ಬುಧವಾರ, ನವೆಂಬರ್ 20, 2019

ಲಿವಿಂಗ್ ರೂಟ್ ಬ್ರಿಡ್ಜ್

ಪ್ರಪಂಚದಾದ್ಯಂತ ಅದೆಷ್ಟೋ ಸೇತುವೆಗಳು, ತಮ್ಮ ನಿರ್ಮಾಣದ  ಐತಿಹಾಸಿಕತೆಗೆ, ವಿಜ್ಞಾನ ಮತ್ತು ತಂತ್ರವಿದ್ಯೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮಾನವನ ಆವಿಷ್ಕಾರಗಳ ಚಾಣಾಕ್ಷ್ಯತೆಯ ಇಂತಹ ಕೊಡುಗೆಗಳ ಪೈಕಿ, ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ಯಾವುದೇ ವಸ್ತುಗಳನ್ನು ಬಳಸದೇ,  ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯ ಆದರೂ ಸುಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ. ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗವುದು ಕೇವಲ ಮರಗಳ ಬೇರುಗಳಿಂದ! ಭಾರತದ ಆರ್ದ್ರ ಸ್ಥಳ ಎಂಬ ಮನ್ನಣೆಗೆ ಪಾತ್ರಗೊಂಡಿರುವ ಮೇಘಾಲಯದ ಚಿರಾಪುಂಜಿಯಲ್ಲಿ ವರ್ಷವಿಡೀ ಮಳೆ. ಸರ್ವ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್.



'ಲಿವಿಂಗ್ ರೂಟ್ ಬ್ರಿಡ್ಜ್' ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ನ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು. ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲು. ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗೆ ಅಡ್ಡವಾಗಿ ಕಟ್ಟಿ ಚಿಕ್ಕ ಪುಟ್ಟ ಕಾಲುದಾಟುಗಳನ್ನಾಗಿ ನಿರ್ಮಿಸಿಕೊಳ್ಳುತ್ತಿದ್ದರಾದರೂ, ಸರ್ವಕಾಲಿಕ ಮಳೆಯಿಂದುಂಟಾಗುವ  ತೇವಾಂಶ-ಆರ್ದ್ರತೆಗೆ ಅವುಗಳು ಬಲುಬೇಗ ನಶಿಸಿ ಹೋಗುತ್ತಿದ್ದವು. ಇದಕ್ಕೊಂದು ಶಾಶ್ವತ ಪರಿಹಾರವೆಂಬಂತೆ, ಖಾಸೀ ಬುಡಕಟ್ಟು ಜನಾಂಗದವರು, ಪ್ರಕೃತಿಯ ಮೇಲಿನ ಗೌರವ ಮತ್ತು ನಂಬಿಕೆಯಿಂದ ಕಂಡುಕೊಂಡ ಉಪಾಯವೇ ಈ ಲಿವಿಂಗ್ ರೂಟ್ ಬ್ರಿಡ್ಜ್. ಖಾಸಿ ಮತ್ತು ಜೇನ್ತಿಯಾ ಬೆಟ್ಟಗಳಲ್ಲಿ, ಅಲ್ಲಿನ ಆರ್ದ್ರತೆಗೆ ದಷ್ಟಪುಷ್ಟವಾಗಿ ಬೆಳೆಯುವ ಒಂದು ಜಾತಿಯ ರಬ್ಬರ್ (Ficus Elastica) ನ ಗಟ್ಟಿಮುಟ್ಟಾದ ಉದ್ದದ ಬೇರುಗಳನ್ನು ಬಳಸಿ, ಸೇತುವೆ ಕಟ್ಟುವ ಅನನ್ಯ ಪ್ರಯತ್ನ ಅಲ್ಲಿನ ಬುಡಕಟ್ಟು ಜನಾಂಗದವರಿಂದ ಪ್ರಾರಂಭವಾಯಿತು. ಅವರು ಈ ರಬ್ಬರ್ ಮತ್ತು ಆಲದ ಗಿಡಗಳನ್ನು ನದಿ ದಂಡೆಯ ಪಕ್ಕದಲ್ಲಿ ಒಂದಕ್ಕೊಂದು ಸಮೀಪದಲ್ಲಿ ನೆಟ್ಟು ಬೆಳೆಸಲಾರಂಭಿಸಿದರು. ಆ ಸಸಿಗಳು ದೊಡ್ಡದಾಗಿ,ಅವುಗಳಿಂದ ಟಿಸಿಲೊಡೆದ ಬೇರು ಮತ್ತು ಬಿಳಲುಗಳನ್ನು, ಅತ್ಯಂತ ಕುಶಲತೆಯಿಂದ ಹಂತಹಂತವಾಗಿ ಸೇರಿಸಿ ಮತ್ತಷ್ಟು ಗಟ್ಟಿಗೊಳಿಸುತ್ತಿದ್ದರು. ಹೀಗೆ ಬೆಳೆಯುವ ಮೀಟರುಗಟ್ಟಲೆ ಉದ್ದದ ಬಿಳಲುಗಳನ್ನು ಪ್ರತಿ ೪-೫ ತಿಂಗಳಿಗೊಮ್ಮೆ ಎಳೆದು ಹುರಿಗೊಳಿಸಿ, ನದಿಗಳಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಕಟ್ಟಿರುತ್ತಿದ್ದ ಮರದ ಅಥವಾ ಬಿದಿರಿನ ಸಂಕೋಲೆಗಳ ಮೇಲೆ ನೈಪುಣ್ಯತೆಯಿಂದ ಹೆಣೆಯುತ್ತಿದ್ದರು. ಈ ನಿರಂತರ ಕಾರ್ಯವನ್ನು ಖಾಸೀ ಜನರು ಕಾಲದಿಂದ ಕಾಲಕ್ಕೆ ಒಂದು ಸಾಂಪ್ರದಾಯಿಕ ಕ್ರಮದಂತೆ ಮುಂದುವರೆಸುತ್ತ ಬಂದರು. ಕ್ರಮೇಣ ಮರದ ಬಿಳಲು ಮತ್ತು ಬೇರುಗಳು, ಅವುಗಳನ್ನು ರೂಪುಗೊಳಿಸಿದ  ರೀತಿಯಲ್ಲಿಯೇ ಅಗಲ-ಉದ್ದವಾಗಿ ಹಿಗ್ಗಿಕೊಂಡು ಬೆಳೆದು ಗಟ್ಟಿಯಾದ ಸೇತುವೆಯಾಗಿ ಮಾರ್ಪಾಟುಗೊಂಡಿತು. ಹೀಗೆ ಸುದೃಢವಾಗಿ ಬೆಳೆದ ಬೇರುಗಳ ಸಂಕೋಲೆಗಳ ಮೇಲೆ, ಬಿದಿರು ಮತ್ತು ಮರದ ತೊಗಟೆಗಳ  ಹೊದಿಕೆಯನ್ನು ನೀಡಿ, ಅದರ ಮೇಲೆ ಮಣ್ಣು ಮತ್ತು ಸಣ್ಣ ಕಲ್ಲುಗಳ ಜೋಡಣೆ ಮಾಡುತ್ತಾ ಬಂದಂತೆಯೂ, ಬೇರುಗಳು ಅದಕ್ಕೆ ಒಗ್ಗಿಕೊಂಡು, ಜನರ ಓಡಾಟದ 'ಲಿವಿಂಗ್ ರೂಟ್ ಬ್ರಿಡ್ಜ್' ಆಗಿ ನಿರ್ಮಾಣಗೊಂಡಿತು. ಅನಕ್ಷರಸ್ಥರಾಗಿದ್ದರೂ ಕೂಡ ಆ ಕಾಲಕ್ಕೆ 'ಆರ್ಗ್ಯಾನಿಕ್ ಇಂಜಿನಿಯರಿಂಗ್' ತಂತ್ರವಿದ್ಯೆಯ ಸೇತುವೆಯ ನಿರ್ಮಾಣ ಖಾಸೀ ಬುಡಕಟ್ಟು ಜನಾಂಗದವರ ಅದ್ಬುತ ಸಾಧನೆ. ಈ ರೀತಿಯ ಒಂದೊಂದು ಸೇತುವೆ ನಿರ್ಮಾಣವೂ ಸುಮಾರು ೩೦-೪೦ ವರ್ಷಗಳವರೆಗೆ ನಡೆದಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಪೂರ್ವ ಖಾಸಿ ಹಿಲ್ಸ್ ಜಿಲ್ಲೆಗಳಲ್ಲಿ, ಮ್ಯಾವಲಾಂಗ್ ಮತ್ತು ನಾನ್ಗ್ರಿಯಾಟ್ ಇನ್ನಿತರ ಚಿರಾಪುಂಜಿಯ ಗ್ರಾಮಗಳಲ್ಲಿ ಕಾಣಸಿಗುವ ಈ ಸೇತುವೆಗಳು, ಮೇಘಾಲಯದ ಈಗಿನ ಮುಖ್ಯ ಪ್ರವಾಸೀ ಸ್ಥಳಗಳಲ್ಲಿ ಒಂದಾಗಿದೆ. ಕೇವಲ ನೋಡಲಷ್ಟೇ ಅಲ್ಲದೆ ಇಂದಿಗೂ ಕೂಡ ಸುತ್ತಮುತ್ತಲಿನ ಹಳ್ಳಿಗರು ನೂರಾರು ವರ್ಷಗಳ ಹಿಂದೆ 'ಬೆಳೆಸಿದ' ಈ ಸೇತುವೆಗಳನ್ನು ಈಗಲೂ ನಿರ್ಭಯವಾಗಿ  ದಿನನಿತ್ಯದ ಓಡಾಟಕ್ಕೆ,  ಕೃಷಿಭೂಮಿಗೆ ಸಾಮಾನುಗಳನ್ನು ಸಾಗಾಟಕ್ಕೆ ಇತ್ಯಾದಿಯಾಗಿ  ಬಳಕೆ  ಮಾಡುತ್ತಿದ್ದಾರೆ. ಹಲವು ಸೇತುವೆಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಈ  ರೂಟ್ ಬ್ರಿಡ್ಜ್ ಸೇತುವೆಗಳು , ಕನಿಷ್ಠವೆಂದರೂ ೮ ಅಡಿಗಳಷ್ಟು ಅಗಲ, ೭೦ ಅಡಿಗಳಷ್ಟು ಉದ್ದದಷ್ಟಿದೆ. ಖಾಸಿ ಜಿಲ್ಲೆಯ ಮಾವ್ಕಿರ್ಣಟ್ ಹಳ್ಳಿಯಲ್ಲಿರುವ ಲಿವಿಂಗ್ ರೂಟ್ ಬ್ರಿಡ್ಜ್ ೧೭೫ ಫೀಟ್ ಉದ್ದವಾಗಿದ್ದು ಮೇಘಾಲಯದ ಅತೀ ಉದ್ದದ ಲಿವಿಂಗ್ ರೂಟ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಿಗೆ ನೂರಾರು ಜನರು ನಿಂತರೂ ಕೂಡ ತಡೆದುಕೊಳ್ಳುವ ಶಕ್ತಿ, ನೂರಾರು ವರ್ಷಗಳಿಂದ ನಿಂತಿರುವ ಆ ಮರದ ಬೇರುಗಳಿಗಿವೆ. ಇದರಂತೆಯೇ, ಒಂದು ಸೇತುವೆಯ ಮೇಲೆ ಮತ್ತೊಂದು ಸೇತುವೆಯಂತೆ ನಿರ್ಮಿಸಿದ, ಉಂಶಿಯಾಂಗ್ 'ಡಬ್ಬಲ್ ಡೆಕ್ಕರ್ ರೂಟ್ ಬ್ರಿಡ್ಜ್' ನೋಡಲು ಅತ್ಯಂತ ಆಕರ್ಷಣೀಯವಾಗಿದ್ದು, ಅದು ಸುಮಾರು ೧೮೦ ವರ್ಷಗಳಷ್ಟು ಪುರಾತನವಾದದ್ದಂತೆ!

 ಪ್ರಕೃತಿಯಿಂದ ಕೇವಲ ಪಡೆಯುವ ಇಚ್ಛೆಯಲ್ಲದೇ, ನಿಸರ್ಗ ಮತ್ತು ಮಾನವನ ಪರಸ್ಪರ ಕೊಡುವುದು ಮತ್ತು ತೆಗೆದುಕೊಳ್ಳುವ ಸಮತೋಲನದ ಅದ್ಭುತ ಉದಾಹರಣೆ ಈ 'ಲಿವಿಂಗ್ ರೂಟ್ ಬ್ರಿಡ್ಜ್' ಗಳು. ಉತ್ತಮ ದರ್ಜೆಯ ಸಾಮಗ್ರಿಗಳು, ವಿಜ್ಞಾನ ಮತ್ತು ತಂತ್ರವಿದ್ಯೆ, ಪೂರಕ ನಿರ್ಮಾಣ ಘಟಕಗಳು, ಮೆಷಿನರಿ ಉಪಕರಣಗಳನ್ನು ಬಳಸಿ ನಿರ್ಮಿಸಿದ ನೂತನ ಸೇತುವೆಗಳು, ಕಟ್ಟಿ ಕೆಲವೇ ವರ್ಷಗಳಲ್ಲಿ ತಾಂತ್ರಿಕ ದೋಷಗಳಿಂದ ಮುರಿದು ಬೀಳುವ ಘಟನೆಗಳೆದುರು, ನೂರಾರು ವರ್ಷ ಸ್ಥಿರವಾಗಿ ನಿಲ್ಲುವ ಅಂತಹ ಮಳೆನಾಡಿನ ನಿಸರ್ಗದತ್ತ ಸೇತುವೆಗಳು ನಮ್ಮನ್ನು ಅಚ್ಚರಿಗೊಳಿಸದೇ ಇರುವುದಿಲ್ಲ. ಇಂತಹ ಪ್ರಾಕೃತಿಕ, ಪಾರಂಪರಿಕ ಅದ್ಭುತಗಳು ಇತ್ತೀಚೆಗಿನ ಕಾಂಕ್ರೀಟು ಸೇತುವೆಗಳ ಅಭಿವೃದ್ಧಿಯ ಹೆಸರಿನಲ್ಲಿ ಕಳೆದು ನಶಿಸಿ ಹೋಗುತ್ತಿರುವುದು ಅತ್ಯಂತ ವಿಷಾದನೀಯ. ಇಂತಹ ರೂಟ್ ಬ್ರಿಡ್ಜ್ ನ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ನಿರ್ಮಾಣದ ಕುಶಲತೆಯ ಪಾರಂಪರ್ಯತೆಯನ್ನು ಉಳಿಸಿಕೊಳ್ಳಲು ಕೆಲವು ನಿಸರ್ಗ ಪ್ರಿಯರು, ಸಂಘ ಸಂಸ್ಥೆಗಳ ಜನರು ಪ್ರಯತ್ನಿಸುತ್ತಲೇ ಇದ್ದಾರೆ . "ಈ ಲಿವಿಂಗ್ ರೂಟ್ ಬ್ರಿಡ್ಜ್ಗಳ ಆಯುಷ್ಯ ೫೦೦ ವರ್ಷಗಳಿರಬಹುದು ಎಂದು ಕೆಲವು ಪರಿಸರ ತಜ್ಞರು, ಸಂಶೋಧಕರು ಊಹಿಸುತ್ತಾರೆ. ಆದರೆ ರಕ್ಷಿಸಿ ಪೋಷಿಸಿಕೊಂಡರೆ ತನ್ನ ನಿಷ್ಕ್ರೀಯತೆಯ ಬುಡದಲ್ಲೇ ಹೊಸ ಸೃಷ್ಟಿಯ ಬೇರುಗಳಿಂದಾಗಿ ಈ ಸೇತುವೆಗಳು ಎಂದೂ ಸಾಯುವುದಿಲ್ಲ"ಎಂದು ಅಭಿಪ್ರಾಯ ಪಡುತ್ತಾರೆ ಊರಿಂದ ಊರಿಗೆ ಓಡಾಡಿ ಲಿವಿಂಗ್ ರೂಟ್ ಬ್ರಿಡ್ಜ್ ನ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಹಂಚುವ 'ಲಿವಿಂಗ್ ಬ್ರಿಡ್ಜ್ ಫೌಂಡೇಶನ್' ನ ಸ್ಥಾಪಕ, ಮಾರ್ನಿಂಗ್ಸ್ಟಾರ್ ಕಾಂಗ್ತಾವ್.  ಏನೇ ಆದರೂ, ಜನರ ಬಳಕೆ ಮಾತ್ರಕ್ಕೆ ಸೀಮಿತವಾಗದೆ, ಪ್ರವಾಸೋದ್ಯಮದ ಲಾಭಿಗಾಗಿ ಅಲ್ಲದೇ, ಪರಿಸರವನ್ನು ಹಾಳುಗೆಡುವದೇ ಮತ್ತಷ್ಟು ಸಮೃದ್ಧಗೊಳಿಸುವ ಉದ್ದೇಶಕ್ಕಾದರೂ ಇಂತಹ ಪಾರಂಪರಿಕ ವಸ್ತುಗಳು ಉಳಿದುಕೊಂಡಿರಲಿ ಎಂಬುದೇ ನಮ್ಮ ಆಶಯ.

ಗುರುವಾರ, ನವೆಂಬರ್ 14, 2019

ಹೇಮಕುಂಡ್ ಸಾಹಿಬ್ - ಹಿಮಾಲಯ ಟ್ರೆಕ್

ಜಿಟಿ ಜಿಟಿ ಮಳೆ, ಹಿಮಾಲಯದ ಶೃಂಗಗಳಿಂದ ಬೀಸುವ ಶೀತಗಾಳಿ, ಹಾದಿಯ ಅಕ್ಕಪಕ್ಕದಲ್ಲೆಲ್ಲ ಮಳೆಯಲ್ಲಿ ತೋಯ್ದು ತೆಪ್ಪೆಯಾದ ಹಸಿರು ಗಿಡ ಮರಗಳು, ಸೂರ್ಯನ ಪ್ರಕಾಶಕ್ಕೆ, ಹವಳಗಳಂತೆ ಹೊಳೆವ ಹೂವಿನ ಮೇಲಿನ ಮಳೆ ಹನಿಗಳು, ಕಣ್ಣೆತ್ತಿ ನೋಡಿದಷ್ಟೂ ಪರ್ವತಾವಳಿ,  ಕ್ಪಣ ಕ್ಷಣಕ್ಕೂ ಸುತ್ತಲಿನ ನಿಸರ್ಗವನ್ನು ಮಾಂತ್ರಿಕವಾಗಿ ಬದಲಾಯಿಸುವ  ಇಬ್ಬನಿ, ಮಂಜು ಮತ್ತು ಮೋಡಗಳ ಆಟ, ದೊಡ್ಡ ದೊಡ್ಡ ಪರ್ವತಗಳನ್ನು ಹಾದು,ಬೆಳ್ಳಗೆ ಹಾಸಿ ಬಂದು ನಿಂತಿರುವ ಹಿಮನದಿ, ಆ ಬ್ರಹತ್ ಹಿಮನದಿಗಳ ಪಕ್ಕದಲ್ಲೇ, ಮೈಯ ಕೊರೆಯುವ ಚಳಿಯಲ್ಲಿ ನಮ್ಮ ನೆಡಿಗೆ.. ಅಬ್ಬಾಬ್ಬಾ..ಅನುಭವಿಸಿಯೇ ತೀರಬೇಕು ಆ ರಮ್ಯತೆಯನ್ನು! ಹೀಗೊಂದು ರೋಚಕ ಚಾರಣದ ಅನುಭವವನ್ನು ಕಳೆದ ಅಗಸ್ಟ್ ತಿಂಗಳಿನಲ್ಲಿ ಉತ್ತರಾಂಚಲದ 'ಹೇಮಕುಂಡ್ ಸಾಹಿಬ್' ಗೆ ಭೇಟಿ ನೀಡುವ ಸಂದರ್ಭದಲ್ಲಿ ನಾವು ಪಡೆದೆವು. 


'ಹೇಮಕುಂಡ್ ಸಾಹಿಬ್' -ಸ್ಥಳ ಇತಿಹಾಸ :

ಸಂಸ್ಕೃತದಲ್ಲಿ 'ಹೇಮ್' ಎಂದರೆ ಹಿಮ ಮತ್ತು 'ಕುಂಡ್' ಎಂದರೆ ಬಟ್ಟಲು. ಹೌದು, ಹೇಮಕುಂಡ್ ಸಾಹಿಬ್ ಒಂದು ಹಿಮದ ಬೋಗುಣಿಯಲ್ಲಿರುವ ಗುರುದ್ವಾರ. ಈಗಿನ ಹೇಮಕುಂಡ್ ಸಾಹಿಬ್ ಗುರುದ್ವಾರವಿರುವ ಸ್ಥಳದಲ್ಲಿ, ಹಿಂದಿನಿಂದಲೂ ರಾಮನ ತಮ್ಮ ಲಕ್ಷ್ಮಣ ತನ್ನ ಹಿಂದಿನ ಜನ್ಮದವತಾರದಲ್ಲಿ ದೈವಕೃಪೆಗಾಗಿ ಕುಳಿತು ತಪಸ್ಸು ಮಾಡಿದ್ದನು ಎಂಬ ಪ್ರತೀತಿಯಿಂದ ಜೋಷಿಮಠದ ಸ್ಥಳೀಯರು ಬಂದು ಪೂಜಿಸುತ್ತಿದ್ದರು ಹಾಗೂ ಈ ಸ್ಥಳವನ್ನು 'ಲೋಕ್ಪಾಲ್' (ಲೋಕಪಾಲ - ಲಕ್ಷ್ಮಣ) ಎಂದೂ ಕೂಡ ಕರೆಯಲಾಗುತ್ತದೆ ಎಂದು ತಿಳಿದುಬಂದಿದೆ. ಹೆಚ್ಚಾಗಿ ಹಿಮಾವೃತ್ತಗೊಂಡು ಹೆಚ್ಚೇನೂ ಹೊರಪ್ರಪಂಚದ ಬೆಳಕಿಗೆ ಬಂದಿರದ ಈ ಸ್ಥಳದಲ್ಲಿ, ಸಿಖ್ಖರ ಗುರು, ಗೋಬಿಂದ್ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ತಪಸ್ಸು ಮಾಡಿ  ಇಲ್ಲಿಯೇ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ. ಇಲ್ಲಿನ ಹೇಮಕುಂಡ್ ಸರೋವರ, ಸಪ್ತಋಷಿ ಶಿಖರಗಳಿಂದ ಹಿಮನದಿಗಳು ಹರಿದುಬಂದು ಮಾರ್ಪಾಟುಗೊಂಡಿರುವ ಒಂದು ದೊಡ್ಡ ಸರೋವರ. ಈ ಪವಿತ್ರ-ಅದಮ್ಯ ಶಕ್ತಿಸ್ಥಳವನ್ನು, ಅನೇಕ ದಶಮಾನಗಳ ಹಿಂದೆ, ಸಂತ ಸೋಹಾನ ಸಿಂಗ್ ರವರು ಗುರುತಿಸಿ, ೧೯೩೬ ರಲ್ಲಿ ಇಲ್ಲಿ ಗುರುದ್ವಾರವೊಂದನ್ನು ನಿರ್ಮಾಣ ಮಾಡಿ, 'ಹೇಮಕುಂಡ್ ಸಾಹಿಬ್' ಎಂಬ ಹೆಸರಿನಲ್ಲಿ, ಹೊರಜಗತ್ತಿಗೆ ಪರಿಚಯಿಸಿದರು ಎಂಬ ಐತಿಹಾಸಿಕ ಕಥೆಯಿದೆ. ಗುರುದ್ವಾರದ ಜೊತೆ ಜೊತೆಯಲ್ಲೇ ಪುಟ್ಟದೊಂದು ಲಕ್ಷಣ ಮಂದಿರವಿದೆ. ಇದೇ  ಕಾರಣದಿಂದಾಗಿ ಈ ಸ್ಥಳವನ್ನು ಹಿಂದೂಗಳು ಮತ್ತು ಸಿಖ್ಖರು ಸಮಾನವಾಗಿ ಆದರಿಸುತ್ತಾರೆ. 

'ಹೇಮಕುಂಡ್ ಸಾಹಿಬ್' ಗುರುದ್ವಾರದ ಪ್ರಾಮುಖ್ಯತೆ :

ಪ್ರಪಂಚದ ಎರಡನೇ ಅತೀ ಎತ್ತರದ ಸ್ಥಳದಲ್ಲಿರುವ ಸಿಖ್ಖರ ಗುರುದ್ವಾರ ಎಂದೇ ಖ್ಯಾತಿ ಪಡೆದಿರುವ ಹೇಮಕುಂಡ್ ಸಾಹಿಬ್ ಅಥವಾ ಹೇಮಕುಂಟ್ ಇರುವುದು ಉತ್ತರಾಂಚಲದ ಚಮೋಲಿ ಜಿಲ್ಲೆಯ ಘಡ್ವಾಲ್ ಊರಿನ ಮೇಲ್ತಟ್ಟಿನಲ್ಲಿ. ಸಮುದ್ರ ಮಟ್ಟಕ್ಕಿಂತ ೪೬೩೨ ಮೀ. ಎತ್ತರದಲ್ಲಿರುವ ಈ ಸ್ಥಳ ಕೇವಲ ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆಗೊಂದೇ ಅಲ್ಲದೇ, ಯಾತ್ರಾ ಮಾರ್ಗದ ಸುತ್ತಮುತ್ತಲಿನ ಅಲೌಕಿಕ ನಿಸರ್ಗ ಸೌಂದರ್ಯದಿಂದಾಗಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವರ್ಷದ ೭ ತಿಂಗಳುಗಳು ಸಂಪೂರ್ಣ ಹಿಮದಿಂದ ಆವೃತ್ತಗೊಳ್ಳುವ ಈ ಸ್ಥಳ, ಜೂನ್ ನಿಂದ ಅಕ್ಟೋಬರ್ ವರೆಗಿನ ಸಮಯದಲ್ಲಿ ಮಾತ್ರ ಯಾತ್ರೆಗೆ ತೆರೆದಿರುತ್ತದೆ. ಸಹಸ್ರ ಸಂಖ್ಯೆಯಲ್ಲಿ, ಹಿರಿಯರು-ಕಿರಿಯರು ಎಂಬ ವಯಸ್ಸಿನ ಮಿತಿಯಿಲ್ಲದೆ, ಪ್ರತಿವರ್ಷವೂ ಸಂಸಾರ ಸಮೇತವಾಗಿ ಈ ಗುರುದ್ವಾರಕ್ಕೆ ಭೇಟಿ ನೀಡುವವರು ಒಂದು ಕಡೆಯಾದರೆ, ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಮಹದಾಸೆಯಿಂದ ನೂರಾರು ಮೈಲಿ ದೂರದಿಂದ ಹರಕೆ ಹೊತ್ತು ಬರುವ ಭಕ್ತಾದಿಗಳು ಇನ್ನೊಂದು ಕಡೆ. ಜೊತೆಗೆ, ಇಲ್ಲಿಯೇ ಇರುವ ಭುಂದರ್ ಗಂಗಾ ಕಣಿವೆಯ 'ವ್ಯಾಲಿ ಆಫ್ ಫ್ಲವರ್ಸ್' ಮತ್ತು 'ಹೇಮಕುಂಡ್ ಸಾಹಿಬ್' ಈ ಎರಡು ಗಮ್ಯಸ್ಥಾನಗಳ ರುದ್ರ ರಮಣೀಯ ಪ್ರಾಕೃತಿಕ ಸೌಂದರ್ಯವನ್ನು ಸವಿಯಲೆಂದೇ ಪ್ರತಿದಿನ ನೂರಾರು ಚಾರಣಿಗರು ಇಲ್ಲಿಗೆ ಬರುತ್ತಾರೆ. ಥರಗುಟ್ಟುವ ಚಳಿ ಮತ್ತು ಭೂಕುಸಿತ, ಕಲ್ಲು ಬಂಡೆಗಳ ಉರುಳುವಿಕೆಯ ಅಸ್ಥಿರ ಹಾದಿಯಿದ್ದರೂ ಕೂಡ ವರ್ಷಕ್ಕೆ ಸರಿಸುಮಾರು ೧. ೫ ಲಕ್ಷದಿಂದ ೨ ಲಕ್ಷ ಜನರು 'ಹೇಮಕುಂಡ ಸಾಹಿಬ್' ಗೆ ಭೇಟಿ ನೀಡುತ್ತಾರೆಂದು ಎಂಬ ಮಾಹಿತಿಯಿದೆ.




















