ಶುಕ್ರವಾರ, ಸೆಪ್ಟೆಂಬರ್ 15, 2023

ರಂಗೋಲಿಯೊಂದು ಧ್ಯಾನ!

ಮುಂಜಾನೆ  ವಾಕಿಂಗ್ ಹೋಗುವಾಗ ಹೆಂಗಳೆಯರು ಬಾಗಿಲ ಹೊರಗೆ, ಅಂಗಳಕ್ಕೆ ರಂಗೋಲಿ ಹಾಕುವ ದೃಶ್ಯ ಸರ್ವೇ ಸಾಮಾನ್ಯ.  ಅದರಲ್ಲೂ ಈಗ ಹಬ್ಬದ ಸೀಸನ್. ಬಗೆಬಗೆಯ ಸುಂದರ, ಬಣ್ಣ ಬಣ್ಣದ ದೊಡ್ಡ ರಂಗೋಲಿಗಳು ಮನಸ್ಸನು ಮುದಗೊಳಿಸುತ್ತದೆ. ಮನೆ ಮುಂದೆ ರಂಗೋಲಿ ಹಾಕುವುದು ಭಾರತೀಯರ ಬಹಳ ಹಳೆಯ ಸಂಪ್ರದಾಯ. ಒಂದು ಆಚರಣೆಯಾಗಿ ಇದನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆಯಾದರೂ ಇದರ ಹಿಂದಿರುವ ವೈಜ್ಞಾನಿಕ ಕಾರಣ ಅನೇಕರಿಗೆ ತಿಳಿದಿಲ್ಲ.ರಂಗೋಲಿ ಕಂಡಾಗ ಮನಸ್ಸು ಅರಳುವುದೇಕೆ? ರಂಗೋಲಿ ಹಾಕುವುದರಿಂದ ನಮಗೆ ಏನಾದರೂ ಲಾಭ ಇದೆಯಾ? ಓದೋಣ ಬನ್ನಿ.  


ಈ ರಂಗೋಲಿ ಹಾಕುವುದು ಎನ್ನುವುದು ಮನೆಮನೆಗಳಲ್ಲಿ ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿರುವ ಒಂದು ನಿತ್ಯ ಸಂಪ್ರದಾಯ. ಈಗೀಗ ಸಮಯವಿಲ್ಲದ ಬದುಕಿಗೆ, ಆಧುನಿಕತೆಗೆ, ರಂಗೋಲಿ ಹಾಕುವ ಗೋಜಿಗೆ ಹೋಗದೆ, ರಂಗೋಲಿ ಸ್ಟಿಕ್ಕರ್ಗಳನ್ನು ಬಾಗಿಲ ಹೊರಗೆ ಅಂಟಿಸುವ ಪರ್ಯಾಯ ಮಾರ್ಗವನ್ನೂ ನಾವು ಪಡೆದಿದ್ದೇವೆ. ಆದರೂ, ಯಾವುದೇ ಧಾರ್ಮಿಕ ಆಚರಣೆ ಇರಲಿ, ಹಬ್ಬ ಹರಿದಿನಗಳು ಇರಲಿ ಅವೆಲ್ಲ ದೇವರನ್ನು ಆದರಿಸುವ ತತ್ವಕ್ಕೆ ಸಂಬಂಧಿಸಿರುವುದರಿಂದ, ಕೈಯಾರೆ ರಂಗೋಲಿ ಹಾಕುವುದು ಶುಭದ ಸಂಕೇತವೆಂದು,  ಕಾರ್ಯಕ್ರಮದ ಸೌಂದರ್ಯದ ಅವಶ್ಯಕತೆಯೆಂದು ಪರಿಗಣಿಸಲಾಗುತ್ತದೆ. 

ರಂಗೋಲಿಯೊಂದು ಧ್ಯಾನ!

