ಬುಧವಾರ, ಜುಲೈ 24, 2019

ಎಸ್.ಪಿ.ಎಸ್ ಫೋಟೋಗ್ರಫಿ ಕಾರ್ಯಾಗಾರ ೨೦೧೯

ಒಂದು ಸೂರು, ೬೦ ಜನ, ೩ ದಿನ, ಬೆಳಿಗ್ಗೆ ೭ ರಿಂದ ರಾತ್ರೆ ೯.೩೦ ವರೆಗಿನ ೧೪ ತಾಸುಗಳ ಲವಲವಿಕೆಯ ಕಾರ್ಯಕ್ರಮ..ಪಾಠ, ಚರ್ಚೆ, ಮಾತು-ಕಥೆ, ಹರಟೆ, ತಿರುಗಾಟ, ಒಳ್ಳೆ ಊಟ ಎಲ್ಲವೂ ಅಲ್ಲೇ ಅಡಕ.. ಹೈಸ್ಕೂಲಿನಲ್ಲಿ ಓದುತ್ತಿರುವ ಹುಡುಗನಿಂದ ಹಿಡಿದು ನಿವೃತ್ತರವರೆಗೆ ಎಲ್ಲರೂ ಅಲ್ಲಿ ಉತ್ಸಾಹಿಗಳು.ಅಲ್ಲಿದ್ದವರೆಲ್ಲ ಒಂದೇ ಊರಿನವರಲ್ಲ, ಕರ್ನಾಟಕದ ನಾನಾ ಪ್ರದೇಶಗಳಿಂದ ಬಂದವರು. ಹಿನ್ನೆಲೆ ಕೇಳಿದರೆಂತೂ  ಒಬ್ಬೊಬ್ಬರೂ ಒಂದೊಂದು ತರ. ಪಾಠ ಹೇಳುವ ಟೀಚರ್ರುಗಳು, ವಿದ್ಯಾಭ್ಯಾಸ ಮಾಡುತ್ತಿರುವ ಸ್ಟೂಡೆಂಟ್ಸ್, ಎಂಜಿನೀಯರ್ಗಳು, ಬ್ಯಾಂಕ್,  ಅನೇಕ ಖಾಸಗೀಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಸ್ಟುಡಿಯೋ, ಕಲೆ, ಸಾಹಿತ್ಯ, ಕೃಷಿ, ಹೀಗೆ ನಾನಾ ಬಗೆಯ ಕ್ಷೇತ್ರದಿಂದ ಬಂದವರು...ಏಕರೂಪತೆ ಇದ್ದಿದ್ದು ಮಾತ್ರ ಒಂದೇ ವಿಷಯದಲ್ಲಿ.. ಎಲ್ಲರ ಕುತ್ತಿಗೆಗೆ ಇಳಿಬಿಟ್ಟ ಕ್ಯಾಮೆರಾ!!ಕೆಲವರು ವೃತ್ತಿಪರ ಫೋಟೋಗ್ರಾಫರ್ಸುಗಳಾಗಿದ್ದರೆ, ಮತ್ತೆ ಹಲವರು ಹವ್ಯಾಸಿ ಛಾಯಾಗ್ರಾಹಕರು..ಕೆಲವರು ಮೊದಲನೇ ಸಲ ಕ್ಯಾಮೆರಾವನ್ನು ನಡುಗುವ ಕೈಗಳಿಂದ ಹಿಡಿಯುವವರಾಗಿದ್ದರೆ, ಮತ್ತೆ ಕೆಲವರು ಫೋಟೋಗ್ರಫಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡವರು. ಅಪ್ಪಿ ತಪ್ಪಿ ಹೊರಗಿನವರ್ಯಾರಾದರೂ ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ನಿಂತರೆ, ಅಲ್ಲಿ ಕಲಿಯಕ್ಕೆ ಬಂದವರ್ಯಾರು? ಕಲಿಸುವವರ್ಯಾರು? ಸಂಘಟಕರ್ಯಾರು? ಸ್ವಯಂ ಸೇವಕರ್ಯಾರು? ಹೀಗೆ ಯಾವದರದ್ದೂ ಸುಳಿವು ಸಿಗದಷ್ಟು ಒಡನಾಟ ಪ್ರತಿಯೊಬ್ಬರಲ್ಲಿ..ಎಲ್ಲರೂ ಕೆಲಸ ಮಾಡುವವರೇ ಅಲ್ಲಿ! ಇದು ಸಾಗರ ಫೋಟೋಗ್ರಫಿ ಸೊಸೈಟಿ ಯವರು ಹೆಗ್ಗೋಡಿನ ನೀನಾಸಂ ರಂಗದೇಗುಲದಲ್ಲಿ ನಡೆಸಿದ ೩ ದಿನಗಳ ಫೋಟೋಗ್ರಫಿ ಕುರಿತಾದ ಕಾರ್ಯಾಗಾರವೊಂದರ ಚಿತ್ರಣ.


