ಬುಧವಾರ, ಡಿಸೆಂಬರ್ 30, 2020

ಶಿಶಿಮಾ

ಟಿಕ್ ಟಾಕ್ ಟೋ  ಯಾರು ಕೇಳಿಲ್ಲ? ಸಾಮಾನ್ಯವಾಗಿ ಎಲ್ಲರಿಗೂ ಈ ಆಟದ ಪರಿಚಯ ಇದ್ದೇ ಇರುತ್ತದೆ. ಎಲ್ಲೋ ಪೇಪರ್ರು ಪೆನ್ನು ಕಂಡರೆ ಸಾಕು, ಅಲ್ಲೇ ಮೂರು ಅಡ್ಡ ಉದ್ದ ಗೆರೆ ಹಾಕಿ ಒಂಭತ್ತು ಮನೆ ಮಾಡಿ, ಬಾ ಆಡು.." ಎಂದು ಪಕ್ಕದವರನ್ನು ಕರೆದು ಆಡಿಬಿಡುವಷ್ಟುಸರ್ವೇ ಸಾಮಾನ್ಯ ಆದರೂ ತಂತ್ರ ಹೂಡಿ ಆಡುವ ಆಟವದು. ಬೋರ್ಡ್ ಗೇಮ್ಸ್ ಗಳ ಹುಚ್ಚಿರುವ ಮಗಳಿಗೆ ಎಲ್ಲೆಲ್ಲಿ ಏನೇನು ಹೊಸ ಆಟಗಳ ಬಗೆ ಸಿಗುತ್ತದೋ ಅವೆಲ್ಲ ತೋರಿಸುವ, ಕಲಿಸುವ ಹುಚ್ಚು ನನಗೂ ಇದೆ. ಹೀಗೆಯೇ ಸಿಕ್ಕ ಮತ್ತೊಂದು ಬೋರ್ಡ್ ಗೇಂ - 'ಶಿಶಿಮಾ'

ಕೀನ್ಯಾ ಮೂಲದಿಂದ ಬಂದಿರುವ ಶಿಶಿಮಾ ಆಟ ಹೆಚ್ಚು ಕಮ್ಮಿ ಟಿಕ್ ಟ್ಯಾಕ್ ಟೋ ಆಟವೇ ಆದರೆ ಅಷ್ಟಭುಜಾಕೃತಿಯಲ್ಲಿ ರೂಪಿಸಲಾಗಿದೆ. ಕೀನ್ಯಾದ ಸ್ಥಳೀಯ ಭಾಷೆಯೊಂದರ ಪ್ರಕಾರ ಶಿಶಿಮಾ ಪದದ ಅರ್ಥ ನೀರಿನ ಹಳ್ಳ. ಈ ಆಟವನ್ನು ಆಡಲು ಬಳಸುವ ಕಾಯಿಗಳನ್ನು ಇಂಬಲವಲಿ ಎಂದು ಕರೆಯುತ್ತಾರೆ. ಅದು ನೀರ ಮೇಲೆ ಚುರುಕಾಗಿ ಓಡಾಡುವ ಕೀಟಗಳು ಎಂಬ ಅರ್ಥ.  

ಒಂದು ವರ್ತುಲವನ್ನು ನಾಲ್ಕು ರೇಖೆಗಳು ಮಧ್ಯ ಬಿಂದುವಿನಿಂದ ಹಾದು ಹೋಗಿ ಎಂಟು ಸ್ಥಾನಗಳನ್ನು ಹೊಂದಿರುವಂತಹ ಅಷ್ಟಭುಜಾಕೃತಿಯ ಪಟವಿದು. ಎರಡು ಜನರು ಆಡಬಹುದಾದಂತಹ ಈ ಆಟದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೂರು ಕಾಯಿಗಳು ಇರುತ್ತವೆ. ಮೊದಲಿಗೆ ಆಟಗಾರರು ಒಂದು ಸಲಕ್ಕೆ ಒಂದು ಕಾಯಿಯಂತೆ ಮೂರು ಬಿಂದುಗಳ ಮೇಲೆ ಇಡಬೇಕು. ನಂತರಕ್ಕೆ ಎದುರಾಳಿಯ ಆಟದ ತಂತ್ರಕ್ಕೆ ತಕ್ಕಂತೆ ಇಟ್ಟ ಕಾಯಿಯನ್ನು ಸ್ಥಳಾಂತರಿಸುತ್ತ ಹೋಗಬೇಕು. ಯಾವ ಆಟಗಾರನ ಮೂರೂ ಕಾಯಿಗಳು ಒಂದೇ ಸಮಾನ ರೇಖೆಯ ಮೇಲೆ ಬರುತ್ತದೆಯೋ ಅವರು ಗೆದ್ದಂತೆ. ಬುದ್ಧಿ ಓದಿಸಿ ತಂತ್ರ ಹೂಡಿ ಆಡಬಹುದಾದ ಈ ಆಟವನ್ನು ೬ ವರ್ಷ ಮೇಲ್ಪಟ್ಟ ಮಕ್ಕಳು ಅರ್ಥ ಮಾಡಿಕೊಂಡು ಆಡಬಹುದು. ಸೋಲು-ಗೆಲವು ಪ್ರಶ್ನೆ ಕಿಂತ, ಯಾವ್ಯಾವ ರೀತಿಯ ತಂತ್ರ ಹೂಡಬಹುದು, ಎದುರಾಳಿಯ ಮುಂದಿನ ಆಟ ಏನಾಗಬಹುದು ಎಂಬಿತ್ಯಾದಿ ಆಲೋಚನೆ ಮಾಡಬಹುದಾದ ಈ ಆಟ ಬೊಡ್ದಾಗಿರುವ ಮೆದುಳನ್ನು ತಕ್ಕ ಮಟ್ಟಿಗೆ ಚುರುಕು ಗೊಳಿಸುವಂತಹ ಮಜಾ ಆಟ.    

ಮಕ್ಕಳೊಂದಿಗೆ ಹೊಸ ಆಟ ಆಡಲು ಉತ್ಸುಕತೆ ತೋರಿಸುವವರು ಈ ಚಿತ್ರವನ್ನು ಕೈಯಲ್ಲೇ ಬರೆದುಕೊಂಡು ಆಡಬಹುದು. ಸಾಧ್ಯವಾದಷ್ಟು ಪ್ಲಾಸ್ಟಿಕ್ ರಹಿತ ಆಟಿಕೆಯನ್ನು ಕೊಂಡು  ಪ್ರೋತ್ಸಾಹಿಸುವವರು ಈ ರೀತಿಯ ದೇಸಿ ಆಟಗಳ ಬೋರ್ಡ್ ಸಂಗ್ರಹವಿಟ್ಟು ಕೊಳ್ಳಬಹುದು. ಹೀಗೊಂದು ಹೊಸ ಆಟದ ಪರಿಚಯದೊಂದಿಗೆ, ಆಟ ಎಂಬುದು ಮಕ್ಕಳದಷ್ಟೇ ಚಟುವಟಿಕೆ ಅಲ್ಲ, ಎಲ್ಲರಿಗೂ ಅವಶ್ಯಕ ಎಂಬುದು ಈ ಪೋಸ್ಟ್ ನ ಒಟ್ಟಾರೆ ಸಾರಾಂಶ :) :) 

ಭಾನುವಾರ, ನವೆಂಬರ್ 1, 2020

ನಮ್ಮ ಭಾಷೆ ಕನ್ನಡ - ಅಕ್ಷರಕ್ಕೊಂದು ಗಾದೆ ಮಾತು

ನಮ್ಮ ಭಾಷೆ ನಮ್ಮ ಹೆಮ್ಮೆ..

ಈ ಕನ್ನಡ ರಾಜ್ಯೋತ್ಸವದ ವಿಶೇಷ ದಿನವನ್ನು ನನ್ನಿಷ್ಟದ ಕಲೆಯ ಮೂಲಕ ಸಂಭ್ರಮಿಸೋಣ ಎಂಬ ಇಚ್ಛೆಯಿಂದ ಕಳೆದ ೫೯ ದಿನಗಳಿಂದ ದಿನಕ್ಕೊಂದರಂತೆ ಕನ್ನಡದ ಅಕ್ಷರಗಳನ್ನು ಚಿತ್ರಿಸಿ ಹಂಚಿಕೊಳ್ಳುತ್ತಿದ್ದಲಿದ್ದೆ.ಕನ್ನಡ ಮಾತನಾಡುವ ಜೊತೆಜೊತೆಯಲ್ಲೇ, ಗಾದೆಮಾತುಗಳ ಬಳಕೆ ನಮ್ಮ ನುಡಿಯನ್ನು ಪುಷ್ಟಿಗೊಳಿಸುತ್ತದೆ. ಹಾಗಾಗಿ ನಾನು ಬರೆಯುವ ಅಕ್ಷರಕ್ಕೆ ನಿಮಗೆ ತಿಳಿದ ಗಾದೆಮಾತುಗಳನ್ನು ಹಂಚಿಕೊಳ್ಳಿ ಎಂದು ಸ್ನೇಹಿತರಲ್ಲಿಯೂ ವಿನಂತಿಸಿದ್ದೆ. ಕಲ್ಪನೆಗೂ ಮೀರಿ ಬಂದ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಮತ್ತಷ್ಟು ಚಿತ್ರಗಳನ್ನು ರಚಿಸಲು ಹುರುಪು ನೀಡಿತ್ತು. ನಾನು ರಚಿಸಿದ ಕನ್ನಡ ಅಂಕಾಕ್ಷರಗಳು ಮತ್ತು ಅವುಗಳಿಗೆ ಪೂರಕವಾದ ಗಾದೆಮಾತುಗಳು ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರ ಬೆಂಬಲ ಮತ್ತು ಭಾಗವಹಿಸುವಿಕೆಗೆ ನಾನು ಕೃತಜ್ಞಳು. ಮತ್ತೊಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ, ಶುಭಾಶಯಗಳು 

#ಸಿರಿಗನ್ನಡಂಗೆಲ್ಗೆ #ಕರ್ನಾಟಕರಾಜ್ಯೋತ್ಸವ 


ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.

ಅಲ್ಪನ್ಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ

ಅತಿಯಾಸೆ ಗತಿಗೇಡು

ಅತಿಯಾದರೆ ಅಮೃತವೂ ವಿಷ.

ಅಡ್ಡ ಗೋಡೆ ಮೇಲೆ ದೀಪ ಇತ್ತಂತೆ

ಅಂಚು ಮೆಟ್ಟಿ ಅಡಿ ಮೆಟ್ಟಿ ನಡುಮನೆಗೆ ಕಾಲಿಟ್ಟ ಹಾಗೆ

ಅಜ್ಜಿಗೆ ಅರಿವೆ ಚಿಂತೆ. ಮೊಮ್ಮಗಳಿಗೆ ಮಿಠಾಯಿ ಚಿಂತೆ.

ಅಲ್ಪರ ಸಂಘ ಅಭಿಮಾನ ಭಂಗ

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ

ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬಿದ್ದಂತೆ.

ಅತ್ತ ದರಿ. ಇತ್ತ ಪುಲಿ.

ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ.

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ

ಅಕ್ಕ ಸತ್ತರೆ ಅಮಾವಾಸ್ಯೆ ನಿಂತಿತೇ??

ಅಳಿವುದೇ ಕಾಯ ಉಳಿವುದೇ ಕೀರ್ತಿ

ಅರ್ಧ ಕಲಿತವನ ಅಬ್ಬರ ಹೆಚ್ಚು

ಅತ್ತೆ ಮನೇಲಿ ಹೇಗಿದ್ಯಾ ಮಗಳೇ ಅಂದ್ರೆ ಚಿಲುಕಕ್ಕೆ ಮೊಳಕೈ ತಗುಲಿದ ಹಾಗೆ ಅಂದಳಂತೆ

ಆಪತ್ತಿಗಾದವನೇ ನೆಂಟ.

ಆಕಳು ಕಪ್ಪಾದರೆ ಹಾಲು ಕಪ್ಪೇ

ಆನೆ ಹೋದಲ್ಲೇ ದಾರಿ ಶೆಟ್ಟಿ ಬಿಟ್ಟಲ್ಲೇ ಪಟ್ಟಣ,

ಆರು ಕಾಸು ಕೊಟ್ರೆ ಅತ್ತೆ ಕಡೆ, ಮೂರು ಕಾಸು ಕೊಟ್ರೆ ಮಾವನ ಕಡೆ

ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ

ಆಯ ನೋಡಿ, ಪಾಯ ಹಾಕು

ಆಟಕ್ಕುಂಟು,ಲೆಕ್ಕಕ್ಕೆ ಇಲ್ಲ

ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ

ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ

ಆತುರಗಾರನಿಗೆ ಬುದ್ದಿ ಮಟ್ಟ

ಆಸೆಯೇ ದುಃಖಕ್ಕೆ ಮೂಲ

ಆಡು ಮುಟ್ಟದ ಸೊಪ್ಪಿಲ್ಲ.

ಆಡು ತಿಂದು ಮೇಕೆ ಬಾಯಿಗೆ ವರಸಿತ್ತಂತೆ.

ಆಳು ಮಾಡಿದ್ದು ಹಾಳು

ಆಡ್ತಾ (ಆಡುತ್ತಾ) ಆಡ್ತಾ ಭಾಷೆ .ಹಾಡ್ತಾ ಹಾಡ್ತಾ ರಾಗ.

ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳೇ ಜಾಸ್ತಿ

ಆಳಾಗಿ ದುಡಿ ಅರಸಾಗಿ ಉಣ್ಣು

ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೋಡಿದ್ರಂತೆ

ಆಗುವ ವರೆಗೆ ಇದ್ದು, ಆರುವ ವರೆಗೆ ಇರಲಾರರೆ

ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ

ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ

ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ

ಆನೆಯಂಥದೂ ಮುಗ್ಗರಿಸುತ್ತದೆ

ಇದ್ದೋರ್ ಮೂರು ಜನರಲ್ಲಿ ಕದ್ದೋರ್ ಯಾರು?

ಇಬ್ಬರ ಜಗಳ ಮೂರನೆಯವನಿಗೆ ಲಾಭ

ಇತಿತ್ತ ಬಾ ಅಂದ್ರೆ , ಇದ್ದ ಮನೇನೂ ಕಿತ್ತುಕೊಂಡ

ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು

ಇಮ್ಮನದಿಂದ ಸುಮ್ಮನೆ ಕೆಟ್ಟೆ

ಇದ್ದಿದ್ದು ಇದ್ದ ಹಾಂಗೆ ಹೇಳಿರೆ ಎದ್ ಬಂದು ಎದೆಗ್ ಒದ್ರಂತೆ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು

ಇದ್ದಲ್ಲೇ ಇರಬೇಕು ಬಿದ್ದಲ್ಲೇ ಹೆಕ್ಕಬೇಕು

ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ

ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿಯಂತೆ

ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ

ಈರಣ್ಣ ನ ಮುಂದೆ ಬಸ್ಸಣ್ಣ ಕೂತಂತೆ

ಉ೦ಡೂ ಹೋದ, ಕೊ೦ಡೂ ಹೋದ

ಉಂಬಾಗ ಉಡುವಾಗ ಊರೆಲ್ಲ ನೆಂಟರು

ಉಪ್ಪಿಗಿಂತ ರುಚಿ ಇಲ್ಲ. ತಾಯಿಗಿಂತ ಬಂಧುವಿಲ್ಲ

ಉಪಾಯವಿದ್ದಲ್ಲಿ ಅಪಾಯವಿಲ್ಲ

ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ

ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ

ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ

ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ; ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು

ಉಪಕಾರಕ್ಕೋಗಿ ಉಪದ್ರ ಬಂತು

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು

ಉಡ ಹೊಕ್ಕ ಮನೆ ಹಾಳು

ಉಟ್ರೆ ತೊಟ್ರೆ ಪುಟ್ಟಕ್ಕ ಚಂದ.

ಉರಿಯೋ ಬೆಂಕಿಗೆ ತುಪ್ಪ ಹಾಕಿದಂತೆ.

ಉತ್ತರ ಕುಮಾರನ ಪೌರುಷ ಒಲೆ ಮುಂದೆ.

ಉರಿಯೋ ಮನೆ ಬೆಂಕಿ ಲಿ ಗಳ ಹಿರಿದರಂತೆ.

ಉಪಾಯ ಇದ್ರೆ ಅಪಾಯವನ್ನು ಎದುರಿಸಬಹುದು.

ಉದ್ದರಿ ಕೊಟ್ಟು ಶೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ

ಉದ್ದುದ್ದ ಮಾತಿನವರ ಮೊಳಕೈ ಮೊಂಡ

ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ?

ಊರಿಗೆ ಉಪಕಾರಿ ಮನೆಗೆ ಮಾರಿ

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ

ಊರು ಹೋಗು ಅನ್ನುತ್ತೆ, ಕಾಡು ಬಾ ಬಾ ಅನ್ನುತ್ತೆ

ಊರಿಗೆ ಬಂದವರು ನೀರಿಗೆ ಬಾರದೇ ಇರುತ್ತಾರೆಯೇ ?

ಊಟಕ್ಕೆ ಇಲ್ಲದಿದ್ ಉಪ್ಪಿನಕಾಯಿ ಇದ್ದರೇನು ಬಿಟ್ಟರೇನು

ಊಟಕ್ಕೆ ಮೊದಲು ಉಪ್ಪಿನಕಾಯಿ. ಮಾತಿಗೆ ಮೊದಲು ಗಾದೆ.

ಊರಿಗೆ ಅರಸನದರೂ ತಾಯಿಗೆ ಮಗ

ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು

ಊದದು ಕೊಟ್ಟು ಬಾರ್ಸದು ತಂದಹಂಗೆ

ಊರಿಗೆ ಒಂದು ದಾರಿಯಾದ್ರೆ ಪೋರಂಗೇ ಒಂದು ದಾರಿ

ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ

ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ

ಊಟ ತನ್ನಿಚ್ಚೆ, ನೋಟ ಪರರಿಚ್ಚೆ

ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ

ಊರಿಗೊಬ್ಬಳೇ ಪದ್ಮಾವತಿ

ಊರಿದ್ದಲ್ಲಿ ಒಂದು ಹೊಲಸು ಕೇರಿ

ಊಟಕ್ಕೆ ಬಾರೋ ದಾಸಯ್ಯ ಅಂದ್ರೆ, ನಿಮ್ನನೆನಲ್ಲಿ ಏನಡಿಗೆ ಅಂದಿದ್ನಂತೆ

ಊರಿಗೊಂದು ದಾರಿ ಆದ್ರೆ ಪೋರoಗೆ ಒಂದು ದಾರಿ

ಋಷೀ ಮೂಲ ನದಿ ಮೂಲ ಕೇಳಬಾರದು

ಎಲ್ಲಾ ಬಣ್ಣ ಮಸಿ ನುಂಗಿತು

ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅದರಂತೆ

ಎತ್ತು ಏರಿಗೆ ಎಳೆದ್ರೆ ಕೋಣ ನೀರಿಗೆ ಎಳೀತು.

ಎಲ್ಲಾರ ಮನೆ ದೋಸೇನೂ ತೂತೇ

ಎರಡೂ ಕೈ ಸೇರಿದ್ರೆ ಚಪ್ಪಾಳೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ

ಎಣ್ಣೆ ಬರುವಾಗ ಗಾಣ ಮುರಿದಂತೆ

ಎಲ್ರದ್ದೂ ಒಂದು ದಾರಿ ಆದ್ರೆ ಎಡವಟ್ಟನ್ಗೆ ಒಂದು ದಾರಿ ಅಂತೆ

ಏನೂ ಇಲ್ಲದವಗೆ ಭಯವಿಲ್ಲ

ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು

ಏರಿದವ ಇಳಿದಾನು

ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ

ಏತಿ ಅಂದರೆ ಪ್ರೇತಿ ಅಂದಂತೆ

ಏಳು ಸುತ್ತು ಓಲೆನ ಏಳೂರಿಂದ ತಂದ್ರಂತೆ

ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ

ಒಗ್ಗಟ್ಟಿನಲ್ಲಿ ಬಲವಿದೆ.

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು

ಒಲ್ಲದ ಕೆನ್ನೆಯ ಮುತ್ತು ಸಿಹಿಯಲ್ಲ

ಒಂದು ಕಣ್ಣಿಗೆ ಸುಣ್ಣ...ಒಂದು ಕಣ್ಣಿಗೆ ಬೆಣ್ಣೆ.

ಒಲ್ಲೆ ಒಲ್ಲೆ ಅಂದ ಅಳಿಯ ಕಡೆಗೆ ಒರಳು ನೆಕ್ಕಿದನಂತೆ

ಒಂಡಂಬಡಿಕೆಯಿಂದ ಆಗದ್ದು ದಡಂಬಡಿಕೆಯಿಂದ ಆದೀತೇ?

ಒನಕೆ ಮುಂಡು ಚಿಗುರಿದಂತೆ

ಒಂದಕ್ಕೆರಡು ದಂಡ,ಹೆಂಡಕ್ಕೆ ರಾಗಿ ದಂಡ

ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ

ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವನ ಎತ್ತುಕೊಂಡು ಹೋಗಿ

ಒಂದೊಂದು ಕಾಲಕ್ಕೆ ಒಂದೊಂದು ಪರಿ

ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು

ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.

ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ

ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ

ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.

ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?

ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು

ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.

ಓದಿ ಓದಿ ಮರುಳಾದ ಕೂಚುಭಟ್ಟ

ಓದು ಒಕ್ಕಲು, ಬುದ್ಧಿ ಮುಕ್ಕಾಲು

ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ

ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು

ಓಲೆ ಮಾಡ್ಸೋಕೆ ಸಾಲಮಾಡಿದ, ಸಾಲ ತೀರ್ಸೊಕೆ ಮನೆ ಮಾರಿದ

ಓತಿಕ್ಯಾತಕ್ಕೆ ಬೇಲಿ ಗೂಟವೇ ಸಾಕ್ಷಿ

ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.

ಓದೋದು ಕಾಶಿಕೆಂಡ, ತಿನ್ನೋದು ಮಸಿಕೆಂಡ.

ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದರ ಅರಿವು ಮೇದ ಕಬ್ಬಿನ ರಸ

ಓದುವಾಗ ಓದು; ಆಡುವಾಗ ಆಡು

ಔಷಧವಿಲ್ಲದ ಸಸ್ಯವಿಲ್ಲ

ಔತಣಕ್ಕೆ ಕರೆದಾಗ ಹೊಟ್ಟೆನೋವು ಅಂದ್ನಂತೆ

ಅಂತೂ ಇಂತೂ ಕುಂತೀ ಮಕ್ಳಿಗೆ ರಾಜ್ಯ ಇಲ್ಲ.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಕೆಲಸ ಇಲ್ಲದ ಬಡಗಿ ಮಗನ ಅಂಡು ಕೆತ್ತಿದನಂತೆ.

ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ

ಕಬ್ಬು ಡೊಂಕಾ ದರೆ ಸಿಹಿ ಡೊಂಕೇ??

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಕೂತು ತಿಂದರೆ ಕುಡಿಕೆ ಹೊನ್ನು ಸಾಲದು

ಕದ್ದ ರೊಟ್ಟಿಗೆ ಮ್ಯಾಲೆ ತುಪ್ಪ ಬೇರೆ ಕೇಡು

ಕಳ್ಳನ ಮನಸು ಹುಳ್ಳಗೆ.

ಕೈ ಕೆಸರಾದರೆ ಬಾಯಿ ಮೊಸರು.

ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.

ಕೀಟ ಸಣ್ಣದಾದರೂ ಕಾಟ ಬಹಳ.

ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.

ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.

ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.

ಕಾರ್ಯವಾಸಿಗೆ ಕತ್ತೆ ಕಾಲು ಕಟ್ಟು.

ಕುಂಬಾರಂಗೆ ವರುಷ, ದೊಣ್ಣೆಗೆ ನಿಮಿಷ

ಕಣ್ಣಿಗೂ ಮೂಗಿಗೂ ಮೂರು ಗಾವುದ.

ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ

ಕಳ್ಳನನ್ನ ನಂಬಿದರೂ ಕುಳ್ಳನನ್ನ ನಂಬಬಾರದು.

ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸಿತಂತೆ

ಕೋತಿ ಮೊಸರು ತಿಂದು ಆಡು ಬಾಯಿಗೆ ವರ್ಸ್ಥಂತೆ

ಕುಂಬಳಕಾಯಿ ಕಳ್ಳ ಅಂದ್ರ ಹೆಗಲು ಮುಟ್ಟಿ ನೋಡಿಕೊಂಡ

ಕುಣಿಲಾರದವಳು ನೆಲ ಡೊಂಕು ಅಂದಳಂತೆ

ಕಳ್ಳನಿಗೊಂದು ಪಿಳ್ಳೆ ನೆವ

ಕಳ್ಳತನಕ್ಕೋಗಿ ಕೆಮ್ಮಿದಂಗೆ

ಕಷ್ಟ ಪಟ್ಟರೆ ಫಲವುಂಟು

ಕಂತೆ ಗೆ ತಕ್ಕ ಬೊಂತೆ

ಕೆಟ್ಟು ಪಟ್ಟಣ ಸೇರು

ಕುರುಡನಿಗೆ ಒಂದು ಚೇಷ್ಟೆ ಆದ್ರೆ ಕುಂಟ ನಿಗೆ ನಾನಾ ಚೇಷ್ಟೆ

ಕೈಲಿಯಾಗದವ ಮೈ ಪರಚಕೊಂಡ

ಕತ್ತೆ ಗೆ ಏನು ಗೊತ್ತು ಕಸ್ತೂರಿ ಸುಗಂಧ

ಕಂಡಿದ್ದು ಹೇಳಿದ್ರೆ ಕೆಂಡದಂತ ಕೋಪ ..

ಕಾಮಾಲೆ ಕಣ್ಣಿಗೆ ಕಂಡದ್ದೆಲ್ಲ ಹಳದಿ

ಕೆಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತ್ತಂತೆ

ಖಡ್ಗಕ್ಕಿಂತ ಲೇಖನಿ ಹರಿತ

ಖಾರ ಅರೆಯುವವನ ಮಾತೂ ಖಾರ

ಖಂಡಿತ ವಾದಿ,ಲೋಕ ವಿರೋಧಿ

ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ

ಗಾಳಿ ಬಂದಾಗ ತೂರಿಕೊ

ಗಂಡಿಸಿಗೆ ಯಾಕೆ ಗೌರಿ ದುಃಖ

ಗಂಡ ಹಂಡತಿ ಜಗಳ ಉಂಡು ಮಲಗೋ ತನಕ

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡ ವಾಯಿತು

ಗಂಟೂ ಹೋಯ್ತು ನಂಟೂ ಹೋಯ್ತು.

ಗಂಡ ಸರಿಯಿದ್ರೆ ಗುಂಡೂ ಪಾವನ.

ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು

ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ

ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ

ಗಡ ಪಟ್ಟೆ ಸೀರೆ ತರುತ್ತಾನೆದು ಇದ್ದ ಬಟ್ಟೆ ಸುಟ್ಟಳಂತೆ.

ಗಡ್ಡಕ್ಕೆ ಬೇರೆ ಸೀಗೇಕಾಯಿ

ಗಳಕ್ಕನೇ ಉಂಡವ ರೋಗಿ , ಘಳಿಗೆ ಉಂಡವ ಭೋಗಿ

ಗಾಣವಾಡದೆ ಎಣ್ಣೆ ಬಂದೀತೇ?

ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?

ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?

ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು.

