ಸೋಮವಾರ, ಮೇ 28, 2018

ಮಂಡಲದ ಸುತ್ತ..

ಇದೇನ್ರೀ ಮಂಡಲ ಎಂದರೆ? ಅಲ್ಲಿ ಇಲ್ಲಿ ಸುಮ್ಮನೆ ಏನೋ ಒಂದಷ್ಟು ಡಿಸೈನ್ ಮಾಡಿಕೊಂಡು, ರಂಗೋಲಿ ತರ ಚಿತ್ರ ಬಿಡಿಸಿ ಅದಕ್ಕೊಂದಷ್ಟು ಬಣ್ಣ ತುಂಬೋದ್ರಲ್ಲೇನಿದೇರೀ ದೊಡ್ಡ ವಿಶೇಷ ಎಂದಿರಾ?? ಕೇವಲ ಚಿತ್ರಗಳ ರೂಪದಲ್ಲಿಯೇ ಅದಮ್ಯವಾದ ಶಕ್ತಿಯನ್ನು ತುಂಬುವ, ನವ ಚೈತನ್ಯದ ರೂಪವಾದ ಮಂಡಲಗಳ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ..





 ಮಂಡಲಗಳೆಂದರೆ ಅದೊಂದು ಕೇವಲ ಕೈಬರಹವಲ್ಲ ಅಥವಾ ಪೈಂಟ್ ಬ್ರಶ್ ನಿಂದ ಒಟ್ಟಾರೆಯಾಗಿ ಗೀಚಿ ರಚಿಸಿದ ಚಿತ್ರಪಟವಲ್ಲ. ಅದೊಂದು ಧ್ಯಾನ. ಹಾಂ! ಹೌದಾ..! ಧ್ಯಾನ ಎಂದರೆ ನಿಶ್ಯಬ್ಧವಾಗಿ ಕುಳಿತು ಏನೂ ಮಾಡದೆ ಅಥವಾ ಒಂದಷ್ಟು ಮಂತ್ರಗಳನ್ನುಚ್ಛರಿಸುತ್ತಾ ದೇವರ ಸ್ತುತಿಸುವ ಬಗೆ ಗೊತ್ತು.. ಚಿತ್ರ ಬರ್ಕೊಂಡು ಧ್ಯಾನ ಮಾಡೋದು..ಇದ್ಯಾವ ಬಗೆಯ ಹೊಸ ಅವತಾರ ಎಂದು ಕೇಳಿದೀರಾ? ನಮ್ಮದೇ ಚಿತ್ರಕಲೆಯಿಂದ ಮನಸ್ಸನ್ನು ಒಂದೆಡೆ ಕೇಂದ್ರೀಕೃತಗೊಳಿಸುವಲ್ಲಿ ಅಥವಾ ಒಂದು ಚಿತ್ರಪಟವನ್ನು ಕಂಡು ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯ ಮೂಡುವಂತಾದರೆ, ಋಣಾತ್ಮಕ ಆಲೋಚನೆಗಳು ದೂರವಾಗಿ, ನಮ್ಮೊಳಗೇ ಇರುವ ಧಾರಣಶಕ್ತಿಯ ಅರಿವು ನಮಗೆ ಸಿಗುವಂತಾದರೆ, ಅದೇ ಧ್ಯಾನವೆನಿಸಿಕೊಳ್ಳುವುದಿಲ್ಲವೇ?

ಸಂಸ್ಕೃತದಲ್ಲಿ ''ಮಂಡ' ಎಂದರೆ ಅಲಂಕರಿಸುವುದು ಅಥವಾ ಸಿದ್ಧಗೊಳಿಸುವುದು ಎಂದರ್ಥ. ಲ ಎಂಬ ಅಂತ್ಯಪ್ರತ್ಯಯ ದೊಂದಿಗೆ, ಮಂಡಲ ವೆಂದರೆ ಒಂದು ಪವಿತ್ರವಾದ ವರ್ತುಲ ಅಥವಾ ಕೇಂದ್ರಬಿಂದು ಎಂದು ಅರ್ಥ. ಮಂಡಲ ಒಂದು ಸಂಕೀರ್ಣವಾದ, ಅಮೂರ್ತವಾದ, ಸಾಮಾನ್ಯವಾಗಿ ವೃತ್ತಾಕಾರದಲ್ಲಿ ರಚಿಸಲ್ಪಡುವ ಚಿತ್ರ. ಒಂದು ನಿರ್ಧಿಷ್ಟವಾದ ಮಧ್ಯಬಿಂದುವಿನಿಂದ ಪ್ರಾರಂಭಿಸಿ, ಚಿಹ್ನೆ,ಆಕೃತಿ, ಆಕಾರಗಳು ಹೀಗೆ ಹತ್ತು ಹಲವು ನಮೂನೆಗಳಿಂದ ಮಾಡಲ್ಪಡುವ ಒಂದು ವ್ಯೂಹ ರಚನೆ. ಸಾಮಾನ್ಯವಾಗಿ ಮಂಡಲಗಳನ್ನು ಜ್ಯಾಮಿತಿಯ ರೂಪದಿಂದ ಚಿತ್ರಿಸುವುದಾದರೂ, ಕೆಲವು ಬಿಡಿಸುವಾತನ  ಕಲ್ಪನೆಯಿಂದುದಯಿಸಿದ  ಜೈವಿಕವಾದ  ಚಿತ್ರಣವಾಗಿರುತ್ತದೆ. ಅನೇಕ ಸಾರಿ ಮಂಡಲದಲ್ಲಿ  ಚಿತ್ರಿಸುವಾತನ ಮನಸ್ಸಿನ ಮೂಲಕ ಹೊರಹೊಮ್ಮುವ ವಸ್ತು ವಿಷಯಗಳೂ ಕೂಡ ಸೆಲೆ ಯಾಗಿ ಮೂಡಿರುತ್ತದೆ.

