ಸೋಮವಾರ, ಜನವರಿ 6, 2020

ಚಿತ್ರಸಂತೆಯ ಅನುಭವ

ಚಿತ್ರಸಂತೆ - ಕಲಾಸಕ್ತರಿಗೆ ಒಂದೇ ಸೂರಿನಡಿ ಅನೇಕ ಪ್ರಕಾರದ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಂಡು, ಆಸಕ್ತ ಚಿತ್ರಗಳನ್ನು ಕೊಂಡುಕೊಳ್ಳಲು ಅವಕಾಶ ಸಿಗಬಹುದಾದ ಒಂದು ದಿನದ ಹಬ್ಬ! ಕಲೆಯ ಹೊಸ ಹೊಸ ಸ್ವರೂಪಗಳನ್ನು ತಿಳಿದುಕೊಳ್ಳಲು, ನನಗೆ ಸಾಧ್ಯವಾದಾಗಲೆಲ್ಲ ಪ್ರತಿವರ್ಷದ ಚಿತ್ರಸಂತೆಯನ್ನು ಬಿಟ್ಟೂ ಬಿಡದೆ ಓಡಾಡಿಕೊಂಡು ಬರುವವಳು ನಾನು. ಈ ಸರ್ತಿಯೂ ಹೋಗಿದ್ದೆ ಆದರೆ ಚಿತ್ರಸಂತೆಯ ರಸ್ತೆಯ ಇಕ್ಕೆಲಗಳ ನೋಟಕ್ಕಾಗಿ ಅಲ್ಲ; ಚಿತ್ರಸಂತೆಯಲ್ಲಿ ನನ್ನ ಮಂಡಲ ಆರ್ಟ್ ಅನ್ನು ಪ್ರದರ್ಶಿಸುವ ಒಬ್ಬ ಕಿರಿಯ ಕಲಾವಿದೆಯಾಗಿ.. :)

ಚಿತ್ರಸಂತೆಯನ್ನು ನೋಡುಗರಾಗಿ ಹೋಗುವುದಕ್ಕೂ, ಅಲ್ಲಿನ ಒಂದು ಭಾಗವಾಗಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದು ನನ್ನ 'ರಸ್ತೆಯ ಆ ಕಡೆ ನಿಂತವರ ಅನುಭವದ ಕಥೆಗಳು'! ಅಲ್ಲಿ, ೮ ಗಂಟೆಯ ನಂತರ ಯಾವುದೇ ವಾಹನಗಳ ಓಡಾಟವನ್ನು ನಿಷಿದ್ಧಗೊಳಿಸುವುದರಿಂದ ನಾವು ನಮ್ಮ ನಮ್ಮ ಕಲಾಕೃತಿಗಳನ್ನು ಗಾಡಿಯಲ್ಲಿ ತರುವುದಾದರೆ, ಆದಷ್ಟು ಬೇಗ ಕೊಂಡೊಯ್ದಿಡಬೇಕಾಗುತ್ತದೆ. ಬೆಳಿಗ್ಗೆ ೭.೧೫ ಗೆ ಚಿತ್ರಸಂತೆಯ ರಸ್ತೆಯಲ್ಲಿ ನನ್ನ ಕಲಾಕೃತಿಗಳ ಸೂಟ್ಕೇಸ್ ಹಿಡಿದು ಇಳಿದು ನಿಂತಿದ್ದೆ. ಮೊದಲ ಅನುಭವವಾದ್ದರಿಂದ ಮನಸ್ಸಿನೊಳಗೆ ಪುಕುಪುಕು. ಆದರೂ ಗಣಪತಿ ಅಣ್ಣಯ್ಯ, ವಿಜಯಶ್ರೀ ಅಕ್ಕ, ಪ್ರಹ್ಲಾದಣ್ಣ ಎಲ್ಲರೂ ತಮ್ಮ ಪ್ರತಿಸಲದ ಅನುಭವಗಳನ್ನು ಈ ಮುಂಚೆ ನನ್ನೊಡನೆ ಹಂಚಿಕೊಂಡಿದ್ದರಿಂದ, ನಾನು ಮಾನಸಿಕವಾಗಿ ಪ್ರತಿಯೊಂದಕ್ಕೂ ಸಿದ್ಧವಾಗಿಯೇ ಹೋಗಿದ್ದೆ. ನನ್ನ ಸ್ಟಾಲ್ ನ ಸ್ಥಳಕ್ಕೆ ಹೋಗುತ್ತಿದ್ದಂತೆಯೇ ಮೊತ್ತ ಮೊದಲ ಶಾಕ್. ನನ್ನ ಸ್ಥಳದಲ್ಲಿ ಮತ್ತಿನ್ಯಾರೋ ತಮ್ಮ ಅಂಗಡಿಯನ್ನು ಹೂಡುತ್ತಿದ್ದರು. ಅಲ್ಲೊಂದಷ್ಟು ಚರ್ಚೆ, ಅವರುಗಳ ಕನ್ಫ್ಯೂಷನ್ ಅನ್ನು ನೀಗಿಸಿ ಸ್ಥಳವನ್ನು ಬಿಡಿಸಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಮತ್ತೆ ಮುಂದಿನ ಹಂತ. ಚಿತ್ರಸಂತೆ ಗೆ, ಕುಮಾರ ಕೃಪಾ ರಸ್ತೆಯ ಇಕ್ಕೆಲಗಳಲ್ಲೂ ಆಯ್ಕೆಗೊಂಡ ೧೫೦೦ ಆರ್ಟಿಸ್ಟ್ ಗಳಿಗೆ ಕಲಾಪ್ರದರ್ಶನಕ್ಕೆ ೫-೬ ಫೀಟ್ ಜಾಗವನ್ನು ಹಂಚಿರುತ್ತಾರೆ. ಸ್ಟಾಲ್ ಸ್ಥಳಕ್ಕೆ ಪ್ರತಿಯೊಬ್ಬ ಕಲಾವಿದನಿಗೂ ಒಂದು ಮೇಜು, ಒಂದು ಕುರ್ಚಿಯನ್ನು ನೀಡಲಾಗುತ್ತದೆ. ನಾನು ತಲುಪವಷ್ಟರಲ್ಲಿ ಅವುಗಳು ಇನ್ಯಾರದ್ದೋ ಸ್ವತ್ತಾಗಿ ಹೋಗಿತ್ತು :) ನಾನಿದ್ದ ಸ್ಥಳದಿಂದ ವಿಚಾರಣೆ ಮಾಡಲು ಆಫೀಸು ಸ್ಥಳಕ್ಕೆ ತಲುಪಬೇಕೆಂದರೆ ಅದು ಸಾಕಷ್ಟು ದೂರವಿತ್ತು. ಮಗಳನ್ನು ಮನೆಯಲ್ಲಿ ಬಿಟ್ಟು ಒಬ್ಬಳೇ ಬಂದಿದ್ದರಿಂದ ನನ್ನ ಲಗ್ಗೇಜನ್ನು ಬಿಟ್ಟು ಹೋಗುವುದು ಅಸಾಧ್ಯವಿತ್ತು. ಕಾರ್ಯಕರ್ತರು ಓಡಾಡಿಕೊಂಡು ಇರುತ್ತಾರಾದರೂ ಆ ಸಮಯಕ್ಕೆ ಅಲ್ಲಿ ಯಾರೂ ಕಾಣುತ್ತಿರಲಿಲ್ಲ. ಆಗ ನನ್ನ ಸಹಾಯಕ್ಕೆ ಬಂದವರು ಅಲ್ಲಿನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು. ನನ್ನ ಕೋರಿಕೆಯ ಮೇರೆಗೆ ಹೋಗಿ ಹುಡುಕಿ ಹೆಚ್ಚಿನ ಮೇಜುಗಳನ್ನು ಬಳಸಿಕೊಂಡಿದ್ದವರಿಂದ ಆವಾಜ್ ಹಾಕಿ ವಾಪಸು ತರಿಸಿಕೊಟ್ಟರು. ಇನ್ನು ಅಲ್ಲಿನ ಫುಟ್ಪಾತ್ ಗಳ ಮೇಲೆ ಸ್ಟಾಲ್ ಗಳನ್ನು ಹಾಕಬೇಕಾಗಿರುವುದರಿಂದ ನಮಗೆ ಯಾವ ರೀತಿಯ ಜಾಗ ಸಿಗುತ್ತದೆ ಎಂಬುದರ ಖಾತ್ರಿ ಹಿಂದಿನ ದಿನದ ವರೆಗೂ  ನಮಗೆ ಇರುವುದಿಲ್ಲ. ನನಗೆ ಸಿಕ್ಕ ಸ್ಥಳದಲ್ಲಿ ಸುಮಾರು ಅರ್ಧದಷ್ಟು ಜಾಗಕ್ಕೆ ಮರವೊಂದು ಅಡ್ಡವಾಗಿತ್ತು. ಹಿಂದಕ್ಕೆ ಆರ್ಟ್ ವರ್ಕ್ ಗಳನ್ನು ನೇತು ಹಾಕುವಂತಹ ಯಾವ ಸೌಲಭ್ಯವೂ ಇರಲಿಲಲ್ಲ. ಸಿಕ್ಕಿರುವ ಸ್ಥಳಾವಕಾಶದಲ್ಲೇ ಆರ್ಟ್ ವರ್ಕ್ ಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೇಜಿನ ಮೇಲೆ ಒಪ್ಪವಾಗಿ ಜೋಡಿಸಿಕೊಳ್ಳಬೇಕಾದ ಪರಿಸ್ಥಿತಿ ನನ್ನದಾಯಿತು. ಇದರ ಜೊತೆಗೆ ಮರಕ್ಕೆ ಅಡ್ಡಲಾಗಿ ಕುರ್ಚಿ ಹಾಕಿಕೊಂಡು ಕೂತರೆ ಬರುವ ಜನರನ್ನು ಮಾತನಾಡಿಸುವ ಅವಕಾಶವಾಗುತ್ತಿರದಿದ್ದರಿಂದ ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು ೧೨ ತಾಸುಗಳು ನಿಂತೇ ಇದ್ದೆ!! ಇನ್ನು ನಿಸರ್ಗ ಕರೆ ಎಂದು ಸ್ಟಾಲ್ ಅನ್ನು ಬಿಟ್ಟು ಹೋಗಲು ಸಾಧ್ಯವಿಲ್ಲವೆಂದು ಬೇಕಾದಷ್ಟು ನೀರನ್ನು ಕುಡಿಯದೆ ಇದ್ದಿದ್ದೂ ಕೂಡ ಸತ್ಯ ;)

ಇನ್ನು ನನಗೆ ಎಲ್ಲರೂ ಕೇಳಿದ, ಹೌ ವಾಸ್ ದ ರೆಸ್ಪಾನ್ಸ್? ಎನ್ನುವ ಸರ್ವೇ ಸಾಮಾನ್ಯ ಪ್ರಶ್ನೆ.. ನಾನು ಕಷ್ಟಪಟ್ಟು ತಯಾರಿಸಿದ ಸಾಕಷ್ಟು ಮಂಡಲ ಆರ್ಟ್ ವರ್ಕ್ಸ್ ಮತ್ತು ಮಂಡಲ ಪ್ರಾಡಕ್ಟ್ ಗಳು ಜನರಿಗೆ ಇಷ್ಟವಾದವು. ಸಾಕಷ್ಟು ಜನರು ಕೊಂಡರು. ಆದರೆ ದುಡ್ಡಿಗಿಂತ ಮಿಗಿಲಾಗಿ ನನಗಾದ ಸಂತೋಷವೆಂದರೆ, ವಸ್ತುಗಳನ್ನು ಕೊಳ್ಳದವರೂ ಸಹ, ಸುಮಾರು ೮೦% ಜನರು, "ನೈಸ್ ವರ್ಕ್, ತುಂಬಾ ಚೆನ್ನಾಗಿದೆ.." ಎಂದು ಮೆಚ್ಚುಗೆಯನ್ನು ತಿಳಿಸಿದ್ದು.. ಈ ಮೆಚ್ಚುಗೆ ಯಾವುದೇ ಕಲಾವಿದನಿಗೆ ಅತ್ಯಂತ ಹಿತವಾದ ಅನುಭವ.. ಅದನ್ನು ಪಡೆದದ್ದು ನನ್ನ ಪಾಲಿನ ತೃಪ್ತಿ.. !