ಗಂಜಿ ಕುಡಿಯುವವನಿಗೇ ಮೀಸೆ ಹಿಡಿಯುವವರು ಇಬ್ಬರು

ಗಿಡುಗನ ಕೈಯಲ್ಲಿ ಗಿಣಿ ಕೊಟ್ಟ ಹಾಗೆ

ಗಂಡಂಗೆ ಬ್ಯಾಡದೆ ಇದ್ದ ಹೆಂಡತಿಗುಂಡಕಲ್ಲಿಗಿಂತ ಕಡೆ

ಗುಂಡ ಮದುವೆ ಆಗೋ ಅಂದ್ರೆ ನೀನೇ ನನ್ನ ಹೆಂಡತಿಯಾಗು ಅಂದನಂತೆ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

ಗಾಜಿನ ಮನೆಯಲ್ಲಿ ಇರುವವರು ಇತರರಿಗೆ ಕಲ್ಲು ಹೊಡೆದಂತೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾ ಆಗುತ್ತ

ಗುಣ ನೋಡಿ ಗೆಳೆತನ ಮಾಡು

ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.

ಘಳಿಗೆ ಮಾರಿದರೆ ಗದ್ಯಾಣ ಕಡಿಮೆ

ಘಟ್ಟ ಏರಿದವ ಅಟ್ಟ ಏರನೇ?

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ

ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ

ಚೇಳಿಗೆ ಪಾರುಪತ್ಯ ಕೊಟ್ಟರೆ , ಮನೆಯವರಿಗೆಲ್ಲಾ ಮುಟ್ಟಿಸಿತಂತೆ.

ಚರ್ಮ ಹೋದರೂ ಪರವಾಗಿಲ್ಲ,ಕಾಸು ಹೋಗಬಾರದು ಎಂದಂತೆ.

ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು

ಚಿತ್ತಾ ಮಳೆ ವಿಚಿತ್ರ ಬೆಳೆ!

ಚಿತ್ತಾರದ ಅಂದವನ್ನು ಮಸಿ ನುಂಗಿತು

ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?

ಚೆಲ್ಲಿದ ಹಾಲಿಗೆ ಅತ್ತುಪ್ರಯೋಜನವಿಲ್ಲ

ಚೌಲದಾಗ ದೌಲು ಮಾಡು

ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.

ಛತ್ರದಲ್ಲಿ ಊಟ ಮಠದಲ್ಲಿ ನಿದ್ರೆ

ಛತ್ರಿ ಸಿಡಿಲಿಗೆ ಅಡ್ಡವಾದೀತೇ?

ಛೀ ಅಂದರೆ ನನ್ನ ಭಲಾ ಅಂದರು ಅಂದಂತೆ

ಛಲವಿಲ್ಲದ ಹೆಂಡ್ತಿ ಕಟ್ಕೊಂಡ್ರೆ ಕಷ್ಟಬಿಟ್ರೆ ಅವಮಾನ.

ಜನ ಮಳ್ಳೊ ಜಾತ್ರೆ ಮಳ್ಳೊ

ಜಟ್ಟಿ ನೆಲಕ್ ಬಿದ್ದರೂ ಮೀಸೆ ಮಣ್ಣಾಜಿಲ್ಲೆ

ಜಾಣನಿಗೆ ಮಾತಿನ ಪೆಟ್ಟಾದರೆ..ದಡ್ಡನಿಗೆ ದೊಣ್ಣೆ ಯ ಪೆಟ್ಟು

ಜನಕ್ಕಂಜದಿದ್ದರೂ ಮನಕ್ಕಂಜಬೇಕು

ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು

ಜೀವ ಜೀವವ ತಿಂದು ಜೀವಿಸುತಿದೆ ಜಗವೆಲ್ಲ

ಜಾರುವುದು ತಪ್ಪಿದರೆ ಏರುವುದು ಸಾಧ್ಯ.

ಜೋಡಿದ್ದರೆ ನಾಡು ತಿರುಗಬಹುದು.

ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.

ಜ್ಯೋತಿಯ ನೆಲೆ ಅರಿತವನೇ ಯೋಗಿ

ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ

ಝಣಝಣ ಹಣವ ಕಂಡರೆ ಹೆಣವೂ ಬಾಯ್ಬಿಡುವುದಂತೆ!

ಟೊಳ್ಳು ಮಾತು ಸುಳ್ಳಿಗಿಂತ ಕಡೆ.

ಟೊಣಪೆ ಶಾಸ್ತ್ರಕ್ಕೆ ಹೆಣಗುವುದೇ ಅರ್ಥ

ಠಕ್ಕು ಇರುವವನಿಗೆ ಠಿಕಾಣಿ ಸಿಗದು

ಡಾವರ ಹತ್ತಿದಾಗ ದೇವರ ಧ್ಯಾನ

ತುಂಬಿದ ಕೊಡ ತುಳುಕುವುದಿಲ್ಲ

ತಾಳಿದವನು ಬಾಳಿಯಾನು.

ತಾ ಕಳ್ಳ..ಪರರ ನಂಬ..

ತಾಯಿಗಿಂತ ದೇವರಿಲ್ಲ ಉಪ್ಪಿಗಿಂತ ರುಚಿಯಿಲ್ಲ

ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ

ತಾಯಿ ಕಂಡರೆ ತಲೆ ಬೇನೆ

ತಾನು ಕೆಟ್ಟರೂ ತವರು ಕೆಡಬಾರದು.

ತಲೆ ಗಟ್ಟಿ ಇದ್ದು ಹೇಳಿ ಬಂಡೆಗೆ ಜಪ್ಪಿದ್ನಡ

ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ

ತನ್ನೂರಲಿ ರಂಗ, ಪರೂರಲಿ ಮಂಗ

ತಟ್ಟನೆ ಆಡಿದರೆ ಕೊಟ್ಟಷ್ಟು ಫಲ

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು

ತಾನು ಮಾಡಿದ್ದು ಉತ್ತಮ,ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು

ತಣ್ಣೀರಾದ್ರೂ..ತಣಿಸಿ ಕುಡಿ..

ತಾ ಕಳ್ಳ ಪರರ ನಂಬ..

ತಾಯಿಯಂತೆ ಮಗಳು ನೂಲಿನಂತೆ ಸೀರೆ

ತಂಬಿಗೆ ಬಿಟ್ಟು ಥಾಲಿ ತಂದರು ಗುಮ್ಮೋದು ಕೊಟ್ಟು ಒದೆಯೋದು ತಂದರು

ತೀರ್ಥ ತೆಗೆದುಕೊಂಡರೆ ಥಂಡಿ (ಶೀತ), ಪ್ರಸಾದ ತಿಂದರೆ ಅಜೀರ್ಣ, ಮಂಗಲಾರತಿ ತೆಗೆದುಕೊಂಡರೆ ಉಷ್ಣ.

ದಾನಕ್ಕೆ ಎತ್ತು ಕೊಟ್ರೆ ಹಲ್ಲು ಎಣಿಸಿ ನೋಡಿದ್ನಂತೆ.

ದುಡ್ಡಿದ್ದೊನೆ ದೊಡ್ಡಪ್ಪ.

ದೂರದ ಬೆಟ್ಟ ನುಣ್ಣಗೆ.

ದುಡದ್ದು ಉಣ್ತೀಯೋ.. ಪಡದ್ದು ಉಣ್ತೀಯೊ.

ದೇವರು ವರ ಕೊಟ್ಟರು ಪೂಜಾರಿ ವರ ಕೊಡೆಬೇಕಲ್ಲ

ದಾರಿಲಿ ಹೋಪ ಮಾರಿ ಮನೆಗ್ ಕರ್ದು ಕೂಡ್ರಸಿದ್ವಡ

ದುಡ್ಡೇ ದೊಡ್ಡಪ್ಪ ಬುದ್ಧಿ ಅದ್ರಪ್ಪ

ದಾಕ್ಷಿಣ್ಯಕ್ ಬಸುರಾದ್ರೆ ನೋವು ತಪ್ಪುತ್ತಾ?

ದೀಪದ ಕೆಳಗೆ ಯಾವತ್ತೂ ಕತ್ತಲೇ

ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ

ದನ ತಿನ್ನುವವನಿಗೆ ಗೊಬ್ಬರದ ಆಣೆ

ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ

ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು

ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?

ನೂಲಿನಂತೆ ಸೀರೆ ತಾಯಿಯಂತೆ ಮಗಳು

ನಮ್ಮೂರಲ್ಲಿ ರಂಗ, ಪರವೂರಲ್ಲಿ ಮಂಗ

ನಾರಿ ಮುನಿದರೆ ಮಾರಿ

ನವಿಲು ಕುಣಿತು ಹೇಳಿ ಕೆಂಬೂತ ಕುಣಿಯಲಾಗ್ತಾ?

ನೆಂಟ್ರ ಹೇಳಿಕೆಲಿ ಊಟ..ಮಕ್ಳ ಹೇಳಿಕೆಲಿ ನಿದ್ದೆ

ನೆತ್ತಿ ಮೇಲಿನ ಕತ್ತಿ ಇದ್ದಂಗೆ.

ನಾಳೆ ಎಂದವನ ಮನೆ ಹಾಳು

ನಡೆದಷ್ಟು ನೆಲ, ಪಡೆದಷ್ಟು ಫಲ

ನಿಧಾನವೇ ಪ್ರಧಾನ

ನಾಯಿ ಬೊಗಳಿದರೆ ದೇವಲೋಕ ಹಳಾದೀತೆ

ನಾಚಿಕೆ ಬಿಟ್ಟವ ಊರಿಗೆ ದೊಡ್ಡವ.

ನಾಯಿ ಬಾಲ ನಳಿಕೆಲಿ ಇಪ್ಪಷ್ಟೇ ಹೊತ್ತು

ನಾಯಿ ತಗಂಡೊಗಿ ಸಿಂಹಾಸನದ ಮೇಲೆ ಕುಂಡ್ರಸಿರೂಮೂಳೆ ಕಂಡ್ಕೂಳೆ ಹಾರಬುಡ್ತು

ನೊಣ ತಿಂದು ಜಾತಿ ಕೆಟ್ಟ

ನೀರು ಹತ್ರ ಇರಬೇಕು, ನೆಂಟರು ದೂರ ಇರಬೇಕು

ಪರ ಊರ್ ಸಂಪನ್ನಂಗಿಂತ ಊರ್ ಪಟಿಂಗ ಲೇಸು.

ಪ್ರತ್ಯಕ್ಷ ಕಂಡ್ರೂ ಪ್ರಮಾಣಿಸಿ ನೋಡು

ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು

ಪಾಂಡವರು ಪಗಡೆಯಾಡಿ ಕೆಟ್ಟರು, ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು

ಪಾಪಿ ಚಿರಾಯು

ಬಡವನ ಸಿಟ್ಟು ದವಡೆಗೆ ಮೂಲ

ಬೂದಿ ಮುಚ್ಚಿದ ಕೆಂಡವಿದ್ದಂತೆ

ಬೀದಿ ಕೂಸು ಬೆಳಿತು, ಕೋಣೆ ಕೂಸು ಕೊಳಿತು

ಬೇಲಿ ಎದ್ದು ಹೊಲ ಮೇಯ್ದಂಗೆ

ಬಾಲ ಸುಟ್ ಬೆಕ್ಕಿನಂಗೆ

ಬಡವ ನೀ ಮಡಗದಂಗಿರು

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ

ಬಾಯಿದ್ದಂವ ಬರಗಾಲದಲ್ಲೂ‌ ಬದಕ್ತ

ಬಾಯಿ ಬಿಟ್ರೆ ಬಣ್ಣ ಗೇಡು

ಬರಗಾಲದಲ್ಲಿ ಮಗ ಉಂಬ್ದು ಕಲಿತಿದ್ನಡ

ಬಳ್ಳಿಗೆ ಕಾಯಿ ಭಾರವೇ.

ಬೆರಳು ತೋರಿಸಿದರೆ ಹಸ್ತ ನುಂಗೋರ್ ಥರ.

ಬಿದ್ರೆ ಆಳಿಗೊಂದ್ ಕಲ್ಲು.

ಬೆಣ್ಣೆ ಲಿ ಕೂದಲು ತೆಗೆದ ಹಾಗೆ.

ಬೆಟ್ಟ ಅಗೆದು ಇಲಿ ಹಿಡಿದ ಹಾಗೆ

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಹಾಗೆ

ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು

ಬಂದದ್ದೆಲ್ಲಾ ಬರಲಿ ಗೋವಿಂದನೊಬ್ಬನ ದಯೆ ಇರಲಿ

ಬೆಳ್ಳಗಿರೋದೆಲ್ಲ ಹಾಲಲ್ಲ ಹೊಳೆಯೋದೆಲ್ಲ ಚಿನ್ನ ಅಲ್ಲ

ಬಕ್ಕಂಗೆ ಬಾರಿ ಮಗಂಗೆ ಮದುವೆ

ಬರಗಾಲದಲ್ಲಿ ಅಧಿಕಮಾಸ.

ಬಡವೆ ಸೀರೆ ಉಡದೆ ಮಾಸಿತು

ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು

ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು

ಭಾರವಾದ ಪಾಪಕ್ಕೆ ಘೋರವಾದ ನರಕ

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು

ಮಾತು ಆಡಿದರೆ ಹೋಯಿತು..ಮುತ್ತು ಒಡೆದರೆ ಹೋಯಿತು..

ಮಳ್ಳಿ ಮಳ್ಳಿ ಮಂಚಕ್ ಕೆಷ್ಟು ಕಾಲು ಅಂದ್ರೆ..ಮೂರು,ಮತ್ತೊಂದು ಅಂದ್ಲಂತೆ..

ಮಾತು ಬೆಳ್ಳಿ ಮೌನ ಬಂಗಾರ

ಮಾಡಿದುಣ್ಣೊ ಮಹರಾಯ

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.

ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ

ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ

ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು

ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದನಂತೆ

ಮನೆಗೆ ಮಾರಿ ಪರರಿಗೆ ಉಪಕಾರಿ

ಮಂತ್ರಕ್ಕೆ ಮಾವಿನಕಾಯಿ ಉದುರಿತೇ

ಮೂರು ಬಿಟ್ಟವ ಊರಿಗೆ ದೊಡ್ಡವ

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು.

ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ

ಮಾತು ಬಲ್ಲವನಿಗೆ ಜಗಳ ವಿಲ್ಲ

ಮಣ್ಣಿನ ಬೆಕ್ಕಾದ್ರೇನು.. ಯಲಿ (ಇಲಿ) ಹಿಡದ್ದೇ ಗೊತ್ತು

ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.

ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು

ಮನೆಯಲ್ಲಿದ್ದರೆ ಲಿಂಗಾಕಾರ, ಹಾದಿ ಹಿಡಿದರೆ ಚಕ್ರಾಕಾರ, ಇಲ್ಲಿಗೂ ಬಂದೆಯಾ ಜಡೆ ಶಂಕರ

ಮುಳ್ಳನ್ನು ಮುಳ್ಳಿನಿಂದಲೇ ತೆಗಿಬೇಕು

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ

ಯಾರಿಗೆ ಯಾರು ಉಂಟು ಯರವಿನ ಸಂಸಾರ

ಯಾವ ಹುತ್ತದಲ್ಲಿ ಯಾವ ಹಾವು

ಯಥಾ ರಾಜಾ ತಥಾ ಪ್ರಜಾ

ಯೋಗಿ ತಂದಿದ್ದು ಯೋಗಿಗೆ ಭೋಗಿ ತಂದಿದ್ದು ಭೋಗಿಗೆ

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣದಂತೆ

ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು

ರಾವಣನ ಹೊಟ್ಟೆಗೆ ಆರು ಕಾಸು ಮಜ್ಜಿಗೆ

ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲ್ಲಿಲ್ಲ

ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.

ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗು ಏನು ಸಂಬಂಧ ಅಂದ ಹಾಗೆ..

ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ

ರಾಜ ಇರೋತಂಕ ರಾಣಿಗೆ ವೈಭೋಗ.

ರಾಗಿ ಕಲ್ಲು ತಿರುಗೋವಾಗ ರಾಜ್ಯವೆಲ್ಲ ನೆಂಟರು.

ರಾಯ ಸತ್ತರೂ ಹೆಣ..ನಾಯಿ ಸತ್ತರೂ ಹೆಣ.

ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ

ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?

ರೊಕ್ಕ ಇದ್ರೆ ಗೋಕರ್ಣ, ಸೊಕ್ಕು ಇದ್ರೆ ಯಾಣ

ಲಾಲಕ್ಕೆ ಕುದ್ರೆ ಹುಡುಕಿದ ರಂತೆ

ಲಂಕೆಲಿ ಹುಟ್ಟದವೆಲ್ಲ ರಾವಣರೆಯ

ಲಾಲಿಸಿದರೆ ಮಕ್ಳು ಪೂಜಿಸಿದರೆ ದೇವ್ರು.

ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು

ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ

ವಿನಾಶ ಕಾಲೇ ವಿಪರೀತ ಬುದ್ಧಿ - ಇದು ಗಾದೆನ ಹೌದ ಗೊತ್ತಿಲ್ಲೆ.

ವ್ಯಕ್ತಿ ಗಿಂತ ವ್ಯಕ್ತಿತ್ವ ದೊಡ್ಡದು

ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ

ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

ವ್ರತ ಕೆಟ್ಟರೂ ಸುಖ ಇರಬೇಕು

ಶಂಖದಿಂದ ಬಂದ್ರೇನೇ ತೀರ್ಥ

ಶೆಟ್ಟಿ ಶೃಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು

ಶರಣು ಆದವನಿಗೆ ಮರಣವಿಲ್ಲ.

ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ

ಶಾನಭೋಗ್ರ ಮನೆ ಎಮ್ಮೆ ಕಂಡಿದ್ದೆ ಹೇಳಿದ್ದೆ, ತಗಬಂದು ಕೊಟ್ಗೆಲಿ ಕಟ್ಟಲಾಗಿತ್ತು ಅಂದ್ವಡ.

ಶಿವಪೂಜೇಲಿ ಕರಡಿಗೆ ಬಿಟ್ಟ ಹಾಗೆ

ಶೆಟ್ಟಿ ಬಿಟ್ಟಲ್ಲೆ ಪಟ್ಟಣ

ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ

ಶಕ್ತಿಗಿಂತ ಯುಕ್ತಿ ಮೇಲು

ಸುಳಿಲಾರದವಳು ಅಂಗಳ ಡೊಂಕು ಅಂದ್ಳಂತೆ.

ಸೇರಿಗೆ ಸವ್ವಾಸೇರು.

ಸತ್ತ ಎಮ್ಮೆಗೆ ಅಚ್ಚೇರು ಹಾಲು.

ಸಂಸಾರಿ ಸಹವಾಸ ಮಾಡಿ ಸನ್ಯಾಸಿ ಕೆಟ್ಟ

ಸಂಧಿಲಿ ಸಮಾರಾಧನೆ ಮಾಡ್ದಂಗೆ

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

ಸಕ್ಕರೆಗೆ ಇರುವೆ ಮುತ್ತಿದಂಗೆ.

ಸಂಬಳಕ್ಕಿಂತ ಗಿಂಬಳವೆ ಜಾಸ್ತಿ ಅಂದಂಗೆ.

ಸು ಅಂದ್ರೆ ಸುಕನುಂಡೆ ಅನ್ನೋ ಜಾತಿ.

ಸುಂಕದವನ ಮುಂದೆ ಸುಖ ದುಃಖ ಹೇಳುಕಿಂಡಹಾಗೆ

ಸಂಕಟ ಬಂದಾಗ ವೆಂಕರಮಣ

ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ,

ಸಗಣಿಯವನ ಜೊತೆಗಿನ ಸರಸಕ್ಕಿಂತ ಗಂಧದವನ ಜೊತೆಗಿನ ಗುದ್ದಾಟ ಲೇಸು

ಹೆಣ್ಣಿಗೆ ಹೆಣ್ಣೇ ಶತ್ರು.

ಹನಿಗೂಡಿದರೆ ಹಳ್ಳ..ತೆನೆಗೂಡಿದರೆ ಬಳ್ಳ

ಹಸು ಕಪ್ಪಾದರೆ..ಅದರ ಹಾಲು ಕಪ್ಪೆ..?

ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿಯಿಂದ.

ಹನಿ ಹನಿ ಕೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳ.

ಹಲ್ಲಿದ್ದಾಗ ಕಡಲೆ ಇಲ್ಲ. ಕಡಲೆ ಇದ್ದಾಗ ಹಲ್ಲಿಲ್ಲ.

ಹೆಣ್ಣಿಗೆ ಹಠ ಇರಬಾರದು, ಗಂಡಿಗೆ ಚಟ ಇರಬಾರದು

ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೆ

ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಹೆಚ್ಚು ದಿನ ಬಾರದು

ಹಾವು ಸಾಯಬಾರದು ಕೋಲು ಮುರಿಯಬಾರದು

ಹೊಟ್ಟೆಗೆ ಹಿಟ್ಟಿಲ್ಲದೆ ಹೋದರು ಜುಟ್ಟಿಗೆ ಮಲ್ಲಿಗೆ ಹೂವು

ಹಣ ಕಂಡ್ರೆ ಹೆಣವೂ ಬಾಯ್ಬಿಡತ್ತೆ

ಹೆತ್ತವರಿಗೆ ಹೆಗ್ಗಣ ಮುದ್ದು ಕಟ್ಟಿಕೊಂದವರಿಗ್ಗೆ ಕೊಡಗ ಮುದ್ದು

ಹಾಸಿಗೆ ಇದ್ದಷ್ಟು ಕಾಲು ಚಾಚು.

ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ.

ಹಾವಿಗೆ ಹಾಲೆರೆದರೇನು ಫಲ?

ಹಾಳೂರಿಗೆ ಉಳಿದವನೇ ಗೌಡ.

ಹಳೆ ಗಂಡನ ಪಾದವೇ ಗತಿ..

ಹಣ ಇದ್ದವರ ಕೈ ಹಿಡಿದ್ರೂ ಋಣವಿದ್ದಷ್ಟೇ ಸಿಗುವುದು











ಮಂಗಳವಾರ, ಆಗಸ್ಟ್ 18, 2020

ಕಂಡೆ ನಾ ಬದರಿಯ..

ಸತತವಾದ ೪ ದಿನಗಳ ವ್ಯಾಲಿ ಆಫ್ ಪ್ಲಾವರ್ಸ್ ಮತ್ತು ಹೇಮಕುಂಡದ ನಮ್ಮ ಚಾರಣ, ಅಂದಿಗೆ ಮುಗಿದಿತ್ತು. ಪಾಂಡುಕೇಶ್ವರದ ಹೋಟೆಲ್ಲಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವುದಷ್ಟೇ ಆ ದಿನಕ್ಕೆ ನಮಗುಳಿದ ಕೆಲಸ. ನಾವು ಬುಕ್ ಮಾಡಿದ್ದ ಟ್ರೆಕ್ಕಿಂಗ್ ಪ್ಯಾಕೇಜ್ ಏಜೆನ್ಸಿಯವರು, 'ಟೀಮ್ ನ ಇಚ್ಛೆಯಿದ್ದಲ್ಲಿ ಆ ದಿನ ಬದರಿನಾಥ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬಹುದು. ವಾಹನದ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಪ್ರಯಾಣ ಮಾತ್ರ ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂಭಿತ..'  ಎಂಬ ನಿಯಮಿತ ಒಕ್ಕಣೆಯನ್ನು ಮುಂಚಿತವಾಗಿಯೇ ನೀಡಿದ್ದರು. ಬದರಿನಾಥ್ಗೆ ಹೋಗುವ ಆಶಾಭಾವನೆಯಿಂದ ನಾವೆಲ್ಲರೂ ಘಾನ್ಗ್ರಿಯದಿಂದ ಪುಲ್ನವರೆಗಿನ ನಮ್ಮ ಅವರೋಹಣವನ್ನು ಸಾಧ್ಯವಾದಷ್ಟು ಚುರುಕಾಗಿ ಮುಗಿಸಿ ಬಂದಿದ್ದೆವು. ಬದರಿನಾಥ್ ಗೆ ಹೋಗುವ ಉತ್ಸಾಹ ಯಾರ ಮುಖದಲ್ಲೂ ಚಾರಣದ ಸುಸ್ತನ್ನು ಮೂಡಿಸಿರಲಿಲ್ಲ.. ಆದರೆ,  'ಹಿಂದಿನ ದಿನ ಸುರಿದ ಸತತ ಮಳೆಯ ಕಾರಣದಿಂದಾಗಿ, ಬದರಿನಾಥ್ ಗೆ ಹೋಗುವ ರಸ್ತೆಗಳು ಮುಚ್ಚಿದ್ದು, ೫೦೦ ಕ್ಕೂ ಹೆಚ್ಚು ವಾಹನಗಳು ನಿಲುಗಡೆಯಲ್ಲಿವೆ, ಸಾವಿರಾರು ಭಕ್ತರು ಕಾಯ್ವಿಕೆಯಲ್ಲಿದ್ದಾರೆ, ಯಾವಾಗ ರಸ್ತೆ ತೆರೆಯುವುದೋ ತಿಳಿಯದು, ಹೋಗಿ ನೋಡಬೇಕೀಗ, ' ಎಂದು ನಮ್ಮ ಡ್ರೈವರ್ ಕೊಟ್ಟ ಮಾಹಿತಿಗೆ ಒಮ್ಮೆ ನಿರಾಸೆಯೆನಿಸಿದರೂ, ಭರವಸೆಯನ್ನು ಕಳೆದುಕೊಳ್ಳದೆ ಎಲ್ಲರೂ ಚುರುಕಾಗಿ ಪಾಂಡುಕೇಶ್ವರ್ ಗೆ ಹೊರಟು ಬಂದೆವು. ಪಾಂಡುಕೇಶ್ವರ್ ಸಮೀಪಿಸುತ್ತಿದ್ದಂತೆಯೂ, ರಸ್ತೆಯ ಇಕ್ಕೆಲಗಳಲ್ಲೂ ಓಡಾಟವಿಲ್ಲದೆ ಸಾಲುಗಟ್ಟಿ ನಿಂತಿದ್ದ ನೂರಾರು ವಾಹನಗಳೇ ನಮಗೆ ಉತ್ತರಿಸಿಯಾಗಿತ್ತು. ನಮ್ಮ ಅದೃಷ್ಟವನ್ನು ಹಳಿಯುತ್ತಾ ಹೋಟೆಲ್ ತಲುಪಿಕೊಂಡೆವು. ಬೇಕಾದಷ್ಟು ಬಿಡುವಿನ ಸಮಯವಿದ್ದರಿಂದ ಎಲ್ಲರೂ ಒಟ್ಟಿಗೆ ಊಟ ಮಾಡಿ, ಚಾರಣದ ಕುರಿತು ಒಂದಷ್ಟು ಹರಟು, ನಮ್ಮನಮ್ಮ ರೂಮುಗಳಿಗೆ ತೆರಳಿ ವಿಶ್ರಾಂತಿ ತಗೆದುಕೊಳ್ಳುತ್ತಿದ್ದೆವು. ಮನೆಗೆ ಫೋನ್ ಮಾಡಿ "ಟ್ರೆಕಿಂಗ್ ಎಲ್ಲವೂ ಯಶಸ್ವಿಯಾಗಿ ಮುಗಿಸಿದ್ದಾಯಿತು ಆದರೆ ಇಷ್ಟು ಹತ್ತಿರಕ್ಕೆ ಬಂದರೂ ಬದರೀನಾಥನನ್ನು ನೋಡುವ ಒತ್ತಾಸೆ ಮಾತ್ರ ಈಡೇರಲಿಲ್ಲ" ಎಂದು ಬಾಯೊಡೆದು ಹೇಳಿದ್ದಷ್ಟೇ.. !!  - "ಬದರಿಯ ರಸ್ತೆ ತೆರೆಯಿತಂತೆ, ಈಗಾಗಲೇ ತಡವಾಗಿರುವುದರಿಂದ, ಎಲ್ಲರೂ ಇನ್ನೆರಡು ನಿಮಿಷದಲ್ಲಿ ವ್ಯಾನಿನ ಬಳಿಯಲ್ಲಿದ್ದರೆ ಮಾತ್ರ ನಾವು ಹೋಗಿಬರಲು ಸಾಧ್ಯ". ಎಂಬ ಕೂಗು ಹೊರಗಡೆಯಿಂದ ಕೇಳಿಬಂತು. ಆ ಸಮಯಕ್ಕೆ ಆದ ರೋಮಾಂಚನ ಬಣ್ಣಿಸಲು ಸಾಧ್ಯವಿಲ್ಲ, ಕೈಯ ರೋಮಗಳುಒಂದು ಕ್ಷಣ ಎದ್ದು ನಿಂತು ಹೋದವು.. ಒಕ್ಕೊರಲಿನ "ಜೈ ವಿಶಾಲ್ ಭದ್ರಿ", ಎಂಬ ಜಯಕಾರ ಹೋಟೆಲ್ ತುಂಬಾ ತುಂಬಿ ಹೋಯಿತು.. ತಯಾರಾಗಲು ಕೊಂಚವೂ ಸಮಯವಿರಲಿಲ್ಲ. ಕೈಯಲ್ಲಿ ಪೌಚ್, ಕಾಲಿಗೆ ಚಪ್ಪಲಿ..ನಿಮಿಷಾರ್ಧದಲ್ಲಿ ಹೇಗಿದ್ದೇವೋ ಹಾಗೆ ಎಲ್ಲರೂ ಓಡಿದ್ದೆ..!!


