ಗುರುವಾರ, ಡಿಸೆಂಬರ್ 28, 2023

ತಗೊಳ್ಳಿ ತಿನ್ನುವಷ್ಟೇ ಊಟ!

ಸಂಬಂಧಿಕರ ಒಂದು ಗೃಹಪ್ರವೇಶ ಸಮಾರಂಭಕ್ಕೆ ಹೋಗಿದ್ದೆ. ಊಟಕ್ಕೆ ಕುಳಿತಾಗ ನನ್ನೆದುರಿನಲ್ಲಿ, ಒಬ್ಬ ತಾಯಿ, ಪಕ್ಕದಲ್ಲಿ ಅವಳ ಸುಮಾರು 6 ವರ್ಷದ ಒಂದು ಮಗು, ಪಕ್ಕದಲ್ಲಿ ಮಗುವಿನ ಆರೈಕೆಗೆ ಮೀಸಲಾಗಿರುವ ಒಬ್ಬಳು ಹೆಣ್ಣು ಮಗಳು ಮತ್ತು ಕಾರಿನ ಡ್ರೈವರ್ ಇಷ್ಟು ಜನ ಊಟಕ್ಕೆ ಕುಳಿತಿದ್ದರು. ಮೇಲ್ನೋಟಕ್ಕೆ ಮಗು ತುಸು ಅನಾರೋಗ್ಯದಿಂದ ಮಂದವಾಗಿರುವುದು ತೋರುತ್ತಿತ್ತು. ಈಗಿನ ಕಾಲದಲ್ಲಿ, ಸಮಾರಂಭಗಳಲ್ಲಿ ಯಾವುದಕ್ಕೆ ಕೊರತೆಯಾದರೂ ಕೂಡ ಭೋಜನ ಮಾತ್ರ ಅದ್ದೂರಿಯಾಗಿರಬೇಕು. ಜನರಿಗೆ ತಿನ್ನಲು ಸಾಧ್ಯವೋ ಇಲ್ಲವೋ ೨೦-೩೦ ಬಗೆ ಐಟಮ್ಸ್ಗಳೆಂತೂ ಊಟದ ಬಾಳೆ ಎಲೆ ಮೇಲಿರಬೇಕು. ನಗರ ಪ್ರದೇಶಗಳಲ್ಲಂತೂ, ಎಲ್ಲವೂ ಈಗ ಕಾಂಟ್ರಾಕ್ಟ್ ಲೆಕ್ಕ. ವಿವಿಧ ಭಕ್ಷ್ಯಗಳನ್ನು ಒಳಗೊಂಡ ಪ್ರತೀ ಬಾಳೆಗೆ ನಿಗದಿತ ಬೆಲೆ. ಊಟ ಪ್ರಾರಂಭವಾಯಿತು. 
ಬಾಳೆಯ ತುಂಬಾ ಸಾಲಾಗಿ ಒಂದಾದ ಮೇಲೊಂದು ಭಕ್ಷ್ಯಗಳನ್ನು ಬಡಿಸುತ್ತಾ ಹೋದರು. ಸಾಮಾನ್ಯವಾಗಿ ಮಕ್ಕಳ ಊಟದ ಶೈಲಿ ಪಾಲಕರಿಗೆ ತಿಳಿದಿರುತ್ತದೆ. ಊಟದ ಶಿಸ್ತು ಬರುವರೆಗೂ ತಮಗಿಷ್ಟವಾದ ಒಂದಷ್ಟು ಸಿಹಿ ಮತ್ತು ಕರಿದ ಪದಾರ್ಥಗಳನ್ನಷ್ಟೇ ತಿಂದು ಎದ್ದೇಳುವುದು ಮಕ್ಕಳ ರೂಢಿ. ಬಡಿಸುತ್ತಿರುವ ಯಾವ ಭಕ್ಷ್ಯಗಳನ್ನೂ ಬೇಡವೆನ್ನದೆ ಎಲ್ಲವನ್ನು ಅವರೆಲ್ಲರೂ ಹಾಕಿಸಿಕೊಂಡರು. ಮಗುವಿನ ಆರೋಗ್ಯ ಯಾಕೋ ಅನುಮಾನವಾಸ್ಪದವಾಗಿದ್ದರಿಂದ, ತಾಯಿ ಮಗುವಿನ ಸಹಾಯಕಿಗೆ ಊಟ ಮಾಡದೆ ಕಾಯುವಂತೆ ಸೂಚನೆ ನೀಡಿದಳು. ಅನ್ನ ಸಾರು ಪೂರಿ ಸಾಗು ಎಲ್ಲವೂ ಆ ಸಹಾಯಕಿಯ ಬಾಳೆಯಲ್ಲಿ ಸಂಗ್ರಹವಾಗುತ್ತಿತ್ತು. ಬಹುಶಃ ಎಲ್ಲರೂ ಒಂದೇ ಪಂಕ್ತಿಯಲ್ಲಿ ಊಟ ಮಾಡಿ ಎದ್ದು ಹೊರಡುವ ಅನಿವಾರ್ಯತೆ ಇದ್ದಿರಬಹುದು. ನಾನು ಗಮನಿಸಿದಂತೆ ಮಗುವಿನ ತಾಯಿಯು ಪಂಕ್ತಿಯಲ್ಲಿ ಏನನ್ನು ಹೇಳಿ ಬಡಿಸಿಕೊಳ್ಳುತ್ತಿದ್ದಾಳೋ, ಅವೆಲ್ಲವನ್ನು ಮಗು ತನಗೂ ಬೇಕೆಂದು ಹಠ ಹಿಡಿದು ಕೇಳಿ ಹಾಕಿಸಿಕೊಳ್ಳುತ್ತಿತ್ತು ಆ  ತಾಯಿಯೂ ಯಾವುದೇ ಮುಲಾಜಿಲ್ಲದೆ ಮತ್ತೆ ಮತ್ತೆ  ಮಗುವಿಗೆ  ಆಹಾರ ಕೇಳುತ್ತಿದ್ದಳು. ಅದಾಗಲೇ  ಎರಡು ಪೂರಿಗಳಿರುವ ಬಾಳೆಯಲ್ಲಿ, ಮತ್ತೊಂದು ಪೂರಿ ಬಂದು ಬಿದ್ದಿತ್ತು. ಮಗುವಿಗೆ ಪುಸಲಾಯಿಸಿ ತುಸು ತಿನ್ನಿಸಲು ಪ್ರಯತ್ನಿಸಿದರಾದರೂ, ಮಗು ಹೆಚ್ಚೇನೂ ಆಹಾರವನ್ನು ತೆಗೆದುಕೊಳ್ಳಲಿಲ್ಲ. ಪ್ರಿಯವಾದದ್ದನ್ನು ತಿನ್ನಲಿ ಎಂದು ಅದಾಗಲೇ ಅನಾರೋಗ್ಯದಲ್ಲಿರುವ ಮಗುವಿಗೆ ಕರಿದ ಬೋಂಡವನ್ನು ತಿನ್ನಿಸುವ ಪ್ರಯತ್ನ ಮಾಡಿದರು. ಅನ್ನ ಸಾರು ಸಾಂಬಾರು ಪಲಾವ್, ಎಲ್ಲವನ್ನು ಬದಿಗೊತ್ತಿ, ಕೊನೆಗೆ ಅನ್ನ ಮೊಸರು ಹಾಕಿಸಿಕೊಂಡು ಊಟ ಮಾಡಿಸುವ ಪ್ರಯತ್ನ ಕೂಡ ನಡೆಯಿತು. ಎಲ್ಲ ಒತ್ತಾಯದ ಪ್ರಯತ್ನದ ಬಳಿಕ ಮಗು ತಿಂದದ್ದೆಲ್ಲವನ್ನು ಅಲ್ಲಿಯೇ ವಾಂತಿ ಮಾಡಿಕೊಂಡಿತು. ಹಿಂದಿನ ಹೊತ್ತಿನ ಆಹಾರ ಜೀರ್ಣವಾಗಿರಲಿಲ್ಲ ಎಂಬುದು ತಿಳಿಯುತ್ತಿತ್ತು. ಒಂದೆಡೆ ತಿನ್ನಲು ಸಮಯವಿಲ್ಲದೆ, ಬಂದದ್ದೆಲ್ಲ ಭಕ್ಷಗಳನ್ನು ಹಾಕಿಸಿಕೊಳ್ಳುತ್ತಿರುವ ತಾಯಿ, ಇನ್ನೊಂದೆಡೆ ಹುಷಾರಿಲ್ಲದಿದ್ದರೂ ಎಲ್ಲವನ್ನೂ ಕೇಳಿ ಹಾಕಿಸಿಕೊಂಡು ತಿನ್ನಲು ಆಸಕ್ತಿ ಇಲ್ಲದ ಮಗು, ಮತ್ತೊಂದೆಡೆ, ಮಗುವಿನ ಜವಾಬ್ದಾರಿಯ ವೃತ್ತಿಯಲ್ಲಿರುವ ಹೆಣ್ಣು ಮಗಳು ಮಗುವಿನ ಪಾಲನೆಗೆ ಕಾಯುತ್ತಾ ಕುಳಿತು ಕೊನೆಯಲ್ಲಿ ಬಾಳೆ ತೆಗೆಯುವವರು ಬಂದು ಬಿಡುತ್ತಾರೆ ಎಂಬ ಗಡಿಬಿಡಿಯಲ್ಲಿ ಬಾಳೆ ತುಂಬಾ ಪದಾರ್ಥಗಳಿದ್ದರೂ ಅರ್ಧಂಬರ್ಧ ತಿಂದು ಉಳಿದಷ್ಟು ಬಿಟ್ಟು ಹೊರಟವಳು!! ವಾಂತಿ ಆದ ನಂತರ ಮಗುವಿನ ಹೊಟ್ಟೆಯಲ್ಲಿ ಏನು ಉಳಿದಿಲ್ಲ ಎಂದು ಆ  ತಾಯಿ ಖೇದಗೊಂಡು, ಪಂಕ್ತಿಯ ಕೊನೆಯಲ್ಲಿ, ಮಗುವಿಗೆ ಪ್ರಿಯವಾದ ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಐಸ್ ಕ್ರೀಮ್ ಅನ್ನು ತಿನ್ನಿಸಿ ಅದರ ಹಠಕ್ಕೆ ಇನ್ನೊಂದು ಐಸ್ ಕ್ರೀಮ್ ಕೊಂಡು ತಿನಿಸಿ ಊಟದಿಂದ ಎದ್ದರು ಆ ಮಹಾತಾಯಿ!! ಸಮಾರಂಭಗಳಲ್ಲಿ ಊಟದ ಶಿಸ್ತು ಇಲ್ಲದಿದ್ದಲ್ಲಿ ಅದೆಷ್ಟು ಆಹಾರ ಪೋಲಾಗುತ್ತದೆ, ಆರೋಗ್ಯಕ್ಕೆ ಕುತ್ತು ಮತ್ತು ಹಣಕಾಸಿನ ನಷ್ಟ ಎಂಬುದಕ್ಕೆ ಇದೊಂದು ನಿದರ್ಶನ. ಇಂತಹ ಅದೆಷ್ಟು ಸಣ್ಣಪುಟ್ಟ ಶೈಕ್ಷಣಿಕ ವಿಷಯಗಳು ನಮ್ಮ ಕಲಿಕೆಗೆ  ಬೇಕಾಗುತ್ತವೆ ಮತ್ತು ಮಕ್ಕಳು ನಮ್ಮನ್ನು ನೋಡಿ  ಕಲಿಯುತ್ತಾರೆ.

ಊಟದ ಕಾರ್ಯಕ್ರಮಗಳಿಗೆ ಮಕ್ಕಳೊಡನೆ ಹೋದಾಗ ಊಟ ಪೋಲಾಗದಂತೆ ನೋಡಿಕೊಳ್ಳಲು  ಹೀಗೊಂದಿಷ್ಟು ವಿಷಯಗಳು ನನಗನ್ನಿಸಿದ್ದು : 

೧. ವಯಸ್ಸಿನಲ್ಲಿ ಅತ್ಯಂತ ಚಿಕ್ಕ ಮಗುವಾಗಿದ್ದರೆ ಅನ್ಯಥಾ ಒಂದು ಬಾಳೆ ಎಲೆ ಊಟವನ್ನು ದಂಡ ಮಾಡದೆ, ತೊಡೆ ಮೇಲೆ ಕೂರಿಸಿಕೊಂಡು ಊಟ ಮಾಡಿಸಬಹುದು ಅಥವಾ ಬೇರೊಂದು ತಟ್ಟೆಯಲ್ಲಿ ಬೇಕಾದಷ್ಟೇ ಕೇಳಿ ಹಾಕಿಸಿಕೊಂಡು ತಿನ್ನಿಸಬಹುದು.

2. ಪಾಲಕರಾಗಿ ಮಗುವಿನ ಆಹಾರದ ಶೈಲಿಯನ್ನು ಅರಿತುಕೊಂಡು ಸಮಾರಂಭ ಊಟಕ್ಕೆ ಕೂತಾಗ ಮಕ್ಕಳ ಇಷ್ಟ ಕಷ್ಟದ ಪದಾರ್ಥಗಳ ಬಗ್ಗೆ ಗಮನ ಕೊಟ್ಟು 
 ಅವರು ತಿನ್ನದ ಪದಾರ್ಥಗಳನ್ನು ಕೈಯೊಡ್ಡಿ ಊಟದ ಎಲೆಗೆ ಅನಾವಶ್ಯಕ ಬಡಿಸುವುದನ್ನು ಬೇಡವೆನ್ನಬಹುದು

೩. ಮಕ್ಕಳಿಗೆ ಪದಾರ್ಥಗಳನ್ನು ಮೊದಲಿಗೆ ಸ್ವಲ್ಪವೇ ಬಡಿಸಿದಷ್ಟನ್ನು ತಿನ್ನಲು ಪ್ರೋತ್ಸಾಹಿಸಿ, ಮಗು ಇಷ್ಟಪಟ್ಟರೆ ಮತ್ತೊಮ್ಮೆ ಭಕ್ಷ್ಯಗಳನ್ನು ಕೇಳಿ ಹಾಕಿಸಿದರೆ, ಮಕ್ಕಳಲ್ಲಿಯೂ ಊಟದ ಆತ್ಮವಿಶ್ವಾಸ ಹೆಚ್ಚುತ್ತದೆ 

೪. ನಮ್ಮ ಬಲವಂತಕ್ಕೆ ಮಕ್ಕಳು ಊಟಕ್ಕೆ ಕೂರಬಾರದು. ಹಾಗೊಮ್ಮೆ ಕಾರ್ಯಕ್ರಮ ಮುಗಿಸಿ ಬೇಗ ಹೋಗುವ ಅನಿವಾರ್ಯತೆ ಇದ್ದರೆ, ಮಕ್ಕಳು ಊಟಕ್ಕೆ ಕೂರುವ ಮುನ್ನ ಎಷ್ಟು ಹಸಿದಿದ್ದಾರೆ, ಅವರು ಹಿಂದದಿಂದ ತಿಂದ ಯಾವ ಆಹಾರ ಜೀರ್ಣವಾಗಲು ಎಷ್ಟು ಸಮಯ ಹಿಡಿಯುತ್ತದೆ ಎಂಬಿತ್ಯಾದಿ ವಿಷಯಗಳನ್ನು ಗಮನಿಸಿಕೊಂಡು, ಮಕ್ಕಳ ಬಾಳೆಎಲೆಗೆ ಅವರಿಗೆ ಅವಶ್ಯಕತೆ ಇರುವಷ್ಟೇ ಆಹಾರವನ್ನು ಕೇಳಿ ಹಾಕಿಸಿಕೊಳ್ಳಬೇಕು. 

೫. ಸಮಾರಂಭಗಳಲ್ಲಿ ಮಕ್ಕಳ ಮುಂದೆ ಆಹಾರವನ್ನು ಹಾಕಿಸಿಕೊಂಡು ಪೋಲು ಮಾಡುವ ಸಂಪ್ರದಾಯ ನಮ್ಮದಾದರೆ ಮಕ್ಕಳು ಕೂಡ ಅದನ್ನೇ ನೋಡಿ ಕಲಿಯುತ್ತಾರೆ. ತುಸು ರುಚಿಯ ಹೆಚ್ಚು ಕಮ್ಮಿಯಾದರೂ ಊಟ ಮಾಡುವ ಕಲೆಯನ್ನು, ಆಹಾರವನ್ನು ಕೃತಜ್ಞತೆಯಿಂದ ಸ್ವೀಕರಿಸುವುದನ್ನು, ರುಚಿಯಾದ್ದನ್ನು ಕೊಂಡಾಡುವ ಬಗೆ ಇತ್ಯಾದಿ ಚಿಕ್ಕ ಚಿಕ್ಕ ವಿಷಯಗಳನ್ನು ಮಕ್ಕಳಿಗೆ ನಮ್ಮ ದಿನನಿತ್ಯದ ತಿಂಡಿ ಊಟಗಳಲ್ಲಿ ಕಲಿಸಿಕೊಟ್ಟರೆ, ಮಕ್ಕಳೇ ತಮಗೆ ಬೇಕಾದುದನ್ನು ನಿರ್ಧರಿಸಿ ತೃಪ್ತಿಯಿಂದ ಊಟ ಮಾಡುತ್ತಾರೆ. 

೬. ಆಹಾರ ಬೆಳೆಗಳ ಬೆಳೆಯುವುದರಿಂದ ಹಿಡಿದು, ಅವುಗಳ ನಿರ್ವಹಣೆ, ಖಾದ್ಯ ತಯಾರಿಕೆಯ ಹಿಂದಿನ ಶ್ರಮ, ಸಂಗ್ರಹ ಮತ್ತು ಸಂರಕ್ಷಣೆ ಇತ್ಯಾದಿ ವಿಷಯಗಳ ಕುರಿತು ಆಗಾಗ್ಗೆ ಮಕ್ಕಳೊಂದಿಗೆ ಮಾತನಾಡುತ್ತಿದ್ದರೆ, ಪ್ರಾಯೋಗಿಕವಾಗಿ ಆಹಾರ ತಯಾರಿಕೆಯಲ್ಲಿ ಮಕ್ಕಳನ್ನು ಕೂಡ ಜೊತೆಗೂಡಿಸಿಕೊಂಡರೆ, ಆಹಾರ ಪೋಲು ಮಾಡುವ ಮುನ್ನ ಮಕ್ಕಳೇ ತಮನ್ನೇ ಆಹಾರದ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಗುರುವಾರ, ಡಿಸೆಂಬರ್ 21, 2023

ಹೊಗಳಿಕೆ - ತಾಕಿಸು ನಿಜದ ಸೂಜಿಮೊನೆ

"ನೋಡು ನೀನೀಗ ಊಟ ಮಾಡ್ಲಿಲ್ಲ ಅಂದ್ರೆ ಯಾರೂ ನಿಂಗೆ ಗುಡ್ಗರ್ಲ್ ಹೇಳಲ್ಲ, ಬ್ಯಾಡ್ಗರ್ಲ್ ಅಂತಾರೆ, ಬೇಕಾ ನಿಂಗೆ ಬ್ಯಾಡ್ಗರ್ಲ್ ಅಂತ ಹೇಳಿಸ್ಕೊಳೋದು?"

"ನಮ್ಮ ಹುಡ್ಗನಿಗೆ ಸ್ವಲ್ಪ ಪಾಲಿಶ್ ಹೊಡೆದು ಗುಡ್ ಬಾಯ್ ಅಂದ್ರೆ ಸಾಕು, ಹೇಳಿದ್ದೆಲ್ಲ ಕೆಲಸ ಮಾಡತ್ತೆ ಪಾಪ"

"ಅವಳಿಗೆ ಸುಮ್ಸುಮ್ನೆ ಗುಡ್ ಗರ್ಲ್ ಅಂತ ಹೊಗಳಿ ಅಟ್ಟಕ್ಕೇರಿಸಿ ಇಟ್ಟಿದ್ದೀಯ ನೀನು, ತಾನು ಮಾಡಿದ್ದೆಲ್ಲ ಸರಿ ಅಂತ ವಾದ ಮಾಡ್ತಾಳೆ ನೋಡು ಈಗ.. "

"ಅಮ್ಮ ಆದ್ರೆ ಗುಡ್ ಅಂತಾಳೆ, ನೀನು ನೋಡಿದ್ರೆ ಯಾವಾಗ್ಲೂ ಸಿಡುಕ್ತಾನೆ ಇರ್ತೀಯಲ ಅಪ್ಪ.. "

 "ಅವನು ಮಾಡಿರೋ ಡ್ರಾಯಿಂಗ್ ನೋಡಿ ಅಜ್ಜಿ ಚೆನ್ನಾಗಿದೆ ಅಂತ ಅಷ್ಟೇ ಹೇಳಿದ್ರಂತೆ, ವಾವ್ ಸೂಪ್ಪರ್ , ಗುಡ್ ಅಂತ ಏನೂ ಹೇಳಲೇ ಇಲ್ಲ ಅಂತ ಮುನಿಸ್ಕೊಂಡಿದಾನೆ ಮಗ" 

"ಗುಡ್ ಗರ್ಲ್ ಅಲ್ವ ನೀನು? ಬಾ ಚಾಕೊಲೇಟ್ ಕೊಡ್ತೀನಿ ತೊಡೆ ಮೇಲೆ ಕೂತ್ಗ್ಗೋ ಬಾ.. " 

ಈ ರೀತಿಯ ಸಂಭಾಷಣೆ ನಮ್ಮ ನಿಮ್ಮ ಮನೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆಗುತ್ತಲೇ ಇರುತ್ತವೆ ಅಲ್ವ? 