ಸಂಸ್ಕೃತ ಪದ' ರಂಗವಲ್ಲಿ'ಯಿಂದ ರೂಪಾಂತರಗೊಂಡಿರುವ ರಂಗೋಲಿ ಪ್ರಾಚೀನ ಭಾರತೀಯ ಕಲೆ, ಶಿಲ್ಪಕಲೆ ಹಾಗೂ ವರ್ಣಚಿತ್ರಗಳಿಗಿಂತಲೂ ಹಿಂದಿನದ್ದು. ಹಬ್ಬಹರಿದಿನಗಳಲ್ಲಿ, ಮದುವೆ-ಮುಂಜಿ, ಧಾರ್ಮಿಕ ಪೂಜೆ ಯಂತಹ ಶುಭ ಕಾರ್ಯಗಳಲ್ಲಿ ಹಾಕುವಂತಹ ರಂಗೋಲಿಯು ಆ ಸ್ಥಳಕ್ಕೆ ಧಾರ್ಮಿಕ ಸ್ಪರ್ಶವನ್ನು ನೀಡುತ್ತದೆ. ಸಾತ್ವಿಕ ಅಥವಾ ದೈವಿಕ ರಂಗೋಲಿಗಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಕುತ್ತಾರೆ .ಇಂತಹ ರಂಗೋಲಿಗಳಿಗೆ ಆಯಾ ದೇವತೆಗಳಿಗೆ ಸಂಬಂಧಪಟ್ಟ ಆಕೃತಿ, ಬಣ್ಣ ಕುರಿತಾದ ನಿಯಮಗಳಿರುತ್ತದೆ.  ಈ ರಂಗೋಲಿಯ ದೇವತಾತತ್ವದ ಪ್ರಸರಣದಿಂದಾಗಿ ಭಕ್ತರು ದೈವಿಕ ಶಕ್ತಿ, ಭಾವ(ಆಧ್ಯಾತ್ಮಿಕ ಭಾವನೆ), ಚೈತನ್ಯ(ದೈವಿಕ ಪ್ರಜ್ಞೆ), ಆನಂದ, ಶಾಂತಿ, ಹಾಗೂ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುತ್ತಾರೆ.. ರಂಗೋಲಿ ಹಾಕುವಾಗ ನಮ್ಮಲ್ಲಿ ಆಧ್ಯಾತ್ಮಿಕ ಶಾಂತಿ ದೊರೆಯುತ್ತದೆ. ಕೈಗಳಿಂದ ರಂಗೋಲಿ ಪುಡಿ ಅಥವಾ ರಂಗೋಲಿಯ ಸಾಮಗ್ರಿಗಳ ಬಳಸಿ, ಹಾಕುವ ರಂಗೋಲಿಗಳ ಬೇರೆ ಬೇರೆ ಆಕೃತಿಗಳು ಅದರಲ್ಲಿಯೂ ಚುಕ್ಕಿಗಳ ಏಕರೂಪದಲ್ಲಿ ಹಾಕಿ ಜೋಡಿಸುವುದು, ವರ್ತುಲ, ನೇರ ರೇಖೆ ಮತ್ತು ಬಾಗಿದ ರೇಖೆಗಳ ಸಮ್ಮಿತೀಯ ಚಿತ್ರಿಸುವಿಕೆ ಇತ್ಯಾದಿ ವೈಜ್ಞಾನಿಕವಾಗಿ ಏಕಾಗ್ರತೆಯನ್ನು ಬಿಂಬಿಸುತ್ತವೆ. ಹಸ್ತಮುದ್ರಿಕಾ ಹಾಗೂ ಯೋಗ ವಿಜ್ಞಾನದ ಪ್ರಕಾರ ರಂಗೋಲಿ ಹಾಕುವಾಗ ತೋರು ಬೆರಳಿನ ತುದಿಯನ್ನು ಹೆಬ್ಬೆರಳು ಮೃದುವಾಗಿ ಒತ್ತುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯು ಬಿಡುಗಡೆಯಾಗುವುದು. ಈ ಶಕ್ತಿಯು ಆತ್ಮವನ್ನು ಶುದ್ಧೀಕರಿಸುವುದಲ್ಲದೇ ರಕ್ತಪರಿಚಲನೆಗೂ ಸಹಾಯ ಮಾಡುತ್ತದೆ ಮನೆಯ ಬಾಗಿಲಿನಿಂದ ಒಳಗೆ ಪ್ರವೇಶಿಸುವವರ ಮನಸ್ಸಿನ ಮೇಲೆಯೂ ರಂಗೋಲಿಯು ಪ್ರಭಾವ ಬೀರುತ್ತದೆ. ಮನಸ್ಸಿಗೆ ಶಾಂತಿಯನ್ನು ನೀಡುವುದರ ಜೊತೆಗೆ ಮನೆಯ ಆಂತರಿಕ ಶಾಂತಿಯನ್ನೂ ಕಾಪಾಡುತ್ತದೆ. ನಿಮ್ಮ ಮನೋಸ್ಥಿತಿ ಬದಲಾಯಿಸಲು, ಮನಸ್ಸಿನ ಶಾಂತಿಯನ್ನು ಮರಳಿ ಪಡೆಯಲು ರಂಗೋಲಿ ಸಹಾಯಕ. 

