ಬುಧವಾರ, ಡಿಸೆಂಬರ್ 21, 2016

ಶೈಕ್ಷಣಿಕ ಪ್ರವಾಸಗಳ ಮಹತ್ವ

ಡಿಸೆಂಬರ್ ತಿಂಗಳೆಂದರೆ ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪಾಠದ ಒತ್ತಡವಿಲ್ಲದೇ, ಆಟೋಟ ಸಮಾರಂಭಗಳು, ಶಾಲಾ ವಾರ್ಷಿಕೋತ್ಸವ ಇನ್ನಿತರ ಚಟುವಟಿಕೆಗಳು ನಡೆಯುವ ಕಾಲ. ಇದಕ್ಕೆ ಜೊತೆಯೆಂಬಂತೆ ಮಕ್ಕಳಿಗೆ ಇನ್ನೂ ಹುರುಪಿನ ವಿಚಾರವೆಂದರೆ ಸ್ಕೂಲ್ ಟ್ರಿಪ್, ಶೈಕ್ಷಣಿಕ ಪ್ರವಾಸ..!! ವಾರಕ್ಕೂ ಮುಂಚಿನಿಂದಲೇ ಮಕ್ಕಳಲ್ಲಿ ಸಡಗರ,  ಉತ್ಸಾಹ, ತಯಾರಿ ಎಲ್ಲಾ ಪ್ರಾರಂಭ!




ಶೈಕ್ಷಣಿಕ ಪ್ರವಾಸದ ಮಹತ್ವ :
                  ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಒಂದು ಪ್ರಮುಖವಾದ ಭಾಗವೆಂದೇ ಹೇಳಬಹುದು. ತಮ್ಮ ಸ್ವಂತ ಅನುಭವದ ಮೇಲೆ, ವೀಕ್ಷಣೆಯ ಮೇರೆಗೆ ಮಕ್ಕಳಿಗೆ ಕಲಿಯುವ ಒಂದು ಅವಕಾಶ. ಕೇವಲ ಪುಸ್ತಕದ ಬದನೇಕಾಯಿ ಆಗದೆ, ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆಯಲು ಮಾಡಬಹುದಾದಂತಹ ಒಂದು ಉತ್ತಮ ಪ್ರಯತ್ನವೇ ಶೈಕ್ಷಣಿಕ ಪ್ರವಾಸಗಳ ಕೈಗೊಳ್ಳುವಿಕೆ. ಶೈಕ್ಷಣಿಕ ಪ್ರವಾಸದ ಯೋಜನೆಯಿಂದ ಮಕ್ಕಳಲ್ಲಿ ಇತಿಹಾಸ, ವಾಸ್ತುಶಿಲ್ಪ, ಅಭಿವೃದ್ಧಿ, ಉದ್ಯಮ, ಜನ, ಧರ್ಮ, ಸಂಸ್ಕೃತಿ, ಹಾಡು, ನೃತ್ಯ ಹವಾಮಾನ, ನಿಸರ್ಗ, ಪ್ರಾಣಿ ಪಕ್ಷಿ ಸಂಕುಲ ಮತ್ತು ಪರಿಸರದ ಕುರಿತಾಗಿ ಸಾಕಷ್ಟು ವಿಷಯಗಳು ಅರಿವಿಗೆ ಬರುವುದಲ್ಲದೇ, ಕಲ್ಪನೆಗೂ ಮೀರಿ ಅವರ ಜ್ಞಾನಶಕ್ತಿ ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುರಿದುಂಬಿಸಲು ಅನೂಕೂಲವಾಗುತ್ತದೆ.
                 ಕೇವಲ ಪಾಠದ ವಿಷಯಕ್ಕಾಗಿ ಒಂದೇ ಅಲ್ಲದೇ, ಈ ರೀತಿಯ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಏಕತಾನತೆ, ಪರಸ್ಪರ ಸಹಕಾರ, ಸಂತೋಷ, ಹಂಚುವ ಭಾವನೆ, ತಮ್ಮ ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರ ವ್ಯಕ್ತಿಯೆಡೆಗೆ ಗೌರವ ಹೀಗೆ ಇನ್ನೂ ಹಲವು ಬಗೆಯ ಸೌಜನ್ಯ ನಡವಳಿಕೆಗಳನ್ನು ತುಂಬಲು ಮತ್ತು ಮಕ್ಕಳು ಮುಂದೆ ಸಂಭಾವಿತರಾಗಿ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಪಠ್ಯ ಪುಸ್ತಕದಲ್ಲಿ ಕೇಳಿ ಓದಿ ತಿಳಿಯುವುದಕ್ಕಿಂತಲೂ, ವಾಸ್ತವಿಕವಾಗಿ ನೋಡಿ ಅದರ ಅನುಭವ ಪಡೆಯುವುದು, ಆ ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮೌಲ್ಯವನ್ನು ಕೊಡುತ್ತದೆ.
                ಇದರ ಜೊತೆಗೆ, ಈ ಹಿಂದೆ ನೋಡಿರದ, ಪರಿಚಯವಿಲ್ಲದ ಊರಿಗಳಿಗೆ ತಿರುಗಾಡಿ ಅಲ್ಲಿಯ ನೆಲ, ಜಲ, ಜನ, ಪರಿಸ್ಥಿತಿ ಪ್ರತಿಯೊಂದನ್ನೂ ಹತ್ತಿರದಿಂದ ನೋಡಲು ಮತ್ತು ಮಿತ್ರರೊಡನೆ, ಕಲಿಸುವ ಗುರುಗಳೊಂದಿಗೆ ಆತ್ಮೀಯತೆಯನ್ನು ಪಡೆಯಲು ಅವಕಾಶವಾಗುತ್ತದೆ.

ಹೇಗಿರಬೇಕು ಶೈಕ್ಷಣಿಕ ಪ್ರವಾಸ :

