ಶನಿವಾರ, ಅಕ್ಟೋಬರ್ 28, 2017

ಮಕ್ಕಳ ಕಾರ್ಯಕ್ರಮ

ಮಗಳ ಶಾಲೆಯಲ್ಲಿ ಇವತ್ತು 'ಸ್ಪೋರ್ಟ್ಸ್ ಡೇ'. ಹೆಚ್ಚಿನ ಮಕ್ಕಳಿರುವ ಶಾಲೆಯಾದ್ದರಿಂದ ಇಂದು ಕೇವಲ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೋಸ್ಕರ ಮಾತ್ರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಒಂದೇ ಮಾದರಿಯ ಯುನಿಫಾರ್ಮ್ಪು ಧರಿಸಿ ಕಂಗೊಳಿಸುತ್ತಿದ್ದ ಪುಟ್ಟ ಪುಟ್ಟ ಮುದ್ದು ಮುದ್ದು ಮಕ್ಕಳು, ಅವರುಗಳನ್ನೆಲ್ಲ ಶಿಸ್ತಿನಲ್ಲಿ ನಿಲ್ಲಿಸಲು ಶ್ರಮಿಸಿ ಕಡೆಗೂ ಯಶಸ್ವಿಗೊಂಡಿದ್ದ ಟೀಚೆರ್ರುಗಳು, ತಮ್ಮ ತಮ್ಮ ಮಕ್ಕಳ ಕವಾಯಿತು-ಆಟ-ಸ್ಪರ್ಧೆ ಎಲ್ಲವನ್ನೂ ನೋಡಿ ಸಂಭ್ರಮಿಸಲು ಕಣ್ಣು, ಕಣ್ಣಿಗಿಂತ ಹೆಚ್ಚಾಗಿ ಫೋಟೋಗೋಸ್ಕರ ಮೊಬೈಲ್ ಮತ್ತು ಕ್ಯಾಮೆರಾ ಎಲ್ಲವನ್ನೂ ರೆಡೀ ಹಿಡಿದು ನಿಂತ ನಮ್ಮಂತಹ ಪಾಲಕರು, ಮುಖ್ಯ ಅತಿಥಿಗಳಿಗೋಸ್ಕರ ಸಿಂಗಾರಗೊಂಡಿದ್ದ ವೇದಿಕೆ ಎಂಬಲ್ಲಿಗೆ ಸಕಲ ಸಿದ್ಧತೆಗಳೂ ಆಗಿದ್ದವು. ಸ್ಪೋರ್ಟ್ಸ್ ಡೇ ಕಾರ್ಯಕ್ರಮದ ಪ್ರಾರಂಭವಾಯಿತು. ಬಣ್ಣ ಬಣ್ಣದ ಟೇಪನ್ನು ಹಿಡಿದುಕೊಂಡ ನಮ್ಮ ನಮ್ಮ ಮಕ್ಕಳು ನೀಡಿದ ವಿನೋದಾವಳಿ ನಾವು ಪಾಲಕರೆಲ್ಲ ಬೀಗುವಂತೆ ಮಾಡಿತು. ಅಷ್ಟು ಚಿಕ್ಕ ಚಿಕ್ಕ ಮಕ್ಕಳ ಹಿಡಿದು, ಅವರಿಗೆ ಬಗೆ ಬಗೆಯ ತರಬೇತಿ ನೀಡಿ, ಕವಾಯಿತು ಮಾಡಿಸುವಲ್ಲಿನ ಶಿಕ್ಷಕರ ಪ್ರಯತ್ನ ಖಂಡಿತವಾಗಿಯೂ ಮೆಚ್ಚುವಂತದ್ದೇ. ನಂತರದಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಏರ್ಪಡಿಸಿದ್ದ ಒಂದಷ್ಟು ಆಟೋಟ ಸ್ಪರ್ಧೆಗಳು ನೆರೆದಿದ್ದ ಸಭಿಕರನ್ನೆಲ್ಲ ಅತೀವವಾಗಿ ರಂಜಿಸಿತು. ಖುಷಿ, ಉತ್ಸಾಹ, ಮಕ್ಕಳನ್ನು ಪ್ರೋತ್ಸಾಹಿಸಲು ಸಭಿಕರ ಚಪ್ಪಾಳೆ, ಮುಖ್ಯವಾಗಿ ಮಕ್ಕಳ ಕಾರ್ಯಕ್ರಮದೆಡೆಗೆ ಎಲ್ಲರ ಗಮನ ಆ ಕಾರ್ಯಕ್ರಮವನ್ನು ಒಂದೆಡೆ ಕೇಂದೀಕೃತಗೊಳಿಸಿತ್ತು.  

