ಸೋಮವಾರ, ಫೆಬ್ರವರಿ 13, 2023

ಮಗಳು ಮೀನು ಹಿಡಿದಳು..

ಮಗಳು ಮೀನು ಹಿಡಿದಳು.. 


ಸಂಜೆ ಆಫೀಸು ಕೆಲಸ ಮುಗಿದ ಮೇಲೆ ವಾಕಿಂಗ್ ಹೋಗುವ ರೂಡಿ. ಒಮ್ಮೊಮ್ಮೆ ಮಗಳೂ ಜೊತೆಯಾಗುತ್ತಾಳೆ. ಹತ್ತಿರದ ಕೆರೆಪಾರ್ಕಿನಲ್ಲಿ ನಮ್ಮ ವಾಕಿಂಗು. ಅದೊಂದು ದಿನ, ಕೆರೆಪಾರ್ಕಿನ ಹತ್ತಿರದ ಪುಷ್ಕರಣಿಯ ಬಳಿ ಸ್ನೇಹಿತೆಯೊಡನೆ ಮಾತನಾಡುತ್ತ ಕೂತಿದ್ದೆ. ಮಗಳು ಕೊಳದಲ್ಲಿನ ನೀರು, ಮೀನು, ಆಮೆ ಇತ್ಯಾದಿ ನೋಡುತ್ತಾ ಆಡುತ್ತಿದ್ದಳು. ತನಗೆ ಬೇಕಾದ ಕಲ್ಲು, ಕೋಲು, ಎಲೆ-ಬೀಜಗಳನ್ನು ಒಟ್ಟು ಮಾಡಿಕೊಳ್ಳಲು ಅವಳು ಡಬ್ಬಿ, ಚೀಲಗಳನ್ನು ಒಮ್ಮೊಮ್ಮೆ ಹಿಡಿದು ತರುವುದುಂಟು. ನಮ್ಮ ಕಟ್ಟೆ ಹರಟೆ ನಡೆದಿತ್ತು. ಅಲ್ಲೇ ಅಣತಿ ದೂರದಲ್ಲಿ ಎರಡು ಮಕ್ಕಳು, ಪುಷ್ಕರಣಿಯ ಮೆಟ್ಟಿಲುಗಳ ಕೊನೆಯ ಮೆಟ್ಟಿಲಲ್ಲಿ ಕುಳಿತು, ತಮ್ಮ ತಮ್ಮಲ್ಲೇ ಮಾತನಾಡುತ್ತ ಆಗಾಗ ಚಂಗನೆ ಕೆರೆಗೆ ಕೈಹಾಕಿ ನೀರು ಎತ್ತುತ್ತಿದ್ದರು.  "ಎಂತ ಮಾಡ್ತಿದ್ದೀರೋ.." ಕೇಳಿದೆ. "ಆಂಟಿ, ಮೀನಿನ್ ಮರಿ ಹಿಡೀತಿದೀವಿ.." ಅಂತ ಅಂದ ಒಬ್ಬ ಚೋಟು. "ಎಂತ ತಿಂತೀರಾ ಹಿಡ್ಕಂಡು?" ಕೇಳಿದೆ. "ಆಂಟಿ, ಅಲ್ಲಿ ಅಕ್ವೇರಿಯಂ ಅಂಗಡಿ ಇದೆ, ಒಂದು ಮೀನಿಗೆ ಎರಡು ರೂಪಾಯಿ ಕೊಡ್ತಾರೆ ತಗಂಡು ಕೊಟ್ರೆ.." ಎಂದ ಇನ್ನೊಬ್ಬ ಕಣ್ಣರಳಿಸಿಕೊಂಡು. ಇವೆಲ್ಲವನ್ನೂ ಮೆಲ್ಲನೆ ಕಿವಿಗೆ ಹಾಕಿಕೊಂಡ ನಮ್ಮನೆ ಮೇಡಮ್ಮು ನಿಧಾನಕ್ಕೆ ಒಂದೊಂದೇ ಮೆಟ್ಟಿಲು ಕೆಳಗಿಳಿದು ಕೂರತೊಡಗಿದಳು. "ಸಾನ್ವಿ ಎಂತ ಯೋಚ್ನೆ ಮಾಡಿದೆ ನೀನು?" ಎಂದು ಕೇಳಿದೆ. "ನಾನು ನೀರನ್ನ ಹತ್ರದಿಂದ ನೋಡ್ತಿ, ಮೀನೆಲ್ಲ ಕಾಣ್ತಾ ನೋಡ್ತಿ.. " ಎಂದು ನಿಧಾನಕ್ಕೆ ಉಸುರಿದಳು. "ಅಯ್ಯೋ ಹೋಯ್ತಲ್ಲೋ; ಏ ಎತ್ತಲೇ; ಮಗನೆ ನೀ ಎಂತಕ್ಕೂ ಪ್ರಯೋಜನಕ್ಕಿಲ್ಲ, ಮನೆಗ್ ಹೋಗಿ ಮಲ್ಕೋ.. " ಎಂಬಿತ್ಯಾದಿ ಅವರುಗಳ ಡೈಲಾಗಿಗೆ ಈ ಕಡೆಯಿಂದ ಮೀನು ನೋಡಲೆಂದು ಬಗ್ಗಿದವಳ ಮನಸ್ಸು ತಡೆಯದಾಯಿತು. ಮೆಲ್ಲನೆ ತನ್ನ ಕಾರ್ಯಾಚರಣೆ ಶುರು ಮಾಡಿದಳು. ಶುರುವಿಗೆ ಒಟ್ರಾಶಿ ನೀರಿನಲ್ಲಿ ತನ್ನ ಡಬ್ಬಿ ಮುಳುಗಿಸುವುದು, ಮೀನು ಬಂತಾ ನೋಡುವುದು.. ಮೀನು ಹತ್ತಲ್ಲ ಇವಳು ಬಿಡಲ್ಲ! ಅವರುಗಳ ಪ್ರಯತ್ನ, ಸೋಲು, ಮಾತುಕತೆ ಎಲ್ಲ ಗಮನಿಸುವುದು, ತಾನೂ ಪ್ರಯತ್ನಿಸುವುದು. "ಸರಿಯಾಗಿ ನೋಡ್ತಾ ಇರು, ನೀರು ತೆಳುವಾಗ್ಲಿ, ಮೀನು ಮೇಲೆ ಬರಾಕ್ಶುರು ಮಾಡವರೆಗೆ ಸ್ಟ್ಯಾಚು ತರ ಕೂತಿರಲೇ ನೀನು, ಅಲ್ಲಾಡ್ತಾ ಇರ್ಬೇಡ..." ಎಂದು ಒಬ್ಬ ಇನ್ನೊಬ್ಬನಿಗೆ ಬೈದ. ಈ ಕಡೆ ನಮ್ಮನೆ ಮೂರ್ತಿ ಕೊರಡಾಯಿತು. ಮತ್ತೊಂದಷ್ಟು ಪ್ರಯತ್ನ..ಅಲ್ಲಿ ಆ ಕಡೆಗೆ ಆ ಮಕ್ಕಳಿಗೆ ಮೂರ್ನಾಲ್ಕು ಮೀನಿನ ಪುಟ್ಟ ಪುಟ್ಟ ಮರಿಗಳು ಸಿಕ್ಕಿ ಅವು ಖುಶಿ ಪಡುತ್ತಿದ್ದವು. ಈ ಕಡೆಗೆ - ಕೆರೆಯ ನೀರನು ಕೆರೆಗೆ ಚೆಲ್ಲಿ ಮಾತ್ರ ಆಗ್ತಾ ಇತ್ತು. ಆದರೂ ಮೀನು ಹಿಡಿಯಬೇಕು. ಮತ್ತಷ್ಟು ಗಮನ ಕೊಟ್ಟಳು. ಸ್ವಲ್ಪ ಹೊತ್ತಿನಲ್ಲೇ ಕೂಗಿದಳು. "ಅಮ್ಮ ಮೀನು ಬಂದು ಹತ್ಕ್ಯ ಬಿಟಿದು, ಇಲ್ನೋಡಿಲ್ಲಿ.." ಎನ್ನುತ್ತಾ ಉತ್ಸಾಹದಲ್ಲಿ ತಂದು ತೋರಿದಳು. ಹೌದೇ ಹೌದು..ಅದು ಕಸ ಅಲ್ಲ; ಜೀವಂತ ಮೀನಿನ ಮರಿ! ನಂಗೆಂತು "ಅದಕೆ ಮೀನು ಬಂದು ಹತ್ತಿಕೊಂಡಿತು..ಲೀ ಲೀ ಲೀ ಲೀ ಲೀ ಲೀ ಲಾ..." ಅಂತ ಬೇರೆ ಬ್ಯಾಕ್ಗ್ರೌಂಡಿನಲ್ಲಿ ಕಾಂತಾರ ಹಾಡು ಬೇರೆ ಗುನುಗಿ ಹೋಯಿತು. ಹತ್ತಿರ ಹೋಗಿ ನೋಡಿದರೆ ಗೊಜಮೊಟ್ಟೆ.. ಏನೇ ಆಗಲಿ ಮಗಳು ಮೊದಲ ಬಾರಿಗೆ ಮೀನು ಹಿಡಿದಿದ್ದಳು.. ಎಲ್ಲ ನೋಡಿ ಸಂಭ್ರಮಿಸಿದ್ದಾಯಿತು. ನಾವು ಚಿಕ್ಕಂದಿನಲ್ಲಿ ತೋಟದ ಕಾಲುವೆ ನೀರಿನಲ್ಲಿ ಮೀನು ಹೇಗೆ ಎಲೆಯಿಂದ ಹಿಡಿಯುತ್ತಿದ್ದೆವು ಕಥೆ ಎಲ್ಲ ಹೇಳಿಯಾಯಿತು. ಮುಂದಕ್ಕೆ ಬಂತು ಸಮಸ್ಯೆ. ಮೀನನ್ನು ಅಕ್ವೆರಿಯಂ ನಲ್ಲಿಟ್ಟರೆ, ಸ್ವಚ್ಛಂದವಾಗಿ ಕೆರೆಯಲ್ಲಿದ್ದಂತೆ ಅದು ಜೀವನ ಸಂಭ್ರಮಿಸುವುದಿಲ್ಲ ಎಂದು ಮುಂಚೆ ಬೇಜಾರು ಮಾಡುತ್ತಿದ್ದವಳೂ ಇವಳೇ. ಆದರೆ ಇಂದು ಮೊದಲ ಬಾರಿಗೆ ಜೀವನದಲ್ಲಿ ಸ್ವಂತ ಸಂಪಾದನೆಯ ಪೆಟ್ ಅನಿಮಲ್ ಎದುರಿಗಿದೆ.  ಅತ್ತ ಬಿಡಲೊಲ್ಲಳು, ಇತ್ತ ಇಟ್ಟುಕೊಳ್ಳಲು ಚಿಕ್ಕ ಮರಿಯದು ಅದನ್ನ ಅದರ ಮನೆಯಿಂದ ಎತ್ತಿ ಕೊಂಡೊಯ್ಯಲು ಮನಸ್ಸು ಬಾರದು. ಮುಂದೇನು ಮಾಡುವುದು ಎಂಬ ನಮ್ಮ ಚರ್ಚೆಗೆ ಅವಳೇ ಉತ್ತರಿಸಿ. "ಅಮ್ಮ ಈ ಮೀನು ಕೆರೆ ಬಿಟ್ರೆ ಇನ್ನೆಂತೂ ನೋಡಲ್ಲೇ, ಅದಕ್ಕೆ ಒಂದಿನ ಪಿಕ್ಣಿಕ್ ಮಾಡಸನ. ನಮ್ಮನೆ ಎಲ್ಲ ತೋರ್ಸನ.." ಎನ್ನುತ್ತಾ ಕುಣಿದಳು. ಇದ್ಯಾಕೋ ಮಂಗನ ಉಪವಾಸದ ಕತೆ ಆಗಿಬಿಟ್ರೆ ಎಂದು ಒಮ್ಮೆ ಅನಿಸಿದರೂ ಇರಲಿ ಮುಂದಕ್ಕೆ ಏನು ಮಾಡ್ತಾಳೆ ನೋಡೋಣ ಎಂದು ಅವಳ ಬೇಡಿಕೆಗೆ ಅಸ್ತು ಎನಲಾಯಿತು. ತಾನು ಹಿಡಿದ ಮೀನಿನ ಮರಿಯ ಹಾದಿಯುದ್ದಕ್ಕೂ ನೋಡುತ್ತಾ ಮನೆಗೆ ಕರೆತಂದಳು. ಮೀನು ಮಲಗಿದ್ದು, ಓಡಿದ್ದು ಎಲ್ಲಾ ನೋಡುವುದರ ಜೊತೆಗೆ,  ಫ್ರೆಂಡ್ಸಿಗೆಲ್ಲ ತೋರಿಸುವ ಸೆಶನ್ ಬೇರೆ. ಆ ಪುಟ್ಟ ಮೀನುಗಳು  ಎಲ್ಲರಿಗೂ ಕಾಣಬೇಕೆಂದು, ತನ್ನ ಬೂತಕನ್ನಡಿಯ ಜೊತೆ ಅದಕ್ಕಿರುವ ಲೈಟ್ ಆನ್ ಮಾಡಿ, ಮನೆಯ ಜಗಲಿಯಲ್ಲಿ ಅಕ್ವಾ ಶೋ ಏರ್ಪಡಿಸಲಾಯಿತು. ಅದಕ್ಕೆ ಟಿಕೇಟು ಸಿಸ್ಟಮ್ ಬೇರೆ! "ಹೇ ದಿಸ್ ಇಸ್ ಟ್ಯಾಡ್ಪೋಲ್ ಎಂದು ಒಬ್ಬಳು, ನೋ ದಿಸ್ ಐಸ್ ಸಿಲ್ವರ್ ಫಿಶ್ ಎಂದು ಇನ್ನೊಬ್ಬಳು, ವಾಟ್ ಫುಡ್ ಆರ್ ಯು ಗೋಯಿಂಗ್ ಟು ಪುಟ್ ಎಂದು ಒಬ್ಬಳು ಕೇಳಿದರೆ, ದಿಸ್ ಈಟ್ಸ್ ಪ್ಯಾಕ್ಡ್ ಫಿಶ್ ಫುಡ್ ಎಂದು ಮತ್ತೊಬ್ಬಳು. ಎಲ್ಲಾ ಮಾತುಗಳನ್ನು ಕೇಳುವ ಮಜ ನಮ್ಮದು ಆದರೆ ಅಷ್ಟೇ ಮನೆ ಎನ್ನುವುದು ಲಿಟರಲ್ಲಿ ಅಂದು ಫಿಶ್ ಮಾರ್ಕೆಟ್ ಆಗಿತ್ತು! ಯಾರ್ಯಾರೋ ಹೋಗುತ್ತಾರೆ, ಯಾರ್ಯಾರೋ ಬರುತ್ತಿದ್ದಾರೆ. "ಬಾಗಿಲು ಹಾಕ್ರೆ, ಸೊಳ್ಳೆ ಬರೋ ಹೊತ್ತು.." ಎಂದು ನಾನು ಕೂಗಿದರೆ, "ಏನಮ್ಮ, ಇಷ್ಟು ಚಂದ ಮೀನು ಬೈಂದು, ನಿಂಗೆ ಸೊಳ್ಳೆದೆ ಚಿಂತೆನ..." ಎಂದು ದಬಾಯಿಸಿದಳು ಮಗಳು. ಹೆತ್ತವರಿಗೆ ಹೆಗ್ಗಣ ಮುದ್ದಾದ್ರೆ, ಹಿಡಿದವರಿಗೆ ಗೊಜಮೊಟ್ಟೆ ಮುದ್ದು.. ಆ ಮೀನಿಗೂ ಸಾಕಾಯ್ತು ಇವರ ತಾಳಕ್ಕೆ ಕುಣಿದು, ಅಲ್ಲಲ್ಲ ಈಜಿ ಈಜಿ.. ಅದು ಹಾಲ್ಟ್ ಆಯ್ತು.. ಹ್ಹೋ, ಮೀನಿಗೆ ಸುಸ್ತಾಯ್ತು - ಅದ್ರ ಆಹಾರದ ಚರ್ಚೆ ಅಂತೂ ಕೇಳುವುದೇ ಬೇಡ. ಮೀನು ತಿನ್ನುವಷ್ಟು ತಿಂಡಿ ಈ ಮಕ್ಳ ಹೊಟ್ಟೆಗೆ ಹಾಕಕ್ಕೆ ನಾವು ಪೋಷಕರು ಅದೆಷ್ಟು ಒದ್ದಾಡುತ್ತೇವೋ , ಇವುಕ್ಕೆ ಮೀನಿನ ಮೀಲ್ಸ್ ಬಗ್ಗೆ ದೊಡ್ಡು ಚಿಂತೆ! ಅನ್ನದ ಅಗಳು ತೆಗೆದುಕೊಂಡು ಹೋಗಿ ಹಾಕ್ಯಿಯಾಯಿತು, ಅದಕ್ಕೆ ತರಕಾರಿ ಬೇಕು ಎಂದು ಬೇಯಿಸಿದ ಕ್ಯಾರೆಟಿನ ತುಂಡನ್ನೆಸೆದರು. ಬ್ರೆಡ್ ತಿನ್ನತ್ತೆ ಮೀನು ಎಂದು ಮತ್ತೊಬ್ಬಳು ತಮ್ಮ ಮನೆಯಿಂದ ಬ್ರೆಡ್ಡಿನ ಚೂರನ್ನು ತಂದಳು. ಏನು ಮಾಡಿದರೂ ಆ ಮೀನು ಮಾತ್ರ ಮಿಸುಕಾಡುವುದಿಲ್ಲ, ಇವರುಗಳು ಕೊಟ್ಟ ತಿಂಡಿ ತಿನ್ನುವುದಿಲ್ಲ. "ಅಮ್ಮ ಎಂತ ಮಾಡಿರೂ ಸಹ ತಿಂತಲ್ಲೆ ಫುಡ್.." ಎಂದು ಬೇಜಾರಾದವಳಿಗೆ, ಸಿಕ್ಕಿದ್ದೇ ಛಾನ್ಸು ಎಂದು "ಅದಕ್ಕೆ ರೆಸ್ಟ್ ಬೇಕೀಗ.. ಎಲ್ರೂ ನಿಮ್ ನಿಮ್ ಮನೆಗೆ ಹೋಗಿ. ನಾಳೆ ಅಷ್ಟ್ರಲ್ಲಿ ಫುಡ್ ಎಲ್ಲ ಖಾಲಿ ಆಗಿರತ್ತೆ" ಅಂದೆ ಮೀನಿಗೊಂದು ಥ್ಯಾಂಕ್ಸ್ ಹೇಳುತ್ತಾ. ಮರುದಿನ ನೋಡುವಷ್ಟರಲ್ಲಿ, ಆ ಡಬ್ಬ ಕಲಗಚ್ಚಿನ ಬಾನಿಯಾಗಿದೆ. ಹಿಂದಿನ ದಿನ ಹಾಕಿದ್ದ ಆಹಾರವಲ್ಲದೆ, ಮಂಡಕ್ಕಿ, ಅಕ್ಕಿ ಕಾಳು, ಹಿಂಗೋಲಿ, ಸ್ವಲ್ಪ ಹುಲ್ಲು, ಬೀಟ್ರೂಟ್ ಎಲ್ಲವೂ ಇದೆ. ಆ ಟ್ರಾಫಿಕ್ ಜಾಮಿನಲ್ಲಿ ಮೀನು ಬದುಕಿದೆಯೋ ಸತ್ತಿದೆಯೋ ನೋಡಕ್ಕಾಗುತ್ತಿಲ್ಲ ನಂಗೆ. "ನಾ ಡಿಫರೆಂಟ್ ಫುಡ್ ಟ್ರೈ ಮಾಡಿದಿ ಕೊಡಕ್ಕೆ.." ಎಂದಳು ಮೀನಿನೊಡತಿ.  "ಅದಕ್ಕೆ ಮೋಸ್ಟ್ಲಿ ಮನೆಗೆ ಹೋಗಕ್ಕು ವಾಪಾಸ್ ಅನ್ಸ್ತಿದ್ದೇನ, ಫ್ಯಾಮಿಲಿ ಹತ್ರ..." ಎಂದೆ, ಮುಂದೆ ಎದುರಾಗುವ ಇನ್ನಷ್ಟು ಅವಾಂತರಗಳ ನೆನೆದು. ಡಬ್ಬಿ ಸ್ವಚ್ಛತೆ ಮಾಡಲಾಯಿತು. ಮತ್ತೊಂದು ಹತ್ತು ನಿಮಿಷ ಬೇಕು ಬೇಡಗಳನ್ನು ಕಚಪಿಚ ಮಾತಾಡಿಕೊಂಡು, ಅತ್ಯಂತ ಒಲ್ಲದ ಮನಸ್ಸಿನಿಂದ  ಮೀನನ್ನು ವಾಪಸು ಬಿಡುವುದು ಎಂಬ ತೀರ್ಮಾನಕ್ಕೆ ಬಂದಂಗಾಯ್ತು..  