ಬದರಿನಾಥ ಹಿಂದೂಗಳು ಅತಿ ಶ್ರದ್ಧೆ ಮತ್ತು ಭಕ್ತಿಯಿಂದ ನಡೆದುಕೊಳ್ಳುವ ಪವಿತ್ರ ಚಾರ್ ಧಾಮ್ (ರಾಮೇಶ್ವರಮ್, ದ್ವಾರಕಾ, ಪುರಿ ಜಗನ್ನಾಥ ಮತ್ತು ಬದರಿನಾಥ) ಯಾತ್ರಾಸ್ಥಳಗಳ  ಪೈಕಿ  ಒಂದು.  ಭಾರತದ 'ದೇವ ಭೂಮಿ' ಎಂದೇ ಕರೆಯಲ್ಪಡುವ ಉತ್ತರಾಖಂಡದ ಛೋಟಾ ಚಾರ್ ಧಾಮ್ ತೀರ್ಥ ಯಾತ್ರೆಯ ಸ್ಥಳಗಳಾದ ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥ ಜೊತೆಗಿನ ನಾಲ್ಕನೇ ಪುಣ್ಯ ಕ್ಷೇತ್ರವೂ ಹೌದು. ಅಲಕನಂದಾ ನದಿಯಲ್ಲಿ ದೊರೆತ ಕಪ್ಪು ಸಾಲಿಗ್ರಾಮದ ಬದರಿನಾರಾಯಣದ ವಿಗ್ರಹವನ್ನು ಆದಿ ಶಂಕರಾಚಾರ್ಯರು ಕಂಡು ಅದನ್ನೆತ್ತಿ ತಪ್ತ ಕುಂಡದ ಪಕ್ಕದಲ್ಲಿನ ಗುಹೆಯಲ್ಲಿ ಸ್ಥಾಪಿಸಿ ಪೂಜಿಸುತ್ತಿದ್ದರು. ನಂತರ ೧೫ ನೇ ಶತಮಾನದಲ್ಲಿ ಘಾರ್ವಾಲ್ ಪ್ರಾಂತ್ಯದ ಅರಸರು ಈ ವಿಗ್ರಹಕ್ಕಾಗಿ ಇಲ್ಲಿರುವ ಮಂದಿರವನ್ನು ಕಟ್ಟಿಸಿದರು ಎಂಬ ಉಲ್ಲೇಖವಿದೆ. ಕಾಲಾಂತರದ ಶಿಥಿಲತೆ ಮತ್ತು ಪ್ರಕೃತಿವಿಕೋಪಗಳಿಗೆ ಒಳಗಾಗಿ, ಅನೇಕ ಬಾರಿ ಈ ಬದರಿ ನಾರಾಯಣನ ಮಂದಿರವು ಪುನರುತ್ಥಾನಗೊಂಡಿದೆ.  




ಸಮುದ್ರ ಮಟ್ಟಕ್ಕಿಂತ ೩೧೩೩ ಮೀಟರ್ನಷ್ಟು ಎತ್ತರದಲ್ಲಿ, ಹಿಮಾಲಯ ಶಿಖರಗಳ ನಡುವೆ, ನೀಲಕಂಠ ಪರ್ವತದ ತಪ್ಪಲಿನಲ್ಲಿರುವ ಬದರಿನಾಥ ಆಶ್ರಮ, ಇನ್ನಿತರ ಎಲ್ಲ ವೈಷ್ಣವತೀರ್ಥಕ್ಷೇತ್ರಕ್ಕಿಂತ ಎತ್ತರದಲ್ಲಿರುವ ಅತ್ಯುನ್ನತ ಧಾರ್ಮಿಕ ಕ್ಷೇತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ. ಶ್ರೀಮನ್ನಾರಾಯಣ ಇಲ್ಲಿನ ಕ್ಷೇತ್ರಸ್ವಾಮಿ. ತಾಪತ್ರಯಗಳನಿವಾರಣೆಯ ಪಾಲಿಗೆ ಬದರಿಗೆ ಮೀರಿದ ಕ್ಷೇತ್ರವಿಲ್ಲ ಎಂಬ ನಂಬುಗೆ ಅನೇಕ ಜನರಲ್ಲಿ ಇದೆ. ಬದರಿನಾಥ್ ಗೆ ಹೋಗಬೇಕಾದರೆ, ಪಾಂಡುಕೇಶ್ವರ್ ಇಂದ ೨೨ ಕಿಮೀ ಗಳ ರಸ್ತೆಮಾರ್ಗದ ಪ್ರಯಾಣ ಮಾಡಬೇಕು. ತನ್ನದೇ ಆದ ದಂತಕಥೆ, ಪೌರಾಣಿಕ ಹಿನ್ನಲೆ, ಧಾರ್ಮಿಕ ಮಹತ್ವದಿಂದಾಗಿ ಹೆಸರುವಾಸಿಯಾಗಿರುವ ಈ ಕ್ಷೇತ್ರವು, ಅದೆಷ್ಟು ಅಗಾಧವಾದ ಪ್ರಾಕೃತಿಕ ಸೌಂದರ್ಯದಿಂದ ಪ್ರಸಿದ್ಧಗೊಂಡಿದೆಯೋ, ಅಷ್ಟೇ ನೈಸರ್ಗಿಕ ವಿಕೋಪಗಳಿಗೆ ಆಗ್ಗಾಗ್ಗೆ ತುತ್ತಾಗುವ  ಪ್ರದೇಶವೂ ಆಗಿದೆ. ಹವಾಮಾನ ತೀವ್ರತೆಯಿಂದ ವರ್ಷದಲ್ಲಿ ೬ ತಿಂಗಳುಗಳು ಕಾಲ ಮಾತ್ರ, ಬದರೀನಾಥನ ಮಂದಿರ ಯಾತ್ರಾರ್ಥಿಗಳ ದರ್ಶನಕ್ಕೆ ತೆರೆದಿರುತ್ತದೆ. ಉಳಿದರ್ಧ ವರ್ಷ ಈ ಸ್ಥಳ ಗುರುತೇ ಸಿಗದಂತೆ ಸಂಪೂರ್ಣ ಹಿಮಾವೃತ್ತಗೊಂಡಿರುತ್ತದೆ. ಹೀಗಿದ್ದರೂ ಕೂಡ ವಿಶ್ವದಾದ್ಯಂತ ಎಲ್ಲ ಸ್ಥಳಗಳಿಂದ ಪ್ರತಿ ವರ್ಷವೂ ಸಂಖ್ಯೆಯಲ್ಲಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರೀನಾರಾಯಣನಿಗೆ ಪೂಜೆ ಸಲ್ಲಿಸುವನು ಎಂಬ ನಂಬಿಕೆ ಅಲ್ಲಿದೆ. ಹಾಗಾಗಿ ಒಂದು ದಿನವೂ ತಪ್ಪದೇ ಪೂಜೆಯ ಓಲೈಸಿಕೊಂಡಿರುವ ಸ್ವಾಮೀ ನಮ್ಮ ದೇವರು ಎಂದು ಅಲ್ಲಿನವರು ಹೆಮ್ಮೆಯಿಂದ ಹೇಳುತ್ತಾರೆ.



ದರಿನಾಥ್ ನ ವಿಶೇಷಗಳಲ್ಲಿ ಒಂದು ಇಲ್ಲಿನ ವಿಸ್ಮಯವಾದ ತಪ್ತಕುಂಡ್. ಯಾವ ಕಾಲಕ್ಕೆ ಹೋದರೂ, ಇಲ್ಲಿನ ನೀರು ಸ್ಪರ್ಶಿಸಲು ಅಸಾಧ್ಯವೆನಿಸುವಷ್ಟು ತಂಪು. ಹಾಗಿರುವಾಗ ಅಲಕಾನಂದ ನದಿನೀರಿನ ಪಕ್ಕದಲ್ಲೇ ನೈಸರ್ಗಿಕವಾಗಿ ನಿರ್ಮಿತ ಬಿಸಿನೀರಿನ ಬುಗ್ಗೆ ಆಶ್ಚರ್ಯವನ್ನು ಪುಳಕವನ್ನು ನೀಡುತ್ತದೆ. ತಪ್ತಕುಂಡ ಎಂದು ಕರೆಯಲಾಗುವ ಈ ಬಿಸಿನೀರು ಉಕ್ಕುವ ಕುಂಡದಲ್ಲಿ ಪವಿತ್ರ ಸ್ನಾನ ಮಾಡಿದರೆ ಚರ್ಮದ ಖಾಯಿಲೆಗಳೆಲ್ಲ ಉಪಶಮನಗೊಳ್ಳುತ್ತವೆ ಎಂಬ ಪ್ರತೀತಿಯಿದೆ.




ನಾವು ಹೋದದ್ದು ಆಗಸ್ಟ್ ತಿಂಗಳಿನಲ್ಲಾದ್ದರಿಂದ ಆಗಷ್ಟೇ ಮಳೆ ಬಿದ್ದುನಿಂತಿತ್ತು. ಪ್ರತಿಯೊಂದು ಗಿಡಗಂಟೆಗಳು ಕೂಡ ಪ್ರಖರವಾದ ಸೂರ್ಯರಶ್ಮಿಗೆ ಶುಭ್ರವಾಗಿ ಹೊಳೆಯುತ್ತಿದ್ದರಿಂದ, ಅದೊಂದು ಸ್ವರ್ಗಸದೃಶ ಸ್ವಪ್ನ ತಾಣದಂತೆ ಭಾಸವಾಗುತ್ತಿತ್ತು.ಹಿಮಾಲಯದ ಪರ್ವತಗಳನ್ನು ಕೊರೆದು ಮಾಡಿದ ಘಾಟಿ ಹಾದಿಯ ಹಿಡಿದು ನಮ್ಮ ಗಾಡಿ ಸಾಗಿತ್ತು. ಚುರುಕು ಬಿಸಿಲು ಮೂಡಿದ್ದರೂ ಕೂಡ, ಮೈಗೆ ಮಾತ್ರ ಕೊರೆವ ಛಳಿಯ ಗಾಳಿಯೇ ಸೋಕುತಿತ್ತು...ತಾಪಮಾನ ಸುಮಾರು ೧೪-೧೫ ಡಿಗ್ರಿಯಷ್ಟಿದ್ದಿರಬಹುದು. ದೂರದಲ್ಲಿ ಹಿಮದ ಟೊಪ್ಪಿಗೆ ತೊಟ್ಟಿರುವ ಎತ್ತರೆತ್ತರದ ಹಿಮಾಲಯದ ಶಿಖರಗಳು, ಹಾದಿಯುದ್ದಕ್ಕೂ ಕಣ್ಣು ಹಾಯಿಸಿದಷ್ಟು ಹಸಿರುಟ್ಟ ಪರ್ವತಗಳು ಮತ್ತವುಗಳ ಮಧ್ಯೆ ಪುಟ್ಟ ಪುಟ್ಟಜಲಪಾತಗಳು, ಕೈಚಾಚಿ ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಬಹುದು ಎಂದೆನಿಸುವ ಬೆಳ್ಳನೆಯ ಮೋಡಗಳು, ಪಕ್ಕದಲ್ಲಿಯೇ ಬಳುಕಿ ಹರಿವ ನದಿ ಅಲಕಾನಂದ, ಆಹಾ! ನೋಡಿದಷ್ಟು ಮುಗಿಯದ ಸೌಂದರ್ಯ.. 



ಹಾಗೆಂದು ಪ್ರಕೃತಿ ಸೌಂದರ್ಯವನ್ನು ನೋಡಿ ಸಂತೋಷಿಸುವಷ್ಟೇ ಕೆಲವೊಂದು ಕಡೆ ಅಲ್ಲಿನ ದುರ್ಗಮ ಹಾದಿಯನ್ನು ಕಂಡು ಭಯವೂ ಕೂಡ ಆಗುತ್ತಿತ್ತು.. ದೊಡ್ಡ ದೊಡ್ಡ ಬೆಟ್ಟಗಳನ್ನು ಕೊರೆದು ಮಾಡಿದ ಕಿರಿದಾದ ರಸ್ತೆ ಒಂದು ಕಡೆಯಾದರೆ, ಚಲಿಸುವ ವಾಹನದಿಂದ ಕೆಳಗೆ ನೋಡಿದರೆ ಕೈಕಾಲು ನಡುಗುವಂತಹ ಪ್ರಪಾತ ಇನ್ನೊಂದೆಡೆ. ಇನ್ನೇನು ತಲೆಯ ಮೇಲೆ ಬಿದ್ದೆ ಹೋಗುತ್ತದೆ ಎಂದು ಭಾಸವಾಗುವಂತಹ ಬ್ರಹತ್ ಬಂಡೆ ಕಲ್ಲುಗಳ ಕೆಳಗೆ ನಮ್ಮ ಗಾಡಿ ಸಾಗುವಾಗ ಒಮ್ಮೊಮ್ಮೆ ಆತಂಕವಾಗುವುದು ಸುಳ್ಳಲ್ಲ. ಮಳೆ ಹೆಚ್ಚಾಗಿ ಮೇಲಿಂದ ಹರಿದು ಬರುವ ಜಲಧಾರೆಯು ಕೆಲವೆಡೆ ರಸ್ತೆಯ ಮೇಲೆಯೇ ಹರಿಯುತ್ತದೆ.  ಗಾಡಿ ಸ್ಕಿಡ್ ಆಗದಂತೆ ಚಾಲನೆ ಮಾಡುವ ಕೌಶಲ್ಯ ಅಲ್ಲಿನ ಡ್ರೈವರುಗಳಿಗಿದ್ದರೂ ನಮಗೆ ಉಸಿರು ಬಿಗಿಹಿಡಿಯುವಂತಹ ಪರಿಸ್ಥಿತಿ. ಒಮ್ಮೊಮ್ಮೆ ಚಳಿಗಾಲದಲ್ಲಿ ಆಗುವ ಭಾರೀ ಹಿಮಪಾತಕ್ಕೆ ಇಲ್ಲಿನ ಹಳ್ಳಿಗರ ಅದೆಷ್ಟೋ ಮನೆ ಗುಡಿಸಲುಗಳು ಹಾನಿಗೊಳಗಾಗುತ್ತವೆ. ಆದರೂ ಕೆಚ್ಚೆದೆಯಿಂದ ಮತ್ತೆ ಜೀವನ ಕಟ್ಟಿಕೊಳ್ಳುವ ಇಲ್ಲಿನ ಜನರ ಸಾಹಸಮಯ ಬದುಕು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ೨೦೧೩ ರ ಭಯಾನಕ ಜಲಪ್ರಳಯದ ನಂತರ ರಸ್ತೆಮಾರ್ಗಗಳು ಪುನರ್ನಿಮಾಣಗೊಂಡು, ಕಾಲಕಾಲಕ್ಕೆ ಕೆಲವೆಡೆ ರಸ್ತೆಗಳು ಅಭಿವೃದ್ಧಿಗೊಳ್ಳುತ್ತ ಬಂದಿದ್ದರೂ ಇಲ್ಲಿ ಯಾವ ಸಮಯಕ್ಕೆ ಹೇಗೆ ಎಂದು ಹೇಳಲಾಗುವುದಿಲ್ಲ. ಯಾವ ಕ್ಷಣಕ್ಕಾದರೂ ದೊಡ್ಡ ದೊಡ್ಡ ಸುತ್ತುವರೆದ ಪರ್ವತಗಳಿಂದ ಬಂಡೆಕಲ್ಲುಗಳು ಜಾರಿ ಹಾದಿ ಮುಚ್ಚಬಹುದು, ಭೂಮಿ ಕುಸಿಯಬಹುದು, ಇಲ್ಲಿ ಎಲ್ಲವೂ ಅನಿಶ್ಚಿತ..!!   ಹಾಗೆ ಸಿಕ್ಕಿ ಹಾಕಿಕೊಂಡರೆ ದಿನಗಟ್ಟಲೆ ನಿಂತಲ್ಲೇ ರಸ್ತೆ ತೆರವುಗೊಳ್ಳುವ ವರೆಗೆ ಕಾಯುವ ಪರಿಸ್ಥಿತಿ. ಅದೇ ಕಾರಣದಿಂದ ಇವುಗಳಿಗೆ ಹೊಂದಿಕೊಂಡಂತೆ ಯಾತ್ರೆಯ ಹಾದಿಯ ಮಾಹಿತಿ ಕ್ಷಣಕ್ಷಣಕ್ಕೆ ನವೀಕರಿಸಿ ಯಾತ್ರಾರ್ಥಿಗಳಿಗೆ ತಿಳಿಸಲಾಗುತ್ತದೆ. ಹೀಗೆ ಇಲ್ಲಿನ ಭೂರಾಶಿಯ ವೈವಿದ್ಯಮಯ ಸಂಗತಿಗಳಿಗೆ ಬೆರಗಾಗುತ್ತಾ ನಾವೆಲ್ಲರೂ ಬದರಿನಾಥ ಆಶ್ರಮ/ಮಂದಿರದ ಸ್ಥಳ ತಲುಪಿದ್ದಾಯಿತು.





ಬದರಿಯಲ್ಲಿ ಪರಸ್ಪರ ಎದುರುಬದರಾಗಿ ರಾರಾಜಿಸುವುದು ಎರಡು ಬ್ರಹತ್ಪರ್ವತಗಳಾದ  ನಾರಾಯಣ ಮತ್ತು ನರಪರ್ವತ. ನಾರಾಯಣ ಪರ್ವತದ ಬುಡದಲ್ಲಿಯೇ ಇರುವುದು, ಭವ್ಯವಾಗಿ ಎದ್ದು ಕಾಣುವ ಬದರೀ ಮಂದಿರ. ಅಲ್ಲಿ ಭೋರ್ಗರೆಯುತ್ತಾ ಹರಿಯುವುದು ಅಲಕನಂದಾ ನದಿ. ಮಂದಿರಕ್ಕೆ ಹೋಗಲು ಅಲಕನಂದಾ ನದಿಯ ಸೇತುವೆ ದಾಟಿ ಹೋಗಬೇಕು. ಅದರ ಪಕ್ಕದಲ್ಲೇ ತೀರ್ಥಸ್ನಾನಘಟ್ಟಕ್ಕೆ ಹೋಗುವ ದಾರಿ. ನೆಲದ ಮಟ್ಟಕ್ಕಿಂತ ಸುಮಾರು ೫೦ ಅಡಿ ಎತ್ತರದಲ್ಲಿ ವರ್ಣರಂಜಿತ ದ್ವಾರ, ಬಂಗಾರ ಲೇಪಿತ ಕಳಶದಿಂದ ಅಲಂಕೃತಗೊಂಡ ಈ ದೇವಾಲಯ ನೋಡುವುದೇ ಕಣ್ಣಿಗೆ ಒಂದು ಹಬ್ಬ. ಮಂದಿರದ ಒಳಾಂಗಣದಲ್ಲಿ ಮರದ ಸೂಕ್ಷ್ಮವಾದ ಕೆತ್ತನೆಗಳು ಮನಸ್ಸಿಗೆ ಮುದವನ್ನು ನೀಡುತ್ತದೆ. ಸುತ್ತಲಿನ ಪ್ರಕೃತಿ ಸೌಂದರ್ಯ ಈ ಸ್ಥಳಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಪ್ರತಿ ನಿತ್ಯಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ ಪುನೀತರಾಗುತ್ತಾರೆ. ನಾವು ಹೋದ ಸಮಯಕ್ಕೆ, ದರ್ಶನಕ್ಕೆ ಮಂದಿರದ ಬಾಗಿಲುಗಳು ತೆರೆಯಲು ಸನ್ನದ್ಧವಾಗಿದ್ದರಿಂದ, ಜನರ ಭಕ್ತಿ ಭಾವ, ಆ ಹುರುಪು ಎಲ್ಲವೂ ಒಂದು ಅವಿಸ್ಮರಣೀಯ ಅನುಭವ  . ಗಂಟೆಯ ನಾದ ಮೊಳಗಿ, ಬಾಗಿಲು ತೆರೆದುಕೊಳ್ಳುತ್ತಿದ್ದಂತೆಯೇ, ಒಮ್ಮೆಲೇ ನೂರಾರು ಜನರ ಮುಗಿಲು ಮುಟ್ಟುವಂತಹ 'ಜೈ ವಿಶಾಲ್ ಭದ್ರಿನಾಥ್' ಎಂಬ ಒಕ್ಕೊರಲಿನ ಜಯಕಾರ ನಮ್ಮನ್ನು ಯಾವುದೊ ಒಂದು ಅಲೌಕಿಕ ಭಾವಕ್ಕೆ ಎಳೆದೊಯ್ಯುವಂತೆ ಭಾಸವಾಗುತ್ತಿತ್ತು.  ಕಪ್ಪು ಸಾಲಿಗ್ರಾಮದಿಂದ ಮಾಡಲ್ಪಟ್ಟ, ಶಂಖ ಚಕ್ರ ಧಾರಿತ ವಿಷ್ಣು ಸರ್ವಾಲಂಕಾರದಿಂದ ಭೂಷಿತನಾಗಿ, ಧ್ಯಾನಮಗ್ನ ಭಂಗಿಯಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದ. ಅವನ ಸುತ್ತುವರೆದಿರುವುದು ಗರುಡ, ಕುಬೇರ, ನಾರದ ಮುನಿ, ನರ, ನಾರಾಯಣ, ಗಣಪತಿ ಇತ್ಯಾದಿ ಅವನ ದೇವತಾ ಪರಿವಾರ. ಬದರಿ ನಾರಾಯಣನ ದರ್ಶನ ಪಡೆದ ಧನ್ಯತಾ ಭಾವ ನಮ್ಮದಾಯಿತು. ಹೊರಗೆ ಬರುವಾಗ ಸಕ್ಕರೆಯ ಅಚ್ಚಿನ ಸಂಕ್ರಾಂತಿ ಕಾಳುಗಳುಗಳನ್ನು ಪ್ರಸಾದವಾಗಿ ನೀಡುತ್ತಾರೆ..ಮೊಬೈಲ್ ನೆಟ್ ವರ್ಕ್ ತಕ್ಕಮಟ್ಟಿಗೆ ಚೆನ್ನಾಗಿಯೇ ಸಿಗುತ್ತಿದ್ದ ಕಾರಣ, ಕುಟುಂಬದವರಿಗೆಲ್ಲರಿಗೂ ವಿಡಿಯೋ ಕಾಲ್ ಮಾಡಿ ಅಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವನ್ನೂ, ಬದರಿ ನಾರಾಯಣನ ಮಂದಿರವನ್ನು ತೋರಿಸುವ ಧನ್ಯ ಅವಕಾಶ ಸಿಗುತ್ತದೆ. ಬದರಿ ನಾರಾಯಣನ ಮಂದಿರದ ಹೊರತಾಗಿ, ಬ್ರಹ್ಮಕಪಾಲ, ನಾರದಶಿಲಾ , ಗರುಡಶಿಲಾ ಇತ್ಯಾದಿ ಇನ್ನೂ ಸಾಕಷ್ಟು ನೋಡುವಂತಹ ಸ್ಥಳಗಳಿವೆ ಎಂದು ಅಲ್ಲಿನ ಸ್ಥಳೀಯರಿಂದ ಕೇಳ್ಪಟ್ಟೆವು. ಆದರೆ ನಮಗೆ ಮುಂದಕ್ಕೆ ಬದರಿಯಷ್ಟೇ ಪ್ರಸಿದ್ಧ ಮಾನಾ ಹಳ್ಳಿಯನ್ನು ವೀಕ್ಷಿಸಿ ವಾಪಸು ಸಂಜೆಯಷ್ಟರಲ್ಲಿ ಸುರಕ್ಷಿತವಾಗಿ ಪಾಂಡುಕೇಶ್ವರ್ ತಲುಪಬೇಕಾದ ಅನಿವಾರ್ಯತೆಯಿತ್ತದ್ದರಿಂದ ಬದರಿಯ ಇನ್ನೂ ವಿಸ್ತಾರವಾದ ಭೇಟಿ ನಮ್ಮದಾಗಲಿಲ್ಲ. ಮಂದಿರದ ಹಾದಿಯನ್ನು ದಾಟಿ ಬರುವವರೆಗೂ ಹೊರಳಿ ಮತ್ತೆ ಮತ್ತೆ ನೋಡಬೇಕೆನಿಸುವ ಆ ದಿವ್ಯ ಆಕರ್ಷಣೆ, ಆ ಅನುಭೂತಿಯನ್ನು ಅಚ್ಚಳಿಯದಂತೆ ಮನದಲ್ಲಿ ಕೂಡಿಟ್ಟುಕೊಂಡು ತೃಪ್ತಿಯಿಂದ ಅಲ್ಲಿಂದ ಹೊರಟು ಬಂದೆವು.





ಇದೀಗ ಕೊರೋನಾ ವಿಪತ್ತಿನಿಂದ ಜನರ ಪ್ರವಾಸದಲ್ಲಿ ಇಳಿಮುಖ ಕಂಡಿದ್ದರೂ, ಬದರಿನಾಥ ಯಾತ್ರೆಗೆ ತೆರೆದಿದೆ. ಉತ್ತರಾಖಂಡ್ ರಾಜ್ಯಕ್ಕೆ ಹೊರಗಿನಿಂದ ಬರುವ ಯಾತ್ರಿಗಳು ೯೬ ಗಂಟೆಗಳಿಗಿಂತ ಹೆಚ್ಚು ಸಮಯ ಮೀರದಿರುವ ಕೋವಿಡ್ ನೆಗೆಟಿವ್ ತಪಾಸಣಾ ಪಾತ್ರವನ್ನು ಹಿಡಿದು, ಬದರಿನಾಥ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ. ದೇವಾಲಯದ ಒಳಾಂಗಣ ಆವರಣಕ್ಕೆ ಹೋಗಲು ಅನುಮತಿ ಇಲ್ಲದಿದ್ದರೂ, ಆ ಪುಣ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪುಣ್ಯ ಮತ್ತು ಈ ಋತುವಿಗೆ ಕಾಣಬಹುದಾದ ಸ್ವರ್ಗ ಸದೃಶ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ತೆರಳುತ್ತಿದ್ದಾರೆ. ಜೀವನದಲ್ಲಿ ಒಮ್ಮೆ ಖಂಡಿತವಾಗಿಯೂ ನೋಡಬೇಕಾದ ಸ್ಥಳ ಇದಾಗಿದೆ.