ಒಂದೆಡೆ ಶಾಲಾ ಆಟದ ಬಯಲಿನ ಮಧ್ಯದಲ್ಲಿ ಎಲ್ಲ ಸ್ಪರ್ಧೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಉಳಿದ ಮಕ್ಕಳನ್ನು ಬಯಲಿನಲ್ಲಿ ಆಟದ ವೀಕ್ಷಣೆಗಾಗಿ ಕೂರಿಸಲಾಗಿತ್ತು. ಅದೊಂದು ಮರಳು ಮಣ್ಣು ಮಿಶ್ರಿತ ಆಟದ ಬಯಲು. ಮಕ್ಕಳಿಗೆ ಮಣ್ಣಿನ ಸ್ಪರ್ಶತೆಯಾದ ಮೇಲೆ ಕೇಳಬೇಕೆ? ಹೆಚ್ಚಿನ ಮಕ್ಕಳು ಮಣ್ಣಲ್ಲಿ ಆಡಲು ಶುರು ಮಾಡಿದ್ದರು. ಅವರಿಗೆ ಬಟ್ಟೆ ಗಲೀಜಾಗುತ್ತದೆ, ಕೈ ಕೊಳಕಾಗುತ್ತದೆ ಎಂಬೆಲ್ಲ ಪರಿಕಲ್ಪನೆ ಇರುತ್ತದೆಯೇ? "ಡೋಂಟ್ ಟಚ್ ದಿ ಮಡ್, ಯು ವಿಲ್ ನಾಟ್ ಗೆಟ್ ದಿ ಗಿಫ್ಟ್ ಅದರವೈಸ್" ಎನ್ನೋ ಟೀಚರ್ರಿನ ಬೆದರಿಕೆ ಕೂಡ ಯಾವ ಮಕ್ಕಳಿಗೂ ತಾಗುತ್ತಿರುವಂತೆ ಕಾಣಲಿಲ್ಲ..ಮಕ್ಕಳು ಮಕ್ಕಳಾಗಿದ್ದರು ಅಲ್ಲಿ..ಕಾರ್ಯಕ್ರಮದ ಪಟ್ಟಿಯ ಪ್ರಕಾರ ಮಕ್ಕಳಿಗೆ ಬಹುಮಾನ ವಿತರಣೆಗೂ ಮುಂಚಿತವಾಗಿ ಮುಖ್ಯ ಅತಿಥಿಗಳ ಭಾಷಣಇದೊಂದು ಎಲ್ಲಾ ಕಾರ್ಯಕ್ರಮದಲ್ಲೂ ಇದ್ದದ್ದೇ. ಸುಧೀರ್ಘ ೨೫ ನಿಮಿಷಗಳ ಕಾಲ ಮುಖ್ಯ ಅತಿಥಿಗಳ ನಾಲ್ಕು ಮಾತುಗಳು ಮುಂದುವರೆಯಿತು. ೪ ರಿಂದ ೫ ವರ್ಷದ ಪ್ರಾಯದ ಮಕ್ಕಳ ಉದ್ದೇಶಿಸಿ ನಡೆಸಿದ ಕಾರ್ಯಕ್ರಮವದು. ಮಣ್ಣು-ಮರಳು-ಆಟ ಇಷ್ಟು ಕಣ್ಣೆದುರಿರುವ ಕಂದಮ್ಮಗಳವು. ೫೦ ನಿಮಿಷಗಳಿಗಿಂತಲೂ ಹೆಚ್ಚಿನ ಸಮಯ ಕೂತಲ್ಲೇ ಏನನ್ನೂ ಮಾಡದೇ ಕೂತಿರಿ ಎಂದು ಮಕ್ಕಳಿಗೆ ಆಜ್ಞೆ ಹೊರಡಿಸುತ್ತಿರುವ ದೊಡ್ಡವರು. ಪಾಪ ಆ ಮಕ್ಕಳ ಪಾಡೇನು? ಕೆಲವು  ಪಾಲಕರು  ತಮ್ಮ ಮಕ್ಕಳಿಗೆ ಎಚ್ಚರಿಸಿ, ಮಣ್ಣಾಡುವುದರಿಂದ ತಪ್ಪಿಸಿದರೂ, ಆ ಮಕ್ಕಳ ಮುಖದಲ್ಲಿ ಅತೃಪ್ತಿ ಎದ್ದುಕಾಣುತ್ತಿತ್ತು. ಕೂತಲ್ಲೇ ಆಟ, ಕಿತ್ತಾಟ, ಕಿರುಚಾಟ ಎಲ್ಲವನ್ನೂ ನಡೆಸಿದ್ದವು ಆ ಪಿಳ್ಳೆಗಳು. ಸಮಯ ಕಳೆದಂತೆ ಬಿಸಿಲೇರುತ್ತಿತ್ತು. ಮಕ್ಕಳನ್ನು ನೆರಳಿರುವ ಜಾಗಕ್ಕೆ ಸರಿಸಿ ಕೂರಿಸಲು, ಮಕ್ಕಳು ಗಲಾಟೆ ಮಾಡದಂತೆ ನೋಡಿಕೊಳ್ಳುವುದು ಇದೇ ಕಾರ್ಯದಲ್ಲಿ ಶಿಕ್ಷಕ ವೃಂದ ಹೆಣಗಾಡುತ್ತಿತ್ತು. ಅಲ್ಲಿಯವರೆಗೂ ಕಾರ್ಯಕ್ರಮವನ್ನು ವೀಕ್ಷಿಸಿದ್ದ ಪೋಷಕರೂ ಕೂಡ ಭಾಷಣ ಸಮಯದಲ್ಲಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತ, ಮೊಬೈಲ್ನಲ್ಲಿ ತೂರಿಕೊಳ್ಳುತ್ತಾ, ತಮ್ಮ ಮಕ್ಕಳ ಕಡೆಗೆ ಕಣ್ಣನ್ನು ನೆಟ್ಟು ಕುಳಿತಿದ್ದರು. ಆಸಕ್ತಿಯಿಂದ ಭಾಷಣ ಆಲೈಸಿದವರ ಸಂಖ್ಯೆ ಬೆರಳಣಿಕೆಯಷ್ಟು. ಭಾಷಣಾಕಾರರ ಭಾಷಣ ಹಾಗೂ ಮುಂದುವರೆದೇ  ಇತ್ತುಭಾಷಣಕಾರರ ಮಾತನ್ನು ಅರ್ಥಮಾಡಿಕೊಳ್ಳುವಷ್ಟು ಜ್ಞಾನ ಈ ಮಕ್ಕಳದ್ದಲ್ಲ, ಏಕಾಗ್ರತೆಯ ವಯಸ್ಸೂ ಕೂಡ ಅಲ್ಲ, ಕುಳಿತು ಕೇಳುವಷ್ಟು ವ್ಯವಧಾನ ಈ ಮಕ್ಕಳ ತಂದೆ-ತಾಯರಿಗಿಲ್ಲ ಎಂದಾಗಿತ್ತು ಅಲ್ಲಿಯ ಪರಿಸ್ಥಿತಿ. ಇದಿಷ್ಟರ ನಂತರಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ, ಮಕ್ಕಳಿಗೆ ಉಡುಗೊರೆ, ಸ್ವೀಟ್ಸ್ ಹಂಚಿಕೆ ಎಲ್ಲವೂ ಸಾಂಘವಾಗಿ ನಡೆದು, ಅದೊಂದು ಯಶಸ್ವೀ ಕಾರ್ಯಕ್ರಮವಾಗಿ ಮುಕ್ತಾಯಗೊಂಡಿದ್ದೂ ಹೌದು. 