ಗುರುದ್ವಾರದ ಒಳಗೆ ಹೋಗುವ ಮುನ್ನ ಅನೇಕ ಭಕ್ತರು ಇಲ್ಲಿನ ಪವಿತ್ರ ಹೇಮಕುಂಡ್ ಸರೋವರ ಅಥವಾ ಲೋಕಪಾಲ ಸರೋವರದಲ್ಲಿ ಮುಳುಗೆದ್ದು ತೀರ್ಥ ಸ್ನಾನ, ತೀರ್ಥ ಪ್ರೋಕ್ಷಣ್ಯ ಮಾಡಿಕೊಂಡು ಪುನೀತರಾಗುತ್ತಾರೆ. ಇಲ್ಲಿನ ತೀರ್ಥ ಸ್ನಾನ ಮಾಡಿದರೆ, ಕಷ್ಟ ಕಾರ್ಪಣ್ಯಗಳು ರೋಗ ರುಜಿನಗಳು ತೊಲಗಿ ಹೋಗುತ್ತವೆ ಎಂಬ ನಂಬಿಕೆ ಇದೆ. ಆದರೆ ಸರೋವರದ ನೀರು ಎಷ್ಟರ ಮಟ್ಟಿಗೆ ಕೊರೆಯುತ್ತಿರುತ್ತದೆಯೆಂದರೆ,ಇಂತಹ ಹಿಮಗಟ್ಟಿದ ನೀರಿನಿಂದ ಆಚೆ ಬಂದು, ಅಂಗಾಂಗಗಳ ಚಲನವಲನವೇ ಇಲ್ಲದಂತಾಗಿದೆ ಜಡಗಟ್ಟಿಸಿ ಬಿಡುತ್ತದೆ. ಈ ಸರೋವರದ ನೀರಿನಲ್ಲಿ ಸ್ಪಷ್ಟವಾಗಿ ಪ್ರತಿಫಲಿತವಾಗುವ ಸುತ್ತುವರೆದ ಶಿಖರಗಳನ್ನು ನೋಡಲು ಎರಡು ಕಣ್ಣುಗಳು ಸಾಲವು. ಗುರುದ್ವಾರವು, ದರ್ಬಾರ್ ಸಾಹಿಬ್ ಮತ್ತು ಲಂಗಾರ್ ಹಾಲ್ ಅನ್ನು ಒಳಗೊಂಡಿದೆ. ಒಳಗೆ ದರ್ಶನಕ್ಕೆ ಹೋಗುವವರು ಕಡ್ಡಾಯವಾಗಿ ತಲೆಯ ಮೇಲೆ ಬಟ್ಟೆಯನ್ನು ಹಾಕಿಕೊಂಡಿರಬೇಕು. ಇಲ್ಲದಿದ್ದ ಪಕ್ಷದಲ್ಲಿ ಅಲ್ಲಿಯೇ ಗುರುದ್ವಾರದ ಎದುರಿಗೆ ಬಟ್ಟೆಯನ್ನು ಇಟ್ಟುರುತ್ತಾರೆ. ಒಳಗೆ ಹೋಗಿ ಬರಲು ಬಳಸಿ ಮತ್ತೆ ಅಲ್ಲಿಯೇ ಇಟ್ಟು ಬರುವುದು ಅಲ್ಲಿನ ರೂಢಿ.  ಲಂಗಾರ್ ಹಾಳ್ ಅಥವಾ ಊಟದ ಮನೆಯಲ್ಲಿ ನೀಡುವ ಪ್ರಸಾದ ಅತ್ಯಂತ ಶುಚಿ ರುಚಿಯಾಗಿದೆ. ಸಿಹಿಯಾದ ತುಪ್ಪದಲ್ಲೇ ಮುಳುಗಿಸಿ ಮಾಡಿದ ಹಲ್ವಾ, ಬಿಸಿ ಬಿಸಿ ರುಚಿ ರುಚಿ ಕಿಚಡಿ, ಮತ್ತು ಬಿಸಿ ಬಿಸಿ ಕುಡಿದಷ್ಟೂ ಮತ್ತೆ ಮತ್ತೆ ಬೇಕೆನಿಸುವ ಗಿಡಮೂಲಿಕೆಯುಕ್ತ ಚಹಾ..  ಜನ ವಸತಿ ಇರದಂತಹ ಇಷ್ಟು ಎತ್ತರ ಸ್ಟಳಕ್ಕೆ ಪ್ರತಿಯೊಂದು ವಸ್ತುವನ್ನು ತಂದು ಪ್ರಸಾದ ಮಾಡಿ , ಯಾತ್ರಾ ಸೀಸನ್ನಿನಲ್ಲಿ ಪ್ರತಿನಿತ್ಯ ಬರುವ ನೂರಾರು ಭಕ್ತರಿಗೆ ನಿರ್ಬಂಧವಿಲ್ಲದೆ ಬೇಕಾದಷ್ಟು ನೀಡುವ ಇಲ್ಲಿನ ದಾಸೋಹ ಆಕರ್ಷಣೀಯವೆನಿಸುತ್ತದೆ.    

ಹೇಮಕುಂಡಕ್ಕೆ ಹೋಗುವ ಹಾದಿ :

ಹೇಮಕುಂಡ್ ಸಾಹಿಬ್ ದರ್ಶನಕ್ಕೆ, ಗುರುದ್ವಾರದ ವರೆಗೆ ವಾಹನದ ಮೂಲಕ ಸಾಗಲು ಸಾಧ್ಯವಿಲ್ಲ. ಗೋವಿಂದ್ಘಾಟ್ ನಂತರದ ಊರು ಪುಲ್ನ ದಿಂದ ಪ್ರಾರಂಭಿಸಿ, ಕಾಲ್ನಡಿಗೆಯಲ್ಲಿ ಸಾಗಬೇಕು. ಮೊದಲ ದಿನ ಘಾನ್ಘ್ರೀಯ ಎಂಬ ಊರಿನವರೆಗೆ ೧೧ ಕಿ.ಮೀ ಗಳ ಒಂದು ದಿನದ ನೆಡಿಗೆ ಮತ್ತು ಎರಡನೇ ದಿನ ಘಾನ್ಗ್ರೀಯ ದಿಂದ ಹೇಮಕುಂಡ್ ಸಾಹಿಬ್ ವರೆಗೆ ಅರ್ಧ ದಿನದ ೬ ಕಿ.ಮೀ ನೆಡಿಗೆ, ಒಟ್ಟು ೧೬ ಕಿ.ಮೀ ಗಳ ಪ್ರಯಾಸಕರ ಚಾರಣ ಹಾದಿ. ನೆಡಿಗೆ ಸಾಧ್ಯವಿಲ್ಲದವರಿಗೆ ಪರ್ಯಾಯ ವ್ಯವಸ್ಥೆಗಳಿವೆ. ವಾತಾವರಣ ಅನುಕೂಲಕರವಾಗಿದ್ದರೆ, ಜೋಷಿಮಠ ದಿಂದ ಘಾನ್ಗ್ರಿಯ ವರೆಗೆ ಹೆಲಿಕಾಪ್ಟರ್ ಮೂಲಕ ವೈಮಾನಿಕ ಪ್ರಯಾಣ ಬೆಳೆಸಬಹುದು. ಇಲ್ಲವಾದಲ್ಲಿ ಮ್ಯೂಲ್ ಅಥವಾ ಹೆಸರಗತ್ತೆಯ ಸವಾರಿ ಲಭ್ಯವಿದೆ. ಜೊತೆಗೆ, ತಮ್ಮ ಬೆನ್ನಿನ ಬುಟ್ಟಿಯಲ್ಲಿ ಪ್ರವಾಸಿಗರನ್ನು ಮತ್ತು ಅವರ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುವ ಪೋರ್ಟರ್ಸ್ ಅಥವಾ ಮಾಲಿಗಳು ಕೂಡ ಸಿಗುತ್ತಾರೆ. 

ಚಾರಣ ನಡೆಸುತ್ತ ಮೇಲೇರಿದಂತೆ ಆವೃತ್ತಗೊಳ್ಳುವ ಇಬ್ಬನಿಯ ಸೌಂದರ್ಯ ಅಸೀಮವಾಗಿರುತ್ತದೆ. ಆಗಸದೆತ್ತರಕ್ಕೆ ಚಿಮ್ಮಿ ನಿಂತ ಹಸಿರು ಪೈನ್, ಓಕ್ ಮರಗಳು, ವೈವಿಧ್ಯಮಯ ಹೂಗಳು, ಸಮೃದ್ಧ ಸಸ್ಯರಾಶಿ, ಪಕ್ಕದಲ್ಲಿ ಕಣಿವೆಯಿಂದಿಳಿದು ರಭಸದಲ್ಲಿ ತನ್ನ ಪಥದಲ್ಲಿ ಸಾಗುವ ಪುಷ್ಪವತಿ ನದಿ, ಹಿಮಾಲಯದ ಶ್ರೇಣಿಗಳು, ಹಿಮ ಕರಗಿ ನೀರಾಗಿ ಹರಿದು ಉಂಟಾದ ಪುಟ್ಟ ಪುಟ್ಟ ಜಲಪಾತಗಳು ಕಾಣಸಿಗುತ್ತವೆ, ಇಂತಹ ಪ್ರಕೃತಿ ಮಡಿಲಲ್ಲಿ ಯಾತ್ರೆ ಮಾಡುವುದೇ ಒಂದು ಪುಣ್ಯ. ಚಾರಣದ ಹಾದಿಯುದ್ದಕ್ಕೂ ಶ್ರದ್ಧೆಯಿಂದ ಗುರು ಸಾಹೇಬನನ್ನು ನೆನೆಯುತ್ತಾ,  ಯಾತ್ರಾರ್ಥಿಗಳ 'ಬೋಲೇ ಸೊ ನಿಹಾಲ್ - ಸತ್ ಸ್ರೀ ಅಕಾಲ್' ಎಂಬ ಜಯಘೋಷ ಇತರ ಚಾರಣಿಗರು ಮತ್ತು ಯಾತ್ರಾರ್ಥಿಗಳಿಗೆ  ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಪ್ರಮುಖ ಪ್ರವಾಸೀ ತಾಣವಾದ್ದರಿಂದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ, ಚಾರಣ ಹಾದಿಗೆ ಅಡಚಣೆಯಾಗುವ ಮ್ಯೂಲ್ ತ್ಯಾಜ್ಯ, ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಕಸಗಳು ಇತ್ಯಾದಿ ತ್ಯಾಜ್ಯವಸ್ತುಗಳ ನಿರ್ವಹಣೆಯನ್ನು, ಸ್ವಚ್ಛತಾಕಾರ್ಮಿಕರು ಅತ್ಯಂತ ಸಮಗ್ರವಾಗಿ ನಿರ್ವಹಿಸಿವುದು ಪ್ರಶಂಸನೀಯವೆನಿಸುವ ವಿಷಯ. ಘಾನ್ಗ್ರಿಯದಲ್ಲಿ ಸಾಕಷ್ಟು ಶೆರ್ಡ್ ಟೆಂಟ್ ಗಳು, ಖಾಸಗೀ ಹೋಟೆಲು ಲಾಡ್ಜುಗಳ ವಸತಿ ವ್ಯವಸ್ಥೆ ಇದೆ. ಉತ್ತಮ ಊಟ ತಿಂಡಿಗಳು ದೊರೆಯುತ್ತವೆ. ಇಲ್ಲಿರುವ ಸಿಖ್ಖರ ಗುರುದ್ವಾರ ಹೇಮಕುಂಡ್ ಸಾಹಿಬ್ ಗೆ ಬರುವ ಯಾತ್ರಾರ್ಥಿಗಳಿಗೆ ವಸತಿ - ಪ್ರಸಾದವನ್ನು ನೀಡುವ ವ್ಯವಸ್ಥೆ ಹೊಂದಿದೆ. 

ಘಾನ್ಗ್ರಿಯ ದಿಂದ ಹೇಮಕುಂಡಕ್ಕೆ ಚಾರಣ ಬೆಳಗಿನ ಜಾವ ತುಸು ಬೇಗನೆ ಪ್ರಾರಂಭಿಸಬೇಕಾಗುತ್ತದೆ. ಏಕೆಂದರೆ ಹೇಮಕುಂಡದಲ್ಲಿ ಜನವಸತಿ ವ್ಯವಸ್ಥೆಯಿರುವುದಿಲ್ಲ. ಮಳೆ-ಚಳಿ ಹೆಚ್ಚಿದ್ದಾಗ, ಮಧ್ಯಾಹ್ನದ ನಂತರದಲ್ಲಿ ಹಿಮ ಪಾತವಾಗುವ ಸಂಭವವಿರುವುದರಿಂದ, ಹೇಮಕುಂಡ್ ದರ್ಶನ ಮುಗಿಸಿ ಎಲ್ಲರೂ ಮಧ್ಯಾಹ್ನ ೧ ಗಂಟೆಯಷ್ಟರಲ್ಲಿ ಕೆಳಗೆ ಇಳಿಯಲು ಪ್ರಾರಂಭಿಸಬೇಕು. ಇಲ್ಲಿನ ಹಾದಿಗಳು ತುಸು ಕಠಿಣವಾಗಿದ್ದು, ಚಾರಣ ನಡೆಸಲು ಅಶಕ್ತವೆನಿಸುವವರಿಗೆ ಮ್ಯೂಲ್ ಮತ್ತು ಪೋರ್ಟರ್ಸ್ಗಳ ಲಭ್ಯತೆ ಇದೆ. ಮಳೆಗಾಲದ ಸಮಯದಲ್ಲೇ ಹೋದರೆ, ಕುಸಿದ ತಾಪಮಾನದಿಂದಾಗಿ  ಪದರ ಪದರವಾಗಿ ಮಂಜು ಬಿದ್ದು ಸಂಗ್ರಹವಾಗಿ, ಸುಣ್ಣದ ಬಂಡೆಯಂತೆ ಕಾಣುವ ಬೃಹತ್ ಗಾತ್ರದ ಹಿಮನದಿಗಳು ಚಾರಣದ ಹಾದಿಯಲ್ಲಿ ಕಾಣಬಹುದು. ಇನ್ನು ನೋಡಬಹುದಾದಂತಹ  ವೈವಿಧ್ಯಮಯ ಹೂಗಳಿಗೆ ಲೆಕ್ಕವಿಲ್ಲ..ಅದೃಷ್ಟವಿದ್ದರೆ, ಉತ್ತರಾಖಂಡ ರಾಜ್ಯದ ಹೂವೆಂದೇ ಪ್ರಸಿದ್ಧವಾದ 'ಬ್ರಹ್ಮ ಕಮಲ' ಕೂಡ ಕೆಲವು ಸ್ಥಳಗಳಲ್ಲಿ ಕಾಣಸಿಗುತ್ತವೆ. ಮೇಲಕ್ಕೆ ಏರಿದಂತೆಯೂ ಪ್ರಕೃತಿಯ ಚೆಲುವು ರುದ್ರ ರಮಣೀಯವೆನಿಸುತ್ತದೆ. 

ಇನ್ನೊಂದು ವಿಶೇಷ ಸಂಗತಿಯೆಂದರೆ, ದೇಶದ ನಾನಾ ಕಡೆಯಿಂದ ತೀರ್ಥಯಾತ್ರೆಗೆಂದು ಬರುವ ಭಕ್ತಾದಿಗಳ ಕುರಿತು ಇಲ್ಲಿನ ಸ್ಥಳೀಯರಿಗೆ ಹೆಚ್ಚಿನ ಗೌರವವಿದೆ. ಉತ್ತರಾಖಂಡದ ಸಾಕಷ್ಟು ಊರುಗಳಲ್ಲಿ,ಅನೇಕ ಸಮಾಜ ಸೇವಕರು, ಸಂಘ ಸಂಸ್ಥೆಗಳು, ರಾಷ್ಟ್ರೀಯ ಹೆದ್ದಾರಿಯ ಬದಿಗಿನ ಕೆಲವು ಅಂಗಡಿ ಮಾಲೀಕರು, ಹೀಗೆ ಬರುವ ಸಿಖ್ಖರು ಮತ್ತು ಪಂಜಾಬಿ ಯಾತ್ರಿಗಳಿಗೆ ಉಚಿತವಾಗಿ ವಸತಿ ಮತ್ತು ಆಹಾರ-ಪಾನೀಯಗಳನ್ನು ನೀಡಿ, ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ  ಕುರಿತು ಕೇಳಿ ಆಶ್ಚರ್ಯವಾಯಿತು. ಹೇಮಕುಂಡ್ ಚಾರಣದ ಹಾದಿಯಲ್ಲೂ ಕೂಡ ಎತ್ತರದ ಸ್ಥಳಗಳಲ್ಲಿ ಕೆಲವು ಅಂಗಡಿಯವರು, ಹಿರಿಯ ಯಾತ್ರಾರ್ಥಿಗಳಿಗೆ, ಅಂಗವಿಕಲರಿಗೆ, ಕೊರೆವ ಚಳಿಗೆ ಉಚಿತವಾಗಿ ಚಹಾ ನೀಡುವುದು ನೋಡಿ ಸಂತಸವಾಯಿತು. 

ವಿನಂತಿ : 

ನಾನು ಜೀವನದಲ್ಲಿ ಮೊದಲ ಬಾರಿಗೆ ಅಷ್ಟು ಸಮೀಪದಿಂದ ಹಿಮನದಿಗಳನ್ನು ಕಣ್ಣಾರೆ ನೋಡುತ್ತಿದ್ದರಿಂದ ಅಕ್ಷರಶಃ ಮೂಕಳಾಗಿ ಹೋಗಿದ್ದೆ. ಈ ವಿಹಂಗಮ ನೋಟವನ್ನು ನೋಡಿ ಸಂತೋಷ ಪಟ್ಟ ಮರುಕ್ಷಣಕ್ಕೆ, ಮಾನವ ಪ್ರಕೃತಿಗೆ ಕೊಡುಗೆಯಾಗಿ ನೀಡುತ್ತಿರುವ ಮಾಲಿನ್ಯ ಮತ್ತು ಹೆಚ್ಚಿನ ಇಂಗಾಲದ ಪ್ರಮಾಣದಿಂದಾಗಿ ಏರುತ್ತಿರುವ ಜಾಗತಿಕ ತಾಪಮಾನ ಇಂತಹ ಸಾವಿರಾರು ಹಿಮನದಿಗಳ ಸೃಷ್ಟಿಯನ್ನು ಕುಂಠಿತಗೊಳಿಸಿದೆ ಎಂಬ ಆತಂಕವೂ ಮನದಲ್ಲಿ ಮೂಡಿತು. ಸ್ವಚ್ಛತೆಯ ಮನ್ನಣೆ ಕೇವಲ ಪ್ರವಾಸೋದ್ಯಮ ಇಲಾಖೆಯವರೊಬ್ಬರ ಜವಾಬ್ದಾರಿ ಎಂಬ ಭಾವನೆ ಅನೇಕರಲ್ಲಿದೆ. ಸಾವಿರಾರು ಅಡಿಗಳಷ್ಟು ಎತ್ತರದ ಸ್ಥಳದಿಂದ ಹಿಮ ಕರಗಿ ಹರಿದು ಬರುವ ನೀರಿನ ತೊರೆಗಳಲ್ಲೂ ಕೂಡ, ಪ್ರವಾಸಿಗರು ಎತ್ತೆಸೆದ ಪ್ಲಾಸ್ಟಿಕ್ ಮಾಲಿನ್ಯವನ್ನು ಕಂಡಾಗ, ಧಾರ್ಮಿಕ ನಂಬಿಕೆಗಳೆಡೆಗೆ ಇರುವ ನಮ್ಮ ಶ್ರದ್ಧಾಭಕ್ತಿಗಳು, ನಾವೇ ಒಂದು ಭಾಗವಾಗಿರುವ ಈ ಪ್ರಕೃತಿಯ ಕಾಪಾಡಿಕೊಳ್ಳುವ ವಿಷಯದಲ್ಲಿ ಏಕೆ ಇಲ್ಲವಾಗಿದೆ ಎಂಬ ಬೇಸರ ಕಾಡುವುದು ಸುಳ್ಳಲ್ಲ. ಕೇವಲ ಪ್ರಕೃತಿಯ ಕಂಡು ಮನಸ್ಸು ಪ್ರಫುಲ್ಲಗೊಳಿಸಿಕೊಂಡು ಮನೆಗೆ ಮರಳದೇ ಒಬ್ಬ ಜವಾಬ್ಧಾರಿಯುತ ಪ್ರವಾಸಿಗನಾಗಿ, ಭೂಮಿಯ ಮೇಲಿನ ಜವಾಬ್ಧಾರಿಯುತ ಜೀವಿಯಾಗಿ, ಎಲ್ಲವೂ ಸರ್ವನಾಶವಾಗುವ ಮುಂಚೆ, ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಮರಗಿಡಗಳನ್ನು ಉಳಿಸಿಕೊಂಡು ಮಾಲಿನ್ಯವನ್ನು ಕಡಿಮೆ ಮಾಡಿ, ಇಂಗಾಲದ ಪ್ರಮಾಣ ಕಡಿಮೆಗೊಳಿಸಿ, ಭೂಮಂಡಲದ ಸಮತೋಲನ ಕಾಪಾಡಿಕೊಳ್ಳುವ ಕರ್ತವ್ಯ ನಮ್ಮ ಮೇಲಿದೆ. 

ಸೋಮವಾರ, ನವೆಂಬರ್ 11, 2019

ಈ ಸರ್ತಿಯ ರಜೆ ಹೀಗಿದ್ದರೆ ಹೇಗೆ ಮುದ್ದು ಮಕ್ಕಳೇ..?

