ಗುರುವಾರ, ಜನವರಿ 12, 2023

ಗೊಂಬೆಯಾಟದ ರಾಮಾಯಣ!

ಎರಡು ತಾಸಿನಲ್ಲಿ ಗೊಂಬೆಯಾಟದ ಮೂಲಕ ರಾಮಾಯಣವನ್ನು ಅತ್ಯದ್ಭುತವಾಗಿ  ತೋರ್ಪಡಿಸಿದ ಖ್ಯಾತಿ ಧಾತು ತಂಡದವರಿಗೆ ಅಭಿನಂದನೆಗಳು. ರಾಮನ ಜನನದಿಂದ ಪ್ರಾರಂಭವಾಗಿ, ರಾವಣನ ವಧಿಸಿ ಸೀತೆಯೊಡನೆ ಪುರಪ್ರವೇಶ ಮಾಡುವಲ್ಲಿಯವರೆಗೆ, ಪ್ರತೀ ಕಥೆ ತೆರೆಗೊಳ್ಳುತ್ತಿದ್ದುದು ಸಭಿಕರ ಹರ್ಷೋದ್ಘಾರ ಮತ್ತು ಚಪ್ಪಾಳೆಯೊಂದಿಗೆ! ಅದೆಷ್ಟು ಸುಂದರವಾದ ಗೊಂಬೆಗಳು! ಸಂಗೀತ ಮಾತುಗಳಿಗೆ ತಕ್ಕಂತೆ ಗೊಂಬೆಗಳನ್ನು ಕುಣಿಸಬೇಕು,  ಸಮಯೋಚಿತವಾಗಿ, ಸನ್ನಿವೇಶಕ್ಕೆ ತಕ್ಕಂತೆ, ಭಾವನೆಗಳಿಗೆ ಒತ್ತು ಕೊಡಲು ಬಣ್ಣ ಬಣ್ಣದ  ಬೆಳಕುಗಳ ವೇದಿಕೆಯಲ್ಲಿ ಗೊಂಬೆಗಳ ಮೇಲೆ ತೋರಬೇಕು. ಎಲ್ಲರ ಕೆಲಸಗಳೂ ಏಕಕಾಲಕ್ಕೆ ನಡೆಯಬೇಕು. ಗೊಬೆಯಾಟದ ಪ್ರದರ್ಶನ ನೋಡುವುದೇ ನಮ್ಮೆಲ್ಲರ ಕಣ್ಣಿಗೆ ಒಂದು ಹಬ್ಬ!  ಅದರಲ್ಲೂ ರಾಮಾಯಣದ  ಕಥೆಯನ್ನು ಹೇಳಲು ಏಳು ಭಾಷೆಗಳ ಸಾಹಿತ್ಯ-ಸಂಗೀತ ಬಳಸಿರುವುದು ಈ ಪ್ರದರ್ಶನದ ವಿಶೇಷ ಭಾಗವಾಗಿತ್ತು. ಎಲ್ಲಾ ಸಂಗೀತಗಳಿಗೆ ಅರಿವಿಲ್ಲದೆ ಒಮ್ಮೆ ಕೈ ತಾಳ ಹಾಕಿದರೆ ಮತ್ತೊಮ್ಮೆ ತಲೆದೂಗಿ ಹೋಗುತ್ತಿತ್ತು. ಕಾರ್ಯಕ್ರಮದಷ್ಟೇ ಚೆನ್ನಾಗಿ ನೀವು ಈ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ದು ನೋಡಿ ನಮಗೆ ಖುಷಿ ಆಯಿತು ಎಂದು ತಂಡದವರೊಬ್ಬರು ಹೇಳಿದಾಗಲೇ ನನ್ನರಿವಿಗೆ ಅದು ಬಂದದ್ದು! ಹಿನ್ನೆಲೆಗೆ ೨೦ಕ್ಕೂ ಹೆಚ್ಚು ಬಗೆಯ ಸಂಗೀತ ವಾದ್ಯಗಳನ್ನು ಬಳಸಿದ್ದು, ಪ್ರತೀ ಸನ್ನಿವೇಶಕ್ಕೆ ತಕ್ಕಂತೆ ಮೂಡುತ್ತಿದ್ದ ವಾದ್ಯ ಸಂಯೋಜನೆ, ತಡರಾತ್ರಿಯಾದರೂ ಮಕ್ಕಳ ಅರೆಗಣ್ಣನ್ನು ಮತ್ತೆ ಮತ್ತೆ ಕುತುಹೂಲದಿಂದ ತೆರೆಯುವಂತೆ ಮಾಡುತ್ತಿತ್ತು.

 








ಸೂತ್ರದ ಗೊಂಬೆಯಾಟ ಕರ್ನಾಟಕದ ಒಂದು ಸಾಂಸ್ಕೃತಿಕ ಕಲೆ. ಗೊಂಬೆಯಾಟ ಹಲವು ದೇಶಗಳಲ್ಲಿ ಇತ್ತೀಚಿಗೆ ಕಂಡು ಬಂದರೂ, ಇದರ ಮೂಲ ಮಾತ್ರ  ಭಾರತ. ಈ ಕಲೆಯ ಸೌಂದರ್ಯವನ್ನು ಕಂಡು ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶಕ್ಕೆ, ಅನುಪಮಾ ಹೊಸಕೆರೆ ಮತ್ತು ವಿದ್ಯಾಶಂಕರ್ ಹೊಸಕೆರೆ ದಂಪತಿಗಳು ಸ್ಥಾಪಿಸಿದ ಕಲಾ ತಂಡ 'ಧಾತು'. ಈ ತಂಡ ಪ್ರತೀ ವರ್ಷವೂ ನಡೆಸುವ ಎರಡು ಪ್ರಮುಖ ಕಾರ್ಯಕ್ರಮಗಳು - ನವರಾತ್ರಿ ಗೊಂಬೆ ಪ್ರದರ್ಶನ ಮತ್ತು ವರ್ಷಕ್ಕೊಮ್ಮೆ ನಡೆಯುವ ಈ ಅಂತಾರಾಷ್ಟ್ರೀಯ ಗೊಂಬೆ ಉತ್ಸವ. ಮಹಾಭಾರತ, ರಾಮಾಯಣ, ಕೃಷ್ಣ ಲೀಲೆ, ಭಾಗವತ, ಶಿವ ಪುರಾಣ, ಭಾರತೀಯ ಜಾನಪದ ಕಥೆಗಳು, ಭಾರತ ಜೀವನ ಶೈಲಿ ಇತ್ಯಾದಿ ವಿಷಯಾಧಾರಿತ ಪ್ರದರ್ಶನಗಳನ್ನು ೨೦೦೯ ರಿಂದ ನೀಡುತ್ತಲೇ ಬಂದಿದೆ. ಕರ್ನಾಟಕದ ಕಿನ್ಹಾಳ ದಿಂದ ತಯಾರಾಗುವ ಗೊಂಬೆಗಳಿಂದ ಹಿಡಿದು ದೇಶ ವಿದೇಶಗಳಿಂದ ಒಟ್ಟು ಮಾಡಿದ ೫೦೦೦ ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹವಿದೆಯಂತೆ. ಬೇರೆ ಬೇರೆ ದೇಶ-ಭಾಷೆಯ ರಂಗಭೂಮಿ ಕಲಾವಿದರು ಇವರಲ್ಲಿಗೆ ಬಂದು ಸೂತ್ರದ ಗೊಂಬೆಯಾಟದ ತರಬೇತಿ ಪಡೆದು ಹೋಗುತ್ತಾರೆ. ಈ ಕಳೆಯ ಉಳಿಸಿ ಬೆಳೆಸಲು, ಮಕ್ಕಳ ಬೇಸಿಗೆ ಶಿಬಿರಗಳೂ ಪ್ರತೀ ವರ್ಷನಡೆಯುತ್ತದೆ. 

ತಾಂತ್ರಿಕ ನಾವಿನ್ಯತೆ, ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿರುವುದು ದುರಂತವನ್ನು ಸವಾಲಾಗಿ ಸ್ವೀಕರಿಸಿ, ವಿಷಯಾಧಾರಿತ ಗೊಂಬೆಯಾಟದ ಪ್ರದರ್ಶನಗಳು, ತರಬೇತಿ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಟೀವಿ ಮಾಧ್ಯಮದಷ್ಟೇ ಜನರ ಆಕರ್ಷಣೆ ಪಡೆಯಲು ಸಫಲರಾಗುತ್ತಿರುವ 'ಧಾತು' ತಂಡಕ್ಕೆ ಅಭಿನಂದನೆ ಮತ್ತು ಶುಭ ಹಾರೈಕೆ ತಿಳಿಸುತ್ತಾ..  













. ಆಸಕ್ತಿ ಇದ್ದವರು ಖಂಡಿತ Dhaatu ಭೇಟಿ ಕೊಡಿ. 


    