ಮಕ್ಕಳಿಗೆ ಹೊಗಳಿಕೆ ನೀಡುವುದು ಸರಿಯೇ ತಪ್ಪೇ ಎಂಬ ಜಿಜ್ಞಾಸೆ ನಮಗೆ ಕಾಡುವುದು ಸಹಜ. ಮಕ್ಕಳಿಗೆ ಪ್ರೋತ್ಸಾಹ ಅತ್ಯಗತ್ಯ. ಪ್ರೋತ್ಸಾಹವಿಲ್ಲದೆ  ಮಕ್ಕಳು ಸಾಯುವುದಿಲ್ಲ ಆದರೆ ಒಣಗುತ್ತಾರೆ. ಪ್ರಶಂಸೆ ಎಂದರೆ ಇನ್ನೊಬ್ಬರು ಮಾಡಿದ ಕಾರ್ಯಕ್ಕೆ ಅಂಗೀಕಾರ ಅಥವಾ ಅನುಮೋದನೆ. ಏನನ್ನಾದರೂ ಕಲಿಸುವಾಗ, ಮಕ್ಕಳು ತಮ್ಮ ಪ್ರಯತ್ನಕ್ಕಾಗಿ ತಮ್ಮ ಬಗ್ಗೆ ಹೆಮ್ಮೆ ಪಡುವ ಆಂತರಿಕ ಪ್ರೇರಣೆಯಾಗಿ ಹೊಗಳಿಕೆಯನ್ನು ಇಷ್ಟಪಡುತ್ತಾರೆ.  ಇತರರು ಮೆಚ್ಚುವುದನ್ನು ನೋಡಿದಾಗ ಮಕ್ಕಳು ಆ ಗುಣಮಟ್ಟವನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಉತ್ಕೃಷ್ಟ ಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಅದೇ ಹೊಗಳಿಕೆ ಅರ್ಥಹೀನ ಮತ್ತು ಪ್ರಾಮಾಣಿಕವಲ್ಲದಿದ್ದರೆ, ಪ್ರತಿಕೂಲವಾಗಿ ಮಕ್ಕಳು ಒಂದೋ ಅನುಮೋದನೆಯ ಚಟಕ್ಕೆ ಬೀಳುತ್ತಾರೆ ಇಲ್ಲವಾದರೆ ಭವಿಷ್ಯದಲ್ಲಿ ಜಗತ್ತಿನ ಸವಾಲುಗಳ ಎದುರಿಸಲಾಗದೆ ದ್ವಂದ್ವಕ್ಕೆ ಒಳಗಾಗುತ್ತಾರೆ.  ಈ ಒಣ ಹೊಗಳಿಕೆ ಮತ್ತು ಉತ್ತೇಜನ/ಸಕಾರಾತ್ಮಕ ಗುರುತಿಸುವಿಕೆಯ ಅಂತರ ಕೂದಲೆಳೆಯಷ್ಟು. ಅದನ್ನು ಪೋಷಕರು ಅರಿತು ಮಕ್ಕಳಿ ಬೆಳವಣಿಗೆಗೆ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಹೀಗೊಂದಷ್ಟು ಟಿಪ್ಸ್.  

ಪ್ರಾಮಾಣಿಕ ಹೊಗಳಿಕೆಯು ಮಗುವಿಗೆ ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ. ಅವರ ಸ್ವಾಭಿಮಾನವನ್ನು ಪೋಷಿಸುತ್ತದೆ. ಧನಾತ್ಮಕ ಕ್ರಿಯೆಗಳಿಗೆ ಮಕ್ಕಳನ್ನು ಸರಿಯಾದ ರೀತಿಯಲ್ಲಿ ವಿವರಣೆ ನೀಡಿ ಹೊಗಳುವುದು, ಅವರ ಆ ಸದ್ಗುಣಗಳು ಮತ್ತೆ ಸಂಭವಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 


ಹೊಗಳಿಕೆ ಪ್ರಾಮಾಣಿಕವಾಗಿರಲಿ :  ನಾವು ಹೇಳಿದ ಕೆಲಸ ಮಗು ಮಾಡಿ ಮುಗಿಸಬೇಕು ಎಂಬ ಕಾರಣಕ್ಕಾಗಿ ಮಕ್ಕಳಿಗೆ ಗುಡ್ ಅಥವಾ ಸತ್ಯವಲ್ಲದ ಹೆಗ್ಗಳಿಕೆ ನೀಡಬೇಡಿ. ಉದಾಹರಣೆಗೆ, ಡ್ರಾಯಿಂಗ್ ಮಾಡಿ ಮುಗಿಸಿದ ಮಗುವಿಗೆ ನೀನೊಬ್ಬ ಅದ್ಭುತ ಕಲಾವಿದ ಎಂದು ಹೊಗಳುವುದಕ್ಕಿಂತಲೂ, ಆ ಮಗು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ, ಎಳೆದ ನೇರವಾದ ಗೆರೆ, ಬಳಸಿದ ಬಣ್ಣ, ಬೇಕಾದಲ್ಲೇ ಬಣ್ಣ ತುಂಬಿದ ಏಕಾಗ್ರತೆ ಇತ್ಯಾದಿ ವಿಷಯಗಳ ಗಮನಿಸಿ ನಿರ್ಧಿಷ್ಟ ಮೆಚ್ಚುಗೆ ಸೂಚಿಸಬೇಕು.  "ಹಾಲು ಕುಡಿದು ಖಾಲಿ ಮಾಡಿದ್ಯಾ? ಗುಡ್ ಅಮ್ಮ ಬೈಯ್ಯೋಷ್ಟ್ರಲ್ಲಿ ಕುಡಿದು ಬಿಟ್ಟೆ ನೋಡು ಇವತ್ತು" ಎಂಬ ಮಾತಿನಲ್ಲಿ ಮೆಚ್ಚುಗೆ ಇದ್ದರೂ, ನಕಾರಾತ್ಮಕ ವಾಗ್ದಂಡ ಕೂಡ ಬಳಸುವುದರಿಂದ, ಮಕ್ಕಳಿಗೆ ಹಾಲು ಕುಡಿಯುವುದು ತಾನು ದೇಹಕ್ಕೆ ಸಹಾಯ ಮಾಡಿದ ಕಾರಣಕ್ಕೆ ಎಂಬುದ ಅರಿವಾಗದೇ, ಅಮ್ಮ ಬೈತಾರೆ ಹಾಗಾಗಿ ಕುಡಿಯಬೇಕು ಎಂಬ ಸಂದೇಶ ಗೊಂದಲಕ್ಕೀಡು ಮಾಡುತ್ತದೆ. ಅದರ ಬದಲು, "ಹಾಲು ಕುಡಿದು ಶಕ್ತಿವಂತ, ಆರೋಗ್ಯವಂತಳಾದೆ ನೋಡು ನೀನೀಗ" ಎಂಬ ಮೆಚ್ಚುಗೆ ಆ ಮಗುವಿಗೆ ತಾನು ಕಲಿತ ಕೆಲಸದ ಕುರಿತು ಹೆಮ್ಮೆ ಉಂಟಾಗುತ್ತದೆ. 

ಮಕ್ಕಳು ದೇಹ ಭಾಷೆ ಮತ್ತು ಸ್ವರಕ್ಕೆ ಹೆಚ್ಚು ಸಂವೇದನಾಶೀಲರಿರುತ್ತಾರೆ. ಆದ್ದರಿಂದ, ನೀವು ಮಕ್ಕಳನ್ನು ಹೊಗಳುವಾಗ, ನೀವು ಆ ವಿಷಯವನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಅವರಿಗೆ ತಿಳಿಸಿ. ಸ್ಮೈಲ್, ಉತ್ತಮ ಕಣ್ಣಿನ ಸಂಪರ್ಕ, ಭುಜಕ್ಕೊಂದು ಶಬ್ಬಾಶ್ ನೀಡುವುದು, ಕೈಕುಲುಕುವುದು ಮತ್ತು ಸ್ನೇಹಪರ ದೇಹ ಭಾಷೆ ಮಾತಿಗಿಂತಲೂ ದೊಡ್ಡ ವ್ಯತ್ಯಾಸವನ್ನು ಮಾಡಬಹುದು.   

ಹೊಗಳಿಕೆ ನಿರಂತರವಾಗಿರಲಿ : ಯಾವುದೋ ಒಂದು ನಾವು ಅಳೆಯುವ  'ದೊಡ್ಡ ಸಾಧನೆ' ಯನ್ನು ಮಗು ಮಾಡಿದಾಗ ಮಾತ್ರವೇ ಹೊಗಳಿಕೆ ಎಂಬುದು ಸರಿಯಲ್ಲ. ಹೊಗಳಿಕೆ ಯಾರೋ ಬೇರೆಯವರಿಂದ ಬರಬೇಕು ನಮ್ಮ ಮಗುವಿಗೆ, ನಾವೇ ನೀಡಬಾರದು ಎಂಬ ಸಂಕೋಚವೂ ಬೇಡ. ಯಾವುದೋ ಸ್ಪರ್ಧೆಯಲ್ಲಿ ಸೋತರೂ ಕೂಡ, ಮಗುವಿನ ಸಣ್ಣ ಸಣ್ಣ ಪ್ರಯತ್ನ, ಆಟವಾಡಿದ ಶೈಲಿ, ಸವಾಲನ್ನು ಧೈರ್ಯವಾಗಿ ಎದುರಿಸಿದ ಬಗೆ ಇತ್ಯಾದಿ ಕುರಿತಾಗಿ ನಮ್ಮ ಮಗುವಿಗೆ ಯಾವ ಶಿಕ್ಷಕರು, ದೊಡ್ಡ ದೊಡ್ಡ ಜನರು ಕೊಡದಿದ್ದರೂ ನಾವು ಕೊಡಬಹುದು. ಮಗುವಿನ ಯಾವುದೇ ಸಣ್ಣ ಯಶಸ್ಸನ್ನು ಗಮನಿಸಿ ಹೊಗಳಿದರೆ, ಆ ಮಗು ಹೆಚ್ಚು ಆತ್ಮವಿಶ್ವಾಸ, ಸೃಜನಶೀಲ ಸಂತೋಷ ಮತ್ತು ಪ್ರೀತಿಯಿಂದ ಇರುವ ವ್ಯಕ್ತಿಯಾಗಬಹುದು.  "ನೀನು ಇರುವುದು ನಮ್ಮ ಪಾಲಿನ ಸಂತೋಷ" ಎಂಬ ಮಾತು ಕೂಡ ಸಣ್ಣ ಮಗುವಿನ ಜೊತೆ ನಮ್ಮ ಬಾಂಧವ್ಯ ಹೆಚ್ಚುವಂತೆ ಮಾಡುತ್ತದೆ. 

ಕಳೆದು ಹೋದುದರ ಕುರಿತು ಖೇದ ಬೇಡ : "ಅಬ್ಬಾ, ಕಳೆದ ಸಲ ಬಾಟಲಿ ಗೆ ನೀರು ತುಂಬಿಸಿದಾಗ ಇಡೀ ಮನೆ ಹೊಳೆ ಮಾಡಿದ್ಯಲ, ಈ ಸಲ ಇನ್ನೇನ್ ಮಾಡಿದ್ಯೋ ಅಂದ್ಕೊಂಡೆ. ಪರ್ವಾಗಿಲ್ಲ ಅಂತೂ ತುಂಬಿದ್ಯಲ.." ಎಂಬ ಹೊಗಳಿಕೆಯಲ್ಲಿ, ಮಗುವಿನ ಕುರಿತಾದ ಅಪನಂಬಿಕೆಯ ವ್ಯಂಗ್ಯವಿದೆ.   ಕಲಿಯುವಾಗ ತಪ್ಪುಗಳು ಸಹಜ. ತಪ್ಪಿನಿಂದ ಕಲಿತಿರುತ್ತಾರೆ ಕೂಡ. ಮುಂದಕ್ಕೆ ಸರಿ ಮಾಡಿಕೊಂಡಾಗಲೂ ಕೂಡ, ನಿರ್ಣಯಾತ್ಮಕ ಹೇಳಿಕೆ ಕೊಟ್ಟು, ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವಂತೆ ಮಾಡಬೇಡಿ. ಬದಲಾಗಿ, "ಕಳೆದ ಸಲದ ನಿನ್ನ ವಿಫಲ ಪ್ರಯತ್ನದಿಂದ ಈ ಸಲ ನೀನು ಅತ್ಯಂತ ಜಾಗರೂಕಳಾಗಿ ನೀರು ತುಂಬಿದ್ದನ್ನು ನಾನು ಗಮನಿಸಿದೆ" ಎಂಬ ಮಾತು ಸಾಕು ಮಗುವಿಗೆ ತನ್ನ ಸಾಮರ್ಥ್ಯದ ಕುರಿತು ಆತ್ಮವಿಶ್ವಾಸ ಬರಲು!

ಮಕ್ಕಳು ತಮಗಾಗಿ ಕೆಲಸ ಮಾಡಿಕೊಳ್ಳಲು ಅವಕಾಶ ಕೊಡಿ : ಮಕ್ಕಳಿಗೆ 'ನೀನು ಒಳ್ಳೆಯ ಮಗು ಚೆಲ್ಲದೇ ತಿನ್ನಬೇಕು ಜಾಣ ಮರಿ' ಎಂಬಿತ್ಯಾದಿ ಪದಗಳ ಮಗುವಿನ ಚಟುವಟಿಕೆಗಳ ಮುಂಚೆಯೇ ಬಳಸಿ, ಅದು ತನ್ನ ಪ್ರಯತ್ನದಲ್ಲಿ ಸೋತರೆ,  'ಹೋಗ ನೀ ಜಾಣ ಅಲ್ಲ' ಎಂದು ಹಂಗಿಸುವುದರಿಂದ ಮಗುವು ತಾನು ಜಾಣನಲ್ಲ, ತನ್ನಿಂದ ಏನೂ ಸಾಧ್ಯವಾಗದು ಎಂಬ ನಕಾರಾತ್ಮಕ ಭಾವನೆ ತಂದುಕೊಳ್ಳುತ್ತದೆ.  ಬದಲಾಗಿ, ಪ್ರ'ಯತ್ನಿಸಿ ನೋಡು' ಎಂದು ಅವಕಾಶ ಮತ್ತು ಸಮಯ ಕೊಟ್ಟು, ಮಗು ಚಮಚದಿಂದ ತಿನ್ನಲು ಒಂದೆರಡು ಬಾರಿ ಸೋತು ನಂತರ ಯಶಸ್ವಿಯಾದಾಗ ಆಗ ಆ ಪ್ರಯತ್ನಕ್ಕಾಗಿ ಮೆಚ್ಚುಗೆ ನೀಡಿದರೆ ಮಗುವಿನ ಆತ್ಮವಿಶ್ವಾಸ ಹೆಚ್ಚುತ್ತದೆ. 

ಮಕ್ಕಳ ಸ್ವಂತಿಕೆಯನ್ನು ಆಚರಿಸಿ : ಮನೆಗೆ ನೆಂಟರು ಬಂದರೆ, ಆದರಾತಿಥ್ಯ ಮಾಡಲು ಬರಬೇಕು, ಯಾವ ಮನಸ್ಥಿತಿಯಲ್ಲಿದ್ದರೂ, ಬೇರೆಯವರಿಗೋಸ್ಕರ ನಗುತ್ತಲಿರಬೇಕು, ಇಲ್ಲಾಂದ್ರೆ ಎಲ್ಲರೂ 'ಛೀ ಎಷ್ಟು ಕೆಟ್ಟವನು/ಕೆಟ್ಟವಳು' ಅಂತಾರೆ. ಎಂಬಿತ್ಯಾದಿ ಬೇರೆಯವರ ಮಾನದಂಡಗಳಿಗೆ ಅನುಗುಣವಾಗಿ ನಮ್ಮ ಒಳ್ಳೆಯತನ ನಿರ್ಧಾರಿತ ಎಂಬ ಭಾವನೆ ಮಕ್ಕಳಿಗೆ ನೀಡುವುದರಿಂದ, ಅದು ಮಕ್ಕಳಿಗೆ ಒತ್ತಡವನ್ನು ತರುತ್ತದೆ. ಬೇರೆ ಮಕ್ಕಳ ಇತರ ಚಟುವಟಿಕೆ ಗಮನಿಸಿ, ಅವನಷ್ಟು ಚೆನ್ನಾಗಿ ನೀ ಬರೆದಿಲ್ಲ ಎಂಬಿತ್ಯಾದಿ ತುಲನಾತ್ಮಕ ಮಾತುಗಳನ್ನು ನಾವಾಡಿದರೆ, ಮಕ್ಕಳ ಸಾಮರ್ಥ್ಯ ಬೇರೆ ಇನ್ಯಾವುದೇ ವಿಷಯಗಳಲ್ಲಿ ಇದ್ದರೂ ಅವರು  ಕುಂಠಿತ ಬೆಳೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳಿ ಅನನ್ಯ ಸಾಮರ್ಥ್ಯಗಳನ್ನು ಕಂಡು ಹಿಡಿದು ಮೆಚ್ಚುಗೆಯ ಮೂಲಕ ಆಚರಿಸಿ. ಅವರ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಸ್ವಂತ ಮಾನದಂಡಗಳನ್ನು ಹೊಂದಿಸಲು  ಮಕ್ಕಳಿಗೆ ಸಹಾಯ ಮಾಡಿ. 

ಸರಳ ಭಾಷೆಯಲ್ಲಿ ಮೆಚ್ಚುಗೆ, ವಿವರಣೆ ಇರಲಿ : ಮಕ್ಕಳಿಗೆ ಅವರು ಕಾಣುವಷ್ಟೇ ಪ್ರಪಂಚ ಅವರ ಪಾಲಿಗೆ. ಅವರ ವಯಸ್ಸು ಮತ್ತು ಸಾಮರ್ಥ್ಯದ ಆಧಾರದ ಮೇಲೆ ಅವರಿಗೆ ಅರ್ಥವಾಗುವ ಪದಗಳಲ್ಲಿಯೇ ಹೊಗಳಿಕೆ ನೀಡಿ. ಎರಡು ಮಕ್ಕಳಿರುವ ಮನೆಯಲ್ಲಿ ಒಡನಾಡಿಗಳ ಮಧ್ಯೆ ತುಲನಾ ಭಾವನೆ ಸಹಜ. ಮನೆಯಲ್ಲಿ ಸಣ್ಣ ತಂಗಿಯೊಂದು ತಾನೇ ಹಲ್ಲುಜ್ಜಿಕೊಂಡು ಬಂದರೆ, ತುಸು ದೊಡ್ಡ ಅಣ್ಣ ತನ್ನ ಸಾಕ್ಸ್ ತಾನೇ ತೊಳೆದುಕೊಂಡು ಬಂದರೆ, ಇಬ್ಬರಿಗೂ ಕೇವಲ ಗುಡ್ ಎಂಬ ಪದ ಬಳಕೆಕಿಂತಲೂ,  ಅವರ ಯಾವ ಪ್ರಯತ್ನ, ಅವರನ್ನು ಇನ್ನಷ್ಟು ಸಮರ್ಥರನ್ನಾಗಿ ಮಾಡಿತು ಎಂಬುದನ್ನು ವಿವರಿಸಿ ಮೆಚ್ಚುಗೆ ಸೂಚಿಸಿದರೆ, ಮಕ್ಕಳಿಬ್ಬರಿಗೂ ಯಾವ ಯಾವ ವಯಸ್ಸಿನಲ್ಲಿ ಏನೇನು ಕೆಲಸಕ್ಕೆ ತಾವು ಸಮರ್ಥರು ಎಂಬುದರ ಅರಿವಾಗಿ, ಮಕ್ಕಳು ಬಲುಬೇಗ ಸ್ವಾವಲಂಬಿಗಳಾಗಲು ಸಹಾಯಕವಾಗುತ್ತದೆ. ಮಕ್ಕಳ  ಜೊತೆ ಆಗಾಗ ಮಾತನಾಡಿ ಅವರು ಪಡೆದ ಮೆಚ್ಚುಗೆಯ     ಗ್ರಹಿಕೆಯನ್ನು, ಭಾವಾರ್ಥವನ್ನು ಖಾತ್ರಿಪಡಿಸಿಕೊಳ್ಳಿ

ನಕಾರಾತ್ಮಕ ಸ್ವ-ಮಾತುಗಳನ್ನು ತಪ್ಪಿಸಿ : ಮನೆಯಲ್ಲಿ ಹೆತ್ತವರ ಮಾತುಗಳನ್ನು ಕೇಳಿ ಮಕ್ಕಳು ಕಲಿಯುತ್ತಾರೆ. ಹೆತ್ತವರು ತಮ್ಮನ್ನು ತಾವೇ ಬೈದುಕೊಳ್ಳುವುದು ಕಡಿಮೆ ಮಾಡಿದರೆ ಸ್ವಾಭಿಮಾನ ಬಲವಾಗುತ್ತದೆ. ಆಗ ಮಕ್ಕಳು ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದಿಲ್ಲ.ಮಕ್ಕಳು ತಮ್ಮ ಬಗ್ಗೆಯೇ ನಕಾರಾತ್ಮಕವಾಗಿ ಮಾತನಾಡುತ್ತಿದ್ದರೆ, ಅದನ್ನು ತಡೆದು, ಅದರ ವಿರುದ್ಧವಾಗಿ ಸಾಬೀತುಪಡಿಸಲು ಕೆಲವು ಪುರಾವೆಗಳನ್ನು ನೀಡಿ, ಮಕ್ಕಳಿಗೆ ಅವರು ಪ್ರಯತ್ನ ಪಟ್ಟಷ್ಟಕ್ಕಾದರೂ ಅಭಿನಂದನೆ ನೀಡಿ. 

ಪ್ರಶಂಸೆ ಮಗುವಿಗೆ ಮಾತ್ರವಲ್ಲ ಮನೆಯಲ್ಲಿರಲಿ : ಪ್ರಶಂಸೆ ಎನ್ನುವುದು ಕೇವಲ ಮಕ್ಕಳಿಗೆ ಮಾತ್ರ ಬೇಕಾಗಿರುವುದಲ್ಲ. ಹೋಂ ವರ್ಕು ಮುಗಿಸಿದ ಮಗುವಿಗೆ ಬೇಕಾದ ಗುಡ್ ಎಂಬ ಹೊಗಳಿಕೆ, ತನ್ನ ಆರಾಮ ವಲಯವನ್ನು ಬಿಟ್ಟು ಎದ್ದು ಹೋಗಿ ವ್ಯಾಯಾಮ ಮಾಡಿ ಬಂದ ಗಂಡನಿಗೂ ಬೇಕು. ತನ್ನ ಬಿಡುವಿಲ್ಲದ ಕಾರ್ಯಗಳ ನಡುವೆ, ತನ್ನ ಹವ್ಯಾಸಗಳಿಗೆ ಆದ್ಯತೆ ಇಟ್ಟುಕೊಂಡ ಹೆಂಡತಿಗೂ ಬೇಕು. ಔಷಧೀಯ ತಪ್ಪದೇ ತೆಗೆದುಕೊಳ್ಳುವ ಅಜ್ಜಿಗೂ ಬೇಕು, ಗಿಡಗಳ ಆರೈಕೆ ನೋಡುವ ಅಜ್ಜನಿಗೂ ಬೇಕು. ಪ್ರತಿಯೊಬ್ಬರ ಸದಾಶಯ ಚಟುವಟಿಕೆಗಳಿಗೂ ಅತ್ಯಗತ್ಯ ಈ ಪ್ರಶಂಸೆ. ಮನಸ್ಸಿನ ಪೌಷ್ಟಿಕ ಆಹಾರವದು.  ಮಗುವೊಂದು ಸಧೃಡ ಮನಸ್ಥಿತಿಯಲ್ಲಿ ಬೆಳೆಯಬೇಕಾದರೆ, ಆ ಮನೆಯ ಸದ್ಯಸ್ಯರು ಪರಸ್ಪರ ತಮ್ಮ ಸಣ್ಣ ಪುಟ್ಟ ಸಾಧನೆಯನ್ನು ಅರಿತು ಪ್ರಶಂಸಿಸಬೇಕು. ಆಗ ಮಾತ್ರ ಮಕ್ಕಳಿಗೆ ತಮ್ಮ ಗುರಿಗಳತ್ತ ಸಾಗಲು ಪ್ರೋತ್ಸಾಹ ಸಿಕ್ಕಿ, ಬದುಕು ಮೌಲ್ಯಯುತವಾಗಿರುತ್ತದೆ. 

