ಶನಿವಾರ, ಮೇ 23, 2020

ಕೊರೋನಾ ಅನುಭವ - ಮಾಹಿತಿ

"ಮಗನಿಗೆ ಕೆಮ್ಮು ಜಾಸ್ತಿ ಆಗುತ್ತಲಿತ್ತು. ಜ್ವರ ಶುರುವಾಗಿತ್ತು. ಆಸ್ಪತ್ರೆಗೆ ಫೋನಾಯಿಸಿ ವಿಚಾರಿಸಿದಾಗ ರೋಗದ ಎಲ್ಲ ಲಕ್ಷಣಗಳನ್ನೂ ವಿಚಾರಿಸಿ, ಕೊರೋನಾ ಸೋಂಕು ರೋಗವೇ ಹೌದೆಂದು ಖಾತ್ರಿ ಮಾಡಿದರು. ಆ ಸಮಯಕ್ಕೆ ಇಂಗ್ಲಾಂಡ್ದಲ್ಲಿ ಅದೆಷ್ಟು ಸೋಂಕಿತರ ಸಂಖ್ಯೆ ಹೆಚ್ಚಿತ್ತೆಂದರೆ, ಎಲ್ಲ ಆಸ್ಪತ್ರೆಗಳಲ್ಲಿಯೂ ಕೊರೋನಾ ರೋಗಿಗಳೇ ತುಂಬಿಕೊಂಡಿರುತ್ತಿದ್ದರು . ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ರೋಗಾಣುಗಳಿಗೆ ನಮ್ಮನ್ನು ನಾವೇ ತೆರೆದಿಟ್ಟ ಲೆಕ್ಕ. ತೀರಾ ಉಸಿರಾಟದ ಸಮಸ್ಯೆ ಇಂದ ಒದ್ದಾಡುತ್ತಿರುವವರ ಮಧ್ಯೆ, ಆಗಿನ್ನೂ ಶುರುವಿನ ಹಂತದಲ್ಲಿದ್ದ ನನ್ನ ಮಗುವಿನ ಲಕ್ಷಣವನ್ನು ಗಮನಿಸಿ, ಆಸ್ಪತ್ರೆಯವರು ನಾವು ಮನೆಯಲ್ಲಿಯೇ ಇರಬಹುದಾದ ಆಯ್ಕೆ ನೀಡಿದ್ದರು. ಡಾಕ್ಟರ್ ನೀಡಿದ ಸಲಹೆಯಂತೆ, ಅವರು ಕೊಟ್ಟ ಸೂಚನೆಗಳ ಮೇರೆಗೆ, ನಾವು ಮಗುವನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚೇತರಿಸ್ಕೊಳ್ಳುವ ತೀರ್ಮಾನಕ್ಕೆ ಬಂದೆವು. ಎರಡು ಮಕ್ಕಳೊಂದಿಗೆ ೧೪ ದಿನಗಳು ನಮ್ಮನ್ನು ನಾವೇ ಮನೆಯಲ್ಲಿ ಸಂಪೂರ್ಣವಾಗಿ ಕೂಡಿಟ್ಟುಕೊಂಡೆವು. ಒಂದು ಕಾಲು ಹೊರಗೆ ಹೋಗಲಿಲ್ಲ, ಒಂದು ಕಾಲು ಒಳಗೆ ಬರಲಿಲ್ಲ. ಮಗ ೪.೫ ವರ್ಷದವ, ಮಗಳು ೨.೫ ವರ್ಷದವಳು..ಮಗನಿಗೆ ಹಬ್ಬಿರುವ ಸೋಂಕು ಮನೆಯಲ್ಲಿ ಸುಲಭವಾಗಿ ಎಲ್ಲರಿಗೂ ಹಬ್ಬುವ ಸಾಧ್ಯತೆ ಇದ್ದಿದ್ದರಿಂದ, ನಾವಿಬ್ಬರು ಯೋಚಿಸಿಕೊಂಡು, ಒಂದೊಂದು ಮಗುವನ್ನು ಒಬ್ಬೊಬ್ಬರು ನೋಡಿಕೊಳ್ಳುವ ಜವಾಬ್ಧಾರಿಯನ್ನು ಹಂಚಿಕೊಂಡೆವು. ಮನೆ ಎರಡು ಫ್ಲೋರಿನದಾದ್ದರಿಂದ, ಮಗನನ್ನು ಬಿಟ್ಟುಕೊಂಡು ನಾನು ಮೇಲ್ಗಡೆ  ಒಂದು ರೂಮಿನಲ್ಲಿ ಇರಲಾರಂಭಿಸಿದೆ. ಕೆಳಗಡೆ ಫ್ಲೋರಿನಲ್ಲಿ ಸಣ್ಣದೊಂದು ಕೋಣೆಯಲ್ಲಿ, ನನ್ನ ಗಂಡ ಮತ್ತು ಸಣ್ಣ ಮಗಳು ಇರುತ್ತಿದ್ದರು. ಮಕ್ಕಳಿಬ್ಬರೂ ತುಂಬಾ ಸಣ್ಣವರಾಗಿದ್ದರಿಂದ, ಅವರನ್ನು ಒಬ್ಬರಿಗೊಬ್ಬರು ಸಂಪರ್ಕದಲ್ಲಿಡದೇ ಕಾಪಾಡಿಕೊಳ್ಳುವುದು ಚ್ಯಾಲೆಂಜಿಂಗ್ ಇತ್ತು. ನಾವೆಂತೂ ಮಹಡಿಯ ಎರಡೂ ಬದಿಗೂ ಗೇಟ್ ಮಾದರಿಯಲ್ಲಿ ತಡೆಯನ್ನು ಹಾಕಿಟ್ಟಿದ್ದೆವು. ಏನೇ ಮಾತು ಕಥೆ ಒಂದಷ್ಟು ಹಾಡು ಆಟ ಇದ್ದರೂ ಎಲ್ಲವೂ ದೂರದಿಂದ ನಿಂತಲ್ಲಿಯೇ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಆದರೆ ಆ ಬೇರ್ಪಡಿಕೆ ಮಾತ್ರ ಯಾರ್ಯಾರಿಗೂ ಬೇಡ..!