            .  ಶೈಕ್ಷಣಿಕ ಪ್ರವಾಸ ಹೆಸರೇ ಹೇಳುವಂತೆ, ಮಕ್ಕಳಿಗೆ ನಿತ್ಯದ ಶಾಲಾ ವಾತಾವರಣದಿಂದ ಹೊರ ಕರೆತಂದು, ಅವರಿಗೆ ಒಂದು ಆಕರ್ಷಣೀಯ ರೀತಿಯಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಹಾಗೂ ಇನ್ನಿತರ ಹೆಚ್ಚಿನ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ತಾವು ನೋಡಿರದ ಬೇರೆ ಯಾವದೋ ಸ್ಥಳಕ್ಕೆ ತಮ್ಮ ನೆಚ್ಚಿನ ಸಹಪಾಠಿಗಳೊಂದಿಗೆ ಮೋಜು ಮಸ್ತಿ ಮಾಡುತ್ತಾ ಓಡಾಡಿಕೊಂಡು ಬರುವ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಮಕ್ಕಳೂ ಕೂಡ ಅಪೇಕ್ಷೆ ಪಡುತ್ತಾರೆ. ಆದರೆ ಇತ್ತೀಚಿಗೆ ನಾವು ನೋಡುವಂತೆ ಸಾಕಷ್ಟು ಶಾಲೆಗಳಲ್ಲಿ ತಮ್ಮ ಇಚ್ಛೆ ಹಾಗೂ ಅನುಕೂಲಕ್ಕೆ ತಕ್ಕಂತೆ ಪ್ರವಾಸದ ಸ್ಥಳವನ್ನು ತಾವೇ ಗೊತ್ತು ಮಾಡಿ, ಮಕ್ಕಳಿಗೆ ಪ್ರವಾಸ ಕಡ್ಡಾಯಗೊಳಿಸುವುದು ಶಾಲಾ ನಿರ್ವಾಹಕರಿಂದ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಶೈಕ್ಷಣಿಕ ಪ್ರವಾಸ ಎಂದರೆ ಕೇವಲ ಯಾವದೋ ದೂರದ ಒಂದು ಪ್ರಸಿದ್ಧ ಸ್ಥಳಕ್ಕೆ ಭೇಟಿ ಕೊಡಬೇಕೆಂದಲ್ಲ, ಆ ಸ್ಥಳವು ಕರೆದುಕೊಂಡು ಹೋಗುತ್ತಿರುವ ಮಕ್ಕಳ ಅರಿವಿನ ಮಟ್ಟಕ್ಕೆ ಇದೆಯೇ ಎಂಬುದರ ಪರಿಶೀಲನೆ ಅಗತ್ಯ. ಹೆಚ್ಚೆಚ್ಚು ಮೋಜು ಮಾಡುವ ಸ್ಥಳಗಳನ್ನು ಆಯ್ದುಕೊಂಡು ಮಕ್ಕಳ ಪೋಷಕರ ಮೇಲೆ ಅತಿಯಾದ ಪ್ರವಾಸದ ವೆಚ್ಚವನ್ನು ಹೇರುವುದೂ ಕೂಡ ಸರಿಯಲ್ಲ.

ಮೊದಲನೆಯದಾಗಿ ಯಾವ್ಯಾವ ವಯಸ್ಸಿನ ಮಕ್ಕಳಿಗೆ ಯಾವ ಬಗೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂಬುದನ್ನು ಮನಗಂಡು, ಆ ವಯಸ್ಸಿನ ಮಕ್ಕಳ ಆರಾಮವನ್ನು ಗಮನದಲ್ಲಿರಿಸಿ, ಎಷ್ಟು ದೂರದ ಪ್ರವಾಸ, ಎಷ್ಟು ದಿನಗಳ ಪ್ರವಾಸ ಎಂದು ತೀರ್ಮಾನಿಸಬೇಕು. ಉದಾಹರಣೆಗೆ, ತೀರಾ ಚಿಕ್ಕ ಮಕ್ಕಳಿಗೆ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋದರೆ ಅವರಿಗೆ ಅದು ಕೇವಲ ಒಂದು ಕಟ್ಟಡ/ಸ್ಮಾರಕವಾಗಿ ಕಂಡುಬರುತ್ತದೆಯೇ ಹೊರತು, ಐತಿಹಾಸಿಕ ಮೌಲ್ಯಗಳು ಆ ಮಕ್ಕಳ ಅರಿವಿಗೆ ಬರುವದಿಲ್ಲ. ತೀರಾ ಚಿಕ್ಕ ವಯಸ್ಸಿನ ಮಕ್ಕಳಿಗೆ ಪ್ರಾಯೋಗಿಕವಾಗಿ ಅವರು ತಿಳಿದುಕೊಳ್ಳುವಂತಹ ವಿಷಯಗಳಾದ, ಪರಿಸರ, ಪ್ರಾಣಿ ಪಕ್ಷಿಗಳು, ನಮ್ಮ ಸಮಾಜದಲ್ಲಿ ಕಂಡುಬರುವ, ನಿತ್ಯ ಸಹಾಯಕರ ಬಗೆಗೆ ತಿಳಿಸಿಕೊಟ್ಟರೆ, ಆ ಮಕ್ಕಳ ಸಾಮಾನ್ಯ ಜ್ಞಾನದ ಮಟ್ಟ ಹೆಚ್ಚುತ್ತದೆ. ಉದಾಹರಣೆಯೆಂದರೆ, ತೀರಾ ಚಿಕ್ಕ ಮಕ್ಕಳಿಗೆ ಒಂದು ದಿನದ ಪಿಕ್ನಿಕ್ ಮಾದರಿಯಲ್ಲಿ ಪ್ರಾಣಿ ಸಂಗ್ರಹಾಲಯ, ಮತ್ಸ್ಯಾಗಾರ, ಹಣ್ಣು ತರಕಾರಿ ಮಾರುಕಟ್ಟೆ, ಬಸ್ ಸ್ಟಾಂಡ್, ಹಾಸ್ಪಿಟಲ್, ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್, ಸಾರಿಗೆ ವ್ಯವಸ್ಥಾ ವಾಹನಗಳ ಸ್ಥಳ ಇತ್ಯಾದಿ ಸ್ಥಳಗಳಿಗೆ ಕರೆದೊಯ್ದು, ನಾವು ನಿತ್ಯ ಬಳಸುವ ವಸ್ತುಗಳು ಮತ್ತದರ ಲಭ್ಯತೆಯ ಬಗೆಗಿನ ಪರಿಚಯ ಹಾಗೂ ಯಾರು ನಮಗೆ ಸಾಮಾನ್ಯ ಸಹಾಯಕರು ಮತ್ತು ನಮಗವರಿಂದ ಸಿಗುವ ಸಹಾಯದ ಬಗೆಗೆ ಪರಿಚಯಿಸಿದರೆ, ಮಕ್ಕಳಲ್ಲಿ ಸಮಾಜದ ಬಗೆಗೆ ಧನಾತ್ಮಕ ಭಾವನೆ ಮೂಡುತ್ತದೆ ಮತ್ತು ಅವರ ಸಾಮಾನ್ಯ ಜ್ಞಾನ ಹೆಚ್ಚುತ್ತದೆ.