ಮುದ್ದು ಮಕ್ಕಳೇ ಪರೀಕ್ಷೆಗಳು ಮುಗಿದು ರಜೆ ಪ್ರಾರಂಭವಾಗಿದೆ. ರಜೆ ಎಂದರೆ ಪಠ್ಯಪುಸ್ತಕ ಹೊಂವರ್ಕ್ ಗಳಿಂದ ಬಿಡುಗಡೆ, ಟಿ.ವಿ, ಮೊಬೈಲು, ಕೈಯಲ್ಲಿ ಕುರುಕಲು ತಿಂಡಿ ಮಾತ್ರ ಅಲ್ಲ ಪುಟಾಣಿಗಳೇ.. ಅದಕ್ಕಿಂತ ಮಿಗಿಲಾಗಿ ನಿಮ್ಮನ್ನು ರಂಜಿಸುವ ಅನೇಕ ವಿಷಯಗಳು ಹೊರಗಿನ ಪ್ರಪಂಚದಲ್ಲಿವೆ. ಈ ಸರ್ತಿ ಅವೆಲ್ಲವನ್ನು ಹುಡುಕಿ ಇಂಟರೆಸ್ಟಿಂಗ್ ಹಾಲಿಡೆ ಮಾಡಿಕೊಳ್ಳೋಣವೆ?
ಈ ರಜೆಯನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಲು, ಮತ್ತಷ್ಟು ರಂಗು ರಂಗಾಗಿಸಲು ನಿಮಗೆ ಇಲ್ಲಿವೆ ಕೆಲವು ಹಾಲಿಡೇ ಟಿಪ್ಸ್

  • ನಿಮಗೆ ದೊರಕಿರುವ ಈ ದಸರಾ ರಜೆಯ ಉದ್ದೇಶ, ಹಬ್ಬ ಹರಿದಿನಗಳ ಆಚರಣೆ, ಹಿನ್ನಲೆಗಳ ಬಗ್ಗೆ ಹಿರಿಯರಿಂದ ಕೇಳಿ ತಿಳಿದುಕೊಳ್ಳಿ. 'ನಿಮ್ಮದೇ ಹಾಬಿ ಪುಸ್ತಕವಿದ್ದರೆ ಅದರಲ್ಲಿ ತಿಳಿದುಕೊಂಡಿದ್ದನ್ನು ಬರೆದಿಟ್ಟುಕೊಂಡು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 
  • ದೊಡ್ಡವರ ಜೊತೆ ಚರ್ಚಿಸಿ, ಆಟದ ಮೂಲಕ ಒಂದು ದಿನ ನಿಮ್ಮ 'ಅಮ್ಮ' ನ ರೋಲ್ ನೀವು ತೆಗೆದುಕೊಳ್ಳಿ. ಅಮ್ಮ ತರಹ ಆಕ್ಟ್ ಮಾಡುವುದು, ಅಮ್ಮನ ತರಹ ಮನೆಯಲ್ಲಿನ  ಎಲ್ಲ ಕೆಲಸ ಮಾಡುವುದು, ಎಲ್ಲವೂ ಅಮ್ಮನಂತೆ.. ! ಬೇಕಾಗುವ ಕೆಲವು ಜವಾಬ್ಧಾರಿಯುತ ಕೆಲಸಕ್ಕೆ ಕೇಳಿ ಸಹಾಯ ಪಡೆದುಕೊಳ್ಳಿ ಆದರೆ ನಿಮ್ಮ ಪ್ರಯತ್ನ ಮೊದಲು ಇರಲಿ. 
  • ಪ್ರತಿದಿನ ನಿಮ್ಮಿಂದ ಸಾಧ್ಯವಾಗುವ ಯಾವುದಾದರೂ ಒಂದು ಮನೆಗೆಲಸವನ್ನು ಮುಂಚಿತವಾಗಿಯೇ ದೊಡ್ಡವರಿಗೆ ತಿಳಿಸಿ ಮಾಡಿ ಕೊಡಿ ಮತ್ತು ಮಾಡಿಯಾದ ನಂತರಆ ಕೆಲಸ ಇಷ್ಟವಾಗಿದ್ದರೆ, ಮನೆಯ ಪ್ರತಿಯೊಬ್ಬರಿಂದಲೂ ಒಂದೊಂದು ಸ್ಮೈಲಿ ಬರೆದು ಕೊಡಲು ಹೇಳಿ. ರಜೆ ಮುಗಿಸುವಷ್ಟರಲ್ಲಿ  ಮನೆಯವರ ಎಷ್ಟು 'ಸ್ಮೈಲ್' ನಿಮಗೆ ಸಿಗುತ್ತದೆ ನೋಡಿ.. ಅಷ್ಟು ಖುಷಿ ನೀವು ಬೇರೆಯವರಿಗೆ ಕೊಟ್ಟಿದ್ದೀರಿ !! 
  • ರಜೆಯೆಂದರೆ ರಾತ್ರಿ ತುಂಬಾ ಹೊತ್ತಿನವರೆಗೆ ಟಿ.ವಿ ನೋಡಿ, ಸುಮಾರು ಬಿಸಿಲು ತಲೆಯ ಮೇಲೇರುವವರೆಗೆ ಮಲಗುವುದಲ್ಲ. ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಲು ಬೆಳಗಿನ ಜಾವದಲ್ಲಿ ಸಿಗುತ್ತವೆ. 
  • ಹಬ್ಬದ ಸಮಯದಲ್ಲಿ ನ್ಯೂಸ್ ಪೇಪರ್ರಿನಲ್ಲಿ ಬರುವ ಪ್ರತಿ ವಿಷಯವನ್ನೂ ಗಮನಿಸಿ, ಚಿತ್ರ ಸಂಗ್ರಹ ಮಾಡಿ. ಉದಾಹರಣೆಗೆ, 'ಹಬ್ಬ ಆಚರಣೆ' ಎಂಬ ವಿಷಯದಡಿಯಲ್ಲಿ ಬರುವ ದೈನಂದಿನ ಪತ್ರಿಕೆಯಲ್ಲಿ ಹಬ್ಬದ ಚಿತ್ರಗಳು, ಪೂಜೆಜಿಸಲ್ಪಡುವ ದೇವರುಗಳು, ಜನರ ವೇಷಭೂಷಣಗಳು, ಹೊಸ ತಿಂಡಿಗಳು, ವಿಶೇಷ ಸ್ಥಳಗಳ ಚಿತ್ರಗಳು ಇತ್ಯಾದಿ ಹುಡುಕಿಟ್ಟುಕೊಂಡು ಪೇಪರ್ ಕಟಿಂಗ್ ಗೆ ಅವಕಾಶವಿದ್ದರೆ, ಅವುಗಳನ್ನೆಲ್ಲ ಕಟ್ ಮಾಡಿ ಒಂದು ಕೊಲಾಜ್ ರೆಡಿ  ಮಾಡಿ. 
  • ಊರಿಗೆ ನೆಂಟರ ಮನೆಗೆ ಹೋಗಿ ಬಂದರೆ, ಅವರೆಲ್ಲರ ಹೆಸರು ಡೈರಿಯಲ್ಲಿ ಬರೆದಿಟ್ಟುಕೊಂಡು ನಿಮ್ಮ ಫ್ಯಾಮಿಲಿ ಚಾರ್ಟ್ ಅಥವಾ ಅವರು ನಿಮ್ಮ ಸಂಬಂಧಿ ಹೇಗೆ ಎಂಬುದನ್ನು ಕಂಡುಕೊಳ್ಳಿ 
  • ಮುಂದೆ ಬರುತ್ತಿರುವ ದೀಪಾವಳಿ ಹಬ್ಬ, ನಿಮ್ಮ ಆರ್ಟ್ ನಿಂದಲೇ ಶೋಭಿಸಲಿ.. ಹಣತೆಗಳಿಗೆ ಪೈಂಟ್ ಮಾಡುವುದು , ರೊಟ್ಟು-ಬಣ್ಣದ ಹಾಳೆಗಳನ್ನು ಬಳಸಿ ಆಕಾಶ ಬುಟ್ಟಿ ಮಾಡುವುದು, ಕುಂದನ್ ರೀತಿಯ ಅಲಂಕಾರಿಕ ಕ್ರಾಫ್ಟ್ ವಸ್ತುಗಳನ್ನು ಅಂಟಿಸಿ ನಿಮ್ಮದೇ ಆದ ಬಣ್ಣಬಣ್ಣದ ರೆಡಿಮೇಡ್ ರಂಗೋಲಿ ಇತ್ಯಾದಿ ಹ್ಯಾಂಡ್ ಮೇಡ್ ವಸ್ತುಗಳನ್ನು ತಯಾರಿಸಿಟ್ಟುಕೊಳ್ಳಿ.  
  • ಮನೆಯ ಹಿತ್ತಲಿನಲ್ಲಿ ಸ್ವಲ್ಪ ಜಾಗವಿದ್ದರೆ ಅಥವಾ ಮಣ್ಣಿನ ಪಾಟಿನಲ್ಲಿ ಟೊಮ್ಯಾಟೋ, ಕೊತ್ತಂಬರಿ, ಮೆಂತೆ ಇತ್ಯಾದಿ ಬೀಜಗಳನ್ನು ಬಿತ್ತಿ, ಇಲ್ಲವೇ ಪುಟ್ಟ ತರಕಾರಿ ಗಿಡವೊಂದನ್ನು ನೆಟ್ಟು ಅದರ ಆರೈಕೆ ಮಾಡಿ ಬೆಳೆಸಿಕೊಳ್ಳಿ, ಪ್ರತಿ ಹೊಸ ಚಿಗುರು ಕೂಡ ಖುಷಿ ಗೊತ್ತೇ.. ಜೊತೆಗೆ ನೀವೇ ಬೆಳೆದ ಹಣ್ಣು ತರಕಾರಿಯ ರುಚಿಯೇ ಬೇರೆ.
  • ಈ ಸರ್ತಿಯ ರಜೆಯಲ್ಲಿಯಾವುದಾದರೂ ಒಂದು ಹೊಸ ಅಡುಗೆ/ಪಾನೀಯ ಮಾಡುವುದನ್ನು ಕಲಿಯಿರಿ. ಸ್ಟವ್ ಬಳಸಿ ಮಾಡುವಂತದ್ದಾದರೆ ಸುರಕ್ಷತೆಗೆ ಹಿರಿಯರ ಮಾರ್ಗದರ್ಶನವಿರಲಿ. 
  • ಊರ ಕಡೆಗೆ, ಹಳ್ಳಿಯ ಕಡೆಗೆ ಹೋಗುವ ಅವಕಾಶವಿದ್ದರೆ ಅಲ್ಲಿನ ಆಟಗಳನ್ನು ಕೇಳಿ ಹುಡುಕಿ ಆಟವಾಡಿ ಬನ್ನಿ. ಆಟಕ್ಕೆ ದೊಡ್ಡವರು ಚಿಕ್ಕವರೆಂಬ ಬೇಧಭಾವವಿಲ್ಲ, ಪೋಷಕರಿಗೆ ಸಮಯವಿದ್ದಾಗ ಅವರನ್ನೂ ನಿಮ್ಮ ಜೊತೆ ಎಳೆದುಕೊಂಡು ಆಟವಾಡಿ. 
  • ಆಸಕ್ತಿದಾಯಕ ವಸ್ತುವನ್ನು ಸಂಗ್ರಹ ಮಾಡುವುದು ಕೂಡ ಒಂದು ಹವ್ಯಾಸ. ನೀರಿನ ಸ್ಥಳಗಳಿಗೆ ಹೋದರೆ ಅಲ್ಲಿನ ಕಲ್ಲಿನ ರಚನೆ ಗಮನಿಸಿ ಪುಟ್ಟ ಪುಟ್ಟ ಇಷ್ಟವಾದ ವಸ್ತುಗಳನ್ನು ಸಂಗ್ರಹಿಸಿಕೊಳ್ಳಿ. ಕಾಡು ಮೇಡು ಅಲೆಯುವ ಅವಕಾಶ ಸಿಕ್ಕಿದರೆ ಬೀಜಗಳು, ಹಣ್ಣುಗಳು, ಬೇರೆ ಬೇರೆ ರೀತಿಯ ಎಲೆಗಳನ್ನು ಸಂಗಹಿಸಬಹುದು. ಅವುಗಳ ಆಕಾರ, ಬಣ್ಣಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಂದು ನಿಮ್ಮ ಹಾಬಿ ಪುಸ್ತಕದಲ್ಲಿ ಚಿತ್ರ ಬರೆಯಲು ಪ್ರಯತ್ನಿಸಿ
  • ಎಲ್ಲಾದರೂ ಪ್ರವಾಸಕ್ಕೆ ಹೋಗುವವರಿದ್ದರೆ, ಆ ಸ್ಥಳಕ್ಕೆ ಹೋಗಿ ಬಂದ ಅನುಭವ, ವಿಶೇಷವಾಗಿ ಕಂಡು ಇಷ್ಟವಾದ ವಸ್ತು ಅಥವಾ ವಿಷಯದ ಬಗ್ಗೆ ಚಿತ್ರಿಸಿ ಅಥವಾ ಬರೆಯಿರಿ 
  • ಕನಿಷ್ಠ ಎರಡಾದರೂ ಕಥೆ ಪುಸ್ತಕ ಕೊಂಡು ಓದಿ. 
  • ಪ್ರವಾಸಕ್ಕೆ ಹೋಗುತ್ತಿದ್ದಲ್ಲಿ, ಹಾದಿಯಲ್ಲಿ ಸಿಗುವ ಊರಿನ ಮಜಾ ಮಜಾ ಹೆಸರುಗಳನ್ನು ಬರೆದಿಡಿ. ಯಾವ ಊರಿಗೆ ಹೋಗಿದ್ದೀರೋ ಆ ಊರಿಗೆ ಕುಡಿಯುವ ನೀರು ಯಾವ ನದಿಯಿಂದ ಬರುತ್ತದೆ? ಆ ಊರಿನಲ್ಲಿ ಯಾವ ಯಾವ ಫ್ಯಾಕ್ಟರಿಗಳಿವೆ? ಅಲ್ಲಿ ಕಾಣುವ ಪ್ರಾಣಿ ಪಕ್ಷಿಗಳು ಯಾವ್ಯಾವುದು? ಮಣ್ಣು ಯಾವ ಬಣ್ಣದಲ್ಲಿದೆ? ಯಾವ್ಯಾವ ತರಕಾರಿ ಹಣ್ಣು ಧಾನ್ಯ ಬೆಳೆಯುತ್ತಾರೆ ಆ ಊರಿನ ರೈತರು ಇತ್ಯಾದಿ ವಿಷಯಗಳ ಪ್ರಶ್ನಾವಳಿ ಲಿಸ್ಟ್ ಬರೆದಿಟ್ಟುಕೊಂಡು ಹಿರಿಯರಲ್ಲಿ ವಿಚಾರಿಸಿ ನಿಮ್ಮದೇ ಆದ ಟ್ರಾವೆಲಾಗ್ ತಯಾರಿಸಿ.  
  • ವೆಸ್ಟ್ ನ್ಯೂಸ್ ಪೇಪರ್ರು ಮನೆಯಲ್ಲಿದ್ದರೆ, ಅಂಟು ಮತ್ತು ಸೆಣಬಿನ ದಾರ ಬಳಸಿ ಗಟ್ಟಿ ಪೇಪರ್ ಬ್ಯಾಗ್ ಮಾಡುವುದನ್ನು ತಯಾರಿಸಿ. ೧೦ ಪೇಪರ್ ಬ್ಯಾಗ್ ಮಾಡಿದರೆ ನೀವು ೧೦ ಪ್ಲಾಸ್ಟಿಕ್ ಚೀಲಗಳನ್ನು ಕಡಿಮೆ ಮಾಡಿದಂತೆ. 
  • ಒಂದಾದರೂ ಹೊಸ ಆಟವನ್ನು ಕಲಿಯಿರಿ.


ಗುರುವಾರ, ಅಕ್ಟೋಬರ್ 17, 2019

ನವರಾತ್ರಿ ಎಟ್ ಗುವಾಹಟಿ

ನವರಾತ್ರಿ ಸಮಯದಲ್ಲೇ ಈ ಸರ್ತಿ ಅಸ್ಸಾಂ ಗೆ ಪ್ರವಾಸ ಹೋಗಿದ್ದರಿಂದ, ಅಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ 'ದುರ್ಗಾ ಪೂಜಾ' ಹಬ್ಬವನ್ನು ಕಣ್ಣಾರೆ ಕಾಣುವ ಅದೃಷ್ಟ ನಮಗೆ ಸಿಕ್ಕಿತು. ನಮ್ಮಲ್ಲಿ ಗಣಪತಿ ಹಬ್ಬದ ಸಮಯದಲ್ಲಿ, ಸ್ಪರ್ಧಾತ್ಮಕ ಅಲಂಕಾರ, ವಿವಿಧ ಥೀಮ್ ಗಳೊಂದಿಗೆ ಸ್ಥಾಪಿತವಾಗುವ ಗಣಪನಂತೆ, ಅಲ್ಲಿ ದುರ್ಗೆ ರಾರಾಜಿಸುತ್ತಾಳೆ.. ಈ ಸಮಯದಲ್ಲಿ ಊರಿಗೆ ಊರೇ, ಸಣ್ಣ ದೊಡ್ಡ ದುರ್ಗಾ ಪೂಜಾ ಪೆಂಡಾಲ್ಗಳು, ಲೈಟಿನ ಸರಗಳಿಂದ ಕೋರೈಸುತ್ತದೆ..ನಾವು ಉಳಿದುಕೊಂಡಿದ್ದ ಹೋಟೆಲ್ ನಿಂದ, ಹತ್ತಿರದಲ್ಲಿದ್ದ ಒಂದು ದುರ್ಗಾ ಪೂಜಾ ಸ್ಥಳಕ್ಕೆ ಭೇಟಿ ನೀಡಿದ್ದೆವು. ಒಂದು ಅದ್ಭುತವಾದ ಮತ್ತು ವಿಶೇಷತೆಯನ್ನು ಹೊಂದಿದ್ದ ಉತ್ಸವ ಕಾರ್ಯಕ್ರಮವದು..ಮುಖ್ಯ ರಸ್ತೆಯಿಂದ ಹಿಡಿದು, ಒಳಗಿನ ಮಾರ್ಗ, ಪೆಂಡಾಲ್, ಸುತ್ತಮುತ್ತಲಿನ ಅಲಂಕಾರ, ಸರ್ವಂ 'ಸೆಣಬು' ಮಯಂ!! ಈ ಸರ್ತಿಯ ಅಸ್ಸಾಂ ಪೂಜಾ ಕಮಿಟಿ ಯವರಿಂದ, ಸಾಧ್ಯವಾದಷ್ಟು ಪ್ಲಾಸ್ಟಿಕ್ ಮತ್ತಿತರ ಮಾಲಿನ್ಯ ವಸ್ತುಗಳ ಬಳಸದೇ ದುರ್ಗಾ ಪೂಜಾ ಅರೇಂಜ್ಮೆಂಟ್ ಕಾಂಪಿಟಿಷನ್ ಗೆ ಕರೆ ಕೊಟ್ಟಿದ್ದರಿಂದ, ಈ ಸಂಸ್ಥೆಯವರು ಕೊಲ್ಕತ್ತಾ ಕಲಾವಿದರನ್ನು ಕರೆಸಿ ಕೇವಲ ಮರದ ಚೂರು, ಸೆಣಬು, ಭತ್ತದ ನಾರು, ಹಣ್ಣುಗಳ ಬೀಜ, ಮಣ್ಣು ಇತ್ಯಾದಿ ವಸ್ತುಗಳನ್ನು ಬಳಸಿ ಈ ಮಂಟಪವನ್ನು ತಯಾರು ಮಾಡಿದ್ದರಂತೆ.. ಪ್ರಸಾದ ವಿತರಣೆಗೆ ಕೇವಲ ನೈಸರ್ಗಿಕ ಎಲೆ ಮತ್ತು ಬಾಳೆಎಲೆಗಳ ಬಳಕೆ ಮಾಡಿದ್ದರು. ಇದು ಅಸ್ಸಾಂ ದುರ್ಗಾ ಪೂಜಾ ಅರೇಂಜ್ಮೆಂಟ್ ಸ್ಪರ್ಧೆಯಲ್ಲಿ, ಮೊದಲ 5 ಸ್ಥಾನಗಳಲ್ಲಿ ಒಂದನ್ನು ಬಾಚಿಕೊಂಡ ಖ್ಯಾತಿ ಪಡೆಯಿತಂತೆ.. ಭಾರತದ ಎರಡನೇ ಅತೀ ಹೆಚ್ಚು ಸೆಣಬು ಬೆಳೆಯುವ ನಾಡು ಅಸ್ಸಾಂ ಎಂಬುದರ ಪ್ರಾಮುಖ್ಯತೆ ಮತ್ತು ಗ್ರಾಮೀಣ ಬದುಕಿನ ಚಿತ್ರಣಗಳನ್ನು ಸಾರುವ ಮಾದರಿ ಪ್ರತಿಮೆಗಳ ಮೂಲಕ ಅತ್ಯಂತ ಸುಂದರವಾಗಿ ನಿರ್ಮಿಸಿದ್ದರು. ಮುಂದಕ್ಕೆ ಮುಖ್ಯ ಮಂಟಪದ ಒಳಗೆ ಹೋದರೆಂತೂ ಮಾತೇ ಹೊರದಷ್ಟು ಅದ್ಭುತವಾದ ಸೂಕ್ಷ್ಮ ಕಲಾಕೃತಿಗಳು.. ಉತ್ತಮ ಲೈಟಿಂಗ್ ವ್ಯವಸ್ಥೆ ಮಾಡಿ ಪ್ರತಿಯೊಂದು ಕಲಾತ್ಮಕತೆಯೂ ಕಾಣುವಂತೆ ಮಾಡಿದ್ದು ಸಂಪೂರ್ಣ ದುರ್ಗಾ ಪೂಜಾ ಸ್ಥಳಕ್ಕೆ ಇನ್ನೂ ಹೆಚ್ಚಿನ ಮೆರಗು ನೀಡಿತ್ತು.. ಕರಗದ ಜನಜಂಗುಳಿಯ ಮಧ್ಯೆ, ಅಸ್ಸಾಂ ಹಾಡುಗಳ ಮೆಲು ರಾಗಗಳನ್ನು ಕೇಳುತ್ತಾ, ಕಂಡ ದುರ್ಗಾ ಪೂಜಾ ಕಾರ್ಯಕ್ರಮದ ಒಂದಷ್ಟು ಚಿತ್ರಗಳು..

#guwahati #durgapooja #nonplastic #ecofriendlydecoration #top5

ಶನಿವಾರ, ಸೆಪ್ಟೆಂಬರ್ 28, 2019

ಪರಿಸರದಿನ_ಆಗಲಿಪ್ರತಿದಿನ

ಒಂದೆರಡು ಅನುಭವಗಳೊಂದಿಗೆ:

ಬಂಧು ಒಬ್ಬರ ಮನೆಗೆ ಹೋಗಿದ್ದೆವು. ಎಲ್ಲರೂ ಕೂತು ಮಾತನಾಡುತ್ತ ಇರುವಾಗ ಅದು ಇದು ಸುದ್ದಿ ಬಂದು, ಒಂದು ಸುಂದರವಾದ ಆಕರ್ಷಣೀಯ ಬಣ್ಣದ ಪ್ಲಾಸ್ಟಿಕ್ ಬೌಲ್ ಒಂದನ್ನು ತೋರಿಸಿ, "ಈ ಬೌಲ್ ಅಂಗಡಿಲಿ ನೋಡಿ ಎಷ್ಟು ಇಷ್ಟ ಆತು ಅಂದ್ರೆ, ಈ ಬೌಲ್ ಗಾಗಿಯೇ ೪ ದೊಡ್ಡ ಪ್ಯಾಕೆಟ್ ಮ್ಯಾಗಿ ತಗಂಡಿದ್ದು ನಾನು, ಅದರಲ್ಲಿ ಫ್ರೀ ಬತ್ತು .." ಎಂದು ಅವರು ಹೆಮ್ಮೆಯಿಂದ ಹೇಳುವಾಗ ಒಮ್ಮೆಲೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ. ಆದರೆ ಪರಿಸರಕ್ಕೆ ನಮ್ಮ ಕೊಡುಗೆ ಎನ್ನುವುದು - ಕೇವಲ ನಮ್ಮ ಸ್ವಂತ ಪ್ರಯತ್ನ ಒಂದೇ ಅಲ್ಲದೆ, ಅದರ ಕುರಿತಾಗಿ ಒಂದಷ್ಟು ಅರಿವು ನೀಡಬೇಕ್ಕಾದ್ದು ಕೂಡ ಅಷ್ಟೇ ಮುಖ್ಯ. ಸಂದರ್ಭ ನೋಡಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ನಮ್ಮಲ್ಲೇ ಇರುವಂತಹ ವಸ್ತುಗಳ ಮರುಬಳಕೆಯ ಕುರಿತು ವಿನಂತಿಸಿಯೇ ಬಂದೆ. ಈಗ ಸಂತೋಷದ ವಿಚಾರವೆಂದರೆ, ಅವರು ತರಕಾರಿ ಚೀಲಗಳನ್ನು ಬಟ್ಟೆಯಿಂದಲೇ ಹೊಲೆದು ಪ್ಲಾಸ್ಟಿಕ್ ಕಡಿಮೆ ಮಾಡಿದ್ದರ ಕುರಿತಾಗಿ ಹೇಳಿಕೊಂಡಿದ್ದಾರೆ.

ಉತ್ತರಾಖಂಡ್ ಟ್ರೆಕ್ ಹೋದ ಸಮಯದಲ್ಲಿ, ಚಾರಣದ ಹಾದಿಯ ಮಧ್ಯೆ ಚಾ ಅಂಗಡಿಯಲ್ಲಿ ಒಂದು ಸ್ಟಾಪು ಕೊಟ್ಟುಕೊಂಡೆವು. ಸಾಕಷ್ಟು ಸಿಖ್ಖ ಯಾತ್ರಿಗಳು ಅಲ್ಲಿ ಇದ್ದರು. ಅವರಲ್ಲೊಬ್ಬ 'ಚಿರಯುವಕ' ಅಂಗಡಿಯವನ ಬಳಿ ಬಿಸ್ಕತ್ತಿನ ಪಟ್ಟಣ ಕೊಂಡುಕೊಂಡು ಅಲ್ಲೇ ನಾಲಿಗೆ ಚಾಚಿ ಮುಖ ಮುಖ ನೋಡುತ್ತಿದ್ದ ನಾಯಿಗೆ ಅಷ್ಟೂ ಬಿಸ್ಕತ್ತನ್ನು ತಿನ್ನಿಸಿದ. ಪ್ರಾಣಿ-ಪ್ರೀತಿ, ಕರುಣೆ, ಮನುಷ್ಯತ್ವ ಎಲ್ಲವೂ ಸರಿಯಾಗಿತ್ತು.. ಅದರ ಮರುಕ್ಷಣವೇ ಕುಳಿತ ಕುರ್ಚಿಯಿಂದ ಎದ್ದು ಬಿಸ್ಕತ್ತಿನ ಪ್ಲಾಸ್ಟಿಕ್ ಕವರನ್ನು ಅಲ್ಲಿಯೇ ರಸ್ತೆಗೆ ಒಗೆದು ಹೊರಟೇಬಿಟ್ಟ. 'ಉಂಹೂಂ', ಸಹಿಸಲು ಸಾಧ್ಯವಾಗಲೇ ಇಲ್ಲ. "ಅರ್ರೆ, ವೊ ಪ್ಲಾಸ್ಟಿಕ್ ರ್ಯಾಪರ್ ಉಟಾಕೆ, ಆಪ್ಕೆ ಸಾಮಾನೆ ಜೊ ಡಸ್ಟ್ಬಿನ್ ದಿಖ್ ರಹಾ ಹೈನ ಉಸ್ ಮೆ ಡಾಲ್ ದೀಜ್ಯೇಗ ಪ್ಲೀಸ್.." ಎಂದು ನಯವಾಗಿಯೇ ವಿನಂತಿಸಿದೆ. ಆ ಮನುಷ್ಯ "ಅಪ್ಕೋ ಉಸ್ಸೆ ಕ್ಯಾ? ಕೊಯಿ ಧಿಕ್ಕತ್ ಹೈ..?" ಎಂದು ಗರ್ಜಿಸಿದ.. "ಹಾಂ ಹೈ; ಯೇ ಧರ್ತಿ ಮೇರಾ ಔರ್ ಆಪಕ ದೋನೋಕ ಹೈ, ಔರ್ ಇಸ್ಕ ಖಯಾಲ್ ರಖನ ಹಮ್ ದೋನೋ ಕ ಫರ್ಜ್ ಬಂತಾಹೈ, ತೊ ಪ್ಲೀಸ್..." ಎಂದು ಹೇಳುವಾಗ ನನ್ನ ಧ್ವನಿ ದುಪ್ಪಟ್ಟಾಗಿತ್ತು.. ಅಷ್ಟು ಜನರ ಎದುರು ಅವಮಾನವಾದಂತಾಗಿ, ಆತ ತಕ್ಷಣ ಅಲ್ಲಿಂದ ಬಿಸ್ಕತ್ತಿನ ಕವರನ್ನು ಎತ್ತದೇ ಸಿಟ್ಟಿನ ಮುಖ ಮಾಡಿಕೊಂಡು ಹೊರಡಲು ಅಣಿಯಾದ. ಅಲ್ಲಿಯೇ ಇದ್ದ ಪಂಜಾಬಿ ಹಿರಿಯರೊಬ್ಬರು, ದೊಡ್ಡ ಧ್ವನಿಯಲ್ಲಿ ಪಂಜಾಬಿ ಭಾಷೆಯಲ್ಲಿ ಏನೋ ಒಂದಷ್ಟು ಬೈದದ್ದು ಅಲ್ಪಸ್ವಲ್ಪ ಅರ್ಥವಾಯಿತು. "ಹೇಮಕುಂಡ್ ಯಾತ್ರೆ ಮುಗಿಸಿ ಬರುವವ, ಈ ರೀತಿ ಕೆಲಸ ಮಾಡಿದರೆ ಗುರು ಸಾಹೇಬ ಮೆಚ್ಚಿಯಾನೇ.. " ಎಂಬ ಅರ್ಥದಲ್ಲಿ ಹೇಳಿದರೆಂದು ತಿಳಿಯಿತು. ಒಲ್ಲದ ಮನಸ್ಸಿನಿಂದ ವಾಪಸು ಬಂದು ಕವರನ್ನು ಎತ್ತಿ ಡಸ್ಟ್ ಬಿನ್ ಗೆ ಹಾಕಿ ಆತ ಚಾರಣದ ಸುಸ್ತಿಲ್ಲದೆಯೆ ದುಸು ದುಸು ಎನ್ನುತ್ತಾ ಕಣ್ಮರೆಯಾದ.. 

