ಸೋಮವಾರ, ಸೆಪ್ಟೆಂಬರ್ 27, 2021

ನಿಜಗಲ್ ಬೆಟ್ಟ

 ಇಂದು World Tourism Day/ವಿಶ್ವ ಪ್ರಾವಾಸೋದ್ಯಮ ದಿನ. ಪ್ರವಾಸ ಎನ್ನುವುದು ಕೆಲವರಿಗೆ ವ್ಯಾಪಾರದಂತಹ ಸ್ವಕಾರ್ಯದ ಉದ್ದೇಶಕ್ಕಾಗಿಇದ್ದರೆ , ಕೆಲವರಿಗೆ ಮನರಂಜನೆ, ವಿರಾಮ, ಸತ್ಕಾರ್ಯಕ್ಕಾಗಿ ಮಾಡುವ ಪ್ರಯಾಣವಾಗಿರಬಹುದು. ದಿನನಿತ್ಯದ ಜಂಜಾಟ ಏಕತಾನತೆಯಿಂದ ಹೊಸ ಹುರುಪು ಪಡೆಯಲು ಪ್ರವಾಸಗಳು ಅತ್ಯಾವಶ್ಯಕ. ಮಕ್ಕಳಿಗೆ ಪ್ರತಿ ಹೊಸತುಗಳು ಕೂಡ ಕಲಿಕೆ. ಗೆಳೆಯರೊಂದಿಗೆ ಮಕ್ಕಳೊಂದಿಗೆ ನಿನ್ನೆ ಟ್ರೆಕಿಂಗ್ ಹೋದ 'ನಿಜಗಲ್ ಬೆಟ್ಟ' ದ ಕುರಿತಾಗಿ ಒಂದು ಝಲಕ್. 











































ನಿಜಗಲ್ ಬೆಟ್ಟ ಬೆಂಗಳೂರಿನಿಂದ ೬೦ ಕಿಮೀ ದೂರದಲ್ಲಿ, ತುಮಕೂರಿಗೆ ಹೋಗುವ ಮಾರ್ಗದಲ್ಲಿ ದೊಬ್ಬಸ್ಪೇಟ್ ಎಂಬ ಊರಿನ ತಪ್ಪಲಿನಲ್ಲಿದೆ. ಅರ್ಧ ದಿನದ ಚಾರಣಕ್ಕೆ ಹೋಗಬಹುದಾದ ಸ್ಥಳಗಳಲ್ಲಿ ಇದೂ ಒಂದು. ೧೭ನೇ ಶತಮಾನದಲ್ಲಿ, ಚಿಕ್ಕದೇವರಾಯ ಒಡೆಯರ್ ಅವರ ಆಳ್ವಿಕೆಯ ಕಾಲದ ಈ ಬೆಟ್ಟದಲ್ಲಿ ಪಾಳುಬಿದ್ದ ದೇವರ ಮಂಟಪಗಳು, ಗುಹೆಗಳು ಮತ್ತು ಕೋಟೆಕಲ್ಲುಗಳನ್ನು ನೋಡಬಹುದಾಗಿದೆ. ದೇವಾಲಯಗಳ ಕಲ್ಲಿನ ಗೋಡೆ ಮತ್ತು ಕಂಬಗಳ ಮೇಲೆ ಸುಂದರವಾದ ಕೆತ್ತನೆಗಳಿವೆ. ಹೈದರಾಲಿ ಮತ್ತು ನಡುವೆ ಕಾದಾಟವೂ ಇಲ್ಲಿ ನಡೆದಿತ್ತು ಎಂಬ ಐತಿಹಾಸಿಕ ಕಥೆಯಿದೆ. ನಾವು ಸ್ನೇಹಿತರಬಳಗದವರು ನಮ್ಮ ೬-೮ ವರ್ಷದ ಮಕ್ಕಳನ್ನು ಕರೆದುಕೊಂಡು, ಮಾತುಕಥೆಯಾಡುತ್ತ ನಡೆದದ್ದರಿಂದ, ಉತ್ಸಾಹದಲ್ಲಿ ೭-೮ ಕಿ.ಮೀ ನಷ್ಟು ಟ್ರೆಕಿಂಗ್ ಮಾಡಿದ್ದೇ ತಿಳಿಯಲಿಲ್ಲ. ಮಕ್ಕಳಿಗೆ ನೈಸರ್ಗಿಕ ಕಲ್ಲು ಬಂಡೆಗಳು, ಗುಹೆಗಳು, ಹಳೆಯ ಕಾಲದ ಬ್ರಹತ್ ಕೋಟೆಗಳು ಹೇಗಿದ್ದವೆಂದು ತೋರಿಸಲು ಸೂಕ್ತವಾದ ಜಾಗ. ೧ ಕಿಮೀ ನಷ್ಟು ದೂರ ಹಳ್ಳಿಯ ದಾಟಿದ ನಂತರಕ್ಕೆ ಚಾರಣದ ಹಾದಿ ಸಿಗುತ್ತದೆ. ತೀರಾ ಕಷ್ಟವೂ ಅಲ್ಲದ ತೀರಾ ಸುಲಭವೂ ಅಲ್ಲದ ಎತ್ತರೆತ್ತರ ಕಾಲಿಟ್ಟು ನಡೆಯಬೇಕಾದ ಕಡಿದಾದ ಕಲ್ಲು ಬಂಡೆಗಳ ಹಾದಿ. ಹೆಚ್ಚೇನೂ ಪ್ರಸಿದ್ಧಿ ಪಡೆದ ಜಗವಲ್ಲದಿದ್ದರೂ, ಬೆಟ್ಟದ ತಪ್ಪಲಿನ ಮೇಲೆ ಶಿವನ ದೇವಾಲಯ (ಪಾಳುಬಿದ್ದ) ಮತ್ತು ದರ್ಗಾಇರುವುದರಿಂದ, ಹರಕೆಗಳನ್ನು ತೀರಿಸುವ ಸಲುವಾಗಿ ಸ್ಥಳೀಯ ಜನರ ಓಡಾಟ ಇರುತ್ತದೆ. ಹಸಿರು ಮರಗಳ ಹಾದಿ ಅಲ್ಲಲ್ಲಿ ಇದ್ದರೂ, ಹೆಚ್ಚಿನ ಭಾಗ  ಕುರುಚಲು ಪೊದೆಗಳಿಂದ ತುಂಬಿದ ನೆತ್ತಿ ಸುಡುವ ಹಾದಿಯಾದ್ದರಿಂದ ಬೆಳಗಿನ ಜಾವದ ಸಮಯ ಚಾರಣಕ್ಕೆ ಆರಿಸಿಕೊಂಡರೆ ಸೂಕ್ತ. ದರ್ಗಾ ಇರುವ ಜಾಗದ ವರೆಗೆ ಅಲ್ಪ ಸ್ವಲ್ಪ ನಡೆಯುವಂತಹ ಹಾದಿ ಇದ್ದರೂ, ಅಲ್ಲಿಂದ ಮೇಲಕ್ಕೆ ಬೆಟ್ಟದ ತುದಿಯ ತಲುಪಿ ಸುತ್ತಲಿನ ಪ್ರದೇಶವನ್ನು ನೋಡಬೇಕೆಂದರೆ, ಬಂಡೆಗಳನ್ನೇ ಹತ್ತಬೇಕು. ಇಂತಹ ಸಾಹಸಗಳು ಮಕ್ಕಳ ಇನ್ನಷ್ಟು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆದರೂ ಜಾಗರೂಕತೆ ಅತ್ಯವಶ್ಯಕ. ಬೆಟ್ಟದ ತುದಿಯನ್ನು ತಲುಪಿ ಅಷ್ಟೆತ್ತರದಿಂದ ಕಾಣಬಹುದಾದ ಸುತ್ತಮುತ್ತಲಿನ ನೋಟ ಮಾತ್ರ ರಮಣೀಯ. ಸಿದ್ಧಗಂಗಾ ಬೆಟ್ಟ ಇಲ್ಲಿಂದ ನೋಡಲುಮುದವೆನಿಸುತ್ತದೆ . ನೇರವಾದ ಬೆಂಗಳೂರು - ತುಮಕೂರು ಹೈವೆ ನೋಡಲು ಖುಷಿ ಕೊಡುತ್ತದೆ. ಅಲ್ಲಲ್ಲಿ ಇರುವ ಕೆರೆ ಕೊಳ್ಳಗಳು ಪ್ರಕೃತಿಯ ನೋಟವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.  ಎಲ್ಲೆಲ್ಲೂ ಮಂಗಗಳು ಆವರಿಸಿರುವುದರಿಂದ, ಸ್ವಲ್ಪ ಹೊತ್ತು ಆ ಕಡೆ ಈ ಕಡೆ ನೋಡುವಷ್ಟರಲ್ಲಿ ನಮ್ಮ ಕೈಯಲ್ಲಿರುವ ಆಹಾರ ಮಂಗಗಳು ಪಾಲಾಗಿರುತ್ತವೆ. ಬೆಳಿಗ್ಗೆ ತಿಂಡಿ ತಿಂದು , ಮಧ್ಯಾಹ್ನ ಊಟದ ಸಮಯದೊಳಗೆ ಚಾರಣ ಮುಗಿಸಿದ್ದರಿಂದ ನಮಗೆ ಹೆಚ್ಚಿನ ಸಮಸ್ಯೆಯಾಗಲಿಲ್ಲ. ಬೇಸರದ ಸಂಗತಿಯೆಂದರೆ, ಸ್ಥಳದ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತದೆ. ಇಂತಹ ಸುಂದರವಾದ ನೈಸರ್ಗಿಕ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಮನಸ್ಥಿತಿ ಎಲ್ಲರಲ್ಲೂ ಮೂಡಬೇಕಿದೆ. ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕಾರ್ಯ ಇನ್ನಷ್ಟುಬೇಕಾಗಿದೆ ಎಂದೆನಿಸಿತು. ಒಟ್ಟಾರೆಯಾಗಿ ಟ್ರೆಕಿಂಗ್ ಸಾಹಸಗಳನ್ನು ಮಕ್ಕಳಲ್ಲಿ ರೂಢಿಸಲು, ನಮ್ಮ ಜಡ ಹಿಡಿದ ಮೈ ಮತ್ತು ಮನಸ್ಸುಗಳಿಗೆ ವ್ಯಾಯಾಮ ನೀಡಲು ಹೋಗಿ ಬಂದ ಅರ್ಧ ದಿನದ ಚಾರಣ ತುಂಬಾ ಖುಷಿ ಕೊಟ್ಟಿತು. 


