ಶುಕ್ರವಾರ, ಡಿಸೆಂಬರ್ 2, 2022

ಭಾರತೀಯ ನೃತ್ಯಕಲೆ

ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಭಾರತೀಯ ನೃತ್ಯವು ಅಂತಹ ಗೌರವಾನ್ವಿತ ಗುರುತುಗಳಲ್ಲಿ ಒಂದು.  ಭಾರತದಲ್ಲಿ, ಆಯಾಯ ಭೌಗೋಳಿಕ  ಪ್ರದೇಶಗಳಿಗೆ, ಅಲ್ಲಿನ ಸ್ಥಳೀಯ ಸಂಪ್ರದಾಯಗಳಿಗೆ, ರೀತಿನೀತಿಗಳಿಗೆ ತಕ್ಕಂತೆ ಅನೇಕ ಮಾದರಿಯ ನೃತ್ಯಗಳು, ರೂಪ ತಾಳಿ, ಅಭಿವೃದ್ಧಿ ಹೊಂದಿವೆ. ಮುಖ್ಯವಾಗಿ, ಭರತನಾಟ್ಯ, ಕುಚಿಪುಡಿ, ಕಥಕ್, ಒಡಿಸ್ಸಿ, ಕಥಕಳಿ ಇತ್ಯಾದಿ  ಶಾಸ್ತ್ರೀಯ ನೃತ್ಯಮಾದರಿಗಳು ಜಗತ್ಪ್ರಸಿದ್ಧ ಕಲೆಗಳೆನಿಸಿವೆ.  ಇದರ ಜೊತೆಗೆ, ಯಕ್ಷಗಾನ, ಡೊಳ್ಳು, ಕರಗ, ಝೂಮರ್, ಲಾವಣಿ, ಭಾಂಗ್ರಾ, ಗಿಡ್ಡ, ರಾಸಲೀಲಾ, ಗರ್ಬಾ, ಧಾಂಡೀಯ, ಲಂಬಾಡಿ ನೃತ್ಯ, ಬಿಹು ಇತ್ಯಾದಿ ಮೂವತ್ತಕ್ಕೂ ಹೆಚ್ಚು ಬಗೆಯ ಜಾನಪದ ನೃತ್ಯ ಕಲೆಗಳು  ನಮ್ಮ ಭಾರತೀಯ ಸಂಸ್ಕೃತಿಗೆ  ಅನನ್ಯತೆ ಮತ್ತು ನವೀನತೆಯನ್ನು ತಂದಿದೆ. 

ಪ್ರತೀ ೧೦೦ ಕಿ.ಮೀ ಗೆ ಉಪಭಾಷೆಗಳು ಬದಲಾಗುವಂತಹ ವೈವಿಧ್ಯಮಯ ದೇಶ ನಮ್ಮದು. ನೃತ್ಯ ಶೈಲಿ, ಉಡುಗೆ, ಕಲಾವಿದರು ಬದಲಾಗುತ್ತಾರೆ. ಆದರೆ ಎಲ್ಲದರ ಮೂಲ ಉದ್ದೇಶವೊಂದೇ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ನಾನಾ ಬಗೆಯ ಅನುಭವಗಳಿಗೆ ಒಂದು ಜನಾಂಗ ಚಲನೆಯ  ವ್ಯಕ್ತಪಡಿಸುವ ಪ್ರತಿಕ್ರಿಯೆಯಾಗಿ ಜಾನಪದ ನೃತ್ಯಗಳು ಹುಟ್ಟಿಕೊಂಡದ್ದು. ದೇವರಿಗೆ ಕೃತಜ್ಞತೆ ಸಲ್ಲಿಸಲು, ಬದುಕಿನ  ಬೇರೆ ಬೇರೆ ವೃತ್ತಿ ಜವಾಬ್ಧಾರಿಗಳ ನೆನಪಿಸಿಕೊಳ್ಳಲು , ಸಂತೋಷ ಸಂಭ್ರಮಿಸಲು, ಕೆಡುಕು ನಿವಾರಿಸಿಕೊಳ್ಳಲು, ಒಗ್ಗಟ್ಟಾಗಿರಲು,  ಋತುಮಾನದಲ್ಲಾಗುವ ಬದಲಾವಣೆ ಕುರಿತು ಅನಿಸಿಕೆ ವ್ಯಕ್ತಪಡಿಸಲು, ಸೂರ್ಯ ಚಂದ್ರರ ಉದಯ ಅಸ್ತಮ ಸೂಚಿಸಲು, ಪ್ರಕೃತಿ, ಪ್ರಾಣಿ-ಪಕ್ಷಿಗಳ ಚಲನವಲನಗಳನ್ನು ಅಭಿನಯದ ಮೂಲಕ ಹಿಡಿದಿಡಲು,  ಹಿಂದಿನಕಾಲದವರು  ಕಂಡುಕೊಂಡ ಒಂದು ಮುಖ್ಯ ಮಾಧ್ಯಮವಾಗಿತ್ತು!  

 ಭಾರತೀಯ ಮುಖ್ಯ ಎಂಟು ಶಾಸ್ತ್ರೀಯ ನೃತ್ಯಗಳು 'ನಾಟ್ಯಶಾಸ್ತ್ರ'ದ ನಿಯಮಗಳನ್ನೊಳಗೊಂಡಿವೆ. ನಾಟ್ಯಶಾಸ್ತ್ರದಲ್ಲಿ, ಪ್ರತಿಯೊಂದು ಶಾಸ್ತ್ರೀಯ ನೃತ್ಯ ಪ್ರಕಾರಗಳ ನಿರ್ಧಿಷ್ಟ ಲಕ್ಷಣಗಳನ್ನೂ, ಉಲ್ಲೇಖಿಸಲಾಗಿದೆ. ಜೀವನದ ನವರಸ ಭಾವನೆಗಳನ್ನೂ ಅತ್ಯಂತ ಸುಂದರವಾಗಿ ನಿರೂಪಿಸುವ ಇಂತಹ ನೃತ್ಯ ಪ್ರದರ್ಶಕ ಕಲೆಗಳು, ಬದುಕಿನ ಸಾರವನ್ನು ಆಚರಿಸಲು ಸಹಾಯ ಮಾಡುತ್ತವೆ. 
 
ನೃತ್ಯ  ಎಂಬುದು ಕೇವಲ ಮನೋರಂಜನೆಯ ವಿಷಯವಲ್ಲ, ನೃತ್ಯ ಮತ್ತು ನರ್ತಕರ ಬದುಕು ಕೇವಲ ವಾಣಿಜ್ಯ ಉದ್ದೇಶಕ್ಕಾಗಿ ತಯಾರಾಗುವ ಸರಕಲ್ಲ, ಅದು ನಮ್ಮ ಸಂಸ್ಕೃತಿ. ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಕಲೆ ಸರ್ವೇ ಸಾಮಾನ್ಯವಾದುದ್ದಲ್ಲ;  ಅದೊಂದು ಧ್ಯಾನ! ಇಂತಹ ಭಾರತೀಯ ಸಂಸ್ಕೃತಿಯ ಪ್ರತೀಕವಾದ ನೃತ್ಯಕಲೆ ಮತ್ತು ಅದರಲ್ಲಿನ ವೈವಿಧ್ಯತೆಯ ಕುರಿತಾದ ವಿಷಯಗಳ ಹಂಚಿಕೊಳ್ಳುವ ಪ್ರಯತ್ನ ನನ್ನ ಕೈಯಿಂದ ಬರೆದ ಚಿತ್ರಗಳ ಮೂಲಕ...  



 (ನೃತ್ಯಾಭ್ಯಾಸ ಮಾಡಿದವಳು ನಾನಲ್ಲ; ಶಾಸ್ತ್ರಪಠ್ಯಗಳಿರುವ ನೃತ್ಯ ಮಾದರಿಗಳಲ್ಲಿ, ಯಾವುದೇ ಭಂಗಿ ಅಥವಾ ಸನ್ನೆಗಳ ದೋಷ ಕಂಡರೆ, ನನಗೆ ತಿಳಿಸಿ, ತಿದ್ದಿ ಪ್ರೋತ್ಸಾಹಿಸುವಿರಿ ಎಂಬ ನಂಬಿಕೆಯೊಂದಿಗೆ.. )



ಸಿಕ್ಕಿಂ - ಟಿಬೆಟಿಯನ್ ಧ್ವಜಗಳು

ಹಿಮಾಲಯದ ಕಾಂತೀಯ ನೋಟಗಳೊಂದಿಗೆ, ಗಮನಾರ್ಹವಾದ ಗಮ್ಯಸ್ಥಾನಗಳ ಹೇರಳತೆಯೊಂದಿಗೆ ಸರ್ವ ಕಾಲಕ್ಕೂ, ಭೇಟಿ ನೀಡಬಹುದಾದ ಪ್ರವಾಸ ಸ್ಥಳಗಳಲ್ಲಿ, ಭಾರತದ ಈಶಾನ್ಯ ಭಾಗದಲ್ಲಿರುವ ಸಿಕ್ಕಿಂ ಕೂಡ ಒಂದು. ಸೆವೆನ್ ಸಿಸ್ಟರ್ಸ್ ರಾಜ್ಯಗಳ ಪೈಕಿ ಕಿರಿದು. ದಾರ್ಜೀಲಿಂಗ್ ನಲ್ಲಿರುವಂತೆಯೇ, ಸಿಕ್ಕಿಂನಲ್ಲೂ ಕೂಡ ಟಿಬೆಟಿಯನ್ ಮೊನಸ್ಟರಿಗಳು, ಬೌದ್ಧ ಧರ್ಮದ ಅನುಯಾಯಿಗಳು ಸಾಕಷ್ಟು ಜನರಿದ್ದಾರೆ.  ಹಿಮಾಲಯದ ಪರ್ವತಗಳು, ಬೆಳ್ಳನೆಯ ಮೋಡಗಳು, ಇಬ್ಬನಿ ಹರಡಿ ಕ್ಷಣಕ್ಷಣಕ್ಕೆ ಮಬ್ಬಾಗುವ ಹಾದಿಗಳು, ಹಚ್ಚಹಸಿರು ಮತ್ತವುಗಳ ಮಧ್ಯೆ ಅಲ್ಲಲ್ಲಿ ಕಾಣಿಸುವ ಬೌದ್ಧ ಧರ್ಮದ ಬಣ್ಣ ಬಣ್ಣದ ಧ್ವಜಗಳು!ಈ ವಿವಿಧ ಬಗೆಯ ಧ್ವಜಗಳು ನೋಡುಗರಿಗೆ ಅವರವರ ಭಾವಕ್ಕೆ ತಕ್ಕಂತೆ ಸಾಂತ್ವನ, ಸಂತಸದ ಅನುಭವವನ್ನು ನೀಡುತ್ತದೆ. ನಮ್ಮ ಪ್ರವಾಸದ ಹಾದಿಯುದ್ದಕ್ಕೂ ಕಾಣಸಿಗುತ್ತಿದ್ದ ಈ ಬಣ್ಣಬಣ್ಣದ ಧ್ವಜಗಳ ಕುರಿತಾಗಿ ಸಂಗ್ರಹಿಸಿದ ಒಂದಷ್ಟು ವಿಷಯಗಳು.. 

ಚಿತ್ರಗಳೊಂದಿಗೆ.. 






ಟಿಬೆಟಿಯನ್ ಜನರು ಪ್ರಕೃತಿಯನ್ನು ಗೌರವಿಸಲು ಈ ಪ್ರಾರ್ಥನಾ ಧ್ವಜಗಳನ್ನು ನೆಡುತ್ತಾರೆ. ಧ್ವಜದಲ್ಲಿನ ಐದು ಬಣ್ಣಗಳಲ್ಲಿ ಬಿಳಿ ಬಣ್ಣ ಗಾಳಿಯನ್ನೂ, ಕೆಂಪು ಬಣ್ಣ ಬೆಂಕಿಯನ್ನೂ, ಹಸಿರು ಬಣ್ಣ ನೀರನ್ನೂ, ಹಳದಿ ಭೂಮಿಯನ್ನೂ ಮತ್ತು ನೀಲಿ ಆಕಾಶವನ್ನು ಸಂಕೇತಿಸುತ್ತದೆ. ಈ ಧ್ವಜಗಳಲ್ಲಿ ಬೌದ್ಧರ ಮೂಲ ಪ್ರಾರ್ಥನಾ ಮಂತ್ರವಾದ ' ಓಂ ಮಣಿ ಪದ್ಮೇಹಂ" ಎಂದು ಬರೆದಿರುತ್ತದೆ. ಅಹಂಕಾರ, ಅಸೂಯೆ, ಅಜ್ಞಾನ, ದುರಾಸೆ ಮತ್ತು  ಕೋಪವನ್ನು ನಿಗ್ರಹಿಸಲು ಈ ಮಂತ್ರ ಸಹಾಯ  ಮಾಡುತ್ತದೆ ಎಂಬ ನಂಬಿಕೆಯಿದೆ. ಈ ಬಣ್ಣಬಣ್ಣದ ಧ್ವಜಗಳಲ್ಲಿ ಬರೆದಿರುವ ಮಂತ್ರಗಳು ೨೫೦೦ ವರ್ಷಗಳ ಹಿಂದೆ ಭಾರತದಲ್ಲಿ ಶಾಕ್ಯಮುನಿ ಬುದ್ಧನ ಪ್ರವಚನಗಳ ಪಠ್ಯಗಳು, ಧಾರಣೀ ಮಂತ್ರ ಇನ್ನೂ ಅನೇಕ ಬಗೆಯ ಸಂಸ್ಕೃತಮಂತ್ರಗಳಿಂದ ಕೂಡಿವೆ ಎಂದು ಹೇಳಲಾಗುತ್ತದೆ. ಈ ಧ್ವಜಗಳು ಎಂದೂ ಸ್ಥಿತವಾಗಿ ನಿಲ್ಲಬಾರದಂತೆ, ಧ್ವಜಗಳನ್ನು ನೆಲಕ್ಕೆ ಇಡಬಾರದಂತೆ, ಇವುಗಳು ಹಾರಾಡುತ್ತಲೇ ಇರಬೇಕಂತೆ. ಹಾಗಾಗಿಯೇ ಇದನ್ನು ಸಾಮಾನ್ಯ ಮನೆಯ ತೋರಣವಾಗಿ ಕಟ್ಟುತ್ತಾರೆ ಇಲ್ಲವೇ ಮೇಲ್ಚಾವಣಿ ಇನ್ನಿತರ ಎತ್ತರದ ಸ್ಥಳಗಳಲ್ಲಿ ಕಟ್ಟುತ್ತಾರೆ. ದೇವರಿಗೋಸ್ಕರ ಕಟ್ಟುವ ಧ್ವಜಗಳಲ್ಲ ಇವು. ಬದಲಾಗಿ ಈ ಧ್ವಜಗಳಲ್ಲಿನ ಮಂತ್ರಗಳು ಗಾಳಿಯನ್ನುಶುದ್ಧೀಕರಿಸುತ್ತವೆ, ವಾತಾವರಣವನ್ನು ಪವಿತ್ರಗೊಳಿಸುತ್ತವೆ,  ದೈವದ ಧನಾತ್ಮಕ ಶಕ್ತಿಯನ್ನು ಎಲ್ಲೆಡೆ ಪಸರಿಸುತ್ತದೆ, ಶಾಂತಿಯನ್ನು ತರುತ್ತವೆ. ಬಣ್ಣಗಳು ಸಂತೋಷವನ್ನು ಕೊಡುತ್ತವೆ ಎಂಬ ಪ್ರತೀತಿಯಿದೆ. 










