ಮಂಗಳವಾರ, ಫೆಬ್ರವರಿ 12, 2019

ಸೆಂಚುರಿ ಆಫ್ ಟ್ರುಥ್

ಥಾಯ್ಲೆಂಡಿನ ಪಟ್ಟಾಯ ದಲ್ಲಿನ ಒಂದು ಪ್ರಸಿದ್ಧ ಪ್ರವಾಸಿ ತಾಣ - ' ಸೆಂಚುರಿ ಆಫ್ ಟ್ರುಥ್'.  ಸುಮಾರು ೩೬೦೦ ಚದರ ಮೀಟರ್ ಜಾಗದ ವ್ಯಾಪ್ತಿಯಲ್ಲಿ ನಿರ್ಮಿತವಾದ ಸಂಪೂರ್ಣ ಮರದಿಂದ ಮಾಡಲ್ಪಟ್ಟ ಈ ಒಂದು ದೇವಾಲಯ ಅಥವಾ ಮ್ಯಾನ್ಷನ್ ಯಾವುದೇ ನಿರ್ಧಿಷ್ಟವಾದ ದೇವರಿಗೆ ಅರ್ಪಿತವಾದ ದೇಗುಲವಲ್ಲ. ಬಹುಮುಖ್ಯವಾಗಿ ಏಷ್ಯಾ ಖಂಡದ ಧಾರ್ಮಿಕತೆಯ ಭವ್ಯ ಬುನಾದಿಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ೧೯೮೧ ರಿಂದ ಪ್ರಾರಂಭಗೊಂಡಿರುವ ಈ ದೇವಾಲಯದಲ್ಲಿ ಬಹುತೇಕವಾಗಿ ಬೌದ್ಧ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಶಿಲ್ಪಕಲೆಗಳ ಜೊತೆಯಲ್ಲಿ ಇಸ್ಲಾಮಿಕ್ ಮತ್ತು ಕ್ರೋಷಿಯಾದ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಸಿದ್ಧಾಂತಗಳನ್ನೂ ಕೂಡ ಕೆತ್ತನೆಯ ರೂಪದಲ್ಲಿ ರೂಪಿಸಲಾಗಿದೆ.




ಎದುರಿಗೆ ನೋಡುವಾಗ ಪರಿಪೂರ್ಣ ಎಂಬ ಅನುಭಾವ ದೊರಕಿದರೂ, ಇದೊಂದು ನಿರಂತರವಾಗಿ ನಿರ್ಮಾಣಗೊಳ್ಳುತ್ತಿರುವ ಖಾಸಗೀ ದೇವಾಲಯ. ನಾವು ಭೇಟಿ ನೀಡಿದ ಸಮಯಕ್ಕೆ, ದೇವಾಲಯದ ವಿಸ್ತರಿಕೆಯ ಕಾರ್ಯದ ಜೊತೆ ಜೊತೆಯಲ್ಲೇ, ಈ ದೇವಾಲಯದ ೪೦% ಭಾಗ ಮರುನಿರ್ಮಾಣದ ಹಂತದಲ್ಲಿದೆ ಎಂದು ತಿಳಿದೆವು. ಸಮುದ್ರ ತೀರದಲ್ಲಿರುವ ಈ ದೇವಾಲಯದ ನಿರ್ಮಾಣ ಕೇವಲ ಮರದ ದಿಮ್ಮಿಗಳಿಂದ ಆಗಿರುವುದಕ್ಕಾಗಿ, ಮರಗಳ ಸಂರಕ್ಷಣೆಗೆ ರಾಸಾಯನಿಕ ಲೇಪನವಿದ್ದರೂ  ಕಾಲಮಿತಿಗೆ ತಕ್ಕಂತೆ ಉಂಟಾದ ಹಲವು ಭಾಗಗಳ ಶಿಥಿಲತೆ ಇದಕ್ಕೆ ಕಾರಣ ಎಂದು ನಾವು ಗ್ರಹಿಸಿದೆವು. ನಿರ್ಮಾಣ ಹಂತದಲ್ಲಿದ್ದ ಕಾರಣಕ್ಕೆ ನಮಗೆ ದೇವಾಲಯದ ಅನೇಕ ಭಾಗಗಳನ್ನು ಸೂಕ್ಷ್ಮವಾಗಿ ವೀಕ್ಷಿಸಲಾಗಲಿಲ್ಲ. ವಿಸ್ತಾರವಾಗಿ ನೋಡುತ್ತಾ ಹೋದರೆ ಸುಮಾರು ೩ ರಿಂದ ೪ ಗಂಟೆಗಳು ಬೇಕಾಗಬಹುದಾದ ಈ ದೇವಾಲಯದ ವಿಸ್ತರತೆ  ಕೆಲಸವೂ ಅಷ್ಟೇ ಪ್ರಮಾಣದಲ್ಲಿ ನಡೆದಿದೆ. ದೇವಾಲಯದ ಎಡಭಾಗದಲ್ಲಿ ಮರದ ಕುಸುರಿ ಕೆಲಸಗಳನ್ನು ಬಿಡಿಬಿಡಿಯಾಗಿ ರೂಪಿಸಲೆಂದೇ ಬರ್ಮಾದ ಸಾಕಷ್ಟು ಕಾರ್ಮಿಕರು ಶ್ರಮಿಸುವುದನ್ನು ಕಾಣಬಹುದು.  ಹೆಚ್ಚಿನ ಕೆತ್ತನೆಯು ಥಾಯ್ ವೈಖರಿಯಲ್ಲಿದ್ದರೂ ಸಹ, ಏಷ್ಯಾ ಖಂಡದ ನಾನಾ ಬಗೆಯ ದೇವತೆ-ದೇವರುಗಳ, ಆಧ್ಯಾತ್ಮಿಕ ಇತಿಹಾಸವನ್ನು ಬಿಂಬಿಸುವ, ಪ್ರಾಪಂಚಿಕ ವಸ್ತುವಿಷಯಗಳ ಕುರಿತಾದ ಅದ್ಭುತವಾದ, ಸುಂದರವಾದ, ಅಷ್ಟೇ ಜಟಿಲವಾದ ಕೆತ್ತನೆಗಳನ್ನು ನೋಡಿ ದಿಗ್ಬ್ರಾಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಾಲಿವುಡ್ ಫೆಂಟಸಿ ಸಿನಿಮಾದಲ್ಲಿ ತೋರುವಂತೆ, ಸಮುದ್ರ ತಟದಲ್ಲಿರುವ ಯಾವುದೋ ರಾಜನ ಸುಂದರವಾದ ಅರಮನೆಯಂತೆ ಕಾಣುವ ಈ ದೇವಾಲಯಕ್ಕೆ ಒಮ್ಮೆ ಪ್ರವೇಶಿಸಿಬಿಟ್ಟರೆ, ಮೇಲೆ-ಕೆಳಗೆ ಎಡ -ಬಲ, ಹಿಂದೆ-ಮುಂದೆ ಎಲ್ಲಿ ನೋಡಿದರಲ್ಲಿ ಮರದಿಂದ ತಯಾರಾದ ಧಾರ್ಮಿಕ ಶಿಲ್ಪಕಲಾಕೃತಿಗಳೇ ಕಣ್ಣಿಗೆ ರಾಚುತ್ತವೆ. ಈ  ಮಹಲಿನ ಎತ್ತರ ೧೦೫ ಅಡಿ ಮತ್ತು ಅದರ ಬುಡದಿಂದ ತುದಿಯವರೆಗೂ ವಿಶಿಷ್ಟವಾದ ಮರದ ಕೆತ್ತನೆಗಳು!ದೇವಾಲಯದ ಗೋಪುರ, ಹೊರಾಂಗಣ, ಒಳಾಂಗಣ, ಗೋಡೆ , ದ್ವಾರಗಳು , ನೆಲಹಾಸು ಕಡೆಗೆ ಮೆಟ್ಟಿಲುಗಳೂ ಮರದಿಂದ ಮಾಡಲ್ಪಟ್ಟಿದೆ. ಮನುಷ್ಯ ಜೀವಿಸಲು ಅತ್ಯವಶ್ಯಕವಾದ, ಸ್ವರ್ಗ, ಪಿತೃ, ಮಾತೃ, ಶಶಿ, ಭುವಿ, ಸೂರ್ಯ ಮತ್ತು ನಕ್ಷತ್ರಾದಿಯಾಗಿ ೭ ನಿರ್ಮಾತೃ ರಿಗೆ ಗೌರವ ಪ್ರಶಂಸೆ ಇರಬೇಕೆಂಬ ನಂಬಿಕೆಯ ವಸ್ತುವಿಷಯಗಳಾದ ಕೆತ್ತನೆಗಳು ಒಂದೆಡೆಯಾದರೆ, ಬೌದ್ಧ ಧರ್ಮದ ನಿರ್ವಾಣ, ಹುಟ್ಟು, ಸಾವು, ಭಾವನೆಗಳ ಪರಿಕಲ್ಪನೆಯ ಚಿತ್ರಣಗಳು ಇನ್ನೊಂದೆಡೆ ಕಾಣಬಹುದು. ಎದುರು ಮುಖವಾಗಿ ನಿರ್ಮಿಸಲಾದ ದೇಗುಲದ ಭಾಗದಲ್ಲಿ ತಂದೆ, ತಾಯಿ, ಮಗ ಮತ್ತು ಮಗಳೆಂಬ ಕುಟುಂಬ ಪ್ರಾಧಾನ್ಯತೆಯ ಮೂರ್ತಿಗಳನ್ನು ಕಾಣಬಹುದಾಗಿದೆ. ಈ ಖಾಸಗೀ ದೇವಾಲದಯದ ನಿರ್ಮಾತೃ ದಂಪತಿಗಳ ಫೋಟೋ ಗಳನ್ನು ಕೂಡ ಅಲ್ಲಿ ಬಿಂಬಿಸಲಾಗಿದೆ.  ಬೌದ್ಧ ಮತ್ತು ಹಿಂದೂ ಪುರಾಣ ಸಂಗ್ರಹಗಳು, ಜ್ಯೋತಿಷ್ಯ ಶಾಸ್ತ್ರದ ಪಾತ್ರಗಳು ಹೀಗೆ ದೇಗುಲದ ತುಂಬಾ  ಮರದ ಕೆತ್ತನೆಯ ರೂಪದಲ್ಲಿ ನೂರಾರು ಕಥೆಗಳನ್ನು ಚಿತ್ರಿಸಲಾಗಿದೆ. ೩ ತಲೆಗಳುಳ್ಳ ಐರಾವತ ಆನೆ, ಥೈಲೆಂಡಿನ ರಾಷ್ಟ್ರೀಯ ಲಾಂಛನ ಗರುಡ ಪಕ್ಷಿ, ಗಣೇಶ ಇಂದ್ರಾದಿಗಳಾಗಿ ಹಲವು ದೇವತೆಗಳ ವಿಶಿಷ್ಟವಾದ ಪೌರಾಣಿಕ ಪಾತ್ರಗಳ ಶಿಲ್ಪಕಲೆಗಳೂ ಕಾಣಸಿಗುತ್ತವೆ.

ಈ ಪ್ರವಿತ್ರ ಸ್ಥಳವನ್ನು ನಿರ್ಮಿಸುವ ಬಗೆಯನ್ನು, ಪ್ರತಿಯೊಂದು ಸಂಕೋಲೆಗಳ ಸೂಕ್ಷ್ಮತೆಯನ್ನು ಅಲ್ಲಿನ ಟೂರಿಸ್ಟ್ ಗೈಡ್ ಗಳ ಮೂಲಕ ಕೇಳಿ ತಿಳಿದುಕೊಳ್ಳಬಹುದಾಗಿದೆ. ೧೦೫ ಮೀಟರ್ ಎತ್ತರವಿರುವ ಈ ದೇವಾಲಯವನ್ನು ಕಟ್ಟಲು ಇಟ್ಟಿಗೆಯಂತೆ ಮರದ ದಿಮ್ಮಿಯ ತುಂಡುಗಳನ್ನು ಬಳಸಲಾಗಿದೆ. ೨೫ ಅಡಿಗಳ ವರ್ತುಲಾಕಾರದ ಅತ್ಯಂತ ಗಟ್ಟಿಮುಟ್ಟಾಗಿರುವ ಮರದ ದಿಮ್ಮಿಗಳೇ ಪಿಲ್ಲರ್ಗಳಂತೆ ಒಂದರ ಮೇಲೊಂದು ಜೋಡಿಸಲಾಗಿದೆ. ಎದುರಿಗೆ ಕಾಣುವ  ಬೃಹಾದಾಕಾರದ ಕೆತ್ತನೆ ಕುಸುರಿ ಕೆಲಸಗಳು, ಚಿಕ್ಕ ಚಿಕ್ಕ ದಿಮ್ಮಿಗಳ ಮೇಲೆ ವಿಂಗಡಿಸಿ ರಚನೆಗೊಂಡ ನಂತರ, ಚಿಟ್ಟೆಯ ಮಾದರಿಯ ಸಣ್ಣ ಲಾಕಿಂಗ್ ಮರದ ಚಿಪ್ಪುಗಳಿಂದ ಒಂದಕ್ಕೊಂದು ಕೂಡಿಸಲಾಗುತ್ತದೆ. (ಬಟ್ಟರ್ಫ್ಲೈ ಲಾಕ್ಕಿಂಗ್ )ಮರದ ತುಂಡುಗಳನ್ನು ಒಂದಕ್ಕೊಂದು ಜೋಡಿಸುವ(ಲಾಕಿಂಗ್ ಪೀಸೆಸ್) ಅಥವಾ ಬಂಧಿಸುವ ಮರದ ತುಂಡುಗಳವಿನ್ಯಾಸವೂ ಅಷ್ಟೇ ಅಚ್ಚರಿಯನ್ನುಂಟುಮಾಡುತ್ತದೆ.. ಈ ದೇವಾಲಯದ ೨೧೫೦ ಚದರ ಅಡಿಗಳಷ್ಟು ನೆಲ ಕೂಡ ಸಂಪೂರ್ಣ ಮರದ ನುಣುಪಾದ ಹಾಸಿನಿಂದಲೇ ನಿರ್ಮಿತವಾದದ್ದು. ಯಾವುದೇ ರೀತಿಯ ಅಂಟು ಪದಾರ್ಥವನ್ನು ಬಳಸದೆ, ಶೋ ಕೇಸಿನ ಗ್ಲಾಸನ್ನು ಅದರ ಕಟ್ಟಿಗೆ ಕೂರಿಸುವ ಮಾದರಿಯಲ್ಲಿ ಒಂದೊಂದು ಚದರ ಮರದ ಹಾಸನ್ನು ಕತ್ತರಿಸಿ ಹೊಂದಾಣಿಸಿ ಸಂಪೂರ್ಣ ನೆಲಹಾಸನ್ನು ಮಾಡಲಾಗಿದೆ. ಯಾವುದೇ ಯಂತ್ರ ಸಾಧಕಳಿಂದ ನಡೆಯುವ ಕಾರ್ಯಾಗಾರವಲ್ಲವಿದು. ಪ್ರತಿದಿನವೂ ೨೦೦ ಕ್ಕೊ ಹೆಚ್ಚು ಗುಡಿಕಾರ್ಮಿಕರು ಹಗಲಿಡೀ ಶ್ರಮಿಸಿ ಕೈಯಲ್ಲಿ ಊಳಿಗೆ ಹಿಡಿದು ಕೆತ್ತನೆ ನಡೆಸುವ, ಉದ್ದುದ್ದ ಸ್ಕೇಲಿನಲ್ಲಿ ಗುರುತು ಮಾಡಿಕೊಂಡು ಜಟಿಲವಾದ ಸುಂದರ ಕೆತ್ತನೆಗೆ ತೊಡಗಿಕೊಳ್ಳುತ್ತಾರೆ.

ಪಟ್ಟಾಯ  ಮುಖ್ಯ ಪಟ್ಟಣದಿಂದ  ಹೊರಭಾಗದಲ್ಲಿರುವ ಈ ಪೂಜ್ಯ ಸ್ಥಳಕ್ಕೆ ಹೋಗಲು ಟುಕ್-ಟುಕ್ (ಶೇರ್ಡ್ ಆಟೋ ಮಾದರಿಯ ವಾಹನ) ಅಥವಾ ಟ್ಯಾಕ್ಸಿ ವ್ಯವಸ್ಥೆ ಅವಶ್ಯಕ.  ಈ  ಬೃಹತ್ ದೇವಾಲಯದ ಸುತ್ತಲಿನ ಸುಂದರ ಪರಿಸರವನ್ನು ನಡೆದಾಡಿ ಮುಗಿಸುವುದು ತುಸು ಪ್ರಯಾಸದಾಯಕ. ಹಾಗಾಗಿಯೇ ದೇವಾಲಯದ ಪ್ರವಾಸೋದ್ಯಮದ ದೃಷ್ಟಿಯಿಂದ, ಆನೆ ಸವಾರಿ, ಊಟ ದೊರೆಯುವ ಸ್ಥಳದ ಆವರಣಲ್ಲೇ ಪ್ರವಾಸಿಗರಿಗೆ ಥಾಯ್ಲೆಂಡಿನ  ಸಂಗೀತ, ನೃತ್ಯಗಳ ಸಂಸ್ಕೃತಿಯ ಕಿರು ಪರಿಚಯ ನೀಡುವಂತಹ ಸಾಂಪ್ರದಾಯಿಕ ಥಾಯ್ ನೃತ್ಯದ ಪ್ರದರ್ಶನ ಕೂಡ ನಿಯಮಿತವಾಗಿ ಜರುಗುತ್ತದೆ. ದೋಣಿ ವಿಹಾರ ಲಭ್ಯವಿದೆ.  ಮಕ್ಕಳ ಆಸಕ್ತಿಕರ ಆಟದ ಪಾರ್ಕುಗಳು, ಆನೆ, ಕುದುರೆ, ಹುಲಿಮರಿ, ಆಡು, ಹೀಗೆ ಜನಸ್ನೇಹಿ ಪಳಗಿದ ಪ್ರಾಣಿಗಳು ನೋಡಲು ಮತ್ತು ಕೆಲವು ಸವಾರಿಗಳಿಗೆ ಲಭ್ಯ.