ಎರಡನೆಯದಾಗಿ, ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಮಕ್ಕಳ ಪಠ್ಯ ಜ್ಞಾನಕ್ಕೆ ಪೂರಕವಾಗಿದೆಯೇ ಎಂಬುನ್ನು ಗಮನಿಸಿಕೊಳ್ಳುವುದೂ ಕೂಡ ಅತಿ ಮುಖ್ಯ, ಐತಿಹಾಸಿಕ ವಿಷಯಗಳು, ರಾಜರ ಆಳ್ವಿಕೆ, ಸ್ವಾತಂತ್ರ್ಯ ಸಂಗ್ರಾಮ, ಪುರಾತನ ನಾಗರೀಕತೆ, ಆಧುನೀಕರಣ, ಖಗೋಳ ಶಾಸ್ತ್ರ, ಪ್ರಪಂಚದ ವೈಪರೀತ್ಯಗಳು, ವಿವಿಧ ಪ್ರದೇಶದ ಭೌಗೋಳಿಕ ಸಂಗತಿ, ಆರೋಗ್ಯ ವಿಚಾರ,  ಇನ್ನೂ ಹತ್ತು ಹಲವು ಪಠ್ಯಕ್ಕೆ ಸಂಬಂಧಿಸಿದ ವಿಷಯಕ್ಕೆ ಅನುಗುಣವಾಗಿ ಪ್ರವಾಸದ ಸ್ಥಳವನ್ನು ನಿಗದಿಪಡಿಸಿದರೆ, ಮಕ್ಕಳಿಗೆ ಓದಿದ ಪಾಠಕ್ಕೂ, ತಾವು ಹೋದಲ್ಲಿ ಕಂಡ ವಿಷಯಕ್ಕೂ ಸಾಮ್ಯತೆಯನ್ನು ಕಾಣಲು ಮತ್ತು ಹೋಲಿಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಉದಾಹರಣೆಗೆ, ವಿಜ್ಞಾನದ ವಿಷಯದ ವಿದ್ಯಾರ್ಥಿಗಳಿಗೆ ಅದಕ್ಕೆ ಸಂಬಂಧಿಸಿದಂತೆ, ಯಾವುದಾದರೂ ನವೀನ ಮಾದರಿಯ ಪ್ರಯೋಗಾಲಯಗಳು, ಉತ್ಪಾಧನಾ ಘಟಕಗಳು ಇತ್ಯಾದಿ ಸ್ಥಳಗಳಿಗೆ ಕರೆದುಕೊಂಡು ಹೋಗಿ ಪ್ರಾಯೋಗಿಕವಾಗಿ ವಿಜ್ಞಾನ ಸಂಗತಿಗಳು, ಮತ್ತದರ ಬಳಕೆಯ ಬಗೆಗೆ ವಿವರಿಸಿದರೆ, ಅವರ ಕಲಿಕೆ ಸರಳ ಮತ್ತು ಯಶಸ್ವಿಯಾಗುತ್ತದೆ.

ಮೂರನೆಯದಾಗಿ, ಯಾವ ಸ್ಥಳ ನಿಗದಿಯಾಗಿದೆಯೋ ಆ ಸ್ಥಳದ ಮಹತ್ವ, ಅಲ್ಲಿನ ವಿಶೇಷ ಭೌಗೋಳಿಕ ಸಂಗತಿಗಳು, ಭಾಷೆ, ಸಂಪ್ರದಾಯ ಇತ್ಯಾದಿ ವಿಷಯಗಳ ಕುರಿತು ಮುಂಚಿತವಾಗಿಯೇ ಮಕ್ಕಳೊಂದಿಗೆ ಕೆಲ ಸಮಯ ಕುಳಿತು ಶಾಲೆಯಲ್ಲಿ ಚರ್ಚಿಸುವುದರಿಂದ, ಮಕ್ಕಳಿಗೆ ತಾವು ಹೋಗುವ ಸ್ಥಳದ ಬಗ್ಗೆ ಮಾಹಿತಿ ದೊರೆತು ಅವರಲ್ಲಿ ಆಸಕ್ತಿ ಮೂಡುತ್ತದೆ. ಅಂತೆಯೇ ಮಕ್ಕಳೊಂದಿಗೆ ಹೋಗುತ್ತಿರುವ ಸ್ಥಳದ ಕುರಿತಾಗಿ ಪುಟ್ಟದೊಂದು ಟಿಪ್ಪಣಿಯನ್ನು ತಯಾರಿಸಿ ಕೊಡಬೇಕು, ಅದಕ್ಕೆ ಅವರ ಜ್ಞಾನಕ್ಕೆ ತಕ್ಕಂತೆ ಗೊತ್ತಿರುವ ಪಠ್ಯದಲ್ಲಿ ಕಂಡುಬಂದ ವಿಷಯ/ಸಂಗತಿಗಳನ್ನು ಗುರುತಿಸಿ ಹಂಚಿಕೊಳ್ಳಲು ತಿಳಿಸಬೇಕು ಮತ್ತದರ ಕುರಿತಾಗಿ ಮಕ್ಕಳ ಮನಸ್ಸಿಗೆ ಬರುವ ಸಂಶಯಗಳನ್ನು ನಿವಾರಿಸಿ ಪ್ರೋತ್ಸಾಹಿಸಬೇಕು.

ನಾಲ್ಕನೆಯದಾಗಿ, ಶೆಕ್ಷಣಿಕ ಪ್ರವಾಸವೆಂದರೆ, ಕರೆದುಕೊಂಡು ಹೋದಲ್ಲಿಯ ಕೇವಲ ಸ್ಥಳ/ಸ್ಮಾರಕ ವಷ್ಟೇ ಅಲ್ಲ, ಎಲ್ಲೆಲ್ಲಿ ಯಾವ್ಯಾವ ರೀತಿಯ ಶಿಕ್ಷಣವನ್ನು ಕೊಡಲು ಸಾಧ್ಯವೋ ಅಂತಹ ಪ್ರತಿಯೊಂದು ಸಂಧರ್ಭವನ್ನೂ ಕೂಡ ಬಳಸಿಕೊಳ್ಳಬೇಕು. ಉದಾಹರಣೆಗೆ,  ರಸ್ತೆ ಬದಿಗೆ ಎಲ್ಲೆಂದರಲ್ಲಿ ಎಸೆಯುವ ಕಸಗಳು ಮತ್ತದರ ಪರಿಣಾಮ, ರಸ್ತೆಯಲ್ಲಿ ಜನರು ಹಾಗೂ ವಾಹನಗಳ ಸಂಚಾರ ಮಾದರಿ, ಟ್ರಾಫಿಕ್ ವ್ಯವಸ್ಥೆ, ಕೆರೆ ತೊರೆಗಳಲ್ಲಾಗಿರುವ ನೈರ್ಮಲ್ಯ, ಬೀಡಾಡಿ ಪ್ರಾಣಿಗಳು, ಪ್ರೇಕ್ಷಣೀಯ ಸ್ಥಳಗಳಲ್ಲಿ ವ್ಯಾಪಾರಸ್ಥರ ಸುಲಿಗೆ, ಯಾವೆಲ್ಲ ಆಹಾರಗಳು ಅನಾರೋಗ್ಯಕರ, ಯಾವುದು ಸರಿ, ಯಾವುದು ತಪ್ಪು, ಭಾಷಾ ವೈವಿದ್ಯತೆ, ಜನರ ಉಡುಪುಗಳು, ಆಚರಿಸುವ ಸಂಪ್ರದಾಯಗಳು, ಬೇರೆ ಬೇರೆ ಪ್ರದೇಶದಲ್ಲಿ ಬೆಳೆಯುವ ಹತ್ತು ಹಲವು ಹಣ್ಣು, ತರಕಾರಿ, ಬೆಳೆಗಳು, ಮಣ್ಣು, ನೀರಿನ ವೈವಿದ್ಯತೆ ಹೀಗೆ ಹತ್ತು ಹಲವು ಸಣ್ಣ ಸಣ್ಣ ವಿಷಯಗಳನ್ನೂ ಕೂಡ ತೋರಿಸಿ ತಿಳಿಸುವುದಕ್ಕಿಂತ ಹೆಚ್ಚಿನ ಶಿಕ್ಷಣ ಬೇರೊಂದಿಲ್ಲ!!