ಈ ರೀತಿಯ ಧ್ವಜಗಳಲ್ಲಿ ಎರಡು ಬಗೆಗಳಿವೆ. ಸಮತಲವಾಗಿರುವ ಧ್ವಜಗಳಿಗೆ ಲುಂಗ್ದಾ ಎಂದೂ, ಲಂಬವಾಗಿರುವ ಧ್ವಜಗಳಿಗೆ ದಾರ್ಚೊ ಎಂದೂ ಕರೆಯುತ್ತಾರೆ. ಲಂಬವಾದ ಧ್ವಜಗಳು ಸಾಮಾನ್ಯವಾಗಿ ನಮಗೆ ಹಿಮಾಲಯದ ಎತ್ತರೆತ್ತರ ಬೆಟ್ಟಗಳ ಮೇಲೆ ಅತ್ಯಂತ ಎತ್ತರದ ಸ್ಥಳಗಳಲ್ಲಿ ಕಂಡು ಬಂದವು. ಯುದ್ಧ ಭಾವನೆಯಿಂದ ಶಾಂತಿ ಭಾವನೆಗೆ ಪರಿವರ್ತಿತಗೊಳ್ಳುವ ಸಂದೇಶವನ್ನು ಈ ಧ್ವಜಗಳು ಸಾರುತ್ತವೆ. ಕೇವಲ ಬಣ್ಣ ಬಣ್ಣದ ಬಟ್ಟೆಗಳ ಚೂರಿನಂತೆ ಕಾಣುವ ೪೦೦ ಕ್ಕೂ ಹೆಚ್ಚು ಬಗೆಯ ಮಂತ್ರಗಳು ಓದಲು ಸಿಗುತ್ತವೆಯಂತೆ.  ಧ್ವಜಗಳ ಬಣ್ಣ ಮಾಸಿದಷ್ಟೂ ಕೂಡ ಶ್ರೇಷ್ಠ!ಧ್ವಜಗಳ ಕಟ್ಟುವುದು ಮತ್ತು ತೆಗೆಯುವುದಕ್ಕೂ ಕೂಡ ಅವರ ಪಂಚಾಂಗದಲ್ಲಿನ ಶುಭದಿನಗಳ ಎಣಿಕೆಯ ಪದ್ಧತಿ ಇದೆ. ಹಳೆಯ ಧ್ವಜಗಳನ್ನು ತೆಗೆಯುವ ಸಂದರ್ಭ ಬಂದರೆ, ಅವುಗಳನ್ನು ಅಷ್ಟೇ ಗೌರವದಿಂದ ಬೆಂಕಿಗೆ ಆಹುತಿ ನೀಡುತ್ತಾರೆ.  ಮಂತ್ರಗಳು, ಪ್ರಾರ್ಥನೆಗಳು ಪಂಚಭೂತಗಳಲ್ಲಿ ಅವು ಲೀನವಾಗುತ್ತಿವೆ, ಜಗತ್ತಿಗೆ ಒಳಿತಾಗುತ್ತಿದೆ ಎಂಬ ವಿಶ್ವಾಸ ಇಲ್ಲಿನ ಜನರದ್ದು. 



ಹಾಗೆಯೇ ಇಲ್ಲಿನ ಎತ್ತರದ ಬೆಟ್ಟದ ಪ್ರದೇಶಗಳಲ್ಲಿ ರಸ್ತೆಯ ಪಕ್ಕ ಕಾಣಸಿಗುವ ಬಿಳಿಯ ಬಣ್ಣದ ಲಂಬ ಧ್ವಜಗಳನ್ನು ಕಟ್ಟುವುದು, ಮರಣ ಹೊಂದಿದವರ ಜೀವನ್ಮುಕ್ತಿ ಕ್ರೆಯೆಯ ವಿಧಿವಿಧಾನಗಳಲ್ಲಿ ಒಂದು. 


  





ಬುಧವಾರ, ಅಕ್ಟೋಬರ್ 19, 2022

ಟಿಬೆಟಿಯನ್ ಘುಮ್ ಮೊನಸ್ಟರಿ

ದಾರ್ಜೀಲಿಂಗ್ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವಂತೂ ವರ್ಣಿಸಲಸದಳ. ಅದರ ಜೊತೆಯಲ್ಲಿ, ದಸರಾ ಸಮಯದಲ್ಲಿ ದಾರ್ಜೀಲಿಂಗ್ ಪ್ರವಾಸ ಹೋದದ್ದು, ಅಲ್ಲಿನ ಅನೇಕ ಧರ್ಮಗಳ ಹಬ್ಬಗಳ ಆಚರಣೆಯ ಕುರಿತಾಗಿಯೂ ತಿಳಿಯಲು ಸಹಾಯಕವಾಯಿತು. ಅಂತದೇ ಒಂದು ದೇವಿ ಪೂಜೆಯ ಆಚರಣೆಯ ವಿಶೇಷತೆ ಕಂಡದ್ದು ಅಲ್ಲಿನ ಟಿಬೆಟಿಯನ್ ಘುಊಮ್ಮೊನಸ್ಟರಿಯಲ್ಲಿ.   

ದಾರ್ಜೀಲಿಂಗ್ ನಲ್ಲಿರುವ ಟಿಬೆಟಿಯನ್ ಘುಮ್ ಮೊನಸ್ಟರಿಗೆ (ಮಠ) ಭೇಟಿ ಇತ್ತ ಕ್ಷಣ. ಭವಿಷ್ಯದ ಬುದ್ಧ ಎಂದು ಕರೆಯಲಾಗುವ ಗೌತಮ ಬುದ್ಧನ ಉತ್ತರಾಧಿಕಾರಿ, 'ಮೈತ್ರೇಯ' ಬುದ್ಧನ ದೇವಾಲಯವಿದು. ಟಿಬೆಟಿಯನ್ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಧರ್ಮಮಠದ ಬಾಗಿಲಿನ ಕಮಾನಿನಲ್ಲಿ ಗರುಡನ ಕೆತ್ತನೆಯಿದೆ.  ಮೈತ್ರೇಯ ಬುದ್ಧನ ೧೫ ಅಡಿ ಎತ್ತರದ ಸಿಂಗರಿಸಿದ ಅದ್ಭುತ ಮೂರ್ತಿಯನ್ನು ಟಿಬೆಟಿನ್ನಿಂದಲೇ ಮಣ್ಣನ್ನು ತರಿಸಿ ಮಾಡಿದ ಮೂರ್ತಿಯಂತೆ! ಇದರ ಮುಂದಿರುವ ಎರಡು ದೊಡ್ಡ ಎಣ್ಣೆಯ ದೀಪಗಳು ಈ ವರೆಗೆ ಆರಿದ ದಾಖಲೆಯಿಲ್ಲ ಎನ್ನುತ್ತಾರೆ ಅಲ್ಲಿನ ಬೌದ್ಧ ಸನ್ಯಾಸಿಯೊಬ್ಬರು. ದೀಪದ  ಸುತ್ತಲಿನ ಗೋಡೆಗಳಮೇಲೆ ಬುದ್ಧನ ಕುರಿತಾದ ವರ್ಣರಂಜಿತ ಕಿರುಚಿತ್ರಗಳು,ಅಲ್ಲಿ ಟಿಬೆಟಿಯನ್ ಬೌದ್ಧರು ಸಾಲಾಗಿ ಕುಳಿತುಕೊಂಡು ಒಂದೇ ರಾಗದಲ್ಲಿ ಮಂತ್ರ ಪಠನೆ ಮಾಡುತ್ತಿದ್ದುದು, ಡ್ರಮ್ಸ್ ಮತ್ತು ಸಿಂಬಲ್ಸ್ ಬಡಿತ, ಪೈಪ್ಮಾದರಿಯ ಸಂಗೀತ ವಾದ್ಯಗಳ ನುಡಿಸುತ್ತ ಮಾಡಿದ ಪ್ರಾರ್ಥನೆ ಎಲ್ಲವೂ ಸೇರಿ ಒಂದು ರೀತಿಯ ಮಾಂತ್ರಿಕ ಭಾವನೆ ನೀಡುತ್ತಿತ್ತು. 







ದಶೈನ್(ದಸರಾ) ಹಬ್ಬದ ಆಚರಣೆಯ ಪ್ರಯುಕ್ತವಾಗಿ ಅಲ್ಲಿ ದೇವಿ ತಾರಾ ಕುರಿತಾದ ೧ ಲಕ್ಷ ಮಂತ್ರ ಪಠನೆ ಕಾರ್ಯಕ್ರಮ ನಡೆಯುತ್ತಿತ್ತು. ತಾರಾ ದೇವಿ ಯನ್ನು ವಜ್ರಯಾನ ಬೌದ್ಧ ಧರ್ಮದಲ್ಲಿ ಸ್ತ್ರೀ ಬುದ್ಧನಾಗಿ ಚಿತ್ರಿಸಲಾಗಿದೆ. 'ವಿಮೋಚನೆಯ ತಾಯಿ' ಎಂದು ಅವಳನ್ನುಕರೆಯುತ್ತಾರೆ . ಸಾಧನೆಗೆ ಬೇಕಾದ ಸದ್ಗುಣವನ್ನು ಈಕೆ ಪ್ರತಿನಿಧಿಸುತ್ತಾಳೆ ಎಂದು ನಂಬಲಾಗಿದೆ. 




ಪ್ರಾರ್ಥನೆಯ ನಂತರ ನೆರೆದವರಿಗೆ ಟಿಬೆಟಿಯನ್ ಹೋಲಿ ಟೀ ಅನ್ನು ವಿತರಿಸಲಾಗುತ್ತದೆ. ಟಿಬೆಟಿಯನ್ ಪಾಕಪದ್ಧತಿಯ ಪ್ರಕಾರ ತಯಾರಿಸಲಾಗುವ 'ಪವಿತ್ರ ಟೀ' ಅನ್ನು ಕುಡಿಯಲು ಪೇಯವಾಗಿ ನೀಡುತ್ತಾರೆ. ಟೀ ಮತ್ತು ವಿವಿಧ ಬಗೆಯ ಗಿಡಮೂಲಿಕೆ ಸೊಪ್ಪುಗಳನ್ನು ಹಾಕಿ ಕುದಿಸಿ ಘಾಡವಾದ ಡಿಕಾಕ್ಷನ್ ಮಾಡಿ, ಅದನ್ನು ಬಿದಿರಿನ ಬೆತ್ತಳಿಕೆಯ ಮಾದರಿಯ ಬೊಂಬಿನೊಳಗೆ ಹಾಕಿ,  ಅದಕ್ಕೆ ಯಾಕ್ ಮೃಗದ ಹಾಲು, ಬೆಣ್ಣೆ ಮತ್ತು ಉಪ್ಪು ಹಾಕಿ, ಬೆಣ್ಣೆಯ ಎಣ್ಣೆಯಂಶ ಸಂಪೂರ್ಣ ಮಿಳಿತಗೊಳ್ಳುವಲ್ಲಿಯವರೆಗೆ, ಸಾಕಷ್ಟು ಸಮಯವಾದವರೆಗೆ ಕಡೆದು ಬಿಸಿ ಬಿಸಿ ಹಬೆಯಾಡುತ್ತಿರುವಾಗಲೇ ಕುಡಿಯಲು ಕೊಡುತ್ತಾರೆ. ನಾವು ಹೋದ ದಿನದಂದು, ಮಾನಸ್ಟ್ರಿಯ ಹೊರಗಡೆ ಸ್ವಯಂ ಸಂಘವೊಂದು ಚಳಿಯಿಂದ ಕೊರೆಯುತ್ತಿರುವವರಿಗಾಗಿ ಬಿಸ್ಕೀಟು ಮತ್ತು ಚಹಾ ವಿತರಿಸಿ ತಮ್ಮ ಸೇವೆಯನ್ನು ನಡೆಸುತ್ತಿದ್ದರು.