ಶುಕ್ರವಾರ, ಜುಲೈ 3, 2020

ಕಂಚೀಕಾಯಿ ಚಟ್ನೆ

ಕಂಚೀಕಾಯಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಕಡೆ ಸಿಗುವ ನಿಂಬೆ ಪಂಗಡಕ್ಕೆ ಸೇರಿದ ಒಂದು ಹಣ್ಣು. ನಾರಿಂಗ ಏಳಚೀಕಾಯಿ, citron, kaffir lime ಇತ್ಯಾದಿ ಹೆಸರುಗಳಿಂದ ಇದು ಜನಕ್ಕೆ ಪರಿಚಿತ. ಸಣ್ಣದಾಗಿ ಕಿತ್ತಳೆ ಹಣ್ಣಿನಂತಿರುವ ಇದು ನೋಡಲು ನಿಂಬೆಕಾಯಿಗಿಂತ ದೊಡ್ಡದು ಮತ್ತು ದೊಡ್ಳೀಕಾಯಿಕ್ಕಿಂತ ಸಣ್ಣದು. ಕಂಚಿಕಾಯಿ ಖಾರ ಮತ್ತು ಸಿಹಿ ಉಪ್ಪಿನಕಾಯಿ, ಸಿಪ್ಪೆ ಗೊಜ್ಜು, ನೀರ್ಗೊಜ್ಜು, ಕಂಚಿಹುಳಿ ಬೆಳ್ಳುಳ್ಳಿ ಹಾಕಿದ ಬಿಸಿ ಬಿಸಿ ಸಾರು, ಇತ್ಯಾದಿ ಅಡುಗೆಗೆ ಕಂಚೀಕಾಯಿ ಬಲು ಪ್ರಸಿದ್ಧ... ಕಂಚಿಕಾಯಿ ಯ ಹುಳಿ ಹಿಂಡಿ ಮಾಡಿದ ಚಿತ್ರಾನ್ನವೆಂತೂ ತಿನ್ನಲು ಬಲು ರುಚಿ.. 
ಈ ಹಣ್ಣಿನ ಸಿಪ್ಪೆಯಲ್ಲಿರುವ ಎಣ್ಣೆಯ ಅಂಶ (essential oil ) ಕಹಿ ರುಚಿಯನ್ನು ನೀಡುವುದಲ್ಲದೆ. ರೋಗ ನಿರೋಧಕ ಶಕ್ತಿ ಈ ಹಣ್ಣಿನಲ್ಲಿ ಹೇರಳವಾಗಿದೆ. ಮುಖ್ಯವಾಗಿ ಜೀರ್ಣ ಶಕ್ತಿಯನ್ನು ವೃದ್ಧಿಸಲು, ದೇಹ ನಂಜಾದಾಗ, ಜ್ವರ ಬಂದು ಬಾಯಿ ರುಚಿ ಇಲ್ಲದಾದಾಗ, ಇದನ್ನು ತಿಂದರೆ ಒಳ್ಳೆಯದು. ಹೃದಯದ ಆರೋಗ್ಯಕ್ಕೂ ಸಹಾಯಕ. 

ಇಡೀ ಕಂಚೀಕಾಯಿ ಸಿಪ್ಪೆ ಸಹಿತವಾಗಿ ಕಾಯಿಯ ಜೊತೆ ಹಾಕಿ ತಿರುವಿ ಮಾಡುವ ಹಸಿ ಚಟ್ನೆ, ಉಣ್ಣಲು ತುಂಬಾ ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಕಹಿ ಇದರ ಮೂಲ ರುಚಿ. ಆದರೆ ಅದರ ಜೊತೆಗೆ ಉಪ್ಪು ಹುಳಿ ಖಾರ ಸಿಹಿ ಎಲ್ಲವೂ ಹದವಾಗಿ ಹಾಕಿ ಮಾಡುವ ಈ ಚಟ್ನೆಯನ್ನು, ಬಿಸಿ ಬಿಸಿ ಹಬೆಯಾಡುವ ಅನ್ನಕ್ಕೆ ಹಾಕಿ, ಕೊಬ್ಬರಿ ಎಣ್ಣೆಯೊಂದಿಗೆ ಕಲಸಿ ತಿಂದರೆ, ಆಹಾ ಅದರ ರುಚಿ ಬಲ್ಲವನೇ ಬಲ್ಲ.. ಮಾಡಲೆಂತು ಬಲು ಸುಲಭ.. ನಾನೆಂತೂ ಕಂಚೀಕಾಯಿ ಚಟ್ನೆ ತಿನ್ನಲು ಸಿಕ್ಕಾಗಲೆಲ್ಲ, ಅದನ್ನು ಚೆನ್ನಾಗಿ ಸವಿಯುವುದಲ್ಲದೇ, ಉಂಡು ಕೈ ತೊಳೆದ ನಂತರವೂ, ಅದರ ಪರಿಮಳ ಕೈಯಲ್ಲಿ ಹುಡುಕುತ್ತೇನೆ..   

ಕಂಚೀಕಾಯಿ ಬಳಸಿ ಮಾಡುವ ಚಟ್ನೆಯ ವಿಧಾನವನ್ನು ನಾನಿಲ್ಲಿ ಹಂಚಿಕೊಂಡಿದ್ದೇನೆ. ಇದಕ್ಕೆ ಹಾಕುವ ಉಪ್ಪು ಹುಳಿ ಖಾರ ಎಲ್ಲವೂ ನಮಗೆ ಬೇಕಾದಷ್ಟು ಹಾಕಿಕೊಳ್ಳಬಹುದು. ಒಂದು ಅಂದಾಜಿನ ಅಳತೆ ಇಲ್ಲಿ ಹೇಳಿದ್ದೇನೆ.. 

ಬೇಕಾಗುವ ಪದಾರ್ಥಗಳು :

ಒಂದು ಮೀಡಿಯಂ ಸೈಜಿನ ಕಂಚೀಕಾಯಿ,
ಮುಕ್ಕಾಲು ಕಪ್ ತೆಂಗಿನ ತುರಿ ಅಥವಾ ತುರಿದ ಕೊಬ್ಬರಿ,
ಮುಕ್ಕಾಲು ಚಮಚ ಸಾಸಿವೆಕಾಳು,
ಮುಕ್ಕಾಲು ಚಮಚ ಕಾಳುಮೆಣಸು,
ಒಂದು ಚಮಚ ಜೀರಿಗೆ,
ಕಾಲು ಚಮಚ ಅರಿಶಿನ ಪುಡಿ, 
ಕಾಲು ಚಮಚ ಮೆಂತೆಕಾಳು,
೪-೫ ಒಣಮೆಣಸು ಅಥವಾ ೨ ಚಮಚ ಅಚ್ಚ ಖಾರದ ಪುಡಿ
ಒಂದು ಗೋಲಿಯಾಕಾರದಷ್ಟು ಹುಣಸೆಹಣ್ಣು,
ಒಂದು ಚಮಚ ಬೆಲ್ಲ (ಸಿಹಿ ಬೇಕಾದಲ್ಲಿ),
ರುಚಿಗೆ ತಕ್ಕಷ್ಟು ಉಪ್ಪು 

ಮಾಡುವ ವಿಧಾನ :

ಒಂದು ದೊಡ್ಡ ಕಂಚೀಕಾಯಿ ತೊಳೆದು ಒರೆಸಿಕೊಂಡು, ಸಣ್ಣಕ್ಕೆ ಹೆಚ್ಚಿಕೊಳ್ಳಬೇಕು. ಅದಕ್ಕೆ ಚಿಟಕಿ ಉಪ್ಪು, ಚಿಟಿಕೆ ಅರಿಶಿನ ಪುಡಿ, ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಕಲಸಿ ಒಂದು ೨೦ ನಿಮಿಷಗಳ ಕಾಲ ಬೆರೆತುಕೊಳ್ಳಲು ಬಿಡಬೇಕು. ಅಷ್ಟರಲ್ಲಿ, ಸಾಸಿವೆ, ಕಾಳುಮೆಣಸು, ಮೆಂತೆ, ಜೀರಿಗೆಯನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದು ತಣಿಸಿಟ್ಟುಕೊಳ್ಳಬೇಕು. ಮಿಕ್ಸರ್ ಪಾತ್ರೆಗೆ, ಈಗಾಗಲೇ ತೆಗೆದಿಟ್ಟಿರುವ ಕಂಚೀಕಾಯಿ ಹೋಳುಗಳು, ತೆಂಗಿನ ತುರಿ ಅಥವಾ ಕೊಬ್ಬರಿ, ಹುರಿದಿಟ್ಟ ಸಾಮಾಗ್ರಿಗಳು, ನಮ್ಮ ರುಚಿಗೆ ಬೇಕಾದಷ್ಟು ಖಾರಕ್ಕೆ ಒಣಮೆಣಸು ಅಥವಾ ಮೆಣಸಿನಪುಡಿ, ಉಪ್ಪು, ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಬೇಕು (ಸಿಹಿ ತಿನ್ನದವರು ಬೆಲ್ಲ ಹಾಕದಯೂ ಮಾಡಬಹುದು). ಸ್ವಲ್ಪವೇ ಸ್ವಲ್ಪ ನೀರು ಸೇರಿಸಿ, ಸಾಧ್ಯವಾದಷ್ಟು ಗಟ್ಟಿಯಾಗಿ ತಿರುವಿಕೊಂಡರೆ ಆಯಿತು. ಕಂಚೀಕಾಯಿ ಚಟ್ನೆ ರೆಡಿ. 

ಶನಿವಾರ, ಮೇ 23, 2020

ಕೊರೋನಾ ಅನುಭವ - ಮಾಹಿತಿ

"ಮಗನಿಗೆ ಕೆಮ್ಮು ಜಾಸ್ತಿ ಆಗುತ್ತಲಿತ್ತು. ಜ್ವರ ಶುರುವಾಗಿತ್ತು. ಆಸ್ಪತ್ರೆಗೆ ಫೋನಾಯಿಸಿ ವಿಚಾರಿಸಿದಾಗ ರೋಗದ ಎಲ್ಲ ಲಕ್ಷಣಗಳನ್ನೂ ವಿಚಾರಿಸಿ, ಕೊರೋನಾ ಸೋಂಕು ರೋಗವೇ ಹೌದೆಂದು ಖಾತ್ರಿ ಮಾಡಿದರು. ಆ ಸಮಯಕ್ಕೆ ಇಂಗ್ಲಾಂಡ್ದಲ್ಲಿ ಅದೆಷ್ಟು ಸೋಂಕಿತರ ಸಂಖ್ಯೆ ಹೆಚ್ಚಿತ್ತೆಂದರೆ, ಎಲ್ಲ ಆಸ್ಪತ್ರೆಗಳಲ್ಲಿಯೂ ಕೊರೋನಾ ರೋಗಿಗಳೇ ತುಂಬಿಕೊಂಡಿರುತ್ತಿದ್ದರು . ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ರೋಗಾಣುಗಳಿಗೆ ನಮ್ಮನ್ನು ನಾವೇ ತೆರೆದಿಟ್ಟ ಲೆಕ್ಕ. ತೀರಾ ಉಸಿರಾಟದ ಸಮಸ್ಯೆ ಇಂದ ಒದ್ದಾಡುತ್ತಿರುವವರ ಮಧ್ಯೆ, ಆಗಿನ್ನೂ ಶುರುವಿನ ಹಂತದಲ್ಲಿದ್ದ ನನ್ನ ಮಗುವಿನ ಲಕ್ಷಣವನ್ನು ಗಮನಿಸಿ, ಆಸ್ಪತ್ರೆಯವರು ನಾವು ಮನೆಯಲ್ಲಿಯೇ ಇರಬಹುದಾದ ಆಯ್ಕೆ ನೀಡಿದ್ದರು. ಡಾಕ್ಟರ್ ನೀಡಿದ ಸಲಹೆಯಂತೆ, ಅವರು ಕೊಟ್ಟ ಸೂಚನೆಗಳ ಮೇರೆಗೆ, ನಾವು ಮಗುವನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚೇತರಿಸ್ಕೊಳ್ಳುವ ತೀರ್ಮಾನಕ್ಕೆ ಬಂದೆವು. ಎರಡು ಮಕ್ಕಳೊಂದಿಗೆ ೧೪ ದಿನಗಳು ನಮ್ಮನ್ನು ನಾವೇ ಮನೆಯಲ್ಲಿ ಸಂಪೂರ್ಣವಾಗಿ ಕೂಡಿಟ್ಟುಕೊಂಡೆವು. ಒಂದು ಕಾಲು ಹೊರಗೆ ಹೋಗಲಿಲ್ಲ, ಒಂದು ಕಾಲು ಒಳಗೆ ಬರಲಿಲ್ಲ. ಮಗ ೪.೫ ವರ್ಷದವ, ಮಗಳು ೨.೫ ವರ್ಷದವಳು..ಮಗನಿಗೆ ಹಬ್ಬಿರುವ ಸೋಂಕು ಮನೆಯಲ್ಲಿ ಸುಲಭವಾಗಿ ಎಲ್ಲರಿಗೂ ಹಬ್ಬುವ ಸಾಧ್ಯತೆ ಇದ್ದಿದ್ದರಿಂದ, ನಾವಿಬ್ಬರು ಯೋಚಿಸಿಕೊಂಡು, ಒಂದೊಂದು ಮಗುವನ್ನು ಒಬ್ಬೊಬ್ಬರು ನೋಡಿಕೊಳ್ಳುವ ಜವಾಬ್ಧಾರಿಯನ್ನು ಹಂಚಿಕೊಂಡೆವು. ಮನೆ ಎರಡು ಫ್ಲೋರಿನದಾದ್ದರಿಂದ, ಮಗನನ್ನು ಬಿಟ್ಟುಕೊಂಡು ನಾನು ಮೇಲ್ಗಡೆ  ಒಂದು ರೂಮಿನಲ್ಲಿ ಇರಲಾರಂಭಿಸಿದೆ. ಕೆಳಗಡೆ ಫ್ಲೋರಿನಲ್ಲಿ ಸಣ್ಣದೊಂದು ಕೋಣೆಯಲ್ಲಿ, ನನ್ನ ಗಂಡ ಮತ್ತು ಸಣ್ಣ ಮಗಳು ಇರುತ್ತಿದ್ದರು. ಮಕ್ಕಳಿಬ್ಬರೂ ತುಂಬಾ ಸಣ್ಣವರಾಗಿದ್ದರಿಂದ, ಅವರನ್ನು ಒಬ್ಬರಿಗೊಬ್ಬರು ಸಂಪರ್ಕದಲ್ಲಿಡದೇ ಕಾಪಾಡಿಕೊಳ್ಳುವುದು ಚ್ಯಾಲೆಂಜಿಂಗ್ ಇತ್ತು. ನಾವೆಂತೂ ಮಹಡಿಯ ಎರಡೂ ಬದಿಗೂ ಗೇಟ್ ಮಾದರಿಯಲ್ಲಿ ತಡೆಯನ್ನು ಹಾಕಿಟ್ಟಿದ್ದೆವು. ಏನೇ ಮಾತು ಕಥೆ ಒಂದಷ್ಟು ಹಾಡು ಆಟ ಇದ್ದರೂ ಎಲ್ಲವೂ ದೂರದಿಂದ ನಿಂತಲ್ಲಿಯೇ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಆದರೆ ಆ ಬೇರ್ಪಡಿಕೆ ಮಾತ್ರ ಯಾರ್ಯಾರಿಗೂ ಬೇಡ..!

ಮಗನನ್ನು ಒಂದೇ ಕೊಣೆಯಲ್ಲಿ ಎಂಟು ದಿನಗಳ ಕಾಲ ಬಿಟ್ಟುಕೊಂಡಿದ್ದೆ. ಆ ಎಂಟು ದಿನಗಳ ಮಗನ ಆರೋಗ್ಯ ಪರಿಸ್ಥಿತಿ ಮಾತ್ರ ಭಾರೀ ಭಯಾನಕವಾಗಿತ್ತು..ಒಂದು ವಾಕ್ಯ ಹೇಳಿ ಮುಗಿಸಲಿಕ್ಕೆ, ಅವನು ಕಮ್ಮಿ ಎಂದರೂ ಹತ್ತು ಸಲ ಕೆಮ್ಮುತ್ತಿದ್ದ. ರಾತ್ರಿ ಹಗಲು ನಿದ್ದೆ ಇರುತ್ತಿರಲಿಲ್ಲ. ಜ್ವರ ಬಂದರೆಂತೂ ಸುಮಾರಿಗೆ ಯಾವ ಪ್ಯಾರಾಸೆಟಮೋಲ್ ಹಾಕಿದರೂ ಪರಿಣಾಮ ಕಾಣಿಸುತ್ತಲೇ ಇರುತ್ತಿರಲಿಲ್ಲ. ಐಬುಪ್ರೊಫೇನ್ ಬಳಸುವಂತಿರಲಿಲ್ಲ. ೪೦ ಡಿಗ್ರಿ ಫ್ಯಾರನೇಟ್ ವರೆಗೆ ಏರಿಕೊಂಡೇ ಇರುತ್ತಿತ್ತು. ಆತಂಕ ಅಗಾಧವಾಗಿರುತ್ತಿತ್ತು. ಬಿಸಿನೀರು, ಕಷಾಯ ಎಲ್ಲವೂ ನಿರಂತರವಾಗಿ ನಡೆದೇ ಇತ್ತು. ಜೇಷ್ಠಮಧು, ಇದ್ದಷ್ಟು ಕಲ್ಲುಸಕ್ಕರೆ ಎಲ್ಲವೂ ನೀಡುತ್ತಿದ್ದೆವು. ಮಗ ತುಂಬಾ  ಸಣ್ಣವನಾದ್ದರಿಂದ ಇಡೀ ದಿನ ಅವನಿಗೆ ಮಾಸ್ಕ್ ಹಾಕಿಸಿ ಇಡಲು ಆಗುತ್ತಿರಲಿಲ್ಲ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಕೆಮ್ಮುವಾಗ ಸೀನುವಾಗ ಕೈಯನ್ನು ಬಾಯಿಗೆ ಅಡ್ಡ ಹಿಡಿಯಬೇಕು ಎನ್ನುವುದನ್ನು ಸರಿಯಾಗಿ ಕಲಿತಿದ್ದ ಮಗ, ಬೈ ಡೀಫಾಲ್ಟ್ ಆಗಿ, ಕೆಮ್ಮು ಬಂದಾಗಲೆಲ್ಲ ಕೈ ಇಂದ ಬಾಯಿಗೆ ತಡೆ ಹಿಡಿಯುತ್ತಲೇ ಇರುತ್ತಿದ್ದ. ನಾನು ಮಾತ್ರ ಯಾವಾಗಲೂ ಮಾಸ್ಕ್ ಹಾಕಿಕೊಂಡೆ ಇರುತ್ತಿದ್ದೆ. ಪದೇ ಪದೇ ಕೈ ತೊಳೆಯುತ್ತಲೇ ಇರುವುದೇ ನಮ್ಮ ಕೆಲಸವಾಗಿತ್ತು. ಸತತ ಕೈ ಸ್ವಚ್ಚತೆಯಿಂದಾಗಿ ಕೈಯ ಚರ್ಮದ  ರೂಪವೇ ಬದಲಾಗಿ ಹೋಗಿತ್ತು. ಮಗನಿಗೆ ಡೈನೋಸಾರ್ ಟಾಯ್ಗಳು ಪ್ರಿಯವಾಗಿದ್ದರಿಂದ, ಅವುಗಳನ್ನು ವಾಷಿಂಗ್ ಸ್ಟೇಷನ್ ಲಿ ತೊಳೆಸುವುದು ಎಂಬಿತ್ಯಾದಿ ಕಾಲ್ಪನಿಕ ಆಟಗಳನ್ನು ಆಡಿಸುತ್ತಿದ್ದೆ. ಅದೇ ನೆಪದಲ್ಲಿ ಅವನ ಕೈ ಕ್ಲೀನ್ ಆಗುತ್ತಿತ್ತು. ದಿನಕ್ಕೆ ಎರಡು ಮೂರು ಸಾರಿ ನಮ್ಮ ಉಡುಗೆಗಳನ್ನು ಬದಲಾಯಿಸಿಕೊಂಡು ಡಿಸ್ಇಂಫೆಕ್ಟಾನ್ಟ್ ಹಾಕಿ ತೊಳೆದು ತೊಳೆದು ಇಡುತ್ತಿದ್ದೆ.. ಬೆಡ್ ಶೀಟು ದಿನಂಪ್ರತಿ.. ನಾವು ಮುಟ್ಟುವ ವಸ್ತುಗಳನ್ನು, ನೆಲವನ್ನು, ಎಲ್ಲವನ್ನು ದಿನಕ್ಕೆರಡು ಬಾರಿ ಒರೆಸಿ ಕ್ಲೀನ್ ಮಾಡುತ್ತಿದ್ದೆ..ಅವನು ಪ್ರತಿಸಲ ಬಾತ್ರೂಮ್ ಟಾಯ್ಲೆಟ್ಗೆ ಹೋಗಿ ಬಂದಾಗಲೂ, ನಾನು ಇಡೀ ಬಾತ್ರೂಮನ್ನೂ ಫಿನಾಯಿಲ್ ಹಾಕಿ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದೆ..ಊಟ, ತಿಂಡಿ, ಅಡುಗೆ, ಮಧ್ಯೆ ಮಧ್ಯೆ ಮಕ್ಕಳಿಗೆ  ಕೊಡಲು ತಿಂಡಿ ಎಲ್ಲವನ್ನು ಗಂಡನೇ ಮಾಡಿ ತಂದು ಬಾಗಿಲ ಬಳಿ ಇಟ್ಟು ಹೋಗುತ್ತಿದ್ದ. ನಾವು ಒಳಗಡೆ ತೆಗೆದುಕೊಂಡು ತಿಂದು ತೊಳೆದು ಕೊಟ್ಟರೂ ಮತ್ತೊಮ್ಮೆ ಅವೆಲ್ಲ ಪಾತ್ರೆಗಳನ್ನು ಅವನು ತೊಳೆದಿಟ್ಟುಕೊಳ್ಳಬೇಕಾಗುತ್ತಿತ್ತು. ಮಕ್ಕಳೆದುರು ಆತಂಕದ ವಿಚಾರ ಮಾತನಾಡುತ್ತಿರಲಿಲ್ಲ.. ಮಕ್ಕಳಿಗೆ ತಾಳ್ಮೆಯಿಂದ ಕುಳಿತು ತಿಳಿಸಿ ಹೇಳುವುದು ಸಹಕಾರಿ ಆಗುತ್ತಿತ್ತು.. ಮನೆಗೆ ಬೇಕಾದ ಸಾಮಾನುಗಳನ್ನು ತರಲು ಕೂಡ ಹೊರಗೆ ಹೋಗುವಂತಿರಲಿಲ್ಲ. ಆತ್ಮೀಯ ಗೆಳೆಯರು ಈ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದರು. ಪಟ್ಟಿ ಮಾಡಿ ಆರ್ಡರ್ ಮಾಡಿದ ಸಾಮಾನುಗಳನ್ನು ಮನೆಬಾಗಿಲಿಗೆ ತಂದು ಇಟ್ಟು ಹೋಗುತ್ತಿದ್ದರು. ಅವರು ದಾಟಿದ ಮೇಲೆ ನಾವು ಬಾಗಿಲು ತೆಗೆದು ಚೀಲಗಳನ್ನು ಒಳಗೆ ತೆಗೆದಿಟ್ಟುಕೊಳ್ಳುತ್ತಿದ್ದೆವು.. ಈ ಸಮಯದಲ್ಲಿ ನನಗೂ ಸೋಂಕು ತಾಗದೇ ಇರುವುದು ಅಸಂಭವವಿತ್ತು. ನನಗೆ ಸ್ವಲ್ಪ ಕೆಮ್ಮು, ಅಸಾಧ್ಯ ಮೈಕೈ ನೋವು ಪ್ರಾರಂಭವಾಗಿತ್ತು. ನೋವೆಂದರೆ ಅದು ಸಾಮಾನ್ಯ ವೇದನೆಯಾಗಿರಲಿಲ್ಲ. ತಿಂಗಳ ಮುಟ್ಟಿನ ಸಮಯದಲ್ಲಿ ನಮಗೆ ಎಷ್ಟು ಸೊಂಟ ಮತ್ತು ಕಾಲು ನೋವು ಬರುತ್ತದೆಯೋ, ಅದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು..! ಬಿಸಿನೀರು ಬಳಕೆ ಸ್ವಲ್ಪ ಹಿತ ಕೊಡುತ್ತಿತ್ತು. ಮಕ್ಕಳಿಗೆ ಗ್ಯಾಡ್ಜೆಟ್ಸ್ ಸ್ಕ್ರೀನಿಂಗ್ ಅಭ್ಯಾಸ ಮಾಡಿಸದ ಕಾರಣ, ಮಗನಿಗೆ ಅವನ ತೊಂದರೆಯನ್ನು ಮರೆಸಿ ಹೇಗಾದರೂ ಸಮಯ ಸಾಗಿಸಬೇಕಾಗುತ್ತಿತ್ತು.. ರೂಮಿನ ಕಿಟಕಿಯಿಂದ ಬೈನೋಕ್ಯುಲರ್ ಹಿಡಿದು ಹಕ್ಕಿಗಳ ಚಲನವಲನಗಳನ್ನು ಗಮನಿಸುತ್ತಾ ಸಮಯ ಸಾಗಿ ಸುತ್ತಿದ್ದೆವು. ತಂಗಿಯ ನೆನಪಾದರೂ, ತನ್ನಿಂದ ತಂಗಿಗೆ ಇಷ್ಟು ಜಾಸ್ತಿ ಕೆಮ್ಮು ಬರುವುದು ಬೇಡ ಎಂದು ತನಗೆ ತಾನೇ ಸಮಾಧಾನ ತಂದುಕೊಳ್ಳುತ್ತಿದ್ದ ಪುಟ್ಟ ಮಗ..ನಾವು ಇಬ್ಬರೂ ವೃತ್ತಿಯಲ್ಲಿರುವವರಾದ್ದರಿಂದ ಕೆಲಸವೂ ವಿಪರಿಮೀತ ಬಾಕಿ ಇತ್ತು. ಇಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ೧೪ ದಿನಗಳ ಕಾಲ ರಜೆ ಸಿಗುತ್ತದೆ. ನಮಗೆ ಎಲ್ಲ ರಜೆಯನ್ನು ಒಟ್ಟಿಗೆ ಹಾಕಿ ಖಾಲಿ ಮಾಡಿಕೊಳ್ಳುವಂತಿರಲಿಲ್ಲ. ಮನೆಯಲ್ಲಿ ಯಾರಿಗೆ ಎಷ್ಟರ ಮಟ್ಟಿಗೆ ಈ ಖಾಯಿಲೆ ಗಂಭೀರತೆ ತೋರುವುದು ಎಂಬುದನ್ನು ಮುಂಚೆನೇ ಊಹೆ ಮಾಡಲು ಸಾಧ್ಯವಿಲ್ಲವಲ್ಲ, ಹಾಗಾಗಿ ಒಂದು ವಾರ ಹಾಗೋ ಹೀಗೋ ಮಗನನ್ನು ರೂಮಿನಲ್ಲಿ ಸಂಭಾಳಿಸಿಕೊಂಡವಳು ಆಮೇಲೆ ಅವನಿಗೆ ಸ್ವಲ್ಪ ಕಡಿಮೆಯಾಗುತ್ತಿರುವ ಲಕ್ಷಣ ಸಿಕ್ಕಾಗ ಎಲ್ಲರೂ ಕೆಳಗಡೆ ಒಟ್ಟಿಗೆ ಇರಲಾರಂಭಿಸಿದೆವು. ಮಕ್ಕಳನ್ನು ಆಡಲು ಬಿಟ್ಟುಕೊಂಡು ಅಲ್ಪಸ್ವಲ್ಪ ಕೆಲಸ ಮಾಡಿ ಮುಗಿಸಿಕೊಳ್ಳುತ್ತಿದ್ದೆವು.. ಮಕ್ಕಳು ನಾವು ಎಲ್ಲಾ ಪರಸ್ಪರ ಒಟ್ಟಿಗಿರುವುದು ಅವರಲ್ಲಿ ಖುಷಿಯ ಹಾರ್ಮೋನ್ಸ್ ಹೆಚ್ಚುತ್ತಿತ್ತು..

