ಗುರುವಾರ, ಡಿಸೆಂಬರ್ 27, 2018

ನೀವು ಪ್ರವಾಸಿಗರೇ?

ಮಕ್ಕಳಿಗೆ, ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈಗ ಕ್ರಿಸ್ತ್ಮಸ್ ರಜೆಯ ಸುಗ್ಗಿ.. ನೀವೀಗಾಗಲೇ ಯಾವುದಾದರೂ ಸ್ಥಳಕ್ಕೆ ಟ್ರಿಪ್ ಪ್ಲಾನ್ ಮಾಡಿರುತ್ತೀರಿ. ಓಡಾಡುವ  ಸ್ಥಳದ ಕುರಿತಾಗಿ ಒಂದಷ್ಟು ಮಾಹಿತಿ, ಓಡಾಡಲು ವಾಹನದ ವ್ಯವಸ್ಥೆ, ಅಲ್ಲಿ ಉಳಿಯಲು ಬೇಕಾದ ಹೋಟೆಲ್ಲು, ಹೋಂಸ್ಟೇ ಗಳ ವ್ಯವಸ್ಥೆ, ಟ್ರಿಪ್ನ ವೇಳೆ, ಹೊಟ್ಟೆ-ಬಟ್ಟೆಗಾಗಿ ಒಂದಷ್ಟು ಅವಶ್ಯಕತೆಯ ವಸ್ತುಗಳ ಶಾಪಿಂಗ್, ಆಟ-ಮೋಜು-ಮಸ್ತಿಗಾಗಿ ಬೇಕಾಗುವ ವಸ್ತುಗಳು, ಓಡಾಡಿದ ಸ್ಥಳದ ನೆನಪಿಗಾಗಿ ಚಿತ್ರ ಕ್ಲಿಕ್ಕಿಸಿಕೊಳ್ಳಲು ಮೊಬೈಲ್, ಕ್ಯಾಮೆರಾ ಹೀಗೆ ಪ್ರವಾಸದ ಕುರಿತಾಗಿ ಸಾಕಷ್ಟು ಯೋಜನೆ ಮತ್ತು ತಯಾರಿ ನಡೆಸುತ್ತೀರಿ ಅಲ್ಲವೇ? ಕಡೆಗೂ ಬಯಸಿದ ಸ್ಥಳಕ್ಕೆ ಪ್ರವಾಸ ಕೈಗೊಂಡು ಸಂಚಾರ ಮಾಡಿ, ಆಟವಾಡಿ, ತಿಂದು-ಕುಡಿದು,ಸಂತೋಷ ಪಡುತ್ತೀರಿ. "ಭಾರೀ ಲಾಯ್ಕ್ ಇತ್ತು ನಮ್ಮ ಟ್ರಿಪ್" ಎಂದು ಇತರರೊಡನೆ ಹೇಳಿ, ಫೋಟೋ ತೋರಿಸಿ ಬೀಗುತ್ತೀರಿ..  

ಹೀಗೆ ನಮ್ಮ ಲೆಕ್ಕದಲ್ಲಿ, 'ಪ್ರವಾಸವೊಂದು ಯಶಸ್ವಿಯಾಗಿತ್ತು' ಎಂಬುದು ನಾವು ಅರಿತ ಹೊಸ ವಿಷಯಗಳು, ಕಂಡು-ಅನುಭವಿಸಿದ ಸಂತೋಷ ಮತ್ತು ಮೋಜು, ಮತ್ತೊಂದಷ್ಟು ಫೋಟೋಗಳ ಕುರಿತಾಗಿಯಾಗಿರುತ್ತದೆ. ಆದರೆ ಸ್ನೇಹಿತರೆ, ನಮ್ಮ ಟ್ರಿಪ್ ಯಶಸ್ವಿ ಮತ್ತು ಅರ್ಥಪೂರ್ಣವಾಗಿತ್ತು ಎಂಬುದರ ಮಾನದಂಡ ನಾವು ಭೇಟಿ ನೀಡಿ ಬಂದ ಸ್ಥಳವನ್ನು ಮಲಿನಗೊಳಿಸದೇ, ಆ ಊರಿನ ಸ್ಥಳೀಯ ಸಂಸ್ಕೃತಿ, ನುಡಿ, ಆಚಾರ ವಿಚಾರಗಳಿಗೆ ಧಕ್ಕೆ ಬರದಂತೆ, ಅಲ್ಲಿನ ಪ್ರವಾಸೀ ತಾಣ ಮತ್ತು ನೈಸರ್ಗಿಕತೆಯನ್ನು ಯಥಾವತ್ತಾಗಿ ಕಾಯ್ದಿರಿಸಿ ಬರುವುದರ ಮೇಲೂ ಆಧಾರಿತವಾಗಿರುತ್ತದೆ. ಪ್ರವಾಸಿಗರಾಗಿ ನಮ್ಮಲ್ಲಿರಬೇಕಾದ ಕರ್ತವ್ಯ ಪ್ರಜ್ಞೆ ಮತ್ತು ಜವಾಬ್ಧಾರಿಯ ಕುರಿತಾಗಿ ಪುಟ್ಟದಾಗೊಂದು ವಿಮರ್ಶೆ.

ಪ್ರವಾಸ ಏಕೆ ಬೇಕು?

ಜೀವನದ ದಿನನಿತ್ಯದ ಜಂಜಾಟ, ಕೆಲಸ, ವಿದ್ಯಾಭ್ಯಾಸ, ಹೀಗೆ ಬಿಡುವಿಲ್ಲದ ಬದುಕು, ಒಂದೇ ಬಗೆಯ ದಿನಚರಿಯಿಂದ ಬೇಸತ್ತು ಮನಸ್ಸು ಒತ್ತಡಗೊಂಡಾಗ, ವಿರಾಮವೊಂದನ್ನು, ಬದಲಾವಣೆಯನ್ನು ಬಯಸುವುದು ಸಹಜ. ಇಂತಹ ಬದಲಾವಣೆಗಳಲ್ಲಿ ಪ್ರವಾಸ ಕೈಗೊಂಡು ಕುಟುಂಬ, ಸ್ನೇಹಿತರು ಮತ್ತು ಆಪ್ತರೊಡನೆ ಸಮಯ ಕಳೆಯುವುದು ಕೂಡ ಹಲವರ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಒಬ್ಬೊಬ್ಬರ ಆಸೆ ಒಂದೊಂದು ರೀತಿಯದ್ದಾಗಿರುತ್ತದೆ. ಸಂಸ್ಕೃತಿ, ಸಾಹಿತ್ಯ, ಮನೋರಂಜನೆ, ಐತಿಹಾಸಿಕ ಸ್ಥಳಗಳ ಕುರಿತಾದ ಆಕರ್ಷಣೆ, ಪ್ರಕೃತಿ ವೀಕ್ಷಣೆ, ಚಾರಣ, ವಾಹನ ಸವಾರಿ, ಸಮುದ್ರ ತೀರದ ಮೋಹ ಹೀಗೆ ಹತ್ತು ಹಲವು ಬಗೆಯಲ್ಲಿ ನಮ್ಮ ಆಸಕ್ತಿಗೆ ತಕ್ಕಂತೆ ಹೊಸ ಅನುಭವಗಳ  ಪಡೆಯಲೆಂದು ನಾವು ಚಿಕ್ಕ ಪುಟ್ಟ ಪ್ರವಾಸಗಳನ್ನು ಮಾಡುತ್ತಿರುತ್ತೇವೆ. 'ಕೋಶ ಓದಿ ನೋಡು; ದೇಶ ಸುತ್ತಿ ನೋಡು" ಎನ್ನುವ ಮಾತಿನಂತೆ, ಪ್ರವಾಸಗಳು, ಅನುಭವಗಳು ನಮಗೆ ಪ್ರತಿ ಗಳಿಗೆಯೂ ಹೊಸತೊಂದು ಜೀವನ ಮೌಲ್ಯವನ್ನು, ಪಾಠವನ್ನು, ಜೀವಿಸುವ ಸಂಭ್ರಮವನ್ನು ನೀಡುತ್ತದೆ.

ಕೆಲವರಿಗೆ ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಓಡಾಡುವ ಅನಿವಾರ್ಯತೆಯಿದ್ದರೆ, ಕೆಲವರಿಗೆ ಪ್ರವಾಸ ಒಂದು ಹವ್ಯಾಸವಾಗಿರುತ್ತದೆ. ಬೆಟ್ಟ ಗುಡ್ಡ ಹತ್ತುವ ಸಾಹಸ ಕೆಲವರ ಆಸಕ್ತಿಯಾದರೆ, ಮನಸ್ಸು ತೋಚಿದೆಡೆಗೆ ಗಾಡಿ ಓಡಿಸಿಕೊಂಡು ಊರೂರು ಸುತ್ತುವ ಹುಚ್ಚು ಇನ್ನೊಬ್ಬರದು. ಇನ್ನು ಮಕ್ಕಳಿಗಾಗಿ ಪ್ರಾಣಿ-ಪಕ್ಷಿಗಳನ್ನು, ನೆಲ-ಜಲ, ಆಕರ್ಷಣೀಯ ಆಟಗಳ ಕುರಿತಾದ ಸ್ಥಳಗಳಿಗೆ ಭೇಟಿ ನೀಡಿ ಅವರನ್ನು ಸಂತೋಷ ಪಡಿಸುವ ಉದ್ದೇಶಕ್ಕೆ ಕೆಲವರು ಫ್ಯಾಮಿಲಿ ಟ್ರಿಪ್ ಮಾಡಿದರೆ, ಬ್ಯುಸಿಯಾದ ಜೀವನದಲ್ಲಿ ಎಷ್ಟೋ ಸಮಯ ಭೇಟಿಯಾಗದೇ ಇದ್ದ ಗೆಳೆಯರೆಲ್ಲ ಒಂದೆಡೆ ಸೇರಿ  ತಮ್ಮೆಲ್ಲ ಕಥೆಗಳನ್ನು ಹೇಳುತ್ತಾ ಪಟ್ಟಾಂಗ ಹೊಡೆಯಲೆಂದೇ ಪ್ರವಾಸಕೈಗೊಳ್ಳುವವರು ಒಂದಷ್ಟು ಜನ. ಒಂದು ದಿನದ ಮಟ್ಟಿಗೆ ಮನೆಯಿಂದ ಹೊರಗೋಗಿ ಹತ್ತಿರದ ಹೊಸ ಸ್ಥಳಕ್ಕೆ ಭೇಟಿ  ನೀಡಿ ಸಂತಸ ಪಡಲು ಇಷ್ಟ ಪಡುವ ಜನ ಒಂದು ಕಡೆಯಾದರೆ, ತಿಂಗಳುಗಟ್ಟಲೆ ದೇಶಾಂತರ ಹೋಗಿ ಅಲ್ಲಿನ ಭೌಗೋಳಿಕ, ಪ್ರಾದೇಶಿಕ, ಸಾಂಸ್ಕೃತಿಕ, ವ್ಯಾವಹಾರಿಕ, ಐತಿಹಾಸಿಕ, ವೈಜ್ಞಾನಿಕ, ವಿಷಯಗಳ ಕುರಿತಾದ ಅಧ್ಯಯನ ನಡೆಸಿ,ನೂತನ ಅನುಭವಗಳಿಂದ ಕಲಿಯುವ ಉನ್ಮಾದಕ ಜನರು ಇನ್ನೊಂದೆಡೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಪ್ರವಾಸವೆಂಬುದು ನಾವು ನಮ್ಮ ಹಾಯ್ನೆಲೆ ಯಿಂದ ಹೊರ  ಬಂದು, ಪ್ರತಿ ಕ್ಷಣವೂ ದೊರೆಯುವ ಅವಕಾಶಗಳು ಅಥವಾ ಸವಾಲುಗಳನ್ನು ಸ್ವೀಕರಿಸಿ, ಆ ಸಂದರ್ಭಕ್ಕೆ ನಮ್ಮನ್ನು ನಾವೇ ಒಗ್ಗಿಸಿಕೊಂಡು ಸಂತೋಷ ಪಡುವ ಒಂದು ಜೀವನ ಕಲೆ.

ಪ್ರವಾಸ ಮಾಡುವುದೆಂದರೆ ನಮ್ಮಂತಸ್ತಿನ  ಹಿರಿಮೆಯ ತೋರ್ಪಡಿಕೆಯಲ್ಲ -  ಅದೊಂದು ಅವಿರತ ಕಲಿಕೆಯ ಅನಾವರಣ! ಮನೆ, ಆಫೀಸು, ಶಾಲೆ, ಕೆಲಸ, ಹೊಲ-ಗದ್ದೆ, ಊರು -ಕೇರಿ ಹೀಗೆ ನಮ್ಮ ನಮ್ಮ ಮಟ್ಟಿಗೆ ಪರಿಮಿತವಾದ ವಾತಾವರಣದಿಂದ, ಹೊಸ ವಾತಾವರಣವೊಂದನ್ನು ಆಗೀಗ ಜೀವಿಸುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಅರೋಗ್ಯ ವೃದ್ಧಿಸುತ್ತದೆ. ಪ್ರವಾಸಗಳು ಮಕ್ಕಳಿಗೆ ಶಾಲೆಯ ಪಾಠಗಳ ಹೊರತಾಗಿ ತಮ್ಮನುಭವಗಳಿಂದ ಅನೇಕ ವಿಷಯಗಳನ್ನು ಕಲಿಯಲು ಒಂದು ಉತ್ತಮ ಅವಕಾಶ . ಸಾಹಸಗಳಿಗೆ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮ್ಮಲ್ಲಿನ ಆತ್ಮಸ್ತೈರ್ಯ ಹೆಚ್ಚುತ್ತದೆ. ಮನಸ್ಸುಗಳು ಬಿಗುವಾದಾಗ ಚಿಕ್ಕಪುಟ್ಟ  ತಿರುಗಾಟ ಮನಸ್ಸನ್ನು ತಿಳಿಯಾಗಿಸುತ್ತದೆ. ಪ್ರತಿನಿತ್ಯದ ಆಗುಹೋಗುಗಳನ್ನೇ ನೋಡಿ ನೋಡಿ ಜಡ್ಡು ಹಿಡಿದ ನಮ್ಮ ಮನಸ್ಸುಗಳಿಗೆ ಪ್ರವಾಸವೆಂಬುದು ಹೊಸ ಜನರೊಂದಿಗೆ ಕಲೆತು ಬೆರೆತು ಹೊಸತನವನ್ನು ನೀಡುವ ಒಂದು ಹುರುಪು. ಪ್ರವಾಸ ಮಾಡುವುದೆಂದರೆ ಕೇವಲ ಜೊತೆಗಿರುವವರೊಂದಿಗೆ ಮೋಜು-ಮಸ್ತಿ ಒಂದೇ ಅಲ್ಲದೆ, ಇತರರೊಂದಿಗಿನ ಹೊಂದಾಣಿಕೆ, ಬಾಂಧವ್ಯ ಉತ್ತಮಗೊಳಿಸಿಕೊಳ್ಳುವ ಒಂದು ಉತ್ತಮ ಬಗೆ.


ಯಶಸ್ವಿ ಪ್ರವಾಸದ ತಯಾರಿ ಮತ್ತು ಪ್ರವಾಸಿಗರ ಕರ್ತವ್ಯಗಳು

ಯಾವುದೇ ಆಕರ್ಷಣೀಯ ಸ್ಥಳವೂ, ಜನರು ಭೇಟಿ ನೀಡಲು ಯೋಗ್ಯವಾಗಿದ್ದು, ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶದಿಂದ ಕೂಡಿದ್ದು, ಆ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವಂತಿದ್ದರೆ ಅದು 'ಪ್ರವಾಸೀ ಸ್ಥಳ'ವೆನಿಸಿಕೊಳ್ಳುತ್ತದೆ. ಪ್ರವಾಸಿಗರಾಗಿ, ನಾವು ಇರುವ ಪರಿಸರದಿಂದ ಪರಸ್ಥಳಕ್ಕೆ ಭೇಟಿ ನೀಡುವಾಗ ಮಾಡುವ ಯೋಜನೆ ಮತ್ತು ನಡೆಸುವ ತಯಾರಿ ಕೇವಲ ಲೌಕಿಕ ವಸ್ತುಗಳ ಕೊಂಡೊಯ್ಯುವುದರ ಕುರಿತಾಗಿ ಮಾತ್ರವೇ ಆಗಿರಬಾರದು. ಪ್ರವಾಸವೆಂದರೆ ಒಂದಷ್ಟು ಸಮಯೋಜಿತ, ಪೂರ್ವಾಪರ ವಿಷಯಗಳ ಅರಿವು ಕೂಡ ಅಗತ್ಯ. ಇದರ ಜೊತೆಗೆ ಪ್ರವಾಸದ ಉದ್ದೇಶ ನಮ್ಮ ವೈಯುಕ್ತಿಕ ಕಾರಣಗಳಿಂದ ಯೋಜನೆಗೊಂಡಿದ್ದರೂ, ಅದು ಕೇವಲ ನಮ್ಮ ಹಿತವೊಂದಕ್ಕೆ ಮಾತ್ರ ಸೀಮಿತವಾಗಿರಬಾರದು. ನಾವು ಭೇಟಿ ನೀಡುತ್ತಿರುವ ಸ್ಥಳಕ್ಕೆ ಅಥವಾ ಪ್ರವಾಸದುದ್ದಕ್ಕೂ ನಮ್ಮಿಂದ ಇತರರಿಗೆ ಮತ್ತು ಪ್ರವಾಸೀ ತಾಣದ ಸುತ್ತಲಿನ ಪರಿಸರಕ್ಕೆ ಹಾನಿಯುಂಟಾಗದಂತೆ ಕಾಳಜಿ ವಹಿಸುವ ಜವಾಬ್ಧಾರಿ ಕೂಡ ನಮ್ಮದಾಗಿರುತ್ತದೆ.

೧. ಪ್ರವಾಸಿ ಸ್ಥಳದ ಕುರಿತು ಕನಿಷ್ಠ ಮಾಹಿತಿ ಸಂಗ್ರಹ.

ಪ್ರವಾಸ ಹೋಗಲು ಸಾರಿಗೆ ವ್ಯವಸ್ಥೆಯಿಂದ ಹಿಡಿದು, ವಸತಿ ಊಟ ಓಡಾಟ ಪ್ರತಿಯೊಂದೂ ಸ್ವತಃ ಆಯೋಜಿಸುವುದು ಕಷ್ಟ ಅಥವಾ ಅನುಭವ ಸಾಲದು ಎಂದೆನಿಸಿದಾಗ, ನಾವು ಸಾಮಾನ್ಯವಾಗಿ ಪ್ರವಾಸ ವ್ಯಾಪಾರೋದ್ಯಮ ನಡೆಸುವ ಟೂರ್ಸ್ ಅಂಡ್ ಟ್ರಾವೆಲ್ಸ್ ನವರ ಪ್ಯಾಕೇಜ್ ಟ್ರಿಪ್ ಗಳ ಮೊರೆ ಹೋಗುವುದು ಸಹಜ. ಒಂದಷ್ಟು ದುಡ್ಡು ಕಟ್ಟಿಬಿಟ್ಟರೆ ನಮ್ಮನ್ನು ಆರಂಭದ ಸ್ಥಳದಿಂದ ಹೊರಟು, ವೀಕ್ಷಿಸಬೇಕಾದ ಸ್ಥಳಗಳಿಗೆಲ್ಲ ಸುತ್ತಾಟ ಮುಗಿಸಿ ವಾಪಾಸು ಕರೆತರುವಲ್ಲಿಯವರೆಗೆ ಪ್ರತಿಯೊಂದೂ ಅವರದ್ದೇ ಪ್ರಯಾಣದ ಪ್ಲಾನ್ ಮತ್ತುಚಟುವಟಿಕೆಯ ಜವಾಬ್ದಾರಿ, ಚಿಂತೆ ಮಾಡುವ ಅಗತ್ಯವಿಲ್ಲ ಎಂದು ನಾವು ಯೋಚಿಸುತ್ತೇವೆ. ಆದರೆ ಖಾಸಗಿಯಾಗಿ ಅಥವಾ ಸ್ವತಃವಾಹನ ಚಲಾಯಿಸಿ ಪ್ರಯಾಣಿಸದಿದ್ದರೂ, ಪ್ರವಾಸ ಸ್ಥಳದ ಕುರಿತಾಗಿ ಕನಿಷ್ಠ ಪ್ರಮಾಣದ ಮಾಹಿತಿಯಾದರೂ ನಾವು ಸಂಗ್ರಹಿಸಬೇಕು. ಪ್ರವಾಸೀ ತಾಣದ ಕುರಿತಾಗಿ ಯಾವುದಾದರೂ ಪುಸ್ತಕ, ಟಿ.ವಿ ಡಾಕ್ಯುಮೆಂಟರಿ, ಇಂಟರ್ನೆಟ್ ಆಧಾರಿತ ವಿಷಯಗಳು, ಬ್ಲಾಗರ್ಸ್ ಗಳ ಪ್ರವಾಸಾನುಭವ ಇತ್ಯಾದಿ ಬಲ್ಲ ಮೂಲಗಳಿಂದ ಸಾಧ್ಯವಾದಷ್ಟರ ಮಟ್ಟಿಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ಈಗಿನ ತಂತ್ರಜ್ಞಾನದ ಬಳಕೆಯ ಸಾಧ್ಯತೆಯಿರುವ ಎಲ್ಲ ಸ್ಥಳಗಳಿಗೂ ಜಿ.ಪಿ.ಸ್ ವ್ಯವಸ್ಥೆಯು ನಮ್ಮ ಪ್ರವಾಸದ ಹಾದಿಯನ್ನು ಸುಗಮಗೊಳಿಸುತ್ತದೆ. ನಾವು ಭೇಟಿ ನೀಡುವ ಸ್ಥಳಗಳ ಕುರಿತಾಗಿ ಪ್ರವಾಸೀ ವಾಣಿಜ್ಯ ವೆಬ್ ಸೈಟ್ಗಳಲ್ಲಿ ಮಾಹಿತಿ ಹುಡುಕುವುದರ ಜೊತೆಗೆ, ಪ್ರವಾಸಿಗರ ಪ್ರವಾಸ ಕಥನ, ಅನುಭವಗಳನ್ನು ಓದುವುದು  ಒಳ್ಳೆಯದು. ಟ್ರಾವೆಲ್ ಬ್ಲಾಗ್ ಗಳಲ್ಲಿ, ಬರಹಗಾರರು ತಮ್ಮ ಪ್ರವಾಸದ ಉದ್ದೇಶ, ತಮಗೆ ದೊರಕಿದ ಕಾಲಾವಕಾಶ, ವ್ಯವಸ್ಥೆಗಳ ಯೋಜನೆ, ಕೆಲವು ಮುಂದಾಲೋಚನೆ, ಸಹಚರರೊಂದಿಗಿನ ಹೊಂದಾಣಿಕೆ, ತಮಗೆ ಸಿಕ್ಕ ಅವಕಾಶ ಮತ್ತು ಸಂಕಷ್ಟಗಳು, ಮಾಹಿತಿ ಅಂಕಿ ಅಂಶಗಳು ಹೀಗೆ ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುವುದರಿಂದ, ನಮಗೆ ನಮ್ಮ ಪ್ರವಾಸವನ್ನು ನಮ್ಮನುಕೂಲಕ್ಕೆ ತಕ್ಕಂತೆ ಆಯೋಜಿಸಲು ಸಹಾಯಕವಾಗುತ್ತದೆ. ಕೇವಲ ವ್ಯಾಪಾರೋದ್ಯಮದ ದೃಷ್ಟಿಯಲ್ಲಿ ಬಿಂಬಿಸುವ ಅತ್ಯುತ್ತಮ ವ್ಯವಸ್ಥೆಗಳ ನಿಜ ಸ್ವರೂಪ, ಪ್ರವಾಸ ಸ್ಥಳಗಳಲ್ಲಿ ನಾವು ವಂಚನೆಗೊಳಗಾಗಬಹುದಾದ ಸಂದರ್ಭಗಳ ಸುಳಿವು ದೊರೆಯುತ್ತದೆ.

ಪ್ರವಾಸ ಸ್ಥಳದ ಭಾಷೆ ನಮ್ಮ ಭಾಷೆಗಿಂತ ಭಿನ್ನವಾಗಿದ್ದರೆ, ಪ್ರಮುಖವಾದ ಶಬ್ದಗಳನ್ನುತಿಳಿದುಕೊಂಡರೆ, ಹೋದ ಕಡೆಗೆ ಇತರರೊಡನೆ ಸಂಭಾಷಣೆ ನಡೆಸುವ ಅಗತ್ಯತೆ ಸುಲಭವೆನಿಸುತ್ತದೆ. ಪರದೇಶಕ್ಕೆ ಪ್ರವಾಸ ಕೈಗೊಳ್ಳುವುದಾದರೆ ಅಲ್ಲಿನ ಕಾನೂನು ವ್ಯವಸ್ಥೆಯ ಕುರಿತು ಮಾಹಿತಿ ಸಂಗ್ರಹಿಸುವುದು ಅತ್ಯವಶ್ಯಕ. ಕೆಲವೆಡೆ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಅರೋಗ್ಯ ವಿಮೆ ಪತ್ರ, ನಮ್ಮ ಹತ್ತಿರದವರ ಸಂಪರ್ಕ ಕೊಂಡಿ ಇತರೆ ಮಾಹಿತಿಗಳ ತಯಾರಿ ಮಾಡಿಕೊಂಡರೆ, ವಿವಿಧ ಬಗೆಯ ಪ್ರವಾಸೀ ಚಟುವಟಿಕೆಗಳಿಗೆ ಅನುಕೂಲಕರ. ಅಲ್ಲಿನ ಚಲಾವಣೆಯಲ್ಲಿರುವ ವ್ಯವಸ್ಥೆಗಳು, ಸಂಸ್ಕೃತಿ, ಸಾಮಾಜಿಕ ವರ್ತನೆ, ಆಹಾರ ಪದ್ದತಿಯ ಕುರಿತಾಗಿ ತುಸು ವಿಷಯಗಳನ್ನು ಕಲೆ ಹಾಕಿಕೊಂಡರೆ, ನಮಗತ್ಯವಾದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು, ಮಾಹಿತಿಯಿಲ್ಲದೆ ಪೇಚಾಟಕ್ಕೀಡಾಗುವ ಪ್ರಸಂಗ ಬರುವುದಿಲ್ಲ.

ಚಿಕ್ಕ ಮಕ್ಕಳನ್ನು ಕರೆದುಕೊಂಡು ಪ್ರವಾಸ ಕೈಗೊಳ್ಳುವುದು ಎಂತವರಿಗೂ ಒಂದು ಚಾಲೆಂಜ್. ಹಾಗಾಗಿ ಮಕ್ಕಳ ಊಟ-ತಿಂಡಿ, ಬಟ್ಟೆ ಮತ್ತು ಇತರ ಸೌಕರ್ಯಗಳಿಗಾಗಿ, ನಾವು ಪ್ರಯಾಣ ಬೆಳೆಸುತ್ತಿರುವ ಸ್ಥಳದಲ್ಲಿ ಬೆಳೆಯುವ ಮತ್ತು ದೊರೆಯುವ ತರಕಾರಿ, ಹಣ್ಣು ಆಹಾರ ವಸ್ತುಗಳ ಲಭ್ಯತೆ, ಹವಾಮಾನ ಪರಿಸ್ಥಿತಿ ಇತ್ಯಾದಿ ವಿಷಯಗಳ ಕುರಿತಾಗಿ ಮುಂಚಿತವಾಗಿಯೇ ಗಮನಿಸಿಕೊಂಡರೆ, ಮಕ್ಕಳನ್ನು ಪ್ರಯಾಣದುದ್ದಕ್ಕೂ ಸಮಾಧಾನದಿಂದಿರಿಸಲು ಅನುಕೂಲವಾಗುತ್ತದೆ.

೨. ಸ್ಥಳೀಯ ಸಂಪ್ರದಾಯಗಳ ಕುರಿತಾಗಿ ಗೌರವ

ಹೊಸ ಜಾಗವೊಂದಕ್ಕೆ ಹೋದಾಗ ಅಲ್ಲಿನ ಆಚಾರ ವಿಚಾರ ಸಂಪ್ರದಾಯಗಳು ನಮಗೆ ತಿಳಿಯದ ವಿಷಯವಾಗಿದ್ದರೆ, ಕೇಳಿ, ನೋಡಿ, ಗಮನಿಸಿ ಅಲ್ಲಿನ ರೀತಿ ರಿವಾಜುಗಳಿಗೆ ನಮ್ಮ ಪ್ರವಾಸವನ್ನು ಚಟುವಟಿಕೆಯನ್ನು ಹೊಂದಿಸಿಕೊಳ್ಳಬೇಕು.  ಕೆಲವು ಧಾರ್ಮಿಕ ಪ್ರವಾಸೀ ತಾಣಗಳಿಗೆ ಭೇಟಿ ನೀಡಿದಾಗ, ಉದಾಹರಣೆಗೆ ಕೆಲವು ಪೂಜಾ ಮಂದಿರಗಳಲ್ಲಿ ನಾವು ಧರಿಸುವ ಪೋಷಾಕುವಿನ ಕುರಿತಾಗಿ ನಿಯಮವಿರುತ್ತದೆ. ಪೂಜಾ ವಿಧಿ ವಿಧಾನಗಳಲ್ಲಿ ವೈವಿದ್ಯತೆ ಇರಬಹುದು. ಊಟ -ತಿಂಡಿಯ ಅಭ್ಯಾಸ ತುಸು ಭಿನ್ನವಾಗಿರಬಹುದು. ಆದರೆ ಅಲ್ಲಿನ ಸನಾತನ ಸಂಸ್ಕೃತಿ ಸಂಪ್ರದಾಯಕ್ಕೆ ನಮ್ಮ ಮನಸ್ಸನ್ನು ಸಂಕುಚಿತಗೊಳಿಸದೆ, ತೆರೆದ ಮನಸ್ಸಿನಿಂದ ಹೊಂದಿಕೊಂಡಾಗ ಮಾತ್ರ, ಸ್ಥಳೀಯರೊಡನೆ ನಾವು ಆತ್ಮೀಯವಾಗಿ ಬೆರೆಯಲು ಸಹಾಯವಾಗುತ್ತದೆ. ಯಾವುದೋ ನಗರ ಪ್ರದೇಶದಿಂದ ನಾವು ಪ್ರಯಾಣ ಬೆಳೆಸಿ ಚಿಕ್ಕ ಊರಿಗೆ ಹೋಗಿದ್ದರೂ ಸಹ, ಆ ಪ್ರದೇಶದ ಜನರ ಭಾವನಾತ್ಮಕ ವಿಷಯಗಳಿಗೆ, ಆಚರಣೆಗಳಿಗೆ ಧಕ್ಕೆ ತರುವಂತ ಅವಹೇಳನೆ ಮಾತುಗಳನ್ನಡದೇ, ನಮ್ಮ ಮನಸ್ಸಿಗೆ ಬಂದಂತೆ ವರ್ತಿಸದೇ, ಸ್ಥಳೀಯರ ಸಣ್ಣ ಸಣ್ಣ ನಂಬಿಕೆಗಳನ್ನು, ಕುತೂಹಲವನ್ನೂ ಖುಷಿ ಖುಷಿಯಾಗಿ ಸ್ವೀಕರಿಸಿದರೆ, ನಮ್ಮ ಟ್ರಿಪ್ ಕೂಡ ನಲಿವಿನಿಂದ ಕೂಡಿರುತ್ತದೆ.

ಪ್ರವಾಸೋದ್ಯಮವೇ ಮುಖ್ಯ ಬಂಡವಾಳವಾಗಿರುವಂತಹ ಊರುಗಳಲ್ಲಿ, ಪ್ರವಾಸಿಗರನ್ನು ಆಕರ್ಷಿಸಲೆಂದು ಅಲ್ಲಿನ ಮುಖ್ಯ ಐತಿಹಾಸಿಕ ವಿಷಯಗಳ ಕುರಿತಾದ ವಸ್ತು ಸಂಗ್ರಹಾಲಯಗಳು, ಕಲಾವಿದರಿಂದ ಸಂಗೀತ, ನೃತ್ಯ, ಕಲೆಗಳ ಪ್ರದರ್ಶನ, ಕರಕುಶಲ ವಸ್ತುಗಳ ಮಾರಾಟ ಹೀಗೆಸಾಕಷ್ಟು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇಂತಹ ಸ್ಥಳಗಳಲ್ಲಿ, ಪ್ರದರ್ಶನಕ್ಕಿಟ್ಟ ವಸ್ತುಗಳನ್ನು ಯಾವುದೇ ಕಾರಣಕ್ಕೂ ಭಗ್ನಗೊಳಿಸದೇ, ಮಹಿಳೆಯರ ಬಗ್ಗೆ ಅಶ್ಲೀಲ ಮಾತುಗಳನ್ನಾಡದೇ ಕಲೆಯನ್ನು ಅರಿಯುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮನೋಭಾವನೆಯಿಂದ ನೋಡಿ ಆನಂದಿಸುವುದು, ಸಂತಸ ತಂದುಕೊಟ್ಟ ಪ್ರದರ್ಶನಕಾರರಿಗೆ ಒಂದು ಪ್ರಶಂಸೆ ನೀಡುವುದು ಇತ್ಯಾದಿ ನಮ್ಮನ್ನು ನಾವೇ ಉತ್ತಮ ಪ್ರಜೆಯನ್ನಾಗಿಸಿಕೊಳ್ಳಲು ಸಹಾಯ ಮಾಡುತ್ತದೆ.

೨. ಪ್ರವಾಸದ ಪರಿಸರ ನಮ್ಮ ಜವಾಬ್ಧಾರಿ ಕೂಡ.

ಒಂದು ಬೆಳ್ಳಂಬೆಳಗ್ಗೆ ಯಾರಾದರೂ ಇದ್ದಕ್ಕಿದ್ದಂತೆ ನಮ್ಮ ಮನೆಗಳಿಗೆ ಬಂದು ಒಂದಷ್ಟು ಹಾರಾಡಿ ಕುಣಿದಾಡಿಕೊಂಡು, ಕೂತು ಉಂಡು ಕಂಡ ಕಂಡಲ್ಲಿ ಕಸ ಬಿಸಾಡಿ ತಿಳಿಸದೇ ಹೊರಟೇ ಹೋದರೆ ಹೇಗನ್ನಿಸಬಹುದು? ಕೋಪ, ಅಸಹಾಯಕತೆ, ದುಃಖ ಎಲ್ಲವೂ ಒಮ್ಮೆಲೇ ಉಂಟಾಗಬುದಲ್ಲವೇ? ಅಂದ ಮೇಲೆ ನಾವು ಪ್ರವಾಸಕ್ಕೆಂದು ಹೊರಗಿನ ಸ್ಥಳಗಳಿಗೆ ಓಡಾಡಿ ಪರಿಸರವನ್ನು ಅಂದಗೆಡಿಸಿ ಬರುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ?