ಯಾವುದೇ ಮೊನಸ್ಟರಿ ಹೊರಾಂಗಣದಲ್ಲಿ ಟಿಬೆಟಿಯನ್ ಬೌದ್ಧರು ಪ್ರಾರ್ಥನೆಗಾಗಿ ಬಳಸುವ ಪ್ರಾರ್ಥನಾ ಚಕ್ರವಿರುತ್ತದೆ. ಕಬ್ಬಿಣ, ಮರದ ತುಂಡುಗಳಿಂದ ಕೆಲವೊಮ್ಮೆ ಕಲ್ಲಿನ ಕೆತ್ತೆನೆಯಲ್ಲೂ ಈ ಸುರುಳಿನ ಚಕ್ರವನ್ನು ನೋಡಬಹುದು, ಇದನ್ನು ಮಣಿ ಚಕ್ರ ಎಂದು ಕರೆಯುತ್ತಾರೆ. ನಮ್ಮಲ್ಲಿನ ಜಪಮಾಲೆ ಇದ್ದಂತೆ. ಅದರ ಮೇಲೆ 'ಓಂ ಮಣಿ ಪದ್ಮೇ ಹಮ್" ಎಂಬ ಪ್ರಾರ್ಥನೆಯ ಬೀಜಮಂತ್ರವನ್ನು ಬರೆದಿರುತ್ತಾರೆ. ಜೊತೆಗೆ ಅಷ್ಟಮಂಗಲ ರಕ್ಷಕರ ಚಿಹ್ನೆ ಕೂಡ ಚಿತ್ರಿತವಾಗಿರುತ್ತದೆ. ಈ ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತಾ, ಈ ಮಂತ್ರವನ್ನು ಹೇಳಿದರೆ, ಸುಖ ಶಾಂತಿ ಲಭಿಸುತ್ತದೆ ಎಂಬ ನಂಬಿಕೆಯಿದೆ. 


ಬೌದ್ಧ ಧರ್ಮದಲ್ಲಿ ನೀರೆಂಬ ಪವಿತ್ರ ವಸ್ತುವಿಗೆ ಅತ್ಯಂತ ಪ್ರಾಶಸ್ತ್ಯ. ನೀವು ಯಾವುದೇ ಬೌದ್ಧ ಮೊನಾಸ್ಟರಿಗೆ ಹೋದರೂ ಅಲ್ಲಿ ಬುದ್ಧನ ಎದುರು ಏಳು ಬಟ್ಟಲುಗಳಲ್ಲಿ ನೀರನ್ನು ಇಟ್ಟಿರುತ್ತಾರೆ. ಇವು ಸಾಂಕೇತಿಕವಾಗಿ, ಕುಡಿಯಲು ನೀರು (ಅರ್ಘ್ಯ), ಸ್ನಾನಕ್ಕೆ ನೀರು (ಪದ್ಯಮ್), ಹೂವು (ಪುಷ್ಪ), ಧೊಪದೃವ್ಯ, ಬೆಳಕು, ಸುಗಂಧದ್ರವ್ಯ ಮತ್ತು ಆಹಾರ ವನ್ನು ಸೂಚಿಸುತ್ತವೆ. ಸಾಂಕೇತಿಕ ರೂಪದ ಅರ್ಪಣೆಗಳಲ್ಲದೆ, ಅನೇಕರು ಅನೇಕ ಬಗೆಯ ಬಿಸ್ಕೀಟು, ಚಾಕಲೇಟು, ವಿಧವಿಧವಾದ ಧಾನ್ಯಗಳಿಂದ ಮಾಡಿದ ಕೇಕ್, ಸಿಹಿತಿಂಡಿಗಳು, ವಿಧವಿಧವಾದ ಪೇಯಗಳನ್ನು ಕೂಡ ನೈವೇದ್ಯಕ್ಕೆ ನೀಡುತ್ತಾರೆ. ಹೀಗಿದ್ದಾಗ,  ಮಗಳ ಬುದ್ಧನನ್ನು ಕಮ್ಮಿ, ನೈವೇದ್ಯಗಳನ್ನು ಜಾಸ್ತಿ ನೋಡುತ್ತಿದ್ದಳು ಎಂಬುದನ್ನು ಮತ್ತೆ ಹೊಸತಾಗಿ ಹೇಳಬೇಕಿಲ್ಲ ಅಲ್ಲವೇ? 

 

ಶುಕ್ರವಾರ, ಅಕ್ಟೋಬರ್ 14, 2022

ಬೆಟ್ಟಗಳ ರಾಣಿ - ದಾರ್ಜೀಲಿಂಗ್

ಹಿಮಾಲಯದ ಪರ್ವತ ಶ್ರೇಣಿಗಳೆಂದರೆ ನನಗೇಕೋ ಮುಗಿಯದ ಆಸೆ. ಈ ಸಲದ ಪ್ರವಾಸಕ್ಕೆ ನಮ್ಮ ಗಮನ ಸೆಳೆದದ್ದು ಪಶ್ಚಿಮ ಬಂಗಾಳ. 

ದಾರ್ಜೀಲಿಂಗ್ ಒಂದು ಅತ್ಯಂತ ಸುಂದರವಾದ ಗಿರಿಧಾಮ, ಹಿಮಾಲಯದ ಪರ್ವತ ಶ್ರೇಣಿಯ ಕೆಳಭಾಗದಲ್ಲಿ ಇರುವ ಈ ಪಟ್ಟಣ, ಯುನೆಸ್ಕೋ ದ ವಿಶ್ವ ಪರಂಪರೆಯ ತಾಣದಲ್ಲಿ ಒಂದು. ಪ್ರವಾಸಿಗರಾಗಿ ಈ ಪ್ರದೇಶದ ಸೌಂದರ್ಯವನ್ನು ಸವಿಯಬೇಕೆಂದರೆ, ಡಿಸೇಂಬರ್ ನಂತರದ ಹಿಮಸುರಿತವನ್ನು ಅನುಭವಿಸಬೇಕು ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೆವು. ಆದರೂ ವರ್ಷವಿಡೀ ಮಂಜು ಕವಿದಿರುವ ಊರು, ಹಿಮಾಲಯದ ಮಹೋನ್ನತ ಶ್ರೇಣಿಯ ಪ್ರದೇಶ ಎಂಬ ಅರಿವಿದ್ದರಿಂದ, ಈ ಸಮಯಕ್ಕೆ ಕಾಣಸಿಗುವ ವೈವಿದ್ಯತೆಯನ್ನು ನೋಡಲು ನಾವು ತಯಾರಾಗಿಯೇ ಹೋಗಿದ್ದೆವು. 

ದಾರ್ಜೀಲಿಂಗ್ ಅನ್ನು ಹೆಚ್ಚು ಕಮ್ಮಿ ಬ್ರಿಟಿಷರು ಕಟ್ಟಿದ ನಾಡು ಎಂದೇ ಹೇಳಬಹುದು. ದಾರ್ಜೀಲಿಂಗ್ ನ ಉತ್ತಮ ಹವಾಗುಣದಿಂದ ಆಕರ್ಷಿತವಾಗಿ, ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳ ನಿಯೋಗ, ಈ ಊರನ್ನು ಸಿಕ್ಕಿಂ ರಾಜರಿಂದ ಗುತ್ತಿಗೆಪಡೆದಿದ್ದು. ತೀಕ್ಷ ಉಷ್ಟತೆಯಿಂದ ರಕ್ಷಿಸಿಕೊಳ್ಳಲು ಬ್ರಿಟಿಷರಿಗೆ ಇದೊಂದು ಅತ್ಯಂತ ಪ್ರಿಯವಾದ ಸ್ಟಳವಾಗಿತ್ತು. ಗಿರಿಧಾಮದ ನಿರ್ಮಾಣ, ಪ್ರಾಯೋಗಿಕ ಚಹಾ ತೋಟದ ಹುಟ್ಟು, ಅಲ್ಲಿ ಬಂದು ತಂಗುವ ಬ್ರಿಟಿಷ್ ಜನರಿಗಾಗಿ ಶಿಕ್ಷಣ ಮತ್ತು ಅನೇಕ ಬಗೆಯ ಕ್ಷೇಮಾಭಿವೃದ್ಧಿ ಕೇಂದ್ರಗಳ ನಿರ್ಮಾಣ ಹೀಗೆ ಹಂತಹಂತವಾಗಿ ಮೂಡಿತು ದಾರ್ಜೀಲಿಂಗ್ ಪಟ್ಟಣ. ಅಂದಿನ ದಾರ್ಜೀಲಿಂಗ್ ಹಿಮಾಲಯನ್ ರೈಲ್ವೆ ವ್ಯವಸ್ಥೆಯಿಂದಲೇ, ಈ ಪಟ್ಟಣ ಅತ್ಯಂತ ವೇಗವಾಗಿ ಅಭಿವೃದ್ಧಿಗೊಳ್ಳಲು ಸಹಕಾರವಾದದ್ದು ಎಂದು ಕೂಡಾ ಕೇಳಿ ತಿಳಿದೆವು. 'ಬೆಟ್ಟಗಳ ರಾಣಿ' ಎಂದೇ ಪ್ರಸಿದ್ಧವಾದ ದಾರ್ಜೀಲಿಂಗ್ ನ ಮುಖ್ಯ ಆದಾಯವೇ ಪ್ರವಾಸೋದ್ಯಮ ಮತ್ತು ಚಹಾ ಬೆಳೆ. ಬೆಳ್ಳನೆ  ಹಿಮಾಲಯದ ಹೊಳಪು, ಮೇಲೇರಿದಂತೆ ಮೋಡಗಳ ಜೊತೆಜೊತೆಯೇ ನಾವು ಸಂಚಾರ ಮಾಡುತ್ತಿದ್ದೇವೇನೋಎಂದೆನಿಸುವ ಹಾದಿಗಳು, ಈಗಿನ್ನೂ ಮಳೆಗಾಲ ನಡೆಯುತ್ತಿದ್ದುದರಿಂದ, ಒಂದು ಕ್ಷಣಕ್ಕೆ ಇಬ್ಬನಿಯಿಂದ ೫ ಅಡಿಯಿಂದ ಮುಂದೇನೂ ಕಾಣದಷ್ಟು ಮುಸುಕು, ಮತ್ತೊಂದು ಕ್ಷಣಕ್ಕೆ ಸ್ವಚ್ಛ ತೊಳೆದಿಟ್ಟ ನಿಸರ್ಗ ಸೌಂದರ್ಯದ ಅನಾವರಣ.. ದಾರ್ಜೀಲಿಂಗ್ ಪಟ್ಟಣದ ಸುತ್ತಮುತ್ತ ಕಣ್ಣು ಹಾಯಿಸಿದಷ್ಟೂ ದೂರಕ್ಕೆ, ಪದಗಳಲ್ಲಿ ಬಣ್ಣಿಸಿದಷ್ಟೂ ಕಮ್ಮಿ ಎನ್ನುವಂತಹ ಪ್ರಾಕೃತಿಕ ಸೌಂದರ್ಯ! ಚುಮುಚುಮು ಚಳಿಯ ಸೀಸನ್ ನಡೆಯುತ್ತಿದ್ದ ಈ ಊರಿನಲ್ಲಿ ಬೆಳಗಾಯಿತು ಎನ್ನುವುದು ೪.೩೦ ಸುಮಾರಿನಿಂದಲೇ ಮತ್ತು ಸಂಜೆ ೫.೩೦ ಅಷ್ಟರಲ್ಲಿ ಕತ್ತಲಾಗಿ ಸುಮಾರು ೭.೩೦-೮ ಆಗುವಷ್ಟರಲ್ಲಿ ಇಡೀ ಪಟ್ಟಣ ಮಲಗಿಯಾಗಿರುತ್ತದೆ! ಪ್ರವಾಸೋದ್ಯಮ  ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಲ್ಲಿಂದ ೭೦% ಜನರಿಗೆ ಮುಖ್ಯ ಆದಾಯವನ್ನು ಒದಗಿಸಿಕೊಡುತ್ತಿದೆ. ಉಳಿದಂತೆ ಚಹಾ ಉದ್ಯಮಕ್ಕೆ ಹೆಚ್ಚಿನ ಹೆಂಗಸರು ದುಡಿಮೆಗೆ ಹೋಗುತ್ತಾರೆ. ಆದರೂ ಹೆಚ್ಚಿದ ಪ್ರವಾಸೋದ್ಯಮ, ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಸಮಪಾತವಾಗಿ ಸಂಪೂನ್ಮೂಲಗಳ ನಿರ್ವಹಣೆ ಇಲ್ಲ, ನಗರದ ನಿರ್ಮಾಣ ಅತ್ಯಂತ ಕಿಷ್ಕಿಂದೆಯೆನಿಸುತ್ತದೆ. ಬೆಟ್ಟದ ಮೇಲಿನ ಊರುಗಳು ಹಾಗಾಗಿ ರಸ್ತೆಗಳು ಯಾವುದು ಸಪಾತವಾಗಿರದೆ, ಏರು ಅಥವಾ ಇಳಕಲಿನ ರಸ್ತೆಯೇ ಅಲ್ಲಿ ಸಾಮಾನ್ಯ ಹಾದಿ. ಒಂದೇ ವಾಹನ ಹೋಗುವಷ್ಟು ಕಿರಿದಾದ ರಸ್ತೆ, ಅದರಲ್ಲಿ ಚಾಲಕರ ಚಾಕಚಕ್ಷತೆಯಿಂದ ಎರಡೆರಡು ವಾಹನಗಳು ದಾಟಬೇಕಾದ ಅನಿವಾರ್ಯತೆ. ಇಕ್ಕೆಲಗಳಲ್ಲಿ ಪ್ರಪಾತ ಒಮ್ಮೊಮ್ಮೆ ಎದೆ ಝಲ್ಲೆನ್ನುವ ಅನುಭವ. ಇಲ್ಲಿನ ನಿಸರ್ಗ ಸೌಂದರ್ಯ ನೋಡಿ ಸಂತೋಷಪಡುವಷ್ಟೇ, ನಗರ ಸ್ವಚ್ಛತೆಯ ಕುರಿತಾಗಿ ನಿರ್ಲ್ಯಕ್ಷತೆ ನೋಡಲು ಬೇಸರವಾಗುತ್ತದೆ. ಮೈ ನವಿರೇಳಿಸುವ ಪ್ರಾಕೃತಿಕ  ಸೌಂದರ್ಯವನ್ನು ನೋಡುವುದು ಒಂದು ಕಡೆಯಾದರೆ, ಭೂಕುಸಿತದಂತಹ ಅನಿರೀಕ್ಷಿತ ಪ್ರಾಕೃತಿಕ ವಿಕೋಪದ ಸಮಸ್ಯೆಗಳ ನಡುವೆ ಜನರ ನಿತ್ಯ ಜೀವನ ಮೈಜುಮ್ಮೆನ್ನಿಸುತ್ತದೆ. 

