Wednesday, December 16, 2015

ಮನೆಯೇ ಮೊದಲ ಆಟ ಶಾಲೆ

'ಆಟ' ಎನ್ನುವುದೇ ಒಂದು ಸಂತಸದ ಶಬ್ಧ. ಯಾವ ವಯಸ್ಸಿನ ಮಕ್ಕಳಿಗೆ ಆಗಲಿ ಆಟವಾಡುವುದೆಂದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ. ಆಟ ಯಾವುದೇ ಮಗುವಿನ ಪ್ರಮುಖ ಬೆಳವಣಿಗೆಯ ಪ್ರತೀಕ. ಚಿಕ್ಕ ಶಿಶುವಿನಿಂದ ಹಿಡಿದು ವಯಸ್ಸಾಗಿರುವ ಹಂತದ ವರೆಗೂ ಆಟಗಳು ನಮಗೆ ಮುದವನ್ನು ಕೊಡುತ್ತದೆ. ಮಕ್ಕಳಿಗೆ ಕೆಲವು ಆಟಗಳಿಗೆ ನಮ್ಮ ಸಹಾಯದ ಅವಶ್ಯಕತೆ ಇರುತ್ತದೆ. ಮತ್ತೆ ಕೆಲವು ಆಟಗಳು ಅವರು ತಾವೇ ಆಡಲು ಇಚ್ಚಿಸುತ್ತಾರೆ. ಆದಷ್ಟು ಕುತೂಹಲ ಉಂಟು ಮಾಡುವ ಆಟಗಳು ಮಕ್ಕಳ ಬುದ್ಧಿ ವಿಕಸನವಾಗಲು ಸಹಾಯ ಮಾಡುತ್ತದೆ. ಆಟಗಳ ಬಗ್ಗೆ ಬರಿಯಲಿಚ್ಚಿಸಿದರೆ ಸಾಕಷ್ಟಿದೆ. ಸದ್ಯಕ್ಕೆ ನಾನು ಕೆಲವು ಮನೆಯಲ್ಲಿಯೇ ನಾವು ಆಡಿಸಬಹುದಾದ ಕ್ರಿಯಾತ್ಮಕ ಆಟಗಳ ಒಂದು ಚಿಕ್ಕ ಟಿಪ್ಪಣಿ ಕೊಡಲಿಚ್ಚಿಸುತ್ತೇನೆ. ಈ ಕೆಲವು ಆಟಗಳು ಸುಮಾರು ೧.೫ ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು ೪ ವರ್ಷದ ವರೆಗಿನ ಮಕ್ಕಳಿಗೆ ಆಡಿಸುವಂತದ್ದು.

೧. ಪಾತ್ರೆ, ಲೋಟ, ಕರಡಿಗೆ ಮತ್ತು ಚಮಚಗಳು 
       ಹೌದು. ಮಕ್ಕಳಿಗೆ ಎಷ್ಟೇ ಆಟದ ಸಾಮಾನು ಇದ್ದರೂ, ಕಡೆಗೆ ಅವರು ಅಡುಗೆ ಮನೆಯ ಕಡೆಗೇ ಹೊರಳುತ್ತಾರೆ. ಕಾರಣ ಇಷ್ಟೇ. ತನ್ನ ಪ್ರೀತಿಪಾತ್ರರು ಸಾಕಷ್ಟು ಸಮಯ ಕಳೆಯುವ ಜಾಗ ಅದು. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳು ಅವರಿಗೆ ಕುತೂಹಲಕಾರಿಯಾಗಿದ್ದಿರುತ್ತದೆ. ಮಕ್ಕಳು ಒಮ್ಮೆಯಾದರೂ ಪಾತ್ರೆ ಸೌಟು ಹಿಡಿದು ಆಟವಾಡಿಯೇ ಆಡುತ್ತಾರೆ. ಅದರಿಂದ ಹೊರಹೊಮ್ಮುವ ಶಬ್ದಗಳು, ಒಪ್ಪ ಓರಣ ಜೋಡಣೆ ಹಾಗೂ ಅಡಿಗೆಯನ್ನು ತಯಾರಿಸುವ ಕಲ್ಪನಾ ಕ್ರಿಯೆಗಳು ಮಕ್ಕಳನ್ನು ಅತೀವವಾಗಿ ಆಕರ್ಷಿಸುತ್ತದೆ. ೨ ವರ್ಷದ ಒಳಗಿನ ಮಕ್ಕಳಿಗೆ, ಒಂದಷ್ಟು ಲೋಟಗಳು ಮತ್ತು ಚಮಚಗಳನ್ನು ಸ್ವಚ್ಚವಾದ ಜಾಗದಲ್ಲಿ ಹಾಕಿ ಬಿಟ್ಟರೆ ಸಾಕು. ಅವರದ್ದೇ ಆದ ರೀತಿಯಲ್ಲಿ ಅವರು ಆಡುತ್ತಾರೆ. ಬಿಸಿ ಪಾತ್ರೆಯನ್ನು ಇಡಲು ಬಳಸುವ ರಿಂಗ್ ಅನ್ನು ಮಕ್ಕಳಿಗೆ ಆಡಲು ಕೊಡಬಹುದು. ಮಕ್ಕಳಿಗೆ ಅವರಿಷ್ಟದ ಅಡುಗೆ ಪದಾರ್ಥವನ್ನು ತಯಾರಿಸುವ (ಉ.ದಾ, ದೋಸೆ ಹೊಯ್ಯುವುದು, ಚಪಾತಿ ಲಟ್ಟಿಸುವುದು, ಮಜ್ಜಿಗೆ ಕಡೆಯುವುದು) ಬಗೆಗಿನ ಕಲ್ಪನಾ ಆಟ, ಅವರಲ್ಲಿ ಸ್ವಂತಿಕೆ, ಧೈರ್ಯ ಮತ್ತು ಆಹಾರದ ಬಗೆಗಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಲೋಟಗಳನ್ನು ಒಂದರ ಮೇಲೊಂದರಂತೆ ಜೋಡಿಸುವುದು, ಚಮಚಗಳನ್ನು ಸಾಲಾಗಿ ಜೋಡಿಸುವುದು, ವರ್ತುಲ, ಚೌಕ, ನಕ್ಷತ್ರ ಈ ರೀತಿಯಾಗಿ ಬೇರೆ ಬೇರೆ ಆಕಾರಗಳನ್ನು ಮಾಡಲು ಹೇಳಿದರೆ, ಅದನ್ನು ಅವರು ಸವಾಲಾಗಿ ಸ್ವೀಕರಿಸಿ, ತಮ್ಮ ಕೌಶಲ್ಯದ ಪ್ರಯೋಗ ಮಾಡುತ್ತಾರೆ ಮತ್ತು ಸಂತಸ ಪಡುತ್ತಾರೆ. ಚಿಕ್ಕ ಪಾತ್ರೆ ಅಥವಾ ಚಿಕ್ಕ ಲೋಟವನ್ನು ದೊಡ್ಡ ಪಾತ್ರೆಯಲ್ಲಿ ಹಾಕಲು ಹೇಳುವುದು ಮಕ್ಕಳಿಗೆ ಸಣ್ಣ ದೊಡ್ಡದರ ಕಲ್ಪನೆಯನ್ನು ಕೊಡುತ್ತದೆ. ಬೇರೆ ಬೇರೆ ಪ್ರಮಾಣದ ಕರಡಿಗೆ ಮತ್ತು ಅದರ ಮುಚ್ಚಳವನ್ನು ತೆಗೆದು ಮನಬಂದಂತೆ ಇರಿಸಿ, ನಂತರದಲ್ಲಿ ಮಕ್ಕಳಿಗೆ ಜೋಡಿಸುವಂತೆ ಕೇಳಿದರೆ, ಮಕ್ಕಳು ಹೊಂದಾಣಿಕೆ ಮಾಡಲನುವಾಗಿ ತಮ್ಮ ಬುದ್ಧಿವಂತಿಕೆಯ ಪ್ರಯೋಗ ಮಾಡುತ್ತಾರೆ.

   


೨. ಕಾಯಿ, ಬೀಜ ಮತ್ತು ಮಣಿಗಳು
           ಚಿಕ್ಕಮಕ್ಕಳು ಬೀಜ-ಕಾಳುಗಳನ್ನು ಬಾಯಿಗೆ ಹಾಕುವ ಸಾಧ್ಯತೆ ಇರುವುದರಿಂದ, ತೀರ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ, ಇತರ ಮಕ್ಕಳಿಗೆ ಮನೆಯಲ್ಲಿಯೇ ಇರುವ ಕಾಳು, ಧಾನ್ಯಗಳನ್ನು ಕೊಟ್ಟು ಸಾಕಷ್ಟು ತರದಲ್ಲಿ ಆಟವಾಡಿಸಬಹುದು. ಉದಾಹರಣೆಗೆ, ಕರವೀರದ ಬೀಜಗಳು ಸಾಮಾನ್ಯವಾಗಿ ನಮಗೆ ಸಿಗುತ್ತವೆ. ಅದನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡರೆ, ಸ್ವಲ್ಪ ಸಣ್ಣ ಪ್ರಾಯದ ಮಕ್ಕಳಿಗೆ ಪಾತ್ರೆಗೆ ತುಂಬಲು ಕೊಡಬಹುದು, ಚಿಕ್ಕ ಮಕ್ಕಳಿಗೆ ಅದಕ್ಕಿಂತ ಸಂತೋಷದ ಆಟ ಬೇರೊಂದಿಲ್ಲ. ಸ್ವಲ್ಪ ದೊಡ್ಡ ಗಾತ್ರದ ಬೀಜವಾಗಿರುವುದರಿಂದ ಈ ತರದ ಬೀಜಗಳು ನಿರುಪದ್ರವ ವಸ್ತುಗಳು. ಮಕ್ಕಳು ನುಂಗುವ ಭಯವಿರುವುದಿಲ್ಲ. ಹಾಗೆಯೇ, ಬೇರೆ ಬೇರೆ ಪ್ರಕಾರದ ಕಾಳುಗಳನ್ನು ಒಂದು ಬಟ್ಟಲಲ್ಲಿ ಹಾಕಿ, ೩-೪ ಬಟ್ಟಲುಗಳನ್ನು ನೀಡಿ ಕಾಳುಗಳನ್ನು ವಿಂಗಡಣೆ ಮಾಡಲು ಕೇಳಿದರೆ, ಮಕ್ಕಳಿಗೆ ಪ್ರಾಯೋಗಿಕವಾದ ಈ ಆಟ ಇಷ್ಟವಾಗುತ್ತದೆ. ಜೊತೆಗೆ,  ಸ್ವಲ್ಪ ದೊಡ್ಡ ದೊಡ್ಡ ಧಾನ್ಯಗಳನ್ನು ಸಾಲಾಗಿ ಅಥವಾ ಇನ್ನಿತರೇ ಆಕಾರಗಳಲ್ಲಿ ಜೋಡಿಸಲು ಕೂಡ ಹೇಳಬಹುದು. ಅವರಿಗೆ ಅವರದ್ದೇ ಆದ ಒಂದು ಆಕ್ಟಿವಿಟಿ ಬುಕ್ ಎಂದು ತೆಗೆದಿಟ್ಟು ಅದರಲ್ಲಿ ವಿಧ ವಿಧವಾದ ಚಿತ್ರಗಳನ್ನು ಮಾಡಿ, ಅಂಟನ್ನು ಹಚ್ಚಿಸಿ ನಂತರದಲ್ಲಿ ವಿವಿಧ ಬಣ್ಣದ ಧಾನ್ಯಗಳನ್ನು ಅಂಟಿಸಲು ಹೇಳಿದರೆ ಮಕ್ಕಳಿಗೆ ಒಂದು ರೀತಿಯ ಮೋಜಿನ ಚಟುವಟಿಕೆಗಳನ್ನು ನೀಡಿದಂತಾಗುತ್ತದೆ.


೩. ತರಕಾರಿ ಹಣ್ಣುಗಳು
          ತರಕಾರಿ ಹಣ್ಣುಗಳನ್ನು ಅಡಿಗೆಗೆ ಅಥವಾ ಬಳಕೆಗೆ ಉಪಯೋಗಿಸುವುದರ ಜೊತೆಯಲ್ಲಿ, ಅದನ್ನು ಮಕ್ಕಳಿಗೆ ಒಂದು ಕಲಿಕಾ ಮಾಧ್ಯಮವಾಗಿ ಬಳಸಿಕೊಳ್ಳಬಹುದು. ಇದರಿಂದ ಮಕ್ಕಳಿಗೆ ಹಣ್ಣು ತರಕಾರಿಗಳ ಪರಿಚಯದ ಜೊತೆಗೆ, ಆಹಾರದ ಬಗೆಗಿನ ಆಸಕ್ತಿ ಹೆಚ್ಚುತ್ತದೆ. ಇನ್ನೂ ಹಲ್ಲು ಮೂಡಿರದ ಮಕ್ಕಳಿಗೆ, ಸ್ವಚ್ಚಗೊಳಿಸಿದ ಒಂದು ಕ್ಯಾರಟ್ ನ್ನು ಕೈಗಿತ್ತರೆ ಸಾಕು, ಮಗು ಸಂತೋಷದಿಂದ ಅದನ್ನು ಬಾಯಲ್ಲಿಟ್ಟು ಕಚ್ಚಲು ಪ್ರಯತ್ನಿಸುತ್ತದೆ. ಹಲ್ಲು ಹುಟ್ಟುವಾಗಿನ ಅಹಿತಕರ ಅನುಭವಕ್ಕೆ ಈ ರೀತಿಯಾಗಿ ಚೂಪು ಹರಿತವಿಲ್ಲದ ಕ್ಯಾರಟ್ ತಿನ್ನಲು ಕೊಡುವುದು ತುಂಬಾ ಸಹಾಯವಾಗುತ್ತದೆ. ಅದರ ಜೊತೆಗೆ ಕ್ಯಾರಟ್ ರಸವು ಮಗುವಿನ ಬಾಯಿಯಲ್ಲಿ ಸಮ್ಮಿಶ್ರಣಗೊಂಡು, ಅದರ ಸಾರವು ಜೀರ್ಣಗೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಬೀನ್ಸ್ ಬೆಂಡೆಕಾಯಿ ಈ ತರದ ಉದ್ದ ತರಕಾರಿಗಳನ್ನು ಜೋಡಿಸಲು ಕೊಡಬಹುದು. ಮತ್ತು ಎಲ್ಲ ಬಗೆಯ ತರಕಾರಿಗಳನ್ನು ಅವರೆದುರು ಇಟ್ಟು, ಅವುಗಳ ಹೆಸರು, ಬಣ್ಣ, ಗಾತ್ರ  ಮತ್ತು ಸ್ವರೂಪವನ್ನು ಕೇಳಿದರೆ ಮತ್ತು ತಿಳಿಸಿದರೆ, ಅಲ್ಲಿಯೇ ಒಂದು ಕಲಿಕೆ ಆಗಿಯೇ ಬಿಟ್ಟಿತು ಅಲ್ಲವೇ? ಇನ್ನು, ಕೆಲವು ಹಣ್ಣು ತರಕಾರಿಗಳನ್ನು ಮಕ್ಕಳಿಗೆ ಪೇಯಿಂಟ್ ಮಾಡಿಸಲು ಕೂಡ ಬಳಸಬಹುದು. ಉದಾಹರಣೆಗೆ, ಬೆಂಡೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ಬಣ್ಣ ಹಚ್ಚಿಸಿ ಅದರಿಂದ ಹೂವಿನ ಚಿತ್ರವನ್ನು ರಚಿಸಲು ಅಚ್ಚಿನಂತೆ ಬಳಸಬಹುದು. ಬೀನ್ಸ್ ಅನ್ನು ಚೂಪಾಗಿ ಕತ್ತರಿಸಿ ಎಲೆಯ ಚಿತ್ರ ಬರೆಯಲು ಉಪಯೋಗಿಸಬಹುದು. ಅಲೂಗಡ್ಡೆಯನ್ನು ಅರ್ಧ ಕತ್ತರಿಸಿ, ಅದರಲ್ಲಿ ಯಾವುದಾದರೂ ಸಣ್ಣ ಡಿಸೈನ್ ಕೊರೆದು ಕೊಟ್ಟರೆ ಸಾಕು, ಮಕ್ಕಳ ನಂತರದ ಅರ್ಧ ಗಂಟೆಯ ಮೋಜು ಖಚಿತವಾದದ್ದು.
೩. ಮೇಜು, ಕುರ್ಚಿ ಮತ್ತು ಟೀಪಾಯಿ
         ಮೇಜು ಕುರ್ಚಿಗಳನ್ನು ಬಳಸಿ ಏನು ಮಾಡಬಹುದಪ್ಪ ಎಂದು ನಿಮಗನಿಸಬಹುದು. ಆದರೆ ಇವುಗಳನ್ನೂ ಕೂಡ ಆಟದ ಸಾಮಗ್ರಿಗಳಾಗಿ ಬಳಸಿಕೊಳ್ಳಬಹುದು. ಒಂದು ದೊಡ್ಡ ಮೇಜು ಇದ್ದರೆ, ಮೇಜು ಸಂಪೂರ್ಣ ಮುಚ್ಚುವಷ್ಟು ದೊಡ್ಡ ಮೇಲು ಹೊದಿಕೆಯನ್ನು ಹಾಕಿಟ್ಟರೆ, ಅದರಡಿಯಲ್ಲಿ ನಿಮ್ಮ ಪುಟ್ಟ ಮಗುವಿಗೊಂದು ಸ್ವಂತ ಮನೆ ರೆಡಿ. ಮಕ್ಕಳಿಗೆ ಕಾಲ್ಪನಿಕ ಆಟಗಳು ಅತೀವ ಸಂತೋಷವನ್ನು ಕೊಡುತ್ತದೆ ಜೊತೆಗೆ ಅವರು ಬುದ್ದಿ ವಿಕಸನಕ್ಕೆ ಸಾಕಷ್ಟು ಸಹಾಯವಾಗುತ್ತದೆ. "ಇದು ನಿನ್ನ ಮನೆ, ನಾನು ಬರಲೇ? ನನಗೇನು ಕೊಡುತ್ತೀಯ?" ಎಂದೆಲ್ಲ ಕಾಲ್ಪನಿಕ ಸನ್ನಿವೇಶಗಳನ್ನು ರಚಿಸಿದರೆ, ಮಗು ನಾನಾ ರೀತಿಯಲ್ಲಿ ಆದುಳು ಇಷ್ಟ ಪಡುತ್ತದೆ ಜೊತೆಗೆ ಮನೆಯವರ ಚಟುವಟಿಕೆಯನ್ನು ಗಮನಿಸಿಕೊಂಡು ಅದರಂತೆಯೇ ತಾನೂ ಕೂಡ ವರ್ತಿಸಲು ಪ್ರಯತ್ನಿಸುತ್ತದೆ. ಆದರೆ ಮಗುವಿಗೆ ಅದರಡಿಯಲ್ಲಿ ಹೋಗುವಾಗ ತಾಗಿಸಿಕೊಳ್ಳದಂತೆ ಮುನ್ನಚ್ಚೆರಿಕೆಯ ಸೂಚನೆ ಅಗತ್ಯ. ಇನ್ನು ಮನೆಯಲ್ಲಿ ಸ್ವಲ್ಪ ಆಡುವಷ್ಟು ವಿಶಾಲ ಜಾಗವಿದ್ದರೆ, ಮಗುವಿಗೆ ಅದರಿಷ್ಟದ ಆಟಿಕೆ ಅಥವಾ ವಸ್ತುವನ್ನು ಕಾಣುವಂತೆ ಒಂದು ಕುರ್ಚಿಯ ಮೇಲಿಟ್ಟು, ಮಕ್ಕಳಿಗೆ ದೂರದಿಂದ ಅಂಬೆಗಾಲಿಟ್ಟು ಬರಲು, ಕುಪ್ಪಳಿಸಿ ಬರಲು, ಉಲ್ಟಾ ನೆಡೆದು ಬರಲು ಆಕರ್ಷಿಸಬಹುದು. ಇದರಿಂದ ಮನೆಯಲ್ಲಿಯೇ ಅವರಿಗೆ ದೈಹಿಕ ವ್ಯಾಯಾಮವಾದಂತಾಗಿ ಮಕ್ಕಳ ಬೆಳವಣಿಗೆಗೆ ಸಹಾಯಕವಾಗುತ್ತದೆ.


೪. ರೊಟ್ಟಿನ ಕೊಳವೆ, ನಿರುಪಯುಕ್ತ ಪೊಟ್ಟಣಗಳು
           ನಿಮ್ಮ ಮನೆಯಲ್ಲಿ ಊದಿನ ಕಡ್ಡಿಯ ಕೊಳವೆ, ಟೀ ಪೌಡರ್ ಪೊಟ್ಟಣ, ಟೂತ್ ಪೇಸ್ಟ್ ಬಾಕ್ಸ್,ಈ ತರಹದ ಖಾಲಿ ಪೊಟ್ಟಣ ಸೀದಾ ಕಸದಬುಟ್ಟಿಗೆ ಹೋಗುತ್ತಿದೆಯೇ? ಮುಂದಿನ ಸಲ ಎತ್ತಿಡಿ. ಈ ತರದ ಪೊಟ್ಟಣಗಳನ್ನು ಒಳ್ಳೆ ರೀತಿಯಲ್ಲಿ ತೆಗೆದಿಟ್ಟು ಮಕ್ಕಳಿಗೆ ರೈಲಿನ ಮಾದರಿ ಮಾಡಬಹುದು, ಪೊಟ್ಟಣಗಳನ್ನು ಏರಿಸಿ ದೊಡ್ಡ ಬಿಲ್ಡಿಂಗ್ ಕಟ್ಟಲು ಕೊಡಬಹುದು. ಮಕ್ಕಳಿಗೆ ಇಷ್ಟವಾದ ವಸ್ತುವನ್ನು ಒಂದು ಚಿಕ್ಕ ಪೊಟ್ಟಣದಲ್ಲಿ ತುಂಬಿಟ್ಟು, ಅದನ್ನು ಮತ್ತೊಂದು ದೊಡ್ಡ ಪೊಟ್ಟಣದಲ್ಲಿ ಹಾಕಿ, ಇದೇ ರೀತಿಯನ್ನು ಪುನರಾವರ್ತಿಸಿ ಸಾಕಷ್ಟು ಪೆಟ್ಟಿಗೆ ಮಾಡಿ ಕೊಟ್ಟರೆ, ಮಕ್ಕಳಿಗೆ ಅದನ್ನು ಹುಡುಕಿ ತೆಗೆಯುವುದೇ ಒಂದು ಮೋಜಿನ ಆಟವಾಗುತ್ತದೆ. ಅದರಿಂದ ಮಕ್ಕಳಿಗೆ ಸಂತೋಷವೋ ಸಂತೋಷ. ಸಣ್ಣ ಸಣ್ಣ ರೊಟ್ಟಿನ ಪೆಟ್ಟಿಗೆಗಳಿಗೆ ಬಣ್ಣ ಹಚ್ಚಿ ಇಲ್ಲವೇ ನಿರುಪಯುಕ್ತ ಬಟ್ಟೆಯಿಂದ ಸುತ್ತಿ ಅಲಂಕರಿಸಿಡಿ ಮತ್ತು ಮಕ್ಕಳಿಗೆ ಅವರ ತರತರದ ಆಟದ ಸಾಮಾನುಗಳನ್ನು ವಿಂಗಡಿಸಿ ಹಾಕಿಟ್ಟು ಕೊಳ್ಳಲು ತಿಳಿಸಿ.


೫. ಡ್ರಾಯಿಂಗ್, ಪೇಯಿಂಟ್ ಇತರ ಶೈಕ್ಷಣಿಕ ವಸ್ತುಗಳು
       ಕೈಯಲ್ಲಿ ಪೆನ್ನು ಪೆನ್ಸಿಲ್ ಹಿಡಿತ ಹೊಂದಿರುವಷ್ಟು ದೊಡ್ಡ ಮಕ್ಕಳಿಗೆ, ಒಂದು ಸೊಗಸಾದ ಆಟವೆಂದರೆ ಅವರಿಗೆ ಪೆನ್ನು ಮತ್ತು ಪೇಪರ್ ಅವರ ಕೈಗೆ ಸಿಗುವುದು. ಯಾವುದೇ ಮಗುವಿಗೆ ಬೋರ್ (ಏನು ಮಾಡಬೇಕೆಂದು ಆ ಕ್ಷಣಕ್ಕೆ ತಿಳಿಯದ ಸನ್ನಿವೇಶ) ಆದಾಗ, ಅವರ ಕೈಗೆ ಸ್ಲೇಟು ಬಳಪ, ಅಥವಾ ಪೆನ್ನು ಪೇಪರ್ ಕಲರ್ ಪೆನ್ಸಿಲ್ ಗಳು, ಬಣ್ಣಗಳು ಇತರೆ ಕಲಾತ್ಮಕ ವಸ್ತುಗಳನ್ನು ನೀಡಿದಲ್ಲಿ, ಅವರು ಅವರದ್ದೇ ಆದ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಬಣ್ಣಗಳ ಪರಿಕಲ್ಪನೆ ಮಕ್ಕಳಲ್ಲಿ ಮೂಡುತ್ತದೆ. ಪರಿಪೂರ್ಣ ಚಿತ್ರವನ್ನು ಬರೆಯಲು ಬಾರದಿದ್ದರೂ ಮಗುವಿಗೆ ತಾನು ಮನಸ್ಸಿನಲ್ಲಿ ಯೋಚಿಸಿದ ವಸ್ತುವಿನ ರಚನೆಯ ಕುರಿತು ಒಂದು ರೀತಿಯ ತೃಪ್ತಿ ಸಿಗುತ್ತದೆ. ಬಾಚಣಿಗೆ, ಸ್ಪಂಜ್ ಅಥವಾ ಹತ್ತಿಯನ್ನು ಬಳಸಿ, ಬಣ್ಣಗಳಿಂದ ಕಲಾತ್ಮಕ ಚಿತ್ರಗಳನ್ನು ಮಾಡಲು ಕೇಳಬಹುದು. ಅನುಕೂಲವಿದ್ದರೆ ನಾವು ಕೂಡ ಅವರೊಡನೆ ಕೂತು ಮಾರ್ಗದರ್ಶನ ಮಾಡುವುದರಿಂದ ಅವರಲ್ಲಿ ಕಲಾತ್ಮಕತೆಯ ಕೌಶಲ್ಯವನ್ನು ಉತ್ತಮಗೊಳಿಸಬಹುದು. ಅಂತೆಯೇ, ಯಾವುದೇ ಪಾತ್ರೆಯನ್ನು ಮೂಲ ಆಧಾರದ ವಸ್ತುವಾಗಿಟ್ಟುಕೊಂಡು ಅದರ ಮೇಲೆ ನಿರುಪಯುಕ್ತ ಪೇಪರ್ ಚೂರುಗಳನ್ನು ೪-೫ ಸುತ್ತು ಅಂಟಿಸುತ್ತ ಬಂದರೆ ಮಕ್ಕಳಿಂದಲೇ ಪೇಪರ್ ಬಾಕ್ಸ್, ಪಾತ್ರೆ ಇನ್ನಿತರ ಉಪಯೋಗಿ ವಸ್ತುಗಳ ರಚನೆಯಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಯಾರಿಗೆ ಅಕ್ಷರಗಳ ಜ್ಞಾನವಿದೆಯೋ ಅಂತಹ ಮಕ್ಕಳಿಗೆ, ಒಂದು ಹಾಳೆಯಲ್ಲಿ, ಚೌಕ ಮನೆಗಳನ್ನು ಹಾಕಿ, ಮನಸ್ಸಿಗೆ ಬಂಡ ಅಕ್ಷರಗಳನ್ನು ಅದರಲ್ಲಿ ತುಂಬಿಸಿ, ಅಕ್ಷರಗಳನ್ನು ಬೇರೆ ಬೇರೆ ಮನೆಗಳಲ್ಲಿ ಪುನರಾವರ್ತಿಸಿ ಬರೆಯಿರಿ. ನಂತರ, ನೀವು ಹೇಳಿದ ಯಾವುದಾದರೊಂದು ಅಕ್ಷರ ಎಲ್ಲೆಲ್ಲಿ ಇವೆ ಎಂಬುದನ್ನು ಕಂಡು ಹಿಡಿಯಲು ಕೇಳಿದರೆ, ಮಕ್ಕಳಿಗೆ ಆಟದ ನೆಪದಲ್ಲಿ ಪಾಠದ ಪುನರಾವರ್ತನೆಯೂ ಆಗಿಬಿಡುತ್ತದೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ, ಇನ್ನೊಂದು ಕುತೂಹಲವಾದ ಮತ್ತು ಮಜಾ ಕೊಡುವ ಆಟವೆಂದರೆ, ನೀವು ನಿಮ್ಮ ಮಗುವಿನೊಡಗೂಡಿ, ಯಾವುದಾದರೂ ಅಕ್ಷರವನ್ನು ಗುರಿಯಾಗಿಟ್ಟುಕೊಂಡು, ಆ ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಒಂದು ಹಾಳೆಯ ಮೇಲೆ ಬರೆಯುತ್ತಾ ಬನ್ನಿ. ಯಾರು ಹೆಚ್ಚಿನ ಶಬ್ದ ಬರೆಯುತ್ತಾರೆ ಎಂಬದು ಸವಾಲಾಗಿರಲಿ. ನೋಡಿ, ನಿಮ್ಮ ಮಕ್ಕಳು ಆಡುತ್ತಾ ಆಡುತ್ತಾ ಎಷ್ಟು ಕಲಿತಿರುತ್ತಾರೆ.


೬. ಗಿಡ ಬೆಳೆಸುವುದು
          ನಮ್ಮ ಮಗುವಿನ ಕೈಯ್ಯಾರೆ ಸಣ್ಣ ಮಣ್ಣಿನ ಜಾಗದಲ್ಲಿ ಮೆಂತೆ, ಕೊತ್ತಂಬರಿ, ಸಣ್ಣ ಹೂವಿನ ಗಿಡ,  ಈ ರೀತಿಯಾದ ವೇಗವಾಗಿ ಬೆಳವಣಿಗೆ ಇರುವ ಸಸ್ಯಗಳ ಬೀಜವನ್ನು ಬಿತ್ತಿಸಿದರೆ, ಅದು ಮೊಳಕೆ ಬರುವ ಹಂತದಿಂದ ಹಿಡಿದು, ಮನೆ ಬಳಕೆಗೆ ಬರುವಷ್ಟು ಬೆಳೆ ಬರುವ ವರೆಗೆ ಮಕ್ಕಳಿಗೆ ಸಸ್ಯಗಳ ಪಾಲನೆ ಪೋಷಣೆ ಬಗ್ಗೆ ತಿಳಿಸಿಕೊಡಬಹುದು. ಮಕ್ಕಳಿಗೆ ಗಿಡಗಳಿಗೆ ನೀರು ಹಾಕುವುದೇ ಒಂದು ಖುಷಿ. ಅದರಲ್ಲೂ ತಾವು ನೆಟ್ಟ ಗಿಡ, ತಮ್ಮದೇ ಮನೆಯಲ್ಲಿ ಬೆಳೆದ ಪೈರು ಎಂಬಿತ್ಯಾದಿ ಆಲೋಚನೆಗಳು, ಮಕ್ಕಳಲ್ಲಿ ಗಿಡ ಮರಗಳ ಬಗ್ಗೆ ಪ್ರೀತಿ ಮತ್ತು ಹೆಮ್ಮೆ ತರುವುದಲ್ಲದೆ, ಸ್ವಾಲಂಭನೆ ಮತ್ತು ಕಲಿಯುವ ಸ್ವತಂತ್ರತೆ ಅವರ ಮನಸ್ಸಿನಲ್ಲಿ ಬೇರೂರುತ್ತದೆ.೬. ಇನ್ನಿತರೆ ಆಟಗಳು
           ಬಟ್ಟೆ ಒಣಗಿಸುವ ಕ್ಲಿಪ್ ಅನ್ನು ರೊಟ್ಟಿನ ಪೆಟ್ಟಿಗೆಗೆ ಜೋಡಿಸಲು ಹೇಳುವುದು. ಚಪಾತಿ ಹಿಟ್ಟನ್ನು ಕೈಗಿತ್ತು ಯಾವುದೇ ತರಹದ ಅಕಾರ ಮಾಡಿ ಆನಂದಿಸಲು ಬಿಡುವುದು. ಹಿಡಿಕಡ್ಡಿ ಬಳಸಿ ಕಡ್ಡಿಯಾಟ ಆಡುವುದು. ನ್ಯೂಸ್ ಪೇಪರ್ ಅಥವಾ ಇನ್ನಿತರ ವೇಸ್ಟ್ ಪೇಪರ್ ಬಳಸಿ, ಟೋಪಿ, ದೋಣಿ, ಒರಿಗಾಮಿ ವಸ್ತುಗಳ ರಚನೆ ಮಾಡಬಹುದು. ಕಿಟಕಿ ಕರ್ಟನ್ ಗಳಿಗೆ ಹಾಕುವ ರಿಂಗ್ ಅನ್ನು ಒಂದು ದಾರಕ್ಕೆ ಪೋಣಿಸಲು ತಿಳಿಸುವುದು. ಕೈಗೆ ಹಾಕುವ ಗಾಜಿನದಲ್ಲದ ಬಳೆಗಳನ್ನು ನೀಡಿ, ತಮಿಷ್ಟದ ಆಕಾರವನ್ನು ಮಾಡಲು ಮಕ್ಕಳಿಗೆ ಹೇಳಬಹುದು. ಕವಡೆ ಆಟ, ಪದಬಂಧ ಇತರೆ ಆಟಗಳು ಮನೆಯಲ್ಲಿಯೇ ಆಡಬಹುದಂತದಾಗಿದೆ. ಮನೆಯಲ್ಲಿ ಬಳಕೆಯಾಗದ ಹೆಚ್ಚಿನ ಕುಕ್ಕರ್ ಗ್ಯಾಸ್ಕೆಟ್ ಇದ್ದರೆ, ಅದನ್ನು ಬಳಸಿ ಕುಪ್ಪಳಿಸಲು ಮಕ್ಕಳಿಗೆ ಉತ್ತೇಜನ ನೀಡಬಹುದು. ಒಂದು ತಟ್ಟೆಯಲ್ಲಿ ನಿತ್ಯ ಉಪಯೋಗಿಸುವ ಚಿಕ್ಕ ಚಿಕ್ಕ ವಸ್ತುಗಳನ್ನಿಟ್ಟು, ಮಗುವಿಗೆ ಅದರಲ್ಲಿರುವ ವಸ್ತುಗಳ ಮನನ ಮಾಡಿಕೊಳ್ಳಲು ತಿಳಿಸಿ, ನಂತರದಲ್ಲಿ ಮಗುವಿಗೆ ತಾನು ನೋಡಿದ ವಸ್ತುಗಳನ್ನು ಸ್ಮರಿಸಲು ಕೇಳುವುದರಿಂದ ಆಟದ ಜೊತೆಯಲ್ಲೇ ಮಗುವಿನ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ.

     


Friday, December 11, 2015

ಮರೆಯಲಾಗದ ಘಟನೆಗಳು...

'ಮರೆಯಲಾಗದ' ಎನ್ನುವುದಕ್ಕಿಂತ ಮರೆಯಲೇ ಇಷ್ಟವಿಲ್ಲದ ಕೆಲವು ಸಂದರ್ಭಗಳನ್ನು ಇಲ್ಲಿ ಬರೆಯಲಿಚ್ಚಿಸುತ್ತೇನೆ. ನನ್ನ ಬ್ಲಾಗ್ನಲ್ಲಿ, ನನ್ನದೇ ಆದ ಜಾಗ ಇರುವುದರಿಂದ ಈ ಕೆಲವು ಘಟನೆಗಳನ್ನು ಶೇಖರಿಸಿಡಲೇನು ಅಡ್ಡಿ ನನಗೆ?? ಹಂಚಿಕೊಳ್ಳುತ್ತಿದ್ದೇನೆ, ಭಾವನೆಗಳು ಇಮ್ಮಡಿಗೊಳ್ಳಲಿ ಎಂದು :) :)

ಘಟನೆ ೧. 
     ಮಗಳನ್ನು ಅವಳ ಪ್ಲೇ ಹೋಂ ಗೆ ಕರೆದುಕೊಂಡು ಹೋಗುವ ಸಂದರ್ಭ. ಸಾನ್ವಿಗೆ ಆಗ ೨ ವರ್ಷ ೩ ತಿಂಗಳು  ಇದ್ದಿತ್ತೇನೋ. ಹೋಗುವ ದಾರಿ ಬದಿಯಲ್ಲಿ ಕೆಲವೊಂದು ಕಡೆ ಇರುವ ಮರಗಳ ನೆರಳು ಬೀಳುವ ಜಾಗ ಅವಳಿಗೆ ಹಾಯ್ ಎನಿಸುತ್ತಿತ್ತೇನೋ.. ಸುಡು ಬಿಸಿಲಿಗೆ ಬಂದ ತಕ್ಷಣ, "ಅಮ್ಮಾ , ಬಿಸ್ಲು ..." ಎಂದಳು. ಎಷ್ಟಂದರೂ ಅಮ್ಮ ಅಲ್ಲವೇ, ಮಗಳೇ ನೆರಳಿಗೆ ಬಾ ಎಂದು ಸೂಚನೆ ನೀಡಿದೆ. ಸರಿ ಆ ಮರದ ನೆರಳೆನೋ ಮುಗಿಯಿತು, ಮತ್ತೆ ಮುಂದೆ ಸ್ವಲ್ಪ ಹಾದಿ ಬಿಸಿಲು. ಬಿಸಿಲು ನೆರಳುಗಳ ಅನುಭವದ ವ್ಯತ್ಯಾಸ ಸರಿಯಾಗಿ ತಿಳಿದ ಅವಳು ನಂತರದಲ್ಲಿ ಹೇಳಿದ ಎರಡು ಸಾಲು, ನನ್ನಲ್ಲಿ ದಿಗ್ಭ್ರಮೆ ಮೂಡಿಸಿತು. "ಅಮ್ಮಾ, ಬಿಸ್ಲು.. ಇಲ್ಲೆಲ್ಲಾ ಯಾಕೆ ಮರ ಇಡಲ್ಲೇ ನೀನು?? ಜಾಸ್ತಿ ಮರ ತಪ್ಪನ ಅಡ್ಡಿಲ್ಯಾ ?? ಅವಾಗ ಬಿಸ್ಲು ಹೋಗ್ತು". (ಒಹ್! ನಮಗೆ ಈ ವಿಷಯ ತಿಳಿದೇ ಇರಲಿಲ್ಲವಲ್ಲ..!!!)ಘಟನೆ ೨. 
      ಮನೆಯ ಬಾಲ್ಕನಿ ಇಂದ ಹೊರಗಡೆ ನೋಡುತ್ತಾ ಇರುವುದು ಸಾನ್ವಿಯ ಒಂದು ದಿನನಿತ್ಯದ ವಾಡಿಕೆ. ಅವಳಲ್ಲಿ ನಿಂತು ನೋಡುತ್ತಿರುವಾಗ ನಾನವಳ ಕಣ್ತಪ್ಪಿಸಿ ಒಳಗೆ ಓಡಿ ಬಾಕಿ ಇರುವ ಕೆಲಸಗಳನ್ನು ಮುಗಿಸಿಕೊಳ್ಳುವುದು ಕೂಡ ನನ್ನ ವಾಡಿಕೆ ;) ಹೀಗೆ ಏನೋ ಮನೆ ಕೆಲಸ ಮಾಡಿಕೊಳ್ಳುತ್ತಿದ್ದೆ, ಸಾನ್ವಿ ಜೋರು ಜೋರಾಗಿ ಏನೋ ಕೂಗುತ್ತಿದ್ದಳು, ಇಣುಕಿದೆ ಕುತೂಹಲದಿಂದ. ಸುಮಾರು ದೂರದಲ್ಲಿ ರಸ್ತೆ ಅಂಚಿನಲ್ಲಿ ಎಸೆದ ಕಸಗಳ ಮದ್ಯೆ ದನವೊಂದು ಮೇಯುತ್ತಿತ್ತು...ಕಸವನ್ನೇ!! "ಏಯ್ ತಿನ್ನಡ, ಕವರ್ ತಿನ್ನಡ, ಅಂಬುಚ್ಚೀ (ದನ).... ಕವರ್ ಬಾಯಿಗ್ ಹಾಕಡ... ಅದು ಚಿಚ್ಚಿ (ಕೊಳಕು), ಹೊಟ್ಟೆ ಅಬ್ಬು (ನೋವು) ಆಗ್ತು ನಿಂಗೆ ತಿನ್ನಡ ಎಯ್ ಅಂಬುಚ್ಚೀ..". ಪಾಪ ಈ ಹಿತೈಷಿಯ ಕೋರಿಕೆ ಅದಕ್ಕೇನು ತಿಳಿದೀತು?? ತಿಳುವಳಿಕೆಯ ಅವಶ್ಯಕತೆ ಇರುವುದು ಹಸುವಿಗಲ್ಲ :( :( 


ಘಟನೆ ೩. 
       ಅಜ್ಜ ಅಜ್ಜಿ ಬೆಂಗಳೂರಿಗೆ ಬಂದು ವಾಪಸ್ ಹೋಗುವಾಗ ಮೊಮ್ಮಗಳಿಗೆ ಬೇಜಾರಾದರೂ ಹೇಳಿಕೊಳ್ಳುವಷ್ಟು ಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಅವಳ ಗಮನ ಬೇರೆ ಕಡೆ ಹರಿಸಬೇಕೆಂದು ನಾನು ಅವಳಿಗೆ ಬಸ್ ಕಂಡಕ್ಟರ್ ಯಾರು, ಏನು ಕೇಳುತ್ತಾನೆ ಎಲ್ಲದರ ಬಗ್ಗೆ ಕಥೆ ಹೇಳುತ್ತಿದ್ದೆ. ಮಗಳಿಗೆ ಥಟ್ಟನೆ ಎಲ್ಲೋ ಏನೋ ಹೊಳೆದಂತಾಗಿ, ತನ್ನ ಜೇಬಿನಿಂದ ಅಜ್ಜಿ ಹೊರಡುವಾಗ ಭರಪೂರ ಪ್ರೀತಿ ಮಾಡಿ ಕೈಗೆ ಇತ್ತ ಹತ್ತು ರೂಪಾಯೀಯ ನೋಟನ್ನು ಹೊರತೆಗೆದು ನನ್ನಲ್ಲಿ ಕೇಳಿದಳು . "ಅಮ್ಮಾ, ಇದು ಕೊಟ್ರೆ ಕಂಡಕ್ಟರ್ ಮಾಮ ನಂಗೆ ಸಾಗರ ಅಜ್ಜ ಮನೆಗೆ ಕರ್ಕ ಹೋಗ್ತ್ನಾ?" ಯಾವುದರ ಬೆಲೆ ಬಗ್ಗೆ ತಿಳಿಸಲಿ ಎಂದೇ ತಿಳಿಯಲಿಲ್ಲವಾಯಿತು ನನಗೆ. 

ಘಟನೆ ೪.
       ಸಾಮಾನ್ಯವಾಗಿ ಮಗಳು ಏಳುವಷ್ಟರಲ್ಲಿ, ಅವಳ ಅಪ್ಪ ಆಫೀಸಿಗೆ ಪಲಾಯನ ಮಾಡಿಯಾಗಿರುತ್ತದೆ. ವೀಕೆಂಡ್ ನ ಎರಡು ದಿನಗಳು ಅಪ್ಪ ಸಿಕ್ಕು, ಮತ್ತೆ ಸೋಮವಾರ ಬೆಳಗಿನ ಜಾವದಲ್ಲಿ ಕಾಣದಿದ್ದಾಗ, ಮಗಳ ಸಹಜವಾದ ಪ್ರಶ್ನೆ, "ಅಪ್ಪ ಎಲ್ಲೋದ??" ಎಂದು. "ಅಪ್ಪ ಆಫೀಸಿಗೆ ಹೋದ" ಎಂಬ ಬದಲಾವಣೆ ಇಲ್ಲದ ಉತ್ತರದಿಂದ ಬೇಸತ್ತು ಒಂದು ದಿನ ಮಗಳು ತನ್ನ ಸಂಭಾಷಣೆಯನ್ನು ಮುಂದುವರೆಸಿದಳು.
ಸಾನ್ವಿ : "ಅಮ್ಮಾ, ಅಪ್ಪ ಎಲ್ಲೋದ??"
ನಾನು : "ಅಪ್ಪ ಆಫೀಸ್ ಹೊಯ್ದ್ನಲೇ.."
ಸಾನ್ವಿ : "ಅಪ್ಪ ಬರೇ ಆಫೀಸ್ ಹೋಗಿ ಹೋಗಿ ಇಡ್ತ್ನಲೇ.. :("
ನಾನು : "ಮತ್ತೆ, ಆಫೀಸ್ ಹೋಗಿ, ಕೆಲಸ ಮಾಡಲ್ಲೆ ಅಂದ್ರೆ, ಯಾರೂ ದುಡ್ಡು ಕೊಡ್ತ್ವಲ್ಲೇ ಮರಿ, ಸಾನ್ವಿಗೆ ಫ್ರೂಟ್ಸ್ ತರಕ್ಕೆ, ಟಾಯ್ಸ್ ತರಕ್ಕೆ ಎಲ್ಲಾ ದುಡ್ಡು ಬೇಕಲೇ ನಮ್ಗೆ.." (ಮಗಳನ್ನು convince ಮಾಡಿದೆ ಎಂಬ ಅಶಾಭಾವನೆಯಲ್ಲಿ ಉತ್ತರಿಸಿದೆ)
ಒಂದು ನಿಮಿಷದ ಯೋಚನೆಯ ನಂತರ..
ಸಾನ್ವಿ : "ದುಡ್ಡು ನಂಗಕ್ಕೆ, ಆಟಮ್ ಕೊಡ್ತಲ!!??"
ನಾನು : "ಯಾರು ಕೊಡ್ತಾ??!!!"
ಸಾನ್ವಿ : "ಅದೇ, ಅಪ್ಪ ತಣ್ಣ cold ರೂಮಲ್ಲಿ ಹೋಗಿ ದುಡ್ಡು ತಗಬತ್ನಲ.."
ತಣ್ಣ cold ರೂಮು ಎಂದರೆ AC ರೂಮ್ ಎಂದು, ಆಟಮ್ ಎಂದರೆ ATM ಮಷೀನ್ ಬಗ್ಗೆ ಅವಳು ಹೇಳಿದ್ದು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ..
ತಕ್ಷಣದಲ್ಲಿ ಅನಿಸಿದ್ದು, ಮಕ್ಕಳ ಮನಸ್ಸು ಎಷ್ಟು ನೇರ, ದಿಟ್ಟ, ನಿರಂತರ..!!

ಇದೇ ಘಟನೆಗೆ ಸಂಬದಿಸಿದಂತೆ ಮಗಳ ಜೊತೆಗಿನ ಇನ್ನೊಂದು ಸಂಭಾಷಣೆಯೂ, ನನ್ನನು ಅವಕ್ಕಾಗಿಸಿತು.


     ಭಿಕ್ಷುಕನೊಬ್ಬ ಮನೆ ಬಾಗಿಲಿಗೆ ಬಂದು, ಅಮ್ಮಾ ತಾಯೇ ಎಂದು ಬಿಕ್ಷೆ ಕೇಳುತ್ತಿದ್ದ.. ೨.೫ ವರ್ಷದಿಂದ ಮಕ್ಕಳ ಪ್ರಶ್ನೆಗಳ ಹಾವಳಿ ಇದ್ದಿದ್ದೇ ಬಿಡಿ. ಪ್ರಶ್ನೆಗಳ ಸುರಿಮಳೆ ಶುರವಾಯಿತು.
ಸಾನ್ವಿ : "ಅಂವ ಯಾಕೆ ಅಮ್ಮಾ ಅಂತ ಕೂಗ್ತಿದ್ದ??"
ನಾನು : "ಅವ್ನು ಬಿಕ್ಷುಕ ಮರಿ, ಅವನು ತಂಗೆ ಊಟ, ತಿಂಡಿ, ಇಲ್ಲಾ ಚೂರು ದುಡ್ಡು ಬೇಕು, ಕೊಡಿ ಪ್ಲೀಸ್ ಅಂತ ಕೇಳ್ತಿದ್ದ.. "'
ಸಾನ್ವಿ : "ಅವನಮ್ಮ ಎಲ್ಲೋದ?"
ನಾನು : "ಅವನಮ್ಮ ಮನೆಲಿದ್ದ, but ಅವನು ಬಡವ ದುಡ್ಡಿಲ್ಲ ಅವನತ್ರ, ಅದಿಕ್ಕೆ ಅವ್ನು ನಮ್ ಹತ್ರ ಕೇಳ್ತ"
ಸಾನ್ವಿ : "ಯಾಕೆ ಹಂಗೆ ಕೇಳ್ತಾ..??"
ನಾನು : "ಯಾಕಂದ್ರೆ ಅವನತ್ರ ಸಾನ್ವಿ ಮನೆ ತರ ಮನೆ ಇಲ್ಲ, ಫುಡ್ ಇಲ್ಲ, cot ಇಲ್ಲ, ಆಟಾಡಕ್ಕೆ ಟಾಯ್ಸ್ ಏನೂ ಇಲ್ಲ ಅದಿಕ್ಕೆ." (ಮಗಳ ಜಗತ್ತಿನ ಮೂಲಭೂತ ವಸ್ತುಗಳಿಗೆ ಹೋಲಿಸಿ ವಿವರಿಸುವ ಪ್ರಯತ್ನ ನನ್ನದಾಗಿತ್ತು)

ಸಾನ್ವಿ : "ಅಂವ ಯಾಕೆ ಮನೇಲಿ ಊಟ ಮಾಡಲ್ಲೇ?"
ನಾನು : "ಊಟಕ್ಕೆ ಮಾಡಕ್ಕೆ ಬೇಕಾಗ ಅನ್ನ, ತರಕಾರಿ ಎಲ್ಲ ತಂದ್ಕಳಕ್ಕೆ ಅವನತ್ರ ದುದ್ದಿಲ್ಲೇ ಅದಿಕ್ಕೆ.."
ಸ್ವಗತ...
ಅಷ್ಟರೊಳಗಾಗಿ ತಿರುಗಿ ನಡೆದಿದ್ದ ಬಿಕ್ಷಕನೆಡೆಗೆ, ಮುಗ್ದ ಮಗು ಹೇಳಿದ ಮಾತು ನನಗೆ ನಿಂತಲ್ಲೇ ಮೈ ಜುಮ್ ಎನ್ನಿಸಿತು.
ಸಾನ್ವಿ : "ಅವನಿಗೆ ಹೇಳ್ತಿ ನಾನು, ಆಫೀಸಿಗೆ ಹೋಗಿ ಕೆಲಸ ಮಾಡು... ದುಡ್ಡು ಕೊಡ್ತ... ಅವಾಗ ಅವನಮ್ಮ food ಮಾಡ್ತಾ...ಪಿಗ್ಗಿ ಬ್ಯಾಂಕ್ ಅಲ್ಲಿ ಕಾಯಿನ್ ಹಾಕು, ಮತ್ತೆ ಟಾಯ್ಸ್ ತಗಳ್ಳಕ್ಕು ಅಂತ.. "
ಜೀವನದ ಸೂತ್ರಗಳು, ಎಷ್ಟೊಂದು ಸರಳ ಭಾಷೆಯಲ್ಲಿ... !!


ಘಟನೆ ೫ :
ನನ್ನ ಅಕ್ಕನ ಮಗ ರಜೆಗೆಂದು ನಮ್ಮ ಮನೆಗೆ ಬಂದಿದ್ದಾನೆ. ಎರಡು ದಿನದಿಂದಷ್ಟೇ ಸಾನ್ವಿಗೆ ಅವಳ ಅಜ್ಜ ಅಜ್ಜಿ ಬಂದಿದ್ದು, ಈಗ ಅದರ ಜೊತೆ ಅಣ್ಣನ ಬರುವಿಕೆಯಿಂದ ಅವಳಿಗಾದ  ಸಂತೋಷ ಅಷ್ಟಿಷ್ಟಲ್ಲ, ಎಷ್ಟರ ಮಟ್ಟಿಗೆಂದರೆ, ಹಗಲಿಡೀ ಕುಣಿದು ನಲಿದು ರಾತ್ರಿ ಮಲಗೋಣ ನೆಡಿ ಎಂದರೆ "ಅಣ್ಣನ ಜೊತೆಯೇ ನಾನು ಮಲಗುವುದು" ಎಂದು ಹಠ ಮಾಡಿ ತನ್ನ ಕೋರಿಕೆಯನ್ನು ಗಿಟ್ಟಿಸಿಕೊಂಡಳು. ಆದರೆ ೩ ವರ್ಷವೂ ತುಂಬದ ಇವಳಿಗೆ ಅವಳಮ್ಮ ಅಂದರೆ ನಾನು, ಇನ್ನೂ ಅವಳ ಅವಿಭಾಜ್ಯ ಅಂಗ. ನಿದ್ದೆ ಬಂದ ಮೇಲೆ ಅವಳನ್ನು ಎತ್ತಿ ವಾಪಾಸು ನಮ್ಮ ರೂಮಿಗೆ ಕರೆತಂದು ಮಲಗಿಸಿದರಾಯಿತು, ಅವಳಿಗೇನು ವ್ಯತ್ಯಾಸವಾಗುವುದಿಲ್ಲ ಎಂಬ ಅಭಿಪ್ರಾಯದಿಂದ ಅಜ್ಜ, ಅಜ್ಜಿ, ಅಣ್ಣ ಮತ್ತು ನಾನು ಎಲ್ಲರೂ ಅವಳ ಪಕ್ಕಕ್ಕೆ ಮಲಗಿದೆವು. ಇನ್ನೇನು ನಿದ್ರೆ ಅವರಿಸಬೇಕು ಎನ್ನುವಷ್ಟರಲ್ಲಿ, ಮಗಳ ಕೋರಿಕೆ ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸಿತು..! "ಫ್ಯಾಮಿಲಿ ದದ್ದಕ್ಕೆ (ದದ್ದ ಎಂದರೆ ನಮ್ಮ ಆಡು ಭಾಷೆಯಲ್ಲಿ ನಿದ್ರೆ ಎಂದರ್ಥ) ಅಪ್ಪನೂ ಬರಕ್ಕು.... " ಎಂದವಳನ್ನು ಕಂಡು, ನನಗೆ ಕಣ್ಣಂಚಿನಲ್ಲಿ ನೀರು.. ಅತ್ತ ಅಪರೂಪಕ್ಕೆ ಸಿಕ್ಕ ಪ್ರೀತಿ ಪಾತ್ರರಾದ, ಅಜ್ಜ, ಅಜ್ಜಿ, ಅಣ್ಣನನ್ನು ಬಿಡಲೂ ಮನಸಾಗದೆ, ಇತ್ತ ಅಪ್ಪನನ್ನು ಬಿಡಲಾಗದೆ ಕಷ್ಟಪಡುತ್ತಿದ್ದ ಮನಸ್ಸಿನಿಂದ ಹೊರಟ ಮಾತು.. !! ಕೌಟುಂಬಿಕ ಭಾಂದವ್ಯ ಮಕ್ಕಳಿಗೆ ಎಷ್ಟರ ಮಟ್ಟಿಗೆ ಆಳವಾಗಿ ಮನಸ್ಸಿನಲ್ಲಿರುತ್ತದೆ. ಅವಳು ಬಳಸಿದ ಆ ಫ್ಯಾಮಿಲಿ ಎಂಬ ಶಬ್ದವೇ ನಮ್ಮಲ್ಲಿ ಸಂತಸವನ್ನು ಉಂಟು ಮಾಡಿತು :) :)

     

   

ಘಟನೆ ೬ :


ಟಿ.ವಿ ಯಲ್ಲಿ ಇಂದು ಯಾವ ಚಾನಲ್ಲು ತಿರುಗಿಸಿ ಹಾಕಿದರೂ, ವರ್ಧಾ ಚಂಡಮಾರುತಕ್ಕೆ ತತ್ತರಿಸಿದ ಚೆನ್ನೈ ಬಗೆಗಿನ ನ್ಯೂಸ್ ಕಂಡುಬರುತ್ತಿತ್ತು. ಆ ಬಿರುಗಾಳಿ, ಮಳೆ, ಜನರ ಕಷ್ಟ ಎಲ್ಲಾ ವಿಷಯಗಳೂ ಟಿ.ವಿ ಯಲ್ಲಿ ಪುಂಖಾನುಪುಂಖವಾಗಿ ವರದಿಯಾಗುತ್ತಿತ್ತು. ನನ್ನ ಮಗಳು ಕೂಡ ತಲೆಯೆತ್ತಿ ಟಿ.ವಿಯಲ್ಲಿ ಬರುತ್ತಿರುವುದನ್ನು ನೋಡುತ್ತಾ ಪ್ರಶ್ನಿಸಲು ಪ್ರಾರಂಭಿಸಿದಳು. ಅಮ್ಮ ಯಾಕೆ ಅಲ್ಲಿ ಬೋಟ್ ಎಲ್ಲ ಬಿದ್ದೋಯ್ದು?, ಮರ ಎಲ್ಲಾ ಕಿತ್ತೊಯ್ದು, ಬೀಚ್ ಯಾಕೆ ಒದ್ದೆ ಆಯ್ದು, ಯಾಕೆ ಜನರೆಲ್ಲ ಬಲೂನ್ ಬೋಟಲ್ಲಿದ್ದ? ಹೀಗೆ ಹತ್ತು ಹಲವು ಪ್ರಶೆಗಳನ್ನು ಕೇಳತೊಡಗಿದಳು. ಕುಳಿತು ವಿವರಿಸಿದೆ. ಗಾಳಿ ಮಳೆಯ ಆರ್ಭಟ, ನಮ್ಮಲ್ಲಿ ಹೊರಗೆ ಬೀಳುತ್ತಿದ್ದ ಕೇವಲ ಜುಮುರು ಮಳೆ, ಟಿ.ವಿ ಯಲ್ಲಿ ಜನ ತತ್ತರಿಸಿದ್ದ ಬಗೆ ಎಲ್ಲವನ್ನೂ ಹೋಲಿಕೆ ಮಾಡಿ ತಿಳಿಸಿದೆ. "ಪಾಪ ಜನ ಎಷ್ಟು ಕಷ್ಟದಲ್ಲಿಯಿದ್ದ ನೋಡು, ಮನೆ ಎಲ್ಲ ಬಿದ್ದೋದ್ರೆ, ಅವರಿಗೆ safe  ಆಗಿ ಇರಲು ಜಾಗವೂ ಇಲ್ಲ, ಚಳಿ ಥಂಡಿ ಬೇರೆ" ಎಂದೆಲ್ಲಾ.. ಅದನ್ನೆಲ್ಲ ಮತ್ತೆ ವೀಕ್ಷಿಸಿ ನಂತರದಲ್ಲಿ ಅವಳು ಹೇಳಿದ ಮಾತು, ನನ್ನನ್ನು ಮೂಕ ವಿಸ್ಮಿತಳನ್ನಾಗಿ ಮಾಡಿತು.. ನನ್ನ ಪುಟ್ಟ ಕಂದ, ತನ್ನ ಪುಟ್ಟ ಮೆದುಳಿನಲ್ಲಿ ಎಷ್ಟೆಲ್ಲಾ ಯೋಚಿಸಿದ್ದಳೆಂದರೆ, "ಅಮ್ಮಾ, ನಾ ಹಂಗರೆ, ಸವೆ ವವ ಚುಕಿನುವವಂತು ಅಂತ ಸ್ವಾಮೀ ಹತ್ರ ಹೇಳ್ತಿ, ಅವಾಗ ಅವ್ರಿಗೆಲ್ಲ ಮಳೆ ಹೋಗ್ತು, ಮತ್ತೆ ಚಳಿ ಆಗ್ತಲ್ಲೆ..ಎಲ್ಲಾ ಪ್ರಾಬ್ಲೆಮ್ ಹೋಗಿ ಅವ್ರೆಲ್ಲ ಹ್ಯಾಪಿ ಹ್ಯಾಪಿ ಆಗ್ತಾ... "!! "ಸರ್ವೇ ಭವಂತು ಸುಖಿನಃ - ಅಂದರೆ ಪ್ರಪಂಚದಲ್ಲಿ ಯಾರಿಗೂ ಕಷ್ಟ(problem) ಆಗದೆ ಎಲ್ಲರೂ ಸಂತೋಷವಾಗಿರಲಿ (happy happy)" ಎಂದು ಹಿಂದೆ ಅವಳಿಗೆ ಅರ್ಥ ಹೇಳಿಕೊಟ್ಟದ್ದನ್ನು ಮನನ ಮಾಡಿಕೊಂಡು ಅದನ್ನೇ ಇಲ್ಲಿ ಪ್ರಯೋಗಿಸಿದಳು...!!! ಈಗ ನಮ್ಮದೂ ಕೂಡ ಅದೇ ಕೋರಿಕೆಯಾಗಿದೆ.!!

ಘಟನೆ ೭ : ಎಂತಾದರೂ ಆಗು ಮೊದಲು ಮಾನವನಾಗು...

ಈ ಸರ್ತಿ ಕ್ರಿಸ್ತಮಸ್ ರಜೆಗೆಂದು ಅಕ್ಕನ ಮನೆಗೆ ಹೋದಾಗ ನಡೆದ ನಮ್ಮ ಮಕ್ಕಳ ಕುರಿತಾದ ಎರಡು ಬೇರೆ ಬೇರೆ ಘಟನೆಗಳಿವು. ಈ ಘಟನೆಯಲ್ಲಿ ನಮ್ಮ ಮಕ್ಕಳಲ್ಲದೆ ಬೇರೆ ಯಾವ ಮಕ್ಕಳಿದ್ದರೂ ಇಷ್ಟೇ ರೋಮಾಂಚನವಾಗುತ್ತಿತ್ತೇನೋ ನಮಗೆ..!!


ಟೌನ್ಷಿಪ್ ನಲ್ಲಿರುವ ಅಪಾರ್ಟ್ಮೆಂಟ್ ಗಳಿಗೆ ಹೊಂದಿಕೊಂಡಂತೆ ಮಕ್ಕಳ ಪಾರ್ಕ್ಗಳು ಸಾಕಷ್ಟಿವೆ.  ಎಲ್ಲಾ ಪೋಷಕರೂ ತಮ್ಮ ಮಕ್ಕಳನ್ನು ಕರೆದು ತಂದು ಅಥವಾ ಮಕ್ಕಳೇ ಅಲ್ಲಿಗೆ ಬಂದು ಆಡಿಕೊಳ್ಳುವುದು ರೂಢಿ. ನನ್ನ ಅಕ್ಕನ ಮಗನೂ ಸ್ವಲ್ಪ ಹೊತ್ತು ಆಡಿಕೊಳ್ಳಲು ಹೋಗಿದ್ದ. ಆಡುತ್ತಿದ್ದ ಅವನಿಗೆ ತಕ್ಷಣಕ್ಕೆ ಏನು ಯೋಚನೆ ಬಂದಿತೋ ಏನೋ, ದಡಬಡನೆ ಮನೆಗೆ ಬಂದು ರೊಟ್ಟಿನ ಬಾಕ್ಸ್ ಒಂದನ್ನು ತೆಗೆದುಕೊಂಡು ಹೋಗಿ, ಆ ಪಾರ್ಕ್ ನಲ್ಲಿ ಬಿದ್ದಿದ್ದ ಸಣ್ಣ ಪುಟ್ಟ ಕಸಗಳನ್ನೆಲ್ಲ ಹೆಕ್ಕಿ, ಬಾಕ್ಸ್ ನಲ್ಲಿ ತುಂಬಿಕೊಂಡು ಹೋಗಿ, ಹತ್ತಿರದ ಕಸದ ಬುಟ್ಟಿಗೆ ಹಾಕಿ ಬಂದನಂತೆ. ಒಂದು ೬ ವರ್ಷದ ಮಗು ಸ್ವಂತಿಕೆಯಿಂದ ಮಕ್ಕಳ ಪಾರ್ಕ್ ಸ್ವಚ್ಛವಾಗಿಲ್ಲದನ್ನು ಗಮನಿಸಿ, ಅದನ್ನು ಸ್ವಚ್ಛಗೊಳಿಸುವ ಯೋಚನೆ ಮಾಡಬಹುದೆಂದರೆ, ನಾವು ಹಿರಿಯರು ಖಂಡಿತವಾಗಿಯೂ ಯೋಚಿಸಬೇಕಾದ್ದೇ!! ತನ್ನದು garbage truck, ಅದು ಕಸವನ್ನು ತೆಗೆದು ಹಾಕಿ, ಎಲ್ಲಾ ಮಕ್ಕಳಿಗೂ ಆಡಲು clean park  ಕೊಡುತ್ತದೆ ಎಂಬುದು ಅವನ ಸಮರ್ಥನೆ. ಸ್ವಚ್ಛತೆಯ 'ಅರಿವು' ಎಂದರೆ ಇದೇ ಅಲ್ಲವೇ..


ಇನ್ನೊಂದು ಘಟನೆಯೆಂದರೆ, ನಾನು ಮತ್ತು ನನ್ನ ಮಗಳು ಸಾನ್ವಿ, ಹೈದೆರಾಬಾದ್ ನ ಸ್ಥಳೀಯ ರೈಲಲ್ಲಿ ಪ್ರಯಾಣಿಸುತ್ತಿದ್ದೆವು, ಹೆಚ್ಚಿನ ಜನರು MMTS ಟ್ರೈನ್ ಬಳಸುವುದರಿಂದ, ಕಷ್ಟದಲ್ಲಿ ನಮಗೆ ಸೀಟ್ ದೊರಕಿತ್ತು.ಎಲ್ಲಾ  ಕಡೆಗೂ ತನ್ನ ಪುಟ್ಟ ಕಂಗಳಿಂದ ನೋಡುತ್ತಿದ್ದ ಮಗಳು ತಕ್ಷಣಕ್ಕೆ ನನ್ನ ಬಳಿ ಹೇಳಿದಳು. "ಅಮ್ಮಾ , ಏಳು ನೀನು ಅಲ್ಲಿ ಬೇಬಿ ಕರ್ಕೊಂಡಿರೋ ಆ ಆಂಟಿಗೆ ಜಾಗ ಬಿಡು". ತಕ್ಷಣಕ್ಕೆ ಸುತ್ತಲೂ ಕಣ್ಣಾಡಿಸಿ ಅಂತೂ ಆ ಮಹಿಳೆಯನ್ನು ಕರೆದೆನಾದರೂ ಆಕೆ ಮುಂಬರುವ ನಿಲ್ದಾಣದಲ್ಲಿ ಇಳಿಯುವವಳಾದ್ದರಿಂದ ಆಕೆಗೆ ಜಾಗದ ಅವಶ್ಯಕತೆ ಬೀಳಲಿಲ್ಲ. ಆದರೆ ವಿಪರಿಮೀತ ಸಂತೋಷವಾದ್ದೆಂದರೆ ಹಿಂದೊಮ್ಮೆ ನಾನು ಚಿಕ್ಕ ಪಾಪುವಿದ್ದ ತಾಯಿಯಿಬ್ಬರಿಗೆ ಸ್ಥಳ ಬಿಟ್ಟುಕೊಟ್ಟಿದ್ದನ್ನು ಪ್ರಶ್ನಿಸಿ ಒಲ್ಲದ ಮನಸ್ಸಿನಿಂದ ಓಕೆ ಎಂದಿದ್ದ ಮಗಳು ಇಂದು ತಾನೇ ಸ್ವತಃ ಸಹಾಯ ಮಾಡಲು ಮನಸ್ಸು ಮಾಡಿದ್ದು.


ಘಟನೆ ೮ : ಮಗಳೆಂಬ  ವರದಾನ 

ವಿದ್ಯಾಭ್ಯಾಸದ ಸಮಯದಿಂದಲೂ, ಅಪ್ಪಾಜಿ ಅಮ್ಮನ್ನ ಬಿಟ್ಟು ಹೊರಡೋದು ಅಂದ್ರೆ ನಂಗೆ ಕಣ್ಣಂಚಲ್ಲಿ ನೀರು. ಈ ಸರ್ತಿ ಬೇಸಿಗೆ ರಜೆ ಮುಗಿಸಿ ಸಾಗರದಿಂದ ವಾಪಸು ಬೆಂಗಳೂರಿಗೆ ಹೊರಡೋ ಸಮಯ. ಅಪ್ಪಾಜಿ ಅಮ್ಮ ನಮ್ಮನ್ನು ಕಳುಹಿಸಲು ಬಂದಿದ್ದರು. ಟಾಟಾ ಬೈಬೈ ಎಲ್ಲ ಮುಗಿಯಿತು. ಟ್ರೈನ್ ತಾನು ಯಾರಿಗೂ ನಿಲ್ಲುವುದಿಲ್ಲ ಎನ್ನುತ್ತಾ ಹೊರಟೇ ಬಿಟ್ಟಿತು. ನನ್ನ ಎಮೋಷನ್ಸ್ ಬಗ್ಗೆ ಚೆನ್ನಾಗಿ ತಿಳಿದಿರುವ ನನ್ನ ಯಜಮಾನರು, "ಮಗಳೆದುರು ಚಿಕ್ ಮಗು ತರ ಅಳ್ಬೇಡ ಮತ್ತೆ, ನಾನು ಬೆಳಿಗ್ಗೆಯೇ ನಿಮ್ಮನ್ನು ರೈಲ್ವೆ ಸ್ಟೇಷನ್ ನಿಂದ ಕರ್ಕೊಂಡ್ ಬರಕ್ಕೆ ಬಂದಿರ್ತೀನಿ" ಎಂದು ಫೋನಿನಲ್ಲಿ ಸಮಾಧಾನಿಸಿದ್ದೂ ಆಯಿತು. ಟ್ರೈನಿನಲ್ಲಿ ಮಗಳ ಮಂಗಾಟ ನಡೆದಿತ್ತು. ಎಲ್ಲೆಲ್ಲೋ ಹತ್ತಿ, ಹಾರಿ ಜಿಗಿದು ತನ್ನ ಪರಾಕ್ರಮ ಪ್ರದರ್ಶನವನ್ನು ಅಲ್ಲಿದ್ದವರಿಗೂ ತೋರಿಸುತ್ತಿದ್ದಳು. "ಅಮ್ಮ ಇಲ್ನೋಡೇ..." ಎಂದು ಕ್ಷಣ ಕ್ಷಣಕ್ಕೆ ಕೂಗುತ್ತ ಕರೆಯುತ್ತಿದ್ದಳು. "ಹ್ಮ್ ಹ್ಮ್.." ಎಂದು ನಾನು ತಲೆಯಾಡಿಸುತ್ತಿದ್ದರೂ ಮನಸ್ಸು ಮೌನಕ್ಕೆ ಶರಣಾಗಿತ್ತು. ಸ್ವಲ್ಪ ಸಮಯ ತನ್ನ ಸರ್ಕಸ್ ಶೋ ತೋರಿಸಿದ ಇವಳು, ಒಂದು ಕ್ಷಣ ನನ್ನ ಹತ್ತಿರಕ್ಕೆ ಬಂದು ಕೊರಳ ಸುತ್ತ ಕೈ ಚಾಚಿ ಹಿಡಿದುಕೊಂಡು "ಅಮ್ಮ ಎಂತಾತು..?" ಎಂದು ಕೇಳಿದ್ದೇ.. ಅನಿರೀಕ್ಷಿತವಾಗಿ ಬಂದ ಈ ಪ್ರಶ್ನೆಗೆ ತಕ್ಷಣಕ್ಕೆ "ಏನಿಲ್ಲ ಯಾಕೆ?" ಎಂದು ನಾನು ಆಶ್ಚರ್ಯದಿಂದ ಮರುಪ್ರಶ್ನಿಸಿದೆ. "ನೀ ಯಾಕೆ ಖುಷಿ ಮಾಡ್ತಿಯಿಲ್ಲೆಮ್ಮ..?"(ನೀ ಯಾಕೆ ಖುಷಿಯಿಂದಿಲ್ಲ..) ಎಂದು ಕೇಳಿದಳು. ಅವಳನ್ನು ಪಕ್ಕಕ್ಕೆ ಕೂರಿಸಿಕೊಂಡು ಅವಳಿಗರ್ಥವಾಗುವ ರೀತಿಯಲ್ಲಿ ತಿಳಿಸಿದೆ. "ನಾನು ಇಷ್ಟೆಲ್ಲಾ ದಿನ ನನ್ನ ಅಪ್ಪಾಜಿ ಅಮ್ಮನ ಜೊತೆ ಇದ್ದು, ಈಗ ಒಂದೇ ಸರ್ತಿಗೆ ಅವ್ರನ್ನ ಬಿಟ್ಟು ಹೊರ್ಟ್ನಲ್ಲ ಅದಕ್ಕೆ ಸ್ವಲ್ಪ ಬೇಜಾರಾಯ್ತು ಮರಿ..", ಒಂದು ಕ್ಷಣ ಆ ಪುಟ್ಟ ಮನಸ್ಸು ಏನು ಯೋಚಿಸಿತೋ ಏನೋ, "ಅಮ್ಮ ನಿಂಗೆ ಖುಷಿ ಮಾಡಕ್ಕೆ ನಾ ಏನ್ ಮಾಡ್ಲಿ..?" 'ದಿಗ್ಭ್ರಮೆ' ಶಬ್ದದ ಅನುಭವ ಆದಂತಾಯಿತು. "ಓಕೆ..ಕ್ಯಾನ್ ಯು ಪ್ಲೀಸ್ ಗಿವ್ ಮಿ ಆ ಹಗ್ ಮರಿ..ಐ ವಿಲ್ ಬಿ ಆಲ್ರೈಟ್.." ಎಂದೊಂದು ಪರಿಹಾರ ಸೂಚಿಸಿದೆ. ಪ್ರೀತಿಯ ಆಲಿಂಗನ ಮಗಳಿಂದ..ಎಂತಹ ಅಪರಿಮಿತ ಸಂತೋಷವದು  
ಮತ್ತೆ ನಿನ್ನೆ ಹೆಚ್ಚು ಕಮ್ಮಿ ಇಂತದ್ದೇ ಸಂದರ್ಭ ಮರುಕಳಿಸಿತು. ಈ ಸರ್ತಿ ಅಪ್ಪಾಜಿ ಅಮ್ಮ ಬೆಂಗಳೂರಿಗೆ ಬಂದು ವಾಪಸು ಸಾಗರಕ್ಕೆ ಹೊರಟಿದ್ದರು. ಅವರನ್ನು ಬಸ್ ಹತ್ತಿಸಿ ವಾಪಸು ಮನೆಗೆ ಬಂದದ್ದಾಯಿತು. ಒಳಗೆ ಬಂದ ಮಗಳಿಗೆ ಆತಂಕ, "ಕ್ಯಾನುಗಿವ್ ಮಿ ಹಗ್.." ಎಂದೇನೋ ತನ್ನ ತೊದಲು ಮಾತಿನಲ್ಲಿ ಹೇಳಿದಳು. ತಕ್ಷಣಕ್ಕೆ ಅವಳ ಮಾತು ಅರ್ಥವಾಗಲಿಲ್ಲ. ಹತ್ತಿರಕ್ಕೆ ಬಂದದ್ದೇ, ನನ್ನನು ಅಪ್ಪಿಕೊಂಡಳು. ಈ ಸರ್ತಿ ಅರ್ಥವಾಯಿತು.. ತನ್ನಮ್ಮನಿಗೆ ಅವಳ ಅಪ್ಪ ಅಮ್ಮ ಹೋದ್ದು ಬೇಜಾರಾಗಿರಬಹುದೆಂದು ತಾನು ತಿಳಿದುಕೊಂಡ ಪರಿಹಾರವನ್ನು ನೀಡಿಯಾಗಿತ್ತು ಆ ನನ್ನ ಕೂಸು..ಈ ಸರ್ತಿ ಆನಂದ ಭಾಷ್ಪ ಕೂಡ ನನ್ನ ಒಂದು ಮಾತೂ ಕೇಳಲಿಲ್ಲ..!!!

ಘಟನೆ ೭ : ಯಕ್ಷಗಾನ Toddler age ಎಂಬ ವಾಕ್ ಸ್ವಾತಂತ್ರ್ಯದ ವಯಸ್ಸಿನಲ್ಲಿರುವ ನನ್ನ ಮಗಳು ಈಗ ಸಾಕಷ್ಟು ಉದ್ದ ಕಥೆಗಳನ್ನು ಕೇಳಿ, ನೋಡಿ ಅರ್ಥ ಮಾಡಿಕೊಂಡು ತನ್ನ ಮನಸ್ಸಿನ ಬೆತ್ತಳಿಕೆಯಿಂದ ನೂರಾರೂ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಲೇ ಇರುತ್ತಾಳೆ. ಬಾಲ ಗಣೇಶ್ ಎಂಬ ಒಂದು ಅನಿಮೇಟೆಡ್ ಕಥೆಯ ಸಂಚಿಕೆಯನ್ನು ನೋಡುತ್ತಿದ್ದ ಇವಳಿಗೆ, ಈ ಮುಂಚೆಯೇ ಈಶ್ವರನ, ತನ್ನ ಸ್ವಂತ ಮಗನ ಮೇಲೆ ಬರುವ ವಿಪರೀತ ಕೋಪ ಮತ್ತು ಮಗನ ರುಂಡವನ್ನೇ ಕತ್ತರಿಸದ ಬಗೆಗಿನ ಕಠೋರತೆ ಇಷ್ಟವಾಗಿರಲಿಲ್ಲ.. ಯಾವಾಗಲೂ ಒಂದು ಬಗೆಯ ಅಸಮಾಧಾನ ಈಶ್ವರನ ಕುರಿತು ಇದ್ದೇ ಇತ್ತು. ಇದಕ್ಕೆ ಸಾಲದೆಂಬಂತೆ, ಕಳೆದ ವಾರ ವೀಕ್ಷಿಸಿದ ಯಕ್ಷಗಾನ ಮೇಳವೊಂದರಲ್ಲಿ ನಡೆದ ಪ್ರಸಂಗ, 'ಧಕ್ಷ  ಯಾಗ'. ಪ್ರಸಂಗದ ಪ್ರಾರಂಭದಲ್ಲೇ ಧಕ್ಷ ಮಹಾರಾಜನಿಗೆ ತನ್ನ ಅಳಿಯನಾದ ಈಶ್ವರ ಸರಿಯಾಗಿ ಆಸ್ಥಾನದಲ್ಲಿ ಸ್ವಾಗತ/ಗೌರವ ಕೊಡಲಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತದೆ. ಧಕ್ಷ ಮಹಾರಾಜನ ಪಾತ್ರ ಮಾಡಿದವರು ತುಂಬಾ ಚೆನ್ನಾಗಿಯೇ ಆ ಪಾತ್ರವನ್ನು ನಿರ್ವಹಿಸಿದರು. ಈಶ್ವರನ ಬಗೆಗಿನ ಅಸಮಾಧಾನ ಮತ್ತು ಅಹಂಕಾರದಿಂದ ಆಡುವ ಮೂದಲಿಕೆ ಎಲ್ಲವೂ ಕಣ್ಣು ಕಟ್ಟುತ್ತಿದ್ದವು. ಹೀಗೆ ಮೂದಲಿಸುವ ಡೈಲಾಗ್ ಒಂದರಲ್ಲಿ ಈಶ್ವರನು ಕೇವಲ ತನ್ನ ಭಕ್ತರ ಚಿತಾ ಭಸ್ಮವನ್ನು ಮೈಗೆ ತೊಡೆದು ಕೊಂಡಿರುತ್ತಾನೆಂದೂ, ಸ್ನಾನವೇ ಮಾಡುವುದಿಲ್ಲವೆಂದು ಹಾಸ್ಯ ಮಾಡುತ್ತಾರೆ. ಮಗಳು ಸಾನ್ವಿಗೆ ತಲೆಗೆ ಹೊಕ್ಕಿದ್ದಷ್ಟೇ.. 'ಈಶ್ವರ ಸ್ನಾನವನ್ನೂ ಮಾಡುವುದಿಲ್ಲ"!!! ಮನೆಗೆ ವಾಪಸು ಬಂದ ನಂತರದಿಂದ ಶುರುವಾದವು ಬೆತ್ತಳಿಕೆ ಬಾಣಗಳು. ಛೀ.. ಈಶ್ವರ ಸ್ನಾನ ಮಾಡದಿಲ್ಯಾ? ನಂತರದಲ್ಲಿ ಬಂದ ಪ್ರಶ್ನೆ, ನನ್ನನ್ನು ಅವಕ್ಕಾಗಿಸಿತು. "ಅಂವ ಯಾಕೆ ಗಣಪತಿಗೆಲ್ಲ ತಲೆ ಕಟ್ ಮಾಡ್ತ, ಚಿಛಿ ಮೈ, ಸ್ನಾನ ಮಾಡದಿಲ್ಲೆ..ಅಂವ ಯಾಕೆ ಸ್ವಾಮಿ ಆಯ್ದ? ಅಂವ ಸ್ವಾಮಿ ಆಗದ್ ಬೇಡ, ನಂಗಿಷ್ಟ ಇಲ್ಲೆ"!! ನಮ್ಮ ಕ್ಯಾಬಿನೆಟ್ ಮಿನಿಸ್ಟರ್ ಗಳ ಆಯ್ಕೆಗೆ ಕೂಡ ಇಷ್ಟರ ಮಟ್ಟಿಗೆ ಅಸಮಾಧಾನ ಬಂದದ್ದು ಸುಳ್ಳು. ಈಗ ಆ ಶಿವನನ್ನು ಶಿವನೇ ಕಾಪಾಡಬೇಕು!! 

ಘಟನೆ ೮ : ಫುಟಬಾಲ್ ಮ್ಯಾಚು ಫೀಫಾ ವರ್ಲ್ಡ್ ಕಪ್ ಮ್ಯಾಚು, ಡೆನ್ಮಾರ್ಕ್ ಫ್ರಾನ್ಸ್ ಮಧ್ಯೆ ಪೈಪೋಟಿ, ಸಾನ್ವಿಯ ಅಪ್ಪ ಫುಲ್ ತಲೆ ಕೆಡೆಸಿಕೊಂಡು ಮ್ಯಾಚ್ ನೋಡ್ತಾ ಇರೋ ಸಂದರ್ಭ..
ತನ್ನೆಲ್ಲ ಆಟ ಮುಗಿಸಿ ಮಗಳು ಎಂಟ್ರಿ ಕೊಟ್ಟಿದ್ದೇ, ಏನೋ ಗಲಾಟೆ ಮಾಡ್ಕೊಂಡು ಇದ್ಲು ತನ್ನ ಕಡೆ ಎಲ್ಲರ ಗಮನ ಬರಲಿ ಅಂತ.. ಇನ್ನು ಅವಳು ನಮಗೆ ಟಿ.ವಿ ನೋಡಲು ಬಿಡಬೇಕೆಂದರೆ ಅವಳನ್ನ ಹೇಗಾದರೂ ಎಂಗೇಜ್ ಮಾಡಲೇ ಬೇಕು. ಸರಿ ನನ್ನದೊಂದು ಸಣ್ಣ ಪ್ರಯತ್ನ ನಡೆಯಿತು ಫುಟ್ ಬಾಲ್ ಮ್ಯಾಚ್ ಅರ್ಥ ಮಾಡಿಸಿಬಿಡನ ಅವಾಗ ನಮ್ಮ ಜೊತೆ ಅವಳೂ ನೋಡ್ತಾಳೆ ಎಂದು.. 

"ಅಲ್ನೋಡು ಮರಿ, ಎರಡು ಟೀಮ್ ಇರತ್ತೆ, ಬಾಲನ್ನ ಕೈಯಲ್ಲಿ ಮುಟ್ಟದೆ, ಕಾಲಲ್ಲೇ ಕಿಕ್ ಮಾಡ್ತಾ, ಒಂದು ಟೀಮ್ ಅವ್ರು ಮತ್ತೊಂದು ಟೀಮ್ ಅವ್ರಿಗೆ ಸಿಗದಂತೆ ಬಾಲ್ನ ಪಾಸ್ ಮಾಡ್ತಾ ಗೋಲ್ ಏರಿಯಾ, ಅಲ್ಲಿ ಮೆಶ್ ತರ ಇದ್ಯಲ ಅಲ್ಲಿ ಕಾಯ್ತಾ ಇರೋ ಒಬ್ಬ ಪ್ಲೇಯರನ್ನೂ ತಪ್ಪಿಸಿ ಬಾಲನ್ನ ಕಾಲಲ್ಲಿ ದೂಡಬೇಕು.. " ಅಂತೆಲ್ಲ ಒಂದಷ್ಟು ಅವಳಿಗರ್ಥವಾಗೋ ಹಾಗೆ ತಿಳಿಸಿದೆ.. ಸ್ವಲ್ಪ ಹೊತ್ತು ನೋಡಿ, "ಅಯ್ಯೋ ಆ ರೆಡ್ ಮನುಷ್ಯ ಬೀಳದ್ ಬೇಡಾಗಿತ್ತು.., ಹೋತಾ ಅಮ್ಮ ಬಾಲ್ ಈಗ ಗೋಲ್ ಒಳಗೆ?.., ಯಾಕೆ ಎಲ್ರೂ ಒಂದೇ ಕಡೆ ಓಡ್ತಿದಾರೆ?.." ಅಂತೆಲ್ಲ ತನ್ನ ಪುಟ್ಟ ಮನಸ್ಸಿನ ಸಂಶಯಗಳನ್ನೆಲ್ಲ ನಾನಾ ಪ್ರಶ್ನೆಗಳ ಮೂಲಕ ನಾನ್ ಸ್ಟಾಪ್ ಕೇಳ್ತಾನೆ ಇದ್ಲು..ನಮ್ಮದೂ ಕೂಡ ಅರ್ಥ ಮಾಡಿಸೋ ಪ್ರಯತ್ನ ಮುಂದುವರೆದಿತ್ತು..
ಅದಾಗಿ ಹತ್ತು ನಿಮಿಷ ಸುಮ್ನೆ ಕೂತು ನೋಡಿದ್ಲು..ಆಮೇಲೆ ಸಡನ್ ಆಗಿ "ಈ ಆಟ ಸರಿ ಇಲ್ಲೇ,.." ಅಂದ್ಲು! ಒಂದ್ ಕಡೆ ಟೈಟ್ ಮ್ಯಾಚ್, ಇನ್ನೊಂದ್ ಕಡೆ ಮಗಳ ವತಾರ.. ಅವಳಪ್ಪನ ಮೌನ ಮುರೀತು. "ಯಾಕೆ ರಾಣಿ?" ಅಂತ ಕೇಳಿದ್ದಕ್ಕೆ ಇವಳ ಉತ್ತರ - "ಅವ್ರೆಲ್ಲ ಟರ್ನ್ ತಗಂಡು ಆಡಕ್ಕಾಗಿತ್ತು, ಒಂದ್ ಸಲ ರೆಡ್ ಅವ್ರು ಮಾತ್ರ ಆಡಕ್ಕೂ..ಒಂದು ಸಲ ವೈಟ್ ಅವ್ರು ಮಾತ್ರ ಆಡಕ್ಕೂ..ಹಂಗೆ ಆಟ ಅಡಕ್ಕು, ಅವಾಗ ಫೈಟ್ ಆಗ್ತಲ್ಲೆ.. ಸರಿ ಇಲ್ಲೇ ಈ ಆಟ.." ಎಂದು ನಾವು ದೊಡ್ಡವರು ಮಕ್ಕಳ ಕೋಳಿ ಜಗಳಕ್ಕೆ ಕೊಡುವ ಪರಿಹಾರವನ್ನು ಕೊಟ್ಟು ಎದ್ದು ಹೊರಟೇ ಬಿಟ್ಲು.. ಈಗ ಮುಖ ಮುಖ ನೋಡಿಕೊಳ್ಳೋ ಸರದಿ ನಮ್ದು...

Saturday, October 31, 2015

ಅಗೋಚರ ಸ್ನೇಹಿತರು..

 ಘಟನೆ ೧.

         "ಅಮ್ಮಾ, ಡಿಂಗ್ರೀಗೂ ಜೋಕಾಲಿ ಆಡಬೇಕಂತೆ, ನೀನೇ ತೂಗ್ಬೇಕಂತೆ ಅಮ್ಮ....." ಎಂದು ನಳಿನಿಯ  ಮಗಳು ಪಾರ್ಕಲ್ಲಿ ಕೂಗುತ್ತಿದ್ದರೆ, ನಳಿನಿಯ ಫ್ರೆಂಡ್ ರಜತ ಸುತ್ತಮುತ್ತಲು ಆಶ್ಚರ್ಯದಿಂದ ಒಮ್ಮೆ ಕಣ್ಣು ಹಾಯಿಸಿದಳು. ಅಲ್ಲಿ ಇನ್ಯಾವದು ಮಗು ಆಟವಾಡ್ತಿರೋದು ಕಾಣಲಿಲ್ಲ. ಅದಕ್ಕೆ ಪೂರಕವೆಂಬಂತೆ ನಳಿನಿ, ತನ್ನ ಮಗಳು ಆಟವಾಡುತ್ತಿದ್ದ ಜೋಕಾಲಿಯ ಪಕ್ಕದ ಜೋಕಾಲಿಯನ್ನು ಸುಮ್ಮನೆ ಹೋಗಿ ಒಮ್ಮೆ ತೂಗಿ ಬಂದಳು. ರಜತಳ ಸಂಶಯ ಮುಖಭಾವವನ್ನು ಗಮನಿಸಿದ ನಳಿನಿ ಸುಮ್ಮನೆ ಒಮ್ಮೆ ನಕ್ಕು ಹೇಳಿದಳು, "ಡಿಂಗ್ರೀ, ನನ್ನ ಮಗಳ ಕಾಲ್ಪನಿಕ ಸ್ನೇಹಿತೆ". ರಜತ ಇದನ್ನು ಕೇಳಿ ಏನು ಹೇಳಬೇಕಂದು ತಿಳಿಯದೆ ತಟಸ್ಥವಾದಳು.

ಘಟನೆ ೨.

         "ಪಪ್ಪಾ, ನೀನು ಇನ್ಮೇಲಿಂದ  ಒಂದೇ  ಚಾಕೊಲೆಟ್  ತರಬೇಡ, ಎರಡು ತಗೊಂಡ್ ಬಾ, ಇಲ್ಲಾಂದ್ರೆ ಡೋರಿ ಗೆ ಬೇಜಾರಾಗತ್ತೆ", "ಮಮ್ಮೀ, ನಾ ಸ್ಕೂಲ್ ಗೆ ಹೋದಾಗ, ಡೋರಿ ಮಿಲ್ಕ್ ಚೆಲ್ಲಿದರೆ ಬೈಬೇಡ ಮತ್ತೆ ನಾನು ಬರೋವರೆಗೆ ನನ್ ರೂಮ್ ಗೆ ಯಾರೂ ಹೋಗ್ಬೇಡಿ ಡೋರಿ ನಂಗೋಸ್ಕರ ಕಾಯ್ತಿರ್ತೀನಿ ಹೇಳಿದಾಳೆ", ಹೀಗೆ ಪ್ರಮೋದ್ ಅವನ ಅಮ್ಮ ಅಪ್ಪನಿಗೆ ದಿನವೂ ಹೇಳುತ್ತಿದ್ದರೆ , ಇತ್ತ ಪ್ರಮೋದ್ ತಾಯಿ ಇಂದಿರಾಗೆ ಮನಸ್ಸಿನೊಳಗೊಳಗೇ ಆತಂಕ, ಭಯ. ರೂಮಿನಲ್ಲಿ ಮಗ ಗಾಳಿಯಲ್ಲಿ ಯಾರದ್ದೋ ಜೊತೆ ದಿನವಿಡೀ ಸಂಭಾಷಣೆ ನಡೆಸುತ್ತಾನೆ, ತನ್ನ ಬಗ್ಗೆ, ತನ್ನ ವಸ್ತುಗಳ ಬಗ್ಗೆ ಅಥವಾ ಯಾವುದೇ ಆಟವಾಗಲಿ, ಒಬ್ಬೋಬ್ಬನೇ ಮಾತನಾಡುತ್ತಾನೆ, ಮಲಗಲು ಕೂಡ ಅಪ್ಪ ಅಮ್ಮನನ್ನು ಕೇಳದೇ, ಒಬ್ಬನೇ ನಗುತ್ತಾ ಡೋರಿ ಜೊತೆ ಇರ್ತೀನಿ ಅಂತೆಲ್ಲ ಹೇಳುವಾಗ, ಪ್ರಮೋದ್ ತಾಯಿಗೆ ತನ್ನ ಮಗನಿಗೆ ಯಾವುದೋ ಕೆಟ್ಟ ದೃಷ್ಟಿ ಅಥವಾ ಯಾರಾದರೂ ತನ್ನ ಮಗನ ಮೇಲೆ ಮಾಟ ಮಂತ್ರ ಮಾಡಿಸಿರಬಹುದು ಎಂಬ ದಿಗಿಲು ಕಾಡುತ್ತಿತ್ತು. ವಿಶೇಷ ಪೂಜೆಗೆ ಹೇಳಬೇಕೇ ಅಥವಾ ಮಾಂತ್ರಿಕನನ್ನು ಕಾಣಬೇಕೆ ಎಂಬ ದ್ವಂಧ್ವದಲ್ಲಿದ್ದಾರೆ ಪ್ರಮೋದ್ ತಾಯಿ.

      ಈ ರೀತಿಯ ಘಟನೆಗಳನ್ನು ನೀವು ಸಾಮಾನ್ಯವಾಗಿ ಮಕ್ಕಳಿರುವವರ ಮನೆಯಲ್ಲಿ ಕೇಳಿರುತ್ತೀರಿ ಅಥವಾ ಸ್ವತಃ ಅನುಭವಿಸಿರುತ್ತೀರಿ. ಸಾಮಾನ್ಯವಾಗಿ ಮಕ್ಕಳು ತಮ್ಮಲ್ಲಿರುವ ಆಟಿಕೆ ಗೊಂಬೆಗಳನ್ನು, soft toys ಗಳನ್ನು ತನ್ನದೇ ಮಗು, ಅಣ್ಣ , ತಂಗಿ, ಫ್ರೆಂಡ್ ಎಂಬಂತೆ ಮಾತನಾಡಿಸುವುದು, ಅದರ ಜೊತೆ ಪ್ರತಿಯೊಂದನ್ನು ಹಂಚಿಕೊಳ್ಳುವುದು ಗಮನಿಸಿರುತ್ತೀರಿ. ಇನ್ನು ಕೆಲವು ಮಕ್ಕಳು ಅಸ್ತಿತ್ವದಲ್ಲೇ ಇರದ ವಸ್ತು, ಪ್ರಾಣಿ ಅಥವಾ ಮನುಷ್ಯರ ಬಗ್ಗೆಯೂ ಮಾತನಾಡುತ್ತಿರುತ್ತಾರೆ, ಅತಿಯಾದ ಒಡನಾಟ ಇಟ್ಟುಕೊಂಡಿರುತ್ತಾರೆ. ಹಾಗಾದರೆ ಏನಿದು ವಾಸ್ತವದಲ್ಲಿ? Mr. India ತರಹ ಏನಾದರು ಇರಬಹುದೇ? ಇದೊಂದು ಅಸಹಜವಾದ ಪ್ರವೃತ್ತಿಯೇ?

ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆ

        ಏನಿದು ಆಶ್ಚರ್ಯ?? ಈ ತರಹದ ಸನ್ನಿವೇಶಗಳ ಬಗ್ಗೆ ಚಿಂತಿಸುವುದು, ಪರಿಹಾರ ಕಂಡುಹಿಡಿಯುವುದರ ಬದಲಾಗಿ ಇದೊಂದು "ಬೆಳವಣಿಗೆ" ಎನ್ನುತ್ತಿದ್ದಾರಲ್ಲ?? ಹೌದು, ನಿಮ್ಮ ಮಗು ಈ ಮೇಲಿನ ತರದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿದ್ದರೆ ನಿಮ್ಮ ಮಗು ತುಂಬಾ ಕ್ರೀಯಶೀಲವಾಗಿದೆ ಎಂದರ್ಥ!!!

          ಇಪ್ಪತ್ತನೆಯ ಶತಮಾನ ಕೊನೆಯವರೆಗೂ, ಈ ತರಹದ ಗಾಳಿಯಲ್ಲಿ ಮಾತನಾಡುವ ಪ್ರಕ್ರಿಯೆ ಬಗ್ಗೆ ವಿಚಾರ ನಡೆದಾಗ, ಇದೊಂದು ಮಕ್ಕಳಲ್ಲಿ ಒಂಟಿತನ, ಅಭಧ್ರತೆಯ ಸಂಕೇತ, ಒಂದು ಸಾಮಾಜಿಕ ಸಮಸ್ಯೆ ಎಂಬಂತೆ ಅಭಿಪ್ರಾಯ ಪಡಲಾಗಿತ್ತು. ಯಾವುದೇ ಮಗುವು ಹೆಚ್ಚಿನ ಸಮಯ ಗಾಳಿಯಲ್ಲಿ ಮಾತನಾಡುವುದು, ತನ್ನೆಲ್ಲಾ ಭಾವನೆಗಳನ್ನು ಹಂಚಿಕೊಳ್ಳುವುದು ಮಾಡುತ್ತಿದ್ದರೆ, ಆ ಮಗುವಿಗೆ ಪೋಷಕರು ಅಥವಾ ಹತ್ತಿರದವರು ಹೆಚ್ಚಿನ ಗಮನ ಕೊಡುವುದರ ಅವಶ್ಯಕತೆ ಇದೆ ಮತ್ತು ಇತರರ ಸಾನಿಧ್ಯದ ಕೊರತೆ ಹೆಚ್ಚಾಗಿಯೇ ಕಾಡುತ್ತಿದೆ ಎಂದು ಊಹಿಸಲಾಗಿತ್ತು. ನಂತರದ ಸಂಶೋಧನೆಯ ಪ್ರಕಾರ, ಮಗು ತನ್ನದೇ ಲೋಕದ ತನ್ನದೇ ಆದ ವಸ್ತು ಅಥವಾ ವ್ಯಕ್ತಿಗಳ ಕಲ್ಪನೆ ಬೆಳೆಸಿಕೊಂಡಿದ್ದರೆ ಅದೊಂದು ಕ್ರಿಯಾತ್ಮಕ ಬೆಳವಣಿಗೆ ಎಂಬುದನ್ನು ಕಂಡು ಹಿಡಿಯಲಾಯಿತು.

       ಕಣ್ಣಿಗೇ ಕಾಣದೇ ಅಗೋಚರವಾಗಿರುವ ವ್ಯಕ್ತಿಯ ಜೊತೆ ಒಡನಾಟ ಇರುವ ಮಗುವಿನ 'ಅದ್ಭುತವಾದ ಕಲ್ಪನಾ ಶಕ್ತಿಯ' ಬಗ್ಗೆ ಒಮ್ಮೆ ಯೊಚಿಸಿ!! ಚಿಂತಿಸಬೇಡಿ, ಮಕ್ಕಳಲ್ಲಿ ಇದೊಂದು ಅತ್ಯಂತ ಸಹಜವಾದ ಪ್ರಕ್ರಿಯೆ. ಮಕ್ಕಳಲ್ಲಿ, ಬೆಳೆಯುತ್ತಿರವ ಕಲ್ಪನಾ ಸಾಮರ್ಥ್ಯ, ಅವರಲ್ಲಿ ಈ ತರಹದ ಕಾಲ್ಪನಿಕ ವಸ್ತುವಿಗೆ ಜೀವ ತುಂಬವ ಮತ್ತು ಒಟ್ಟಿಗೆ ಜೀವಿಸುವ ಭಾವನೆಯನ್ನು ರಚಿಸಲು ಪ್ರಾರಂಬಿಸುತ್ತದೆ. ತನ್ನೊಡನೆ ಇತರರು ಹೇಗೆ ವರ್ತಿಸುತ್ತರೋ ಅದೇ ರೀತಿ ತನ್ನ ಕಾಲ್ಪನಿಕ ಸಂಗಾತಿಯ ಜೊತೆ ವರ್ತಿಸುವ ಮಗು, ಯಾವುದು ಸರಿ ಯಾವುದು ತಪ್ಪು ಎಂಬುದರ ವ್ಯತ್ಯಾಸ ಬಹಳ ಬೇಗ ತಿಳಿದುಕೊಳ್ಳುತ್ತದೆ. ನೀವೇ ಗಮನಿಸಿ, ಕಾಲ್ಪನಿಕ ವ್ಯಕ್ತಿಯ ಜೊತೆ ಮಾತನಾಡುತ್ತಿರುವ ಮಗು, ತನ್ನ ಮತ್ತು ತನ್ನ ಕಾಲ್ಪನಿಕ ಸ್ನೇಹಿತನ, ಇಬ್ಬರ ಪಾತ್ರವನ್ನೂ ನಡೆಸುತ್ತಿರುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ನಿಮ್ಮ ಮಗು ಹೆಚ್ಚಿನ ಶಬ್ದಕೋಶ, ಭಾವನೆ ಮತ್ತು ಸಮಸ್ಯೆಗಳ ಪರಿಹಾರ ಕಂಡುಹಿಡಿಯುವ ಕೌಶಲ್ಯವನ್ನು ಬೇಗನೆ ಬೆಳೆಸಿಕೊಳ್ಳುತ್ತದೆ. ಇದೇ ಕಾರಣದಿಂದಾಗಿ ನಿಮ್ಮ ಮಗುವಿನ ಬೌದ್ಧಿಕ ಮಟ್ಟ ಹೆಚ್ಚುವುದು. ಜೊತೆಗೆ, ಮಕ್ಕಳಿಗೆ ಹೊರಗಿನ ಪ್ರಪಂಚಕ್ಕೆ ಸಂಕೋಚವಿಲ್ಲದೇ ಬೆರೆಯಲು ಸಹಾಯವಾಗುತ್ತದೆ.

ಪ್ರಾರಂಬಿಕ ಸ್ಥಿತಿ

         ಎಲ್ಲಾ ಮಕ್ಕಳಲ್ಲಿ ಅಲ್ಲದಿದ್ದರೂ ಹೆಚ್ಚಿನ ಮಕ್ಕಳಲ್ಲಿ, ಈ ತರಹದ ಕಾಲ್ಪನಿಕ ಗೆಳೆಯರ ರಚನೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಮನೆಯ ಮೊದಲನೇ ಮಗುವಿಗೆ ಈ ತರಹದ ಸಾಮರ್ಥ್ಯ ಹೆಚ್ಚಿರುತ್ತದೆ. ಯಾವುದೇ ಮಗುವಿಗೆ ಅದು  ಚಿಕ್ಕದಿರುವಾಗ ತೋರಿಸುವ ಆಟಿಕೆಗಳು, ನಿರ್ಜೀವ ವಸ್ತುಗಳು ಎಂಬುದರ ಕಲ್ಪನೆ ಇರುವುದಿಲ್ಲ. ಅದರ ಜೊತೆಗೆ ನಾವು ಸೇರಿಸುವ ಶಬ್ದ, ಹೊರಡಿಸುವ ಧ್ವನಿಗೆ ಮಗುವು ಆ ವಸ್ತುವಿನ ಬಗ್ಗೆ ಒಂದು ಕಲ್ಪನೆ ತರಲು ಪ್ರಾರಂಭಿಸುತ್ತದೆ. ಅಲ್ಲಿಂದ ಶುರು ನಮ್ಮ ಮಗುವಿನ ಮನಸ್ಸಿನ "ಪ್ರಯೋಗಾಲಯ".  ಆ ವರೆಗೆ ಸುಪ್ತವಾಗಿದ್ದ ಮೆದುಳು, ಪ್ರತಿಯೊಂದು ವಸ್ತು, ಶಬ್ದ, ಧ್ವನಿ ಮತ್ತು ಸ್ಪರ್ಶದ ಸಂಕೋಲೆಗೆ ಒಂದು definition ಕೊಡಲು ಶುರು ಮಾಡುತ್ತದೆ ಮತ್ತು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅದರ ಬಗ್ಗೆ  ಉನ್ನತ ದರ್ಜೆಯ ಕಲ್ಪನೆಯನ್ನು ಪ್ರಾರಂಭಿಸುತ್ತದೆ.  ಗೊಂಬೆಗಳ ಜೊತೆ ಮಾತನಾಡುತ್ತ, ಆಡುತ್ತಾ ನೈಜವಾಗಿಯೇ ವರ್ತಿಸಲು, ಪ್ರತಿಸ್ಪಂದಿಸಲು ಪ್ರಾರಂಭಿಸುತ್ತದೆ. ಶಾಲೆಗ ಹೋಗುವ ಮಗುವು, ತನಗೆ ಇಷ್ಟವಾದ ಗೊಂಬೆಗೆ ಬೈ ಬೈ ಹೇಳಿ ಹೋಗುವ ಆತ್ಮೀಯತೆ ಭಾವನೆ ತಂದುಕೊಳ್ಳುವುದು ಕೂಡ ಈ ಕಲ್ಪನಾ ಶಕ್ತಿಯಿಂದಲೇ. ಚಿಕ್ಕ ಮಗುವು ಕನ್ನಡಿಯೆದುರು ನಿಂತು ತನ್ನೆದುರಿಗೆ ಕಾಣುವ ಪ್ರತಿಬಿಂಬವನ್ನು, ಮತ್ತೆ ಮತ್ತೆ ನೋಡಿ ಪ್ರಯೋಗ ಮಾಡುವುದು ಎಷ್ಟು funny ಎಂದು ನಮಗನಿಸಿದರೂ, ಅಷ್ಟೇ ಕಾರ್ಯಚರಣೆಯಲ್ಲಿರುತ್ತದೆ ನಮ್ಮ ಪುಟ್ಟ ಪೋರ ಅಥವಾ ಪೋರಿಯ ಮನಸ್ಸು!!

ಹೇಗಿರಬಹುದು ಆ ಅಗೋಚರ ಸ್ನೇಹಿತ?

       ತನ್ನ ಹುಟ್ಟಿನಿಂದಲೂ ಪ್ರತಿ ನಿಮಿಷ ಪ್ರತಿ ಘಳಿಗೆ ಹೊಸತನ್ನು ನೋಡುವ, ಕಲಿಯುವ ಮಗುವು, ವಾಸ್ತವಾಗಿ ಕಾಣಿಸುವ ಜನರು ಅಥವಾ ಗೊಂಬೆಗಳ ಜೊತೆಗೆ, ತನಗೆ ಸ್ಪಂದಿಸುವ ಕಾಲ್ಪನಿಕ ವಸ್ತುವಿನ ಬಗೆಗೆ ಒಂದು ರೂಪರೇಖೆಯನ್ನು ತಾನೇ ಚಿತ್ರಿಸಿಕೊಳ್ಳುತ್ತದೆ. ಆ ಕಲ್ಪನೆ, ಮನುಷ್ಯನೇ ಆಗಿರಬೇಕೆಂದಿಲ್ಲ. ಆ ಕಲ್ಪನೆ ಒಂದು ಗೊಂಬೆಯಾಗಿರಬಹುದು, ಚಿಕ್ಕ ಮಗುವಿನ ರೂಪದಲ್ಲಿರಬಹುದು, ಪ್ರಾಣಿಯಾಗಿರಬಹುದು, ಆ ವರೆಗೆ ಮಗುವು ನೋಡದೇ ಇರುವ ಜೀವಿಯೇ ಆಗಿರಬಹುದು. ಕಲ್ಪನೆಗೆ ಮಿತಿಯುಂಟೇ? ತನ್ನ ಸಂಗಾತಿ ಒಬ್ಬ ಅಣ್ಣ ಎಂದು ಒಂದು ಮಗು ಹೇಳಿದರೆ, ತನ್ನ ಜೊತೆ ಇರುವ ತನ್ನ ಸಂಗಾತಿ, ಮರದ ಮೇಲೆಯೇ ಯಾವಾಗಲು ಹತ್ತಿ ಕುಳಿತುಕೊಳ್ಳುವ ಒಂದು ಕರಡಿ ಎಂದು ಇನ್ನೊಂದು ಮಗು ಹೇಳಬಲ್ಲದು. ನನ್ನ ಫ್ರೆಂಡ್ ಗೆ ೬ ಕೈಗಳಿವೆ ಎಂದು ಒಂದು ಮಗು ಹೇಳಿದರೆ, ತನ್ನ ಪಾರ್ಟ್ನೆರ್ ದೇಹವೇ ಇಲ್ಲದೆ ಗಾಳಿಯಲ್ಲಿ ತೇಲುವ ಒಂದು ಭೂತ ಎಂದು ಇನ್ನೊಂದು ಮಗು ಹೇಳಬಹುದು :)

ಕಾಲ್ಪನಿಕ ಸ್ಥಿತಿ ಮತ್ತು ವಯಸ್ಸಿನ ಮಿತಿ 

        ಎಲ್ಲಿಂದ ಎಲ್ಲಿಯವರೆಗೆ ಮಗು ಈ ತರಹದ ಕಲ್ಪನಾ ಲೋಕದಲ್ಲಿ ಜೀವಿಸುತ್ತದೆ? ಕೇವಲ ವಾಸ್ತವ್ಯದ ಕಲ್ಪನೆ ಬರುವಷ್ಟು ಪ್ರೌಢರಾಗುವರೆಗೆ ಮಾತ್ರ...ಅಂದರೆ ಅದಕ್ಕೆ ನಿರ್ಧಿಷ್ಟವಾದ ವಯಸ್ಸೆಂಬುದಿಲ್ಲ. ಸಾಮಾನ್ಯವಾಗಿ ಮಗುವು ೬ ರಿಂದ ೭ ವರ್ಷದವರೆಗೆ ಬರುವರೆಗೂ ತನ್ನ ಕಲ್ಪನೆಯ ಲೋಕದಲ್ಲಿ, ಕಲ್ಪನೆಯ ಪಾತ್ರಧಾರಿಗಳ ಜೊತೆ ಜೀವಿಸಬಹುದು. ಕೆಲವು ಮಕ್ಕಳು ಬಹಳ ಬೇಗ ವಾಸ್ತವದ ಬಗ್ಗೆ, ಸಜೀವ ನಿರ್ಜೀವ ವಸ್ತುಗಳ ಬಗ್ಗೆ ತಿಳಿಯುತ್ತಾರೆ, ಮತ್ತೆ ಕೆಲವು ಮಕ್ಕಳು ಇವೆಲ್ಲದರ ಅರಿವಿದ್ದರೂ ತಮ್ಮ ಕಲ್ಪನೆಯ ಬಗೆಗಿನ ವಸ್ತುಗಳಲ್ಲಿ ಸ್ವಾಧೀನತೆಯನ್ನು ಇನ್ನೂ ಮರೆತಿರುವುದಿಲ್ಲ...

         ಈ ಕಾಲ್ಪನಿಕ ಸ್ಥಿತಿಯೂ ಒಂದು ರೀತಿಯಲ್ಲಿ ಒಳ್ಳೆಯದೇ ... ಕಲ್ಪನೆಯಲ್ಲಿ ಸಂಭಾಷಣೆ ನಡೆಸುವ ಮಗು ತನ್ನ ಅನುಭವನ್ನು, ತನ್ನ ಜ್ಞಾನವನ್ನು ಪ್ರದರ್ಶನ ಮಾಡುತ್ತಿರುತ್ತದೆ. ನೀವೇ ಗಮನಿಸಿದಂತೆ, ನೀವು ಹೇಳಿಕೊಟ್ಟ ವಿಷಯಗಳನ್ನು, ಮಗು ತನ್ನ ಕಾಲ್ಪನಿಕ ವಸ್ತುವಿನ ಮೇಲೆ ಪ್ರಯೋಗ ಮಾಡುತ್ತಿರುತ್ತದೆ, ಅದು ಉತ್ತಮಾವಾದದ್ದೇ ಆಗಿರಬಹುದು ಇಲ್ಲವೇ, ನೀವು ಬೈದಂತೆ, ಕೋಪಿಸಿಕೊಂಡಂತೆ, ನಿಮ್ಮ ಮಗುವು ತನ್ನ ಕಾಲ್ಪನಿಕ ವಸ್ತುವಿನ ಮೇಲೆ ಅನುಕರಣೆ ಮಾಡುತ್ತಿರುತ್ತದೆ . ಈ ಮೂಲಕ ನಮಗೆ ನಮ್ಮ ಮಗು ನಮ್ಮಿಂದ ಏನನ್ನು ಕಲಿಯುತ್ತದೆ ಎಂಬುದರ ಬಗ್ಗೆ ಒಂದು ಸುಳಿವು ಸಿಕ್ಕಂತಾಗುತ್ತದೆ.

ನಾವು ಕೂಡಾ ಪಾತ್ರಧಾರಿಗಳಾಗಬೇಕಾ ??

        ಇದೆಂತಹ ಪ್ರಶ್ನೆ? ನಾವು ಕೂಡ ಕಾಲ್ಪನಿಕತೆಯ ಭ್ರಮೆಯಲ್ಲಿ ಇರಬೇಕೆ? ವಾಸ್ತವದಲ್ಲಿ ಹೌದು. ಮನೋತಜ್ನರ ಪ್ರಕಾರ ನಮ್ಮ ಮಗುವಿನ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಕಾಲ್ಪನಿಕಥೆಯ ಸಹಾಯವಿದ್ದಂತೆ, ಈ ಕೆಳಗಿನ ಕೆಲವು ಅಂಶಗಳನ್ನು ನಾವು ಗಮನಿಸಿ ಅಳವಡಿಸಿಕೊಂಡರೆ ಮಕ್ಕಳ ಉತ್ತಮ ಭವಿಷ್ಯಕ್ಕೆ ನಮ್ಮ ಕೊಡುಗೆಯಾಗುತ್ತದೆ.
 • ಮೊದಲನೇ ಮತ್ತು ಮುಖ್ಯವಾದ ಅಂಶ, ಮಗುವಿನ ಅಗೋಚರ ಒಡನಾಡಿಯ ಬಗ್ಗೆ ಹೀಯಾಳಿಸಬೇಡಿ. ಅದರ ಬಗೆಗಿನ ನಂಬಿಕೆ, ನಿಮ್ಮ ಮಗುವಿಗೆ ನಿಮ್ಮ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.  
 • ಮಗುವು ತಾನು ಮಾಡಿದ ತಪ್ಪಿಗೆ, ತನ್ನ ಕಲ್ಪನಾ ವಸ್ತು ಅಥವಾ ತನ್ನ ಕಲ್ಪನೆಯ ಸಜೀವ ಗೊಂಬೆಯನ್ನು ದೂಷಿಸಿದರೆ, ಆ ವಿಷಯವನ್ನು  ದೊಡ್ದದಾಗಿಸದೇ, ಮಗುವಿಗೆ ತನ್ನ ಕಾರ್ಯಗಳ ಬಗ್ಗೆ, ಅದನ್ನು ಸರಿಪಡಿಸುವ ಬಗ್ಗೆ ತಿಳಿಹೇಳಿ. 
 • ನಿಮ್ಮ ಮಗುವಿನ ಅಗೋಚರ ಫ್ರೆಂಡ್ ನನ್ನು ಮಾತನಾಡಿಸುವ ವಿಧಾನದಲ್ಲಿ ನಾವು ನಮ್ಮ ಮಕ್ಕಳಿಗೆ ಒಳ್ಳೆಯ ವರ್ತನೆಯ ಬಗ್ಗೆ ತಿಳಿಸಬಹುದು. 
 • ನಿಮ್ಮ ಮಗುವಿಗೆ ಭಯದ ಒಂದು ಪ್ರಭಾವ ತೋರಿಸಲು, ಮಗುವಿಗೆ ಪ್ರಿಯವಾದ ಗೊಂಬೆಗೆ ಹೊಡೆಯುವ ಹಾಗೆ ವರ್ತಿಸುವುದು, ಗೊಂಬೆಗೆ ಶಿಕ್ಷೆ ನೀಡುವುದು ಕೂಡ, ನಿಮ್ಮ ಮಗುವಿಗೆ  ದೈಹಿಕವಾಗಿ ಶಿಕ್ಷಿಸುವುದಕ್ಕೆ ಸಮಾನ. ಖಂಡಿತ ಆ ರೀತಿ ಮಾಡಬೇಡಿ. 
 • ಈ ತರಹದ ಮಕ್ಕಳ ಅಗೋಚರ ಸ್ನೇಹಿತರ ಅನುಭವಗಳು ಅತೀವ ಹೆಚ್ಚಾದಲ್ಲಿ ಮಾತ್ರ, ಅದನ್ನು ಅಲ್ಲಗಳೆಯದೇ ನಿಧಾನವಾಗಿ ನಿಮ್ಮ ಪ್ರಾಮುಖ್ಯತೆಯನ್ನು ಮಗುವಿಗೆ ತಿಳಿಹೇಳಿ. ಅಲ್ಲದೆ ಹೋದಲ್ಲಿ ನಿಮ್ಮ ಹಸ್ತಕ್ಷೇಪ ಆದಷ್ಟು ಕಡಿಮೆ ಇದ್ದರೇನೆ ಒಳ್ಳೆಯದು.   

[ವಿ. ಸೂ  : ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವೈಜ್ಞಾನಿಕ ಸಂಶೋಧನಾ ವಿಷಯಗಳನ್ನು ಇಂಟರ್ನೆಟ್ ನಿಂದ ಆಯ್ದುಕೊಂಡಿದ್ದೇನೆ ]
     

              

Friday, October 30, 2015

ಬಾಯಲ್ಲಿ ಬ್ರಮ್ಹಾಂಡ

               ಸಾನ್ವಿಯ ಆಗಮನದಿಂದ ನಮ್ಮ ಕುಟುಂಬದಲ್ಲಿ ಸಹಜವಾಗಿಯೇ ಅತೀವ ಸಂತೋಷ ಆವರಿಸಿತ್ತು.. ೫ ತಿಂಗಳಷ್ಟರಲ್ಲಿ ಅವಳು ಕೈ ಬಾಯಿಯ ಸಂಪರ್ಕದ ನಿಯಂತ್ರಣ ಪಡೆಯುವಲ್ಲಿ ಸಫಲಳಾಗಿ, ಕೈಗೆ ಸಿಗುವ ಪ್ರತಿಯೊಂದು ವಸ್ತುವನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಪ್ರಾರಂಭಸಿದ್ದಳು. ಯಾವ ಸಮಯದಲ್ಲಿ ಏನನ್ನು ಬಾಯಿಗೆ ಹಾಕಿಕೊಳ್ಳುತ್ತಾಳೆ ಎಂದು ಜಾಗರೂಕರಾಗಿ ನಾವು ಅವಳನ್ನು ಕಾಯ್ದುಕೊಳ್ಳಬೇಕಾಗುತ್ತಿತ್ತು. ತನ್ನಿಷ್ಟದ ಮೇಲು ಹೊದಿಕೆ, ತನ್ನ ಕೈ, ಕಾಲು, ಬಾಗಿಲ ಹೊಸ್ತಿಲು, ಆಟಿಕೆಗಳು, ಚಾಪೆ, ಮೊಬೈಲ್, ಬಾಚಣಿಗೆ, ಊಟದ ತಟ್ಟೆ, ಕೊನೆಗೆ ದೇವರ ಕೋಣೆಯಲ್ಲಿರುವ ಹೂವನ್ನು ಕೂಡ ಬಿಡುತ್ತಿರಲಿಲ್ಲ. ಎಲ್ಲವೂ ಬಾಯಿಯ ಸಂಪರ್ಕಕ್ಕೆ ಹೋಗುತ್ತಿತ್ತು. ಇದರ ಜೊತೆಗೆ, ಸದಾ ಬಾಯಿಯಿಂದ ಸುರಿಯುವ ಜೊಲ್ಲು. ಕೆಲವರೆಂದರು ಮಗುವಿಗೆ ದೃಷ್ಟಿಯಾಗಿರಬಹುದು ಎಂದು, ಇನ್ಯಾರೋ ಮಗುವಿಗೆ ತುಟಿಗೆ ಮುತ್ತು ಕೊಟ್ಟಿದ್ದರೆ ಈ ತರಹದ ಕ್ರಿಯೆ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು,  ಹಲ್ಲು ಬರುವಾಗ ಈ ತರಹದ ಸಮಸ್ಯೆಯಾಗುತ್ತದೆ ಎಂದು ಕೆಲವರು ತಿಳಿಸಿದರು. ಜೊಲ್ಲು ಬರುವುದು ಕಮ್ಮಿಯಾಗಲು ತುಟಿಗೆ ತುಪ್ಪ ಅಥವಾ ಬೆಣ್ಣೆ ಸವರಿ ಬಿಡಿ ಎಂದು ಮತ್ತೊಬ್ಬ ಆಪ್ತರು ಸಲಹೆ ಕೊಟ್ಟರು, ಹೀಗೆ ಹಲವು ಓಹಪೊಹೆಗಳ ನಡುವೆಯೂ ಮಗಳು ಸಾನ್ವಿಯ ಕೈ ಬಾಯಿ ಕೆಲಸ ಮಾತ್ರ ಎಡೆಬಿಡದೆ ನಡೆದೇ ಇತ್ತು...!! ಏನಿರಬಹುದು ಅಷ್ಟು ಕೌತುಕ ಅವಳಿಗೆ, ಎಂದು ನನಗೆ ಕುತೂಹಲ ಹೆಚ್ಚಾಗಿ, ಈ ತರಹದ ಮಕ್ಕಳ ಪ್ರಕ್ರಿಯೆ ಬಗ್ಗೆ  ಸಹಜವಾಗಿಯೇ ತಿಳಿಯ ಪ್ರಯತ್ನ ಪಟ್ಟಾಗಲೇ ಗೊತ್ತಾಗಿದ್ದು ಆ ಪುಟ್ಟ ಬಾಯಲ್ಲಿಯ ಬ್ರಮ್ಹಾಂಡದ ವಿಚಾರ!!! ನಾನು ತಿಳಿದುಕೊಂಡದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ, ಓದಿ ನೋಡಿ...              ನಾವೆಲ್ಲರೂ ಗಮನಿಸುವ ಹಾಗೆ ಚಿಕ್ಕ ಮಕ್ಕಳು ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕುವ ರೂಢಿ ಹೊಂದಿರುತ್ತಾರೆ. ಅದರಲ್ಲೂ, ೩ ತಿಂಗಳಿನ ಶಿಶುವಾಗಿನ ವಯಸ್ಸಿನಿಂದ ಬಹಳವಾಗಿ ೩ ವರ್ಷದ ಮಕ್ಕಳವರೆಗೂ ಈ ತರಹದ ಕಾರ್ಯಾಚರಣೆ ಕಂಡು ಬರುತ್ತದೆ. ಕೇವಲ ಹಾಲು ಹಲ್ಲುಗಳು ಮೂಡುವ ಸಮಯದಲ್ಲಿ ಮಾತ್ರ ಈ ರೀತಿಯಾಗಿ ಮಕ್ಕಳು ಮಾಡುತ್ತಾರೆ ಎಂದೇನಿಲ್ಲ. ಇದೊಂದು ಮಕ್ಕಳ ಅತ್ಯಂತ ಸಹಜ ಪ್ರಕ್ರಿಯೆ. ಜೊತೆಗೆ ಅದು ಮಗುವಿನ ಪ್ರಪಂಚ ಜ್ಞಾನದ ಅನ್ವೇಷಣೆಯ ಸಂಕೇತ. ಸಾಮಾನ್ಯವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನ ಪ್ರಾಪಂಚಿಕ ಅನುಭವವನ್ನು ವಿಧವಿಧವಾದ ತರದಲ್ಲಿ ತಿಳಿಯಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ನೋಡುವುದು, ಆಲೈಸುವುದು, ಸ್ಪರ್ಶಿಸುವುದು, ವಾಸನೆಯ ಅನುಭವ ಮತ್ತು ರುಚಿಗಳನ್ನು ತಿಳಿಯುವ ಮೂಲಕ. ಹೀಗೆ ಅರಿಯುವ ಪ್ರಕ್ರಿಯೆಯಲ್ಲಿ, ಸ್ಪರ್ಶ ಮತ್ತು ರುಚಿಯ ಅನುಭವಕ್ಕೆ ಮಕ್ಕಳು ತಮ್ಮ ಕೈ ಮತ್ತು ಬಾಯಿಯ ಸಹಾಯ ಪಡೆಯುತ್ತಾರೆ.             ಮಕ್ಕಳಿಗೆ ನಾಲಿಗೆಯಲ್ಲಿ ಅತ್ಯಂತ ಹೆಚ್ಚಿನ ಸಂವೇದನಾ ಶಕ್ತಿಯಿರುತ್ತದೆ. ಬಿಡಿಸಿ ಹೇಳಬೇಕೆಂದರೆ, ಮಕ್ಕಳು ಯಾವುದೇ ವಸ್ತುವನ್ನು ಬಾಯಲ್ಲಿ ಹಾಕಿದಾಗ, ಅದರ ಗಾತ್ರ, ಆಕಾರ, ರುಚಿ, ಪ್ರತಿಯೊಂದನ್ನು ನಾಲಿಗೆಯಿಂದ ಅಳೆದು ತಮ್ಮ ಮೆದುಳಿಗೆ ಸಂದೇಶವನ್ನು ಕಳಿಸಿ, ವಸ್ತುವಿನ ಬಗ್ಗೆ ಪ್ರತಿಯೊಂದು ವಿವರಗಳನ್ನೂ ದಾಖಲಿಸುತ್ತದೆ. ಹಾಗೇ ಕಲಿಯುವುದು ಮಗು.  ಇದರ ಜೊತೆಗೆ ನಾನು ಒಂದು ಕಡೆ ಓದಿ ತಿಳಿದ ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ, ಮಕ್ಕಳು ಬಾಯಿಗೆ ಹಾಕುವ ವಸ್ತುಗಳಲ್ಲಿ ಕಣ್ಣಿಗೆ ಕಾಣಲಾಗದಷ್ಟು ಸಣ್ಣ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಗೆ ಮಕ್ಕಳು ತಮ್ಮನ್ನು ತಾವೇ ಒಡ್ಡುವುದರಿಂದ, ಅವರ ದೇಹಕ್ಕೆ ಒಂದು ರೀತಿಯ ಪ್ರತಿರೋಧ ಶಕ್ತಿ ಸಿಗುತ್ತದೆ ಎಂದು!! ಇದೇ ಕಾರಣಕ್ಕಾಗಿಯೇ ಪ್ರಾಯಶಃ ನಮ್ಮ ಹಿರಿಯರು ಹೇಳುವುದು, ಮಣ್ಣಿನಲ್ಲಿ ಆಡಿದ ಮಕ್ಕಳು, ಮತ್ತು ಕನಿಷ್ಠ ಕಾಳಜಿ ಸಿಕ್ಕಿದ ಮಕ್ಕಳು ಇವತ್ತಿನವರೆಗೂ ಗಟ್ಟಿಗರು ಎಂದು :) :)          ಹಾಗೆಂದು ನಮ್ಮ ಸಂಪೂರ್ಣ ಕಾಳಜಿಯನ್ನು ನಾವು ತೊರೆಯಬೇಕೆಂದಲ್ಲ.... ಕೆಲವೊಂದು ವಸ್ತುಗಳು ನಮ್ಮ ಮಗುವಿಗೆ ಖಂಡಿತವಾಗಿಯೂ ಹಾನಿ ತರುವಂತದ್ದಾಗಿರಬಹುದು. ಮಕ್ಕಳಿಗೆ ತಮಗೆ ಯಾವ ವಸ್ತು ಒಳ್ಳೆಯದು ಯಾವದು ಕೆಟ್ಟದ್ದು ಎಂಬುದರ ಅರಿವಿರುವುದಿಲ್ಲ. ಉದಾಹರಣೆಗೆ, ಮಗುವು, ಕಾಲಿನ ಬೂಟನ್ನು ನೆಕ್ಕುತ್ತಿದ್ದರೆ, ನಾವು  ತಕ್ಷಣದಲ್ಲಿ "ಛೀ, ಕೊಳಕು, ಬಾಯಿಯಿಂದ ತೆಗೆದುಬಿಡು..." ಎಂದೆಲ್ಲಾ ಪ್ರತಿಕ್ರಿಯೆ ನೀಡುತ್ತೇವೆ, ಆ ಕ್ಷಣಕ್ಕೆ ಮಗು ಗಮನಿಸುವುದು ನಮ್ಮ ಮುಖ ಸಂಜ್ಞೆಯನ್ನು ಮತ್ತು ಅದಕ್ಕೆ ತಕ್ಕಂತೆ ತನಗೆ ತಾನೇ ಟ್ಯೂನ್ ಮಾಡುತ್ತಾ ಹೋಗುತ್ತದೆ, "ಛೀ! ಇದು ರುಚಿಕರವಾಗಿಲ್ಲ, ಇದರಲ್ಲಿ ಏನೋ ತೊಂದರೆ ಇದೆ" ಎಂದು....

           ಹಾಗಾಗಿಯೇ ಸ್ನೇಹಿತರೇ, ಮಗು ಬೆಳೆಯುವ ಪರಿಸರದ, ಮೂಲಭೂತ ರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಇವುಗಳ ಜೊತೆಗೆ, ಈ ಕೆಳಕಂಡ ಕೆಲವು ಕ್ರಮಗಳು, ನಾವು ನಮ್ಮ ಗಮನದಲ್ಲಿರಿಸೋಣ.
 • ಮಕ್ಕಳಿಗೆ ಕೈಗೆಟಕುವ ಯಾವುದೇ ವಸ್ತುವು, ಅದರ ಗಂಟಲಿಗೆ ಹೋಗಿ ಸಿಕ್ಕಿ ಹಾಕಿಕೊಳ್ಳುವಂತಿರಬಾರದು.
 • ಕೈ ಸಿಕ್ಕಿ ಹಾಕಿಕೊಳ್ಳುವ, ಹರಿತವಾದ ವಸ್ತುಗಳು, ರಾಸಾಯನಿಕ ವಸ್ತುಗಳು (ಉ.ದಾ, ನೈಲ್ ಪೋಲಿಷ್). ಈ ತರಹದ ವಸ್ತುಗಳು ಆದಷ್ಟು ಕೈಗೆಟುಕದಂತೆಯೇ ಇರಲಿ. 
 • ನಿಮ್ಮ ಮಗುವಿಗೆ, ಅಥವಾ ಬೇರೆ ಮಕ್ಕಳಿಗೆ ಸೋಂಕಿನ ಆರೋಗ್ಯ ತೊಂದರೆ ಇದ್ದಲ್ಲಿ, ಮಕ್ಕಳು ಪರಸ್ಪರ ಆಟಿಕೆ ವಿನಿಮಯ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಇದರಿಂದಾಗಿ ಸೋಂಕು ಹರಡುವುದನ್ನು ತಡೆಯಬಹುದು. 
 • ಮಗು ಆಡುತ್ತಿರುವಾಗ ಅದರ ಕಡೆಗೆ ನಿಮ್ಮ ನಿಗಾ ಕೊಡಲಾಗದ ಸಂದರ್ಭ ಬಂದರೆ, ಆದಷ್ಟು ಮಗುವಿಗೆ ತೊಂದರೆಯಾಗಬಹುದಾದಂತಹ  ವಸ್ತುಗಳನ್ನು ಪರಿಶೀಲಿಸಿ, ಅವುಗಳು ಮಗುವಿಗೆ ಸಿಗದಂತೆ ಮೇಲಿರಿಸಿ ಹೊರಗೆ ನಡೆಯಿರಿ. 


   

ಮಣ್ಣು ಮರಳು ಮತ್ತು ಮಕ್ಕಳು

             
ಸಂಜೆಯ ಸಮಯ ಸಾಮಾನ್ಯವಾಗಿ ನನ್ನ ಮಗಳನ್ನು ವಾಕಿಂಗ್ ಕರೆದುಕೊಂಡು ಹೋಗುವ ರೂಢಿ. ಅದು ಅವಳ ಅತ್ಯಂತ ಸಂತೋಷದ ಸಮಯ. ಹೊರಗೆ ಕಾಲಿಡುತ್ತಿದ್ದಂತೆಯೇ, ಅವಳ ಮೊದಲ ಗಮನ ರಸ್ತೆಯ ಬದಿಗಿನ ಮಣ್ಣು, ಮರಳು, ಕಲ್ಲಿನ ಮೇಲೆಯೇ ಇರುತ್ತದೆ. ಮಣ್ಣು ಕೆದಕುವುದು, ಕಲ್ಲು ಆರಿಸುವುದು, ಮರಳಿನಲ್ಲಿ ಗುಂಡಿ ತೊಡುವುದು ಇವೆಲ್ಲಾ ಆಟಗಳು ಶುರುವಾಗಿ ಹೋಗುತ್ತದೆ. "ಅಯ್ಯೋ ಸೌಮ್ಯಾ, ಮಗಳನ್ನಾ ಎತ್ಕೊಳ್ರಿ, ಮಣ್ಣಾಡ್ತಿದಾಳೆ... ಏನೇ ಹುಡ್ಗೀ, ಅಷ್ಟೂ ಬಟ್ಟೆನೆಲ್ಲಾ  ಗಲೀಜು ಮಾಡ್ಕೊಂಡಿದೀಯ...ಏಯ್ ಯಾರದು ಮಣ್ಣಲ್ಲಿ ಆಡೋರೂ...?? ಬಾಯಿಗೆ ಹಾಕ್ತಾರೆ ನೋಡ್ಕೊಳ್ರಿ...ಥೂ ಕರ್ಕೊಂಡ್ ಬರ್ರೀ  ಈ ಕಡೆ, ಮೈ ಕೈ ಎಲ್ಲಾ ಕೆಸರು ಮಾಡ್ಕೊಂಡಿದಾಳೆ. ತಂಡಿ  ಜ್ವರ ಆಗೋದು ಇದಕ್ಕೇನೆ..." ಇವೇ  ಎಲ್ಲಾ ಸಾಮಾನ್ಯವಾಗಿ ನನಗೆ ಕೇಳಿ ಬರುವ ಮಾತುಗಳು...೧. ಮಣ್ಣಿನಲ್ಲಿ ಆಡುವುದರ ಬಗೆಗಿನ ತಪ್ಪು ಕಲ್ಪನೆ :

            ಮಣ್ಣು, ಮರಳು, ಕಲ್ಲು, ಇವೆಲ್ಲ ಪ್ರಕೃತಿ ಸಹಜದತ್ತವಾಗಿಯೇ ಮಕ್ಕಳಿಗೆ ಕೊಟ್ಟ ಉಡುಗೊರೆ...ಆದರೆ ಇವತ್ತಿನ ಸಮಾಜದಲ್ಲಿ ಪೋಷಕರು, ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನು ಕೊಡಬೇಕು, ಆರೋಗ್ಯಕರವಾದ ಜೀವನವನ್ನು ಕೊಡಬೇಕೆಂಬ ಹಂಬಲದಿಂದ, ತಮ್ಮ ಮಕ್ಕಳು ಮಣ್ಣಿನಲ್ಲಿ ಆಡುವುದು, ರೋಗಕ್ಕೆ ದಾರಿ, ಅಶಿಸ್ತಿನ ರೂಪ ಎಂಬ ತಪ್ಪು ಕಲ್ಪನೆ ತಂದುಕೊಂಡಿದ್ದಾರೆ.. ಮಣ್ಣಿನಿಂದಲೇ ನಾನಾ ರೋಗಗಳು ಬರುವುದು ಎಂಬುದು ಖಂಡಿತ ನಿಜವಲ್ಲ...ರೋಗಗ್ರಸ್ತ ಜನರ ಅಥವಾ ಪ್ರಾಣಿಯ ರೋಗಾಣು ಮಣ್ಣಿಗೆ ಪ್ರಸಾರಗೊಂಡಿದ್ದಲಿ ಮಾತ್ರ, ಆ ತರಹದ ಜಾಗಗಳನ್ನು, ಜಾಗರೂಕತೆಯಿಂದ ಗಮನಿಸಿ ಮಗುವಿಗೆ ಆಡಲು ಬಿಟ್ಟರೆ, ಯಾವದೇ ತರಹದ ತೊಂದರೆ ಇರುವುದಿಲ್ಲ.

           ಚಿಕ್ಕ ಮಗು ಮಣ್ಣನ್ನು ಮರಳನ್ನು ಬಾಯಿಗೆ ಹಾಕಿರುವುದನ್ನು ನೀವು ಗಮನಿಸಿರುತ್ತೀರಾ. ಅದಕ್ಕೂ ಕೂಡ ವಿಕಾಸಾತ್ಮಕ ಕಾರಣಗಳಿವೆ ಎಂದರೆ ನೀವು ನಂಬಲೇ ಬೇಕು. ಸಹಸ್ರಾರು ಬಾಕ್ಟೀರಿಯಾ, ವೈರಸ್ ಮತ್ತು ಕಣ್ಣಿಗೆ ಕಾಣಿಸದಂತಹ ಹುಳುಗಳು  ಮಗುವಿನ ದೇಹ ಸೇರಿ, ಮಗುವಿಗೆ ಸಾಮಾನ್ಯವಾಗಿ ಬರುವ ರೋಗಗಳು ಬಾರದಿದ್ದಂತೆ ಪ್ರತಿರಕ್ಷಣಾ ಶಕ್ತಿಯನ್ನುನಿರ್ಮಾಣ ಮಾಡುತ್ತವೆ ಎಂದರೆ ನಿಮಗೆ ಆಶ್ಚರ್ಯ ಆಗುವುದಿಲ್ಲವೇ?

. ಮಗುವಿಗೆ ಮಣ್ಣಿನ ಮೇಲೆ ಆಸಕ್ತಿಯೇಕೆ?

         ಮಣ್ಣಲ್ಲಿ ಆಡುತ್ತಿರುವ ಮಗು ಅಕ್ಷರಶಃ ಸಂತೋಷ ಪಡುತ್ತಿರುತ್ತದೆ, ಮಗುವಿನ ಮುಖದಲ್ಲಿ ಒಂದು ರೀತಿಯ ಗೆಲುವನ್ನು ನೀವು ಗಮನಿಸಿರಬಹುದು, ಮಗುವನ್ನು ನೀವು ಕರೆದರೂ, ನಿಮ್ಮ ಮಗು ಮಣ್ಣು ಮರಳನ್ನು ಬಿಟ್ಟು ಬರಲು ಇಚ್ಚಿಸುತ್ತಿರುವುದಿಲ್ಲ..ಕಾರಣ ಏನೆಂದು ಯೋಚಿಸಿದ್ದೀರಾ? ವೈಜ್ಞಾನಿಕವಾಗಿ ಹೇಳಬೇಕೆಂದರೆ, ಮಗುವು ಮಣ್ಣನ್ನು ಮುಟ್ಟಿದಾಗ ಅದರಲ್ಲಿರುವ ಒಂದು ತರಹದ ಬಾಕ್ಟೀರಿಯಾಗಳು, ಮೆದುಳಿನ ನರಕೊಶಗಳನ್ನು ಸಕ್ರೀಯಗೊಳಿಸುತ್ತದೆ. ಸಿರೋಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಿಂದಾಗಿ, ಮಗುವಿನ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದರಿಂದಾಗಿಯೇ ಮಗು, ಮಣ್ಣು, ಕಲ್ಲು ಮರಳು ಆಡಿದಾಗ ಸಂತೋಷ ವ್ಯಕ್ತಪಡಿಸುವುದು..

          ಹೊರಗಡೆ ಹೋಗಿ, ಮರಳು ಮಣ್ಣು ಆಡುವ ಮಗು ಎಷ್ಟು ಸಮಯ ಬೇಕಿದ್ದರೂ ಆಟದಲ್ಲಿ ಕಳೆಯಬಹುದು, ಸಮಯದ ಅರಿವನ್ನೇ ಮರೆಯಬಹುದು, ಏಕೆಂದರೆ, ಅನಿಯಮಿತ ಆಟದ ವಿಧಾನಕಗಳಾದ ಮರಳು, ಮಣ್ಣು ಕಲ್ಲುಗಳು, ಮಕ್ಕಳಿಗೆ ಒಂದು ರೀತಿಯ ಸ್ವತಂತ್ರ ಭಾವನೆಯನ್ನು ಕೊಡುತ್ತದೆ, ಅವರಿಗೆ ಬೇಕಾದ ಹಾಗೆ ಆಡುವುದರಿಂದ, ತಮ್ಮ ಆಸೆಗಳನ್ನು ಪೂರೈಸಿಕೂಂಡ ತೃಪ್ತಿ ಮಕ್ಕಳಿಗೆ ಸಿಗುತ್ತದೆ.

೩. ಮಣ್ಣು-ಮರಳು-ಕೊಳಕು ನಿಜವಾಗ್ಲೂ ಒಳ್ಳೆಯದೇ?

          ಸಾಕಷ್ಟು ಒಳಾಂಗಣ ಆಟಗಳಲ್ಲಿ, ಒಂದು ಮಿತಿಯಿರುತ್ತದೆ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಕೆಲವೊಂದು ಆಟಿಕೆಗಳು ಅದರದ್ದೇ ಆದ ರೀತಿಯಲ್ಲಿ ಆಡಬೇಕಾಗುತ್ತದೆ. ಆದರೆ ಮಕ್ಕಳಾಡುವ ಮಣ್ಣು ಕಲ್ಲು ಮರಳು, ಮಕ್ಕಳಿಗೆ ಕ್ರಿಯಾತ್ಮಕ ಭಾವನೆಯನ್ನು ಉಂಟುಮಾಡುತ್ತದೆ, ಮರಳಾಡುವುದಕ್ಕೆ ನಿರ್ಧಿಷ್ಟವಾದ ವಿಧಾನ ಎಂಬುದಿಲ್ಲ. ಎಷ್ಟೊಂದು ಸಲ, ನಾವು ರಸ್ತೆಯ ಬದಿಯಲ್ಲಿ ಓಡಾಡುವಾಗ ಅಥವಾ ನಮ್ಮ ಮಕ್ಕಳೇ ಆಡುವಾಗ, ಕಲ್ಲನ್ನು ಆರಿಸುವುದನ್ನು ನೋಡಿರುತ್ತೀವೆ, ಮಗು ತನ್ನದೇ ಆದ ರೀತಿಯಲ್ಲಿ ಆಟವನ್ನು ಮುಂದುವರೆಸಿರುತ್ತದೆ.. ಮಗು ಪ್ರತಿ ಸಲವೂ ಮಣ್ಣನ್ನು ನೋಡಿದಾಗ ಅಥವಾ ಮುಟ್ಟಿದಾಗ, ಅದರ ಬಣ್ಣ, ಗಾತ್ರ, ಪ್ರಮಾಣ, ಗುಣ ಸ್ವರೂಪವನ್ನುಗುರುತಿಸಲು ಮತ್ತು ಹೋಲಿಕೆ ಮಾಡಲು ಪ್ರಾರಂಬಿಸುತ್ತದೆ. ಉದಾಹರಣೆಗೆ, ಮರಳನ್ನು ಕೆದಕಿ, ಯಾವುದಾದರೂ ಸಣ್ಣ ಧಾರಕ ಅಥವಾ ಪಾತ್ರೆಯಲ್ಲಿ ತುಂಬುವುದು, ಮಕ್ಕಳಲ್ಲಿ ಖಾಲಿ ಮತ್ತು ಪೂರ್ಣವಾಗಿದುದರ ಕಲ್ಪನೆಯನ್ನು ತರುತ್ತದೆ. ಕಲ್ಲು ಚಿಕ್ಕದ್ದು, ದೊಡ್ಡದು ಎಂಬುದರ ವ್ಯತ್ಯಾಸವನ್ನು ಬಹಳ ಸುಲಭವಾಗಿ ಕಂಡು ಹಿಡಿಯುತ್ತದೆ, ಒರಟು ಮೃದುವಿನ ಅರ್ಥ ತಿಳುಯುವಷ್ಟು ಸಾಮರ್ಥ್ಯವನ್ನುಮಗು ಪಡೆಯುತ್ತದೆ. ಇದನ್ನೇ ನಾವು ಸ್ವಕಲಿಕೆ ಎಂದು ಕರೆಯುತ್ತೇವೆ. ಇವೆಲ್ಲಾ ಬುದ್ಧಿ ವಿಕಸನದ ಪ್ರಾಯೋಗಿಕ ವಿಧಾನವೆಂದೇ ಹೆಳಬಹುದು.

           ಕಲ್ಲನ್ನು ಆರಿಸುವುದು, ಒಂದುಗೂಡಿಸುವುದು, ಅದರ ಗಾತ್ರಕ್ಕೆ ಆಕಾರಕ್ಕೆ ತಕ್ಕಂತೆ ಗುಂಪುಮೂಡುವುದು, ಸಮಾನವಾಗಿ ಜೋಡಿಸುವುದು, ಕಲ್ಲನ್ನು ಎಸೆದು ಅದು ಏನಾಗುತ್ತದೆ ಎಂದು ನೋಡುವುದು ಇವೆಲ್ಲವೂ ಮಕ್ಕಳ ದಿನನಿತ್ಯದ ಹೊಸ ಸಂಶೋಧನೆಗಳು. ಪ್ರತಿಸಲವೂ ಹೊಸತು ಕಲಿತಾಗ, ತಾವು ಮಾಡಿದ ಪ್ರಯೋಗವು ಉತ್ತಮವಾಗಿ ಕಂಡುಬಂದಾಗ, ಮಕ್ಕಳಲ್ಲಿ ತಮ್ಮಲ್ಲಿಯ ಆತ್ಮವಿಶ್ವಾಸವೂ ಹೆಚ್ಚುತ್ತಾ ಹೋಗುತ್ತದೆ, ನಾನು ಮಾಡಬಲ್ಲೆ ಎಂಬ ಅರಿವು ಅವರಲ್ಲಿ ಮೂಡಿದಾಗ, ಮಕ್ಕಳ ಸಕಾರಾತ್ಮಕ ಭಾವನೆ ವೃದ್ಧಿಯಾಗುತ್ತದೆ.           ಸಾಮಾನ್ಯವಾಗಿ ನಾವು ಕಾಣುವಂತೆ, ಮಕ್ಕಳಿಗೆ ತಮ್ಮ ಆಟಿಕೆಯ ಮೇಲೆ ಸ್ವಂತಿಕೆಯ ಭಾವನೆ ಇರುತ್ತದೆ.  ಇತರರೊಡನೆ ಹಂಚಲು ಇಚ್ಚಿಸುವುದಿಲ್ಲ. ಆದರೆ ಮರಳು ಆಡುವಾಗ, ಮಗು ತನ್ನ ಜೊತೆಯವರೊಂದಿಗೆ ಹೊಸತನ್ನು ಕಲಿಯಲಿಚ್ಚಿಸುತ್ತದೆ. ಹಂಚಿಕೊಂಡು ಆಡುವ ಭಾವನೆ ರೂಪಿಸಿಕೊಳ್ಳುತ್ತದೆ, ಅಣ್ಣ, ತಂಗಿ, ಅಕ್ಕ, ತಮ್ಮ, ಸಹಭಾಗಿಗಳು, ಫ್ರೆಂಡ್ಸ್ ಎಂಬೆಲ್ಲಾ  ಭಾಂಧವ್ಯ ಜಾಸ್ತಿಯಾಗುತ್ತದೆ. ಜೊತೆಗೆ, ಸಂವಹನ ಶಕ್ತಿಯೂ ಕೂಡ ಹೆಚ್ಚುತ್ತದೆ.

          ಹೆಚ್ಚೆಚ್ಚು ಮಣ್ಣು ಮರಳುಗಳನ್ನು ತನ್ನದೇ ಆದ ರೀತಿಯಲ್ಲಿ ಆಡುವ ಮಕ್ಕಳಲ್ಲಿ ನಗು, ಸಂತೋಷ ನಿರಂತವಾಗಿರುತ್ತದೆ. ಅದೇ ಕಾರಣದಿಂದ ಮಕ್ಕಳ ರಕ್ತದೊತ್ತಡ, ಬೊಜ್ಜು ಮತ್ತು ಮಾನಸಿಕ ಸಂತುಲನ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ.೪. ಪೋಷಕರ ಭಾಗಿತ್ವ

          ಮಕ್ಕಳು ಮಣ್ಣಾಡುವುದರಲ್ಲಿ  ಪೋಷಕರ ಪಾತ್ರವೇನಿದೆ ಎಂದು ಸಹಜವಾಗಿಯೇ ನಮಗೆ ಪ್ರಶ್ನೆ ಮೂಡಬಹುದು. ಆದರೆ ಪೋಷಕರೇ ಗಮನದಲ್ಲಿರಲಿ, ಮರಳಾಟ ಕೂಡ ಒಂದು ಪ್ರಮುಖ ಆಟವೇ .. ಮಕ್ಕಳಿಗೆ ಮೊದಲಿಗೆ ಈ ತರಹದ ಆಟಕ್ಕೆ ಅನುಮತಿ ಮತ್ತು ಪ್ರೋತ್ಸಾಹ ಕೊಡಬೇಕಾದದ್ದು ನಮ್ಮ ಕರ್ತವ್ಯ. ನಮ್ಮ ಮಕ್ಕಳಿಗೆ ಅವರು ಇಷ್ಟ ಪಡುವ ಆಟದಲ್ಲಿ ನಾವು ಭಾಗಿಯಾದಾಗ, ತಮ್ಮ ಪೋಷಕರು ತಮ್ಮೊಂದಿಗಿದ್ದಾರೆ ಎಂಬ ಸುರಕ್ಷತಾ ಭಾವನೆ ಮಕ್ಕಳಲ್ಲಿ ಮೂಡುತ್ತದೆ. ಜೊತೆಗೆ, ಅವರಾಡುವ ಆಟಗಳಿಗೆ ನಾವು ಸ್ಪಂದಿಸಿದಾಗ, ಅವರ ಆಟದಲ್ಲಿನ ಜಟಿಲವಾದ ತೊಂದರೆಗೆ ಸಹಾಯ ಮಾಡಿದಾಗ, ಮಕ್ಕಳಿಗೆ ಪೋಷಕರ ಮೇಲಿನ ನಂಬಿಕೆ ಹೆಚ್ಚುತ್ತದೆ. ಭಯ ಕಾಡುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳ ಮನಸ್ಸಿಗೆ  ನಾವು ಹತ್ತಿರದವರಾಗಬಹುದು.

೫. ಗಮನಿಸಬೇಕಾದ ಅಂಶಗಳು

          ಮಣ್ಣು, ಕಲ್ಲು, ಮರಳು  ಜೊತೆಯಲ್ಲಿ ಆಡುವುದರ  ಪ್ರಯೋಜನ ಸಾಕಷ್ಟಿದ್ದರೂ , ಚಿಕ್ಕ ಮಕ್ಕಳು  ಆಡಬೇಕಾದರೆ  ಕೆಲವೊಂದು ಸುರಕ್ಷತಾ  ಕ್ರಮಗಳನ್ನು ಅನುಸರಿಸುವುದು  ಅತ್ಯಗತ್ಯ .

 • ಮಕ್ಕಳು ಮಣ್ಣಾಡುವ  ಜಾಗ ಸ್ವಚ್ಚತೆಯಿಂದ  ಕೂಡಿರಬೇಕು. ಉದಾಹರಣೆಗೆ  ಮಲ ಮೂತ್ರ ವಿಸರ್ಜನೆ, ಕಸದ ರಾಶಿ ಹಾಕುವ ಜಾಗ, ಚರಂಡಿ ಹರಿಯುವ ಜಾಗ ಮುಂತಾದ ಜಾಗಗಳಲ್ಲಿ ರೊಗಾಣು ಹೆಚ್ಚಿರುತ್ತದೆ. 
 • ಆಟವಾಡುವ ಮಗು ತುಂಬಾ ಚಿಕ್ಕದಿದ್ದರೆ, ಮಗು ಮಣ್ಣು, ಕಲ್ಲುಗಳನ್ನು, ಕಣ್ಣು, ಮೂಗು, ಕಿವಿ  ಮತ್ತು ಬಾಯಿಗೆ ಹಾಕದಂತೆ ಎಚ್ಚರಿಕೆ ಕಾಯ್ದುಕೊಳ್ಳುವುದು ಉತ್ತಮ. 
 • ಆಟವಾಡುವ ಮಣ್ಣು ಅಥವಾ ಮರಳಿನಲ್ಲಿ, ಮೊನಚಾದ ವಸ್ತುಗಳೇನಾದರು ಇದೆಯೇ ಎಂದು ನೋಡಿಯೇ ಆಡಲು ಬಿಡಿ. ಕೆಲವೊಮ್ಮೆ, ಮುರಿದ ಗ್ಲಾಸ್ ಚೂರುಗಳು, ಕಬ್ಬಿಣದ ಹರಿತವಾದ ವಸ್ತುಗಳು ಇರುವ ಸಾದ್ಯತೆ ಇರುತ್ತದೆ. ಹಾಗೆಯೇ,ಇರುವೆ ಇನ್ನಿತರ ಸಣ್ಣ ಕೀಟಗಳೆನಾದರೂ ತೊಂದರೆ ಮಾಡುತ್ತಿದೆಯೇ ಎಂದು ಖಾತ್ರಿ ಮಾಡಿಕೊಳ್ಳುವುದು ಒಳಿತು. 
 • ಆಟವಾಡಿದ ನಂತರ ಸ್ವಚ್ಚವಾಗಿ ಮಗುವಿಗೆ ಕೈ ಕಾಲು ತೊಳೆಸುವುದು,  ಅಗತ್ಯ ಬಿದ್ದಲ್ಲಿ ಫ್ರೆಶ್ ಆಗಲಿಕ್ಕೊಂದು ಚಿಕ್ಕ ಸ್ನಾನ ಮಾಡಿಸಬಹುದು. ನಂತರದಲ್ಲಿ, ಎಣ್ಣೆಯಿಂದ ಮಗುವಿನ ಕೈ ಕಾಲುಗಳನ್ನು ಮಸಾಜ್ ಮಾಡಿದಲ್ಲಿ, ಚಿಕ್ಕ ಪುಟ್ಟ ಗಾಯ ಗೀರುಗಳನ್ನು ಹೋಗಲಾಡಿಸುವುದರ ಜೊತೆಗೆ, ಮಕ್ಕಳಿಗೆ ತಮ್ಮ ಸ್ವಚ್ಚತೆಯ ಕಡೆಗೆ ಒಂದು ಶಿಸ್ತಿನ ಕಾರ್ಯಾಚರಣೆ ಕಲಿಸಿ ಕೊಟ್ಟಂತಾಗುತ್ತದೆ.