ನನ್ನೂರಿನಲ್ಲೇ ನಡೆಯುತ್ತಿರುವ ಕಾರ್ಯಕ್ರಮ ಮತ್ತು ನನಗೆ ಇಷ್ಟವಾಗುವ ಹವ್ಯಾಸದ ಕುರಿತಾದ ಕಾರ್ಯಾಗಾರವಾದ್ದರಿಂದ, ನಾನೂ ಕೂಡ ಭಾಗವಹಿಸುವ ಅನುಕೂಲ ಮಾಡಿಕೊಂಡೆ. ಡಿ.ಎಸ್.ಎಲ್.ಆರ್ ಕ್ಯಾಮೆರಾ ಕೈಯಲ್ಲಿದ್ದರೂ, ಫೋಟೋ ತೆಗೆಯುವಾಗ ಬಳಸುವ ಹೆಚ್ಚಿನ ರೂಲ್ಸ್ ನ ಬಗ್ಗೆ ನನಗೆ ತಿಳಿದಿರಲಿಲ್ಲ..  ಹಿಂದೆ ಆಟೋ ಮೋಡಿನಲ್ಲಿದ್ದವಳು, ಅವರಿವರು ಫೋಟೋಗ್ರಫಿ ನಡೆಸುವ ಸ್ನೇಹಿತರ ಬಳಿ ಫ್ರೆಮಿಂಗ್, ಸೆಟ್ಟಿಂಗ್ಸ್ಗಳ ಬಗ್ಗೆ ಹಿಂದೆ ಮುಂದೆ ಕೇಳಿಕೊಳ್ಳುತ್ತಾ, ಇಂಟರ್ನೆಟ್ ನ ಮಾಹಿತಿ ಒಂದಷ್ಟು ಓದಿಕೊಳ್ಳುತ್ತಾ, ಮಾನ್ಯುಯಲ್ ಮೋಡಿನಲ್ಲಿ, ಒಂದಷ್ಟು ಟ್ರೈಲ್ ಅಂಡ್ ಎರ್ರರ್ ನಡೆಸುತ್ತ ಬರುತ್ತಿದ್ದೇನೆ. ಫೋಟೋಗ್ರಫಿ ಎನ್ನುವುದು ಕೇವಲ ಕ್ಯಾಮೆರಾದಿಂದ ಒಂದು ಫೋಟೋ ಮಾಡುವಂತಹದ್ದಲ್ಲ, ಅದು ನಮ್ಮ ಕಣ್ಣು, ಹೃದಯ ಮತ್ತು ಮೆದುಳಿನ ಸಮ್ಮಿಲನದಿಂದ ಹುಟ್ಟುವ ಭಾವನೆಯನ್ನು, ನಾವು ಮಾತನಾಡಲು ಬಳಸುವ 'ಭಾಷೆ'ಯಂತೆಯೇ ವ್ಯಕ್ತಪಡಿಸುವ ಒಂದು ಮಾಧ್ಯಮ.. ಈ ಖುಷಿ ನನಗೆ ನಾನು ಸೆರೆ ಹಿಡಿಯುವ ಚಿತ್ರಗಳಲ್ಲಿ ಸಿಗುತ್ತವೆ. ಹಾಗಾಗಿಯೇ ಸಿಗುವ ಸಂದರ್ಭಗಳಲ್ಲೇ ಅಷ್ಟಿಷ್ಟು ಫೋಟೋ ಹಿಡಿದಿಟ್ಟುಕೊಳ್ಳುವುದು ನನ್ನ ಹವ್ಯಾಸವಾಗಿದೆ. ಇದೊಂದು ಕಾರ್ಯಾಗಾರದ ಮೂಲಕ ನನ್ನ ತಲೆಗೊಂದಷ್ಟುಕ್ಯಾಮೆರಾ ಮತ್ತು ಫೋಟೋಗ್ರಫಿ ಕುರಿತಾದ ಮಾಹಿತಿ ತುಂಬಿಕೊಳ್ಳೋಣವೆಂದು ನಾನೂ ಕೂಡ ಭಾಗವಹಿಸಿದೆ. 