ದಾರ್ಜೀಲಿಂಗ್ ನ ಮತ್ತೊಂದು ವಿಶೇಷ ಇಲ್ಲಿನ ಟ್ರೈನ್. ಇದನ್ನು "ಟಾಯ್ ಟ್ರೈನ್" ಎಂದೂ ಕರೆಯುತ್ತಾರೆ. ಸಿಲಿಗುರಿಯಿಂದ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೆಯಲ್ಲಿ80 ಕಿ.ಮೀ ಪಯಣ. ಮಧ್ಯೆ ಮುಖ್ಯವಾದ ಒಂದೆರಡು ಊರುಗಳಲ್ಲಿ ಮಾತ್ರನಿಲ್ದಾಣ. ಎತ್ತರದ ಬೆಟ್ಟವನ್ನು ವಾಹನಗಳು ಓಡಾಡುವ ರಸ್ತೆಯ ಪಕ್ಕದಲ್ಲೇ, ರಸ್ತೆಗೆ ಹೊಂದಿಕೊಂಡಂತೆ ರೈಲಿನ ಹಳಿಗಳ ಮೇಲೆ ಹತ್ತಿಳಿಯುವ ಟಾಯ್ ಟ್ರೈನ್ ಬರುತ್ತಿದ್ದರೆ, ಜನರು ಆ ಸಮಯಕ್ಕೆ ರೈಲಿನ ಹಳಿಗಳಿಂದ ಸರಿದುಕೊಂಡು, ಟ್ರೈನ್ ಹೋಗಿಯಾದ ನಂತರ ಮತ್ತೆ ಆ ಜಾಗವನ್ನು ಮಾಮೂಲು ರಸ್ತೆಯಂತೆ ಬಳಸುವ ಬಗೆ ನೋಡಲೇ ಒಂದು ರೀತಿಯ ಮಜಾ.  UNESCOದಿಂದ ವಿಶ್ವ ಪರಂಪರೆ ತಾಣ ಎಂದು ಘೋಷಿಸಲ್ಪಟ್ಟಿದ್ದು, ಈ ಗೌರವ ಪಡೆದ ವಿಶ್ವದ ಎರಡನೇ ರೈಲ್ವೆ ಇಲ್ಲಿಯದಾಗಿದೆ. 

ನೇಪಾಳಿ ಭಾಷೆ ಹೆಚ್ಚಿನ ಜನರ  ಭಾಷೆಯಾಗಿದ್ದರೂ ಇಲ್ಲಿ ನೇಪಾಳ, ಸಿಕ್ಕಿಂ, ಬಂಗಾಳ ಮತ್ತು ಭೂತಾನ್ ನ ಜನಾಂಗ ಮೂಲದ ಜನರಿದ್ದಾರೆ. ನಾವು ಹೋಗಿದ್ದು ನವರಾತ್ರಿಯ ಸಮಯದಲ್ಲಿ ಆದ್ದರಿಂದ, ಬೆಂಗಾಳಿಯರ ದಸರಾ ಹಬ್ಬದ ವಾತಾವರಣ ಎಲ್ಲೆಡೆ ಕಾಣಸಿಗುತ್ತಿತ್ತು. ಬೌದ್ಧರ ಧರ್ಮಶಾಲೆಯೊಂದಕ್ಕೆ ಭೇಟಿ ಕೊಟ್ಟಾಗ,  ದಸರಾ ಆಚರಣೆಯ ಅಂಗವಾಗಿ ನಡೆಯುತ್ತಿದ್ದ ಒಂದು ಲಕ್ಷ ತಾರಾ ದೇವಿ ಮಂತ್ರ ಪಠಣ ಕಾಣುವ ಅವಕಾಶವಾಯಿತು. 

 ಆಯ್ದ ಚಿತ್ರಗಳು ನಮ್ಮ ಸಧ್ಯದ ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಟ್ರಿಪ್ ನಿಂದ. ಮಳೆಗಾಲದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಇಂತಿಷ್ಟೇ ಸಮಯ ಎಂದು ಇಲ್ಲಿ ಹೇಳಲಾಗದು. ಹಸಿ ಅಂಶ ಹೆಚ್ಚಾದ ಹಾಗೆಯೂ ಗುಡ್ಡ ಬೆಟ್ಟ ಬಂಡೆಗಳು ಕುಸಿಯುವುದು ಇಲ್ಲಿ ಸರ್ವೇ ಸಾಮಾನ್ಯ ಸಂಗತಿ. ಪ್ರವಾಸದುದ್ದಕ್ಕೂ  ಪಡೆದ ಒಂದಷ್ಟು ಮಾಹಿತಿಗಳನ್ನು, ನೋಡಿದ ಸ್ಥಳಗಳ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 


೧. ಹಾದಿಯಲ್ಲಿ ಕಂಡ ನವರಾತ್ರಿ ಉತ್ಸವ. 


೨. ಸ್ವರ್ಗಕ್ಕೆ ಹಾದಿ ಎಂಬಂತೆ ಕಾಣುವ ನಿಸರ್ಗದ ಚಿತ್ರಣ 


೩. ರಸ್ತೆಯ ಪಕ್ಕದಲ್ಲೇ ಚಲಿಸುವ ಟಾಯ್ ಟ್ರೈನ್ 


೪. ಸಂಜೆ ೫.೩೦ ಅಷ್ಟಕ್ಕೆಲ್ಲ ಕತ್ತಲು ಆವರಿಸಿಯಾಗಿರುತ್ತದೆ 

೫. Famous iconic place - center of the city - Darjeeling Clock tower. Its also called as Chowrasta means where four roads joins.

೬. ಬೆಟ್ಟದ ಮ್ಯಾಗಿನ ಊರು ಇದು.. ಒಂದೋ ಹತ್ತಬೇಕು ಇಲ್ಲವೇ ಇಳಿಯಬೇಕು. ನಡೆಯುವಂತಹ ಸಾದಾ ರಸ್ತೆ ಅತ್ಯಂತ ವಿರಳ
೭. ಹಾವಿನಂತೆ ಬಳಸಿ ಬರುವ ರಸ್ತೆಗಳನ್ನು ಜೋಡಲು ಅಲ್ಲಲ್ಲಿ ಕಟ್ಟಡಗಳ ಮಧ್ಯೆ ಮೆಟ್ಟಿಲುಗಳ pathway. ಏರ್ಪೋರ್ಟ್ ನಿಂದ ಬರುವಾಗ ದಾರ್ಜೀಲಿಂಗ್ ನಲ್ಲಿ ಮಳೆ-ಟ್ರಾಫಿಕ್ನಿಂದಾಗಿ ಒಂದು ಕಿಮೀ ನಷ್ಟು ದೂರದಲ್ಲಿದ್ದ ನಮ್ಮ ಹೋಟೆಲ್ ಗೆ ಗಾಡಿಯಲ್ಲಿ ಹೋಗಲು ತೆಗೆದುಕೊಂಡ ಸಮಯ ೫೦ ನಿಮಿಷಗಳು. ಅದೇ ಸ್ಥಳಕ್ಕೆ ಮರುದಿನ ಹೋಟೆಲ್ ನಿಂದ ನಾನು ವಾಕ್ ಬಂದದ್ದು ಈ ಮೆಟ್ಟಿಲುಗಳ ಮೂಲಕವೇ..ಕೇವಲ 4 ನಿಮಿಷದಲ್ಲಿ!

೮. ದಾರ್ಜೀಲಿಂಗ್ ರೈಲ್ವೆ ಶೇಷನ್ ನಿಂದ ಸಂಜೆಯ ನೋಟ  


೯. ಡಾರ್ಜಿಲಿಂಗ್ ಚಹಾ ಕಪ್ಪು ಚಹಾಗಳಲ್ಲೇ ಅತ್ಯುತ್ಕೃಷ್ಠವಾದದ್ದು ಎಂದು ಗುರುತಿಸಲ್ಪಟ್ಟಿದ್ದು, ಇದು ಜಗತ್ತಿನೆಲ್ಲೆಡೆ ಜನಪ್ರಿಯವಾಗಿದೆ

೧೦.  ಹ್ಯಾಪಿ ವ್ಯಾಲಿ ಟೀ ಎಸ್ಟೇಟ್ 







೧೧. ದುಡ್ಡು ಕಟ್ಟಿ ಆಡುವ ರಸ್ತೆ ಬದಿಯ ಲಾಟರಿ ಮತ್ತು ಡೈಸ್ ಆಟಗಳು  





೧೨.  ದಾರ್ಜೀಲಿಂಗ್ ನ ಪ್ರಸಿದ್ಧ ತಿಂಡಿ ಮೊಮೋ. ಪ್ರತಿದಿನ ಸಂಜೆ ರಸ್ತೆಬದಿಗೆ ಬಿಸಿಬಿಸಿ ವೆಜ್ ಮೊಮೊ ಹುಡುಕಿ ತಿನ್ನುವ ಮಜವೇ ಬೇರೆ! 

೧೩. ಜಪಾನೀಸ್ ಪೀಸ್ ಪಗೋಡ 


೧೪.  ಪ್ರವಾಸದ ನಮ್ಮ ತಂಡ 

೧೫. ಹರಡಿದ ಹತ್ತಿಯ ಉಂಡೆಗಳಂತೆ ಮೇಘಗಳು..!



೧೬. ಕೆಲವು ಮಳೆಯಲ್ಲಿ ನೆಂದ ನೆಲಗಳು, ಕೆಲವು ಬಿಸಿಲೇ ಕಾಣದ ನೆಲಗಳು..!





೧೭. ಕರ್ನಾಟಕದ ದಸರಾ ನೇಪಾಳಿಗರ ದಶೈನ್ ಹಬ್ಬ. ಒಂಭತ್ತು ದಿನಗಳ ನವರಾತ್ರಿಯ ಜೊತೆಗೆ, ಹತ್ತನೇ ದಿನದ ವಿಜಯದಶಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬಗಳೆಲ್ಲ ಒಂದೇ ಆದರೂ ಆಚರಣೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅದೆಷ್ಟು ವಿಭಿನ್ನ ಮತ್ತು ವೈವಿಧ್ಯಮಯ. ನವರಾತ್ರಿ ಕೊನೆಯಲ್ಲಿ ದಾರ್ಜೀಲಿಂಗ್ನಲ್ಲಿದ್ದೆವು. ಬಾಗ್ದೋಗ್ರಾ ಏರ್ಪೋರ್ಟ್ ನಿಂದ ಹೊರಟ ಲಾಗಾಯ್ತು ಒಂದು ವಿಶೇಷತೆ ಗಮನಿಸಿದ್ದೆವು.ಅನೇಕ ಜನರ ಹಣೆಯ ಮೇಲೆ ಕೆಂಪು ಬಣ್ಣದ ಅಕ್ಕಿಯನ್ನು 'ಬಳಿದು'ಕೊಂಡಿದ್ದರು. ಸಣ್ಣಕೆ ಹಚ್ಚಿಕೊಂಡ ಕುಂಕಿ ಅಲ್ಲ ಅದು, ಕೆಲವರ ಹಣೆಯ ಮೇಲೆ ದೊಡ್ಡ ರೌಂಡ್ ಇದ್ದರೆ, ಇನ್ನು ಕೆಲವರು ಇಡೀ ಹಣೆಯ ತುಂಬಾ ಈ ಕೆಂಪು ಅಕ್ಕಿಯನ್ನು ಬಳಿದುಕೊಂಡಿದ್ದರು. ಅದು ದಶೈನ್ ಹಬ್ಬ ನಡೆಯುತ್ತಿದೆಯಲ್ಲ ಅದಕ್ಕಾಗಿ ನಾವು 'ಟೀಕಾ' ಹಾಕಿಕೊಳ್ಳುತ್ತೇವೆ ಎಂದ ಡ್ರೈವರಣ್ಣ. ವಿಜಯದಶಮಿಯ ದಿನವಂತೂ ಬೆಳಿಗ್ಗೆ ವಾಕ್ ಹೋದಾಗ ಸಾಕಷ್ಟು ಜನರ ಹಣೆಯಲ್ಲಿ ಈ ಸುಂದರ ದೊಡ್ಡ 'ಟೀಕಾ' ರಾರಾಜಿಸುತ್ತಿತ್ತು. ದೇವಸ್ಥಾನದಿಂದ ಬರುತ್ತಿದ್ದ ಇಬ್ಬರು ಮಹಿಳೆಯರನ್ನು ಮಾತನಾಡಿಸಿದಾಗ ಅಲ್ಲಿನ ಆಚರಣೆಯ ಕುರಿತು ಕೇಳಿ ಭಾರೀ ಖುಷಿಯಾಯಿತು. 