ಮಗನನ್ನು ಒಂದೇ ಕೊಣೆಯಲ್ಲಿ ಎಂಟು ದಿನಗಳ ಕಾಲ ಬಿಟ್ಟುಕೊಂಡಿದ್ದೆ. ಆ ಎಂಟು ದಿನಗಳ ಮಗನ ಆರೋಗ್ಯ ಪರಿಸ್ಥಿತಿ ಮಾತ್ರ ಭಾರೀ ಭಯಾನಕವಾಗಿತ್ತು..ಒಂದು ವಾಕ್ಯ ಹೇಳಿ ಮುಗಿಸಲಿಕ್ಕೆ, ಅವನು ಕಮ್ಮಿ ಎಂದರೂ ಹತ್ತು ಸಲ ಕೆಮ್ಮುತ್ತಿದ್ದ. ರಾತ್ರಿ ಹಗಲು ನಿದ್ದೆ ಇರುತ್ತಿರಲಿಲ್ಲ. ಜ್ವರ ಬಂದರೆಂತೂ ಸುಮಾರಿಗೆ ಯಾವ ಪ್ಯಾರಾಸೆಟಮೋಲ್ ಹಾಕಿದರೂ ಪರಿಣಾಮ ಕಾಣಿಸುತ್ತಲೇ ಇರುತ್ತಿರಲಿಲ್ಲ. ಐಬುಪ್ರೊಫೇನ್ ಬಳಸುವಂತಿರಲಿಲ್ಲ. ೪೦ ಡಿಗ್ರಿ ಫ್ಯಾರನೇಟ್ ವರೆಗೆ ಏರಿಕೊಂಡೇ ಇರುತ್ತಿತ್ತು. ಆತಂಕ ಅಗಾಧವಾಗಿರುತ್ತಿತ್ತು. ಬಿಸಿನೀರು, ಕಷಾಯ ಎಲ್ಲವೂ ನಿರಂತರವಾಗಿ ನಡೆದೇ ಇತ್ತು. ಜೇಷ್ಠಮಧು, ಇದ್ದಷ್ಟು ಕಲ್ಲುಸಕ್ಕರೆ ಎಲ್ಲವೂ ನೀಡುತ್ತಿದ್ದೆವು. ಮಗ ತುಂಬಾ  ಸಣ್ಣವನಾದ್ದರಿಂದ ಇಡೀ ದಿನ ಅವನಿಗೆ ಮಾಸ್ಕ್ ಹಾಕಿಸಿ ಇಡಲು ಆಗುತ್ತಿರಲಿಲ್ಲ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಕೆಮ್ಮುವಾಗ ಸೀನುವಾಗ ಕೈಯನ್ನು ಬಾಯಿಗೆ ಅಡ್ಡ ಹಿಡಿಯಬೇಕು ಎನ್ನುವುದನ್ನು ಸರಿಯಾಗಿ ಕಲಿತಿದ್ದ ಮಗ, ಬೈ ಡೀಫಾಲ್ಟ್ ಆಗಿ, ಕೆಮ್ಮು ಬಂದಾಗಲೆಲ್ಲ ಕೈ ಇಂದ ಬಾಯಿಗೆ ತಡೆ ಹಿಡಿಯುತ್ತಲೇ ಇರುತ್ತಿದ್ದ. ನಾನು ಮಾತ್ರ ಯಾವಾಗಲೂ ಮಾಸ್ಕ್ ಹಾಕಿಕೊಂಡೆ ಇರುತ್ತಿದ್ದೆ. ಪದೇ ಪದೇ ಕೈ ತೊಳೆಯುತ್ತಲೇ ಇರುವುದೇ ನಮ್ಮ ಕೆಲಸವಾಗಿತ್ತು. ಸತತ ಕೈ ಸ್ವಚ್ಚತೆಯಿಂದಾಗಿ ಕೈಯ ಚರ್ಮದ  ರೂಪವೇ ಬದಲಾಗಿ ಹೋಗಿತ್ತು. ಮಗನಿಗೆ ಡೈನೋಸಾರ್ ಟಾಯ್ಗಳು ಪ್ರಿಯವಾಗಿದ್ದರಿಂದ, ಅವುಗಳನ್ನು ವಾಷಿಂಗ್ ಸ್ಟೇಷನ್ ಲಿ ತೊಳೆಸುವುದು ಎಂಬಿತ್ಯಾದಿ ಕಾಲ್ಪನಿಕ ಆಟಗಳನ್ನು ಆಡಿಸುತ್ತಿದ್ದೆ. ಅದೇ ನೆಪದಲ್ಲಿ ಅವನ ಕೈ ಕ್ಲೀನ್ ಆಗುತ್ತಿತ್ತು. ದಿನಕ್ಕೆ ಎರಡು ಮೂರು ಸಾರಿ ನಮ್ಮ ಉಡುಗೆಗಳನ್ನು ಬದಲಾಯಿಸಿಕೊಂಡು ಡಿಸ್ಇಂಫೆಕ್ಟಾನ್ಟ್ ಹಾಕಿ ತೊಳೆದು ತೊಳೆದು ಇಡುತ್ತಿದ್ದೆ.. ಬೆಡ್ ಶೀಟು ದಿನಂಪ್ರತಿ.. ನಾವು ಮುಟ್ಟುವ ವಸ್ತುಗಳನ್ನು, ನೆಲವನ್ನು, ಎಲ್ಲವನ್ನು ದಿನಕ್ಕೆರಡು ಬಾರಿ ಒರೆಸಿ ಕ್ಲೀನ್ ಮಾಡುತ್ತಿದ್ದೆ..ಅವನು ಪ್ರತಿಸಲ ಬಾತ್ರೂಮ್ ಟಾಯ್ಲೆಟ್ಗೆ ಹೋಗಿ ಬಂದಾಗಲೂ, ನಾನು ಇಡೀ ಬಾತ್ರೂಮನ್ನೂ ಫಿನಾಯಿಲ್ ಹಾಕಿ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದೆ..ಊಟ, ತಿಂಡಿ, ಅಡುಗೆ, ಮಧ್ಯೆ ಮಧ್ಯೆ ಮಕ್ಕಳಿಗೆ  ಕೊಡಲು ತಿಂಡಿ ಎಲ್ಲವನ್ನು ಗಂಡನೇ ಮಾಡಿ ತಂದು ಬಾಗಿಲ ಬಳಿ ಇಟ್ಟು ಹೋಗುತ್ತಿದ್ದ. ನಾವು ಒಳಗಡೆ ತೆಗೆದುಕೊಂಡು ತಿಂದು ತೊಳೆದು ಕೊಟ್ಟರೂ ಮತ್ತೊಮ್ಮೆ ಅವೆಲ್ಲ ಪಾತ್ರೆಗಳನ್ನು ಅವನು ತೊಳೆದಿಟ್ಟುಕೊಳ್ಳಬೇಕಾಗುತ್ತಿತ್ತು. ಮಕ್ಕಳೆದುರು ಆತಂಕದ ವಿಚಾರ ಮಾತನಾಡುತ್ತಿರಲಿಲ್ಲ.. ಮಕ್ಕಳಿಗೆ ತಾಳ್ಮೆಯಿಂದ ಕುಳಿತು ತಿಳಿಸಿ ಹೇಳುವುದು ಸಹಕಾರಿ ಆಗುತ್ತಿತ್ತು.. ಮನೆಗೆ ಬೇಕಾದ ಸಾಮಾನುಗಳನ್ನು ತರಲು ಕೂಡ ಹೊರಗೆ ಹೋಗುವಂತಿರಲಿಲ್ಲ. ಆತ್ಮೀಯ ಗೆಳೆಯರು ಈ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದರು. ಪಟ್ಟಿ ಮಾಡಿ ಆರ್ಡರ್ ಮಾಡಿದ ಸಾಮಾನುಗಳನ್ನು ಮನೆಬಾಗಿಲಿಗೆ ತಂದು ಇಟ್ಟು ಹೋಗುತ್ತಿದ್ದರು. ಅವರು ದಾಟಿದ ಮೇಲೆ ನಾವು ಬಾಗಿಲು ತೆಗೆದು ಚೀಲಗಳನ್ನು ಒಳಗೆ ತೆಗೆದಿಟ್ಟುಕೊಳ್ಳುತ್ತಿದ್ದೆವು.. ಈ ಸಮಯದಲ್ಲಿ ನನಗೂ ಸೋಂಕು ತಾಗದೇ ಇರುವುದು ಅಸಂಭವವಿತ್ತು. ನನಗೆ ಸ್ವಲ್ಪ ಕೆಮ್ಮು, ಅಸಾಧ್ಯ ಮೈಕೈ ನೋವು ಪ್ರಾರಂಭವಾಗಿತ್ತು. ನೋವೆಂದರೆ ಅದು ಸಾಮಾನ್ಯ ವೇದನೆಯಾಗಿರಲಿಲ್ಲ. ತಿಂಗಳ ಮುಟ್ಟಿನ ಸಮಯದಲ್ಲಿ ನಮಗೆ ಎಷ್ಟು ಸೊಂಟ ಮತ್ತು ಕಾಲು ನೋವು ಬರುತ್ತದೆಯೋ, ಅದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು..! ಬಿಸಿನೀರು ಬಳಕೆ ಸ್ವಲ್ಪ ಹಿತ ಕೊಡುತ್ತಿತ್ತು. ಮಕ್ಕಳಿಗೆ ಗ್ಯಾಡ್ಜೆಟ್ಸ್ ಸ್ಕ್ರೀನಿಂಗ್ ಅಭ್ಯಾಸ ಮಾಡಿಸದ ಕಾರಣ, ಮಗನಿಗೆ ಅವನ ತೊಂದರೆಯನ್ನು ಮರೆಸಿ ಹೇಗಾದರೂ ಸಮಯ ಸಾಗಿಸಬೇಕಾಗುತ್ತಿತ್ತು.. ರೂಮಿನ ಕಿಟಕಿಯಿಂದ ಬೈನೋಕ್ಯುಲರ್ ಹಿಡಿದು ಹಕ್ಕಿಗಳ ಚಲನವಲನಗಳನ್ನು ಗಮನಿಸುತ್ತಾ ಸಮಯ ಸಾಗಿ ಸುತ್ತಿದ್ದೆವು. ತಂಗಿಯ ನೆನಪಾದರೂ, ತನ್ನಿಂದ ತಂಗಿಗೆ ಇಷ್ಟು ಜಾಸ್ತಿ ಕೆಮ್ಮು ಬರುವುದು ಬೇಡ ಎಂದು ತನಗೆ ತಾನೇ ಸಮಾಧಾನ ತಂದುಕೊಳ್ಳುತ್ತಿದ್ದ ಪುಟ್ಟ ಮಗ..ನಾವು ಇಬ್ಬರೂ ವೃತ್ತಿಯಲ್ಲಿರುವವರಾದ್ದರಿಂದ ಕೆಲಸವೂ ವಿಪರಿಮೀತ ಬಾಕಿ ಇತ್ತು. ಇಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ೧೪ ದಿನಗಳ ಕಾಲ ರಜೆ ಸಿಗುತ್ತದೆ. ನಮಗೆ ಎಲ್ಲ ರಜೆಯನ್ನು ಒಟ್ಟಿಗೆ ಹಾಕಿ ಖಾಲಿ ಮಾಡಿಕೊಳ್ಳುವಂತಿರಲಿಲ್ಲ. ಮನೆಯಲ್ಲಿ ಯಾರಿಗೆ ಎಷ್ಟರ ಮಟ್ಟಿಗೆ ಈ ಖಾಯಿಲೆ ಗಂಭೀರತೆ ತೋರುವುದು ಎಂಬುದನ್ನು ಮುಂಚೆನೇ ಊಹೆ ಮಾಡಲು ಸಾಧ್ಯವಿಲ್ಲವಲ್ಲ, ಹಾಗಾಗಿ ಒಂದು ವಾರ ಹಾಗೋ ಹೀಗೋ ಮಗನನ್ನು ರೂಮಿನಲ್ಲಿ ಸಂಭಾಳಿಸಿಕೊಂಡವಳು ಆಮೇಲೆ ಅವನಿಗೆ ಸ್ವಲ್ಪ ಕಡಿಮೆಯಾಗುತ್ತಿರುವ ಲಕ್ಷಣ ಸಿಕ್ಕಾಗ ಎಲ್ಲರೂ ಕೆಳಗಡೆ ಒಟ್ಟಿಗೆ ಇರಲಾರಂಭಿಸಿದೆವು. ಮಕ್ಕಳನ್ನು ಆಡಲು ಬಿಟ್ಟುಕೊಂಡು ಅಲ್ಪಸ್ವಲ್ಪ ಕೆಲಸ ಮಾಡಿ ಮುಗಿಸಿಕೊಳ್ಳುತ್ತಿದ್ದೆವು.. ಮಕ್ಕಳು ನಾವು ಎಲ್ಲಾ ಪರಸ್ಪರ ಒಟ್ಟಿಗಿರುವುದು ಅವರಲ್ಲಿ ಖುಷಿಯ ಹಾರ್ಮೋನ್ಸ್ ಹೆಚ್ಚುತ್ತಿತ್ತು..