ಸಿ.ಕೆ.ಪಿ ಯವರ ಇತರ ವ್ಯವಸ್ಥೆಗಳು ಖುಷಿ ಕೊಟ್ಟವು.ಬೆಳಿಗ್ಗೆ ತಿಂಡಿಯ ವ್ಯವಸ್ಥೆ ಸಿ.ಕೆ.ಪಿ ಆವರಣದಲ್ಲಿ ಮಾಡಿರಲಾಗುತ್ತದೆ. ಮಧ್ಯಾಹ್ನದ ಊಟವನ್ನು ನಮ್ಮ ಸ್ಥಳಕ್ಕೆ ತಂದು ಕೊಡುತ್ತಾರೆ. ಶುಚಿ ರುಚಿ ಆಹಾರ. ಕಾರ್ಯಕರ್ತರು ಆಗಾಗ್ಗೆ ಓಡಾಡಿಕೊಂಡಿದ್ದು ಮುಕ್ತವಾಗಿ ಸಹಾಯ ಮಾಡಲು ತಯಾರಿರುತ್ತಾರೆ. ನನ್ನ ಮಗಳನ್ನು ಕೂರಿಸಿಕೊಳ್ಳಲು ಕುರ್ಚಿ ಕೇಳಿದಾಗ ತಕ್ಷಣಕ್ಕೆ ತಂದು ಕೊಟ್ಟರು. ಮುಖ್ಯವಾಗಿ ನಮ್ಮ ಸ್ಥಳವನ್ನು ನಾವು ಗಲೀಜು ಮಾಡಿಕೊಳ್ಳದಿರಲು ಕಸ ಹಾಕಲು ಕೊಟ್ಟೆಯನ್ನೂ ನೀಡಿರುತ್ತಾರೆ. ದಿನದ ಕೊನೆಯಲ್ಲಿ ಕಸಗಳನ್ನು ತುಂಬಿ ತೆಗೆದಿಟ್ಟು ಹೋದರಾಯಿತು. ಲಕ್ಷಗಟ್ಟಲೆ ಜನ ಸೇರುವುದರಿಂದ, ಗಲಾಟೆ ತೊಂದರೆಯಾಗದಂತೆ ಪೊಲೀಸ್ ಕಾವಲು, ಅಲ್ಲಲ್ಲಿ ಸಿಸಿ ಟೀವಿ ಕ್ಯಾಮೆರಾ ಅಳವಡಿಸಿರುತ್ತಾರೆ. ಒಂದು ದಿನದ ಮಟ್ಟಿಗೆ ಆ ರಸ್ತೆಗಳ ವಾಸಿಗರು ಬೆಳಿಗ್ಗೆ ೮ ರಿಂದ ರಾತ್ರೆ ೮ ರವರೆಗೆ ತಮ್ಮ ತಮ್ಮ ಮನೆಯಿಂದ ವಾಹನಗಳನ್ನು ಹೊರತೆಗೆಯುಂವಂತಿರುವುದಿಲ್ಲ. ಹಾಗಾಗಿ ಅವರುಗಳ ಸಪೋರ್ಟ್ ಕೂಡ ಮೆಚ್ಚುಗೆಯಾಯಿತು. ತಿಂಡಿ ಗಾಡಿಯವರಿಗೆ ರಸ್ತೆಯ ಕೊನೆಗಳಲ್ಲಿ ಮಾತ್ರ ನಿಲ್ಲಲು ಅವಕಾಶ, ಆದಷ್ಟು ಚಿತ್ರಸಂತೆಯ ಒಳಗಡೆಗೆ ತಿಂಡಿ ಗಾಡಿಗಳನ್ನು ಬಿಡದೆ ಸ್ವಚ್ಛತೆಯ ಕಾಯ್ದಿರಿಸಲಾಗುತ್ತದೆ. ಕಸದ ಬುಟ್ಟಿ ಗಳನ್ನು ಅಲ್ಲಲ್ಲಿ ಬಳಕೆಗೆ ಇಟ್ಟಿರುತ್ತಾರೆ. ಹಾಗೆಂದು ಎಲ್ಲವೂ ಸುಖೀ ಅನುಭವೆಂದೇನಲ್ಲ, ಚಿತ್ರಸಂತೆ ಕಾರ್ಯಕ್ರಮಕ್ಕೆ ಬರುವಾಗ ಆಗುವ ಅನುಭವಗಳ ಇನ್ನೊಂದು ಮುಖವೂ ಅಷ್ಟೇ ಕರಾಳ. ಕ್ಯಾಬ್ ಮತ್ತು ಆಟೋದವರ ಹಗಲು ದರೋಡೆ ಅತ್ಯಂತ ಹೆಚ್ಚು.. ಚಿತ್ರಸಂತೆಯ ಸ್ಥಳದ ವರೆಗೆ ಬರಲು ಅಥವಾ ಅಲ್ಲಿಂದ ನಮ್ಮಗಳ ಲಗ್ಗೇಜ್ ಹಾಕಿಕೊಂಡು ಹೋಗಲು ಲಗತ್ತಿಸಿದ ಮೀಟರ್ ಕಿಂತ ದುಪ್ಪಟ್ಟು ದುಡ್ಡನ್ನು ಕೇಳುತ್ತಾರೆ. ನಮ್ಮಗಳ ಅನಿವಾರ್ಯತೆಯನ್ನು ಬಳಸಿಕೊಳ್ಳುವ ಕುತಂತ್ರ :( ನನ್ನ ಸ್ಟಾಲ್ ಶಿವಾನಂದ ಸರ್ಕಲ್ ನ ಶುರುವಿಗೆ ಇದ್ದಿದ್ದರಿಂದ, ತಿಂಡಿಗಳ ಗಾಡಿಗಳಿಂದಲೇ ಜನರ ಸ್ವಾಗತವಾಗುವುದಕ್ಕೆ, ಎಷ್ಟೇ ಕಸದ ಬುಟ್ಟಿಗಳಿದ್ದರೂ, ಬಳಸದ ಅನಾಗರೀಕರಿಂದ ನಮ್ಮ ಮುಂದಿನ ರಸ್ತೆಯೆಲ್ಲ ಗಲೀಜು ಆಗಿದ್ದು ಅತ್ಯಂತ ಖೇದವೆನಿಸಿತು.. 

ಗಂಟೆಗಟ್ಟಲೆ ಕುಳಿತು, ಶ್ರಮಪಟ್ಟು ಸೃಷ್ಟಿಸುವ ಕಲೆಯ ಜೊತೆಗೆ, ಅದನ್ನು ಜನರಿಗೆ ತಲುಪಿಸುವ ವರೆಗಿನ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು, ಸಕಾರಾತ್ಮಕ ಆಲೋಚನೆಗಳಿಂದ ಪರಿಹರಿಸಿಕೊಳ್ಳುವ ಹೊಸ ಹೊಸ ಪಾಠಗಳನ್ನು ಕಲಿಸುವ, ಹೊಸ ಬಗೆಯ ಅನುಭವಗಳನ್ನು ನೀಡುವ ಇಂತಹ ಕಾರ್ಯಕ್ರಮಗಳು ಮತ್ತೆ ಮತ್ತೆ ನನಗೆ ದೊರಕಲಿ ಎಂಬುದೇ ನನ್ನ ಬೇಡಿಕೆ.