ವಿಜಯದಶಮಿ ಇಲ್ಲಿನವರ ಅದರಲ್ಲೂ ನೇಪಾಳಿಗರಿಗೆ ದೊಡ್ಡ ಹಬ್ಬವೆಂದೇ ಹೇಳಬಹುದು. ಅಂದು ಬೇಗನೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ, ಈ 'ಟೀಕಾ' ಎಂದು ಏನು ತಿಳಿಸಿದೆನೋ, ಇದನ್ನು ತಯಾರಿಸುತ್ತಾರೆ. ಇದನ್ನು 'ಅಕ್ಕಿ, ಮೊಸರು ಮತ್ತು ಸಿಂಧೂರ' ಸೇರಿಸಿ ಕಲಸಿ ತಯಾರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಂಪು ಬಣ್ಣದ ಹೊರತಾಗಿ,  ಗುಲಾಬ್ ಪಕಳೆಯಿಂದ ತಯಾರಿಸಿದ ಗುಲಾಬಿ ಬಣ್ಣವನ್ನು ಮಾರುಕಟ್ಟೆಯಿಂದ ತಂದು ಕೂಡ ಮಾಡುತ್ತಾರೆ ಎಂದು ಮತ್ತೊಂದು ಮಹಿಳೆ ಧ್ವನಿಗೂಡಿಸಿದರು. ಇಂದಿನ ದಿನ ಮನೆ ಮಂದಿಯೆಲ್ಲ ಸೇರಿಕೊಂಡು, ಪೂಜೆ ಇತ್ಯಾದಿ ಪೂರೈಸಿ, ಮನೆಯ ಹಿರಿಯರು, ತಮಗಿಂತ ಕಿರಿಯರಿಗೆ ಈ 'ಟೀಕಾ' ಹಣೆಗೆ ಹಚ್ಚಿ, ಅವರಿಗೆ ಒಳ್ಳೆಯದಾಗುವಂತೆ ಮನಸಾರೆ ಆಶೀರ್ವದಿಸುತ್ತಾರಂತೆ. ಈ 'ಟೀಕಾ' ದ ಜೊತೆಗೆ,  'ಜಮರ' ಎಂಬ ಹುಲ್ಲನ್ನು ಪ್ರಸಾದವಾಗಿ ನೀಡುತ್ತಾರೆ.  ( ಹುಲ್ಲು) ನವರಾತ್ರಿಯ ಪ್ರಾರಂಭದ ದಿನದಿಂದಲೇ ಮನೆಯಲ್ಲಿ ಬಾರ್ಲಿ, ಗೋಧಿ, ಅಕ್ಕಿ, ಜೋಳ ಇತ್ಯಾದಿ ಧಾನ್ಯಗಳ ಮಣ್ಣಿಗೆ ಹಾಕಿ, ಈ ಹುಲ್ಲನ್ನು ಬೆಳೆಸುತ್ತಾರಂತೆ. ವೈಜ್ಞಾನಿಕ ಕಾರಣ ಏನಿದೆಯೋ ತಿಳಿಯದು ಆದರೆ ಮನೆ ಮಂದಿಯೆಲ್ಲ ಒಟ್ಟು ಸೇರಿ ಈ 'ಟೀಕಾ' ಹಚ್ಚುವ ಕಾರ್ಯಕ್ರಮ ಮಾತ್ರ ಅತ್ಯಂತ ಅತೀಯತೆಯಿಂದ ಕೂಡಿರುತ್ತದೆಯಂತೆ. ಅನೇಕ ದೇವಸ್ಥಾನಗಳಲ್ಲಿ ಈ ದಶೈನ್ ಹಬ್ಬದ ಸಮಯದಲ್ಲಿ, ದೇವಸ್ಥಾನದ ಪ್ರಾಂಗಣದಲ್ಲೇ 'ಜಮರ' ಹುಲ್ಲನ್ನು ಬೆಳೆಸಿ, ಬಂದವರಿಗೆಲ್ಲ ಟೀಕಾ ಹಚ್ಚಿ ಪ್ರಸಾದ ನೀಡಿ ಕಳಿಸುತ್ತಾರೆ. ಎಂತೆಂತ ಆಧುನಿಕ ವೆಸ್ಟೆರ್ನ್ ಡ್ರೆಸ್ ಹಾಕಿದವರೂ, ಫಾರ್ಮಲ್ ಡ್ರೆಸ್ಸಿನಲ್ಲಿರುವವರೂ ಕೂಡ ಅಂದು ಹಣೆ ತುಂಬಾ ದೊಡ್ಡ ಟೀಕಾ ಹಾಕಿಕೊಂಡು ಓಡಾಡುತ್ತಿರುವುದನ್ನು ನೋಡಲೇ ಒಂದು ರೀತಿಯ ಖುಷಿಯಾಗುತ್ತಿತ್ತು. ಒಂದು ಸಮಯದಲ್ಲಿ, ಯಾವುದೋ  ಮಾತಿನ ಮಧ್ಯೆ, ನಮ್ಮನ್ನು ಅಂದು ಸೈಟ್ಸೈ ಸೀಯಿಂಗ್ಗೆ ಕರೆದೊಯ್ಯುತ್ತಿದ್ದ ಸೈಯಮ್,  "ನಾವು ಈ ಟೂರಿಸ್ಟ್ ಸೀಸನ್ನಿನಲ್ಲಿ, ಮನೆಯಲ್ಲಿ ಹಬ್ಬ ಬಿಟ್ಟು ಬರುತ್ತೇವೆ, ಇಂದು ಯಾರೂ ಇಲ್ಲ ಎಂದು ನಾನು ಬಂದದ್ದು ಇಲ್ಲವಾದರೆ ನಮ್ಮ ಕುಟುಂಬದ ಜೊತೆ ಹಬ್ಬ ಮಾಡುತ್ತಿರುತ್ತಿದ್ದೆ.." ಎಂದುಹೇಳಿದ್ದನ್ನು ಕೇಳುವಾಗ, ಈ ಹಬ್ಬಗಳು ಅದೆಷ್ಟು ಆತ್ಮೀಯತೆ ಮತ್ತು ಒಗ್ಗಟ್ಟನ್ನು ತರುತ್ತದೆ ಎಂದು ಖುಷಿಯಾಯಿತು. ವಿಜಯದಶಮಿಯ ದಿನ ಸಂಜೆ, 'ಮಹಾಕಾಲ' ದೇವಸ್ಥಾನಕ್ಕೆ ಭೇಟಿಯಿತ್ತಾಗ, ಅಲ್ಲಿ ನಮಗೂ ಆ ಕೆಂಪನೆಯ ಅಕ್ಕಿಯ 'ಟೀಕಾ' ಸಿಕ್ಕಿದ್ದು ಮತ್ತಷ್ಟು ಖುಷಿ :) :) 







ಸೋಮವಾರ, ಫೆಬ್ರವರಿ 28, 2022

ಯೋಗ ಯಾತ್ರೆ - ಕನ್ಯಾಕುಮಾರಿ

ಭಾರತದ ದಕ್ಷಿಣದ ತುತ್ತತುದಿಯಲ್ಲಿ, ಹಿಂದೂ ಮಹಾ ಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರ ಎಂಬ ಮೂರು ಮಹಾಸಾಗರಗಳು ಸಂಗಮವಾಗುವ ಸ್ಥಳದ ತಟದಲ್ಲಿದೆ ಕನ್ಯಾಕುಮಾರಿ. ಐತಿಹಾಸಿಕ ಪ್ರಸಿದ್ಧತೆ ಪಡೆದಿರುವ ಈ ಒಂದು ಪುಣ್ಯಕ್ಷೇತ್ರವನ್ನು ನೋಡುವ ಆಸೆ ಮೊದಲಿನಿಂದಲೂ ಇದ್ದರೂ, ಅದು ಹೇಗೋ ನನಗೆ  ಕನ್ಯಾಕುಮಾರಿ ನೋಡುವ ಕಾಲ ಕೂಡಿ ಬಂದಿರಲಿಲ್ಲ. ಯೋಗ ಟ್ರೈನರ್ ಕೋರ್ಸನ್ನು ಪಡೆಯುತ್ತಿರುವ ನನಗೆ, ನನ್ನ ಗುರುಗಳಾದ ಅಶೋಕ್ ಸರ್ ಇಂತಹದ್ದೊಂದು ಯೋಗ ಕಾನ್ಫರೆನ್ಸ್ ಬಗ್ಗೆತಿಳಿಸಿರದಿದ್ದರೆ, ಅದೆಂತಹ ಅದ್ಭುತ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದೆ ಎಂಬುದು ಈ ಪ್ರವಾಸ ಮುಗಿಸಿ ಬಂದವಳಿಗೆ ಅರಿವಾಗುತ್ತಿದೆ.  'ಯೋಗ ಶಾಸ್ತ್ರ ಸಂಗಮ' ಎಂಬ ರಾಷ್ಟ್ರೀಯ ಯೋಗ ಸಮ್ಮೇಳನಕ್ಕೆ ಭಾಗವಹಿಸುವ ಉದ್ದೇಶದ ಮೂಲಕ, ಕಲಿಯುತ್ತಿರುವ ಯೋಗ ವಿಚಾರವಾಗಿ ಅದೆಷ್ಟೋ ಗೊತ್ತಿರದ ಮಾಹಿತಿಗಳನ್ನು ತಿಳಿಯಲು, ಈ ಪುಣ್ಯಕ್ಷೇತ್ರದ ಪ್ರಸಿದ್ಧ ಸ್ಥಳಗಳನ್ನು ನೋಡಲು, ಇಷ್ಟದ ಟ್ರೆಕಿಂಗ್ ಮಾಡಲು, ಸತ್ಸಂಗದ ಮೂಲಕ ಮೂರು ದಿನಗಳಲ್ಲಿ ನಲವತ್ತಕ್ಕೂ ಹೆಚ್ಚು ಸ್ನೇಹಿತ ಸ್ನೇಹಿತೆಯರನ್ನು ಪಡೆಯುವ ಅವಕಾಶವಾದ್ದು ನನ್ನ ಪಾಲಿನ ಅದೃಷ್ಟವೇ ಸರಿ!


ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಇವರು ಪ್ರತಿವರ್ಷದಂತೆ, ವಿಶಿಷ್ಟವಾಗಿ ರಾಷ್ಟ್ರೀಯ ಯೋಗ ಸಮ್ಮೇಳನವನ್ನು ನಡೆಸುತ್ತಾರೆ. ಈ ಮೂರು ದಿನಗಳಲ್ಲಿ ಯೋಗ ಶಾಸ್ತ್ರದ ಕುರಿತಾದ ಅನೇಕ ವಿಷಯಗಳ ಕುರಿತಾದ ಸೆಮಿನಾರ್ಗಳು,  ಹೊಸ ಯೋಜನೆಗಳ ಕುರಿತಾದ ಚರ್ಚಾಕೂಟಗಳು, ಪ್ರಾಯೋಗಿಕವಾಗಿ ಯೋಗ ಮತ್ತು ಧ್ಯಾನದ ಕ್ಲಾಸ್ಗಳು ನಡೆದವು. ಯೋಗ ಅಧ್ಯಾಯಗಳಲ್ಲಿ ಮುಖ್ಯವಾದ ಪತಂಜಲಿ ಯೋಗ ಸೂತ್ರ, ಹಠಪ್ರದೀಪಿಕಾ, ಶಿವ ಸಂಹಿತ, ಘೆರಂದ ಸಂಹಿತ, ವಸಿಷ್ಠ ಸಂಹಿತ ಇತ್ಯಾದಿ ಈ ಸಲದ ಮುಖ್ಯ ಚರ್ಚಿತ ವಿಷಯಗಳು. ಹಠಯೋಗ ಪ್ರದೀಪಿಕಾ ತಿಳಿದಷ್ಟೂ ಮುಗಿಯದಷ್ಟು ವಿಸ್ತಾರವಾದ್ದಾದರೂ, ತಮಗೆ ಸಿಕ್ಕಿರುವ ಸಮಯದಲ್ಲೇ, ೩-೪ ತಾಸಿನ ಮಾತುಗಾರಿಕೆಯಲ್ಲಿ, ಆ ವಿಷಯದ ಮೇಲೆ ಅತ್ಯಂತ ಸರಳವಾಗಿ ವಿವರಿಸಿದವರು ಡಾ. ಜಯರಾಮನ್ ಸರ್  Director, Division of Textual Research in Yoga, Indic Academy. ವಿವೇಕಾನಂದ ಕೇಂದ್ರದ ಕ್ಯಾಮ್ಪಸ್ ಇಷ್ಟವಾಯಿತು. ಅತ್ಯಂತ ಅಚ್ಚುಕಟ್ಟಾಗಿ ಮೂರುದಿನಗಳ ಕಾರ್ಯಾಗಾರವನ್ನುಆಯೋಜಿಸಿ, ಪಾಲ್ಗೊಳ್ಳುವವರಿಗೆಲ್ಲರಿಗೂ ಉತ್ತಮ ವಸತಿ, ಆಹಾರ, ಸಮಗ್ರ ಮಾಹಿತಿ ಮತ್ತು ಸ್ನೇಹ ಪರಿಸರದ ವ್ಯವಸ್ಥೆ ಮಾಡಿದ ಕ್ರೆಡಿಟ್ ಮಾನನೀಯ ಶ್ರೀ ಹನುಮಂತರಾವ್ (ಹನುಜೀ), ಉಪಾಧ್ಯಕ್ಷರು ವಿವೇಕಾನಂದ ಕೇಂದ್ರ ಮತ್ತು ತಂಗಲಕ್ಷ್ಮಿ, Conviener, ಯೋಗ ಶಾಸ್ತ್ರ ಸಂಗಮ ಇವರಿಗೆ ಸಲ್ಲುತ್ತದೆ. ಈ ವರ್ಷದ ಚರ್ಚೆಗಳಲ್ಲಿ ಮುಖ್ಯವಿಷಯಗಳಾಗಿ, ಯೋಗ ಪಠ್ಯಗಳ ಕುರಿತಾದ ಚರ್ಚೆ, ಮನುಷ್ಯನ ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯೋಗದ ಪ್ರಾಮುಖ್ಯತೆ, ವಿದ್ಯಾರ್ಥಿಗಳು ಯುವಜನರಲ್ಲಿ ಯೋಗದ ಮಹತ್ವವನ್ನು ಅರ್ಥಮಾಡಿಸುವುದು ಮತ್ತು ಬಳಸುವಂತೆ ನೀಡಬಹುದಾದ ಪ್ರೇರಣೆ, ಹಠಯೋಗಪ್ರದೀಪಿಕಾ ಕುರಿತಾಗಿ ನೀಡಿದ ವಿಸ್ತಾರವಾದ ವಿವರಗಳು ಇತ್ಯಾದಿ ಸಮ್ಮೇಳನದ ಮುಖ್ಯ ವಿಷಯಗಳಾಗಿದ್ದವು. ಇನ್ನೂ ಕಲಿಕೆಯ ಪ್ರಾರಂಭದ ಹಂತದಲ್ಲಿರುವ ನಮ್ಮಂತಹ ವಿದ್ಯಾರ್ಥಿಗಳಿಗೆ ಕೆಲವಷ್ಟಾದರೂ ಅರ್ಥವಾಗುವಷ್ಟು ಸುಲಭವಾಗಿಯೂ, ಇನ್ನೂ ಅನ್ವೇಷಿಸಬೇಕಾದ ಆಳವನ್ನೂ ತಿಳಿಯುವಂತಾಯಿತು. ಕೇರಳದ ಗವರ್ನರ್, ಆರಿಫ್ ಮೊಹಮ್ಮದ್ ಖಾನ್ ಅವರು ಈ ಸಮ್ಮೇಳನದ ಉದ್ಘಾಟಕರಾಗಿ ಬಂದಿದ್ದರು. ಅವರ ೫೦ ನಿಮಿಷದ ಮಾತಿನಲ್ಲಿ, ಯೋಗದ ಮಹತ್ವದ ಕುರಿತಾದ ವಿವರಣೆ, ನಿರರ್ಗಳವಾಗಿ ಸಂಸ್ಕೃತ ಶ್ಲೋಕಗಳ ಬಳಕೆ, ಅಧ್ಯಾತ್ಮ ಮತ್ತು ಸಂಸ್ಕೃತಿಗಳ ಕುರಿತು ನೀಡಿದ ವಿಶ್ಲೇಷಣೆ ನಮಗೆಂತೂ ಅತ್ಯಾಶ್ಚರ್ಯವನ್ನುಂಟು ಮಾಡಿತು. ನನ್ನ ಗುರುಗಳಾದ ಅಶೋಕ್ ಸರ್ ಅನ್ನೂ ಒಳಗೊಂಡು ಅನೇಕರು ಮೇಲೆ ತಮ್ಮ ಪೇಪರ್ ಪ್ರೆಸೆಂಟ್ ಮಾಡಿದ್ದು ಯೋಗಕ್ಕೆ ಸಂಬಂಧ ಪಟ್ಟಂತೆ ಅನೇಕ ಹೊಸ ವಿಷಯಗಳ ಕುರಿತಾಗಿ ಆಸಕ್ತಿ ಹುಟ್ಟುವಂತಾಯಿತು.

ವಿವೇಕಾನಂದ ಕೇಂದ್ರ ಕ್ಯಾಮ್ಪಸ್ : ಮುಖ್ಯವಾಗಿ ಯೋಗ ಅಭ್ಯಾಸ ಮತ್ತು ಕಲಿಕೆಯ ಸಂಬಂಧಿತ ಕಾರ್ಯಕ್ರಮಗಳ ಜೊತೆಗೆ  ಬಾಲವಾಡಿ, ಆನಂದಾಲಯ, ಬಿ.ಎಡ್ ಕಾಲೇಜು ಇತ್ಯಾದಿ ಹತ್ತು ಹಲವಾರು ಮಕ್ಕಳ ಶಿಕ್ಷಣ ವ್ಯವಸ್ಥೆ, ಹಾಸ್ಪಿಟಲ್ಸ್ ಗಳ ವೈದ್ಯಕೀಯ ಸೇವೆ, ಗ್ರಾಮೀಣ ಜನರ ಅಭಿವೃದ್ಧಿ ಕುರಿತಾದ ಯೋಜನೆಗಳು, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಯೋಜನೆಗಳು ಹೀಗೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ನೂರಾರು ಟ್ರಸ್ಟ್ಗಳನ್ನು ಹೊಂದಿ,  ಸಾಮಾಜಿಕ ಸೇವೆಯ ಮೂಲಕ ತಮ್ಮನ್ನು ತಾವೇ ಗುರುತಿಸಿಕೊಂಡಿರುವ ವಿವೇಕಾನಂದ ಕೇಂದ್ರ, ನಮ್ಮ ನಾಡು ಪರಂಪರೆ ಸಂಸ್ಕೃತಿಗಳ ಉನ್ನತಿಗಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ನಡೆಸುತ್ತಿರುವ ಎಲ್ಲಾ ಕಾರ್ಯಗಳು ಶ್ಲಾಘನೀಯ. ಕ್ಯಾಮ್ಪಸ್ಒಳಗಡೆ, ಯೋಗ ಕೇಂದ್ರ, ಸಾವಿರಕ್ಕೂ ಹೆಚ್ಚು ಯಾತ್ರಿಗಳಿಗೆ ವ್ಯವಸ್ಥೆ ನೀಡಬಹುದಾದ ವಸತಿ ಗೃಹಗಳು, ಪ್ರಾರ್ಥನಾ ಮಂದಿರ, ಸಭಾಭವನಗಳಿವೆ. ರಾಮಾಯಣ ದರ್ಶನಂ ಮತ್ತು ಭಾರತ ಮಾತಾ ಸದನ ಇವರ ಅಭಿವೃದ್ಧಿ ಕಾರ್ಯಗಳಲ್ಲಿ ಒಂದಾದ ಹೊಸ ಪ್ರಾಜೆಕ್ಟ್. ಗ್ರೌಂಡ್ ಫ್ಲೂರಿನಲ್ಲಿ ಸಂಪೂರ್ಣ ರಾಮಾಯಣವನ್ನು ಚಿತ್ರಕಥೆಯನ್ನು ಬಿಂಬಿಸುವ ೧೦೮ ಪೈಂಟಿಂಗ್ಗಳನ್ನು ಒಳಗೊಂಡಿರುವ ಇದ್ದರೆ, ಇನ್ನೊಂದು ಮಹಡಿಯಲ್ಲಿ, ೧೨.೫ ಅಡಿಯಷ್ಟು ದೊಡ್ಡದಾದ ಪಂಚ ಲೋಹಗಳಿಂದ ಮಾಡಿದ ತಾಯಿ ಭಾರತ ಮಾತೆಯ ಪುತ್ಥಳಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದನ್ನು ಕಂಡಾಗ ಮೈ ನವಿರೇಳುತ್ತದೆ. ಸ್ವಾಮಿ ವಿವೇಕಾನಂದ, ತಾಯಿ ಕನ್ಯಾಕುಮಾರಿ, ನಟರಾಜ, ಶಿವ ಇತ್ಯಾದಿ ಮೂರ್ತಿಗಳಿದ್ದು, ನಾವು ಎಂದಿಗೂ ನೆನಸಲೇ ಬೇಕಾದ ವೀರ ಮಾತೆಯರಾದ, ಜೀಜಾ ಬಾಯಿ, ಪರಾ ಶಕ್ತಿ, ತಾಯಿ ಶಾರದೆ, ತಾಯಿ ಯಶೋದೆ, ಶ್ರೀಮಾತಾ ಅಮೃತಾನಂದಮಯಿ ದೇವಿ, ಶಾಕುಂತಲೆ ಯವರ ಕುರಿತಾದ ಚಿತ್ರ ವಿವರಣೆಗಳಿವೆ. ಹಿಂದಿನವರ ತ್ಯಾಗ, ಧ್ಯೇಯ ಮತ್ತು ಶ್ರದ್ದೆಯನ್ನು ನಮ್ಮ ಅರಿವಿಗೆ ತಂದುಕೊಳ್ಳಲು ಇಂತಹದೊಂದು ಸಂಗ್ರಹಾಲಯ ಸಹಾಯಕವಾಗುತ್ತದೆ. ಸಮೀಲನಕ್ಕಾಗಿ ತಂಗಿದ್ದ ಮೂರು ದಿನಗಳೂ, ಸ್ವಚ್ಛ ಮತ್ತು ವ್ಯವಸ್ಥಿತವಾಗಿದ್ದು ನಮಗೆ ಅತ್ಯಂತ ಆಪ್ತವೆನಿಸಿತು.

 

ಭಾರತದ ತುತ್ತತುದಿಯಲ್ಲಿ ಸೂರ್ಯನಮಸ್ಕಾರ :
ಭರತ ಖಂಡದ ದಕ್ಷಿಣ ಭಾಗದ ತುದಿಯಲ್ಲಿ ನಿಂತಿದ್ದೇನೆ, ಇಲ್ಲಿನ ಸೂರ್ಯೋದಯ ಸೂರ್ಯಾಸ್ತವನ್ನು ನೋಡಲೆಂದೇ ಲಕ್ಷಗಟ್ಟಲೆ ಜನ ಸೇರುವಂತಹ ಪ್ರಸಿದ್ಧ ಸ್ಥಳ.. ಇದಕ್ಕಿಂತ ಮುಂದೆ ಒಂದು ಹೆಜ್ಜೆ ಇಟ್ಟರೂ ನೆಲ ಮುಗಿದು ಮಹಾಸಾಗರ ಎಂಬ ಭಾವನೆ ನನ್ನನ್ನು ಪದೇ ಪದೇ ರೋಮಾಂಚನಗೊಳಿಸುತ್ತಿತ್ತು. ಅಂತಹ ಸ್ಥಳದಲ್ಲಿ ಪ್ರಾತಃ ಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿ, ಸೂರ್ಯನ ಪ್ರಾರ್ಥಿಸಿ, ಉದಯಿಸುವ ಸೂರ್ಯನನ್ನು ನೋಡಿ ಬರಮಾಡಿಕೊಳ್ಳುವಂತಾದರೆ...? ಇಂತದ್ದೊಂದು ಅನುಭವ ಸಿಕ್ಕ ಕ್ಷಣ ನಮಗೆಲ್ಲ ಈ ಯೋಗ ಯಾತ್ರೆಯ ಒಂದು ಭಾಗವಾಗಿತ್ತು. ವಿವೇಕಾನಂದ ಯೋಗ ಕೇಂದ್ರದಿನ ತುಸು ದೂರದಲ್ಲಿ ಸೂರ್ಯೋದಯ ಕಾಣುವ ಬೀಚ್ ಒಂದರ ತಟದಲ್ಲಿ ನಿಂತು ಸೂರ್ಯ ನಮಸ್ಕಾರ ಮಾಡಿದ್ದು, ಸಮುದ್ರಕ್ಕೆ ಎದುರಾಗಿ ದಂಡೆಯ ಕಲ್ಲುಗಳ ಮೇಲೆ ಕುಳಿತು ದೃಷ್ಟಿ ಹಾಯಿಸಿದಷ್ಟು ನಿರ್ಮಲ ಆಕಾಶ ಮತ್ತು ಸಮುದ್ರದ ನೀಲಿ ನೀರು, ಹಾಲಿನಂತ ಬೆಳ್ಳನೆಯ ಅಲೆಗಳ ನಡುವೆ ಸೂರ್ಯೋದಯ ನೋಡಿದ್ದು, ಸ್ನೇಹಿತರೊಡಗೂಡಿ ಸಮುದ್ರದಲೆಗಳ ಜೊತೆ ಆಟ ಇವೆಲ್ಲವೂ ನನ್ನ ಪಾಲಿಗೆ ಮರೆಯಲಾಗದ ಕ್ಷಣಗಳು. ಕಪ್ಪೆಚಿಪ್ಪು ಆಯದೇ ನನ್ನ ಯಾವುದೇ ಸಮುದ್ರ ತೀರದ ಭೇಟಿ ಸಂಪೂರ್ಣವಾಗುವುದಿಲ್ಲ, ಒಂದಷ್ಟು ಕಪ್ಪೆ ಚಿಪ್ಪುಗಳನ್ನು  ಆಯ್ದುಕೊಂಡು, ಗೆಳೆಯರೊಡನೆ ಸೇರಿ ನಾವು ನಾವಾಗಿಯೇ ಇರುವ ಸಮಯ ಅದೆಷ್ಟು ಸುಂದರ..! 

