ಶುಕ್ರವಾರ, ಏಪ್ರಿಲ್ 23, 2021

ವಿಶ್ವ ಭೂಮಿ ದಿನ

"ಯೇ, ಮಣ್ಣಲ್ಲಿ ಆಡಬೇಡಿ ಛೀ ಕೊಳಕು.." ಅಂತೇನಾದರೂ ನಮ್ಮ ಅಪ್ಪ ಅಮ್ಮ ಅವಾಗ ಹೇಳಿಬಿಟ್ಟಿದ್ದರೆ, ಮಣ್ಣು ಮಳೆಯ ಒಡನಾಟ ಇಲ್ಲದೇ ಜೀವ ಅದೆಷ್ಟು ಚೈತನ್ಯ ಹೀನಾವಾಗುತ್ತಿತ್ತೋ, ಜೀವನದ ಅದೆಷ್ಟು ಸಂತೋಷವನ್ನು ನಾವು ಕಳೆದುಕೊಂಡು ಬಿಡುತ್ತಿದ್ದೆವೋ ಏನೋ..!! 



ಮಲೆನಾಡಿನ ಪರಿಸರದಲ್ಲಿ ನಮ್ಮ ಬಾಲ್ಯವಾದ್ದರಿಂದ, ಮಣ್ಣು, ನೀರು, ತೋಟ - ಗದ್ದೆ,  ಮಳೆ ಝರಿ, ಕಾಡು ಮೇಡು, ಹಕ್ಕಿ-ಜೀರುಂಡೆ ಎಲ್ಲವೂ ಉಸಿರಾಡುವ ಗಾಳಿಯಷ್ಟೇ ನಮಗೆ ಸಹಜವಾಗಿ ಹೋಗಿತ್ತು. ಅಂಗಾಲು ಮಣ್ಣಿಗೆ ಆಂಟಿಯೇ ಬೆಳೆದಿದ್ದು ನಾವು ಎಂದರೂ ತಪ್ಪಿಲ್ಲ. ಆಗಿನ ಕಾಲಕ್ಕೆ ಅದೆಷ್ಟು ಮಹಾ ಆಟಿಕೆಗಳಿರುತ್ತಿದ್ದವು ನಮಗೆ? ಎಲ್ಲಿ ನೋಡಿದರಲ್ಲಿ ಮಣ್ಣೇ ಮಣ್ಣು ಕಾಣಿಸುತ್ತಿತ್ತು. ಪುಟ್ಟಮಕ್ಕಳ ವಯಸ್ಸಿನಲ್ಲಿ, ಒಂದಷ್ಟು ಮಣ್ಣು ನೀರು ಇದ್ದ ಜಾಗಕ್ಕೆ ನಾವು ಓಡಿದರೆ, ಎಲ್ಲಾ ಆಟ ಮುಗಿದ ಮೇಲೆ, ಕೆಸರು ಹೊಂಡದಿಂದ ನಮ್ಮನ್ನು ಎತ್ತಿ ತಂದು ಸ್ನಾನ ಹೊಡೆಸುವುದು ದೊಡ್ಡವರಿಗೂ ಅಷ್ಟೇ ಸಹಜವಾದ ಕೆಲಸವಾಗಿತ್ತು. ಮಣ್ಣು ನುಣುಪು-ಒರಟು ಎಂಬಿತ್ಯಾದಿ ಸೂಕ್ಷ್ಮಗಳು ಎಂದೂ ನಮ್ಮನ್ನು ಭಾದಿಸಲಿಲ್ಲ. ಗಂಟೆಗಟ್ಟಲೆ ಮಣ್ಣನ್ನು ಕಲಸಿ, ಕೈಯಿಂದ ಕೈಗೆ ಸುರಿಯುತ್ತ ಆಡುತ್ತಿದ್ದೆವು. ಅಜ್ಜನ ಮನೆಗೆ ಹೋದರೆ, ಸೂರ್ಯ ಹುಟ್ಟುವುದಕ್ಕೂ ಮುಂಚೆ, ಅಂಗಳ ಬಳಿಯಲು ಸಗಣಿ ಮತ್ತು ಕೆಮ್ಮಣ್ಣು ಸೇರಿಸಿ, ನೀರಿನ ಜೊತೆ ಹದವಾಗಿ ಮಿಶ್ರಣ ಮಾಡಿ ಕೈಯಲ್ಲಿ ಹರಡಿಕೊಂಡು ಬಳಿಯುವಲ್ಲಿಂದ ಹಿಡಿದು, ಹೆಚ್ಚು ಕಮ್ಮಿ ಇಡೀ ದಿನ ನಾವು ಮೊಮ್ಮಕ್ಕಳೆಲ್ಲ ಇರುತ್ತಿದ್ದುದ್ದೇ ಮಣ್ಣ-ನೀರಿನ ಜೊತೆ! ಅಜ್ಜನ ಮನೆಯ ಹಿಂದಿನ ದಿಬ್ಬದಲ್ಲಿ, ಒಳ್ಳೆ ಸ್ಥಳದಲ್ಲಿ, ನೆಲವನ್ನು  ಕೆತ್ತಿ, ತೆಂಗಿನ ಕಾಯಿ ಕರಟ ದಿಂದ ಮಣ್ಣು ತೆಗೆದು ಗುಂಡಿ ಮಾಡಿ, ಕೋಲುಗಳನ್ನೇ ಕಂಬದಂತೆ ಊರಿ, ಮನೆ ಮಾಡಿ ಸೋಗೆ, ಎಲೆಗಳಿಂದ ರೂಫ್ ಮಾಡಿಕೊಂಡು ಆಟದ ಮನೆಯೊಂದನ್ನು ಕಟ್ಟಿಕೊಂಡರೆ, ಮತ್ತೆ ಬೇಸಿಗೆ ರಜೆ ಮುಗಿಯುವ ವರೆಗೆ ಅದೇ ನಮ್ಮ ಔಟ್ ಹೌಸ್. ಅಲ್ಲೆಲ್ಲೋ ಸುತ್ತಿ ಗದ್ದೆ ಕೆರೆ ಜಾಗವೆಲ್ಲ ಅಲೆದು, ವಿವಿಧ ಬಗೆಯ ಮಣ್ಣನ್ನು ಒಟ್ಟು ಮಾಡಿ ತರುತ್ತಿದ್ದೆವು. ಒಂದೊಂದು ಬಗೆಯ ಮಣ್ಣು ಒಂದೊಂದ್ ರೀತಿಯ ಆಟಕ್ಕೆ..ಜೇಡಿ ಮಣ್ಣು- ಬಾವಿ ಮಣ್ಣನ್ನು, ನೀರಿನ ಜೊತೆ ಕಲಸಿ, ಹೊಸೆದು, ಸಣ್ಣ ದೊಡ್ಡ ಉಂಡೆಗಳನ್ನಾಗಿ ಮಾಡಿ, ಅದರಿಂದ ಮಣ್ಣಿನ ಪಾತ್ರೆಗಳನ್ನು ಮಾಡಿಕೊಳ್ಳುವುದು ಮೆಚ್ಚಿನ ಆಟವಾಗಿತ್ತು. ಗಣಪತಿ ಈಶ್ವರ ಲಿಂಗ ಇತ್ಯಾದಿ ದೇವರುಗಳು ಕೂಡ ಈ ಮಣ್ಣಿನಿಂದಲೇ, ಹುಟ್ಟಿ ಬರುತ್ತಿದ್ದರು. ಆಟ ಅಲ್ಲಿಗೆ  ಮುಗಿಯದೇ, ಆ ದೇವರುಗಳಿಗೆ ದೇವಸ್ಥಾನ ಕಟ್ಟುವ ಜವಾಬ್ಧಾರಿಯೂ ನಮ್ಮ ತಲೆ ಮೇಲೆ ಇರುತ್ತಿತ್ತು. ಹೊಸ ದಿನ ಹೊಸ ಮಣ್ಣು..