ಶಾಲೆಯ ಪಾತ್ರವೂ ಮುಖ್ಯ : ಈ ದಿನಗಳಲ್ಲಿ ಮಕ್ಕಳು ಮನೆಯಲ್ಲಿರುವುದಕ್ಕಿಂತ ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಕಳೆಯುತ್ತಾರೆ ಎಂಬುದನ್ನು ಗಮನಿಸುವುದು ಮುಖ್ಯ. ಇಲ್ಲಿ ಶಿಕ್ಷಕರ ಪಾತ್ರವು ಬರುತ್ತದೆ. ಅವರು ತಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹೊಗಳಿಕೆಯನ್ನು ಬಳಸುವುದು ಮತ್ತು ಕೌಶಲ್ಯಗಳನ್ನು ಗುರುತಿಸುವುದು ಅಸಮ್ಮತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಶಾಶ್ವತವಾದ ಅನಿಸಿಕೆಗಳನ್ನು ರಚಿಸುತ್ತದೆ.

ದೊಡ್ಡ ದೊಡ್ಡ ಮಾತಿನ ಬಲೂನು ಹಿಗ್ಗಿದಾಗ್ಗೆಲ್ಲ ತಾಕಿಸು ನಿಜದ ಸೂಜಿಮೊನೆ.. ಎಂಬ ಸಾಲೇ ಹೇಳುವಂತೆ ಹೊಗಳಿಕೆ ಎಷ್ಟು ಸಹಾಯಕವೋ ಅಷ್ಟೇ ಅತಿಯಾದ ಒಣ ಹೊಗಳಿಕೆ ಅಷ್ಟೇ ಮಾರಕ. ಮುಂದೆ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಟ್ಟಾಗ, ತಮ್ಮ ಸಾಮರ್ಥ್ಯ ಕಮ್ಮಿ ಎನಿಸಿ ನಲುಗುವ ಸನ್ನಿವೇಶ ಬರಬಹುದು.  ಹೊಗಳಿಕೆಯು ಅಧಿಕೃತ ಮತ್ತು ಸಮಯೋಚಿತವಾಗಿರದಿದ್ದರೆ, ಮಕ್ಕಳು ನಿರ್ವಹಣಾ ಶಕ್ತಿಯನ್ನುಕಳೆದುಕೊಳ್ಳುತ್ತಾರೆ . ಬೇರೆಯವರ ಒಪ್ಪುವಿಕೆಯ ಮೇಲೆ ತಮ್ಮ ಬದುಕನ್ನು ಅವಲಂಭಿತ ಮಾಡಿಕೊಳ್ಳುತ್ತಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತಾರೆ. 




ಸೋಮವಾರ, ಡಿಸೆಂಬರ್ 18, 2023

ಹೆರಿಟೇಜ್ ವಿಲೇಜ್ - ರಘುರಾಜ್ಪುರ

ಒಡಿಶಾ ಪ್ರವಾಸ ಮಾಡಿದ್ದ ಗೆಳೆಯನೊಬ್ಬ, ನೀ ಅಲ್ಲಿ ಆರ್ಟ್ ವಿಲ್ಲೇಜ್ ಗೆ ಹೋಗಕ್ಕೇ.. ನಿಂಗ್ ಭಾರೀ ಇಷ್ಟ ಆಗ್ತು ಎಂದು ಹೇಳಿದ್ದು ವರ್ಷಗಳಿಂದ ಮನಸ್ಸಿನಲ್ಲಿ ಬರೆದಿಟ್ಟ ಷರಾ ಆಗಿತ್ತು. ಕಲೆಯ ಕುರಿತು ಆಸಕ್ತಿ ಇರುವ ನನಗಂತೂ, ಇಡೀ ಊರಿಗೆ ಊರೇ ಪೇಂಟಿಂಗ್ ಮತ್ತು ಆರ್ಟ್ ಗಳಿಂದ ತುಂಬಿರುತ್ತದೆ, ಎಂಬ ವಿಷಯವೇ  ಪುಳಕವಾಗಿತ್ತು. ನಮ್ಮ ಪ್ರವಾಸದ ಸಮಯದಲ್ಲಿ ಇಂಟರ್ನೆಟ್ ಮಾಹಿತಿ ಒಟ್ಟು ಮಾಡಿಕೊಂಡು ತಯಾರಾಗಿ ಹೋದೆವು. ಪುರಿ ನಗರಿಯ ಹೊರಗೆ, ಭುವನೇಶ್ವರ್ ಕಡೆಗೆ ಹೈವೆಯಲ್ಲಿ ೧೪ ಕಿಮೀ ಮುಂದಕ್ಕೆ ಹೋದರೆ, ಚಂದನಾಪುರ್ ಸಿಗುತ್ತದೆ, ಅಲ್ಲಿಯ ಮಾರುಕಟ್ಟೆಯ ಪಕ್ಕದಲ್ಲಿ ಒಳ ರಸ್ತೆ ಹಿಡಿದು ೨೦೦ ಮೀ ಮುಂದಕ್ಕೆ ಹೋದರೆ ಸಿಗುವುದೇ ರಘರಾಜಪುರ್ ಹಳ್ಳಿ. ೧೦೦-೧೨೦ ಸಣ್ಣ ದೊಡ್ಡ ಮನೆಗಳಿರುವ ಈ ಊರಿನ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಬ್ಬರಾದರೂ ಕಲಾವಿದರು! ಇಡೀ ಊರಿನ ಎಲ್ಲ ಮನೆಗಳ ಗೋಡೆಗಳ ಮೇಲೂ ಸಾಂಪ್ರದಾಯಿಕ ಚಿತ್ರಕಲೆಗಳು! ಕೆಲವರ ಮನೆ ಎಷ್ಟು ಸಣ್ಣದೆಂದರೆ, ಮನೆ ಹೊರಗಿನ ಜಗಲಿಯಲ್ಲೇ ಕಾಲವಸ್ತುಗಳ ನೇತು ಹಾಕಿ ಪ್ರದರ್ಶನಕ್ಕಿಟ್ಟಿರುತ್ತಾರೆ. 




ಭಾರತೀಯ ರಾಷ್ಟ್ರೀಯ ರಾಷ್ಟ್ರೀಯ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಚ್) ರಘುರಾಜ್ಪುರವನ್ನು ಒಂದು ಪರಂಪರೆ ಗ್ರಾಮವಾಗಿ ಅಭಿವೃದ್ಧಿಪಡಿಸಿದೆ, 'ಹೆರಿಟೇಜ್ ವಿಲೇಜ್' ಎಂದು ಘೋಷಿಸಿದೆ.ಇದನ್ನು ಒಡಿಶಾದ ಪ್ರಾಚೀನ ಗೋಡೆ ವರ್ಣಚಿತ್ರಗಳನ್ನು ಪ್ರಯತ್ನಿಸಲು ಮತ್ತು ಪುನರುಜ್ಜೀವನಗೊಳಿಸಲು ಆಯ್ಕೆ ಮಾಡಿದೆ. ಇದು ಕಲೆ ಮತ್ತು ಕರಕುಶಲತೆಗೇ ಸಮರ್ಪಿತಗೊಂಡ ಗ್ರಾಮವಾಗಿದೆ. ಇದೇ ಗ್ರಾಮದಲ್ಲಿ 5ನೇ ಶತಮಾನದಲ್ಲಿ ಪಟ್ಟ ಚಿತ್ರ ಮಾದರಿಯ ಪೇಂಟಿಂಗ್ಸ್ ಉಗಮಗೊಂಡಿತ್ತು. ಇದು ಒಡಿಸ್ಸಿ ಗುರು ಕೆಲುಚರಣ್ ಮಹಾಪಾತ್ರ ಅವರ ಜನ್ಮಸ್ಥಾನ ಮತ್ತು ನೃತ್ಯ ಶೈಲಿ ಗೋಟಿಪುವದ ಉಗಮ ಸ್ಥಾನವೂ ಹೌದು. ಪಟ್ಟಚಿತ್ರದ ಪಾರಂಪರಿಕ ಕರಕುಶಲವನ್ನು ಜಗತ್ತಿಗೆ ಒಡೆಯನಾದ ಶ್ರೀ ಜಗನ್ನಾಥನನ್ನು ಅಲಂಕರಿಸಲು ಬಳಕೆ ಮಾಡಲಾಗುತ್ತದೆ, ಈ ಕಾರಣದಿಂದಲೇ ಈ ಕಲಾ ಶೈಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಲ್ಲಿನ ಕಲಾಪ್ರಕಾರಗಳ ಕುರಿತಾಗಿ ಈಗೀಗ ಹೆಚ್ಚೆಚ್ಚು ಪ್ರಚಾರ ಸಿಕ್ಕಿರುವ ಕಾರಣ, ಪ್ರತಿಯೊಂದು ಮನೆಯವರ ಮುಖ್ಯ ಕಾಯಕವೂ ಪ್ರವಾಸಿಗರಿಗೆ ಅವರ ಆಸಕ್ತಿಗೆ ತಕ್ಕಂತೆ ಕಲಾ ಮಾಹಿತಿ ನೀಡಿ, ತಮ್ಮ ಕಲಾವಸ್ತುಗಳ ಮಾರಾಟ ಮಾಡುವುದು. 

ಹೈವೆಯಿಂದಲೇ ಆ ಊರಿನ ಹುಡುಗನೊಬ್ಬ "ನಿಮಗೆ ಹಾದಿ ತೋರಿಸುತ್ತೇನೆ; ತಮ್ಮ ಮನೆಯಲ್ಲಿ ಕೂಡ ನಾವು ಪೇಂಟಿಂಗ್ ಮಾಡುತ್ತೇವೆ" ಎಂದು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋದ. 



ಆ ಮನೆಯವರು ಸ್ವಾಗತಿಸಿ ಒಳಗೆ ಕರೆದೊಯ್ದು ಜಗಲಿಯಲ್ಲಿ ನಮ್ಮನ್ನು ಕೂರಿಸಿದರು. ಸಾಮಾನ್ಯ ಎಲ್ಲರ ಮನೆಗಳಲ್ಲಿ ನೆಲದ ಮೇಲೆ ಸದಾ ಚಾಪೆ ಹಾಸಿಯೇ ಇಟ್ಟಿರುತ್ತಾರೆ. ಗ್ರಾಹಕ ಅತಿಥಿಗಳಿಗೆ ತಾವು ರಚಿಸುವ ಕಲೆಯ ಕುರಿತಾಗಿ, ಅದರ ಇತಿಹಾಸ, ನೂರಾರು ವರ್ಷ ಕಲೆಯ ಮೇಲೆ ಅವಲಂಬಿತ ತಮ್ಮ ವೃತ್ತಿ ಪಾರಂಪರಿಕತೆ, ಪೈಟಿಂಗ್ ಮಾಡುವ ಬಗೆ, ಬಳಸುವ ಸಾಮಗ್ರಿಗಳು, ನೈಸರ್ಗಿಕ ಬಣ್ಣಗಳು ಇತ್ಯಾದಿ ಹಲವು ವಿಷಯಗಳ ಬಗ್ಗೆ ತಿಳಿಸಿದರು. ಹೆಚ್ಚಿನ ಮಾಹಿತಿಯ ಪಾರದರ್ಶಕತೆ ಸಿಕ್ಕಾಗ, ಗ್ರಾಹಕರಿಗೆ ಕೊಳ್ಳುವ ವಸ್ತುಗಳು ಮೆಚ್ಚುಗೆಯಾಗುವುದು ಒಂದು ಮಟ್ಟಿಗೆ ಮಾರಾಟ ತಂತ್ರವೂ ಹೌದಾಗಿದ್ದರೂ, ಇಂತಹ ಮೂಲಭೂತ ಸ್ಥಳಗಳಿಗೆ ಹೋದಾಗ ಇವೆಲ್ಲ ವಿಷಯಗಳು ತಿಳಿದುಕೊಳ್ಳುವಂತಹ ಅವಕಾಶ ಸಿಗುತ್ತದೆ. ಅದೇ ಅಲ್ಲವೇ ಪ್ರವಾಸದ ಉದ್ದೇಶಗಳು? ಒಡಿಶಾದ ಮತ್ತು ಬೆಂಗಾಲದ ಸಾಂಪ್ರದಾಯಿಕ ಶೈಲಿಯಲ್ಲಿ ರೂಪುಗೊಂಡ ಮುಖ್ಯ ಚಿತ್ರಕಲಾ ಮಾದರಿ - ಪಟ್ಟಚಿತ್ರ. ೫ನೇ ಶತಮಾನದಲ್ಲಿದ್ದ ಹಿಂದೂ ಸಾಂಪ್ರದಾಯಿಕ ವರ್ಣ ಚಿತ್ರಕಲೆ. ಪಟಚಿತ್ರ ವರ್ಣಚಿತ್ರವನ್ನು ಬಟ್ಟೆಯ ತುಂಡಿನ ಮೇಲೆ ಅಂಟು ಬಳಸಿ ತಯಾರು ಮಾಡಲಾಗುವ ದಪ್ಪನೆಯ ಹಾಳೆಯ ಮೇಲೆ ಮಾಡಲಾಗುತ್ತದೆ. ಧಾರ್ಮಿಕ ಅದರಲ್ಲಿಯೂ ಹೆಚ್ಚಾಗಿ ಕೃಷ್ಣನ ಲೇಲೆ, ಅವತಾರಗಳು, ಪುರಿ ಜಗನ್ನಾಥ, ವಿಷ್ಣುವಿನ ಅವತಾರಗಳು ಮತ್ತು ಇನ್ನಿತರ ಬುಡಕಟ್ಟು ವಿಷಯಗಳೇ ಮುಖ್ಯವಾದವುಗಳು. ಅದರಲ್ಲೂ ಕೃಷ್ಣನ ರಾಸಲೀಲೆ, ಬಾಲ್ಯ ಕಥನ, ದಶಾವತಾರ ಸರಣಿಗಳು. ಜಗನ್ನಾಥ-ಸುಭದ್ರ-ಬಲಭದ್ರರ ಚಿತ್ರವಂತೂ ಎಲ್ಲ ವರ್ಣರಂಜಿತ ಅವತಾರಗಳಲ್ಲಿ ಇತ್ತು. ಈ ಕಲೆಯಲ್ಲಿ ಕುಶಲಕರ್ಮಿ ಮತ್ತು ಆತನ ಕಲ್ಪನೆಯ ಶ್ರೇಷ್ಠತೆಯನ್ನು ನಾವು ಕಾಣಬಹುದಾಗಿದೆ. ಒಂದಕ್ಕಿಂತ ಒಂದು ಕಣ್ಣುಸೆಳೆಯುವ ಅದ್ಭುತ ಚಿತ್ರಕಲೆ! ಅದೆಷ್ಟೋ ದೊಡ್ಡ ದೊಡ್ಡ ಚಿತ್ರಕಲೆಗಳ ಗಾಜಿನ ಚೌಕಟ್ಟು ಹಾಕಿಸಿ ಇಟ್ಟಿದ್ದರು. ಇನ್ನೂ ನೂರಾರು ಬಟ್ಟೆಯ ಸುರುಳಿ ಸುತ್ತಿಟ್ಟ ಕಲಾಚಿತ್ರಗಳಿದ್ದವು. ಒಂದೊಂದೇ ಸುರುಳಿ ಬಿಚ್ಚಿ ಅವುಗಳ ಪೌರಾಣಿಕ ಹಿನ್ನೆಲೆ ಕಥೆ ಸಹಿತವಾಗಿ ಅದರ ಪ್ರಾಮುಖ್ಯತೆ ತಿಳಿಸಿದರು. ರೇಷ್ಮೆಯ ಬಟ್ಟೆಯ ಮೇಲೂ ತೆಳುವಾದ ಕುಂಚಗಳಿಂದ ಪೈಂಟ್ ಮಾಡಿದ್ದ ಸಣ್ಣ ದೊಡ್ಡ ಚಿತ್ರಕಲೆಗಳೂ ಕೂಡ ಅವರಲ್ಲಿ ಲಭ್ಯವಿತ್ತು. ಕಡಿಮೆ ಬೆಲೆಗೆ ಕೇಳಿ ಪಡೆಯುವ ಗ್ರಾಹಕರು ಬಟ್ಟೆಯ ಮೇಲೆ ಪ್ರಿಂಟೆಡ್ ಡಿಸೈನ್ಸ್ ಗಳನ್ನೂ ಕೇಳಿ ಪಡೆದು ತೆಗೆದುಕೊಂಡು ಹೋಗುತ್ತಾರೆ ಅಸಲಿ ಚಿತ್ರಗಳನ್ನು ಅದರ ಪ್ರಾಮುಖ್ಯತೆ ಅರಿತವರೇ ಸರಿಯಾದ ಬೆಲೆ ಕೊಟ್ಟು ಕೊಳ್ಳುತ್ತಾರೆ ಎಂಬ ಸತ್ಯವನ್ನೂ ಕಲಾವಿದೆಯಾದ ನನ್ನ ಬಳಿ ಹಂಚಿಕೊಂಡರು. ಜನರ ಬೇಡಿಕೆಗೆ ತಕ್ಕಂತೆ ಸರಕು! ನನ್ನ ಮಗಳಿಗೆ ಕೃಷ್ಣ ಪ್ರಿಯವಾದವನಾದ್ದರಿಂದ, ಕೃಷ್ಣನ ಕುರಿತಾದ ಒಂದೆರಡು ಪೇಂಟಿಂಗ್ಗಳನ್ನು ಅವಳ ಇಚ್ಛೆಯಂತೆಯೇ ಖರೀದಿಸಿದೆವು. ತಾಳೆ ಗರಿಯ ಮೇಲೆ ಸೂಕ್ಷ್ಮ ಚಿತ್ರ ಕೆತ್ತನೆಗಳ ಕಿರು ಪರಿಚಯ ಸಿಕ್ಕಿತು. ತನ್ನ ಆಪ್ತರಿಗೆ ಸಗಣಿಯಿಂದ ತಯಾರು ಮಾಡಿದ ಗೊಂಬೆಗಳ ಮಗಳು ಆಯ್ಕೆ ಮಾಡಿ ಕಾಯ್ದಿರಿಸಿಕೊಂಡಳು. ೩೦ ರೂಪಾಯಿಗಳಿಂದ ಹಿಡಿದು ೫೦ ಸಾವಿರದ ವರೆಗಿನ ಬೆಲೆಯ ಕಲಾವಸ್ತುಗಳು ಅಲ್ಲಿ ಲಭ್ಯ..




ಅಲ್ಲಿಂದ ಮುಂದಕ್ಕೆ ಹೊರಟು ಬೀದಿಗೆ ಇಳಿದ ಕೂಡಲೇ, ಗ್ರಾಮದ ಅನೇಕ ಜನರು ತಮ್ಮ ತಮ್ಮ ಮನೆಯ ಕಾಲಾವಸ್ತುಗಳ ನೋಡಿ ಹೋಗಲು ದುಂಬಾಲು ಬೀಳುವುದು ಕಿರಿಕಿರಿಯಾದರೂ ಅವರ ದುಡಿಮೆಗೋಸ್ಕರ ಸರ್ವೇ ಸಾಮಾನ್ಯವದು ಎನಿಸಿತು. ಹಾಗೆಯೆ ಇನ್ನೊಬ್ಬರ ಮನೆಗೆ ಹೊಕ್ಕು ಅಲ್ಲಿಯೂ ಸಾಕಷ್ಟು ಪಟಚಿತ್ರಗಳನ್ನು ಗಮನಿಸಿ ಅಲ್ಲೊಂದೆರಡು ಚಿತ್ರಗಳ ಖರೀದಿ ಮಾಡಿದೆವು. ಅಲ್ಲಿಯ ಕಲಾವಿದರೊಬ್ಬರು , ತಾನು ಪ್ರತಿ ವರ್ಷ ಬೆಂಗಳೂರಿನ ಚಿತ್ರಕಲಾ ಪರಿಷತ್ ನಡೆಸುವ ಚಿತ್ರಸಂತೆಗೆ ತಪ್ಪದೆ ಭಾಗವಹಿಸುತ್ತೇನೆ ಎಂದೂತಿಳಿಸಿದರು. ಜಗನ್ನಾಥ ದೇವಸ್ಥಾನದ ರಥಯಾತ್ರೆಗೆ ಈ ಊರಿನ ಕಲಾವಿದರನ್ನೇ ಕರೆಯಿಸಿ ಛಾವಣಿ ಮತ್ತು ಛತ್ರಿಗಳ, ಗೋಡೆಗಳ ಪೇಂಟಿಂಗ್ ಗಳ ಕೆಲಸ ಮಾಡಿಸಲಾಗುತ್ತದೆ  ಎಂದು ಕೆಲವು ಕಲಾವಿದರಿಂದ ತಿಳಿದ ಮಾಹಿತಿ. ಪ್ರತಿಯೊಬ್ಬರ ಮನೆಯಲ್ಲಿಯೂ ಕಲೆಗೆ ಸಂಬಂಧ ಪಟ್ಟಂತೆ ತಮ್ಮ ಮನೆ ಮಂದಿಯರೆಲ್ಲರ ಪೇಂಟಿಂಗ್ ಕುರಿತಾಗಿ ತಿಳಿಸುವುದು ಸಾಮಾನ್ಯ. ತಮ್ಮ ಅಮ್ಮ, ಅಜ್ಜ ಅಜ್ಜಿ ರಚಿಸಿದ ಚಿತ್ರಗಳು ಎಂಬ ಭಾವನಾತ್ಮಕ ವಿಷಯಗಳ ಉಲ್ಲೇಖಿಸುವಾಗ ಅಲ್ಲಿನ ಪಾರಂಪರಿಕತೆಯ ಕುರಿತಾಗಿ ಆಶ್ಚರ್ಯವಾಗುತ್ತದೆ. ಹಲವರು ತಮ್ಮ ಕೆಲಸಕ್ಕೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.