ಮಂಡಲಗಳ ಹಿನ್ನೆಲೆ ಮತ್ತುಆಕರ್ಷಕ ಸಂಗತಿಗಳು:

ಮಂಡಲ ಮುಖ್ಯವಾಗಿ ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಅನಾದಿ ಕಾಲದಿಂದಲೂ ಬಳಸಿಕೊಂಡು ಬಂದಿರುವ ಒಂದು ಶದ್ಧಾಪೂರ್ವ ಧಾರ್ಮಿಕ ಚಿತ್ರಣ.  ೪ ನೇ ಶತಮಾನದಿಂದಲೇ  ಟಿಬೆಟ್, ಇಂಡಿಯಾ, ಚೀನಾ, ಜಪಾನ್, ನೇಪಾಳ ಮೊದಲಾಗಿ ಹಲವು ಏಷಿಯಾ ದೇಶಗಳಲ್ಲಿ ಮಂಡಲಗಳ ರಚನೆ ಅಸ್ತಿತ್ವದಲ್ಲಿತ್ತು ಎಂದು ಹಲವು ಮೂಲಗಳಿಂದ ದೊರಕಿದ ಮಾಹಿತಿಯಿದೆ. ಈ ಸಮಸ್ತ ವಿಶ್ವವೇ ಒಂದು ಕೇಂದ್ರೀಕೃತವಾದ ಶಕ್ತಿಯ ಸ್ವರೂಪ ಎಂದು ಮಂಡಲಗಳ ಮೂಲಕ ಪ್ರತಿಬಿಂಬಿಸಲಾಗುತ್ತದೆ. ಧ್ಯಾನ ವಾತಾವರಣವನ್ನು ನಿರ್ಮಿಸಲು, ಚಿಕಿತ್ಸಕ ಶಕ್ತಿಯನ್ನು ಒಂದೆಡೆ ಆವಾಹಿಸಲೆಂಬ ಕಾರಣಕ್ಕಾಗಿ ಮಂಡಲ ರೇಖಾಚಿತ್ರಗಳ ರಚನೆಯನ್ನು ಪ್ರಾರಂಭಿಸಿದರು ಎಂಬ ಪ್ರತೀತಿಯಿದೆ. ಇದೀಗ ಪ್ರಪಂಚದಾದ್ಯಂತ ಮಂಡಲಗಳು ಅವುಗಳ ಪವಿತ್ರ ರಚನೆ ಮತ್ತು ಚಿಕಿತ್ಸಕ ಬಳಕೆಯಿಂದಾಗಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ.

ಹಿಂದೆ ಕೇವಲ ಬೌದ್ಧ ಮತ್ತು ಹಿಂದೂ ಧರ್ಮದ ರಾಷ್ಟ್ರಗಳಲ್ಲಿ ಅದರಲ್ಲೂ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಮಂಡಲಗಳ ರಚನೆ ಮತ್ತು ಬಳಕೆ ಈಗ ಪ್ರಪಂಚದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಚಕ್ರ, ವರ್ತುಲಗಳ ಮಹತ್ವ ಮತ್ತು ಮೌಲ್ಯ ಯಾವುದೇ ಪ್ರಾಂತ್ಯ - ಧರ್ಮದ ಹಂಗಿಲ್ಲದೇ ಅನಾದಿ ಕಾಲದಿಂದಲೂ ಶಕ್ತಿಯ ಸ್ವರೂಪವಾಗಿ ಅಂತರ್ಗತವಾದ್ದರಿಂದ, ಕೇವಲ ಏಷ್ಯಾದ ದೇಶಗಳಲ್ಲಷ್ಟೇ ಅಲ್ಲದೆ, ಅಮೇರಿಕದಂತಹ ದೇಶಗಳಲ್ಲೂ ಮಂಡಲ ರಚನೆಯು ಒಂದು ಉತ್ತಮ ಆಧ್ಯಾತ್ಮಿಕ ಕ್ರಿಯೆಯಾಗಿ ಮನ್ನಣೆ ಪಡೆದಿದೆ. ಒಟ್ಟಾರೆಯಾಗಿ ಮಂಡಲಗಳ ರಚನೆ ಮತ್ತು ಬಳಕೆಗೆ ಯಾವುದೇ ಜಾತಿ-ಧರ್ಮದ ಮಿತಿಯಿಲ್ಲ.