ಮುಂದುವರೆಸುವ ಕೆಲಸ.. ಒಟ್ಟಾರೆ ಮಣ್ಣು ಬಿಡಲಾಗದ ಜೀವಾಳವಾಗಿತ್ತು. ದೇವಸ್ಥಾನವನ್ನು ಮತ್ತಷ್ಟು ಚೆಂದಗಾಣಿಸಲು, ಕೆರೆಯ ರೆವೆ ಮಣ್ಣನ್ನು ಬೇರ್ಪಡಿಸಿ ಒಣಗಿಸಿ ಹುಡಿ ಮಾಡಿಕೊಂಡು ನೀರು ಹಾಕಿ ಕಲೆಸಿ, ಗುಡಿಯ ಗೋಡೆಗಳಿಗೆ ಮೆತ್ತಿ ನುಣುಪಾದ ಫಿನಿಶಿಂಗ್ ತರುವಷ್ಟು ಕೌಶಲ್ಯ ನಮ್ಮ ಆಟಗಳಿಂದಲೇ ಕಲಿತುಬಿಡುತ್ತಿದ್ದೆವು. ಎಲ್ಲಿಯಾದರೂ ಮರಳು ಸಿಕ್ಕರೆ ಗುಂಡಿ ತೋಡಿ ಗುಬ್ಬಿ ಗೂಡು, ಏಡಿ ಕುಣಿ, ಮರಳಿನರಮನೆ ಇತ್ಯಾದಿ ಕಟ್ಟುವಆಟವಾಡುತ್ತಿದೆವು. ಕರಟ, ಲೋಟಗಳಿಗೆ ಮರಳು ತುಂಬಿ ಬೋರಲು ಹಾಕಿ ಮರಳ ಮೌಲ್ಡ್ ಮಾಡಿದರೆ ಅದೇ ನಮ್ಮ ಅಡಿಗೆ ಆಟದ ಕೇಕ್ ಆಗಿರುತ್ತಿತ್ತು. 


ಚಿಕ್ಕಂದಿನಿಂದ ನಾವು ಕಂಡ ನಮ್ಮ ಹಬ್ಬ ಹರಿದಿನಗಳು ಕೂಡ ಅಷ್ಟೇ ಅಲ್ಲವೇ? ಅಂತಿಮವಾಗಿ ಮಣ್ಣೇ ಮನುಷ್ಯನ ಜೀವನಾಧಾರ ವಾದ್ದರಿಂದ, ಭೂಮಿಗೇ ಶರಣು ಎನ್ನುವ ಆಚರಣೆಗಳನ್ನು ಪ್ರತಿ ಹಬ್ಬದಲ್ಲಿ ಕಾಣಸಿಗುತ್ತಿತ್ತು. ಭೂಮಿ ಹುಣ್ಣಿಮೆ ಹಬ್ಬದಲ್ಲಿ, ಭೂಮಿ ನಮ್ಮ ತಾಯಿ ಎಂದು ಚಿಕ್ಕಂದಿನಿಂದ  ಕಲಿಸಿದ್ದರು. ದೀಪಾವಳಿ ಹಬ್ಬದಲ್ಲಿ ಭೂಮಿ ತಾಯಿಯನ್ನು ಸ್ಪರ್ಶಿಸಿ, ಧಾನ್ಯರಾಶಿಯ ಮೇಲೆ ಕಳಶ ಸ್ಥಾಪನೆ ಮಾಡಿ  ಪೂಜಿಸುವುದರ ಜೊತೆಗೆ, ಆ ದಿನ ತೋಟ ಗದ್ದೆ ಇನ್ನಿತರ ನಮ್ಮ ಪಾಲಿನ ಇಳುವರಿಯ ಭೂಮಿಗೆ, ಎಡೆ ಇಟ್ಟು ಪೂಜಿಸುವ ಪ್ರತೀತಿನಡೆಸುವುದರ ಮೂಲಕ, ನಮ್ಮ ಬದುಕಿಗೆ ಮಣ್ಣಿನ ಕೊಡುಗೆಯ ನೆನಪಿಸುತ್ತಿದ್ದರು. ಗಣಪತಿ ಹಬ್ಬದಲ್ಲಿ ಮೂರ್ತಿ ಮಾಡುವ ಮುನ್ನ, ಭೂಮ್ತಾಯಿಗೆ ನಮಸ್ಕರಿಸಿ, ಮಣ್ಣಿಗೆ ನಮಸ್ಕರಿಸಿ ಮೂರ್ತಿ ತಯಾರುಮಾಡುವುದನ್ನು ಕಂಡೇ ಬೆಳೆದೆವು. ನಾಗರ ಪಂಚಮಿ ಸಮಯದಲ್ಲಿ ಹುತ್ತಕ್ಕೆಪೂಜೆ ಮಾಡುವುದನ್ನು ನೋಡಿದವರು. ಅದೆಷ್ಟೇ ಏಕೆ? ನಾಗರೀಕತೆ ಕಲಿತಂತೆ ಮನುಷ್ಯನ ಕಲಾ ವೈವಿಧ್ಯತೆಯೂ ಕಾಲದಿಂದ ಕಾಲಕ್ಕೆ ಬೆಳೆಯುತ್ತ ಬಂದಿದೆ. ಮಣ್ಣಿನ ಮನೆಗಳಲ್ಲಿಯೇ ನಮಗೆ ಜೋಲಿ ಕಟ್ಟಿದ್ದು. ಹಸೆ ಯಂತಹ ಸಾಂಪ್ರದಾಯಿಕ ಚಿತ್ತಾರವನ್ನು ನಮ್ಮ ಹಿರಿಯರ ಹಳೆ ಮನೆಗಳಲ್ಲಿ ನಾವು ಕಂಡಿದ್ದೆವು. ಪ್ರಕೃತಿ ನಮ್ಮ ಭಾಗವಾಗಿಯೂ, ನಾವು ಅದರ ಭಾಗವಾಗಿಯೂ ಬೆಳೆಯಲು ಅನುಕೂಲಕರವಾದ ಹಿನ್ನೆಲೆ ಸಿಕ್ಕಿರುವುದು ನಮ್ಮ ಪುಣ್ಯ. 


ನಾವು ಬಾಲ್ಯದಿಂದ ಈಗಿನವರೆಗೆ ಮಣ್ಣಿನ ಸಾಂಗತ್ಯದಲ್ಲಿರಲು ಅಪ್ಪಾಜಿಯ ಪ್ರಕೃತಿ ಪ್ರೇಮ ಕೂಡ ಅಷ್ಟೇ ಕಾರಣ. ಚಿಕ್ಕಂದಿನಿಂದ, ಊರಲ್ಲಿರುವ ತೋಟಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ವಿಷಯಗಳನ್ನು ಸಣ್ಣ ಪುಟ್ಟ ವಿಸ್ಮಯ ಕೌತುಕಗಳನ್ನು ತೋರಿಸಿ ವಿವರಿಸುತ್ತಿದ್ದುದ್ದು ನಮಗೆ ಮತ್ತಷ್ಟು ಪ್ರಕೃತಿಯೊಡನೆ ಇರಲು ಆಸಕ್ತಿ ತರುತ್ತಿತ್ತು.  ಶಾಲೆಯಿಂದ ಬಂದವರು, ಶನಿವಾರ ಭಾನುವಾರಗಳಲ್ಲಿ, ಮನೆಯಂಗಳದ ತೆಂಗಿನ ಗುದ್ದಿಗೆ ಹೆಡಿಗೆ ಮಣ್ಣು ಹೊತ್ತು ತಂದು ಹಾಕುವುದು. ಗಿಡದ ಬುಡವನ್ನು ಗುದ್ದಲಿಯಿಂದ ಆಗಾಗ್ಗೆ ಬಿಡಿಸಿ ಗಿಡಗಳಿಗೆ ಉಸಿರಾಡಲು ಸಹಾಯ ಮಾಡುವುದು, ಕಳೆ ಕೀಳುವುದು, ಗಿಡ ನೆಡುವುದು ಇತ್ಯಾದಿ ಕೈತೋಟದ ಕೆಲಸ ಅವನೂ ಮಾಡುತ್ತಾ ನಮ್ಮಿಂದಲೂ ಮಾಡಿಸುತ್ತ ಬರುತ್ತಿದ್ದರಿಂದ, ಮಣ್ಣಿನ ಒಡನಾಟ ನಮಗೆ ನಿರಂತರವಾಗಿ ಸಿಗುತ್ತಲೇ ಇತ್ತು.  