ಎಲ್ಲರದ್ದೂ ಸಾಧಾರಣ ಮಹಡಿಯ ಅಂತಸ್ತಿಲ್ಲದ ಮನೆಗಳು ಆದರೆ ಪ್ರತಿಯೊಬ್ಬರ ಮನೆಯೂ ಆರ್ಟ್ ಸ್ಟುಡಿಯೋ ಎಂದರೆ ತಪ್ಪಾಗಲಾರದು. ಮನೆಗಳ ಮೇಲೆ ಚಿತ್ರಿಸಿದ ಸ್ಥಳಿಯ ಕಲೆಗಳು ಆಕರ್ಷಕವಾಗಿವೆ, ಮನೆಯ ಗೋಡೆ, ಮೆಟ್ಟಿಲುಗಳು, ಕಟ್ಟೆ, ಕಿಟಕಿ ಚೌಕಟ್ಟಿನ ತುಂಬಾ ಧಾರ್ಮಿಕ ಮೋಹಕ ಪಟ್ಟ ಚಿತ್ರ ವಿನ್ಯಾಸಗಳೇ ತುಂಬಿವೆ! ಎಲ್ಲರ ಮನೆಯ ಗೋಡೆ,. ಕಟ್ಟೆ ನೋಡುತ್ತಾ ಹೋದರೂ ಸಾಕು ಒಂದು ಸಾಂಪ್ರದಾಯಿಕ ವರ್ಣಚಿತ್ರ ಶೈಲಿಯ ಕಲಾಪ್ರದರ್ಶನ ನೋಡಿದಂತೆ ಅನಿಸುತ್ತಿತ್ತು. ಪಂಚತಂತ್ರ ಪ್ರಾಣಿಗಳ ನೀತಿಕಥೆಗಳು ಇಲ್ಲಿ ಕಾಣಸಿಗುತ್ತವೆ. ಧಾರ್ಮಿಕ ಗ್ರಂಥಗಳಿಂದ ಕಥೆಗಳನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಮದುವೆ ಕಾರ್ಯಕ್ರಮವಾದ ಮನೆಗಳ ಗೋಡೆಯ ಮೇಲೆ ಮದುವೆಯಾದವರ ವಿವರಣೆ ನೀಡುವ ಚಿತ್ರಮಾದರಿಯೂ ಕೆಲವೆಡೆ ಇತ್ತು. ಯಾರ ಮನೆ ಒಳಗೆ ಹೊಕ್ಕರೂ, ಕಣ್ಣು ಹಾಯಿಸದಲ್ಲೆಲ್ಲ ವರ್ಣರಂಜಿತ ಕಲಾವಸ್ತುಗಳ ಪ್ರದರ್ಶನ. ಪಟ್ಟ ಚಿತ್ರಗಳ ಹೊರತಾಗಿ, ಕರಕುಶಲಗಳ ಭಂಡಾರವೇ ಇರುತ್ತದೆ. ಕೈಯಲ್ಲಿ ಪೈಂಟ್ ಮಾಡಿದಂತಹ ವೈವಿಧ್ಯಮಯ ಹೋಂ ಡೆಕೋರ್ ವಸ್ತುಗಳು, ಮುಖವಾಡಗಳು, ಕೀಚೈನ್, ಪೆನ್ನು ಪೆಣ್ ಸ್ಟಾಂಡ್ ಎಲ್ಲದರ ಮೇಲೂ ವರ್ಣರಂಜಿತ ಪೇಂಟಿಂಗ್ಗಳು. ತಾಳೆ ಗರಿಯ ಮೇಲೆ ಸೂಕ್ಷ್ಮ ಚಿತ್ರ ಕೆತ್ತನೆಗಳು, ತೆಂಗಿನ ಕೊಬ್ಬರಿಯ ಮೇಲೆ ಪೈಂಟ್ ಆದ ದೃಷ್ಟಿ ಬೊಂಬೆಗಳು, ಕಲ್ಲಿನ ಶಿಲ್ಪ, ಮರದ ಕೆತ್ತನೆಗಳು ಮತ್ತು ಮರದ ಆಟಿಕೆಗಳು, ಸಗಣಿಯಿಂದ ತಯಾರಾದ ಬೊಂಬೆಗಳು ಗ್ರಾಮದ ತುಂಬಾ ಎಲ್ಲರ ಮನೆಯಲ್ಲಿ ಲಭ್ಯ.

ವಾಣಿಜ್ಯೋದ್ಯಮ ಬೆಳೆದಿದ್ದರೂ, ಕಲಾಸಕ್ತರು ಯಾರೇ ಇದ್ದರೂ ಒಮ್ಮೆ ಭೇಟಿ ನೀಡಲೇ ಬೇಕಾದ ಸ್ಥಳವಿದು. 


















ಗುರುವಾರ, ಡಿಸೆಂಬರ್ 14, 2023

ಸೋಲಲಿ ಮಕ್ಕಳ ಸೋಲಿನ ಭಯ

ಮಗು ಬಿಸಿನೀರ ಕಾಯಿಸಿ, ಇಕ್ಕಳದಿಂದ ಲೋಟಕ್ಕೆ ನೀರನ್ನು ಎರಸುವಾಗ, ನೀರು ಕೆಳಗೆ ಚೆಲ್ಲಿತೋ.. "ನೀರು ಚೆಲ್ಲಿದ್ಯಾ? ಎದ್ದೇಳು ಮಾರಾಯ್ತಿ, ನಾನು ಮಾಡಿ ಕೊಡ್ತೀನಿ, ನಿಂಗೆ ಒಂದು ಕೆಲಸವೂ ನೆಟ್ಟಗೆ ಮಾಡಲು ಬರುವುದಿಲ್ಲ. ಸುಮ್ನೆ ನನಗಿಲ್ಲಿ ಒಂದಷ್ಟು ತೊಂದರೆ ಕೊಡಕ್ಕೆ.. "

ಆಟದಲ್ಲಿ ನಾಲ್ಕು ರೌಂಡ್ ಭಾಗವಹಿಸಿ, ಐದನೇ ರೌಂಡ್ ಗೆ ಸೋಲಾಗಿ ಬಂದ ಮಗುವಿಗೆ, "ಇನ್ನೊಂಚೂರು ಗಮನ ಇಟ್ಟು  ಆಡಿದ್ರೆ ಏನಾಗ್ತಿತ್ತು ನಿಂಗೆ? ಅಲ್ಲಿ ಇಲ್ಲಿ ನೋಡ್ತಾ ಕೂರ್ತೀಯ ಲೇಜಿ ತರ, ಏನ್ ಪ್ರಯೋಜನ ಈಗ ಅತ್ರೆ, ಸೀರಿಯಸ್ ಇಲ್ಲ ನೀನು ಸ್ಪೋರ್ಟ್ಸ್ ಕಡೆ, ಈ ಚಂದಕ್ಕೆ ಕೋಚಿಂಗ್ ಯಾಕೆ ನಿಂಗೆ? ಎಲ್ಲ ದುಡ್ಡು ವೇಸ್ಟ್"

"ಅಯ್ಯೋ ಅಲ್ಲಿ ಹತ್ತಬೇಡ, ಬಿದ್ದೋಗ್ತೀಯ, ಬಿದ್ದರೆ ನಾನು ಬರಲ್ಲ ಆಮೇಲೆ ಎತ್ತಕ್ಕೆ"

"ಚೆನ್ನಾಗಿ ಓದಿದ್ದೆಅಂತೀಯಾ,  ಎಕ್ಷಾಮ್ ಟೆನ್ಶನ್ ಮಾಡ್ಕೊಂಡ್ರೆ ಇನ್ನೇನಾಗತ್ತೆ, ಈಗ ಇಲ್ಲಿ ಆನ್ಸರ್ ಬರ್ತ್ತಿತ್ತು ಅಂದ್ರೆ ಏನು ಪ್ರಯೋಜನ, ಯು ಜಸ್ಟ್ ಲಾಸ್ಟ್ ಯುವರ್ ಗೋಲ್ಡನ್ಚಾನ್ಸ್" 

"ಅಯ್ಯೋ ಏನು ಕೆಟ್ಟವರು ಆ ಕೋಚ್, ಕೈ ಕಾಲಿಗೆ ನೋವಾಗಿದೆ ಅಂತಿದಾಳೆ ಮಗಳು, ಆದ್ರೂನೂ ಆಡು ಅಂತಾರಲ್ಲ, ಸ್ವಲ್ಪನೂ ಕರುಣೇನೇ ಇಲ್ಲ. ಇದೇ ತರ ನೋವಾಗಿ ನೋವಾಗಿ ಕೈ ಕಾಲು ಮುರ್ಕೊಂಡ್ರೆ?" 

"ಲಕ್ಷಗಟ್ಟಲೆ ದುಡ್ಡು ಕೊಟ್ಟು ಇಷ್ಟು ಫೇಮಸ್ಸ್ಕೂಲ್ ಗೆ ಹಾಕಿದೀವಿ,  ಗೇರ್ ಸೈಕಲ್, VR ಗೇಮ್ಸು, ಎಲ್ಲಾ ಕೊಟ್ಟಾಯ್ತು ನೀನು ಖುಷಿಗೆ, ಇನ್ನು ಒಳ್ಳೆ ಮಾರ್ಕ್ಸ್ ಬಂದಿಲ್ಲ ಅಂದ್ರೆ, ನಮ್ಮ ಲೇಔಟ್, ಅಪ್ಪನ ಕೋರ್ಟ್ ಕೊಲೀಗ್ಸ್ ಎಲ್ಲರ ಮುಂದೆ ಅವಮಾನ. ಜುಡ್ಜ್ ರಮಾನಂದ್ ಅವರ ಮಗ ಅಂದ್ರೆ ಎಲ್ಲ  ೧೦೦% ಮಾರ್ಕ್ಸ್ ಇರ್ಬೇಕು ಏನು ಗೊತ್ತಾಯ್ತಲ್ಲ?? "

ಇಂತವು ಅದೆಷ್ಟು ಮಾತು ನಾವು ನಿತ್ಯ ಮಕ್ಕಳಿಗೆ ಆಡುತ್ತೇವೆ. ಆಟದಲ್ಲಿ-ಪಾಠದಲ್ಲಿ ಸೋತಾಗ, ಮಕ್ಕಳ ಪ್ರಯತ್ನವನ್ನು ಮೊದಲು ಸಂಭ್ರಮಿಸದೇ,ಅವರ ತಯಾರಿಯ ಗುಣಮಟ್ಟವನ್ನು ಅರಿಯದೆ, ಒಮ್ಮೆಲೇ, ಫಲಿತಾಂಶ ಬಂದಾಗ, ಸೋತರೆ - ಬೈಗುಳ ನೀಡಿ, ಅವಮಾನ ಮಾಡಿ, ಸೌಲಭ್ಯಗಳ ಹಿಂಪಡೆದು, 'ಸೋಲೆಂದರೆ ಭಯ' ಎನ್ನುವಂತೆ ಮಾಡುವುದು ನಾವೇ ಅಲ್ಲವೇ? 

ಸೋಲು ಯಾರಿಗೆ ತಾನೇ ಇಷ್ಟವಾಗುತ್ತದೆ? ಉಸಿರಿಗೆ ಉಸಿರು ಹಿಡಿದು ಸ್ಪರ್ಧಿಸಿ, ಒಂದೇ ಒಂದು ಗೋಲಿನಲ್ಲಿ ಸೋತಾಗ, ಒಂದೇ ಒಂದು ಮಾರ್ಕ್ಸ್ನಲ್ಲಿ ಫೇಲ್ ಆದಾಗ, ಒಂದೇ ಒಂದು ತಪ್ಪು ಉತ್ತರದಿಂದ, ಸಂಬಂಧವನ್ನು ಕಳೆದುಕೊಂಡಾಗ, ಸೋಲು ಹಿಂಸೆಯೆನಿಸುತ್ತದೆ. ಗೆದ್ದವನ ಏಕಪಕ್ಷೀಯ ಸಂಭ್ರಮದ ಎದುರು, ಸೋಲು ನಮ್ಮನ್ನು ನಿಷ್ಕ್ರೀಯಗೊಳಿಸುತ್ತದೆ. ಸೋತಾಗ ಗೆಳೆಯರೆದುರು ಅವಮರ್ಯಾದೆಯಾಗುತ್ತದೆ. ನಾವಿಷ್ಟ ಪಡುವ ಜನರು ನಮ್ಮಿಂದ ದೂರವಾಗಿ ಗೆದ್ದವರ ಪರವಾಗುತ್ತಾರೆ, ನಿರೀಕ್ಷಕರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡು, ಆ ವರೆಗೆ ಸಿಗುತ್ತಿದ್ದ ಸೌಲಭ್ಯಗಳೆಲ್ಲ ನಮ್ಮ ಕೈತಪ್ಪಿ ಹೋಗಬಹುದು. ಜನರ ಮಧ್ಯೆ ಒಪ್ಪಿಗೆಯ ವ್ಯಕ್ತಿಯಾಗದೆ, ಬೈಯಿಸ್ಸಿಕೊಳ್ಳಬಹುದು. ಮಾಡಿದ ತಪ್ಪಿಗೆ ಅನ್ಯ ಪರಿಹಾರವಿಲ್ಲ ಎಂದು ಜರ್ಜರಿತಗೊಂಡು, ಬದುಕು ಅಂತ್ಯವೆನಿಸಬಹುದು. ಆ ಕ್ಷಣದ ಅನುಭವಗಳು ಇವುಗಳಾದರೆ, ಸೋಲನ್ನು ಕೊರಗುವಂತೆ ಮಾಡುವ ಮತ್ತೊಂದಷ್ಟುಸಮಸ್ಯೆಗಳಿರುತ್ತವೆ. ಉದಾಹರಣೆಗೆ,  ಸೋತಾಗ 'ನಾನು ನಾಲಾಯಕ್ಕು' ಎಂಬ ಸ್ವಯಂ ತೀರ್ಪು, ತನ್ನ ಗೆಲುವಿನ ಕುರಿತಾಗಿ ಇತರರಿಗಿರುವ ನಿರೀಕ್ಷೆಗೆ ಉತ್ತರವಿಲ್ಲದ ಆತಂಕ, ಹೊಸಪ್ರಯತ್ನಕ್ಕೆ ಹೆದರಿಕೆ, ಅವಮರ್ಯಾದೆ, ಸಿಟ್ಟು, ಸ್ವಂತಿಕೆ ಇಲ್ಲದೇ ಇರುವುದು, ಛಲದ ಸ್ವಭಾವದ ಕೊರತೆ, ಇತ್ಯಾದಿ ದೊಡ್ಡ ಪ್ರಮಾಣದ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು. 


ಸೋಲಿನ ಭಯ ಹೋಗಲಾಡಿಸುವ ಬಗೆ :

ಸೋಲನ್ನು ಸಂಭ್ರಮಿಸುವುದ ಕಲಿಸಬೇಕು - ಮಗುವೊಂದು ಸೋತು ಮರಳಿದಾಗ ಬೈಯದೆ, ಮಗುವು ಆ ಸ್ಪರ್ಧೆಗೆ ಆಯ್ಕೆಗೊಂಡಿದ್ದಕ್ಕೆ, ಮುಂದೆ ಹೋಗಿ ಪ್ರಯತ್ನಿಸಿದ್ದಕ್ಕೆ, ಸೋಲುವ ಹಂತದವರೆಗೆ ತನ್ನ ಛಲವನ್ನು ಕಾಪಾಡಿಕೊಂಡ ಬಗ್ಗೆ , ಇತ್ಯಾದಿ ವಿಷಯಗಳ ಕುರಿತು, ಮಗುವಿನ ಸಾಮರ್ಥ್ಯಕ್ಕಿಂತಲೂ ಮೊದಲು ಪ್ರಯತ್ನಕ್ಕೆ ಪ್ರಶಂಸಿಸಿ, ಧನಾತ್ಮಕ ಅಭಿಪ್ರಾಯ ನೀಡಿ ಗೌರವಿಸಬೇಕು. ನಮ್ಮ ಪ್ರೀತಿ ಮಕ್ಕಳಿಗೆ ಅವಿರತ. ಸ್ಪರ್ಧೆಯ ಮೇಲಿನ ಫಲಿತಾಂಶದ ಮೇಲೆ ಪ್ರೀತಿ ಆಧಾರಿತ ಎಂಬ ಅಭದ್ರತೆ ಮಗುವಿಗೆ ಬರಬಾರದು. ನಂತರ ಸೋತಿದ್ದಕ್ಕೆ ಕಾರಣ, ತಪ್ಪುಗಳ ಲಿಸ್ಟ್, ಕಲಿಕೆಗೆ ಬೇಕಾದ ಅಗತ್ಯತೆ ಇತ್ಯಾದಿ ಕುರಿತಾಗಿ ಸಂಭಾಷಣೆ ನಡೆಸಬಹುದು.  

ಸೋಲಿನ ಅನುಭವ ಕಥನ - ಮಗುವಿನ ಎದುರು ಪೋಷಕರಾಗಿ ನಾವು ಹೀರೋಗಳಾಗಿರಬೇಕು ಎಂದು, ಕೇವಲ ನಮ್ಮ ಗೆಲುವು, ಪ್ರಸಿದ್ಧತೆ, ಜನರ ಹೊಗಳಿಕೆ, ಪ್ರತಿಷ್ಠೆಯನ್ನಷ್ಟೇ ಬಿಂಬಿಸುತ್ತ ಹೋಗುತ್ತೇವೆ.  ಬದಲಿಗೆ ಹಿಂದೆ  ನಾನೆಲ್ಲಿ ಎಡವಿದ್ದೆ, ಯಾವ ತಪ್ಪಿನಿಂದ ನನಗೆ ತೊಂದರೆಯಾಯಿತು ಮತ್ತು ಅದರಿಂದ ನಾನು ಹೇಗೆ ಹೊರಗೆ ಬಂದೆ ಇತ್ಯಾದಿ ಭಯ ಮತ್ತು ಸ್ಪಷ್ಟ ತಪ್ಪುಗ್ರಹಿಕೆಗಳ ಬಗ್ಗೆ ನಮ್ಮದೇ ಅನುಭವವನ್ನು  ಮಗುವಿನೊಂದಿಗೆ ಹಂಚಿಕೊಳ್ಳುವುದರಿಂದ, ಮಕ್ಕಳಲ್ಲದೆ ದೊಡ್ಡವರೂ ಕೂಡ ತಪ್ಪು ಮಾಡುತ್ತಾರೆ ಎಂಬ ಅರಿವು ಸಿಕ್ಕಿ, ಸೋಲು ಜಗದ ಅಂತ್ಯವಲ್ಲ ಎಂಬ ಭರವಸೆ ಮಗುವಿನಲ್ಲಿ ಮೂಡುತ್ತದೆ.  

ಸೋಲು, ಹಿನ್ನಡೆ ಎಲ್ಲವೂ ಬೆಳವಣಿಗೆಯ ಒಂದು ಭಾಗ -  ಮಗುವಿನ ಕೆಲಸಗಳಲ್ಲಿ ತಪ್ಪಾದಾಗ,  ಯಾವುದೇ ರೀತಿಯ ನಡುವಳಿಕೆಯ ಕುರಿತಾಗಿ ಕಾಮೆಂಟ್ ಮಾಡದೆ, ಸೋಲುಂಡು ನಂತರ ಯಶಸ್ಸನ್ನು ಕಂಡ ನಮ್ಮದೇ ಸುತ್ತಮುತ್ತಲಿನ ಜನರ ಉದಾರಹರಣೆ ನೀಡುತ್ತಾ ಆ ತಪ್ಪಿನ ಸಂದರ್ಭವನ್ನೇ ತಿಳಿಹಾಸ್ಯವಾಗಿಸಿ, ನಂತರಕ್ಕೆ ಮುಂದೇನು ಮಾಡಬಹುದು ಎಂಬುದ ಅವರಿಂದಲೇ ಕೇಳಿ, ತಿಳಿದಿಲ್ಲವಾದರೆ ತಿಳಿಸಿ ಕೊಡಬಹುದು. ಆಗ ಮಗುವಿಗೆ ಸೋಲನ್ನು ಒತ್ತಡವಾಗಿ ತೆಗೆದುಕೊಳ್ಳುವ ಪರಿಪಾಠ ತಪ್ಪುತ್ತದೆ.  

ಸೋಲನ್ನು ಒಪ್ಪಿಕೊಳ್ಳುವುದು - ತಪ್ಪು ಒಪ್ಪಿಕೊಂಡರೆ ಅದು ಕೀಳಲ್ಲ, ನಾವು ಕೆಟ್ಟವರಾಗುವುದಿಲ್ಲ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಕಂಡ ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಮಕ್ಕಳಿಗೆ ಕಲಿಸದಿದ್ದರೆ, ಸೋಲನ್ನು ಒಪ್ಪಿಕೊಳ್ಳಲಾಗದೆ, ಇತರರ ಮೇಲೆ ಅನ್ಯಥಾ ಆರೋಪ ಹೊರಿಸುವ, ಸುಳ್ಳು ಕಳ್ಳತನ ಮೋಸ ಮಾಡುವ ಹಾದಿಗೆ ಮಕ್ಕಳು ಇಳಿಯುತ್ತಾರೆ.  ತಪ್ಪು ಒಪ್ಪಿಕೊಂಡಾಗ ಗುಡ್ ಎಂದು ಒಂದು ಬೆನ್ನು ತಟ್ಟುವಿಕೆ ಇತ್ಯಾದಿ ಬೆಂಬಲ ನಾವು ನೀಡಬಹುದು. 

ಸಕಾರಾತ್ಮಕ ತಯಾರಿ - ಸಮರ್ಪಕವಾದ ತಯಾರಿ ಇಲ್ಲದಿದ್ದಲ್ಲೇ ಆತ್ಮವಿಶ್ವಾಸದ ಕೊರತೆಯಿಂದ ಮಕ್ಕಳಿಗೆ ಸೋಲಿನ ಆತಂಕ ಮೂಡುತ್ತದೆ. ಅಗತ್ಯ ತರಬೇತಿ, ನಿಯಮಿತ ತಯಾರಿ, ಆಗಾಗ ಪರೀಕ್ಷೆ ಹೂಡಿ ಗುಣಮಟ್ಟ ಪರಿಶೀಲನೆ ಇತ್ಯಾದಿ ಕ್ರಮಗಳ ಮೂಲಕ, ಮಕ್ಕಳನ್ನು ಮಾನಸಿಕವಾಗಿ ತಯಾರು ಮಾಡಿದರೆ, ಸೋಲಿನ ಆತಂಕ ಮಕ್ಕಳಲ್ಲಿ ಹೆಚ್ಚಾಗುವುದಿಲ್ಲ.  

ಅನೇಕ ಸಾರಿ ಮಕ್ಕಳ ಸೋಲಿನ ನೋವಿಗಿಂತಲೂ,  ಅವರ ಆ ಸ್ಪರ್ಧೆಯ ಪರೀಕ್ಷೆಯ ತಯಾರಿಗೆ, ನಾವು ತೆಗೆದುಕೊಂಡ ಶ್ರಮಕ್ಕೆ ಪ್ರತಿಫಲ ಸಿಗದ ಹತಾಶೆಗೆ ನಾವು ಆತಂಕವನ್ನು ನಿರ್ವಹಿಸಿಕೊಳ್ಳಲಾಗದೆ, ನಮ್ಮ ಮರ್ಯಾದೆಯನ್ನು ಮಕ್ಕಳ ಮರ್ಯಾದೆಗೆ ಜೋಡಿಸಿ, ಬೈದು ಅವಮಾನ ಮಾಡುತ್ತೇವೆ . ಮಕ್ಕಳ ಸೋಲಿನ ಸಮಯದಲ್ಲಿ ನಮ್ಮ ಪ್ರತಿಕ್ರಿಯೆಯನ್ನು ಗಮನಿಸಿಕೊಂಡು, ಅವಾಸ್ತವಿಕ ನಿರೀಕ್ಷೆ ಇಟ್ಟುಕೊಂಡು ಮಗುವಿಗೆ ಒತ್ತಡ ನೀಡದೆ, ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ಪ್ರಯತ್ನಿಸಿದ್ದಾರೆ ಎಂಬ ಧನಾತ್ಮಕ ಸಮಾಧಾನ ತಂದುಕೊಳ್ಳಬೇಕು. 