ಅಮೆಜಾನ್ ನಿಂದ ಉಪಯುಕ್ತ ವಸ್ತುವೊಂದರ ತರಿಸಿದ್ದೆ. ಸೂಕ್ಷ್ಮ ವಸ್ತುವಲ್ಲದ ಕಾರಣದಿಂದ, ಅಮೆಜಾನ್ ಅವರು, ಕೇವಲ ಒಂದು ರೊತ್ತಿನ ತೆಳು ರ್ಯಾಪಿಂಗ್ ಅಲ್ಲಿ ಕಳುಹಿಸಿ ಕೊಟ್ಟಿದ್ದರು. ಜೊತೆಗೆ "ಪ್ಲಾಸ್ಟಿಕ್ ರೆಡ್ಯೂಸ್" ಮಾಡುವುದರೆಡೆಗೆ ಎಂಬ ಮೆಸ್ಸೇಜ್ ಇತ್ತು. ಸಹಜವಾಗಿಯೇ ಇದು ಖುಷಿಯೆನಿಸಿ ವಾಟ್ಸಪ್ಪ್ ಸ್ಟೇಟಸ್ಸಿನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದೆ. ಸ್ವಲ್ಪ ದಿನಗಳ ನಂತರ ಗೆಳತಿಯೊಬ್ಬಳು ಮೆಸ್ಸೇಜ್ ಮಾಡಿ, "ನನಗೆ ಬಂದ ಅಮೆಜಾನ್ ಕೊರಿಯರ್ ನಲ್ಲಿ ಪ್ಲಾಸ್ಟಿಕ್ ಸುತ್ತಿಯೇ ಕಳುಹಿಸಿದ್ದಾರೆ ನೋಡು" ಎಂದು ಹೇಳಿದ್ದಳು. ಸೂಕ್ಷ್ಮ ವಸ್ತುಗಳು ಮತ್ತು ಬಟ್ಟೆಯ ವಸ್ತುಗಳಾದ್ದರಿಂದ ಪ್ಲಾಸ್ಟಿಕ್ ಕವರ್ ಹಾಕಿ ಕಳುಹಿಸುವುದು ಅವರಿಗೆ ಅನಿವಾರ್ಯ ಇರಬಹುದು, ನಮ್ಮದು ಕೇವಲ ರೆಡ್ಯೂಸ್ ಮಾತ್ರ ಅಲ್ಲ, ರಿಸೈಕಲಿಂಗ್ ಕಾನ್ಸೆಪ್ಟ್ ಕೂಡ ಅಷ್ಟೇ ಮುಖ್ಯ, ಹೀಗೆ ಹೀಗೆ ಉತ್ತಮವಾಗಿ ನೀನು ಇವಿಷ್ಟನ್ನು ಮರು ಬಳಕೆ ಮಾಡಬಹುದು ಎಂದು ನನಗೆ ತಿಳಿದಿದ್ದ ಟಿಪ್ಸ್ ನೀಡಿದ್ದೆ. ಆದರೂ ಮತ್ತೆ ಯೋಚಿಸಿ ಇಂಟರ್ನೆಟ್ ಅಲ್ಲಿ ಹುಡುಕಿ ಒಂದಷ್ಟು ಮಾಹಿತಿ ಒಟ್ಟು ಮಾಡಿದೆ. ಮತ್ತೆ ಮುಂದಿನ ಸರ್ತಿ ಅದೇ  ಸೈಟಿನಿಂದ ಇನ್ನೇನನ್ನೋ ಆರ್ಡರ್ ಮಾಡುವಾಗ, ಕಸ್ಟಮರ್ ಸರ್ವಿಸ್ ಗೆ ಆರ್ಡರ್ ನಂಬರ್ ಜೊತೆ "ನನಗೆ ಅತ್ಯಂತ ಮಿನಿಮಲ್ ಪ್ಲಾಸ್ಟಿಕ್ ಫ್ರೀ ಪ್ಯಾಕಿಂಗ್ ಬೇಕು" ಎಂದು ಬರೆದಿದ್ದೆ. ಕೇವಲ ರೊಟ್ಟಿನ ಬಾಕ್ಸಿನಲ್ಲಿ ನನಗೆ ನನ್ನ ವಸ್ತು ಬಂದು ತಲುಪಿತು :)

ಅಕ್ಕಾ ತೇಜಸ್ವಿನಿ ಹೆಗಡೆ ತಮ್ಮ ಪೋಸ್ಟಿನಲ್ಲಿ ಹೇಳಿದಂತೆ, ನಮ್ಮ ಪರಿಸರದ ಮೇಲಾಗುತ್ತಿರುವ ಅನಾಹುತಗಳ ಬಗ್ಗೆ ಮಾತನಾಡುವವರ ಸ್ವಾರ್ಥ-ನಿಸ್ವಾರ್ಥದ ಬಗ್ಗೆ ಬೆಟ್ಟು ಮಾಡಿ ತೋರಿಸುವುದು ಅತ್ಯಂತ ಸುಲಭದ ಕೆಲಸ ಮತ್ತು ನಮ್ಮಗಳ ರೂಢಿ  ಕೂಡ. ಸಮುದ್ರದ ಜೀವಿಗಳು ಉಸಿರುಗಟ್ಟಿ ಸಾಯುತ್ತಿದ್ದರೆ, ಅಲ್ಲೆಲ್ಲೋ ಹಿಮನದಿಗಳು ಕರಗಿ ನೀರಾಗುತ್ತಿದ್ದರೆ, ಪ್ರವಾಹ ಬಂದು ಊರಿಗೆ ಊರೇ ಕೊಚ್ಚಿ ಹೋದರೆ, ಅವೆಲ್ಲ ನೈಸರ್ಗಿಕ ವಿಕೋಪಗಳು, ಅದಕ್ಕೆ ನಾವೇನು ಮಾಡಲು ಸಾಧ್ಯ? ಯಾವುದೋ ಊರಿನ ನೀರಿನ ಮೂಲಕ್ಕೆ ಸೇರಿಸುತ್ತಿರುವ ಯಾವುದೋ ದೊಡ್ಡ ಫ್ಯಾಕ್ಟರಿಯ ರಾಸಾಯನಿಕ ಮಲಿನ, ಅಮೆಜಾನಿನ ಕಾಡುಗಳು ಹೊತ್ತಿ ಉರಿದಾಗ,  "ಛೆ ಹೀಗಾಗಬಾರದಿತ್ತು" ಎಂದು ಟಿ.ವಿ ಮುಂದೆ ಕುಳಿತು ಮಾಡುವ ಮರುಗಿದರೂ ಸಹ, ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಮತ್ತೆ ನಮ್ಮ ನಮ್ಮ ಕೆಲಸಕ್ಕೆ ಮರಳಿ ಹೋಗುವ ಸಹಜತೆ ಮೈಗೂಡಿಸಿಕೊಂಡುಬಿಟ್ಟಿದ್ದೇವೆ. ಆದರೆ  “Understanding is the first step to acceptance, and only with acceptance can there be recovery.” ಎಂದು ಹ್ಯಾರಿ ಪಾಟರ್ ನಲ್ಲಿ ಬರುವ ಮಾತಿನಂತೆ ಮೊದಲಿಗೆ, ಪರಿಸರದಲ್ಲಿ ಆಗುತ್ತಿರುವ ಅಸಮತೋಲನ, ನಷ್ಟ, ತೊಂದರೆ ಪ್ರಕೃತಿ ವಿಕೋಪಗಳಿಗೆ ಒಂದಲ್ಲ ಒಂದು ರೀತಿಯಲ್ಲಿ "ನಾವು" ಪ್ರತಿಯೊಬ್ಬ ವ್ಯಕ್ತಿಯ ಪಾಲು ಇದೆ ಎಂಬುದನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬರಬೇಕು. ಪ್ರತಿಯೊಬ್ಬ ಸಾಮಾನ್ಯನಿಂದಲೂ ಮುಂದಿನ ಸರ್ವನಾಶವನ್ನು ತಡೆಯುವ ಶಕ್ತಿಯಿದೆ ಎಂಬುದನ್ನು ಮೊದಲು ನಂಬಬೇಕು. "ನಮ್ಮನ್ನು ನಾವು ಮೊದಲು ನಂಬಬೇಕು".  ಪರಿಸರದಿಂದ ಪಡೆಯುವಷ್ಟೇ, ನಾವು ಕೊಡುವುದೂ ಕೂಡ ಇದೆ. ಇಲ್ಲವಾದಲ್ಲಿ ಈ ಭೂಮಿಗೆ ಆಗುತ್ತಿರುವ ತೊಂದರೆ ಮತ್ತು ನಷ್ಟಕ್ಕೆ, ಬಲಿಪಶುಗಳಾಗುವುದು ನಾವೇ.. ಹಾಗಾದರೆ ನಮ್ಮಿಂದ ಏನು ಮಾಡಲು ಸಾಧ್ಯ? ನಾವೇನೋ ಮಾಡುತ್ತೇವೆ ಉಳಿದವರು ಅಷ್ಟೇ ಕಸ ಬಿಸಾಡುತ್ತಾರೆ, ಸ್ಥಳ ಮಲಿನ ಮಾಡುತ್ತಾರೆ, ಹಾಗಾಗಿ ನಾವೇ ಒಬ್ಬರೇ ಏಕೆ ಮಾಡಬೇಕು? ಇತ್ಯಾದಿ ಪ್ರಶ್ನೆಗಳು ನಮ್ಮಲ್ಲಿ  ಮೂಡುವುದು ಸಹಜ. ಆದರೆ ಫ್ರೆಂಡ್ಸ್, 'ಹನಿ ಹನಿ ಗೂಡಿದರೆ ಹಳ್ಳ". ನಮ್ಮ ಎಷ್ಟೊಂದು ಹಬ್ಬ-ಹರಿದಿನಗಳಲ್ಲಿ ಪ್ರಕೃತಿಯ ಪೂಜೆ ನಡೆಯುತ್ತದೆ. ದೇವರಂತೆ ಪೂಜಿಸುವ ಪ್ರಕೃತಿಯನ್ನು, ದೇವರಿಗೆ ಮಾಡುವಷ್ಟೇ ಶ್ರದ್ಧೆಯಿಂದ ಕಾಪಾಡಿಕೊಳ್ಳಬೇಕು.


ಎರಡು ವರ್ಷಗಳ ಹಿಂದೆ ನಾನು ಪರಿಸರ ದಿನಾಚರಣೆಯ ಸಂದರ್ಭದಲ್ಲಿ  ಸಾಕಷ್ಟು ನನ್ನ ತಿಳುವಳಿಕೆಯ ಮಟ್ಟಿಗೆ ದಿನನಿತ್ಯದ ಜೀವನದಲ್ಲಿ ನಾವು ಹೇಗೆ ಪ್ಲಾಸ್ಟಿಕ್ ಕಡಿಮೆ ಮಾಡಬಹುದು ಎಂಬುದರ ಕುರಿತು ಬರೆದಿದ್ದೆ. ಅದರಲ್ಲಿ ಬರೆದಿರುವ ಪ್ರತಿಯೊಂದು ವಿಷಯವನ್ನೂ ಇವತ್ತಿನವರೆಗೂ ನಮ್ಮ ಮನೆಯಲ್ಲಿ ಎಲ್ಲರೂ ಪಾಲಿಸುತ್ತಬಂದಿದ್ದೇವೆ. ಆ ಬರಹವನ್ನು ಇಲ್ಲಿ ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ.

http://sowmyabeena.blogspot.com/2018/11/blog-post_13.html

ಇವಿಷ್ಟು ಟಿಪ್ಸ್ ಗಳ ಹೊರತಾಗಿ ಮತ್ತೊಂದಷ್ಟು ನಾವು ಅನುಸರಿಸುತ್ತಿರುವ ಪ್ರಕಾರಗಳನ್ನು ಸೇರಿಸಲು ಇಷ್ಟಪಡುತ್ತೇನೆ. 


  • ಮಕ್ಕಳು ನಮ್ಮನ್ನು ಕೇಳಿ ಕಲಿಯುವುದಿಲ್ಲ ಆದರೆ ನಮ್ಮನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಅವರಿಗೆ ಏನು ಕಲಿಸಬೇಕು ಅದನ್ನು ನಮ್ಮಲ್ಲಿ ಮೊದಲು ರೂಡಿಸಿಕೊಳ್ಳಬೇಕಾದ್ದು ಅತ್ಯವಶ್ಯಕ.  ಮಗಳು ಹುಟ್ಟಿದ ಸಮಯದಿಂದ ಬಣ್ಣ ಬಣ್ಣದ ಪ್ಲಾಸ್ಟಿಕ್ ಆಟಿಕೆಗಳನ್ನು ತೆಗೆದುಕೊಂಡಿದ್ದೆವು. ಸಹಜ ಆಕಾರ್ಷಣೆ ಹೌದು ಅಥವಾ ಈಗಿನ ಮಟ್ಟಿಗೆ ಇರುವಷ್ಟು ಗಂಭೀರತೆ ಅವಾಗ ಇರಲಿಲ್ಲವೆಂದೇ ಒಪ್ಪಿಕೊಳ್ಳುತ್ತೇವೆ. ಮಗಳಿಗೆ ಈಗ ಆರು ವರ್ಷ. ತಕ್ಕ ಮಟ್ಟಿಗೆ ಸಮಾಧಾನದಿಂದ ಹೇಳಿದರೆ ಪಾಪ ಅರ್ಥಮಾಡಿಕೊಂಡು ಒಪ್ಪುವ ಕೂಸು. "ಪ್ಲಾಸ್ಟಿಕ್ ಆಟಿಗೆಗಳು ನಮಗೆ ಬೇಡ ಮಗು", ಮತ್ತು "ನಾವು ಯಾರಿಗೂ ಪ್ಲಾಸ್ಟಿಕ್ ಗಿಫ್ಟ್ ಗಳ ಉಡುಗೊರೆ ಕೊಡುವುದು ಬೇಡ" ಎಂಬ ವಿಷಯಕ್ಕೆ ಮಗಳ ಸಮ್ಮತಿಯಿದೆ. ಬಣ್ಣ ಬಣ್ಣದ ಆಟದ ಸಾಮಾನುಗಳು ಕಣ್ಣು ಕುಕ್ಕಿದರೂ, ಅದು ಬೇಡ ಅಮ್ಮ ಎಂದು ಚೆನ್ನಪಟ್ಟಣ ಆಟಿಕೆಗಳು, ಬೆತ್ತ-ಬಿದಿರಿನ ಆಟಿಕೆಗಳು, ಡ್ರಾಯಿಂಗ್ ಐಟಮ್ಸ್, ಕಥೆ ಪುಸ್ತಕಗಳನ್ನು ತೆಗೆದುಕೊಂಡು ಖುಷಿಪಡುತ್ತಾಳೆ. ಕೆಳಗಿನ ಚಿತ್ರದಲ್ಲಿ ತೋರಿಸುವಂತೆ ಗಿಫ್ಟ್ ಐಟಂ ಗಳ ಪ್ಯಾಕಿಂಗ್ ಕೂಡ ನಮ್ಮದು ಪ್ಲಾಸ್ಟಿಕ್ ರಹಿತ ಬಟ್ಟೆ ಚೀಲ ಅಥವಾ ಪೇಪರ್ ಪ್ಯಾಕಿಂಗ್. ಈ ವಿಷಯದಲ್ಲಿ ಹೆಮ್ಮೆ ಇದೆ. 


  • ಇನ್ನು ಆನ್ಲೈನ್ ವಸ್ತುಗಳನ್ನು ಖರೀದಿ ಮಾಡುವಾಗ, ಕೆಲವೊಮ್ಮೆ ಹೀಗಾಗುತ್ತದೆ. ಕೆಲವು ವಸ್ತುಗಳನ್ನು ತಕ್ಷಣಕ್ಕೆ ಕಳಿಸುತ್ತೇವೆ, ಕೆಲವು ೩-೪ ದಿನಗಳು ತಡವಾಗುತ್ತದೆ - ಎಂಬ ಮೆಸ್ಸೇಜ್ ಇದ್ದರೆ, ನಮಗೆ ಆ ಎಲ್ಲ ವಸ್ತುಗಳು ತತ್ತಕ್ಷಣಕ್ಕೆ ಬೇಕಾಗಿಲ್ಲ ಎಂಬಂತಿದ್ದರೆ, ಎಲ್ಲವನ್ನೂ ಒಟ್ಟಿಗೆ ಒಂದೇ ಪ್ಯಾಕೇಜ್ ನಲ್ಲಿ ಕಳುಹಿಸಿ ಎಂದು ಬರೆಯುತ್ತೇನೆ. ಆಗ ಕೊರಿಯರ್ ಡೆಲಿವರಿಯ ಪ್ರತಿಸಲದ ಗಾಡಿ ಓಡಾಟ, ಸೆಪೆರೇಟ್ ಪ್ಯಾಕಿಂಗ್ ಮತ್ತು ಪ್ಲಾಸ್ಟಿಕ್ ಗಳ ಹಾವಳಿ ಕಡಿಮೆಯಾಗುತ್ತದೆ. ನಾವು ತೆಗೆದುಕೊಳ್ಳುವ ವಸ್ತುವಿಗೆ ಪ್ಲಾಸ್ಟಿಕ್ ರ್ಯಾಪರ್ ಅವಶ್ಯಕತೆಯಿಲ್ಲವಾದಲ್ಲಿ, ಕಸ್ಟಮರ್ ಕೇರ್ ಗೆ ಆರ್ಡರ್ ನಂಬರ್ ಜೊತೆಗೆ ವಿನಂತಿಸಿ ಬರೆದರೆ ಇನ್ನಷ್ಟು ಅನುಕೂಲ. 

  • ಮನೆಗಳಲ್ಲಿ ಮಕ್ಕಳ ವಸ್ತುಗಳನ್ನು ಜೋಡಿಸಿದಳು ಎಷ್ಟು ಖಾನೆಗಳಿದ್ದರೂ ಸಾಲ. ದೊಡ್ಡ ಮನೆ ಹೆಚ್ಚಿನ ಕಪಾಟು ಇದ್ದವರಿಗೆ ಹೇಗೋ ನಡೆಯುತ್ತದೆ. ಆದರೆ ಇದ್ದುಷ್ಟು ಜಾಗದಲ್ಲೇ ಸರಿಯಾಗಿ ಹೊಂದಿಸಿಡಬೇಕು ಎಂಬ ಆಲೋಚನೆ ಇದ್ದರೆ, ಅದಕ್ಕಾಗಿ ಪ್ಲಾಸ್ಟಿಕ್ ಬುಟ್ಟಿ ಅಥವಾ ಟ್ರೇ ಗಳ  ಬಳಕೆ ಸರ್ವೇ ಸಾಮಾನ್ಯ. ಅದಕ್ಕಾಗಿಯೇ ಈ ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಕಸದಿಂದ ರಸ ಬುಟ್ಟಿಗಳು ನಮ್ಮ ಮನೆಯಲ್ಲಿ ತಯಾರಾಗುತ್ತದೆ. ಸಣ್ಣ ಸಣ್ಣ ರೊಟ್ಟಿನ ಬಾಕ್ಸ್ಗಳನ್ನು ಸಂಗ್ರಹಿಸಿಟ್ಟುಕೊಂಡು, ಅದಕ್ಕೆ ಯಾವುದಾದರೂ ಬೇಡವಾದ ಚಂದದ ಬಟ್ಟೆಯನ್ನು ಕಟ್ ಮಾಡಿ ಫೆವಿಕಾಲ್ ಗಮ್ ಹಾಕಿ ಅಂಟಿಸಿ ಚಂದಗಾಣಿಸಿದರೆ, ಮಕ್ಕಳಿಗೂ ತಮ್ಮ ಕಪಾಟಿನಲ್ಲಿ ವಸ್ತುಗಳನ್ನು ಜೋಡಿಸಿಕೊಳ್ಳಲು ಆಸಕ್ತಿ ಮೂಡುತ್ತದೆ. ಮಗಳ ಸಾಕ್ಸ್ ಬುಟ್ಟಿ, ಚಡ್ಡಿ ಬುಟ್ಟಿ, ಸ್ಟೇಷನರಿ ಐಟಮ್ಸ್ ಬಾಕ್ಸ್, ಅವಳು 'explorer' ಆದಾಗ ಹುಡುಕಿ ತರುವಂತಹ 'collectibles' ಮತ್ತವಳ 'treasures' ಗಳಿಗೆಲ್ಲ ನಮ್ಮದು ಇಂತವೇ ಅಂದಚಂದಗಳು :) 

  • ಮನೆ ಎಂದ ಮೇಲೆ ಅಡುಗೆ ಸಾಮಾನು ಇನ್ನಿತರ ದಿನನಿತ್ಯದ ವಸ್ತುಗಳನ್ನು ತರಲು ಹಿಂದೆ ಮುಂದೆ ಅಂಗಡಿಗೆ ಹೋಗುವುದು ಇದ್ದಿದ್ದೇ. ಹತ್ತಿರ ಅಂಗಡಿಗಳಿಗೆ ಹೋಗಲು ತೀರಾ ಅವರಸವಿಲ್ಲದ ಸಮಯವೆಂದಾದಲ್ಲಿ, ಮಗಳ ಸೈಕಲ್ ರೈಡ್ ನೆಪದಲ್ಲಿ ನಡೆದೇ ಹೋಗುತ್ತೇವೆ. ನನಗಿಂತ ಹಿರಿಯಳಾದ ನನ್ನ ಅಕ್ಕ ಎಲ್ಲಾ ವಿಷಯದಲ್ಲೂ 'ಅಕ್ಕ' ನೇ ಹೌದು ನನಗೆ. ಅವಳಿಂದ ಕಲಿಯಲು ಸಾಕಷ್ಟಿರುತ್ತದೆ. ಹಗಲಿನ ಕ್ಲಾಸ್ ಮುಗಿಸಿ ಕಾರ್ ಡ್ರೈವ್ ಮಾಡಿಕೊಂಡು ಮನೆಗೆ ಬಂದು, ಮನೆಯಲ್ಲೆಲ್ಲ ನಿಭಾಯಿಸಿ ಮತ್ತೆ ಸಂಜೆ ಕಾಲೇಜಿಗೆ ಹೋಗಿ ಸೈಗ್ನ್ ಮಾಡಿ ಬರುವ ಸಂದರ್ಭವಿದ್ದರೆ, ಸಂಜೆಯ ಕಾಲೇಜಿಗೆ ಹೋಗುವ ೫ ಕಿ.ಮೀ ದೂರದ ಹಾದಿಯನ್ನು ನಡೆದೇ ಹೋಗುತ್ತಾಳೆ ಅಕ್ಕಾ!! ವಾಕಿಂಗ್ ಜೊತೆಜೊತೆಯಲ್ಲಿ ಹೈದರಾಬಾದಿನ ಟ್ರಾಫಿಕ್ಕಿಗೆ ನಿಂತು ನಿಂತು ಗಾಡಿಯ ಹೊಗೆ ಬಿಡುವುದು ಇಷ್ಟವಿಲ್ಲ ಅವಳಿಗೆ. ಇದನ್ನು ಕಂಡು ಬಂದ ದಿನದಿಂದ ನಾನು ನನ್ನ ಸಣ್ಣ ಪುಟ್ಟ ವಸ್ತುಗಳ ಖರೀದಿಗೆ ಅಥವಾ ಸಮಯದ ಅನುಕೂಲವಿದೆ ಎಂದಾದಲ್ಲಿ ನನ್ನ ಗಾಡಿಯನ್ನು ಬಳಸದೇ,  ನಡೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡಿದ್ದೇನೆ. ಸಾಮಾನಿನ ಪಟ್ಟಿ ಬರೆದುಕೊಳ್ಳುತ್ತೇವೆ ನಾವು ೩ ಜನ ನಮ್ಮ ಒಂದು ಕಾಮನ್ ಪುಸ್ತಕದಲ್ಲಿ ಮತ್ತು ಆಗ್ಗಾಗ್ಗೆ ಹೋಗಿ ಒಮ್ಮೆಲೇ ಸಾಮಗ್ರಿಗಳನ್ನು ತಂದುಬಿಡುತ್ತೇವೆ. ಇನ್ನು ಚೀಲ ತೆಗೆದುಕೊಂಡು ಹೋಗುವುದು ಬೇಸಿಕ್ ಎನ್ನುವಷ್ಟರ ಮಟ್ಟಿಗೆ ಅಭ್ಯಾಸ ಮೈಗೂಡಿದೆ. ಒಂದೆರಡು ನಿಗದಿತ ಪ್ಲಾಸ್ಟಿಕ್ ಕೊಟ್ಟೆಯನ್ನು ಇಟ್ಟುಕೊಂಡಿದ್ದೇನೆ. ಅದರಲ್ಲಿ ಹಾಲು ಮೊಸರು ಬೆಣ್ಣೆ ಇತ್ಯಾದಿ ನೀರಿನ ಅಂಶ ತಾಗುವಂತಹ ವಸ್ತುಗಳನ್ನು, ಬೇರೆ ಬೇರೆಯಾಗಿ ಹಾಕಿಕೊಂಡು ಬರುತ್ತೇವೆ ಮತ್ತು ಹಾಗೆಯೆ ಅದನ್ನು ಸ್ವಚ್ಛಗೊಳಿಸಿಕೊಂಡು ಒಣಗಿಸಿ ಮುಂದಿನ ಸರ್ತಿಯ ಬಳಕೆಗೆ ಎತ್ತಿಟ್ಟುಕೊಳ್ಳುತ್ತೇವೆ.  