ಶನಿವಾರ, ಮೇ 1, 2021

mother

ಕೋವಿಡ್ ೧೯ ಸೋಂಕು ರೋಗ ಪ್ರಾರಂಭವಾದಾಗಿನಿಂದ ಅನಿತಾ ಮತ್ತವಳ ಗಂಡನಿಗೆ, ಮನೆಯಿಂದಲೇ ಆಫೀಸು ಕೆಲಸ ಮಾಡಿಕೊಳ್ಳುವ ಅನಿವಾರ್ಯತೆ. ಹಿಂದೆ ಮನೆಗೆಲಸಕ್ಕೆ ಹೆಲ್ಪರ್ ಇಟ್ಟುಕೊಂಡು, ದೊಡ್ಡ ಮಗನನ್ನು ಸ್ಕೂಲ್ ಮುಗಿದ ನಂತರ ಫುಟಬಾಲ್ ಆಟಕ್ಕೆ ಕಳಿಸಿಕೊಂಡು, ಪುಟ್ಟ ಮಗಳನ್ನು ಡೇ ಕೇರ್ ನಲ್ಲಿ ಬಿಟ್ಟುಕೊಂಡು, ಇಬ್ಬರೂ ತಮ್ಮ ತಮ್ಮ ಆಫೀಸು ಕೆಲಸ ಮುಗಿಸಿಕೊಂಡು ಸಂಜೆ ಎಲ್ಲರೂ ಗೂಡು ಸೇರಿಕೊಂಡರೆ, ಸಿಕ್ಕಷ್ಟು ಸಮಯ ಒಟ್ಟಿಗೆ ಕಳೆದು, ಮಕ್ಕಳ ಓದು ಬರಹ ಆಟಗಳನ್ನು ಮುಗಿಸಿಕೊಳ್ಳುವ ದಿನಚರಿಯಿದ್ದವರಿಗೆ, ಈಗ ಒಂದೇ ಸೂರಿನಡಿಯಲ್ಲಿ ನಾಲ್ಕು ಅನ್ಯಮನಸ್ಕರರ ಜೀವನ ಎಲ್ಲಿಲ್ಲದ ಅಸಮತೋಲನ ತಂದೊಡ್ಡುತ್ತಿದೆ. ಗಂಡನ ಮೀಟಿಂಗ್ ಸಮಯದಲ್ಲಿ ಮಕ್ಕಳು ಗಲಾಟೆ ಮಾಡಿದರೆ, ಅವರನ್ನು ಸರಿಯಾಗಿ ಮ್ಯಾನೇಜ್ ಮಾಡುತ್ತಿಲ್ಲ ಎಂಬ ಬೈಗುಳ ತಿನ್ನುವುದು ಅನಿತಾ. ಆಫೀಸು ತಲೆಬಿಸಿಯ ಜೊತೆಗೆ, ಮನೆಗೆಲಸವನ್ನು ಮಾಡಿಕೊಂಡು, ಟೈಮ್ ಪಾಸ್ ಆಗದೆ ಒಂದೇ ಸಮನೆ ತಿನ್ನುವ ಅಭ್ಯಾಸ ಮಾಡಿಕೊಂಡ ಮಕ್ಕಳಿಗೆ ತಿಂಡಿ ಒದಗಿಸಿಕೊಳ್ಳುತ್ತ, ಕೊರೋನಾ ಸಮಯದಲ್ಲಿ ಸೋಂಕುಗಳಿಂದ ದೊರವಿರಲು ವಹಿಸಬೇಕಾದ ಎಲ್ಲ ಜಾಗ್ರತೆಗಳನ್ನು ಮಾಡಿಕೊಳ್ಳುವಷ್ಟರಲ್ಲಿ, ಅನಿತಾ ಬಸವಳಿದು ಹೋಗುತ್ತಿದ್ದಾಳೆ.ಶಾಲೆಯಿಲ್ಲದೆ ಓದು ಬರಹದ ಅಭ್ಯಾಸವೇ ಬಿಟ್ಟು ಅಶಿಸ್ತು ಮೈಗೂಡಿಸಿಕೊಂಡಿರುವ ಮಕ್ಕಳ ಬೆಳಗು ಪ್ರಾರಂಭವಾಗುವುದೇ ಟೀವಿಯಿಂದ! ವಿಡಿಯೋ ಗೇಮ್ಸ್ ಆಟಕ್ಕೆ ಮಗ ಅಂಟಿಕೊಂಡಿದ್ದರೆ ,ರೈಮ್ಸ್ ಹಾಡುಗಳಿಲ್ಲದೆ ಮಗಳು ಊಟ ತಿನ್ನಲೊಲ್ಲಳು. ಪ್ರತಿ ಸಣ್ಣ ವಿಷಯಕ್ಕೂ, ಮಕ್ಕಳ ಹಠ ಸಿಟ್ಟು, ಅಮ್ಮನ ತಾಳ್ಮೆ ಕೆಡಿಸುತ್ತಿದೆ. 

ಇದು ಒಂದು ಅನಿತಾಳ ಮನೆಯ ಕಥೆಯಲ್ಲ. ಕೊರೋನಾ ಸೋಂಕು ರೋಗದ ಭೀತಿ ಪ್ರಾರಂಭವಾದಾಗಿನಿಂದಲೂ ಎಲ್ಲರ ಜನಜೀವನ ಒಂದಲ್ಲಾ ಒಂದು ರೀತಿಯಲ್ಲಿ ಏರು ಪೇರಾಗಿದೆ. ಸೋಂಕು ರೋಗದಿಂದ ಸುರಕ್ಷತೆಯಿಂದಿರಲು ಎಲ್ಲರೂ ಈಗ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿದೆ. ಕೆಲವರಿಗೆ ಇದು ಒಂದು ವರವಾದರೆ ಹಲವರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ. ಮನೆಮಂದಿಯೆಲ್ಲ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಕೊರೋನಾ ಕಾಲದ ಹೊಸಜೀವನ ನಡೆಸಬೇಕಾದ ಅನಿವಾರ್ಯತೆ ಇದೆ.  ಅದರಲ್ಲೂ ಮನೆಯಲ್ಲಿ ಅಮ್ಮಂದಿರ ಗೋಳೆಂತೂ ಕೇಳುವುದೇ ಬೇಡ. ಹೆಚ್ಚಿದ ಸೋಂಕಿನ ಭೀತಿಯಲ್ಲಿ ವಹಿಸಬೇಕಾದ ಮುತುವರ್ಜಿಯ ಜೊತೆಗೆ, ಆಫೀಸಿನ ಕೆಲಸ, ಹೆಚ್ಚಿದ ಮನೆಗೆಲಸ, ಮನೆಮಂದಿಯವರೆಲ್ಲರ ಅರೋಗ್ಯ ಕಾಳಜಿಯ ಜೊತೆಗೆ ಮಕ್ಕಳನ್ನು ಸಂಭಾಳಿಸಿಕೊಳ್ಳುವುದು ಕೂಡ ಅಂತಿಮವಾಗಿ ತಾಯಂದಿರ ಕೆಲಸವೇ ಆಗುತ್ತದೆ. ಒಂದು ಕಡೆ ಶಾಲೆ ಇಲ್ಲದೇ, ಕೆಲವು ತರಗತಿ ಮಕ್ಕಳಿಗೆ ಪರೀಕ್ಷೆಗಳೂ ಇಲ್ಲದೆ ಮಕ್ಕಳ ಓದುವ ಬರಹದ ಅಭ್ಯಾಸ ಕುಂಠಿತಗೊಳ್ಳುತ್ತಿರುವುದರ ಚಿಂತೆಯಾದರೆ, ಇನ್ನೊಂಡೆ ಮನೆಯಲ್ಲಿ ಸಮಯ ಕಳೆಯಲು ಸರಿಯಾದ ಮಾರ್ಗ ಗೊತ್ತಿಲ್ಲದ ಮಕ್ಕಳ ಹಠ ಸಿಟ್ಟು ಅಸಮಾಧಾನ ಹೆಚ್ಚಾಗುತ್ತಿರುವುದು, ಅದೆಷ್ಟೋ ಮನೆಯ ಸಮತೋಲನವನ್ನು ತಪ್ಪಿಸುತ್ತಿದ್ದೆ. ಹಲವೆಡೆ ಶಾಲಾ ಪಾಠಗಳಿಗೇನೋ ಆನ್ಲೈನ್ ಶಿಕ್ಷಣದ ವ್ಯವಸ್ಥೆ ಯಾದರೂ, ಮಕ್ಕಳಿಗೆ ಭೌತಿಕವಾಗಿ ಶಾಲೆ, ಶಿಕ್ಷಕರು, ಸಹಪಾಠಿಗಳು, ಒಕ್ಕೊರಲಿನ ಪಾಠ, ಆಟ, ಸಿಹಿ ಕಹಿ ಅನುಭವಗಳು ಇವೆಲ್ಲ ಯಾವುದೂ ಇಲ್ಲದೆ, ಮಕ್ಕಳಿಗೆ ಪಾಠಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ, ಹಾಗಾಗಿ ಸಹಜವಾಗಿಯೇ ಅವರಿಗೆ ಓದಿನಲ್ಲಿ ಆಸಕ್ತಿ ಕಮ್ಮಿಯಾಗುತ್ತದೆ. ಶಾಲೆಯಿಂದ ಪಾಠ ಕಳಿಸುತ್ತಿದ್ದಾರೆ ನೀನು ಕಲಿಯಬೇಕು ಎಂದು ಮಗನೋ ಮಗಳಿಗೋ ಬುದ್ಧಿ ಹೇಳಿ ಒಂದಷ್ಟು ಹೊತ್ತು ಹೊಂವರ್ಕ್  ಬರೆಯಲುಕುಳ್ಳಿರಿಸಿದರೂ, ಉಳಿದ ಸಮಯದಲ್ಲಿ ಮಕ್ಕಳನ್ನು ಹೇಗಾದರೂ ಎಂಗೇಜ್ ಇಡಬೇಕಲ್ಲ. ಈಗಿನ ರೋಗದ ಭೀತಿಯ ಸಮಯದಲ್ಲಿ ಹೊರಗಡೆ ಇತರ ಮಕ್ಕಳೊಂದಿಗೆ ಆಟವಾಡಲು ಕಳುಹಿಸಲಾಗುವುದಿಲ್ಲ.  ಇಂಟರ್ನೆಟ್ ಸೌಲಭ್ಯ ಕೂಡ ಮನೆಯ ಮೂಲಭೂತವಾಗುತ್ತಿರುವ ಈ ಸಮಯಕ್ಕೆ, ಸುಲಭವಾಗಿ ದೊರೆಯುವ ಟೀವಿ, ಮೊಬೈಲ್, ಟ್ಯಾಬ್, ಕಂಪ್ಯೂಟರ್ ಗೇಮ್ಸ್ ಗಳಿಗೆ ಮಕ್ಕಳು ದಾಸರಾಗುತ್ತಿದ್ದಾರೆ. ಸಧ್ಯಕ್ಕೆಮಕ್ಕಳನ್ನು ಒಂದೆಡೆ ಕೂರಿಸಲು ಇದು ಉತ್ತಮ ಪರಿಹಾರವೆಂದೆನಿಸಿದರೂ, ಮುಂದೆ ಮಕ್ಕಳು ಆ ನಿರ್ಲಿಪ್ತ ಜಡಕ್ಕೆ ಒಗ್ಗಿಕೊಂಡು, ಮಕ್ಕಳ ಸರ್ವತೋಮುಖ ಬೆಳವಣಿಗೆ ಕ್ಷೀಣಿಸುವುದೆಂತೂ ಸತ್ಯ. 