ಹಲವು ಐತಿಹಾಸಿಕ ಬೌದ್ಧ ಮಂಡಲಗಳ ಸಾಂಪ್ರದಾಯಿಕ ಚಿತ್ರಣಗಳಲ್ಲಿ, ಮಂಡಲದ ವೃತ್ತಾಕಾರವು ಸಮಸ್ತ ಭೂಗೋಳ ಮತ್ತದರ ಮಧ್ಯದಲ್ಲಿ ೫ ತುದಿಗಳನ್ನುಳ್ಳ ಕಾಲ್ಪನಿಕ ಮೇರು ಪರ್ವತದ  ರೂಪವನ್ನುಕಾಣಬಹುದಾಗಿದೆ .  ಇಂಡೋನೇಷ್ಯಾ ಮತ್ತು ಕ್ಯಾಂಬೋಡಿಯಾದಲ್ಲಿ ೩-ಡಿ ಮಾದರಿಯ ಬೌದ್ಧ ದೇವಾಲಯಗಳು ಈ ಮಂಡಲಗಳ ಭೌತಿಕ ಅನುಭೂತಿಯನ್ನುನೀಡುವ ಅತ್ಯಂತ ಸುಂದರ ತಾಣವಾಗಿದೆ. ನಮ್ಮ ದೇಶದಲ್ಲೂ ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ, ಹಿಂದೂ ಮತ್ತು ಬೌದ್ಧ ದೇವಾಲಯಗಳ ಛಾವಣಿಗಳಿಗೆ ಮಂಡಲಗಳ ಮಾದರಿಯ ವಾಸ್ತುಶಾಸ್ತ್ರ ಸಹಿತ ಅಲಂಕಾರ, ಕಲ್ಲಿನ ಕೆತ್ತನೆಗಳು  ಇಂದಿಗೂ ಕಾಣಬಹುದು. ಹಲವು ದೇಶಗಳಲ್ಲಿ ಅನುಸರಿಸುವ ಹಲವು ಮಂಡಲಗಳ ವಿನ್ಯಾಸಗಳು, ಆಕೃತಿಗಳು ತುಸು ವಿಭಿನ್ನವೆನಿಸಿದರೂ ಮಂಡಲಗಳ ಮೂಲ ಧಾತುಗಳು ಒಂದೇ ಅದುವೇ ಧನಾತ್ಮಕ ಶಕ್ತಿ ಮತ್ತು ಪಾವಿತ್ರ್ಯತೆ. ನ್ಯೂ ಯಾರ್ಕ್ ನ ಮೇಲೆ ಭಯೋತ್ಪಾದಕರ ಧಾಳಿಯ ನಂತರದ ವಿಷಾದ ಪರಿಸ್ಥಿತಿಗೆ ಸ್ಪಂದನೆಯಾಗಿ, ಟಿಬೆಟ್ಟಿನ ಪ್ರಮುಖ ಬೌದ್ಧ ಸಂಸ್ಥೆಯೊಂದರಿಂದ ಅತ್ಯಂತ ಸೂಕ್ಷ್ಮತೆಯಿಂದ ಮತ್ತು ಪ್ರಭಾವಶಾಲಿ ಮಂಡಲವಾದ, 'ಸ್ಯಾನ್ಡ್ ಮಂಡಲ' ವನ್ನು ಆತ್ಮಸ್ತೈರ್ಯ ತುಂಬುವ ಪ್ರತೀಕವಾಗಿ ಮಾಡಿಕೊಡಲಾಗಿತ್ತಂತೆ  ಮಂಡಲಗಳನ್ನು ಅಷ್ಟರ ಮಟ್ಟಿನ ಪ್ರಭಾವಶಾಲೀ ದೈವಿಕ ಮಾಧ್ಯಮದ ರೂಪದಲ್ಲಿ ಬಳಸಲಾಗುತ್ತದೆ.



ಟಿಬೆಟ್ಟಿಯನ್ನರಲ್ಲಿ ಮಂಡಲಗಳ ರಚನೆ ಅತ್ಯಂತ ಅಪರಿಮಿತ ಆಧ್ಯಾತ್ಮಿಕ ಕ್ರಿಯೆಯೆಂದೇ ನಂಬುಗೆಯಿದೆ. ಮಂಡಲಗಳು ರಚಿಸುವ ಸ್ಥಳವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ.
 ಹೆಚ್ಚಿನ ಬೌದ್ಧ ಅನುಯಾಯಿಗಳು,  ತಮ್ಮ ಜ್ಞಾನಾರ್ಜನೆಯ ಸಮಯದಲ್ಲಿ ಮಂಡಲ ರಚನೆಯನ್ನು ಅಭ್ಯಸಿಸಿರುತ್ತಾರೆ. ಅನೇಕ ಬಗೆಯ ರೇಖಾಚಿತ್ರಗಳನ್ನು ಚಿತ್ರಿಸಿ, ಕುಂಚಗಳ ಬಳಕೆಯಿಂದ ಮಂಡಲಗಳನ್ನು ಕಲಾತ್ಮಕವಾಗಿ ವರ್ಣಲೇಪನ ಮಾಡುತ್ತಾರೆ. ಟಿಬೆಟ್ಟಿಯನ್ ಭಿಕ್ಷು ಗಳ ಪ್ರಕಾರ, ಹೆಸರಾಂತ 'ಸ್ಯಾಂಡ್ ಮಂಡಲ' ಒಂದು ಅದ್ಭುತವಾದ ಪರಮಮೂಲ ಚಿಕಿತ್ಸಕ ಕ್ರಿಯೆ. ಶ್ರದ್ಧೆ, ತಾಳ್ಮೆ, ಏಕಾಗ್ರತೆ, ಸೂಕ್ಷ್ಮತೆ,  ಮಂಡಲದೆಡೆಗೆ ನಂಬಿಕೆ ಎಲ್ಲವನ್ನೂ ಪರಿಗಣಿಸಿ ಮಂಡಲಗಳ ರಚನೆಯ ಪ್ರಾರಂಭವಾಗುತ್ತದೆ. ಹಿಂದೆಲ್ಲ ಪುಡಿ ಮಾಡಿದ ಕಲ್ಲುಗಳು ಮತ್ತು ಹರಳುಗಳಿಂದ ತಯಾರಿಸುತ್ತಿದ್ದ ಮಂಡಲಗಳ ತಯಾರಿಕೆಗೆ ಇತ್ತೀಚಿಗೆ ಅನೇಕ ತರಹದ ಮಾರ್ಬಲ್ ಪುಡಿಗಳು ಲಭ್ಯ. ಕೆಲವು  ಸಾಂಪ್ರದಾಯಿಕ ದೈವಿಕ ವಿಧಿ ಕಾರ್ಯಕ್ರಮಗಳ ಸಂದರ್ಭಗಳಲ್ಲಿ, ಕಾಡು ಮೇಡು ಅಲೆದು, ಔಷಧೀಯ ಗುಣಗಳುಳ್ಳ ಸಸ್ಯ ರಾಶಿಗಳಿಂದ  ನಿರ್ಮಿತವಾದ ನೈಸರ್ಗಿಕ ವರ್ಣಮಯ ಪುಡಿಗಳಿಂದ ಮಂಡಲಗಳನ್ನೂ ಕೂಡ ರಚಿಸುತ್ತಾರೆ. ಈ ರೀತಿಯಾಗಿ ನಿರ್ಮಿಸುವ ಮಂಡಲಗಳ ತಯಾರಿಕೆ ಹಲವು ವಾರಗಳು-ತಿಂಗಳವರೆಗೂ ಎಡೆಬಿಡದೆ ನಡೆಯುತ್ತದೆ. ಒಮ್ಮೆ ಮಂಡಲಗಳು ಪೂರ್ಣಗೊಂಡ ನಂತರದಲ್ಲಿ ಕಟ್ಟುನಿಟ್ಟಾದ ಧ್ಯಾನ ಪೂಜೆಗಳು ಸಾಗುತ್ತವೆ. ಎಲ್ಲ ರೀತಿಯ ಧನಾತ್ಮಕ ಶಕ್ತಿಯನ್ನು ಜಪ ಪಠಣೆಗಳ ಮೂಲಕ ಆಮಂತ್ರಿಸಲಾಗುತ್ತದೆ.  ಈ ರೀತಿಯಾದ ಪವಿತ್ರವಾದ ಮಂಡಲಗಳ ರಚನೆಗೆ ಹೇಗೆ ನಿಯಮ ನಿಷ್ಠೆಗಳಿರುತ್ತವೆಯೋ, ಅಷ್ಟೇ   ಮಂಡಲ ರಚನೆಯ ಕ್ರಿಯೆಯಿಂದ ದೊರಕುವ ಉಪಶಮನ ಇಂದ್ರೀಯಗಳಿಗೆ ಗೋಚರವಾಗದಿದ್ದರೂ, ಮಾನಸಿಕ ಅನುಭವಕ್ಕೆ ಸಿಗುವಂತಹ ಒಂದು ಸಾರ ಎಂಬ ನಂಬಿಕೆ ಇವರುಗಳದ್ದು. ಇಲ್ಲಿನ ಬೌದ್ಧ ಅನುಯಾಯಿಗಳು ನೈಸರ್ಗಿಕವಾಗಿ ದೊರೆಯುವ ಕಲ್ಲುಗಳನ್ನು ಜಜ್ಜಿ ಅದರ ನುಚ್ಚಿನಿಂದ ತಯಾರು ಮಾಡಿದ ಬಣ್ಣಗಳನ್ನು ಅತ್ಯಂತ ಸೂಕ್ಷಮತೆಯಿಂದ ಕೊಳವೆಗಳನ್ನು ಬಳಸಿ, ಕ್ರೆಯಾಶೀಲವಾಗಿ ಮಂಡಲಗಳ ರಚನೆಯನ್ನು ಮಾಡುತ್ತಾರೆ. ಯಾವುದೇ ಜಾತಿ ಮತ ಪ್ರಾಂತ್ಯವೆನ್ನದೆ, ಪ್ರಪಂಚದಾದ್ಯಂತ ಆಸಕ್ತರು ಇದನ್ನು ವರ್ಷವಿಡೀ ಅತ್ಯಂತ ತಾಳ್ಮೆಯಿಂದ ಕಲಿಯಲಿಚ್ಛಿಸುತ್ತಾರೆ.  ಅಷ್ಟರ ಮಟ್ಟಿಗೆ ಮಂಡಲ ಜನರನ್ನು ಭಾವಪರವಶವನ್ನಾಗಿಸುವ ಶಕ್ತಿಯಾಗಿದೆ.


