ಸೋಮವಾರ, ಸೆಪ್ಟೆಂಬರ್ 27, 2021

ನಿಜಗಲ್ ಬೆಟ್ಟ

 ಇಂದು World Tourism Day/ವಿಶ್ವ ಪ್ರಾವಾಸೋದ್ಯಮ ದಿನ. ಪ್ರವಾಸ ಎನ್ನುವುದು ಕೆಲವರಿಗೆ ವ್ಯಾಪಾರದಂತಹ ಸ್ವಕಾರ್ಯದ ಉದ್ದೇಶಕ್ಕಾಗಿಇದ್ದರೆ , ಕೆಲವರಿಗೆ ಮನರಂಜನೆ, ವಿರಾಮ, ಸತ್ಕಾರ್ಯಕ್ಕಾಗಿ ಮಾಡುವ ಪ್ರಯಾಣವಾಗಿರಬಹುದು. ದಿನನಿತ್ಯದ ಜಂಜಾಟ ಏಕತಾನತೆಯಿಂದ ಹೊಸ ಹುರುಪು ಪಡೆಯಲು ಪ್ರವಾಸಗಳು ಅತ್ಯಾವಶ್ಯಕ. ಮಕ್ಕಳಿಗೆ ಪ್ರತಿ ಹೊಸತುಗಳು ಕೂಡ ಕಲಿಕೆ. ಗೆಳೆಯರೊಂದಿಗೆ ಮಕ್ಕಳೊಂದಿಗೆ ನಿನ್ನೆ ಟ್ರೆಕಿಂಗ್ ಹೋದ 'ನಿಜಗಲ್ ಬೆಟ್ಟ' ದ ಕುರಿತಾಗಿ ಒಂದು ಝಲಕ್. 











