ಅಮ್ಮಂದಿರೇ ಲಾಕ್ಡೌನ್ ಅನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ. 

ಲೋಟದಲ್ಲಿ ಅರ್ಧ ನೀರು ಖಾಲಿಯಾಗಿದೆ ಎಂದು ಕೊರಗುವುದಕ್ಕೂ, ಲೋಟದಲ್ಲಿ ಅರ್ಧದಷ್ಟು ನೀರಿದೆ ಎಂದು ಖುಷಿ ಪಡುವುದಕ್ಕೂ ವ್ಯತ್ಯಾಸವಿದೆ. ಪ್ರಾಣಾಂತಿಕ ರೋಗಕ್ಕೆ ಪ್ರತಿನಿತ್ಯ ಸಾವಿರಾರು ಜನರು ಬಲಿಯಾಗುತ್ತಿರುವ ಈ ಸಂಕಷ್ಟದ ಸಮಯದಲ್ಲಿ ನಮ್ಮ ಮಕ್ಕಳನ್ನು ಕಾಪಾಡಿಕೊಂಡು ಮನೆಮಂದಿಯೆಲ್ಲ ಒಟ್ಟಿಗೆ ಇದ್ದೇವಲ್ಲ. ಸಾಧ್ಯವಾದಷ್ಟು ಸುರಕ್ಷತೆಯಿಂದ ಇರುವಂತಹ ವ್ಯವಸ್ಥೆಗಳು ಸಿಕ್ಕಿವೆಯಲ್ಲ ಎಂದು ಪ್ರತಿನಿತ್ಯ ಮನನ ಮಾಡಿಕೊಳ್ಳುವುದೇ ಮನೆಯ ಪೋಷಕಿ ಅಮ್ಮಂದಿರ ಶಕ್ತಿ. ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಸಮತೋಲನದ ಸಹಿಷ್ಣುತೆ, ಮಕ್ಕಳ ಶಿಕ್ಷಣ, ಅರೋಗ್ಯ ವೃದ್ಧಿಸಿಕೊಳ್ಳುವ ಜೀವನಶೈಲಿ ಇತ್ಯಾದಿ ಅದೆಷ್ಟೋ ಛಲಗಳಿಗೆ ಒಗ್ಗಿಕೊಂಡು, ಮುಂಚಿಕ್ಕಿಂತಲೂ ಅದೆಷ್ಟೋ ಬಹುಕಾರ್ಯಕ ಸಾಮರ್ಥ್ಯ (multitasking strength) ಹೆಚ್ಚಾಗಿರುವುದರ ಬಗ್ಗೆ ಹೆಮ್ಮೆ ಇರಬೇಕು ನಾವು ಅಮ್ಮಂದಿರಿಗೆ. ಮೀ ಟೈಮ್ ಅನ್ನುವುದೇ ಸಿಗದಿರುವ ಪರಿಸ್ಥಿತಿ ಇರಬಹುದು ನಿಜ, ಆದರೆ ಫ್ಯಾಮಿಲಿ ಟೈಮ್ ಇಲ್ಲದೆ ಅದೆಷ್ಟು ಜನ ಅದೆಷ್ಟು ದಿನ ಒಂಟಿತನದಿಂದ ಕೊರಗುತ್ತಿದ್ದರೋ, ಹೆಚ್ಚಿದ ಕೆಲಸವಾದರೂ ಸರಿ ಕಣ್ಣೆದುರಿಗೆ ಮಾತನಾಡಲು ಮನೆ ತುಂಬಾ ಜನ ಇದ್ದರೆ ಅದೆಷ್ಟು ಚೆನ್ನ. ಕೊಂಚ ತಾಳ್ಮೆ, ಕೊಂಚ ಪ್ಲಾನಿಂಗ್ ಇಟ್ಟುಕೊಂಡು, ಹೆಚ್ಚಿದ ಕೆಲಸಗಳ ನಿವಾರಣೆ ಮಾಡಿ ಪ್ರೀತಿಪಾತ್ರರೊಡನೆ ಒಂದಷ್ಟು ನಕ್ಕು, ಉಂಡು ತಿಂದು ಜೊತೆಗಿರಲು ಅವಕಾಶವಾಗುತ್ತಿದೆಯಲ್ಲ, ಮಕ್ಕಳು ಫ್ರೆಶ್ ಬಿಸಿಬಿಸಿ ಊಟ ಮಾಡುತ್ತಿದ್ದರಲ್ಲಾ, ಅವರು ಬೆಳೆಯುವುದನ್ನು, ಅವರ ಆಟ ನಡುವಳಿಕೆಗಳನ್ನು ನಾವು ಗಮನಿಸಿಕೊಳ್ಳುವಷ್ಟು, ಅವರೊಡನೆ ಬೆರೆಯುವಷ್ಟು ಅವಕಾಶ ನಮಗೆ ಸಿಗುತ್ತಿದೆಯಲ್ಲ. ಊಟದಲ್ಲಿ  ಅಡುಗೆ ರೆಸಿಪಿಗಳಲ್ಲಿ ಈಗ ವೈವಿದ್ಯತೆ ತರುವಂತಾಗುತ್ತಿದೆಯಲ್ಲ ಇತ್ಯಾದಿ ಈಗಿನ ಮನೆ ದಿಗ್ಬಂಧನದ ಪ್ಲಸ್ ಪಾಯಿಂಟ್ಸ್ ಗಳು. ಮನೆಯಿಂದಲೇ ಆಫೀಸು ಕೆಲಸ ಮಾಡುವವರ ಪ್ರತಿನಿತ್ಯದ ಸವಾಲುಗಳ ಚಿತ್ರಣ ಪರಸ್ಪರ ಮನೆಮಂದಿಗೆ ಈಗ ಸಿಗುತ್ತಿರುವುದರಿಂದ , ಮನೆಮಂದಿಯಲ್ಲಿ  ಪರಸ್ಪರ ಗೌರವ, ಪ್ರಶಂಸೆ ಕೂಡ ಹೆಚ್ಚಿದೆ. 