  • ಮಗಳು ಚಿಕ್ಕವಳಾದ್ದರಿಂದ ಗೀಚಿ ಏನಾದರೂ ಚಿತ್ರ ಬರೆಯುವುದು ಅತ್ಯಂತ ಸಹಜ. ಪೇಪರ್ ಕೊಟ್ಟು ಪೂರೈಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಚಿತ್ರ ಬರೆಯುತ್ತಲೇ ಇರುತ್ತಾಳೆ. ಅವಳ ಆ ತೃಪ್ತಿಗಾಗಿಯೇ ಅಮೆಜಾನ್ ನಲ್ಲಿ ದೊರೆತ ಬ್ಯಾಟರಿ ಚಾಲಿತ ಪ್ಯಾಡ್ ತಂದು ಕೊಟ್ಟೆವು. ಅವಳ ಪರೀಕ್ಷೆಯ ಸಮಯದಲ್ಲಿ, ಪುನರಾವರ್ತನೆ ಮಾಡಿಸಲು ಜೊತೆಗೆ ಅವಳ ಚಿತ್ರ ಬರೆಯುವ ಚಾಳಿಗೆ ಅತ್ಯಂತ ಉಪಯುಕ್ತವಾಗಿದೆ, ಬಿಳಿ ಹಾಳೆಗಳ ಬಳಕೆ ಕಡಿಮೆಯಿದೆ. 

  • ರನ್ನಿಂಗ್ ಗೆ ಹೋಗುವ ಪಾರ್ಕಿನಲ್ಲಿ ಶನಿವಾರ ಒಂದು ಗಂಟೆ, ಒಂದಷ್ಟು ಕಸ ಹೆಕ್ಕುವ ಕೆಲಸಕ್ಕೆ ನಾನೂ ಭಾಗಿಯಾಗುತ್ತೇನೆ. ಚಾರಣಕ್ಕೆ/ಪ್ರವಾಸಕ್ಕೆ ಹೋದಾಗ ಕಂಡ ಪ್ಲಾಸ್ಟಿಕ್ ಮಾಲಿನ್ಯ ನಮ್ಮಿಂದ ಆಗದಂತೆ ಎಲ್ಲ ಎಚ್ಚರಿಕೆ ವಹಿಸಿಕೊಳ್ಳುವುದರ ಜೊತೆಗೆ, ಅಲ್ಲಲ್ಲಿ ಕಂಡ ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ಆ ಸ್ಥಳಕ್ಕೆ ನಮ್ಮ ಕೊಡುಗೆ ನೀಡಿ ಬರುವುದನ್ನು ಕಲಿತುಕೊಂಡಿದ್ದೇನೆ.  

  • ಅನುಕೂಲಕರವಾದ ಸ್ಥಳಗಳಿಗೆ ಹೋಗಿ ನಾನು ಮತ್ತು ಅಕ್ಷಯ್ ಒಂದಷ್ಟು ಗಿಡಗಳನ್ನು ನೆಟ್ಟು, ಆ ಸಸಿಗಳನ್ನು ಕಾಪಾಡಿಕೊಳ್ಳುತ್ತಿದ್ದೇವೆ. ಮನೆಯ ಪಾಟಿನಲ್ಲಿಯೇ ಇದ್ದಷ್ಟು ಜಾಗದಲ್ಲಿಯೇ ಸಣ್ಣ ಪುಟ್ಟ ನಮಗೆ ಸಾಧ್ಯವಾದ ತರಕಾರಿಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ. 

ಸಧ್ಯಕ್ಕೆ ನನಗೆ ನೆನಪಾದಷ್ಟನ್ನು ನಾನಿಲ್ಲಿ ದಾಖಲಿಸಿದ್ದೇನೆ. ನನ್ನಂತೆಯೇ ಅನೇಕರು ತಮ್ಮ ತಮ್ಮ ಮಟ್ಟಿಗೆ ಅನುಸರಿಸಲು ಸಾಧ್ಯವಾಗುತ್ತಿರುವ ಮತ್ತು ನಾವು ಇನ್ನಷ್ಟು ಕಲಿಯಬಹುದಾದ ಪ್ಲಾಸ್ಟಿಕ್ ಕಡಿತ ಮತ್ತು ಮರುಬಳಕೆಯ ಕುರಿತಾಗಿ ಹಂಚಿಕೊಂಡರೆ, ಪ್ರತಿಯೊಂದು ಮನೆಯಿಂದ ಇಷ್ಟರ ಮಟ್ಟಿಗೆ ಮಾಲಿನ್ಯ ಕಡಿಮೆಯಾದರೂ ಅದು ದೊಡ್ಡ ಸಾಧನೆಯೇ.. ಸಾಧ್ಯವಾದಷ್ಟು ಪ್ರಯತ್ನಿಸೋಣ.. 





ಗುರುವಾರ, ಸೆಪ್ಟೆಂಬರ್ 26, 2019

'ವ್ಯಾಲಿ ಆಫ್ ಫ್ಲವರ್ಸ್'

ಅಲ್ಲಿ ನಿಂತು ನೋಡಿದರೆ, ೩೬೦ ಡಿಗ್ರಿ ಸುತ್ತಲೂ ಆವರಿಸಿದ ಮಂಜಿನ ಬೆಟ್ಟಗಳ ಸಾಲು,ಅದರಾಚೆಗೆ ಹಿಮ ಹೊತ್ತ ರುದ್ರ ರಮಣೀಯ ಪರ್ವತ, ಹಿಮ ಕರಗಿ ನೀರಾಗಿ, ಕಾಲ್ಬದಿಗೆ ಹರಿವ ಸಣ್ಣ ತೊರೆ, ಅಲ್ಲೇ ಪಕ್ಕದ ಹಚ್ಚ ಹಸಿರ ಬೆಟ್ಟದಿಂದ ದುಮ್ಮಿಕ್ಕುವ ಬೆಳ್ನೊರೆಯ ಜಲಪಾತ, ನೀಲಾಕಾಶ, ಬಿಳಿ ಮೋಡಗಳ ಚಿತ್ತಾರ..ಸೂರ್ಯ ನೆತ್ತಿ ಮೇಲಿದ್ದರೂ ಮೈಸೋಕುವ ತಂಗಾಳಿಇದೆಲ್ಲದರ ಮಧ್ಯೆ ಭೂಮಿಯ ಮೇಲೆ ಪುಷ್ಪ ವೃಷ್ಟಿಯಾಗಿದೆಯೇನೋ ಎಂದು ಭಾಸವಾಗುವಂತೆ  ಆ ಹುಲ್ಲುಗಾವಲಿನ ಕಣಿವೆಯ ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬಣ್ಣ ಬಣ್ಣದ ಹೂಗಳ ಹಾಸು..!! ಇಂತದ್ದೊಂದು ಸಮ್ಮೋಹನಗೊಳಿಸುವಂತಹ ನೈಸರ್ಗಿಕ ಸೌಂದರ್ಯ ಕಾಣಸಿಗುವುದು, ಉತ್ತರಾಂಚಲದ ಪ್ರಸಿದ್ಧ ಚಾರಣ ಸ್ಥಳ 'ವ್ಯಾಲಿ ಆಫ್ ಫ್ಲವರ್ಸ್' ನಲ್ಲಿ.  






ವ್ಯಾಲಿ ಆಫ್ ಫ್ಲವರ್ಸ್ ನಲ್ಲೇನಿದೆ ? 

ವ್ಯಾಲಿ ಆಫ್ ಫ್ಲವರ್ಸ್ ಪ್ರಾರಂಭಿಕ ಹಂತದ ಪರ್ವತಾರೋಹಣರಿಗೆ ಹೇಳಿ ಮಾಡಿಸಿದಂತಹ ಚಾರಣ. ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೊಬರ್ ಕೊನೆಯವರೆಗೂ ಮಾತ್ರ ಟ್ರೆಕಿಂಗ್ ಮಾಡಬಹುದಾದ ಈ ಸ್ಥಳಗಳು, ನಂತರದ ೬ ತಿಂಗಳು ಸಂಪೂರ್ಣ ಹಿಮಾವೃತ್ತವಾಗುತ್ತದೆ. ಸಮುದ್ರ ಮಟ್ಟಕ್ಕಿಂತ ೧೨೦೦೦ ಅಡಿಗಳಷ್ಟು ಎತ್ತರದಲ್ಲಿರುವ ವ್ಯಾಲಿ ಆಫ್ ಫ್ಲವರ್ ಕಣಿವೆಯು ದಟ್ಟ ಹೂವಿನ ವನದಂತೆ ವ್ಯಾಪಿಸಿರುವ ವಿಸ್ತೀರ್ಣ ೮೭.೫ ಚದರ ಕಿ.ಮೀ ಗಳಷ್ಟು! ಚಾರಣದ ಪ್ರಮಾಣ ಅತ್ಯಂತ ಕಠಿಣವಲ್ಲದಿದ್ದರೂ, ಚಾರಣದ ಹಾದಿ, ಎತ್ತರೆತ್ತರ ಕಡಿದಾದ ಕಲ್ಲು ಬಂಡೆಗಳಿಂದ ಕೂಡಿದ್ದಾದ್ದರಿಂದ ತಕ್ಕ ಮಟ್ಟಿನ ಪರ್ವತಾರೋಹಣದ ಪೂರ್ವ ತಯಾರಿ ಅವಶ್ಯಕ.  








ಈ ಹೂವಿನ ಕಣಿವೆಯಲ್ಲಿ ೫೨೦ ಕ್ಕೂ ಹೆಚ್ಚು ಪ್ರಭೇದಗಳ ಆಲ್ಫ್ಐನ್ ಹೂಗಳಿವೆ ಎಂದು ಅಂದಾಜಿಸಲಾಗಿದೆ. ದಿನದಿಂದ ದಿನಕ್ಕೆ ಮಾರ್ಪಾಟಾಗುವ ಈ ಬೆಟ್ಟಗಳು ಈಗ ಕಂಡಂತೆ ಇನ್ನೊಂದು ತಿಂಗಳಿಗೆ ಕಾಣಿಸುವುದಿಲ್ಲ. ಒಮ್ಮೆ ನೀಲಿ-ನೇರಳೆ ಹೂಗಳಿಂದ ಕಂಗೊಳಿಸುವ ಬೆಟ್ಟ, ಮತ್ತೊಂದಷ್ಟು ಮಳೆಯ ನಂತರ ಅರಳಿ ನಿಲ್ಲುವ ಹಳದಿ-ಗುಲಾಬಿ ಹೂವಿನಿಂದ ಮೈದಳೆದು ನಿಂತಿರುತ್ತದೆ. ಈ ಪುಷ್ಪಗಳ ಕಣಿವೆಯಿಂದ ಹರಿದು ಬರುವ ಹಿಮನದಿಗೆ 'ಪುಷ್ಪವತಿ' ಎಂದೇ ಹೆಸರಿಡಲಾಗಿದೆ . ಬ್ರಹ್ಮ ಕಮಲ, ಬ್ಲೂ ಪಾಪ್ಪಿಲ್, ವಿವಿಧ ಬಗೆಯ ಆರ್ಕಿಡ್ಗಳು, ನಾಗುಮಲ್ಲಿಗೆ ಇತ್ಯಾದಿ ಇಲ್ಲಿನ ಮುಖ್ಯವಾದ ಹೂಗಳು. ವೈದ್ಯಕೀಯ ಮಹತ್ವವಿರುವ ೪೫ ಕ್ಕೂ ಹೆಚ್ಚು ಗಿಡ ಮೂಲಿಕೆಗಳು ಕೂಡ ಇಲ್ಲಿ ಗುರುತಿಸಿಕೊಂಡಿದೆ. ಕೇವಲ ಹಿಮ, ಹೂವುಗಳಷ್ಟೇ ಅಲ್ಲದೆ, ಇಲ್ಲಿ ಹಿಮಕರಡಿ, ಹಿಮ ಚಿರತೆ, ಕಸ್ತೂರಿ ಮೃಗ, ನೀಲಿ ಕುರಿಗಳು, ಬಂಗಾರದ ಕೋಗಿಲೆ, ಹಿಮ ಪಾರಿವಾಳ ಇನ್ನಿತರ ಬಣ್ಣಬಣ್ಣದ ಪಕ್ಷಿಗಳು ಮತ್ತು ಸಾವಿರಾರು ಬಗೆಯ ಬಣ್ಣಬಣ್ಣದ ಚಿಟ್ಟೆಗಳ ಜೀವಸಂಕುಲವಿದೆ. 




ವ್ಯಾಲಿ ಆಫ್ ಫ್ಲವರ್ಸ್  ಇತಿಹಾಸ 

 ಈ ಕಣಿವೆಯ ಹುಟ್ಟು ಕೂಡ ಒಂದು ಆಕಸ್ಮಿಕ ಸಂಶೋಧನೆ.  ೧೯೩೧ ರಲ್ಲಿ ಮೂವರು ಬ್ರಿಟಿಷ್ ಪರ್ವತಾರೋಹಿಗಳು, ಮೌಂಟ್ ಕಾಮೆಟ್ ಪರ್ವತಾರೋಹಣ ಮುಗಿಸಿ ಹಿಂದಿರುಗುವಾಗ ತಮ್ಮ ಹಾದಿಯನ್ನು ತಪ್ಪಿ ಒಂದು ಹುಲ್ಲುಗಾವಲಿನ ಬೆಟ್ಟವನ್ನು ಪ್ರವೇಶಿಸಿದರಂತೆ. ಆ ವರೆಗೂ ಯಾರು ಓಡಾಡದೇ ಇದ್ದ ಆ ಸ್ಥಳ ಸಂಪೂರ್ಣ ಹೂಗಳ ರಾಶಿಯಿಂದ ಆವೃತ್ತಗೊಂಡಿದ್ದನ್ನು ನೋಡಿ ದಿಗ್ಭ್ರಾಂತರಾಗಿ ಅದನ್ನು ವ್ಯಾಲಿ ಆಫ್ ಫ್ಲವರ್ಸ್ ಎಂದು ಉದ್ಗರಿಸಿ ನಾಮಕರಣ ಮಾಡಿದರೆಂಬುದು ಈ ಸ್ಥಳದ ಇತಿಹಾಸ. ಆ ಪರ್ವತಾರೋಹಿಗಳ ಪೈಕಿ, ಫ್ರಾಂಕ್ ಸ್ಮಿಥ್ ತನ್ನ ಪರ್ವತಾರೋಹಣ ಬಗ್ಗೆ ಬರೆದು ಪ್ರಕಟಗೊಳಿಸಿದ ಪುಸ್ತಕ ಕೂಡ ಇದೇ ಹೆಸರಿನಲ್ಲಿದೆ.  ನಂತರದ ವರ್ಷಗಳಲ್ಲಿ ಜಾನ್ ಮಾರ್ಗರೇಟ್ ಲೆಗ್ಗ್ ಎಂಬ ಸಸ್ಯ ಶಾಸ್ತ್ರಜ್ಞೆ ಇಲ್ಲಿಗೆ ಬಂದು, ಇಲ್ಲಿನ ಸಸ್ಯರಾಶಿಯ ಮಹತ್ವದ ಕುರಿತಾಗಿ ಸಾಕಷ್ಟು ಸಂಶೋಧನೆ ನಡೆಸಿದರು ಎನ್ನಲಾಗಿದೆ. ಆದರೆ ಅಧ್ಯಯನದ ಸಮಯದಲ್ಲಿ, ಈ ಕಣಿವೆಯಲ್ಲಿ ಕಾಲು ಜಾರಿ ತಮ್ಮ ಜೀವತೆತ್ತರಾದ್ದರಿಂದ ಅವರ ನೆನಪನಲ್ಲಿ ಕಟ್ಟಿದ ಸಮಾಧಿ ಇಂದಿಗೂ ವ್ಯಾಲಿ ಆಫ್ ಫ್ಲವರ್ಸ್ ನಲ್ಲಿ ಕಾಣಬಹುದು. ಇಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಪ್ರಾಮುಖ್ಯತೆಯ ಕುರಿತಾದ ಹೆಚ್ಚಿನ ಅಧ್ಯಯನ ಮತ್ತು ಉಳಿವಿಗೋಸ್ಕರ, ಸ್ಥಳೀಯರ ಓಡಾಟ, ಜಾನುವಾರುಗಳ ಮೇವಿಗಾಗಿ ಬಳಸಿಕೊಳ್ಳುವುದನ್ನು ನಿಷೇದಿಸಲಾಗಿದೆ. ೧೯೮೨ ರಲ್ಲಿ ಈ ಕಣಿವೆಯನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಲಾಯಿತು. ಜೊತೆಗೆ ೧೯೮೮ ರಿಂದ ಈ ಕಣಿವೆಯನ್ನು 'ವಿಶ್ವ ಪಾರಂಪರಿಕ ಜೀವ ವೈವಿಧ್ಯ ತಾಣ'ವೆಂದು ಕೂಡ ಯುನೆಸ್ಕೊ ಇಂದ ಘೋಷಿಸಲಾಗಿದೆ. ಈ ಪ್ರವಾಸೀ ಸ್ಥಳಕ್ಕೆ ಕೇವಲ ಟ್ರೆಕಿಂಗ್ ಗೆ ಅನುಮತಿ ನೀಡುತ್ತಾರೆಯೇ ಹೊರತು ಅಲ್ಲೇ ಉಳಿಯುವಂತಿಲ್ಲ.  








ಚಾರಣ ಹೇಗೆ ?

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿರುವ ಚಮೋಲಿ ಜಿಲ್ಲೆಯ ಗಢವಾಲ್ ಊರಿನ, ಭ್ಹುಂದರ್ ಗಂಗಾ ಕಣಿವೆಯ ಮೇಲ್ತಟ್ಟಿನಲ್ಲಿದೆ ಈ 'ವ್ಯಾಲಿ ಆಫ್ ಫ್ಲವರ್ಸ್'. ಇದು ತನ್ನ ಅಲೌಕಿಕ ನಿಸರ್ಗ ಸೌಂದರ್ಯದಿಂದಾಗಿ ಚಾರಣಿಗರ, ಛಾಯಾಗ್ರಾಹಕರ ಪಾಲಿಗೆ ಸ್ವರ್ಗವೆನಿಸಿದೆ. ಹರಿದ್ವಾರದಿಂದ ೨೭೫ ಕಿ.ಮೀ ದೂರಕ್ಕೆ ಪ್ರಯಾಣಿಸಿ ಜೋಷಿಮಠಕ್ಕೆ ಬಂದು ತಂಗಿದರೆ, ಅಲ್ಲಿಂದ ವಾಹನದ ಮೂಲಕ ಗೋವಿಂದಘಾಟ್ ನಂತರದ ಊರು ಪುಲ್ನ ವರೆಗೆ ತಲುಪಬಹದು. ಇಲ್ಲಿಂದ ಮುಂದೆ ವಾಹನಗಳು ಸಾಗದು. 'ವ್ಯಾಲಿ ಆಫ್ ಫ್ಲವರ್ಸ್' ಮತ್ತು ಸಿಖ್ಖರ ಪ್ರಮುಖ ಯಾತ್ರಾಮಂದಿರ 'ಹೇಮಕುಂಡ್ ಸಾಹಿಬ್'ಗೆ ಚಾರಣ ಪ್ರಾರಂಭವಾಗುವುದು ಇಲ್ಲಿಂದಲೇಚಾರಣದ ಸೀಸನ್ ಇಲ್ಲಿಯ ಸ್ಥಳೀಯರಿಗೆ ದುಡಿಮೆಯ ಪರ್ವಕಾಲ. ತಿಂಡಿ-ಚಾಯ್ ಗಳು, ಚಾರಣಕ್ಕೆ ಬೇಕಾಗುವ ಊರುಗೋಲು, ಬ್ಯಾಗ್, ರೈನ್ ಕೋಟ್ ಮತ್ತಿತರ ಅಗತ್ಯ ಸಾಮಗ್ರಿಗಳು ಇಲ್ಲಿನ ಅಂಗಡಿಗಳಲ್ಲಿ ದೊರಕುತ್ತವೆ. ಮೊದಲ ದಿನ ಪುಲ್ನದಿಂದ ಸುಮಾರು ೮-೯ ತಾಸುಗಳ, ೧೧ ಕಿ.ಮೀ ಗಳಷ್ಟು ಆರೋಹಣ ನಡೆಸಿದರೆ ಸಿಗುವುದು ಗಾಂಗ್ರಿಯ ಎಂಬ ಊರು. ಇದನ್ನು ಬೇಸ್ ಕ್ಯಾಮ್ಪ್ ಸ್ಥಳ ಎಂದುಕರೆಯುತ್ತಾರೆ. ಈ ಸ್ಥಳವನ್ನು ತಲುಪುವವರೆಗೆ ಸಾಕಷ್ಟು ಮುಖ್ಯ ಹಳ್ಳಿಗಳಲ್ಲಿ ಸಣ್ಣಪುಟ್ಟ ತಿಂಡಿ ಸ್ನಾಕ್ಸ್ ಗಳ ಅಂಗಡಿಗಳು ಸಿಗುವುದರಿಂದ ಊಟ ತಿಂಡಿಗೆ ತೊಂದರೆಯಾಗುವುದಿಲ್ಲ . ಚಾರಣ ಮಾಡಲುಸಾಧ್ಯವಾಗದೇ ಅಥವಾ ಇಷ್ಟಪಡದೇ ಇರುವುವವರು ಜೋಷಿಮಠ ದಿಂದ ಗಾಂಗ್ರಿಯ ವರೆಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಬಹುದು ಮತ್ತು ವೈಮಾನಿಕ ಹಿಮಾಲಯ ಶ್ರೇಣಿಗಳ ವೈಮಾನಿಕ ನೋಟವನ್ನು ಆಸ್ವಾದಿಸಬಹುದು.(ಈ ವ್ಯವಸ್ಥೆಅಲ್ಲಿನ ವಾತಾವರಣದ ಮೇಲೆ ಅವಲಂಭಿತ)ಇನ್ನೊಂದು ಮುಖ್ಯವಾದ ಸೌಲಭ್ಯ, 'ಮ್ಯೂಲ್ ಅಥವಾ ಹೆಸರಗತ್ತೆ ಸವಾರಿ. ಬೆಟ್ಟದ ಮೇಲಿನ ಗಾಂಗ್ರಿಯ ಊರಿಗೆ ಸಕಲ ಸಾಮಗ್ರಿಗಳನ್ನು ಸಾಗಿಸಲು ಮ್ಯೂಲ್ ಗಳೇ ಇಲ್ಲಿನ ಮುಖ್ಯ ಆಧಾರ. ಇದರ ಜೊತೆಗೆ ಪೋರ್ಟರ್ಸ್ ಅಥವಾ ಮಾಲಿಗಳು ತಮ್ಮ ಬೆನ್ನಿನ ಬುಟ್ಟಿಯಲ್ಲಿ ಪ್ರವಾಸಿಗರನ್ನು ಮತ್ತು ಭಾರದ ಚೀಲಗಳನ್ನು ಹೊತ್ತುಕೊಂಡು ಹೋಗುವ ದುಡಿಮೆಯನ್ನು ಮಾಡುತ್ತಾರೆ. ಪ್ರವಾಸೋದ್ಯಮವೇ ಮುಖ್ಯ ಆದಾಯವಾದುದರಿಂದ, ಸ್ಥಳದ ಸ್ವಚ್ಛತೆಗೆ ಉತ್ತಮ ಪ್ರಾಧಾನ್ಯತೆ ನೀಡಿದ್ದಾರೆ. ಚಾರಣ ಹಾದಿಗೆ ಅಡಚಣೆಯಾಗುವ ಮ್ಯೂಲ್ ತ್ಯಾಜ್ಯ, ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಕಸಗಳು ಇತ್ಯಾದಿ ತ್ಯಾಜ್ಯವಸ್ತುಗಳ ನಿರ್ವಹಣೆಯನ್ನು, ಸ್ವಚ್ಛತಾಕಾರ್ಮಿಕರು ಅತ್ಯಂತ ಸಮಗ್ರವಾಗಿ ನಿರ್ವಹಿಸಿವುದು ಪ್ರಶಂಸನೀಯ. ಚಾರಣದ ಹಾದಿಯುದ್ದಕ್ಕೂ ಆಗಸದೆತ್ತರಕ್ಕೆ ಚಿಮ್ಮಿ ನಿಂತ ಹಸಿರು ಪೈನ್, ಓಕ್ ಮರಗಳು,ಸಮೃದ್ಧ ಸಸ್ಯರಾಶಿ, ಪಕ್ಕದಲ್ಲಿ ಕಣಿವೆಯಿಂದಿಳಿದು ರಭಸದಲ್ಲಿ ತನ್ನ ಪಥದಲ್ಲಿ ಸಾಗುವ ಪುಷ್ಪವತಿ ನದಿ, ಹಿಮಾಲಯದ ಶ್ರೇಣಿಗಳು, ಬಾಯಾರಿಕೆ ನೀಗಲು ಖನಿಜಯುಕ್ತ ತಣ್ಣನೆಯ ನೈಸರ್ಗಿಕ ನೀರು,ಇಂತಹ ಪ್ರಕೃತಿ ಮಡಿಲಲ್ಲಿ ಚಾರಣ ಮಾಡುತ್ತಿದ್ದರೆ, ನಡಿಗೆಯೇ ಗೊತ್ತಾಗುವುದಿಲ್ಲ. ಗಾಂಗ್ರಿಯಾ ತಲುಪಿದ ಮೇಲೆ ವಸತಿಗಾಗೆಂದು ಅಲ್ಲಿ ಸಾಕಷ್ಟು ಶೆರ್ಡ್ ಟೆಂಟ್ ಗಳು, ಖಾಸಗೀ ಹೋಟೆಲು ಲಾಡ್ಜುಗಳಿವೆ. ಉತ್ತಮ ಊಟ ತಿಂಡಿಗಳು ದೊರೆಯುತ್ತವೆ. ಇಲ್ಲಿರುವ ಸಿಖ್ಖರ ಗುರುದ್ವಾರ ಹೇಮಕುಂಡ್ ಸಾಹಿಬ್ ಗೆ ಬರುವ ಯಾತ್ರಾರ್ಥಿಗಳಿಗೆ ವಸತಿ ನೀಡುವ ವ್ಯವಸ್ಥೆ ಹೊಂದಿದೆ. ಗಾಂಗ್ರಿಯ ದಿಂದ ಎರಡನೇ ದಿನದ ೩ ಕಿ.ಮೀ ಗಳ ಚಾರಣ 'ವ್ಯಾಲಿ ಆಫ್ ಫ್ಲವರ್ಸ್' ಕಣಿವೆಗೆ ಮುಂದುವರೆಯುತ್ತದೆ. ಈ ಸಸ್ಯರಾಶಿಯ ಕಣಿವೆಗೆ ಮ್ಯೂಲ್ ಗಳು ಹೋಗುವುದಿಲ್ಲ. ಪೋರ್ಟರ್ಸ್ ಗಳ ಬಾಡಿಗೆ ಸೌಲಭ್ಯ ಸಿಗುತ್ತದೆ. ಚಾರಣದ ತುದಿ ತಲುಪುವ ವರೆಗೂ ಯಾವುದೇ ಅಂಗಡಿಗಳು ಲಭ್ಯವಿಲ್ಲ. ಹಾಗಾಗಿ ಆಹಾರವನ್ನು ಮುಂಚಿತವಾಗಿಯೇ ಕಟ್ಟಿಕೊಂಡು ಹೋಗಬೇಕು. 