ಮೂರು ದಿನಗಳ ಈ ಕಾರ್ಯಕ್ರಮದಲ್ಲಿ pictorial photography, macro,portrait, travel, landscape, wildlife, glass, temple photography ಹೀಗೆ ಒಂದೊಂದು ಹೊತ್ತಿಗೆ ಆಯಾ ವಿಭಾಗದ ಪರಿಣಿತರು ತಮ್ಮ ಅದ್ಭುತ ಫೋಟೋಗಳನ್ನು ಪ್ರದರ್ಶಿಸಿದರು. ಅವುಗಳ ಕಲಿಕೆಗೆ ಬೇಕಾಗುವ/ಸೂಕ್ತವಾದ ಲೆನ್ಸ್ ಮತ್ತು ಹೆಚ್ಚಿನ ಗೇರ್ ಗಳ  ಬಗ್ಗೆ ತಿಳಿಸಿ, ಕೆಲವೊಂದಷ್ಟನ್ನು ಪ್ರಾಯೋಗಿಕವಾಗಿಯೂ ಮಾಡಿ ತೋರಿಸಿದರು. ವಿಮರ್ಶೆಗಳಿಗೆ, ಪ್ರಶ್ನೆಗಳಿಗೆ ಮುಕ್ತ ಅವಕಾಶ ನೀಡಿ, ಆಸಕ್ತರಿಗೆ ಅನೇಕ ಉತ್ತಮ ಮಾಹಿತಿಗಳನ್ನು ನೀಡಿದರು. ಖಂಡಿತಾಗಿಯೂ ಈ  ಕಾರ್ಯಗಾರದಿಂದ ನನಗೂ ಕೂಡ ಛಾಯಾಗ್ರಹಣದ ಕುರಿತಾಗಿ ಅನೇಕ ಹೊಸ ವಿಷಯಗಳು ತಿಳಿದವು. ಒಳ್ಳೊಳ್ಳೆಯ ವಿಶ್ಲೇಷಣೆಗಳೊಂದಿಗೆ, 'how to take a photo' ಎಂಬುದಕ್ಕಿಂತ ಮುಖ್ಯವಾಗಿ 'how to make a photo' ಎಂಬ ಬಗೆಗಿನ ಅನೇಕ ರೋಚಕ  ಕಥೆಗಳನ್ನು ನಮ್ಮೊಡನೆ ಹಂಚಿಕೊಂಡರು. ರೀಲು ತೊಳೆಸಿ ಫೋಟೋ ಮಾಡಿಸಿಕೊಳ್ಳಬೇಕಿದ್ದ ಕಾಲದಿಂದ ನಡೆದ ತಮ್ಮ ಫೋಟೋಗ್ರಫಿ ಗೀಳಿನ ಸಾಧಕ ಬಾಧಕಗಳ ಹಾಸ್ಯಭರಿತ ಕಥೆಗಳನ್ನು ಒಬ್ಬರು ಹೇಳಿದರೆ, ಮಸ್ತಕದಲ್ಲಿ ಮೂಡಿದ ಚಿತ್ರವನ್ನು, ಚಿತ್ರಪಟದಲ್ಲಿ ಮೂಡಿಸುವುದಕ್ಕೋಸ್ಕರ ಬೆಂಬಿಡದ ಪ್ರಯತ್ನದಲ್ಲಿ ತಮಗೆ ಸಿಕ್ಕ ಜಯ-ಅಪಜಯಗಳ, ಗೌರವ-ಅವಮಾನ, ಹತಾಶೆ, ಉತ್ಸಾಹ, ಸಂತೋಷ, ದುಃಖ, ತೃಪ್ತಿ, ಅತೃಪ್ತಿ ಅನುಭವಗಳ ಕುರಿತಾಗಿ ಮತ್ತೆರಡು ಟ್ರೇನರ್ಸ್ ತಮ್ಮ ನೆನಪಿನ ಬುಟ್ಟಿಯನ್ನು ಎತ್ತಿಡುತ್ತಿದ್ದರು. ಅವರುಗಳೇ ಹೇಳುವಂತೆ, ಕೆಲವು ಫೋಟೋ ತೆಗೆಯುವಲ್ಲಿನ ಸಂದರ್ಭಗಳು ಹೇಗೆ ಒಬ್ಬ ಮನುಷ್ಯನನ್ನು ಮಾನಸಿಕವಾಗಿ ಅಲ್ಲಾಡಿಸಿಬಿಡುತ್ತದೆ, ಹೇಗೆ ಕೆಲವೊಂದಷ್ಟು ಮರೆಯಾಲಾಗದ ಘಟನೆಗಳಾಗಿ ಬಿಡುತ್ತವೆ, ಟ್ರಾವೆಲ್ ಗೆಂದು ಹೋದರೂ ಒಮ್ಮೊಮ್ಮೆಅನಿರೀಕ್ಷಿತವಾಗಿ  ಅಲ್ಲಿಯ ಸ್ಥಳ ಮತ್ತು ಸ್ಥಳೀಯರೊಡನೆ ಅಂಟಿಬಿಡುವ ಭಾವನಾತ್ಮಕ ಸಂಬಂಧ  ಹೀಗೆ ಅನೇಕ ಚಿತ್ರಗಳಲ್ಲಿಯೇ ಕಥೆಗಳನ್ನು ನೋಡುವ/ಕೇಳುವ ಅವಕಾಶ ನಮಗೆ ಸಿಕ್ಕಿತು. 

ಅಲ್ಲಿದ್ದ ೩ ದಿನಗಳೂ, ಹೆಚ್ಚು ಕಮ್ಮಿ ಹೊರಗಿನ ಪ್ರಪಂಚವೇ ಮರೆತಂತಾಗಿತ್ತು.. ಫೋಟೋಗ್ರಫಿ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡವರೆಲ್ಲ ಯಾವುದೇ ರೀತಿಯ ಬಿಗುಮಾನವಿಲ್ಲದೇ, ನಮ್ಮೆಲ್ಲರ ಜೊತೆ ಬೆರೆಯುತ್ತಿದ್ದುದು ಮಾತ್ರ ಅತ್ಯಂತ ವಿಶೇಷವೆನಿಸಿತ್ತು. ಮೊದಲ ದಿನದ ಕಾಫಿ ಬ್ರೇಕ್ ನಿಂದ ಶುರುವಾಗಿ, ಊಟ, ತಿಂಡಿ, ತಿರುಗಾಟ, ಪಾಠದ ಮಧ್ಯೆ ಸಿಗುತ್ತಿದ್ದುದು ಒಂದಷ್ಟು ಚಿಕ್ಕ ಚಿಕ್ಕ ಬಿಡುವು. ಈ ಸಮಯದಲ್ಲಿ ಪರಿಚಯಿಸಿಕೊಂಡ  ಪ್ರತಿಯೊಬ್ಬ ಹೊಸ ವ್ಯಕ್ತಿಯಿಂದಲೂ ಒಂದೊಂದು ಹೊಸ ವಿಷಯಗಳನ್ನು ತಿಳಿದುಕೊಳ್ಳುಲು ಅವಕಾಶವಾಯಿತು. ನಾವು ೬-೭ ಜನ ಹೆಣ್ಮಕ್ಕಳು ಇದ್ದ ಈ ಶಿಬಿರದ ಪ್ರಾರಂಭದಿಂದ ಕೊನೆಯ ವರೆಗೂ ಪ್ರತಿ ಮಾತಿಗೂ ಪ್ರೋತ್ಸಾಹಿಸುತ್ತಿದ್ದ ರಾಜಾರಾಮ್ ಸರ್ ಅವರದ್ದು