ಶಾಲೆಯ ಕಲ್ಪನೆಯನ್ನು ಮನೆಗೆ ತನ್ನಿ 

ಮಕ್ಕಳಿಗೆ ಶಾಲೆ ಎಂಬುದು ಕೇವಲ ಪಾಠ ಕಲಿಯುವ ಸ್ಥಳವಲ್ಲ. ವೈವಿಧ್ಯತೆಯನ್ನು ಕಂಡು ಪ್ರಪಂಚ ಜ್ಙಾವವನ್ನು ಹೆಚ್ಚಿಸಿಕೊಳ್ಳುವ ಸ್ಥಳವದು. ಇತರರು ನಿಯಮವನ್ನು ಪಾಲಿಸುವುದ ಕಂಡು ತಾವೂ ಅನುಸರಿಸುವುದನ್ನು ಕಲಿಯುವ, ಇತರ ಮಕ್ಕಳೊಡನೆ ಆಡಿ ಮಾತನಾಡಿ ಬೆರೆತು, ಸವಾಲುಗಳನ್ನು ಸ್ವೀಕರಿಸಿ ಪ್ರಯತ್ನಿಸುವ, ಸೋಲು ಗೆಲವುಗಳನ್ನು ಸಂಭ್ರಮಿಸುವ ಸ್ಥಳವದು. ಆದರೀಗ ಮನೆಯೇ ಮಕ್ಕಳ ಶಾಲೆ ಎಂಬ ಪರಿಸ್ಥಿತಿ ಇದೆ. ಮನೆ ಎಂದ ಕೂಡಲೇ ಎಷ್ಟೆಂದರೂ ವಿಶ್ರಾಂತಿ ಭಾವನೆ ಬರುವುದಕ್ಕಾಗಿ ಮತ್ತು ಒಬ್ಬರೇ ಕುಳಿತು ಅಭ್ಯಾಸ ಮಾಡಬೇಕಾಗುವುದರಿಂದ, ಮಕ್ಕಳಿಗೆ ಓದು ಬರಹದ ಕುರಿತಾಗಿ ಹೆಚ್ಚಿನ ಗಂಭೀರತೆ ಬರುವುದಿಲ್ಲ.  ಓದು ಬರಿ ಎಂದು ಒಂದೇ ಸಮನೆ ಹೇಳುತ್ತಾ ಇರುವುದು ಅಥವಾ ನಮ್ಮನಮ್ಮ ಕೆಲಸದಿಂದ ಬಿಡುವು ಸಿಕ್ಕಾಗ ಅವರನ್ನು ಎಳೆತಂದು ಕೂರಿಸಿ ಓದಿಸಲು ಪ್ರಯತ್ನಿಸುವುದು, ಮಕ್ಕಳ ಆ ಕ್ಷಣದ ಮೂಡಿಗೆ ಸರಿಹೊಂದದಿದ್ದಲ್ಲಿ, ಕಲಿಕೆ ಸಮರ್ಪಕವಾಗುವುದಿಲ್ಲ. ಹಾಗಾಗಿ ಅರ್ಥಮಾಡಿಕೊಳ್ಳುವಷ್ಟು ದೊಡ್ಡ ವಯಸ್ಸಿನ ಮಕ್ಕಳಾದರೆ, ಮಕ್ಕಳ ಯೋಗಾಭ್ಯಾಸ, ಉಪಹಾರ, ಅಭ್ಯಾಸದ ಸಮಯ, ಬರವಣಿಗೆ, ಆಟದ ಸಮಯ, ಹವ್ಯಾಸಗಳ ಸಮಯ , ಟೀವಿ ಇತ್ಯಾದಿ ಮನೋರಂಜನೆಯ ಸಮಯ ಎಂಬಿತ್ಯಾದಿ ಶಾಲೆಯ ಮಾದರಿಯ ಟೈಮ್ ಟೇಬಲ್ ಮಾಡಿಕೊಟ್ಟು, ಅದಕ್ಕೆ ಪೂರಕವಾಗಿ ಮನೆಯ ಪ್ರತಿಯೊಬ್ಬರೂ ಶಿಸ್ತಿನಿಂದ ಮಕ್ಕಳ ಚಟುವಟಿಕೆಗಳಿಗೆ ಕಟ್ಟುನಿಟ್ಟಾಗಿ ಬೆಂಬಲಿಸಿದರೆ, ಮಕ್ಕಳು ನಿಯಮಗಳಿಗೆ ಒಂದೆರಡು ದಿನ ರಗಳೆ ಮಾಡಿದರೂ ಕ್ರಮೇಣ ಒಗ್ಗಿಕೊಳ್ಳುವುದರಿಂದ, ಎಷ್ಟೋ ಹಠಮಾರಿತನ ಕಮ್ಮಿ ಆಗಿ, ಅಮ್ಮನಾದವಳಿಗೆ ಅದೆಷ್ಟೋ ಹೆಚ್ಚಿನ ಕಿರಿಕಿರಿ ಕಡಿತಗೊಳ್ಳುತ್ತದೆ.

ಅಮ್ಮ ಎಂದರೆ ಮನೆಗೆಲಸ; ಮಕ್ಕಳೆಂದರೆ ಟೀವಿ ಮೋಜು ಅಲ್ಲ!

ಹಿಂದಿನ ಕಾಲದಲ್ಲಿ ಮನೆಗೆಲಸ ಮಕ್ಕಳ ಪಾಲನೆ ಮಹಿಳೆಯದ್ದೇ ಜವಾಬ್ಧಾರಿ ಎಂದೂ, ಮನೆಯ ಇತರ ಸದಸ್ಯರು ಯಾವ ಸಹಾಯಕ್ಕೂ ತಲೆಹಾಕದೆ, ಹೊರಗಿನ ಕೆಲಸಗಳನ್ನಷ್ಟೇ ನೋಡಿಕೊಳ್ಳುವ ಪ್ರತೀತಿ ಇತ್ತು. ಆದರೆ ಈಗ ಕಾಲ ಬದಲಾಗಿದೆ ಗಂಡು ಹೆಣ್ಣು ಸಮಾನವಾಗಿ ಯಾವ ಕೆಲಸವನ್ನಾದರೂ ಮಾಡಬಲ್ಲರು. ಅಂತೆಯೇ ಮಕ್ಕಳೆಂದರೆ ಅವರಿಗೆ ಟೀವಿ ನೋಡಲು ಕೊಡುವುದು ಊಟತಿಂಡಿ ಎಲ್ಲ ಅವರು ಕೂತಲ್ಲಿಯೇ ಸರಬರಾಜು ಮಾಡುವುದು ಇತ್ಯಾದಿ ಅನೇಕ ಮನೆಯ ಸಾಮಾನ್ಯ ಸಂಗತಿಯಾಗಿದೆ. ಆದರೆ ನೆನಪಿಡಿ ಅಮ್ಮಂದಿರೆ, ಮಕ್ಕಳೆಂದರೆ ಅವರು ಕೇವಲ ವಯಸ್ಸಿನಲ್ಲಿ ಸಣ್ಣವರಾದ ಮನೆಯ ಸದಸ್ಯರು! ಮನೆಯ ಇತರ ಸದಸ್ಯರೊಂದಿಗೆ ಚರ್ಚಿಸಿ ಕೆಲಸಗಳನ್ನು ಹಂಚಿಕೊಂಡು ಎಲ್ಲರೂ ಮಾಡಲಾರಂಭಿಸಿದರೆ, ಮಕ್ಕಳು ಅದನ್ನೇ ಅನುಕರಿಸಿ ಮಗ/ಮಗಳು ಎಂಬ ಬೇಧಭಾವವಿಲ್ಲದೆ, ನಮ್ಮೊಡನೆ ದಿನನಿತ್ಯದ ಕಾರ್ಯಗಳಲ್ಲಿ ತಾವಾಗಿಯೇ ತೊಡಗುತ್ತಾರೆ. ಹೆಚ್ಚಿನ ಬಿಡುವಿನ ಸಮಯವಿದ್ದಾಗ ನಾವು ಮಕ್ಕಳ ಬಳಿ ಕುಳಿತು ಒಂದಷ್ಟು ಅವರ ಆಸಕ್ತಿಯ ವಿಷಯಗಳಿಗೆ ಕೈಜೋಡಿಸುವುದು ಸರಿ; ಆದರೆ, ದಿನವಿಡೀ ಕೆಲಸ ಮಾಡಿಕೊಳ್ಳುವ ಪ್ರಸಂಗ ಇದ್ದಾಗ, ಮಕ್ಕಳನ್ನೇ ನಮ್ಮ ಮನೆಗೆಲಸಗಳ ನಡುವೆ ಕರೆದುಕೊಂಡು ವಿಶ್ವಾಸದಿಂದ ಮಾತನಾಡಿಸುತ್ತಾ, ಅವರ ಕಥೆಗಳನ್ನು ಕೇಳುತ್ತ, ಒಂದೊಂದು ಸಣ್ಣ ಪುಟ್ಟ ಕೆಲಸಗಳನ್ನು ನಮ್ಮೊಡನೆ ಮಾಡಲು ನೀಡಿದರೆ, ಮಕ್ಕಳು ನಮ್ಮೊಡನೆ ಇರಲು ಇಷ್ಟಪಡುವ ಸಮಯದಲ್ಲೇ ಅವರು ಕೆಲಸಗಳನ್ನು ಕಲಿಯುವಂತಾಗುತ್ತದೆ. ಮಕ್ಕಳು ಅವರ ವಯಸ್ಸಿಗೆ ಅನುಗುಣವಾಗಿ ತಿಂಡಿಗೆ ತಟ್ಟೆ, ಲೋಟ ಇಡುವುದು, ತರಕಾರಿ ಹೆಚ್ಚುವುದು, ಕಾಳುಬಿಡಿಸುವುದು, ಬಟ್ಟೆ ಮಡಚುವುದು, ಕಿಟಕಿ ಒರೆಸುವುದು, ಚಪ್ಪಲಿ ಜೋಡಣೆ, ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಕೇಳಿದಾಗ ಮಾಡಿದರೆ, ಎಲ್ಲರೆದುರು ಭರಪೂರ ಪ್ರಶಂಸೆ ನೀಡಿದರೆ, ಮಕ್ಕಳಲ್ಲಿ ಸ್ವಂತಿಕೆಯ ಕುರಿತಾಗಿ ಹೆಮ್ಮೆ ಉಂಟಾಗಿ ಅಮ್ಮಂದಿರಿಗೆ ನೆರವಾಗುವುದನ್ನು ರೂಡಿ ಮಾಡಿಕೊಳ್ಳುತ್ತಾರೆ. ಅಡುಗೆ ಮಾಡುತ್ತಲೇ ಮಕ್ಕಳೊಂದಿಗೆ ಅವರ ಪಾಠದ ಪದ್ಯಗಳ ಗುನುಗುವಿಕೆ, ಧಾನ್ಯಗಳಲ್ಲಿ ಗಣಿತದ ಲೆಕ್ಕಾಚಾರದ ಆಟ , ಪಾಠದ ಕುರಿತಾದ ರಸಪ್ರಶ್ನೆಗಳು, ಪದಬಂಡಿ ಆಟ, ಸ್ಪೆಲ್ಲಿಂಗ್ ಕಲಿಕೆ ಹೀಗೆ ಕೆಲಸದ ಜೊತೆಗೆ, ಆಟದ ರೂಪದಲ್ಲಿ ಮಕ್ಕಳ ಪುನರಾವರ್ತನೆಯನ್ನು ಮಾಡಿಸಬಹುದು. ಸ್ವಲ್ಪ ದೊಡ್ಡ ಮಕ್ಕಳಿದ್ದರೆ, ಅವರ ಪಠ್ಯದ ಚಟುವಟಿಕೆಗಳು ಎಲ್ಲ ತಾಯಂದಿರಿಗೂ ಅರ್ಥವಾಗದ ವಿಷಯವಾಗಿರಬಹುದು. ಆದರೂ ಅವರನ್ನು ಅವರ ಪಾಡಿಗೆ ಬಿಡದೆ, ಪಠ್ಯೇತರ ವಿಷಯವಾದರೂ ಸರಿ ಅಲ್ಪಸ್ವಲ್ಪ ಮಾತನಾಡುತ್ತ ಬಂದರೆ, ಮಕ್ಕಳಿಗೆ ಸ್ನೇಹಿತರಷ್ಟು ವಿಶ್ವಾಸ ಪಾಲಕರಿಂದ ಸಿಗುತ್ತಿದೆ ಎಂಬ ಭದ್ರತಾ ಭಾವನೆ ಸಿಗುತ್ತದೆ. ಅಮ್ಮನಾದವಳಿಗೆ, ಮಕ್ಕಳೊಡನೆ ಮಾತುಕಥೆಕಿಂತ ಹೆಚ್ಚಿನ ಒಲವು ಮತ್ತೇನಿದೆ. ಅವರು ಕಲಿಯುತ್ತಿರುವ ಪಾಠಗಳ ಪ್ರಯೋಜನ, ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಬಹುದೆಂಬ ಕುರಿತಾಗಿ ಚರ್ಚಿಸದರೆ,  ಹೊಸವಿಷಯದ ಕಲಿಕೆ ದೊಡ್ಡವರಿಗೂ ಸಿಕ್ಕಂತಾಗುತ್ತದೆ. ಹಾಗೆಯೇ ಮಕ್ಕಳು ದೊಡ್ಡವರಿರಲಿ ಸಣ್ಣವರಿರಲಿ, ನಾವೆಲ್ಲರೂ ಎಲ್ಲಾ  ವಿಷಯಕ್ಕೆ ಭಾಗಿಗಳು ಎಂದು ತಿಳಿಸಿ, ಮಕ್ಕಳ ಸ್ನೇಹಿತರನ್ನು ಪರಿಚಯ ಮಾಡಿಕೊಂಡು, ಫೋನ್ ಅಥವಾ ವಿಡಿಯೋ ಕಾಲ್ ಗಳ ಮೂಲಕ ಮಾತನಾಡಿಸುತ್ತಾ ಇರುವುದು ಮಕ್ಕಳ ಜೊತೆಜೊತೆಗೆ ನಮಗೂ ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಮಕ್ಕಳ ಸ್ಕ್ರೀನ್ ಟೈಮಿನಲ್ಲಿ ಅವರ ಜೊತೆ ಸ್ವಲ್ಪ ಹೊತ್ತು ನಾವೂ ಕುಳಿತು ಕಾರ್ಯಕ್ರಮಗಳನ್ನು  ನೋಡಿ ನಕ್ಕು ನಲಿದು. ಆ ಬಗ್ಗೆ ಚರ್ಚಿಸಿದರೆ, ಕೆಲವು ಕಾರ್ಯಕ್ರಮಗಳಿಂದಾಗಿ ಮಕ್ಕಳಿಗೆ ಸಿಗುತ್ತಿರುವ ತಪ್ಪು ಸರಿ ಕಲ್ಪನೆಗಳ ಅರಿವು ನಮಗೆ ಸಿಗುತ್ತದೆ. ಮಕ್ಕಳ ಗಮನ ಎಲ್ಲಿ ಅಡ್ಡಹಾದಿ ಹಿಡಿಯುತ್ತಿದೆ ಎಂಬುದು ಮುಂಚಿತವಾಗಿಯೇ ಮನಗಂಡರೆ ಸಾಕು ಪರಿಹಾರವೇನೂ ದೊಡ್ಡ ವಿಷಯವಲ್ಲ. ಗಾರ್ಡನಿಂಗ್, ಕರಕುಶಲತೆ ಇತ್ಯಾದಿ ಹವ್ಯಾಸವೇನಾದರೂ ಇಟ್ಟುಕೊಂಡ ಅಮ್ಮಂದಿರು, ತಮ್ಮ ಮಕ್ಕಳಿಗೆ ತಮ್ಮ ಹವ್ಯಾಸದ ಸಮಯವನ್ನು ಮುಂಚಿತವಾಗಿಯೇ ತಿಳಿಸಿ, ಮಕ್ಕಳು ಇಷ್ಟಪಟ್ಟರೆ ಅವರೊಡನೆ ಮಾಡಿ ಸಂಭ್ರಮಿಸಬಹುದು. 


ಶುಕ್ರವಾರ, ಏಪ್ರಿಲ್ 23, 2021

ವಿಶ್ವ ಭೂಮಿ ದಿನ

"ಯೇ, ಮಣ್ಣಲ್ಲಿ ಆಡಬೇಡಿ ಛೀ ಕೊಳಕು.." ಅಂತೇನಾದರೂ ನಮ್ಮ ಅಪ್ಪ ಅಮ್ಮ ಅವಾಗ ಹೇಳಿಬಿಟ್ಟಿದ್ದರೆ, ಮಣ್ಣು ಮಳೆಯ ಒಡನಾಟ ಇಲ್ಲದೇ ಜೀವ ಅದೆಷ್ಟು ಚೈತನ್ಯ ಹೀನಾವಾಗುತ್ತಿತ್ತೋ, ಜೀವನದ ಅದೆಷ್ಟು ಸಂತೋಷವನ್ನು ನಾವು ಕಳೆದುಕೊಂಡು ಬಿಡುತ್ತಿದ್ದೆವೋ ಏನೋ..!! 