ಮಗಳಿಗೆ ಇಲ್ಲಿ ಇಂಗ್ಲಾಂಡಿನಲ್ಲಿ ಆಗಿನ್ನೂ ಕೊರೋನಾ ಹರಡುತ್ತಿರುವ ಕಾಲದಲ್ಲೇ ಒಮ್ಮೆ ಸಾಕಷ್ಟು ಕೆಮ್ಮು ಬಂದಿತ್ತು. ನಮಗೆ ತಿಳಿಯುವಷ್ಟರಲ್ಲೇ ಅವಳು ಕೊರೋನಾಕ್ಕೆ ಇಮ್ಮ್ಯೂನ್ ಆಗಿ ಹುಷಾರಾಗಿದ್ದಳು ಎಂದು ಈಗ ನಮಗೆ ಅನಿಸುತ್ತಿದೆ. ಮನೆಮಂದಿಯ ಎಲ್ಲರ ಪ್ರಾರ್ಥನೆ ನಮ್ಮ ಜೊತೆಗಿದೆ.. ನಮಗೂ ಕೂಡ ಅಷ್ಟೇ, ಪ್ರತಿದಿನದ ಬೆಳಗಿಗೆ ಗ್ರಾಟಿಟ್ಯುಡ್ ಭಾವವಿದೆ. ಸಧ್ಯಕ್ಕೆ ಮಗನ ಆರೋಗ್ಯ ಸುಧಾರಿಸಿದೆ. ನಾವೂ ಕೂಡ ಸುಧಾರಿಸಿದ್ದೇವೆ. ಮನೆಯಿಂದಲೇ ನಮ್ಮ ಕೆಲಸ ನಡೆದಿದೆ..ಎಲ್ಲರಿಗೂ ಒಂದೇ ಮಾದರಿಯ ತೊಂದರೆ ಎಂದು ಹೇಳಲಾಗದು. ನನ್ನ ಕೆಲವು ಫ್ರೆಂಡ್ಸ್ ಗಳ ಪೈಕಿ ಕೆಲವರಿಗೆ ಕೆಮ್ಮಾದರೆ, ಕೆಲವರಿಗೆ ಕೇವಲ ಜ್ವರ, ಕೆಲವರಿಗೆ ಮೈಕೈ ನೋವಾದರೆ ಕೆಲವರಿಗೆ ಉಸಿರಾಡಲಿಕ್ಕೆ ಕಷ್ಟವಾಗಿ ಕೃತಕ ಆಮ್ಲಜನಕದ ವ್ಯವಸ್ಥೆಯವರೆಗಿನ ಗಂಭೀರತೆ.. ಎಲ್ಲರದ್ದೂ ಹೋರಾಟ..ಆತ್ಮಸ್ಥೈರ್ಯ ಮತ್ತು ಉತ್ತಮ ಆರೋಗ್ಯ ಸ್ಥಿತಿ ಇದ್ದರೆ ಖಂಡಿತ ಹೋರಾಟ ಯಶಸ್ವಿಯಾಗುತ್ತದೆ. ಇನ್ನೂ ಕೂಡ ಇಲ್ಲಿನ ಎಲ್ಲ ದುಸ್ಥಿತಿ ಪ್ರತಿನಿತ್ಯ ನ್ಯೂಸ್ ನಲ್ಲಿ ಕೇಳಿ ಕಾಣುತ್ತಿದ್ದೇವೆ.. ಗುಣವಾದವರ ಸಂಖ್ಯೆ, ಸತ್ತವರ ಸಂಖ್ಯೆ ಯಾವುದನ್ನೂ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ.. ಮಾಸ್ಕ್ ಹಾಕಿಕೊಳ್ಳುವುದು, ಪದೇ ಪದೇ ಕೈ ತೊಳೆಯುತ್ತಿರುವುದು ಅತ್ಯಂತ ಪ್ರಯೋಜನವಾದ ಕೆಲಸಗಳು, ಅವೆರಡು ನಮ್ಮ ದಿನಚರಿಯಲ್ಲಿ ಈಗ ಮಿಳಿತಗೊಂಡು ಹೋಗಿದೆ. ಇವ್ಯಾವುವೂ ಈಗ ಸಂಕಟ ಅಥವಾ ತೊಂದರೆ ಎಂದು ಎನಿಸುವುದಿಲ್ಲ. ಮೂಗು, ಮುಖ, ಬಾಯಿ ಕೈ ಸ್ವಚ್ಛವಾಗಿರಿಸಿಕೊಳ್ಳುವುದು ಕೇವಲ ಕೊರೋನಾ ಒಂದೇ ಅಲ್ಲ ಯಾವುದೇ ರೀತಿಯ ವೈರಸ್ ಗಳಿಂದ ಉಂಟಾಗುವ ಸಣ್ಣ ದೊಡ್ಡ ಖಾಯಿಲೆಗೂ ಉತ್ತಮ ಶಮನ..."

ಸಂಬಂಧಿಯೊಬ್ಬರು ನನಗೆ ಮಾತನಾಡಿದ, ಹಂಚಿಕೊಂಡ ವಿಷಯವನ್ನು ಯಥಾವತ್ತಾಗಿ ಇಲ್ಲಿ ಬರೆದಿದ್ದೇನೆ. ಈಗ ಯಾರು ಇವರು, ಏನು ಎತ್ತ ಎಂಬುದು ಇಲ್ಲಿ ಮುಖ್ಯವಲ್ಲ. ಕೊರೋನಾ ಎಂಬ ಮಾರಕ ಖಾಯಿಲೆಯ ಹರಡುವಿಕೆಯ ಆತಂಕದ ಸಂದರ್ಭದಲ್ಲಿ, ಹಂಚಿಕೊಂಡ  ಒಬ್ಬೊಬ್ಬರ ಒಂದೊಂದು ಅನುಭವವೂ, ಒಂದೊಂದು ಮಾಹಿತಿಯೂ ಅತೀಮುಖ್ಯ ಮತ್ತು ಉಪಯುಕ್ತವಾಗುತ್ತದೆ. ಇಲ್ಲಿ ಮೇಲಿನ ಅನುಭವವನ್ನು ಓದಿ, ನಮಗೂ ಇದೇ ರೀತಿ ಆಗುತ್ತದೆ ಎಂಬ ಆತಂಕ, ಗಾಬರಿ ಪಡಬೇಕೆಂದಲ್ಲ, ಅಸಡ್ಡೆ ಸಲ್ಲ ಎಂಬುದು ನನ್ನ ಈ ಬರಹದ ಉದ್ದೇಶ. ಸಮರ್ಪಕ ಮಾಹಿತಿ, ಮೆಡಿಕಲ್ ವ್ಯವಸ್ಥೆ, ಪರಸ್ಪರ ಸಹಕಾರ, ಹೊಂದಾಣಿಕೆ, ಜೊತೆಗೆ ಅಗಾಧವಾದ ಆತ್ಮಸ್ಥೈರ್ಯದ ಇದ್ದರೂ, ಅನುಭವಿಸಬೇಕಾದ ನೋವು, ಆತಂಕ ಎಂಬುದು ಕೂಡ ಅಷ್ಟೇ ಪಾರದರ್ಶಕ ಸತ್ಯ. ಕೊರೋನಾ ಎಂಬುದು ಈಗ ಒಂದು ವೈಯುಕ್ತಿಕ ಆರೋಗ್ಯ ಸಮಸ್ಯೆಯಲ್ಲ..ಸೋಂಕು ತಾಗಿದರೆ ನಮ್ಮ ದೇಹ ಹೇಗೆ ಹೋರಾಡುತ್ತದೆ ಎಂಬುದರ ಖಾತ್ರಿ ನಮಗಿಲ್ಲ, ಅದು ನಮ್ಮ ನಮ್ಮ ನಿರೋಧಕ ಶಕ್ತಿಯ ಮೇಲೆ ನಿರ್ಧರಿತ..  ಆದರೆ  ಸೋಂಕು ಹರಡುವಲ್ಲಿ ನಮ್ಮ ಕೊಡುಗೆ ಇರದಿರಲಿ..🙏

ಭಾನುವಾರ, ಮೇ 10, 2020

ತಾಯಂದಿರ ದಿನವಿದು

ನನ್ನ ಅಮ್ಮುಮ್ಮ ನಿಗೆ ಈಗ ೯೪ ವರ್ಷ. ಬಡತನ ಕಷ್ಟ ಕಾರ್ಪಣ್ಯಗಳನ್ನು ಜೀವನದುದ್ದಕ್ಕೂ ಪಡೆದು, ಸಹಿಸಿಕೊಂಡು ಬಂದವಳು ಅವಳು.. ಮನೆ ತುಂಬಾ ಮಕ್ಕಳು. ದೊಡ್ಡ ಮಗಳ ಬಾಳಂತನ ಮತ್ತು ಅಮ್ಮುಮ್ಮನ ಕಿರಿ ಮಗುವಿನ ಬಾಳಂತನ ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ನಡೆಯುವಂತಹ ಕಾಲದಲ್ಲಿ, ಪ್ರತಿಯೊಂದನ್ನೂ ಸಂಭಾಳಿಸಿದವಳು..ಕಷ್ಟಕರ ವ್ಯವಸಾಯ ದುಡಿಮೆ, ಆಸ್ತಿ ವ್ಯಾಜ್ಯ ಜಗಳಗಳ ನಡುವೆ ಗಂಡನೊಂದಿಗೆ ಸೂರಿಂದ ಸೂರಿಗೆ ದಾಟುತ್ತ, ಎರಡೇ ಎರಡು ಸೀರೆಯಲ್ಲಿ ತಾನು ಜೀವನ ಮಾಡಿಕೊಂಡು, ೪ ಅಂಗಿ ಚಡ್ಡಿ, ೨ ಲಂಗ ಗಳಲ್ಲಿ ಆರು ಜನ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿಕೊಂಡು ಬಂದ ಗಟ್ಟಿಗಿತ್ತಿ ನನ್ನ ಅಮ್ಮುಮ್ಮ.. ಆಗಿನ ಪರಿಸ್ಥಿತಿಯೇ ಹಾಗಿತ್ತು, ಎಲ್ಲರ ಹೊಟ್ಟೆಗೆ ಆಗುವಷ್ಟು ಊಟ ತಿಂಡಿ, ದನಕರಗಳ ಹೊಟ್ಟೆ ಹೊರೆಯುವ ಕೆಲಸ, ಇಷ್ಟರಲ್ಲೇ ದುಡಿಮೆ ಸರಿಯಾಗುತ್ತಿತ್ತು..ಮತ್ತೊಂದಷ್ಟು ಕಷ್ಟಪಟ್ಟು ಉಳಿಸಿಕೊಂಡ ದುಡ್ಡು, ವ್ಯಾಜ್ಯ ಕೋರ್ಟು ಕಚೇರಿ ಎಂದೇ ಕರಗುತ್ತಿತ್ತು..ಒಮ್ಮೆಯಂತೂ ಪೂಜ್ಯ ಶ್ರೀಧರ ಗುರುಗಳು ಮನೆ ಬಾಗಿಲಿಗೆ ಬಂದಾಗ, ಅವರಿಗೆ ದಾನ ನೀಡಲು ಧಾನ್ಯ, ಉತ್ತಮವಾದ ಹಣ್ಣು, ಸಿಹಿ ಅಪ್ಪಚ್ಚಿ  ಏನೂ ಇರದಿದ್ದಾಗ ಕೇವಲ ಬೆಲ್ಲ ಮತ್ತು ಒಂದು ಹಿಡಿ ಅರಳುಕಾಳು ಕೊಟ್ಟು, ಕಾಲಿಗೆ ನಮಸ್ಕರಿಸಿ ಕಳುಹಿಸಿದ ಪ್ರಸಂಗವನ್ನು ಅಮ್ಮುಮ್ಮ ಇವತ್ತಿಗೂ ನೆನಪಿಸಿಕೊಳ್ಳುತ್ತಾಳೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೂ ಆಗದ ಪರಿಸ್ಥಿತಿ ಅವರದ್ದು.. ಮಕ್ಕಳೆಲ್ಲಾ ಎಲ್ಲೆಲ್ಲೋ, ಯಾರ್ಯಾರದ್ದೋ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ವಾರಾನ್ನದ ಕೃಪೆಯ ಮೇರೆಗೆ ವಿದ್ಯಾಭ್ಯಾಸ ಮುಗಿಸಿಕೊಂಡರು. ಮಕ್ಕಳು ಮತ್ತು ತಾಯಿಯ ಅಗಲಿಕೆ ಆಗಿನ ಅನಿವಾರ್ಯತೆಯಾಗಿದ್ದರೂ, ಈಗ ಮಕ್ಕಳೆಲ್ಲರೂ ಒಂದು ಹಂತಕ್ಕೆ ದೊಡ್ಡ ದೊಡ್ಡ ಹುದ್ದೆಯ ವರೆಗೆ ತಲುಪಿ, ನಾಲ್ಕು ಜನರು ಖುಷಿ ಪಡುವಷ್ಟರ ಮಟ್ಟಿನ ಜೀವನ ನಡೆಸುತ್ತಿರುವುದರಲ್ಲಿ ಅವಳ ಪಾಲಿನ ಮಮತೆ ಮತ್ತು ತ್ಯಾಗ ದ ಕೊಡುಗೆ ಸುಮಾರಷ್ಟಿದೆ..ವರ್ಷಗಳು ಉರುಳಿದಂತೆ ಅಜ್ಜ ಪ್ಯಾರಾಲಿಸಿಸ್ ಖಾಯಿಲೆಗೆ ತುತ್ತಾಗಿ ೧೪ ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಮಲಗಿದ, ಊಟ ತಿಂಡಿ ಪಾಯಿಖಾನೆ ಎಲ್ಲವೂ ಮಲಗಿದಲ್ಲಿಯೇ ವ್ಯವಸ್ಥೆ ಮಾಡಬೇಕಿತ್ತು.. ಅಂತಹ ಅನಿವಾರ್ಯತೆಯ ಪರಿಸ್ಥಿತಿಯಲ್ಲೂ, ಕಿಂಚಿತ್ತೂ ಬೇಸರಿಸದೆ ತನ್ನ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ, ಅಜ್ಜ ಸಾಯುವ ವರೆಗೂ ಮಾಡಿಕೊಂಡು ಬಂದ ಧೈರ್ಯವಂತೆ ಅಮ್ಮುಮ್ಮ..  ಅವಳ ಹೋರಾಟದ ಬದುಕಿನಲ್ಲಿ ಬಂದಪ್ಪಳಿಸಿದ ಆಘಾತಗಳು ಒಂದೆರೆಡಲ್ಲ.. ೭೫ ನೇ ಹಿರಿಯ ವಯಸ್ಸಿಗೆ, ಅವಳಿಗೆ ಕರುಳಿನ ಕ್ಯಾನ್ಸರ್ ಖಾಯಿಲೆ ಗುರುತಿಸಲ್ಪಟ್ಟಿತು. ಆಪರೇಷನ್ ನಡೆದರೂ, ಕ್ಯಾನ್ಸರ್ ಎಂಬ ಪದದ ಅರಿವಿಲ್ಲದೆ, "ಏನೋ ಹೊಟ್ಟೆಯ ತೊಂದರೆಗೆ ಸಣ್ಣ ಆಪರೇಷನ್ ಆಗಿದೆ, ನೀ ಹುಷಾರಾಗ್ತೇ ಬೇಗ.. " ಎಂಬ ಮಕ್ಕಳ ಮನೋಸ್ಥೈರ್ಯದ ಬಲದ ಮೇಲೆಯೇ, ಮುಂಚಿನಕಿಂತಲೂ ಗಟ್ಟಿಯಾಗಿಬಿಟ್ಟಳು.. ಕ್ಯಾನ್ಸರ್ ಕಣಗಳಿಗೆ ಮತ್ತೆ ಅವಳನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ..ಕೊನೆಯ ಮಗ, ನಲ್ವತ್ತನೇ ವಯಸ್ಸಿನಲ್ಲಿಯೇ ಅನಾರೋಗ್ಯದಿಂದ ಮೃತಗೊಂಡಾಗ, ಅದನ್ನೂ ಹೃದಯ ಗಟ್ಟಿ ಮಾಡಿಕೊಂಡು ತಡೆದುಕೊಂಡವಳು ಆ ತಾಯಿ. ಎಲ್ಲ ಮಕ್ಕಳ ಕಷ್ಟಗಳಿಗೂ ಬೇಕೆಂದಾಗ ಸಾಂತ್ವಾನ, ಧೈರ್ಯ ನೀಡಿ, ತನ್ನ ಕೈಲಾದ ಸಹಾಯ ಮಾಡುತ್ತಾ ಬಂದ ಅದಮ್ಯ ಶಕ್ತಿ .. 

ಅಮ್ಮುಮ್ಮನ ಕಲಿಕೆಯ ದಾಹ ಅಮೋಘವಾದದ್ದು..! ಶಾಲೆಗೆ ಹೋಗಿ ಓದು ಬರಹ ಕಲಿತವಳಲ್ಲ ಅವಳು. ಆದರೆ ಮಕ್ಕಳು ಅಕ್ಷರ ಕಲಿಯುವಾಗ ಅವರ ಜೊತೆ ಕೂತು ಅಲ್ಪ ಸ್ವಲ್ಪ ಅ, ಆ, ಇ, ಈ ಕಲಿತು, ಕಡೆಗೆ ಲೆಕ್ಕಪತ್ರದ ಕಾಗದಕ್ಕೆ 'ಸಾವಿತ್ರಮ್ಮ' ಎಂದು ತನ್ನ ಸಹಿ ಬರೆಯುವಷ್ಟರ ಮಟ್ಟಿಗೆ ಅಕ್ಷರ ಕಲಿತ ಸಾಧನೆ ಅವಳದ್ದು. ಇತ್ತೀಚಿಗೆ ಅಂದ್ರೆ ಹೆಚ್ಚು ಕಮ್ಮಿ, ಕಳೆದ ವರ್ಷದ ವರೆಗೂ, ಕನ್ನಡಕವನ್ನೇರಿಸಿ ಅಕ್ಷರಗಳನ್ನು ಕೂಡಿಸಿ ಕೂಡಿಸಿ ದಿನನಿತ್ಯದ ಪೇಪರ್ರನ್ನು ಓದಿ, ಎಲ್ಲಾ ಸುದ್ದಿ ಹೀರಿಕೊಂಡು ಅದರ ಬಗ್ಗೆ ಮಕ್ಕಳೊಡನೆ ಕೂತು ಮಾತನಾಡುವ ಪರಿಯೇ ನಮಗೆ ಒಂದು ಬಗೆಯ ಖುಷಿ.. ತೋಟಕ್ಕೆಲ್ಲ ಓಡಾಡುವಷ್ಟು ಶಕ್ತಿ ಇರುವ ತನಕ, ತಾನೇ ಖುದ್ದಾಗಿ ಹೋಗಿ, ಗೊತ್ತಿರುವ ಬೇರು ನಾರುಗಳನ್ನು ಕಿತ್ತು ತಂದುಕೊಂಡು ಕಷಾಯ ಮಾಡಿಕೊಂಡು, ಅದರಲ್ಲೇ ಸಣ್ಣ ಪುಟ್ಟ ಜ್ವರ ಕೆಮ್ಮು ಥಂಡಿಯನ್ನು ಹೆಸರಿಲ್ಲದಂತೆ ಜಯಿಸಿಕೊಳ್ಳುವವಳು.. ಈಗ ವಯೋಮಾನಕ್ಕೆ ತಕ್ಕಂತೆ ದೇಹ ಅಶಕ್ತವಾಗುತ್ತಿದೆ, ನಿದ್ದೆ ಬರುವುದಿಲ್ಲ, ಮೈ ಕೈ ನೋವಿನ ನರಳಾಟ.. ಅಷ್ಟಿದ್ದರೂ ಇವತ್ತಿಗೂ ಬೆಳಿಗ್ಗೆ ಬೇಗನೆ ಎದ್ದು, ತಿಂಡಿ ತಿಂದು, ತನ್ನ ತಟ್ಟೆ, ಬಟ್ಟೆ ತೊಳೆದುಕೊಂಡು, ಮಂದಗತಿಯಲ್ಲೇ ಆದರೂ ಅಲ್ಪ ಸ್ವಲ್ಪ ಮನೆಯೊಳಗೆಯೇ ಗೋಡೆಗಳ ಆಧಾರ ಹಿಡಿದು, ವಾಕಿಂಗ್ ಮುಗಿಸಿ, ನರಗಳೆದ್ದ ಕೈಯಿಂದ ದೀಪಕ್ಕೆ ಬತ್ತಿ ಹೊಸೆದು, ಹೂವು ತೆಗೆದುಕೊಂಡು ಪಕ್ಕದಲ್ಲಿರುವ ದೇವಸ್ಥಾನಕ್ಕೆ ಹೋಗಿ ನೀಲಕಂಠೇಶ್ವರನಿಗೆ ಕೈ ಮುಗಿದು ಬರುವ ತನ್ನ ದಿನಚರಿಯನ್ನು ಸುಮಾರಾಗಿ  ತಪ್ಪಿಸುವುದಿಲ್ಲ..!