ಇತರ ಆಕರ್ಷಣೆ 

ಇದರ ಜೊತೆ ಇದೇ ಪ್ರದೇಶದಲ್ಲಿರುವ ಹೇಮಕುಂಡ್ ಸಾಹಿಬ್ ಗೂ ಒಂದು ಹೊತ್ತಿನ ಚಾರಣ ಮಾಡಬಹುದು. ಸಿಖ್ಖರ ಪವಿತ್ರ ತೀರ್ಥ ಯಾತ್ರಾ ಸ್ಥಳ ಇದಾಗಿದ್ದು, ಹಿಮಾವೃತ್ತ ಬೆಟ್ಟಗಳ ನಡುವೆ, ಹಿಮಸರೋವರದ ಬುಡದಲ್ಲಿರುವ ಗುರುದ್ವಾರ ಇಲ್ಲಿನ ಪ್ರೇಕ್ಷಣೀಯ ಸ್ಥಳ. ಇಲ್ಲಿ ಪ್ರಸಾದಕ್ಕೆಂದು ನೀಡುವ ಲಂಗಾರ್ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿಕರವಾಗಿರುತ್ತದೆ.  


(26/09/2019 ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)

ಸೋಮವಾರ, ಆಗಸ್ಟ್ 26, 2019

ಟ್ರೆಕ್ ಟು ಘಾನ್ಗ್ಹರಿಯ

ಟ್ರೆಕಿಂಗ್ ಟೀಮಿನವರನ್ನು ಸೇರಿಕೊಂಡು ಹೃಷಿಕೇಶದಿಂದ ಹೊರಟು, ಜೋಷಿಮಠ ದೇವಪ್ರಾಯಗದ ಮೂಲಕ ಹಾದು, ಸುಧೀರ್ಘ ೧೨.೫ ತಾಸುಗಳ ಘಾಟಿ ರೋಡಿನ ಪ್ರಯಾಣ. ಬೆಂಗಳೂರಿನಿಂದ ಹೊರಡುವಾಗ ನೋಡಿಕೊಂಡ ವೆದರ್ ರಿಪೋರ್ಟ್ ಪ್ರಕಾರ ನಾವು ಟ್ರೆಕ್ ಹೋಗುವ ಸ್ಥಳದಲ್ಲಿ ಎಲ್ಲಾ ದಿನವೂ ಮಳೆ ಎಂದಿತ್ತು. ನಮ್ಮದು ಪೂರಾ ಮಾನ್ಸೂನ್ ಟ್ರೆಕ್ಕೇ ಆಗಲಿಕ್ಕಿದೆ ಎಂದು ಗಟ್ಟಿ ಮನಸ್ಸು ಮಾಡಿಯೇ ಹೊರಟಿದ್ದರಿಂದ, ಆಗಾಗ್ಗೆ ಹನಿಯುತ್ತಿದ್ದ ಜುಮುರು ಮಳೆ, ಒಮ್ಮೊಮ್ಮೆ ಕಗ್ಗತ್ತಲು ಅವರಿಸುವಂತಹ ಮೋಡ ಮತ್ತು ಕೆಲವೊಮ್ಮೆ ಶುಭ್ರ ಬಿಳಿ ಮಂಜಿನ ಮುಸುಕು ಹೀಗೆ ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದ ವಾತಾವರಣ ಕಂಡರೂ ಆತಂಕವೆನಿಸಲಿಲ್ಲ. ಹಿಂದಿ ಸುಲಲಿತವಾದ್ದರಿಂದ ಮಾತುಕತೆಗೆನೂ ತೊಂದರೆಯಾಗಲಿಲ್ಲ. ವಾಹನ ಚಾಲಕ ಶೈಲೇಂದರ್, ಅಲ್ಲಿನ ಭೌಗೋಳಿಕತೆ, ಜನಜೀವನ ಇತ್ಯಾದಿ ಕುರಿತಾಗಿ ಹೊಸ ವಿಷಯಗಳನ್ನು ತಿಳಿಸುತ್ತ, ನಮ್ಮೆಲ್ಲ ಪ್ರಶ್ನೆಗಳಿಗೆ, ಕುತೂಹಲಕ್ಕೆ ಉತ್ಸುಕತೆಯಿಂದಲೇ ಉತ್ತರಿಸುತ್ತ ಹೋಗುತ್ತಿದ್ದರು. ಗಾಡಿಯ ಕಿಟಕಿಯಾಚೆಗಿನ ಪ್ರತಿಯೊಂದು ವಿಹಂಗಮ ನೋಟವೂ ಒಂದೊಂದು ಕಥೆ ಸಾರುವಂತಿತ್ತು. ಮತ್ತವಷ್ಟೂ ಅಗಾಧ ಹಿಮಾಲಯದ ಒಂದು ಸಣ್ಣ ಭಾಗವಷ್ಟೇ ಎಂಬುದು ನಮ್ಮನ್ನು ಮತ್ತಷ್ಟು ಬೆರಗಾಗುವಂತೆ ಮಾಡುತ್ತಿತ್ತು.

ದಿನದ ಕೊನೆಯಲ್ಲಿ ತಲುಪಿದ್ದು ಪಾಂಡುಕೇಶ್ವರ ಎಂಬ ಊರಿಗೆ. ಟ್ರೆಕಿಂಗ್ ಗೈಡ್ಗಳು ತಮ್ಮ ಪರಿಚಯ, ಟ್ರೆಕಿಂಗ್ ಸಮಯದ ಅನುಕೂಲ/ಅನಾನುಕೂಲಗಳು, ಸೌಲಭ್ಯಗಳು, ಟ್ರೆಕಿಂಗ್ ನ ನಿಯಮಗಳು, ಸಮಯದ ಪಾಲನೆ, ಎತ್ತರದ ಸ್ಥಳಕ್ಕೆ ಹೋದಂತೆಯೂ ಬದಲಾಗುವ ಒತ್ತಡಕ್ಕೆ, ದೇಹದ ಸಮತೋಲನ ಕಳೆದುಕೊಳ್ಳದಂತೆ ನೀರು-ಉಸಿರಾಟದ ಕುರಿತೊಂದಷ್ಟು ಮುಖ್ಯ ಮಾಹಿತಿಗಳು, ನಮ್ಮ ಆರೋಗ್ಯ ಸುರಕ್ಷತೆಯ ಕುರಿತಾಗಿ ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿ ವಿಷಯಗಳ ಕುರಿತಾಗಿ ನೀಡಿದ ಮಾಹಿತಿಗಳು ಉಪಯುಕ್ತವಾಗಿದ್ದವು. ೭೨ ವಯಸ್ಸಿನ ಸುಪರ್ಣ ಅಂಕಲ್ ನಿಂದ ಹಿಡಿದು, ೨೩ ವರ್ಷದ ಹುಡುಗ ತುಷಾರ್ ವರೆಗೆ ಸುಮಾರು ಎಲ್ಲ ವಯಸ್ಸಿನವರು ಇದ್ದುದ್ದರಿಂದ ನಮ್ಮ ಟೀಮ್ ಒಂದು ರೀತಿಯಲ್ಲಿ ಆಕರ್ಷಕವೆನಿಸಿತ್ತು. ಬೆರಳಂಚಿಗೆ ಕ್ಲಿಪ್ಪಿಸಬಹುದಾದ ಆಕ್ಸಿಮೀಟರ್ ಮೂಲಕ ನಮ್ಮ ಹಾರ್ಟ್ ರೇಟ್ ಅನ್ನು ಮಾನಿಟರ್ ಮಾಡುವುದು ಅಲ್ಲಿ ನಿತ್ಯಕ್ರಮವಾಗಿತ್ತು. ಹೊಸತಾಗಿ ಏರ್ಪಟ್ಟ ಟ್ರೆಕಿಂಗ್ ಟೀಮ್ ನ ಹೊಸ ಜನರ ಪರಿಚಯ, ಒಂದಷ್ಟು ಮಾತುಕತೆಗಳ ಮುಗಿಸಿ, ರಾತ್ರಿ ವಿಶ್ರಾಂತಿ ಪಡೆದೆವು.

ಎರಡನೆಯ ದಿನ :

ಮರುದಿನ ಬೆಳಿಗ್ಗೆ ೭.೩೦ಗೆ ಎಲ್ಲರೂ ತಿಂಡಿ ಮುಗಿಸಿ ಚಾರಣಕ್ಕೆ ತಯಾರಿರಲು ಆದೇಶವಾಗಿತ್ತು. ಹಿಂದಿನ ದಿನ ತಲುಪುವಾಗ ಕತ್ತಲಾಗಿತ್ತರಿಂದ, ನಮ್ಮ ಸುತ್ತಮುತ್ತಲಿನ ಪರಿಸರ ಹೇಗಿದೆ ಎಂಬ ಸ್ಪಷ್ಟ ನಿಲುವು ಸಿಕ್ಕಿರಲಿಲ್ಲ. ಮರುದಿನ ಬೆಳಿಗ್ಗೆ ಎದ್ದು ರೂಮಿನ ಕಿಟಕಿಯ ಪರದೆ ಸರಿಸಿ ನೋಡಿದರೆ, ಎತ್ತರೆತ್ತರ ಪರ್ವತಗಳ ನಡುವೆ ಅತೀ ತಗ್ಗಿನಲ್ಲಿ, ಕಿರಿದಾಗಿ ನಮ್ಮ ಹೋಟೆಲ್ ನಂತಹ ಬಿಲ್ಡಿಂಗ್ಗಳು..! ತಕ್ಷಣಕ್ಕೆ ಹೊರಬಿದ್ದು ಬಿಲ್ಡಿಂಗ್ ನ ಛಾವಣಿಯ ಮೇಲೆ ನಿಂತು ನೋಡಿದರೆ, ಕತ್ತು ನೇರ ಮಾಡಲು ಸಾಧ್ಯವೇ ಇಲ್ಲದೆ ನೋಡಬೇಕಾದ ಎತ್ತರೆತ್ತರ ಪರ್ವತಗಳು ಮತ್ತು ದೂರದಲ್ಲಿ ಸ್ನೋ ಕ್ಯಾಪ್ಡ್ ಹಿಮಾಲಯನ್ ಮೌಂಟೇನ್ಸ್..!! ನೇಪಾಳಕ್ಕೆ ಪ್ರವಾಸ ಹೋಗಿ ಅನ್ನಪೂರ್ಣ ಹಿಮಾಲಯನ್ ಮೌಂಟೈನ್ಸ್ ನೋಡಿದ್ದೇವಾದರೂ ಇಷ್ಟು ಹತ್ತಿರಕ್ಕೆ.. ಉಂಹೂಂ ಇದೇ ಮೊದಲು.. ನನಗೋ ಜೀವನಚೈತ್ರ ಸಿನಿಮಾದ 'ನಾದಮಯ..' ಹಾಡಿನ ಡಾ| ರಾಜಕುಮಾರ ನ ಹಾಗೆ ಎಲ್ಲವೂ ವಿಸ್ಮಯದಂತೆ ಕಾಣುತ್ತಿತ್ತು.. (ಓವರ್ ಆಯ್ತು, ಆದ್ರೆ ಮೊದಲ ಸಲದ ಅನುಭವವಾದ್ದರಿಂದ ಹಾಗೇ ಅನ್ನಿಸಿತ್ತು :D ಹಾಡೂ ಗುನುಗಿಕೊಂಡಿದ್ದೆ :P ).ಮಾರ್ನಿಂಗ್ ಗ್ರೀನ್ ಟೀ, ಬ್ರೆಕ್ಫಾಸ್ಟ್ ಮತ್ತು ಚಹಾ ಎಲ್ಲವಕ್ಕೂ ಟೈಮಿಂಗ್ಸ್ ಹಿಂದಿನ ದಿನವೇ ನೀಡಲಾಗುತ್ತದೆ. ಕಟ್ಟುನಿಟ್ಟಾಗಿ ಆ ಸಮಯಕ್ಕೆ ಹೋಗಲೇ ಬೇಕು. ಕಾರಣ ಕೂಡ ಸಮಂಜಸ. ಅಲ್ಲಿ ಚಹಾ ಇಟ್ಟ 2 ನಿಮಿಷಕ್ಕೆ ಅಲ್ಲಿಯ ಚಳಿಗೆ ತಣ್ಣಗಾಗಿ ಹೋಗಿರುತ್ತದೆ. ಎಲ್ಲರೂ ಉತ್ಸಾಹದಿಂದ ಎದ್ದು ಚಾರಣಕ್ಕೆ ತಯಾರಾಗಿ ಉಳಿದುಕೊಂಡಿದ್ದ ಪಾಂಡುಕೇಶ್ವರ ಹೋಟೆಲ್ನಿಂದ ಗೋವಿಂದ್ಘಾಟ್ ಗೆ ಪ್ರಯಾಣ ಬೆಳೆಸಿದೆವು. ಗೋವಿಂದ್ಘಾಟ್ ಇಂದ ಬೇಸ್ ಕ್ಯಾಮ್ಪ್ ಸ್ಥಳ ಘಾನ್ಗ್ಹರಿಯಕ್ಕೆ ಚಾರಣದ ಹಾದಿ ಒಟ್ಟು ೧೪ ಕಿಲೋ ಮೀಟರುಗಳು. ಆದರೆ ೨೦೧೩ ರ ಪ್ರವಾಹದ ನಂತರ ಜರ್ಜರಿತಗೊಂಡಿದ್ದ ಕೆಲವು ಸ್ಥಳಗಳ ಮರುನಿರ್ಮಾಣದಹಂತದಲ್ಲಿ ಹೊಸತಾಗಿ ಸ್ವಲ್ಪ ದೂರ ರಸ್ತೆಯನ್ನು ಮಾಡಿದ್ದಾರೆ. ಹಾಗಾಗಿ ಗೋವಿಂದ್ಘಾಟಿನಿಂದ ಹೊರಟು ಸಿಗುವ ಮೊದಲ ಪುಟ್ಟ ಹಳ್ಳಿ ಪುಲ್ನ ವರೆಗೆ ವಾಹನದಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ. ಈ ಪ್ರದೇಶಗಳ ಎತ್ತರವನ್ನು ತಿಳಿಸಬೇಕೆಂದರೆ, ಸಮುದ್ರ ಮಟ್ಟಕ್ಕಿಂತ ನಾನು ವಾಸಿಸುವ ಬೆಂಗಳೂರು ಪ್ರದೇಶ ೩೦೦೦ ಅಡಿ ಎತ್ತರದಲ್ಲಿದೆ. ಇದು ಭಾರತದ ಅನೇಕ ಮುಖ್ಯ ಪಟ್ಟಣಗಳಿಗೆ ಹೋಲಿಸಿದರೆ, ಎಲ್ಲದಕ್ಕಿಂತ ಎತ್ತರದಲ್ಲಿದೆ. ಇನ್ನು ಗೋವಿಂದ ಘಾಟ್ ನ ಎತ್ತರ ೫೫೦೦ ಅಡಿ ಮತ್ತು ನಾವು ತಲುಪಬೇಕಿರುವ ಗಾಂಗ್ರಿಯ ಊರಿರುವುದು, ಸಮುದ್ರ ಮಟ್ಟಕ್ಕಿಂತ ೧೦೨೦೦ ಅಡಿಗಳಷ್ಟು ಮೇಲೆ. ಅಲ್ಲಿಗೆ ನಮ್ಮ ಅಂದಿನ ಚಾರಣ, ೫೦೦೦ ಅಡಿಗಳಷ್ಟು ಎತ್ತರಕ್ಕೆ ಕಡಿದಾದ ಬೆಟ್ಟಗಳ ನಡುವೆ ೧೦ ಕಿಲೋ ಮೀಟರ್ಗಳ ಚಾರಣ, ಕನಿಷ್ಠ ಆರು ತಾಸುಗಳ ನಡಿಗೆ! ಇದರ ಜೊತೆಗೆ ಮಳೆಯ ವೈಪರೀತ್ಯ ವಾತಾವರಣ, ಕಡಿದಾದ ಜಾರಿಕೆಯ ಕಲ್ಲಿನ ಹಾದಿ  ಯಾವುದೂ ಕೂಡ ನಮಗಿದು ಅನಿರೀಕ್ಷಿತ ಎಂದು ಹೇಳಿಕೊಳ್ಳುವಂತಿಲ್ಲ. ಎಲ್ಲವಕ್ಕೂ ತಯಾರಾಗಿಯೇ ಹೊರಡಬೇಕು. ಇದು ಕೇವಲ ಪ್ರವಾಸೀ ಪ್ರಕೃತಿ ತಾಣವಾಗಿ, ನೈಸರ್ಗಿಕ ಸೌಂದರ್ಯ ಸಿರಿಯನ್ನು ಆಹ್ಲಾದಿಸಲು ಚಾರಣಿಗರ ಮುಖ್ಯ ಆಕರ್ಷಣೆಯಾಗಿ ಮಾತ್ರವಲ್ಲ. ಹೇಮಕುಂಡ ಸಾಹಿಬ್ ಎಂಬ ಸಿಖ್ ಧರ್ಮದವರ ಅತ್ಯಂತ ಪವಿತ್ರವಾದ ತೀರ್ಥ ಯಾತ್ರಾ ಕೇಂದ್ರಕ್ಕೂ ಇದೇ ಚಾರಣ ಹಾದಿಯಾದ್ದರಿಂದ ಅಪಾರ ಸಂಖ್ಯೆಯಲ್ಲಿ ದಿನನಿತ್ಯ ಪ್ರವಾಸಿಗರ ಓಡಾಟವಿರುತ್ತದೆ.

ಹೇಮಕುಂಡ್ ತೀರ್ಥ ಯಾತ್ರಾ ಸ್ಥಳ, ವ್ಯಾಲಿ ಆಫ್ ಪ್ಲಾವರ್ಸ್ ಗಳ ಸೊಬಗನ್ನು ಸವಿಯಲು ಸಾಧ್ಯವಾಗುವುದೇ ವರ್ಷದಲ್ಲಿ, ಜೂನ್ ನಿಂದ ಅಕ್ಟೊಬರ್ ವರೆಗಿನ ಆರು ತಿಂಗಳುಗಳು. ಉಳಿದ ಆರು ತಿಂಗಳುಗಳು ಅದು ಸಂಪೂರ್ಣ ಹಿಮಚ್ಛಾದಿತ ಪ್ರದೇಶವಾಗಿ ಈ ಎಲ್ಲ ಸ್ಥಳಗಳಲ್ಲಿ ಜನರ ಪ್ರವಾಸವನ್ನು, ಓಡಾಟವನ್ನು ನಿಷೇದಿಸಲಾಗುತ್ತದೆ. ಮೋಟಾರು ವಾಹನದ ಸೇವೆ ಕೊನೆಯಾಗಿ, ಕಾಲ್ನಡಿಗೆ ಪುಲ್ನ ದಿಂದಲೇ ಪ್ರಾರಂಭವಾಗುವುದರಿಂದ, ಅಲ್ಲಿಂದಲೇ ಅನೇಕ ಚಹಾ ಮತ್ತು ತಿನ್ನುವ ಆಹಾರ, ತಿಂಡಿ ಪೊಟ್ಟಣಗಳ ಅಂಗಡಿಗಳ ಸಾಲು ಸರತಿ ಸಿಗುತ್ತವೆ. ಚಾರಣಕ್ಕೆ ಬೇಕಾಗುವ ಊರುಗೋಲು ಕೂಡ ಅಲ್ಲಿಯೇ ಲಭ್ಯವಿರುತ್ತದೆ. ಪ್ರವಾಹಕ್ಕೂ ಮುಂಚೆ, ಕಾಲ್ನಡಿಗೆಯ ಈ ಹಾದಿ ಸಾಕಷ್ಟು ದುರ್ಗಮವಾಗಿಯೂ, ಮತ್ತಷ್ಟು ಕಡಿದಾಗಿಯೂ ಇತ್ತೆಂದು ನಮ್ಮ ಗೈಡ್ ನಿಂದ ತಿಳಿದ ಮಾಹಿತಿ.  ಈಗಲೂ ಕೂಡ ಮಳೆಯ ರಭಸಕ್ಕೆ ಯಾವ ಸಮಯಕ್ಕೆ ಯಾವ ಬೆಟ್ಟಗಳಿಂದ ಭೂಕುಸಿದು, ಕಲ್ಲು ಬಂಡೆಗಳು ಉದುರುತ್ತವೆ ಎಂಬುದನ್ನು ಊಹಿಸಲಾಗದು ಎಂದೂ ಕೂಡ ಸೇರಿಸುವುದನ್ನು ಅವರು ಮರೆಯುವುದಿಲ್ಲ. ಚಾರಣ ಹವ್ಯಾಸ ಅಥವಾ ಹರಕೆಯ ಮೇರೆಗೆ ಕಾಲ್ನಡಿಗೆಯಲ್ಲಿ ನಡೆಯುವ ಜನರ ಹೊರತಾಗಿ, ಚಾರಣ ಮಾಡಲಾಗದವರು, ಮಕ್ಕಳೊಡನೆ ಕುಟುಂಬ ಸಮೇತವಾಗಿ ಗುರುದ್ವಾರಕ್ಕೆ ಭೇಟಿ ನೀಡುವವರು, ಹೀಗೆ ಬರುವ ಪ್ರವಾಸಿಗರಿಗೆಂದೇ ಇಲ್ಲಿ ಮ್ಯೂಲ್ ಗಳು ಲಭ್ಯ. ಹೇಸರಗತ್ತೆಗಳೇ ಇಲ್ಲಿನ ಮುಖ್ಯ ಸಾರಿಗೆ ಎನ್ನಬಹುದು. ಹೇಸರಗತ್ತೆಗಳು ಕುದುರೆಯ ಜಾತಿಗೆ ಸೇರಿದ್ದವಾದ್ದರಿಂದ ಓಟದಲ್ಲಿ ರಭಸವಿರುವಂತಹ ಪ್ರಾಣಿಗಳು. ಇದರ ಜೊತೆಯಲ್ಲಿ ಹೆಸರಗತ್ತೆಗಳ ಜೀರ್ಣಾಂಗ ವ್ಯೂಹ ಪ್ರಕ್ರಿಯೆ ಬೇರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದು, ಇವು ಸಾಕಷ್ಟು ಬಗೆಯ ಸಸ್ಯರಾಶಿಯ ತಿಂದು ಬದುಕಬಲ್ಲವು.. ಎಂದು ಎಲ್ಲೋ ಓದಿದ್ದ ನೆನಪು.. ಹಾಗಾಗಿಯೇ ಇಲ್ಲಿ ಹೆಸರಗತ್ತೆಗಳ ಬಳಕೆ ಹೆಚ್ಚಿರಬಹುದೆಂದು ಊಹಿಸಿದೆ..ಆರು ತಿಂಗಳು ಪ್ರವಾಸೋದ್ಯಮಕ್ಕಾಗಿ ತೆರೆಯಲ್ಪಡುವ ಈ ಜಾಗದ ಸಾರಿಗೆ ವ್ಯವಸ್ಥೆಯ ಬಳಕೆಯಿಂದ ಹಿಡಿದು, ಬೆಸ್ಕ್ಯಾಮ್ಪ್ ಘಾನ್ಗ್ಹರಿಯ ಊರಿಗೆ ಗ್ಯಾಸ್ ಸಿಲಿಂಡರ್ ನಿಂದ ಹಿಡಿದು ಪ್ರತಿಯೊಂದು ಸರಕು ಸರಂಜಾಮುಗಳನ್ನು ಸಾಗಿಸಲು ಕೂಡ ಈ ಮ್ಯೂಲ್ ಗಳೇ ಅವಲಂಭಿತ ವ್ಯವಸ್ಥೆ. ಪ್ರವಾಸದ ಸೀಸನ್ನಿನಲ್ಲೆಂತೂ ಈ ಹೇಸರಗತ್ತೆ ಸವಾರಿಯ ಮೂಲಕ ಸಾಧ್ಯವಾದಷ್ಟು ಸಂಪಾದನೆಯಾಗಲೆಂದು ನಿಯಂತ್ರಕ ಮಾಲಿಗಳು ಸಾಕಷ್ಟು ಚುರುಕಿನಿಂದ ಬೇಸ್ ಕ್ಯಾಮ್ಪ್ ವರೆಗೆ ದಿನಕ್ಕೆ ಸಾಕಷ್ಟು ಟ್ರಿಪ್ಸ್ ಹೊಡೆಯುತ್ತಾರೆ. ನಾವು ಚಾರಣ ಮಾಡುವಾಗ ಬೆಟ್ಟದ ದಿಬ್ಬದ ಬದಿಯಲ್ಲಿಯೇ ನಡೆಯುತ್ತಾ ಸಾಗಬೇಕು. ಏಕೆಂದರೆ ಹೆಸರಗತ್ತೆ ಯನ್ನು ಕೆಳಗೆ ಇಳಿಸಿಕೊಂಡು ಬರುವಾಗ ಅವುಗಳ ವೇಗ ಸಾಕಷ್ಟಿದ್ದು ದಾರಿಯ ಗೊಂದಲ ಹೆಚ್ಚಿರುತ್ತದೆ. ಇದರ ಜೊತೆಗೆ ಇಲ್ಲಿನ ಮತ್ತೊಂದು ಮುಖ್ಯ ಸಾರಿಗೆ ಎಂದರೆ ಪೋರ್ಟರ್ಸ್ ಗಳು. ಇದು ಇಲ್ಲಿನ ಹಲವು ನಿವಾಸಿಗಳ ಆದಾಯದ ಮೂಲವಾದ್ದರಿಂದ, ಬುಟ್ಟಿಯ ಮಾದರಿಯ ಸೀಟಿನಲ್ಲಿ ಕೂರಿಸಿಕೊಂಡು ತಮ್ಮ ಬೆನ್ನ ಮೇಲೆ ಹೊತ್ತು ನಡೆಯುವ ಅನೇಕ ಪೋರ್ಟರ್ಸ್ಗಗಳ ಹೋರಾಟದ ಬದುಕು ಸಾಗುತ್ತದೆ. ಇವುಗಳ ಹೊರತಾಗಿ ಇತ್ತೀಚಿಗಷ್ಟೇ ಕೆಲವು ಸಮಯದಿಂದ ಪ್ರಾರಂಭವಾದ ಛಾಪೆರ್ ಅಥವಾ ಹೆಲಿಕಾಪ್ಟರ್ ನ ವಾಯುಮಾರ್ಗದ ಸೌಲಭ್ಯ ಪ್ರವಾಸಿಗರಿಗೆ ಮತ್ತೊಂದು ಪೂರಕ ವ್ಯವಸ್ಥೆ. ಗೋವಿಂದ್ ಘಾಟ್ ನಿಂದ ಬೇಸ್ ಕ್ಯಾಮ್ಪ್ ಊರು ಘಾನ್ಗ್ಹರಿಯ ವರೆಗೆ ಹೆಲಿಕಾಪ್ಟರ್ ಮೂಲಕ ಸಾಗಬಹುದಾದರೂ ಈ ಸೌಲಭ್ಯ ಮಾತ್ರ ಸಂಪೂರ್ಣ ಹವಾಮಾನದ ಮೇಲೆ ಅವಲಂಭಿತ. ಇವೆಲ್ಲವನ್ನು ಗಮನಿಸುತ್ತಾ ನಮ್ಮ ಟ್ರೆಕಿಂಗ್ ಅಲ್ಲಿಂದ ಪ್ರಾರಂಭವಾಯಿತು.