 ಆದರೆ ಈ ಭಾಷಣ ಮಾಡುವವರೆಲ್ಲಾ ತಮ್ಮ ಶ್ರೋತೃಗಳು ಯಾರು, ಯಾವ ಮನಸ್ಕರರು ಎಂಬ ಕನಿಷ್ಠ ಜ್ಞಾನವನ್ನಾದರೂ ಹೊಂದಿದವರಾಗಿರಬೇಕು ಎಂದು ಇವತ್ತು ನನಗನ್ನಿಸಿದ್ದು ನಿಜ. ಖಂಡಿತವಾಗಿಯೂ ನಾನು ಯಾವುದೇ ಒಂದು ನಿರ್ದಿಷ್ಟ ಶಿಕ್ಷಣ ಸಂಸ್ಥೆ ಅಥವಾ ವ್ಯಕ್ತಿಯೊಬ್ಬರ ಕುರಿತಾಗಿ ಈ ಮಾತನ್ನು ಹೇಳುತ್ತಿರುವುದಲ್ಲ. ನಮ್ಮಲ್ಲಿ ಎಲ್ಲೆಡೆ ಈ ರೀತಿಯದೊಂದು ಪರಿಸ್ಥಿತಿ ಇದ್ದೇ ಇದೆ. ನಾವೂ ಕೂಡ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ತಲೆ ಕೆಳಗೆ ಹಾಕಿ ಗುಸು ಗುಸು ಗುಟ್ಟಿದವರೇ,  ಭಾಷಣ ಮುಗಿಯುವವರೆಗೆ ಆ ಮಕ್ಕಳನ್ನು ಸುಮ್ಮನಿರಿಸಲು ಒದ್ದಾಡಬೇಕಾದ ಶಾಲಾ ಸಿಬ್ಬಂದಿಗಳ ಕಷ್ಟ ಪರಿಸ್ಥಿತಿ, ಗಲಾಟೆ ಮಾಡಿ ಶಾಲೆಯ ಮರ್ಯಾದೆ ತೆಗಿತೀರಿ ಎಂದು ಮರುದಿನ ಶಾಲೆಯಲ್ಲಿ ಬೈಸಿಕೊಳ್ಳುವ ಪಾಡು ಇವೆಲ್ಲ ನಾವು ಸಣ್ಣವರಿದ್ದಾಗ ಅನುಭವಿಸಿದ್ದೇ...ಇದೇ ಕಾರಣಕ್ಕೋ ಏನೋ ಅಪ್ಪಾಜಿ ಶಿಕ್ಷಣಾಧಿಕಾರಿಯಾಗಿದ್ದ ಸಮಯದಲ್ಲಿ, ಶಾಲಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಮಂತ್ರಿತನಾದರೆ ಕೆಲವು ಚಿಕ್ಕ ಮಕ್ಕಳ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ 'ಚಿಕ್ಕಮಕ್ಕಳನ್ನು ಕೂರಿಸಿಕೊಂಡು ಭಾಷಣ ಮಾಡಬಾರದು' ಎಂದು ನೇರವಾಗಿ ತಿಳಿಸಿ ನಯವಾಗಿ ನಿರಾಕರಿಸುತ್ತಿದ್ದರು ಅಥವಾ ಹೇಳಿಕೆಗೆ ಎಣಿಸಿ ನಾಲ್ಕೇ
ನಾಲ್ಕು ಮಾತಿಗೆ ತಮ್ಮ ಭಾಷಣ ಮುಗಿಸಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಂದುವರೆಸಲು ತಿಳಿಸಿಬಿಡುತ್ತಿದ್ದರು. ಆದ್ದರಿಂದಲೇ ನನ್ನನಿಸಿಕೆಯ ಪ್ರಕಾರ ಚಿಕ್ಕ ಮಕ್ಕಳ ಕಾರ್ಯಕ್ರಮವನ್ನು ಮಕ್ಕಳಿಗೆ ಹಿತಕರವಾಗಿಯೂ, ಅನುಕೂಲಕರವಾಗಿಯೂ, ಹೆಚ್ಚಿನ ಸಮಯದ ವ್ಯಯವಿಲ್ಲದಂತೆ ನಡೆಸುವ ನಿಟ್ಟಿನಲ್ಲಿ ಯೋಚಿಸಿ ಕಾರ್ಯಕ್ರಮದ ಏರ್ಪಾಡು ಮಾಡಿಕೊಳ್ಳಬೇಕು. ಮಕ್ಕಳ ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡುವ ಸಂದರ್ಭವಿದ್ದರೆ ಅದನ್ನು ಆದಷ್ಟು ಮಕ್ಕಳಿಗ್ಯಾರ್ಥವಾಗುವ ವಿಷಯಕ್ಕೆ ಹೊಂದಿಸಿ, ಅವರ ಪ್ರತಿಕ್ರಿಯೆ ಬರುವಂತಹ ಮಾತುಗಳನ್ನಾಡಿ ಮಕ್ಕಳನ್ನು ಪ್ರೋತ್ಸಾಹಿಸುವಂತಿರಬೇಕು. ಏನಂತೀರಿ??  




ಶನಿವಾರ, ಅಕ್ಟೋಬರ್ 7, 2017

ಕುಂದಾದ್ರಿ ಬೆಟ್ಟ ಹತ್ತಿದ್ರೇನ್ರೀ??

ಸಮುದ್ರ ಮಟ್ಟಕ್ಕಿಂತ ೨೭೧೦ ಫೀಟ್ ಎತ್ತರದ ಬೆಟ್ಟವೊಂದರ ತುದಿಯಲ್ಲಿ ನೀವು ನಿಂತಿದ್ದೀರಿ. ನಿಮ್ಮೆದುರು 270 ಡಿಗ್ರಿ ಕೋನದಷ್ಟು ವಿಸ್ತಾರವಾಗಿ ಕಾಣಸಿಗುತ್ತಿರುವ ಪ್ರಕೃತಿಯ ವಿಹಂಗಮ ನೋಟ. ಕಣ್ಣು ಹಾಯಿಸಿದಷ್ಟೂ ಕಾಣುತ್ತಿರುವುದು ಹಾಸು ಹೊಕ್ಕಾಗಿರುವ ಹಸಿರು. ಕೆಳಗೆ ನೋಡಿದರೆ ಈ ಭುವಿಯೇ ಸ್ವರ್ಗ  ಎಂದೆನಿಸುವಂತೆ ಅಲ್ಲಲ್ಲಿ ಮಳೆ ಬಿದ್ದು ತುಂಬಿಕೊಂಡ ಕಂದು-ಕೇಸರಿ ಬಣ್ಣದ ನೀರಿನ ಕೋಡಿಗಳು, ಹರಿಯುತ್ತಿರುವ ನೀಲ ನದಿ, ತನ್ನದೇ ಆದ ರೀತಿಯಲ್ಲಿ ರಂಗವಲ್ಲಿ ಹಾಕಿಕೊಂಡ ಗಿಳಿಹಸಿರು ಗದ್ದೆಗಳ ಸಾಲು, ವರ್ಣಮಯ ಊರು-ಕೇರಿ ಹೀಗೆ ಮುಗಿಯದ ನೋಟ...ಹಾಂ! ಈ ನೋಟ ಅರೆಗಳಿಗೆ ಮಾತ್ರ; ಮತ್ತೊಂದು ಕ್ಷಣಕ್ಕೆ, ಬೆಳ್ಳನೆಯ ಹತ್ತಿಯಂತಹ ಮೇಘಗಳ ಹಿಂಡಿಂಡು ಸಾಲುಗಳು ನಮ್ಮನ್ನೂ ಕೂಡ ಆವರಿಸಿ, ಮುಸುಕು ಮುಚ್ಚಿಬಿಡುವ ಇಬ್ಬನಿಯ ಸುಂದರ ದೃಶ್ಯದ ಅನಾವರಣ. ಮಂಜಿನ ತಂಪಿನಿಂದುಂಟಾದ ಚಳಿಯ ಜೊತೆಗೆ, ಆ ಕ್ಷಣಕ್ಕೆ ಅಲ್ಲಿ ನಿಂತು ಕಾಣುತ್ತಿರುವ ಸಹ್ಯಾದ್ರಿಯ ಮಡಿಲ ನೋಡಿ ನವಿರೇಳುತ್ತಾ ಹೋಗುತ್ತದೆ ನಮ್ಮ ಮೈ ಮನ. ಇನ್ನು ಅಲ್ಲಿಂದ ನಿಂತು ನೋಡಲು ಕಾಣಸಿಗುವ ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯದ ವರ್ಣನೆಗೆ ಶಬ್ಧಗಳು ಸಿಗುವುದೇ ಕಷ್ಟ - ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವ ಆ ಚೆಲುವನ್ನು 'ಬಂಗಾರವೇ' ಸರಿ, ಎಂದು ಸುಮ್ಮನೆ ಕಣ್ತುಂಬ ಹೀರಿಕೊಂಡು ಮೌನಕ್ಕೆ ಶರಣಾಗುವುದೇ ಒಳಿತು. ಇಷ್ಟೇ ಅಲ್ಲದೇ , ಅದೊಂದು ಪವಿತ್ರವಾದ ಪುಟ್ಟ ಜೈನ ಬಸದಿ ಇರುವ ಪುಣ್ಯ ಸ್ಥಳವೂ ಹೌದು. ಇಂತದ್ದೊಂದು ಮನಸ್ಸಿಗೆ ಚೈತನ್ಯವನ್ನೀಯುವ ಸ್ಥಳವೇ, ಕುಂದಾದ್ರಿ ಬೆಟ್ಟ.









 ಏಕ ಶಿಲಾ ಬೆಟ್ಟ - ಕುಂದಾದ್ರಿ 

"ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ ಹಸುರ್ಗಟ್ಟಿತೊ ಕವಿಯಾತ್ಮಮ್ ಹಸುರ್ನೆತ್ತರ್ ಒಡಲಿನಲಿ... " ಕವಿಯೊಬ್ಬನ ನರನಾಡಿಗಳಲ್ಲಿ ಹರಿವ ರಕ್ತದ ಬಣ್ಣವೂ ಹಸಿರು ಎಂದು ತಮ್ಮ ಕವಿತೆಯ ಸಾಲುಗಳಲ್ಲಿ ವರ್ಣಿಸಿದ ರಾಷ್ಟ್ರಕವಿ ಕುವೆಂಪು ರವರ ಊರು ಕುಪ್ಪಳ್ಳಿಯ ಸಮೀಪದಲ್ಲೇ ಇರುವ  ಈ ಕುಂದಾದ್ರಿ ಬೆಟ್ಟ, ಒಂದು ಏಕ ಶಿಲೆಯಲ್ಲಿ ರೂಪುಗೊಂಡು ಅದರ ಮೇಲೆ ಅಮೋಘ ಸಸ್ಯರಾಶಿಯ ಸಂಪನ್ನತೆಯನ್ನು ಹೊಂದಿದೆ.

ಸಹ್ಯಾದ್ರಿ ಶ್ರೇಣಿಯ ಅಪ್ಪಟ ಮಲೆನಾಡ ಊರುಗಳ ಬೆಲ್ಟಿನಲ್ಲಿ ತೀರ್ಥಹಳ್ಳಿಯೂ ಒಂದು ಪ್ರಮುಖವಾದ ಊರು. ಇಲ್ಲಿಂದ ಆಗುಂಬೆ ಕಡೆಗೆ ಹೋಗುವ ದಾರಿಯಲ್ಲಿ, ಸುಮಾರು ೩೨ ಕಿ.ಮೀ ದೂರದಲ್ಲಿದೆ ಈ ಕುಂದಾದ್ರಿ ಬೆಟ್ಟ.ಮಳೆಗಾಲದ ಸಮಯದಲ್ಲಂತೂ ಕುಂದಾದ್ರಿಗೆ ಪಯಣಿಸುವ ಹಾದಿಯೇ ಒಂದು ರೀತಿಯ ಹಬ್ಬ. ನೀರಿನಿಂದ ತೊಯ್ದ ಕಡುಗಪ್ಪು ಡಾಂಬರು ರಸ್ತೆ, ಮೈ ನಡುಗಿಸುವಷ್ಟು ತಂಪಾದ ಸ್ವಚ್ಛವಾದ ಗಾಳಿ, ದಟ್ಟ ಇಬ್ಬನಿಯ ನಡುವೆ ಹಾವಿನಂತೆ ಸರಸರನೆ ಮೂಡುವ ರಸ್ತೆ. ಹಾದಿಯ ಇಕ್ಕೆಲಗಳಲ್ಲೂ ಕಾಣಸಿಗುವ ಪುಟ್ಟ ಪುಟ್ಟ ಹಳ್ಳಿಗಳು, ಆಗಷ್ಟೇ ಬತ್ತದ ನೆಟ್ಟಿ ಮಾಡಿಸಿಕೊಂಡು ಮೈದುಂಬಿಕೊಂಡ ಗಿಳಿ ಹಸಿರು ಬಣ್ಣದ ಗದ್ದೆಗಳು, ತೋಟಗಳು, ಜೊತೆಯಲ್ಲೇ ಹರಿವ ಚಿಕ್ಕ ಚಿಕ್ಕ ನೀರಿನ ಕೋಡಿಗಳ ಜುಳು ಜುಳು ನಾದ, ಕಣ್ಣಿಗೆ ತಂಪನ್ನೀಯುವ ಸೊಂಪಾದ ಹಚ್ಚ ಹಸಿರು ಅರಣ್ಯ.