ಪ್ರತಿಯೊಂದು ಮಗುವೂ ಅನನ್ಯ. ಎಲ್ಲಾ ವಿಷಯಕ್ಕೂ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ.  ಎಲ್ಲದರಲ್ಲಿ ಸಾಧ್ಯವಾಗದಿದ್ದರೂ , ಮಗುವು ಕೌಶಲ್ಯವನ್ನು ಹೊಂದಿರುವ ವಿಷಯಗಳ ಹುಡುಕಿ, ಪ್ರೋತ್ಸಾಹ ನೀಡಿದರೆ, ಆಗಾಗ್ಗೆ ಅವರ ಐಚ್ಛಿಕ ವಿಷಯಗಳಲ್ಲಿ ಅವರ ವೃದ್ಧಿಯನ್ನು ಕಂಡು ಪ್ರಶಂಸಿದರೆ, ಆಗ ಅವರ ಆತ್ಮವಿಶ್ವಾಸ ಹೆಚ್ಚಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆಸಹಾಯಕವಾಗುತ್ತದೆ . ಮಕ್ಕಳ ಕಲಿಕೆಗೆ  ಶ್ರದ್ಧೆಯಿಂದ ತಯಾರೀ ಮಾಡುವ ಕಡೆಗೆ ನಮ್ಮ ಬೆಂಬಲ ನೀಡಬೇಕೆ ಹೊರತು, ಮಕ್ಕಳಿಂದಾಗದ ಸಾಮರ್ಥ್ಯದ ಕೆಲಸಕ್ಕೆ ದೂಷಿಸುವುದು ಸಲ್ಲ. 

ಮಕ್ಕಳನ್ನು ಹೆಚ್ಚು ರಕ್ಷಣಾತ್ಮಕವಾಗಿ ಬೆಳೆಸದೇ, ನೈಜ ಜಗತ್ತಿನಲ್ಲಿ ಬದುವುದಕ್ಕೆ ಅವಕಾಶ ಮಾಡಿಕೊಡಬೇಕು. ಏಳು ಬೀಳುಗಳು ಗಾಯ ನೋವುಗಳು, ಸಣ್ಣ ಪುಟ್ಟ ಅವಮಾನಗಳು ಎಲ್ಲವನ್ನೂ ಮಕ್ಕಳು ಅನುಭವಿಸಬೇಕು. ಜನರೊಂದಿಗೆ ಬೆರೆತು ಆಡುವ ಕಲಿಯುವ ಒಡನಾಟ ಸಿಕ್ಕರೆ, ಸೋಲುಂಡರೂ ಮಕ್ಕಳು ಇತರರ ಅನುಭವನನ್ನೂ ಗ್ರಹಿಸುವುದರಿಂದ, ಹೆಚ್ಚು ಕೊರಗಿ ಕ್ಷೀಣಿಸುವುದಿಲ್ಲ. 

ಪರೀಕ್ಷೆ ಭಯ ಹೋಗಲಾಡಿಸಲು, ಅಂಕಗಳಿಗಾಗಿ ಓದು ಅಲ್ಲ, ಜ್ಞಾನ ಪಡೆಯಲಾಗಿ ಶಿಕ್ಷಣ, ತಪ್ಪಾದರೆ ಮತ್ತೆ ಕಲಿಯೋಣ ಎಂಬ ಧೈರ್ಯ ನೀಡಬೇಕು.  ಮಕ್ಕಳು ಭಯಪಡುವ ಚಟುವಟಿಕೆಗಳಲ್ಲಿ ಅವರೊಂದಿಗೆ ಸಹಾಯಕ್ಕೆ ನಿಂತು ಅವರನ್ನು ತೊಡಗಿಸಿಕೊಳ್ಳಬೇಕು. ಸೋಲಲಿ ಮಕ್ಕಳು ಮೊದಲಿಗೆ, ಸೋತು ನಂತರ ಗೆಲ್ಲಲಿ. 


ಶುಕ್ರವಾರ, ನವೆಂಬರ್ 24, 2023

ಒಂದು ದ್ವೀಪದ ಕಥೆ!!


ಮಕ್ಕಳ ಪಾರ್ಕಿನಲ್ಲಿ ಮಗಳ ಆಟದ ದಿನಚರಿ. ಅಲ್ಲೊಂದು ಪುಟ್ಟ ಮಗು ಕಲ್ಲು ಮಣ್ಣುಗಳನ್ನು ಹೆಕ್ಕಿ ತಂದು ಜೋಡಿಸಿ ತನ್ನದೇ ಆದ ಆಟವನ್ನು ಆಡುತ್ತಿತ್ತು. ಅಣತಿ ದೂರದಲ್ಲಿ ಅವರಪ್ಪ ಫೋನಿನಲ್ಲಿ ಮಾತನಾಡುತ್ತಾ ಓಡಾಡುತ್ತಿದ್ದರು. ಮಗುವಿನ ಜೋಡಣಾ ಶೈಲಿ ನನಗಿಷ್ಟವಾಗಿ ಹೋಗಿ ಮಾತನಾಡಿಸಿ ಗೆಳೆತನ ಮಾಡಿಕೊಂಡೆ. ನಾಲ್ಕು ವರ್ಷದ ಹುಡುಗ ಅವನು. ಮಾಶಾ ಅಂಡ್ ದಿ ಬೇರ್ ಕಾರ್ಟೂನ್ ನಲ್ಲಿ ಬರುವ ಸಂದರ್ಭವನ್ನು ತನ್ನ ಮನಸ್ಸಿನಲ್ಲಿಟ್ಟುಕೊಂಡು, ಕ್ಯಾಂಪ್ಫೈರ್ ಗೆ ತಯಾರಿ ನಡೆಸುತ್ತಿದ್ದ. ಸರಿ, ಅವನ ಕಲ್ಪನೆಯ ಕಥೆಗೆ ತಕ್ಕಂತೆ , ಇಬ್ಬರು ಸೇರಿ ವಸ್ತುಗಳ  ಒಟ್ಟು ಮಾಡುವುದು ಇನ್ನಿತರ ಚಟುವಟಿಕೆ ನಡೆಸುತ್ತಾ ಹೋದೆವು. ನನ್ನ ಮಗಳಿಗೋ ವ್ಯಾಯಮದ ಪಾರ್ಕಿನಲ್ಲಿ ಕಸರತ್ತು ಮಾಡುವ ಹುಚ್ಚು. ಆದರೆ ಈ ಕಡೆಗೂ ಒಲವು. ಆಗಾಗ ಬಂದು ನಮ್ಮನ್ನು ಮಾತನಾಡಿಸುತ್ತಾ, ಕಥೆಯನ್ನು ಕೇಳುತ್ತಾ, ಮಧ್ಯೆಮಧ್ಯೆ ಸಹಾಯ ಮಾಡಿ ಹೋಗುತ್ತಿದ್ದಳು. ಇದ್ದಕ್ಕಿದ್ದಂತೆ, ಯಾವುದೋ ಒಂದು ದ್ವೀಪದಲ್ಲಿದ್ದ ನಾವು ಕ್ಯಾಂಪ್ ಫೈರ್ ತಯಾರಿ ನಡೆಸುತ್ತಿದ್ದವರು, ಹಾಸ್ಪಿಟಲ್ ಗೆ ಹೋಗುವ ಕಥೆಯ ಮೂಲಕ, ನಮ್ಮೆಲ್ಲ ಜೋಡಣೆಯನ್ನು ಆ ಹುಡುಗ ಬದಲಾಯಿಸುತ್ತಾ ಬಂದ. ಯಾವುದಕ್ಕೂ ಒಪ್ಪದಾದ. ನನಗೋ ಆ ಕಾರ್ಟೂನ್ ನ ಹಿಂದೆ ಮುಂದೆ ತಿಳಿಯದು. ನಾನು ಜೋಡಿಸಿಟ್ಟಿದ್ದನ್ನೆಲ್ಲ ಆತ ಮುರಿಯುತ್ತಿದ್ದ. ನಾನು ಕಷ್ಟಪಡುತ್ತಿದ್ದುದ್ದನ್ನು ಕಂಡು ಮಗಳು ಓಡಿಬಂದಳು. ಆಸ್ಪತ್ರೆಯ ಕಥೆ ಮಾಷಾ ಅಂಡ್ ದ ಬೇರ್ ನ ಇನ್ನೊಂದು ಎಪಿಸೋಡ್ ಎಂದು ಮಗಳು ತಿಳಿಸಿದಾಗ, ಮಗಳ ನಾಲ್ಕೈದು ವರ್ಷಗಳ ಹಿಂದಿನ ನೆನಪಿನ ಶಕ್ತಿಗೆ ಮೆಚ್ಚಿದೆ. ಆ ಹುಡುಗನಿಗೆ ಆಸ್ಪತ್ರೆಯ ಕಥೆ ಮತ್ತು ಫೈಯರ್ ಕ್ಯಾಂಪನ ಕಥೆ ಎರಡನ್ನೂ ಹೇಗೋ ಮಾಡಿ ಜೋಡಣೆ ಮಾಡಿಸಿ, ಮಗಳು ಆತನ ಮನವೊಲೈಸಿ, ನಮ್ಮ ಕಥಾ ಪ್ರಸಂಗದ ಜೋಡಣೆಗಳೆಲ್ಲ ಉಳಿಯುವಂತೆ ಮಾಡಿದಳು :) ದ್ವೀಪದೊಳಗೆ ಸಿಲುಕಿಕೊಂಡ ನಮ್ಮ ರಕ್ಷಣೆಗೆಂದು ಬರುವವರಿಗೆ ಗುರುತು ಕಾಣಿಸುವಂತೆ ಧ್ವಜ ಬಾವುಟವನ್ನು ತಯಾರು ಮಾಡಿಯೂ ಆಯ್ತು. ಒಳ್ಳೆಯ ಗಿರಿಕಿ ಎಲೆಗಳು ಸಿಕ್ಕಿದ್ದರಿಂದ ದ್ವೀಪದಲ್ಲಿ ನಾವಷ್ಟೇ ಅಲ್ಲದೆ, ಒಂದು ನಾಲ್ಕೈದು ಜನ ಸರ್ಫಿಂಗ್ ಗೆಳತಿಯರನ್ನೂ ಸೃಷ್ಟಿಸಲಾಯಿತು. ಜನಸಂಖ್ಯೆಗೆ ತಕ್ಕಂತೆ ಡೈನಿಂಗ್ ಟೇಬಲ್ ವಿಸ್ತರಣೆ ಕೂಡ ಮಾಡಲಾಯಿತು. ಹಾವು ಪಿರಾನಾ ಮೀನುಗಳನ್ನೆಲ್ಲಾ ಸೃಷ್ಟಿಸಲಾಯಿತು. ಆ ಹುಡುಗನ ಅಪೇಕ್ಷೆಯಂತೆ ಆ ದ್ವೀಪ ರಾತ್ರಿಯಲ್ಲಿ ಚೆನ್ನಾಗಿ ಕಾಣಲೆಂದು, ಸಮುದ್ರದಿಂದ ಅಂಡರ್ ಲೈಟ್ಸ್ ವ್ಯವಸ್ಥೆ ಕೂಡ ಮಾಡಲಾಯಿತು. ಮಕ್ಕಳು ಮಣ್ಣಾಡಲು ಕುಳಿತರೆ ಇತರ ಮಕ್ಕಳಿಗೂ ಆಕರ್ಷಣೆ ಸಹಜ. ಮತ್ತೊಂದೆರಡು ಸಣ್ಣ ಸಣ್ಣ ಮಕ್ಕಳು ಬಂದು ಹಾಗಾಗಿ ಕಲ್ಲು ಎಲೆ ಕೋಲುಗಳನ್ನು ಎತ್ತಿ ಹೊತ್ತೊಯ್ಯುತ್ತಿದ್ದರು. ಅವರವರ ಪೋಷಕರಿಂದಲೂ ಆ ಮಕ್ಕಳನ್ನು ತಡೆಯಲಾಗದ್ದು, ನಮಗೊಂದು ದೊಡ್ಡ ಸವಾಲ್ ಆಗಿತ್ತು! ರೀತಿಯ ಅನಪೇಕ್ಷಿತ ವೈರಿಗಳ ದಾಳಿಯಿಂದ ನಮ್ಮ ಸೃಷ್ಟಿಯನ್ನು ಕಾಪಾಡಿಕೊಳ್ಳಲು, ಆ ಪುಟ್ಟ ಮಕ್ಕಳಿಗೆ ಮತ್ತೊಂದಷ್ಟು ಕಲ್ಲುಗಳನ್ನು ಹೆಕ್ಕಿ ತಂದು ಕೊಟ್ಟು, ಸ್ವಲ್ಪ ದೂರದಲ್ಲಿ ಆಡಿಕೊಳ್ಳಲು ಹೇಳಿ, ನಮ್ಮ ದ್ವೀಪಕ್ಕೆ ಕಲ್ಲುಗಳ ಕಾಂಪೌಂಡ್ ಹಾಕಿ ಭದ್ರತೆ ಮಾಡಲಾಯಿತು. ಅರ್ಧ ಗಂಟೆಗೂ ಹೆಚ್ಚು ಸಮಯಗಳ ಕಾಲ, ನಾವು ಮೂರೂ ಜನ, ನಮ್ಮನಮ್ಮ  ಕಲ್ಪನೆಗೆ ಆದ್ಯತೆಗಳನ್ನು ನೀಡುತ್ತಾ, ಇದ್ದಿದ್ದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು, ತಾಳ್ಮೆಯಿಂದ ಕೂತು , ನಮ್ಮ ಈ ಐಲ್ಯಾಂಡ್ ಪ್ರಾಜೆಕ್ಟ್ ಅನ್ನು ಮಾಡಿ ಮುಗಿಸುವ ಹಂತಕ್ಕೆ ಬಂದೆವು. ಅಷ್ಟರಲ್ಲಿ ಆ ಮಗುವಿನ ತಂದೆಯ ಫೋನ್ ಕಾಲ್ ಮುಕ್ತಾಯವಾಯಿತು. ಅವರು ತಿರುಗಿ ನೋಡುವಾಗ ಆ ಮಗು ನಮ್ಮೊಂದಿಗೆ ಮಣ್ಣಿನಲ್ಲಿ ಆಡುತ್ತಲಿತ್ತು. "ಎಂತ ಮಣ್ ಹಿಡ್ಕೊಂಡು ಆಡ್ತಿದ್ದೀಯಾ,  ಚೀ..ಗಲೀಜು ಬಿಡು, ಈ ಕಡೆ ಬಾ " ಎಂದು ಬೈದರು. ಒಂದು ಕ್ಷಣಕ್ಕೆ ತಲೆತಗ್ಗಿಸಿ ನಿಂತಿದ್ದ ಮಗು ಆ ಬೈಗುಳದ ಮಧ್ಯೆಯು, ಅಪ್ಪನ ಕಾಲ ಬುಡದಲ್ಲಿಯೇ ಕೂತು ಕೋಲಿನಿಂದ ಮಣ್ಣು ಕೆರೆಯುತ್ತಲಿತ್ತು. ಅಪ್ಪಾ ಇನ್ನೊಬ್ಬರ ಜೊತೆ ಮಾತನಾಡುತ್ತಾ ನಿಂತಿದ್ದ ಕಂಡು,ಮತ್ತೆ ತನ್ನ ಹೊಸ ದ್ವೀಪವನ್ನು ಸೃಷ್ಟಿಸುವ ಜವಾಬ್ದಾರಿ ತೆಗೆದುಕೊಂಡಿದ್ದಲ್ಲದೆ, ನಮ್ಮೆಡೆಗೆ ಮತ್ತೆ ಬಂದು ಒಂದಷ್ಟು ಕಲ್ಲು ಮತ್ತು ಕೋಲುಗಳನ್ನು ತೆಗೆದುಕೊಂಡು ಹೋಯಿತು ಎಂಬಲ್ಲಿಗೆ...

 #childhood #letitbewithnature #ಸಾನ್ವಿಸ್ಟೋರಿ

ಮಂಗಳವಾರ, ನವೆಂಬರ್ 21, 2023

ಸೂರ್ಯನಿಗೊಂದು ದೇವಾಲಯ!!

ನಮಗೆಲ್ಲ ಬೆಳೆಗೆದ್ದ ಕೂಡಲೇ ಮನೆಯ ಬಾಗಿಲ ಮುಂದೆ ಹೋಗಿ ಸೂರ್ಯನ ಕಂಡು ನಮಸ್ಕರಿಸಿ ಬರಲು ಚಿಕ್ಕಂದಿನಲ್ಲಿ ಹೇಳಿಕೊಡುತ್ತಿದ್ದರು. ಅದೆಷ್ಟೋ ಸುಂದರ ಸೂರ್ಯೋದಯ, ಸೂರ್ಯಾಸ್ತಗಳನ್ನು ಕಂಡು ಕೊಂಡಾಡಿಯಾಗಿದೆ ಇನ್ನು ಸೂರ್ಯ ನಮಸ್ಕಾರ ಆಸನಗಳ ಅಭ್ಯಾಸ ಇವೆಲ್ಲವೂ ಸಾಮಾನ್ಯ ಬಳಕೆಯಲ್ಲಿದ್ದರೂ, ಸೂರ್ಯನಿಗಾಗಿಯೇ ಬ್ರಹತ್ ದೇವಾಲಯವನ್ನು ಕಾಣುವಾಗ ಮಾತ್ರ ರೋಮಾಂಚವಾದ್ದು ಸುಳ್ಳಲ್ಲ. ಹೀಗೊಂದು ಸೂರ್ಯನ ದೇವಾಲಯಕ್ಕೆ ಭೇಟಿಯ ಅವಕಾಶ ಸಿಕ್ಕಿದ್ದು ನಮಗೆ ನಮ್ಮ ಒಡಿಶಾ ಪ್ರವಾಸದಲ್ಲಿ..

ಕೊನಾರ್ಕ್ ಸೂರ್ಯ ದೇವಾಲಯವಿರುವುದು, ಭಾರತದ ಪೂರ್ವ ಕರಾವಳಿ ಒಡಿಸ್ಸಾದ ಪುರಿಯಲ್ಲಿ.  ಇದು ಯುನೆಸ್ಕೋ ದ ವಿಶ್ವ ಪರಂಪರೆಯಲ್ಲಿ ಪಟ್ಟಿ ಮಾಡಿರುವ ಸುಂದರ ಸಂರಕ್ಷಿತ ತಾಣಗಳಲ್ಲಿ ಒಂದಾಗಿದ್ದು,ಇದು  ತನ್ನ ಸೊಗಸಾದ ಕಳಿಂಗ ವಾಸ್ತು ಶಿಲ್ಪ ಮತ್ತು ಕೆತ್ತನೆಗಳಿಗೆ ಪ್ರಖ್ಯಾತವಾಗಿದೆ. ಸೂರ್ಯನು ಶಕ್ತಿಯ ಸ್ವರೂಪ. ಭಾರತದಲ್ಲಿರುವ ಸೂರ್ಯದೇವನಿಗೆ ಸಮರ್ಪಿತ ಮೂರು ದೇವಾಲಯಗಳ ಪೈಕಿ ಇದು ಒಂದು. ಗುಜರಾತ್ನ ಮೊಧೇರಾ ಸೂರ್ಯ ದೇವಾಲಯ ಮತ್ತು ಕಾಶ್ಮೀರದ ಮಾರ್ಥಾಂಡ ದೇವಾಲಯವು ಕೂಡ ಇದರಷ್ಟೇ ಜನಪ್ರಿಯವಾಗಿದೆ. 12ನೇ ಶತಮಾನದಲ್ಲಿ ನರಸಿಂಹ ದೇವನಿಂದ ಕಟ್ಟಿಸ ಕಟ್ಟಿಸಲ್ಪಟ್ಟ ಈ ದೇವಾಲಯ, ಸಮುದ್ರದ ತುದಿಯಲ್ಲಿದ್ದು ಶಿಥಿಲಗೊಂಡಿದ್ದರೂ ಕೂಡ 2,000 ಕ್ಕೂ ಹೆಚ್ಚು ವರ್ಷಗಳಿಂದ ಸ್ಥಿರವಾಗಿ ನಿಂತಿದೆ. ಭಾರತದ ವಿಶಿಷ್ಟ ದೇವಾಲಯಗಳಲ್ಲಿ ಒಂದಾದ ಈ ದೇವಾಲಯ ವಾಸ್ತವವಾಗಿ ಹೇಳಬೇಕೆಂದರೆ ಒಂದು ಕಲ್ಲಿನ ರಥ! ಎರಡು ಸಾಲುಗಳಲ್ಲಿ 12 ಚಕ್ರಗಳಿರುವಂತೆ, ರಥದ ಸುತ್ತಲೂ 24 ದೊಡ್ಡ ದೊಡ್ಡ ಕಲ್ಲಿನ ಚಕ್ರಗಳು! ಪ್ರತೀ ಚಕ್ರವು ಸುಮಾರು 10 ಅಡಿ ಎತ್ತರವಿದೆ. ಪ್ರತಿಯೊಂದು ಚಕ್ರ, ದಿನದ ಒಂದೊಂದು ಗಂಟೆಯನ್ನು ಅಥವಾ ಒಂದು ಸಾಲಿನ 12 ಚಕ್ರಗಳು ವರ್ಷದ 12 ತಿಂಗಳುಗಳನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಇಲ್ಲಿನ ಟೂರಿಸ್ಟ್ ಗೈಡ್. ಈ ಬೃಹತ್ ಕಲ್ಲಿನ ರಥವನ್ನು ನಾಗಲೋಟದ ಏಳು ಕುದುರೆಗಳು ಎಳೆಯುತ್ತಿರುವ ಮಾದರಿ ಕೆತ್ತನೆ ಮಾಡಿ ನಿರ್ಮಿಸಲಾಗಿದೆ. ಏಳು ಕುದುರೆಗಳು ವಾರದ ಏಳು ದಿನಗಳನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ. ಈ ದೇವಾಲಯದಲ್ಲಿದ್ದ, ಬೆಳಗಿನ ಮಧ್ಯಾಹ್ನದ ಮತ್ತು ಸಂಜೆಯ ಸೂರ್ಯನ ಮೂರ್ತಿಗಳ ಪ್ರತಿಕೃತಿಯನ್ನು ಈಗಿನ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ. 