ರಂಗೋಲಿ ಜನರ ಕ್ರಿಯಾತ್ಮಕತೆಗೆ  ಆತ್ಮವಿಶ್ವಾಸಕ್ಕೆ ಒಂದು ಸಾಧನ ಎಂದರೂ ತಪ್ಪಾಗಲಾರದು. ಮನೆಯ ಮುಂದೆ ರಂಗೋಲಿ ಇದ್ದರೆ ಅದರಲ್ಲಿನ ತರಂಗದಂತೆ ಹರಿದಿರುವ ರೇಖೆಗಳು, ವಿವಿಧ ಆಕಾರಗಳು  ಮನೆಯನ್ನು ಪ್ರವೇಶಿಸುವವನ ಮನಸ್ಸನ್ನು ಶಾಂತಗೊಳಿಸುತ್ತವೆ. ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಸಂತೋಷದ ನರಗಳನ್ನು ಪ್ರಚೋದಿಸುತ್ತವೆ. ಆಗ ಮನೆಗೆ ಬರುವ ಅತಿಥಿ ಖುಷಿ ಖುಷಿಯಾಗಿರುತ್ತಾನೆ.  ಅಂತೆಯೇ ಬಣ್ಣಗಳಿಗೂ ಭಾವಗಳ ಮೇಲೆ ಪ್ರಭಾವ ಬೀರುವ ಶಕ್ತಿಯಿದೆ. ಮೆದುಳಿನ ನರಗಳನ್ನು ಪ್ರಚೋದಿಸುವ ಮೂಲಕ ಸುಂದರ ಭಾವನೆಗಳನ್ನು ಉದ್ದೀಪಗೊಳಿಸುತ್ತವೆ. ಅದೆಷ್ಟೋ ಮಹಿಳೆಯರಿಗೆ,  ಅಚ್ಚುಕಟ್ಟಾದ  ರಂಗೋಲಿ ಹಾಕಲು, ಯಾವುದೇ ಅಚ್ಚು, ದಾರ, ಕುಂಚಗಳು ಬೇಕೇಬೇಕೆಂದಿಲ್ಲ. ಬೆರಳಿನ ಮೂಲಕವೇ ವಿವಿಧ ವಿಧವಾದ ರಂಗೋಲಿಗಳನ್ನು ಹಾಕಿ ತಮ್ಮ ಕೈಚಳಕವನ್ನು ತೋರಿಸುತ್ತಾರೆ. ಹಾಗಾಗಿ ಒಪ್ಪಓರಣವಾಗಿ ರಂಗೋಲಿ ಹಾಕುವವರೆಲ್ಲರೂ 'ಕಲಾವಿದರೇ'! 
.
ರಂಗೋಲಿಗಳಲ್ಲಿ ಬಗೆಗಳು :

ರಂಗೋಲಿ ಭಾರತೀಯ ಸಂಸ್ಕೃತಿಯಲ್ಲಿ ಒಂದು ಮಹತ್ವದ ಭಾಗವಾಗಿದೆ. ಆಕರ್ಷಣೀಯವಾಗಿಯೂ ಭವ್ಯವಾಗಿಯೂ ಕಾಣುವ ರಂಗೋಲಿಗಳು ಪ್ರಾದೇಶಿಕವಾಗಿ ವೈವಿದ್ಯತೆಯನ್ನು ಹೊಂದಿದೆ. ಕೆಲವರು ಸಗಣಿ ಸಾರಿಸಿ ನೆಲಕ್ಕೆ ರಂಗೋಲಿ ಹಾಕಿದರೆ, ಕೆಲವರು ಮನೆಯ ಟೈಲ್ಸ್ಮು ಮೇಲೆ, ದೇವರ ಮಣೆಯ ಸುತ್ತಲೂ ಅಲಂಕಾರಕ್ಕಾಗಿ ಹಾಕುತ್ತಾರೆ. ಅಷ್ಟೇ ಅಲ್ಲದೆ ಗೋಡೆಗಳ ಮೇಲೂ ರಂಗೋಲಿ ಡಿಸೈನ್ಖ್ಯ ಗಳನ್ನು ಬರೆಸಿಕೊಳ್ಳುವುದು ಈಗಿನ ಹೊಸ ಟ್ರೆಂಡ್ ಆಗಿದೆ. ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರ ಕಡೆಗೆ 'ರಂಗೋಲಿ; ಎಂದು ಕರೆಯಲ್ಪಡುವ ರಂಗವಲ್ಲಿ ಚಿತ್ತಾರ, ಪಶ್ಚಿಮ ಬಂಗಾಳದ ಕಡೆ, ಅಲ್ಪಾನ ಎಂದು ಕರೆಸಿಕೊಂಡರೆ, ಬಿಹಾರ್ ಕಡೆ ಅರಿಪನ್ ಎನ್ನುತ್ತಾರೆ. ಒಡಿಶಾದಲ್ಲಿ ಜೋತಿ ಚಿತಾ ಎಂದು ಕರೆಯಲ್ಪಡುವ ಬಿಳಿಯ ರಂಗೋಲಿಗಳು ಅಕ್ಕಿಯ ಪೇಸ್ಟ್ ನಿಂದ ತಯಾರಿಸಿದ ಬಿಳಿಯ ಬಣ್ಣಗಳನ್ನು, ಕೋಲಿನಿಂದ ಸುತ್ತಿದ ಬಟ್ಟೆಯಿಂದ ಒರೆಸಿಕೊಂಡು ಚಿತ್ತಾರ ಬರೆಯುವ ಪ್ರತೀತಿ ಅಲ್ಲಿದೆ. ತಮಿಳುನಾಡಿನ ಕೋಳಂ ಚುಕ್ಕಿ, ಬಳ್ಳಿ ರಂಗೋಲಿಗಳು ಹೆಚ್ಚು ಪ್ರಸಿದ್ಧ. ಹಾಗೆಯೇ ಮಹಾರಾಷ್ಟ್ರದ ಮುಷ್ಠಿ ರಂಗೋಲಿ ಕೈಯ ಸಂಪೂರ್ಣ ಮುಷ್ಟಿಯಲ್ಲಿ ರಂಗೋಲಿ ಹಿಟ್ಟನ್ನು ಹಿಡಿದುಕೊಂಡು ನಿಧಾನವಾಗಿ ಕೆಳಗೆ ಜಾರಿಸುತ್ತಾ,ದೊಡ್ಡ ರಂಗೋಲಿ ಹಾಕುವಾಗ ಬಳಸುವ ಚಾಲ್ತಿ ಈಗ ಎಲ್ಲೆಡೆ ಪಸರಿಸುತ್ತಿದೆ. 