ಪ್ರವಾಸೀ ಸ್ಥಳವೆಂದರೆ ಜನರು ಹೆಚ್ಚಿನ ಪ್ರಮಾಣದಲ್ಲಿ ಓಡಾಡುವಂತಹ ಸ್ಥಳ. ಕೆಲವು ಕಡೆ ಸ್ವಚ್ಛತೆಯೆಡೆಗೆ ನಿಗಾ ವಹಿಸಿ ಸರ್ಕಾರದಿಂದ ಕ್ರಮಗಳನ್ನು, ಉಸ್ತುವಾರಿಗೆ ಜನರ ನೇಮಕಗೊಂಡಿರುತ್ತಾರೆ. ಆದರೆ ಸರ್ಕಾರದ ವ್ಯವಸ್ಥೆಯೊಂದೇ ಸಾಕೆ? ಆಕರ್ಷಣೀಯ ಸ್ಥಳಗಳು ಎಂದ ಕ್ಷಣವೇ ೧೦-೨೦ ಸಣ್ಣ ಪುಟ್ಟ ಬೀದಿ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳು ತಲೆ ಎತ್ತುವುದು ಸಹಜ. ಪ್ರತಿಯೊಂದು ವ್ಯವಸ್ಥೆಯೂ ಯಶಸ್ವಿಯಾಗಲು ಜನರ ಸಹಕಾರ ಅತೀ ಮುಖ್ಯ. ಅನೇಕ ಕಡೆ ಕಸದ ಬುಟ್ಟಿ ಇದ್ದರೂ ಜನರು ಕಂಡಕಂಡಲ್ಲೆ ಕಸ ಹಾಕುವುದನ್ನು ನಾವು ನೋಡುತ್ತೇವೆ. ಇನ್ನು ಕೆಲವೆಡೆ ಕಾಡು-ಮೇಡು ,ನೀರಿರುವಂತಹ ನೈಸರ್ಗಿಕ ಸ್ಥಳದಲ್ಲಂತೂ ಕೇಳುವುದೇ ಬೇಡ, ಬೇಕೆಂದರಲ್ಲಿ ಕಸ ಎಸೆಯುವ, ಮದ್ಯಪಾನ ಮಾಡಿ ಬಾಟಲಿಗಳನ್ನು ಎಸೆಯುವಂತಹ ನೀಚ ಕೃತ್ಯ ಮಾಡುವ ಮನಸ್ಸಿಗರಿರುತ್ತಾರೆ.

ಪ್ರವಾಸಿಗನಾಗಿ ನಮಗೆ ನಮ್ಮ ಧ್ಯೇಯವಿರಬೇಕು. 'ಇದೆಲ್ಲವೂ ನಮ್ಮ ಭೂಮಿ, ನಮ್ಮ ಸಂಸ್ಕೃತಿ, ನಮ್ಮ ಮಣ್ಣು, ನಮ್ಮ ಜಲ" ಎಂಬ ಆಳವಾದ ಮನೋಭಾವನೆ ನಮ್ಮಲ್ಲಿ ಬೇರೂರಿದರೆ ಮಾತ್ರ, ಮಾಲಿನ್ಯಕ್ಕೆ ನಮ್ಮಇಂದಾಗುವ ಕೊಡುಗೆಯನ್ನು ತಕ್ಕಮಟ್ಟಿಗೆ ತಪ್ಪಿಸಬಹುದು ಮತ್ತು ನಮ್ಮ ಮಕ್ಕಳಲ್ಲೂ ಈ ಭಾವನೆಯನ್ನು ಪೋಷಿಸಬಹುದು. ನಮ್ಮ ಟ್ರಿಪ್ ಜಾಲಿಯಾಗಿರಲು ಎಷ್ಟೆಲ್ಲಾ ವಿಷಯಗಳ ಕುರಿತು ನಾವು ತಯಾರಿ ನಡೆಸುತ್ತೇವೋ, ಅದರಲ್ಲಿ ಪರಿಸರದ ಕುರಿತು ಕಾಳಜಿಯೂ ಒಂದಂಶವಾಗಿರಬೇಕು. ಐತಿಹಾಸಿಕ ವಸ್ತುಗಳನ್ನು ನೋಡಿ ಸಂತೋಷಿಸಬೇಕು ವಿನಃ ಅವುಗಳನ್ನು ಯಾವುದೊ ಮತೀಯ ಭಾವನಾತ್ಮಕ ವಿಚಾರಗಳ ಹಿನ್ನಲೆಯಲ್ಲಿ ಹಾಳುಗೆಡುವುದು ತಪ್ಪು. ಯಾರದೋ ಮೇಲಿನ ಪ್ರೀತಿ-ಪ್ರೇಮ ಭಾವನೆಗಳು ಆ ವ್ಯಕ್ತಿಗೇ ನಮ್ಮ ನಡೆ ನುಡಿಗಳಲ್ಲಿ ತೋರ್ಪಡಿಸುವಂತಿರಬೇಕು ಹೊರತು, ಪ್ರವಾಸೀ ತಾಣಗಳ, ಪ್ರಸಿದ್ಧ ಸ್ಥಳಗಳ ಕಲ್ಲಿನ ಮೇಲೆ, ಮರದ ಮೇಲೆ ತಮ್ಮ ಹೆಸರುಗಳನ್ನು ಕೆತ್ತಿ ಬರೆದು ಆ ಪ್ರಕೃತಿಯ ಅಂದವನ್ನುಹಾಳು ಮಾಡುವಂತಿರಬಾರದು. ಇನ್ನು ಪ್ಲಾಸ್ಟಿಕ್ ಎಂಬ ಮಾರಕವನ್ನು ಪ್ರವಾಸದುದ್ದಕ್ಕೂ ಪ್ರಸರಣ ಮಾಡದಿರೋಣ. ಪ್ರಯಾಣ ಮಾಡುವಾಗ ಬಿಸ್ಕಿಟು, ಪ್ಯಾಕಡ್ ತಿಂಡಿಗಳನ್ನು, ಕುರುಕಲುಗಳನ್ನು ತಿಂದು ವಾಹನದ ಕಿಟಕಿಯಿಂದಾಚೆ 'ಇದೊಂದೇ ಕವರ್ ತಾನೇ' ಎಂದು ಹೊರಗೆ ಹಾಕದಿರೋಣ. ಪ್ರಯಾಣದ ಮಧ್ಯೆ ನೀರಿನ ಒರತೆಯ ಸಮೀಪದಲ್ಲಿ ಊಟ ತಿಂಡಿಗೆಂದು ಬಿಡುವು ತೆಗೆದುಕೊಂಡು ಅಲ್ಲಿಯೇ ತಿಂಡಿಯ ಕಸವನ್ನು ನೀರಿಗೆ, ಮರದ ಬುಡಕ್ಕೆ ಎಸೆದು ಬರುವುದು ಬೇಡ - ಬದಲಿಗೆ, ಕಸವನ್ನು ಒಟ್ಟು ಮಾಡಿಕೊಂಡು ಇನ್ನೊಂದು ಸ್ಪೇರ್ ಕವರಿಗೆ ತುಂಬಿಟ್ಟು ನಂತರಕ್ಕೆಲ್ಲಾದರೂ ಕಸದ ಬುಟ್ಟಿ ಕಂಡಾಗ ಅಲ್ಲಿ ವಿಲೇ ಮಾಡುವಷ್ಟು ಸಣ್ಣ  ಪ್ರಮಾಣದ ಕೆಲಸ ನಮ್ಮಿಂದ ಸಾಧ್ಯವಿದೆ. ಯುವಜನರು, ಕಾಲೇಜು ಮಕ್ಕಳು ಜಾಲಿ ಟ್ರಿಪ್ ಎಂದು ಪ್ರವಾಸ ಕೈಗೊಂಡು, ನಿಸರ್ಗದತ್ತ ಪ್ರವಾಸೀ ತಾಣಗಳಲ್ಲಿ ಮದ್ಯಪಾನ ಮಾಡುವುದು ಒಂದು ಟ್ರೆಂಡ್ ಎಂದು ಭಾವಿಸುವ ಮುಂಚೆ ಪರಿಸರಕ್ಕೆ ಮತ್ತು ಇತರ ಪ್ರವಾಸಿಗರಿಗೆ ಮುಜುಗರಕ್ಕೀಡುಮಾಡುವ ಕೆಲಸ ಆತ್ಮಗೌರವ ಕೊಡುವಂತದ್ದಲ್ಲ ಎಂಬ ಸಣ್ಣ ಆಲೋಚನೆ ಮನಸ್ಸಿನಲ್ಲಿ ತಂದುಕೊಂಡರೆ ಸಾಕು.  ಫಯರ್ ಕ್ಯಾಂಪ್ ಎಂದು ಬೆಂಕಿ ಹಾಕಿ ಸುತ್ತಲೂ ನರ್ತಿಸುವ ಮುನ್ನ ಸುತ್ತಮುತ್ತಲಿನ ಹಸಿರಿಗೆ, ಅರಣ್ಯಕ್ಕೆ ತೊಂದರೆಯಾಗದಂತೆ ಒಮ್ಮೆ ಕಾಳಜಿ ವಹಿಸುವುದು ಒಳಿತು. ಹೊರಗಡೆ ಹೋದಾಗ ದೊರಕುವ ಉಚಿತ ಸಂಪನ್ಮೂಲ ಎಂದು ನೀರನ್ನು ಹೆಚ್ಚು ಪೋಲು ಮಾಡದೆ ಇದ್ದರೆ ಅದೇ ಒಂದು ನಿಸರ್ಗಕ್ಕೆ ನಮ್ಮ ವಂತಿಕೆ. ಅಭಯಾರಣ್ಯಗಳಿಗೆ ಭೇಟಿನೀಡುತ್ತಿದ್ದೇವೆಂದರೆ, ಪ್ರಾಣಿ ಪಕ್ಷಿಗಳ, ಜೀವ-ಸಂಕುಲಗಳ ಮನೆಗೆ ಅತಿಥಿಯಾಗಿ ನಾವು ಹೋಗುತ್ತಿದ್ದೇವೆಂದರ್ಥ. ಬೇಕಾಬಿಟ್ಟಿ ಗಲಾಟೆ, ಮಾಲಿನ್ಯಗಳಿಂದ, ಪ್ರಾಣಿಪಕ್ಷಿಗಳಿಗೆ ಹಿಂಸೆ ನೀಡಿ ಬರುವಂತಹ ಕಾರ್ಯಗಳು ನಮ್ಮದಾಗುವುದು ಬೇಡ.

 ವಾಣಿಜ್ಯ ವ್ಯಾಪಾರಾಭಿವೃದ್ದಿ ದೃಷ್ಟಿಯಿಂದ ಯಾವುದೇ ಪ್ರವಾಸಿಗರಿಗೆ ಆಕರ್ಷಣೀಯವೆನಿಸುವ ಸ್ಥಳಗಳಲ್ಲೂ ಸಣ್ಣ ಗೂಡಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಳಿಗೆಗಳ ವರೆಗೆ ನಿರ್ಮಿತವಾಗುವುದು ಸಹಜ. ಸ್ಥಳೀಯ ಕರಕುಶಲ ಸಣ್ಣ ಕೈಗಾರಿಕೆಗೆ ಪ್ರೋತ್ಸಾಹಿಸಿ ವಸ್ತುಗಳನ್ನು ಕೊಳ್ಳುವುದು ಸಮಂಜಸ ; ಆದರೆ ಪರವಾನಗಿ ಪಡೆಯದೇ, ತಿಂಡಿ, ಆಟಿಕೆ ಇನ್ನಿತರ ವ್ಯಾಪಾರಕ್ಕೆಂದು ಅಂಗಡಿಗಳನ್ನು ಹಾಕಿಕೊಂಡು ಅಲ್ಲಲ್ಲೇ ಪ್ಲಾಸ್ಟಿಕ್ ಎಸೆದು ಮಾಲಿನ್ಯ ಮಾಡುವವರಿಗೆ ನಮ್ಮ ಹಿತಕ್ಕಾಗಿ ವ್ಯಾಪಾರ ನೀಡುವುದು ಕೂಡ ಅಷ್ಟೇ ಅಸಮಂಜಸ. ನಮ್ಮಲ್ಲಿ ಮಾಲಿನ್ಯ ಕಡಿಮೆಗೊಳಿಸುವ ಧ್ಯೇಯವಿದ್ದರೆ, ರೂಡಿಯಿದ್ದರೆ ಮಾತ್ರ, ಖಂಡಿತವಾಗಿಯೂ ಧೈರ್ಯದಿಂದ, ಹಕ್ಕಿನಿಂದಇತರರಲ್ಲೂ ನಾವು ಅದನ್ನು ಅಪೇಕ್ಷಿಸಬಹುದು. ಚಿಕ್ಕಪುಟ್ಟ ಪ್ರವಾಸವಾಗಿದ್ದರೆ, ಶುಚಿ ರುಚಿಯಾದ ಆಹಾರವನ್ನು ತಯಾರಿಸಿ ಡಬ್ಬಿಗಳಲ್ಲಿ ತುಂಬಿಕೊಂಡು ಹೋದರೆ, ಹಣ್ಣುಗಳನ್ನು ಪ್ಯಾಕ್ ಮಾಡಿಕೊಂಡು ಹೋದರೆ, ನಮ್ಮ ಟ್ರಿಪ್ ಮಾಲಿನ್ಯ ರಹಿತದ ಜೊತೆಗೆ ಆರೋಗ್ಯಕರವಾಗಿಯೂ ಇರುತ್ತದೆ.

೩. ಹೋಂಸ್ಟೇ ಮತ್ತು ಸಾರ್ವನಿಜನಿಕ ಸಾರಿಗೆ ವ್ಯವಸ್ಥೆ ಬಳಕೆ.

ಯಾವುದೇ ಪ್ರಸಿದ್ಧ ಪ್ರವಾಸೀ ತಾಣಗಳಿಗೆ ನಾವು ಭೇಟಿ ನೀಡಿದರೂ ವಸತಿಗಾಗಿ ಪ್ರಸಿದ್ಧವಾಗಿರುವ ಹೋಟೆಲ್ ಅನ್ನು ಹುಡುಕುವ ಪರಿಪಾಠವಿರುತ್ತದೆ. ಆದರೆ ಪ್ರವಾಸದ ಯೋಜನೆ ನಿಮ್ಮದೇ  ಹತೋಟಿಯಲ್ಲಿದ್ದರೆ ಒಮ್ಮೊಮ್ಮೆ ಹೋಂಸ್ಟೇ ಗಳನ್ನು ತಂಗಲು ಪ್ರಯತ್ನಿಸಿ. ಏಕೆಂದರೆ ಯಾವುದೇ ಸ್ಥಳದ ಕುರಿತಾಗಿ ಪ್ರವಾಸದ ಪಟ್ಟಿ, ಭೂಪಟದಲ್ಲಿ ಇರುವುದಕ್ಕಿಂತಲೂ, ಅಲ್ಲಿನ ಸ್ಥಳೀಯರಿಗೆ ಹೆಚ್ಚಿನ ಸ್ಥಳಗಳ ಮಾಹಿತಿ, ಆಗುಹೋಗುಗಳ ಅರಿವಿರುತ್ತದೆ. ಇದರ ಜೊತೆಗೆ ಹೋಂಸ್ಟೇ ಗಳೆಂದರೆ ಮನೆ ಅಥವಾ ಮನೆಯ ಒಂದು ಭಾಗವನ್ನು ಪ್ರವಾಸಿಗರಿಗೆ ಊಟ ಮತ್ತು ವಸತಿಗಾಗಿ ನೀಡಿ ಅದರಿಂದ ಆದಾಯ ಪಡೆಯುವ ಮಾರ್ಗ. ಹಾಗಾಗಿ ಹೋಂಸ್ಟೇ ನಡೆಸುವವರು ಪ್ರವಾಸಿಗರನನ್ನು ಆಕರ್ಷಿಸಲೆಂದೇ ಅಲ್ಲಿನ ಸಾಂಪ್ರದಾಯಿಕ ಅಡುಗೆ ಪದಾರ್ಥಗಳನ್ನು ತಯಾರಿಸುತ್ತಾರೆ. ಚಾರಣ, ಪ್ರಕೃತಿ ವೀಕ್ಷಣೆ, ಸಾಂಪ್ರದಾಯಿಕ ಆಟಗಳು ಇನ್ನಿತರ ಹಳ್ಳಿಯ ಘಮಲು ದೊರೆಯುವಂತಹ ಅನೇಕ ಚಟುವಟಿಕೆಗಳನ್ನು ಆಯೋಜಿಸಿರುತ್ತಾರೆ. ಅವರದ್ದೇ ವಾಹನಗಳ ವ್ಯವಸ್ಥೆ ಸಿಗುವುದರಿಂದ ನಮಗೆ ಬೇಕಾದ ಕಡೆಗೆ ನಾವು ಸ್ವಚ್ಛಂದವಾಗಿ ಓಡಾಡುವ ಸ್ವತಂತ್ರತೆ ಇರುತ್ತದೆ. ಹಾಗಾಗಿ ಹೋಟೆಲ್ ಗಳಿಗಿಂತಲೂ ಹೋಂಸ್ಟೇ ಗಳಲ್ಲಿ ಹೆಚ್ಚಿನ ಪ್ರವಾಸದ ಪರಿಪೂರ್ಣತೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹೋಟೆಲ್ಗಳಿಗಿಂತ ಹೋಂಸ್ಟೇ ವೆಚ್ಚವು  ತುಸು ಕಡಿಮೆಯೇ ಇರುತ್ತದೆ ಜೊತೆಗೆ ಸ್ಥಳೀಯರಿಗೆ ಆದಾಯ ನೀಡಿದ ಸಂತೋಷ ನಮಗಿರುತ್ತದೆ.  

ಇದರ ಜೊತೆಗೆ, ಸಮಯದ ಅಭಾವ ಅಥವಾ ಇನ್ಯಾವುದೇ ಬದ್ಧತೆಯಿರದ ಪಕ್ಷದಲ್ಲಿ ಆದಷ್ಟು ಬಸ್ಸು, ಟಾಂಗಾ ಹೀಗೆ ಸ್ಥಳೀಯ ಸಾರ್ವಜನಿಕ ಸಾರಿಗೆ ಮಾಧ್ಯಮವನ್ನೇ ಬಳಸಿ ನೋಡಿ. ಹೆಚ್ಚೆಚ್ಚು ಸಾರ್ವಜನಿಕರೊಡನೆ ಪ್ರಯಾಣ ಬೆಳೆಸಿದಷ್ಟೂ ನಮಗೆ ಆ ಸ್ಥಳದ ಮತ್ತು ಜನಜೀವನದ ಕುರಿತಾಗಿ ಹೆಚ್ಚೆಚ್ಚು ನೋಡಲು, ತಿಳಿಯಲು ಅನುಕೂಲವಾಗುತ್ತದೆ. ಟ್ಯಾಕ್ಸಿ, ಆಟೋ ಬಳಸುವ ಕಡೆ ಬಸ್ ನ ವ್ಯವಸ್ಥೆಯಿದ್ದರೆ, ಅಥವಾ ಕೆಲವು ಹತ್ತಿರದ ಸ್ಥಳಗಳಿಗೆ ಕಾಲ್ನಡಿಗೆಯಲ್ಲೇ ಹೋದರೆ, ಹಣ ಉಳಿತ್ಯಾವಾಗುವುದರ ಜೊತೆಗೆ, ಹಾದಿಯುದ್ದಕ್ಕೂ ನಾವು ಪ್ರವಾಸಕ್ಕೆಂದು ತೆರಳಿರುವ ಜಾಗವನ್ನು ಇನ್ನೂ ಕೂಲಂಕುಷವಾಗಿತಿಳಿಯುವ ಆಸೆ ಪೂರೈಸುತ್ತದೆ.

ಪ್ರವಾಸ ಎಂಬುದು ಕೇವಲ ನಮ್ಮ ಕಥೆಯಲ್ಲ. ಪ್ರವಾಸದ ಸಮಯದ ಆಗುಹೋಗುಗಳು, ಹಾದಿಯುದ್ದಕ್ಕೂ ಸಿಗುವ ಜನರ ಕಥೆಗಳು, ಸನ್ನಿವೇಶಗಳು ಒಂದೊಂದು ಕಥೆಯನ್ನು ಅದರ ಜೊತೆಗೆ ಅನೇಕಾನೇಕ ಅನುಭವದ ಪಾಠಗಳನ್ನು ಕಲಿಸಿ ಹೋಗುತ್ತದೆ. ಪ್ರವಾಸದಿಂದ ಒಳ್ಳೊಳ್ಳೆಯ ನೆನಪುಗಳ ಬುತ್ತಿ ನಮ್ಮದಾಗುತ್ತದೆ. ಹಾಗಾಗಿ ಒಂದು ಉತ್ತಮ ಪ್ರವಾಸದ ನಿಲುವು ಮತ್ತು ಗೆಲುವು ಕೇವಲ ಪ್ರವಾಸೋದ್ಯಮ ಇಲಾಖೆ,  ಸರ್ಕಾರ ಅಥವಾ ಇನ್ಯಾವುದೋ ಸಂಘ ಸಮೂಹದವರ ಜವಾಬ್ಧಾರಿ ಮಾತ್ರವಲ್ಲ. ಪ್ರವಾಸಿಗರಾಗಿ ನಮ್ಮಿಂದಲೂ ಕೂಡ ಅಷ್ಟೇ ಪ್ರಮಾಣದ ಹೆಮ್ಮೆ, ಪ್ರೀತಿ, ಕಾಳಜಿಯ ಅವಶ್ಯಕ.  ಪ್ರವಾಸಿಗರ ಕರ್ತವ್ಯಕ್ಕೆ ಬದ್ಧರಾಗಿ ನಮ್ಮ ಪ್ರವಾಸವನ್ನು ಸುಖಿಸೋಣ. 

ಶನಿವಾರ, ಡಿಸೆಂಬರ್ 8, 2018

ಪುರ ಲುಹುರ್ ಉಲುವಾಟು, ಬಾಲಿ

ಅದೊಂದು ದ್ವೀಪದ ತುತ್ತತುದಿ. ಅಲ್ಲಿದೆ ಒಂದು ಸಮುದ್ರ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿರುವ  ಬ್ರಹತ್ ಕಡಿಬಂಡೆ. ಅದರ ಮೇಲೆ, ಮನಸ್ಸು ಪ್ರಫುಲ್ಲಗೊಳ್ಳುವಂತಹದೊಂದು ದೇವಾಲಯ. ದೇವಾಲಯದಾಚೆಗೆ ಕಣ್ಣು ಹಾಯಿಸಿದಷ್ಟು ದೂರವೂ, ಮುಗಿಯದ ಸಾಗರದ ತುಂಬು ನೋಟ. ಕೆಳಗಡೆ ನಿರಂತರವಾಗಿ ಬಂಡೆಗೆ ಬಂದಪ್ಪಳಿಸುವ ಶುಭ್ರ ಅಲೆಗಳ ಮೋಹಕ ಆಟ. ಕಿವಿಗೊಟ್ಟು ಆಲೈಸಲು, ತನ್ನತಾನದಲಿ ಶಬ್ದ ಮಾಡುವ ನೀಲ ಶಾಂತ ಅಲೆಗಳ ಹೊಯ್ದಾಟ.. ಅಲ್ಲೆಲ್ಲೋ ಆಗಾಧ ಸಾಗರದ ಮಧ್ಯದಲ್ಲಿ ಸಣ್ಣ ಬಿಳಿ ಹರಳಿನಂತೆ ಕಂಡು, ಕ್ರಮೇಣ ಪುಟ್ಟ ಚುಕ್ಕೆಯಂತೆ ಮಾಯವಾಗುವ ಹಡಗು. ಸೂರ್ಯ ತಂಪಾಗುವ ಸಮಯಕ್ಕೆ, ಆಕಾಶದ ತುಂಬೆಲ್ಲ ರಂಗಿನ ಕೆಂಬಣ್ಣ; ಅದನ್ನು ಪ್ರತಿಫಲಿಸುವ ಸಮುದ್ರವೋ ಬಂಗಾರದ ಬಣ್ಣ.. ಸಂಜೆಯ ತಣ್ಣನೆ ಬೀಸುವ ಗಾಳಿಗೆ ಮೈ ಒಡ್ಡಿ ನಿಂತರೆ ಸಾಕು, ನಮ್ಮ ಸುತ್ತಮುತ್ತಲು ನಮ್ಮಂತೆಯೇ ಸಾವಿರಾರು ವೀಕ್ಷಕರಿದ್ದರೂ, ಆ ಸ್ಥಳದ ಸೌಂದರ್ಯಕ್ಕೆ ಮನಸೋತು ನಮ್ಮ ಉಪಸ್ಥಿತಿಯೇ ಮರೆಯುವಂತಹ ಅನುಭಾವ.. ದಿಗಂತದಂಚಿನಲ್ಲಿ ಅಸ್ತಮಿಸುವ ದಿನಕರನನ್ನು ಮನದಣಿಯೆ ನೋಡುವಾಗ, ಮಹಾಸಾಗರದ ಅಲೆಗಳ ನಿನಾದವನ್ನು ಆಲೈಸುವಾಗ, ಪ್ರಕೃತಿಯೇ ದೈವವೆಂದು ಆರಾಧಿಸುವ ದೇಗುಲದ ಶಕ್ತಿ ತರಂಗಗಳನ್ನು ಅನುಭವಿಸುವಾಗ ಉಂಟಾಗುವ ವಿಸ್ಮಿತ ಮೌನ ಮತ್ತು ಈ ಎಲ್ಲ ಚೆಲುವನ್ನು ಹೀರಿಕೊಂಡು ಮನಸ್ಸಿಗೆ ಸಿಗುವ ಧನ್ಯತಾ ಭಾವಕ್ಕೆ ಬೆಲೆ ಕಟ್ಟಲಾಗದು. ಹೀಗೊಂದು ಮನಸ್ಸು ತುಂಬಿ ಬರುವಂತ ರಮಣೀಯ ಅನುಭವವಾಗುವ ಸ್ಥಳ ಬಾಲಿಯ 'ಪುರ ಲುಹುರ್ ಉಲುವಾಟು'.



ದೇವರುಗಳ ದ್ವೀಪ, ಸಹಸ್ರ ದೇವಾಲಯಗಳ ನಾಡು ಎಂದೇ ಪ್ರಸಿದ್ಧವಾಗಿರುವ ಇಂಡೋನೇಷ್ಯಾ ದ ಬಾಲಿ ದ್ವೀಪ, ಕೇವಲ ಒಂದು ಸಾವಿರ ದೇವಾಲಯಗಳ ಸಂಖ್ಯೆಗೆ ಸೀಮಿತವಾದ ನಾಡಲ್ಲ. ಇಲ್ಲಿ ಸುಮಾರು ೨೦,೦೦೦ ಕ್ಕೂ ಮಿಗಿಲಾಗಿ ಸಣ್ಣ-ದೊಡ್ಡ ದೇವಾಲಯಗಳಿರಬಹುದು ಎಂದು ಅಂದಾಜಿಸಲಾಗಿದೆ. ಉಸಿರಾಡುವ ಗಾಳಿ, ಮೆಟ್ಟುವ ಮಣ್ಣು, ಕುಡಿಯುವ ನೀರು, ಬಳಸುವ ಅಗ್ನಿ ಹೀಗೆ ಪ್ರಕೃತಿಯ ಪ್ರತಿಯೊಂದು ಅಂಶಗಳೂ ಕೂಡ ದೇವರ ಶಕ್ತಿಯ ಸ್ವರೂಪಗಳು, ಪೂರ್ವಜರ ಆತ್ಮ, ದೇವರುಗಳ ಅಸ್ತಿತ್ವ ಎಲ್ಲವೂ ಅಡಕವಾಗಿರುವುದು ಪರಮ ದೈವ ಪ್ರಕೃತಿಯಲ್ಲಿಯೇ ಎಂಬ ಬಲವಾದ ನಂಬಿಕೆ ಅನಾದಿ ಕಾಲದಿಂದಲೂ ಇಲ್ಲಿನ ಜನರಲ್ಲಿದೆ. ಪ್ರಪಂಚದಲ್ಲಿ ಒಳ್ಳೇ ಮತ್ತು ಕೆಟ್ಟ  ಶಕ್ತಿ ಎಂಬ ಎರಡು ಬಗೆಯ ಶಕ್ತಿಯು ಇರುತ್ತದೆ; ಮತ್ತದರ ಸಮತೋಲನ ಇದ್ದಾಗಲೇ ಜಗತ್ತಿನ ಶಾಂತಿ ಸಾಧ್ಯ, ಎಂಬ ತತ್ವವನ್ನು ಪಾಲಿಸುತ್ತ ಬರುತ್ತಿರುವ ಬಾಲಿನರು ಅತ್ಯಂತ ಶ್ರದ್ದೆಯಿಂದ ಪೂಜಿಸುವ ಸ್ಥಳ ಮತ್ತು ದೇವಾಲಯಗಳಲ್ಲಿ,  ದೇವತೆಗಳ ಹಾಗೂ ರಾಕ್ಷಸರ ಶಿಲಾಮೂರ್ತಿಗಳನ್ನು ಕಾಣಬಹುದಾಗಿದೆ. ಇಂತಹ ದೈವಿಕ ಪಾವಿತ್ರ್ಯತೆಯನ್ನೊಳಗೊಂಡ, ರಕ್ಷಕ ಸ್ಥಳಗಳು ಎಂದೇ ಹೆಸರಾದ 'sad kahyangan  temples' (ಆರು ಸ್ವರ್ಗಸ್ಥಳಗಳು)  ಪ್ರಮುಖ ಹಿಂದೂ ಪುರಾತನ ಆರು ಶಕ್ತಿ ದೇವಾಲಯಗಳ ಪೈಕಿ, ಸಮುದ್ರ ದೇವತೆಗಳನ್ನು ಪೂಜೆಗೈಯುವ 'ಪುರ ಉಲುವಾಟು' ಕೂಡ ಒಂದು .

ಉಲುವಾಟು  - ಸ್ಥಳ ಇತಿಹಾಸ

 'ಪುರ' ಎಂದರೆ ದೇಗುಲ, 'ಲುಹುರ್' ಎಂದರೆ ದೈವಿಕವಾದ, 'ಉಲು' ಎಂದರೆ ಭೂಮಿಯ ತುದಿ ಮತ್ತು 'ವಾಟು' ಎಂದರೆ ಬಂಡೆ ಎಂಬ ಅರ್ಥವಿರುವ ಈ ದೇವಾಲಯವು ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಂತೆ ಸಮುದ್ರ ಮಟ್ಟಕ್ಕಿಂತಲೂ ೭೦ ಮೀಟರ್ ಎತ್ತರದ ಸುಣ್ಣದ ಕಲ್ಲಿನಿಂದ ನೈಸರ್ಗಿಕವಾಗಿ ಮಾರ್ಪಟ್ಟ ಕಡಿದಾದ ಬಂಡೆಯ ಮೇಲೆ ನಿರ್ಮಾಣಗೊಂಡಿದೆ.

ಪುರಾತತ್ವ ಶಾಸ್ತ್ರಗಳ ಪ್ರಕಾರ ೧೧ ನೇ ಶತಮಾನದಲ್ಲಿ 'ಎಂಪು ಕುಟುರಾನ್' ಎಂಬ ಜಾವಾದ ಸನ್ಯಾಸಿಯೊಬ್ಬರು ತಮ್ಮ ಹಿಂದುತ್ವ ಪ್ರಚಾರ ಉದ್ದೇಶದಿಂದ ಕಟ್ಟಿಸಿದರು ಎಂಬ ಪ್ರಸ್ತಾಪವಿದೆ. ಜಾವಾದ ಇನ್ನೊಬ್ಬ ಸಂತ 'ದಾಂಗ್ ಹ್ಯಾಂಗ್ ನಿರರ್ಥ' ಈ ಸ್ಥಳದ ಸೌಂದರ್ಯಕ್ಕೆ, ಮಹಿಮೆಗೆ ಮನಸೋತು, ಧ್ಯಾನ ಭೋದನೆಗಳನ್ನು ಮಾಡುತ್ತಾ, ಸ್ವಲ್ಪ ಕಾಲದ ನಂತರ ದೇವಾಲಯವೊಂದನ್ನು ನಿರ್ಮಾಣ ಮಾಡಿಸಿದರು ಎನ್ನುತ್ತಾರೆ ಇನ್ನು ಕೆಲವು ಸ್ಥಳೀಯರು. ಸಂತ ನಿರರ್ಥ ಒಂದು ದಿನ ಪ್ರಾರ್ಥನೆಯ ಸಮಯದಲ್ಲಿಯೇ, ಎಲ್ಲರ ಸಮ್ಮುಖದಲ್ಲಿ ಮೋಕ್ಷವನ್ನು ಹೊಂದಿದರು, ಮತ್ತವರ ದೇಹ ನೋಡನೋಡುತ್ತಿದಂತೆಯೇ ಗಾಳಿಯಲ್ಲಿ ಮೇಲೇರಿ, ಮೋಡಗಳ ಮಧ್ಯೆ ಮಿಂಚಿನ ಬೆಳಕಿನಲ್ಲಿ ಎಂಬ ಮರೆಯಾಯಿತು, ಸಂತ ನಿರರ್ಥ ರ ಅನುಯಾಯಿಗಳೇ ಮಂಗಗಳ ರೂಪ ತಾಳಿ, ಸಮುದ್ರದ ದುಷ್ಟ ಶಕ್ತಿ ಗಳಿಂದ ರಕ್ಷಣೆ ನೀಡುತ್ತವೆ ಎಂಬ ಕಥೆ ಅಲ್ಲಿನ ಪ್ರವಾಸೀ ಗೈಡ್ ನಿಂದ ಒಬ್ಬರಿಂದ ಸಿಕ್ಕ ವಿಷಯ ಸಂಗ್ರಹ. ಹಾಗಾಗಿಯೇ ಈ ಸ್ಥಳವನ್ನು ಕೂಡ 'gates of heaven' ಎಂದುಕರೆಯುತ್ತಾರೆ.

ಉಲುವಾಟು ದೇಗುಲ - ಇಲ್ಲಿ ಏನೇನಿದೆ?

ಬೆಳಿಗ್ಗೆ ೯ ರಿಂದ ಸಂಜೆ ೬, ಈ ದೇವಾಲಯಕ್ಕೆ ಭೇಟಿ ನೀಡಬಹುದಾದ ಸಮಯ. ದೇವಾಲಯದ ಆವರಣ ತಲುಪಲು ಸಣ್ಣದೊಂದು ಅರಣ್ಯದ ಮೂಲಕವಾಗಿ ಹಾದು ಹೋಗಬೇಕು. ದೇವರಿಗೆ ಕಾಲನ್ನು ತೋರಿಸುವುದು ಅವಮಾನ ಎಂದು ಪರಿಗಣಿಸುವ ಇಲ್ಲಿನ ನಂಬಿಕೆಗಾಗಿ, ದೇವಾಲಯದ ಪ್ರಾವಿತ್ರತೆಯನ್ನು ಕಾಪಾಡಲು, ಪ್ರತಿಯೊಬ್ಬರೂ ಅಲ್ಲಿ ನೀಡುವ 'ಸಾರೊಂಗ್' ಮತ್ತು 'ಸಾಷ್' ಎಂಬ ಮಡಿ ವಸ್ತ್ರವನ್ನು ದೇಗುಲದ ಹೊರಾಂಗಣದಲ್ಲಿಯೇ ತೊಟ್ಟುಕೊಂಡು ಒಳ ನಡೆಯಬೇಕು. ನೂರಾರು ಮಂಗಗಳು ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಈ ಸ್ಥಳವನ್ನು , ಮಂಗಗಳು ಅತಿಮಾನುಷ ದುಷ್ಟ ಶಕ್ತಿಯಿಂದ ಕಾಪಾಡುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ಮಂಗಗಳಿಗಿಲ್ಲಿ ವಿಶೇಷ ಗೌರವ. ದೇವಾಲಯದ ಆವರಣದ ತಲುಪಿತ್ತಿದ್ದಂತೆಯೇ ಬಲಕ್ಕೆ ಕಾಣಸಿಗುವುದು, ರಾಮಾಯಣದ ಕಥೆಗಳಲ್ಲಿ ಬರುವ ಕುಂಭಕರ್ಣನ ದೊಡ್ಡದಾದ ಶಿಲಾಮೂರ್ತಿ. ಹನುಮಂತ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ವಾನರರು ಹೇಗೆ ಕುಂಭಕರ್ಣ ಎಂಬ ರಕ್ಕಸನನ್ನು ಕಚ್ಚಿ, ಈಟಿಯಿಂದ ಇರಿಯುತ್ತ, ಕಲ್ಲಿನಲ್ಲಿ ಘಾಸಿಗೊಳಿಸುತ್ತ ಯುದ್ಧದ ಸಮಯದಲ್ಲಿ ತಡೆಯಲು, ಸಂಹರಿಸಲು ಪ್ರಯತ್ನಿಸಿದರು ಎಂಬುದನ್ನು ಅತ್ಯಂತ ಸಮರ್ಪಕವಾಗಿ ಶಿಲಾನ್ಯಾಸದ ರೂಪದಲ್ಲಿ ತೋರಿಸಲಾಗಿದೆ.