ಈ ಕಲ್ಲಿನ ರಥದ ಶಿಲ್ಪಕಲೆ ನೋಡಿ ಮುಗಿಯುವಂತದ್ದೇ ಅಲ್ಲ! ರಾಜ ಮನೆತನದ ಜೀವನಶೈಲಿ, ಪ್ರಾಣಿಗಳ ಕಡುಬಯಕೆಗಳು, ಪೌರಾಣಿಕ ಕಥೆಗಳು , ಸಂಗೀತಗಾರ ಚಿತ್ರಗಳು, ಕೃಷ್ಣ ಶಿವ ಇಂದಿರ ವಿಷ್ಣು ನರಸಿಂಹ ಸೇರಿದಂತೆ ಹಿಂದೂ ದೇವರುಗಳ ಶಿಲ್ಪಗಳು ಇತ್ಯಾದಿ ಶಿಲ್ಪ ಕಲೆಗಳನ್ನು ಒಳಗೊಂಡಿದೆ ನರ್ತನ ಶಾಲೆ ಕಲ್ಲಿನ ಕೆತ್ತನೆ ಕುಸುರಿಗಳು , ಕುದುರೆ ಮತ್ತು ಸವಾರ, ಆನೆ ಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳು ಅನನ್ಯವೆನಿಸುತ್ತದೆ. ಹೀಗೆ ದೇವಾಲಯದ ಸುತ್ತಲಿನ ಆವರಣವನ್ನು ತಾಳ್ಮೆಯಿಂದ ನೋಡುತ್ತಾ ಹೋದರೆ, ಎರಡು ಗಂಟೆಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಿಂದೂ ಪುರಾಣಗಳನ್ನು ವಿಸ್ತರಿಸಿರುವ ಶಿಲ್ಪ ಕಲೆಗಳು, ಮಿಥುನ ಶಿಲ್ಪಗಳ ಸಾಲು, ಚಕ್ರಗಳ ಮೇಲಿನ ಸೂಕ್ಷ್ಮ ಕೌಶಲ್ಯ ಕೆತ್ತನೆಗಳನ್ನು ಇಲ್ಲಿ ನೋಡಬಹುದು. ದೇವಾಲಯದ ಸ್ವಲ್ಪ ಪಕ್ಕದಲ್ಲಿರುವ ಸಂಗ್ರಹಾಲಯದಲ್ಲಿ, ಎಲ್ಲಾ ಪ್ರಮುಖ ಮೂರ್ತಿಗಳ, ಕೊನಾರ್ಕ್ ದೇವಾಲಯ ಹುಟ್ಟಿದ್ದರ ಕುರಿತಾದ ಪೌರಾಣಿಕ ಕತೆಗಳು, ನಿರ್ಮಾಣದ ಕುರಿತಾದ ಸಮಗ್ರ ಮಾಹಿತಿ ದೊರೆಯುತ್ತದೆ. ಈ ಐತಹಾಸಿಕತೆಗೆ ಸಂಬಂಧ ಪಟ್ಟಂತೆ 15 ನಿಮಿಷಗಳ video show ಕೂಡಾ ಇದೆ. Worth visiting! 
 
 ಈ ದೇವಾಲಯ ಮೂಲ ರೂಪದಲ್ಲಿದ್ದಾಗ, ಸೂರ್ಯೋದಯದ ಮೊದಲ ಕಿರಣ, ಸೂರ್ಯದೇವನ ಪದತರದಲ್ಲಿ ಬೀಳುತ್ತಿತ್ತು ಎಂಬ ಐತಿಹಾಸಿಕ ಮಾಹಿತಿಯ ಮೇರೆಗೆ, ದೇವಸ್ಥಾನದ ಮುಖ್ಯದ್ವಾರದ ಮೇಲೆ ಬೀಳುವ, ಮೊದಲ ಸೂರ್ಯನ ಕಿರಣವನ್ನು ನೋಡಲು ನೋಡಲು ದೇಶ ವಿದೇಶಗಳಿಂದ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅದಷ್ಟೇ ಅಲ್ಲದೆ ಖಗೋಳಶಾಸ್ತ್ರಕ್ಕೆ ಹೊಂದಿಕೊಂಡಂತೆ, ಇಲ್ಲಿನ ಚಕ್ರಗಳ ಮೇಲೆ ಸೂರ್ಯನ ನೆರಳುಗಳು ತೋರಿಸುವ ಸಮಯ, ನಿಖರವಾಗಿರುವುದರಿಂದ, ಇದೊಂದು ಅತ್ಯಂತ ಕೌತುಕ ಸ್ಥಳವಾಗಿದೆ. ದೇವಾಲಯದ ಮೇಲಿರುವ ಆಯಾಸ್ಕಾಂತಗಳ ವ್ಯವಸ್ಥೆಯಿಂದಾಗಿ, ಇಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಜಾನುಬಾಹುಮೂರ್ತಿಗಳು, ನೆಲದ ಮೇಲೆ ನಿಲ್ಲದೆ ಗಾಳಿಯಲ್ಲಿ ತೇಲುತ್ತಿದ್ದವು ಎಂದು ತಿಳಿಸುತ್ತಾರೆ. 

ಭಾರತದ ಅಪ್ರತಿಮ ಸಾಂಸ್ಕೃತಿಕ ಪರಂಪರೆಯನ್ನು  ತೋರ್ಪಡಿಸುವ ಸುಂದರ ಕೆತ್ತನೆಯ ಕೋನಾರ್ಕ್ ದೇವಾಲಯದ ಚಕ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ 2018 ರಲ್ಲಿ ಘೋಷಿಸಿದ ಹತ್ತು ರೂಪಾಯಿಯ ನೋಟಿನ ಮೇಲೆ ನಾವು ಕಾಣಬಹುದು. ಈ ಬಾರಿಯ G20 ಶೃಂಗಸಭೆ ಭಾರತದಲ್ಲಿ ನಡೆದಿದ್ದು , ಮುಖ್ಯ  ವೇದಿಕೆಯ ಹಿಂಬಾಗಕ್ಕೆ ಕೊನಾರ್ಕ ಚಕ್ರವನ್ನೇ backdrop ಆಗಿ ಬಳಸಿಕೊಂಡಿದ್ದು ಇದರ ವಿಶೇಷತೆಯನ್ನು ಸಾರುತ್ತದೆ. ನಮ್ಮ ಸಂಸ್ಕೃತಿ ನಮ್ಮ  ಹೆಮ್ಮೆ . ಅದೇ  ಗೌರವದಿಂದ, ರಥಚಕ್ರದ ಮಂಡಲ ಚಿತ್ರ ಒಂದನ್ನು ಬರೆದ ಖುಷಿ ನನ್ನದು 🤗🤗

ಶನಿವಾರ, ನವೆಂಬರ್ 4, 2023

'ಮದುವೆಯ ಮನೆ' - ಓಡಿಶಾದ ಮನೆ ಮನೆಗಳಲ್ಲೂ ಚಿತ್ರಕಲೆ

ಓಡಿಸಾ ಪ್ರವಾಸದ ಸಂದರ್ಭದಲ್ಲಿ ನಾವು ಜನರ ಇನ್ನೊಂದು ವಿಶಿಷ್ಟ ಸಂಪ್ರದಾಯ ವನ್ನು ಗಮನಿಸಿದವು. ನಮ್ಮ ಮಲೆನಾಡ ಕಡೆ ಹಸಿ ಚಿತ್ತಾರವಿದ್ದಂತೆ, ಮಹಾರಾಷ್ಟ್ರದ ವರ್ಲಿ ಚಿತ್ರಕಲೆ, ಬಿಹಾರದ ಮಧುಬನಿ ಇದ್ದಂತೆ, ಶುಭ ಸಾಂಕೇತಿಕ ವಸ್ತುಗಳ ಚಿತ್ರಕಲೆಯ ಪರಂಪರೆ ಮದುವೆ ಸಾಂಪ್ರದಾಯಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಯಾರ ಮನೆಯಲ್ಲಿ ಮದುವೆಯ ಆಚರಣೆ ಇರುತ್ತದೆಯೋ, ಅವರ ಮನೆಯ ಹೊರಗಿನ ಗೋಡೆಯ ಮೇಲೆ, ಕಳಶದ ಮೇಲಿರುವ ತೆಂಗಿನ ಕಾಯಿ, ಬಾಳೆ ಮರ, ಮೀನು, ವಾದ್ಯಗಳು ಇತ್ಯಾದಿ ನಿಸರ್ಗ ಆರಾಧನೆಯ ಫಲವಂತಿಕೆಯ ಸಾಂಕೇತಿಕ ವಸ್ತುಗಳ ಪೈಂಟಿಂಗ್ ಮಾಡಿಸುತ್ತಾರೆ. ಸಮೃದ್ಧಿ ಮತ್ತು ಶುಭವನ್ನು ಸೂಚಿಸುವ, ಈ ರೀತಿಯ ಪೇಂಟಿಂಗಳನ್ನು, ನೋಡಲು ನಿಜವಾಗಿಯೂ ಖುಷಿಯಾಗುತ್ತಿತ್ತು. ವಧು ವರರ ಹೆಸರುಗಳನ್ನು ಸೂಚಿಸಿ ಮದುವೆಯ ಮಾಹಿತಿಯನ್ನು ನೀಡಲು ಕೂಡ ಈ ರೀತಿಯ ಸಂಪ್ರದಾಯ ಬೆಳೆದು ಬಂದಿರಬಹುದು. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು ಬದಲಾದರೂ, ಮನುಷ್ಯನ ಖುಷಿ ಮತ್ತು ಸಂಭ್ರಮಾಚರಣೆಗೆ, ಚಿತ್ರಕಲೆ, ಹಾಡು-ನೃತ್ಯ ಇನ್ನಿತರ ಕಲೆಗಳ ಮುಖೇನ ನಡೆಸಿಕೊಂಡು ಹೋಗುವ ಇಂತಹ ಪುಟ್ಟ ಪುಟ್ಟ ಸಂಪ್ರದಾಯಗಳು, ಆ ಪ್ರದೇಶದ ಸಂಸ್ಕೃತಿಯ ಉಳಿವಿಗೆ ಸಹಾಯಕ ಅಂಶಗಳಾಗಿರುತ್ತವೆ. 


#marriagepainting #artandculture #odisha

ಶನಿವಾರ, ಅಕ್ಟೋಬರ್ 28, 2023

Odisha - Land of Art

ನಮ್ಮ ಓಡಿಶಾ ಪ್ರವಾಸದಲ್ಲಿ, ನಾವು ಮೊದಲು ಮೆಟ್ಟಿದ ನಗರ ರಾಜಧಾನಿ ಭುವನೇಶ್ವರ. ಸುಮಾರು  400+ sq. Km ಇರುವ ಈ ನಗರದಲ್ಲಿ, ಏರ್ಪೋರ್ಟ್ನಿಂದ ಹೊರಟು ಹೋಟೆಲ್ ತಲುಪುವವರೆಗೂ ಕಣ್ಣಾಡಿಸಿದ ಜಾಗದಲ್ಲೆಲ್ಲಾ ನಮ್ಮನ್ನು ಆಕರ್ಷಿಸಿದ ಎರಡು ಮುಖ್ಯ ವಸ್ತು ವಿಷಯಗಳು ಒಂದು ನಗರದ ಅದ್ಭುತ ಸ್ವಚ್ಛತೆ ಮತ್ತೊಂದು, ರಸ್ತೆಯ ಬದಿಯ ಗೋಡೆಗಳಿಂದ ಹಿಡಿದು, ರಸ್ತೆಯ ಬದಿಯ ಮನೆಗಳ ಗೋಡೆಗಳು ಸೇರಿದಂತೆ ಎಲ್ಲವೂ ಕೂಡ ಚಿತ್ರಕಲೆಗಳಿಂದ ಸಿಂಗರಿಸಿ ಹೋಗಿತ್ತು, ಇಡೀ ಊರಿಗೆ ಊರಿನ ಗೋಡೆಗಳೆಲ್ಲವೂ ಪೇಂಟಿಂಗ್ ಕ್ಯಾನ್ವಾಸ್ಗಳೇ!! ಕಣ್ಣು ಹಾಯಿಸಿದಲ್ಲೆಲ್ಲ ರಸ್ತೆಯ ಬದಿ ಕಾಂಪೌಂಡಿನ ಮೇಲೆಲ್ಲಾ, ಒಡಿಸ್ಸಾದ ಇತಿಹಾಸ, ನೃತ್ಯ, ಜಾನಪದ ಕಲೆ, ಸಂಸ್ಕೃತಿ-ಸಾಹಿತ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕುರಿತಾದ, ಒಂದಕ್ಕಿಂತ ಒಂದು ಚೆಂದದ ಪೇಂಟಿಂಗ್ಗಳು!! ಪೌರಾಣಿಕ ನಿರೂಪಣೆ ಮತ್ತು ಜಾನಪದ ಕಥೆಗಳನ್ನು ಚಿತ್ರಗಳ ಮೂಲಕ ಪ್ರತಿಬಿಂಬಿಸುವ ಪಟ್ಟ ಚಿತ್ರಗಳ ಡಿಸೈನ್ಗಳು ನೋಡಿದಲ್ಲೆಲ್ಲ ಮನಸ್ಸಿಗೆ ಮುದವನ್ನು ನೀಡುವಂತಿದೆ. ಶಾಲಾ ಕಾಲೇಜುಗಳು, ಪೋಸ್ಟ್ ಆಫೀಸ್, ಪೊಲೀಸ್ ಠಾಣೆ, ಆಸ್ಪತ್ರೆ, ಫ್ಲೈ ಓವರ್, ಟ್ರಾಫಿಕ್ ಜಂಕ್ಷನ್ಗಳು ಇತ್ಯಾದಿ ಕಟ್ಟಡಗಳ ಜೊತೆಗೆ ಇನ್ನಿತರ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಮೇಲೆ ಅವುಗಳ ಕಾರ್ಯನಿರ್ವಹಣೆಯ ಕುರಿತಾದ ವಿಷಯಗಳ ಪೇಂಟಿಂಗ್ಗಳು ಎಲ್ಲೆಡೆ ಕಾಣಸಿಗುತ್ತಿದ್ದವು. ಇಲ್ಲಿನ ದೇವಾಲಯಗಳು ಮತ್ತು ದೈವಿಕತೆಗೆ ಸಂಬಂಧಪಟ್ಟಂತಹ ಚಿತ್ರಗಳು, ಜಾನಪದ ಶೈಲಿಯ ಚಿತ್ರಕಲೆ, ಹಲವಾರು ಬುಡಕಟ್ಟು ಜನಾಂಗಗಳ ಜೀವನ ಮೌಲ್ಯಗಳು ಮತ್ತು ಅವರ ಜೀವನಶೈಲಿಗೆ ಕುರಿತಾದ ವಸ್ತು ವಿಷಯಗಳ ಪೇಂಟಿಂಗ್ಗಳು ಪೋರ್ಟ್ರೇಟ್, ಅಬ್ಸ್ಟ್ರಾಕ್ಟ್, ತ್ರೀಡಿ ಆರ್ಟ್ ಮತ್ತು ಇನ್ನಿತರ ಮಾಡರ್ನ್ ಆರ್ಟ್ ಇನ್ನೂ  ಏನೇನೋ ಪೇಂಟಿಂಗ್ಗಳ ಚಿತ್ತಾರ! 

ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾರಂಭವಾದ ಭಿತ್ತಿ ಚಿತ್ರಗಳ ಈ ಪ್ರಾಜೆಕ್ಟ್, ಕಳೆದ ಕೆಲವು ವರ್ಷಗಳಿಂದ ನಡೆಯುತ್ತಾ ಬಂದಿದೆಯಂತೆ. ಆದರೂ ಕೂಡ, 2023 ಜನವರಿಯಲ್ಲಿ ಭುವನೇಶ್ವರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್ ಸಮ್ಮೇಳನ ಕೊಸ್ಕರವಾಗಿ ಈ ಪ್ರಾಜೆಕ್ಟ್ ಅನ್ನು ತ್ವರಿತವಾಗಿ ಮುಗಿಸಿಕೊಂಡ ಖ್ಯಾತಿ ಒಡಿಸ್ಸಾ ಲಲಿತ ಅಕಾಡೆಮಿಗೆ ಸಲ್ಲುತ್ತದೆ. ಆ ಸಮಯದಲ್ಲಿ, ಹತ್ತಕ್ಕೂ ಹೆಚ್ಚು ಏಜೆನ್ಸಿಯ, ಇಲ್ಲಿನ ಕೆಲವು arts and craft ಕಾಲೇಜು ವಿದ್ಯಾರ್ಥಿಗಳೂ ಒಳಗೊಂಡು, 1500 ಜನ ಆರ್ಟಿಸ್ಟ್ ಗಳು ನಗರದ ಎಲ್ಲ ಗೋಡೆಗಳ ಮೇಲೆ ನಿರಂತರವಾಗಿ ಪೇಂಟಿಂಗ್ಗಳನ್ನು ಮಾಡಿದ್ದರು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಕಳಿಂಗ ಸ್ಟೇಡಿಯಂನ ಸುತ್ತಮುತ್ತಲಿನ ಜಾಗದಲ್ಲಿ ಪ್ರಸಿದ್ಧ ಹಿಂದಿನ ಹಾಕಿ ಚಾಂಪಿಯನ್ಸ್ ಗಳು ಮತ್ತು ಈಗಿನ ಹಾಕಿ ಪ್ಲೇಯರ್ಸ್ಗಳ ಪೇಂಟಿಂಗ್ಸ್ ಗಳು ಅತ್ಯಂತ ಆಕರ್ಷಣೀಯವೆನೆಸಿತು. 
ಕಲಾಭಿಮಾನವಿರುವ ಯಾರೇ ಈ ಊರಿಗೆ ಹೋದರೂ, ಕಲಾ ಸೌಂದರ್ಯವನ್ನು ನೋಡುತ್ತಾ ಕಳೆದು ಹೋಗುವಷ್ಟು ಚಿತ್ರಕಲೆಗಳ ಹಾದಿಬೀದಿಗಳಲ್ಲಿಯೇ ಸವಿಯಬಹುದು. ಕಲೆಗಳ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ತೋರ್ಪಡಿಸುವ, ಆ ಮೂಲಕ ಪ್ರವಾಸ ಉದ್ಯಮವನ್ನು ಅಭಿವೃದ್ಧಿಪಡಿಸುವ ಸರ್ಕಾರದ ಈ ಯೋಜನೆಗೆ, ಭುವನೇಶ್ವರದ ನಾಗರೀಕರ ಸ್ವಚ್ಛತಾ ಅರಿವು ಕೂಡ ಅಷ್ಟೇ ಪ್ರೋತ್ಸಾಹಿಸಿದೆ ಎಂದು ನನಗನಿಸಿತು. 
#odisha #bubhaneshwar #landofart #tourism #promoteculture

ಮಂಗಳವಾರ, ಅಕ್ಟೋಬರ್ 24, 2023

ಚೌಸಟ್ ಯೋಗಿನಿ ದೇವಾಲಯ

ಭುವನೇಶ್ವರದ ನಗರದೊಳಗಿನ ಪ್ರಮುಖ ದೇವಾಲಯಗಳನ್ನೆಲ್ಲ ಮುಗಿಸಿ, ಮತ್ತಿನ್ಯಾವ ವಿಶಿಷ್ಟ ಸ್ಥಳವನ್ನು ನೋಡಬಹುದು ಎಂದು ಹುಡುಕಿದಾಗ ಗೂಗಲಮ್ಮ ಹೇಳಿದ್ದು, ಚೌಸ ಯೋಗಿನಿ ದೇವಾಲಯದ ಬಗ್ಗೆ. ಬೇರೆ ದೇವಾಲಯಗಳಷ್ಟು ಪ್ರಸಿದ್ಧ ಮಾಹಿತಿಗಳು ಇರದಿದ್ದರೂ, ಯೋಗಿನಿ ದೇವಾಲಯ ಭೇಟಿ ನೀಡಲೇ ಬೇಕು ಎಂದುಕೊಂಡು ಹೋಟೆಲ್ಲಿನಿಂದ ಆಕ್ಷಣಕ್ಕೆ ಕಾಲ್ಕಿತ್ತೆವು. ಗೂಗಲ್ ಮ್ಯಾಪ್ ಪ್ರಕಾರ ಪಟ್ಟಣದಿಂದ ಸುಮಾರು ೧೫ ಕಿಮೀ ಹೊರಭಾಗದಲ್ಲಿ ಇತ್ತು ಈ ದೇವಾಲಯ. ಹಾದಿ ಸಾಗುತ್ತ ಹೋದಂತೆ, ಮುಂದಕ್ಕೆ ಯಾರೂ ಹೆಚ್ಚು ಓಡಾಡದ ಹಳ್ಳಿಯ ರಸ್ತೆಗಳಲ್ಲಿ ನಮ್ಮ ಗಾಡಿಚಲಿಸುತ್ತಿತ್ತು. ಭೈರವಿ ನದಿಯ ಪಕ್ಕದಲ್ಲಿ ಹಾದುಹೋಗುವ ಈ ಹಾದಿಯಲ್ಲಿ ಎಡ ಬಲಗಳ ತಿರುಗಾಟವಾಗಿ, ಸ್ವಲ್ಪ ಸಮಯಕ್ಕೆ  ಗೂಗಲ್ ಮ್ಯಾಪ್ ಕೂಡ ಹಾದಿ ತೋರಿಸುತ್ತಿಲ್ಲ ಎಂದಾಗ ಹೇಗೆ ತಲುಪುವುದಪ್ಪಾ ಎಂದು ತುಸು ಆತಂಕವಾದರೂ, ಯಾರನ್ನಾದರೂ ಕೇಳುತ್ತಲೇ ಸಾಗುವುದು ಎಂದು ನಿರ್ಧರಿಸಿ ಮುಂದೆ ಸಾಗಿದೆವು. ತುಸು ಹೊತ್ತಿಗೆ ಮತ್ತೆ ಗೂಗಲ್ ಮ್ಯಾಪ್ಸ್ ಮಾಹಿತಿ ನೀಡಿ ಸಹಕರಿಸಿತು.  ಅದೊಂದು ಪುಟ್ಟ ಹಳ್ಳಿ ಹಿರಾಪುರ. ಊರ ಮನೆಗಳ ಮುಂದೆ ಹಾದು ಹೋಗುವ ಸಣ್ಣ ರಸ್ತೆಗಳ ದಾಟಿದಂತೆ ಮುಂದೆ ಅನಾವರಣ ಗೊಂಡಿದ್ದು ಒಂದು ಪುರಾತನ ಸಣ್ಣ ದೇವಾಲಯದ ವರಾಂಗಣ. ದೂರದಿಂದ ಕಲ್ಲಿನ ಸಣ್ಣ ವರ್ತುಲದಂತೆ ಕಾಣುತ್ತಿದ್ದ ಕಲ್ಲಿನ ಸ್ಮಾರಕದಲ್ಲಿ ಅಂತಹದ್ದೇನಿರಬಹುದು ಎಂದುಕೊಂಡು ಹೋದವಳಿಗೆ, ಹೊರಬರುವಾಗ ಇಂತದ್ದೊಂದು ಸ್ಥಳವನ್ನು ನೋಡದೇ ಹೋಗಿದ್ದರೆ, ಏನೋ ಕಳೆದುಕೊಂಡಿರುತ್ತಿದ್ದೆವು ಎನ್ನುವ ಭಾವ.    




ದೇವಾಲಯದ ವಾರಾಂಗಣದ ಪ್ರಾರಂಭದಲ್ಲಿ ಒಂದು ಈಶ್ವರನ ಸಣ್ಣ ಗುಡಿ, ಪಕ್ಕದಲ್ಲಿ ತಾಯಿ ಮಾಶಕ್ತಿಯ ವಿಗ್ರಹ ಅದರಿಂದ ಅಣತಿ ದೂರದಲ್ಲಿ ಕಾಣುತ್ತದೆ, ಕೇವಲ ನಾಲ್ಕು ಅಡಿ ಎತ್ತರದ ಶ್ರೀಯಂತ್ರದ ಸಾಂಕೇತಿಕವಾಗಿ ವರ್ತುಲದ ರೂಪದಲ್ಲಿನ ಕಲ್ಲಿನ ಪುರಾತನ  ದೇವಾಲಯ ಚೌಸಟ್ ಯೋಗಿನಿ ಮಂಡಲ, ಭಾರತದ ತಾಂತ್ರಿಕ ವಿದ್ಯೆಯ ಪ್ರಯೋಗಗಳ ಸಂಪ್ರದಾಯಗಳ ಉದಾಹರಿಸುವ ವಿಶೇಷ ಪೂಜಾ ಸ್ಥಳವಿದು. ಇತರ ದೇವಾಲಯಗಳಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿರುವ ಈ ದೇವಾಲದಲ್ಲಿ, ಹೆಸರಿಗೆ ತಕ್ಕಂತೆ, ಚೌಸಟ್ ಅಂದರೆ ಹಿಂದಿ ಭಾಷೆಯಲ್ಲಿ ೬೪ ಎಂದರ್ಥ ಮತ್ತು 'ಯೋಗಿನಿ' ಎಂದರೆ ಶಕ್ತಿಗಳ ಒಟ್ಟುಗೂಡುವಿಕೆ. ವಾಸ್ತು ಶಾಸ್ತ್ರದ ಪ್ರಕಾರ, ಈ ವರ್ತುಲದ ದೇವಾಲಯದಲ್ಲಿ, ೬೪ ದಿಕ್ಕುಗಳಿಂದ ಶಕ್ತಿಗಳು ಮಿಳಿತವಾಗಿ, ಅದರ ಉನ್ನತಿ ಎಲ್ಲೆಡೆ ಪಸರಿಸುವುದರಿಂದ, ಈ ದೇವಾಲಯಕ್ಕೆ ಛಾವಣಿಯಾಗಲಿ, ಇತರ ದೇವಾಲಯಗಳಿಗೆ ಇರುವಂತೆ ಗೋಪುರವಾಗಲಿ ಇಲ್ಲ! ಇತರ ವಿಗ್ರಹಗಳಿಗಿಂತ ಮಧ್ಯದಲ್ಲಿರುವ ತುಸು ದೊಡ್ಡ ವಿಗ್ರಹವಾದ, ಕಮಲದ ಮೇಲೆ ನಿಂತಿರುವ, ಹತ್ತು ಭುಜಗಳುಳ್ಳ ಮುಖ್ಯ ಮಾಯಾಮಾಯ ದೇವಿಯ ವಿಗ್ರಹವಿದೆ. ಹಾಗಾಗಿ ಇದನ್ನು ಮಾಯಮಾಯ ದೇವಾಲಯ ಎಂದೂ ಕೂಡ ಕರೆಯಲಾಗುತ್ತದೆ.  ಮಧ್ಯಪ್ರದೇಶದ ಖಜರಾಹೋ ಯೋಗಿನಿ ದೇವಾಲಯ ಹೊರತು ಪಡಿಸಿದರೆ, ಭಾರತದಲ್ಲಿ, ಒಡಿಶಾದಲ್ಲಿ ಮಾತ್ರ ಕಂಡು ಬರುವ ಯೋಗಿನಿ ದೇವಾಲಯ, ಸಾವಿರಾರು ವರ್ಷಗಳ ಹಿಂದೆ  ೬೪ ಬಗೆಯ ವಿದ್ಯೆಗಳು ಮತ್ತು ಪ್ರಭಾವಿಸಬಲ್ಲ ತಂತ್ರ ವಿದ್ಯೆಯ ಅಭ್ಯಾಸದ ಸ್ಥಳವಾಗಿತ್ತು ಈ ದೇವಾಲಯ ಎಂಬ ಪುರಾಣ ಸಾಕ್ಷಿಯ ಬಗ್ಗೆ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾವಿರಾರು ವರ್ಷಗಳ ಶಿಥಿಲತೆ ಮತ್ತು ಧಾಳಿಗಳಿಗೆ ಈಡಾಗಿ, ಅನೇಕ ಯೋಗಿನಿಯರ ಮೂರ್ತಿಗಳು ಧ್ವಂಸಗೊಂಡಿದ್ದರೂ ಕೂಡ, ನೋಡಬಲ್ಲ ಸ್ಥಿತಿಯಲ್ಲಿ ಇದೆ ಈ ದೇವಾಲಯ. ಇದೀಗ ಭಾರತದ ಪುರಾತತ್ವ ಸಮೀಕ್ಷೆಯ ವತಿಯಿಂದ ಹಾನಿಯಿಂದ ಸಂರಕ್ಷಿಸಲ್ಪಟ್ಟ ದೇವಾಲಯಗಳಲ್ಲಿ ಇದೂ ಒಂದು. ದೇವಾಲಯದ ಒಳಹೊಕ್ಕರೆ ವರ್ತುಲಾಕಾರದ ಮಂಟಪದ ಮಧ್ಯದಲ್ಲೊಂದು ಮಂಟಪ. ವರ್ತುಲಾಕಾರದ ಕಲ್ಲಿನ ಗೋಡೆಗೆ ಅಂಟಿಕೊಂಡಂತೆ ಯೋಗಿನಿಯರ ವಿಗ್ರಹಗಳು. ೬೪ ಯೋಗಿನಿಯರ ಮೂರ್ತಿಗಳಲ್ಲಿ ಮುಖ್ಯವಾಗಿ ತಾರಾ, ಇಂದ್ರಾಣಿ, ವಾರಾಹಿ, ಕುಬೇರಿ, ಕೌಮಾರಿ, ಗೌರಿ,  ಸ್ವರಸ್ವತಿ,ಯಮುನಾ, ಯಶ, ವಿನಾಯಕಿ, ಕಾಮಾಕ್ಯ, ಸಮುದ್ರಿ, ಶಿವಾನಿ, ಗಂಗಾ, ಚಾಮುಂಡ, ಗಾಂಧಾರಿ, ಸರ್ವ ಮಂಗಳೆ, ವಾಯುವೇಗ ಇತ್ಯಾದಿ ಯೋಗಿನಿಯರು ತಮ್ಮ ತಮ್ಮ ವಾಹನದ ಮೇಲೆ ನಿಂತಿರುವ ಭಂಗಿಗಳ ಅವಶೇಷಗಳನ್ನು ಕಾಣಬಹುದು. ಗಣಪತಿಯ ಶಕ್ತಿಯನ್ನು ಸ್ತ್ರೀ ರೂಪದಲ್ಲಿನ ವಿನಾಯಕಿ ಅಥವಾ ಗಣೇಶ್ವರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವುಗಳ ಜೊತೆಯಲ್ಲಿಯೇ ನಾಲ್ಕು ಏಕ ಪಾದ ಭೈರವ ಮೂರ್ತಿಗಳ ಕೆತ್ತನೆ, ಮಂಟಪದ ಹೊರಾಂಗಣದಲ್ಲಿ ಒಂಭತ್ತು ಕಾತ್ಯಾಯಿನಿಗಳ ವಿಗ್ರಹಗಳನ್ನೂ ಸೇರಿಸಿ ಒಟ್ಟಾರೆ ೮೧ ವಿಗ್ರಹಗಳ ಕೆತ್ತನೆ ಈ ಸುಂದರ ಮಂಟಪದಲ್ಲಿದೆ. ಎದುರಿಗೆ ಕೈ ಹಾಕಿದರೆ ಎಟುಕುವಷ್ಟು ನೀರಿನ ಒರತೆ ಇರುವ ಅಷ್ಟೇ ಪುಟ್ಟದಾದ ಬಾವಿಯೊಂದಿದೆ. ಊರಿನ ಗ್ರಾಮಸ್ಥರು ಅತ್ಯಂತ ಭಕ್ತಿಯಿಂದ ಪ್ರತಿನಿತ್ಯ ತುಪ್ಪದ ದೀಪ ಹಚ್ಚಿ ಯೋಗಿನಿಯರ ಪೂಜಿಸುತ್ತಾರೆ. ವರ್ಷಕ್ಕೊಮ್ಮೆ ಡಿಸಂಬರ್ ತಿಂಗಳಿನಲ್ಲಿ, ಚೌಸಟ್ ಯೋಗಿನಿ ಮಹೋತ್ಸವ ಕೂಡ ವಿಜೃಂಭಣೆಯಿಂದ ಜರುಗುತ್ತದೆ . ವಿಶೇಷತಃ ಪೂಜೆ ಪುನಸ್ಕಾರಗಳು, ಒರಿಸ್ಸಾದ ಇತಿಹಾಸದ, ಪುರಾಣಗಳ ಪ್ರಾಮುಖ್ಯತೆಯನ್ನು ತಿಳಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗುತ್ತದೆ ಎಂದು ಇಲ್ಲಿನ ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ. 





ಸ್ಥಳೀಯರ ಅನುಕರಿಸಿ, ಊದಿನಕಡ್ಡಿ ಹಚ್ಚಿ, ದೇವಿಯ ಕುರಿತಾದ ಸಂಗೀತದ ಹಾಡುಗಳ ಸೇವೆ ನೀಡಿ, "ಒಡಿಶಾದಲ್ಲಿ ನಾನು ನೋಡಿರ ಎಲ್ಲ ದೇವಸ್ಥಾನಕ್ಕಿಂತ ನಂಗೆ ಈ ಜಾಗ ತುಂಬಾ ಇಷ್ಟ ಆತು" ಎಂದು ಮಗಳು ಹೇಳುವಾಗ, ಕಳೆದೇ ಹೋದೆವು ಎಂದುಕೊಂಡಿದ್ದ ಸ್ಥಳದಲ್ಲಿ ಏನೋ ಸಿಕ್ಕಿದ ಧನ್ಯತೆಯ ಭಾವವೊಂದು ಮೂಡಿ ಬಂದದ್ದು ಸುಳ್ಳಲ್ಲ. ಒಮ್ಮೊಮ್ಮೆ ಗೂಗಲ್ ಮ್ಯಾಪ್ ಸುತ್ತಾಡಿಸುವುದರಿಂದ, ಈ ಸ್ಥಳಕ್ಕೆ ಸ್ಥಳೀಯರ ಕೇಳಿಕೊಂಡು, ಒಮ್ಮೆ ಖಂಡಿತಾ ಭೇಟಿ ನೀಡಬಹುದಾದ ಸ್ಥಳವಿದು. 

ಸೋಮವಾರ, ಅಕ್ಟೋಬರ್ 9, 2023

ನಮ್ಮ ಆಹಾರವೇ ನಮಗೆ ಔಷಧಿ

ಮೇಲಿಂದ ಮೇಲೆ ಬರುವ ಸಾಂಕ್ರಾಮಿಕ ರೋಗಗಳು , ಹೃದಯ ಸಂಬಂಧೀ ಕಾಯಿಲೆಗಳ ಅನುಭವ ಪಡೆದ ಮೇಲೆ, ಸಾವು ನೋವುಗಳ ಸುದ್ದಿಗಳ ಕೇಳಿದ ಮೇಲೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯ ಎಂಬುದು ಅರಿವಾಗಿದೆ. ಆದರೇನು ಮಾಡುವುದು? ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಳತೆಯಲ್ಲಿ ಬೇಕಾಗಿದ್ದೆಲ್ಲ ಸಿಗುವ ಮಾರಾಟ ಸೌಲಭ್ಯ, ಹೆಚ್ಚಾದ ಮನುಷ್ಯನ ಆಸೆಗಳು, ಮೆಚ್ಚುಗೆಯಾದ ಕಷ್ಟಪಡದ ಬದುಕು ಇತ್ಯಾದಿ ಅಂಶಗಳಿಂದ, ಆಹಾರ ಸಾಮಗ್ರಿಗಳು ಸ್ಥಳೀಯತೆ ಕಳೆದುಕೊಂಡು, ಹೆಚ್ಚೆಚ್ಚು ರೆಡಿ ಟು ಈಟ್, ಪ್ಯಾಕಡ್ ಫುಡ್ಸುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಿ ಹೋಗಿವೆ. ಮನೆಯ ಮೆಟ್ಟಿಲಿಳಿ್ದರೆ ಹೊರಗಿನ ತಿಂಡಿ ಕಣ್ಣು ಕುಕ್ಕುತ್ತದೆ.  ಆ ಮೋಹದಿಂದ ಹೊರಬರುವುದು ಹೇಗೆ? ಅದಕ್ಕೆ ಒಂದೇ ಪರಿಹಾರ. ನಾವು ಮನೆಯಲ್ಲಿ ತಿನ್ನುವ ಆಹಾರವನ್ನು ಅರಿತುಕೊಳ್ಳುವುದು. ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿಯೂ ವಿಭಿನ್ನ. ನಮ್ಮ ದೇಹಕ್ಕೆ ಯಾವುದು ಹಿತ ಅಹಿತ ಎಂಬುದು ನಾವೇ ಅಧ್ಯಯನ ಮಾಡಿಕೊಳ್ಳಬೇಕು. ಆಹಾರ ಎಂದರೆ ಕೇವಲ ಹೊಟ್ಟೆ ತುಂಬಿಸುವುದು ಎಂದರ್ಥವಲ್ಲ. ದೇಹವನ್ನು ರೋಗಮುಕ್ತವನ್ನಾಗಿಸಿ, ಸ್ವಾಸ್ಥತೆಯಿಂದ ಇಡಲು ಬೇಕಾದ ಪೋಷಕಾಂಶಗಳನ್ನು ನೀಡುವುದೇ ಆಹಾರ. ಹಾಗಾಗಿ ಎಷ್ಟು ಪ್ರಮಾಣದ ಆಹಾರ, ಯಾವ ಬಗೆಯ ಆಹಾರ, ಯಾವ ಕ್ರಮದಲ್ಲಿ, ಯಾವಾಗ ತೆಗೆದುಕೊಳ್ಳಬೇಕು ಎಂಬ ವಿಷಯಗಳೂ ಇಲ್ಲಿ ಮುಖ್ಯ.  ಆಹಾರವನ್ನು ಔಷಧಿಯೇ ಎಂದುಕೊಂಡು ಬಳಸಿದರೆ, ಮುಂದೆ ಔಷಧಿಯನ್ನೇ ಆಹಾರವನ್ನಾಗಿ ಮಾಡಿಕೊಳ್ಳುವ ಪರಿಸ್ಥಿತಿಯ ತಡೆಯಬಹುದು ಅಥವಾ ಭವಿಷ್ಯದಲ್ಲಿ ಅನಾರೋಗ್ಯದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. 

ಹೀಗೊಂದಷ್ಟು ಟಿಪ್ಸ್ಗಳು ದೇಹದ ಆರೋಗ್ಯಕ್ಕಾಗಿ.  

ನೀರು ಸೇವನೆ ಸರಿಯಾದ ಕ್ರಮ : ಬೆಳಿಗ್ಗೆ ಎದ್ದು ಒಂದು ಲೋಟ ಅರಿಶಿನ ಪುಡಿ ಸೇರಿಸಿ ಬಿಸಿನೀರು ಕುಡಿಯುವುದರಿಂದ ಅಜೀರ್ಣ ಸಂಬಂಧಿ ಸಮಸ್ಯೆ ಕಡಿಮೆಯಾಗುತ್ತದೆ. ದೇಹದ ಕಶ್ಮಲ ಹೊರಹೋಗಲು ಮತ್ತು ಮಾನಸಿಕ ಸಮತೋಲನಕ್ಕಾಗಿ, ದಿನಕ್ಕೆ ಮೂರು ಲೀಟರ್ ನಷ್ಟು ನೀರಿನ ಅವಶ್ಯಕತೆ ಇರುತ್ತದೆ. ಊಟದ ಮಧ್ಯದಲ್ಲಿ ನೀರು ಸೇವಿಸಬಾರದು. ಊಟಕ್ಕೂ ಕನಿಷ್ಠ ೨೦ ನಿಮಿಷ ಮುಂಚೆ ಮತ್ತು ಊಟ ಮಾಡಿದ ಕನಿಷ್ಠ ಅರ್ಧ ಗಂಟೆಯ ನಂತರ ನೀರನ್ನು ಸೇವಿಸಬೇಕು, ಮಳೆಗಾಲದಲ್ಲಿ ಕಾಯಿಸಿ ಆರಿಸಿದ ನೀರು, ಬೇಸಿಗೆಯಲ್ಲಿ ಫ್ರಿಡ್ಜ್ ನೀರಿನ ಬದಲಾಗಿ ಮಣ್ಣಿನ ಮಡಕೆಯ ತಂಪಾದ ನೀರು ಬಳಸುವುದು ಉತ್ತಮ. 

ನಿಗದಿತ ಸಮಯಕ್ಕೆ ಆಹಾರ ಸೇವನೆ : ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗಿ ದಿನಕ್ಕೆ ಐದು ಆರು ಸಲ ತಿನ್ನುವುದು ಸರಿ ಅಲ್ಲ. ಆಹಾರದ ಸಮಯದ ಕುರಿತಾಗಿ ಸಣ್ಣ ಯೋಜನೆ ಮತ್ತು ಸಿದ್ಧತೆ ದಿನವಿಡೀ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು ಸಮತೋಲನದಲ್ಲಿರಿಸುತ್ತದೆ. ಬೆಳಗ್ಗಿನ ಉಪಹಾರ ಯಾವುದೇ ಕಾರಣಕ್ಕೂ ತಪ್ಪಿಸಬಾರದು. ರಾತ್ರಿಯಿಡೀ ತಿಂದಿಲ್ಲಎಂದು ಅಧಿಕವಾಗಿ ತಿನ್ನುವುದೂ ಸರಿಯಲ್ಲ.ನಮ್ಮ ಆಹಾರದಲ್ಲಿ ನಮಗೆ ಇಡೀ ದಿನಕ್ಕೆ ಬೇಕಾಗುವ ಪ್ರೊಟೀನ್, ವಿಟಮಿನ್, ಕ್ಯಾಲೋರಿ, ಮಿನರಲ್ಸ್, ನಾರಿನ ಅಂಶದ ಆಹಾರ ಮತ್ತು ಹಣ್ಣುಗಳ ಪ್ರಮಾಣ ಸರಿಸಮನಾಗಿರಬೇಕು. ದೈಹಿಕ ಕೆಲಸ ಇರುವವರಿಗೆ ಆಹಾರ ಪ್ರಮಾಣ ತುಸು ಜಾಸ್ತಿ ಬೇಕು. ಕುಳಿತು ಕೆಲಸ ಮಾಡುವವರು, ಕಡಿಮೆ ಪ್ರಮಾಣಪೌಷ್ಟಿಕ ಆಹಾರ ತಿಂದರೆ ಸಾಕು. ಒಟ್ಟಾರೆಯಾಗಿ ಮಧ್ಯಾಹ್ನದ ವೇಳೆಯೇ ಸರಿಯಾಗಿ ಜೀರ್ಣವಾಗಿರುವಂತಹ ಆಹಾರ ತಿನ್ನಬೇಕು. ರಾತ್ರಿಯ ಆಹಾರ ಎಷ್ಟು ಲಘುವಾಗಿರಬೇಕೆಂದರೆ, ಮಲಗುವ ಮುನ್ನವೇ ಆಹಾರ ಜೀರ್ಣವಾಗಿರಬೇಕು ಅಂದರೆ  ಮಲಗುವ ಕನಿಷ್ಠ ೧.೫ ಘಂಟೆ ಮುನ್ನ ಊಟ ಮಾಡಿರಬೇಕು. ರಾತ್ರಿಯ ನಿದ್ದೆಯಲ್ಲಿ ದೇಹದ ಅಂಗಾಂಗಗಳ ರಿಪೇರಿ ಕೆಲಸಗಳು ಮತ್ತು ಬೆಳವಣಿಗೆ ನಡೆಯುವುದರಿಂದ, ಹೊಟ್ಟೆ ತುಂಬಾ ತಿನ್ನುವ ಹೆಚ್ಚಿನ ಆಹಾರ, ಸ್ಥೂಲ ಕಾಯಕ್ಕೆ, ಮರುದಿನದ ಅಜೀರ್ಣನಂತೆಗೆ ದಾರಿಯಾಗುತ್ತದೆ. ಹಸಿವಿಲ್ಲದೆ ಇದ್ದಾಗಲೂ ಹೊತ್ತು ಕಳೆಯಲು, ಸ್ಟ್ರೆಸ್  ಇತ್ಯಾದಿ ಸಂದರ್ಭಗಳಲ್ಲಿ ಮಧ್ಯೆ ಮಧ್ಯೆ ಏನಾದರೂ ತಿಂಡಿಯನ್ನು ಬಾಯಾಡುತ್ತ ಇರುವ ಅಭ್ಯಾಸ ಅವಶ್ಯಕತೆಗಿಂತಲೂ, ದೇಹಕ್ಕೆ ಅನಾವಶ್ಯಕ ಅನಗತ್ಯ ಆಹಾರದ ಜೀರ್ಣಕ್ರಿಯೆಯ ಶ್ರಮ ನೀಡಿದಂತೆ ಆಗುತ್ತದೆ. ಅದರ ಬದಲು ನೀರು, ಹಣ್ಣಿನ ರಸ, ಎಳನೀರು, ಮಜ್ಜಿಗೆ ಕುಡಿಯುವುದು ಉತ್ತಮ. 

