಳೆ ಎಲ್ಲರೂ ಮಲಗಿರುವಾಗ ಮೆಲ್ಲನೆ ಕಾಂಪೌಂಡ್ ಹತ್ತಿ ಧುಮುಕಿ ಮರ ಹತ್ತಿ ಕಾಯಿಗಳನ್ನು ಕೊಯ್ದುಕೊಳ್ಳುವ ಮಕ್ಕಳ ಕಾಟ. ಸಹಜ ಮಂಗಗಳ ಕಾಟ ಇನ್ನೊಂದೆಡೆ. 

ಕಾಯಿಗಳನ್ನು ಉಳಿಸಿಕೊಳ್ಳಲು ಅಪ್ಪಾಜಿ ಪಡುವ ಪಾಡು ಅಷ್ಟಿಷ್ಟಲ್ಲ. ಕಾರಿನ ಟಾರ್ಪೆಲ್ ತಂದು ಸಹಾಯಕನ ಜೊತೆಗೂಡಿ ಮರಕ್ಕೆ ಕಟ್ಟಿ ನೋಡುಗರ ಕಣ್ಣಿಗೆ ಒಂದಷ್ಟು ಮರೆ ಮಾಡುವ ಪ್ರಯತ್ನ ಆಯಿತು. ಮಾವಿಕಾಯಿ ಕದಿಯುವ ಮಕ್ಕಳಿಗೆ ಸ್ವಲ್ಪ ಭಯ ಬರಬೇಕೆಂದು, ಜಾತ್ರೆಯಲ್ಲಿ ಮೊಮ್ಮಗನಿಗೆ ಕೊಂಡಿದ್ದ ಬೈನಾಕ್ಯುಲರ್ ಅನ್ನು ಸೀಸೀ ಕ್ಯಾಮೆರಾದಂತೆ ಮರಕ್ಕೆ ಕಟ್ಟಿಹಾಕುವ ಉಪಾಯ, ಮಧ್ಯಾಹ್ನದ ಕಿರುನಿದ್ದೆಯ ಸಮಯದ ಬದಲಾವಣೆ, ಹೀಗೆ ಶತಗತ ಪ್ರಯತ್ನ ಅಪ್ಪಾಜಿ ಕಡೆಯಿಂದ ಇದ್ದರೂ, ಅದೆಷ್ಟು ಅಕ್ಕಪಕ್ಕ ಮನೆಯವರು ನೋಡಿ ಕಂಡು ಬೆದರಿಸಿ ಓಡಿಸಿದರೂ, ಹಿರಿಯ-ಕಿರಿಯ ಮಾವಿನಕಾಯಿ ಕಳ್ಳರ ಕಾಟ ತಪ್ಪುತ್ತಿರಲಿಲ್ಲ. ಕೆಲವು ಮಕ್ಕಳು ಮನೆಯ ಗೇಟಿನ ಬಳಿ ಬಂದು "ಅಂಕಲ್ ಮಾವಿನಕಾಯಿ ಕಿತ್ ಕೊಡ್ರೀ.." ಎಂದು ಧೈರ್ಯದಿಂದ ಕೇಳುವ ಬಗೆಗೆ ಖುಷಿ ಮತ್ತು ಆತಂಕ ಎರಡೂ ಒಟ್ಟೊಟ್ಟಿಗೆ ಉಂಟಾಗುತ್ತಿತ್ತು.  ಆಮೇಲೆ ಬಂತು ಮೊಮ್ಮಗಳ ವರಸೆ. ಮನೆಯಲ್ಲಿ ಚಪ್ಪರಿಸಿ ಮಾವಿನಕಾಯಿ ಉಪ್ಪು ತಿಂದರೂ, ಉದ್ದ ಕೋಲನ್ನು ಹಿಡಿದುಕೊಂಡು ಹಿತ್ತಲ ಬಾವಿ ಕಟ್ಟೆ ಹತ್ತಿಕೊಂಡು ಮಾವಿನಮರ ಕಾದಿದ್ದು ನನ್ನ ಮಗಳು ಸಾನ್ವಿಯ ಬೇಸಿಗೆ ರಜೆಯ ಸಾಧನೆಗಳಲ್ಲಿ ಒಂದು!  ಇವಳು ಅಜ್ಜನ ಮನೆಗೆ ಬಂದು ಆಡಿ ಕುಣಿಯುವ ಗದ್ದಲ ಎಬ್ಬಿಸುವ ಹೊಡೆತಕ್ಕೆ ಮಾವಿನಕಾಯಿ ಕಳ್ಳತನ ತುಸುಕಡಿಮೆಯಾದಂತೆ ಆದರೂ, ನಮಗೇ ರುಚಿ ನಿಲ್ಲದ ಬಾಯಿ ಇತರ ಮಕ್ಕಳಿಗೆ ನಿಂತೀತೇ? ಮುಂಚೆ ಗೊಂಚಲುಗಳ ಲೆಕ್ಕಾಚಾರ ಹಾಕಿದ್ದಷ್ಟೇ, ಈಗ ಪ್ರತೀ ಗೊಂಚಲಿನಲ್ಲಿ ಒಂದೊಂದೇ ಕಾಯಿ. ಹಂಗೂ ನಿಯಮಿತವಾಗಿ ಮಾವಿನಕಾಯಿಗಳನ್ನು ಎಗರಿಸುತ್ತಿದ್ದ ಒಂದು ಮಕ್ಕಳ ಬ್ಯಾಚ್ ರೆಡ್ ಹ್ಯಾಂಡ್ ಆಗಿ ಹಿಡಿದು "ಶಾಲೆ ಮಾಸ್ತರಿಗೆ ಬಂದು ದೂರು ಕೊಡುತ್ತೇನೆ" ಎಂದು ಬೈದರೂ, ಕೊನೆಯಲ್ಲಿ"ಇನ್ಮುಂದೆ ಕೊಯ್ಯಬೇಡಿ ಇನ್ನೊಂದು ತಿಂಗಳು ಬಿಟ್ಟು ಬನ್ನಿ ನನ್ನ ಹತ್ರ; ಮಾವಿನ ಹಣ್ಣು ಕೊಡ್ತೀನಿ ಆಯ್ತಾ" ಎನ್ನುವ ಹೆಂಗರುಳು ಅಪ್ಪಾಜಿಯದು.  