ಮಣ್ಣು, ಮರಳು, ಕಲ್ಲು, ಇವೆಲ್ಲ ಪ್ರಕೃತಿ ಸಹಜದತ್ತವಾಗಿಯೇ ಮಕ್ಕಳಿಗೆ ಕೊಟ್ಟ ಉಡುಗೊರೆ...ಆದರೆ ಇವತ್ತಿನ ಸಮಾಜದಲ್ಲಿ ಪೋಷಕರು, ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನು ಕೊಡಬೇಕು, ಆರೋಗ್ಯಕರವಾದ ಜೀವನವನ್ನು ಕೊಡಬೇಕೆಂಬ ಹಂಬಲದಿಂದ, ತಮ್ಮ ಮಕ್ಕಳು ಮಣ್ಣಿನಲ್ಲಿ ಆಡುವುದು, ರೋಗಕ್ಕೆ ದಾರಿ, ಅಶಿಸ್ತಿನ ರೂಪ ಎಂಬ ತಪ್ಪು ಕಲ್ಪನೆ ತಂದುಕೊಂಡಿದ್ದಾರೆ.. ಮಣ್ಣಿನಿಂದಲೇ ನಾನಾ ರೋಗಗಳು ಬರುವುದು ಎಂಬುದು ಖಂಡಿತ ನಿಜವಲ್ಲ...ರೋಗಗ್ರಸ್ತ ಜನರ ಅಥವಾ ಪ್ರಾಣಿಯ ರೋಗಾಣು ಮಣ್ಣಿಗೆ ಪ್ರಸಾರಗೊಂಡಿದ್ದಲಿ ಮಾತ್ರ, ಆ ತರಹದ ಜಾಗಗಳನ್ನು  ಜಾಗರೂಕತೆಯಿಂದ ತಪ್ಪಿಸಿ, ಮಗುವಿಗೆ ಆಡಲು ಬಿಟ್ಟರೆ, ಯಾವದೇ ತರಹದ ತೊಂದರೆ ಇರುವುದಿಲ್ಲ. ನನ್ನ ಮಗಳಿಗೆ ಚಿಕ್ಕಂದಿನಿಂದಲೂ ಮಣ್ಣು ಎಂಬುದು ಮುಗಿಯದ ಸೆಳೆತ. ಕಂಡಕಂಡಲ್ಲಿ ಮಣ್ಣು ಕೆದಕುವುದು, ಕಲ್ಲು ಆರಿಸುವುದು,  ಮರಳಿನಲ್ಲಿ ಗುಂಡಿ ತೊಡುವುದು ಇವೆಲ್ಲಾ ಆಟಗಳು ಶುರುವಾಗಿ ಹೋಗುತ್ತದೆ. ಬೆಂಗಳೂರಿನಲ್ಲಿ, "ಅಯ್ಯೋ ಸೌಮ್ಯಾ, ಮಗಳನ್ನಾ ಎತ್ಕೊಳ್ರಿ, ಮಣ್ಣಾಡ್ತಿದಾಳೆ... ಏನೇ ಹುಡ್ಗೀ, ಅಷ್ಟೂ ಬಟ್ಟೆನೆಲ್ಲಾ  ಗಲೀಜು ಮಾಡ್ಕೊಂಡಿದೀಯ...ಏಯ್ ಯಾರದು ಮಣ್ಣಲ್ಲಿ ಆಡೋರೂ...?? ಬಾಯಿಗೆ ಹಾಕ್ತಾರೆ ನೋಡ್ಕೊಳ್ರಿ...ಥೂ ಕರ್ಕೊಂಡ್ ಬರ್ರೀ  ಈ ಕಡೆ, ಮೈ ಕೈ ಎಲ್ಲಾ ಕೆಸರು ಮಾಡ್ಕೊಂಡಿದಾಳೆ. ತಂಡಿ  ಜ್ವರ ಆಗೋದು ಇದಕ್ಕೇನೆ..." ಇತ್ಯಾದಿ ಎಲ್ಲ ಬಗೆಯ ಎಚ್ಚರಿಕೆಯ ಮಾತುಗಳು ನನಗೆ ಕೇಳಲುಸಿಗುತ್ತಿತ್ತು. ಮಣ್ಣನ್ನು ಆಡುವಾಗಿನ ಅವಳ ಸ್ವತಂತ್ರ ಭಾವನೆ, ಆತ್ಮವಿಶ್ವಾಸ, ಖುಷಿ ನನ್ನ ಪಾಲಿಗೆ ಅಪರಿಮಿತ. ವೈಜ್ಞಾನಿಕವಾಗಿ ಹೇಳಬೇಕೆಂದರೆ,ಮಕ್ಕಳು ಮಣ್ಣನ್ನು ಮುಟ್ಟಿದಾಗ ಅದರಲ್ಲಿರುವ ಒಂದು ತರಹದ ಬಾಕ್ಟೀರಿಯಾಗಳು, ಮೆದುಳಿನ ನರಕೊಶಗಳನ್ನು ಸಕ್ರೀಯಗೊಳಿಸುತ್ತದೆ. ಸಿರೋಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಿಂದಾಗಿ,ಮಕ್ಕಳ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅದೆಷ್ಟೇ ಹೊಸ ಆಟಿಕೆಗಳು ಬಂದರೂ, ಒಂದೆರಡು ದಿನ ಆದಿ ಹಳೆಯದಾದ ಮೇಲೆ ಮತ್ತೆ ಮಗಳು ಓಡುವುದು ಮಣ್ಣು ಮತ್ತು ಕಲ್ಲಿಗೇ. ಮಗಳ ಮಣ್ಣಿನ ಆಟದ ಸಂಭ್ರಮ ಎಷ್ಟಿತ್ತೆಂದರೆ, ಮಗಳು ತನ್ನ ಇತರ ಸ್ನೇಹಿತರನ್ನು ಸೇರಿಸಿಕೊಂಡು ಅಸಾಧ್ಯ ಮಣ್ಣನ್ನು ಆಡುತ್ತಾಳೆ, ಸ್ಥಳವನ್ನೆಲ್ಲ ಗಲೀಜು ಮಾಡುತ್ತಾಳೆ ಎಂಬ ಇತರ ಪೇರೆಂಟ್ಸ್ ಕಂಪ್ಲೆಂಟ್ಸ್ ಗೆ ಪರಿಹಾರವಾಗಿ, ನಾನು ಒಂದು ಬಕೆಟ್ ಶುದ್ಧ ಮಣ್ಣನ್ನು ಹೊತ್ತು ತಂದು ನಮ್ಮ ಮನೆಯ ಬಾಲ್ಕನಿಯಲ್ಲಿ ಶೇಟಿನ ಮೇಲೆ ಹಾಕಿ, ನೀರು ಕೊಟ್ಟು ಗಂಟೆಗಟ್ಟಲೆ ಮಗಳಿಗೆ ಆಡಲುಬಿಟ್ಟು, ನಂತರ ಸ್ವಚ್ಛ ಮಾಡಿಕೊಂಡ ಪ್ರಸಂಗ ಕೂಡ ಇತ್ತು. ಕಡಲು ಮಗಳಿಗೂ ಸೇರಿದಂತೆ ತೀರದ ಮೋಹದ ಸ್ಥಳ. ನೀರು ಮತ್ತು ಮರಳು ಸಿಕ್ಕಿದರೆ ತಕ್ಷಣಕ್ಕೆ ಮಗಳನ್ನು ಎತ್ತಿ ತರುವುದು ನಮ್ಮ ಪಾಲಿಗೆ ಒಂದು ದುಸ್ಸಾಹಸವೇ ಸರಿ. ಬೀಚ್ ಹೋಗಬೇಕೆಂದರೆ, ಒಂದು ಘಂಟೆ ಹೆಚ್ಚಿನ ಬ್ಯಾಕಪ್ ಸಮಯ ಮಗಳನ್ನು ನೀರು ಮತ್ತು ಮರಳಿನಿಂದ ಎಬ್ಬಿಸಿ ತರಲೆಂದೇ ಮೀಸಲಿಡಬೇಕಾಗುತ್ತದೆ. ರಜೆಗೆ ಊರಿಗೆ ಬಂದರೆಂತೂ, ನೀರು ಮತ್ತು ಮಣ್ಣು ಅವಳಿಗೆ ಊಟ ತಿಂಡಿಯಷ್ಟೇ ಮೂಲಭೂತ ಸಂಗ್ರಹ. ಬಾವಿ ಮಾಡುವುದು, ಕೋಟೆ ಕಟ್ಟುವುದು ಹೀಗೆ ನಮ್ಮ ಬಾಲ್ಯವನ್ನೇ ಮತ್ತೆ ಮಗಳು ಮರುಕಳಿಸುವಾಗ ಅವಳ ಜೊತೆಜೊತೆಗೆ ನಾವೂ ಮತ್ತೊಮ್ಮೆ ಮಕ್ಕಳಾಗುತ್ತೇವೆ. ಮಗಳ ಮಣ್ಣಿನ ಆಟದ ಕಲೆಯ ಬಟ್ಟೆ ತೊಳೆದು ಮುಗಿಯುವ ಕೆಲಸವಲ್ಲದಿದ್ದರೂ, ಟೀವಿ, ಗ್ಯಾಡ್ಜೆಟ್ಸ್ ನ ಎದುರು ಕೂರದ ಕೂಸಿನ ಆ ಖುಷಿ ಎದುರು ಮತ್ಯಾವುದೂ ಭಾರವೆನಿಸುವುದಿಲ್ಲ. ಪಾಠವನ್ನು ಕಲಿಸಲು ಕರೆದರೂ ಮಣ್ಣಾಟ, ಕಲ್ಲಾಟ ಬಿಟ್ಟು ಬಾರದ ಅವಳ ಹುಚ್ಚಿಗೆ, ಆಟದ ಜೊತೆ ಪಾಠದ ಕಲಿಕೆಯನ್ನು, ಹೊರಗಡೆ ಮಣ್ಣು ಕಲ್ಲುಗಳ ಜೊತೆಯಲ್ಲೇ ನಾನು ಅದೆಷ್ಟು ಬಾರಿ ಮಾಡಿ ಮುಗಿಸಿದ್ದೇನೋ.. ಇವತ್ತಿಗೂ ಮಗ್ಗಿ ಕಲಿಯಲು, ಕಲ್ಲು, ಹಣ್ಣು ಕಾಯಿ ಬೀಜಗಳೇ ನಮ್ಮ ಪರಿಕರಗಳು. ಈಗ ಪಾಟ್ ನಲ್ಲಿ ಬೀಜ ಬಿತ್ತಿ, ಸಣ್ಣ ಪುಟ್ಟ ಬೆಳೆ ಚಿಗುರೊಡೆಯುವುದ ಕಂಡು ಖುಷಿ ಪಡುವುದು , ಕೈತೋಟದಲ್ಲಿ ಗಿಡ ನೆಟ್ಟು ನೀರು ಹಾಕಿ ಹೂ ವು,ಕಾಯಿ ಬರುವುದ ಕಂಡು ಖುಷಿ ಪಡುವುದು ಇತ್ಯಾದಿ ಅವಳ ಆಟಗಳು.  ಆಟದ ಮೂಲಕ ಭೂಮಿಯ ಕುರಿತಾದ ಜೀವನ ಪಾಠಗಳು! 


ಇಂದು ವಿಶ್ವ ಭೂಮಿ ದಿನ. ಭೂಮಿಗೆ ಕೃತಜ್ಞತೆ ಸಲ್ಲಿಸಲು, ನೆನೆಸಿಕೊಳ್ಳಲೆಂದೇ ಇರುವ ದಿನ. ಭೂಮಿ ಸಂರಕ್ಷಣೆಗೆ ಏನೋ ದೊಡ್ಡ ಸಂಘ ಸಂಸ್ಥೆಗಳಿಗೆ ಸೇರಿ ಸಮಾಜ ಕಾರ್ಯದಲ್ಲಿ ಭಾಗವಹಿಸಲೇ ಬೇಕೆಂದಿಲ್ಲ. ಪ್ರತಿನಿತ್ಯ ನಮ್ಮ ಕೈಲಾದಷ್ಟು ದಿನಕ್ಕೆ ಒಂದು ಯಾವುದಾದರೂ ಮಣ್ಣಿಗೆ ಸಂಬಂಧ ಪಟ್ಟ ಕೆಲಸ, ನಾವಿರುವ ಜಾಗದಿಂದಲೇ ಪ್ರಾರಂಭವಾಗಿ, ನಮ್ಮ ನಮ್ಮ ಮನೆಗಳ ಆವರಣವನ್ನು ಸ್ವಚ್ಛ ಮತ್ತು ಹಸಿರು ಭರಿತ ವನ್ನಾಗಿಸಿದರೆ ಸಾಕು ಅದು ನಾವು ನಮ್ಮ ಈ 'ಅಮ್ಮ' ನಿಗೆ ಕೊಡುವ ಉಡುಗೊರೆ . 