ಅಮೆರಿಕಾ ಪ್ರದೇಶಗಳಲ್ಲಿಯೂ ಕೂಡ ಮಂಡಲಗಳಿಗೆ ಅತೀವ ಪ್ರಾಮುಖ್ಯತೆ ಇದೆ. ಅಲ್ಲಿನ ಸಾಂಪ್ರದಾಯಿಕ ಮಂಡಲಗಳಲ್ಲಿ ಅತ್ಯಂತ ಜನಪ್ರಿಯವಾದುದು ಪೂಜ್ಯವಾದ 'ಮೆಡಿಸಿನಲ್ ವೀಲ್'. ಈ ಸಮಸ್ತ ವಿಶ್ವವು, ದಿಕ್ಕುಗಳಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಕ್ಕೂ ಆವೃತ್ತಗೊಂಡಿರುವ ನಾಲ್ಕು ಪ್ರಭಾವಶಾಲಿ ಸಂಪನ್ಮೂಲಗಳಾದ, ಗಾಳಿ, ನೀರು, ಬೆಂಕಿ ಮತ್ತು ಮಣ್ಣಿನಿಂದ ರಚಿಸಲ್ಪಟ್ಟಿದೆ.  ಭೌತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕಶಕ್ತಿಗಳ ಒಟ್ಟುಗೂಡುವಿಕೆಯೇ ಮಂಡಲಗಳ ಸಂಕೇತ ಎಂಬ ಅದಮ್ಯ ವಿಶ್ವಾಸ ಇಲ್ಲಿನ ಮಂಡಲ ಇತಿಹಾಸಕಾರರದ್ದು. ಯೋಗ, ಧ್ಯಾನ, ಮತ್ತು ವೈದ್ಯಕೀಯ ರಂಗದಲ್ಲೂ ಚಿಕಿತ್ಸಕ ಕ್ರಿಯೆಯಾಗಿ ಮಂಡಲಗಳ ಬಳಕೆ ಇದೆ.



ಮಂಡಲದ ಆಧ್ಯಾತ್ಮಿಕ ಸ್ಥಾನ  :

ಮಂಡಲ ಎಂಬುದು ತನ್ನಲ್ಲಿಯೇ ತಾನು ಸರ್ವಸ್ವವನ್ನು ಹಿಡಿದಿಟ್ಟುಕೊಳ್ಳುವ ಆದರೂ ಎಲ್ಲೆಡೆ ತನ್ನಿಂದಲೇ ಹೊರಹೊಮ್ಮಿಸುವ ಒಂದು ಅಗಾಧ ಶಕ್ತಿಯ ವ್ಯೂಹ. ಈ ಮಂಡಲವೆಂಬ ಕಲಾತ್ಮಕ ರಚನೆಯು, ದೇವರನ್ನು ನಂಬುವಷ್ಟೇ ನಮ್ಮನ್ನು ನಾವು ನಂಬಿಕೊಳ್ಳುವ ಪರಿಕಲ್ಪನೆಯ, ಮನಸ್ಸಿಗೆ ದೈವತ್ವದ ಸಾಮೀಪ್ಯ ಒದಗಿಸುವ ಒಂದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಮಂಡಲ ರಚನೆಯ ಅನುಭವವ ಶಬ್ಧಗಳಲ್ಲಿ ಹೇಳಲಸಾಧ್ಯ ಅದನ್ನು ಅನುಭವಿಸಿಯೇ ತೀರಬೇಕು. ಮಂಡಲವೆಂಬುದು ಮನಸ್ಸಿನ ಎಲ್ಲ ದುಗುಡವನ್ನು ಹೋಗಲಾಡಿಸಿ, ಧ್ಯಾನಮಗ್ನರಾಗಿ ಶುಭ್ರ ಆತ್ಮವನ್ನು ಆಸ್ವಾದಿಸುವ ಒಂದು ಸುಖ.

ಮಂಡಲದಲ್ಲಿ ಮೂಡುವ ವೃತ್ತಾಕಾರವು ತನ್ನೊಳಗೆ ಅನೇಕ ರೀತಿಯ ಅರ್ಥವನ್ನು ನೀಡುತ್ತದೆ. ನಮ್ಮ ಸುತ್ತಮುತ್ತಲೂ ಕಾಣಸಿಗುವ ಭೌತಿಕವಾಗಿ ಗೋಲಾಕಾರದಲ್ಲಿ ಗೋಚರಿಸಬಲ್ಲ ಶಕ್ತಿಗಳಾದ  ನಕ್ಷತ್ರ ಸಮೂಹ, ಸೂರ್ಯ- ಚಂದ್ರಾದಿಯಾಗ ನಮ್ಮ ದೇಹದ ಪ್ರತಿಯೊಂದು ಜೀವಕಣಗಳವರೆಗೆ , ನಾವು ಜೀವಿಸುತ್ತಿರುವ ಸಮಸ್ತ ಈ ಭುವಿಯನ್ನೇ ಪ್ರತಿಬಿಂಬಿಸುವ ಮಂಡಲ ಸಕಲ ಜೀವರಾಶಿಯನ್ನೂ ಆವರಿಸಿಕೊಂಡು ತನ್ಮೂಲಕ  ಒಂದು ಸಂಪೂರ್ಣತೆಯನ್ನು ಮೆರೆಸುತ್ತದೆ. ಮಂಡಲ ರಚನೆ ಎಂಬುದು ನಮ್ಮ ಅಂತರಾತ್ಮದ ಪರಾಮರ್ಶೆ ಎಂದು ವಿಶ್ಲೇಷಿಸುತ್ತಾರೆ ಸಾಂಪ್ರದಾಯಿಕ ಪರಿಣಿತ ಮಂಡಲ ರಚನಾಕಾರರು.


ವೈಜ್ಞಾನಿಕ ಮನ್ನಣೆ :

ಕನಸುಗಳಲ್ಲಿ ಹೇಗೆ ನಮ್ಮ ಸುಪ್ತ ಮನಸ್ಸಿನ ವಿಚಾರಗಳು ಬಿತ್ತರವಾಗುತ್ತದೆಯೋ, ಅದೇ ಮಾದರಿಯಲ್ಲಿ ಚಿತ್ರಗಳು ಮತ್ತು ಬಣ್ಣಗಳ ಮೂಲಕ ಮನಸ್ಸಿನ ಉದ್ವೇಗ, ಸಂತೋಷ, ತಲ್ಲಣ ಎಲ್ಲಾ ರೀತಿಯ ಭಾವನೆಗಳೂ ಹೊರಹೊಮ್ಮಿಸಲು ಮಂಡಲಗಳು ಒಂದು ಸಂವಹನ ರೂಪವನ್ನು ಪಡೆಯುತ್ತವೆ. ಅದರಲ್ಲೂ ಈ ಮಂಡಲದಲ್ಲಿನ ಕೇಂದ್ರ ಬಿಂದು ಮತ್ತದರ ಸುತ್ತಲಿನ ವೃತ್ತಗಳು ಕದಡಿದ ಮನಸ್ಸನ್ನು ತಿಳಿಯಾಗಿಸಿ, ಭಾವೋದ್ವೇಗಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತದೆ.

ಸಾಂಪ್ರದಾಯಿಕ ಮಂಡಲಗಳ ರಚನೆ ಅತ್ಯಂತ ಸೂಕ್ಷದಾಯಕವಾದ್ದರಿಂದ, ಅದಕ್ಕೆ ಹೆಚ್ಚಿನ ಗಮನ ಅವಶ್ಯಕ. ಮನಸ್ಸು ಒಂದು ವಿಷಯಕ್ಕೆ ಏಕಾಗ್ರತಗೊಳ್ಳುತ್ತಾ ಹೋದಂತೆಯೂ, ಹೊರಗಿನ ಪ್ರಪಂಚದ ಮಾನಸಿಕ ಮತ್ತು ದೈಹಿಕ ತಲ್ಲಣಗಳು, ಚಿಂತೆಗಳು ಎಲ್ಲವೂ ಕಡಿಮೆಯಾಗುತ್ತಾ ಹೋಗುತ್ತದೆ. ಇಷ್ಟವಾದುದ್ದನ್ನು, ಕುತೂಹಲಕಾರಿಯಾದುದ್ದನ್ನು ಮಾಡುವ ಕ್ರಿಯೆಯಲ್ಲಿ, ದೇಹದಲ್ಲಿ ಬಿಡುಗಡೆಯಾಗುವ ಖುಷಿಯ ಹಾರ್ಮೋನ್ಸ್ಗಳು ನಮ್ಮನ್ನು ಮತ್ತಷ್ಟು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.



ಮಂಡಲಗಳ ಪ್ರಯೋಜನಗಳೇನು ಮತ್ತು ಬಳಕೆ ಹೇಗೆ?

ಮಂಡಲಗಳಿಂದ ಹಲವಾರು ಪ್ರಯೋಜನಗಳಿವೆ. ಮಂಡಲಗಳ ಬಳಕೆಗೆ ಅದರೆಡೆಗಿನ ನಂಬಿಕೆ ಅತೀ ಮುಖ್ಯ. ಇದೊಂದು ಧನಾತ್ಮಕ ಶಕ್ತಿಯನ್ನು ತನ್ನಲ್ಲಿ ಕೇಂದ್ರೀಕೃತಗೊಳಿಸಿಕೊಂಡಿರುವ ಸಾಧನ.