ನಿಜವಾಗಿಯೂ ದೊಡ್ಡ ಗುಣ. ಅವರ ಚುರುಕುತನ ಅವರ ವಯಸ್ಸನ್ನೇ ಮರೆಮಾಚುವಂತಿತ್ತು. ಫೋಟೋಗ್ರಫಿ ಮಾಡಿದ ನಂತರ ಕೈಗೆ ಸಿಗುವುದು - ಒಂದು ಪಿಚ್ಚರ್. ಆದರೆ ಅದನ್ನು ಸೃಷ್ಟಿ ಮಾಡುವಾಗ ಅನುಭವಕ್ಕೆ ಸಿಗುವ/ಕಲಿಕೆಗೆ ದೊರೆಯುವ ವಿಷಯಗಳು ಮಾತ್ರ ಅನೇಕ ಎನ್ನುವ ಅವರ ಮಾತು ಬಹಳ ಹಿಡಿಸಿತು. ಜಿ.ಆರ್ ಪಂಡಿತರು ಪಾದರಸದಂತಿದ್ದರು. ಗರಣಿಯವರ ಹಾಸ್ಯಮಿಶ್ರಿತ ಕಲಿಕಾ ಶೈಲಿ ಇಷ್ಟವಾಯಿತು.  ತಮ್ಮ  ಅನಾರೋಗ್ಯದ ಮಧ್ಯದಲ್ಲೂ ಭರಪೂರ ಜೋಕ್ಸ್ ಮಾಡುತ್ತಾ ೩ ದಿನಗಳ ಕಾರ್ಯಾಗಾರವನ್ನು ಸಕ್ರೀಯವಾಗಿಸಿದ ಅವರ ಮತ್ತು ಅವರ ಶ್ರೀಮತಿಯವರ ಎನರ್ಜಿ ಮೆಚ್ಚಬೇಕಾದ್ದೇ.. ಫೋಟೋಗ್ರಫಿಯ ಗೀಳು, ನಮ್ಮನ್ನು ಸುಮ್ಮನೆ ಕೂರಲು ಬಿಡುವುದಿಲ್ಲ; ಓಡಾಡಿಸುತ್ತದೆ. ಪ್ರತಿಸಲವೂ ಈ ಪ್ರಕೃತಿಯಲ್ಲಿನ ಅನೇಕ ವಿಸ್ಮಯಗಳನ್ನು, ಪ್ರತಿ ಸಣ್ಣ ಸಣ್ಣ ಜೀವಿಗಳ ಮಹತ್ವಗಳನ್ನು ಅರಿಯಲು ಸಹಾಯಕವಾಗುತ್ತದೆ ಎಂಬ ಮ್ಯಾಕ್ರೋ ಫೋಟೋಗ್ರಫಿ ಎಕ್ಸ್ಪರ್ಟ್ ಗೌತಮ್ ಅವರ ಮಾತು ಸೂಕ್ತವೆನಿಸಿತು. ನಾಗೇಂದ್ರ ಅವರ ಫೋಟೋಗ್ರಫಿ ತಪಸ್ಸನ್ನು ನೋಡಿ ನಿಬ್ಬೆರಗಾಗಿ ಹೋದೆವು..ಅವರ ಕೆಲವೊಂದು ಫೋಟೋ ತೆಗೆದುಕೊಳ್ಳುವಲ್ಲಿನ ಶ್ರಮ, ಏಕಾಗ್ರತೆ, ತಾಳ್ಮೆ, ಮತ್ತದರ ಜರ್ನಿಯಲ್ಲಿ ಪಡೆದ ಸುಖ-ದುಃಖಗಳು  ಹೀಗೆ ಒಂದೊಂದು ಅನುಭವಗಳನ್ನೂ ಕೇಳುತ್ತಿದ್ದರೆ, ಮೈ ನವಿರೇಳುತ್ತಿತ್ತು.ಕೆಲವೊಂದು ಸಂದರ್ಭದಲ್ಲಿ ಅವರುಗಳ ಜೊತೆ ನಮ್ಮಗಳ ಗಂಟಲು ಉಬ್ಬಿ ಬಂದದ್ದೂ, ಕಣ್ಣಂಚಲ್ಲಿ ನೀರು ಹರಿದದ್ದೂ ಸುಳ್ಳಲ್ಲ..!!  