ಅಂದು ನಮ್ಮ ಅದೃಷ್ಟಕ್ಕೆ ಮಳೆ ಬಿಡುವು ಕೊಟ್ಟಿತ್ತು.  ಎಳೆ ಬಿಸಿಲಿಗೆ ಖುಷಿಯಿಂದ ಕಣ್ಣೆತ್ತಿ ಎದುರಿಗಿದ್ದ ಆಗಸದವರೆಗೆ ಚಾಚಿಕೊಂಡ ಶಿಖರಗಳನ್ನೊಮ್ಮೆ ನೋಡಿ, ಅದರಲ್ಲಿ ಕಡಿದು ಮಾಡಿರುವ ಚಾರಣದ ಪ್ರಾರಂಭದ ಹಾದಿಯನ್ನು ಹಿಡಿದೆವು. ಕಲ್ಲುಗಳನ್ನು ಜೋಡಿಸಿ ಎತ್ತರೆತ್ತರ ಮೆಟ್ಟಿಲುಗಳ ಮಾದರಿಯಲ್ಲಿ ಸುಮಾರಷ್ಟು ಸ್ಪಷ್ಟ ಚಾರಣದ ಹಾದಿಯನ್ನು ನಿರ್ಮಿಸಿರುವುದು  ಪ್ರಶಂಸನೀಯ. ದಾರಿಯುದ್ದಕ್ಕೂ  ನಮ್ಮಂತೆಯೇ ಟ್ರೆಕಿಂಗ್ ಗೆ ಸಾಕಷ್ಟು ತಂಡಗಳು ಸಿಗುತ್ತಿದ್ದವು. ಕನ್ನಡಿಗರು ಸಿಕ್ಕಾಗ ಖುಷಿ.. ಹಿಮ ಕರಗಿ ಹರಿಯುವ ನೀರೇ ಇಲ್ಲಿನ ಮಿನರಲ್ ವಾಟರ್. ಅಲ್ಲಲ್ಲಿ ನಲ್ಲಿಗಳನ್ನಿಟ್ಟು ಚಾರಣಿಗರಿಗೆ ನೀರು ತುಂಬಿಸಿಕೊಳ್ಳುವ ವ್ಯವಸ್ಥೆ, ಮ್ಯೂಲ್ ಗಳಿಗೆ ಕುಡಿಯುವ ನೀರಿನ ತೊಟ್ಟಿ, ಚಾರಣದ ದಾರಿಯ ಬದಿಯಲ್ಲಿ ವಿಶ್ರಮಿಸುವ ಕಟ್ಟೆ, ಕಂಡಕಂಡಲ್ಲಿ ಅಂಗಡಿಗಳನ್ನು ಇಡಲು ಅವಕಾಶ ನೀಡದೆ, ದಾರಿಯಲ್ಲಿ ಸಿಕ್ಕುವ ಪುಟ್ಟ ಪುಟ್ಟ ಊರುಗಳಲ್ಲಷ್ಟೇ  ಊಟ ತಿಂಡಿ, ಪೇಯಗಳ ಅಂಗಡಿಗಳಿರುವುದು ವ್ಯವಸ್ಥಿತವೆನಿಸಿತು. ಪ್ರವಾಸೋದ್ಯಮವೇ ಇಲ್ಲಿನ ಜೀವಾಳವಾಗಿರುವುದರಿಂದ, ಈ ಪ್ರದೇಶಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿದ್ದಾರೆ. ಅತಿ ಮುಖ್ಯವಾಗಿ, ಹೇಸರಗತ್ತೆಯ ಓಡಾಟ ಹೆಚ್ಚಿರುವಿದರಿಂದ ಅದರ  ಹೊಲಸನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕಾಗುತ್ತದೆ. ಅದಕ್ಕಿಂತಲೂ ಹೊಲಸಾದ, ಮನುಷ್ಯನೆಂಬ ಜೀವಿ ಕಂಡ ಕಂಡಲ್ಲಿ ಎಸೆಯುವ ಪ್ಲಾಸ್ಟಿಕ್ ಮತ್ತು ಇನ್ನಿತರ ಕಸಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲೆಂದೇ ಭರಪೂರ ಕಾರ್ಮಿಕರಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಪಾಳಿಯಲ್ಲಿ ಕಾರ್ಮಿಕರು ಚಾರಣ ಹಾದಿಯನ್ನು ನಿರಂತರವಾಗಿ ಸ್ವಚ್ಛಗೊಳಿಸುತ್ತಲೇ ಇರುತ್ತಾರೆ. ತಮಗೇನಾದರೂ ತಿನ್ನಲು ಸಿಗುವುದೇನೋ ಎಂಬಾಸೆಯಿಂದ ಯಾತ್ರಾರ್ಥಿಗಳಲ್ಲಿ ಆಹಾರವಿದ್ದರೆ ನೀಡಿ ಎಂದು ಒಮ್ಮೊಮ್ಮೆ ಬೇಡುವುದಿದೆ..

ಚಾರಣ ಹೊರಟ ಶುರುವಿನ ಮೊದಲ ಮೂರು ಕಿಲೋಮೀಟರ್ಗಳೇ ಸಾಕಷ್ಟು ಕಠಿಣವಾದ ಹಾದಿ. ನೋಡಲು ಮಾತ್ರ ಸುಲಭದ ಹಾದಿಯೆನಿಸಿದರೂ ಹತ್ತುವಾಗ ದೊಡ್ಡ ದೊಡ್ಡ ಎತ್ತರದ ಕಲ್ಲಿನ ಹಾಸುಗಳನ್ನು ಏರಬೇಕಾಗುವುದು. ಈ ಚಾರಣ ನನಗೆ ಮೊದಲ ಅನುಭವ. ಶುರುವಿನಲ್ಲಿ ಎತ್ತರೆತ್ತರದ ಮೆಟ್ಟಿಲುಗಳ ಮಾದರಿಯ ಹಾದಿಯನ್ನು ಏರಲು, ಬಿರುಸಿನ ಉಸಿರಾಟಕ್ಕೆ ಅಡ್ಜಸ್ಟ್ ಆಗಲು  ದೇಹಕ್ಕೆ ಸ್ವಲ್ಪ ಕಾಲಾವಕಾಶ ಹಿಡಿಯಿತು. ನಿಯಮಿತ ವ್ಯಾಯಾಮ, ಹೆಚ್ಚು ನೀರು ಕುಡಿಯುವ ಅಭ್ಯಾಸ, ಚಾರಣಕ್ಕೆ ಉಪಯುಕ್ತ ಟಿಪ್ಸ್ ನೀಡಿದ ಸ್ನೇಹಿತ ದಿನೇಶ್ ಮನೀರ್ ತಿಳಿಸಿದಂತೆ, ಮೆಟ್ಟಿಲುಗಳ ಹತ್ತಿ ಇಳಿಯುವ ವ್ಯಾಯಾಮ ಪ್ರತಿನಿತ್ಯ ಮಾಡಿ ದೇಹ ತಯಾರು ಮಾಡಿಕೊಂಡಿದ್ದು ವೈಯುಕ್ತಿಕವಾಗಿ ನನಗೆ ಸಾಕಷ್ಟು ಉಪಯುಕ್ತವಾಯಿತು. ಬೆಟ್ಟಗಳಿಂದ ಸುತ್ತುವರಿದ ಪರಿಸರ, ಬೆಟ್ಟಗಳ ಮಧ್ಯದಿಂದ ಹಿಮ ಕರಗಿ ಬೆಟ್ಟದಿಂದ ಧರೆಗಿಳಿಯುತ್ತಿರುವ ಬೆಳ್ಳನೆಯ ಜಲಪಾತ,  ಕ್ಷಣಕ್ಷಣಕ್ಕೆ ಬದಲಾಗುವ ಮೋಡಗಳ ಸಾಲುಗಳು, ಗಿಡಗಂಟಿಗಳಲ್ಲಿನ ಸಣ್ಣ ಸಣ್ಣ ಹೂಗಳು, ದೂರದಲ್ಲಿ ಗೋಚರಿಸುವ ಹಿಮದ ಟೊಪ್ಪಿಗೆ ಹೊದ್ದ ಶಿಖರಗಳನ್ನು ನಿಂತು ನೋಡುವ ಪ್ರವಾಸಿಗರ ಬೆರಗು ಕಣ್ಣುಗಳು, ಸಂಗಡಿಗರ ಜೋಕು ನಗು ತಮಾಷೆಗಳು, ಪಕ್ಕದಲ್ಲಿ ಹರಿಯುವ ಹಿಮನದಿಯ ಜುಳುಜುಳು ಶಬ್ದ, ವೃದ್ದಾಪ್ಯದ ತುದಿಯಲ್ಲಿದ್ದರೂ ನಂಬಿದ ದೈವವನ್ನೊಮ್ಮೆ ಕಂಡು ಸೇವೆ ಮಾಡಿ ಬರಬೇಕೆಂದು ಕಾಲ್ನಡಿಗೆಯಲ್ಲಿ ಹತ್ತುತ್ತಿರುವ ಹಿರಿಯ ಜೀವ, ಶ್ರದ್ದೆಯಿಂದ ಕಲ್ಲಿನ ಅಂಚಂಚಿನ ಹಾಸುಗಳಿಂದಲೂ ಕಸವನ್ನು ಬಗೆದು ಸ್ವಚ್ಛಗೊಳಿಸುವ ಮಾಲಿಗಳು, ಬೆನ್ನು ಮುರಿಯುವಂತಹ ಭಾರದ ಹುಲ್ಲಿನ ಹೊರೆ ಬೆನ್ನ ಮೇಲಿದ್ದರೂ ಅಲ್ಲಿನ ಸ್ಥಳೀಯ ಹೆಣ್ಣುಮಕ್ಕಳ ಆ ಹೊಳೆಯುವ ಕಣ್ಣುಗಳು. ಕಣ್ಣುಗಳನ್ನೂ ಕೂಡ ಹೊರಳಿಸದಂತೆ ತನ್ನ ಬೆನ್ನ ಮೇಲಿರುವುದನ್ನು ಹೊತ್ತು ನಡೆಯುವುದು ತಮ್ಮ ಕರ್ತವ್ಯವೆಂಬಂತೆ ಹತ್ತುವ ಮೂಕ ಪ್ರಾಣಿಗಳು, ಮಧ್ಯೆ ಮಧ್ಯೆ ಸಿಗುವ ಪುಟ್ಟ ಪುಟ್ಟ ಊರು, ತಲೆಯ ಮೇಲೆ ಹಸಿರ ಮರಗಳ ಸೂರು..ಹೀಗೆ 'ಕಳೆದು ಹೋದ ಅನುಭವ'ದ ಮಧ್ಯೆ ನಮ್ಮ ಕಾಲ್ನಡಿಗೆ ನಡೆಯುವುದರಿಂದ ಚಾರಣದ ಕಠಿಣತೆಯಾಗಲಿ, ದೈಹಿಕ ಸುಸ್ತಾಗಲಿ ಒಂದೂ ನಮ್ಮ ಗಮನಕ್ಕೆ ಸಿಗುವುದೇ ಇಲ್ಲ!! ಕಾರಣವಿಲ್ಲದೇ ಕಂಡಿದ್ದೆಲ್ಲವೂ ಆಪ್ತವೆನಿಸುತ್ತ ಹೋಗುತ್ತದೆ..ಪರಿಚಯವೇ ಇಲ್ಲದ ಊರಿನೊಂದಿಗೆ ಅನುಬಂಧವನ್ನುವನ್ನು ಹೊಂದುವುದು ಎಂದರೆ ಇದೇ ಇರಬೇಕು. ನನ್ನ ಕೇಳಿದರೆ, ಚಾರಣದ ದಣಿವನ್ನು ಮೀರಿ ಪ್ರಕೃತಿಯ ಜೊತೆಗಿನ ನಿಕಟವಾದ ಒಡನಾಟದ ಅನುಭವವನ್ನು ಪಡೆದೆ ಎಂದು ಹೇಳುತ್ತೇನೆ.. 😊 

ಈ ಹಿಮಾಲಯನ್ ಬೆಟ್ಟಗಳಲ್ಲಿ ಸಾಕಷ್ಟು ಸಸ್ಯರಾಶಿಯನ್ನು ಕಾಣಬಹುದು. ಅವೆಷ್ಟು ಜಾತಿಯ ಹೂಗಳ ಸಸ್ಯಗಳಿದ್ದಾವೋ ಲೆಕ್ಕವಿಲ್ಲ. ಅನೇಕ ಔಷಧೀಯ ಗುಣಗಳುಳ್ಳ ವಿಶಿಷ್ಟ ಗಿಡ ಮರಗಳು ಅಲ್ಲಿವೆ. ಸೀಸನ್ನಿನ  ಹಣ್ಣಿನ ರಸವನ್ನು ತೆಗೆದಿಟ್ಟು ವರ್ಷವಿಡೀ ಜ್ಯುಸ್ ಸಿರಪ್ ನಂತೆ ಬಳಸುವ ಅವರ ಕ್ರಮಗಳು, ತೊಗಟೆಯಿಂದ ತಾಳೆಗರಿಯಂತಹ ಬರವಣಿಗೆಯ ಪೇಪರ್ ಅನ್ನು ಮಾಡಬಹುದಾದ ಒಂದು ವಿಶಿಷ್ಟ ಜಾತಿಯ ಮರ ಹೀಗೆ ಅನೇಕ ಆಸಕ್ತಿದಾಯಕ ವಿಷಯಗಳು ಇತ್ಯಾದಿ ಅಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಕುರಿತಾಗಿ ಸಾಕಷ್ಟು ವಿಷಯಗಳು ನಮ್ಮ ಟ್ರೆಕಿಂಗ್ ಗೈಡ್ ತಿಳಿಸುತ್ತ ಹೋದರು. ನಮ್ಮಲ್ಲಿ ಬಳಸುವ ಒಂದೆಲಗದ (ಬ್ರಾಹ್ಮೀ) ಸೊಪ್ಪಿನ ವಿಶಿಷ್ಟತೆ ಅಲ್ಲಿನ ಜನರಿಗೆ ಇನ್ನೂ ಪರಿಚಯವಿಲ್ಲ. ಇಲ್ಲಿ ಬೆಂಗಳೂರಿನ ಮನೆಯ ಪಾಟಿನಲ್ಲಿ ಗಿಡ ನೆಟ್ಟು, ಗೊಬ್ಬರ ನೀರು ಕೊಟ್ಟು, ಮಾತನಾಡಿಸಿ ಹೇಳಿಕೇಳಿ ಮಾಡಿ, ಕಡೆಗೂ ಒಂದು ಹೊಸ ಕುಡಿ ಒಡೆದು ನಿಂತಾಗ ಸಂಭ್ರಮಿಸೋ ಸೋರಲೇ ಸೊಪ್ಪು ಅಲ್ಲಿ  ಸಹಸ್ರ ಸಂಖ್ಯೆಯಲ್ಲಿ ಬೆಳೆದುಕೊಂಡಿರುವ ಒಂದು 'ಕಾಡು ಸಸ್ಯ' ಎಂದು ನೋಡುವಾಗ ಏನೋ ಒಂತರ ಖುಷಿ ಮತ್ತು ದಿಗ್ಬ್ರಮೆ! ಒಂದು ಕ್ಷಣಕ್ಕೆ ಚಟ್ನೆ ತಂಬುಳಿ ಎಲ್ಲವನ್ನೂ ಮನಸಾರೆ ನೆನೆದುಕೊಂಡು ಮುಂದಕ್ಕೆ ಸಾಗಿದ್ದಾಯಿತು.. ನಡೆಯುವಾಗ, ಹೇಮಕುಂಡಕ್ಕೆ ಹೋಗುವ ಸಿಖ್ ಧರ್ಮದ ಯಾತ್ರಿಗಳು ಹಾದಿಯುದ್ದಕ್ಕೊ "ವಾಹೇ ಗುರು ಜೀ ಸತ್ ಸ್ರೀ ಅಕಾಲ್ "ಎಂಬ ಜಯ ಘೋಷ ದೊಂದಿಗೆ ಜಪಿಸುತ್ತ ಹೋಗುವುದು ನಮ್ಮಲ್ಲೂ ಕೂಡ ಒಂದು ರೀತಿಯ ಧನಾತ್ಮಕ ಶಕ್ತಿಯನ್ನು ನೀಡುತ್ತಿತ್ತು. ವ್ಯಾಲಿ ಆಫ್ ಪ್ಲಾವರ್ಸ್ ಪರ್ವತ ಶ್ರೇಣಿಗಳಿಂದ ಹಿಮ ಕರಗಿ ನೀರಾಗಿ ನಿರ್ಮಾಣವಾಗುವ ಪುಷ್ಪವತಿ ನದಿ, ಭ್ಯೂನ್ದರ್ ಗಂಗಾ ಎಂಬ ಇನ್ನೊಂದು ಉಪನದಿಯ ಜೊತೆ ಸೇರಿಕೊಂಡು ಲಕ್ಷ್ಮಣ ಗಂಗಾ ಎಂಬ ಹೆಸರಿನಲ್ಲಿ ಹರಿಯುತ್ತದೆ. ಚಾರಣದ ಹಾದಿಯಲ್ಲಿ ಸಿಗುವ ಭ್ಯೂನ್ದರ್ ಹಳ್ಳಿಯ ಬಳಿ ಹೀಗೆ ಕರಗಿ ನೀರಾಗಿ ನಿರ್ಮಾಣಗೊಂಡ ಝರಿಯು ನಮ್ಮ ಕಾಲುಬುಡಕ್ಕೆ ಹರಿಯುವುತ್ತದೆ. ಆ ಕೊರೆವ ತಣ್ಣನೆಯ ಶುಭ್ರ ಸ್ವಚ್ಛ, ಖನಿಜಯುಕ್ತ ರುಚಿಕರ ನೀರನ್ನು ಕುಡಿದು ಅನುಭವಿಸುವ ಸುಖವೇ ಬೇರೆ!! ಒಮ್ಮೊಮ್ಮೆ ಹೀಗೆ ಬಂದು ಹಾಗೆ ಹೋಗುವ ಜಿನುಗು ಮಳೆ, ಮರುಕ್ಷಣಕ್ಕೆ ಬಿಸಿಲ ಹೊಳಪು, ಮತ್ತಷ್ಟು ಮಗದಷ್ಟು ಅಲ್ಲಿನ ಸೌಂದರ್ಯವನ್ನೆನ್ನೋ ಹೆಚ್ಚಿಸುತ್ತಿತ್ತು. ಆದರೆ ಮೇಲೇರಿದಂತೆ ವಾತಾವರಣಕ್ಕೆ ತಕ್ಕಂತೆ ಚಳಿಯೂ ಕೂಡ ಹೆಚ್ಚುತ್ತಾ ಹೋಗುತ್ತಿತ್ತು. ಹಾದಿ ಕಠಿಣವಾದಂತೆಯೂ ಪದೇ ಪದೇ ನೀರಿನ ಗುಟುಕನ್ನು ಕುಡಿದು ಉಸಿರಾಟದ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಂತೂ ಕುಡಿಯುವ ನೀರಿಗೆ ಕೈಯೊಡ್ಡಿದರೆ ಕೈ ಮರಗಟ್ಟುವ ಪರಿಸ್ಥಿತಿ. ಸಾಕಷ್ಟು ಜನರಿಗೆ ಮೌಂಟೇನ್ ಸಿಕ್ನೆಸ್ ಅಂದರೆ ಪರ್ವತಗಳಂತಹ ಎತ್ತರದ ಪ್ರದೇಶಕ್ಕೆ ಹೋಗುತ್ತಿದ್ದಂತೆಯೂ ಒತ್ತಡದಿಂದಾಗಿ ತಲೆನೋವು, ವಾಕರಿಕೆ, ವಾಂತಿ, ತಲೆಸುತ್ತುವಿಕೆ, ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಜೊತೆಗಿದ್ದ ಗೆಳತಿಗೆ ಅಷ್ಟು ತೀವ್ರವಾಗಿಯಲ್ಲದಿದ್ದರೂ ಹೊಟ್ಟೆನೋವಿನ ಸಮಸ್ಯೆ ಎದುರಾಗಿ ಆದಷ್ಟು ಸಾವಕಾಶವಾಗಿ ಚಾರಣ ನಡೆಸಿಕೊಂಡು ಬಂದೆವು. ಕೊನೆಗೂ ೧೧ ಕಿಮೀ ನಷ್ಟು ಕಾಲ್ನಡಿಗೆ ಮುಗಿಸಿ, ಎತ್ತರೆತ್ತರ ಪೈನ್ ಮರಗಳ ಹಚ್ಚ ಹಸಿರು ಮುಚ್ಚಿಗೆಯಿಂದ ಮುಂದೆ ಸಾಗಿ ಬೇಸ್ ಕ್ಯಾಮ್ಪ್ ಘಾನ್ಗ್ಹರಿಯ ಊರಿನ ಬುಡವನ್ನು ತಲುಪುವಾಗ ಮುಂದಕ್ಕೆ ಅನಾವರಣಗೊಳ್ಳುತ್ತಿದ್ದ ಪ್ರಕೃತಿ ಸೌಂದರ್ಯ ಕಂಡು ಬಾಯಿ ಆಕ್ಷರಸಃ ತೆರೆದುಕೊಂಡಿತ್ತು. ಪರಿಸ್ಥಿತಿ ಅಯ್ಯಪ್ಪ-ಉಸ್ಸಪ್ಪ ಆಗಿದ್ದರೂ, ಡೆಸ್ಟಿನಿ ತಲುಪಿಯಾಯಿತೆಂದು ಎಲ್ಲರ ಮುಖದಲ್ಲೂ ಚಿಗುರೊಡೆದ ಮಂದಹಾಸ.. ಸಂಭ್ರಮ..!! ಕೇವಲ ಆರು ತಿಂಗಳುಗಳ ಕಾಲ ಜೀವಂತವಿರುವ(ಉಳಿದ ಆರು ತಿಂಗಳುಗಳು ಈ ಊರುಗಳು ಕೂಡ  ಹಿಮದಲ್ಲಿ ಆವೃತ್ತವಾಗುತ್ತದೆ) ಹೇಮಕುಂಡ್ ಮತ್ತು ವ್ಯಾಲಿ ಆಫ್ ಫ್ಲ್ಯಾವಾರ್ಸ್ ನ  ಬೇಸ್ ಕ್ಯಾಮ್ಪ್ ಸ್ಥಳವೆಂದೇ ಹೆಸರಾಗಿರುವ ಈ ಊರು ತನ್ನ ಹಿಂದಿರುವ ಹತ್ತಿರದ ಬೃಹದಾಕಾರದ ಹಿಮಾವೃತ್ತ ಶಿಖರಗಳು, ಸುಂದರವಾಗಿ ಹರಿಯುತ್ತಿರುವ ಜಲಪಾತ, ಹಿಮನದಿಯನ್ನು ದಾಟಲೆಂದು ಕಟ್ಟಿಟ್ಟ ಕಾಲುಸೇತುವೆ ಹೀಗೆ ಬ್ಯಾಕ್ ಗ್ರೌಂಡಿನಲ್ಲಿ ಮತ್ತಷ್ಟು ಸುಂದರವಾದ ಪ್ರಕೃತಿಯ ಸೊಬಗಿನೊಡಗೂಡಿ ಅದೊಂದು ಪೈಂಟಿಗ್ ಎನ್ನುವಂಥ ಭಾವನೆ ನೀಡುತ್ತಿತ್ತು..ಅದನ್ನು ಕಂಡು ಬಳಲಿಕೆಯ ಮಧ್ಯೆಯೂ ಹೊಸ ಚೈತನ್ಯವನ್ನು ಪಡೆದ ಅನುಭವ..! ಪ್ರಾರಂಭದಲ್ಲೇ ಚಾಪರ್ ಬಂದಿಳಿಯುವ ಹೆಲಿಪ್ಯಾಡ್, ಒಂದಷ್ಟು ಬೇಸ್ ಕ್ಯಾಮ್ಪ್ ಟೆಂಟ್ಗಳು ಕಾಣ ಸಿಗುತ್ತವೆ. ಪ್ರವಾಸೋದ್ಯಮಕ್ಕೆ ಸಂಬಂಧ ಪಟ್ಟಂತೆಯೇ ಪ್ರತಿಯೊಬ್ಬರ ಕಾಯಕ..ಸುಮಾರು 50-60 ಕಟ್ಟಡಗಳು ಇರುವಂತಹ ಪುಟ್ಟ ಊರಿದು.  ಹಾಸ್ಟೆಲ್ ಮಾದರಿಯ ತಂಗಲು ವ್ಯವಸ್ಥೆ ಸಿಗಬಹುದಾದ ಹೋಟೆಲ್ಗಳು, ನಾನಾ ಬಗೆಯ ತಿಂಡಿಗಳ ಅಂಗಡಿಗಳು, ಕಿರಾಣಿ ಅಂಗಡಿಗಳು, ಪ್ರವಾಸೀ ಸಂಬಂಧಿ ಗೈಡಿಂಗ್ ಆಫೀಸುಗಳು ಒಳಗೊಂಡಿರುವ  ಅಂಗಡಿ ಮುಕ್ಕಟ್ಟು ಹೋಟೆಲ್ಗಳಿರುವ ಈ ಊರಿನ ಹಿಂದೆ ಬ್ರಹದಾಕಾರದ ಹಿಮಾವೃತ್ತ ಬೆಟ್ಟಗಳು ಮತ್ತಷ್ಟು ಹತ್ತಿರದಿಂದ ಕಾಣುತ್ತಿದ್ದು, ಅಂತಹ ಬಳಲಿಕೆಯ ಮಧ್ಯೆಯೂ ಹೊಸಚೈತನ್ಯವನ್ನು ನೀಡಿತ್ತು.. ಬಳಲಿದ ಕಾಲುಗಳಿಂದ ಹೆಜ್ಜೆ ಊರಿಕೊಂಡು ಮುಂದೆ ಸಾಗಿ ನಮ್ಮ ಹೋಟೆಲ್ ಅನ್ನು ತಲುಪಿದೆವು. ಹಾಂ ! ಹಾಗೆಂದು ಹೋಗಿ ಮಲಗಿಬಿಟ್ಟಿದ್ದೆನಲ್ಲ, ಸುಧಾರಿಸಿಕೊಂಡು ಲಘು ಸ್ನಾಕ್ಸ್ ನಂತರ ಮತ್ತೆ ಘಾನ್ಗ್ಹರಿಯ ಊರನ್ನು ಅನ್ವೇಷಿಸಲು ಹೊರಟದ್ದೇ..ಹೇಳಿಕೇಳಿ ಹಿಮಾವೃತ್ತ ಬೆಟ್ಟದ ಹತ್ತಿರದ ಸ್ಥಳ.. ಕೊರೆವ ಚಳಿ ಹಲ್ಲನ್ನು ಕೂಡ ಕಟಗುಡಿಸುತ್ತಿತ್ತು.. ಅದಕ್ಕೆ, ತಿಂಡಿ ಅಂಗಡಿಗಳ ಬಿಸಿ ಬಿಸಿ ದೂಧ್, ಬಿಸಿ ಬಿಸಿ ಜಿಲೇಬಿ, ಜಾಮೂನುಗಳನ್ನು ಹೊಂದಾಣಿಸಿದೆವು.. ಹತ್ತಿರದ ಗುರುದ್ವಾರಕ್ಕೆ ಭೇಟಿ ನೀಡಿ, ನಮಸ್ಕರಿಸಿ ಅಲ್ಲಿ ಸಂಜೆ ೭ ಗಂಟೆಗೆ ನೀಡುವ   ಸ್ಪೆಷಲ್ ಪ್ರಸಾದವನ್ನು ಮರೆಯದೇ ಪಡೆದು ತಿಂದು ಧನ್ಯರಾದೆವು.. ಮತ್ತೊಂದಷ್ಟು ಸಂಗಡಿಗರ ಜೊತೆ ಕಥೆ, ಹರಟೆ, ರಾತ್ರಿಯ ಊಟ, ಹೆಲ್ತ್ ಚೆಕ್ ಅಪ್ಸ್ ಗಳ ರೂಡಿ ಮುಗಿಸಿ ಅಂದಿನ ರೋಚಕ ದಿನವನ್ನು ಕೊನೆಗೊಳಿಸಿದೆವು.