ದಶಕಗಳ ಹಿಂದಿನಿಂದಲೂ ಕಾಲುದಾರಿಯಷ್ಟೇ ಇದ್ದ ಈ ಬೃಹತ್ ಕುಂದಾದ್ರಿ ಬೆಟ್ಟಕ್ಕೆ ಸುಗಮ ಹಾದಿ ಸಿಕ್ಕಿದ್ದು ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಪವಿತ್ರವಾದ ಜೈನ ಬಸದಿಯ ಅಭಿವೃದ್ಧಿಗೆ ಮತ್ತು ಬೆಟ್ಟವನ್ನೇರಲು ಡಾಂಬರು ರಸ್ತೆಯ ಅನುಕೂಲತೆಗೆ ಸರ್ಕಾರದೊಂದಿಗೆ ಕೈಜೋಡಿಸಿ ಕೊಡುಗೆಯನ್ನೀಡಿದವರು ಮುಂಬೈ ಮೂಲದ ಲೋಕೋಪಕಾರಿ ಉದ್ಯಮಿಯೊಬ್ಬರು. ಕುಂದಾದ್ರಿಗೆ ಸಾರ್ವಜನಿಕ ವಾಹನದಲ್ಲಿ ಪಯಣಿಸುವುದಾದರೆ, ಸಾರಿಗೆ ಸೇವೆ ಕುಂದಾದ್ರಿಯ ಬುಡದಲ್ಲಿರುವ ಮಹಾದ್ವಾರದವರೆಗೆ ಮಾತ್ರ. ಖಾಸಗಿ ವಾಹನಗಳಲ್ಲಿ ಬೆಟ್ಟದ ಮೇಲ್ತುದಿಯವರೆಗೆ ಸಾಗಬಹುದು. ಈ ಕಠಿಣವಾದ ಬೆಟ್ಟವನ್ನು ಕಡಿದು ಮಾಡಿದ ಸುಮಾರು ೩ ಕಿ.ಮೀ ನಷ್ಟು ಉದ್ದದ ರಸ್ತೆ ಮಾತ್ರ ಅತ್ಯಂತ  ಕಿರಿದಾಗಿದ್ದು, ವಾಹನವನ್ನು ಚಲಾಯಿಸಲು ನುರಿತ ಚಾಲಕರೇ ಬೇಕು.  ಘಾಟಿ ಹಾದಿಯನ್ನು ಏರುವಾಗ ಕೇಳಿಸುವ ಹಕ್ಕಿಯ ಕಲರವ, ಮಳೆಗಾಲದ ವಟರು ಕಪ್ಪೆಗಳ, ಜೀರುಂಡೆಗಳ, ಮಳೆಜಿರಳೆಗಳ ಲಯಬದ್ಧವಾಗಿ ಕೇಳಿಸುವ ಚೀತ್ಕಾರಗಳು ನಗರದ ಯಾಂತ್ರಿಕ ಬದುಕಿನ ಜಂಜಾಟದಿಂದ ಬೇಸತ್ತವರಿಗೆ, ಚಾರಣದ ಮಜವನ್ನನುಭವಿಸುವವರಿಗೆ, ಪ್ರಕೃತಿಯ ಬೆನ್ನಿಡಿದು ಛಾಯಾಗ್ರಹಣ ಮಾಡುವವರಿಗೆ ಸಿಗುವ ಒಂದು ಚೇತೋಹಾರಿ ಅನುಭವ.

ಕುಂದಾದ್ರಿ - ಸ್ಥಳದ ವಿಶೇಷತೆ

ಜೈನರ ಪವಿತ್ರ ಸ್ಥಳವಾದ ಈ ಕುಂದಾದ್ರಿ ಬೆಟ್ಟದಲ್ಲಿ ೧೭ ಶತಮಾನದಲ್ಲಿ ನಿರ್ಮಿತವಾದ ಪಾರ್ಶ್ವನಾಥ ಚೈತ್ಯಾಲಯವಿದೆ. ಕುಂದ ಕುಂದ ಜೈನಸನ್ಯಾಸಿಯೋರ್ವರು ತಪಸ್ಸು ಮಾಡಲಾಯ್ದುಕೊಂಡ ಸ್ಥಳ ಇದಾಗಿದ್ದರಿಂದ, ಅವರದೇ ಹೆಸರಿನಿಂದ ಈ ಬೆಟ್ಟ ನಾಮಾಕಿಂತವಾಗಿದೆ. ಇಲ್ಲಿ ನಿರ್ಮಿತವಾದ ಜೈನ ದೇವಾಲಯವು ಪುಟ್ಟದಾಗಿದ್ದರೂ, ಆಕರ್ಷಣೀಯವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ವರ್ಷಪೂರ್ತಿ ಆಗಮಿಸುವುದರಿಂದ, ಬೆಟ್ಟದ ತುತ್ತತುದಿಯಲ್ಲಿರುವ ಈ ವೀಕ್ಷಣಾ ಸ್ಥಳವನ್ನು ಕಬ್ಬಿಣದ ಬೇಲಿಗಳಿಂದ ಸುತ್ತುವರೆಸಿ ಸುರಕ್ಷತೆಯ ಮುತುವರ್ಜಿ ವಹಿಸಲಾಗಿದೆ. ಜೈನ ಮಂದಿರದ ಆವರಣದಲ್ಲಿ ಎರಡು ಸಣ್ಣ ಕೊಳಗಳಿದ್ದರೂ, ಆಹಾರ ಪೂರೈಕೆಗೆ ಇಲ್ಲಿ ಯಾವ ಸೌಲಭ್ಯವೂ ಇಲ್ಲದಿರುವುದು, ಈ ಸ್ಥಳವಿನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಲಿನಗೊಂಡಿಲ್ಲದಿರುವುದಕ್ಕೆ ಕಾರಣ.

ಕುಂದಾದ್ರಿ ಬೆಟ್ಟದಿಂದ ಕಣ್ಣು ಹಾಯಿಸಿದಲ್ಲಿಯವರೆಗೆ, ಸಹ್ಯಾದ್ರಿ ಬೆಟ್ಟಗಳ ಕಡುಹಸಿರು ಸಾಲು, ತೋಟ ಹೊಲ ಗದ್ದೆಗಳು, ಸುಂದರವಾಗಿ ಕಾಣುವ ವಾರಾಹಿ ಆಣೆಕಟ್ಟು, ತೀರ್ಥಹಳ್ಳಿಯ ಸುತ್ತಮುತ್ತಲಿನ ಪ್ರದೇಶದ ವೈವಿಧ್ಯಮಯ ವರ್ಣಗಳು, ನೀರಿನ ಒಡಲು, ರಂಗೇರುವ ಸೂರ್ಯಾಸ್ತ, ಮನಸೂರೆಗೊಳ್ಳುವ ಸೂರ್ಯೋದಯ, ಇಬ್ಬನಿ, ಮೋಡ, ಮುಂಗಾರಿನ ಮಳೆ ಹೀಗೆ ಈ ಕುಂದಾದ್ರಿ ಬೆಟ್ಟ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ, ತನ್ನಷ್ಟಕ್ಕೆ ತಾನೇ ಒಂದು ಅದ್ಭುತವಾಗಿ ಮಲೆನಾಡಿನ ಮಡಿಲಲ್ಲಿ ವಿರಾಜಿಸುತ್ತದೆ.