ಅಮ್ಮಮ್ಮನ ಬಗೆಗಿನ ವಿಷಯಗಳನ್ನು ಬರೆಯುತ್ತಾ ಹೋದರೆ, ಇವತ್ತಿಗೆ ಮುಗಿಯಲಿಕ್ಕಿಲ್ಲ.. ಚಿಕ್ಕಪ್ಪನ ಮನೆಯಲ್ಲಿರುವ ಅಮ್ಮಮ್ಮನನ್ನು ಪದೇ ಪದೇ ಹೋಗಿ ಮಾತನಾಡಿಸಿ ಪ್ರೀತಿ ಕೊಟ್ಟು-ತೆಗೆದುಕೊಳ್ಳುವ ನಿಯಮಿತ ಅಭ್ಯಾಸ ಅಪ್ಪಾಜಿ ಮತ್ತವನ ಸಹೋದರರಿಗಿದೆ..ನಾವು ಮೊಮ್ಮಕ್ಕಳು ಯಾರೇ ಊರಿಗೆ ಬಂದರೂ ಒಂದು ಗಳಿಗೆ ಮಟ್ಟಿಗೆ ಆದರೂ ಅವಳಿರುವಲ್ಲಿಗೆ ಹೋಗಿ, ಅವಳಿಗೆ ಕಿವಿ ಕೇಳದಿದ್ದರೂ ಹೋಗಿ ಮಾತನಾಡಿಸಿ ಬರದಿದ್ದರೆ ನಮಗೆ ಸಮಾಧಾನವಿಲ್ಲ..ಆ ಮಟ್ಟಿಗೆ ಅಮ್ಮುಮ್ಮ ಅದೃಷ್ಟವಂತೆ..ಅಷ್ಟು ಬಾಂಧವ್ಯವನ್ನು ಅವಳು ನಮಗೆ ನಮ್ಮ ಬಾಲ್ಯದಿಂದಲೂ ಕಟ್ಟಿಟ್ಟಿರುವುದೇ ಅದಕ್ಕೆ ಕಾರಣ! ಕಳೆದ ವಾರದಿಂದ ವಯೋಮಾನಕ್ಕೆ ತಕ್ಕಂತೆ ತುಸು ಹೆಚ್ಚೇ ಹುಷಾರಿರಲಿಲ್ಲ ಅಮ್ಮಮ್ಮನಿಗೆ. ಮಾಣಿ (ದೊಡ್ಡಪ್ಪ), ರಾಮು (ಅಪ್ಪಾಜಿ), ನಾಣು (ಚಿಕ್ಕಪ್ಪ) ಎಂದೆಲ್ಲ ತನ್ನ ಮಕ್ಕಳ ಕನವರಿಕೆ.. ಬೇಸಿಗೆಯ ಧಗೆ, ಯಾರನ್ನೂ ಭೇಟಿಯಾಗಲಾರದಂತಹ ಕೊರೋನಾ ಲಾಕ್ ಡೌನ್ ನ ಬಂಧನ ಎಲ್ಲವೂ ಅಮ್ಮಮ್ಮನನ್ನು ತುಸು ಕುಗ್ಗಿಸಿತ್ತು.. ಈ ಕಡೆಯಿಂದ ಅವಳ ಮಕ್ಕಳ ಮನಸ್ಸು ಕೂಡ ಹಪಹಪಿಸದೆಯೇ ಇರುತ್ತದೆಯೇ? ಪರ್ಮಿಷನ್ ಪಡೆದು, ಜನರು ಓಡಾಡಲು ನೀಡಿದ ಸಮಯದ ಗಡುವಿನ ಮಧ್ಯೆಯೇ ಎಲ್ಲರೂ ಹೋಗಿ ಅಮ್ಮಮ್ಮನನ್ನು ಭೇಟಿಯಾಗಿದ್ದಾಯಿತು.. ಅಮ್ಮಮ್ಮಂಗೆ ಕಣ್ಣು, ಕಿವಿ ಎರಡೂ ಮಂದವಾಗಿದೆ, ಆದರೆ ಬುದ್ಧಿ ಮಾತ್ರ ಅಷ್ಟೇ ಚುರುಕು..ಮಕ್ಕಳ ಕಂಡು ಅವಳಿಗಾದ ಸಂತೋಷ-ದುಃಖದ ಭಾವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ..ಅವಳ ಆ ಅಳುವಿನಲ್ಲೂ ಅಪರಿಮಿತ ಸಂತೋಷವಿತ್ತು..! ಹೊತ್ತು ಕಳೆಯಲು ಸಾಧ್ಯವಾಗದೆ, ಕಾಡುವ ಶಾರೀರಿಕ ಮಾನಸಿಕ ತೊಂದರೆ, ಮೈ ಕೈ ನೋವು, ಬಾರದ ನಿದ್ದೆಯ ಮಧ್ಯೆಯೂ ಕೂಡ ತನ್ನ ಜವಾಬ್ಧಾರಿಗಳದ್ದೇ ಆಲೋಚನೆ ಅವಳಿಗೆ..ತನಗೆ ತೋಟವನ್ನು ನೋಡಬೇಕು ಎನಿಸುತ್ತಿದೆ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡು, ಕಾರಿನಲ್ಲಿ ಹೋಗಿ, ತೋಟ ಇಳಿಯಲಾಗದಿದ್ದರೂ, ನಿಂತಲ್ಲಿಂದಲೇ ಭೂಮಿತಾಯಿಯನ್ನು, ತೋಟದ ಮಣ್ಣನ್ನು ಮುಟ್ಟಿ ನಮಸ್ಕರಿಸಿ ಬಂದಾಗಿದೆ ಅಮ್ಮುಮ್ಮ! ಅನಕ್ಷರಸ್ಥ ಅಮ್ಮುಮ್ಮ, ಅದೆಷ್ಟೋ ವರ್ಷಗಳ ಹಿಂದೆಯೇ, ತನ್ನ ಮರಣದ ನಂತರ, ತನ್ನ ದೇಹವನ್ನು ದಾನಕ್ಕೆ ಬರೆದು ಸಹಿ ಹಾಕಿಟ್ಟಿದ್ದಾಳೆ..! "ನಂಗೆ ಎಂತಾರು ಆದ್ರೆ, ನಿಂಗ ಅಳ್ತಾ ತಡ ಮಾಡ್ತಾ ಕೂರಡಿ, ಆಸ್ಪತ್ರಿಗ ಎಲ್ಲಿಗ ನೋಡಿ ಕಳ್ಸಿ ಈ ದೇಹನ ಮತ್ತೆ.." ಎಂದು ನಮಗೆ ನೆನಪು ಬೇರೆ ಮಾಡುವವಳು ಇವಳು..! "ಹಿಂದೆ ಪ್ಲೇಗ್ ಬಂದಂಗೆ ಈಗ ಅದೆಂತೋ ಜ್ವರ ಬೈಂದಡ, ವಯಸ್ಸಾದವು ಎಲ್ಲಾ ಓಡಾಡಾಂಗಿಲ್ಲೆ ಅಲ್ದಾ.." ಎಂದು ಇಂದಿನ ಆಗು ಹೋಗುಗಳ ಕುರಿತು ಮಕ್ಕಳೊಂದಿಗೆ ಹೇಳಿ ಕೇಳಿ ಮಾಡುವ ಅವಳಿಗೆ, ಮೊದಲಿಗೆ ಬರುವ ಯೋಚನೆಯಾದರೂ ಯಾವುದು? "ಮದ್ವೆ ಗಿದ್ವೆ ಆಪ ಹೆಣ್ಣು ಹುಡ್ರು ಕಥೆ ಎಂತದು.." ಎಂದು ತನ್ನ ಮೊಮ್ಮಕ್ಕಳ ಕುರಿತಾಗಿಯೇ ಆಲೋಚಿಸುತ್ತಾಳೆ ಅವಳು.. ಸೀರೆಯ ನಿರ್ವಹಣೆ ಅವಳಿಗೆ ಕಷ್ಟ ಎಂದು ನೈಟಿ ಅಭ್ಯಾಸ ಮಾಡಿಕೊಂಡಿರುವ ಅಮ್ಮುಮ್ಮ ಮೊನ್ನೆ ನನ್ನ ಬಳಿ, "ಅಮ್ಮಿ, ನನ್ ಈ ನೈಟಿ ಉದ್ದಕ್ಕಿದ್ದು, ಕಾಲಿಗೆ ಕಡ್ತು.. (ಕಾಲಿಗೆ ಸಿಕ್ಕು ತೊಂದರೆಯಾಗುತ್ತದೆ ಎಂದರ್ಥ), ಮೊಣಕಾಲ್ವರಿಗೆ ಬಪ್ಪಾನ್ಗೆ ನೈಟಿ ಮಾಡ್ಕೊಡು, ತೊಳ್ಕಳಕ್ಕೂ ಸುಲ್ಭ ನಂಗೆ, ನಿಂಗಳಂಗೆ ಗಿಡ್ಡ ಅಂಗಿ ಸ್ಟ್ಯಾಯ್ಲು ಆಗ್ತು ಹದ..? " ಎಂದು ತಮಾಷೆ ಬೇರೆ ಮಾಡುತ್ತಿದ್ದಳು.. ಕೇಳದ ಕಿವಿ, ತುಂಬಿದ ಮಂಜುಗಣ್ಣಿನಲ್ಲಿಯೇ ನನ್ನ ಅಕ್ಕನನ್ನು ಅಮೆರಿಕಕ್ಕೆ ಕಳಿಸಿದ್ದಳು ಅಮ್ಮುಮ್ಮ.. "ಸುಮಾ ಹುಡ್ರು ಅರಾಮಿಡ್ವಡ? ನಾ ವಾಪಸ್ ಬರವರಿಗೆ ಇರು ಹೇಳಿಕ್ ಹೊಯ್ದ ಸುಮಾ.. " ಎಂದು ಕಣ್ಣು ತುಂಬಿಕೊಂಡೇ ಅಕ್ಕನನ್ನು ನೆನೆಯುತ್ತಾಳೆ.. 'ಕಣ್ಣೀರು ಎಂಬುದು ಯಾವಾಗಲೂ ಬೇಸರವೇ ಎಂದಾಗಬೇಕಿಲ್ಲ, ಅದೂ ಕೂಡ, ಪ್ರೀತಿ ತೋರಿಸುವ ಒಂದು ಭಾವ'  ಎಂಬುದನ್ನು ತನ್ನ ಕಣ್ಣಲ್ಲೇ ತೋರಿಸಿ ಹೇಳುತ್ತಾಳೆ..ಹುಚ್ಚ್ ಅಮ್ಮುಮ್ಮ ನಮ್ಮನ್ನೂ ಅಳಿಸುತ್ತಾಳೆ..:) "ತಗ ಈ ಹಣ್ಣು ತಿನ್ನು ಗಟ್ಟಿಯಾಗ್ತೇ.." ಎಂದು ಅಪ್ಪಾಜಿ ಹಣ್ಣು ಬಿಡಿಸಿ ತಿನ್ನಲು ಕೊಟ್ಟರೆ, ಅದನ್ನು ಬಾಯಿಗೆ ಹಾಕಿಕೊಳ್ಳುತ್ತಲೇ, " ಹುಡ್ರಾ ಹಿಂದ್ಗಡೆ ಮಾಡಗೆ ಬಾಳೆ ಹಣ್ಣಿನ್ ಗೊನೆ ಇದ್ದು, ಎಲ್ರು ತಗಂಡ್ ಹೋಗ್ಕ್ಯಾನ್ಡ್ ತಿನ್ನಿ, ಮರ್ತಿಕ್ ಹೋಗಡಿ.." ಎಂದು ಹೇಳುವುದಕ್ಕೂ ಮರೆಯುವುದಿಲ್ಲ..

ಕಳೆದ ವಾರ, ಒಂದು ಬಾರಿ ಡ್ರಿಪ್ಸ್ ಹಾಕಿಸಿ ಬರಬೇಕಾಗುವುದೇನೋ ಎಂಬಷ್ಟು ಕಳೆಗುಂದಿದ್ದ ಅಮ್ಮುಮ್ಮ ಆವತ್ತು ಮಕ್ಕಳ ಕಂಡು ಮಾತನಾಡಿ ಮನಸ್ಸು ಹಗುರವಾದಂತೆಯೂ, ಮಕ್ಕಳ ಧೈರ್ಯಕ್ಕೆ, ಸಾಂತ್ವಾನಕ್ಕೆ, ಪ್ರೀತಿಗೆ ಸೋತು, ಮಾತ್ರೆ ಔಷಧಿಗಳನ್ನು ತೆಗೆದುಕೊಳ್ಳಲೊಪ್ಪಿಕೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾಳೆ..:) 

ನನ್ನ ಹಾರೈಕೆ ಇಷ್ಟೇ.. ನನ್ನ ಅಮ್ಮುಮ್ಮನಂತಹ ಅಮ್ಮ, ತನ್ನ ಅನಾರೋಗ್ಯದ ನಡುವೆಯೂ ಪ್ರತಿಫಲಾಕ್ಷೆಯಿಲ್ಲದೆ, ಮಕ್ಕಳಿಗಾಗಿ ಪ್ರತಿಯೊಂದನ್ನು ಮಾಡುವ ನನ್ನಮ್ಮನಂತಹ ಅಮ್ಮ, ಯಾವಾಗ ಏನು ಬೇಕಾದರೂ ನಿಸ್ಸಂಕೋಚವಾಗಿ ಹೇಳಿಕೊಳ್ಳಲು ಇರುವ ನನ್ನಕ್ಕನಂತಹ ಅಮ್ಮ,ಅತ್ತೆ ಎಂಬ ಮತ್ತೊಬ್ಬ ಅಮ್ಮ.. ಹೀಗೆ ನಮ್ಮ ಸುತ್ತಮುತ್ತಲೂ ತಮ್ಮ ಪ್ರತಿಕ್ಷಣದ ನಿಸ್ವಾರ್ಥ ಪ್ರೀತಿ, ತ್ಯಾಗ, ನಂಬಿಕೆ, ಕಾಳಜಿ, ಸಾಂತ್ವಾನ, ಧೈರ್ಯ ಮತ್ತು ತಮ್ಮ ಅದಮ್ಯ ಶಕ್ತಿಯನ್ನೂ ಮಕ್ಕಳಿಗಾಗಿ ಪೊರೆವ ಎಲ್ಲಾ ಅಮ್ಮಂದಿರಿಗೂ ಚಿಕ್ಕಪುಟ್ಟದಾದರೂ ಸರಿ ಅವರ ಮಟ್ಟಿಗಿನ ಸಂತೋಷ ಸಿಗುತ್ತಲೇ ಇರಲಿ..  ಎಲ್ಲಾ ಅಮ್ಮಂದಿರಿಗೂ "ಅಮ್ಮಂದಿರ ದಿನದ ಶುಭಾಶಯಗಳು.. "  

Happy Mother's Day !

ಗುರುವಾರ, ಏಪ್ರಿಲ್ 30, 2020

ಮದರಂಗಿ

ಅದೊಂದು ಹಬ್ಬದ ಮರುದಿನ ಮಾತ್ರ ಸ್ಕೂಲಿಗೆ  ರೆಡಿಯಾಗಿ ಹೋಗಲು ಭಾರೀ ಉತ್ಸಾಹ..ನಾನಂತೂ ಶಾಲೆಗೆ ಹೊರಡುವ ಸಮಯಕ್ಕಿಂತ ಸುಮಾರು ಮುಂಚೆನೇ ಬೆನ್ನಿಗೆ ಚೀಲ ಹೊತ್ತುಓಡಿಯಾಗಿರುತ್ತಿತ್ತು..ಸ್ಕೂಲಿನ ಕಾರಿಡಾರ್ ನಲ್ಲಿ ನಡೆಯುವಾಗಲೂ ಕಣ್ಣು ಆ ಕಡೆ ಈ ಕಡೆ ಏನೋ ಹುಡುಕುತ್ತ ನೋಡುತ್ತಾ ಹೋಗುವುದು..ಯಾವ ಹಬ್ಬವಪ್ಪ ಅದು, ಏನನ್ನು ಹುಡುಕುವುದು ಅಂತ ಕೇಳಿದ್ರ? ನಾಗರಪಂಚಮಿ ಹಬ್ಬದ ಮರುದಿನದ ಮದರಂಗಿ ಕೈಗಳು..! ಪ್ರತಿಸಲವೂ ಸ್ವಲ್ಪ ಮದರಂಗಿ ತಾಕಿದರೂ ಅಚ್ಚ ಕೆಂಪು ಬಣ್ಣದಿಂದ ರಂಗೇರುವ ಕೈಯನ್ನು, ಹತ್ತತ್ತು ಸಲ ನೋಡಿಕೊಳ್ತಾ, ಶಾಲೆಗೆ ಹೋಗುತ್ತಿದ್ದೆ. ಪಾಠಕ್ಕೂ ಮೊದಲು, ಊಟದ ಬ್ರೇಕು, ಕಡೆಗೆ ಸಂಜೆ ಮನೆಗೆ ಹೋಗುವ ಬೆಲ್ ಹೊಡೆದು ವಾಪಸು ಮನೆಗೆ ಹೊರಡುವ ಗಳಿಗೆಗೂ , ಯಾರ್ಯಾರ ಕೈ ಎಷ್ಟು ಕೆಂಪಾಗಿದೆ, ಏನೇನು ಡಿಸೈನ್ ಮಾಡಿಕೊಂಡು ಬಂದಿದ್ದಾರೆ ಅಂತೆಲ್ಲ ಒಬ್ಬರಿಗೊಬ್ಬರು  ತೋರಿಸಿಕೊಂಡು ಸಂಭ್ರಮ ಪಡುತ್ತಿದ್ದೆವು..



ನಾಗರಪಂಚಮಿ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪೂಜೆಯಾದರೂ ಮನೆಯಲ್ಲೇ ದೇವರ ಪೂಜೆ ಮಾಡಿ ನೈವೇದ್ಯಕ್ಕಿಡುತ್ತಿದ್ದರೇ ಹೊರತು ನಮ್ಮ ಮನೆಯಲ್ಲಿ ಹಾವಿನ ಹುತ್ತಕ್ಕೆ, ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವೇನೂ ಇರಲಿಲ್ಲ. .ನಮಗಂತೂ ನಾಗರ ಪೂಜೆ, ಸ್ವೀಟು-ಅಪ್ಪಚ್ಚಿ ಎನ್ನುವುದಕ್ಕಿಂತಲೂ ಇದು ಮದರಂಗಿ ಹಚ್ಚಿ ಕೈ ಕೆಂಪು ಮಾಡಿಕೊಳ್ಳುವ ಹಬ್ಬ ಎಂದೇ ಅನ್ನಿಸುತ್ತಿತ್ತು.ನಾಗರಪಂಚಮಿ ಹಬ್ಬಕ್ಕೆ ಅಮ್ಮ ನೈವೇದ್ಯಕ್ಕೆಂದು ಪಾಯ್ಸ ಚಿತ್ರಾನ್ನ, ಕೋಸಂಬರಿ ಎಲ್ಲ ಮಾಡುವುದರಲ್ಲಿ ಬ್ಯುಸಿ ಆಗಿದ್ದರೆ, ನಾವು ಮಾತ್ರ ಅವತ್ತಿನ ದಿನ ಸಂಜೆಗೆ ಕೈಗೆ ಹಚ್ಚಿಕೊಳ್ಳುವ ಮದರಂಗಿಯ ಯೋಚನೆಯಲ್ಲಿಯೇ ಮಗ್ನವಾಗಿರುತ್ತಿದ್ದೆವು.. ಮದರಂಗಿ ಎನ್ನುವುದು, ಈಗಿನಂತೆ ಮೆಹಂದಿ ಕೋನ್ ಗಳಲ್ಲಿ ತುಂಬಿಕೊಂಡು ಅಂಗಡಿಗಳಿಂದ ಬೇಕುಬೇಕೆಂದಾಗ ತಂದುಕೊಂಡು ಹಚ್ಚಿಕೊಳ್ಳುವ ಬಗೆಯದ್ದಾಗಿರಲಿಲ್ಲ... ಹಾಗಂತ ಮನೆಯಲ್ಲಿಯೇ ಮದರಂಗಿ ಗಿಡ ಇದ್ದರೂ ಸುಂಸುಮ್ನೆ ಪದೇ ಪದೇ ಹಚ್ಚಿಕೊಳ್ಳುತ್ತಲೂ  ಇರಲಿಲ್ಲ.. ಅದೇನೋ ವರ್ಷಕ್ಕೊಮ್ಮೆ ಈ ನಾಗರಪಂಚಮಿ ಹಬ್ಬಕ್ಕಾಗಿ, ಕೈ ತುಂಬಾ ಮದರಂಗಿ ಎಂಬ ತೇರ ಕೂರಿಸಲು ಕಾಯುತ್ತ ಕುಳಿತಿರುತ್ತಿದ್ದೆವು..ಇನ್ನು ಅದು ಬಿಟ್ಟರೆ, ಎಲ್ಲೋ ಒಮ್ಮೊಮ್ಮೆ ಮದುವೆ ಮುಂಜಿ ಸಮಯದಲ್ಲಿ, ಶುಭ ಸಮಾರಂಭದ ಸಂಕೇತವಾಗಿ, ಅಲಂಕಾರ ಮಾಡಿಕೊಳ್ಳುವುದಕ್ಕೋಸ್ಕರ ಮದರಂಗಿ ಚಟ್ನೆ ಬೀಸಿ ಕಾರ್ಯಕ್ರಮದ ಹಿಂದಿನ ದಿನ ಹಚ್ಚಿಕೊಳ್ಳುತ್ತಿದ್ದೆವು.. ಒಟ್ಟಾರೆಯಾಗಿ ಪ್ರತಿಸಲವೂ ಮದರಂಗಿ ಹಚ್ಚಿಕೊಳ್ಳುವುದು ಎನ್ನುವುದು ನಮ್ಮ ಪಾಲಿಗೆ ದೊಡ್ದಬ್ಬದಂತೆಯೇ ಅನ್ನಿಸುತ್ತಿತ್ತು...



ಯಾವುದೇ ವಿಷಯಕ್ಕೂ ಸಲಕರಣೆ ವ್ಯವಸ್ಥೆ ಮಾಡುವುದರಲ್ಲಿ ಅಪ್ಪಾಜಿ ಎಕ್ಸ್ಪರ್ಟ್. ನಮಗಿಂತಲೂ ಮುಂಚಿತವಾಗಿ, ನಾವು ಮದರಂಗಿ ಕಟ್ಟಿಕೊಳ್ಳಲು ಬೇಕಾಗುವ ದಾರವನ್ನು ಮಾಡಲು, ಹಿತ್ತಲು ಕಡೆಯ ಮಾಡಿನಲ್ಲಿ ಶೇಖರಿಸಿಟ್ಟಿರುವ ಬಾಳೆಪಟ್ಟೆ ಸಿಗತೆಯನ್ನುತೆಗೆದು, ತಂಪು ನೀರಿನ ಬಾನಿಯಲ್ಲಿ ನೆನೆಸಿಟ್ಟುಕೊಂಡು, ತೆಳ್ಳಗೆ ಸಿಗಿದು ರೆಡಿ ಮಾಡಿಟ್ಟಾಗಿರುತ್ತಿತ್ತು. ಹಬ್ಬದೂಟ ಗಡದ್ದಾಗಿ ಮುಗಿಸಿದ್ದೇ, ಯಾವಾಗ ಸ್ವಲ್ಪ ಮಧ್ಯಾಹ್ನದ ಬಿಸಿಲು ಇಳಿಯಿತು ಎಂದು ಕಂಡಿತೋ, ನಾವೆಲ್ಲಾ ಕವರು ಹಿಡಿದುಕೊಂಡು ಮದರಂಗಿ ಸೊಪ್ಪು ಕೊಯ್ಯಲು ಹೊರಟು ಬಿಡುತ್ತಿದ್ದೆವು. ಮದರಂಗಿ ಸೊಪ್ಪು ಕೇಳಿಕೊಂಡು ನಮ್ಮನೆಗೆ ಅಕ್ಕಪಕ್ಕದಿಂದ ಅನೇಕರು ಬರುತ್ತಿದ್ದರು. ಅವತ್ತಿನ ದಿನದ ಮಟ್ಟಿಗೆ, ಸಂಜೆಗೆ ಅಕ್ಕ-ಪಕ್ಕ, ಎಲ್ಲಿ ಯಾರು ಮಾತಿಗೆ ಸಿಕ್ಕಿದರೂ ಮಾತನಾಡುವ ಟಾಪಿಕ್ ಮಾತ್ರ ಮದರಂಗಿಯದೇ ಆಗಿರುತ್ತಿತ್ತು.  

ಮದರಂಗಿ ಸೊಪ್ಪು ಯಾರು ಕೊಯ್ದರೂ, ಅದನ್ನು ನಿಂಬೆ ರಸದೊಂದಿಗೆ ಹದವಾಗಿ ಒರಳಲ್ಲಿ ಬೀಸಿಕೊಡುವ ಕೆಲಸ ಮಾತ್ರ ಅಮ್ಮಂದೇ. ನಮಗೆ ಒರಳಲ್ಲಿ ಬೀಸುವ ಅಭ್ಯಾಸವಿರಲಿಲ್ಲ ಎಂದೇನಲ್ಲ..ಅಜ್ಜನ ಮನೆಯಲ್ಲೆಲ್ಲ, ಬೇಸಿಗೆ ರಜೆಯಲ್ಲಿ ಹಲಸಿನ ಕಾಯಿಯ ಹಪ್ಪಳ ಮಾಡುವಾಗ ದೊಡ್ಡವರು ಹಲಸಿನ ಕಾಯಿ ತೊಳೆಗೆ ಉಪ್ಪು ಮೆಣಸು ಹಾಕಿ ಬೀಸುವಾಗ, ಜೊತೆಗೆ ನಾವು ಒಂದ್ ಕೈ ಹಾಕಿ ಸ್ವಲ್ಪ ಹೊತ್ತು ಬೀಸಿದಂತೆ ಮಾಡಿ, ಹೊರಡುವಾಗ ತಿನ್ನಲು ರುಚಿ ರುಚಿಯಾದ ಹಪ್ಪಳದ ಹಿಟ್ಟು ಗಿಟ್ಟಿಸಿಕೊಂಡು ಹೋಗುತ್ತಿದ್ದೆವು..ಆದರೆ, ಚೂರು ಮುಟ್ಟಿದರೂ ಕೈ ಕೆಂಪಾಗುವ ಮದರಂಗಿ ಚಟ್ನೆಯನ್ನು ಬೀಸಲು  ಹೋದರೆ, ಕೈ ಮೇಲೆ ಮರುದಿನ ಮೂಡುವ ಚಂದದ ಚಿತ್ತಾರವನ್ನು ಕೆಡಿಸಿಕೊಳ್ಳುವ ಭಯವಿರುತ್ತಿದ್ದರಿಂದ ಚಟ್ನೆ ಅರೆಯುವ ಕೆಲಸ ಅಮ್ಮಂದೇ ಆಗಿರುತ್ತಿತ್ತು..ಪಕ್ಕದಲ್ಲಿ ಕೂತು ನೋಡಲು ನಾವು.. ಒರಳಲ್ಲಿ ಮದರಂಗಿಯ ಚಟ್ನೆ ಅರೆಯಲು ಶುರು ಮಾಡಿದಂತೆಯೂ,  ಆ ಪರಿಮಳದಿಂದ ನಮ್ಮ ಖುಷಿ ದುಪ್ಪಟ್ಟಾಗುತ್ತಿತ್ತು!

ಇನ್ನು ಮದರಂಗಿ ಚಟ್ನೆ ಕಟ್ಟುವ ಟೊಪ್ಪಿಗೆಯ ತಯಾರಿ.. ಎಲ್ಲಾದರೂ ಕುಳ್ಡಂಗಿ ಸೊಪ್ಪು ಅಥವಾ ಹಾರವಾಣ ಸೊಪ್ಪು ಯಾರೋ ಕೊಟ್ಟಾಗ ಒಮ್ಮೆ ಅದರಿಂದ ಟೊಪ್ಪಿಗೆ ಕಟ್ಟಿಸಿಕೊಂಡ ನೆನಪು.. ಆದರೆ ಪೇಟೆ ಮನೇಲಿದ್ದರಿಂದ ಎಲ್ಲ ಸಲವೂ ನಮಗದು ಸಿಗುತ್ತಿರಲಿಲ್ಲ. ನಾವು ಸುಮಾರಾಗಿ ತೊಳೆದು ಒಣಗಿಸಿಟ್ಟ ಹಾಲಿನ ಕವರ್ ಕಟ್ ಮಾಡಿ ಅದರಿಂದ ಟೊಪ್ಪಿಗೆ ಮಾಡಿಕೊಳ್ಳುತ್ತಿದ್ದೆವು.. ಅಪ್ಪಾಜಿ ಶ್ರದ್ಧೆಯಿಂದ ಕವರ್ಗಳನ್ನುತೊಳೆದು ಒಣಗಿಸಿ ರೆಡಿ ಮಾಡುತ್ತಿದ್ದ.. ಸಂಜೆಗೆ ಎಲ್ಲ ಮನೆ ಕೆಲಸ ಹವಣಿಸಿ ಬೇಗಬೇಗಮುಗಿಸಲಾಗುತ್ತಿತ್ತು.. ಮದರಂಗಿ ಹಚ್ಕ್ಯಾಳಕ್ಕು ಬೇಗ್ ಬೇಗ್ ಊಟ ಮುಗ್ಸಿ ಎಂದರೆ ತುಟಕ್ ಪಿಟಕ್ ಎನ್ನದೆ ಎಲ್ಲ ಊಟ ಗಂಟಲಲ್ಲಿ ಇಳಿಸಿಬಿಡುತ್ತಿದ್ದೆವು.. ತೀರಾ ಸಣ್ಣಕ್ಕಿದ್ದಾಗ ಮಕ್ಕಳು ಮಾತನಾಡಿದರೆ ಕೈ ಬಣ್ಣ ಕೆಂಪಾಗ್ತಲ್ಲೆ ನೋಡು ಮತ್ತೆ ಎಂಬಿತ್ಯಾದಿ ಬೆದರಿಕೆಗಳನ್ನು ಸುಲಭವಾಗಿ ನಂಬಿಬಿಡುತ್ತಿದ್ದೆವು. ನೀರು ಹೆಚ್ಚು ಕುಡಿಯಡಿ ಎಂಬ ಆಜ್ಞೆಯನ್ನೂ ಶಿರಸಾ ಪಾಲಿಸುತ್ತಿದ್ದೆವು. ಮಲಗುವ ಹಾಸಿಗೆ ರೆಡಿ ಇಟ್ಟುಕೊಂಡು, ಬಚ್ಚಲಿಗೆಲ್ಲ ಹೋಗಿಬಂದು, ಪ್ರಾಜೆಕ್ಟ್ ಮದರಂಗಿ ಶುರುವಾಗುತ್ತಿತ್ತು. ಅಮ್ಮ ಮದರಂಗಿಯ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಉಗುರುಗಳ ಮೇಲೆ ಇಡುತ್ತಾ ಹೋಗುತ್ತಿದ್ದಳು. ಮದರಂಗಿಯ ಉಂಡೆ ಕೈಗೆ ಹಚ್ಚಲು ಶುರು ಮಾಡಿದ ಕೂಡಲೇ, ಆಗುತ್ತಿದ್ದತಣ್ಣನೆಯ ಆ ಕಚಗುಳಿ ಅನುಭವವೇ ಒಂತರ ಮಜಾ.. ಬೆರಳುಗಳಿಗೆ ಉಂಡೆ ಹಚ್ಚಿದ ನಂತರ ಬಾಳೆಪಟ್ಟೆ ದಾರ ಸುತ್ತಿ ಟೊಪ್ಪಿ ಕಟ್ಟುವ ಕೆಲಸ ಅಪ್ಪಾಜಿಯದಾಗಿರುತ್ತಿತ್ತು, ಅಕ್ಕನೂ ಸಹಾಯಕ್ಕಿರುತ್ತಿದ್ದಳು.. ಮನೆಯಲ್ಲಿ ನಾನೇ ಸಣ್ಣವಳಾಗಿದ್ದರಿಂದ ನನ್ನ ರಗಳೆಗಳನ್ನು ಕೇಳಲಾಗುತ್ತಿತ್ತು..ಅಲ್ಲಿ ಉಂಡೆ ಇಟ್ಟಿದ್ದು ಸರಿಯಾಗಿಲ್ಲ, ಇಲ್ಲಿ ಗುಂಡಗೆ ಬಂದಿಲ್ಲ, ದಾರ ಕಟ್ಟಿದ್ದು ಬಿಗಿಯಾಯಿತು, ಸಡಿಲವಾಯಿತು ಎಂದೆಲ್ಲ ರಗಳೆ ಮಾಡುತ್ತಿದ್ದೆ.. ಕಡೆಗೆ ಅಕ್ಕನತ್ರ ಹಚ್ಚಿಸ್ಕ್ಯ ಎಂಬ ಪರಿಹಾರ ನೀಡುತ್ತಿದ್ದರು, ಅಕ್ಕ ಹುಷಾರಾಗಿ ತನ್ನ ಕೈ ಬೆರಳುಗಳು ಹೆಚ್ಚುರಾಡಿಯಾಗದಂತೆ, ಒಪ್ಪ ಓರಣದಿಂದ ಉಂಡೆಗಳನ್ನು ಜೋಡಿಸುತ್ತಿದ್ದಳು...ನಮ್ಮದೆಲ್ಲ ಮುಗಿದ ಮೇಲೆ ಅಮ್ಮ, ಅದಾಗಲೇ ಬಣ್ಣ ಹತ್ತಿದ ಬಲಗೈ ಇಂದ ಎಡಗೈಗಷ್ಟೇ ಮದರಂಗಿ ಇಟ್ಟುಕೊಂಡು ಮಲಗುತ್ತಿದ್ದಳು . ಹಿಂದೆಲ್ಲ ಮದರಂಗಿ ಎನ್ನುವುದು ಕೇವಲ ಹೆಣ್ಣುಮಕ್ಕಳ ಅಂದಗಾರಿಕೆಗೆ ಎಂದಿರಲಿಲ್ಲ.. ಮದರಂಗಿ ದೇಹಕ್ಕೆ ತುಂಬಾ ತಂಪು ಎಂದು, ದೇಹದ ಉಷ್ಣ ಕಮ್ಮಿ ಮಾಡುತ್ತದೆ ಎಂದೂ ನಂಬಿಕೆ ಇದ್ದಿದುರಿಂದ, ಗಂಡಸರೂ ಕೂಡ ಕಡೇ ಪಕ್ಷ ಒಂದು ಕಿರು ಬೆರಳಿಗಾದರೂ ಮದರಂಗಿಯನ್ನು ಹಚ್ಚಿಕೊಳ್ಳುತ್ತಿದ್ದರು. ಇನ್ನು ನಾವು  ಫ್ರೆಂಡ್ಸ್ ಗ್ಯಾಂಗ್ ದೂ ಮದರಂಗಿ ಬಗ್ಗೆ ಸುಮಾರ್ ಕಥೆಗಳಿರುತ್ತಿದ್ದವು..  ಹಣೆ ಮೇಲೆ ಸಣ್ಣದೊಂದು ಚುಕ್ಕಿ ಇಟ್ಟು, ಅದು ಬೆಳಗಾಗುವಷ್ಟರಲ್ಲಿ ಕೆಂಪಾಗಿದ್ದರೆ, ಮದ್ವೆ ಆಗೋ ಗಂಡ ಭಾರೀ ಪ್ರೀತಿಸುತ್ತಾನೆ ಎಂಬಿತ್ಯಾದಿ ತಮಾಷೆಯ ಪ್ರಾಯೋಗಿಕ ಆಟಗಳೂ ಇದರ ಮಧ್ಯೆ ನಡೆಯುತ್ತಿತ್ತು, ಮದರಂಗಿ ಬಣ್ಣ ಹೆಚ್ಚು ದಿನ ಇರಬೇಕೆಂದು ಕೈ ಸವೆಯುವ ಯಾವ ಆಟಗಳನ್ನೂಆಡದೆ, ಯಾವ ಕೆಲಸವನ್ನೂ ಮಾಡದೆ, ಮದರಂಗಿ ಕಾಪಾಡಿಕೊಳ್ಳುವ ವರಸೆಯೂ ನಮ್ಮಲ್ಲಿ ನಡೆಯುತ್ತಿತ್ತು,..