 



ಶುಕ್ರವಾರ, ಏಪ್ರಿಲ್ 2, 2021

kodi beach

ಕಡಲ ತೀರದ ಮರಳ ರಾಶಿ, ಹೊಂಬಣ್ಣದ ಸೂರ್ಯಾಸ್ತ ಮತ್ತು ಸಮುದ್ರದ ಅಲೆಗಳ ಬಿಳುಪು ಕುರಿತಾಗಿ ನನಗೆ ಮೊದಲಿನಿಂದಲೂ ತೀರದ ಮೋಹ. ಓಡಾಡಿರುವ ಬೀಚ್ ಗಳ ಪೈಕಿ, ಮನಸ್ಸಿಗೆ ಆಹ್ಲಾದ ನೀಡಿ, ಅತ್ಯಂತ ಆಪ್ತವೆನಿಸಿದ ಸಮುದ್ರತೀರಗಳಲ್ಲಿ, ಕುಂದಾಪುರ ಸಮೀಪದ ಕೋಡಿ ಬೀಚ್ ಕೂಡ ಒಂದು. ಹಾದಿಬದಿಯುದ್ದಕ್ಕೂ ತೆಂಗಿನ ಮರಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಡಲ ನೀರು, ಸಮುದ್ರದ ನಿರಂತರ ಅಲೆಗಳ ಶಬ್ಧ, ನಿಯಮಿತವಾಗಿ ಕಾಪಾಡಿರುವ ಕಡಲ ಸ್ವಚ್ಚತೆ, ಎಲ್ಲವೂ ಕಣ್ಮನಗಳನ್ನು ತಣಿಸಿ, ಮನಸ್ಸಿಗೆ ಶಾಂತತೆಯನ್ನುಸಿಗುವುದರಲ್ಲಿ ಎರಡು ಮಾತಿಲ್ಲ. ಪಂಚಗಂಗಾವಳ್ಳಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುವ ದೃಶ್ಯವನ್ನು ಕಾಣಬಹುದಾದ ಈ ರಮಣೀಯ ಬೀಚ್ ಇರುವುದು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ ೬ ಕಿಮೀ ದೂರದಲ್ಲಿ(ಉಡುಪಿಯಿಂದ ೩೮ ಕಿಮೀ). ರಂಗಿನೋಕುಳಿ ಹರಡಿ, ಕಡಲ ಮಧ್ಯೆ ಮುಳುಗುವ ಸೂರ್ಯ ನನ್ನು ನೋಡುತ್ತಾ, ತೀರದ ಮರಳ ರಾಶಿಯ ಮೇಲೆ ವಾಕ್ ಮಾಡುವುದೇ ಒಂದು ಅದ್ಭುತ ಅನುಭವ. ಮಕ್ಕಳೊಡನೆ ಸಮುದ್ರದಲೆಗಳಿಗೆ ಬೆನ್ನೊಡ್ಡಿಆಟವಾಡಲು ಹೇಳಿ ಮಾಡಿಸಿದಂತಹ ಜಾಗ. ಬೋಟಿಂಗ್ ವ್ಯವಸ್ಥೆ, ಜೋಕಾಲಿ, ಸರ್ಫಿಂಗ್ ಟ್ರೇನಿಂಗ್ ಗಳೆಲ್ಲವೂ ಪ್ರಾರಂಭವಾಗಿ ಈ ಸ್ಥಳ ಇದೀಗ ಮತ್ತಷ್ಟು ಪ್ರಸಿದ್ಧಿಗೊಂಡಿದೆ.