ಇಂತಹ ಒಂದು ಪ್ರಕೃತಿಯನ್ನು ಮೈಮನಸ್ಸಿನಾಳಕ್ಕೆ ತುಂಬಿಕೊಳ್ಳಬೇಕೆಂದರೆ, ಕುಂದಾದ್ರಿಗೆ ಭೇಟಿ ನೀಡಬಹುದಾದ ಸೂಕ್ತ ಸಮಯವೆಂದರೆ ಮಳೆಗಾಲ ಅಥವಾ ಮಳೆಗಾಲ ಮುಗಿಯುವ ಕಾಲ. ಅತ್ಯಂತ ಶೀತಗಾಳಿ ಬೀಸುವುದರಿಂದ ಮಕ್ಕಳಿಗೆ ಬೆಚ್ಚಗಿರಿಸಲು ಹೆಚ್ಚಿನ ಧಿರಿಸು ತೆಗೆದುಕೊಂಡು ಹೋಗಲು ಮರೆಯಬೇಡಿ.



ಮಂಗಳವಾರ, ಅಕ್ಟೋಬರ್ 3, 2017

ಬತುಕಮ್ಮ ಹಬ್ಬ

ಬಿರು ಬಿಸಿಲಿನ ಊರು ಹೈದರಾಬಾದ್ ನ ನಂಟು ನನಗೆ ಪ್ರಾರಂಭವಾದ್ದು ೫ ವರ್ಷಗಳ ಹಿಂದೆ. ಅಕ್ಕ ನ ಕುಟುಂಬ ಹೈದರಾಬಾದಿನಲ್ಲಿ ವಾಸಿಸಲಾರಂಭಿಸಿದಾಗಿನಿಂದ, ವರ್ಷಕ್ಕೊಂದು ಸರ್ತಿಯಾದರೂ ರಜೆಗೆಂದು ಅಲ್ಲಿಗೆ ತೆರಳುವುದು ಸಾಮಾನ್ಯವಾಗಿದೆ ನನಗೆ. ಪ್ರತಿ ಸಲವೂ ಮಕ್ಕಳನ್ನು ಕಟ್ಟಿಕೊಂಡು ಸಿಕ್ಕ ಸಿಕ್ಕ ಸಂದರ್ಭ, ಸಿಕ್ಕ ಸಿಕ್ಕ ಸಮಯವನ್ನು ಹೈದರಾಬಾದ್ ಓಡಾಡಲು ಬಳಸಿಕೊಳ್ಳುತ್ತಿದ್ದೆವು. ಅಂತೆಯೇ ಈ ಸರ್ತಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಲ್ಲಿಗೆ ಪ್ರಯಾಣ ಬಳಸಿದೆನಾದ್ದರಿಂದ, ಅಲ್ಲಿನ ಅತ್ಯಂತ ಸಡಗರದ ಮತ್ತು ಸ್ಥಳೀಯ ಹಬ್ಬವೊಂದರ ಪರಿಚಯ ನನಗಾಯಿತು. ಅದುವೇ, ಬತುಕಮ್ಮ ಹಬ್ಬ.