ದೇಗುಲದ ಇಕ್ಕೆಲಕ್ಕೂ ಆ ವಿಶಾಲ ಬಂಡೆಕಲ್ಲಿಗೆ ಹೊಂದಿಕೊಂಡಂತೆ ತಡೆಗೋಡೆಯನ್ನು ನಿರ್ಮಿಸಿ ಓಡಾಡಲು ಹಾದಿಯನ್ನು, ಅಲ್ಲಲ್ಲಿ ವಿಶ್ರಮಿಸಲು ಕಟ್ಟೆ, ಸೂರ್ಯಾಸ್ತದ ವಿಹಂಗಮ ನೋಟಕ್ಕಾಗಿ ಪನೋರಮಿಕ್ ವೀವ್ ಪಾಯಿಂಟ್ ಗಳನ್ನು ಕೂಡನಿರ್ಮಿಸಲಾಗಿದೆ. ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವೀಕ್ಷಿಸುತ್ತ ನಡೆದರೆ ಸುಮಾರು ಒಂದು ಗಂಟೆಯೇ ಬೇಕಾಗಬಹುದು. ಮೆಟ್ಟಿಲುಗಳ ಹತ್ತಿ ಮೇಲೇರಿದರೆ ಕಾಣುವ ಮುಖ್ಯ ದೇಗುಲದ ಎರಡೂ ಬದಿಗಳಿಗೂ ಆನೆಯ ಮುಖವಿರುವ ಮಾನವ ದೇಹವಿರುವ ಶಿಲಾಮೂರ್ತಿಗಳಿವೆ. ದೇಗುಲದ ಎರಡು ದ್ವಾರಗಳ ಮೇಲೂ ಸುಂದರವಾದ ಹೂವು ಮತ್ತು ಎಳೆಗಳ ಕಲ್ಲಿನ ಕೆತ್ತನೆಯಿದೆ. ಹನುಮಂತನ ಶಿಲಾಮೂರ್ತಿಯನ್ನು ಕೂಡ ಇಲ್ಲಿ ಕಾಣಬಹುದು. ಸಾಮಾನ್ಯವಾಗಿ ಕಾಣಸಿಗದ ರೆಕ್ಕೆಗಳ ಮಾದರಿಯಲ್ಲಿ ಚಾಚಿಕೊಂಡಿರುವ ದೇವಾಲಯದ ಗೇಟುಗಳು ನೋಡಲು ವಿಶಿಷ್ಟವೆನಿಸುತ್ತದೆ. ದೇಗುಲದ ಆವರಣದಲ್ಲಿ ಎತ್ತರಕ್ಕೆ ಚಾಚಿಕೊಂಡಿರುವ ನೈಸರ್ಗಿಕ ವಸ್ತುಗಳಿಂದ ನಿರ್ಮಿತ, ಬಿಳಿ-ಕೆಂಪು ಬಣ್ಣದ ಬಾವುಟಗಳು, ಅಲ್ಲಿನ ಸಂಪ್ರದಾಯಗಳ ಮೆರಗನ್ನು ಹೆಚ್ಚಿಸುತ್ತವೆ. ಮುಖ್ಯ ದೇಗುಲದ ಒಳಾಂಗಣದಲ್ಲಿ ಮಹಾಸಾಗರಕ್ಕೆ ಅಭಿಮುಖವಾಗಿ 'ದಾಂಗ್ ಹ್ಯಾಂಗ್ ನಿರರ್ಥ' ರ ಶಿಲಾಮೂರ್ತಿಯಿದೆ. ವರ್ಷಕ್ಕೆ ಎರಡು ಬಾರಿ ದೇವಾಲಯದ ಮಹೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ. ಆಗ್ಗಾಗ್ಗೆ ವಿಶೇಷ ಪೂಜೆಗಳೂ ಕೂಡ ನಡೆಯುವುದರಿಂದ ಅಂತಹ ಸಮಯದಲ್ಲಿ ಈ ದೇವಾಲಯಕ್ಕೆ ಪ್ರವೇಶವಿರುವುದಿಲ್ಲ.






ದೇಗುಲದ ಹೊರಗಡೆ  ಬಣ್ಣಬಣ್ಣದ ಬೋಗನವಿಲ್ಲ ಮತ್ತು ವೈವಿಧ್ಯಮಯ ದೇವಕಣಗಿಲು ಹೂವಿನ ಗಿಡಗಳನ್ನು ಬೆಳೆಸಿರುವುದರಿಂದ ಈ  ಸಂಪೂರ್ಣ ಸ್ಥಳವು ಅತ್ಯಂತ ಆಕರ್ಷಣೀಯವೆನಿಸುತ್ತದೆ. ಆಗಸ, ಭೂಮಿ, ಸಾಗರ ಒಂದೆಡೆ ಅನಾವರಣ ಗೊಳ್ಳುವ ಈ ಸ್ಥಳದ ಸೌಂದರ್ಯವನ್ನು ಆಹ್ಲಾದಿಸುವುದೇ ಒಂದು ಸೊಗಸು.  ದ್ವೀಪದ ಕೊನೆಯಾದ್ದರಿಂದ ಸೂರ್ಯಾಸ್ತವು ಅತ್ಯಂತ ಸ್ಪಷ್ಟ ಮತ್ತು ವಿಶಾಲ ಕೋನದಲ್ಲಿ ನೋಡಲು ಸಿಗುತ್ತದೆ.  ಛಾಯಾಗ್ರಹಣ ಆಸಕ್ತರಿಗಂತೂ ಹೊತ್ತು ಸರಿದಂತೆಯೂ ಕ್ಷಣ ಕ್ಷಣಕ್ಕೂ ಬದಲಾಯಿಸುವ ಆಗಸದ ಬಣ್ಣ, ನೊರೆಹಾಲ ಅಲೆಗಳು, ನೀಲಿ ಸಮುದ್ರ ಹೀಗೆ ಸೀನರಿ ಚಿತ್ರ ಹಿಡಿಯುವುದೇ ಒಂದು ಹಬ್ಬ.ನಿರಂತರ ಅಲೆಗಳ ಅಪ್ಪಳಿಸುವಿಕೆಯಿಂದ ಕ್ಲಿಫ್ ಎರೋಷನ್ (ಬಂಡೆಯ ಸವಕಳಿ) ಆಗುತ್ತಿದ್ದರೂ, ಅತ್ಯಂತ ಮಂದ ಗತಿಯಲ್ಲಿ ಇರುವುದರಿಂದ, ಈ ಗಡಸು ಬಂಡೆಯ ಧ್ರಡತೆ ನಿಸರ್ಗದ ವಿಸ್ಮಯವನ್ನು ಎತ್ತಿ ಹಿಡಿಯುತ್ತದೆ.

ಕೆಚಕ್ ನೃತ್ಯ

ಇಲ್ಲಿನ ಮತ್ತೊಂದು ಮುಖ್ಯ ಆಕರ್ಷಣೆಯೆಂದರೆ, 'ಕೆಚಕ್' ವೆಂಬ ಸಾಂಪ್ರದಾಯಿಕ ಜಾನಪದ ಬಾಲಿನರ ನೃತ್ಯ ಪ್ರದರ್ಶನ. ಪ್ರವಾಸೋದ್ಯಮದ ಉದ್ದೇಶದಿಂದ ಸಂಜೆ ೬ ರಿಂದ ೭ ಗಂಟೆಯವರೆಗೆ ಉಲುವಾಟು ದೇಗುಲದ ಓಪನ್ ಸ್ಟೇಜ್ ಒಂದರಲ್ಲಿ ನಡೆಸಲಾಗುತ್ತದೆ. ಅತ್ಯಂತ ವಿಶಿಷ್ಟವಾದ ಈ ಪ್ರದರ್ಶನ ಕ್ಕೆ 'ಮಂಕಿ ಚಾಂಟ್ ಡಾನ್ಸ್' ಎಂದೂ ಕೂಡ ಕರೆಯುತ್ತಾರೆ. ಸೂರ್ಯಾಸ್ತದ ನಂತರದ ಮುಸುಕು ಮಬ್ಬಿನಲಿ ಈ ನೃತ್ಯ ಇನ್ನಷ್ಟು ಸೊಗಸಾಗಿ ರಂಜಿಸುತ್ತದೆ. ೭೫ ಪುರುಷ ಪ್ರಾತ್ರಧಾರಿಗಳು ವಿಶೇಷ ರೀತಿಯ ವಸ್ತ್ರವನ್ನು ತೊಟ್ಟುಕೊಂಡು, ರಾಮನ ವನವಾಸ, ಸೀತೆಯ ಅಪಹರಣ, ಹನುಮಂತನೊಡಗೂಡಿ ವಾನರರ ಸಹಕಾರ,ರಾವಣನ ಸಂಹಾರ ಮತ್ತು ಕೊನೆಯಲ್ಲಿ ರಾಮ ಸೀತೆಯರ ಒಂದುಗೂಡುವಿಕೆಯ ವರೆಗಿನ ರಾಮಾಯಣದ ಹಲವು ಕಥಾಹಂದರವನ್ನು ಅತ್ಯಂತ ಮನೋಜ್ಞವಾಗಿ ತಮ್ಮ ನೃತ್ಯದ ಮೂಲಕ ತೋರ್ಪಡಿಸುತ್ತಾರೆ. ಹಿನ್ನಲೆ ಸಂಗೀತ ಇಂಪಿನ ಜೊತೆಯಲ್ಲಿ 'ಕೆಚಕ್' ಎಂಬ ವಿಭಿನ್ನ ರೀತಿಯ ಧ್ವನಿ ಲಯಗಳನ್ನು ಹೊರಡಿಸಿ, ಮಾಡುವ ನೃತ್ಯ ವಿಶೇಷವೆನಿಸುತ್ತದೆ.


ವಿಶೇಷ ಮಾಹಿತಿ

ಉಲುವಾಟು ಬಾಲಿ ದ್ವೀಪದ ಕುಟ ಜಿಲ್ಲೆಯ ಪೆಕಾಟು ಗ್ರಾಮದಲ್ಲಿರುವ ಈ ದೇವಾಲಯ ಕೂಟದಿಂದ ದಕ್ಷಿಣಕ್ಕೆ ಸುಮಾರು ೨೫ ಕಿ.ಮೀ ದೂರದಲ್ಲಿದೆ. ಸಾರ್ವಜನಿಕ ವಾಹನಗಳು ಲಭ್ಯವಿಲ್ಲದ ಕಾರಣ, ಪ್ರವಾಸಿಗರು ಸತಃ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಬೇಕು. ಟ್ಯಾಕ್ಸಿಗಳು, ಒಂದು ದಿನದ ಮಟ್ಟಿಗೆ ಬಾಡಿಗೆ ಸ್ಕೂಟರ್ಗಳು ಕುಟ ಸಿಟಿ ಇಂದ ಪಡೆಯಬಹುದಾಗಿದೆ.

ಬೆಳಿಗ್ಗೆ ೯ ರಿಂದ ಸಂಜೆ ೬ ವರೆಗೆ ಭೇಟಿಯ ಸಮಯವಾದರೂ, ಇಲ್ಲಿನ ಸೂರ್ಯಾಸ್ತ ಅತ್ಯಂತ ರಮಣೀಯವಾಗಿರುವುದರಿಂದ, ಮಧ್ಯಾಹ್ನದ ನಂತರದ ಸಮಯ ಭೇಟಿಗೆ ಸೂಕ್ತ.

ವಾನರ ರಕ್ಷಕರೆಂಬ ಪ್ರಾಧಾನ್ಯತೆಯಿರುವ ಈ ಸ್ಥಳದಲ್ಲಿ ಮಂಗಗಳು ಸಾಕಷ್ಟಿರುವುದರಿಂದ ಕೆಲವೊಮ್ಮೆ ಅವುಗಳ ಕಾಟವೂ ಅಷ್ಟೇ ಸಮಸ್ಯೆಯಾಗುತ್ತದೆ. ಕನ್ನಡಕ, ಕ್ಯಾಮೆರಾ, ಮೊಬೈಲ್, ಹ್ಯಾಟ್, ತಿಂಡಿ ಪಟ್ಟಣಗಳು ಹೀಗೆ ಅನೇಕ ವಸ್ತುಗಳನ್ನು ಎರಗಿ ಎಳೆದುಕೊಳ್ಳುವಲ್ಲಿ ಇಲ್ಲಿನ ಮಂಗಗಳು ಪ್ರಸಿದ್ಧವಾದುದರಿಂದ, ಸ್ವಲ್ಪ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಾದ ಅವಶ್ಯಕತೆಯಿದೆ.


(ಈ ವಾರದ ೮/೧೨/೨೦೧೮ ರ ವಿಶ್ವವಾಣಿಯ ಯಾತ್ರಾ ಪುರವಣಿಯಲ್ಲಿ ಪ್ರಕಟಿತ)








ಮಂಗಳವಾರ, ನವೆಂಬರ್ 13, 2018

ವಿಶ್ವ ಪರಿಸರ ದಿನ

ಪ್ರತಿವರ್ಷ ಜೂನ್ ೫ ರಂದು 'ವಿಶ್ವ ಪರಿಸರ ದಿನ' ವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಪರಿಸರದ ಮಹತ್ವ, ಮತ್ತದರ ರಕ್ಷಣೆಯ ಕುರಿತಾಗಿ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಲು ಆಚರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಸೋಶಿಯಲ್ ಸೈಟ್ ಅಂದು ಹಸಿರು ಮಯವಾಗಿತ್ತು!! ಹಲವರು ಹಸಿರು ಗಿಡ, ಮರ, ಪ್ರಾಣಿ, ಪಕ್ಷಿ, ನದಿ, ನೀರು, ಬೆಟ್ಟಗಳ ಫೋಟೋಸ್ ಹಾಕಿದ್ದರೆ, ಮತ್ತು ಕೆಲವರು ಶುಭಾಶಯಗಳೊಂದಿಗೆ ಮೆಸ್ಸೇಜಸ್ಗಳನ್ನು ತಿಳಿಸಿದ್ದರು. ಇನ್ನು ಕೆಲವರು ಪರಿಸರ ದಿನಾಚರಣೆಯ ಸಲುವಾಗಿ ತಾವು ತೆಗೆದುಕೊಂಡ ಕ್ರಮ, ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮದ ಕುರಿತಾಗಿ ವರದಿ ನೀಡಿದ್ದು ಸಾಕಷ್ಟು ಸಂತಸ ತಂದಿತು. ಆದರೆ ನಾವು ಮಾತಲ್ಲಿ ಹೇಳುವಷ್ಟು, 'ಪ್ರಾಯೋಗಿಕವಾಗಿ' 'ನಮ್ಮ ಪರಿಸರ' ದ ಕುರಿತು ನಮ್ಮ ಆರೈಕೆ ಇದೆಯೇ?

ಈಗ ನನ್ನದೇ ಒಂದು ಉದಾಹರಣೆ; ಮನೆ ಮಾಡುವಾಗ ಇಂಗು ಗುಂಡಿ, ಸೋಲಾರ್ ಬಳಕೆ ಇತ್ಯಾದಿ ನಮ್ಮ ಮನೆಯಲ್ಲಿ ಅಳವಡಿಕೆಯಾಯಿತಾದರೂ, ಬಹುಶ ಸರ್ಕಾರ ಕಡ್ಡಾಯಗೊಳಿಸುತ್ತಿದೆ ಎಂಬ ಉದ್ದೇಶದಿಂದ ಅಷ್ಟು ತಕ್ಷಣಕ್ಕೆ ಸಾಧ್ಯವಾಯಿತೇನೋ..ತಕ್ಕ ಮಟ್ಟಿಗೆ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛತೆ ಎಲ್ಲದರ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬಾಲ್ಕನಿಯಲ್ಲಿ ಇರುವಷ್ಟು ಜಾಗದಲ್ಲಿ ಪುಟ್ಟ ಪುಟ್ಟ ಹಸಿರು ಗಿಡಗಳಿವೆ. ನೀರು, ಬೆಳಕು ಇತ್ಯಾದಿ ಸಂಪನ್ಮೂಲಗಳ ದುಂದು ಬಳಕೆಯಿಲ್ಲ. ಸಾಧ್ಯವಾದಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆಯಿದೆ. ಕಾಡು, ನೀರು ಪ್ರಾಣಿ ಪಕ್ಷಿಗಳ ಕುರಿತು ಪ್ರೀತಿ ಬರಲೆಂದೇ ರಜೆಯಲ್ಲಿ ಮಗಳಿಗೆ ಹೆಚ್ಚೆಚ್ಚು ನಿಸರ್ಗಕ್ಕೆ ಒಡ್ಡುವ ಕ್ರಮವಿದೆ. ಮಾಲಿನ್ಯಗಳ ಕುರಿತಾಗಿ ಮನೆಯಲ್ಲಿ ಕಲಿಕೆಯಿದೆ. ಆದರೂ ಟಿ.ವಿ ಯಲ್ಲಿ, ಪತ್ರಿಕೆಗಳಲ್ಲಿ ಕೆಲವರ ಪರಿಸರದ ಕಾಳಜಿ, ಪ್ರೀತಿ, ಕೊಡುಗೆ ಕಂಡು ಕೇಳಿದಾಗ ನಮ್ಮ ಕೊಡುಗೆ ಇನ್ನೂ ಅಲ್ಪವೇ ಎಂದು ಬೇಜಾರಾಗಿದ್ದೂ ಹೌದು. ನಿತ್ಯ ಬಳಸುವ ವಸ್ತುವಿನಷ್ಟು ವಾಪಸ್ ಕೊಡುಗೆ ನಿಸರ್ಗಕ್ಕೆ ನಮ್ಮದಿಲ್ಲ, ಬಳಸಿದಷ್ಟು ಪೇಪರ್ ಗೆ ಕಾಡು ಬೆಳೆಸಿಕೊಟ್ಟಿಲ್ಲ ನಾವು. ಬಳಸಿದಷ್ಟು ನೀರಿಗೆ ಮತ್ತದೇ ಪ್ರಮಾಣದಲ್ಲಿ ಅಂತರ್ಜಲ ಹೆಚ್ಚಿಸಿಲ್ಲ, ಮಾಲಿನ್ಯದ ಪ್ರಮಾಣಕ್ಕೆ ಅದೆಷ್ಟು ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗಿದೆಯೋ ಎಂದೆಲ್ಲ ಎನಿಸಿದ್ದುಂಟು. ಈ ಬಾರಿಯ 'ಪರಿಸರದ ದಿನಾಚರಣೆ' ಯ ಪರಿಸರ ರಕ್ಷಣೆಯ ಮುಖ್ಯ ಗುರಿ 'ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆಗೊಳಿಸುವುದು'. ಖಂಡಿತವಾಗಿಯೂ ನಾವು ಎಲ್ಲ ಜನಸಾಮಾನ್ಯರಿಂದ ಪರಿಸರಕ್ಕೆ ಕೊಡಬಹುದಾದ ದೊಡ್ಡ ಕೊಡುಗೆಯಿದು.ನಮ್ಮ ಕೈಲಾದಷ್ಟು 'ಕಡಿಮೆ ಪ್ಲಾಸ್ಟಿಕ್ ಬಳಕೆ' ಮತ್ತು 'ಮರುಬಳಕೆ' ಇವೆರಡು ಮಾಡಿದರೆ ಸಾಕು. ಒಂದಷ್ಟು ನಾನು ಅಳವಡಿಸಿಕೊಂಡಿರುವ 'ಪ್ರಾಯೋಗಿಕ' ವಾಗಿ ನಾವು ಮಾಡಬಹುದಾದ ಕ್ರಮಗಳನ್ನು ಪಟ್ಟಿ ಮಾಡಿಟ್ಟಿದ್ದೇನೆ. ಸಮಂಜಸವೆನಿಸಿ ಅಳವಡಿಸಿಕೊಂಡರೆ ಅದೇ ಸಂತೋಷ.

೧. ಮನೆಯ ಸ್ವಚ್ಛತೆಯಷ್ಟೇ, ರಸ್ತೆಯ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಅತೀ ಮುಖ್ಯ, ಚಾಕೋಲೇಟ್ ರ್ಯಾಪರ್, ಬಿಸ್ಕತ್ ಪೊಟ್ಟಣ ಇತ್ಯಾದಿ ಯಾವುದೇ ತಿಂಡಿ ತಿಂದಾದ ಮೇಲೂ ಪ್ಲಾಸ್ಟಿಕ್ ಕೊಟ್ಟೆ ನೆಲಕ್ಕೆ ಬಿಡುವುದು ಬೇಡ, ಬ್ಯಾಗಿನಲ್ಲಿ ಹಾಕಿಕೊಂಡು ಮನೆಗೆ ಬಂದ ಮೇಲೆ ಅಥವಾ ಹತ್ತಿರದಲ್ಲೆಲ್ಲಾದರೂ ಕಸದ ಬುಟ್ಟಿ ಸಿಕ್ಕಾಗ ವಿಲೇ ಮಾಡೋಣ. ಹಾಗೆ ನೆಲಕ್ಕೆ ಹಾಕುವವರ ಕಂಡಾಗ ಮುಲಾಜಿಲ್ಲದೆ (ವಿನಮ್ರವಾಗಿ) ತೆಗೆದು ಕಸದ ಬುಟ್ಟಿಗೆ ಹಾಕಲು 'ಒತ್ತಾಯಿಸಿ'.

೨. ಪ್ಲಾಸ್ಟಿಕ್ ಚೀಲ ಬಳಕೆ ಒಟ್ಟಾರೆ ಕಡಿಮೆಯಾಗಬೇಕು. ಆದಷ್ಟು ಸೆಣಬು, ಬಟ್ಟೆ ಚೀಲವನ್ನು ತೆಗೆದುಕೊಳ್ಳಿ, ಒಮ್ಮೊಮ್ಮೆಎಲ್ಲ ವಸ್ತುಗಳನ್ನು ಬಟ್ಟೆ ಚೀಲದಲ್ಲಿ ಇಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ 'ಪ್ಲಾಸ್ಟಿಕ್ ಮರುಬಳಕೆ' ಸಹಾಯಕೆ ಬರುತ್ತದೆ. ಉತ್ತಮ ಕ್ವಾಲಿಟಿಯ ಒಂದೆರಡು ಕವರ್ ಗಳನ್ನು ಬೇಕಾದಾಗ ಬಳಸಿ ನಂತರದಲ್ಲಿ ತೊಳೆದು ಪುನ್ಹ ಬಳಸಿ, ಒಟ್ಟಾರೆಯಾಗಿ ಹೆಚ್ಚಿನ ಪ್ಲಾಸ್ಟಿಕ್ ಕವರ್ ಕಸ ನಮ್ಮ ಮನೆಯಿಂದ ಹೊರಹೋಗಬಾರದು.

೩. ಎಲ್ಲೇ ಹೊರಗಡೆ ಹೋಗುವಾಗಲೂ ಕೈಯಲ್ಲಿ ಅಥವಾ ಗಾಡಿಯಲ್ಲಿ ಒಂದೆರಡು ಚೀಲವನ್ನು ಇರಿಸಿಕೊಂಡಿರಿ, ಉದ್ದೇಶವಿಲ್ಲದೇ ಏನಾದರೂ ಕೊಂಡುಕೊಂಡಾಗ ತುಂಬಿ ತರಲು, ಮತ್ತೆ ಪ್ಲಾಸ್ಟಿಕ್ ಚೀಲ ಕೇಳದಿರೋಣ.

೪. ಒಮ್ಮೊಮ್ಮೆ ಮನೆಯಲ್ಲಿ ತಿಂಡಿ ಮಾಡಲು ಬೇಜಾರಾದಾಗ ಹೋಟೆಲ್ ನಿಂದ ತಿಂಡಿ ತಂದು ತಿನ್ನುವುದು ಸಹಜ. ತಿಂಡಿ ತರಲು ಬೇಕಾದ ಪ್ರಮಾಣದ ಡಬ್ಬಿಯನ್ನು ಮನೆಯಿಂದಲೇ ಕೊಂಡೊಯ್ದರೆ, ಕವರ್ ಚೀಲದ ಜೊತೆಗೆ, ಪಾರ್ಸೆಲ್ ಕಟ್ಟಲು ಬಳಸುವ ಕವರ್ ಪೀಸ್ ಗಳ ತ್ಯಾಜ್ಯ ನಮ್ಮ ಬುಟ್ಟಿ ಸೇರುವುದಿಲ್ಲ.

೪. ಜೂಸ್ ಎಳನೀರು ಇತ್ಯಾದಿ ಕುಡಿಯಲು ಬಳಸುವ ಪ್ಲಾಸ್ಟಿಕ್ ಕೊಳವೆಯೂ ಬೇಡ. ನೇರ ಬಾಯಿ ಹಾಕಿ ಎಳನೀರ ಪರಿಮಳ ಆಹ್ವಾದಿಸುತ್ತಾ ಕುಡಿಯಲು ಎಷ್ಟು ಮಜಾ ಗೊತ್ತಾ??

೫. ಅಡುಗೆ ಮನೆಯಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ಡಬ್ಬಿಗಳ ಬಳಕೆ ಕಡಿಮೆ ಮಾಡೋಣ. ನಾವು ಕೊಂಡು ತರುವ ಸಾಕಷ್ಟು ವಸ್ತುಗಳು ಗಾಜಿನ ಡಬ್ಬಿಗಳಲ್ಲಿ, ಬಾಟಲುಗಳಲ್ಲಿ ದೊರೆಯುತ್ತದೆ. ಕಾಳುಕಡಿ ಸಾಂಬಾರು ಪದಾರ್ಥಗಳನ್ನು ಈ ರೀತಿಯ ಬಾಟಲಿಯಲ್ಲಿ ಹಾಕಿಟ್ಟರೆ ಹೆಚ್ಚು ದಿನ ಬಾಳಿಕೆಯೂ ಬರುತ್ತದೆ. ಪ್ಲಾಸ್ಟಿಕ್ ಡಬ್ಬಿ ತರುವುದೂ ತಪ್ಪುತ್ತದೆ.

೬. ಸಾಧ್ಯವಾದಷ್ಟು ಪ್ಲಾಸ್ಟಿಕ್ ನೀರಿನ ಬಾಟಲಿ ಖರೀದಿ ಕಡಿಮೆಗೊಳಿಸಿ. ಮದುವೆ ಇನ್ನಿತರ ಸಮಾರಂಭಗಳಲ್ಲಿ ಊಟದ ಸಮಯಕ್ಕೆ ನೀರು ಕುಡಿಯಲು ಬಿಸ್ಲೇರಿ ಬಾಟಲುಗಳನ್ನು ನೀಡುವುದು ಈಗಿನ ವಾಡಿಕೆ. ಹಾಗೆ ಸಿಕ್ಕಿದ ಬಾಟಲಿಯನ್ನು ಅಲ್ಲೇ ಎಸೆಯದೆ ತಂದು, ಮತ್ತೆ ಎಲ್ಲಿಯಾದರೂ ಪ್ರಯಾಣ ಬೆಳೆಸುವಾಗ ಹೆಚ್ಚಿನ ನೀರನ್ನು ಶೇಖರಿಸಿಟ್ಟುಕೊಳ್ಳಲು ಬಳಸಿ. ಹೋದ ಸ್ಥಳದಲ್ಲಿ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯ ವನ್ನು ದುಡ್ಡು ಕೊಟ್ಟು ಕೊಳ್ಳುವುದು ತಪ್ಪುತ್ತದೆ. ಜೊತೆಗೆ ಮನೆಯ ನೀರು ಕುಡಿಯಲು ಉತ್ತಮವಲ್ವೇ?

೭. ಹೆಚ್ಚೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಬರುವುದು ಮಕ್ಕಳ ಬಳಕೆಯ ವಸ್ತುಗಳಿಂದ. ಮಕ್ಕಳು ತಿಳಿದುಕೊಳ್ಳುವಷ್ಟು ವಯಸ್ಕರರಿದ್ದರೆ, ಅವರ ನಿತ್ಯ ಬಳಕೆಯ ವಸ್ತುಗಳನ್ನು ಪ್ಲಾಸ್ಟಿಕ್ ನಿಂದ ಇತರ ಮಾರ್ಪಾಡು ವಸ್ತುವಿಗೆ ಬದಲಾಯಿಸಿ ಮತ್ತು ಮಕ್ಕಳಿಗೆ ಸ್ಟೀಲ್, ಗಾಜು, ಪಿಂಗಾಣಿ ವಸ್ತುಗಳ ಬಳಕೆಯ ಕಲೆಯನ್ನು ಕಲಿಸಿಕೊಡಿ.

೮. ಆಹಾರ ಪದಾರ್ಥಗಳನ್ನು ಒಟ್ಟಿಗೇ ಹೆಚ್ಚೆಚ್ಚು ತಂದಿಡಲು ಸಾಧ್ಯವಿಲ್ಲ. ಆದರೆ ಕೆಲವು ಮನೆಬಳಕೆಯ ವಸ್ತುಗಳು ಉದಾಹರಣೆಗೆ, ಸೋಪಿನ ಪೌಡರ್, ಟಾಯ್ಲೆಟ್ ಕ್ಲೀನಿಂಗ್ ವಸ್ತುಗಳನ್ನು ಕೊಂಡು ತರುವಾಗ ಒಂದೇ ಸರ್ತಿ ಜಾಸ್ತಿ ಪ್ರಮಾಣದಲ್ಲಿ ಕೊಂಡರೆ, ಚಿಕ್ಕ ಚಿಕ್ಕ ಪ್ಯಾಕೆಟ್ ಗಳಲ್ಲಿ ಪದೇ ಪದೇ ತಂದು ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುವರಿ ಮಾಡುವುದು ತಪ್ಪುತ್ತದೆ.

೯. ಮಕ್ಕಳ ಬರ್ತ್ಡೇ ಇನ್ನಿತರ ಕಾರ್ಯಕ್ರಮದಲ್ಲಿ ಮಕ್ಕಳ ಫ್ರೆಂಡ್ಸ್ ಗೆ ರಿಟರ್ನ್ ಗಿಫ್ಟ್ ಕೊಡುವ ರೂಡಿ ಇಲ್ಲಿ ನಗರ ಪ್ರದೇಶಗಳಲ್ಲಿವೆ. ಆದಷ್ಟು ಮಕ್ಕಳಿಗೆ ಪ್ಲಾಸ್ಟಿಕ್ ಐಟಂ ಗಿಫ್ಟ್ ಕೊಡದೆ ಇರೋಣ. ಜೊತೆಗೆ ಮುಖ್ಯವಾಗಿ, ಗಿಫ್ಟ್ ಗಳನ್ನೂ ಹಾಕಿಕೊಡಲು ಮತ್ತೆ ಪ್ಲಾಸ್ಟಿಕ್ ಕೊಟ್ಟೆಯ ಬಳಕೆ! ಮನೆಯಲ್ಲಿ ನ್ಯೂಸ್ ಪೇಪರ್ ಇದ್ದರೆ, ಅದನ್ನು ಮಡಚಿ ಪೇಪರ್ ಬ್ಯಾಗ್ ಮಾದರಿಯಲ್ಲಿ ಅಂಟಿಸಿ ಅಥವಾ ಸ್ಟೇಪ್ಲರ್ ಪಿನ್ ಹಾಕಿ ಲಗತ್ತಿಸಿ ಪೇಪರ್ ಕೊಟ್ಟೆ ಮಾಡಿ ಗಿಫ್ಟ್ ಹಾಕಿ ಕೊಡಿ ಮತ್ತು 'ಹೆಮ್ಮೆ'ಯಿಂದ ಹೇಳಿಕೊಳ್ಳಿ ನಿಮ್ಮ 'ಪ್ಲಾಸ್ಟಿಕ್ ತ್ಯಾಜ್ಯ ಕಡಿತ' ದ ಅಭಿಯಾನದ ಕುರಿತಾಗಿ..

ಇದಿಷ್ಟನ್ನು ಬಿಟ್ಟು, ಇನ್ನೂ ಎಲ್ಲೆಲ್ಲಿ ಯಾವ ಬಗೆಗಳಲ್ಲಿ ಪ್ಲಾಸ್ಟಿಕ್ ಕಡಿಮೆಗೊಳಿಸಬಹುದು ಎಂಬುದಕ್ಕೆ 'ಪ್ರಾಕ್ಟಿಕಲ್' ಸಲಹೆಗಳಿದ್ದರೆ ಪರಸ್ಪರ ಹಂಚಿಕೊಳ್ಳಿ, ಸಹಕರಿಸಿ. ಪರಿಸರ ಸಂರಕ್ಷಣೆಗೆ, ಮಾಲಿನ್ಯ ತಡೆಗೆಂದು ದೊಡ್ಡ ದೊಡ್ಡ ಕಾನ್ಫೆರೆನ್ಸ್ ಗೆ ಹೋಗುವ ಅಗತ್ಯವಿಲ್ಲ, ಬೀದಿಗಿಳಿದು ಒಂದು ದಿನದ ಬೋರ್ಡ್ ಹಿಡಿದು ರಕ್ಷಣೆಯ ಕುರಿತಾಗಿ ಕೂಗಿ ಬರಬೇಕಿಲ್ಲಅಥವಾ ದೊಡ್ಡ ತ್ಯಾಜ್ಯಗಳೆಲ್ಲ ಕೈಗಾರಿಕೆ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದ್ದು, ನಮ್ಮಿಂದ ಏನು ಸಾಧ್ಯ ಎಂದು ಕೈಚೆಲ್ಲಿ ಕೂರಬೇಕಾಗಿಲ್ಲ. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿಯೇ ನಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ. ನಾವು ಜನಸಾಮಾನ್ಯರಿಂದಲೇ ಅಸಾಮಾನ್ಯ ಕೊಡುಗೆ ಖಂಡಿತವಾಗಿಯೂ ಸಾಧ್ಯವಿದೆ. ಇಂದು ನಾವು ನೋಡುತ್ತಿರುವ ಸುಂದರ ಪರಿಸರ, ಹಸಿರು, ಹೂವು-ಹಕ್ಕಿ ಎಲ್ಲವೂ ಮುಂದೆ ನಮ್ಮದೇ ಮಕ್ಕಳ ಭಾಗವಾಗಿಯೂ ಇರಬೇಕಲ್ಲವೇ? ಹಾಗಾದರೆ ಬನ್ನಿ, ಸ್ವಲ್ಪ ಪ್ರಯತ್ನ ಮಾಡೋಣ.. ಎಲ್ಲರಿಗೂ 'ವಿಶ್ವ ಪರಿಸರ ದಿನದ ಶುಭಾಶಯಗಳು' ಕೇವಲ ಒಂದು ದಿನದ ಮಟ್ಟಿಗಲ್ಲ, ದಿನನಿತ್ಯಕ್ಕೂ.. 