ಶೈಕ್ಷಣಿಕ ಪ್ರವಾಸ ಕುರಿತು ಪೋಷಕರು ಮತ್ತು ಶಿಕ್ಷಕರ ಗಮನಕ್ಕೆ :

೧. ಶೆಕ್ಷಣಿಕ ಪ್ರವಾಸ ಕೇವಲ ಆಕರ್ಷಣೆಗೆಂದು ಆಗಿರದೆ ಆದಷ್ಟು ಮಕ್ಕಳ ವಯಸ್ಸಿನ ಮತ್ತವರ ಮನಸ್ಸಿನ ತಿಳುವಳಿಕೆಯ ಮಟ್ಟಕ್ಕೆ ಸರಿಯಾಗಿರಲಿ
೨. ಗೌಜು, ಆಡಂಬರದ ಅನುಭವ ನೀಡುವುದಕ್ಕಿಂತ, ಪ್ರವಾಸವು ಸರಳ ಹಾಗೂ ಆದಷ್ಟು ಜಾಗರೂಕ ಸ್ಥಳವಾಗಿದ್ದರೆ ಉತ್ತಮ.
೩. ಮಕ್ಕಳಿಗೆ ಹೋರಾಡುತ್ತಿರುವ ಪ್ರವಾಸದ ಕುರಿತು ಸಣ್ಣದೊಂದು ಟಿಪ್ಪಣಿ, ವಿಶೇಷವಾಗಿ ಗಮನಿಸಬೇಕಾದ ಸಂಗತಿಗಳು ಮತ್ತು ಎಚ್ಚರಿಕೆಯಿಂದಿರುವ ಸಂಗತಿಗಳನ್ನು ತಿಳಿಸಿ ಕೊಡಬೇಕು.
೪. ಮಕ್ಕಳಲ್ಲಿ ಹಲವು ಗುಂಪುಗಳನ್ನು ಮಾಡಿ, ಕೆಲವೊಂದು ಉಪವಿಷಯಗಳನ್ನು ನೀಡಿ ಅದರ ಬಗ್ಗೆ ಪುಸ್ತಕದಲ್ಲಿರುವ ಮಾಹಿತಿ ಮತ್ತು ಮಕ್ಕಳು ಇನ್ನಿತರ ಮೂಲಗಳಿಂದ ಕಲೆ ಹಾಕಿ ತರುವ ಅಭ್ಯಾಸವನ್ನು ನೀಡಿದರೆ, ಮಕ್ಕಳಲ್ಲಿ ಹೆಚ್ಚಿನ  ವಿಷಯ ಸಂಗ್ರಹ ಮತ್ತು ಚರ್ಚಾ ಭಾವನೆ ಹೆಚ್ಚುತ್ತದೆ
೫. ಶೈಕ್ಷಣಿಕ ಪ್ರವಾಸದ ತಯಾರಿ ಕುರಿತಾಗಿ ಮಕ್ಕಳು ಮತ್ತವರ ಪೋಷಕರೊಂದಿಗೆ ಚರ್ಚೆ ಅಗತ್ಯ. ನಿರ್ವಾಹಕರು, ಹೋಗುತ್ತಿರುವ ಸ್ಥಳದಲ್ಲಿ ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಮಕ್ಕಳಿಗೆ ತಿಳಿದಿರಬೇಕಾದ ತುರ್ತು ಮಾಹಿತಿಗಳು, ತುರ್ತು ಸಂದರ್ಭಗಳಲ್ಲಿ ಮಕ್ಕಳು ಯಾರಿಂದ ಸಹಾಯ ಪಡೆಯಬಹುದು ಇವೆಲ್ಲಾ ವಿಷಯಗಳ ಶಿಕ್ಷಕರು, ಪಾಲಕರು ಮತ್ತು ಮಕ್ಕಳಿಗೆ ಸ್ಪಷ್ಟವಾಗಿ ಮತ್ತು ಪಾರದರ್ಶಕವಾಗಿರಲಿ.
೬. ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ಅವರು ಇತರ ಪ್ರದೇಶದಲ್ಲಿ ಹೇಗೆ ನಡೆದುಕೊಳ್ಳಬೇಕು, ನಡವಳಿಕೆ ಮತ್ತು ಜವಾಬ್ಧಾರಿಗಳ ಕುರಿತು ಮುಂಚಿತವಾಗಿಯೇ ತಿಳಿಹೇಳಿ.
೭. ಶೈಕ್ಷಣಿಕ ಪ್ರವಾಸ ಕುರಿತಾಗಿ ಮಕ್ಕಳೊಂದಿಗೆ ಪೋಷಕರು ಮಾತನಾಡಬೇಕು ಹಾಗೂ ಮತ್ತವರ ಅನುಭವಗಳನ್ನು ಸಮಯ ಕೊಟ್ಟು, ಗಮನವಿಟ್ಟು ಆಲೈಸಬೇಕು.
೮. ಹೋದ ಕಡೆ ಅಪರಿಚಿತರ ಜೊತೆ ಮಕ್ಕಳ ಅನಗತ್ಯ ಸ್ನೇಹ ಅಥವಾ ಒಡನಾಟ, ಮಕ್ಕಳು ಕೊಂಡು ತಿನ್ನುವ ಪದಾರ್ಥಗಳು ಹಾಗೂ  ವಸ್ತುಗಳ ಕಡೆಗೆ ಮಾರ್ಗದರ್ಶಕರ ಗಮನ ಅತ್ಯಗತ್ಯ.
೯. ಶಿಕ್ಷಕರು ಮತ್ತು ಪಾಲಕರು, ಪ್ರವಾಸದ ನಂತರ ಕೂಡ ಅದರ ಕುರಿತು, ಪ್ರಾರಂಭದಷ್ಟೇ ಆಸಕ್ತಿಯನ್ನು ತೋರಿಸಿ ಮಕ್ಕಳೊಂದಿಗೆ ಚರ್ಚಿಸಿ, ಮಕ್ಕಳಿಗೆ ಸಂಶಯ, ಗೋಂದಲಗಳೇನಾದರೂ ಇದ್ದರೆ ಅದನ್ನು ಪರಿಹರಿಸಬೇಕು.








ಶುಕ್ರವಾರ, ನವೆಂಬರ್ 25, 2016

ನನ್ನ ಬಂಗಾರಿ...