ಬತುಕಮ್ಮ ಹಬ್ಬ ತೆಲಂಗಣಿಗರ ಒಂದು ವಿಶಿಷ್ಟವಾದ ಮತ್ತು ಅನನ್ಯವಾದ ನವರಾತ್ರಿ ಹಬ್ಬ. ಹಬ್ಬ ಎನ್ನುವುದಕ್ಕಿಂತಲೂ ಇದೊಂದು ಅಲ್ಲಿನ ಸಂಸ್ಕೃತಿಯ ಸ್ವರೂಪವಾಗಿದೆ. ತೆಲುಗು ಭಾಷೆಯ ಪ್ರಕಾರ, ಬತುಕು ಎಂದರೆ ಜೀವ ಮತ್ತು ಅಮ್ಮ ಎಂದರೆ ತಾಯಿ. ಜನನಿ ಎಂದು ಕರೆಯಲ್ಪಡುವ ಶಕ್ತಿ ದೇವತೆ ಮಹಾ ಗೌರಿಯನ್ನು ನಿಸರ್ಗ ದೇವತೆಯ ರೂಪದಲ್ಲಿ ಪೂಜಿಸಲ್ಪಡುವ ಆಚರಣೆ. ಮಹಾಲಯ ಅಮಾವಾಸ್ಯೆ ದಿನದಿಂದ ಪ್ರಾರಂಭವಾಗುವ ಈ ಹಬ್ಬಕ್ಕೆ, ಗೋಪುರದ ಮಾದರಿಯಲ್ಲಿ, ಬಿದಿರಿನ ಕಟ್ಟನ್ನು ನಿರ್ಮಿಸಿಕೊಂಡು ಅದರ ಸುತ್ತಲೂ ಏಳು ಹಂತಗಳಲ್ಲಿ, ಋತುಮಾನಕ್ಕೆ ತಕ್ಕಂತೆ ದೊರೆಯುವ, ಚೆಂಡು ಹೂವು, ಕನ್ನೇ  ಹೂವು, ಆವರಿಕೆ ಗಿಡದ ಹೂಗಳು ಮತ್ತಿತರ ವಿಶೇಷ ವರ್ಣರಂಜಿತ ಹೂಗಳಿಂದ ಸಿಂಗರಿಸುತ್ತಾರೆ. ಅದರಲ್ಲೂ ಹೆಚ್ಚಿನ ಭಾಗದಲ್ಲಿ ಔಷಧೀಯ ಮಹತ್ವವಿರುವಂತಹ ಹೂಗಳನ್ನು ಅತ್ಯಂತ ಒಪ್ಪವಾಗಿ ಜೋಡಿಸುತ್ತಾರೆ. ಮೇಲ್ತುದಿಯಲ್ಲಿ ಅರಿಶಿಣ ಕೊಂಬಿನಿಂದ ನಾದಿದ ಮಿಶ್ರಣವನ್ನು ಲೇಪಿಸಿ ಗೌರಮ್ಮನ ಸ್ವರೂಪವನ್ನು ನಿರ್ಮಿಸುತ್ತಾರೆ. ಹೆಂಗಳೆಯರು ಈ ಗೋಪುರವನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುವ ದೃಶ್ಯವೇ ಒಂದು ತರಹದ ಸುಗ್ಗಿ. ಜರಿತಾರಿ ಲಂಗ ದಾವಣಿ, ಬಣ್ಣ ಬಣ್ಣದ ರೇಷ್ಮೆ ಸೀರೆಗಳನ್ನುಟ್ಟು, ಆಭರಣಗಳನ್ನು ತೊಟ್ಟು, ತಲೆಗೆ ವರ್ಣಮಯ ಹೂವನ್ನು ಮುಡಿದು ಅಲಂಕಾರಗೊಂಡ ಹೆಣ್ಣುಮಕ್ಕಳು ಮತ್ತು ಹೆಂಗಸರು, ತಮಗೆ ಹತ್ತಿರದಲ್ಲಿನ ಸ್ಥಳೀಯ ಬತುಕಮ್ಮ ಹಬ್ಬದ ಆಚರಣೆಯ ಸ್ಥಳಕ್ಕೆ ಈ ಹೂಬುಟ್ಟಿಯ  ಹೊತ್ತುಕೊಂಡು ಹೋಗುತ್ತಾರೆ. ರಂಗವಲ್ಲಿ ಹಾಕಿ ಸಿದ್ಧಗೊಳಿಸಿಕೊಂಡ ಹಬ್ಬ ನಡೆಸುವ ಜಾಗದಲ್ಲಿ ಒಂದೆಡೆ ಸ್ಥಾಪಿಸುತ್ತಾರೆ. ನಂತರದಲ್ಲಿ, ಎಲ್ಲರೂ ವರ್ತುಲದ ಮಾದರಿಯಲ್ಲಿ ಸುತ್ತುವರೆಯುತ್ತಾರೆ. ಲಯಬದ್ಧವಾಗಿ ಹಾಡುವ ಬತುಕಮ್ಮನ ಕುರಿತಾದ ಹಲವು ಸಾಂಪ್ರದಾಯಿಕ ಹಾಡು ಮತ್ತು ಅದಕ್ಕನುಗುಣವಾಗಿ ಸರಳವಾಗಿ ಚಪ್ಪಾಳೆಯೊಂದಿಗೆ ಒಂದೇ ಹದದಲ್ಲಿ ಹೆಜ್ಜೆ ಹಾಕಿ ಮಾಡುವ ನೃತ್ಯ  ಅಲ್ಲಿನ ಕಲೆ-ಸಂಸ್ಕೃತಿಯ ಜೀವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಉಯ್ಯಾಲು (ಉಯ್ಯಾಲೆ), ಚಂದಮಾಮ (ಚಂದ್ರ) ಮತ್ತು ಗೌರಮ್ಮ ಇವುಗಳು ಪ್ರಮುಖವಾದ ಸಾಂಪ್ರದಾಯಿಕ ಹಾಡುಗಳು. ತಾಯಿ ಗೌರಿಯ ಆಶೀರ್ವಾದವನ್ನು ತಮ್ಮ ಹಾಡು ಮತ್ತು ನೃತ್ಯದ ಮೂಲಕ ಯಾಚಿಸುತ್ತಾರೆ. ಹೀಗೆ ೯ ದಿನಗಳ ವರೆಗೆ  ಪ್ರತಿದಿನವೂ ಬತುಕಮ್ಮನ ಪೂಜೆ, ಹಾಡು-ನೃತ್ಯ, ವಿವಿಧ ಬಗೆಯ ನೈವೇದ್ಯ ಸಿಹಿ ತಿನಿಸು ತಯಾರಿಕೆ ಎಲ್ಲವೂ ಉಲ್ಲಾಸದಿಂದ ಸಾಗುತ್ತದೆ.








ಬತುಕಮ್ಮ ಹಬ್ಬದ ಆಚರಣೆಗೂ ಒಂದು ಹಿನ್ನಲೆಯಿದೆ. ಪುರಾಣ ಕಥೆಯಲ್ಲಿ, ದಕ್ಷ ಮಹಾರಾಜ ಯಜ್ಞ ಮಾಡುವ ಸಂದರ್ಭದಲ್ಲಿ, ಮಗಳು ಗೌರಿಯು ತನ್ನ  ಇಚ್ಛೆಯ ವಿರುದ್ಧವಾಗಿ ಈಶ್ವರನ ಮದುವೆಯಾದ ಕೋಪದಿಂದ, ಈಶ್ವರನನ್ನು ಯಜ್ಞಕ್ಕೂ ಆಹ್ವಾನಿಸದೇ, ಅವನ ಕುರಿತು ಆಡಿದ ಅವಹೇಳನಾ ಮಾತುಗಳಿಂದ ಅವಮಾನಿತಳಾದಗೌರಿಯು, ಯಾಗದ ಬೆಂಕಿಗೆ ಹಾರುತ್ತಾಳೆ. ಹೀಗೆ ಉರಿವ ಬೆಂಕಿಯಲ್ಲಿಗೌರಿಯು ಒಂಭತ್ತು ದಿನಗಳವರೆಗೆ ಇದ್ದಳು ಎಂಬ ಪೌರಾಣಿಕ  ನಂಬಿಕೆಗೆ ಪೂರಕವಾಗಿ, ತಾಯೇ ಗೌರಮ್ಮ, ಮತ್ತೆ ಬದುಕಿ ಬಾ, ನಮಗೆಲ್ಲ ಸದ್ಗತಿಯನ್ನು ನೀಡಲು ಬಾ ಎಂಬ ಬೇಡಿಕೆಯನ್ನಿಡುತ್ತಾರೆ. ಇನ್ನೊಂದು ಕಥೆಯ ಹಿನ್ನಲೆಯಲ್ಲಿ ಪರ್ವತಗಳ ರಾಜ ಹಿಮವಂತಹ ಮಗಳು  ಪಾರ್ವತಿಯನ್ನು ಪ್ರತಿಬಿಂಬಿಸುವ ಸಲುವಾಗಿ ಹೂವಿನಿಂದ ಅಲಂಕರಿಸಿದ ಹೂಗುಡ್ಡೆಗಳನ್ನು ಮಾಡಿ ಅರಿಶಿನದ ಪಾರ್ವತಿಯ ಸ್ವರೂಪವನ್ನು ನೀಡಲಾಗುತ್ತದೆ. ೯ ದಿನಗಳವರೆಗೆ ಬತುಕಮ್ಮ ಸ್ಥಾಪಿಸಿದ ಸ್ಥಳದ ಸುತ್ತಲೂ ನಿತ್ಯ ಪೂಜೆ, ಹಾಡು ನೃತ್ಯದ ಸೇವೆ ನಡೆಯುತ್ತದೆ.  ಕೊನೆಯ ದಿನ, ತಾಯಿ ಗೌರಮ್ಮನನ್ನು ನೀರಿನಲ್ಲಿ ಕಳುಹಿಸುವುದು ಎಂಬ ಪದ್ಧತಿಯಂತೆ, ಬತುಕಮ್ಮನನ್ನು ನೀರಿನಲ್ಲಿ ಮುಳುಗಿಸುತ್ತಾರೆ.