 ನನ್ನ ಮನೆಯಲ್ಲಿಅಳವಡಿಸಿಕೊಂಡಿರುವ, ನನಗೆ ಸಧ್ಯಕ್ಕೆ ನೆನಪಾಗಿದ್ದಷ್ಟು ಟಿಪ್ಸ್ ನಿಮ್ಮ ಮುಂದಿಟ್ಟಿದ್ದೇನೆ. ಇನ್ನೂ ಸಾಕಷ್ಟು ಸುಧಾರಣೆಯಾಗಬೇಕಿದೆ. 

ನಾವು ಮತ್ತು ಮಕ್ಕಳ 'ಫೆವಿಕಾಲ್ ಬಾಂಡಿಂಗ್'

ಇದೊಂದು ಘಟನೆ ನೆನಪಿದೆ ನನಗೆ. ಆ ದಿನ ಸಂಜೆ, ಎಡಬಿಡದೆ ತೊಂದರೆ ಕೊಡುತ್ತಿದ್ದ ಶೀತಕ್ಕೆ ಸುಸ್ತಾಗಿ ಮಲಗಿದ್ದೆ. ಒಬ್ಬಳೇ ಆಟವಾಡಿಕೋ ಎಂಬ ಉತ್ತರ ಪದೇ ಪದೇ ಸಿಗುತ್ತ್ತಿದ್ದ ಕಾರಣಕ್ಕೋ ಅಥವಾ ಅಮ್ಮನ ಅವಸ್ಥೆ ನೋಡಿ ಕರುಣೆ ಬಂದೋ, "ಅಮ್ಮ ನಾನು ನಿಂಗೆ ಥಂಡಿ ಹೋಗಕ್ಕೆ ಹೆಲ್ಪ್ ಮಾಡ್ತಿ" ಎಂದಳು ಮಗಳು. "ಸರಿ, ಏನು ಮಾಡ್ತ್ಯಪ..?" ಎಂಬ ಪ್ರಶ್ನೆಗೆ "ನಾನು ಬಿಶಿನೀರ್ ಮಾಡ್ಕೊಡ್ತಿ.." ಎಂದು ಧೈರ್ಯವಾಗಿ ಉತ್ತರಿಸಿದಳು. ಮೂರಡಿಯೂ ಇಲ್ಲದ ಕೂಸಿಗೆ ಅಡುಗೆ ಮನೆಯ ಕಟ್ಟೆ ಕೂಡ ಎಟುಕದ ಸತ್ಯ ನನಗೆ ತಿಳಿದಿದ್ದರಿಂದ ಏನು ಮಾಡುತ್ತಾಳೆ ಎಂಬ ಸಹಜ ಕುತೂಹಲ ನನ್ನಲ್ಲೂ ಇತ್ತು. ಮಗಳು ಅಡುಗೆ ಮನೆಗೆ ಹೋಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ, "ಅಮ್ಮ, ಓವನ್ ಲೈಟ್ ಹಚ್ಕೊಡು ಬಾ.." ಎಂದು ಕೂಗಿ ಕರೆದಳು. ತಲೆನೋವಿನಿಂದ ತಲೆ ಒಂದೇ ಸಮನೆ ಸಿಡಿಯುತ್ತಿತ್ತು. ಶಬ್ದ, ಪ್ರಖರ ಬೆಳಕು, ದೈಹಿಕ ಶ್ರಮ ಯಾವುದೂ ಸಹ್ಯವಿರಲಿಲ್ಲ..ಅನಿವಾರ್ಯ, ಎದ್ದು ಹೋಗಿ ಮೈಕ್ರೋ ಓವನ್ ಆನ್ ಮಾಡಿಕೊಟ್ಟೆ. ನನ್ನ ಪಿಂಗಾಣಿಯ ಟೀ ಕಪ್ಪನ್ನು ಹುಡುಕಿ ಕೈಯಲ್ಲಿ ಹಿಡಿದುಕೊಂಡು ರೆಡಿ ನಿಂತಿದ್ದಳು ಮಗಳು. "ಅಮ್ಮ, ನೀರು ಹಿಡ್ಕೋಡ್ತ್ಯ ಪ್ಲೀಸ್..' ಎಂಬ ಮತ್ತೊಂದು ಕೋರಿಕೆ. ನೀರಿನ ಜಗ್ಗಿನಲ್ಲಿ ನೀರು ಖಾಲಿಯಾದ್ದಕ್ಕಾಗಿ, ಅವಳಿಗೆ ಕೈಗೆಟುಕದ ಎತ್ತರದ ಫಿಲ್ಟರ್ ನಿಂದ ನೀರು ತೆಗೆಯಲು ನನ್ನ ಸಹಾಯ ಬೇಕಿತ್ತು. ಮಗ್ ಗೆ ನೀರು ತುಂಬಿಕೊಂಡು ನೀರನ್ನು ಎಲೆಕ್ಟ್ರಿಕ್ ಓವನ್ ನಲ್ಲಿ ಇಟ್ಟು ಬಿಸಿ ಮಾಡುವಷ್ಟು ಹೊತ್ತು ಮಾರ್ಗದರ್ಶನಕ್ಕೆ ನಾನು ಜೊತೆಯಲ್ಲೇ ನಿಂತಿದ್ದೆ. ಬಿಸಿನೀರ ಮಗ್ಗನ್ನು ಕೈಯಲ್ಲಿ ಹಿಡಿಕೊಳ್ಳಲು ನಾನು ಮುಂದಾದಾಗ, ಇವಳು ನನಗೆ ಅದನ್ನು ಕೊಡದೆ, "ಅಮ್ಮ ನೀ ಹೋಗಿ ಮಲ್ಗಿರು, ನಾನೇ ಬಿಸಿನೀರ್ ಕೊಡ್ತಿ.." ಎಂದಳು. ನಾವು ದೊಡ್ಡವರು ಹೇಗೆ ಕಾಳಜಿ ಮಾಡುತ್ತೇವೋ ಅದೇ ರೀತಿ ಮಾಡಲು ಹವಣಿಸುತ್ತಾ ತನ್ನ ಅವಲಂಭಿತ ಸಹಾಯವನ್ನು, ಸ್ವಾವಲಂಭಿತ ಸಹಾಯವನ್ನಾಗಿ ಮಾಡುವ ಪ್ರಯತ್ನದಲ್ಲಿದ್ದಳು ಅವಳು!! ನಾನು ಹುಷಾರಿಲ್ಲದೆ ಮಲಗಿರುವ ಸನ್ನಿವೇಶವನ್ನು ಮತ್ತೆ ಬಿಂಬಿಸಿ ಅವಳು ರೂಮಿಗೆ ಬಂದು ಬಿಸಿನೀರು ಕೊಟ್ಟು, ನಾನದನ್ನು ಕುಡಿದು "ಆಹಾ..ಆರಾಮಾತು.." ಎಂದು ಹೇಳುವಲ್ಲಿವರೆಗೆ, ನಂತರಕ್ಕೆ ಬಿಸಿನೀರೆಂಬ ಮಾಂತ್ರಿಕತೆಗೆ ತಲೆನೋವು ಕಡಿಮೆಯಾಗಿ ಹಾವು ಏಣಿ ಆಟವಾಡಬೇಕು ಎಂಬಲ್ಲಿವರೆಗೆ ಮುಂದಿನ ಕಥೆ ಸಾಗಿದ್ದು ಬೇರೆ ವಿಷಯ..

ಈಗ ವಿಷ್ಯ ಅದಲ್ಲ, ಎಲ್ಲರ ಮನೆಯಲ್ಲಿ ಈ ರೀತಿಯ ಒಂದಲ್ಲ ಒಂದು ಘಟನೆ ನಡೆಯುತ್ತಲೇ ಇರುತ್ತದೆ, ಹಾಗಾಗಿ ಮಗಳ ಕುರಿತು ಹೆಗ್ಗಳಿಕೆ ಯಂತೂ ಖಂಡಿತ ಅಲ್ಲ..ಪ್ರತಿಯೊಬ್ಬರ ಮನೆಯ ಪ್ರತಿಯೊಂದು ಮಗುವೂ ಕೂಡ 'ಭಾವ ಜೀವಿ' ಆಗಿರುತ್ತದೆ. ..ಪ್ರೀತಿ ಪಡೆದು, ಪ್ರೀತಿ ಕೊಡಲು ಹಂಬಲಿಸುತ್ತಿರುತ್ತದೆ. ಈ ಮಕ್ಕಳ ಮನಸ್ಸಿನಲ್ಲಿ 'ಕಾಂಪ್ಲಿಕೇಷನ್' ಎನ್ನುವ 'ಕಾನ್ಸೆಪ್ಟ್' ಇರುವುದಿಲ್ಲ. ಅವೆಲ್ಲ 'ಪ್ಯೂರ್ ಸೋಲ್' ಗಳು. ತಮಗೆ ತೋಚಿದ ರೀತಿಯಲ್ಲಿ ಪ್ರೀತಿ, ಕರುಣೆ, ಮಮಕಾರ ವ್ಯಕ್ತಪಡಿಸುವಂತವರು..ಮಕ್ಕಳ ಊಟ-ಆಟ-ಪಾಠ ಗಳ ನಡುವೆ, ಅವರ ತುಂಟಾಟವೂ ಅಷ್ಟೇ ಅವಿಭಾಜ್ಯವಾಗಿರುತ್ತದೆ. ಆದರೆ, ಸಮಯದ ಅಭಾವಕ್ಕೋ,ನಮ್ಮ ತಾಳ್ಮೆ ಇಲ್ಲದ ಮನಸ್ಥಿತಿಗೋ ಅಥವಾ ಶಿಸ್ತಿನ ಜೀವನಶೈಲಿ ರೂಡಿ ಮಾಡುವ ಸಲುವಾಗಿ ಅನೇಕ ಸಾರಿ ಮಕ್ಕಳ ಅನೇಕ ಸದ್ಗುಣಗಳನ್ನು ಹುಡುಕಿ ಪ್ರಶಂಸಿಸಲು ನಾವು ಸೋಲುತ್ತೇವೆ. ಬೈದು ರೇಗಿ ಮನಸ್ಸನ್ನು ಇನ್ನಷ್ಟು ಜಟಿಲಗೊಳಿಸಿಕೊಳ್ಳುತ್ತೇವೆ. 'ಅಯ್ಯೋ ಇವ್ಳು ಒಂದು ಲೋಟ ಬಿಸಿನೀರ್ ಮಾಡಿಕೊಡುವುದಕ್ಕೆ ನಂಗೆ ಹತ್ತು ಕೆಲಸ ಬಂತು' ಎಂದು ಬೇಸರಿಸಿದೆವೋ ಅಥವಾ ಹೀಯಾಳಿಸಿದೆವೋ ಅಲ್ಲಿಗೆ ಕಥೆ ಮುಗಿಯಿತು..ತನ್ನ ಸಹಾಯ ಇವರಿಗೆ ಹೊರೆಯಾಗುತ್ತದೆ ಎಂಬ ಸಂಕುಚಿತ ಭಾವನೆ, ಮತ್ತೆ ಮುಂದಿನ ಸಲಕ್ಕೆ ಮನೆಯವರಿಗೆ ಸಹಾಯ ಮಾಡುವ ಯೋಚನೆಯೆಡೆಗೆ ಪ್ರೇರಣೆ ನೀಡುವುದಿಲ್ಲ. ಹಾಗಾಗಿ, ನಮ್ಮ ಒಂದೆರಡು ಹೆಚ್ಚಿನ ನಿಮಿಷದ ಮಕ್ಕಳೆಡೆಗಿನ ಗಮನ, ಅವರಿಗೋಸ್ಕರ ಸ್ವಲ್ಪ ಹೆಚ್ಚಿನ ಕೆಲಸ, ನಾವು ಮತ್ತು ಮಕ್ಕಳ ಮಧ್ಯೆ 'ಫೆವಿಕಾಲ್ ಬಾಂಡಿಂಗ್' ತರುವುದರಲ್ಲಿ ಏನೂ ಸಂದೇಹವಿಲ್ಲ.




ಮಕ್ಕಳದ್ದು ಹೇಗೆ ಕಲಿಕೆ ಅವಿರತವೋ ಹಾಗೆಯೇ ಮಕ್ಕಳಿಂದ ನಾವು ಕಲಿಯುವುದೂ ಕೂಡ ಅಷ್ಟೇ ಇದೆ. ಸಣ್ಣ ಸಣ್ಣ ವಿಷಯಗಳಿಗೆ ಗಟ್ಟಿಯಾಗಿ ನೆಗಾಡಿಕೊಂಡು ಮುಕ್ತವಾಗಿ ಖುಷಿ ಪಡುವ, ತಪ್ಪೋ ಒಪ್ಪೋ 'ಪ್ರಯತ್ನ ಮಾಡುವ' ಮಕ್ಕಳಂತಾ ಮನಸ್ಸು ನಾವು ದೊಡ್ಡವರಿಗೂ ಬರಲಿ ಎಂಬ ಹಾರೈಕೆಯೊಂದಿಗೆ, ಎಲ್ಲಾ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.  

ಬುಧವಾರ, ಸೆಪ್ಟೆಂಬರ್ 19, 2018

ಅಡುಗೆ ಸಂಭ್ರಮ

ನಾನು ನಮ್ಮ ಮನೆಯಲ್ಲಿನ ಮುದ್ದಿನ ತನುಜೆ, ಅಕ್ಕನ ಅನುಜೆ. ಚಿಕ್ಕಂದಿನಲ್ಲಿ ಅಮ್ಮ ಎಲ್ಲಾದರೂ ಹೊರಗಡೆ ಹೋದರೆ ಅಪ್ಪಾಜಿಯ ನಳಪಾಕ, ಅಪ್ಪಾಜಿಯೂ ಇಲ್ಲದಿದ್ದ ಪಕ್ಷದಲ್ಲಿ ಅಕ್ಕನ ಅಡುಗೆ ಪ್ರಯೋಗಗಳಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೊರತೆಯೂ ಆಗುತ್ತಿರಲಿಲ್ಲ. ಇದೆ ಕಾರಣಕ್ಕೋ ಏನೋ ಸುಮಾರು ೭-೮ ನೇ ತರಗತಿಗೆ ಬರುವ ವರೆಗೂ ಅಡುಗೆ ತಯಾರಿಸಲು ಸಹಾಯ ಮಾಡುವ ಕೆಲಸ ಮಾಡಿದ್ದಿದ್ದರೂ, ನಾನಾಗಿಯೇ ಯಾವುದೇ ಮುಖ್ಯ ಅಡುಗೆ ತಯಾರಿಸುವ ಗೋಜಿಗೆ ಹೋಗಿಯೇ ಇರಲಿಲ್ಲ. ಹಾಗೊಂದು ದಿನ ಅಪ್ಪಾಜಿ ಅಮ್ಮ ಕಡೆಗೆ ಅಕ್ಕನೂ ಮನೆಯಲ್ಲಿರದ ದಿನ. ಅಂದು ಗೆಳತಿಯೊಬ್ಬಳನ್ನು ಮನೆಗೆ ಕರೆತಂದಿದ್ದೆ. ಮನೆಯಲ್ಲಿ ಅಮ್ಮ ಅಡುಗೆ ತಯಾರಿಸಿಟ್ಟಿದ್ದರೆಂಬ ನೆನಪು. ಯಾವುದೋ ಮಾತಿನ ಮಧ್ಯೆ ಗೆಳತಿಯು ತನಗೆ ಅಲ್ಪಸ್ವಲ್ಪ ಪದಾರ್ಥಗಳನ್ನು ಮಾಡಲು ಬರುತ್ತದೆ ಎಂದು ತನ್ನ ಬಗ್ಗೆ ಹೇಳಿಕೊಂಡಾಗ, ನನ್ನ ಬಗ್ಗೆ ನನಗೆ ಸಂಕೋಚವೆನಿಸಿತು. ನಂತರಕ್ಕೆ, ಅದೆಲ್ಲಿಂದ ಬಂದ ಶೂರತನವೋ ತಿಳಿಯದು, "ನೀನು ನನಗೆ ಗೈಡ್ ಮಾಡು , ನಾನು ಪದಾರ್ಥ ತಯಾರು ಮಾಡುತ್ತೇನೆ" ಎಂದು ಅವಳಲ್ಲಿ ಕೇಳಿಕೊಂಡು, ಬದನೆ ಮತ್ತು ಬೆಳ್ಳುಳ್ಳಿ ಹಾಕಿ ಕಾಯಿ ಗೊಜ್ಜು ಮಾಡುವ ಪ್ಲಾನ್ ಮಾಡಿದೆವು. ತೆಂಗಿನ ತುರಿ ಸಿದ್ಧವಾಯಿತು. ಬದನೇಕಾಯಿ ಪಾತ್ರೆಯಲ್ಲಿಟ್ಟು ಬೇಯಿಸಿಕೊಂಡಿದ್ದಾಯಿತು. ಬೆಳ್ಳುಳ್ಳಿ ತಂದು ಬಿಡಿಸಿಕೊಂಡಿದ್ದಾಯಿತು. ಏನೂ ಅಡುಗೆ ಬಾರದ ನಾನು, ಚಿಟಿಕೆ ಉಪ್ಪಿಗೂ  ಗೆಳತಿಯ ಸೂಚನೆಗಳನ್ನು ತೆಗೆದುಕೊಂಡು, ಸಾಕ್ಷಾತ್ ಸಂಜೀವ್ ಕಪೂರ್ ನ ಮಾರ್ಗದರ್ಶನದಲ್ಲಿ ಅಡುಗೆ ತಯಾರಿಸುತ್ತಿರುವಷ್ಟು ಧನ್ಯತಾ ಭಾವನೆಯಿಂದ ನನ್ನ ಕೆಲಸವನ್ನು ಮಾಡುತ್ತಿದೆ. 'ಇಂದು ಮನೆಯವರೆಲ್ಲ ಬಂದ ನಂತರ ನನ್ನ ಅಡುಗೆ ಕೈಚಳಕವನ್ನು ನೋಡಿ ಶಬ್ಬಾಶ್ ಎನ್ನುತ್ತಾರೆ' ಎಂದು ಮನಸ್ಸಿನಲ್ಲಿಯೇ ಮಣೆ ಹಾಕಿಕೊಂಡಿದ್ದಾಯಿತು. ಸಕಲ ಸಿದ್ಧತೆಯೂ ಆದ ನಂತರಕ್ಕೆ ಉಳಿದಿದ್ದ ಮಹತ್ಕಾರ್ಯ - ಎಲ್ಲವನ್ನೂ ಮಿಕ್ಸರ್ ಗೆ ಹಾಕಿ ರುಬ್ಬುವುದು. ಅಡುಗೆ ಮನೆ ಕಟ್ಟೆ ಹತ್ತಿ ಕೂತು ಮಿಕ್ಸರ್ ಗೆ ಬದನೆಯಾಯಿ ಗೊಜ್ಜಿನ ಮಿಶ್ರಣವನ್ನೆಲ್ಲ ಹಾಕಿ ನೀರು ಸುರಿದದ್ದೇ..! ಹೌದು, ನೀರು ಗೊಜ್ಜು ಬೀಸುವ ತಕ್ಕಷ್ಟು ಹಾಕಿದ್ದಲ್ಲ, ಸಾಕಷ್ಟು ಸುರಿದು ಬಿಟ್ಟಿದ್ದೆ ನಾನು. ಮೊದಲ ಬಾರಿಗೆ ಮಿಕ್ಸರ್ ಗ್ರೈಂಡರ್ ಚಾಲೂ ಮಾಡುವ ಭಯ ಒಂದೆಡೆ, ಯಶಸ್ವಿ ಅಡುಗೆಯ ಉತ್ಸಾಹ ಇನ್ನೊಂದೆಡೆ. ಮುಂದಕ್ಕೇನಾಯಿತು ಕೇಳುವುದೇ ಬೇಡ.. ನಾವು ನೋಡನೋಡುತ್ತಿದ್ದಂತೆಯೇ, "ಗರ್ರ್ರ್.." ಎಂಬ ಶಬ್ದದೊಂದಿಗೆ ಕ್ಷಣಮಾತ್ರದಲ್ಲಿ ಮಿಕ್ಸರ್ ಪಾತ್ರೆಯಲ್ಲಿದ್ದವೆಲ್ಲ ಅರ್ಧಕ್ಕರ್ಧ ಅಡುಗೆ ಮನೆಗೆ ಕಾರಂಜಿಯಾಗಿ ಚಿಮ್ಮಿಯಾಗಿತ್ತು. ಮಿಕ್ಸರ್ ಚಾಲೂ ಮಾಡಿದೊಡನೆ, ನೀರು ಹೆಚ್ಚಾಗಿ ಹೊರ ಉಕ್ಕುತ್ತಿದ್ದದ್ದನ್ನು ಕಂಡು ಹೆದರಿ, ನಾನು ಮಿಕ್ಸರ್ ಮುಚ್ಚಳವನ್ನು ಬಿಗಿಯಾಗಿ ಹಿಡಿಯದೇ ಅಲ್ಲಿಂದ ಕಾಲ್ಕಿತ್ತಿದ್ದೆ. ಅಡುಗೆ ಮನೆಯ ಕಿಟಕಿ, ಕಪಾಟು, ನೆಲ, ಪಾತ್ರೆಯ ಸ್ಟ್ಯಾಂಡ್ ಎಲ್ಲ ಕಡೆ ಗೊಜ್ಜು ಅಕ್ಷರಶಃ 'ಬೀಸಿಕೊಂಡಿತ್ತು'! ಕಡೆಗೆ ಹೇಗೋ ಮಾಡಿ ಸಾವರಿಸಿಕೊಂಡು, ಮನೆಯವರೆಲ್ಲ ಬರುವ ಮೊದಲು, ನಾನು ನನ್ನ ಗೆಳತೀ ಸೇರಿ, ಅತ್ಯಂತ ಪ್ರಯಾಸದಿಂದ ಮನೆಯನ್ನು ಸ್ವಚ್ಛ ಮಾಡಿದೆವು. ಎಷ್ಟು ಸ್ವಚ್ಛ ಮಾಡಿದರೂ, ನಮ್ಮ ಅವಘಡದ ಕುರುಹಿನಿಂದ ಮನೆಯವರಿಗೆ ನಡೆದ ವಿಷಯವನ್ನು ತಿಳಿಸಬೇಕಾಗಿ ಬಂತು. ನಂತರಕ್ಕೆ ಸ್ವಲ್ಪ ಬೈಗುಳ, ವಹಿಸಬೇಕಾದ ಜಾಗರೂಕತೆಯ ಪಾಠ, ಜೊತೆಗೆ ನಮ್ಮ ಹೊಸ ರುಚಿ ಸಂಹಿತದ ಮೊದಲ ಪ್ರಯೋಗದ ಕುರಿತಾಗಿ ನಡೆದ ಘಟನೆಯ ತಮಾಷೆಯೊಂದಿಗೆ ಅಂದಿನ ಆ ಅಧ್ಯಾಯ ಮುಕ್ತಾಯಗೊಂಡರೂ, ಈಗಲೂ ಬದನೇಕಾಯಿ ಬೀಸುಗೊಜ್ಜು ಮಾಡುವಾಗಲೆಲ್ಲಾ ನೆನಪು ಬಂದು ನಗು ಮರುಕಳಿಸುತ್ತದೆ. 

ಮಂಗಳವಾರ, ಸೆಪ್ಟೆಂಬರ್ 4, 2018

ಕೃಷ್ಣನ ಅವಲಕ್ಕಿ

ಆಗ ನಂಗೆ ಎಷ್ಟು ವರ್ಷ ಎಂದು ಸರಿ ನೆನಪಿಲ್ಲ. ಒಟ್ನಲ್ಲಿ ಸಣ್ಣಕ್ಕಿದ್ದೆ. ನಾವು ಮೊಮ್ಮಕ್ಕಳೆಲ್ಲ ಅಜ್ಜನ ಕೋಣೆಯಲ್ಲಿ ಸರಿದುಕೊಂಡು ಅಜ್ಜನ ಬಳಿ ಕೇಳಿ, ಪೌರಾಣಿಕ ಕಥೆ ಹೇಳಿಸಿಕೊಳ್ಳುವುದು ರೂಢಿಯಿತ್ತು. ಹಾಗೊಂದು ಸಾರಿ ಅಜ್ಜ ಕೃಷ್ಣ-ಸುಧಾಮರ ಗಾಢವಾದ ಗೆಳೆತನ, ಪ್ರೀತಿ, ಕೃಷ್ಣನ ಅವಲಕ್ಕಿಯ ಆಸೆ ಎಲ್ಲದರ ಕುರಿತು ಕಥೆಯನ್ನು ಹೇಳಿದ್ದ. ಕಥೆ ಕೇಳಿ ಸಾಕಷ್ಟು ದಿನಗಳು ಕಳೆದಿದ್ದರೂ, ಕೃಷ್ಣ ಹೇಗೆ ಸಣ್ಣ ಮಕ್ಕಳಂತೆ ಸುಧಾಮನ ಹೆಗಲಿನಿಂದ ಅವಲಕ್ಕಿ ಗಂಟನ್ನು ಅತ್ಯಂತ ಸಲಿಗೆಯಿಂದ ಕಸಿದುಕೊಂಡು ತೆಗೆದು ತಿಂದು ಖುಷಿ ಪಟ್ಟಿದ್ದ ಎಂಬ ಕಥೆಯ ಕಲ್ಪನಾ ಚಿತ್ರಣ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು. ಒಂದು ದಿನ ಅದೇನು ಭಯಂಕರ ಆಲೋಚನೆ ಬಂದಿತೋ ಏನೋ, ಮಧ್ಯಾಹ್ನ ಅಮ್ಮುಮ್ಮ ಎಲ್ಲರೂ ಮಲಗಿದ್ದ ಸಮಯಕ್ಕೆ, ಎದ್ದು ಹೋಗಿ ಕಪಾಟಿನಲ್ಲಿ ಅವಲಕ್ಕಿಗಾಗಿ ಹುಡುಕಾಟ ನಡೆಸಿದೆ. ಕಡೆಗೆ ಮೇಲ್ಮೆತ್ತಿನ 'ಹೊಗೆ ಅಟ್ಟ' ದಲ್ಲಿ ಹುಡುಕಾಟದ ಅವಿರತ ಪ್ರಯತ್ನಕ್ಕೆ 'ಅರಳುಕಾಳು ಡಬ್ಬ' ಕೈಗೆ ಸಿಕ್ಕಿತ್ತು. ಚೂರು ಶಬ್ದ ಮಾಡದೆ, ಅಷ್ಟೊತ್ತು ಹುಡುಕಿದ್ದ ಶ್ರಮಕ್ಕೆ "ಕೃಷ್ಣ ನಿಗೆ ಅರಳಕಾಳು ಕೂಡ ಇಷ್ಟವಾಗುತ್ತದೆ' ಎಂಬ ನಿರ್ಧಾರವನ್ನು ನಾನೇ ತೆಗೆದುಕೊಂಡು, ಒಂದು ಲೋಟಕ್ಕೆ ಸ್ವಲ್ಪ ಅರಳಕಾಳು ಹಾಕಿಕೊಂಡು ಜಗಲಿಗೆ ಹೋದೆ. ಹಿಂದೆಲ್ಲ ಮನೆಯ ಜಗಲಿಯ ಗೋಡೆಗೆ ಸಾಲಾಗಿ ದೇವರ ಫೋಟೋಗಳನ್ನು ನೇತು ಹಾಕಿರುತ್ತಿದ್ದರು. ಕೃಷ್ಣನ ದೇವರ ಪಟದ ಕೆಳಗೋ ಅಥವಾ ಜಗಲಿ ಕೋಣೆಯಲ್ಲಿದ್ದ ಕೃಷ್ಣನ ಕ್ಯಾಲೆಂಡರಿನ ಬಳಿಯೋ, ಆ ಲೋಟವನ್ನಿಟ್ಟು ಬಂದು ಮತ್ತೆ ಮಲಗಿಬಿಟ್ಟಿದ್ದೆ. ಬಹುಶಹ ಕೃಷ್ಣ ಬಂದು ತಿಂದಿರುತ್ತಾನೆ ಎಂಬ ನಿಲುಕು ನನ್ನದಾಗಿತ್ತೇನೋ. ಸಂಜೆಗೆ ಅತ್ತೆ "ಇಲ್ಯಾರು ಲೋಟದಲ್ಲಿ ಅಲಕಾಳು ಇಟ್ಟಿದ್ದು" ಎಂದು ಕೇಳ್ತಾ ಇದ್ರೆ, ಉತ್ತರ ಹೇಳಲು ನನಗೆ ಸಂಕೋಚ, ಜೊತೆಗೆ ಆ ಲೋಟದಲ್ಲಿ ಇಟ್ಟಿದ್ದ ಅರಳಕಾಳು ಎಷ್ಟು ಖಾಲಿಯಾಗಿತ್ತೋ ಏನೋ, ನೋಡಕ್ಕಾಗಿತ್ತು ಎಂಬ ಕ್ಯೂರಿಯೋಸಿಟಿ ಬೇರೆ ಒಂದು ಕಡೆ.. ಕಡೆಗೂ ಗೊತ್ತಿಲ್ಲ ಆ ಲೋಟದಲ್ಲಿರ ಅರಳಕಾಳು ಕಡೆಗೆ ಕೃಷ್ಣ ಗಮನ ಕೊಟ್ಟಿದ್ನೋ ಇಲ್ಲವೋ ಎಂದು..
 
ಇಷ್ಟೆಲ್ಲಾ ಮುಸುಕು ನೆನಪುಗಳು ಯಾಕೆ ಮರುಕಳಿಸಿದವೆಂದರೆ, ಕೃಷ್ಣ ಜನ್ಮಾಷ್ಟಮಿ ಗೆ ಸಾನ್ವಿಗೆ ಕೃಷ್ಣ- ಕುಚೇಲರ ಕಥೆ ಹೇಳಿದ್ದೆ. ನಿನ್ನೆ ಇಸ್ಕಾನ್ ಟೆಂಪಲ್ಲಿಗೆ ಭೇಟಿ ನೀಡಿದ್ದೆವು. ಮಗಳು ಕೃಷ್ಣನಿಗೆ ಕೊಡಲೆಂದು ಅವಲಕ್ಕಿ ತುಂಬಿಕೊಳ್ಳೋಣ ಎಂದಿದ್ದಕ್ಕಾಗಿ ಅದೂ ಕೂಡ ಕಟ್ಟಿಕೊಂಡು ಹೋಗಿಯಾಯಿತು. ಆದರೆ ಅಲ್ಲಿ, ಅಷ್ಟು ಜನರ ಮಧ್ಯೆ ಅವಲಕ್ಕಿ ಕೊಡುವುದು ಹೋಗಲಿ, ಕೃಷ್ಣನ ಮೂರ್ತಿಯಿರುವ ಸ್ಥಳದವರೆಗೂ ನಮಗೆ ತಲಪಲಾಗಲಿಲ್ಲ. ಭಜನೆಗೆ ದೂರದಲ್ಲಿಯೇ ಸ್ವಲ್ಪ ಹೊತ್ತು ಕುಳಿತು ಬಂದದ್ದಾಯಿತು. ಅವಲಕ್ಕಿ ತಲುಪಿಸಲಾಗಲಿಲ್ಲ ಎಂಬುದರ ಕುರಿತು ಮಗಳಿಗೆ ನಿರಾಸೆ. ಇವತ್ತು ಸ್ಕೂಲಿನಿಂದ ಬಂದವಳಿಗೆ ಊಟದ ನೀಡುವ ತಯಾರಿಯಲ್ಲಿ ನಾನಿದ್ದರೆ, ಮಗಳು ಅಡುಗೆ ಮನೆಯಿಂದ ಬಟ್ಟಲೊಂದನ್ನು ತೆಗೆದುಕೊಂಡು ಸರ ಸರನೆ ನಡೆದಳು. ಮುಂದಕ್ಕೆ ಈ ಚಿತ್ರದಲ್ಲಿದ್ದಂತಾಯಿತು.. 


ಭಾನುವಾರ, ಆಗಸ್ಟ್ 19, 2018

ಗೋಡೆ ಬರಹ

"ಅದೇನ್ ಕೆಟ್ಟು ಬುದ್ಧಿ ಬಂದಿದ್ಯೇನೋ ನಮ್ಮನೆ ಪಾಪು ಗೆ, ಎಷ್ಟು ಬೈದ್ರೂ ಕಡೆಗೆ ಕದ್ದು ಮುಚ್ಚಿ ಆದ್ರೂ ಗೋಡೆ ಮೇಲೆಗೀಚಿ ಬರ್ತಾನೆ. ನೋಡಿ, ಗೋಡೆ ತುಂಬಾ ಬಣ್ಣ ಬಣ್ಣದ ಪೆನ್ಸಿಲ್ ತಗೊಂಡು ಎಷ್ಟ್ ಅಸಹ್ಯ ಮಾಡಿದಾನೆ,  ಯಾರಾದ್ರೂ ಬಂದ್ರೆ, ನಮ್ಮನೆ ನೋಡ್ಬಿಟ್ಟು, ಎಷ್ಟು ಗಲೀಜು ಅಂದ್ಕೊಂಡಾರು.." ಎನ್ನುತ್ತಾ ವಿಂಧ್ಯಾ ಮಗುಗೆ ಬೈಕೋತಾ ಇದ್ರೆ, ಮಗು ತಾನು 'ಖುಷಿ' ಪಟ್ಟು ಬರೆದ ಚಿತ್ರದಲ್ಲಿರುವ  ಕಥೆಗೆ ಯಾಕಿವರೆಲ್ಲ 'ಬೈತಾರೆ' ಅಂತ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕುರಿತಾದ ಬೈಗುಳವನ್ನ ಕೇಳಿ ಏನು ಮಾಡಬೇಕೆಂದು ತಿಳಿಯದೆ ತಲೆ ತಗ್ಗಿಸಿ ನಿಂತಿತ್ತು. 

ಮಕ್ಕಳಿರುವ ಮನೆಗಳಲ್ಲಿ ಈ ರೀತಿಯ ಗೋಡೆ ಬರಹ ಸರ್ವೇ ಸಾಮಾನ್ಯ. ಕೆಲವು ಮನೆಯ ಎದುರು ಗೋಡೆಯಲ್ಲೇ ಮಕ್ಕಳು ಗೀಚಿ ಬರೆದ ಬ್ರಹ್ಮಾನ್ಡವಿದ್ದರೆ, ಕೆಲವು ಮನೆಯ ಒಳಕೋಣೆಯ ಮೂಲೆಗೊಡೆ ಇನ್ಯಾವುದೋ ಕಥೆ ಸಾರುತ್ತಿರುತ್ತದೆ. ನಿಮ್ಮ ಮನೆಯಲ್ಲೂ ಈ ರೀತಿ ಗೋಡೆ, ನೆಲದ ಮೇಲೆ ಗೀಚುವ ಅಭ್ಯಾಸದ ಮಕ್ಕಳಿದ್ದರೆ, ಅಥವಾ ನಿಮ್ಮ ಮಕ್ಕಳು ಸುಮ್ಮನೆ ಗೊತ್ತು ಗುರಿ ಇಲ್ಲದೆ ಗೀಚುತ್ತ ಕೂರುತ್ತಾರೆ ಎಂದರೆ ಅವರಿಗದನ್ನು ಕೆಟ್ಟದ್ದೆಂದು ತಡೆಯುವ, ತೆಗಳುವ ಮುನ್ನ ಗೀಚುವಿಕೆಯ ಕುರಿತಾಗಿ ಹೀಗೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳಿ. 

ಗೋಡೆ ಒಂದು ಬಿಳಿ ಹಾಳೆಯಂತೆ. 