ಒಂದು ದಿನ ಚೀನಿಕಾಯಿ ಪದಾರ್ಥ ಮಾಡಿದ ನಂತರ, ಅದರ ಅಳಿದುಳಿದ ಬೀಜಗಳು ನನ್ನ ಕ್ರಾಫ್ಟ್ ಕೆಲಸಗಳಿಗೆ ಬರುತ್ವೇ ಎಂದು ತೊಳೆದು ಬಾಲ್ಕನಿಯಲ್ಲಿ ಬಿಸಲಿಗೆ ಒಣಗಿಸಿಟ್ಟಿದ್ದೆ. ಸಂಜೆಯ ವೇಳೆಗೆ ವಾಪಸು ತೆಗೆಯಬೇಕೆಂದು ನೋಡಿದರೆ ನನಗೆ ಆಶ್ಚರ್ಯವೊಂದು ಕಾದಿತ್ತು. ಚೀನೀ ಬೀಜದ ಕೇವಲ ಹೊರಗಿನ ಸಿಪ್ಪೆಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು. ಅದರೊಳಗಿನ ಮೃದು ಭಾಗವು ಲವಲೇಶವಿಲ್ಲದಂತೆ ಖಾಲಿಯಾಗಿತ್ತು. ಇದು ಮತ್ತೆ ಹೋದ ವಾರವಷ್ಟೇ ಕಷ್ಟ ಪಟ್ಟು ಹೋಗಲಾಡಿಸಿದ ಇರುವೆಯ ಕಾಟವೇ ಹೌದು ಎಂದು ಮನಸಾರೆ ಬೈದುಕೊಳ್ಳುತ್ತಾ ಕುರುಹು ಸಿಗಬಹುದೇ ಎಂದು ಬಗ್ಗಿ ನೋಡಿದೆ, ಏನೂ ಗೋಚರಿಸಲಿಲ್ಲ. ಎಲ್ಲಾ ಇರುವೆಗಳೂ ಚೆನ್ನಾಗಿ ತಿಂದು ಹೋಗಿವೆ ಎಂದುಕೊಳ್ಳುತ್ತಾ ಒಳನೆಡೆದೆ. ಮತ್ತೆ ಮರುದಿವಸ ಇನ್ನರ್ಧ ಚೀನೀಕಾಯಿಯ ಬೀಜಗಳನ್ನು ಒಣಗಿಸಿಟ್ಟೆ. ಈ ಸರ್ತಿ ಒಂದು ಕರ್ಪೂರವನ್ನು ಬೀಜಗಳ ಜೊತೆಗಿಟ್ಟು. ಇರುವೆಯಿಂದ ಕಾಪಾಡಿಕೊಳ್ಳುವ ಮಾಸ್ಟರ್ ಪ್ಲಾನ್  ಹಾಕಿದೆ. ಆದರೆ ಮಧ್ಯಾಹ್ನದ ವೇಳೆಗೆ, ಬೀಜ ಒಣಗಿಸಿಟ್ಟ ತಟ್ಟೆಯ ಬಳಿ ಸಣ-ಮಣ ಶಬ್ಧ ಕೇಳಿ ಬರುತ್ತಿತ್ತು. ನಿಧಾನವಾಗಿ ಬಾಲ್ಕನಿಯ ಕರ್ಟೈನ್ ಸರಿಸಿ ಗಮನಿಸಿದೆ. ಮತ್ತೆ ಅಲ್ಲಲ್ಲಿ ಹರಡಿದ ಸಿಪ್ಪೆಗಳು.. ಈ ಸರ್ತಿ ಸಾಕ್ಷಿ ಸಮೇತವಾಗಿ ದೊರಕಿತು,ಇದು ಯಾರ ಹರ್ಕತ್ ಎಂದು..ಪುಟ್ಟದೊಂದು ಮುದ್ದಾದ ಅಳಿಲು ಕುಳಿತ ಭಂಗಿಯಲ್ಲಿ, ತನ್ನೆರಡು ಮುಂಗಾಲು (ಕೈ) ಬಳಸಿ ಚೀನೀ ಬೀಜವನ್ನು ಕಡಿದು ಸಿಪ್ಪೆ ತೆಗೆದು ಒಳಗಿನ ಭಾಗವನ್ನು ತಿಂದು ತೇಗುತ್ತಿತ್ತು. ಕ್ಷಣ ಮಾತ್ರದಲ್ಲಿ ಆ ವರೆಗೆ ಆಗಿದ್ದ ಹತಾಶೆ, ಕೋಪ ಎಲ್ಲವೂ ಮಾಯವಾಗಿ, ತುಟಿಯಂಚಲ್ಲಿ ನಗುವೊಂದು ನನಗರಿವಿಲ್ಲದೇ  ಬಂದು ಆಸೀನವಾಗಿಬಿಟ್ಟಿತು. ಮರೆಯಲ್ಲಿ ನಿಂತು ಗಮನಿಸಿದೆ...ಆಹಾ ಅದೇನು ಕೌಶಲ್ಯ..! ಒಂದೊದಾಗಿ ಬೀಜವನ್ನು ಹೆಕ್ಕಿ, ತನ್ನೆರಡೂ ಕೈಗಳಲ್ಲಿ ಹಿಡಿದು, ಬಾಯಿಗೆ ಹಾಕಿ ಬೀಜದ ಹೊರಗಿನ ಸಿಪ್ಪೆಯೊಡೆದು, ಒಳಗಿನ  ಬೀನ್ಸ್ ತಿನ್ನುವ ಪರಿ... ಮತ್ತದೆಲ್ಲವೂ ಅರೆಕ್ಷಣದಲ್ಲಿ.... ಮೆಚ್ಚಿದೆ ಅದರ ಚುರುಕುತನವನ್ನು !! ನಾನು ನಿಂತ ಅನುಮಾನದಿಂದ ಚುರು ಕುಗೊಂಡ ಆ ಅಳಿಲು ಬಾಲ್ಕನಿಯ ತಳಿಯೇರಿತು, ಆದರೆ ತಿನ್ನುವ ಆಸೆ ಅದಕ್ಕಿನ್ನೂ ತೀರಿರಲಿಲ್ಲ  ಹಾಗಾಗಿ ಹೆದರಿ ಹೆದರಿ ಮತ್ತೆ ಕೆಳಗಿಳಿದು ಬರುವುದು, ಮತ್ತೊಂದು ಬೀಜವನ್ನೆತ್ತಿಕೊಂಡು ಪರಾರಿಯಾಗುವುದು, ಮಾಡಲು ಪ್ರಾರಂಭಿಸಿತು. ಕನಿಕರದಿಂದ "ನೀನು ತಿನ್ನು ಮರಿ..." ಎಂದು ಹೇಳಿ ಬಾಲ್ಕನಿಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿ ಆಶ್ವಾಸನೆ ಕೊಟ್ಟುಬಿಟ್ಟೆ. ನಂತರದಲ್ಲಿ ಮತ್ತೆ ಉಳಿದದ್ದು ಅವೇ ಚೀನೀ ಬೀಜಗಳ ಸಿಪ್ಪೆ. ಆದರೆ ಈ ಸರ್ತಿ ಬೇಜಾರಾಗುವುದರ ಬದಲು, ಏನೋ ಒಂದು ರೀತಿಯ ಸಂತೋಷ ನನ್ನಲ್ಲುಂಟಾಯಿತು.


ಆಶ್ಚರ್ಯವೆಂದರೆ ಮರುದಿನವೂ ಆ ಅಳಿಲು ಅಲ್ಲಿಯೇ ಸುತ್ತುವರೆದುಕೊಂಡಿತ್ತು. ಚೀವ್ ಚೀವ್ ಎಂದು ಕೂಗಿಕೊಳ್ಳುತ್ತ  ಬಾಲ್ಕನಿಯಲ್ಲಿ ಹಕ್ಕಿಗಳಿಗಾಗಿ ಇಡುವ ಇನ್ನೊಂದು ಧಾನ್ಯದ ಕರಡಿಗೆಯಲ್ಲಿ ತನಗಿನ್ನೇನು ಸಿಗಬಹುದು ಎಂದು ಅನ್ವೇಷಣೆ ನಡೆಸಿತ್ತು. ಅಷ್ಟರಲ್ಲೇ ಮಗಳಿಗೆ ಅಳಿಲು ತೋರಿಸುವ ಸಂಭ್ರಮದಲ್ಲಿ ಅವಳಿಗೆ ಹೆಚ್ಚಿನ ಗಲಾಟೆ ಮಾಡದಿರಲು ತಿಳಿಹೇಳಲು ಮರೆತೇ ಬಿಟ್ಟೆ. ಇವಳ ಉತ್ಸಾಹದ ಭರದಲ್ಲಿ, ಕೂಗಿಕೊಂಡಳು, "ಇಣಚಿ ಇಣಚಿ.." ಎಂದುಕೋಂಡು. ಮರುಕ್ಷಣವೇ, ನಮ್ಮ ಮನೆಯ ಹೊಸ ನೆಂಟನ ಪಾಲಾಯನವಾಗಿಯಾಗಿತ್ತು!! ವಾಪಸು ಬರುವುದೇ ಇಲ್ಲವೇನೋ ಎಂಬ ಸಂಶಯ ಹುಟ್ಟಿದರೂ, ಅದಕ್ಕನುಕೂಲವಾದ ಆಹಾರವನ್ನಿಟ್ಟು ಪ್ರಯತ್ನಿಸೋಣ ಎಂದು ಮಗಳು ಮತ್ತು ನಾನು ಯೋಚಿಸಿ, ಶೇಂಗಾಬೀಜಗಳನ್ನಿಟ್ಟು ಕಾಯತೊಡಗಿದೆವು. ಆ ಸಮಯಕ್ಕೇ ಬರದೇ ಹೋದರೂ, ಯಾವದಾದರೂ ಸಮಯದಲ್ಲಿ ಆ ಪುಟ್ಟ ನಮ್ಮ ಗೆಸ್ಟ್ ನಮ್ಮ ಮನೆಯ ಬಾಲ್ಕನಿಗೆ ಬಂದು ಹೋಗುವುದು ತಿಳಿಯುತ್ತಿತ್ತು. ಅಷ್ಟರಲ್ಲೇ ಆ ಅಳಿಲಿನ ಮೇಲೆ ನಂಗೊಂದು ರೀತಿಯ ವ್ಯಾಮೋಹ ಪ್ರಾರಂಭವಾಗಿತ್ತು. ಅಳಿಲೇ ಹಾಗೆ ಅಲ್ಲವೇ...? ಒಂದು ಸುಂದರವಾದ, ತನ್ನ ದೇಹ ಗಾತ್ರಕ್ಕಿಂತಲೂ ದೊಡ್ಡದಾಗಿ ತುಪ್ಪುಳ ತುಪ್ಪುಳ ಬಾಲದ ವೈಶಿಷ್ಟ್ಯವನ್ನು ಹೊಂದಿರುವ, ಅತ್ಯಾಕರ್ಷಣೀಯ ಪುಟ್ಟ ಪುಟ್ಟ ಬಟ್ಟಲು ರೂಪದ ಕಡುಗಪ್ಪು ಕಣ್ಣುಳ್ಳ, ಒಂದು ನಿರುಪದ್ರವ ಚಿಕ್ಕ ಪ್ರಾಣಿ. ಅದರ ಚಟುವಟಿಕೆಗಳಂತೂ ನಿರಂತರ...! ಸಾಮಾನ್ಯವಾಗಿ ಮರದ ಮೇಲೆಯೇ ಅಳಿಲುಗಳನ್ನು ಚಂಗನೆ ಜೆಗಿಯುವುದನ್ನು ನೋಡಿರುತ್ತಿದ್ದ ನನಗೆ, ಅಷ್ಟು ಹತ್ತಿರದಲ್ಲಿ ನಮ್ಮ ಮನೆಯ ಬಾಲ್ಕನಿಯಲ್ಲಿ ಅಳಿಲು ಓಡಾಡಿಕೊಂಡಿರುವುದು ಅತೀವ ಸಂತೋಷವನ್ನು ತಂದಿತ್ತು. ಶುರುವಾಯಿತು ನನ್ನ ಅಳಿಲಿನ ಬಗೆಗಿನ ಅನ್ವೇಷಣೆ. ಗೂಗಲ್ಲಮ್ಮನಲ್ಲಿ ಅಳಿಲಿನ ಬಗ್ಗೆ ಎಲ್ಲಾ ವಿಷಯಗಳನ್ನು ಹುಡುಕಲಾರಂಭಿಸಿದೆ. ಏನು ತಿನ್ನುತ್ತದೆ, ಯಾವ ರೀತಿಯ ವಾತಾವರಣ, ಸೂಕ್ತ ಜಾಗ, ಎಷ್ಟರ ಮಟ್ಟಿಗೆ ಸ್ನೇಹ ಜೀವಿಯದು ಇತ್ಯಾದಿ ಎಲ್ಲಾ ವಿಷಯಗಳನ್ನು ಸಂಗ್ರಹಿಸಿ ಮನಸ್ಸಿನಲ್ಲೇ ಮಣೆ ಹಾಕಿಕೊಂಡೆ, ಸಾಕು ಪ್ರಾಣಿಯಾಗಿ ಉಳಿಯಬಹುದೇ ಎಂಬುದರ ಬಗ್ಗೆ ಕುತೂಹಲ, ಆಶಾಭಾವನೆ ಎಲ್ಲವೂ ಶುರುವಾಯಿತು.  ಆ ಮುದ್ದು ಮುಖದ ಪುಟ್ಟ ಜೀವಿಗೆ ಹೆಸರೊಂದಿಡೋಣ ಎಂದು ನಾನು ನನ್ನ ಮಗಳು ಚರ್ಚಿಸಿ, ಅವಳ ಅಪೇಕ್ಷೆಯ ಮೇರೆಗೆ  'ಬಂಗಾರಿ' ಎಂದು ನಾಮಕರಣವೂ ಮಾಡಿ ಮುಗಿಸಿದೆವು. ಅಪರೂಪಕ್ಕೆ ನಮ್ಮಗಳ ಅನುಪಸ್ಥಿತಿಯಲ್ಲಿ ಬಂದು ಹೋಗುತ್ತಿದ್ದ ಬಂಗಾರಿಯ ಭೇಟಿ ದಿನ ದಿನಕ್ಕೂ ಸಾಮಾನ್ಯವಾಗತೊಡಗಿತು. ನಮ್ಮ ಉಪಸ್ಥಿತಿ, ಅಣತಿ ದೂರದಲ್ಲಿ ನಾವಿದ್ದರೂ ಧೈರ್ಯದಿಂದ ಬಂದು ಓಡಾಡಲಾರಂಭಿಸಿತು. ಬಂಗಾರಿಯ ಆಹಾರಕ್ಕೋಸ್ಕರ ನಮ್ಮ ಮನೆಯ ಆಹಾರ ಪದ್ಧತಿಯಲ್ಲಿ ಬದಲಾವಣೆಯೂ ಶುರುವಾಯಿತು. ಬೀಜಗಳಿರುವ ಜೋಳ, ಸೌತೆಕಾಯಿ, ಚೀನಿಕಾಯಿಯ ಅಡುಗೆಗಳು, ಶೇಂಗಾಬೀಜ, ಕಡಲೆ, ಚಿಕ್ಕ ಪುಟ್ಟ ಸೊಪ್ಪುಗಳು ಎಲ್ಲವೂ ಮನೆಗೆ ತರುವ ಸಾಮಾನು ಪಟ್ಟಿ ಸೇರಲಾರಂಭಿಸಿತು.  ಸಂಜೆ ಕುಡಿಯಲು ಹಾಲಿನ ಬದಲು ನಾನು ಬೂದುಗುಂಬಳ ರಸವನ್ನು ಕುಡಿಯಲಾರಂಭಿಸಿದೆ. ಬಂಗಾರಿಗೆ ಬೀಜಗಳ ನಿರ್ವಹಣೆಗೆ ಎಂಬ ಹುನ್ನಾರವಿದ್ದರೂ, ನಮ್ಮ ಒಳ್ಳೆಯ ಆರೋಗ್ಯಕ್ಕೆ ಎಂಬ ಪಟ್ಟಿ ಕಟ್ಟುಕೊಂಡು!!