ಆಹಾರ ತಯಾರಿಸುವ ಬಗೆ: ಆಹಾರ ತಯಾರಿಸುವುದು ಕೂಡ ಒಂದು ಸುಂದರ ಕಲೆ, ಜೀವನೋತ್ಸಾಹದ ಚಟುವಟಿಕೆಯದು. "ಅಯ್ಯೋ ಏನು ತಿಂಡಿ ಮಾಡೋದು?", "ಯಾರು ಇಷ್ಟೆಲ್ಲಾ ಮಾಡುತ್ತಾರೆ?" ಇತ್ಯಾದಿ ನಕಾರಾತ್ಮಕ ಯೋಚನೆಗಳನ್ನಿಟ್ಟುಕೊಂಡು ಆಹಾರ ತಯಾರಿಸಬಾರದು. ಕೈಕಾಲು ಸ್ವಚ್ಛವಾಗಿರಲಿ ತಲೆಕೂದಲು ಕಟ್ಟಿರಲಿ.ಅಂತೆಯೇ ಆಹಾರ ತಿನ್ನುವಾಗ ಇತರರ ಕುರಿತು ದ್ವೇಷ, ಹತಾಶೆ, ಅಸೂಯೆ, ದುರುದ್ದೇಶ ಇಟ್ಟುಕೊಂಡರೆ, ಆ ಭಾವನೆಗಳ ರಾಸಾಯನಿಕಗಳು ದೇಹದಲ್ಲಿ ಸ್ರವಿಸುತ್ತಿರುತ್ತವೆಯಾದ್ದರಿಂದ, ನಾವು ತಿನ್ನುವ ಆಹಾರ ಜೀರ್ಣವಾಗದೇ ಉಳಿಯುತ್ತದೆ ಹಾಗಾಗಿ ಊಟ ಮಾಡುವಾಗ ಆದಷ್ಟು ಮೌನವಾಗಿರುವುದು ಪ್ರಯೋಜನಕಾರಿ.  


ಸಾಧ್ಯವಾದಷ್ಟು ನಿಸರ್ಗಕ್ಕೆ ಹತ್ತಿರವಿರಿ : ನಿಸರ್ಗಕ್ಕೆ ಹತ್ತಿರವಿದ್ದಷ್ಟೂ ವ್ಯಾಧಿ ನಮ್ಮನ್ನು ಬಾಧಿಸದು. ಹುಷಾರು ತಪ್ಪಿದರೆ ಮಾತ್ರೆ ಎಂಬ ತತ್ವ ನಮ್ಮದಾಗಿರಬಾರದು.  ತಲೆನೋವು ಎಂದ ಕೂಡಲೇ ತಕ್ಷಣ ಆನಸೀನ್ಮಾತ್ರೆಗಳ ಮೊರೆ ಹೋಗಬೇಡಿ. ತಲೆನೋವಿಗೆ ಕೇವಲ ದೈಹಿಕ ಸಮಸ್ಯೆಗಳೇ ಕಾರಣವಾಗಿರುವುದಿಲ್ಲ. ಮಾನಸಿಕ ಒತ್ತಡ, ಶೀತದಿಂದಾಗುವ ಅಡ್ಡ ಪರಿಣಾಮ ಕೆಲವೊಮ್ಮೆ ಗ್ಯಾಸ್ಟ್ರೈಟಿಸ್ ಕಾರಣದಿಂದಲೂ ತಲೆನೋವು ಪರಿಣಮಿಸುತ್ತದೆ. ಸಣ್ಣ ಪುಟ್ಟ ಥಂಡಿ ಕೆಮ್ಮುಗಳಿಗೆ ತಕ್ಷಣಕ್ಕೆ ಆಂಟಿಬಯೋಟಿಕ್ ಬೇಕಾಗುವುದಿಲ್ಲ. ನಿತ್ಯ ದೊರೆಯುವ ತುಳಸಿ, ಶುಂಠಿ, ಪುದೀನಾ, ದೊಡ್ಡಪತ್ರೆ, ಕರಿಬೇವು, ಕಾಳುಮೆಣಸು, ಅರಿಶಿನ, ಕೊತ್ತಂಬರಿ ಜೀರಿಗೆಗಳ ಬಳಕೆ ಸಹಾಯಕವಾಗುತ್ತದೆ. ಗಿಡಮೂಲಿಕೆಗಳ ಕಷಾಯ ಜೊತೆಗೆಅತ್ಯಂತ ಅಗತ್ಯ - ವಿಶ್ರಾಂತಿ! ಬಿಸಿನೀರ ಹಬೆ, ಬೇಳೆಕಟ್ಟಿನ ಸಾರು ಹೀಗೆ ಪೋಷಿಸಿದರೆ ಸಾಕು ಸಾಕಷ್ಟು ಸಣ್ಣ ಪುಟ್ಟ ಖಾಯಿಲೆಗಳು ಕಡಿಮೆಯಾಗುತ್ತವೆ. ಒತ್ತಡದ ಬದುಕಿಗೆಪೌಷ್ಟಿಕಾಂಶದ ಆಹಾರದ ಅಗತ್ಯತೆ ಇರುತ್ತದೆ. ಅದು ಪ್ರಕೃತಿಯಲ್ಲಿ ದೊರಕುವ ಹಣ್ಣು ತರಕಾರಿಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಆಯಾ ಋತುಮಾನದಲ್ಲಿ ದೊರಕುವ ಎಲ್ಲ ಹಣ್ಣು ತರಕಾರಿಗಳನ್ನು, ಋತುಮಾನಕ್ಕೆ ತಕ್ಕಂತೆ ಬಳಸುತ್ತ ಹೋದರೆ, ದೇಹಕ್ಕೆ ಒಗ್ಗುತ್ತದೆ.  ಅಡುಗೆ ಎಣ್ಣೆ ಸಾಧ್ಯವಾದಷ್ಟು ಗಾಣದಲ್ಲಿ ನಾವೇ ಖುದ್ದಾಗಿ ನಿಂತು ಮಾಡಿಸಿದ್ದಾದರೆ, ಕಲಬೆರಿಕೆ ಕಮ್ಮಿಯಾಗುತ್ತದೆ. ಬಾಣಂತಿಯರು ಕರಿ ಗಿಜಿವಿಲಿ ಅಕ್ಕಿ ಸೇವಿಸಿದರೆ, ಎದೆ ಹಾಲುಹೆಚ್ಚಾಗುತ್ತದೆ, ಸಕ್ಕರೆ ಖಾಯಿಲೆ ಇಂದ ಬಳಲುತ್ತಿರುವವರ, ಕೆಂಪಕ್ಕಿ ಸೇವಿಸಿದರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಕೆಂಪುಪ್ಪು, ರಾಕ್ಸಾಲ್ಟ್, ಸೈನ್ದ್ರ ಲವನದಲ್ಲಿರುವಷ್ಟು ಲವಣ ಅಂಶ, ಬಿಳಿಯ ಉಪ್ಪಿನಲ್ಲಿರುವುದಿಲ್ಲವಿಪರೀತ ಪಾಲಿಶ್ ಮಾಡಿದ ಅಕ್ಕಿ ನೋಡಲು ಬೆಳ್ಳಗೆನಿಸಿದರೂ, ಅದರಲ್ಲಿ ರುಚಿ ನಾರಿನಂಶ ಮತ್ತು ಪರಿಮಳ ಇರುವುದಿಲ್ಲ. ಕಹಿ ರುಚಿಯ ಬಳಕೆ ಇತರ ರುಚಿಯ ಬಳಕೆಯಷ್ಟೇ ಸಹಜವಾಗಿರಬೇಕು. ಹಾಗಲಕಾಯಿ, ಕಹಿ ಸೌತೆ, ಕಹಿಬೇವು, ಕಂಚಿಕಾಯಿ, ಹೇರಳೇಕಾಯಿ, ಇತ್ಯಾದಿ ಪದಾರ್ಥಗಳನ್ನು ತಿನ್ನಲು ರೂಡಿಸಿಕೊಡಿರಬೇಕು  ಮನೆಯ ಪಾಟಿನಲ್ಲೇ ಸಾಧ್ಯವಾದಷ್ಟು ಹಸಿರು ಸೊಪ್ಪುಗಳನ್ನು ಸಣ್ಣ ಪುಟ್ಟ ಗಿಡಮೂಲಿಕೆಗಳನ್ನು ಬೆಳೆಸಿಟ್ಟುಕೊಳ್ಳಬಹುದು. ತಿಂಗಳಿಗೊಮ್ಮೆ, ನಿರಾಹಾರ ಉಪವಾಸ ಮಾಡುವುದು ಒಳ್ಳೆಯದು. ಜೀರ್ಣಾಂಗಗಳಿಗೆ ಆಗೀಗ ವಿಶ್ರಾಂತಿ ನೀಡಿದರೆ, ಹಲವು ವರ್ಷಗಳ ವರೆಗೆ ಜೀರ್ಣಾಂಗಗಳು ಗಟ್ಟಿಯಾಗಿರುತ್ತವೆ. ಇದೊಂದೇ ಉತ್ತಮ ಜೀವನಕ್ಕೆ ಅಡಿಪಾಯ ಆಗಿದೆ. ಅಂತೆಯೇ, ಸ್ಥೂಲ ಕಾಯ ಕಡಿಮೆಗೊಳಿಸಬೇಕು ಎಂದು ಹಠಾತ್ತನೆ ಊಟ ತಿಂಡಿ ಕಡಿಮೆ ಮಾಡುವುದು, ಜಿಮ್ ವರ್ಕಿಗಾಗಿ ಕೃತಕ ಪ್ರೋಟೀನುಗಳ ಬಳಕೆ ಮಾಡುವುದು ಇತ್ಯಾದಿ ಜೀವಕ್ಕೆ ಮಾರಣಾಂತಿಕವಾಗಬಹುದು. ಅದರ ಬದಲಾಗಿ ಸೂಕ್ತ ವೈದ್ಯಕೀಯ ಸಲಹೆ ಪಡೆದು, ಡಯಟ್ ಫುಡ್ ತೆಗೆದುಕೊಳ್ಳಬೇಕು. 

ಆಹಾರ ಸೇವಿಸುವ ಬಗೆ : ಮಲಗಿಕೊಂಡು, ಟೀವಿ ನೋಡುತ್ತಾ ಊಟ ಮಾಡುವುದು ಖಂಡಿತ ಸಲ್ಲ. ಟೀವಿ ಮತ್ತು ಮೊಬೈಲ್ ಆಕರ್ಷಣೆಯೆದುರು ನಾವು ತಿನ್ನುತ್ತಿರುವ ಆಹಾರದ ಪ್ರಮಾಣವಾಗಲಿ, ರುಚಿ ಗಳಾಗಲಿ ಮೆದುಳಿಗೆ ಸಂವಹನೆ ಆಗದೆ, ಅತ್ಯಧಿಕ ಆಹಾರ ಸೇವನೆ, ಜಗಿಯದೇ ತಿನ್ನುವುದು ಇತ್ಯಾದಿ ತೊಂದರೆಯಿರುತ್ತದೆ. ಹಾಗೆಯೇ ಕೈಬೆರಳುಗಳ ಬಳಸಿ ಊಟಮಾಡಿ.  ಇದರಿಂದ ಊಟದ ಅನುಭವ ಮೆದುಳಿಗೆ ಸಂವಹನೆ ಆಗುತ್ತದೆ. ಊಟಕ್ಕೂ ಮುಂಚೆ ಸಿಕ್ಕ ಆಹಾರಕ್ಕೆ ಕೃತಜ್ಞತೆ ಹೇಳುವುದು, ಹಸಿದವರಿಗೆಲ್ಲ ಅನ್ನ ಸಿಗಲಿ ಎಂದು ಪ್ರಾರ್ಥಿಸಿ ತಿನ್ನುವುದು ಒಳ್ಳೆಯದು. 

ಫ್ರಿಡ್ಜ್ ಬಳಕೆ ಅತಿಯಾಗಿ ಬೇಡ : ಮೂರೂ ನಾಲ್ಕು ದಿನಗಳವರೆಗೆ ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟು ತಿನ್ನುವ ಆಹಾರ ಖಂಡಿತ ಆರೋಗ್ಯಕ್ಕೆ ಮಾರಕ. ಆಹಾರದಲ್ಲಿನ ಸತ್ವ ನಶಿಸಿ ಹೋಗಿದ್ದರೂ, ಆಹಾರ ಕೆಡದಿರುವಂತೆ ಕಾಣುವುದು ಇದರ ಮಾಯೆ. ನಿತ್ಯ ಅಡುಗೆ ಮಾಡುವುದು, ನಮ್ಮ ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿರವು ಸಹಾಯಕ  ಮತ್ತು ಆಯಾ ದಿನದ ಆಹಾರ ಆಯಾ ದಿನವೇ ಬಳಕೆ ಮಾಡುವ ಪದ್ಧತಿಯೇ ಆರೋಗ್ಯಕರ. 


ಪ್ಲಾಸ್ಟಿಕ್ ಪರಿಕರಗಳು ಬೇಡ : ಬಿಸಿ ಆಹಾರಗಳ ಪ್ಲಾಸ್ಟಿಕ್ ತಟ್ಟೆ ಅಥವಾ ಪಾತ್ರೆಗಳಲ್ಲಿ ಬಳಸುವುದು, ಬಿಸಿ ಮಾಡುವುದು ಇತ್ಯಾದಿಗಳಿಂದ, ನಮಗೆ ಅರಿವಿಲ್ಲದೆ ಅಲ್ಪಸ್ವಲ್ಪ ಪ್ರಮಾಣದ ಪ್ಲಾಸ್ಟಿಕ್ ನಮ್ಮ ದೇಹದ ಒಳಕ್ಕೆ ಹೋಗುತ್ತಿರುತ್ತದೆ. ಆದಷ್ಟು ಹಿತ್ತಾಳೆ, ಸ್ಟೀಲ್ ತಟ್ಟೆ  ಬಾಳೆ ಎಲೆ ಊಟ ಉತ್ತಮ.

ಊಟದ ನಂತರ ನಡುಗೆ: ಊಟದ ನಂತರ ತಕ್ಷಣ ವಾಹನ ಸವಾರಿ, ಕುದುರೆ ಸವಾರಿ, ಊಟ ಸಲ್ಲದು. ಕುಳಿತುಕೊಳ್ಳಲು ಬಯಸಿದರೆ ವಜ್ರಾಸನ ಸೂಕ್ತ ಅದು ಜೀರ್ಣಕ್ರಿಯೆಗೆ ಸಹಕಾರಿ. ಇಲ್ಲವಾದಲ್ಲಿ ಸ್ವಲ್ಪಸಮಯ ನಡುಗೆ, ರಾತ್ರಿ ಊಟವಾದ ಮೇಲೆ ೧೦೦ ಹೆಜ್ಜೆ ನಡೆಯುವುದು ಇತ್ಯಾದಿ ಅಭ್ಯಾಸ ಒಳ್ಳೆಯದು.  

ಆಹಾರ ಸೇವನೆಯಲ್ಲಿ ಬುದ್ಧಿವಂತಿಕೆ : ಹೊರಗಡೆ ತಿಂಡಿಗಳ ಆಕರ್ಷಣೆ ಕಮ್ಮಿಯಾಗಬೇಕು ಎಂದರೆ, ನಮ್ಮ ಮನೆಯಲ್ಲಿನ ಆಹಾರವರ್ಣಮಯವಾಗಬೇಕು. ಇಂದ್ರೀಯಗಳ ಮೂಲಕ ನಾವು ನೀಡುವ ಮಾಹಿತಿಯ ಮೇರೆಗೆ, ಮನಸ್ಸು ಆಸೆಯನ್ನುನಿರ್ಧರಿಸುತ್ತದೆ. ನಿತ್ಯ ಆಹಾರದಲ್ಲಿ ಮೊಸರು, ಸಲಾಡ್, ದಾಳಿಂಬೆ, ಹಸಿರು ಎಳೆಗಳ ತರಕಾರಿಗಳು, ಬೆಳ್ಳುಳ್ಳಿ, ಜೀರಿಗೆ, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಹೆಚ್ಚು ಎಣ್ಣೆಯಲ್ಲಿ ಕಾರಿಯಾದ ಒಣ ಆಹಾರ ಇತ್ಯಾದಿ ವೈವಿದ್ಯತೆ ನೀಡಿದಾಗ ದೇಹ ಮತ್ತು ಮನಸ್ಸು ತೃಪ್ತಿ ಹೊಂದಿ, ಹೊರಗಿನ ತಿಂಡಿಗಳ ಆಸೆ ಅತ್ಯಧಿಕವಾಗುವುದಿಲ್ಲ. ಪೇಟೆಯ ಕೆಲಸಕ್ಕೆ ಹೋಗುವುದಿದ್ದರೆ, ಸಣ್ಣದೊಂದು ಆರೋಗ್ಯಕರ ಸ್ನ್ಯಾಕ್ ಅಥವಾ ಹಣ್ಣೊಂದನ್ನು  ತಿಂದು ಹೊರಟರೆ, ಹಾದಿಬದಿಯ ತಿಂಡಿಗಳ ಪರಿಮಳಕ್ಕೆ ದೇಹ ಸ್ಪಂದಿಸುವುದು ಕಡಿಮೆಯಾಗಿಸುತ್ತದೆ.


ನಾವು ಖರೀದಿಸುವ ಆಹಾರದ ಮೇಲೆಗಮನವಿರಬೇಕು. ಜಂಕ್ ಎಂದರೆ ಕೇವಲ ಕರಿದ ಪದಾರ್ಥಗಳು, ಜಿಡ್ಡಿನ ಅಂಶಗಳು ಎಂದಷ್ಟೇ ಅಲ್ಲ; ಅತಿಯಾದ ಯಾವುದೇ ರುಚಿಯೂ ಉದಾಹರಣೆಗೆ, ಅತಿಯಾದ ಸಿಹಿ ಗಳು, ಉಪ್ಪಿನ ತಿಂಡಿಗಳೂ ಕೂಡ ಜಂಕ್ ಫುಡ್ ಗಳೇ. ಪ್ಯಾಕೇಟು ಆಹಾರಗಳಲ್ಲಿ ಕೊಬ್ಬಿನಂಶ, ಸಕ್ಕರೆಯ ಅಂಶ, ಕೃತಕ ಬಣ್ಣಗಳು ಸಂರಕ್ಷಕಗಳ ಓದಿ ನೋಡಿ ಕೊಳ್ಳಿ. ಅತಿಯಾಗಿ ಸಂಸ್ಕರಿಸಿ, ಸಂರಕ್ಷಿಸಿ ಪ್ಯಾಕ್ ಮಾಡಲಾದ ಆಹಾರವನ್ನು ಕೆಡದಂತೆ ತಡೆಯಲು, ರಾಸಾಯನಿಕ ಮತ್ತು ಕೆಲವು ವರ್ಧಕಗಳನ್ನು ಬಳಕೆಮಾಡಲಾಗುತ್ತದೆ . ಗ್ರಾಹಕರನ್ನು ಆಕರ್ಷಿಸಲು, ರುಚಿಸಲು, ಅತೀ ಹೆಚ್ಚು ಸಿಹಿ, ಉಪ್ಪು, ಬಣ್ಣ, ಕೊಬ್ಬು ಇರುವಂತಹ ವರ್ಧಕಗಳ ಮೂಲ ಆಹಾರಕ್ಕೆ ಬೆರೆಸುತ್ತಾರೆ. ಇವೆಲ್ಲವೂ ಆ ಸಮಯಕ್ಕೆ ರುಚಿ ಎನಿಸಿದರೂ, ದೇಹಕ್ಕೆ ವಿಷಮ. ಮಕ್ಕಳಿಗೆ ನೀಡುವ  ಪ್ಯಾಕೆಟ್ ಜ್ಯೂಸು, ಜ್ಯಾಮ್, ಬಿಸ್ಕತ್ತು ಚಾಕೊಲೇಟ್ ಗಳಲ್ಲಿ ಅತ್ಯಂತ ಹೆಚ್ಚಿನ ರಾಸಾಯನಿಕ ಮತ್ತು ವರ್ಧಕಗಳಿರುತ್ತವೆ. ಬಿಸ್ಕತ್ತಿನ ಮೈದಾ ಹೊಟ್ಟೆಗೆ ಜೀರ್ಣವಾಗುವುದಿಲ್ಲ. ಮಕ್ಕಳು ಸದಾ ಹೊಟ್ಟೆನೋವಿನಿಂದ ನರಳುತ್ತಾರೆ. ದೇಹ ರಿಪೇರಿಯ ಶ್ರಮಕ್ಕೆ ದೇಹದ ಎಲ್ಲ ಶಕ್ತಿಯೂ ವ್ಯವವಾದರೆ, ಸದೃಢ ಬೆಳವಣಿಗೆ ಹೇಗೆ ತಾನೇ ಸಾಧ್ಯ?  ಹಾಗಾಗಿ ಮಕ್ಕಳಿಗೆ  ಬಾಯಾಡಲು ಮನೆಯಲ್ಲಿಯೇ ಮಾಡಿದ ತಾಜಾ ತಿಂಡಿ ಅಥವಾ ಹಣ್ಣುಆರೋಗ್ಯಕರ ಡ್ರೈಫ್ರೂಟ್ಸ್ ಗಳ ಆಯ್ಕೆ ಮಾಡಿಕೊಳ್ಳಿ. ವಿಟಮಿನ್ ಡಿ, ಮೆಗ್ನಿಶಿಯಂ, ಸತು, ಒಮೇಗಾ ೩ ಕೊಬ್ಬಿನಾಮ್ಲ ಇರುವ ಆಹಾರ ಸತ್ವಗಳನ್ನು ಹುಡುಕಿ ಪಟ್ಟಿ ಮಾಡಿಕೊಂಡು ಅವುಗಳ ಬಳಕೆ ಪ್ರಯತ್ನಪೂರಕವಾಗಿ ಪದಾರ್ಥಗಳಲ್ಲಿ ಮಾಡಬೇಕು. 

 ಕೊನೆ ಹನಿ : ಆಹಾರ ಎಂದರೆ ಕೇವಲ ಹೊಟ್ಟೆಗೆ ತಿನ್ನುವ ಆಹಾರವೊಂದೇ ಅಲ್ಲ, ದೇಹಕ್ಕೆ ನೀಡುವ ಸಕಲ ಸವಲತ್ತುಗಳೂ ಆಹಾರವೇ. ಪೌಷ್ಟಿಕ ಶಕ್ತಿಯ ಜೊತೆ, ಧನಾತ್ಮಕ ಚಿಂತನೆ, ಅಸೂಯೆ ಕೋಪ  ಇಲ್ಲದಿರುವ ಬದುಕು, ಮನಸ್ಪೂರ್ತಿಯಾಗಿ ಅನುಭವಿಸುವ ಸಂತೋಷ , ನಗು, ವ್ಯಾಯಾಮ , ಪ್ರಾಣಾಯಾಮ, ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಎಲ್ಲವೂ ಕೂಡ ಈ ದೇಹಕ್ಕೆ ಆಹಾರವೇ. ನಿರೋಗಿಯಾಗಿ ಬದುಕುವ ಜೀವನ ಶೈಲಿಯೇ ಮನುಷ್ಯನ ಈಗಿನ ನಿಜವಾದ ಶ್ರೀಮಂತಿಕೆ ಆಗಿದೆ. ಅದೊಂದು ಕಲಿಕೆ. ಹಾಗಾಗಿ ಉತ್ತಮ ಆಹಾರ ತಿನ್ನಲು ಕಲಿಯೋಣ. 








 .