ಮದರಂಗಿ ಬಣ್ಣದ ಆಸೆಯೇನೋ ಹೌದು, ಆದರೆ ಅದಕ್ಕಾಗಿ ಮಾಡುತ್ತಿದ್ದ ವಸವಂತ(ಸಿದ್ಧತೆ), ಪಡುತ್ತಿದ್ದ ಕಷ್ಟವೂ ಅಷ್ಟೇ ಇರುತ್ತಿತ್ತು.. ಮದರಂಗಿಯನ್ನು ಕೈಗೆ ಮತ್ತು ಕಾಲಿಗೆ ಕಟ್ಟಿದ ತಕ್ಷಣ, ಅಲ್ಲಿ ಇಲ್ಲಿ ತಾಕಿಸಿಕೊಳ್ಳದೇ ನಾವು ಮಲಗಿಬಿಡಬೇಕಿತ್ತು. ಮದರಂಗಿಯ ಬಣ್ಣ ಹಾಸಿಗೆಗೆ ಬಡಿಯಬಾರದೆಂದು, ವಿಶಿಷ್ಟವಾಗಿ ಹಳೆಯ ಮೇಲು ಹಾಸಿಗೆ ಯೊಂದಿಗೆ ರೆಡಿ ಮಾಡಲಾಗುತ್ತಿತ್ತು.. ;) ಕೈ ಕಾಲಿಗೆ ಮದರಂಗಿ ಕಟ್ಟಿಕೊಂಡು ಮಾಡುವ ನಿದ್ದೆ ಏನೂ ಸುಖಕರ ಎಂದೇನಲ್ಲ..ಸೊಳ್ಳೆ ಕಚ್ಚಿದರೆ ತುರಿಸಿಕೊಡಲು ಮತ್ತೊಬ್ಬರು ಬೇಕು. ಬೆಳಗಿನ ಜಾವ ಚಳಿಯಾದರೆ, ಮೈಮೇಲಿನ ಬೆಡ್ಶೀಟ್ ಆಕಡೆ ಈಕಡೆ ಹೋದರೆ, ಹೊದಕ್ಲು ಸರಿ ಮಾಡಲುಇನ್ನೊಬ್ಬರು ಬೇಕು..ಎರಡೂ ಕೈ, ಎರಡೂ ಕಾಲಿಗೂ ಬೆರಳುಗಳಿಗೆ ಟೊಪ್ಪಿಗೆಗಳು, ಬೇಕೆಂದಾಗ ಹೊರಳಲು,ಕೈಕಾಲನ್ನು ನಿರಾಸಾಯವಾಗಿ ಇಟ್ಟುಕೊಂಡು ಮಲಗಲು ಆಗುತ್ತಿರಲಿಲ್ಲ.. ಟೊಪ್ಪಿ ಕಟ್ಟಿರುವ ದಾರ ಸ್ವಲ್ಪ ಬಿಗುವಾಗಿದ್ದರೂ, ಮಧ್ಯರಾತ್ರೆಯಷ್ಟರಲ್ಲೇ ಬೆರಳುಗಳು ಉಬ್ಬಿಕೊಂಡು ಜುಮು ಜುಮು ಎನ್ನಲು ಶುರುವಾಗಿರುತ್ತಿತ್ತು.. ಏನೇ ಆಗಲಿ ಕೈ ಕೆಂಪಿ ಮಾಡಿಕೊಳ್ಳಬೇಕು ಅದೊಂದೇ ಧ್ಯೇಯ! ಎಷ್ಟೇ ಮಾಡಿದರೂ ಬೆಳಗಾಗುವಷ್ಟರರಲ್ಲಿ ಒಂದೆರಡಾದರೂ, ಬೆರಳಿಗೆ ಕಟ್ಟಿದ ಟೊಪ್ಪಿ ಎಲ್ಲ ಚೆಲ್ಲಾಪಿಲ್ಲಿಯಾಗಿ ಹಾಸಿಗೆಯ ಮೇಲೆ ಬಿದ್ದಾಗಿರುತ್ತಿತ್ತು. ಮರುದಿನ ಬೆಳಿಗ್ಗೆ ಬೇಗನೆ ಎದ್ದು ಕೈ ನೋಡಿಕೊಳ್ಳುವ ತವಕ.. ಮುಖವನ್ನೂ ತೊಳೆಯದೇ, ಮೊದಲು ಅಡುಗೆ ಮನೆಗೆ ಓಡಿ, ಮದರಂಗಿ ಬೀಸಿದ ಒರಳಲ್ಲಿ ಉಳಿದ ಒರಳು ತೊಳೆದಿಟ್ಟ ನೀರಿಗೆ ಕೈ ಅದ್ದಿ ತೊಳೆದುಕೊಳ್ಳುತ್ತಿದ್ದೆವು. ನಂತರ ಕೊಬ್ಬರಿಎಣ್ಣೆ ಹಚ್ಚಿ ಕೈಗೆ ಚೆನ್ನಾಗಿ ಮಸ್ಸಾಜ್ ಮಾಡಿಕೊಳ್ಳುತ್ತಿದ್ದೆವು.. ಉಗುರುಗಳೆಲ್ಲ ಅಚ್ಚ ಕೆಂಪಾಗಿರಬೇಕಷ್ಟೆ..ಮತ್ತೆರಡು ದಿನಕ್ಕೆ ಉಗುರುಗಳ ಬಣ್ಣ ಕೆಂಪಾಗಿ, ಕಪ್ಪಾಗಿ, ಸ್ವಲ್ಪ ದಿನಕ್ಕೆ ಕೈ ಸವೆದು ಅಲ್ಲಲ್ಲಿ ಕಪ್ಪು ಬಣ್ಣದ ಕಲೆಗಳ  ಅಪರಾವತಾರ ಆಗುವುದೆಲ್ಲ ಲೆಕ್ಕಕ್ಕೆ ಬರುತ್ತಿರಲಿಲ್ಲ.. "ಎಲ್ಲಿ ಎಷ್ಟು ಕೆಂಪಾತು ನೋಡನ.." ಎಂದು ಮನೆಯವರೆಲ್ಲ ಬೆಳಿಗ್ಗೆಯೇ ಬಂದು ವಿಚಾರಿಸುವುದು, ನಾವು ಹೋಗಿ ಕೈಯನ್ನು ತೋರಿಸಿ ಸಂಭ್ರಮಿಸುವುದು ಎಲ್ಲವೂ ಒಂದು ಅನೂಹ್ಯ ಬಾಂಧವ್ಯವಾಗಿರುತ್ತಿತ್ತು.

ಈಗೆಂತು ನಮಗೆ ರೆಡಿ ಮೆಹಂದಿ ಕೋನ್ ಸಿಗುತ್ತದೆ. ಬಗೆಬಗೆಯ ಡಿಸೈನ್ ಬಿಡಿಸಿ ನಾನು ಸಂಭ್ರಮಿಸುತ್ತೇನೆ..೩-೪ ತಾಸಿಗೆ ಬೇಕಾದ ಡಿಸೈನ್ ಕೈ ಮೇಲೆ ಮೂಡುತ್ತದೆ.. ಮೆಹಂದಿ ಕೋನ್ ಕಿಂತಲೂ ಒಂದು ಹೆಜ್ಜೆ ಮುಂದುವರೆದು, ಹೆಚ್ಚು ಪ್ರಯಾಸವಿಲ್ಲದೆ ಕಾರ್ಯಕ್ರಮಗಳಿಗೆ ಕೈಗೆ ಅಂಟಿಸಿಕೊಳ್ಳಬಹುದಾದ ಧಿಡೀರ್ ಮೆಹಂದಿ ಸ್ಟಿಕ್ಕರ್ ಗಳು ಕೂಡ ಇದೆ. ಫೌಂಡೇಶನ್ ಕ್ರೀಮ್ ನಿಂದ ಮಾಡಬಹುದಾದ ಶ್ವೇತ ವರ್ಣದ ಮೆಹಂದಿ ಕೋನ್ ಗಳೂ, ಕಪ್ಪು ಮೆಹಂದಿಗಳೂ ಫ್ಯಾಶನ್ ಲೋಕಕ್ಕೆ ಪಾದಾರ್ಪಣೆ ಮಾಡಿದೆ..ಹೊಸತನಕ್ಕೆ ಅವಕಾಶಗಳು ಹೆಚ್ಚಾಗಿವೆ.. ಆದರೂ ಇವೆಲ್ಲದರ ಮಧ್ಯೆಯೂ, ಈ ಸಾಂಪ್ರದಾಯಿಕ ಮದರಂಗಿ ಚಟ್ನೆ ಎನ್ನುವುದು ಸೌಂದರ್ಯ ಸರಕು ಎನ್ನುವುದಕ್ಕಿಂತಲೂ, ನನ್ನ ಪಾಲಿಗೆ ಇದೊಂದು ಭಾವನಾತ್ಮಕ ವಿಷಯ..ಯಾಂತ್ರಿಕ ಜಗತ್ತಿನಲ್ಲಿ ಒಂದಷ್ಟು ಸತ್ಯ ಎನಿಸುವಂತವುಗಳ ಪೈಕಿ ನನಗೆ ಇದೂ ಒಂದು..  

ಇಷ್ಟೆಲ್ಲಾ ಈಗ್ಯಾಕೆ ನೆನಪು ಮಾಡಿಕೊಂಡು ಎಂದರೆ, ರಜೆಗೆ ಊರಿಗೆ ಬಂದು ಸೇರಿಯಾಗಿದೆ.. ಕೊರೋನಾ  ಕಾಲದಲ್ಲಿ ಹೊರಗಡೆ ತಿರುಗಾಡುವಂತಿಲ್ಲ.. ಹಾಗಾಗಿ ಇದ್ದಲ್ಲಿಯೇ ಇದ್ದಿದ್ದಷ್ಟರಲ್ಲಿಯೇ ಸಂತೋಷ ಕಾಣಬೇಕಿದೆ..ಇಲ್ಲಿ ಪಕ್ಕದ ಮನೆಯಲ್ಲಿ ಮದರಂಗಿ ಗಿಡ ಕಂಡಿತು.. ನಾಗರಪಂಚಮಿಗೆ ಇನ್ನು ಮೂರು ತಿಂಗಳುಗಳಿವೆ.. ಆ ಸಮಯಕ್ಕೆ ಊರಲ್ಲಿಲ್ಲದಿದ್ದರೆ ಎಂದು ಯೋಚಿಸಿ, ಮಗಳಿಗೆ ಮದರಂಗಿ ಹಚ್ಚಿತೋರಿಸೋಣ ಎಂಬ ಆಲೋಚನೆ ಬಂತು..ಇವಳು ಹುಟ್ಟಿ ಆರು ವರ್ಷಗಳು ಕಳೆದರೂ , ಮಗು ಸಣ್ಣಕಿದೆ ಎಂದೋ, ನಾಗರಪಂಚಮಿ ಹಬ್ಬಕ್ಕೆ ಊರಲ್ಲಿರದಿದ್ದ ಕಾರಣಕ್ಕೋ.. ಅವಳ ಕೈಗೆ ಹೆಚ್ಚೆಂದರೆ ಒಂದೆರಡು ಸಲ ಹಚ್ಚಿದ ,ಒಂದು ಗಂಟೆಯೂ ಇಟ್ಟುಕೊಳ್ಳದ ಮೆಹಂದಿ ಕೋನ್ ಪರಿಚಯವಿತ್ತೇ ಹೊರತು, ಮದರಂಗಿ ಸೊಪ್ಪಿನ ಗುರುತಿರಲಿಲ್ಲ.. ಇಂದು ಇದೇ ಮೊದಲ ಬಾರಿಗೆ ನನ್ನ ಮಗಳಿಗೆ ಮದರಂಗಿ ಚಟ್ನೆ ಹಚ್ಚಿ ಟೊಪ್ಪಿ ಕಟ್ಟಿ ಕೈ ಕೆಂಪಾಗಿಸಿದ ಸಂಭ್ರಮ.. ! "ಕೈ ಕೆಂಪಿ ಕೆಂಪಿ ಮಾಡಿಕೊಡ್ಲಾ?" ಎಂದು ಕೇಳಿದಾಗ ಹುಂ ಎಂದಳು.. ಮದರಂಗಿ ಬೀಸಿ ರೆಡಿ ಮಾಡಿದೆನಾದರೂ, ಅದರ ಹೊಸ ತರದ ಪರಿಮಳಕ್ಕೆ, ಅದರ ಬಣ್ಣ ನೋಡಿ ಎಲ್ಲಿ ಗಾಡಿ ಉಲ್ಟಾ ಹೊಡೆಯುತ್ತದೆಯೋ ಎಂಬ ಅಳುಕಿತ್ತು.. ಆದರೆ ಉತ್ಸಾಹದಿಂದ, ನಮ್ಮ ಬಾಲ್ಯದ ಕಥೆಗಳ ಕೇಳುತ್ತ ಖುಷಿಯಿಂದ  ನಮ್ಮನೆ ಗುಬ್ಬಿ ಮದರಂಗಿಹಾಕಿಸಿಕೊಂಡಿತು.. ಅಲ್ಲಿಗೂ ಮುಗಿಯದೆ ಮತ್ತೆ ಮರುದಿನ ಅಂಗೈ ಮೇಲೆ ಬೊಟ್ಟು ಕೂಡ ಕೇಳಿ ಹಾಕಿಸಿಕೊಂಡಳು.. ಇವಳು ಖಯಾಲಿಗೆ ಒಮ್ಮೊಮ್ಮೆ ನೈಲ್ ಪೈಂಟ್ ಹಚ್ಚಿಕೊಳ್ಳುವುದುಂಟು.. ಹಚ್ಚಿಕೊಂಡ ನಾಲ್ಕು ದಿನಕ್ಕೆ ಅದು ಅರ್ಧಂಬರ್ಧ ಕಿತ್ತುಬಂದಿರುತ್ತದೆ. ಉಳಿದದ್ದಷ್ಟನ್ನು ಕೆರೆದು ಕೀಳ್ತಾ ಕೂರುವುದೊಂದು ಇವಳ ಆಟ. ಉಗುರಿನ ಅಂದಕ್ಕೆ ಅದಷ್ಟೇ ಗೊತ್ತಿದ್ದವಳಿಗೆ ಮೊದಲ ಬಾರಿಯ ಮದರಂಗಿ ಚಟ್ನೆ, ಅದಕ್ಕೆ ಟೊಪ್ಪಿಗೆ, ದಾರ, ರಾತ್ರೆ ಮದರಂಗಿ ಕಟ್ಟಿಕೊಂಡೇ ಮಲಗುವುದು, ಹಸಿರು ಚಟ್ನೆ ಮ್ಯಾಜಿಕ್ ಆಗಿ ರೆಡ್ ಕಲರ್ಕೊಡುವುದು ಎಲ್ಲವೂ ಆಶ್ಚರ್ಯವೋ ಆಶ್ಚರ್ಯ..ಬೆಳಿಗ್ಗೆಯಿಂದ ಮಗಳ ಪ್ರಶ್ನೆಗಳ ಮೇಲೆ ಪ್ರಶ್ನೆಗಳು, "ಕೈ ತೊಳೆದರೆ ಹೋಗ್ಬಿಡ್ತಾ ಮದರಂಗಿ ?, ಮಣ್ಣಾಡಿರೆ ಹೋಗ್ತಾ? " ಇತ್ಯಾದಿ.. ಏನೇ ಆಟ ಆಡಿದರೂ, ಕೈ ಕೊಳೆ ಮಾಡಿಕೊಂಡರೂ, ಸೋಪು ಹಚ್ಚಿ ತೊಳೆದರೂ ಹೋಗದ ಕೆಂಪು ಬಣ್ಣ.. ಎಲ್ಲವನ್ನೂ ಸಂಭ್ರಮಿಸುತ್ತಿದ್ದಾಳೆ :) ಮುಂದೆ ಕೈ ಉಗುರು ಬೆಳೆದಾಗ ಮದರಂಗಿ ಹೇಗೆ ಮೇಲೆ ಬರುತ್ತದೆ ಎಂಬುದ ನೋಡಲು ಕಾಡು ಕುಳಿತಿದ್ದಾಳೆ.. ಒಟ್ಟಾರೆಯಾಗಿ ಮದರಂಗಿ ಹಚ್ಚಿ ಮೊಗದಲ್ಲಿ ಸಂತೋಷದ ನೃತ್ಯವೇರಿಸಿಕೊಂಡಿರುವ ಅವಳಲ್ಲಿ ನನ್ನ ನಾನು ಕಾಣುತ್ತಿದ್ದೇನೆ..!! ಮತ್ತು ಇದೇ ನೆಪದಲ್ಲಿ ನನ್ನ ಕೈಗಳಿಗೂ ಇಷ್ಟದ ಮದರಂಗಿ ರಂಗೇರಿದ್ದು ಮತ್ತೂ ಖುಷಿ :) :)   

ಶುಕ್ರವಾರ, ಏಪ್ರಿಲ್ 24, 2020

ಪದಗಳ ಆಟ

1 . ಮೂರು ಪದ ಒಂದು ಕಥೆ - ಮಕ್ಕಳಿಗೆ ಅವರ ವಯಸ್ಸಿನ ಮಿತಿಗೆ ಅನುಗುಣವಾಗಿ, ಸುಲಭವಾಗಿ ಮಕ್ಕಳು ಗುರುತಿಸಲ್ಪಡುವ ಯಾವುದಾದರೂ ಮೂರು ಪದಗಳನ್ನು ಕೊಟ್ಟು, ಅವುಗಳನ್ನು ಬಳಸಿ ಕಥೆಯೊಂದನ್ನು ಹೆಣೆಯಲು ತಿಳಿಸಬೇಕು. ೫-೬ ವರ್ಷದ ಮಕ್ಕಳ ಕಥೆ ಅರ್ಥಪೂರ್ಣವಾಗಿಯೇ ಇರಬೇಕೆಂಬ ಅಪೇಕ್ಷೆಯಿಲ್ಲ. ಮಕ್ಕಳಿಗೆ ಆ ಪದಗಳನ್ನು ಬಳಸಿ ವಾಕ್ಯ ರಚನೆ ಮಾಡುವುದು ಮತ್ತು ಒಂದಕ್ಕೊಂದು ಸಂಬಂಧ ಹೆಣೆಯುವ ಚಾಕ್ಷತೆ ಸಿಕ್ಕರೆ ಸಾಕು. ಮಕ್ಕಳು ಹಿಂದೆ ಕೇಳಿದ ಕಥೆಗಳಿಂದ ಪದಗಳನ್ನು ಹೆಕ್ಕಿ ಹೇಳಿದರೆ, ಕಥೆಯನ್ನು ನೆನಪಿಸಿಕೊಂಡು ತಮ್ಮದೇ ಧಾಟಿಯಲ್ಲಿ ಮಕ್ಕಳು ಕಥೆ ಹೇಳಿವಷ್ಟಾದರೂ ಸಾಕು ಸಂತೋಷ.. ನಮ್ಮ ಕೆಲಸಗಳನ್ನು ಮಾಡುತ್ತಲೇ ಮಕ್ಕಳನ್ನು ಆಡಿಸಬಹುದಾದ ತಮಾಷೆಯ ಆಟವಿದು.

ಉದಾ : ಮೋಡ, ನೀರು, ಛತ್ರಿ
              ಕಾಗೆ, ನರಿ, ರೊಟ್ಟಿ


2. ಒಂದು ಹುಂಡಿ ಅಕ್ಷರ - ಈ ಆಟವನ್ನು ಬಾಯ್ದೆರೆಯಾಗಿಯೂ ಆಡಬಹುದು, ಕನ್ನಡ ಕಾಗುಣಿತ ಕಲಿತ ಮಕ್ಕಳಾದರೆ, ಇದೊಂದು ಉತ್ತಮ ಬರವಣಿಗೆಯ ಆಟ. ಯಾವುದಾದರೊಂದು ಕನ್ನಡ ಅಕ್ಷರವನ್ನು ಒಬ್ಬರು ತಿಳಿಸುವುದು. ಮಕ್ಕಳು ಚಿಕ್ಕವರಾಗಿದ್ದರೆ, ಆಟವನ್ನು ಸ್ವಲ್ಪ ಸುಲಭವಾಗಿಸಲು, ಆ ಅಕ್ಷರ ಅಥವಾ ಅದರ ಕಾಗುಣಿತಾಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಪದಗಳನ್ನು ಹುಡುಕಿ ಹುಂಡಿಗೆ ಹಾಕುವುದು, ಎಂಬ ಅರ್ಥ ಬರುವಂತೆ ಪದಗಳನ್ನು ಯೋಚಿಸಿ ಹೇಳಲು ಅಥವಾ ಬರೆಯಲು ತಿಳಿಸಬಹುದು. ನಾವು ಮನೆಯಲ್ಲಿ ೫-೬ ನಿಮಿಷಗಳ ಟೈಮರ್ ಇಟ್ಟು ಆ ಅವಧಿಯಲ್ಲಿ ಎಷ್ಟು ಪದಗಳನ್ನು ಹುಂಡಿಗೆ ಹಾಕಿದೆವು ಎಂಬ ಆಟ ಆಡುತ್ತೇವೆ.. ಇಂಗ್ಲಿಷ್ ಪದಗಳನ್ನೂ ಕೂಡ ಇದೆ ರೀತಿಯಲ್ಲಿ ಹುಡುಕಿ ಹೇಳಬಹುದು. ಸ್ವಲ್ಪ ದೊಡ್ಡ ಮಕ್ಕಳಿಗಾದರೆ ಸಮಯದ ಗಡುವು ನೀಡಿ ಅವರ ಚುರುಕುತನ ಪರೀಕ್ಷಿಸಬಹುದು.

ಉದಾ : ೧೦ ನಿಮಿಷಗಳಲ್ಲಿ 'ರ' ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಹುಂಡಿಗೆ ಹಾಕು
              'ವ' ಕಾಗುಣಿತಾಕ್ಷರದ ಎಲ್ಲ ಪದಗಳನ್ನು ಬರೆಯೋಣ ಇತ್ಯಾದಿ





3. ಪದಬಂಡಿ (cross word puzzle) - ೮ ಬೈ ೮  ಅಥವಾ ೧೦ ಬೈ ೧೦ ಮನೆಗಳಿರುವ ಚೌಕದ ಗ್ರಿಡ್ ಒಂದನ್ನು ಬರೆದುಕೊಂಡು, ಮಕ್ಕಳಿಗೆ ತಿಳಿದಿರುವ ಪದಗಳನ್ನು ಎಡದಿಂದ ಬಲಕ್ಕೆ ಅಥವಾ ಮೇಲಿನಿಂದ ಕೆಳಕ್ಕೆ ಬರೆದು, ಉಳಿದ ಬ್ಲಾಕ್ ಗಳಲ್ಲಿ ಸಂಬಂಧವಿಲ್ಲದ ಅಕ್ಷರಗಳಿಂದ ಸಂಪೂರ್ಣ ಗ್ರಿಡ್ ಅನ್ನು ತುಂಬಿಸಿಟ್ಟರೆ, ಪದಬಂಡಿ ಪಟ ರೆಡಿ. ಈಗ ಅದನ್ನು ಮಕ್ಕಳಿಗೆ ಕೊಟ್ಟು ಅದರಲ್ಲಿ ಸಾಧ್ಯವಾದಷ್ಟು ಪದಗಳನ್ನು ಹುಡುಕುವ ಆಟವನ್ನು ಕೊಡಬಹುದು. ಪ್ರತಿಸಲವೂ ಪದಬಂಡಿಯ ಒಂದೊಂದು ವಿಷಯಕ್ಕೆ ಸೀಮಿತವಾಗಿತ್ತು ಅದರ ಸುಳಿವು ಕೊಟ್ಟಿಟ್ಟರೆ ಮಕ್ಕಳು ಯೋಚಿಸಿ ಹುಡುಕುವಲ್ಲಿ ಸಫಲರಾಗುತ್ತಾರೆ. ಇದು ಸುಲಭದ ಕನ್ನಡ ಪದಗಳು ಮತ್ತು ಇಂಗ್ಲಿಷ್ ಪದಗಳಲ್ಲಿಯೂ ಮಾಡಬಹುದು.