ಮಂಡಲ ಚಿತ್ರಣಗಳನ್ನು ಮನೆಯಲ್ಲಿ ನಮ್ಮ ಕಣ್ಣೆದುರಲ್ಲಿ ಕಾಣುವಂತೆ ಇರಿಸಿಕೊಂಡು ಸಾಧ್ಯವಾದಾಗಲೆಲ್ಲ ಅದನ್ನು ವೀಕ್ಷಿಸುವುದರಿಂದ, ಅನಾವಶ್ಯಕ ಮಾನಸಿಕ ಕಿರಿಕಿರಿ ಕಡಿಮೆಯಾಗಿ, ಮನಸ್ಸು ಪ್ರಸನ್ನಗೊಳ್ಳುತ್ತದೆ. ತಿಳಿಯಾದ ಮತ್ತು ಆಕರ್ಷಕ ಬಣ್ಣಗಳಿಂದ ಕೂಡಿದ ಚಿತ್ತಾರ ವೀಕ್ಷಣೆ ಸಹಜವಾಗಿಯೇ  ಮನಸ್ಸನ್ನು ಪ್ರಫುಲ್ಲಗೊಳಿಸಲು ಸಹಾಯ ಮಾಡುತ್ತದೆ.

ಧ್ಯಾನ ಮಾಡುವಾಗ, ಮಂಡಲವನ್ನು ಎದುರಿಗಿರಿಸಿಕೊಂಡು ಸ್ವಲ್ಪ ಸಮಯದವರೆಗೆ ತದೇಕಚಿತ್ತದಿಂದ ಅದನ್ನೇ ಗಮನಿಸಿ ನಂತರದಲ್ಲಿ ಕಣ್ಣನ್ನು ಮುಚ್ಚಿ ಮಂಡಲದ ಚಿತ್ರಣವನ್ನಷ್ಟೇ ನೆನಪಿಸಿಕೊಳ್ಳುತ್ತಾ ಹೋದಂತೆಯೂ ಹೊರಾಂಗಣ ಚಂಚಲತೆ ಕಡಿಮೆಯಾಗಿ, ಏಕಾಗ್ರತೆ ಹೆಚ್ಚುತ್ತದೆ.

ಮಂಡಲಗಳೇನೋ ಇಷ್ಟವಾಗುತ್ತದೆ. ಆದರೆ ನಾನು ಚಿತ್ರಕಲೆ-ಬಣ್ಣ-ಕುಂಚಗಳ ಹಿನ್ನಲೆಯಿದ್ದವಳಲ್ಲ. ನಾನು ಹೇಗೆ ಮಂಡಲ ರಚನೆ ಮಾಡಲಿ? ಎಂಬುದು ಹಲವರ ಸರ್ವೇ ಸಾಮಾನ್ಯ ಪ್ರಶ್ನೆ. ಮಂಡಲಗಳನ್ನು ಚಿತ್ರಿಸಲು ಇಂತದ್ದೇ ಎನ್ನುವ ನಿಯಮಗಳಿಲ್ಲ. ಹೆಣ್ಣು -ಗಂಡು, ಹಿರಿಯ-ಕಿರಿಯ, ಮಕ್ಕಳು ಹೀಗೆ ಯಾರಾದರೂ ಯಾವ ವಯಸ್ಸಿನವರಾದರೂ ಚಿತ್ರಿಸಬಹುದು. ಮಂಡಲಗಳನ್ನು ಚಿತ್ರಿಸುವುದರಿಂದ, ಸಹಜವಾಗಿಯೇ ನಮ್ಮ ಏಕಾಗ್ರತೆ ಹೆಚ್ಚುವುದಲ್ಲದೇ, ಮಂಡಲ ಡಿಸೈನ್ಗಳು ನಮ್ಮಲ್ಲಿ ಹುಟ್ಟುತ್ತಾ ಹೋದಂತೆ ನಮ್ಮಲ್ಲಿನ ಕ್ರಿಯಾಶೀಲತೆ ಮತ್ತು ನಮ್ಮೊಳಗಿನ ಅದಮ್ಯ ಶಕ್ತಿ ಹೊರಹೊಮ್ಮುತ್ತದೆ. ಧನಾತ್ಮಕ ಯೋಚನೆಗಳು, ಅನಾವಶ್ಯಕ ಚಿಂತೆ ಗಳನ್ನು ಆ ಕ್ಷಣಕ್ಕೆ ಮರೆಸಿ, ನಮ್ಮನ್ನು ತನ್ನದೇ ಆದ ಧ್ಯಾನ ವರ್ತುಲದಲ್ಲಿ ಆವರಿಸಿಕೊಳ್ಳುತ್ತದೆ ಈ ಮಂಡಲ. ಅತ್ಯಂತ ಸರಳವಾದ ವರ್ತುಲ, ಚೌಕ, ತ್ರಿಕೋನ ಮಾದರಿಯ ರೇಖಾಚಿತ್ರಗಳಿಂದ ಒಂದೇ ಮಾದರಿಯಲ್ಲಿ ಪ್ರಾರಂಭಿಸಿ ಅಭ್ಯಸಿಸಿದರೆ ಕ್ರಮೇಣ ಮಂಡಲಗಳ ಹುಚ್ಚು ಹಿಡಿಯಲು ಎಷ್ಟು ಸಮಯವೂ ಬೇಕಾಗಿಲ್ಲ.