ಮಕ್ಕಳು ಹುಟ್ಟಿನಿಂದಲೂ ಅನ್ವೇಷಕರು. ಅವರಿಗೆ ಪ್ರತಿಯೊಂದು ವಸ್ತುವನ್ನೂ ಶೋಧಿಸುವ ಕುತೂಹಲವಿರುತ್ತದೆ. ಮನೆಯ ಗೋಡೆ ಎಂಬುದು ಒಂದು ಗ್ರಹಾಲಂಕಾರದ ಮೂಲ ಭೂತ ವಸ್ತು ಎಂಬ ವಾಸ್ತವಿಕತೆ ತಿಳಿದಿರುವುದು ನಾವು ಹಿರಿಯರಿಗೆ ಮಾತ್ರ. ಮಕ್ಕಳ ಮಟ್ಟಿಗೆ ಗೋಡೆ ಎಂಬುದು ಒಂದು ಬಿಳಿಹಾಳೆ ಇಂದ್ದಂತೆ. ಸಹಜವಾಗಿಯೇ ಮನೆಯ ಗೋಡೆಗಳು ಅವರ ಪುಟ್ಟ ಕಣ್ಣಿಗೆ ವಿಶಾಲವಾದ ಜಾಗವೆನಿಸುವುದರಿಂದ ಮತ್ತು ಪೆನ್ಸಿಲ್ ಸ್ಕೆಚ್ ಪೆನ್  ಗಳ ಬಣ್ಣ, ಗೋಡೆಯ ಮೇಲ್ಮೈ ರಚನೆಗೆ ಹೊಂದಿಕೊಂಡು ಕಲೆ  ಕುರುಹುಗಳು ಮೂಡುವುದರಿಂದ ಮಕ್ಕಳಿಗೆ ಗೋಡೆಬರಹ ಅತ್ಯಂತ ಆಪ್ತವೆನಿಸುತ್ತದೆ. 

ಬರವಣಿಗೆಯ ಕಡೆಗೆ ಗೀಚುವ ಬೆಳವಣಿಗೆ 

ನಮಗೆ ನಮ್ಮ ಮಕ್ಕಳು ಶಾಲೆಗೆ ಹೋಗಲಾರಂಭಿಸಿದಾಗ, ಅವರ ಪಾಠ, ಅಕ್ಷರಾಭ್ಯಾಸ, ಹೊಂವರ್ಕ್ ಬಗ್ಗೆ ನಾವು ಎಷ್ಟೊಂದು ಆಸಕ್ತಿ ವಹಿಸುತ್ತೇವೆ. ಅಕ್ಷರಗಳು ಸುಂದರವಾಗಿರಲಿ ಎಂದು ಬಯಸಿ ಅಭ್ಯಾಸ ಮಾಡಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಇದೇ ಕಲಿಕೆ ಮಕ್ಕಳು ತಮ್ಮ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಪ್ರಾರಂಭಿಸಿರುತ್ತಾರೆ ಎಂಬುದು ನಮ್ಮ ಗಮನಕ್ಕೆ ದಕ್ಕಿರುವುದಿಲ್ಲ.ಮಾತನಾಡುವ ಕಲಿಕೆಯಲ್ಲಿ ಧ್ವನಿಹೊರಡಿಸುವಂತೆಯೇ, ಗೀಚುವುದು ಕೂಡ ಮಗು ತನ್ನನ್ನು ತಾನೇ ವ್ಯಕ್ತಪಡಿಸುವ ಒಂದು ಮಾಧ್ಯಮ. ಅದು ಮಕ್ಕಳಿಗೆ ಸಹಜದತ್ತವಾಗಿ ಬರುವ ಕೌಶಲ್ಯ. ಪೆನ್ಸಿಲ್ ಒಂದನ್ನು ಹಿಡಿದು ಗೀಚುವ ಮಗುವಿನ ಕೈಯ ನಿಯಂತ್ರಣ ಕೂಡ ಒಂದು ಅತೀ ಮುಖ್ಯವಾದ ಬೆಳವಣಿಗೆ. 

ಗೀಚುವುದು ಬರವಣಿಗೆಯ ಒಂದು ಪ್ರಾರಂಭಿಕ ಹಂತವಷ್ಟೇ. ವಯಸ್ಸಿಗನುಗುಣವಾಗಿ ಮಕ್ಕಳಲ್ಲಿ ತಮ್ಮ ಕೈಬರಹದ ಮೇಲೆ ಕಂಟ್ರೋಲ್ ಬರಲಾರಂಭಿಸುತ್ತದೆ. ಗೀಚುವುದರಲ್ಲೂ ಹಂತಗಳಿವೆ.  ೨ ವರ್ಷದ ಆಸುಪಾಸಿನ ಮಕ್ಕಳು ಪೈಂಟ್ ಬ್ರಷ್ ಅಥವಾ ಬಣ್ಣದ ಪೆನ್ಸಿಲ್ ಗಳಿಂದ ಕೇವಲ ಕಲೆಯನ್ನು ಮೂಡಿಸುವ ಪ್ರಯತ್ನದಲ್ಲಿರುತ್ತಾರೆ.  ಸಮರ್ಪಕವಾಗಿ ಪೆನ್ನನ್ನು ಹಿಡಿಯಲು ಬಾರದಿದ್ದರೂ, ಅದರಿಂದ ಮೂಡುವ ಗುರುತಿನ ಆಕರ್ಷಣೆಗೆ, ತಮ್ಮ ಕೈ ಬೆರಳುಗಳ ಸಂಯೋಜಿಸಿ ಏನನ್ನಾದರೂ ಗೀಚುವ ಪ್ರಯತ್ನಪಡುತ್ತಾರೆ. ಗೊತ್ತು ಗುರಿಯಿಲ್ಲದ ಚುರುಕಾಗಿ ಗೀಚಿ ಮೂಡಿಸುವ ಇಂತಹ ಕಲೆಗಳಿಗೆ ಏನೂ ಅರ್ಥವಿರದಿದ್ದರೂ,  ಮಕ್ಕಳ ಮಟ್ಟಿಗೆ ಹೊಸತೊಂದು ಕಂಡು ಹಿಡಿದ ಅಚ್ಚರಿ ಮತ್ತು ಖುಷಿ ಇರುತ್ತದೆ.  

ಮಕ್ಕಳು ೩ ವರ್ಷದವಧಿಯಷ್ಟರಲ್ಲಿ ಕೈಯಿಂದ ಬಣ್ಣದ ಸಾಧಕವನ್ನು ಹೇಗೆ ಹಿಡಿದುಕೊಂಡರೆ ಚಿತ್ರ ಮೂಡುತ್ತದೆ ಎಂದು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ. ಆಟದ ಸಮಯದಲ್ಲಿ ಕಲ್ಲು ಅಥವಾ ಕೋಲಿನಿಂದ ಮಣ್ಣ ಮೇಲೆ ಗೀರಿ ಮೂಡಿಸುವ ಚಿತ್ರ, ಚೆಲ್ಲಿದ ನೀರಿನ ಹನಿಗಳನ್ನು ಕೈಯಲ್ಲಿ ಎಳೆದು ಮೂಡಿಸುವ ಗೀರು, ಕಡೆಗೆ ಕೈಗೆ ಕೊಟ್ಟ ಪಪ್ಪಾಯ ಹೋಳಿನಿಂದ ತಟ್ಟೆಯ ಮೇಲೆ ಗೀರಿ ಏನು ಮೂಡುತ್ತದೆ ಎಂದು ನೋಡುವ ಕುತೂಹಲ ಕೂಡ ಇದಕ್ಕೆ ಹೊರತಲ್ಲ. ಹೀಗೆ ಮಕ್ಕಳು, ಯಾವ ರೀತಿಯಲ್ಲಿ ಕೈಯನ್ನಾಡಿಸಿದರೆ ಯಾವ ರೀತಿಯ ಗೀರು ಬರುತ್ತದೆ ಎಂದೆಲ್ಲ ಕ್ರಮೇಣ ಕರಗತ ಮಾಡಿಕೊಳ್ಳಲಾರಂಭಿಸುತ್ತಾರೆ. ಈ ವಯಸ್ಸಿಗೆ, ತನ್ನ ಕೈಗಳ ಸ್ನಾಯು ಹಿಡಿತ ಮತ್ತು ಕಣ್ಣಿನೊಂದಿಗಿನ ಕೈಯ ಹೊಂದಾಣಿಕೆ ಮಗುವಿನಲ್ಲಿಸ್ಪಷ್ಟವಾಗುತ್ತ ಹೋಗುತ್ತದೆ. ಇಂತದ್ದೇ ಚಿತ್ರ ಬರೆಯಬೇಕೆಂಬ ಯೋಚನೆಯಲ್ಲದಿದ್ದರೂ, ತಾವು ಗೀಚಿ ತಿದ್ದಿ ಬಿಡಿಸಿದ ಆಕೃತಿ ಯಲ್ಲಿ ಆಕಸ್ಮಿಕವಾಗಿ ಮೂಡಿದ ವರ್ತುಲ, ತ್ರಿಕೋನ ಆಕೃತಿಯನ್ನುಗುರುತು ಹಿಡಿದು ನಮ್ಮನ್ನು ಕರೆದು ತೋರಿಸುವಷ್ಟರ ಮಟ್ಟಿಗೆ ನಮ್ಮ ಮಕ್ಕಳು ತಯಾರಾಗುತ್ತಾರೆ.

ಸುಮಾರು ೪ ವರ್ಷದ ವಯಸ್ಸಿಗೆ, ಮಕ್ಕಳಿಗೆ ಅವರ ಗೀಚುವಿಕೆಯಲ್ಲಿ ಇನ್ನಷ್ಟು ನಿಯಂತ್ರಣ ದೊರಕಿರುತ್ತದೆ. ಆಕೃತಿಗಳು ಹೆಚ್ಚೆಚ್ಚು ಖಚಿತವಾಗಿ ಬರೆಯಲಾರಂಬಿಸುತ್ತಾರೆ. ಗೋಳಾಕೃತಿಗೆ ಕೈಯನ್ನು ಹೇಗೆ ತಿರುಗಿಸಬೇಕು ಎನ್ನುವಷ್ಟು ಅಂದಾಜು ಮಗುವಿಗೆ ಸಿಗುತ್ತದೆ. ತಾವು ಬರೆದ ಚಿತ್ರಕ್ಕೆ ಅವುಗಳೇನು ಎಂದು ಹೆಸರಿಸುತ್ತ ಬರುತ್ತಾರೆ. ಈ ವಯಸ್ಸಿಗೆ ಅವರಿಗೆ ತಮ್ಮ ಕಲ್ಪನೆಯ ಚಿತ್ರಗಳನ್ನು ಕುರಿತು ತಿಳಿಸುವ ಹುಮ್ಮಸ್ಸು ಮತ್ತು ಉತ್ಸಾಹ ಹೆಚ್ಚಿರುತ್ತದೆ. ಗೀಚಿದ ಚಿತ್ರಗಳೀಗ ಹೆಚ್ಚೆಚ್ಚು ಅರ್ಥಪೂರ್ಣವಾಗಲಾರಂಭಿಸುತ್ತದೆ. "ಅಮ್ಮನ ಕೈ ಹಿಡಿದುಕೊಂಡು ನಾನು ನಿಂತಿದ್ದೇನೆ, ಅಣ್ಣನೊಬ್ಬ ಗಾಳಿಪಟ ಹಾರಿಸುತ್ತಿದ್ದಾನೆ, ಕೆರೆಯಲ್ಲಿ ಮೀನುಗಳಿವೆ, ಇದು ಸೂರ್ಯ ಇದು ಚಂದ್ರ, ಇದು ಹೂವು.." ಹೀಗೆ ತಂತಾನೇ ಕಲ್ಪನೆ ಮಾಡಿಕೊಳ್ಳುತ್ತ ಹಲವು ಬಗೆಯ ಚಿತ್ರಗಳನ್ನು ಗೀಚಲಾರಂಭಿಸುತ್ತಾರೆ.

ಮಕ್ಕಳ ಕಲಿಕೆಗೆ ನಮ್ಮ ಪಾತ್ರ

ಅಡ್ಡಾದಿಡ್ಡಿಯಾಗಿ ಗೀಚಲಾರಂಭಿಸಿ, ಕ್ರಮೇಣ ಒಂದು ಬಿಂದುವಿನಿಂದ ಹೊರಟು ಕೈಯನ್ನು ಹೊರಳಿಸಿ ಅನಿರ್ಧಿಷ್ಟವಾಗಿಯಾದರೂ ಸರಿ ಒಂದು ವರ್ತುಲವನ್ನು ಬಿಡಿಸುವಲ್ಲಿ ಸಫಲಗೊಳ್ಳುವ ಮಕ್ಕಳ ಈ ಗೀಚುವಿಕೆಯೇ ಮುಂದೆ ಅಕ್ಷರಗಳನ್ನು ಬರೆಯುವಿಕೆಗೆ ಬುನಾದಿ. ಮನಸೋ ಇಚ್ಛೆ ಸ್ಕ್ರಿಬ್ಬ್ಲ್ ಅಥವಾ ಗೀಚಿ ಬರೆದ ಮಕ್ಕಳಿಗೆ ಇಂಗ್ಲೀಷ್ ನ ಕರ್ಸೀವ್ ಲೆಟರ್ಸ್ ಬರೆಯಲು ಸುಲಭವಾಗಿದೆ ಎನ್ನುತ್ತದೆ ಒಂದು ಸಂಶೋಧನೆ.   ಬರೆಯುವ ಮಕ್ಕಳಲ್ಲಿ ಹೆಚ್ಚೆಚ್ಚುಹಾಗಾಗಿ ಮಕ್ಕ ಳ ಗೀಚುವಿಕೆಯನ್ನು ಅರಿತು ಪ್ರೋತ್ಸಾಹ ನೀಡೋಣ.

  • ಚಿಕ್ಕಮಕ್ಕಳು ಗೋಡೆಯ ಮೇಲೆ ಬರೆದಾಗ ತತ್ತಕ್ಷಣಕ್ಕೆ ಮಕ್ಕಳ ಮೇಲೆ ರೇಗದಿರಿ. ಮಕ್ಕಳ ಗೀಚುವಿಕೆಯ ವಯಸ್ಸು ತಾತ್ಕಾಲಿಕ. ಹಾಗಾಗಿ ತಕ್ಷಣಕ್ಕೆ ಅವರ ಮನಸ್ಸಿಗೆ ಘಾಸಿಯಾಗುವಂತೆ ಬೈಯುವುದು, ಇತರರೆದುರು ಅವಮಾನಿಸುವುದು ಬೇಡ. ಆಗ ಗೀಚುವ ಆಸೆಗೆ ಕದ್ದು ಗೋಡೆಯ ಮೇಲೆ ಬರೆಯಲಾರಂಭಿಸುತ್ತಾರೆ. ಅದರ ಬದಲು ನಿಮ್ಮ ಮಕ್ಕಳ ಚಿತ್ರಗಳನ್ನು ಅವರ ಬರೆದ ವಯಸ್ಸನ್ನುನೆನಪಿನಲ್ಲಿಟ್ಟುಕೊಂಡು, ಹೆಮ್ಮೆ ಪಡಿ. ಮಕ್ಕಳು ದೊಡ್ಡವರಾದಂತೆ ಇತರ ಬರೆಯುವ ಮಾಧ್ಯಮಗಳು ಸಿಕ್ಕ ನಂತರ ಗೋಡೆ ಮೇಲೆ ಬರೆಯಬಾರದೆಂಬುದನ್ನೂ ತಿಳಿದುಕೊಳ್ಳುತ್ತಾರೆ. 
  • ಇದಾಗಿಯೂ ಮನೆಯ ಗೋಡೆಯ ಅಂದ ಹಾಳಾಗುವ ಕುರಿತು ಚಿಂತೆಯಿದ್ದರೆ, ಮಕ್ಕಳಿಗೆ ಬರೆಯಬೇಕೆನಿಸಿದ ಕ್ಷಣಕ್ಕೆ, ಸ್ಲೇಟು, ವೈಟ್ ಬೋರ್ಡ್, ಪೇಪರ್ ಇನ್ನಿತರ ಪರ್ಯಾಯ ವಸ್ತುಗಳನ್ನು, ಬಣ್ಣದ ಪೆನ್ಸಿಲ್, ಬಳಪ, ಮಕ್ಕಳು ಬಳಸಬಹುದಾದಂತಹ ಪೈಂಟ್ ಇತ್ಯಾದಿ ಪರ್ಯಾಯ ವಸ್ತುಗಳಿಂದ ಬೇರೆಡೆಗೆ ಆಕರ್ಷಿಸಿ ಅವರಿಗೆ ಗೀಚಲು ಅವಕಾಶ ನೀಡಿ. ಅವರಲ್ಲಿನ ಬರೆಯುವ ದಾಹ ನೀಗಬೇಕು. ಸಂತೃಪ್ತಿ ಎನಿಸಿದಾಗ ಮಕ್ಕಳು ಕೂಡ ಹೆಚ್ಚಿನ ಹಠ ಮಾಡುವುದಿಲ್ಲ. ಜೊತೆಗೆ ನಿಮ್ಮ ಪ್ರೋತ್ಸಾಹ ಅವರಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸಕ್ಕೆ ಸಹಾಯಕವಾಗುತ್ತದೆ. 
  • ಮಕ್ಕಳ ಚಿತ್ರ ಅಸಂಬದ್ಧವೆನಿಸಿದರೂ, ಇದೇನು ಬರಿ ಗೀಚಿದ್ದೀಯ ಎಂಬ ಅವಹೇಳನೆ ಬೇಡ. ಮಕ್ಕಳ ಪ್ರಯತ್ನಕ್ಕೆ ಭರಪೂರ ಪ್ರಶಂಸೆ ನೀಡಿ. ಮಕ್ಕಳೊಡನೆ ಚಿತ್ರಗಳನ್ನು ಬರೆಯಲು ಅಥವಾ ನೋಡಲು ಸ್ವಲ್ಪ ಸಮಯ ವ್ಯಯಿಸಿ. ಅದೇನು ಬರೆದಿದ್ದೀಯ ಎಂದು ವಿಚಾರಿಸಿ, ಮಕ್ಕಳ ಕಲ್ಪನೆಗೆ ಒಂದಷ್ಟು ನಿಮ್ಮ ಒಲವು, ಹುಸಿ ಆಶ್ಚರ್ಯವನ್ನು ವ್ಯಕ್ತಪಡಿಸಿ. ಹೆಚ್ಚೆಚ್ಚು ನೀವು ಕುತೂಹಲದಿಂದ ಪ್ರಶ್ನಿಸಿದಂತೆಯೂ, ಮಕ್ಕಳ ಮೆದುಳಿನಲ್ಲಿ ಇನ್ನೂ ಸಾಕಷ್ಟು ಕ್ರಿಯಾತ್ಮಕ ಐಡಿಯಾ ಗಳು ಬರುತ್ತಾ ಹೋಗುತ್ತವೆ. ಇದು ಮಕ್ಕಳ ಅತ್ಯುತ್ತಮ ಬೆಳವಣಿಗೆಗೆ ಸಹಕಾರಿ. 
  • ಮಕ್ಕಳಿಗೆ ಭೌತಿಕವಾಗಿ ಚಿತ್ರಿಸುವ ಸಾಮಗ್ರಿಗಳನ್ನು ನೀಡಿ. ಪೈಂಟ್ ಡ್ರಾಯಿಂಗ್ ಚಿತ್ರದ ಆಕರ್ಷಣೆ ಮೊಬೈಲ್ ಟ್ಯಾಬ್ ನಲ್ಲೂ ಸಾಧ್ಯ ಆದರೆ ತೋರು ಬೆರಳಿನಿಂದ ಸ್ಮಾರ್ಟ್ ಸ್ಕ್ರೀನನ್ನು ಮುಟ್ಟಿ ಮುಗಿಸುವ ಚಿತ್ರದಿಂದ ನಿಜವಾದ ಕಲಿಕೆಯಾಗುವುದಿಲ್ಲ. ಮಕ್ಕಳಿಗೆ ಮುಂದಕ್ಕೆ ಚಿತ್ರ ಅಥವಾ ಅಕ್ಷರಗಳನ್ನು ಪೆನ್ನು ಪೆನ್ಸಿಲ್ ಹಿಡಿದು ಬರೆಯುವ ಕಲ್ಪನೆಗೆ, ಬಣ್ಣಗಳನ್ನು ಬಳಸಿ ಮೂಡಿಸುವ ಚಿತ್ರಕ್ಕೆ ಸ್ಥಳ ವ್ಯಾಪ್ತಿ, ಆಯಾಮಗಳ ಅಂದಾಜು ಸಿಗುವುದಿಲ್ಲ.   
  • ೪ ವರ್ಷದ ಮಕ್ಕಳಲ್ಲಿ ತನಗಿಂತ ತನ್ನ ಗೆಳೆಯ/ಗೆಳತಿಯರು ಬರೆದ ಚಿತ್ರ ಚೆನ್ನಾಗಿ ಮೂಡಿಬಂದರೆ ಅಥವಾ ತಾನು ಕಲ್ಪಿಸಿದಂತೆ ಚಿತ್ರಿಸಲು ಬರುತ್ತಿಲ್ಲ ಎಂಬ ಹತಾಶೆ ಕೆಲವೊಮ್ಮೆ ಮೂಡುವುದುಂಟು. ಹಾಗಾಗಿ ಮಕ್ಕಳ ಚಿತ್ರಗಳಿಗೆ ತುಲನೆ ಮಾಡದಿರಿ. ಯಾರೂ ಕೂಡ ಹುಟ್ಟಿನಿಂದ ಆರ್ಟಿಸ್ಟ್ ಆಗಿರುವುದಿಲ್ಲ. ಇನ್ನೂ ಚೆನ್ನಾಗಿ ಬರೆಯಬೇಕಿತ್ತು ಎಂದು ಒತ್ತಡ ಹೇರದಿರಿ. ಸಮಾಧಾನಿಸಿ ಮಕ್ಕಳ ಅಷ್ಟರ ಮಟ್ಟಿಗಿನ ಪ್ರಯತ್ನಕ್ಕೆ ಸಂತೋಷ ವ್ಯಕ್ತಪಡಿಸಿ.
  • ಮಕ್ಕಳೇನಾದರೂ ಆಸಕ್ತಿಯಿಂದ ಗೀಚುತ್ತ ಕುಳಿತಿದ್ದರೆ, ಅದು ಸಮಯ ವ್ಯರ್ಥ ಎಂದೆಣಿಸಬೇಡಿ. ಹೆಚ್ಚೆಚ್ಚು ಗೀಚಿ ಬರೆಯುವುದರಿಂದ ಹೆಚ್ಚಿನ ಮಕ್ಕಳ ಮನಸ್ಸಿನ ಯೋಚನೆಗಳು ಹೊರಹೊಮ್ಮುತ್ತದೆ. ಇದೊಂದು expressive ಮಾಧ್ಯವಾದುದ್ದರಿಂದ ಮಕ್ಕಳು ತಾವಾಗಿಯೇ ತಮ್ಮ ಸಮಯವನ್ನು ತೊಡಗಿಸುವ ವಿಧಾನವನ್ನು ಕಲಿಯುತ್ತಾರೆ. ಮತ್ತು ಹಠಮಾರಿತನ ಕಡಿಮೆಯಾಗುತ್ತದೆ.

(ಈ ವಾರದ ಸುಧಾ ಮ್ಯಾಗಝಿನ್ ನಲ್ಲಿ ಪ್ರಕಟಿತ)

ಬುಧವಾರ, ಜುಲೈ 18, 2018

ಜೀವನೋತ್ಸಾಹ

ಒಂದು ದಿನ ಬೆಳಿಗ್ಗೆ ಅಪ್ಪಾಜಿಯಿಂದ ಫೋನ್. "ನಾನು ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿಮೆಂಟ್ ಗೆ ಬೆಂಗಳೂರಿಗೆ ಬರ್ತಾ ಇದ್ದಿ, ನಂಗ ಇಲ್ಲಿ ಸಾಗರದಲ್ಲೇ ಒಳಾಂಗಣ ಕೋರ್ಟ್ ಗೆ ಹೋಗಿ ಸ್ವಲ್ಪ ರೂಲ್ಸ್ ತಿಳ್ಕನ್ದು, ಪ್ರಾಕ್ಟೀಸ್ ಎಲ್ಲ ಮಾಡಿ ಬಂದ್ಯ ಈಗ. ಬರೋ ಶನಿವಾರನೇ ಟೂರ್ನಿಮೆಂಟ್. ಶುಕ್ರವಾರ ನಿಮ್ಮನೆಗೆ ಬಂದು, ಅಲ್ಲಿಂದ ಹೋಗ್ತಿ, ಊರಿಂದ ಏನಾದ್ರು ತಗಂಬರದಿದ್ರೆ ಹೇಳು....". ಹೀಗೆಲ್ಲಾ ಅಪ್ಪಾಜಿ ಆ ಕಡೆಯಿಂದ ಮಾತಾಡ್ತಾ ಇದ್ರೆ, ನನಗೆ ಈ ಕಡೆ ನನ್ನ ಕಿವಿ ನಾನೇ ನಂಬಲಾಗುತ್ತಿರಲಿಲ್ಲ. ೭೦ ಕ್ಕೆ ಹತ್ತಿರವಿರುವ ೬೯+ ವಯಸ್ಸಿನವ ನನ್ನಪ್ಪಾಜಿ. ಹವ್ಯಾಸಕ್ಕೆಂದು, ತನ್ನ ಮಿತ್ರರೊಡನೆ ಮನೆಯ ಪಕ್ಕದಲ್ಲೇ ಹಸನು ಮಾಡಿಕೊಂಡ ಖಾಲಿ ಸೈಟಿನಲ್ಲಿ ನಿತ್ಯವೂ ಶಟ್ಲ್ಕಾಕ್ ಆಟ ಆಡುತ್ತಾರೆ. ಮಲೆನಾಡಿನ ಮಳೆಗಾಲ.. ಹಾಗಾಗಿ ನಿತ್ಯ ಆಟಕ್ಕೂ ಸಧ್ಯ, ಬಿಡುವು.ಹಿರಿಯ ವಯಸ್ಸಿಗೆ ಸ್ಪರ್ಧೆಗೆಲ್ಲ ಭಾಗವಹಿಸುವ ಪರಿಶ್ರಮ ಬೇಕೇ, ಅದರಲ್ಲೂ ಇಲ್ಲಿ ನಡೆಯುವುದು ನುರಿತ ಆಟಗಾರರ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಮ್ಯಾಚ್ ಎಂಬೆಲ್ಲ ಯೋಚನೆಗಳು ಪುಂಖಾನುಪುಂಖವಾಗಿ ಮನಸ್ಸಿಗೆ ಬರುತ್ತಿದ್ದರೂ, ಆ ಕಡೆಯಿಂದ ಕೇಳುತ್ತಿದ್ದ ಅವನ ಆ ಕಾಂಫಿಡೆಂಟ್ ಧ್ವನಿಗೆ ಏನೂ ಮರು ಮಾತನಾಡಬೇಕೆನಿಸಲಿಲ್ಲ.ಅಪ್ಪಾಜಿಯ ಉತ್ಸಾಹ ನೋಡಿ, "ಅಡ್ಡಿಲ್ಲೆ ಬಾ" ಎಂದು ನಾನು, "ಖಂಡಿತ ಹೋಗ್ಬಾ" ಎಂದು ಅಕ್ಕನೂ ಹೇಳಿದ್ದಾಯಿತು. ಕಳೆದ ಶನಿವಾರ ಮತ್ತು ಭಾನುವಾರದಂದು, ಬೆಂಗಳೂರಿನಲ್ಲಿ ಹವ್ಯಕ ಬ್ಯಾಡ್ಮಿಂಟನ್ ಅಸೋಸಿಯೋಷನ್ ಆಶ್ರಯದಲ್ಲಿ ೪ ನೇ ವರ್ಷದ 'ಹಬ್ಯಾ ಹಬ್ಬ' ಎಂಬಪಂದ್ಯಾವಳಿ ಸಹಕಾರ ನಗರದ ಕ್ರೀಡಾಂಗಣವೊಂದರಲ್ಲಿ ನಡೆಯಿತು. ಹಿರಿಯ ವಯಸ್ಸಿನವರ ತಂಡಗಳಲ್ಲಿ ಅಪ್ಪಾಜಿ ಹೆಸರು ನೋಂದಣಿಯಾಗಿತ್ತು. ೫ ತಂಡಗಳ ಜೊತೆ ಸ್ಪರ್ಧಿಸುವುದಾಗಿತ್ತಾದರೂ, ಅಪ್ಪಾಜಿಯ ತಂಡ ಸೋತ ಕಾರಣ, ಒಟ್ಟು ೩ ಇತರ ತಂಡಗಳೊಂದಿಗೆ ಸ್ಪರ್ಧಿಸುವ ಅವಕಾಶ ಅಪ್ಪಾಜಿ ಮತ್ತು ಅವನ ಮಿತ್ರರಿಗೆ ದೊರೆಯಿತು. "ಸೋಲು ಗೆಲುವು ಪ್ರಶ್ನೆ ಅಲ್ಲ; ಭಾಗವಹಿಸದು ಮುಖ್ಯ" ಎಂದು 'ಟೂರ್ನಿಮೆಂಟೊಂದರಲ್ಲಿ ಆಡಿದ ಖುಷಿ'ಯ ಹೊತ್ತು ವಾಪಸಾದರು ನನ್ನಪ್ಪಾಜಿ. ಇದಕ್ಕಿಂತ ಹೆಚ್ಚು ಜೀವನೋತ್ಸಾಹ ಬೇಕೇ..? You are our role model; Proud of you Appaji... <3 <3 



ಸೋಮವಾರ, ಜೂನ್ 18, 2018

ಒಂದು ಚಪ್ಪಾಳೆ 'ನಮ್ಮ ಮೆಟ್ರೋ' ಗೆ

ಒಂದು ಕಾಲವಿತ್ತು. ಬೆಂಗಳೂರಿನಿಂದ ನಾವು ಊರಿಗೆ ಹೋಗಬೇಕೆಂದರೆ, ನಮ್ಮ ಮನೆಯಿಂದ ಸಾಕಷ್ಟು ದೂರದಲ್ಲಿರುವ ಮೆಜೆಸ್ಟಿಕ್ ಗೆ ಸಿಟಿ ಬಸ್ ಹತ್ತಿ ಕುಳಿತು, ಹೊಂಡ ಗುಂಡಿ ರಸ್ತೆಗಳನ್ನು ದಾಟುತ್ತ(ಹಾರುತ್ತ), ಒಂದೆರಡು ಗಂಟೆ ಬೆಂಗಳೂರು ದರ್ಶನ ಫ್ರೀಯಾಗಿ ಪಡೆದು,  ಕಡೆಗೂ ತಲುಪಿದ ಸಮಯಕ್ಕೆ ಯಾವ ಬಸ್ ಸಿಕ್ಕರೂ ಅದೇ ನಮ್ಮ ಪುಣ್ಯ ಎಂದು ಭಾವಿಸಿ,  ಊರಿಗೆ ಪ್ರಯಾಣಿಸುತ್ತಿದ್ದೆವು. ಅದರಲ್ಲೂ ಹಬ್ಬಕ್ಕೆಲ್ಲ ಊರಿಗೆ ಹೋಗುವಾಗಲೆಂತೂ ಟ್ರಾಫಿಕ್ ಜಾಮನ್ನು ನೋಡಿಬಿಟ್ಟರೆ ತಲೆತಿರುಗುತ್ತಿತ್ತು. ಬಸ್ಸು ರಾತ್ರೆ ೧೦ ಗಂಟೆಗಿದ್ದರೂ, ೬.೪೫ ಗೆ ಆಫೀಸಿನಿಂದ ಬಂದಿದ್ದೆ ಮತ್ತೆ ಬ್ಯಾಗು ಹಿಡಿದು ಓಡುವುದೇ ನಮ್ಮ ಕೆಲಸ..ಇನ್ನು, ಮೆಜೆಸ್ಟಿಕ್ಗೆ  ಹೋಗುವ ಸಿಟಿ ಬಸ್ನ ಪ್ರಯಾಣದ ಸುಖ ಏನ್ ಕೇಳ್ತೀರಿ..!! ೫ ನಿಮಿಷಕ್ಕೆ ಒಂದಿಂಚು ಹಾದಿ ಸಾಗುತ್ತಿರುವ ಬಸ್ಸಿನಿಂದ ಮಧ್ಯದಲ್ಲೇ ಇಳಿದು, ಎದುರಿನ ದರ್ಶಿನಿಯಲ್ಲಿ ಸಿಂಗಲ್ ಇಡ್ಲಿ ತಿಂದು, ಒಂದು ಕಾಪಿ ಕುಡಿದು, ತೊಳೆದ ಕೈ ಒರೆಸಿಕೊಂಡು ಮತ್ತೆ ಅದೇ ಬಸ್ಸನ್ನು ನಾಲ್ಕೇ ಹೆಜ್ಜೆ ಮುಂದಕ್ಕಿಟ್ಟು ಹತ್ತಬಹುದಾದಂತಹ ಸೌಭಾಗ್ಯ.. ಆ ರೇಂಜಿಗೆ ಬಸ್ಸಿನ ವೇಗದ ಮಿತಿ. ಇದರ ಜೊತೆ, ಸರಿಯಾದ ಸಮಯಕ್ಕೆ ಬಸ್ ಸ್ಟಾಂಡ್ ತಲುಪುತ್ತೇವೋ ಇಲ್ಲವೋ  ಅನ್ನೋ ಟೆನ್ಶನ್. ಕೂತ ಬಸ್ಸಲ್ಲೇ ಸರ್ಕಾರದ ವ್ಯವಸ್ಥೆಯನ್ನು ಬೈಯುತ್ತಾ, ನಮ್ಮ ನಸೀಬನ್ನು ಹಳಹಳಿಸುತ್ತ ಇರುತ್ತಿದ್ದೆವು. ಈ ಹೈರಾಣ ಸಿಟಿ ಬಸ್ಸಿನ ಪ್ರಯಾಣಕ್ಕೊಂದೇ ಸೀಮಿತ ಅಲ್ಲ. ಬೆಂಗಳೂರಿನಲ್ಲಿ, ವಾಹನ ಸವಾರಿಯಾಗಿ ಎಲ್ಲಿಗಾದರೂ ಹೋಗಬೇಕೆಂದರೆ, ಒಂದೋ ದೊಡ್ಡ ದೊಡ್ಡ ಮುಖ್ಯ ರಸ್ತೆಗಳಲ್ಲಿ ಹಸಿರು ಕೆಂಪು ದೀಪಗಳನ್ನು ಕಣ್ಣು ಮಂಜು ಮಾಡಿ ನೋಡಿಕೊಂಡು, ಮೇರಾ ನಂಬರ್ ಕಬ್ ಆಯೇಗಾ ಎಂದು ಮುಗಿಯದ ವಾಹನಗಳ ಸರದಿಯಲ್ಲಿ ಕಾಯುತ್ತ, ಕ್ಲಚ್ಚು ಬ್ರೇಕು ಅದುಮಿ ಹಿಡಿದು, ಗಂಟೆಗಟ್ಟಲೆ ನಿಂತು ನಿಂತು ಚಲಿಸುತ್ತ ಮುಂದಕ್ಕೆ ಸಾಗಬೇಕು.  ಇಲ್ಲವೋ, ಈ  ಪೇಚಾಟ ತಪ್ಪಿಸುವ ಸಲುವಾಗಿ ಶಾರ್ಟ್ಕಟ್  ಎಂದು ಚಿಕ್ಕ ಚಿಕ್ಕ ಕೊಂಪೆ ರಸ್ತೆಗಳ್ಳಲ್ಲಿ ನಮ್ಮ ಗಾಡಿಯನ್ನು ನುಗ್ಗಿಸುತ್ತಾ, ಗುದ್ದಿಸುತ್ತ, ಗುದ್ದಿಸಿಕೊಳ್ಳುತ್ತ, ಒಬ್ಬರಿಗೊಬ್ಬರು ಬೈದುಕೊಂಡು ಬಿಪಿ ಹೆಚ್ಚು ಕಡಿಮೆ ಮಾಡಿಕೊಂಡು, ಹೋರಾಡಿ ಮುನ್ನುಗ್ಗುವ ಸಾಹಸ..ಎಲ್ಲಿ ಹೋದರೂ, ಹಿಂದೆ ಮುಂದೆ ಹಾಂಕರಿಸುವ (ಅಬ್ಬರಿಸುವ) ಇತರ ವಾಹನಗಳ ಶಬ್ದ, ಪಕ್ಕದಲ್ಲೇ ಎಲ್ಲೋ ಚಂಡಿಕಾ ಹೋಮ ನಡೆದಿದೆ ಎನ್ನುವಂತೆ ಕಾಣುವಷ್ಟು ದಟ್ಟವಾದ ಮಾಲಿನ್ಯದ ಹೊಗೆ ಒಂದಷ್ಟು ಕುಡಿದು, ಅಂತೂ ಡೆಸ್ಟಿನಿ ತಲುಪವಷ್ಟರಲ್ಲಿ ಇಂದ್ರೀಯಾದಿಯಾಗಿ ದೇಹದ ಸಕಲ ಭಾಗವೂ ನಜ್ಜುಗುಜ್ಜು. ಇದು ಬೆಂಗಳೂರಿಗರ ಸಾಕಷ್ಟು ಜನರ ನಿತ್ಯ ಪರಿಪಾಠ. ಅನುಭವಿಸಿದವನಿಗೇ ಗೊತ್ತು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ.  ಇಂತಿಪ್ಪ ಊರಿನಲ್ಲಿ ಕನಕಪುರ ಕಡೆಯಿಂದ ಯಶವಂತಪುರ ರೈಲ್ವೆ ಸ್ಟೇಷನ್ ಗೆ ಪ್ರಯಾಣಿಸಬೇಕಿದ್ದ ನಾನು ಇಂದು ೩ ಗಂಟೆ ಪ್ರಯಾಣ ಬೇಕಾಗುತ್ತಿದ್ದ  ಸ್ಥಳಕ್ಕೆ ೪೦ ನಿಮಿಷಕ್ಕೆ ತಲುಪಲು ಸಾಧ್ಯವಾಗಿಸಿದ್ದು 'ನಮ್ಮ ಮೆಟ್ರೋ'!.