ಮಲೆನಾಡಿನ ಪರಿಸರದಲ್ಲಿ ನಮ್ಮ ಬಾಲ್ಯವಾದ್ದರಿಂದ, ಮಣ್ಣು, ನೀರು, ತೋಟ - ಗದ್ದೆ,  ಮಳೆ ಝರಿ, ಕಾಡು ಮೇಡು, ಹಕ್ಕಿ-ಜೀರುಂಡೆ ಎಲ್ಲವೂ ಉಸಿರಾಡುವ ಗಾಳಿಯಷ್ಟೇ ನಮಗೆ ಸಹಜವಾಗಿ ಹೋಗಿತ್ತು. ಅಂಗಾಲು ಮಣ್ಣಿಗೆ ಆಂಟಿಯೇ ಬೆಳೆದಿದ್ದು ನಾವು ಎಂದರೂ ತಪ್ಪಿಲ್ಲ. ಆಗಿನ ಕಾಲಕ್ಕೆ ಅದೆಷ್ಟು ಮಹಾ ಆಟಿಕೆಗಳಿರುತ್ತಿದ್ದವು ನಮಗೆ? ಎಲ್ಲಿ ನೋಡಿದರಲ್ಲಿ ಮಣ್ಣೇ ಮಣ್ಣು ಕಾಣಿಸುತ್ತಿತ್ತು. ಪುಟ್ಟಮಕ್ಕಳ ವಯಸ್ಸಿನಲ್ಲಿ, ಒಂದಷ್ಟು ಮಣ್ಣು ನೀರು ಇದ್ದ ಜಾಗಕ್ಕೆ ನಾವು ಓಡಿದರೆ, ಎಲ್ಲಾ ಆಟ ಮುಗಿದ ಮೇಲೆ, ಕೆಸರು ಹೊಂಡದಿಂದ ನಮ್ಮನ್ನು ಎತ್ತಿ ತಂದು ಸ್ನಾನ ಹೊಡೆಸುವುದು ದೊಡ್ಡವರಿಗೂ ಅಷ್ಟೇ ಸಹಜವಾದ ಕೆಲಸವಾಗಿತ್ತು. ಮಣ್ಣು ನುಣುಪು-ಒರಟು ಎಂಬಿತ್ಯಾದಿ ಸೂಕ್ಷ್ಮಗಳು ಎಂದೂ ನಮ್ಮನ್ನು ಭಾದಿಸಲಿಲ್ಲ. ಗಂಟೆಗಟ್ಟಲೆ ಮಣ್ಣನ್ನು ಕಲಸಿ, ಕೈಯಿಂದ ಕೈಗೆ ಸುರಿಯುತ್ತ ಆಡುತ್ತಿದ್ದೆವು. ಅಜ್ಜನ ಮನೆಗೆ ಹೋದರೆ, ಸೂರ್ಯ ಹುಟ್ಟುವುದಕ್ಕೂ ಮುಂಚೆ, ಅಂಗಳ ಬಳಿಯಲು ಸಗಣಿ ಮತ್ತು ಕೆಮ್ಮಣ್ಣು ಸೇರಿಸಿ, ನೀರಿನ ಜೊತೆ ಹದವಾಗಿ ಮಿಶ್ರಣ ಮಾಡಿ ಕೈಯಲ್ಲಿ ಹರಡಿಕೊಂಡು ಬಳಿಯುವಲ್ಲಿಂದ ಹಿಡಿದು, ಹೆಚ್ಚು ಕಮ್ಮಿ ಇಡೀ ದಿನ ನಾವು ಮೊಮ್ಮಕ್ಕಳೆಲ್ಲ ಇರುತ್ತಿದ್ದುದ್ದೇ ಮಣ್ಣ-ನೀರಿನ ಜೊತೆ! ಅಜ್ಜನ ಮನೆಯ ಹಿಂದಿನ ದಿಬ್ಬದಲ್ಲಿ, ಒಳ್ಳೆ ಸ್ಥಳದಲ್ಲಿ, ನೆಲವನ್ನು  ಕೆತ್ತಿ, ತೆಂಗಿನ ಕಾಯಿ ಕರಟ ದಿಂದ ಮಣ್ಣು ತೆಗೆದು ಗುಂಡಿ ಮಾಡಿ, ಕೋಲುಗಳನ್ನೇ ಕಂಬದಂತೆ ಊರಿ, ಮನೆ ಮಾಡಿ ಸೋಗೆ, ಎಲೆಗಳಿಂದ ರೂಫ್ ಮಾಡಿಕೊಂಡು ಆಟದ ಮನೆಯೊಂದನ್ನು ಕಟ್ಟಿಕೊಂಡರೆ, ಮತ್ತೆ ಬೇಸಿಗೆ ರಜೆ ಮುಗಿಯುವ ವರೆಗೆ ಅದೇ ನಮ್ಮ ಔಟ್ ಹೌಸ್. ಅಲ್ಲೆಲ್ಲೋ ಸುತ್ತಿ ಗದ್ದೆ ಕೆರೆ ಜಾಗವೆಲ್ಲ ಅಲೆದು, ವಿವಿಧ ಬಗೆಯ ಮಣ್ಣನ್ನು ಒಟ್ಟು ಮಾಡಿ ತರುತ್ತಿದ್ದೆವು. ಒಂದೊಂದು ಬಗೆಯ ಮಣ್ಣು ಒಂದೊಂದ್ ರೀತಿಯ ಆಟಕ್ಕೆ..ಜೇಡಿ ಮಣ್ಣು- ಬಾವಿ ಮಣ್ಣನ್ನು, ನೀರಿನ ಜೊತೆ ಕಲಸಿ, ಹೊಸೆದು, ಸಣ್ಣ ದೊಡ್ಡ ಉಂಡೆಗಳನ್ನಾಗಿ ಮಾಡಿ, ಅದರಿಂದ ಮಣ್ಣಿನ ಪಾತ್ರೆಗಳನ್ನು ಮಾಡಿಕೊಳ್ಳುವುದು ಮೆಚ್ಚಿನ ಆಟವಾಗಿತ್ತು. ಗಣಪತಿ ಈಶ್ವರ ಲಿಂಗ ಇತ್ಯಾದಿ ದೇವರುಗಳು ಕೂಡ ಈ ಮಣ್ಣಿನಿಂದಲೇ, ಹುಟ್ಟಿ ಬರುತ್ತಿದ್ದರು. ಆಟ ಅಲ್ಲಿಗೆ  ಮುಗಿಯದೇ, ಆ ದೇವರುಗಳಿಗೆ ದೇವಸ್ಥಾನ ಕಟ್ಟುವ ಜವಾಬ್ಧಾರಿಯೂ ನಮ್ಮ ತಲೆ ಮೇಲೆ ಇರುತ್ತಿತ್ತು. ಹೊಸ ದಿನ ಹೊಸ ಮಣ್ಣು..ಮುಂದುವರೆಸುವ ಕೆಲಸ.. ಒಟ್ಟಾರೆ ಮಣ್ಣು ಬಿಡಲಾಗದ ಜೀವಾಳವಾಗಿತ್ತು. ದೇವಸ್ಥಾನವನ್ನು ಮತ್ತಷ್ಟು ಚೆಂದಗಾಣಿಸಲು, ಕೆರೆಯ ರೆವೆ ಮಣ್ಣನ್ನು ಬೇರ್ಪಡಿಸಿ ಒಣಗಿಸಿ ಹುಡಿ ಮಾಡಿಕೊಂಡು ನೀರು ಹಾಕಿ ಕಲೆಸಿ, ಗುಡಿಯ ಗೋಡೆಗಳಿಗೆ ಮೆತ್ತಿ ನುಣುಪಾದ ಫಿನಿಶಿಂಗ್ ತರುವಷ್ಟು ಕೌಶಲ್ಯ ನಮ್ಮ ಆಟಗಳಿಂದಲೇ ಕಲಿತುಬಿಡುತ್ತಿದ್ದೆವು. ಎಲ್ಲಿಯಾದರೂ ಮರಳು ಸಿಕ್ಕರೆ ಗುಂಡಿ ತೋಡಿ ಗುಬ್ಬಿ ಗೂಡು, ಏಡಿ ಕುಣಿ, ಮರಳಿನರಮನೆ ಇತ್ಯಾದಿ ಕಟ್ಟುವಆಟವಾಡುತ್ತಿದೆವು. ಕರಟ, ಲೋಟಗಳಿಗೆ ಮರಳು ತುಂಬಿ ಬೋರಲು ಹಾಕಿ ಮರಳ ಮೌಲ್ಡ್ ಮಾಡಿದರೆ ಅದೇ ನಮ್ಮ ಅಡಿಗೆ ಆಟದ ಕೇಕ್ ಆಗಿರುತ್ತಿತ್ತು. 


ಚಿಕ್ಕಂದಿನಿಂದ ನಾವು ಕಂಡ ನಮ್ಮ ಹಬ್ಬ ಹರಿದಿನಗಳು ಕೂಡ ಅಷ್ಟೇ ಅಲ್ಲವೇ? ಅಂತಿಮವಾಗಿ ಮಣ್ಣೇ ಮನುಷ್ಯನ ಜೀವನಾಧಾರ ವಾದ್ದರಿಂದ, ಭೂಮಿಗೇ ಶರಣು ಎನ್ನುವ ಆಚರಣೆಗಳನ್ನು ಪ್ರತಿ ಹಬ್ಬದಲ್ಲಿ ಕಾಣಸಿಗುತ್ತಿತ್ತು. ಭೂಮಿ ಹುಣ್ಣಿಮೆ ಹಬ್ಬದಲ್ಲಿ, ಭೂಮಿ ನಮ್ಮ ತಾಯಿ ಎಂದು ಚಿಕ್ಕಂದಿನಿಂದ  ಕಲಿಸಿದ್ದರು. ದೀಪಾವಳಿ ಹಬ್ಬದಲ್ಲಿ ಭೂಮಿ ತಾಯಿಯನ್ನು ಸ್ಪರ್ಶಿಸಿ, ಧಾನ್ಯರಾಶಿಯ ಮೇಲೆ ಕಳಶ ಸ್ಥಾಪನೆ ಮಾಡಿ  ಪೂಜಿಸುವುದರ ಜೊತೆಗೆ, ಆ ದಿನ ತೋಟ ಗದ್ದೆ ಇನ್ನಿತರ ನಮ್ಮ ಪಾಲಿನ ಇಳುವರಿಯ ಭೂಮಿಗೆ, ಎಡೆ ಇಟ್ಟು ಪೂಜಿಸುವ ಪ್ರತೀತಿನಡೆಸುವುದರ ಮೂಲಕ, ನಮ್ಮ ಬದುಕಿಗೆ ಮಣ್ಣಿನ ಕೊಡುಗೆಯ ನೆನಪಿಸುತ್ತಿದ್ದರು. ಗಣಪತಿ ಹಬ್ಬದಲ್ಲಿ ಮೂರ್ತಿ ಮಾಡುವ ಮುನ್ನ, ಭೂಮ್ತಾಯಿಗೆ ನಮಸ್ಕರಿಸಿ, ಮಣ್ಣಿಗೆ ನಮಸ್ಕರಿಸಿ ಮೂರ್ತಿ ತಯಾರುಮಾಡುವುದನ್ನು ಕಂಡೇ ಬೆಳೆದೆವು. ನಾಗರ ಪಂಚಮಿ ಸಮಯದಲ್ಲಿ ಹುತ್ತಕ್ಕೆಪೂಜೆ ಮಾಡುವುದನ್ನು ನೋಡಿದವರು. ಅದೆಷ್ಟೇ ಏಕೆ? ನಾಗರೀಕತೆ ಕಲಿತಂತೆ ಮನುಷ್ಯನ ಕಲಾ ವೈವಿಧ್ಯತೆಯೂ ಕಾಲದಿಂದ ಕಾಲಕ್ಕೆ ಬೆಳೆಯುತ್ತ ಬಂದಿದೆ. ಮಣ್ಣಿನ ಮನೆಗಳಲ್ಲಿಯೇ ನಮಗೆ ಜೋಲಿ ಕಟ್ಟಿದ್ದು. ಹಸೆ ಯಂತಹ ಸಾಂಪ್ರದಾಯಿಕ ಚಿತ್ತಾರವನ್ನು ನಮ್ಮ ಹಿರಿಯರ ಹಳೆ ಮನೆಗಳಲ್ಲಿ ನಾವು ಕಂಡಿದ್ದೆವು. ಪ್ರಕೃತಿ ನಮ್ಮ ಭಾಗವಾಗಿಯೂ, ನಾವು ಅದರ ಭಾಗವಾಗಿಯೂ ಬೆಳೆಯಲು ಅನುಕೂಲಕರವಾದ ಹಿನ್ನೆಲೆ ಸಿಕ್ಕಿರುವುದು ನಮ್ಮ ಪುಣ್ಯ. 