ರಂಗೋಲಿ ಪುಡಿಗಳು, ನುಣುಪು ಮತ್ತು ರವೆರವೆಯಂತಹ ಬಣ್ಣದ ಪುಡಿಗಳು ರಂಗೋಲಿ ರೇಕುಗಳು, ಸ್ಟೆನ್ಸಿಲ್ಸ್, ಬಾಟಲ್ಲುಗಳು, ಕ್ರೀಂ, ರಂಗೋಲಿ ಸ್ಪ್ರೇ ಇತ್ಯಾದಿ ಸುಲಭದ ರಂಗೋಲಿ ಉಪಕರಣಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಕಲಾತ್ಮಕತೆಯೊಂದಿದ್ದರೆ, ಮನೆಯಲ್ಲಿಯೇ ಇರುವ ಚಿಕ್ಕ ಪುಟ್ಟ ಆಸಕ್ತ ಆಕೃತಿಗಳ ಅಚ್ಚನ್ನು ಇಟ್ಟುಕೊಂಡು ರಂಗೋಲಿಯನ್ನು ಹಾಕಬಹುದು. 

ಶಾಲೆ, ಆಫೀಸು, ದೇವಸ್ಥಾನಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಥೀಮ್ರಂ ಬೇಸ್ಡ್ ರಂಗೋಲಿಗಳನ್ನು ಹಾಕುವ ಭಾರತೀಯ ಸಂಪ್ರದಾಯ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಿಬ್ಬಂದಿಗಳ ಮಧ್ಯೆ, ವಿಧ್ಯಾರ್ಥಿಗಳಿಗೆ ಹಬ್ಬ ಹರಿದಿನಗಳ ಆಚರಣೆಯ ಅಂಗವಾಗಿ ರಂಗೋಲಿ  ಸ್ಪರ್ಧೆಗಳನ್ನು ಏರ್ಪಡಿಸುವದರ ಮೂಲಕ ಹೆಚ್ಚಿನ ಪ್ರತಿಭೆಯನ್ನು ಹುಡುಕುವ, ಜನರ ಉತ್ಸಾಹ ಮತ್ತು ಅಭಿರುಚಿಯನ್ನು ಪೋಷಿಸುವ ಕಾರ್ಯಕ್ರಮಗಳು ನಡೆಯುತ್ತಿದೆ. ಆದರೂ ಸೌಂದರ್ಯದ ಕಾರಣವೊಂದೇ ಯೋಚಿಸಿ ಅಸಡ್ಡೆ ತೋರದೇ, ನಿತ್ಯ ಚಟುವಟಿಕೆಯಲ್ಲಿ, ಉತ್ತಮ ಆರೋಗ್ಯಕರ ಜೀವನ ಶೈಲಿಗಾಗಿ, ಮಾನಸಿಕ ಸುಧೃಡತೆಗಾಗಿ ರಂಗೋಲಿಯನ್ನು ಬಿಡಿಸಿ ಸಂಭ್ರಮಿಸಿ. 












.