4. ಅಕ್ಷರ ಮಣಿ ಸರ : ಈ ಆಟದಲ್ಲಿ ಮಕ್ಕಳಿಗೆ ಒಂದಷ್ಟು ಸುಲಭದ ಸ್ವರ ಮತ್ತು ವ್ಯಂಜನಗಳನ್ನು ಬರೆದುಕೊಟ್ಟು ಅದರಿಂದ ಸಾಧ್ಯವಾದಷ್ಟು ಪದಗಳನ್ನು ಮಾಡಲು ತಿಳಿಸುವುದು. ಇಂಗ್ಲೀಷ್ ಅಕ್ಷರಗಳನ್ನೂ ಕೂಡ ಇದೇ ಮಾದರಿಯಲ್ಲಿ ಸಣ್ಣ ದೊಡ್ಡ ಪದಗಳನ್ನು ಮಾಡಲು ನೀಡಬಹುದು.

ಉದಾ : ಆ ಸ ಟ ಗ ರ ಅ ಪ
              ಆಟ, ಆಗಸ. ಅಗಸ, ಅರ, ಪಟ, ಗರಗಸ, ಸರ ಇತ್ಯಾದಿ

             M T A E S I R
             mat, meat, sit, sir, ate, seat, sim, sire, team etc



5. ಉಲ್ಟಾ-ಪುಲ್ಟಾ : ಅರ್ಥಪೂರ್ಣ  ಅಕ್ಷರಗಳನ್ನು ಸ್ಥಳಾಂತರಿಸಿ ಬರೆದು, ಮಕ್ಕಳಿಗೆ ಆ ಪದವನ್ನು ಹುಡುಕಲು ಹೇಳುವುದು. ಸಾಧ್ಯವಾದಷ್ಟು ಒತ್ತಕ್ಷರಗಳಿಲ್ಲದ ಪದಗಳನ್ನು ಬಳಸಿದರೆ ಮಕ್ಕಳು  ಹುಡುಕುವ ಆಟದಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಇದನ್ನು ಆಡಿಸಬಹುದು.

ಉದಾ : ಜಹಾಮರಾ, ಗೆರಲೆತ, ಠಾಯಿಮಿ, ಚಗೆಣಿಬಾ, ವಗೆರಬಣಿ ಇತ್ಯಾದಿ
              LEPAHTNE, LDEHI, KCCARRE, HILDCNER etc



6  ಟೇಲ್ ಆಫ್ ವರ್ಡ್ಸ್ : ಇದು ಪದಗಳ ಅಂತ್ಯಾಕ್ಷರಿಯಿದ್ದಂತೆ. ಈ ಆಟದಲ್ಲಿ ಒಬ್ಬರು ಒಂದು ಪದವನ್ನು ಹೇಳಿದರೆ, ಆ ಪದದ ಕೊನೆಯ ಅಕ್ಷರ ಅಥವಾ ಅದರ ಕಾಗುಣಿತಾಕ್ಷರವನ್ನು ಬಳಸಿ ಇನ್ನೊಬ್ಬರು ಇನ್ನೊಂದು ಪದವನ್ನು ಹೇಳಬೇಕು. ಇಂಗ್ಲೀಷಿನಲ್ಲಿ ಆಡುವುದಾದರೆ, ಪದದ ಕೊನೆಯ ಲೆಟರ್ ನಿಂದ ಪ್ರಾರಂಭವಾಗುವ ಮತ್ತೊಂದು ಪದವನ್ನು ಇನ್ನೊಬ್ಬರು ಹೇಳಬೇಕು. ಹೀಗೆ ಆಟ ಮುಂದುವರೆಯುತ್ತಾ ಹೋಗುತ್ತದೆ.

ಉದಾ : ರಾಮ - ಮಗ - ಗಣಪತಿ - ತಿರುಗು -ಗುಣಿಸು -ಸುಮ - ಮರಳು - ಲಂಗ - ಗಣಿತ ಇತ್ಯಾದಿ     
              elephant - toast - tree - eat - train - need - dog - ghost - temperature - estimation - note etc



7. ಮಗ್ಗಿ ಹುಗ್ಗಿ : ಮಕ್ಕಳಿಗೆ ಅವರು ಕಲಿತ ಗಣಿತದ ಮಗ್ಗಿಯನ್ನು ಪುನರಾವರ್ತಿಸಲು ಇದೊಂದು ಉತ್ತಮ ಆಟ. ಮೂರ್ನಾಲ್ಕು ಜನರಿದ್ದರೆ ಹೆಚ್ಚಿನ ಮಜಾ ಬರುತ್ತದೆ ಈ ಆಟಕ್ಕೆ. ಒಂದರಿಂದ ಪ್ರಾರಂಭವಾಗಿ ಒಬ್ಬೊಬ್ಬರೇ ಒಂದೊಂದು ಅಂಕೆಯನ್ನು ಹೇಳುತ್ತಾ ಬರಬೇಕು.  ಮೊದಲೇ ಸೂಚಿಸಿದ ಮಗ್ಗಿಯ ಸಂಖ್ಯೆ ಬಂದಾಗ, ಆ ಅಂಕಿಯನ್ನು ಹೇಳದೆ ಜೋರಾಗಿ ಒಂದು ಚಪ್ಪಾಳೆ ತಟ್ಟಬೇಕು, ಮತ್ತೆ ಅದರ ಮುಂದಿನ ಸಂಖ್ಯೆಯಿಂದ ಆಟ ಮುಂದುವರೆಯುತ್ತದೆ. ಯೋಚಿಸಿ ಎಚ್ಚರಿಕೆಯಿಂದ ಆಡಬೇಕಾದ ಆಟ ಇದಾಗಿದ್ದು, ವೇಗವಾಗಿ ಸಂಖ್ಯೆ ಹೇಳುತ್ತಾ ಹೋಗುವುದು ಭಾರಿ ಮಜಾ..

ಉದಾ : ನಾಲ್ಕರ ಮಗ್ಗಿ
              ೧, ೨, ೩, ಚಪ್ಪಾಳೆ, ೫, ೬, ೭, ಚಪ್ಪಾಳೆ, ೯, ೧೦, ೧೧, ಚಪ್ಪಾಳೆ, ೧೩, ೧೪, ೧೫, ಚಪ್ಪಾಳೆ...



 8. ನೆನಪಿನ ಬುಟ್ಟಿ : ಮಕ್ಕಳ ತಿಳುವಳಿಕೆ ಮಟ್ಟಕ್ಕೆ ತಿಳಿದಿರುವ ವಿಷಯಗಳಿಗೆ ಸಂಬಂಧಿಸಿದ ವಿವಿಧ ಪದಗಳನ್ನು ಒಂದೇ ನಮೂನೆಯ ಹಲವಾರುಖಾಲಿ ಹಾಳೆಯಲ್ಲಿ ಕತ್ತರಿಸಿ ಮಾಡಿದ ಚೀಟಿಗಳಲ್ಲಿ ಬರೆದು ಬುಟ್ಟಿಯೊಂದರಲ್ಲಿ ಹಾಕಿತ್ತುಕೊಳ್ಳಬೇಕು. ಒಂದು ಟೀಮಿನಲ್ಲಿ ಎರಡು ಮಂದಿ ಇರುತ್ತಾರೆ. ಒಬ್ಬರು ಬಂದು ಬುಟ್ಟಿಯಿಂದ ಯಾವುದಾದರೂ ಹತ್ತು ಚೀಟಿಗಳನ್ನು ತೆಗೆದುಕೊಂಡು ತನ್ನ ಜೊತೆಗಾರನೊಂದಿಗೆ ಸೇರಿ, ಒಂದು ನಿಮಿಷದಲ್ಲಿ, ಆ ಪದಗಳ ಮನನ ಮಾಡಿಕೊಳ್ಳಬೇಕು. ನಂತರ ಅವುಗಳನ್ನು ನೋಡದೆಯೇ ಹೇಳಬೇಕು. ಟೀಮಿನ ಒಂದು ಮಗು ಹೇಳಿದ ಪದವನ್ನು ಇನ್ನೊಂದು ಮಗುವು ಹೇಳುವಂತಿಲ್ಲ, ನೀಡಿರುವ ಸಮಯದ ಮಿತಿಯಲ್ಲಿ ಎಲ್ಲ ಪದಗಳನ್ನು ನೆನಪಿಸಿಕೊಂಡು ಹೇಳಿ ಮುಗಿಸಬೇಕು. ನೆನಪಿನ ಶಕ್ತಿಯ ಜೊತೆ ಜೊತೆಗೆ, ಮಕ್ಕಳಿಗೆ ಇನ್ನೊಬ್ಬರನ್ನು ಆಲೈಸುವುದೂ ಕೂಡ ತಿಳಿಯುತ್ತದೆ.



















ಸೋಮವಾರ, ಜನವರಿ 6, 2020

ಚಿತ್ರಸಂತೆಯ ಅನುಭವ

ಚಿತ್ರಸಂತೆ - ಕಲಾಸಕ್ತರಿಗೆ ಒಂದೇ ಸೂರಿನಡಿ ಅನೇಕ ಪ್ರಕಾರದ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಂಡು, ಆಸಕ್ತ ಚಿತ್ರಗಳನ್ನು ಕೊಂಡುಕೊಳ್ಳಲು ಅವಕಾಶ ಸಿಗಬಹುದಾದ ಒಂದು ದಿನದ ಹಬ್ಬ! ಕಲೆಯ ಹೊಸ ಹೊಸ ಸ್ವರೂಪಗಳನ್ನು ತಿಳಿದುಕೊಳ್ಳಲು, ನನಗೆ ಸಾಧ್ಯವಾದಾಗಲೆಲ್ಲ ಪ್ರತಿವರ್ಷದ ಚಿತ್ರಸಂತೆಯನ್ನು ಬಿಟ್ಟೂ ಬಿಡದೆ ಓಡಾಡಿಕೊಂಡು ಬರುವವಳು ನಾನು. ಈ ಸರ್ತಿಯೂ ಹೋಗಿದ್ದೆ ಆದರೆ ಚಿತ್ರಸಂತೆಯ ರಸ್ತೆಯ ಇಕ್ಕೆಲಗಳ ನೋಟಕ್ಕಾಗಿ ಅಲ್ಲ; ಚಿತ್ರಸಂತೆಯಲ್ಲಿ ನನ್ನ ಮಂಡಲ ಆರ್ಟ್ ಅನ್ನು ಪ್ರದರ್ಶಿಸುವ ಒಬ್ಬ ಕಿರಿಯ ಕಲಾವಿದೆಯಾಗಿ.. :)

ಚಿತ್ರಸಂತೆಯನ್ನು ನೋಡುಗರಾಗಿ ಹೋಗುವುದಕ್ಕೂ, ಅಲ್ಲಿನ ಒಂದು ಭಾಗವಾಗಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದು ನನ್ನ 'ರಸ್ತೆಯ ಆ ಕಡೆ ನಿಂತವರ ಅನುಭವದ ಕಥೆಗಳು'! ಅಲ್ಲಿ, ೮ ಗಂಟೆಯ ನಂತರ ಯಾವುದೇ ವಾಹನಗಳ ಓಡಾಟವನ್ನು ನಿಷಿದ್ಧಗೊಳಿಸುವುದರಿಂದ ನಾವು ನಮ್ಮ ನಮ್ಮ ಕಲಾಕೃತಿಗಳನ್ನು ಗಾಡಿಯಲ್ಲಿ ತರುವುದಾದರೆ, ಆದಷ್ಟು ಬೇಗ ಕೊಂಡೊಯ್ದಿಡಬೇಕಾಗುತ್ತದೆ. ಬೆಳಿಗ್ಗೆ ೭.೧೫ ಗೆ ಚಿತ್ರಸಂತೆಯ ರಸ್ತೆಯಲ್ಲಿ ನನ್ನ ಕಲಾಕೃತಿಗಳ ಸೂಟ್ಕೇಸ್ ಹಿಡಿದು ಇಳಿದು ನಿಂತಿದ್ದೆ. ಮೊದಲ ಅನುಭವವಾದ್ದರಿಂದ ಮನಸ್ಸಿನೊಳಗೆ ಪುಕುಪುಕು. ಆದರೂ ಗಣಪತಿ ಅಣ್ಣಯ್ಯ, ವಿಜಯಶ್ರೀ ಅಕ್ಕ, ಪ್ರಹ್ಲಾದಣ್ಣ ಎಲ್ಲರೂ ತಮ್ಮ ಪ್ರತಿಸಲದ ಅನುಭವಗಳನ್ನು ಈ ಮುಂಚೆ ನನ್ನೊಡನೆ ಹಂಚಿಕೊಂಡಿದ್ದರಿಂದ, ನಾನು ಮಾನಸಿಕವಾಗಿ ಪ್ರತಿಯೊಂದಕ್ಕೂ ಸಿದ್ಧವಾಗಿಯೇ ಹೋಗಿದ್ದೆ. ನನ್ನ ಸ್ಟಾಲ್ ನ ಸ್ಥಳಕ್ಕೆ ಹೋಗುತ್ತಿದ್ದಂತೆಯೇ ಮೊತ್ತ ಮೊದಲ ಶಾಕ್. ನನ್ನ ಸ್ಥಳದಲ್ಲಿ ಮತ್ತಿನ್ಯಾರೋ ತಮ್ಮ ಅಂಗಡಿಯನ್ನು ಹೂಡುತ್ತಿದ್ದರು. ಅಲ್ಲೊಂದಷ್ಟು ಚರ್ಚೆ, ಅವರುಗಳ ಕನ್ಫ್ಯೂಷನ್ ಅನ್ನು ನೀಗಿಸಿ ಸ್ಥಳವನ್ನು ಬಿಡಿಸಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಮತ್ತೆ ಮುಂದಿನ ಹಂತ. ಚಿತ್ರಸಂತೆ ಗೆ, ಕುಮಾರ ಕೃಪಾ ರಸ್ತೆಯ ಇಕ್ಕೆಲಗಳಲ್ಲೂ ಆಯ್ಕೆಗೊಂಡ ೧೫೦೦ ಆರ್ಟಿಸ್ಟ್ ಗಳಿಗೆ ಕಲಾಪ್ರದರ್ಶನಕ್ಕೆ ೫-೬ ಫೀಟ್ ಜಾಗವನ್ನು ಹಂಚಿರುತ್ತಾರೆ. ಸ್ಟಾಲ್ ಸ್ಥಳಕ್ಕೆ ಪ್ರತಿಯೊಬ್ಬ ಕಲಾವಿದನಿಗೂ ಒಂದು ಮೇಜು, ಒಂದು ಕುರ್ಚಿಯನ್ನು ನೀಡಲಾಗುತ್ತದೆ. ನಾನು ತಲುಪವಷ್ಟರಲ್ಲಿ ಅವುಗಳು ಇನ್ಯಾರದ್ದೋ ಸ್ವತ್ತಾಗಿ ಹೋಗಿತ್ತು :) ನಾನಿದ್ದ ಸ್ಥಳದಿಂದ ವಿಚಾರಣೆ ಮಾಡಲು ಆಫೀಸು ಸ್ಥಳಕ್ಕೆ ತಲುಪಬೇಕೆಂದರೆ ಅದು ಸಾಕಷ್ಟು ದೂರವಿತ್ತು. ಮಗಳನ್ನು ಮನೆಯಲ್ಲಿ ಬಿಟ್ಟು ಒಬ್ಬಳೇ ಬಂದಿದ್ದರಿಂದ ನನ್ನ ಲಗ್ಗೇಜನ್ನು ಬಿಟ್ಟು ಹೋಗುವುದು ಅಸಾಧ್ಯವಿತ್ತು. ಕಾರ್ಯಕರ್ತರು ಓಡಾಡಿಕೊಂಡು ಇರುತ್ತಾರಾದರೂ ಆ ಸಮಯಕ್ಕೆ ಅಲ್ಲಿ ಯಾರೂ ಕಾಣುತ್ತಿರಲಿಲ್ಲ. ಆಗ ನನ್ನ ಸಹಾಯಕ್ಕೆ ಬಂದವರು ಅಲ್ಲಿನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು. ನನ್ನ ಕೋರಿಕೆಯ ಮೇರೆಗೆ ಹೋಗಿ ಹುಡುಕಿ ಹೆಚ್ಚಿನ ಮೇಜುಗಳನ್ನು ಬಳಸಿಕೊಂಡಿದ್ದವರಿಂದ ಆವಾಜ್ ಹಾಕಿ ವಾಪಸು ತರಿಸಿಕೊಟ್ಟರು. ಇನ್ನು ಅಲ್ಲಿನ ಫುಟ್ಪಾತ್ ಗಳ ಮೇಲೆ ಸ್ಟಾಲ್ ಗಳನ್ನು ಹಾಕಬೇಕಾಗಿರುವುದರಿಂದ ನಮಗೆ ಯಾವ ರೀತಿಯ ಜಾಗ ಸಿಗುತ್ತದೆ ಎಂಬುದರ ಖಾತ್ರಿ ಹಿಂದಿನ ದಿನದ ವರೆಗೂ  ನಮಗೆ ಇರುವುದಿಲ್ಲ. ನನಗೆ ಸಿಕ್ಕ ಸ್ಥಳದಲ್ಲಿ ಸುಮಾರು ಅರ್ಧದಷ್ಟು ಜಾಗಕ್ಕೆ ಮರವೊಂದು ಅಡ್ಡವಾಗಿತ್ತು. ಹಿಂದಕ್ಕೆ ಆರ್ಟ್ ವರ್ಕ್ ಗಳನ್ನು ನೇತು ಹಾಕುವಂತಹ ಯಾವ ಸೌಲಭ್ಯವೂ ಇರಲಿಲಲ್ಲ. ಸಿಕ್ಕಿರುವ ಸ್ಥಳಾವಕಾಶದಲ್ಲೇ ಆರ್ಟ್ ವರ್ಕ್ ಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೇಜಿನ ಮೇಲೆ ಒಪ್ಪವಾಗಿ ಜೋಡಿಸಿಕೊಳ್ಳಬೇಕಾದ ಪರಿಸ್ಥಿತಿ ನನ್ನದಾಯಿತು. ಇದರ ಜೊತೆಗೆ ಮರಕ್ಕೆ ಅಡ್ಡಲಾಗಿ ಕುರ್ಚಿ ಹಾಕಿಕೊಂಡು ಕೂತರೆ ಬರುವ ಜನರನ್ನು ಮಾತನಾಡಿಸುವ ಅವಕಾಶವಾಗುತ್ತಿರದಿದ್ದರಿಂದ ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು ೧೨ ತಾಸುಗಳು ನಿಂತೇ ಇದ್ದೆ!! ಇನ್ನು ನಿಸರ್ಗ ಕರೆ ಎಂದು ಸ್ಟಾಲ್ ಅನ್ನು ಬಿಟ್ಟು ಹೋಗಲು ಸಾಧ್ಯವಿಲ್ಲವೆಂದು ಬೇಕಾದಷ್ಟು ನೀರನ್ನು ಕುಡಿಯದೆ ಇದ್ದಿದ್ದೂ ಕೂಡ ಸತ್ಯ ;)

ಇನ್ನು ನನಗೆ ಎಲ್ಲರೂ ಕೇಳಿದ, ಹೌ ವಾಸ್ ದ ರೆಸ್ಪಾನ್ಸ್? ಎನ್ನುವ ಸರ್ವೇ ಸಾಮಾನ್ಯ ಪ್ರಶ್ನೆ.. ನಾನು ಕಷ್ಟಪಟ್ಟು ತಯಾರಿಸಿದ ಸಾಕಷ್ಟು ಮಂಡಲ ಆರ್ಟ್ ವರ್ಕ್ಸ್ ಮತ್ತು ಮಂಡಲ ಪ್ರಾಡಕ್ಟ್ ಗಳು ಜನರಿಗೆ ಇಷ್ಟವಾದವು. ಸಾಕಷ್ಟು ಜನರು ಕೊಂಡರು. ಆದರೆ ದುಡ್ಡಿಗಿಂತ ಮಿಗಿಲಾಗಿ ನನಗಾದ ಸಂತೋಷವೆಂದರೆ, ವಸ್ತುಗಳನ್ನು ಕೊಳ್ಳದವರೂ ಸಹ, ಸುಮಾರು ೮೦% ಜನರು, "ನೈಸ್ ವರ್ಕ್, ತುಂಬಾ ಚೆನ್ನಾಗಿದೆ.." ಎಂದು ಮೆಚ್ಚುಗೆಯನ್ನು ತಿಳಿಸಿದ್ದು.. ಈ ಮೆಚ್ಚುಗೆ ಯಾವುದೇ ಕಲಾವಿದನಿಗೆ ಅತ್ಯಂತ ಹಿತವಾದ ಅನುಭವ.. ಅದನ್ನು ಪಡೆದದ್ದು ನನ್ನ ಪಾಲಿನ ತೃಪ್ತಿ.. !

ಸಿ.ಕೆ.ಪಿ ಯವರ ಇತರ ವ್ಯವಸ್ಥೆಗಳು ಖುಷಿ ಕೊಟ್ಟವು.ಬೆಳಿಗ್ಗೆ ತಿಂಡಿಯ ವ್ಯವಸ್ಥೆ ಸಿ.ಕೆ.ಪಿ ಆವರಣದಲ್ಲಿ ಮಾಡಿರಲಾಗುತ್ತದೆ. ಮಧ್ಯಾಹ್ನದ ಊಟವನ್ನು ನಮ್ಮ ಸ್ಥಳಕ್ಕೆ ತಂದು ಕೊಡುತ್ತಾರೆ. ಶುಚಿ ರುಚಿ ಆಹಾರ. ಕಾರ್ಯಕರ್ತರು ಆಗಾಗ್ಗೆ ಓಡಾಡಿಕೊಂಡಿದ್ದು ಮುಕ್ತವಾಗಿ ಸಹಾಯ ಮಾಡಲು ತಯಾರಿರುತ್ತಾರೆ. ನನ್ನ ಮಗಳನ್ನು ಕೂರಿಸಿಕೊಳ್ಳಲು ಕುರ್ಚಿ ಕೇಳಿದಾಗ ತಕ್ಷಣಕ್ಕೆ ತಂದು ಕೊಟ್ಟರು. ಮುಖ್ಯವಾಗಿ ನಮ್ಮ ಸ್ಥಳವನ್ನು ನಾವು ಗಲೀಜು ಮಾಡಿಕೊಳ್ಳದಿರಲು ಕಸ ಹಾಕಲು ಕೊಟ್ಟೆಯನ್ನೂ ನೀಡಿರುತ್ತಾರೆ. ದಿನದ ಕೊನೆಯಲ್ಲಿ ಕಸಗಳನ್ನು ತುಂಬಿ ತೆಗೆದಿಟ್ಟು ಹೋದರಾಯಿತು. ಲಕ್ಷಗಟ್ಟಲೆ ಜನ ಸೇರುವುದರಿಂದ, ಗಲಾಟೆ ತೊಂದರೆಯಾಗದಂತೆ ಪೊಲೀಸ್ ಕಾವಲು, ಅಲ್ಲಲ್ಲಿ ಸಿಸಿ ಟೀವಿ ಕ್ಯಾಮೆರಾ ಅಳವಡಿಸಿರುತ್ತಾರೆ. ಒಂದು ದಿನದ ಮಟ್ಟಿಗೆ ಆ ರಸ್ತೆಗಳ ವಾಸಿಗರು ಬೆಳಿಗ್ಗೆ ೮ ರಿಂದ ರಾತ್ರೆ ೮ ರವರೆಗೆ ತಮ್ಮ ತಮ್ಮ ಮನೆಯಿಂದ ವಾಹನಗಳನ್ನು ಹೊರತೆಗೆಯುಂವಂತಿರುವುದಿಲ್ಲ. ಹಾಗಾಗಿ ಅವರುಗಳ ಸಪೋರ್ಟ್ ಕೂಡ ಮೆಚ್ಚುಗೆಯಾಯಿತು. ತಿಂಡಿ ಗಾಡಿಯವರಿಗೆ ರಸ್ತೆಯ ಕೊನೆಗಳಲ್ಲಿ ಮಾತ್ರ ನಿಲ್ಲಲು ಅವಕಾಶ, ಆದಷ್ಟು ಚಿತ್ರಸಂತೆಯ ಒಳಗಡೆಗೆ ತಿಂಡಿ ಗಾಡಿಗಳನ್ನು ಬಿಡದೆ ಸ್ವಚ್ಛತೆಯ ಕಾಯ್ದಿರಿಸಲಾಗುತ್ತದೆ. ಕಸದ ಬುಟ್ಟಿ ಗಳನ್ನು ಅಲ್ಲಲ್ಲಿ ಬಳಕೆಗೆ ಇಟ್ಟಿರುತ್ತಾರೆ. ಹಾಗೆಂದು ಎಲ್ಲವೂ ಸುಖೀ ಅನುಭವೆಂದೇನಲ್ಲ, ಚಿತ್ರಸಂತೆ ಕಾರ್ಯಕ್ರಮಕ್ಕೆ ಬರುವಾಗ ಆಗುವ ಅನುಭವಗಳ ಇನ್ನೊಂದು ಮುಖವೂ ಅಷ್ಟೇ ಕರಾಳ. ಕ್ಯಾಬ್ ಮತ್ತು ಆಟೋದವರ ಹಗಲು ದರೋಡೆ ಅತ್ಯಂತ ಹೆಚ್ಚು.. ಚಿತ್ರಸಂತೆಯ ಸ್ಥಳದ ವರೆಗೆ ಬರಲು ಅಥವಾ ಅಲ್ಲಿಂದ ನಮ್ಮಗಳ ಲಗ್ಗೇಜ್ ಹಾಕಿಕೊಂಡು ಹೋಗಲು ಲಗತ್ತಿಸಿದ ಮೀಟರ್ ಕಿಂತ ದುಪ್ಪಟ್ಟು ದುಡ್ಡನ್ನು ಕೇಳುತ್ತಾರೆ. ನಮ್ಮಗಳ ಅನಿವಾರ್ಯತೆಯನ್ನು ಬಳಸಿಕೊಳ್ಳುವ ಕುತಂತ್ರ :( ನನ್ನ ಸ್ಟಾಲ್ ಶಿವಾನಂದ ಸರ್ಕಲ್ ನ ಶುರುವಿಗೆ ಇದ್ದಿದ್ದರಿಂದ, ತಿಂಡಿಗಳ ಗಾಡಿಗಳಿಂದಲೇ ಜನರ ಸ್ವಾಗತವಾಗುವುದಕ್ಕೆ, ಎಷ್ಟೇ ಕಸದ ಬುಟ್ಟಿಗಳಿದ್ದರೂ, ಬಳಸದ ಅನಾಗರೀಕರಿಂದ ನಮ್ಮ ಮುಂದಿನ ರಸ್ತೆಯೆಲ್ಲ ಗಲೀಜು ಆಗಿದ್ದು ಅತ್ಯಂತ ಖೇದವೆನಿಸಿತು.. 

ಗಂಟೆಗಟ್ಟಲೆ ಕುಳಿತು, ಶ್ರಮಪಟ್ಟು ಸೃಷ್ಟಿಸುವ ಕಲೆಯ ಜೊತೆಗೆ, ಅದನ್ನು ಜನರಿಗೆ ತಲುಪಿಸುವ ವರೆಗಿನ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು, ಸಕಾರಾತ್ಮಕ ಆಲೋಚನೆಗಳಿಂದ ಪರಿಹರಿಸಿಕೊಳ್ಳುವ ಹೊಸ ಹೊಸ ಪಾಠಗಳನ್ನು ಕಲಿಸುವ, ಹೊಸ ಬಗೆಯ ಅನುಭವಗಳನ್ನು ನೀಡುವ ಇಂತಹ ಕಾರ್ಯಕ್ರಮಗಳು ಮತ್ತೆ ಮತ್ತೆ ನನಗೆ ದೊರಕಲಿ ಎಂಬುದೇ ನನ್ನ ಬೇಡಿಕೆ.