ಮಗಳಿಗೆ ಇಲ್ಲಿ ಇಂಗ್ಲಾಂಡಿನಲ್ಲಿ ಆಗಿನ್ನೂ ಕೊರೋನಾ ಹರಡುತ್ತಿರುವ ಕಾಲದಲ್ಲೇ ಒಮ್ಮೆ ಸಾಕಷ್ಟು ಕೆಮ್ಮು ಬಂದಿತ್ತು. ನಮಗೆ ತಿಳಿಯುವಷ್ಟರಲ್ಲೇ ಅವಳು ಕೊರೋನಾಕ್ಕೆ ಇಮ್ಮ್ಯೂನ್ ಆಗಿ ಹುಷಾರಾಗಿದ್ದಳು ಎಂದು ಈಗ ನಮಗೆ ಅನಿಸುತ್ತಿದೆ. ಮನೆಮಂದಿಯ ಎಲ್ಲರ ಪ್ರಾರ್ಥನೆ ನಮ್ಮ ಜೊತೆಗಿದೆ.. ನಮಗೂ ಕೂಡ ಅಷ್ಟೇ, ಪ್ರತಿದಿನದ ಬೆಳಗಿಗೆ ಗ್ರಾಟಿಟ್ಯುಡ್ ಭಾವವಿದೆ. ಸಧ್ಯಕ್ಕೆ ಮಗನ ಆರೋಗ್ಯ ಸುಧಾರಿಸಿದೆ. ನಾವೂ ಕೂಡ ಸುಧಾರಿಸಿದ್ದೇವೆ. ಮನೆಯಿಂದಲೇ ನಮ್ಮ ಕೆಲಸ ನಡೆದಿದೆ..ಎಲ್ಲರಿಗೂ ಒಂದೇ ಮಾದರಿಯ ತೊಂದರೆ ಎಂದು ಹೇಳಲಾಗದು. ನನ್ನ ಕೆಲವು ಫ್ರೆಂಡ್ಸ್ ಗಳ ಪೈಕಿ ಕೆಲವರಿಗೆ ಕೆಮ್ಮಾದರೆ, ಕೆಲವರಿಗೆ ಕೇವಲ ಜ್ವರ, ಕೆಲವರಿಗೆ ಮೈಕೈ ನೋವಾದರೆ ಕೆಲವರಿಗೆ ಉಸಿರಾಡಲಿಕ್ಕೆ ಕಷ್ಟವಾಗಿ ಕೃತಕ ಆಮ್ಲಜನಕದ ವ್ಯವಸ್ಥೆಯವರೆಗಿನ ಗಂಭೀರತೆ.. ಎಲ್ಲರದ್ದೂ ಹೋರಾಟ..ಆತ್ಮಸ್ಥೈರ್ಯ ಮತ್ತು ಉತ್ತಮ ಆರೋಗ್ಯ ಸ್ಥಿತಿ ಇದ್ದರೆ ಖಂಡಿತ ಹೋರಾಟ ಯಶಸ್ವಿಯಾಗುತ್ತದೆ. ಇನ್ನೂ ಕೂಡ ಇಲ್ಲಿನ ಎಲ್ಲ ದುಸ್ಥಿತಿ ಪ್ರತಿನಿತ್ಯ ನ್ಯೂಸ್ ನಲ್ಲಿ ಕೇಳಿ ಕಾಣುತ್ತಿದ್ದೇವೆ.. ಗುಣವಾದವರ ಸಂಖ್ಯೆ, ಸತ್ತವರ ಸಂಖ್ಯೆ ಯಾವುದನ್ನೂ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ.. ಮಾಸ್ಕ್ ಹಾಕಿಕೊಳ್ಳುವುದು, ಪದೇ ಪದೇ ಕೈ ತೊಳೆಯುತ್ತಿರುವುದು ಅತ್ಯಂತ ಪ್ರಯೋಜನವಾದ ಕೆಲಸಗಳು, ಅವೆರಡು ನಮ್ಮ ದಿನಚರಿಯಲ್ಲಿ ಈಗ ಮಿಳಿತಗೊಂಡು ಹೋಗಿದೆ. ಇವ್ಯಾವುವೂ ಈಗ ಸಂಕಟ ಅಥವಾ ತೊಂದರೆ ಎಂದು ಎನಿಸುವುದಿಲ್ಲ. ಮೂಗು, ಮುಖ, ಬಾಯಿ ಕೈ ಸ್ವಚ್ಛವಾಗಿರಿಸಿಕೊಳ್ಳುವುದು ಕೇವಲ ಕೊರೋನಾ ಒಂದೇ ಅಲ್ಲ ಯಾವುದೇ ರೀತಿಯ ವೈರಸ್ ಗಳಿಂದ ಉಂಟಾಗುವ ಸಣ್ಣ ದೊಡ್ಡ ಖಾಯಿಲೆಗೂ ಉತ್ತಮ ಶಮನ..."

ಸಂಬಂಧಿಯೊಬ್ಬರು ನನಗೆ ಮಾತನಾಡಿದ, ಹಂಚಿಕೊಂಡ ವಿಷಯವನ್ನು ಯಥಾವತ್ತಾಗಿ ಇಲ್ಲಿ ಬರೆದಿದ್ದೇನೆ. ಈಗ ಯಾರು ಇವರು, ಏನು ಎತ್ತ ಎಂಬುದು ಇಲ್ಲಿ ಮುಖ್ಯವಲ್ಲ. ಕೊರೋನಾ ಎಂಬ ಮಾರಕ ಖಾಯಿಲೆಯ ಹರಡುವಿಕೆಯ ಆತಂಕದ ಸಂದರ್ಭದಲ್ಲಿ, ಹಂಚಿಕೊಂಡ  ಒಬ್ಬೊಬ್ಬರ ಒಂದೊಂದು ಅನುಭವವೂ, ಒಂದೊಂದು ಮಾಹಿತಿಯೂ ಅತೀಮುಖ್ಯ ಮತ್ತು ಉಪಯುಕ್ತವಾಗುತ್ತದೆ. ಇಲ್ಲಿ ಮೇಲಿನ ಅನುಭವವನ್ನು ಓದಿ, ನಮಗೂ ಇದೇ ರೀತಿ ಆಗುತ್ತದೆ ಎಂಬ ಆತಂಕ, ಗಾಬರಿ ಪಡಬೇಕೆಂದಲ್ಲ, ಅಸಡ್ಡೆ ಸಲ್ಲ ಎಂಬುದು ನನ್ನ ಈ ಬರಹದ ಉದ್ದೇಶ. ಸಮರ್ಪಕ ಮಾಹಿತಿ, ಮೆಡಿಕಲ್ ವ್ಯವಸ್ಥೆ, ಪರಸ್ಪರ ಸಹಕಾರ, ಹೊಂದಾಣಿಕೆ, ಜೊತೆಗೆ ಅಗಾಧವಾದ ಆತ್ಮಸ್ಥೈರ್ಯದ ಇದ್ದರೂ, ಅನುಭವಿಸಬೇಕಾದ ನೋವು, ಆತಂಕ ಎಂಬುದು ಕೂಡ ಅಷ್ಟೇ ಪಾರದರ್ಶಕ ಸತ್ಯ. ಕೊರೋನಾ ಎಂಬುದು ಈಗ ಒಂದು ವೈಯುಕ್ತಿಕ ಆರೋಗ್ಯ ಸಮಸ್ಯೆಯಲ್ಲ..ಸೋಂಕು ತಾಗಿದರೆ ನಮ್ಮ ದೇಹ ಹೇಗೆ ಹೋರಾಡುತ್ತದೆ ಎಂಬುದರ ಖಾತ್ರಿ ನಮಗಿಲ್ಲ, ಅದು ನಮ್ಮ ನಮ್ಮ ನಿರೋಧಕ ಶಕ್ತಿಯ ಮೇಲೆ ನಿರ್ಧರಿತ..  ಆದರೆ  ಸೋಂಕು ಹರಡುವಲ್ಲಿ ನಮ್ಮ ಕೊಡುಗೆ ಇರದಿರಲಿ..🙏

ಭಾನುವಾರ, ಮೇ 10, 2020

ತಾಯಂದಿರ ದಿನವಿದು

ನನ್ನ ಅಮ್ಮುಮ್ಮ ನಿಗೆ ಈಗ ೯೪ ವರ್ಷ. ಬಡತನ ಕಷ್ಟ ಕಾರ್ಪಣ್ಯಗಳನ್ನು ಜೀವನದುದ್ದಕ್ಕೂ ಪಡೆದು, ಸಹಿಸಿಕೊಂಡು ಬಂದವಳು ಅವಳು.. ಮನೆ ತುಂಬಾ ಮಕ್ಕಳು. ದೊಡ್ಡ ಮಗಳ ಬಾಳಂತನ ಮತ್ತು ಅಮ್ಮುಮ್ಮನ ಕಿರಿ ಮಗುವಿನ ಬಾಳಂತನ ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ನಡೆಯುವಂತಹ ಕಾಲದಲ್ಲಿ, ಪ್ರತಿಯೊಂದನ್ನೂ ಸಂಭಾಳಿಸಿದವಳು..ಕಷ್ಟಕರ ವ್ಯವಸಾಯ ದುಡಿಮೆ, ಆಸ್ತಿ ವ್ಯಾಜ್ಯ ಜಗಳಗಳ ನಡುವೆ ಗಂಡನೊಂದಿಗೆ ಸೂರಿಂದ ಸೂರಿಗೆ ದಾಟುತ್ತ, ಎರಡೇ ಎರಡು ಸೀರೆಯಲ್ಲಿ ತಾನು ಜೀವನ ಮಾಡಿಕೊಂಡು, ೪ ಅಂಗಿ ಚಡ್ಡಿ, ೨ ಲಂಗ ಗಳಲ್ಲಿ ಆರು ಜನ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿಕೊಂಡು ಬಂದ ಗಟ್ಟಿಗಿತ್ತಿ ನನ್ನ ಅಮ್ಮುಮ್ಮ.. ಆಗಿನ ಪರಿಸ್ಥಿತಿಯೇ ಹಾಗಿತ್ತು, ಎಲ್ಲರ ಹೊಟ್ಟೆಗೆ ಆಗುವಷ್ಟು ಊಟ ತಿಂಡಿ, ದನಕರಗಳ ಹೊಟ್ಟೆ ಹೊರೆಯುವ ಕೆಲಸ, ಇಷ್ಟರಲ್ಲೇ ದುಡಿಮೆ ಸರಿಯಾಗುತ್ತಿತ್ತು..ಮತ್ತೊಂದಷ್ಟು ಕಷ್ಟಪಟ್ಟು ಉಳಿಸಿಕೊಂಡ ದುಡ್ಡು, ವ್ಯಾಜ್ಯ ಕೋರ್ಟು ಕಚೇರಿ ಎಂದೇ ಕರಗುತ್ತಿತ್ತು..ಒಮ್ಮೆಯಂತೂ ಪೂಜ್ಯ ಶ್ರೀಧರ ಗುರುಗಳು ಮನೆ ಬಾಗಿಲಿಗೆ ಬಂದಾಗ, ಅವರಿಗೆ ದಾನ ನೀಡಲು ಧಾನ್ಯ, ಉತ್ತಮವಾದ ಹಣ್ಣು, ಸಿಹಿ ಅಪ್ಪಚ್ಚಿ  ಏನೂ ಇರದಿದ್ದಾಗ ಕೇವಲ ಬೆಲ್ಲ ಮತ್ತು ಒಂದು ಹಿಡಿ ಅರಳುಕಾಳು ಕೊಟ್ಟು, ಕಾಲಿಗೆ ನಮಸ್ಕರಿಸಿ ಕಳುಹಿಸಿದ ಪ್ರಸಂಗವನ್ನು ಅಮ್ಮುಮ್ಮ ಇವತ್ತಿಗೂ ನೆನಪಿಸಿಕೊಳ್ಳುತ್ತಾಳೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೂ ಆಗದ ಪರಿಸ್ಥಿತಿ ಅವರದ್ದು.. ಮಕ್ಕಳೆಲ್ಲಾ ಎಲ್ಲೆಲ್ಲೋ, ಯಾರ್ಯಾರದ್ದೋ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ವಾರಾನ್ನದ ಕೃಪೆಯ ಮೇರೆಗೆ ವಿದ್ಯಾಭ್ಯಾಸ ಮುಗಿಸಿಕೊಂಡರು. ಮಕ್ಕಳು ಮತ್ತು ತಾಯಿಯ ಅಗಲಿಕೆ ಆಗಿನ ಅನಿವಾರ್ಯತೆಯಾಗಿದ್ದರೂ, ಈಗ ಮಕ್ಕಳೆಲ್ಲರೂ ಒಂದು ಹಂತಕ್ಕೆ ದೊಡ್ಡ ದೊಡ್ಡ ಹುದ್ದೆಯ ವರೆಗೆ ತಲುಪಿ, ನಾಲ್ಕು ಜನರು ಖುಷಿ ಪಡುವಷ್ಟರ ಮಟ್ಟಿನ ಜೀವನ ನಡೆಸುತ್ತಿರುವುದರಲ್ಲಿ ಅವಳ ಪಾಲಿನ ಮಮತೆ ಮತ್ತು ತ್ಯಾಗ ದ ಕೊಡುಗೆ ಸುಮಾರಷ್ಟಿದೆ..ವರ್ಷಗಳು ಉರುಳಿದಂತೆ ಅಜ್ಜ ಪ್ಯಾರಾಲಿಸಿಸ್ ಖಾಯಿಲೆಗೆ ತುತ್ತಾಗಿ ೧೪ ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಮಲಗಿದ, ಊಟ ತಿಂಡಿ ಪಾಯಿಖಾನೆ ಎಲ್ಲವೂ ಮಲಗಿದಲ್ಲಿಯೇ ವ್ಯವಸ್ಥೆ ಮಾಡಬೇಕಿತ್ತು.. ಅಂತಹ ಅನಿವಾರ್ಯತೆಯ ಪರಿಸ್ಥಿತಿಯಲ್ಲೂ, ಕಿಂಚಿತ್ತೂ ಬೇಸರಿಸದೆ ತನ್ನ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ, ಅಜ್ಜ ಸಾಯುವ ವರೆಗೂ ಮಾಡಿಕೊಂಡು ಬಂದ ಧೈರ್ಯವಂತೆ ಅಮ್ಮುಮ್ಮ..  ಅವಳ ಹೋರಾಟದ ಬದುಕಿನಲ್ಲಿ ಬಂದಪ್ಪಳಿಸಿದ ಆಘಾತಗಳು ಒಂದೆರೆಡಲ್ಲ.. ೭೫ ನೇ ಹಿರಿಯ ವಯಸ್ಸಿಗೆ, ಅವಳಿಗೆ ಕರುಳಿನ ಕ್ಯಾನ್ಸರ್ ಖಾಯಿಲೆ ಗುರುತಿಸಲ್ಪಟ್ಟಿತು. ಆಪರೇಷನ್ ನಡೆದರೂ, ಕ್ಯಾನ್ಸರ್ ಎಂಬ ಪದದ ಅರಿವಿಲ್ಲದೆ, "ಏನೋ ಹೊಟ್ಟೆಯ ತೊಂದರೆಗೆ ಸಣ್ಣ ಆಪರೇಷನ್ ಆಗಿದೆ, ನೀ ಹುಷಾರಾಗ್ತೇ ಬೇಗ.. " ಎಂಬ ಮಕ್ಕಳ ಮನೋಸ್ಥೈರ್ಯದ ಬಲದ ಮೇಲೆಯೇ, ಮುಂಚಿನಕಿಂತಲೂ ಗಟ್ಟಿಯಾಗಿಬಿಟ್ಟಳು.. ಕ್ಯಾನ್ಸರ್ ಕಣಗಳಿಗೆ ಮತ್ತೆ ಅವಳನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ..ಕೊನೆಯ ಮಗ, ನಲ್ವತ್ತನೇ ವಯಸ್ಸಿನಲ್ಲಿಯೇ ಅನಾರೋಗ್ಯದಿಂದ ಮೃತಗೊಂಡಾಗ, ಅದನ್ನೂ ಹೃದಯ ಗಟ್ಟಿ ಮಾಡಿಕೊಂಡು ತಡೆದುಕೊಂಡವಳು ಆ ತಾಯಿ. ಎಲ್ಲ ಮಕ್ಕಳ ಕಷ್ಟಗಳಿಗೂ ಬೇಕೆಂದಾಗ ಸಾಂತ್ವಾನ, ಧೈರ್ಯ ನೀಡಿ, ತನ್ನ ಕೈಲಾದ ಸಹಾಯ ಮಾಡುತ್ತಾ ಬಂದ ಅದಮ್ಯ ಶಕ್ತಿ .. 