ಇದರ ಜೊತೆಗೆ ಸಂಗಡಿಗರ ಜೊತೆಗೂಡಿ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಮಾಡಿದ್ದೂ ಕೂಡ ಒಂದು ಸುಯೋಗ ಎಂದೇ ಅನ್ನಿಸಿದ್ದು ಸುಳ್ಳಲ್ಲ


ಸಮ್ಮೇಳನಕ್ಕೆ ಎಂದು ಇದ್ದ ಮೂರು ದಿನಗಳಲ್ಲಿಯೇ, ಅಲ್ಪಸ್ವಲ್ಪ ಬಿಡುವಿನ ಸಮಯವನ್ನು ಬಳಸಿಕೊಂಡು, ನಮ್ಮನ್ನೆಲ್ಲ ಕನ್ಯಾಕುಮಾರಿ ಊರಿನ ಪ್ರಸಿದ್ಧ ಸ್ಥಳಗಳಿಗೆ ಓಡಾಡಿಸಲು ವ್ಯವಸ್ಥೆ ಮಾಡಿದ ಸುಬ್ಬು ಭೈಯ್ಯಾ ರಿಗೆ ಅದೆಷ್ಟು ವಂದನೆ ತಿಳಿಸಿದರೂ ಸಾಲದು. ಯೋಗ ಯಾತ್ರೆಯ ಪ್ರಾರಂಭದ ಗಳಿಗೆಯಿಂದ ಹಿಡಿದು ಕೊನೆಗೆ ಸುರಕ್ಷತೆಯಿಂದ ಮನೆ ತಲುಪುವ ವರೆಗೆ ಪ್ರತಿಯೊಬ್ಬರನ್ನೂ ತನ್ನದೇ ಮಗುವೆಂಬಂತೆ ಪ್ರತಿವಿಷಯದಲ್ಲಿ ಜವಾಬ್ಧಾರಿಯುತವಾಗಿ ನೋಡಿಕೊಂಡವರು 'ಸುಬ್ಬು ಭೈಯ್ಯಾ'! ಜುಬ್ಬಾ-ಪಂಚೆ ಉಟ್ಟು ಸರ್ವೇ ಸಾಮಾನ್ಯರಂತೆ ಕಾಣುವ ಈ ವ್ಯಕ್ತಿ ಅಸಾಮಾನ್ಯ ಎಂದು ತಿಳಿಯಲು ಅವರ ಜೊತೆ ೧೦ ನಿಮಿಷಗಳನ್ನು ಕಳೆದರೆ ಸಾಕು. ಯೋಗಗುರುವಾಗಿ, ಕರ್ಮ ಯೋಗಿಯಾಗಿ ತನ್ನ ಬದುಕನ್ನೇ ಯೋಗ ಸಾಧನೆ, ಅಧ್ಯಾತ್ಮಿಕತೆಯನ್ನು ಹಂಚುವುದಕ್ಕಾಗಿ ಮುಡಿಪಾಗಿಟ್ಟಿರುವ 'ಸುಬ್ಬು ಭೈಯ್ಯಾ' ರವರ ಪರಿಚಯ ಒಂದು ವರ ಎಂದೆನಿಸಿದ್ದು ಸುಳ್ಳಲ್ಲ. ನಾನಾ ಕಡೆಯಿಂದ ಬಂದ ಜನರನ್ನು ಅರ್ಧ ಘಂಟೆಯಲ್ಲಿ ಒಬ್ಬರಿಗೊಬ್ಬರು ಪರಿಚಯಸ್ಥರನ್ನಾಗಿಸುವ, ಸಂಗಡಿಗರಿಂದ ಆತ್ಮೀಯ ಸ್ನೇಹಿತರನ್ನಾಗಿಸುವ ಅವರ ಮಾತಿನ ವೈಖರಿ, ಅಷ್ಟೂ ಜನರ ಹರಿಯುವ ಮನಸ್ಸನ್ನು ಏಕಾಗ್ರತ ಗೊಳಿಸುವ, ಕಿವಿಗೆ ಇಂಪಾಗಿಸುವ, ಮನಸ್ಸಿಗೆ ಹಿತವೆನಿಸುವ ಅವರ ಭಜನಾ ಲಹರಿ ಕೇಳುವುದೇ ಒಂದು ಸುಖ. ಪ್ರತಿ ಸ್ಥಳ-ಅನುಭವಗಳ ಜೊತೆ ಅದಕ್ಕೆ ಸಂಬಂಧಿತ ಐತಿಹಾಸಿಕ ಕಥೆಗಳು, ಹೊಸ ಹೊಸ ವಿಚಾರಗಳನ್ನು ಆಗಾಗ್ಗೆ ನಮಗೆ ತಿಳಿಸಿಕೊಡುತ್ತಿದ್ದ ಒಬ್ಬ ಅದ್ಭುತ ಪ್ರವಾಸ ಮಾರ್ಗದರ್ಶಿ ಸುಬ್ಬು ಭೈಯ್ಯಾ. ಕನ್ಯಾಕುಮಾರಿಯಲ್ಲಿನ ಮುಖ್ಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಮಾಡಿಕೊಡುವುದರ ಜೊತೆಗೆ, ಆ ಸ್ಥಳಗಳ ಕುರಿತಾದ ಮಹಿಮೆಯನ್ನು, ಸವಿವರವಾಗಿ ತಿಳಿಸುತ್ತಿದ್ದ ಸುಬ್ಬು ಭೈಯ್ಯಾ, ಈ ಮೂರು ದಿನಗಳ ಮಟ್ಟಿಗೆ ನಮ್ಮ ಪಾಲಿನ ಗೂಗಲ್ ಆಗಿದ್ದರು :) :)


ತಿರುಪತಿ ವೆಂಕೆಟೇಶ್ವರ ದೇವಸ್ಥಾನ : ಮೊದಲ ದಿನದ ಕಾರ್ಯಾಗಾರಗಳೆಲ್ಲ ಮುಗಿದ ನಂತರ ಸಂಜೆ ಕಾಲ್ನುಡುಗೆ ದೂರದಲ್ಲಿದ್ದ ವೆಂಕಟೇಶ್ವರ ತಿರುಪತಿ ದೇವಸ್ಥಾನವನ್ನು ನೋಡಲು ಹೊರಟೆವು. ಪ್ರವಾಸಗಳು ಜನರನ್ನು ಹತ್ತಿರವಾಗಿಸುತ್ತದೆ ಎಂಬುದು ಸುಳ್ಳಲ್ಲ. ಆಡಿದಷ್ಟು ಮಾತು, ನಡೆದಷ್ಟೂ ದೂರ ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತ, ನಗು ತಮಾಷೆಗಳ ಜೊತೆ ನಡೆದು ತಲಪುವಾಗ ಕಂಡದ್ದು, ಸಮುದ್ರ ತಟದಲ್ಲಿನ ತಿರುಪತಿ ದೇವಸ್ಥಾನ. ಎತ್ತರದ ಸ್ಥಳದಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದ ಪಕ್ಕದಲ್ಲಿ ಕಣ್ಣು ಹಾಯಿಸಿವಷ್ಟು ದೂರದವರೆಗೆ ಸಮುದ್ರ ಕಾಣುತ್ತದೆ. ತಣ್ಣನೆಯ ಸಂಜೆಯ ಗಾಳಿ, ಹಗಲಿನ ಬಿಸಿ ಬೇಗೆಯನ್ನು ತೆಗೆದು, ದೇಹಕ್ಕೆ ಮತ್ತು ಮನಸ್ಸಿಗೆ ಮುದವನ್ನು ನೀಡುತ್ತಿತ್ತು. ಸಮುದ್ರದಲೆಗಳ ಸುಮಧುರ ಶಬ್ದದ ಜೊತೆಗೆ, ವೆಂಕಟೇಶನ ನೆನೆಯುವ, ಹರಿಯ ಸ್ಮರಿಸುವ ಭಜನೆಗಳನ್ನು ನಾವೆಲ್ಲರೂ ದೇವಸ್ಥಾನದ ಆವರಣದಲ್ಲಿ ಒಟ್ಟಿಗೆ ಕುಳಿತು ಒಕ್ಕೊರಲಿನಿಂದ ಹಾಡಿದ್ದು ಮತ್ತಷ್ಟು ಧನ್ಯತಾ ಭಾವವನ್ನು ಮೂಡಿಸಿತ್ತು.  


ವಿವೇಕಾನಂದ ರಾಕ್ ಮೆಮೋರಿಯಲ್ : ಕನ್ಯಾಕುಮಾರಿಯಿಂದ ಸುಮಾರು ೪೦೦ ಮೀಟರ್ ದೂರದಲ್ಲಿ ಹಿಂದೂ ಮಹಾಸಾಗರದ ಮಧ್ಯೆ ಇರುವ ಬ್ರಹತ್ ಬಂಡೆಯ ಮೇಲೆ, ಅತೀ ದೊಡ್ಡದಾದ ವಿವೇಕಾನಂದ ರಾಕ್ ಮೆಮೋರಿಯಲ್ ನಿಂತಿದೆ. ೧೮೯೨ ರಲ್ಲಿ ಸ್ವಾಮೀ  ವಿವೇಕಾನಂದರು    ಕನ್ಯಾಕುಮಾರಿಯ ಈ ಬಂಡೆಯವರೆಗೆ ಈಜಿ ಬಂದು ಕುಳಿತು ಮೂರು ದಿನಗಳ ಕಾಲ (ಡಿಸೆಂಬರ್ ೨೫, ೨೬, ೨೭ ರಂದು) ಧ್ಯಾಸಸ್ಥರಾಗಿದ್ದರು ಎಂಬ ಸವಿ ನೆನಪಿಗಾಗಿ, ಈ ಸ್ಮಾರಕವನ್ನು ನಿರ್ಮಿಸಲಾಗಿದೆ, ಸ್ಮಾರಕದ ಒಳಗಡೆ ಸ್ವಾಮಿ ವಿವೇಕಾನಂದರ ದಿಟ್ಟ ನಡೆಯ ಮೂರ್ತಿಯನ್ನು ನಿರ್ಮಿಸಲಾಗಿದೆ, ಮತ್ತು ಕೆಳಗಡೆಯ ಅಂತಸ್ತಿನಲ್ಲಿ ಓಂ ಶಕ್ತಿಯ ಧ್ಯಾನ ಮಂದಿರವಿದೆ. ಬೋಟಿನಲ್ಲಿ ಹೋಗಬೇಕಾದ ಇಲ್ಲಿನ ಸವಾರಿ ಒಂದು ರೀತಿಯ ಖುಷಿ ಕೊಡುತ್ತದೆ. ಇದೇ ಕಲ್ಲಿನ ಬಂಡೆಯ ಮೇಲೆ ತಾಯಿ ಪಾರ್ವತಿ, ಕನ್ಯಾಕುಮಾರಿಯಾಗಿ ಶಿವನಿಗಾಗಿ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿದ್ದಳು ಎಂಬ ಇತಿಹಾಸವೂ ಇದೆ. ಕನ್ಯಾಕುಮಾರಿಯ ಪಾದವಿರುವ ಬಂಡೆಯ ಸ್ಥಳಕ್ಕೆ ಪುಟ್ಟದೊಂದು ಕಲ್ಲಿನ ದೇವಾಲಯ ನಿರ್ಮಿಸಲಾಗಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಇನ್ನೊಂದು ಬಂಡೆಯ ಮೇಲೆ, ತಮಿಳಿನ ಪ್ರಸಿದ್ಧ ತತ್ವಜ್ಞಾನಿ ಮತ್ತು ಕವಿ ಶ್ರೀ 'ತಿರುವಳ್ಳುವರ್' ಅವರ ೧೩೩ ಅಡಿ ಎತ್ತರದ ಕಲ್ಲಿನ ಶಿಲ್ಪಿ ಕೃತಿ ಇದೆ.  ಇದೇ ಸ್ಥಳದಲ್ಲಿ ಸಮುದ್ರ ಮತ್ತು ಸಾಗರಗಳ ಸಮ್ಮಿಲನ ಆಗುವುದನ್ನೂ ಬರಿಗಣ್ಣಿನಿಂದ ಅತ್ಯಂತ ಪಾರದರ್ಶಕವಾಗಿ ಕಾಣಬಹುದಾಗಿದೆ. 


ಅಲ್ಲಿಂದ ವಾಪಸು ಮರಳುವಾಗ ಕೋವಲಂ ರೋಡಿನ ಸನ್ಸೆಟ್ ಪಾಯಿಂಟ್ ಗೆ ಹೋಗಿ ಸೂರ್ಯಾಸ್ತವನ್ನೂ ಕಣ್ಣುತುಂಬಿಕೊಡಿದ್ದಾಯಿತು. ಅಸ್ತಾಂಗತನಾಗುತ್ತಿರುವ ಗುಂಡನೆಯ ಕೆಂಬಣ್ಣದ ಸೂರ್ಯ, ಕೇಸರಿ ಬಣ್ಣದೋಕುಳಿಯ ಆಗಸ, ನೀಲಿ ಸಮುದ್ರ, ಭೋರ್ಗರೆಯುವ ಅಲೆಗಳ ಶಬ್ದ ಮತ್ತು ತಂಗಾಳಿ, ಇದಕ್ಕಿಂತ ಹೆಚ್ಚಿನ ಧ್ಯಾನ ಇನ್ನೇನು ಬೇಕು ನಮಗೆ?
 