ಮಂಗಳವಾರ, ಜನವರಿ 3, 2023

ಮೋಜಿನ ವಿಜ್ಞಾನ - ಬಣ್ಣದ ಹೂವಿನ ಮ್ಯಾಜಿಕ್

 ಮೋಜಿನ ವಿಜ್ಞಾನ - ಬಣ್ಣದ ಹೂವಿನ ಮ್ಯಾಜಿಕ್

 ಸಾಮಾಗ್ರಿಗಳು :  ಬಿಳಿ ಬಣ್ಣದ ಗುಲಾಬಿ ಹೂವು. ಅಡುಗೆ ಬಣ್ಣ, ನೀರು ಮತ್ತು ಲೋಟ 

ಕ್ರಮ : ಮೊದಲಿಗೆ ಲೋಟದಲ್ಲಿ ನೀರು ಹಾಕಿ, ಅಡುಗೆ ಬಣ್ಣ ಸೇರಿಸಿ, ಬಣ್ಣದ ನೀರು ತಯಾರಿಸಬೇಕು. ಉದ್ದ ತೊಟ್ಟಿರುವ ಬಿಳಿ ಬಣ್ಣದ ಗುಲಾಬಿ ಹೂವನ್ನು, ಬಣ್ಣದ ನೀರಿನಲ್ಲಿ ೨೪ ತಾಸುಗಳ ಕಾಲ ಇಡಬೇಕು. ಹೂವು ಹೆಚ್ಚು ಬಾಡಿದ್ದರೆ, ನೀರಿನ ಬಣ್ಣ ಹೀರಿಕೊಳ್ಳಲು ಸಮಯಹಿಡಿಯುತ್ತದೆ ಹಾಗಾಗಿ ತಾಜಾ ಹೂವಿಟ್ಟರೆ ಉತ್ತಮ. ಮರುದಿನಕ್ಕೆ ಹೂವಿನ ಬಣ್ಣ ಬಿಳಿಯಿಂದ , ನೀರಿಗೆ ಬೆರೆಸಿದ ಬಣ್ಣದ ಹೂವಾಗಿರುತ್ತದೆ. 

ಮಗಳ ಪ್ರಯೋಗ :  ಲೋಟವೊಂದರಲ್ಲಿ ನೀರಿನ ಜೊತೆ ಅರಿಶಿಣ ಪುಡಿ ಹಾಕಿದ ಹಳದಿ ಮಿಶ್ರಣದ ನೀರು ತಯಾರು ಮಾಡಿಕೊಂಡಳು. ಸಣ್ಣ ನೀರಿನ ಲೋಟದಲ್ಲಿ ಭಾರವಾದ ತೊಟ್ಟಿರುವ ಗುಲಾಬಿ ಹೂವನ್ನು ಹಾಕಿಟ್ಟಿದ್ದರಿಂದ, ಅದು ಸರಿಯಾಗಿ ಮುಳಗದೇ ಮರುದಿನಕ್ಕೆ ಬಣ್ಣ ಬಾರದ ಬಾಡಿದ ಹೂವಾಗಿತ್ತು. ಮತ್ತೆ ತೊಟ್ಟು ಮುಳುಗುವಂತೆ ಉದ್ದ ಲೋಟದಲ್ಲಿ ಹೂವನ್ನು ಇಟ್ಟಾಗ ಮರುದಿನಕ್ಕೆ ಹಳದಿ ಬಣ್ಣ ಹೂವಿನ ತುಂಬಾ ಆವರಿಸಿತ್ತು :) 

ಹಿಂದಿನ ವಿಜ್ಞಾನ : ಹೂವಿನ ಕಾಂಡದಲ್ಲಿನ ಸಣ್ಣ ಗ್ಸಯ್ಲ್ಮ್ ಎಂಬ ಸಣ್ಣ ಕೊಳವೆಗಳ  ಮೂಲಕ ನೀರನ್ನು ಒಳಗೆ ಎಳೆದುಕೊಳ್ಳಲಾಗುತ್ತದೆ. ಎಲೆ ಮತ್ತು ಹೂಗಳ ಮೂಲಕ ನೀರು ಆವಿಯಾಗುತ್ತದೆ. ಇದನ್ನು ಟ್ರಾನ್ಸ್ಪಿರೇಷನ್ ಎಂದುಕರೆಯುತ್ತಾರೆ.  ಹೀಗೆ ನೀರು ಆವಿಯಾಗಿ  ಬಣ್ಣ ಹೂಗಳ ಮೇಲೆ ಉಳಿದು ಬಣ್ಣದ ಹೂಗಳಾಗುತ್ತದೆ. 

ಪ್ರಯೋಗದ ನಂತರ ಓದಿದ್ದು: 

ತಣ್ಣೀರಿಗಿಂತ ಬೆಚ್ಚಗಿನ ನೀರಲ್ಲಿ ಬಣ್ಣವು ಬೇಗನೆಹೀರಲ್ಪಡುತ್ತದೆ. 

ಅನೇಕ ಹೂಗಳ ಬಣ್ಣ ಮಣ್ಣಿನ pH ನ ಪ್ರಮಾಣ ತೋರಿಸುವುದರಿಂದ, ನೀರಿಗೆ ಒಂದೆರಡು ಹನಿ              ನಿಂಬೆರಸ ಅಥವಾ ಅಡುಗೆ ಸೋಡಾ ಕೂಡ ಹಾಕಬಹುದು. 

ದೊಡ್ಡವರ ಸಹಾಯದಿಂದ ೬-೭ ವರ್ಷ ಮೇಲ್ಪಟ್ಟ ಮಕ್ಕಳು ಈ ಪ್ರಯೋಗ ಮಾಡಿ ನೋಡಬಹುದು.