ನಾವು ಬಾಲ್ಯದಿಂದ ಈಗಿನವರೆಗೆ ಮಣ್ಣಿನ ಸಾಂಗತ್ಯದಲ್ಲಿರಲು ಅಪ್ಪಾಜಿಯ ಪ್ರಕೃತಿ ಪ್ರೇಮ ಕೂಡ ಅಷ್ಟೇ ಕಾರಣ. ಚಿಕ್ಕಂದಿನಿಂದ, ಊರಲ್ಲಿರುವ ತೋಟಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ವಿಷಯಗಳನ್ನು ಸಣ್ಣ ಪುಟ್ಟ ವಿಸ್ಮಯ ಕೌತುಕಗಳನ್ನು ತೋರಿಸಿ ವಿವರಿಸುತ್ತಿದ್ದುದ್ದು ನಮಗೆ ಮತ್ತಷ್ಟು ಪ್ರಕೃತಿಯೊಡನೆ ಇರಲು ಆಸಕ್ತಿ ತರುತ್ತಿತ್ತು.  ಶಾಲೆಯಿಂದ ಬಂದವರು, ಶನಿವಾರ ಭಾನುವಾರಗಳಲ್ಲಿ, ಮನೆಯಂಗಳದ ತೆಂಗಿನ ಗುದ್ದಿಗೆ ಹೆಡಿಗೆ ಮಣ್ಣು ಹೊತ್ತು ತಂದು ಹಾಕುವುದು. ಗಿಡದ ಬುಡವನ್ನು ಗುದ್ದಲಿಯಿಂದ ಆಗಾಗ್ಗೆ ಬಿಡಿಸಿ ಗಿಡಗಳಿಗೆ ಉಸಿರಾಡಲು ಸಹಾಯ ಮಾಡುವುದು, ಕಳೆ ಕೀಳುವುದು, ಗಿಡ ನೆಡುವುದು ಇತ್ಯಾದಿ ಕೈತೋಟದ ಕೆಲಸ ಅವನೂ ಮಾಡುತ್ತಾ ನಮ್ಮಿಂದಲೂ ಮಾಡಿಸುತ್ತ ಬರುತ್ತಿದ್ದರಿಂದ, ಮಣ್ಣಿನ ಒಡನಾಟ ನಮಗೆ ನಿರಂತರವಾಗಿ ಸಿಗುತ್ತಲೇ ಇತ್ತು.  


ಮಣ್ಣು, ಮರಳು, ಕಲ್ಲು, ಇವೆಲ್ಲ ಪ್ರಕೃತಿ ಸಹಜದತ್ತವಾಗಿಯೇ ಮಕ್ಕಳಿಗೆ ಕೊಟ್ಟ ಉಡುಗೊರೆ...ಆದರೆ ಇವತ್ತಿನ ಸಮಾಜದಲ್ಲಿ ಪೋಷಕರು, ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನು ಕೊಡಬೇಕು, ಆರೋಗ್ಯಕರವಾದ ಜೀವನವನ್ನು ಕೊಡಬೇಕೆಂಬ ಹಂಬಲದಿಂದ, ತಮ್ಮ ಮಕ್ಕಳು ಮಣ್ಣಿನಲ್ಲಿ ಆಡುವುದು, ರೋಗಕ್ಕೆ ದಾರಿ, ಅಶಿಸ್ತಿನ ರೂಪ ಎಂಬ ತಪ್ಪು ಕಲ್ಪನೆ ತಂದುಕೊಂಡಿದ್ದಾರೆ.. ಮಣ್ಣಿನಿಂದಲೇ ನಾನಾ ರೋಗಗಳು ಬರುವುದು ಎಂಬುದು ಖಂಡಿತ ನಿಜವಲ್ಲ...ರೋಗಗ್ರಸ್ತ ಜನರ ಅಥವಾ ಪ್ರಾಣಿಯ ರೋಗಾಣು ಮಣ್ಣಿಗೆ ಪ್ರಸಾರಗೊಂಡಿದ್ದಲಿ ಮಾತ್ರ, ಆ ತರಹದ ಜಾಗಗಳನ್ನು  ಜಾಗರೂಕತೆಯಿಂದ ತಪ್ಪಿಸಿ, ಮಗುವಿಗೆ ಆಡಲು ಬಿಟ್ಟರೆ, ಯಾವದೇ ತರಹದ ತೊಂದರೆ ಇರುವುದಿಲ್ಲ. ನನ್ನ ಮಗಳಿಗೆ ಚಿಕ್ಕಂದಿನಿಂದಲೂ ಮಣ್ಣು ಎಂಬುದು ಮುಗಿಯದ ಸೆಳೆತ. ಕಂಡಕಂಡಲ್ಲಿ ಮಣ್ಣು ಕೆದಕುವುದು, ಕಲ್ಲು ಆರಿಸುವುದು,  ಮರಳಿನಲ್ಲಿ ಗುಂಡಿ ತೊಡುವುದು ಇವೆಲ್ಲಾ ಆಟಗಳು ಶುರುವಾಗಿ ಹೋಗುತ್ತದೆ. ಬೆಂಗಳೂರಿನಲ್ಲಿ, "ಅಯ್ಯೋ ಸೌಮ್ಯಾ, ಮಗಳನ್ನಾ ಎತ್ಕೊಳ್ರಿ, ಮಣ್ಣಾಡ್ತಿದಾಳೆ... ಏನೇ ಹುಡ್ಗೀ, ಅಷ್ಟೂ ಬಟ್ಟೆನೆಲ್ಲಾ  ಗಲೀಜು ಮಾಡ್ಕೊಂಡಿದೀಯ...ಏಯ್ ಯಾರದು ಮಣ್ಣಲ್ಲಿ ಆಡೋರೂ...?? ಬಾಯಿಗೆ ಹಾಕ್ತಾರೆ ನೋಡ್ಕೊಳ್ರಿ...ಥೂ ಕರ್ಕೊಂಡ್ ಬರ್ರೀ  ಈ ಕಡೆ, ಮೈ ಕೈ ಎಲ್ಲಾ ಕೆಸರು ಮಾಡ್ಕೊಂಡಿದಾಳೆ. ತಂಡಿ  ಜ್ವರ ಆಗೋದು ಇದಕ್ಕೇನೆ..." ಇತ್ಯಾದಿ ಎಲ್ಲ ಬಗೆಯ ಎಚ್ಚರಿಕೆಯ ಮಾತುಗಳು ನನಗೆ ಕೇಳಲುಸಿಗುತ್ತಿತ್ತು. ಮಣ್ಣನ್ನು ಆಡುವಾಗಿನ ಅವಳ ಸ್ವತಂತ್ರ ಭಾವನೆ, ಆತ್ಮವಿಶ್ವಾಸ, ಖುಷಿ ನನ್ನ ಪಾಲಿಗೆ ಅಪರಿಮಿತ. ವೈಜ್ಞಾನಿಕವಾಗಿ ಹೇಳಬೇಕೆಂದರೆ,ಮಕ್ಕಳು ಮಣ್ಣನ್ನು ಮುಟ್ಟಿದಾಗ ಅದರಲ್ಲಿರುವ ಒಂದು ತರಹದ ಬಾಕ್ಟೀರಿಯಾಗಳು, ಮೆದುಳಿನ ನರಕೊಶಗಳನ್ನು ಸಕ್ರೀಯಗೊಳಿಸುತ್ತದೆ. ಸಿರೋಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಿಂದಾಗಿ,ಮಕ್ಕಳ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅದೆಷ್ಟೇ ಹೊಸ ಆಟಿಕೆಗಳು ಬಂದರೂ, ಒಂದೆರಡು ದಿನ ಆದಿ ಹಳೆಯದಾದ ಮೇಲೆ ಮತ್ತೆ ಮಗಳು ಓಡುವುದು ಮಣ್ಣು ಮತ್ತು ಕಲ್ಲಿಗೇ. ಮಗಳ ಮಣ್ಣಿನ ಆಟದ ಸಂಭ್ರಮ ಎಷ್ಟಿತ್ತೆಂದರೆ, ಮಗಳು ತನ್ನ ಇತರ ಸ್ನೇಹಿತರನ್ನು ಸೇರಿಸಿಕೊಂಡು ಅಸಾಧ್ಯ ಮಣ್ಣನ್ನು ಆಡುತ್ತಾಳೆ, ಸ್ಥಳವನ್ನೆಲ್ಲ ಗಲೀಜು ಮಾಡುತ್ತಾಳೆ ಎಂಬ ಇತರ ಪೇರೆಂಟ್ಸ್ ಕಂಪ್ಲೆಂಟ್ಸ್ ಗೆ ಪರಿಹಾರವಾಗಿ, ನಾನು ಒಂದು ಬಕೆಟ್ ಶುದ್ಧ ಮಣ್ಣನ್ನು ಹೊತ್ತು ತಂದು ನಮ್ಮ ಮನೆಯ ಬಾಲ್ಕನಿಯಲ್ಲಿ ಶೇಟಿನ ಮೇಲೆ ಹಾಕಿ, ನೀರು ಕೊಟ್ಟು ಗಂಟೆಗಟ್ಟಲೆ ಮಗಳಿಗೆ ಆಡಲುಬಿಟ್ಟು, ನಂತರ ಸ್ವಚ್ಛ ಮಾಡಿಕೊಂಡ ಪ್ರಸಂಗ ಕೂಡ ಇತ್ತು. ಕಡಲು ಮಗಳಿಗೂ ಸೇರಿದಂತೆ ತೀರದ ಮೋಹದ ಸ್ಥಳ. ನೀರು ಮತ್ತು ಮರಳು ಸಿಕ್ಕಿದರೆ ತಕ್ಷಣಕ್ಕೆ ಮಗಳನ್ನು ಎತ್ತಿ ತರುವುದು ನಮ್ಮ ಪಾಲಿಗೆ ಒಂದು ದುಸ್ಸಾಹಸವೇ ಸರಿ. ಬೀಚ್ ಹೋಗಬೇಕೆಂದರೆ, ಒಂದು ಘಂಟೆ ಹೆಚ್ಚಿನ ಬ್ಯಾಕಪ್ ಸಮಯ ಮಗಳನ್ನು ನೀರು ಮತ್ತು ಮರಳಿನಿಂದ ಎಬ್ಬಿಸಿ ತರಲೆಂದೇ ಮೀಸಲಿಡಬೇಕಾಗುತ್ತದೆ. ರಜೆಗೆ ಊರಿಗೆ ಬಂದರೆಂತೂ, ನೀರು ಮತ್ತು ಮಣ್ಣು ಅವಳಿಗೆ ಊಟ ತಿಂಡಿಯಷ್ಟೇ ಮೂಲಭೂತ ಸಂಗ್ರಹ. ಬಾವಿ ಮಾಡುವುದು, ಕೋಟೆ ಕಟ್ಟುವುದು ಹೀಗೆ ನಮ್ಮ ಬಾಲ್ಯವನ್ನೇ ಮತ್ತೆ ಮಗಳು ಮರುಕಳಿಸುವಾಗ ಅವಳ ಜೊತೆಜೊತೆಗೆ ನಾವೂ ಮತ್ತೊಮ್ಮೆ ಮಕ್ಕಳಾಗುತ್ತೇವೆ. ಮಗಳ ಮಣ್ಣಿನ ಆಟದ ಕಲೆಯ ಬಟ್ಟೆ ತೊಳೆದು ಮುಗಿಯುವ ಕೆಲಸವಲ್ಲದಿದ್ದರೂ, ಟೀವಿ, ಗ್ಯಾಡ್ಜೆಟ್ಸ್ ನ ಎದುರು ಕೂರದ ಕೂಸಿನ ಆ ಖುಷಿ ಎದುರು ಮತ್ಯಾವುದೂ ಭಾರವೆನಿಸುವುದಿಲ್ಲ. ಪಾಠವನ್ನು ಕಲಿಸಲು ಕರೆದರೂ ಮಣ್ಣಾಟ, ಕಲ್ಲಾಟ ಬಿಟ್ಟು ಬಾರದ ಅವಳ ಹುಚ್ಚಿಗೆ, ಆಟದ ಜೊತೆ ಪಾಠದ ಕಲಿಕೆಯನ್ನು, ಹೊರಗಡೆ ಮಣ್ಣು ಕಲ್ಲುಗಳ ಜೊತೆಯಲ್ಲೇ ನಾನು ಅದೆಷ್ಟು ಬಾರಿ ಮಾಡಿ ಮುಗಿಸಿದ್ದೇನೋ.. ಇವತ್ತಿಗೂ ಮಗ್ಗಿ ಕಲಿಯಲು, ಕಲ್ಲು, ಹಣ್ಣು ಕಾಯಿ ಬೀಜಗಳೇ ನಮ್ಮ ಪರಿಕರಗಳು. ಈಗ ಪಾಟ್ ನಲ್ಲಿ ಬೀಜ ಬಿತ್ತಿ, ಸಣ್ಣ ಪುಟ್ಟ ಬೆಳೆ ಚಿಗುರೊಡೆಯುವುದ ಕಂಡು ಖುಷಿ ಪಡುವುದು , ಕೈತೋಟದಲ್ಲಿ ಗಿಡ ನೆಟ್ಟು ನೀರು ಹಾಕಿ ಹೂ ವು,ಕಾಯಿ ಬರುವುದ ಕಂಡು ಖುಷಿ ಪಡುವುದು ಇತ್ಯಾದಿ ಅವಳ ಆಟಗಳು.  ಆಟದ ಮೂಲಕ ಭೂಮಿಯ ಕುರಿತಾದ ಜೀವನ ಪಾಠಗಳು! 