ಉಸ್ಸಪ್ಪ, ಅಂತೂ ಇಂತೂ ಅದನ್ನ ವಾಪಸು ನೀರಿಂದ ಹೊಂಡಕ್ಕೆ ತಲುಪಿಸಬೇಕು ಎಂದುಕೊಂಡು ಸಂಜೆ ಮತ್ತೆ ವಾಕಿಂಗ್ ಹೋದೆವು. ಪುಷ್ಕರಣಿ ಸಮೀಪಿಸಿತು. ಗಣಪತಿ ಹಬ್ಬದ ನಂತರ ಗಣಪತಿ ಕಳಿಸುವಾಗ ಆಗುವಷ್ಟು ಎದೆ ಭಾರ ಮಗಳಿಗೆ. ಆದರೂ ಅದರ ಖುಷಿಯನ್ನು ನೆನೆದು " ಕೊಡು ಕೆಳಗೆ ಹಾಕಿಕ್ ಬತ್ತಿ ಕೆರೆಗೆ.." ಎಂದು ಅವಳು ಡಬ್ಬಿಯನ್ನು ಎತ್ತುವುದಕ್ಕೂ, ಒಂದು ಫೋಟೋ ತೆಗದು ಕೊಡ್ತಿ ಕೊಡು ಎಂದು ನಾನು ಹಾಕುವುದಕ್ಕೂ ಸರಿಯಾಗಿ, ಇಬ್ಬರ ಕೈ ಪರಸ್ಪರ ತಾಗಿ, ಸ್ವಲ್ಪ ನೀರು ನೆಲಕ್ಕೆ ಚೆಲ್ಲಿತು, ಡಬ್ಬಿಯಲ್ಲಿ ಇವಳ ಮೀನಿಲ್ಲ. ಅದೋ, ಹೇಳಿಕೇಳಿ ಪುಷ್ಕರಣಿಯ ಸುತ್ತ ಚಪ್ಪಡಿ ಕಲ್ಲುಗಳ ಮೆಟ್ಟಿಲುಗಳು. ಅಷ್ಟು ನೀರು ಚೆಲ್ಲಿದ ಜಾಗದಲ್ಲೂ ಆ ಪುಟ್ಟ ಮೀನು ಕಾಣ್ತಿಲ್ಲ. ನೀರ ಬಿಟ್ಟು ಜೀವಿಸಲಾರದು ಅದು. ತಂದಿದ್ದೇವೆ ವಾಪಾಸ್ ಮನೆಗೆ ಕಳುಹಿಸಲು ಅದೆಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದೆಯೋ ಕಾಣ್ತಿಲ್ಲ ನಮಗೆ. ಕಣ್ಣು ಮಂಜಾಗತೊಡಗಿತು. ಇಲ್ಲ, ಎಲ್ಲಿ ಎಷ್ಟು ಗಮನ ಇಟ್ಟು ಹುಡುಕಿದರೂ ಕಾಣ್ತಿಲ್ಲ. "ಮೊದಲು ಒಂದಷ್ಟು ನೀರು ಸುರಿ ಈ ಜಾಗಕ್ಕೆ" ಎಂದು ಮತ್ತೊಂದಷ್ಟು ನೀರು ಮಗಳ ಹತ್ರ ಹೊಂಡದಿಂದ ತರಿಸಿಕೊಂಡು ಸುರಿಯಲಾಯಿತು. ೧೦೦-೧೨೦ ಸೆಕೆಂಡುಗಳ ನಂತರ, ಎಲ್ಲೋ ಒಂದು ಕಡೆ ಪುಟಿಯುತ್ತಿದ್ದ ಇವಳ ಚಿನ್ನದ ಗಣಿಯನ್ನು, ಪ್ರೀತಿಯ ಕಣ್ಮಣಿಯನ್ನು ಹುಡುಕಿ ತೆಗೆದು, ಮಗಳು ಮೀನನ್ನು ನೀರಿಗೆ ವಾಪಸು ಬಿಟ್ಟಳು ಎಂಬಲ್ಲಿಗೆ..


ಮಗಳು ಮೀನು ಹಿಡಿದಳು ಕಥೆ ಸಮಾಪ್ತಿ! 


ಧನ್ಯವಾದಗಳು


#ಸಾನ್ವಿಸ್ಟೋರಿ #childhoodmilestones