ಟ್ರಾವೆಲ್ ಚಾನಲೊಂದರಲ್ಲಿ ಮುಂಬೈ ನ ಬ್ಯುಸಿ ರೈಲ್ವೆ ಸಿಸ್ಟಮ್ ಕುರಿತು ಡಾಕ್ಯುಮೆಂಟರಿ ನೋಡಿ ಬೆರಗಾಗಿದ್ದ ನನಗೆ, ನಮ್ಮ ಬೆಂಗಳೂರಿಗೂ ಮೆಟ್ರೋ ಬರುತ್ತದೆಯಂತೆ ಎಂಬ ಸುದ್ದಿ ಅತ್ಯಂತ ಸಂತೋಷ ಮತ್ತು ಕಾತುರತೆಯನ್ನು ತಂದಿತ್ತು. ಮೆಟ್ರೋ ಟ್ರೈನಿನ ಸಂಚಾರ ಕುತೂಹಲಕ್ಕಿಂತಲೂ ಅದರ ವಿಳಂಬತೆಗೆ ಹೆಚ್ಚು ಸುದ್ದಿಯಾಗತೊಡಗಿದಾಗ  ಅಷ್ಟೇ ನಿರಾಸೆಯಾಗಿತ್ತು. ಮಂದಗತಿಯಲ್ಲಿ ಸಾಗುತ್ತಿದ್ದ ಮೆಟ್ರೋ ನಿರ್ಮಾಣ ಕಾರ್ಯ, ಅದಕ್ಕೆಂದು ಕಂಡ ಕಂಡಲ್ಲಿ ಅಗೆದಿಟ್ಟ ರಸ್ತೆಗಳನ್ನು, ಹೆಚ್ಚಿದ ಟ್ರಾಫಿಕ್ ಜಾಮ್ ಗಳನ್ನು ನೋಡಿ ಇದು 'ಮುಗಿಯದ' ಪಂಚವಾರ್ಷಿಕ ಯೋಜನೆ ಎಂದು ಒಂದಷ್ಟು ಬೈದುಕೊಂಡಿದ್ದಾಗಿತ್ತು.

ತಡವಾಗಿಯಾದರೂ ಹಾಗೊಂದು ದಿನ ಮೆಟ್ರೋ ರೈಲು ಸಂಪರ್ಕ ಪ್ರಾಯೋಗಿಕ ಹಂತವಾಗಿ ಬಯ್ಯಪ್ಪನಹಳ್ಳಿ ಯಿಂದ ಮಹಾತ್ಮಾ ಗಾಂಧಿ ರಸ್ತೆ ವರೆಗೆಂದು ಉದ್ಘಾಟನೆಗೊಂಡಾಗ, ನವೀನ ಮಾದರಿಯ ರೈಲು ಸಂಪರ್ಕ ವ್ಯವಸ್ಥೆ ಎಲ್ಲೆಡೆ ಬಿಸಿ ಬಿಸಿ ಸುದ್ಧಿಯನ್ನುಂಟುಮಾಡಿತ್ತು. ಎಂಜಿ ರೋಡಿನ ಮೆಟ್ರೋ ಸ್ಟೇಷನ್, ನೋಡುಗರ ತಾಣವಾಗಿ ಮಾರ್ಪಾಟುಗೊಂಡುಬಿಟ್ಟಿತ್ತು. ಎಲ್ಲರಂತೆಯೇ ನಾವೂ ಕೂಡ ಯಾವುದೋ ಒಂದು ಪ್ರಸಿದ್ಧ ಪ್ರವಾಸಿ ತಾಣಕ್ಕೆ ಹೋಗುವಂತೆ ಅಪ್ಪಾಜಿ ಅಮ್ಮ ಎಲ್ಲರನ್ನೂ ಕರೆದುಕೊಂಡು ಹೋಗಿ, ಎಂಜಿ ರೋಡಿನಿಂದ ಬೈಯಪ್ಪನಹಳ್ಳಿ ವರೆಗೆ ಮೆಟ್ರೋ ಟ್ರೈನಿನಲ್ಲಿ ಒಂದು ರೌಂಡ್ ಹೊಡೆದಿದ್ದಾಯಿತು. ಜನಜಂಗುಳಿಯ ಊರಿನಲ್ಲಿ, ನಿಶ್ಯಬ್ದವಾಗಿ ಕ್ಷಣಮಾತ್ರದಲ್ಲಿ ಒಂದು ಸ್ಥಳದಿಂದ ಇನ್ನೊಂದೆಡೆಗೆ ಕರೆದೊಯುವ ಎಸಿ ಟ್ರೈನ್, ವ್ಯವಸ್ಥಿತ ಟಿಕೆಟ್ ಪಡೆಯುವ, ಸಂಚರಿಸುವ ವಿಧಾನ, ಟ್ರೈನಿನ ಒಳಾಂಗಣ ಹೊರಾಂಗಣ ವಿನ್ಯಾಸಗಳನ್ನೆಲ್ಲ ನೋಡಿ ಮರುಳಾಗಿದ್ದೆಲ್ಲ ಆಯಿತು. ಇದರ ಜೊತೆಗೆ, ಮಾಡಲೇ ಬೇಕಾದ ಕರ್ತವ್ಯವೆಂಬಂತೆ, ಮೆಟ್ರೋ ಸ್ಟೇಷನ್ನಿಂದ ಹಿಡಿದು ಒಳಗಡೆ ಟ್ರೈನಿನ ಕಂಬದ ವರೆಗೂ, ಕುಳಿತು, ನಿಂತು, ಒರಗಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿ ಬಂದಿದ್ವಿ.


ಈಗ ಹಂತ ಹಂತವಾಗಿ ಮೆಟ್ರೋ ಪೂರ್ಣ ಪ್ರಮಾಣದ ಸಂಚಾರ ಅಸ್ತಿತ್ವಕ್ಕೆ ಬಂದಿದೆ. ನೇರಳೆ ಮತ್ತು ಹಸಿರು ಮಾರ್ಗವಾಗಿ ಮೆಟ್ರೋ ಟ್ರೈನ್ ಗಳಲ್ಲಿ ಸಂಚರಿಸುವ ಬೆಂಗಳೂರಿಗರು ದಿನಕ್ಕೆ  ಸರಿ ಸುಮಾರು ೧ ಲಕ್ಷ. ನೇರಳೆ ಮತ್ತು ಹಸಿರು ಬಣ್ಣದ ಮಾರ್ಗಗಳು ಅದೆಷ್ಟು ದೂರದ ಸ್ಥಳಗಳನ್ನೂ ಅತೀ ಕಡಿಮೆ ಸಮಯದಲ್ಲಿ ಕೂಡಿಸುತ್ತದೆ. ಸಧ್ಯಕ್ಕೆ ದಿನನಿತ್ಯದ ಪಯಣಿಗಳು ನಾನಲ್ಲದಿದ್ದರೂ, ಹೊರಗೆ ಓಡಾಡುವ ಅವಶ್ಯಕತೆಗೆ ನಾನು ಹೆಚ್ಚು ಅವಲಂಭಿಸಿರುವುದು ಮೆಟ್ರೋ ಟ್ರೈನ್ ಗೆನೆ. ಊರಿಗೆ ಹೋಗಲು ಈಗ ಅದೆಷ್ಟು ಸುಲಭ! ಮೆಟ್ರೋ ಆದಾಗಿನಿಂದ  'ದೂರದ' ಸಂಬಂಧಿಗಳೂ ಕೂಡ ಈಗ ಹತ್ತಿರವಾಗಿದ್ದಾರೆ..ಸ್ವಚ್ಛವಾದ ಸ್ಟೇಷನ್ಗಳು, ಎಲ್ಲಿಂದ ಎಲ್ಲಿಯವರೆಗೆ ಹೋದರೂ ಸಿಗುವ ಮೆಟ್ರೋ ಸಿಬ್ಬಂದಿ ವರ್ಗದವರ ಉತ್ತಮ ಮಾರ್ಗದರ್ಶನ, ಯಾವುದೇ ಟ್ರಾಫಿಕ್ಕಿನ ಕಿರಿಕಿರಿಯಿಲ್ಲದೆ, ಸಮಯದ ವ್ಯಯವಿಲ್ಲದೆ, ನಿರರ್ಮಳವಾಗಿ ಕುಳಿತು ಸಂಚರಿಸುವ ವ್ಯವಸ್ಥೆ,  ಟ್ರೈನಿನಲ್ಲಿ ಕುಳಿತಿರುವಷ್ಟು ಹೊತ್ತು ಸಿಗುವ ನೂರಾರು ಮುಖಗಳು, ನೂರಾರು ಕಥೆಗಳು, ಎಲ್ಲವೂ ಖುಷಿ ಕೊಡುತ್ತದೆ ನನಗೆ... ಇಷ್ಟೆಲ್ಲಾ ಸಿಕ್ಕಿರುವ ಕಾರಣಕ್ಕೋ ಏನೋ, ಇಂದು ಹಸಿರು ಮಾರ್ಗದ ಮೆಟ್ರೋ ಟ್ರೈನಿನಲ್ಲಿ ಈ ಸಂಪರ್ಕವು ನೆನ್ನೆಗೆ ತನ್ನ ಒಂದು ವರ್ಷದ ಯಶಸ್ವಿ 'ಯಾನ' ವನ್ನು ಸಂಭ್ರಮಿಸುತ್ತಿರುವ ಕುರಿತು ಘೋಷಣೆ ಮಾಡಿದಾಗ, ನನಗರಿಲ್ಲದಂತೆಯೇ ನಾನು ಚಪ್ಪಾಳೆ ತಟ್ಟಿ ಸಂಭ್ರಮಿಸಿಬಿಟ್ಟಿದ್ದು..!! (ಕೆಲವರು ಮುಗುಳ್ನಕ್ಕಿದ್ದು, ಕೆಲವರು 'ಇವಳಿಗೇನಾಯಿತು' ಎಂಬಂತೆ ಕೆಕ್ಕರಿಸಿ ನೋಡಿದ್ದು ಬೇರೆ ಮಾತು)

ಒಟ್ನಲ್ಲಿ ಹ್ಯಾಪಿ ಫಸ್ಟ್ ಇಯರ್ ಬರ್ತ್ಡೇ ಮೈ ಡಿಯರ್ 'ನಮ್ಮ ಮೆಟ್ರೋ' (ಗ್ರೀನ್ ಲೈನ್). 

ಬುಧವಾರ, ಜೂನ್ 13, 2018

'ಮಾಸ್ಟರ್ ಮೈಂಡ್'!!

ಮಗಳು ಹುಟ್ಟಿದ ಮೇಲೆ ಮತ್ತೊಮ್ಮೆ ಬಾಲ್ಯವನ್ನು ಅನುಭವಿಸುತ್ತಿರುವ  ನನಗೆ ಮತ್ತು ನನ್ನ ಮನೆಯವರಿಗೆ, ಈಗಿನ ಕಾಲಕ್ಕೆ ಸಿಗುತ್ತಿರುವ ಮಕ್ಕಳ ಬಗೆ ಬಗೆಯ ಬೋರ್ಡ್ ಗೇಮ್ ಗಳು ಒಂದು ಸೋಜಿಗ. ಮಗಳಿಗೆ ಚಿಕ್ಕಂದಿನಿಂದ್ಲೂ ಜೋಡಣೆಯ ಮಾದರಿಯ ಆಟಗಳು ಹೆಚ್ಚಾಗಿ ಆಸಕ್ತಿಯಿರುವುದರಿಂದ, ಅವಳ ಕಪಾಟಿನ ತುಂಬಾ ಬೋರ್ಡ್ ಗೇಮ್ ಗಳ ಬಾಕ್ಸ್ ಗಳೇ ತುಂಬಿಕೊಂಡಿವೆ. ನಾವು (ವಯಸ್ಸಿನಲ್ಲಿ) ಮಕ್ಕಳಾಗಿದ್ದ ಕಾಲಕ್ಕೆ ಜೂಟಾಟ, ಕಣ್ಣಾಮುಚ್ಚಾಲೆ, ಮರಕೋತಿ ಆಟ, ಕುಂಟಾಬಿಲ್ಲೆ, ಅಡುಗೆ ಆಟ, ಮಣ್ಣಿನಲ್ಲಿ ದೇವಸ್ಥಾನ ಕಟ್ಟುವುದು, ಶಟಲ್ ಬ್ಯಾಡ್ಮಿಂಟನ್, ಸೈಕಲ್ಲು, ಖೋ ಖೋ, ಬಾಲು-ಬ್ಯಾಟು, ಕ್ರಿಕೆಟ್ ಹೀಗೆ ಎಲ್ಲ ಓಡಾಡಿ ಆಡುವ ಹೊರಾಂಗಣ ಆಟಗಳೇ ಹೆಚ್ಚಾಗಿ ರೂಡಿಯಲ್ಲಿದ್ದವು. ಆಟಿಕೆಗಳ ಕೊರತೆಯಿಲ್ಲದಿದ್ದರೂ ಸಾಗರದಂತ ಊರಲ್ಲಿ ವಿಶೇಷ ಆಟಿಕೆಗಳೇನೂ ಸಿಗ್ತಿರ್ಲಿಲ್ಲ. ಸಾಮಾನ್ಯವಾಗಿ ಸಿಗುತ್ತಿದ್ದ ಒಂದಷ್ಟು ಗೊಂಬೆಗಳು, ಕವಡೆ, ಚನ್ನೆಮಣೆ, ಹಾವು-ಏಣಿ, ಚದುರಂಗ, ಕೇರಂ ಬೋರ್ಡ್ ಇವೇ ಎಲ್ಲಾ ಎಲ್ಲರ ಮನೆಯಲ್ಲೂ ಲಭ್ಯವಿರುತ್ತಿದ್ದಆಟದ ಸಾಮಾನುಗಳು.  ಬೆಂಗಳೂರಿನಿಂದ ಸೋದರಮಾವ ರಜೆಯಲ್ಲಿ ಮಕ್ಕಳು ಆಡ್ಕೊಳ್ಳಿ ಎಂದು 'ಬಿಸಿನೆಸ್ ಬೋರ್ಡ್' ಆಟದ ಬಾಕ್ಸ್ ಅನ್ನು ಅಜ್ಜನ ಮನೆಗೆ ತಂದಾಗ, ಅದೇ ಒಂದು ದೊಡ್ಡ ವಿಶೇಷವಾದ ಆಟ ನಮಗಾಗ.. ಈಗೆಂತು ಬಿಡಿ, ಮಾರುಕಟ್ಟೆಯಲ್ಲಿ ನೂರಾರು ಬಗೆಯ ಬೋರ್ಡ್ ಗೇಮ್ ಗಳು ಲಭ್ಯ. ಹೆಚ್ಚು ಮೊಬೈಲ್, ಟಿವಿ, ಲ್ಯಾಪ್ಟಾಪ್ ಗೀಳಿಗೆ ಮಗಳನ್ನು ಹಚ್ಚದ ಕಾರಣ, ಅವಳಿಗೆ ಭೌತಿಕವಾಗಿ ಆಡುವಂತಹ ಆಟಗಳನ್ನೇ ನೀಡುವ ಪ್ರಯತ್ನದಲ್ಲಿ, ಈಗ ಅವಳ ಜೊತೆ ನಾವೂ ಕೂಡ ಕೂತು ಆಡುವ ರಮ್ಯ ಚೈತ್ರ ಕಾಲ. ಇಂತಿಪ್ಪ ಅವಳ ಆಟಿಕೆಗಳಲ್ಲಿ, ಕಳೆದ ವರ್ಷ ಅವಳ ಬರ್ತಡೆಗೆ ಸ್ನೇಹಿತರೊಬ್ಬರು ನೀಡಿದ್ದ ಉಡುಗೊರೆಯಾಗಿ ಬಂದಿದ್ದ, ಸಧ್ಯಕ್ಕೆ ಗೀಳು ಹಿಡಿದಿರುವ ಒಂದು ಆಸಕ್ತಿದಾಯಕ ಆಟ 'ಮಾಸ್ಟರ್ ಮೈಂಡ್' ಗೇಮ್.



'ಮಾಸ್ಟರ್ ಮೈಂಡ್' ಗೇಮನ್ನು ಮೊದಲ ಸಾರಿ ಕಂಡಾಗ,ಕ್ಯೂರಿಯೋಸಿಟಿ ಗೆ ಇದರ ಕುರಿತಾಗಿ ಗೂಗಲ್ ಮಾಡಿದಾಗ ಇದರ ಇತಿಹಾಸ, ದೊರಕಿದ ಮಾಹಿತಿಗಳು ಕೂಡ ಅಷ್ಟೇ ರೋಚಕವಾಗಿದ್ದವು. ಇಸ್ರೇಲಿನ ಟೆಲಿಕಂಮ್ಯುನಿಕೇಷನ್ ಪೋಸ್ಟ್ ಮಾಸ್ಟರ್ ಒಬ್ಬರಿಂದ ಆವಿಷ್ಕಾರಗೊಂಡ ಆಟವಾದರೂ, ಶತಮಾನಗಳ ಹಿಂದೆ ಸಾಂಪ್ರದಾಯಿಕವಾಗಿ ಪೆನ್ಸಿಲು ಮತ್ತು ಪೇಪರ್ರಿನಲ್ಲಿ ಆಡುತ್ತಿದ್ದ ೪ ಅಂಕಿಗಳ 'Cows and bulls' ಆಟದ ಅನುರೂಪವೇ ಈ ಮಾಸ್ಟರ್ ಮೈಂಡ್ ಗೇಮ್. ೪ ಅಂಕಿಗಳ ಸಂಖ್ಯೆಯೊಂದನ್ನು ಸೀಕ್ರೆಟ್ ನಂಬರ್ರಾಗಿಟ್ಟುಕೊಂಡು, ಅದನ್ನು ಮತ್ತೊಬ್ಬ ಆಟಗಾರ ಸರಿಯಾದ ಅಂಕೆಗಳು ಮತ್ತದರ ಸ್ಥಾನಗಳನ್ನು ಊಹಿಸಿ ಕಂಡುಹಿಡಿಯಬೇಕು. ಸರಿಯಾದ ಸ್ಥಾನ ಮತ್ತು ಅಂಕೆಯನ್ನು bull  ಪ್ರಮಾಣದಿಂದ ಸೂಚಿಸಿದರೆ, ಸರಿಯಾದ ಅಂಕೆ ಇದ್ದರೆ 'cow' ಎಂಬ ಸುಳಿವು ನೀಡಲಾಗುತ್ತಿತ್ತು. ಈ ಆಟಕ್ಕೆ ಗಣಿತ ಕ್ರಮಾವಳಿ ಅಥವಾ ತಂತ್ರಗಳ ಬಳಕೆ ಕೂಡ ಒಂದು ಕೌಶಲ್ಯವಾಗಿ ಉಪಯೋಗವಾಗುತ್ತದೆ. ಈ ಪೇಪರ್ರಿನ ಆಟದ ಕ್ರಮಾವಳಿಯನ್ನೇ ವಸ್ತುವಿಷಯವಾಗಿಟ್ಟುಕೊಂಡು, ೧೯೬೮ ರಲ್ಲಿ, ಕೇಂಬ್ರಿಡ್ಜ್ ಯುನಿವರ್ಸಿಟಿಯ ಬೃಹತ್ಗಣಕಕ್ಕೆ ಮೊದಲ ಸಾರಿ ಗಣಕಯಂತ್ರ ಪ್ರೋಗ್ರಾಮ್ ಅನ್ನು ಬರೆಯಲಾಗಿತ್ತಂತೆ.  ವರ್ಷಗಳು ಕಳೆದಂತೆ ವರ್ಡ್ ಮಾಸ್ಟರ್ ಮೈಂಡ್, ನಂಬರ್ಸ್ ಮಾಸ್ಟರ್ ಮೈಂಡ್, ಎಲೆಕ್ಟ್ರಾನಿಕ್ ಮಾಸ್ಟರ್ ಮೈಂಡ್ ಇತ್ಯಾದಿಯಾಗಿ ಹಲವಾರು ಕಾಂಬಿನೇಶನನ್ನಿನ್ನ ಹಲವು ಬಗೆಯ ಮಾಸ್ಟರ್ ಮೈಂಡ್ ಗೇಮ್ಗಗಳು ಳನ್ನು ಗಣಕ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಯಿತು. ಈಗೆಂತು  ಸಾಕಷ್ಟು iOS  ಮತ್ತು ಆಂಡ್ರಾಯ್ಡ್ ಆವೃತ್ತಿಯ ಹಲವಾರು ಗೇಮ್ಸ್ ಅಪ್ ಗಳು ಉಚಿತವಾಗಿ ಲಭ್ಯವಿದೆ .   


  
ಮಾಸ್ಟರ್ ಮೈಂಡ್ ಗೇಮ್ ಒಂದು ಸಲಕ್ಕೆ ಇಬ್ಬರು ಆಡಬಹುದಾದಂತಹ ಆಟ. ಮಕ್ಕಳ ಆಕರ್ಷಣೆಗೆಂದು ವಿವಿಧ ಥೀಮ್ ನಲ್ಲಿ ದೊರಕುವ ಈ ಬೋರ್ಡ್ ಗೇಮ್,  ನಮ್ಮ ಮನೆಗೆ  ಆಗಮಿಸಿರುವುದು ಜಂಗಲ್ ಥೀಮಿನಲ್ಲಿ. ಹಸಿರು ಬಣ್ಣದ ಬೋರ್ಡಿನ ತುಂಬಾ ೩ ಸಾಲಿನ ಹಲವಾರು ರಂದ್ರಗಳಿರುತ್ತವೆ. ಈ ಆಟದಲ್ಲಿ ಒಬ್ಬ 'ಕೋಡ್ ಮೇಕರ್ ' ಆದರೆ ಮತ್ತೊಬ್ಬ 'ಕೋಡ್ ಬ್ರೇಕರ್' ಆಗುತ್ತಾನೆ. ಆಟ  ಹೀಗೆ ಸಾಗುತ್ತದೆ. 'ಕೋಡ್ ಮೇಕರ್' ೬ ವರ್ಣಗಳಲ್ಲಿ ದೊರಕಿರುವ ವಿವಿಧ ಪ್ರಾಣಿಗಳಲ್ಲಿ ಯಾವುದಾದರೂ ೩ ಚಿಹ್ನೆಗಳನ್ನು ಬೋರ್ಡಿನ ಒಂದು ತುದಿಯಲ್ಲಿ ನೀಡಿರುವ ಸೀಕ್ರೆಟ್ ಜಾಗದಲ್ಲಿ ಎದುರಾಳಿಗೆ ಕಾಣದಂತೆ ಜೋಡಿಸಿ ಇಡಬೇಕು. 'ಕೋಡ್ ಬ್ರೇಕರ್' ನ ಕೆಲಸವೆಂದರೆ, ತನ್ನ ಬುದ್ಧಿ ಚಾಣಾಕ್ಷಕತೆಯಿಂದ, ತನ್ನ ಬಳಿಯಿರುವ ೬ ವರ್ಣಗಳ ಪ್ರಾಣಿಗಳಲ್ಲಿ, ೩ ವರ್ಣಗಳನ್ನು ಸಾಲಾಗಿ ಊಹಿಸಿ ಜೋಡಿಸುತ್ತಾ ಹೋಗಬೇಕು. ಸರಿಯಾದ ೩ ವರ್ಣಗಳು ಮತ್ತು ಅವುಗಳ ಸ್ಥಾನ ಎಲ್ಲವೂ ಹೊಂದಿಕೆಯಾಗುವವರೆಗೆ ನಿರಂತರವಾಗಿ ೩ ಪೇದೆಗಳನ್ನು ಸಾಲಾಗಿ ಊಹಿಸುತ್ತ ಸಾಗಬೇಕು. ಪ್ರತಿಸಲವೂ ವರ್ಣಗಳ ಜೋಡಣೆ ಮಾಡಿದಂತೆಯೂ, ಕೋಡ್ ಮೇಕರ್ ಸರಿಯೇ ತಪ್ಪೇ ಎಂಬ ಮರುಮಾಹಿತಿ ತಿಳಿಸಲು, ಆ ಊಹಿಕೆಯ ನೇರ ಸಾಲಿನಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಗುರುತನ್ನುಇಡುತ್ತಾನೆ. ಬಿಳಿ ಬಣ್ಣವು 'ಸರಿಯಾದ ವರ್ಣ ಆದರೆ ತಪ್ಪು ಸ್ಥಾನದಲ್ಲಿ' ಎಂಬುದನ್ನು ಸೂಚಿಸಿದರೆ, ಕೆಂಪು ಬಣ್ಣ ಇಟ್ಟಿರುವ ವರ್ಣ 'ಸರಿಯಾದದ್ದು ಮತ್ತು ಸರಿಯಾದ ಸ್ಥಳದಲ್ಲಿದೆ' ಎಂಬುದನ್ನು ತಿಳಿಸಲುಬಳಸಲಾಗುತ್ತದೆ. ಹೀಗೆ ದೊರಕಿದ ಮಾಹಿತಿಯನ್ನನುಕರಿಸಿ ಕ್ರಮ ಪಲ್ಲಟನೆ ಮಾಡುತ್ತಾ 'ಕೋಡ್ ಮೇಕರ್' ರೂಪಿಸರುವ ಕೋಡ್  ಅನ್ನು ಕಂಡು ಹಿಡಿಯಬೇಕಾಗುತ್ತದೆ. ಇದನ್ನು ನಿರ್ಮಿಸಲು ಪ್ರಯತ್ನಿಸುವುದು ನೋಡುವಷ್ಟು ಸುಲಭವಲ್ಲ. ಏಕೆಂದರೆ ಇದರಲ್ಲಿ ಚಾಲೆಂಜ್ ಎಂದರೆ ಅತ್ಯಂತ ಕಡಿಮೆ ಸಾಲುಗಳ ಸಾಧ್ಯತೆಯಲ್ಲಿ ಈ ಕೋಡ್ ಬ್ರೇಕ್ ಆಗಬೇಕು. ಮಾತಿಗೆ ಅವಕಾಶವಿಲ್ಲದೇ ಕೇವಲ ಬಣ್ಣದ ಚಿಹ್ನೆಗಳ ಮೂಲಕ ಕೋಡನ್ನು ಕಂಡು ಹಿಡಿಯುವುದು ನಮ್ಮ ಬುದ್ಧಿಗೊಂದಷ್ಟು ಹೊಂವರ್ಕ್ ಕೊಟ್ಟಂತೆ. 




 ೬ ವರ್ಣಗಳಲ್ಲಿ ೩ ವರ್ಣಗಳ ಸಾಧ್ಯತೆಯ ಊಹಿಕೆ,  ಸ್ಥಾನ ಪಲ್ಲಟನೆಯ ಚಾಣಾಕ್ಷತೆ ಎಲ್ಲವೂ ಮೆದುಳಿಗೆ ಚುರುಕು ಮುಟ್ಟಿಸಿ ನಮ್ಮನ್ನು ಜಾಗೃತಗೊಳಿಸುವುದರಲ್ಲಿ ಏನೂ ಸಂದೇಹವಿಲ್ಲ. ಚದುರಂಗದಂತೆಯೇ  ಹಂತ ಹಂತವಾಗಿ ಮುಂದಿನ ಸಂಭವನೆಯನ್ನು ಊಹಿಸುವಂತೆಯೇ ಈ ಆಟವೂ ನಮ್ಮ ಯೋಚನಾ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಚಿಕ್ಕ ಮಕ್ಕಳಿಗೆಂದು ೩ ಸಾಲಿನ ಸಂಯೋಜನೆಯಲ್ಲಿ ದೊರಕುವ ಈ ಆಟಿಕೆ ವಯಸ್ಸಿಗನುಗುಣವಾಗಿ  ೪, ೫ ಸಾಲಿನ ಕಾಂಬಿನೇಷನ್ ನಲ್ಲೂ ಲಭ್ಯವಿದೆ. ಒಟ್ಟಾರೆಯಾಗಿ ದೊಡ್ಡವರು ಚಿಕ್ಕವರೆನ್ನದೇ ಆಡಲು ಒಂದು ಸೂಕ್ತ ಆಟ.

ಸೋಮವಾರ, ಮೇ 28, 2018

ಮಂಡಲದ ಸುತ್ತ..

ಇದೇನ್ರೀ ಮಂಡಲ ಎಂದರೆ? ಅಲ್ಲಿ ಇಲ್ಲಿ ಸುಮ್ಮನೆ ಏನೋ ಒಂದಷ್ಟು ಡಿಸೈನ್ ಮಾಡಿಕೊಂಡು, ರಂಗೋಲಿ ತರ ಚಿತ್ರ ಬಿಡಿಸಿ ಅದಕ್ಕೊಂದಷ್ಟು ಬಣ್ಣ ತುಂಬೋದ್ರಲ್ಲೇನಿದೇರೀ ದೊಡ್ಡ ವಿಶೇಷ ಎಂದಿರಾ?? ಕೇವಲ ಚಿತ್ರಗಳ ರೂಪದಲ್ಲಿಯೇ ಅದಮ್ಯವಾದ ಶಕ್ತಿಯನ್ನು ತುಂಬುವ, ನವ ಚೈತನ್ಯದ ರೂಪವಾದ ಮಂಡಲಗಳ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ..





 ಮಂಡಲಗಳೆಂದರೆ ಅದೊಂದು ಕೇವಲ ಕೈಬರಹವಲ್ಲ ಅಥವಾ ಪೈಂಟ್ ಬ್ರಶ್ ನಿಂದ ಒಟ್ಟಾರೆಯಾಗಿ ಗೀಚಿ ರಚಿಸಿದ ಚಿತ್ರಪಟವಲ್ಲ. ಅದೊಂದು ಧ್ಯಾನ. ಹಾಂ! ಹೌದಾ..! ಧ್ಯಾನ ಎಂದರೆ ನಿಶ್ಯಬ್ಧವಾಗಿ ಕುಳಿತು ಏನೂ ಮಾಡದೆ ಅಥವಾ ಒಂದಷ್ಟು ಮಂತ್ರಗಳನ್ನುಚ್ಛರಿಸುತ್ತಾ ದೇವರ ಸ್ತುತಿಸುವ ಬಗೆ ಗೊತ್ತು.. ಚಿತ್ರ ಬರ್ಕೊಂಡು ಧ್ಯಾನ ಮಾಡೋದು..ಇದ್ಯಾವ ಬಗೆಯ ಹೊಸ ಅವತಾರ ಎಂದು ಕೇಳಿದೀರಾ? ನಮ್ಮದೇ ಚಿತ್ರಕಲೆಯಿಂದ ಮನಸ್ಸನ್ನು ಒಂದೆಡೆ ಕೇಂದ್ರೀಕೃತಗೊಳಿಸುವಲ್ಲಿ ಅಥವಾ ಒಂದು ಚಿತ್ರಪಟವನ್ನು ಕಂಡು ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯ ಮೂಡುವಂತಾದರೆ, ಋಣಾತ್ಮಕ ಆಲೋಚನೆಗಳು ದೂರವಾಗಿ, ನಮ್ಮೊಳಗೇ ಇರುವ ಧಾರಣಶಕ್ತಿಯ ಅರಿವು ನಮಗೆ ಸಿಗುವಂತಾದರೆ, ಅದೇ ಧ್ಯಾನವೆನಿಸಿಕೊಳ್ಳುವುದಿಲ್ಲವೇ?

ಸಂಸ್ಕೃತದಲ್ಲಿ ''ಮಂಡ' ಎಂದರೆ ಅಲಂಕರಿಸುವುದು ಅಥವಾ ಸಿದ್ಧಗೊಳಿಸುವುದು ಎಂದರ್ಥ. ಲ ಎಂಬ ಅಂತ್ಯಪ್ರತ್ಯಯ ದೊಂದಿಗೆ, ಮಂಡಲ ವೆಂದರೆ ಒಂದು ಪವಿತ್ರವಾದ ವರ್ತುಲ ಅಥವಾ ಕೇಂದ್ರಬಿಂದು ಎಂದು ಅರ್ಥ. ಮಂಡಲ ಒಂದು ಸಂಕೀರ್ಣವಾದ, ಅಮೂರ್ತವಾದ, ಸಾಮಾನ್ಯವಾಗಿ ವೃತ್ತಾಕಾರದಲ್ಲಿ ರಚಿಸಲ್ಪಡುವ ಚಿತ್ರ. ಒಂದು ನಿರ್ಧಿಷ್ಟವಾದ ಮಧ್ಯಬಿಂದುವಿನಿಂದ ಪ್ರಾರಂಭಿಸಿ, ಚಿಹ್ನೆ,ಆಕೃತಿ, ಆಕಾರಗಳು ಹೀಗೆ ಹತ್ತು ಹಲವು ನಮೂನೆಗಳಿಂದ ಮಾಡಲ್ಪಡುವ ಒಂದು ವ್ಯೂಹ ರಚನೆ. ಸಾಮಾನ್ಯವಾಗಿ ಮಂಡಲಗಳನ್ನು ಜ್ಯಾಮಿತಿಯ ರೂಪದಿಂದ ಚಿತ್ರಿಸುವುದಾದರೂ, ಕೆಲವು ಬಿಡಿಸುವಾತನ  ಕಲ್ಪನೆಯಿಂದುದಯಿಸಿದ  ಜೈವಿಕವಾದ  ಚಿತ್ರಣವಾಗಿರುತ್ತದೆ. ಅನೇಕ ಸಾರಿ ಮಂಡಲದಲ್ಲಿ  ಚಿತ್ರಿಸುವಾತನ ಮನಸ್ಸಿನ ಮೂಲಕ ಹೊರಹೊಮ್ಮುವ ವಸ್ತು ವಿಷಯಗಳೂ ಕೂಡ ಸೆಲೆ ಯಾಗಿ ಮೂಡಿರುತ್ತದೆ.