ಒಂದು ದಿನ ಯೋಗಾಸನ ಮಾಡುವಾಗ ಬಿಸಿಲಿನ ಕಿರಣಗಳಿಗೋಸ್ಕರ ಬಾಲ್ಕನಿಯ ಬಾಗಿಲನ್ನು ತೆರೆದಿಟ್ಟುಕೊಂಡಿದ್ದೆ. ಆ ದಿನ ಹೇಗೋ ನಮ್ಮ ಬಂಗಾರಿ ಧೈರ್ಯ ಮಾಡಿ ಮನೆಯ ಒಳಗೂ ಹೊರಗೂ ಓಡಾಡಲಾರಂಭಿಸಿತ್ತು. ದೇವರಕೋಣೆಯಲ್ಲಿ ದೇವರಿಗೆ ಏರಿಸಿಟ್ಟಿದ್ದ ಹೊಗಳನ್ನೊಂದಿಷ್ಟು ಪರಿಶೀಲಿಸಿತು. ಮತ್ತೆಲ್ಲಿಯಾದರೂ ತನಗಿನ್ನೇನು ಸಿಗಬಹುದು ಎಂದು ಜಗಲಿಯ ತುಂಬೆಲ್ಲ ಓಡಾಡಿತು. ಎದುರಿಗಿದ್ದ ನಾನು ಇದನ್ನೆಲ್ಲಾ ಗಮನಿಸಿ ಅತೀವ ಸಂತೋಷ ಪಡುತ್ತಿದ್ದರೂ, ಸ್ವಲ್ಪವೂ ಅಲುಗಾಡದೆ ಅದರ ಚಲನವಲನವನ್ನು ಗಮನಿಸುತ್ತಿದ್ದೆ. ಹೀಗೆ ಎಲ್ಲವನ್ನೂ ಪರಿಶೀಲಿಸುತ್ತಾ ನನ್ನ ಹತ್ತಿರವಾದವರೆಗೂ ಬಂದು, ಕೈಗಳನ್ನೆಲ್ಲ ಒಮ್ಮೆ ಮೂಸಿ ಮೂಸಿ ನೋಡಿತು. ಬೆರಳುಗಳನ್ನು ನೆಕ್ಕಿತು... ಅಂದು ಆದ ಅದ್ಭುತ ಅನುಭವವದು !! ಕೈಗೆ ಕಚಗುಳಿಯಾಯಿತು, ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತಹ ಪುಳಕ! ಅಂದು ಖಾತ್ರಿಯಾಯಿತು, ಈ ಮುದ್ದು ಮರಿ ನಮ್ಮ ಮನೆಯಲ್ಲಿ ಆಶ್ರಯ ಪಡೆಯಲು ಹಿಂದೇಟಾಕುವುದಿಲ್ಲವೆಂದು.. ಅಂದು ಸಂತೋಷಕ್ಕೆ ಪಾರವೇ ಇರಲಿಲ್ಲ. ಸ್ನೇಹಿತರಿಗೆಲ್ಲ ಅಂದು ಹೇಳಿಕೊಳ್ಳಲು ಅದೇ ಸುದ್ದಿಯಾಗಿತ್ತು ನನಗೆ.. ಏನೋ ಒಂದು ರೀತಿಯ ಹೆಮ್ಮೆ ನನಗೆ ನನ್ನ ಮೇಲೆಯೇ ಬಂದಿತ್ತು.. ಅಳಿಲನ್ನು ಬಂಧಿಸಿಡುವ ಯಾವ ಉದ್ದೇಶವೂ ಇಟ್ಟುಕೊಳ್ಳದೆ, ಪ್ರೀತಿ ಕಾಳಜಿಯ ಸಂಭ್ರಮದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಬೆಚ್ಚಗಿರಲು ಅದಕ್ಕೊಂದು ಪುಟ್ಟ ಗೂಡೊಂದನ್ನು ಮಾಡುವ ಎಂದೆನಿಸಿತು. ರೂಟ್ಟಿನ ಪೆಟ್ಟಿಗೆಯನ್ನು ಪುಟ್ಟ ಕೊಣೆಯ ತರಹ ಕತ್ತರಿಸಿ, ಒಳಗಡೆ ಮಲಗಲೆಂದು ನನ್ನ ಬಳಿ ಇದ್ದ ಸ್ಪಂಜ್ ಅನ್ನೆಲ್ಲ ಸೇರಿಸಿ ಮೆದುವಾದ ಹಾಸಿಗೆಯನ್ನೊಂದು ತಯಾರಿಸಿದೆ. ಆದರೆ ಈ ಪ್ರಯತ್ನ ವಿಫಲವಾಯಿತು. ಒಳಗಡೆ ಹೋಗುವಷ್ಟು ಧೈರ್ಯ ಮಾಡಲಿಲ್ಲ ನಮ್ಮ ಬಂಗಾರಿ, ಅದರ ಬದಲು, ಸ್ಪಾಂಜ್ ನ ಬಟ್ಟೆಯನ್ನೇ ಹೊರಗೆ ಕಚ್ಚಿ ಎಳೆದು ತಿನ್ನಲು ಸಾಧ್ಯವೇ ಎಂದೆಲ್ಲ ಗಮನಿಸಿ, ಪರಚಿ, ತನಗೆ ಉಪಯುಕ್ತವಾದ್ದಲ್ಲ ಎಂದರಿತು ಕಿತ್ತು ಹೊರಗೋಡಿತು. "ಇನ್ನು ಚಳಿಗಾಲಕ್ಕೆಂದು ಅದಕ್ಕೆ ಟೋಪಿ ಸ್ವೇಟರ್ ಹೊಲೆಯುವುದೊಂದು ಬಾಕಿ ನೀನು.." ಎಂದು ಮನೆಯಲ್ಲಿ ಕೆಣಕಿಸಿಕೊಂಡಿದ್ದೂ ಆಯಿತು. "ಬಂಗಾರಿ ಬಾರೆ.." ಎಂದು ಒಮ್ಮೊಮ್ಮೆ ಕರೆದರೆ, ಹತ್ತಿರದ ಮರದ ಟೊಂಗೆಯಲ್ಲಿ ಹಣಕಿ ಇಣಕಿ ನನ್ನ ಕೈಯಲ್ಲೇನಾದರೂ ತಟ್ಟೆಯಿದೆಯೇ ಎಂದು ಗಮನಿಸುತ್ತಿತ್ತು, ತಟ್ಟೆ ಕಂಡರೆ ತಕ್ಷಣಕ್ಕೆ ಹಾಜರು. ಈ ಚಳಿಗಾಲದ ತಣ್ಣನೆಯ ವಾತಾವರಣಕ್ಕೋ ಏನೋ, ಬೆಳಗಿನ ಜಾವದಲ್ಲಿ ಬಾಲ್ಕನಿಯ ಬಾಗಿಲಿಂದ ಒಳಬಂದು ಮನೆಯ ಸೋಫಾ ಎಲ್ಲವನ್ನೂ ಹತ್ತಿ ಓಡಾಡಲು ಸ್ವಲ್ಪವೂ ಸಂಕೋಚಿಸುತ್ತಿರಲಿಲ್ಲ... ಕೈ ಮುಷ್ಠಿ ಬಿಗಿಹಿಡಿದು ತಗೋ ಎಂದು ಕೈ ಚಾಚಿದರೆ ಸಾಕು, ಬಂದು ತನ್ನ ಚೂಪು ಮೂತಿಯಿಂದ ಕೈಯನ್ನೆಲ್ಲ ಮೂಸಿ ಮೂಸಿ, ತನ್ನ ಮುಂದಿನ ಎರಡು ಮುಂಗಾಲುಗಳಿಂದ ನನ್ನ ಕೈ ಮುಷ್ಟಿಯನ್ನು ಬಾಚಿ ಬಾಚಿ ತೆಗೆಯಲು ಪ್ರಯತ್ನಿಸುತ್ತಿತ್ತು. ನನ್ನ ಮಗಳು ೬ ತಿಂಗಳ ಪಾಪುವಿದ್ದಾಗ ಹೇಗೆ ನಮ್ಮಗಳ ಕೈ ಎಳೆದು ಹಿಡಿಯುತ್ತಿದ್ದಳೋ ಅದೇ ಅನುಭವ ಮರುಕಳಿಸುತ್ತಿತ್ತು. ಒಟ್ಟಿನಲ್ಲಿ ಬಂಗಾರಿ - ನಮ್ಮ ಅಳಿಲಿನ ಆಗಮನ, ನಮಗೆಲ್ಲ ಒಂದು ರೀತಿಯ ಸಂತೋಷ, ಕುತೂಹಲ, ಉತ್ಸಾಹ ಎಲ್ಲವನ್ನೂ ತಂದಿತ್ತು.