ಇಂದು ವಿಶ್ವ ಭೂಮಿ ದಿನ. ಭೂಮಿಗೆ ಕೃತಜ್ಞತೆ ಸಲ್ಲಿಸಲು, ನೆನೆಸಿಕೊಳ್ಳಲೆಂದೇ ಇರುವ ದಿನ. ಭೂಮಿ ಸಂರಕ್ಷಣೆಗೆ ಏನೋ ದೊಡ್ಡ ಸಂಘ ಸಂಸ್ಥೆಗಳಿಗೆ ಸೇರಿ ಸಮಾಜ ಕಾರ್ಯದಲ್ಲಿ ಭಾಗವಹಿಸಲೇ ಬೇಕೆಂದಿಲ್ಲ. ಪ್ರತಿನಿತ್ಯ ನಮ್ಮ ಕೈಲಾದಷ್ಟು ದಿನಕ್ಕೆ ಒಂದು ಯಾವುದಾದರೂ ಮಣ್ಣಿಗೆ ಸಂಬಂಧ ಪಟ್ಟ ಕೆಲಸ, ನಾವಿರುವ ಜಾಗದಿಂದಲೇ ಪ್ರಾರಂಭವಾಗಿ, ನಮ್ಮ ನಮ್ಮ ಮನೆಗಳ ಆವರಣವನ್ನು ಸ್ವಚ್ಛ ಮತ್ತು ಹಸಿರು ಭರಿತ ವನ್ನಾಗಿಸಿದರೆ ಸಾಕು ಅದು ನಾವು ನಮ್ಮ ಈ 'ಅಮ್ಮ' ನಿಗೆ ಕೊಡುವ ಉಡುಗೊರೆ . 

 



ಶುಕ್ರವಾರ, ಏಪ್ರಿಲ್ 2, 2021

kodi beach

ಕಡಲ ತೀರದ ಮರಳ ರಾಶಿ, ಹೊಂಬಣ್ಣದ ಸೂರ್ಯಾಸ್ತ ಮತ್ತು ಸಮುದ್ರದ ಅಲೆಗಳ ಬಿಳುಪು ಕುರಿತಾಗಿ ನನಗೆ ಮೊದಲಿನಿಂದಲೂ ತೀರದ ಮೋಹ. ಓಡಾಡಿರುವ ಬೀಚ್ ಗಳ ಪೈಕಿ, ಮನಸ್ಸಿಗೆ ಆಹ್ಲಾದ ನೀಡಿ, ಅತ್ಯಂತ ಆಪ್ತವೆನಿಸಿದ ಸಮುದ್ರತೀರಗಳಲ್ಲಿ, ಕುಂದಾಪುರ ಸಮೀಪದ ಕೋಡಿ ಬೀಚ್ ಕೂಡ ಒಂದು. ಹಾದಿಬದಿಯುದ್ದಕ್ಕೂ ತೆಂಗಿನ ಮರಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಡಲ ನೀರು, ಸಮುದ್ರದ ನಿರಂತರ ಅಲೆಗಳ ಶಬ್ಧ, ನಿಯಮಿತವಾಗಿ ಕಾಪಾಡಿರುವ ಕಡಲ ಸ್ವಚ್ಚತೆ, ಎಲ್ಲವೂ ಕಣ್ಮನಗಳನ್ನು ತಣಿಸಿ, ಮನಸ್ಸಿಗೆ ಶಾಂತತೆಯನ್ನುಸಿಗುವುದರಲ್ಲಿ ಎರಡು ಮಾತಿಲ್ಲ. ಪಂಚಗಂಗಾವಳ್ಳಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುವ ದೃಶ್ಯವನ್ನು ಕಾಣಬಹುದಾದ ಈ ರಮಣೀಯ ಬೀಚ್ ಇರುವುದು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ ೬ ಕಿಮೀ ದೂರದಲ್ಲಿ(ಉಡುಪಿಯಿಂದ ೩೮ ಕಿಮೀ). ರಂಗಿನೋಕುಳಿ ಹರಡಿ, ಕಡಲ ಮಧ್ಯೆ ಮುಳುಗುವ ಸೂರ್ಯ ನನ್ನು ನೋಡುತ್ತಾ, ತೀರದ ಮರಳ ರಾಶಿಯ ಮೇಲೆ ವಾಕ್ ಮಾಡುವುದೇ ಒಂದು ಅದ್ಭುತ ಅನುಭವ. ಮಕ್ಕಳೊಡನೆ ಸಮುದ್ರದಲೆಗಳಿಗೆ ಬೆನ್ನೊಡ್ಡಿಆಟವಾಡಲು ಹೇಳಿ ಮಾಡಿಸಿದಂತಹ ಜಾಗ. ಬೋಟಿಂಗ್ ವ್ಯವಸ್ಥೆ, ಜೋಕಾಲಿ, ಸರ್ಫಿಂಗ್ ಟ್ರೇನಿಂಗ್ ಗಳೆಲ್ಲವೂ ಪ್ರಾರಂಭವಾಗಿ ಈ ಸ್ಥಳ ಇದೀಗ ಮತ್ತಷ್ಟು ಪ್ರಸಿದ್ಧಿಗೊಂಡಿದೆ.