ಅಂತೂ ಇಂತೂ ದಿನನಿತ್ಯ ನಮ್ಮ ಕಣ್ಗಾವಲಿನಲ್ಲಿ ಮಾವಿನಕಾಯಿಗಳು ದೊಡ್ಡದಾದವು. ಅಮೆರಿಕಾ ದಿಂದ ಸಾಗರದವರೆಗೆ ಸುಧೀರ್ಘ ಎರಡೂವರೆ ದಿನಗಳ ಕಾಲ ನಿರಂತರ ಪ್ರಯಾಣ ಮಾಡಿ ಬಂದಿದ್ದ ಅಕ್ಕನ ಮಕ್ಕಳು ಗೇಟಿನ ಒಳಗೆ ಬಂದು ಮೊದಲು ಓಡಿದ್ದು ಮನೆ ಒಳಗಲ್ಲ, ನೇರ ಹಿತ್ತಲಿನ ಮಾವಿನ ಮರಕ್ಕೆ. ಮಕ್ಕಳನ್ನು ಸುಲಭದಿಂದ ಹತ್ತಿಸಿಕೊಂಡು ಆಡಿಸಲಿಕ್ಕಿಂದೇ ತನ್ನ ರೆಂಬೆಗಳನ್ನು ಚಾಚಿರುವ ಮರಕ್ಕೂ ಮಕ್ಕಳೆಲ್ಲರೂ ರಜೆಗೆ ಬಂದರು ಎಂಬ ಹಿಗ್ಗು. ಮಕ್ಕಳಿಗೆ ಕಾಯಿಗಳ ನೋಡಿ ಎಲ್ಲಿಲ್ಲದ ಸಂತಸ. ಆದರೆ, "ನೀನು ಬೆಳೆದರೆ ನಾನು ಬೆಳೆವೆನು, ನೀನು ಹೊಳೆದರೆ ನಾನು ಹೊಳೆವೆನು... " ಎಂದು ಹಾಡುತ್ತಾ ಮಾವಿನಕಾಯಿ ಬೆಳೆಯುತ್ತ ಹೋದರೂ, ಹಣ್ಣಾಗಲು ಬೇಕಾದ ಸಂಪೂರ್ಣ ಬೆಳವಣಿಗೆಯವರೆಗೆ ಇಲ್ಲಿ ಮಕ್ಕಳ ಬೇಸಿಗೆ ರಜೆ ಮುಗಿದಿರುತ್ತದೆ. ನಮ್ಮನೆ ಪುಟ್ಟ ದೇವರಿಗೆ, ನೈವೇದ್ಯಕ್ಕೆಂದು ಸಿಕ್ಕಷ್ಟು ಹಣ್ಣನ್ನು ತಿಂದು ಟಾಟಾ ಮಾಡಿ ನಾವು ಬೆಂಗಳೂರಿನ ಕಡೆಗೆ ಮುಖ ಮಾಡಿ ಬಂದದ್ದಾಯಿತು. 