ನಿಜಗಲ್ ಬೆಟ್ಟ ಬೆಂಗಳೂರಿನಿಂದ ೬೦ ಕಿಮೀ ದೂರದಲ್ಲಿ, ತುಮಕೂರಿಗೆ ಹೋಗುವ ಮಾರ್ಗದಲ್ಲಿ ದೊಬ್ಬಸ್ಪೇಟ್ ಎಂಬ ಊರಿನ ತಪ್ಪಲಿನಲ್ಲಿದೆ. ಅರ್ಧ ದಿನದ ಚಾರಣಕ್ಕೆ ಹೋಗಬಹುದಾದ ಸ್ಥಳಗಳಲ್ಲಿ ಇದೂ ಒಂದು. ೧೭ನೇ ಶತಮಾನದಲ್ಲಿ, ಚಿಕ್ಕದೇವರಾಯ ಒಡೆಯರ್ ಅವರ ಆಳ್ವಿಕೆಯ ಕಾಲದ ಈ ಬೆಟ್ಟದಲ್ಲಿ ಪಾಳುಬಿದ್ದ ದೇವರ ಮಂಟಪಗಳು, ಗುಹೆಗಳು ಮತ್ತು ಕೋಟೆಕಲ್ಲುಗಳನ್ನು ನೋಡಬಹುದಾಗಿದೆ. ದೇವಾಲಯಗಳ ಕಲ್ಲಿನ ಗೋಡೆ ಮತ್ತು ಕಂಬಗಳ ಮೇಲೆ ಸುಂದರವಾದ ಕೆತ್ತನೆಗಳಿವೆ. ಹೈದರಾಲಿ ಮತ್ತು ನಡುವೆ ಕಾದಾಟವೂ ಇಲ್ಲಿ ನಡೆದಿತ್ತು ಎಂಬ ಐತಿಹಾಸಿಕ ಕಥೆಯಿದೆ. ನಾವು ಸ್ನೇಹಿತರಬಳಗದವರು ನಮ್ಮ ೬-೮ ವರ್ಷದ ಮಕ್ಕಳನ್ನು ಕರೆದುಕೊಂಡು, ಮಾತುಕಥೆಯಾಡುತ್ತ ನಡೆದದ್ದರಿಂದ, ಉತ್ಸಾಹದಲ್ಲಿ ೭-೮ ಕಿ.ಮೀ ನಷ್ಟು ಟ್ರೆಕಿಂಗ್ ಮಾಡಿದ್ದೇ ತಿಳಿಯಲಿಲ್ಲ. ಮಕ್ಕಳಿಗೆ ನೈಸರ್ಗಿಕ ಕಲ್ಲು ಬಂಡೆಗಳು, ಗುಹೆಗಳು, ಹಳೆಯ ಕಾಲದ ಬ್ರಹತ್ ಕೋಟೆಗಳು ಹೇಗಿದ್ದವೆಂದು ತೋರಿಸಲು ಸೂಕ್ತವಾದ ಜಾಗ. ೧ ಕಿಮೀ ನಷ್ಟು ದೂರ ಹಳ್ಳಿಯ ದಾಟಿದ ನಂತರಕ್ಕೆ ಚಾರಣದ ಹಾದಿ ಸಿಗುತ್ತದೆ. ತೀರಾ ಕಷ್ಟವೂ ಅಲ್ಲದ ತೀರಾ ಸುಲಭವೂ ಅಲ್ಲದ ಎತ್ತರೆತ್ತರ ಕಾಲಿಟ್ಟು ನಡೆಯಬೇಕಾದ ಕಡಿದಾದ ಕಲ್ಲು ಬಂಡೆಗಳ ಹಾದಿ. ಹೆಚ್ಚೇನೂ ಪ್ರಸಿದ್ಧಿ ಪಡೆದ ಜಗವಲ್ಲದಿದ್ದರೂ, ಬೆಟ್ಟದ ತಪ್ಪಲಿನ ಮೇಲೆ ಶಿವನ ದೇವಾಲಯ (ಪಾಳುಬಿದ್ದ) ಮತ್ತು ದರ್ಗಾಇರುವುದರಿಂದ, ಹರಕೆಗಳನ್ನು ತೀರಿಸುವ ಸಲುವಾಗಿ ಸ್ಥಳೀಯ ಜನರ ಓಡಾಟ ಇರುತ್ತದೆ. ಹಸಿರು ಮರಗಳ ಹಾದಿ ಅಲ್ಲಲ್ಲಿ ಇದ್ದರೂ, ಹೆಚ್ಚಿನ ಭಾಗ  ಕುರುಚಲು ಪೊದೆಗಳಿಂದ ತುಂಬಿದ ನೆತ್ತಿ ಸುಡುವ ಹಾದಿಯಾದ್ದರಿಂದ ಬೆಳಗಿನ ಜಾವದ ಸಮಯ ಚಾರಣಕ್ಕೆ ಆರಿಸಿಕೊಂಡರೆ ಸೂಕ್ತ. ದರ್ಗಾ ಇರುವ ಜಾಗದ ವರೆಗೆ ಅಲ್ಪ ಸ್ವಲ್ಪ ನಡೆಯುವಂತಹ ಹಾದಿ ಇದ್ದರೂ, ಅಲ್ಲಿಂದ ಮೇಲಕ್ಕೆ ಬೆಟ್ಟದ ತುದಿಯ ತಲುಪಿ ಸುತ್ತಲಿನ ಪ್ರದೇಶವನ್ನು ನೋಡಬೇಕೆಂದರೆ, ಬಂಡೆಗಳನ್ನೇ ಹತ್ತಬೇಕು. ಇಂತಹ ಸಾಹಸಗಳು ಮಕ್ಕಳ ಇನ್ನಷ್ಟು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆದರೂ ಜಾಗರೂಕತೆ ಅತ್ಯವಶ್ಯಕ. ಬೆಟ್ಟದ ತುದಿಯನ್ನು ತಲುಪಿ ಅಷ್ಟೆತ್ತರದಿಂದ ಕಾಣಬಹುದಾದ ಸುತ್ತಮುತ್ತಲಿನ ನೋಟ ಮಾತ್ರ ರಮಣೀಯ. ಸಿದ್ಧಗಂಗಾ ಬೆಟ್ಟ ಇಲ್ಲಿಂದ ನೋಡಲುಮುದವೆನಿಸುತ್ತದೆ . ನೇರವಾದ ಬೆಂಗಳೂರು - ತುಮಕೂರು ಹೈವೆ ನೋಡಲು ಖುಷಿ ಕೊಡುತ್ತದೆ. ಅಲ್ಲಲ್ಲಿ ಇರುವ ಕೆರೆ ಕೊಳ್ಳಗಳು ಪ್ರಕೃತಿಯ ನೋಟವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.  ಎಲ್ಲೆಲ್ಲೂ ಮಂಗಗಳು ಆವರಿಸಿರುವುದರಿಂದ, ಸ್ವಲ್ಪ ಹೊತ್ತು ಆ ಕಡೆ ಈ ಕಡೆ ನೋಡುವಷ್ಟರಲ್ಲಿ ನಮ್ಮ ಕೈಯಲ್ಲಿರುವ ಆಹಾರ ಮಂಗಗಳು ಪಾಲಾಗಿರುತ್ತವೆ. ಬೆಳಿಗ್ಗೆ ತಿಂಡಿ ತಿಂದು , ಮಧ್ಯಾಹ್ನ ಊಟದ ಸಮಯದೊಳಗೆ ಚಾರಣ ಮುಗಿಸಿದ್ದರಿಂದ ನಮಗೆ ಹೆಚ್ಚಿನ ಸಮಸ್ಯೆಯಾಗಲಿಲ್ಲ. ಬೇಸರದ ಸಂಗತಿಯೆಂದರೆ, ಸ್ಥಳದ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತದೆ. ಇಂತಹ ಸುಂದರವಾದ ನೈಸರ್ಗಿಕ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಮನಸ್ಥಿತಿ ಎಲ್ಲರಲ್ಲೂ ಮೂಡಬೇಕಿದೆ. ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕಾರ್ಯ ಇನ್ನಷ್ಟುಬೇಕಾಗಿದೆ ಎಂದೆನಿಸಿತು. ಒಟ್ಟಾರೆಯಾಗಿ ಟ್ರೆಕಿಂಗ್ ಸಾಹಸಗಳನ್ನು ಮಕ್ಕಳಲ್ಲಿ ರೂಢಿಸಲು, ನಮ್ಮ ಜಡ ಹಿಡಿದ ಮೈ ಮತ್ತು ಮನಸ್ಸುಗಳಿಗೆ ವ್ಯಾಯಾಮ ನೀಡಲು ಹೋಗಿ ಬಂದ ಅರ್ಧ ದಿನದ ಚಾರಣ ತುಂಬಾ ಖುಷಿ ಕೊಟ್ಟಿತು.