ಎಲ್ಲರೂ ನಾನಾಕಡೆಯಿಂದ ಎಷ್ಟೆಷ್ಟೋ ದೂರದಿಂದ ಕನ್ಯಾಕುಮಾರಿಗೆ ಬಂದಿದ್ದಾರೆ ಎಂಬ ಉದ್ದೇಶಕ್ಕೆ, ನಮ್ಮ ಪ್ರವಾಸವನ್ನು ಮತ್ತಷ್ಟು ಉತ್ಸಾಹಗೊಳಿಸಲು ಸುಬ್ಬು ಭೈಯ್ಯಾ ಹಮ್ಮಿಕೊಂಡ ಮೂರನೇ ದಿನದ ದಿನಚರಿ, ಬೆಳಗಿನ ಜಾವದ ಚಾರಣ. ಅತೀ ಉತ್ಸಾಹದಿಂದ ವಯಸ್ಸು ಶಕ್ತಿಗಳ ಹಂಗಿಲ್ಲದೆ ಹೆಚ್ಚೂ ಕಮ್ಮಿ ಎಲ್ಲರೂ ಬೆಳಿಗ್ಗೆ ೪. ೩೦ ಗೆ ಎದ್ದು ಹೊರಟದ್ದೇ ಒಂದು ಖುಷಿ! ವಿವೇಕಾನಂದ ಕೇಂದ್ರದಿಂದ ಸ್ವಲ್ಪ ದೂರ ಬಸ್ಸಿನಲ್ಲಿ ಹೋಗಿ ತಲುಪಿದ ಜಾಗ, ಮರುತುವಮಲೈ ಅಥವಾ ಮರುಂದವಾಳ್ ಮಲೈ  ಎಂಬ ಬೆಟ್ಟ (ಮರಂದು ಎಂದರೆ ಮದ್ದು). ವೀರ ಹನುಮಾನನು ಲಕ್ಷಣದ ಆರೈಕೆಗೆಂದು ಮಹೇಂದ್ರಗಿರಿಯಿಂದ ಶ್ರೀಲಂಕಾಕ್ಕೆ ಸಂಜೀವಿನ ಪರ್ವತ ಹೊತ್ತೊಯ್ಯುವಾಗ ಮುರಿದು ಬಿದ್ದ ತುಂಡು ಎಂಬ ಕಥೆಯನ್ನು ಆಧರಿಸಿರುವ ಈ ಬೆಟ್ಟ ಅನೇಕ ಬಗೆಯ ಗಿಡಮೂಲಿಕೆ ಸಸ್ಯಗಳಿಂದ ಕೂಡಿದೆ ಎಂದು ಬಲ್ಲವರು ಹೇಳುತ್ತಾರೆ. ಬೆಟ್ಟದ ತುದಿಯನ್ನು ತಲುಪಲು ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಸಾಗಬೇಕಾದ ಈ ಬೆಟ್ಟ, ಪ್ರಾರಂಭದಲ್ಲಿ ಕಲ್ಲು ಕೆತ್ತಿದ ಮೆಟ್ಟಿಲಿನಿಂದ ಕೂದ್ದರೂ ಮುಂದಕ್ಕೆ ಕಡಿದಾದ ಕಲ್ಲು ಬಂಡೆಗಳ ಹಾದಿಯಲ್ಲಿ ಸಾಗುತ್ತದೆ. ನಮ್ಮ ಗುಂಪಿನಲ್ಲಿದ್ದ ಅದೆಷ್ಟೋ ಹಿರಿಯರು ತಮ್ಮ ಪ್ರಯತ್ನವನ್ನೂ ಮೀರಿ ನಡೆದದ್ದು, ಅವರಲ್ಲಿನ ದೈಹಿಕ ಶಕ್ತಿಗಿಂತಲೂ ಮಾನಸಿಕ ಸ್ಥೈರ್ಯವನ್ನು ತೋರಿಸುತ್ತಿತ್ತು. ಕಠಿಣ ಆರೋಹಣದ ನಂತರವೂ,  ಬೆಟ್ಟದ ಮೇಲೆ ಕುಳಿತು ರಾಮನಾಮ ಭಜನೆ, ವೀರ ಹನುಮಾನನ ಭಜನೆ, ಸೂರ್ಯೋದಯ ವೀಕ್ಷಣೆ, ಭಜನೆ ಮಾಡುತ್ತಾ, ಎತ್ತರದ ಬೆಟ್ಟದ ಮೇಲಿಂದ ಕೆಳಗಿನ  ಸಮಸ್ತ ಪ್ರಕೃತಿಯ ಕಣ್ತುಂಬಿಕೊಂಡದ್ದು ಬೇರೆಲ್ಲ ಚಾರಣಗಳಿಗಿಂತ ವಿಭಿನ್ನವಾದ ಅನುಭವ ನನಗೆ ಸಿಕ್ಕಂತಾಯಿತು. ಹತ್ತುವಾಗ ಅಲ್ಲದಿದ್ದರೂ, ಬಿಸಿಲೇರಿದ ಮೇಲೆ ಕಡಿದಾದ ಬಂಡೆಕಲ್ಲುಗಳ ಹಾದಿಯನ್ನು ಇಳಿಯುವುದು ಹೇಳಿದಷ್ಟು ಸುಲಭವಲ್ಲ. ಗುಂಪಿನಲ್ಲಿದ್ದ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಾಯಹಸ್ತವನ್ನು ನೀಡುತ್ತಾ ಚಾರಣವನ್ನು ಯಶಸ್ವಿಯಾಗಿ ಯಾವುದೇ ತೊಂದರೆಯಿಲ್ಲದೆ ಮುಗಿಸಿದ್ದು,ನನಗೆ  ಈ ಸಂಪೂರ್ಣ ಪ್ರವಾಸದಲ್ಲಿ ಅತ್ಯಂತ ಇಷ್ಟವಾದ ಭಾಗ! 💓💓 ಚಾರಣ ಸ್ಥಳವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾದರೂ, ಅನೇಕರು ಪ್ಲಾಸ್ಟಿಕ್ ಕಸವನ್ನು ಕಂಡಕಂಡಲ್ಲಿ ಬಿಸಾಡಿ ಹೋಗುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಪ್ರಕೃತಿಯ ಕೇವಲ ಆನಂದಿಸುವುದಷ್ಟೇ ನಮ್ಮ ಕೆಲಸವಲ್ಲ; ಅದನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂಬ ಧ್ಯೇಯಕ್ಕೆ ನನ್ನ ಕೈಲಾದ ಸಹಾಯವನ್ನು ನೀಡುವ ಪ್ರಯತ್ನಕ್ಕೆ, ನಾವು ಕೆಲವು ಗೆಳೆಯರು ಬೆಟ್ಟವನ್ನು ಇಳಿಯುವಾಗ ಹಾದಿಬದಿಗಿನ ಪ್ಲಾಸ್ಟಿಕ್ ಕಸಗಳನ್ನು ಒಂದಷ್ಟು ಆಯ್ದು ಒಟ್ಟು ಮಾಡಿದ್ದು, ದೇವರ ಸ್ತುತಿಸಿದಷ್ಟೇ ಸಾರ್ಥಕತೆ ನೀಡುವುದಕ್ಕಾಗಿ ಆ ಕೆಲಸವೂ ನಡೆದದ್ದು ಇನ್ನೊಂದು ಖುಷಿಗೆ ಕಾರಣವಾಯಿತು.


ಕೊನೆಯ ದಿನ ವಿವೇಕಾನಂದ ದೇವಸ್ಥಾನದಿಂದ ಹೊರಟು ೧೨ ಕಿಮೀ ದೂರದಲ್ಲಿ ನೋಡಿದ ಇನ್ನೊಂದು ಸುಂದರವಾದ ಸ್ಥಳ, ಸುಚಿಂದ್ರಂ ದೇವಸ್ಥಾನ. ಸ್ಥಾನುಮಾಲಯ್ ಸ್ವಾಮಿ 
ಇಲ್ಲಿನ ದೇವರು ಸ್ಥಾನು ಎಂದರೆ ಶಿವ, ಮಾಲ್  ಎಂದರೆ ವಿಷ್ಣು ಮತ್ತು ಅಯ್ಯನ್  ಎಂದರೆ ಬ್ರಹ್ಮ ಎಂಬ ಮೂರು ದೇವರುಗಳ ಆವಾಹನೆ ಇರುವ ಶಿವಲಿಂಗದ ಪೂಜೆ ಇಲ್ಲಿನ ವಿಶೇಷ. ಸಾವಿರಾರು ಕಂಬಗಳಿರುವ ಸುಮಾರು ೧೩೦೦ ವರ್ಷಗಳಷ್ಟು ಪುರಾತನ ದೇವಾಲಯ ಇದಾಗಿದೆ. ಇಂದ್ರನಿಗೆ ಶಾಪ ವಿಮೋಚನೆಯಾಗಲು ಶುದ್ಧಿ ಪಡೆದ ಸ್ಥಳ ಇದು ಎಂಬ ಪ್ರತೀತಿಯೂ ಇದೆ. ಅತ್ಯಂತ ನಗುಮುಖದ ಸುಬ್ರಮಣ್ಯ ದೇವರು  ಇಲ್ಲಿನ ವಿಶೇಷ. ಅಂತೆಯೇ,  ನವಪಾಶಣ ಬಾಲಾಜಿ, ದೊಡ್ಡದಾದ ನಂದಿ, ಜಗದ್ಗುರು ಆದಿಶಂಕರಾಚಾರ್ಯರು, ಉತ್ಸುಕತೆಯಲ್ಲಿರುವ ಬಾಲವನ್ನೆತ್ತಿ ನಿಂತಿರುವ ಆಂಜನೇಯ, ದತ್ತಾತ್ರೇಯ, ಗಜನನಿ ಎಂದು ಕರೆಸಿಕೊಳ್ಳುವ ಸ್ತ್ರೀರೂಪದ ಗಣಪತಿ, ಸಪ್ತಸ್ವರಗಳನ್ನು ಕೇಳಿಸುವಂತಹ ಕಲ್ಲಿನ ಕಂಬಗಳು ಇತ್ಯಾದಿ ಇಲ್ಲಿನ ವಿಶೇಷಗಳು.. ಎಲ್ಲರೂ ಒಟ್ಟು ಸೇರಿ.. ಈಶ್ವರನ ಕುರಿತಾದ ಭಜನೆಯ ಸೇವೆ ಧನ್ಯತೆಯ ಭಾವವನ್ನು ನೀಡುತ್ತಿತ್ತು. ದೇವಾಲಯದ ಉದ್ದಕ್ಕೂ ಛಾವಣಿಯನ್ನು ಮಂಡಲ ಪೇಂಟಿಂಗ್ ಗಳಿಂದ ಅಲಂಕರಿಸಿದ್ದು ನನ್ನಂತವಳಿಗೆ ನೋಡಿದಷ್ಟೂ ಮುಗಿಯದ ಆನಂದವಾಯಿತು.  


ಟ್ರೇನ್ ಹತ್ತಿ ಹೊರಡುವಾಗ ಪರಿಚಯವೇ ಇಲ್ಲದವರ ಜೊತೆ ಮೂರು ದಿನಗಳ ಪ್ರವಾಸ, ವಾಪಸು ಮರಳಿ ಬರುವಷ್ಟರಲ್ಲಿ ವಿದಾಯಕ್ಕೆ ಕಣ್ಣೀರು ಇಳಿಯುವಷ್ಟು ಸಲಿಗೆ ಪ್ರೀತಿಯನ್ನುತಂದುಕೊಟ್ಟಿತ್ತು. ಚಲಿಸುವ ಟ್ರೇನಿನಲ್ಲಿ, ಗಂಡಸರು-ಹೆಂಗಸರೆನ್ನದೆ, ಹಿರಿಯ ಕಿರಿಯ ಬೇಧಭಾವವಿಲ್ಲದೆ, ೪೫ಕ್ಕೂ ಹೆಚ್ಚು ಜನರು ಎರಡು ಘಂಟೆಗೂ ಹೆಚ್ಚಿನ ಸಮಯಗಳ ಕಾಲ ಭಜನೆ ಮಾಡುತ್ತಾ, ಹಾಡುತ್ತ ನಲಿಯುತ್ತ ಕಳೆದದ್ದು ನನ್ನ ರೀತಿಯ ಪ್ರವಾಸಗಳಲ್ಲಿ ಹೊಸತು. ನಗು ತಮಾಷೆ, ತಿಳಿದಿರದ ಹೊಸ ವಿಷಯಗಳ ಕುರಿತಾಗಿ ಚರ್ಚೆ, ಆರೈಕೆ ಹೀಗೆ ಸನ್ಮಿತ್ರರಾಗಿ ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಕಳೆದ ಈ ಮೂರು ದಿನಗಳ ಸತ್ಸಂಗ ನನಗೆ ಸದಾ ನೆನಪಿನಲ್ಲಿ ಉಳಿಯುವಂತಹ ಪ್ರಾವಾಸಗಳಲ್ಲಿ ಒಂದು!