ಮಂಡಲಗಳ ಹಿನ್ನೆಲೆ ಮತ್ತುಆಕರ್ಷಕ ಸಂಗತಿಗಳು:

ಮಂಡಲ ಮುಖ್ಯವಾಗಿ ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಅನಾದಿ ಕಾಲದಿಂದಲೂ ಬಳಸಿಕೊಂಡು ಬಂದಿರುವ ಒಂದು ಶದ್ಧಾಪೂರ್ವ ಧಾರ್ಮಿಕ ಚಿತ್ರಣ.  ೪ ನೇ ಶತಮಾನದಿಂದಲೇ  ಟಿಬೆಟ್, ಇಂಡಿಯಾ, ಚೀನಾ, ಜಪಾನ್, ನೇಪಾಳ ಮೊದಲಾಗಿ ಹಲವು ಏಷಿಯಾ ದೇಶಗಳಲ್ಲಿ ಮಂಡಲಗಳ ರಚನೆ ಅಸ್ತಿತ್ವದಲ್ಲಿತ್ತು ಎಂದು ಹಲವು ಮೂಲಗಳಿಂದ ದೊರಕಿದ ಮಾಹಿತಿಯಿದೆ. ಈ ಸಮಸ್ತ ವಿಶ್ವವೇ ಒಂದು ಕೇಂದ್ರೀಕೃತವಾದ ಶಕ್ತಿಯ ಸ್ವರೂಪ ಎಂದು ಮಂಡಲಗಳ ಮೂಲಕ ಪ್ರತಿಬಿಂಬಿಸಲಾಗುತ್ತದೆ. ಧ್ಯಾನ ವಾತಾವರಣವನ್ನು ನಿರ್ಮಿಸಲು, ಚಿಕಿತ್ಸಕ ಶಕ್ತಿಯನ್ನು ಒಂದೆಡೆ ಆವಾಹಿಸಲೆಂಬ ಕಾರಣಕ್ಕಾಗಿ ಮಂಡಲ ರೇಖಾಚಿತ್ರಗಳ ರಚನೆಯನ್ನು ಪ್ರಾರಂಭಿಸಿದರು ಎಂಬ ಪ್ರತೀತಿಯಿದೆ. ಇದೀಗ ಪ್ರಪಂಚದಾದ್ಯಂತ ಮಂಡಲಗಳು ಅವುಗಳ ಪವಿತ್ರ ರಚನೆ ಮತ್ತು ಚಿಕಿತ್ಸಕ ಬಳಕೆಯಿಂದಾಗಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ.

ಹಿಂದೆ ಕೇವಲ ಬೌದ್ಧ ಮತ್ತು ಹಿಂದೂ ಧರ್ಮದ ರಾಷ್ಟ್ರಗಳಲ್ಲಿ ಅದರಲ್ಲೂ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಮಂಡಲಗಳ ರಚನೆ ಮತ್ತು ಬಳಕೆ ಈಗ ಪ್ರಪಂಚದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಚಕ್ರ, ವರ್ತುಲಗಳ ಮಹತ್ವ ಮತ್ತು ಮೌಲ್ಯ ಯಾವುದೇ ಪ್ರಾಂತ್ಯ - ಧರ್ಮದ ಹಂಗಿಲ್ಲದೇ ಅನಾದಿ ಕಾಲದಿಂದಲೂ ಶಕ್ತಿಯ ಸ್ವರೂಪವಾಗಿ ಅಂತರ್ಗತವಾದ್ದರಿಂದ, ಕೇವಲ ಏಷ್ಯಾದ ದೇಶಗಳಲ್ಲಷ್ಟೇ ಅಲ್ಲದೆ, ಅಮೇರಿಕದಂತಹ ದೇಶಗಳಲ್ಲೂ ಮಂಡಲ ರಚನೆಯು ಒಂದು ಉತ್ತಮ ಆಧ್ಯಾತ್ಮಿಕ ಕ್ರಿಯೆಯಾಗಿ ಮನ್ನಣೆ ಪಡೆದಿದೆ. ಒಟ್ಟಾರೆಯಾಗಿ ಮಂಡಲಗಳ ರಚನೆ ಮತ್ತು ಬಳಕೆಗೆ ಯಾವುದೇ ಜಾತಿ-ಧರ್ಮದ ಮಿತಿಯಿಲ್ಲ.

ಹಲವು ಐತಿಹಾಸಿಕ ಬೌದ್ಧ ಮಂಡಲಗಳ ಸಾಂಪ್ರದಾಯಿಕ ಚಿತ್ರಣಗಳಲ್ಲಿ, ಮಂಡಲದ ವೃತ್ತಾಕಾರವು ಸಮಸ್ತ ಭೂಗೋಳ ಮತ್ತದರ ಮಧ್ಯದಲ್ಲಿ ೫ ತುದಿಗಳನ್ನುಳ್ಳ ಕಾಲ್ಪನಿಕ ಮೇರು ಪರ್ವತದ  ರೂಪವನ್ನುಕಾಣಬಹುದಾಗಿದೆ .  ಇಂಡೋನೇಷ್ಯಾ ಮತ್ತು ಕ್ಯಾಂಬೋಡಿಯಾದಲ್ಲಿ ೩-ಡಿ ಮಾದರಿಯ ಬೌದ್ಧ ದೇವಾಲಯಗಳು ಈ ಮಂಡಲಗಳ ಭೌತಿಕ ಅನುಭೂತಿಯನ್ನುನೀಡುವ ಅತ್ಯಂತ ಸುಂದರ ತಾಣವಾಗಿದೆ. ನಮ್ಮ ದೇಶದಲ್ಲೂ ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ, ಹಿಂದೂ ಮತ್ತು ಬೌದ್ಧ ದೇವಾಲಯಗಳ ಛಾವಣಿಗಳಿಗೆ ಮಂಡಲಗಳ ಮಾದರಿಯ ವಾಸ್ತುಶಾಸ್ತ್ರ ಸಹಿತ ಅಲಂಕಾರ, ಕಲ್ಲಿನ ಕೆತ್ತನೆಗಳು  ಇಂದಿಗೂ ಕಾಣಬಹುದು. ಹಲವು ದೇಶಗಳಲ್ಲಿ ಅನುಸರಿಸುವ ಹಲವು ಮಂಡಲಗಳ ವಿನ್ಯಾಸಗಳು, ಆಕೃತಿಗಳು ತುಸು ವಿಭಿನ್ನವೆನಿಸಿದರೂ ಮಂಡಲಗಳ ಮೂಲ ಧಾತುಗಳು ಒಂದೇ ಅದುವೇ ಧನಾತ್ಮಕ ಶಕ್ತಿ ಮತ್ತು ಪಾವಿತ್ರ್ಯತೆ. ನ್ಯೂ ಯಾರ್ಕ್ ನ ಮೇಲೆ ಭಯೋತ್ಪಾದಕರ ಧಾಳಿಯ ನಂತರದ ವಿಷಾದ ಪರಿಸ್ಥಿತಿಗೆ ಸ್ಪಂದನೆಯಾಗಿ, ಟಿಬೆಟ್ಟಿನ ಪ್ರಮುಖ ಬೌದ್ಧ ಸಂಸ್ಥೆಯೊಂದರಿಂದ ಅತ್ಯಂತ ಸೂಕ್ಷ್ಮತೆಯಿಂದ ಮತ್ತು ಪ್ರಭಾವಶಾಲಿ ಮಂಡಲವಾದ, 'ಸ್ಯಾನ್ಡ್ ಮಂಡಲ' ವನ್ನು ಆತ್ಮಸ್ತೈರ್ಯ ತುಂಬುವ ಪ್ರತೀಕವಾಗಿ ಮಾಡಿಕೊಡಲಾಗಿತ್ತಂತೆ  ಮಂಡಲಗಳನ್ನು ಅಷ್ಟರ ಮಟ್ಟಿನ ಪ್ರಭಾವಶಾಲೀ ದೈವಿಕ ಮಾಧ್ಯಮದ ರೂಪದಲ್ಲಿ ಬಳಸಲಾಗುತ್ತದೆ.



ಟಿಬೆಟ್ಟಿಯನ್ನರಲ್ಲಿ ಮಂಡಲಗಳ ರಚನೆ ಅತ್ಯಂತ ಅಪರಿಮಿತ ಆಧ್ಯಾತ್ಮಿಕ ಕ್ರಿಯೆಯೆಂದೇ ನಂಬುಗೆಯಿದೆ. ಮಂಡಲಗಳು ರಚಿಸುವ ಸ್ಥಳವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ.
 ಹೆಚ್ಚಿನ ಬೌದ್ಧ ಅನುಯಾಯಿಗಳು,  ತಮ್ಮ ಜ್ಞಾನಾರ್ಜನೆಯ ಸಮಯದಲ್ಲಿ ಮಂಡಲ ರಚನೆಯನ್ನು ಅಭ್ಯಸಿಸಿರುತ್ತಾರೆ. ಅನೇಕ ಬಗೆಯ ರೇಖಾಚಿತ್ರಗಳನ್ನು ಚಿತ್ರಿಸಿ, ಕುಂಚಗಳ ಬಳಕೆಯಿಂದ ಮಂಡಲಗಳನ್ನು ಕಲಾತ್ಮಕವಾಗಿ ವರ್ಣಲೇಪನ ಮಾಡುತ್ತಾರೆ. ಟಿಬೆಟ್ಟಿಯನ್ ಭಿಕ್ಷು ಗಳ ಪ್ರಕಾರ, ಹೆಸರಾಂತ 'ಸ್ಯಾಂಡ್ ಮಂಡಲ' ಒಂದು ಅದ್ಭುತವಾದ ಪರಮಮೂಲ ಚಿಕಿತ್ಸಕ ಕ್ರಿಯೆ. ಶ್ರದ್ಧೆ, ತಾಳ್ಮೆ, ಏಕಾಗ್ರತೆ, ಸೂಕ್ಷ್ಮತೆ,  ಮಂಡಲದೆಡೆಗೆ ನಂಬಿಕೆ ಎಲ್ಲವನ್ನೂ ಪರಿಗಣಿಸಿ ಮಂಡಲಗಳ ರಚನೆಯ ಪ್ರಾರಂಭವಾಗುತ್ತದೆ. ಹಿಂದೆಲ್ಲ ಪುಡಿ ಮಾಡಿದ ಕಲ್ಲುಗಳು ಮತ್ತು ಹರಳುಗಳಿಂದ ತಯಾರಿಸುತ್ತಿದ್ದ ಮಂಡಲಗಳ ತಯಾರಿಕೆಗೆ ಇತ್ತೀಚಿಗೆ ಅನೇಕ ತರಹದ ಮಾರ್ಬಲ್ ಪುಡಿಗಳು ಲಭ್ಯ. ಕೆಲವು  ಸಾಂಪ್ರದಾಯಿಕ ದೈವಿಕ ವಿಧಿ ಕಾರ್ಯಕ್ರಮಗಳ ಸಂದರ್ಭಗಳಲ್ಲಿ, ಕಾಡು ಮೇಡು ಅಲೆದು, ಔಷಧೀಯ ಗುಣಗಳುಳ್ಳ ಸಸ್ಯ ರಾಶಿಗಳಿಂದ  ನಿರ್ಮಿತವಾದ ನೈಸರ್ಗಿಕ ವರ್ಣಮಯ ಪುಡಿಗಳಿಂದ ಮಂಡಲಗಳನ್ನೂ ಕೂಡ ರಚಿಸುತ್ತಾರೆ. ಈ ರೀತಿಯಾಗಿ ನಿರ್ಮಿಸುವ ಮಂಡಲಗಳ ತಯಾರಿಕೆ ಹಲವು ವಾರಗಳು-ತಿಂಗಳವರೆಗೂ ಎಡೆಬಿಡದೆ ನಡೆಯುತ್ತದೆ. ಒಮ್ಮೆ ಮಂಡಲಗಳು ಪೂರ್ಣಗೊಂಡ ನಂತರದಲ್ಲಿ ಕಟ್ಟುನಿಟ್ಟಾದ ಧ್ಯಾನ ಪೂಜೆಗಳು ಸಾಗುತ್ತವೆ. ಎಲ್ಲ ರೀತಿಯ ಧನಾತ್ಮಕ ಶಕ್ತಿಯನ್ನು ಜಪ ಪಠಣೆಗಳ ಮೂಲಕ ಆಮಂತ್ರಿಸಲಾಗುತ್ತದೆ.  ಈ ರೀತಿಯಾದ ಪವಿತ್ರವಾದ ಮಂಡಲಗಳ ರಚನೆಗೆ ಹೇಗೆ ನಿಯಮ ನಿಷ್ಠೆಗಳಿರುತ್ತವೆಯೋ, ಅಷ್ಟೇ   ಮಂಡಲ ರಚನೆಯ ಕ್ರಿಯೆಯಿಂದ ದೊರಕುವ ಉಪಶಮನ ಇಂದ್ರೀಯಗಳಿಗೆ ಗೋಚರವಾಗದಿದ್ದರೂ, ಮಾನಸಿಕ ಅನುಭವಕ್ಕೆ ಸಿಗುವಂತಹ ಒಂದು ಸಾರ ಎಂಬ ನಂಬಿಕೆ ಇವರುಗಳದ್ದು. ಇಲ್ಲಿನ ಬೌದ್ಧ ಅನುಯಾಯಿಗಳು ನೈಸರ್ಗಿಕವಾಗಿ ದೊರೆಯುವ ಕಲ್ಲುಗಳನ್ನು ಜಜ್ಜಿ ಅದರ ನುಚ್ಚಿನಿಂದ ತಯಾರು ಮಾಡಿದ ಬಣ್ಣಗಳನ್ನು ಅತ್ಯಂತ ಸೂಕ್ಷಮತೆಯಿಂದ ಕೊಳವೆಗಳನ್ನು ಬಳಸಿ, ಕ್ರೆಯಾಶೀಲವಾಗಿ ಮಂಡಲಗಳ ರಚನೆಯನ್ನು ಮಾಡುತ್ತಾರೆ. ಯಾವುದೇ ಜಾತಿ ಮತ ಪ್ರಾಂತ್ಯವೆನ್ನದೆ, ಪ್ರಪಂಚದಾದ್ಯಂತ ಆಸಕ್ತರು ಇದನ್ನು ವರ್ಷವಿಡೀ ಅತ್ಯಂತ ತಾಳ್ಮೆಯಿಂದ ಕಲಿಯಲಿಚ್ಛಿಸುತ್ತಾರೆ.  ಅಷ್ಟರ ಮಟ್ಟಿಗೆ ಮಂಡಲ ಜನರನ್ನು ಭಾವಪರವಶವನ್ನಾಗಿಸುವ ಶಕ್ತಿಯಾಗಿದೆ.


ಅಮೆರಿಕಾ ಪ್ರದೇಶಗಳಲ್ಲಿಯೂ ಕೂಡ ಮಂಡಲಗಳಿಗೆ ಅತೀವ ಪ್ರಾಮುಖ್ಯತೆ ಇದೆ. ಅಲ್ಲಿನ ಸಾಂಪ್ರದಾಯಿಕ ಮಂಡಲಗಳಲ್ಲಿ ಅತ್ಯಂತ ಜನಪ್ರಿಯವಾದುದು ಪೂಜ್ಯವಾದ 'ಮೆಡಿಸಿನಲ್ ವೀಲ್'. ಈ ಸಮಸ್ತ ವಿಶ್ವವು, ದಿಕ್ಕುಗಳಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಕ್ಕೂ ಆವೃತ್ತಗೊಂಡಿರುವ ನಾಲ್ಕು ಪ್ರಭಾವಶಾಲಿ ಸಂಪನ್ಮೂಲಗಳಾದ, ಗಾಳಿ, ನೀರು, ಬೆಂಕಿ ಮತ್ತು ಮಣ್ಣಿನಿಂದ ರಚಿಸಲ್ಪಟ್ಟಿದೆ.  ಭೌತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕಶಕ್ತಿಗಳ ಒಟ್ಟುಗೂಡುವಿಕೆಯೇ ಮಂಡಲಗಳ ಸಂಕೇತ ಎಂಬ ಅದಮ್ಯ ವಿಶ್ವಾಸ ಇಲ್ಲಿನ ಮಂಡಲ ಇತಿಹಾಸಕಾರರದ್ದು. ಯೋಗ, ಧ್ಯಾನ, ಮತ್ತು ವೈದ್ಯಕೀಯ ರಂಗದಲ್ಲೂ ಚಿಕಿತ್ಸಕ ಕ್ರಿಯೆಯಾಗಿ ಮಂಡಲಗಳ ಬಳಕೆ ಇದೆ.



ಮಂಡಲದ ಆಧ್ಯಾತ್ಮಿಕ ಸ್ಥಾನ  :

ಮಂಡಲ ಎಂಬುದು ತನ್ನಲ್ಲಿಯೇ ತಾನು ಸರ್ವಸ್ವವನ್ನು ಹಿಡಿದಿಟ್ಟುಕೊಳ್ಳುವ ಆದರೂ ಎಲ್ಲೆಡೆ ತನ್ನಿಂದಲೇ ಹೊರಹೊಮ್ಮಿಸುವ ಒಂದು ಅಗಾಧ ಶಕ್ತಿಯ ವ್ಯೂಹ. ಈ ಮಂಡಲವೆಂಬ ಕಲಾತ್ಮಕ ರಚನೆಯು, ದೇವರನ್ನು ನಂಬುವಷ್ಟೇ ನಮ್ಮನ್ನು ನಾವು ನಂಬಿಕೊಳ್ಳುವ ಪರಿಕಲ್ಪನೆಯ, ಮನಸ್ಸಿಗೆ ದೈವತ್ವದ ಸಾಮೀಪ್ಯ ಒದಗಿಸುವ ಒಂದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಮಂಡಲ ರಚನೆಯ ಅನುಭವವ ಶಬ್ಧಗಳಲ್ಲಿ ಹೇಳಲಸಾಧ್ಯ ಅದನ್ನು ಅನುಭವಿಸಿಯೇ ತೀರಬೇಕು. ಮಂಡಲವೆಂಬುದು ಮನಸ್ಸಿನ ಎಲ್ಲ ದುಗುಡವನ್ನು ಹೋಗಲಾಡಿಸಿ, ಧ್ಯಾನಮಗ್ನರಾಗಿ ಶುಭ್ರ ಆತ್ಮವನ್ನು ಆಸ್ವಾದಿಸುವ ಒಂದು ಸುಖ.

ಮಂಡಲದಲ್ಲಿ ಮೂಡುವ ವೃತ್ತಾಕಾರವು ತನ್ನೊಳಗೆ ಅನೇಕ ರೀತಿಯ ಅರ್ಥವನ್ನು ನೀಡುತ್ತದೆ. ನಮ್ಮ ಸುತ್ತಮುತ್ತಲೂ ಕಾಣಸಿಗುವ ಭೌತಿಕವಾಗಿ ಗೋಲಾಕಾರದಲ್ಲಿ ಗೋಚರಿಸಬಲ್ಲ ಶಕ್ತಿಗಳಾದ  ನಕ್ಷತ್ರ ಸಮೂಹ, ಸೂರ್ಯ- ಚಂದ್ರಾದಿಯಾಗ ನಮ್ಮ ದೇಹದ ಪ್ರತಿಯೊಂದು ಜೀವಕಣಗಳವರೆಗೆ , ನಾವು ಜೀವಿಸುತ್ತಿರುವ ಸಮಸ್ತ ಈ ಭುವಿಯನ್ನೇ ಪ್ರತಿಬಿಂಬಿಸುವ ಮಂಡಲ ಸಕಲ ಜೀವರಾಶಿಯನ್ನೂ ಆವರಿಸಿಕೊಂಡು ತನ್ಮೂಲಕ  ಒಂದು ಸಂಪೂರ್ಣತೆಯನ್ನು ಮೆರೆಸುತ್ತದೆ. ಮಂಡಲ ರಚನೆ ಎಂಬುದು ನಮ್ಮ ಅಂತರಾತ್ಮದ ಪರಾಮರ್ಶೆ ಎಂದು ವಿಶ್ಲೇಷಿಸುತ್ತಾರೆ ಸಾಂಪ್ರದಾಯಿಕ ಪರಿಣಿತ ಮಂಡಲ ರಚನಾಕಾರರು.


ವೈಜ್ಞಾನಿಕ ಮನ್ನಣೆ :

ಕನಸುಗಳಲ್ಲಿ ಹೇಗೆ ನಮ್ಮ ಸುಪ್ತ ಮನಸ್ಸಿನ ವಿಚಾರಗಳು ಬಿತ್ತರವಾಗುತ್ತದೆಯೋ, ಅದೇ ಮಾದರಿಯಲ್ಲಿ ಚಿತ್ರಗಳು ಮತ್ತು ಬಣ್ಣಗಳ ಮೂಲಕ ಮನಸ್ಸಿನ ಉದ್ವೇಗ, ಸಂತೋಷ, ತಲ್ಲಣ ಎಲ್ಲಾ ರೀತಿಯ ಭಾವನೆಗಳೂ ಹೊರಹೊಮ್ಮಿಸಲು ಮಂಡಲಗಳು ಒಂದು ಸಂವಹನ ರೂಪವನ್ನು ಪಡೆಯುತ್ತವೆ. ಅದರಲ್ಲೂ ಈ ಮಂಡಲದಲ್ಲಿನ ಕೇಂದ್ರ ಬಿಂದು ಮತ್ತದರ ಸುತ್ತಲಿನ ವೃತ್ತಗಳು ಕದಡಿದ ಮನಸ್ಸನ್ನು ತಿಳಿಯಾಗಿಸಿ, ಭಾವೋದ್ವೇಗಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತದೆ.

ಸಾಂಪ್ರದಾಯಿಕ ಮಂಡಲಗಳ ರಚನೆ ಅತ್ಯಂತ ಸೂಕ್ಷದಾಯಕವಾದ್ದರಿಂದ, ಅದಕ್ಕೆ ಹೆಚ್ಚಿನ ಗಮನ ಅವಶ್ಯಕ. ಮನಸ್ಸು ಒಂದು ವಿಷಯಕ್ಕೆ ಏಕಾಗ್ರತಗೊಳ್ಳುತ್ತಾ ಹೋದಂತೆಯೂ, ಹೊರಗಿನ ಪ್ರಪಂಚದ ಮಾನಸಿಕ ಮತ್ತು ದೈಹಿಕ ತಲ್ಲಣಗಳು, ಚಿಂತೆಗಳು ಎಲ್ಲವೂ ಕಡಿಮೆಯಾಗುತ್ತಾ ಹೋಗುತ್ತದೆ. ಇಷ್ಟವಾದುದ್ದನ್ನು, ಕುತೂಹಲಕಾರಿಯಾದುದ್ದನ್ನು ಮಾಡುವ ಕ್ರಿಯೆಯಲ್ಲಿ, ದೇಹದಲ್ಲಿ ಬಿಡುಗಡೆಯಾಗುವ ಖುಷಿಯ ಹಾರ್ಮೋನ್ಸ್ಗಳು ನಮ್ಮನ್ನು ಮತ್ತಷ್ಟು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.



ಮಂಡಲಗಳ ಪ್ರಯೋಜನಗಳೇನು ಮತ್ತು ಬಳಕೆ ಹೇಗೆ?

ಮಂಡಲಗಳಿಂದ ಹಲವಾರು ಪ್ರಯೋಜನಗಳಿವೆ. ಮಂಡಲಗಳ ಬಳಕೆಗೆ ಅದರೆಡೆಗಿನ ನಂಬಿಕೆ ಅತೀ ಮುಖ್ಯ. ಇದೊಂದು ಧನಾತ್ಮಕ ಶಕ್ತಿಯನ್ನು ತನ್ನಲ್ಲಿ ಕೇಂದ್ರೀಕೃತಗೊಳಿಸಿಕೊಂಡಿರುವ ಸಾಧನ.

ಮಂಡಲ ಚಿತ್ರಣಗಳನ್ನು ಮನೆಯಲ್ಲಿ ನಮ್ಮ ಕಣ್ಣೆದುರಲ್ಲಿ ಕಾಣುವಂತೆ ಇರಿಸಿಕೊಂಡು ಸಾಧ್ಯವಾದಾಗಲೆಲ್ಲ ಅದನ್ನು ವೀಕ್ಷಿಸುವುದರಿಂದ, ಅನಾವಶ್ಯಕ ಮಾನಸಿಕ ಕಿರಿಕಿರಿ ಕಡಿಮೆಯಾಗಿ, ಮನಸ್ಸು ಪ್ರಸನ್ನಗೊಳ್ಳುತ್ತದೆ. ತಿಳಿಯಾದ ಮತ್ತು ಆಕರ್ಷಕ ಬಣ್ಣಗಳಿಂದ ಕೂಡಿದ ಚಿತ್ತಾರ ವೀಕ್ಷಣೆ ಸಹಜವಾಗಿಯೇ  ಮನಸ್ಸನ್ನು ಪ್ರಫುಲ್ಲಗೊಳಿಸಲು ಸಹಾಯ ಮಾಡುತ್ತದೆ.

ಧ್ಯಾನ ಮಾಡುವಾಗ, ಮಂಡಲವನ್ನು ಎದುರಿಗಿರಿಸಿಕೊಂಡು ಸ್ವಲ್ಪ ಸಮಯದವರೆಗೆ ತದೇಕಚಿತ್ತದಿಂದ ಅದನ್ನೇ ಗಮನಿಸಿ ನಂತರದಲ್ಲಿ ಕಣ್ಣನ್ನು ಮುಚ್ಚಿ ಮಂಡಲದ ಚಿತ್ರಣವನ್ನಷ್ಟೇ ನೆನಪಿಸಿಕೊಳ್ಳುತ್ತಾ ಹೋದಂತೆಯೂ ಹೊರಾಂಗಣ ಚಂಚಲತೆ ಕಡಿಮೆಯಾಗಿ, ಏಕಾಗ್ರತೆ ಹೆಚ್ಚುತ್ತದೆ.

ಮಂಡಲಗಳೇನೋ ಇಷ್ಟವಾಗುತ್ತದೆ. ಆದರೆ ನಾನು ಚಿತ್ರಕಲೆ-ಬಣ್ಣ-ಕುಂಚಗಳ ಹಿನ್ನಲೆಯಿದ್ದವಳಲ್ಲ. ನಾನು ಹೇಗೆ ಮಂಡಲ ರಚನೆ ಮಾಡಲಿ? ಎಂಬುದು ಹಲವರ ಸರ್ವೇ ಸಾಮಾನ್ಯ ಪ್ರಶ್ನೆ. ಮಂಡಲಗಳನ್ನು ಚಿತ್ರಿಸಲು ಇಂತದ್ದೇ ಎನ್ನುವ ನಿಯಮಗಳಿಲ್ಲ. ಹೆಣ್ಣು -ಗಂಡು, ಹಿರಿಯ-ಕಿರಿಯ, ಮಕ್ಕಳು ಹೀಗೆ ಯಾರಾದರೂ ಯಾವ ವಯಸ್ಸಿನವರಾದರೂ ಚಿತ್ರಿಸಬಹುದು. ಮಂಡಲಗಳನ್ನು ಚಿತ್ರಿಸುವುದರಿಂದ, ಸಹಜವಾಗಿಯೇ ನಮ್ಮ ಏಕಾಗ್ರತೆ ಹೆಚ್ಚುವುದಲ್ಲದೇ, ಮಂಡಲ ಡಿಸೈನ್ಗಳು ನಮ್ಮಲ್ಲಿ ಹುಟ್ಟುತ್ತಾ ಹೋದಂತೆ ನಮ್ಮಲ್ಲಿನ ಕ್ರಿಯಾಶೀಲತೆ ಮತ್ತು ನಮ್ಮೊಳಗಿನ ಅದಮ್ಯ ಶಕ್ತಿ ಹೊರಹೊಮ್ಮುತ್ತದೆ. ಧನಾತ್ಮಕ ಯೋಚನೆಗಳು, ಅನಾವಶ್ಯಕ ಚಿಂತೆ ಗಳನ್ನು ಆ ಕ್ಷಣಕ್ಕೆ ಮರೆಸಿ, ನಮ್ಮನ್ನು ತನ್ನದೇ ಆದ ಧ್ಯಾನ ವರ್ತುಲದಲ್ಲಿ ಆವರಿಸಿಕೊಳ್ಳುತ್ತದೆ ಈ ಮಂಡಲ. ಅತ್ಯಂತ ಸರಳವಾದ ವರ್ತುಲ, ಚೌಕ, ತ್ರಿಕೋನ ಮಾದರಿಯ ರೇಖಾಚಿತ್ರಗಳಿಂದ ಒಂದೇ ಮಾದರಿಯಲ್ಲಿ ಪ್ರಾರಂಭಿಸಿ ಅಭ್ಯಸಿಸಿದರೆ ಕ್ರಮೇಣ ಮಂಡಲಗಳ ಹುಚ್ಚು ಹಿಡಿಯಲು ಎಷ್ಟು ಸಮಯವೂ ಬೇಕಾಗಿಲ್ಲ.



ಮಾರುಕಟ್ಟೆಗೂ ಮಂಡಲಗಳ ಲಗ್ಗೆ

ಮಂಡಲಗಳು ಒಂದು ಧನಾತ್ಮಕ ಶಕ್ತಿಯ ಸ್ವರೂಪ ಎಂದು ಆಧ್ಯಾತ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ದೊರಕಿರುವ ಪುರಾವೆಗಳಿಂದಾಗಿ, ಇದೀಗ ಮಾರುಕಟ್ಟೆಗಳಲ್ಲಿ ಮಂಡಲಕ್ಕೆ ಸಂಬಂಧಿಸಿದ ಅನೇಕ ತರಹದ ವಸ್ತುಗಳು ತಮ್ಮ ಛಾಪನ್ನು ಮೂಡಿಸುತ್ತಿವೆ. ಸುಂದರವಾದ  ಮಂಡಲಗಳ ಪೈಂಟಿಂಗ್ಗಳನ್ನು ಗೃಹ ಅಲಂಕಾರಕ್ಕಾಗಿ ಬಳಕೆ ಮಾಡಿಕೊಳ್ಳುವ ಒಲವು ಜನರಲ್ಲಿ ಹೆಚ್ಚುತ್ತಿದೆ. ಕೇವಲ ಅಲಂಕಾರಿಕ ವಸ್ತು ಎಂದಷ್ಟೇ ಪರಿಗಣಿಸದೇ, ದೇವರ ಚಿತ್ರಗಳನ್ನು ಗೋಡೆಗಳಿಗೆ ಹಾಕುವ ಮಾದರಿಯಲ್ಲಿ, ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿ, ಒಳ್ಳೆತನದ ವಿಸ್ತಾರತೆಗಾಗಿ ಬ್ಯುಸಿನೆಸ್ ಆಫೀಸಗಳಲ್ಲಿ, ಆಸ್ಪತ್ರೆಗಳಲ್ಲಿ, ಯೋಗ ಶಾಲೆಗಳಲ್ಲಿ ಗೋಡೆಗಳ ಮೇಲೆ ದೊಡ್ಡ ಗಾತ್ರದ ದೈವಿಕ ಮಂಡಲ ಚಿತ್ರಗಳನ್ನು ಲಗತ್ತಿಸಿ, ಜನರ ಮನಸ್ಸಿನ ಆತಂಕ ನಿವಾರಕ ವಾತಾವರಣಕ್ಕೆ ಸಹಾಯಕವಾಗುತ್ತದೆ  ಜನರಲ್ಲಿ    ಅನೇಕ ಮಾದರಿಯ ಮಂಡಲ ಚಿತ್ರಗಳ ಪುಸ್ತಕಗಳು ಲಭ್ಯ. ಪ್ರಿಂಟೆಡ್ ಮಂಡಲಗಳ ಮೇಲೆ ನೀವು ನಿಮ್ಮ ಮನಸ್ಸಿಗೆ ಹಿಡಿಸುವಂತೆ  ಬಣ್ಣದ ಪೆನ್ಸಿಲ್ಗಳಿಂದ ಬಣ್ಣ ತುಂಬುತ್ತ ಹೋಗುವುದು ಕೂಡ ಒಂದು ಅತ್ಯಂತ ಖುಷಿ ಕೊಡುವ ಚಿಕಿತ್ಸಕ ಕ್ರಿಯೆ.  ಮಂಡಲಗಳ ಮಹತ್ವ ವಿಸ್ತಾರಗೊಳ್ಳುತ್ತಿರುವ ಹಿನ್ನಲೆಯಲ್ಲೇ, ಈಗೆಂತು ತಂತ್ರಜ್ಞಾನದ ಯುಗದಲ್ಲಿ ಜೀವಿಸುವ ನಮಗೆ, ಕಂಪ್ಯೂಟರ್ ಮತ್ತು ಮೊಬೈಲುಗಳಲ್ಲಿ ಬಿತ್ತರಗೊಳ್ಳುವ ವಿಷಯಗಳೇ ಗೋಚರವಾಗುವ ಪರಿಸ್ಥಿತಿಗೆ. ಮನಸ್ಸಿನ ರೇಲಾಕ್ಸೆಷನ್ ಗಾಗಿ ವಿವಿಧ ಮಾದರಿಯ ಮಂಡಲ ಆಪ್ಗಳು ಲಭ್ಯ. ಒಂದು ದಿಕ್ಕಿನಲ್ಲಿ ಮನಸ್ಸಿಗೆ ತೋಚಿದ ಮಾದರಿಯಲ್ಲಿ ಬೆರಳಾಡಿಸಿದರೆ ಸಾಕು, ಸರಿಮಗ್ಗಲಿನ ಚಿತ್ರಗಳು ತಂತಾನೇ ರಚಿತಗೊಂಡು ನಮ್ಮನ್ನು ತುಸುಕಾಲ ರಂಜಿಸುವಲ್ಲಿ ಯಶಸ್ವಿಯಾಗುತ್ತದೆ.