ಹೇಮಂತ್ ಅವರ ಟ್ರಾವೆಲ್ ಫೋಟೋಗ್ರಫಿ  ಯ ಜೊತೆ, ಟ್ರಾವೆಲ್ ಮಾಡುವಾಗ ತೆಗೆದುಕೊಳ್ಳಬೇಕಾದ ಪೂರ್ವಭಾವಿ ಜಾಗ್ರತೆಯ ಕ್ರಮಗಳು ಉಪಯುಕ್ತವೆನಿಸಿತು, ದೇವಾಲಯಗಳನ್ನು ಹೊಕ್ಕರೆ ಅಲ್ಲಿನ ಆವರಣ, ಪ್ರತಿಕಂಬಗಳಲ್ಲೂ ಹುದುಗಿರುವ ಕಲೆಗಳನ್ನು, ಕೆಲವು ವಿಶಿಷ್ಟತೆಗಳನ್ನು  ಹೇಗೆ ಕ್ಯಾಮೆರಾ ಕಣ್ಣಿನಿಂದ ನೋಡಬಹುದು ಎಂದು ಅತ್ಯಂತ ಮನೋಜ್ಞವಾಗಿ ಗೋಪಾಲ್ ಸರ್ ತಿಳಿಸಿಕೊಟ್ಟರು. ಫೋಟೋಗ್ರಫಿಯ ಪ್ರಾಯೋಗಿಕ ಕಲಿಕೆಗಾಗಿ ಏರ್ಪಡಿಸಿದ್ದ ಜಾನಪದ ಡೊಳ್ಳುಕುಣಿತ ನೃತ್ಯ, ಗ್ರಾಮೀಣ ಮಹಿಳೆಯರ ಕಲಾಸಕ್ತಿ, ಭರತನಾಟ್ಯ, ಯಕ್ಷಗಾನ ಪ್ರದರ್ಶನ ಗಳು ನಮ್ಮನ್ನು ರಂಜಿಸಿದವು. ಉಳಿಸಿ ಬೆಳೆಸಬೇಕಾದ ಸಂಸ್ಕೃತಿಗೆ ಛಾಯಾಗ್ರಹಣ ಖಂಡಿತವಾಗಿಯೂ ಸಹಕಾರಿಯಾಗುತ್ತದೆ. ಪೋರ್ಟ್ರೇಟ್ ಫೋಟೋಗ್ರಫಿ ಗೆ ಸಹಕಾರ ನೀಡಿ ೨೫ ನಿಮಿಷಗಳಿಗೂ ಹೆಚ್ಚು ಕಾಲಮುಖದಲ್ಲಿ ನಗುವನ್ನಿಟ್ಟುಕೊಂಡು ಕೂರಬೇಕಿದ್ದ  ವಿಜಯಶ್ರೀ ಅವರ ತಾಳ್ಮೆ ಕೂಡ ಮೆಚ್ಚಬೇಕ್ಕಾದ್ದೇ ಎನಿಸಿತು.. ಮಳೆ ಮತ್ತು ಹಸರುಮಕ್ಕಿ ಶರಾವತಿ ಹಿನ್ನೀರಿಗೆ ನೀಡಿದ ಭೇಟಿ ಮಜವಾಗಿತ್ತು. ಒಟ್ಟಾರೆಯಾಗಿ ಈ ಕಾರ್ಯಾಗಾರ ಕೇವಲ ಸುಂದರವಾದ ಚಿತ್ರವನ್ನು ಹೇಗೆ ಕ್ಲಿಕ್ಕಿಸುವುದು ಎಂಬುದನ್ನು ಕಲಿಸುವುದಷ್ಟಕ್ಕೆ ಸೀಮಿತವಾಗದೆ, ಒಂದು ಚಿತ್ರವನ್ನು ಹೇಗೆ ಕಾವ್ಯವನ್ನಾಗಿ ಮಾಡಬಹುದು ಎಂಬುದನ್ನು ತಿಳಿಯಲು ಸಹಕರಿಸಿದ ಕಾರ್ಯಕ್ರಮ.