ಈಗಲ್ಲಿ ಕಷ್ಟಪಟ್ಟು ಉಳಿಸಿಕೊಂಡ ಮಲ್ಲಿಕಾ ಫಸಲಿನ ಕೊಯ್ಲು ಮಾಡಿ ಸಿಕ್ಕ ಕಾಯಿಗಳು ಒಂದು ೬೦-೭೦. ತಾನು ಬೆಳೆದದ್ದನ್ನು ಹಂಚಿ ತಿನ್ನುವ ಅಭ್ಯಾಸ ಅಪ್ಪಾಜಿಯದು. ಇಂದು ಅಕ್ಕ ಪಕ್ಕದವರಿಗೆ ಕೊಟ್ಟೆವು, ಇವತ್ತು ಅಕ್ಕನ ಮನೆಗೆ ಕಳಿಸಿದೆ, ತಂಗಿಯ ಮನೆಯವರು ಬಂದು ತೆಗೆದುಕೊಂಡು ಹೋದರು, ಊರಿಗೆ ಕೊಟ್ಟೆ, ಸ್ನೇಹಿತರಿಗೆ ಕೊಟ್ಟೆವು, ಹಣ್ಣು ಇಲ್ಲಿ ಮಕ್ಕಳೆಲ್ಲ ಖುಷಿಯಿಂದ ತಿನ್ನುತ್ತಿದ್ದಾರೆ ಎಂದೆಲ್ಲ ಊರಿನ ಸುದ್ದಿ ಕೇಳಿಯೇ ನಂಗೆ ಈ ಕಡೆಗೆ ಖುಷಿ. ಅಷ್ಟಾದರೂ ಅದೆಷ್ಟೇ ಪೇಟೆಯಿಂದ ಕೊಂಡು ತಂದ ಹಣ್ಣಿದ್ದರೂ, ಮನೆಯ ಹಣ್ಣಿನ ರುಚಿಯೇ ಬೇರೆ ಎಂಬ ಭಾವನೆ ಎರಡೂ ಕಡೆಗೆ ಇದ್ದುದರಿಂದ, 'ಬೆಂಗಳೂರಿಗೆ ಹೋಗುವೆವು' ಎಂದು ಒಂದಷ್ಟು ಕಾಯಿ-ಹಣ್ಣುಗಳು ಅಕ್ಕನ ಸಹಾಯದಿಂದ ರಾತ್ರೆ ಬಸ್ಸು ಏರಿಯೇಬಿಟ್ಟವು. ಈ ವರ್ಷದ ಬೆಳೆ ಮಗಳ ಮನೆ ತಲುಪಿಸಿದ ಖುಷಿ ಮನೆಯವರಿಗೆ, ಮನೆಯವರು ಕಳಿಸಿದ ಹಣ್ಣು ಎಂಬ ಖುಷಿ ಇಲ್ಲಿ ನಮಗೆ ಈ ರಸಭರಿತ ಸೀಸನಲ್ಹಣ್ಣುಗಳನ್ನು ತಿನ್ನುವಾಗ. 

ದಿಸ್ ಫೀಲಿಂಗ್ -  ನಾಟ್ ಜಸ್ಟ್ ಮಲ್ಲಿಕಾ ಯು ನೋ, ದಿಸ್ ಐಸ್ ವೆಲ್ ಬೀಯಿಂಗ್.. :) :)  

ಬೆಂಗಳೂರಿಗೆ ನಮ್ಮ ಮನೆಗೆ ಬಂದ ಹಣ್ಣುಗಳಲ್ಲಿ ಒಂದಷ್ಟು ಅತಿಥಿಯಾಗಿವೆ ನಮ್ಮ ನೆರೆಹೊರೆಯವರ ಮನೆಯಲ್ಲಿ. ಮತ್ತು ಶಾಲೆಯಲ್ಲಿ ಮಗಳು ಸ್ನೇಹಿತರೊಡನೆ ಕೂಡಿ ತಿನ್ನುವ ಡಬ್ಬಿಯಲ್ಲಿ :) :) 

#seasonalfruit #gratitude #sharing #wellbeing