ಶನಿವಾರ, ಮಾರ್ಚ್ 17, 2018

ಬಾಲ್ಯದ ಯುಗಾದಿ

ನನ್ನ ವಯಸ್ಸಿನ ಆಸುಪಾಸಿನವರೇ ಮಾವನ ಮಕ್ಕಳು ಇರ್ತಿದ್ರಿಂದ  ನನ್ನ ಬಾಲ್ಯದ  ದಿನಗಳೆಲ್ಲ ಹೆಚ್ಚು ಕಳೆದದ್ದು ಅಜ್ಜನ ಮನೆಯಲ್ಲೇ. ಬೆಳಕು ಹರಿಯುವುದಕ್ಕೂ ಮುಂಚೆ ಪ್ರಾರಂಭವಾಗುತ್ತಿದ್ದ ಹಕ್ಕಿಪಿಕ್ಕಿಗಳ ಚಿಲಿಪಿಲಿ, 'ನಂಗಳನ್ನ ಮಾತಾಡ್ಸೋ' ಎಂದು ಮಾವನನ್ನು ಕೂಗಿ ಕರೆಯುತ್ತಿದ್ದ ದನಕರ್ಗಗಳ ಏರು ಧ್ವನಿಗೆ ನಾವು ಮಕ್ಕಳಿಗೂ ಕೂಡ ಎಚ್ಚರವಾಗಿ ಹೋಗುತ್ತಿತ್ತು. ೪. ೩೦ - ೫ ಗಂಟೆಗೆ ಎದ್ದುಕೊಂಡು, ಕತ್ತಲಲ್ಲಿ ಅಜ್ಜ ಅಮ್ಮುಮ್ಮ ಚುಂನೆಣ್ಣೆ ದೀಪ ಹಿಡ್ಕೊಂಡು ಅವ್ರವ್ರ ಕೆಲ್ಸ ಮಾಡ್ಕೋತ ಇದ್ರೆ, ಅರೆಗಣ್ಣು ಮಾಡಿಕೊಂಡು ಅವರ ಹಿಂಬಾಲಕರಾಗಿ ನಾವೆಲ್ಲಾ ಓಡಾಡ್ಕೊಂಡು ಇರುತ್ತಿದ್ದೆವು. ಹಿತ್ಲಕಡೆ ಒಲೆ ಉರಿಯ ಚಿಟಿ ಚಿಟಿ ಶಬ್ದ, ಅಡ್ಗೆ ಮನೆಲಿ ಅಮ್ಮುಮ್ಮ ಮಜ್ಜಿಗೆ ಕಡೆಯುವ ಶಬ್ದ, ಅತ್ತೆ ಹೆಬ್ಬಾಗಿಲ ಅಂಗಳವನ್ನು ಚರ್ ಚರ್ ಎಂದು ಕಡ್ಡಿಹಿಡಿಲಿ ಗುಡಿಸಿ ಸಗಣಿ ಹಾಕಿ ಹಾಳೆಕುಂಟಿನಿಂದ ಸಾರಿಸುವ ಶಬ್ದ, ದೇವ್ರ ಕೋಣೇಲಿ ಅಜ್ಜನ ಪೂಜೆಯ ಮಂತ್ರ,  ದನಕರುಗಳ ಕತ್ತಿನ ಗಂಟೆಗಳ ನಾದ ಇವೆಲ್ಲಾ ನನ್ನಲ್ಲಿ ಅಂತರ್ಗತವಾಗಿರುತ್ತಿದ್ದ ಅಜ್ಜನಮನೆಯ ನಿತ್ಯದ ದಿನಚರಿಯ ಶಬ್ದಗಳು. ಇವೆಲ್ಲದರ ಮಧ್ಯೆ,  "ಇವತ್ತು ತೋಲಾಗಿ ಹೂವು ಕೊಯ್ಕ್ಯ ಬನ್ನಿ ಹುಡ್ರಾ, ಹಬ್ಬ ಇವತ್ತು.. " ಎಂದೆನ್ನುವ ಅಮ್ಮಮ್ಮನ ಧ್ವನಿಗೆ ಥಟ್ ಎಂದು ಎಚ್ಚರಗೊಳ್ಳುತಿತ್ತು ಮನಸ್ಸು.  




ಸಣ್ಣಾಕಿದ್ದಾಗಿಂದ್ಲೂ, 'ಇವತ್ತು ಹಬ್ಬ' ಅನ್ನೋದೇ ಒಂದು ಸ್ಪೆಷಲ್ ಫೀಲಿಂಗು. ದೊಡ್ದಬ್ಬಗಳಿಗೆ ಸಿಗುತ್ತಿದ್ದ ಹೊಸಬಟ್ಟೆಯ ಸಂಭ್ರಮದಿಂದ ಪ್ರಾರಂಭವಾಗಿ, ಬೇರೆ ಬೇರೆ ಹಬ್ಬದ ಆಚರಣೆಗಳನ್ನು ಬೆರಗು ಗಣ್ಣಿನಿಂದ ನೋಡುವುದು, ದೊಡ್ಡವರಷ್ಟೇ ತರಾತುರಿಯಲ್ಲಿ ನಾವು ಚಿಕ್ಕವರೂ ಏನೇನೋ ತಾಟುಪಾಟು ಕೆಲಸ ಮಾಡುತ್ತಾ, ಹಬ್ಬಕ್ಕೆ ಮಾಡೋ ಸಿಹಿತಿಂಡಿಗಳು ಯಾವಾಗ ದೇವರ ನೈವೇದ್ಯ ಆಗಿ ನಮ್ಮ ಬಾಯಿಗೆ ಸಿಗುವುದೋ ಎಂದು ಕಾದು ಕುಳಿತಿರುವವರೆಗೂ, ಹಬ್ಬದ ದಿನದ ಪ್ರತಿಯೊಂದು ಅನುಭವವೂ ಖುಷಿ ಕೊಡುತ್ತಿತ್ತು. ಮನೆ ಮಂದಿ ನೆಂಟರಿಷ್ಟರೆಲ್ಲ ಸೇರಿಕೊಂಡು ಒಟ್ಟಿಗೆ ಹರಟು ಸಿಹಿ ಊಟ ಮಾಡುವುದೇ ಒಂದು ಮಜಾ.  ಅದರಲ್ಲೂ ಈ ಯುಗಾದಿ ಹಬ್ಬ ಹೊಸ ವರ್ಷಾರಂಭ.  ಬ್ರಹ್ಮನು  ಚೈತ್ರ ಮಾಸದ ಪಾಡ್ಯ ದಿನದ ಸೂರ್ಯೋದಯದ ಸಮಯದಲ್ಲಿ ಈ ಇಡೀ ವಿಶ್ವವನ್ನು ಸೃಷ್ಟಿಸಿದ ದಿನವಿದು...ರಾಮಾಯಣದ ಕಥೆಗಳಲ್ಲಿ, ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದಾಗ, ರಾಮನನ್ನು ಚಕ್ರವರ್ತಿಯನ್ನಾಗಿ ಪಟ್ಟಾಭಿಷೇಕ ಮಾಡಿದ ದಿನವಿದು ಎಂದೆಲ್ಲ ವೈಭವೀಕರಿಸಿ ಅಜ್ಜ ಕಥೆಗಳನ್ನು ಹೇಳುತ್ತಿದ್ದರೆ, ನಮ್ಮಲ್ಲಿ ಏನೋ ಒಂದು ರೀತಿಯ ಪುಳಕ ಇರುತ್ತಿತ್ತು.


ಹಬ್ಬದ ದಿನ, ನಿತ್ಯಕ್ಕಿಂತ ಹೆಚ್ಚೆಚ್ಚು ಹೂವುಕೊಯ್ಯುವುದೂ ಒಂದು ಸ್ಪರ್ಧೆ ಎನ್ನುವಂತೆ ನಾವೆಲ್ಲಾ ಮಕ್ಕಳು ಒಂದೊಂದು ಸಿಬ್ಬಲು(ಹೂವು ಹಾಕಿಕೊಳ್ಳುವ ಬುಟ್ಟಿ ) ಹಿಡಿದು ಓದುತ್ತಿದ್ದೆವು. ಮೊದಲು ಪಣತು ಮನೆಯ ಕಡೆಗೆ ಓಡುವುದಿತ್ತು ಏಕೆಂದರೆ ಬಗೆ ಬಗೆಯ ದಾಸವಾಳ ಗಿಡಗಳು ಆ ಕಡೆಗೇ ಇದ್ದುದರಿಂದ, ಮುಕ್ಕಾಲು ಸಿಬ್ಬಲು ಅಲ್ಲಿಯೇ ತುಂಬಿ ಹೋಗುತ್ತದೆ ಎಂಬ ಯೋಚನೆ ನಮ್ಮಲ್ಲಿರುತ್ತಿತ್ತು. ಭಾವಯ್ಯಂದಿರೆಲ್ಲ ಸರ ಸರನೆ ಮರ ಹತ್ತಿದರೆ, ದೋಟಿ ಕೋಲಿನಿಂದ ಕೊಯ್ಯಲು ನಾ ಓಡುತ್ತಿದ್ದೆ.  ಅಜ್ಜನ ಮನೆಯ ಹಿಂಬದಿಯ 'ಗೋಟಿಂಕಣ' (ಗೋಟು  ಅಡಕೆಗಳನ್ನೆಲ್ಲ ಒಣಗಿಸುತ್ತಿದ ಜಾಗದ ಹೆಸರು) ಎಂಬ ಎತ್ತರದ ಸ್ಥಳಕ್ಕೂ ಹತ್ತಿ ಹೋಗಿ, ಕಟ್ಟಿಗೆ ಮನೆ ಪಕ್ಕಕ್ಕೆ ಚಾಚಿಕೊಂಡ ಬೊಂಬಾಯ್ ಮಲ್ಲಿಗೆ ಹೂವನ್ನು ಬಹು ಪ್ರಯಾಸದಿಂದ ಕೊಯ್ದು ತರುತ್ತಿದ್ದೆವು. ಸಿಬ್ಬಲು ತುಂಬಾ ಬಣ್ಣಬಣ್ಣದ ದಾಸವಾಳ-ದೂರ್ವೆಗಳ  ಜೊತೆಯಲ್ಲಿ, ಚಿಗಳಿ ಇರುವೆಗಳು ಇರುತ್ತಿದ್ದ ಸಂಪಿಗೆ ಮರದಿಂದ ಸಂಪಿಗೆ ಹೂವು, ತೋಟದ ದಾರಿಯ ಸಂದಿ ಮೂಲೆಯಲ್ಲಿ ಇರುತ್ತಿದ್ದ ಸುಳಿ ಹೂವು ಹೀಗೆ ತರಹೇವಾರಿ ಹೂಗಳನ್ನು ಕಷ್ಟಪಟ್ಟು ಕೊಯ್ದು ತಂದು ಪೂಜೆಗೆ ನೀಡುವ ಜವಾಬ್ಧಾರಿಯುತ ಕೆಲಸ ನಾವು ಮಾಡಿದ್ದೇವೆಂದು ಬೀಗಿಕೊಳ್ಳುತ್ತಿದ್ದೆವು. ಹಬ್ಬದ ದಿನ ಅಜ್ಜನ ಜೊತೆ 'ಉದ್ದ ಕಟ್ಟೆ ಬೈಲು'(ಅಜ್ಜನ ಮನೆಗೆ ಸಮೀಪದಲ್ಲಿರುವ ಅರಳಿ ಕಟ್ಟೆಯ ಸ್ಥಳ) ಗೆ ಹೋಗಿ, ಅಜ್ಜನ ಪೂಜೆಗೆ ನಾವೆಲ್ಲಾ ಜಾಗಟೆ ಹೊಡೆದು, ಹೊಸ ಸಂವತ್ಸರದ ಮೊದಲ ಸೂರ್ಯೋದಯಕ್ಕೆ ವಿಧಿವತ್ತಾಗಿ  'ಸೂರ್ಯ ನಮಸ್ಕಾರ' ಮಾಡಿ ಬರುವ ವಾಡಿಕೆಯಿತ್ತು. ಅಲ್ಲೂ ನಮ್ಮ ಮಕ್ಕಳಾಟ ಬಿಡದೆ, ಬರುವ ದಾರಿಯಲ್ಲಿ ಹೊಳೆದಾಸವಾಳ  ಹಣ್ಣನ್ನು ಹುಡುಕುತ್ತ, ಹೊಸತಾಗಿ ಚಿಗುರಿದ ನೇರಳೆ ಮರದ ಚಿಗುರು ಎಲೆಗಳನ್ನು  ಕೊಯ್ದುಕೊಂಡು ಸುರುಳಿ ಸುತ್ತಿ ಪೀಪಿಯ ಮಾದರಿಯಲ್ಲಿ ಊದುತ್ತ ಬರುತ್ತಿದ್ದೆವು. 


ಚಿತ್ರ ಬರೆಯಲು ಆಸಕ್ತಿ ಇದ್ದ ನಾನು ಸಣ್ಣಕಿರುವಾಗ ನ್ಯೂಸ್ ಪೇಪರ್ಗಳಲ್ಲಿ ಬರುತ್ತಿದ್ದ ರಂಗೋಲಿ ಚಿತ್ರಗಳನ್ನು ನೋಡಿ ನನ್ನ ರಂಗೋಲಿ ಪುಸ್ತಕ್ಕಕ್ಕೆ ಬರೆದಿಟ್ಟುಕೊಂಡು, ಬಣ್ಣದ ಪೆನ್ಸಿಲ್ ಗಳಿಂದ ಕಲರಿಂಗ್ ಮಾಡಿರುತ್ತಿದ್ದೆ. ಹಬ್ಬದ ದಿನ "ಯಾವದಾದ್ರು ಚೊಲೋ ರಂಗೋಲಿ ಗೊತ್ತಿದ್ರೆ ಹಾಕೇ" ಎಂದು ಅತ್ತೆ ಕೇಳಿದಾಗ ನನಗೆ ಅದೊಂದು ಸಿಕ್ಕಿರುವ ಗೌರವೆಂಬಂತೆ, ಮೊದಲೇ ಸಾಗರದಿಂದ ಬರುವಾಗ ತಂದುಕೊಂಡ ನನ್ನ ರಂಗೋಲಿ ಪುಸ್ತಕವನ್ನು ತಡಕಾಡಿ ಇಷ್ಟವಾದ ರಂಗೋಲಿ ಹಾಕಿ, ಅರಿಶಿನ-ಕುಂಕುಮದಲ್ಲೇ ಒಂದಷ್ಟು ಬಣ್ಣ ತುಂಬಿ ಸಂಭ್ರಮಿಸುತ್ತಿದ್ದೆ. 


ಸುಮಾರು ಮೊಮ್ಮಕ್ಕಳಿರುತ್ತಿದ್ದ ಆ ಕಾಲಕ್ಕೆ, ಬೇಗ ಮಕ್ಳನ್ನೆಲ್ಲ ಹಿಡಿದು ಸ್ನಾನ ಮಾಡಿಸಿ ಕಳಿಸಿಬಿಟ್ಟರೆ ಒಂದು ದೊಡ್ಡ ಕೆಲಸ ಮುಗಿದಂತಾಗುತ್ತಿತ್ತು ಹಿರಿಯರಿಗೆ. ನಂಗೀಗಲೂ ನೆನಪಿದೆ. ಸುಮಾರೇ ಸಣ್ಣ ವಯಸ್ಸು ನನಗಾಗ. ಯುಗಾದಿ ಹಬ್ಬಕ್ಕೆ ಹರಳೆಣ್ಣೆ ಹಾಕಿಕೊಂಡು ತಲೆಗೆ ಸ್ನಾನ ಮಾಡುವುದು ಒಳ್ಳೆಯದು ಎಂಬ ಪ್ರತೀತಿಯಿದೆ. ಆದರೆ ಅತ್ಯಂತ ಜಿಡ್ಡುಜಿಡ್ಡಾಗಿರುತ್ತಿದ್ದ ಮತ್ತು ಅದರ ವಾಸನೆ ಹಿಡಿಸದ ನನಗೆ, ಒಂದು ಸರ್ತಿ ಅಮ್ಮುಮ್ಮ ಕೈಯಲ್ಲಿ ತಂದು ಹರಳೆಣ್ಣೆ ನನ್ನ ತಲೆಗೆ ಹಾಕಿ ತಟ್ಟಿದಾಗ,  ಗಟ್ಟಿಯಾಗಿ ಬೇಡ ಎಂದು ಹಠ ಮಾಡಲೂ ಧೈರ್ಯವಿರದೇ, ಕಣ್ಣು ತುಂಬಾ ನೀರನ್ನು ತುಂಬಿಕೊಂಡು ಕುಳಿತಿದ್ದೆ. ದುಃಖ ಗಂಟಲಲ್ಲಿ ಕಟ್ಟಿತ್ತು. ಕಣ್ಣಲ್ಲಿ ಧಾರಾಕಾರ ನೀರು ಆದರೂ ಅಮ್ಮನೆದುರೆಲ್ಲ ಹಟಮಾಡುವಂತೆ, ಹಠವೊಡ್ಡಲು ನಾಚಿಕೆ. ಕಡೆಗೆ ಅಮ್ಮಮ್ಮನಿಗೇ ನನ್ನ ಅಪರಾವತಾರದ ಅರಿವಾಗಿ, "ಅಷ್ಟಕ್ಕೆಲ್ಲ ಅಳ್ತವನೇ ಪುಟಿ, ಹಾಕ್ಟ್ನಲ್ಲೇ ಬಿಡು, ಕೊಬ್ರಿ ಎಣ್ಣೆನೇ ಹಾಕನ ಅಡ್ಡಿಲ್ಯಾ" ಎಂದ ಮೇಲೇ ನನಗೆ ಸಮಾಧಾನವಾಗಿದ್ದು. 




ಯುಗಾದಿ ಹಬ್ಬದ ದಿನ ಅಜ್ಜ ಹೊಸ ಪಂಚಾಂಗಕ್ಕೆ ಪೂಜೆ ನೆರವೇರಿಸುತ್ತಿದ್ದರು. ಪೂಜೆ ನಂತರಕ್ಕೆ "ಚೂರೇ ಕೊಡು" ಎಂದು ಕೇಳಿ ಪಡೆದರೂ, ಒಲ್ಲದ ಮನಸ್ಸಿನಿಂದ ತಿನ್ನುತ್ತಿದ್ದ 'ಬೇವು-ಬೆಲ್ಲ' ದ ಕಹಿಗೆ ದೇಹ ಕೊಸರಾಡುತ್ತಿತ್ತು. ಆದರೂ, ಎದುರಿಗೆ ಮಾತ್ರ 'ನಾ ಎಷ್ಟು ಬೇಕಾರೂ ತಿನ್ತಿ ' ಎಂದು ಒಬ್ಬರಿಗೊಬ್ಬರು ಸ್ಕೊಪ್ ಹೊಡೆದುಕೊಳ್ಳುವುದಕ್ಕೇನೂ ಕಡಿಮೆಯಿರುತ್ತಿರಲಿಲ್ಲ.ಮತ್ತೊಂದು ಕಡೆ,  'ಮಡಿ-ಮುಟ್ಟಲಾಗ' ಎಂದು ಹೇಳಿಸಿಕೊಂಡರೂ, ಮತ್ತೆ ಮತ್ತೆ ಕಾಲು ಸಂದಿಗೆ ಓಡಾಡಿಕೊಂಡಿರುವ ಬೆಕ್ಕಿನ ಮರಿಗಳಂತೆ, ಹಿತ್ಲಕಡೆ ಹೋಳಿಗೆ ಮಾಡುವ ಜಾಗದ ಸುತ್ತ ಮುತ್ತ ಹೋಳಿಗೆಯ ಘಮ ವನ್ನೇ ಹೀರುತ್ತಾ, ಕಾಯುತ್ತ ಓಡಾಡಿಕೊಂಡು ಇರುತ್ತಿದ್ದೆವು.  ಅಂತೂ ಊಟಕ್ಕೆ "ಅನ್ನ ಕಮ್ಮಿ ಹಾಕ್ಯಂಡ್ರೂ ಅಡ್ಡಿಲ್ಲೆ, ಹೋಳ್ಗೆ ಪಾಯ್ಸ ತಿನ್ನಿ" ಎಂದು ಒತ್ತಾಯಿಸಿ ನಮಗೆಲ್ಲ ಅತ್ತೆ, ಅಮ್ಮುಮ್ಮ ಬಡಿಸುತ್ತಿದ್ದರೆ,  ಹೋಳಿಗೆ-ಬಿಸಿತುಪ್ಪ ಮತ್ತು 'ಜಾಸ್ತಿ ಸಕ್ರೆಪಾಕ' ದ ಜೊತೆ ಹೊಟ್ಟೆಗಿಳಿಯುತ್ತಿತ್ತು. 




ಇದಿಷ್ಟು ಅಜ್ಜನ ಮನೆಯ ಯುಗಾದಿಯ ನೆನಪಾದರೆ, ಮತ್ತೊಂದಷ್ಟು ನನ್ನೂರು ಕಾನುಗೋಡಿನಲ್ಲಿ ನಮ್ಮ ಮೂಲ ಮನೆಯಲ್ಲಿ ನಡೆಯುತ್ತಿದ್ದ ಯುಗಾದಿ ಹಬ್ಬದ ಒಂದಷ್ಟು ಬಾಲ್ಯದ  ಸವಿಬುತ್ತಿಯಿದೆ.  ನನ್ನ ಅಪ್ಪಾಜಿಯವರು ಒಟ್ಟು ೮ ಮಕ್ಕಳಲ್ಲಿ ೬ ಜನ ಗಂಡು ಮಕ್ಕಳು. ಎಲ್ಲರೂ ಒಂದೊಂದು ದಿಕ್ಕಿನಲ್ಲಿದ್ದರೂ, ಸಂಸಾರ ಸಮೇತರಾಗಿ ಸಾಧ್ಯವಾದ ಹಬ್ಬಕ್ಕೆಲ್ಲ ಒಟ್ಟು ಸೇರುತ್ತಿದ್ದರು. ಮನೆ ತುಂಬಾ ಜನ. ಹಾಗಾಗಿ ಅಲ್ಲೆಂತೂ ಎಲ್ಲ ಹಬ್ಬವೂ ದೊಡ್ದಬ್ಬವೇ ಆಗುತ್ತಿತ್ತು. ಕೇವಲ ಆಚರಣೆ ಎಂಬ ಕಟ್ಟುಪಾಡಿನ ಹಬ್ಬದ ಆಚರಣೆ ಅಲ್ಲದೆ ನಗು-ಖುಷಿ-ತಮಾಷೆ ನಾವೆಲ್ಲಾ ಸೇರಿದೆಡೆ ಇರುತ್ತಿತ್ತು. ಯುಗಾದಿಗೆ ದೀಪಾವಳಿಗೆಲ್ಲ ಅಪ್ಪಾಜಿ-ಚಿಕ್ಕಪ್ಪಂದಿರೆಲ್ಲ ಸೇರಿ ದೊಡ್ಡ ಬಾನಿಯನ್ನು ಹಿತ್ಲಕಡೆಯ ಅಂಗಳಕ್ಕೆ ಇಳಿಸಿ, ಅದರ ತುಂಬಾ ಹಂಡೆ ನೀರು ತುಂಬುತ್ತಿದ್ದರು. ಚರ್ಮ ಸಂಬಂಧೀ ಖಾಯಿಲೆಗಳನ್ನು ಹೋಗಲಾಡಿಸುವ ಗುಣವುಳ್ಳ ಕಹಿಬೇವಿನ ಸೊಪ್ಪಿನ ರಸವನ್ನು ಅಥವಾ ಸೊಪ್ಪನ್ನು ಆ ಬಾನಿಯಲ್ಲಿ ತೇಲಿ ಬಿಡಲಾಗುತ್ತಿತ್ತು. ನೀರಲ್ಲಿ ಗಂಟೆಗಟ್ಟಲೆ ಈಜು-ಮೋಜು ಎಲ್ಲವೂ ಇರುತ್ತಿತ್ತು.  ನಾವು ಮಕ್ಕಳನ್ನೆಲ್ಲ ನೀರಿಗೆ ಎತ್ತಿ ಒಗೆಯುತ್ತಿದ್ದರು. ಖುಷಿಯ ಗಲಾಟೆ ಮುಗಿಲೇರುತ್ತಿತ್ತು.  




ಯಾವುದೇ ಹಬ್ಬದ ದಿನ ನಮ್ಮ ಮನೆಯಲ್ಲಿ ಬೆಳಗ್ಗೆಯ ತಿಂಡಿ 'ತರಕಾರಿ-ಉಪ್ಪಿಟ್ಟು'. ಸ್ನಾನ-ತಿಂಡಿ ಶಾಸ್ತ್ರ ಮುಗಿಸಿ ಹೊಸಬಟ್ಟೆಯ ತೊಟ್ಟು ಮನೆ ಪಕ್ಕದ್ದೇ ದೇವಸ್ಥಾನಕ್ಕೆ ಹೋಗಿ ನೀಲಕಂಠೇಶ್ವರನಿಗೆ ಕೈ ಮುಗಿದರೆ ನಮ್ಮ ಮನೆಯೊಳಗಿರುವ ಕಾರ್ಯ ಮುಗಿದಂತೆ. ನಂತರಕ್ಕೆ ಆಟ. ಏನೇನೋ ಆಟಗಳು - ತರತರದ ಆಟಗಳು. ಮನೆಯ ಪಣತುವಿನ ಪಕ್ಕದ ಜಾಗದಲ್ಲಿ, ಬಾವಿ ಹಗ್ಗ-ಗೋಣಿಚೀಲ ಕ್ಷಣಮಾತ್ರದಲ್ಲಿ ನಮ್ಮೆಲ್ಲರ ಪ್ರಿಯವಾದ ಜೋಕಾಲಿಯಾಗಿ ಪರಿವರ್ತನೆಯಾಗುತ್ತಿತ್ತು. ಯಾರು ಅತೀ ಎತ್ತರಕ್ಕೆ ಜಿಗಿಯುತ್ತಾರೆ ಎಂಬೆಲ್ಲ ಸ್ಪರ್ಧೆಗಳು ದೊಡ್ಡವರು-ಸಣ್ಣವರು, ಹೆಂಗಸರು-ಗಂಡಸರು ಎಂಬೆಲ್ಲ ತಾರತಮ್ಯವಿಲ್ಲದೇ ನಡೆಯುತ್ತಿತ್ತು. ಅಂಗಳದಲ್ಲಿ ಕಂಬಕಂಬದಾಟ, ಕುಂಟಾಬಿಲ್ಲೆ ಹೀಗೆ ಆಟಗಳೂ ಕೂಡ ಹಬ್ಬದಾಚರಣೆಯೊಳಗೊಂದಾಗಿ ಇರುತ್ತಿದ್ದರಿಂದ, ನಮ್ಮ ಮನೆಯ ಕೇಕೆ-ಗಲಾಟೆ ೪ ಮನೆಗೆ ಕೇಳುವಷ್ಟಿರುತ್ತಿತ್ತು. ಒಮ್ಮೆ ನಾವು ಮಕ್ಕಳನ್ನೆಲ್ಲ ಕೂಕಾಟಕ್ಕೆ (ಕಣ್ಣಾ-ಮುಚ್ಚಾಲೆ) ಕರೆದು, ಕಣ್ಣು ಕಟ್ಟಿಕೊಳ್ಳಲು ತಿಳಿಸಿ, ಅಪ್ಪಾಜಿ ಚಿಕ್ಕಪ್ಪನ್ಡಿರೆಲ್ಲ 'ಅಡಗುತ್ತೇವೆ ಹುಡುಕಿ' ಎಂದು ತಿಳಿಸಿದರು. ನಾವೋ ಬೆಪ್ಪರು; ಕಣ್ಣು ಬಿಟ್ಟು ಹುಡುಕಿದ್ದೆ ಹುಡುಕಿದ್ದು.. ಇಡೀ ಮನೆಯಲ್ಲಿ ಎಲ್ಲೆಲ್ಲೂ ಯಾರೊಬ್ಬ ಅಡಗಿಕೊಂಡವನೂ ಕೈಗೆ ಸಿಗಲಿಲ್ಲ. ತಾಸುಗಟ್ಟಲೆ ಹುಡುಕಿ ಹುಡುಕಿ ಸುಸ್ತಾಗಿ ಸೊಲುಪ್ಪಿಕೊಂಡ ಪರಿಸ್ಥಿತಿಯಲ್ಲಿ ನಾವಿದ್ದರೆ, ಒಬ್ಬ ಪಣತುವಿನಿಂದ ಹೊರಬಂದ.  ಮತ್ತೊಂದಷ್ಟು ಸಮಯ ಬಿಟ್ಟು, ಮತ್ತೊಬ್ಬ ಚಿಕ್ಕಪ್ಪ ಆಗೆಲ್ಲ ಮನೆಯಿಂದ ಹೊರಬದಿಯಿರುತ್ತಿದ್ದ ಪಾಯಿಖಾನೆ ಯಿಂದ ತನ್ನ 'ಕೆಲಸ' ಮುಗಿಸಿ ಹೊರಬರುತ್ತಿದ್ದರೆ, ಅಪ್ಪಾಜಿ ಒಂದು ತಾಸಿನ ನಂತರ ತೋಟದ ಕಡೆಯಿಂದ ಬಾಳೆ ಎಲೆ ಕೊಯ್ದುಕೊಂಡು ಹೊತ್ತುತರುತ್ತಿದ್ದ!!



ಇವುಗಳ ಜೊತೆ ಇನ್ನೊಂದು ಇಂಟೆರೆಸ್ಟಿಂಗ್ ಆಟವೆಂದರೆ, ಚೈತ್ರಮಾಸದಿಂದ ವಸಂತ ಋತು ಆಗಮನವಾಗುವ ಕಾಲಕ್ಕೆ ಗಿಡಮರಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನುನೀಡುತ್ತವೆ. ಎಲ್ಲ ಕಡೆ ಮರಗಿಡಬಳ್ಳಿಗಳು ಹಸಿರು ಬಣ್ಣದ ತಳಿರುಗಳಿಂದ ನಳನಳಿಸುತ್ತಿರುತ್ತದೆ. ಈ ಸಮಯದಲ್ಲೇ ಹೂಬಿಡುವ ಕಾಡು ಜಾತಿಯ ಗಿಡವೊಂದು, ತಿಳಿ ಹಸಿರು ಬಣ್ಣದ ಗುಚ್ಛಗಳನ್ನು ಮೈದುಂಬಿ ನಿಲ್ಲುತ್ತದೆ. ಆ ಕಾಡು ಹೂವಿನ ಹೆಸರು ಇಂದಿಗೂ ನನಗೆ ತಿಳಿಯದು. 'ಹೊಸವರ್ಷದ ಹೂ' ಎಂದೇ ನಾವು ಅಕ್ಕ ತಮ್ಮಂದಿರೆಲ್ಲ ಕರೆಯುತ್ತಿದ್ದೆವು. ನಮ್ಮೂರಿನ ಬಸ್ ನಿಲ್ದಾಣ ಶಿವಮೊಗ್ಗ ಹೆದ್ದಾರಿಗೆ ಅಂಟಿಕೊಂಡಂತೆ ಇರುವುದರಿಂದ, ದೊಡ್ಡ ದೊಡ್ಡ ವಾಹನಗಳ ಓಡಾಟ ಸರ್ವೇ ಸಾಮಾನ್ಯ. ನಾವೆಲ್ಲರೂ ಆ ಹಸಿರು ಹಗುರಾದ ಹೂಗಳನ್ನು ಗುಚ್ಛಗಳಿಂದ ಬಿಡಿಸಿ, ಬೊಗಸೆ ಕೈಗಳಲ್ಲಿ ತುಂಬಿಕೊಂಡು ಯಾವುದಾದರೂ ದೊಡ್ಡ ಲಾರಿ, ಟ್ರಕ್ ನಂತಹ ಗಾಡಿ ಬರುವುದಕ್ಕೆ ಸ್ವಲ್ಪ ಮುಂಚೆ  ರಸ್ತೆಗೆ ಬೀರುತ್ತಿದ್ದೆವು. ಆ ದೊಡ್ಡ ಗಾಡಿಗಳ ವೇಗದ ಸವಾರಿಗೆ ಈ ಹಗುರಾದ ಹೂಗಳು ಮೇಲೆತ್ತೆರಕ್ಕೆ ಹಾರುತ್ತಿದ್ದವು.  ಆಕಾಶಕ್ಕೆ ಚಿಮ್ಮುವ ಹೂಗಳ ಕಂಡು ನಾವು ಖುಷಿಯಿಂದ ನಲಿಯುತ್ತಿದ್ದೆವು.

ಇಷ್ಟಕ್ಕೂ ಮುಗಿಯದೇ , ಹಿತ್ತಲ ಕಡೆ ಎಲ್ಲ ಸೊಸೆಯಂದಿರು ಸೇರಿ ಹೋಳಿಗೆ ಮಾಡಲು ಕಣಕ್ಕಿಳಿದಿದ್ದರೆ, ನಾವು ಮೊಮ್ಮಕ್ಕಳು ಅಲ್ಲಿಗೆ ನುಗ್ಗಿ, ಹಾಗೂ ಹೀಗೂ ಮಾಡಿ ಹುರಾಣ ಕಟ್ಟಿ ಕೊಡುವ ಕೆಲಸವನ್ನು ಗಿಟ್ಟಿಸಿಕೊಂಡು, ಅವರುಗಳ ಸಹಾಯಕ ಕೆಲಸಗಳ ಮಧ್ಯೆ ಒಂದೊಂದು ಹುರಾಣದುಂಡೆ ಗುಳುಮ್ಮೆನಿಸುತ್ತಿದ್ದೆವು. ಬಿಸಿ ಬಿಸಿ ಹೋಳಿಗೆ ಪ್ರಿಯರಿಗೆ, ಊಟದ ಸಮಯಕ್ಕೆ ಹೋಳಿಗೆ ಕಾವಲಿಯಿಂದ ಡೈರೆಕ್ಟ್ ಬಾಳೆಗೆ ಬಂದು ಬೀಳುತ್ತಿತ್ತು. ಬಿಸಿ ಹೋಳಿಗೆ-ತುಪ್ಪ ಅದರ ಜೊತೆ ಮಾವಿನಕಾಯಿ ತುರಿದು ಹಾಕಿ ಮಾಡಿದ ಚಿತ್ರಾನ್ನ ತಿನ್ನುತ್ತಿದರೆ, ಈಗಿನ 'ಒಗ್ಗರಣೆ' ಸಿನಿಮಾದ 'ಈ ಜನುಮವೇ ಆಹಾ.. " ಹಾಡಿನ ಫೀಲಿಂಗನ್ನು ಕೊಡುತ್ತಿತ್ತು. 

ಸಂಜೆ ಯುಗಾದಿ ಚಂದ್ರನನ್ನು ನೋಡುವುದರಿಂದ ಸರ್ವ ಪಾಪ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯಿದ್ದರಿಂದ ಎಲ್ಲರೂ ಆಕಾಶದ ಕಡೆಗೆ ಹಣುಕುತ್ತಿದ್ದೆವು. ಕೆಲವೊಮ್ಮೆ ಚಂದ್ರ ಕಾಣುತ್ತಿದ್ದ ಕೆಲವೊಮ್ಮೆ ಇಲ್ಲ. ಆದರೂ ಅಮ್ಮುಮ್ಮ ಮಾತ್ರ ಹುಡುಕುವ ಸಮಯಕ್ಕೆ, ಎಲ್ಲರೂ ಸೇರಿ ಅಲ್ಲಿದೆ ಇಲ್ಲಿದೆ ಎಂದು ಆ ಸಲಕ್ಕೆ ಕಾಣದೇ ಇದ್ದ ಚಂದ್ರನನ್ನು ಪರಿಕಲ್ಪಿಸಿ, ಅಂತೂ ಕಡೆಗೂ ಅಮ್ಮುಮ್ಮ "ಹಮ್ ಹೌದು ಅಲ್ಲೆಲ್ಲೋ ಚೂರು ಕಾಣ್ಚು" ಎಂದಾಗ ಎಲ್ಲರ ತುಟಿಯಲ್ಲಿರುತ್ತಿದ್ದ ತುಂಟ ಕಿರುನಗೆ ಮಾತ್ರ ಮರೆಯಲಸಾಧ್ಯ.. !! 

ಇಂದು ನನಗೆ ಯುಗಾದಿ ಹಬ್ಬದ ಸಿಹಿಯ ಜೊತೆಗೆ ಬಾಲ್ಯದ ನೆನಪುಗಳ ಸಿಹಿಯೂಟ. ಸಿಹಿ-ಕಹಿ ನೆನಪುಗಳೊಂದಿಗೆ, ಹಳೆಯ ಅನುಭವಗಳೊಂದಿಗೆ, ಹೊಸತನದ ಆರಂಭವಿರಲಿ ಎಂದು ಆಶಿಸುತ್ತಾ ನಿಮ್ಮೆಲ್ಲರಿಗೂ 'ವಿಳಂಬಿ ಸಂವತ್ಸರದ' ಹೊಸ ವರ್ಷದ ಶುಭಾಶಯಗಳು.