ನನಗನ್ನಿಸಿದಂತೆ, ಈ ಮೂರು ದಿನಗಳಲ್ಲಿ ನನಗೆ ಅನೇಕ ಹೊಸ ಗುರುಗಳು, ಸ್ನೇಹಿತರು ಸಿಕ್ಕಿದರು..! ಅಲ್ಲಿ ಯಾರೂ ಅಮುಖ್ಯರಾಗಿರಲಿಲ್ಲ.. ಪ್ರತಿದಿನ ಹಿರಿಯರು ಕಿರಿಯರು ಎಂಬ ಬೇಧ ಭಾವವಿಲ್ಲದೆ ಸ್ನೇಹಿತರಾದವರೆಲ್ಲರ ಜೊತೆ ನಗು-ತಮಾಷೆ, ಅವರಿಂದ ಹೊಸ ಹೊಸ ವಿಷಯಗಳ ಮೇಲಿನ ಸಂಭಾಷಣೆ ಖುಷಿ ಕೊಡುತ್ತಿತ್ತು. ಲತಾ, ಮಾಲಾ, ಪುಟ್ಟು ಸಿರಿ ಎಲ್ಲರೂ ಆತ್ಮೀಯರಾದರು.. ಹೊಸಪೇಟೆ ಜೋಶಿಯವರು ಸಿಕ್ಕಿದ್ದಷ್ಟು ಸಮಯ ಕೂಡ ಅವರ ಸ್ಥಳೀಯ ಭಾಷೆಯಲ್ಲಿ ನಮ್ಮನ್ನೆಲ್ಲ ರಂಜಿಸಿ ನಗಿಸುತ್ತಿದ್ದರು. ಫೇಸ್ಬುಕ್ಕಿನ ಸ್ನೇಹಿತ ಕಾರ್ತಿಕ್ ಈ ಕಾರ್ಯಾಗಾರದಲ್ಲಿ ಭೇಟಿಯಾದ್ದು ಡಬಲ್ ಖುಷಿ..ನಾನು ಕ್ಲಿಕ್ಕಿಸಿದ  ಫೋಟೋದಲ್ಲಿ  ತಪ್ಪುಗಳೇನಾದರೂ ಇದ್ದರೆ, ಖಡಕ್ಕಾಗಿ ಹೇಳುವ ಮತ್ತು ಸರಿಯಾಗಿ ಕಲಿಯಲು ತಿಳಿಸುವ ಜನ.  ಅದೆಲ್ಲೆಲ್ಲೋ ಹೆಂಗೆಂಗೋ ಹುಡುಕಿ ಕಂಡ ಕಂಡ ಹಾವುಗಳನ್ನು ತನ್ನ ಕ್ಯಾಮೆರಾ ಮತ್ತು ಮೊಬೈಲ್ ನಲ್ಲಿಅತ್ಯದ್ಭುತವಾಗಿ ಸೆರೆಹಿಡಿದು ತೋರಿಸಿದ್ದ ಆ ತೆಳ್ಳನೆಯ ಹುಡುಗ ಈಶಾನ್ಯ ಓಡಾಡಿದರೆ ಮಾತ್ರ ನನಗೆಂತೂ ಹಾವು ಹರಿದಂತೆಯೇ ಕಾಣುತ್ತಿತ್ತು :P ಮೆಚ್ಚುಗೆಯಾದ ವಿಷಯವೆಂದರೆ, ಲೈಟ್ರೂಮ್ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಎಂಬ ನಮ್ಮ ಧಿಡೀರ್ ಕೋರಿಕೆಗೆ, ತತ್ಕ್ಷಣಕ್ಕೆ ಪ್ರೆಸೆಂಟೇಷನ್ ತಯಾರು ಮಾಡಿಕೊಂಡು, ನಮಗೆಲ್ಲ ಉಪಯುಕ್ತ  ಮಾಹಿತಿಗಳನ್ನು ಕೊಟ್ಟವರು ಸುಹಾಸ್.