ಮಾರುಕಟ್ಟೆಗೂ ಮಂಡಲಗಳ ಲಗ್ಗೆ

ಮಂಡಲಗಳು ಒಂದು ಧನಾತ್ಮಕ ಶಕ್ತಿಯ ಸ್ವರೂಪ ಎಂದು ಆಧ್ಯಾತ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ದೊರಕಿರುವ ಪುರಾವೆಗಳಿಂದಾಗಿ, ಇದೀಗ ಮಾರುಕಟ್ಟೆಗಳಲ್ಲಿ ಮಂಡಲಕ್ಕೆ ಸಂಬಂಧಿಸಿದ ಅನೇಕ ತರಹದ ವಸ್ತುಗಳು ತಮ್ಮ ಛಾಪನ್ನು ಮೂಡಿಸುತ್ತಿವೆ. ಸುಂದರವಾದ  ಮಂಡಲಗಳ ಪೈಂಟಿಂಗ್ಗಳನ್ನು ಗೃಹ ಅಲಂಕಾರಕ್ಕಾಗಿ ಬಳಕೆ ಮಾಡಿಕೊಳ್ಳುವ ಒಲವು ಜನರಲ್ಲಿ ಹೆಚ್ಚುತ್ತಿದೆ. ಕೇವಲ ಅಲಂಕಾರಿಕ ವಸ್ತು ಎಂದಷ್ಟೇ ಪರಿಗಣಿಸದೇ, ದೇವರ ಚಿತ್ರಗಳನ್ನು ಗೋಡೆಗಳಿಗೆ ಹಾಕುವ ಮಾದರಿಯಲ್ಲಿ, ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿ, ಒಳ್ಳೆತನದ ವಿಸ್ತಾರತೆಗಾಗಿ ಬ್ಯುಸಿನೆಸ್ ಆಫೀಸಗಳಲ್ಲಿ, ಆಸ್ಪತ್ರೆಗಳಲ್ಲಿ, ಯೋಗ ಶಾಲೆಗಳಲ್ಲಿ ಗೋಡೆಗಳ ಮೇಲೆ ದೊಡ್ಡ ಗಾತ್ರದ ದೈವಿಕ ಮಂಡಲ ಚಿತ್ರಗಳನ್ನು ಲಗತ್ತಿಸಿ, ಜನರ ಮನಸ್ಸಿನ ಆತಂಕ ನಿವಾರಕ ವಾತಾವರಣಕ್ಕೆ ಸಹಾಯಕವಾಗುತ್ತದೆ  ಜನರಲ್ಲಿ    ಅನೇಕ ಮಾದರಿಯ ಮಂಡಲ ಚಿತ್ರಗಳ ಪುಸ್ತಕಗಳು ಲಭ್ಯ. ಪ್ರಿಂಟೆಡ್ ಮಂಡಲಗಳ ಮೇಲೆ ನೀವು ನಿಮ್ಮ ಮನಸ್ಸಿಗೆ ಹಿಡಿಸುವಂತೆ  ಬಣ್ಣದ ಪೆನ್ಸಿಲ್ಗಳಿಂದ ಬಣ್ಣ ತುಂಬುತ್ತ ಹೋಗುವುದು ಕೂಡ ಒಂದು ಅತ್ಯಂತ ಖುಷಿ ಕೊಡುವ ಚಿಕಿತ್ಸಕ ಕ್ರಿಯೆ.  ಮಂಡಲಗಳ ಮಹತ್ವ ವಿಸ್ತಾರಗೊಳ್ಳುತ್ತಿರುವ ಹಿನ್ನಲೆಯಲ್ಲೇ, ಈಗೆಂತು ತಂತ್ರಜ್ಞಾನದ ಯುಗದಲ್ಲಿ ಜೀವಿಸುವ ನಮಗೆ, ಕಂಪ್ಯೂಟರ್ ಮತ್ತು ಮೊಬೈಲುಗಳಲ್ಲಿ ಬಿತ್ತರಗೊಳ್ಳುವ ವಿಷಯಗಳೇ ಗೋಚರವಾಗುವ ಪರಿಸ್ಥಿತಿಗೆ. ಮನಸ್ಸಿನ ರೇಲಾಕ್ಸೆಷನ್ ಗಾಗಿ ವಿವಿಧ ಮಾದರಿಯ ಮಂಡಲ ಆಪ್ಗಳು ಲಭ್ಯ. ಒಂದು ದಿಕ್ಕಿನಲ್ಲಿ ಮನಸ್ಸಿಗೆ ತೋಚಿದ ಮಾದರಿಯಲ್ಲಿ ಬೆರಳಾಡಿಸಿದರೆ ಸಾಕು, ಸರಿಮಗ್ಗಲಿನ ಚಿತ್ರಗಳು ತಂತಾನೇ ರಚಿತಗೊಂಡು ನಮ್ಮನ್ನು ತುಸುಕಾಲ ರಂಜಿಸುವಲ್ಲಿ ಯಶಸ್ವಿಯಾಗುತ್ತದೆ.