ಒಂದು ದಿನ ಬೆಳಿಗ್ಗೆಯೇ ಹಾಕಿಟ್ಟಿದ್ದ ಬಂಗಾರಿಯ ಆಹಾರ ತಟ್ಟೆಯಲ್ಲಿ ಹಾಗೆಯೇ ಇತ್ತು, ಕರಟದಲ್ಲಿ ನೀರೂ ಕೂಡ ಕಡಿಮೆಯಾಗಿರಲಿಲ್ಲ. ಹೌದು ಬೆಳಿಗ್ಗೆ ಯೋಗಾಸನದ ಸಮಯದಲ್ಲಿ ಮನೆಯೊಳಗೇ ಬಂದು ಕಂಡ ಕಂಡಲ್ಲಿ ಹತ್ತಿ ಹಾರಿ ಕುಪ್ಪಳಿಸಿರಲಿಲ್ಲ. ನಾಲ್ಕು ಸಲ ಕೂಗಿ ಕರೆದೆ, "ಬಂಗಾರಿ ಬಾರವ್ವ.." ಎಂದು, ಸುತ್ತಲಿನ ಯಾವ ಮರದ ಕೊಂಬೆಗಳಲ್ಲೂ ಯಾವುದೇ ತರಹದ ಸಪ್ಪಳ ಆಗಲಿಲ್ಲ. ಎಲ್ಲೋ ಆಟವಾಡಿಕೊಂಡಿರಬಹುದೆಂದು ಭಾವಿಸಿ, ಇನ್ನೊಂದಷ್ಟು ಧಾನ್ಯಗಳನ್ನು ಉದುರಿಸಿ ನನ್ನ ಕೆಲಸದ ನಿಮಿತ್ತ ನಾನು ಹೊರನೆಡೆದೆ. ಮಧ್ಯಾಹನದವರೆಗೂ ಬಂಗಾರಿಯ ಸುಳಿವಿರಲಿಲ್ಲ. ಏನೋ ಒಂದು ರೀತಿಯ ಕಸಿವಿಸಿ ಪ್ರಾರಂಭವಾಯಿತು. ಅದಕ್ಕಿಷ್ಟವಾದ ಆಹಾರವನ್ನೇನಾದರೂ ನಾನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಅರೋಗ್ಯ ತೊಂದರೆ ಮಾಡಿದೆನೇ ಎಂದೆಲ್ಲ ಗೊಂದಲ ಶುರುವಾಯಿತು. ಮಗಳು ಕೂಡ ಒಂದೇ ಸಮನೆ "ಬಂಗಾರಿ ಇನ್ನೂ ಬರ್ಲೆ, ಎಲ್ಲೋತು ಎಲ್ಲೋತು.. ?" ಎಂದು ಕೇಳತೊಡಗಿದ್ದಳು. "ಎಲ್ ಹೊದ್ಯೆ ಮಗಳೇ..." ಎಂದು ನನ್ನ ಮನಸ್ಸೂ ಕೂಡ ಒಂದೇ ಸಮನೆ ಅದೇ ಪ್ರಶ್ನೆಯನ್ನು ಕೇಳುತ್ತಿತ್ತು. ಮಧ್ಯಾಹ್ನಕ್ಕೆ ಅದರ ಆಹಾರವನ್ನೆಲ್ಲ ಬದಲಾಯಿಸಿ ನೋಡಿದೆ. ಸಂಜೆಯವರೆಗೂ ಕಾದೆವು. ಬಂಗಾರಿಯ ಸುಳಿವಿಲ್ಲ. ಯಾರನ್ನು ಕೇಳಲೂ ಸಾಧ್ಯವಿಲ್ಲದ ಅಸಹಾಯಕತೆ. ಮತ್ತೆ ಗೂಗಲಮ್ಮ ಅಳಿಲುಗಳ ಬಗ್ಗೆ ನೀಡಿದ ವಿಷಯ ಸಂಗ್ರಹದಲ್ಲಿ ಒಂದು ವಿಷಯ ನೆನಪಾಯಿತು. ಮರ ಹತ್ತುವ ಅಳಿಲುಗಳು, ಒಂದು ನೈಸರ್ಗಿಕ ಜಾಗದಿಂದ ಇನ್ನೊಂದು ನೈಸರ್ಗಿಕ ಜಾಗಕ್ಕೆ ಓಡಾಡುತ್ತಿರುತ್ತವೇ ಎಂದು. ಅಂತೆಯೇ ಓದಿದ ಇನ್ನೊಂದು ವಿಷಯವೆಂದರೆ, ಬೆಕ್ಕು, ಹಾವು ಇನ್ನಿತರೇ ವೈರಿಗಳ ಕಾಟ ಹೆಚ್ಚೆಂದು. "ಓ ದೇವರೇ, ನಮ್ಮ ