ಶುಕ್ರವಾರ, ಜುಲೈ 3, 2020

ಕಂಚೀಕಾಯಿ ಚಟ್ನೆ

ಕಂಚೀಕಾಯಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಕಡೆ ಸಿಗುವ ನಿಂಬೆ ಪಂಗಡಕ್ಕೆ ಸೇರಿದ ಒಂದು ಹಣ್ಣು. ನಾರಿಂಗ ಏಳಚೀಕಾಯಿ, citron, kaffir lime ಇತ್ಯಾದಿ ಹೆಸರುಗಳಿಂದ ಇದು ಜನಕ್ಕೆ ಪರಿಚಿತ. ಸಣ್ಣದಾಗಿ ಕಿತ್ತಳೆ ಹಣ್ಣಿನಂತಿರುವ ಇದು ನೋಡಲು ನಿಂಬೆಕಾಯಿಗಿಂತ ದೊಡ್ಡದು ಮತ್ತು ದೊಡ್ಳೀಕಾಯಿಕ್ಕಿಂತ ಸಣ್ಣದು. ಕಂಚಿಕಾಯಿ ಖಾರ ಮತ್ತು ಸಿಹಿ ಉಪ್ಪಿನಕಾಯಿ, ಸಿಪ್ಪೆ ಗೊಜ್ಜು, ನೀರ್ಗೊಜ್ಜು, ಕಂಚಿಹುಳಿ ಬೆಳ್ಳುಳ್ಳಿ ಹಾಕಿದ ಬಿಸಿ ಬಿಸಿ ಸಾರು, ಇತ್ಯಾದಿ ಅಡುಗೆಗೆ ಕಂಚೀಕಾಯಿ ಬಲು ಪ್ರಸಿದ್ಧ... ಕಂಚಿಕಾಯಿ ಯ ಹುಳಿ ಹಿಂಡಿ ಮಾಡಿದ ಚಿತ್ರಾನ್ನವೆಂತೂ ತಿನ್ನಲು ಬಲು ರುಚಿ.. 
ಈ ಹಣ್ಣಿನ ಸಿಪ್ಪೆಯಲ್ಲಿರುವ ಎಣ್ಣೆಯ ಅಂಶ (essential oil ) ಕಹಿ ರುಚಿಯನ್ನು ನೀಡುವುದಲ್ಲದೆ. ರೋಗ ನಿರೋಧಕ ಶಕ್ತಿ ಈ ಹಣ್ಣಿನಲ್ಲಿ ಹೇರಳವಾಗಿದೆ. ಮುಖ್ಯವಾಗಿ ಜೀರ್ಣ ಶಕ್ತಿಯನ್ನು ವೃದ್ಧಿಸಲು, ದೇಹ ನಂಜಾದಾಗ, ಜ್ವರ ಬಂದು ಬಾಯಿ ರುಚಿ ಇಲ್ಲದಾದಾಗ, ಇದನ್ನು ತಿಂದರೆ ಒಳ್ಳೆಯದು. ಹೃದಯದ ಆರೋಗ್ಯಕ್ಕೂ ಸಹಾಯಕ. 

ಇಡೀ ಕಂಚೀಕಾಯಿ ಸಿಪ್ಪೆ ಸಹಿತವಾಗಿ ಕಾಯಿಯ ಜೊತೆ ಹಾಕಿ ತಿರುವಿ ಮಾಡುವ ಹಸಿ ಚಟ್ನೆ, ಉಣ್ಣಲು ತುಂಬಾ ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಕಹಿ ಇದರ ಮೂಲ ರುಚಿ. ಆದರೆ ಅದರ ಜೊತೆಗೆ ಉಪ್ಪು ಹುಳಿ ಖಾರ ಸಿಹಿ ಎಲ್ಲವೂ ಹದವಾಗಿ ಹಾಕಿ ಮಾಡುವ ಈ ಚಟ್ನೆಯನ್ನು, ಬಿಸಿ ಬಿಸಿ ಹಬೆಯಾಡುವ ಅನ್ನಕ್ಕೆ ಹಾಕಿ, ಕೊಬ್ಬರಿ ಎಣ್ಣೆಯೊಂದಿಗೆ ಕಲಸಿ ತಿಂದರೆ, ಆಹಾ ಅದರ ರುಚಿ ಬಲ್ಲವನೇ ಬಲ್ಲ.. ಮಾಡಲೆಂತು ಬಲು ಸುಲಭ.. ನಾನೆಂತೂ ಕಂಚೀಕಾಯಿ ಚಟ್ನೆ ತಿನ್ನಲು ಸಿಕ್ಕಾಗಲೆಲ್ಲ, ಅದನ್ನು ಚೆನ್ನಾಗಿ ಸವಿಯುವುದಲ್ಲದೇ, ಉಂಡು ಕೈ ತೊಳೆದ ನಂತರವೂ, ಅದರ ಪರಿಮಳ ಕೈಯಲ್ಲಿ ಹುಡುಕುತ್ತೇನೆ..   

ಕಂಚೀಕಾಯಿ ಬಳಸಿ ಮಾಡುವ ಚಟ್ನೆಯ ವಿಧಾನವನ್ನು ನಾನಿಲ್ಲಿ ಹಂಚಿಕೊಂಡಿದ್ದೇನೆ. ಇದಕ್ಕೆ ಹಾಕುವ ಉಪ್ಪು ಹುಳಿ ಖಾರ ಎಲ್ಲವೂ ನಮಗೆ ಬೇಕಾದಷ್ಟು ಹಾಕಿಕೊಳ್ಳಬಹುದು. ಒಂದು ಅಂದಾಜಿನ ಅಳತೆ ಇಲ್ಲಿ ಹೇಳಿದ್ದೇನೆ.. 

ಬೇಕಾಗುವ ಪದಾರ್ಥಗಳು :

ಒಂದು ಮೀಡಿಯಂ ಸೈಜಿನ ಕಂಚೀಕಾಯಿ,
ಮುಕ್ಕಾಲು ಕಪ್ ತೆಂಗಿನ ತುರಿ ಅಥವಾ ತುರಿದ ಕೊಬ್ಬರಿ,
ಮುಕ್ಕಾಲು ಚಮಚ ಸಾಸಿವೆಕಾಳು,
ಮುಕ್ಕಾಲು ಚಮಚ ಕಾಳುಮೆಣಸು,
ಒಂದು ಚಮಚ ಜೀರಿಗೆ,
ಕಾಲು ಚಮಚ ಅರಿಶಿನ ಪುಡಿ, 
ಕಾಲು ಚಮಚ ಮೆಂತೆಕಾಳು,
೪-೫ ಒಣಮೆಣಸು ಅಥವಾ ೨ ಚಮಚ ಅಚ್ಚ ಖಾರದ ಪುಡಿ
ಒಂದು ಗೋಲಿಯಾಕಾರದಷ್ಟು ಹುಣಸೆಹಣ್ಣು,
ಒಂದು ಚಮಚ ಬೆಲ್ಲ (ಸಿಹಿ ಬೇಕಾದಲ್ಲಿ),
ರುಚಿಗೆ ತಕ್ಕಷ್ಟು ಉಪ್ಪು 

ಮಾಡುವ ವಿಧಾನ :

ಒಂದು ದೊಡ್ಡ ಕಂಚೀಕಾಯಿ ತೊಳೆದು ಒರೆಸಿಕೊಂಡು, ಸಣ್ಣಕ್ಕೆ ಹೆಚ್ಚಿಕೊಳ್ಳಬೇಕು. ಅದಕ್ಕೆ ಚಿಟಕಿ ಉಪ್ಪು, ಚಿಟಿಕೆ ಅರಿಶಿನ ಪುಡಿ, ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಕಲಸಿ ಒಂದು ೨೦ ನಿಮಿಷಗಳ ಕಾಲ ಬೆರೆತುಕೊಳ್ಳಲು ಬಿಡಬೇಕು. ಅಷ್ಟರಲ್ಲಿ, ಸಾಸಿವೆ, ಕಾಳುಮೆಣಸು, ಮೆಂತೆ, ಜೀರಿಗೆಯನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದು ತಣಿಸಿಟ್ಟುಕೊಳ್ಳಬೇಕು. ಮಿಕ್ಸರ್ ಪಾತ್ರೆಗೆ, ಈಗಾಗಲೇ ತೆಗೆದಿಟ್ಟಿರುವ ಕಂಚೀಕಾಯಿ ಹೋಳುಗಳು, ತೆಂಗಿನ ತುರಿ ಅಥವಾ ಕೊಬ್ಬರಿ, ಹುರಿದಿಟ್ಟ ಸಾಮಾಗ್ರಿಗಳು, ನಮ್ಮ ರುಚಿಗೆ ಬೇಕಾದಷ್ಟು ಖಾರಕ್ಕೆ ಒಣಮೆಣಸು ಅಥವಾ ಮೆಣಸಿನಪುಡಿ, ಉಪ್ಪು, ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಬೇಕು (ಸಿಹಿ ತಿನ್ನದವರು ಬೆಲ್ಲ ಹಾಕದಯೂ ಮಾಡಬಹುದು). ಸ್ವಲ್ಪವೇ ಸ್ವಲ್ಪ ನೀರು ಸೇರಿಸಿ, ಸಾಧ್ಯವಾದಷ್ಟು ಗಟ್ಟಿಯಾಗಿ ತಿರುವಿಕೊಂಡರೆ ಆಯಿತು. ಕಂಚೀಕಾಯಿ ಚಟ್ನೆ ರೆಡಿ.