ಬತುಕಮ್ಮ ಹಬ್ಬ ಕೇವಲ ಒಂದು ಕೋಮಿಗೆ ಸಂಬಂಧಿಸಿದ್ದಲ್ಲ. ಇದೊಂದು ಆಂಧ್ರ ಪ್ರದೇಶದ ಕಡೆಗಿನ ಒಂದು ವರ್ಣಮಯ ಪುಷ್ಪಾಲಂಕೃತ ನಾಡ  ಹಬ್ಬ. ಸಾಮಾನ್ಯವಾಗಿ ಈ ಹಬ್ಬದ ಸಮಯದಲ್ಲಿ ಊರಿಗೆ ಊರೇ ಅಲಂಕಾರಗೊಳ್ಳುತ್ತದೆ. ಎಲ್ಲಿ ನೋಡಿದರೂ ಸಣ್ಣ-ದೊಡ್ಡ  ಬತುಕಮ್ಮನ ಹೂವಿನ ದಿಬ್ಬವೇ ಎಲ್ಲೆಡೆ ರಾರಾಜಿಸುತ್ತಿರುತ್ತದೆ. ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ನಗರ ಪ್ರದೇಶದ ರಸ್ತೆಯ ಮುಖ್ಯ ಸ್ಥಳಗಳಲ್ಲಿ, ಕಡೆಗೆ ಸಿನಿಮಾ ಸ್ಥಳ- ಮಾಲುಗಳಲ್ಲಿಯೂ ಬತುಕಮ್ಮನದೇ ಭರಾಟೆ! ಅಂಗಡಿಗಳಲ್ಲಿ ಬತುಕಮ್ಮ ಹಬ್ಬದ ಪ್ರತೀಕವಾಗಿ ಹೂವಿನಿಂದ ಅಥವಾ ಬಣ್ಣದ ಪೇಪರ್ರುಗಳಿಂದ ಅಲಂಕೃತಗೊಂಡ ಗೋಪುರಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಸಾಮಾನ್ಯವಾಗಿ ಶಾಲೆ-ಕಾಲೇಜುಗಳಲ್ಲಿಯೂ ಬತುಕಮ್ಮನ ಗೋಪುರವನ್ನು ನಿರ್ಮಿಸಿ, ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಹಚ್ಚಿ, ಕಾಲುಗಳಿಗೆ ಅರಿಶಿಣ ಲೇಪಿಸಿ, ಮಕ್ಕಳನ್ನೇ ದೇವರ ರೀತಿಯಲ್ಲಿ ಪೂಜಿಸುತ್ತಾರೆ. ಕೆಲವು ಶಾಲೆಗಳಲ್ಲಿ  ಹೂಗಳಿಂದ ರಂಗೋಲಿ ಮಾಡುವುದು, ಅಲಂಕಾರಿಕ ಕರ ಕೌಶಲ್ಯ ವಸ್ತುಗಳನ್ನು ತಯಾರಿಕೆ ಕಲಿಕೆ ಇತ್ಯಾದಿ ಕಲಿಕೆ ನಡೆಸುತ್ತಾರೆ. ಇದರಿಂದ ಮಕ್ಕಳಿಗೆ ವಿವಿಧ ಬಗೆಯ ಹೂವು, ಸಸ್ಯ ಜಾತಿಯ ಕುರಿತಾಗಿ ಜ್ಞಾನ ಹೆಚ್ಚುತ್ತದೆ. ಕೆಲವು ಶಾಲೆಗಳಲ್ಲಿ ಮಕ್ಕಳೊಡಗೂಡಿ ಬತುಕಮ್ಮ ಜಾನಪದ ನೃತ್ಯ ಕಾರ್ಯಕ್ರಮ ನಡೆಸುತ್ತಾರೆ. ಈ ವರ್ಷ ಒಂದು ಶಾಲೆಯಲ್ಲಿ ಮಕ್ಕಳನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ವಿವಿಧ ಬಗೆಯ ಔಷಧೀಯ ಮೂಲದ ಸಸ್ಯ ಜಾತಿಯ ಪರಿಚಯ ನೀಡಿ, ಕಾಡನಿಂದ ಹೂಗಳ ಹೆಕ್ಕಿ ತರುವ ಕಾರ್ಯಕ್ರಮ ನಡೆಸಿದರಂತೆ.

ಮಳೆಗಾಲದ ಕೊನೆಯಲ್ಲಿ ಬರುವ ಈ ಹಬ್ಬದ ಅಂತಿಮವಾಗಿ, ದುರ್ಗಾಷ್ಟಮಿ ದಿನದಂದು ವೈಭವದಿಂದ ಬತುಕಮ್ಮನನ್ನು ಪೂಜಿಸಿ, ನೀರಿಗೆ ತೇಲಿ ಬಿಡುತ್ತಾರೆ. ಔಷಧೀಯ ಗುಣಗಳುಳ್ಳ ಹೂವಿನ ಪಕಳೆಗಳು ಮತ್ತು ಅರಿಶಿಣ ನೀರಿನಲ್ಲಿ ಕರಗಿ ಹರಿವ ನೀರಿನ್ನು ಇನ್ನಷ್ಟು ಸ್ವಚ್ಛವಾಗಿಸುತ್ತದೆ ಎಂಬುದು ಕೂಡ ಒಂದು ವೈಜ್ಞಾನಿಕ ವಿಶ್ಲೇಷಣೆ.  ಒಟ್ಟಿನಲ್ಲಿ ಆಂಧ್ರದಲ್ಲಿ, ಬತುಕಮ್ಮ ಹಬ್ಬದ ಪದ್ದತಿ ಮತ್ತು ಆಚರಣೆಯು ಅಲ್ಲಿನ ಜನರನ್ನು ಪಾರಂಪರ್ಯವಾಗಿ  ನೀರು ನೆಲ ಮತ್ತು ಜನರೊಡನೆ ಸಂಬಂಧವನ್ನು ಬೆಸೆಯುವ ನಿಟ್ಟಿನಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

(ವಿ.ಸೂ : ಚಿತ್ರಗಳು ಇಂಟರ್ನೆಟ್ ಆಧಾರಿತ)