ಗುರುವಾರ, ಆಗಸ್ಟ್ 15, 2019

some-ಬಂಧಗಳು

 ಉತ್ತರಾಖಂಡದ ಕೆಲವು ಸ್ಥಳಗಳಿಗೆ ಟ್ರೆಕ್ಕಿಂಗ್ ಹೋಗಲು ಏಜೆನ್ಸಿ ಒಂದರಿಂದ ಬುಕ್ ಮಾಡಿಕೊಂಡಿದ್ದೆವು. ಹೃಷಿಕೇಶ್ ಹತ್ತಿರದ ತಪೋವನ್ ಎಂಬ ಸ್ಥಳದಿಂದ ನಮ್ಮ ಪಿಕ್ಅಪ್ ನಿಗದಿಯಾಗಿತ್ತು. ಹರಿದ್ವಾರದಿಂದ ಚಾರಣಿಗರನ್ನೆಲ್ಲ ಕರೆದುಕೊಂಡು ಹೊರ

ಟ ಟಿ.ಟಿ ಯಲ್ಲಿ ಸ್ಥಳವಿಲ್ಲದ್ದರಿಂದ, ಅವರದ್ದೇ ಇನ್ನೊಂದು ವಾಹನ, ಹಿಂದಕ್ಕಿದ್ದ ಟಾಟಾ ಸುಮೋದಲ್ಲಿ ನನ್ನನ್ನು ಮತ್ತು (ಲಕ್ಷ್ಮಿ) ಚಿನ್ನಕ್ಕಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದರು.ಅನೇಕ ಸ್ಥಳಗಳಿಗೆ ಫ್ಯಾಮಿಲಿ ಟ್ರಿಪ್ಸ್ ಓಡಾಡಿದ್ದೆ ಆದರೆ ಮನೆಯಿಂದ ಈ ರೀತಿಯಾಗಿ ಒಬ್ಬಳೇ ಹೊರಟಿದ್ದು ಇದೇ ಮೊದಲ ಅನುಭವ. ಚಾರಣದ ಸ್ಥಳ, ಚಾರಣಿಗರ ಸಂಗಡ, ಅಲ್ಲಿ ದೊರಕಬಹುದಾದ ಸುರಕ್ಷೆ, ವ್ಯವಸ್ಥೆ ಅವ್ಯವಸ್ಥೆಗಳ ಕುರಿತು ಒಂದು ಚೂರು ಅಳುಕು ಇದ್ದದ್ದೂ ನಿಜ.. ಮಳೆಯ ಪರಿಣಾಮವಾಗಿ (ಮಳೆ ಹೆಚ್ಚಾದಾಗ ಯಾವ ಸಮಯಕ್ಕೆ ಯಾವ ರಸ್ತೆಗೆ ಯಾವ ಗುಡ್ಡಗಳು ಕುಸಿದು ಬೀಳುತ್ತವೆ ಎಂದು ಹೇಳಲಾಗದಂತಹ ಪರಿಸ್ಥಿತಿ) ಸುಧೀರ್ಘ 1.5 ತಾಸಿನ ಕಾಯ್ವಿಕೆಯ ನಂತರ ಬಂದು ತಲುಪಿದ ಗಾಡಿಯನ್ನು ಹತ್ತಿ ಕುಳಿತೆವು. ಪಕ್ಕಕ್ಕೆ ನೋಡಿದರೆ ಇಬ್ಬರು ದೈತ್ಯಾಕಾರದ ವ್ಯಕ್ತಿಗಳು. ಮಳೆಯ ರೈನ್ಕೋಟ್, ಬೆನ್ನಿಗೆ ಹೊತ್ತಿದ್ದ ದೊಡ್ಡ ಬ್ಯಾಗ್, ನಮ್ಮ ನೀರಿನ ಬಾಟಲ್, ಕ್ಯಾಮೆರಾ ಎಲ್ಲವನ್ನೂ ಒಂದು ಹಂತಕ್ಕೆ  ಜೋಡಿಸಿ ಎತ್ತಿಟ್ಟು, ಕುಳಿತುಕೊಳ್ಳಲು ಸ್ಥಳವನ್ನೆಲ್ಲ ಸರಿ ಮಾಡಿಕೊಂಡದ್ದಾಯಿತು. ನಮಗೋ ಆ ಕಡೆ ಈ ಕಡೆ ಪ್ರಕೃತಿಯ ಸೌಂದರ್ಯ ನೋಡಿ ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು. ನಾನು ಚಿನ್ನಕ್ಕ ಒಂದಷ್ಟು ಹೇಳಿಕೊಂಡು ಸಂಭ್ರಮ ಪಟ್ಟೆವು. ತಿರುಗಿ ನೋಡಿದರೆ ಇವರಿಬ್ಬರದು ಮುಖದಲ್ಲಿನ ಒಂದು ಗೆರೆಯೂ ಅಲ್ಲಾಡದಂತಹ ಗಂಭೀರ ಮೌನ!  ನಮ್ಮಿಬ್ಬರದು ನಿಲ್ಲದ ಸಂಭಾಷಣೆಯಾದರೆ, ಈ ಅಜಾನುಭಾಹುಗಳದ್ದು ಕಿಟಕಿಯಾಚೆಗಿನ ಕೇವಲ ಕಣ್ಣೋಟದ ಚಟುವಟಿಕೆಯಷ್ಟೇ.. ಈ ಗಂಭೀರ ವದನರನ್ನು ನೋಡಿ, ಕಡೆಗೂ ಸಾಕಾಗಿ, ಚಾರಣಿಗರನ್ನು ಪರಸ್ಪರ ಪರಿಚಯ ಮಾಡಿಕೊಳ್ಳುವುದು ಉತ್ತಮವೆನಿಸಿ, ಮೌನ ಮುರಿದದ್ದಾಯಿತು. ಪರಸ್ಪರ ಪರಿಚಯದ ನಾಲ್ಕು ಸಾಲುಗಳು ವಿನಿಮಯಗೊಂಡವು. ಸೌಮ್ಯ ಯಾರು, ಲಕ್ಷ್ಮಿ ಯಾರು, ಅಜಯ್ ಯಾರು, ತುಷಾರ್ ಯಾರು ಎಂಬೆಲ್ಲ ಕನ್ಫ್ಯೂಷನ್ ನೀಗಿಸಿ, ನಾವು ಕರ್ನಾಟಕದವರು ಎಂದೆಲ್ಲ ತಿಳಿಸಿ ಅವರ ಊರ್ಯಾವುದೆಂದು ಕೇಳಿದಾಗ, 'ಹಮ್ ಲೋಗ್ ಕುರುಕ್ಷೇತ್ರ್ ಸೆ ಹೈ.." ಎಂದ ಅವರಲ್ಲೊಬ್ಬ.. ಅಷ್ಟೇ ನೋಡಿ! ನನಗೋ ಡಿಡಿ ನ್ಯಾಷನಲ್ ನಲ್ಲಿ ಬರುತ್ತಿದ್ದ ಮಹಾಭಾರತ್ ಹಾಡಿನ ಟೈಟಲ್ ಮ್ಯೂಸಿಕ್, ಆ ಯುದ್ಧದ ಚಿತ್ರಗಳು, ವಿಲ್ಲನ್ಗಳು ಎಲ್ಲಾ ಟಕಟಕಟಕ ಎಂದು ನನ್ನ ಕಂಪ್ಯೂಟರ್ ಕೀ ಬೋರ್ಡ್ ಕುಟ್ಟುವ ಶಬ್ಧದಂತೆ ಒಂದಾದ ಮೇಲೊಂದರಂತೆ ತಲೆಯಲ್ಲಿ ಓಡತೊಡಗಿದವು.. ಅಂತೂ ಸಾವರಿಸಿಕೊಂಡು ವಾಸ್ತವಕ್ಕೆ ಮರಳಿ ಮಾತನ್ನು ಮುಂದುವರೆಸಿ, ಅಷ್ಟಿಷ್ಟು ಸುದ್ದಿ ಹೇಳುತ್ತಾ ಮುಂದುವರೆಯಿತು ನಮ್ಮ ನಾಲ್ಕು ಜನರ ಪ್ರಯಾಣ. ಹಿಂದಿ ಸುಲಲಿತವಾಗಿ ಮಾತನಾಡಬಲ್ಲವರಾದ್ದರಿಂದ ನಮಗೆ ಭಾಷೆಯ ಸಮಸ್ಯೆ ತಲೆದೋರಲಿಲ್ಲ. ನಂತರಕ್ಕೆ ತಿಳಿದ ವಿಷಯವೆಂದರೆ ಅವರಿಬ್ಬರೂ ಹರ್ಯಾಣ ಬಿಟ್ಟು ಹೆಚ್ಚು ಹೊರಗೆ ಹೋದವರಲ್ಲ. ಕರ್ನಾಟಕವಂತೂ ಉಂಹೂಂ ಈ ಕಡೆಗೂ ತಲೆ ಹಾಕಿಯೂ ಮಲಗಿಲ್ಲ.. ಕನ್ನಡ ಈ ಹಿಂದೆ ಕೇಳಿಯೇ ಇಲ್ಲ.. ಆಲೈಸಿದರೂ, ನಮ್ಮ ಮಾತುಕತೆ ಅವರಿಗೆ ಒಂದಾಕ್ಷರವೂ ಅರ್ಥವಾಗುತ್ತಿರಲಿಲ್ಲ. ಭಾಷೆಯ ಸಮಸ್ಯೆಗಾಗಿ ಅವರಿಬ್ಬರು ಅಷ್ಟು ಮೌನ ಯೋಗಿಗಳಾದ್ದು.. :) ಅಂದೇ ರೋಡಿನ 12 ತಾಸಿನ ಪ್ರಯಾಣವಿದ್ದುದರಿಂದ ರಾತ್ರೆ ಪಾಂಡುಕೇಶ್ವರ್ ತಲುಪುವಷ್ಟರಲ್ಲಿ ಅವರಿಬ್ಬರು ಒಳ್ಳೆ ಸ್ನೇಹಿತರಾದರು. ನಾಡು-ನುಡಿ, ಆಚರಣೆ-ಸಂಸ್ಕೃತಿ ಎಲ್ಲವೂ ಭಿನ್ನವಾಗಿದ್ದರಿಂದ ಹಾದಿಯುದ್ದಕ್ಕೂ ನಮಗೆ ಮಾತನಾಡಲು ಚರ್ಚಿಸಲು ಅನೇಕ ವಿಷಯಗಳು ದೊರೆತವು. ಮುಂದಿನ 5 ದಿನಗಳು ಇತರ 25 ಚಾರಣಿಗರ ಜೊತೆ ಇವರುಗಳು ನಮ್ಮ ಜೊತೆ ಚೆನ್ನಾಗಿಯೇ ಬೆರೆತರು. ಇವರೆಲ್ಲರ ಜೊತೆ ಸಂಜೆ ಕೂತು ಹರಟುತ್ತಿದ್ದೆವು. ನಗು-ತಮಾಷೆ, ಕಾಲೆಳೆಯುವುದು ಎಲ್ಲವೂ ನಮ್ಮ ಪ್ರವಾಸದ ಚಾರಣದ ಪ್ರಯಾಸವನ್ನು ಮರೆಸುತ್ತಿತ್ತು. ಮೊದಲ ದಿನ ಮೊದಲ ಕ್ಷಣ ಮ್ಯಾಮ್ ಎಂದು ಮಾತನಾಡಿಸಿದವರು, ಕಡೆಗೆ ಸೌಮ್ಯ ಲಕ್ಷ್ಮೀ ಎಂದು ಹೆಸರಿಡಿದು ಕರೆಯುತ್ತಿದ್ದರು. ಇನ್ನೂ ಹೆಚ್ಚಿನ ಪರಿಚಯವಾದಂತೆ ಸಲಿಗೆ ಯಿಂದಲೇ ಒಂದಷ್ಟು ನಮ್ಮಿಂದ ಕನ್ನಡ ಪದಗಳನ್ನು ಕಲಿತರು. 'ತುಂಬಾ ಚೆನ್ನಾಗಿದೆ' ಎಂದು ಹೇಳಲು ಕಲಿತದ್ದು ಮೊದಲ ಪಾಠ. ಅದು ಸರಿ ಕೂಡ. ಏಕೆಂದರೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು, ಮೇಲೆ ಮೇಲೆ ಹತ್ತಿದಂತೆ ಗೋಚರವಾಗುತ್ತಿದ್ದ ಆ ಸೊಬಗನ್ನು ಹೊಗಳಲು ಒಂದೆರಡು ಭಾಷೆಯ ಪದಗಳು ಸಾಲುತ್ತಿರಲಿಲ್ಲ. ಹೀಗೆ ಒಂದೊಂದೇ ಕನ್ನಡ ಪದಗಳನ್ನು ನಮ್ಮಿಂದ ಕಲಿಯುವುದು, ನಮ್ಮ ಹಿಂದಿ ವ್ಯಾಕರಣ ತಪ್ಪಿದಾಗ ಸರಿಮಾಡುವುದು ಎಲ್ಲವೂ ಜೊತೆಜೊತೆಯಲ್ಲೇ ಸಾಗಿತ್ತು. ಒಂದು ದಿನ ತುಷಾರ್ ಮತ್ತು ಅಜಯ್ ಇಬ್ಬರೂ ನಮ್ಮ ಬಳಿ ಬಂದು, ಹಿರಿಯ ಕಿರಿಯ ಸಹೋದರ ಸಹೋದರಿಯರಿಗೆ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ಕೇಳಿಕೊಂಡು 4-5 ಸಲ ಅಭ್ಯಾಸಿಸಿ ಆ ನಂತರಕ್ಕೆ ನನಗೆ 'ಅಕ್ಕಾ..' ಎಂದೂ ಲಕ್ಷ್ಮಿಗೆ 'ಚಿನ್ನಕ್ಕ' ಎಂದೂ ಕರೆಯಲಾರಂಭಿಸಿದ್ದರು. ಒಂದೊಳ್ಳೆಯ ಸ್ನೇಹ ದೊರೆತಿತ್ತು ಅವರಿಬ್ಬರು ಸಹೋದರರಿಂದ..ಜೊತೆಗೆ ಅದೊಂದು ರೀತಿಯ ಖುಷಿ ನಮಗೆ ಕನ್ನಡದಲ್ಲಿ ಕರೆಸಿಕೊಳ್ಳಲು. ಆದರೆ ಬಳಕೆಯೇ ಇಲ್ಲದ ಪದಗಳನ್ನು ಮತ್ತೆ ಮತ್ತೆ ಮರೆಯುತ್ತಿದ್ದರವರು. ಅವರ ಪೇಚಾಟ ನೋಡಿ 'Its OK, aap hamhe sis ya deedi bulaasakteho' ಎಂದಿದ್ದೆ ಒಂದು ದಿನ. 'I can, but u seem so happy when I call u so Akka..' ಎಂದಿದ್ದ (ತೀರಾ ಪುಟ್ಟಕ್ಕಿಲ್ಲದ) ಆ ಹುಡುಗ ತುಷಾರ್. ವಾಪಸು ಹರಿದ್ವಾರಕ್ಕೆ ಮರಳುವಾಗ ಜೋಷಿಮಠ ಎಂಬ ಊರು ಸಿಗುತ್ತದೆ. ಅಲ್ಲಿ ನಮ್ಮ ಶಂಕರಾಚಾರ್ಯರ ಮಠವಿದೆ. ಅದು ನಮ್ಮ ಟ್ರಿಪ್ ಪ್ಯಾಕೇಜ್ ನ ಇಟರ್ನರಿ ಯಲ್ಲಿರಲಿಲ್ಲ. ಆದರೆ ನಮ್ಮಿಬ್ಬರಿಗೆ ಅದನ್ನೊಂದು ನೋಡುವ ಆಸೆ. ಹೇಳಿಕೊಂಡಿದ್ದೆವು ಮುಂಚಿತವಾಗಿಯೇ ಒಮ್ಮೆ ಸಾಧ್ಯವಾದರೆ ಅಲ್ಲಿಗೆ ಹೋಗಬೇಕೆಂದು. ನಮ್ಮಗಳ ಆಸೆ ನೆರವೇರಿಸಲು ಪುನ್ಹ ಇವರುಗಳೇ ನಮ್ಮ ಜೊತೆಗಾರರಾಗಿ ಹರಿದ್ವಾರಕ್ಕೆ ಬರುವ ಗಾಡಿಗೆ ಬಂದು, ನಮ್ಮ ಜೊತೆ ಶಂಕರಾಚಾರ್ಯರ ಮಠಕ್ಕೆ ಭೇಟಿ ನೀಡಿ, ಅವರ ಅರಿವಿಗೆ ಗೊತ್ತಾಗುವಷ್ಟು ನಮ್ಮಷ್ಟೇ ಆಸಕ್ತಿಯಿಂದ ತಿಳಿದುಕೊಂಡರು. ಬೆಂಗಳೂರಿನ ಟ್ರಾಫಿಕ್ ನ್ನು ದಾಟಿಕೊಂಡು ಎಡೆಬಿಡದೆ ನಡೆಯಲು ಅಭ್ಯಾಸವಾಗಿರುವ ನನ್ನ ನಡಿಗೆಗೆ ಅವರಿಬ್ಬರೂ ಯಾವಾಗಲೂ ಹೌಹಾರಿ ಹೋಗುತ್ತಿದ್ದರು. ಎಲ್ಲಿ ನಾನು ಯಾವುದಾದರೂ ಗಾಡಿಗೆ ಗುದ್ದಿಕೊಳ್ಳೋತ್ತೇನೋ ಎಂಬ ಅಳುಕು ಅಜಯ್ ಗೆ.. ಒಂದೆರಡು ಸಲ ಆಳೆತ್ತರದ ಆ ಮನುಷ್ಯ ನನ್ನ ನಡಿಗೆಯ ಸ್ಪೀಡಿಗೆ ಬಂದು, ಕೈಹಿಡಿದು ರಸ್ತೆ ಬದಿಗೆ ಎಳೆದು ಕೊಳ್ಳುತ್ತಿದ್ದ :P ಚಾರಣ ಮುಗಿಸಿದ ನಂತರ ಟ್ರೆಕ್ ಏಜೆನ್ಸಿಯವರು ನಮ್ಮನ್ನು ಹರಿದ್ವಾರಕ್ಕೆ ಬಿಟ್ಟು ಹೋಗುತ್ತಾರೆ. ರಾತ್ರಿ ಅಲ್ಲೇ ಹೊಟೇಲವೊಂದರಲ್ಲಿ ತಂಗಿದ್ದು,  ಮರುದಿನ ಡೆಹ್ರಾಡೂನ್ ನಿಂದ ಬೆಂಗಳೂರಿಗೆ ಫ್ಲೈಟ್ ನಲ್ಲಿ ಪ್ರಯಾಣಿಸುವುದು ನಮ್ಮಿಬ್ಬರ ಪ್ಲಾನ್ ಆಗಿತ್ತು. ಮಳೆ ಎಲ್ಲೆಡೆ ಹೆಚ್ಚಾಗಿತ್ತು. ಈ ಸಹೋದರರು ಮಾತ್ರ ತಮ್ಮ ತಮ್ಮಲ್ಲಿಯೇ ಚರ್ಚಿಸಿಕೊಂಡು,ಹರಿದ್ವಾರದಿಂದ 5 ತಾಸಿನಲ್ಲಿ ತಮ್ಮ ಊರಿಗೆ ಅಂದೇ ಬಸ್ಸಿನಲ್ಲಿ ಪಯಾಣಿಸಬಹುದಾಗಿದ್ದರೂ ಹೋಗದೇ, ನಮ್ಮ ಜೊತೆ ಅಂದು ಅಲ್ಲಿಯೇ ತಂಗಿ, ಊಟ ,ರಾತ್ರೆಯ ಹರಿದ್ವಾರದ  ರಸ್ತೆಗಳಲ್ಲಿ ಓಡಾಟ, ಅಲ್ಲಿನ ಪ್ರಸಿದ್ಧ ಬಿಸಿ ಬಿಸಿ ದೂಧ್, ಚಾಟ್ಸ್ ಎಲ್ಲವಕ್ಕೂ ಸಾಥ್ ನೀಡಿ ಮರುದಿನ ಬೆಳಿಗ್ಗೆ ಮುಂಜಾವಿನಲ್ಲಿ ಟಾಟಾ ಬೈಬೈ ಹೇಳಿ  ಮುಂದೆ ಸಾಗಿದರು. ಅಷ್ಟಕ್ಕೂ ಮುಗಿದಿರಲಿಲ್ಲ ಆ ತಮ್ಮಂದಿರ ಕೇರಿಂಗ್!! ಸುಪ್ರಸಿದ್ಧ ಗಂಗಾರತಿ ಒಮ್ಮೆ ನೋಡಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಹರಿದ್ವಾರದ ಸಂಜೆಯ ಆರತಿ ತುಂಬಾ ಫೇಮಸ್. ಅದು ಹಿಂದಿನ ದಿನ ನಾವು ತಲುಪುವ ಸಮಯ ತಡವಾದ್ದರಿಂದ ನಮಗೆ ಸಿಗಲಿಲ್ಲ. ಬೆಳಗ್ಗೆ ಒಂದು ಚಿಕ್ಕದಾಗಿ ಆರತಿ ಇರುತ್ತದೆ ಎಂಬ ಮಾಹಿತಿಯ ಪಡೆದುಕೊಂಡು, ಬೆಳಿಗ್ಗೆ 5 ಗಂಟೆಗೆ ಹರ್ ಪೌರಿ ಘಾಟ್ ಗೆ ನಾನು ಒಬ್ಬಳೇ ಹೊರಟಿದ್ದೆ. ಸೈಕಲ್ ಟಾಂಗಾ ಅಲ್ಲಿನ ಸರ್ವೇಸಾಮಾನ್ಯ ಸವಾರಿ. ಆರತಿ ನೋಡಿ ಮತ್ತೆ ವಾಪಸು ಹೋಟೆಲ್ ಗೆ ಬರುವವರೆಗೆ, ತಾನು ಬಸ್ಸಿನಲ್ಲಿ ಊರಿಗೆ ಪ್ರಯಾಣಿಸುತ್ತಿದ್ದರೂ, ಮೊಬೈಲಿನ ಚಾಟ್ ಕಿಟಕಿಯಲ್ಲಿದ್ದು ಕ್ಷಣಕ್ಷಣಕ್ಕೆ ನನ್ನ ಕಾಯ್ದಿದ್ದ ತಮ್ಮ ತುಷಾರ್!









ಇಷ್ಟೆಲ್ಲ ಕಥೆ ಏಕೆ ನೆನಪಿನ ಬುಟ್ಟಿಗೆ ಹಾಕಿದೆಯೆಂದರೆ, ಇಂದು ರಕ್ಷಾಬಂಧನ ಹಬ್ಬ, ಕನ್ನಡದಲ್ಲಿ 'ರಕ್ಷಾಬಂಧನದ ಶುಭಾಷಯಗಳು' ಎಂದು ಬರೆದು ಮೆಸೇಜ್ ಕಳಿಸಿದ್ದಾನೆ ತುಷಾರ್. ಬೆಂಗಳೂರಿಗೆ ಬನ್ನಿ ಎಂದು ಆಹ್ವಾನವಿತ್ತು ಬಂದವಳಿಗೆ, ನಾವು ಆ ಕಡೆಗೆಲ್ಲ ಬರುವ ಚಾನ್ಸ್ ಇಲ್ಲ ಎಂದು ಅಜಯ್ ಹೇಳಿದ್ದನಾದರೂ, MBA ಮಾಡಲು ಅಣಿಯಾಗುತ್ತಿರುವ ತುಷಾರ್ 'ಅಕ್ಕ, I will try to come to Bangalore and meet u' ಎಂದು ತಿಳಿಸಿದ್ದಾನೆ.. ಸಂಬಂಧಗಳು ಎಲ್ಲಿ ಹೇಗೆ ಹುಟುತ್ತವೆಯೋ, ಏನಾದರಾಗಲಿ ಈ ಒಂದು ಪ್ರವಾಸದಿಂದ ಮನಸ್ಸು ತುಂಬಾ ಖುಷಿ ನೆನಪುಗಳ ಜೊತೆಯಲ್ಲಿ ಎರಡು ಪುಟ್ಟ ಪುಟ್ಟ ಅಲ್ಲ ದೊಡ್ಡ ದೊಡ್ಡ ತಮ್ಮಂದಿರನ್ನು ಪಡೆದು ಬಂದಿದ್ದೇನೆ. ಖುಷಿ ಖುಷಿ :) :)