ಇನ್ನು, ನಾನು ಸಾಗರದವಳೇ ಆದ್ದರಿಂದ ನೀನಾಸಂ ರಂಗಮಂದಿರ ನನಗೆ ಹೊಸತೇನಾಗಿರಲಿಲ್ಲ, 
ಅಂತೆಯೇ ಅಲ್ಲಿನ ಊಟ-ತಿಂಡಿಗಳ ರುಚಿ. ಅದ್ಯಾವ ರುಚಿ ಪುಡಿ ಹಾಕುತ್ತಾರೋ ಏನೋ, ತರಕಾರಿ ಹಾಕಿ ಮಾಡುವ ಅವಲಕ್ಕಿ, ಇಡ್ಲಿ ಮತ್ತದಕ್ಕೆ ಪರ್ಫೆಕ್ಟ್ ಆಗಿ ಹೊಂದಿಕೊಳ್ಳುವ ತರಹೇವಾರಿ ಚಟ್ನಿಗಳು ಹೀಗೆ ಅಲ್ಲಿ ತಯಾರು ಮಾಡುವ ಎಲ್ಲ ತಿಂಡಿಗಳೂ ನನ್ನ ಫೆವರಿಟ್ ಫುಡ್ಸ್..ಹೊರಗಡೆ ಜಿಟಿಜಿಟಿ ಮಳೆಗೆ ಒಳಗಡೆ ಬಿಸಿ ಬಿಸಿ ಸಾರು! ಫುಡೀ ನಾನಾದ್ದರಿಂದ ನೀನಾಸಂ ನ ಸಿಹಿಯೂಟ, ಸ್ಟ್ರಾಂಗ್ ಕಾಫೀ ಕೂಡ ಮನಸಾರೆ ಆನಂದಿಸಿದೆ :) 

ಹೀಗೆ ಸಿಕ್ಕಷ್ಟು ಸಮಯದಲ್ಲಿ, ಸಿಕ್ಕಿದಷ್ಟು ಜನರಿಂದ ಹೊಸತೊಂದಷ್ಟು ಕಲಿಕೆ, ಸುಂದರ ನೆನಪುಗಳು ಎಲ್ಲವನ್ನು ಈ ಕಾರ್ಯಾಗಾರದ ಮೂಲಕ ಪಡೆದ ಸಂತೋಷ ನನಗಿದೆ. ಫೋಟೋಗ್ರಫಿಯಲ್ಲಿ ನನಗೆ ಈಗಿರುವಷ್ಟು ಅಥವಾ ಇದಕ್ಕಿಂತಲೂ ತುಸು ಹೆಚ್ಚೇ ಕುತೂಹಲ ಇರುವಂತಾದರೆ, ಅವುಗಳ ಪ್ರಯೋಗಗಳಿಗೆ ಅಷ್ಟೇ ಅವಕಾಶಗಳು ದೊರೆಯುವಂತಾದರೆ, ಒಂದು ಸಾರ್ಥಕತೆ :) :)