ಅಮ್ಮುಮ್ಮನ ಕಲಿಕೆಯ ದಾಹ ಅಮೋಘವಾದದ್ದು..! ಶಾಲೆಗೆ ಹೋಗಿ ಓದು ಬರಹ ಕಲಿತವಳಲ್ಲ ಅವಳು. ಆದರೆ ಮಕ್ಕಳು ಅಕ್ಷರ ಕಲಿಯುವಾಗ ಅವರ ಜೊತೆ ಕೂತು ಅಲ್ಪ ಸ್ವಲ್ಪ ಅ, ಆ, ಇ, ಈ ಕಲಿತು, ಕಡೆಗೆ ಲೆಕ್ಕಪತ್ರದ ಕಾಗದಕ್ಕೆ 'ಸಾವಿತ್ರಮ್ಮ' ಎಂದು ತನ್ನ ಸಹಿ ಬರೆಯುವಷ್ಟರ ಮಟ್ಟಿಗೆ ಅಕ್ಷರ ಕಲಿತ ಸಾಧನೆ ಅವಳದ್ದು. ಇತ್ತೀಚಿಗೆ ಅಂದ್ರೆ ಹೆಚ್ಚು ಕಮ್ಮಿ, ಕಳೆದ ವರ್ಷದ ವರೆಗೂ, ಕನ್ನಡಕವನ್ನೇರಿಸಿ ಅಕ್ಷರಗಳನ್ನು ಕೂಡಿಸಿ ಕೂಡಿಸಿ ದಿನನಿತ್ಯದ ಪೇಪರ್ರನ್ನು ಓದಿ, ಎಲ್ಲಾ ಸುದ್ದಿ ಹೀರಿಕೊಂಡು ಅದರ ಬಗ್ಗೆ ಮಕ್ಕಳೊಡನೆ ಕೂತು ಮಾತನಾಡುವ ಪರಿಯೇ ನಮಗೆ ಒಂದು ಬಗೆಯ ಖುಷಿ.. ತೋಟಕ್ಕೆಲ್ಲ ಓಡಾಡುವಷ್ಟು ಶಕ್ತಿ ಇರುವ ತನಕ, ತಾನೇ ಖುದ್ದಾಗಿ ಹೋಗಿ, ಗೊತ್ತಿರುವ ಬೇರು ನಾರುಗಳನ್ನು ಕಿತ್ತು ತಂದುಕೊಂಡು ಕಷಾಯ ಮಾಡಿಕೊಂಡು, ಅದರಲ್ಲೇ ಸಣ್ಣ ಪುಟ್ಟ ಜ್ವರ ಕೆಮ್ಮು ಥಂಡಿಯನ್ನು ಹೆಸರಿಲ್ಲದಂತೆ ಜಯಿಸಿಕೊಳ್ಳುವವಳು.. ಈಗ ವಯೋಮಾನಕ್ಕೆ ತಕ್ಕಂತೆ ದೇಹ ಅಶಕ್ತವಾಗುತ್ತಿದೆ, ನಿದ್ದೆ ಬರುವುದಿಲ್ಲ, ಮೈ ಕೈ ನೋವಿನ ನರಳಾಟ.. ಅಷ್ಟಿದ್ದರೂ ಇವತ್ತಿಗೂ ಬೆಳಿಗ್ಗೆ ಬೇಗನೆ ಎದ್ದು, ತಿಂಡಿ ತಿಂದು, ತನ್ನ ತಟ್ಟೆ, ಬಟ್ಟೆ ತೊಳೆದುಕೊಂಡು, ಮಂದಗತಿಯಲ್ಲೇ ಆದರೂ ಅಲ್ಪ ಸ್ವಲ್ಪ ಮನೆಯೊಳಗೆಯೇ ಗೋಡೆಗಳ ಆಧಾರ ಹಿಡಿದು, ವಾಕಿಂಗ್ ಮುಗಿಸಿ, ನರಗಳೆದ್ದ ಕೈಯಿಂದ ದೀಪಕ್ಕೆ ಬತ್ತಿ ಹೊಸೆದು, ಹೂವು ತೆಗೆದುಕೊಂಡು ಪಕ್ಕದಲ್ಲಿರುವ ದೇವಸ್ಥಾನಕ್ಕೆ ಹೋಗಿ ನೀಲಕಂಠೇಶ್ವರನಿಗೆ ಕೈ ಮುಗಿದು ಬರುವ ತನ್ನ ದಿನಚರಿಯನ್ನು ಸುಮಾರಾಗಿ  ತಪ್ಪಿಸುವುದಿಲ್ಲ..!

ಅಮ್ಮಮ್ಮನ ಬಗೆಗಿನ ವಿಷಯಗಳನ್ನು ಬರೆಯುತ್ತಾ ಹೋದರೆ, ಇವತ್ತಿಗೆ ಮುಗಿಯಲಿಕ್ಕಿಲ್ಲ.. ಚಿಕ್ಕಪ್ಪನ ಮನೆಯಲ್ಲಿರುವ ಅಮ್ಮಮ್ಮನನ್ನು ಪದೇ ಪದೇ ಹೋಗಿ ಮಾತನಾಡಿಸಿ ಪ್ರೀತಿ ಕೊಟ್ಟು-ತೆಗೆದುಕೊಳ್ಳುವ ನಿಯಮಿತ ಅಭ್ಯಾಸ ಅಪ್ಪಾಜಿ ಮತ್ತವನ ಸಹೋದರರಿಗಿದೆ..ನಾವು ಮೊಮ್ಮಕ್ಕಳು ಯಾರೇ ಊರಿಗೆ ಬಂದರೂ ಒಂದು ಗಳಿಗೆ ಮಟ್ಟಿಗೆ ಆದರೂ ಅವಳಿರುವಲ್ಲಿಗೆ ಹೋಗಿ, ಅವಳಿಗೆ ಕಿವಿ ಕೇಳದಿದ್ದರೂ ಹೋಗಿ ಮಾತನಾಡಿಸಿ ಬರದಿದ್ದರೆ ನಮಗೆ ಸಮಾಧಾನವಿಲ್ಲ..ಆ ಮಟ್ಟಿಗೆ ಅಮ್ಮುಮ್ಮ ಅದೃಷ್ಟವಂತೆ..ಅಷ್ಟು ಬಾಂಧವ್ಯವನ್ನು ಅವಳು ನಮಗೆ ನಮ್ಮ ಬಾಲ್ಯದಿಂದಲೂ ಕಟ್ಟಿಟ್ಟಿರುವುದೇ ಅದಕ್ಕೆ ಕಾರಣ! ಕಳೆದ ವಾರದಿಂದ ವಯೋಮಾನಕ್ಕೆ ತಕ್ಕಂತೆ ತುಸು ಹೆಚ್ಚೇ ಹುಷಾರಿರಲಿಲ್ಲ ಅಮ್ಮಮ್ಮನಿಗೆ. ಮಾಣಿ (ದೊಡ್ಡಪ್ಪ), ರಾಮು (ಅಪ್ಪಾಜಿ), ನಾಣು (ಚಿಕ್ಕಪ್ಪ) ಎಂದೆಲ್ಲ ತನ್ನ ಮಕ್ಕಳ ಕನವರಿಕೆ.. ಬೇಸಿಗೆಯ ಧಗೆ, ಯಾರನ್ನೂ ಭೇಟಿಯಾಗಲಾರದಂತಹ ಕೊರೋನಾ ಲಾಕ್ ಡೌನ್ ನ ಬಂಧನ ಎಲ್ಲವೂ ಅಮ್ಮಮ್ಮನನ್ನು ತುಸು ಕುಗ್ಗಿಸಿತ್ತು.. ಈ ಕಡೆಯಿಂದ ಅವಳ ಮಕ್ಕಳ ಮನಸ್ಸು ಕೂಡ ಹಪಹಪಿಸದೆಯೇ ಇರುತ್ತದೆಯೇ? ಪರ್ಮಿಷನ್ ಪಡೆದು, ಜನರು ಓಡಾಡಲು ನೀಡಿದ ಸಮಯದ ಗಡುವಿನ ಮಧ್ಯೆಯೇ ಎಲ್ಲರೂ ಹೋಗಿ ಅಮ್ಮಮ್ಮನನ್ನು ಭೇಟಿಯಾಗಿದ್ದಾಯಿತು.. ಅಮ್ಮಮ್ಮಂಗೆ ಕಣ್ಣು, ಕಿವಿ ಎರಡೂ ಮಂದವಾಗಿದೆ, ಆದರೆ ಬುದ್ಧಿ ಮಾತ್ರ ಅಷ್ಟೇ ಚುರುಕು..ಮಕ್ಕಳ ಕಂಡು ಅವಳಿಗಾದ ಸಂತೋಷ-ದುಃಖದ ಭಾವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ..ಅವಳ ಆ ಅಳುವಿನಲ್ಲೂ ಅಪರಿಮಿತ ಸಂತೋಷವಿತ್ತು..! ಹೊತ್ತು ಕಳೆಯಲು ಸಾಧ್ಯವಾಗದೆ, ಕಾಡುವ ಶಾರೀರಿಕ ಮಾನಸಿಕ ತೊಂದರೆ, ಮೈ ಕೈ ನೋವು, ಬಾರದ ನಿದ್ದೆಯ ಮಧ್ಯೆಯೂ ಕೂಡ ತನ್ನ ಜವಾಬ್ಧಾರಿಗಳದ್ದೇ ಆಲೋಚನೆ ಅವಳಿಗೆ..ತನಗೆ ತೋಟವನ್ನು ನೋಡಬೇಕು ಎನಿಸುತ್ತಿದೆ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡು, ಕಾರಿನಲ್ಲಿ ಹೋಗಿ, ತೋಟ ಇಳಿಯಲಾಗದಿದ್ದರೂ, ನಿಂತಲ್ಲಿಂದಲೇ ಭೂಮಿತಾಯಿಯನ್ನು, ತೋಟದ ಮಣ್ಣನ್ನು ಮುಟ್ಟಿ ನಮಸ್ಕರಿಸಿ ಬಂದಾಗಿದೆ ಅಮ್ಮುಮ್ಮ! ಅನಕ್ಷರಸ್ಥ ಅಮ್ಮುಮ್ಮ, ಅದೆಷ್ಟೋ ವರ್ಷಗಳ ಹಿಂದೆಯೇ, ತನ್ನ ಮರಣದ ನಂತರ, ತನ್ನ ದೇಹವನ್ನು ದಾನಕ್ಕೆ ಬರೆದು ಸಹಿ ಹಾಕಿಟ್ಟಿದ್ದಾಳೆ..! "ನಂಗೆ ಎಂತಾರು ಆದ್ರೆ, ನಿಂಗ ಅಳ್ತಾ ತಡ ಮಾಡ್ತಾ ಕೂರಡಿ, ಆಸ್ಪತ್ರಿಗ ಎಲ್ಲಿಗ ನೋಡಿ ಕಳ್ಸಿ ಈ ದೇಹನ ಮತ್ತೆ.." ಎಂದು ನಮಗೆ ನೆನಪು ಬೇರೆ ಮಾಡುವವಳು ಇವಳು..! "ಹಿಂದೆ ಪ್ಲೇಗ್ ಬಂದಂಗೆ ಈಗ ಅದೆಂತೋ ಜ್ವರ ಬೈಂದಡ, ವಯಸ್ಸಾದವು ಎಲ್ಲಾ ಓಡಾಡಾಂಗಿಲ್ಲೆ ಅಲ್ದಾ.." ಎಂದು ಇಂದಿನ ಆಗು ಹೋಗುಗಳ ಕುರಿತು ಮಕ್ಕಳೊಂದಿಗೆ ಹೇಳಿ ಕೇಳಿ ಮಾಡುವ ಅವಳಿಗೆ, ಮೊದಲಿಗೆ ಬರುವ ಯೋಚನೆಯಾದರೂ ಯಾವುದು? "ಮದ್ವೆ ಗಿದ್ವೆ ಆಪ ಹೆಣ್ಣು ಹುಡ್ರು ಕಥೆ ಎಂತದು.." ಎಂದು ತನ್ನ ಮೊಮ್ಮಕ್ಕಳ ಕುರಿತಾಗಿಯೇ ಆಲೋಚಿಸುತ್ತಾಳೆ ಅವಳು.. ಸೀರೆಯ ನಿರ್ವಹಣೆ ಅವಳಿಗೆ ಕಷ್ಟ ಎಂದು ನೈಟಿ ಅಭ್ಯಾಸ ಮಾಡಿಕೊಂಡಿರುವ ಅಮ್ಮುಮ್ಮ ಮೊನ್ನೆ ನನ್ನ ಬಳಿ, "ಅಮ್ಮಿ, ನನ್ ಈ ನೈಟಿ ಉದ್ದಕ್ಕಿದ್ದು, ಕಾಲಿಗೆ ಕಡ್ತು.. (ಕಾಲಿಗೆ ಸಿಕ್ಕು ತೊಂದರೆಯಾಗುತ್ತದೆ ಎಂದರ್ಥ), ಮೊಣಕಾಲ್ವರಿಗೆ ಬಪ್ಪಾನ್ಗೆ ನೈಟಿ ಮಾಡ್ಕೊಡು, ತೊಳ್ಕಳಕ್ಕೂ ಸುಲ್ಭ ನಂಗೆ, ನಿಂಗಳಂಗೆ ಗಿಡ್ಡ ಅಂಗಿ ಸ್ಟ್ಯಾಯ್ಲು ಆಗ್ತು ಹದ..? " ಎಂದು ತಮಾಷೆ ಬೇರೆ ಮಾಡುತ್ತಿದ್ದಳು.. ಕೇಳದ ಕಿವಿ, ತುಂಬಿದ ಮಂಜುಗಣ್ಣಿನಲ್ಲಿಯೇ ನನ್ನ ಅಕ್ಕನನ್ನು ಅಮೆರಿಕಕ್ಕೆ ಕಳಿಸಿದ್ದಳು ಅಮ್ಮುಮ್ಮ.. "ಸುಮಾ ಹುಡ್ರು ಅರಾಮಿಡ್ವಡ? ನಾ ವಾಪಸ್ ಬರವರಿಗೆ ಇರು ಹೇಳಿಕ್ ಹೊಯ್ದ ಸುಮಾ.. " ಎಂದು ಕಣ್ಣು ತುಂಬಿಕೊಂಡೇ ಅಕ್ಕನನ್ನು ನೆನೆಯುತ್ತಾಳೆ.. 'ಕಣ್ಣೀರು ಎಂಬುದು ಯಾವಾಗಲೂ ಬೇಸರವೇ ಎಂದಾಗಬೇಕಿಲ್ಲ, ಅದೂ ಕೂಡ, ಪ್ರೀತಿ ತೋರಿಸುವ ಒಂದು ಭಾವ'  ಎಂಬುದನ್ನು ತನ್ನ ಕಣ್ಣಲ್ಲೇ ತೋರಿಸಿ ಹೇಳುತ್ತಾಳೆ..ಹುಚ್ಚ್ ಅಮ್ಮುಮ್ಮ ನಮ್ಮನ್ನೂ ಅಳಿಸುತ್ತಾಳೆ..:) "ತಗ ಈ ಹಣ್ಣು ತಿನ್ನು ಗಟ್ಟಿಯಾಗ್ತೇ.." ಎಂದು ಅಪ್ಪಾಜಿ ಹಣ್ಣು ಬಿಡಿಸಿ ತಿನ್ನಲು ಕೊಟ್ಟರೆ, ಅದನ್ನು ಬಾಯಿಗೆ ಹಾಕಿಕೊಳ್ಳುತ್ತಲೇ, " ಹುಡ್ರಾ ಹಿಂದ್ಗಡೆ ಮಾಡಗೆ ಬಾಳೆ ಹಣ್ಣಿನ್ ಗೊನೆ ಇದ್ದು, ಎಲ್ರು ತಗಂಡ್ ಹೋಗ್ಕ್ಯಾನ್ಡ್ ತಿನ್ನಿ, ಮರ್ತಿಕ್ ಹೋಗಡಿ.." ಎಂದು ಹೇಳುವುದಕ್ಕೂ ಮರೆಯುವುದಿಲ್ಲ..

ಕಳೆದ ವಾರ, ಒಂದು ಬಾರಿ ಡ್ರಿಪ್ಸ್ ಹಾಕಿಸಿ ಬರಬೇಕಾಗುವುದೇನೋ ಎಂಬಷ್ಟು ಕಳೆಗುಂದಿದ್ದ ಅಮ್ಮುಮ್ಮ ಆವತ್ತು ಮಕ್ಕಳ ಕಂಡು ಮಾತನಾಡಿ ಮನಸ್ಸು ಹಗುರವಾದಂತೆಯೂ, ಮಕ್ಕಳ ಧೈರ್ಯಕ್ಕೆ, ಸಾಂತ್ವಾನಕ್ಕೆ, ಪ್ರೀತಿಗೆ ಸೋತು, ಮಾತ್ರೆ ಔಷಧಿಗಳನ್ನು ತೆಗೆದುಕೊಳ್ಳಲೊಪ್ಪಿಕೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾಳೆ..:) 

ನನ್ನ ಹಾರೈಕೆ ಇಷ್ಟೇ.. ನನ್ನ ಅಮ್ಮುಮ್ಮನಂತಹ ಅಮ್ಮ, ತನ್ನ ಅನಾರೋಗ್ಯದ ನಡುವೆಯೂ ಪ್ರತಿಫಲಾಕ್ಷೆಯಿಲ್ಲದೆ, ಮಕ್ಕಳಿಗಾಗಿ ಪ್ರತಿಯೊಂದನ್ನು ಮಾಡುವ ನನ್ನಮ್ಮನಂತಹ ಅಮ್ಮ, ಯಾವಾಗ ಏನು ಬೇಕಾದರೂ ನಿಸ್ಸಂಕೋಚವಾಗಿ ಹೇಳಿಕೊಳ್ಳಲು ಇರುವ ನನ್ನಕ್ಕನಂತಹ ಅಮ್ಮ,ಅತ್ತೆ ಎಂಬ ಮತ್ತೊಬ್ಬ ಅಮ್ಮ.. ಹೀಗೆ ನಮ್ಮ ಸುತ್ತಮುತ್ತಲೂ ತಮ್ಮ ಪ್ರತಿಕ್ಷಣದ ನಿಸ್ವಾರ್ಥ ಪ್ರೀತಿ, ತ್ಯಾಗ, ನಂಬಿಕೆ, ಕಾಳಜಿ, ಸಾಂತ್ವಾನ, ಧೈರ್ಯ ಮತ್ತು ತಮ್ಮ ಅದಮ್ಯ ಶಕ್ತಿಯನ್ನೂ ಮಕ್ಕಳಿಗಾಗಿ ಪೊರೆವ ಎಲ್ಲಾ ಅಮ್ಮಂದಿರಿಗೂ ಚಿಕ್ಕಪುಟ್ಟದಾದರೂ ಸರಿ ಅವರ ಮಟ್ಟಿಗಿನ ಸಂತೋಷ ಸಿಗುತ್ತಲೇ ಇರಲಿ..  ಎಲ್ಲಾ ಅಮ್ಮಂದಿರಿಗೂ "ಅಮ್ಮಂದಿರ ದಿನದ ಶುಭಾಶಯಗಳು.. "  

Happy Mother's Day !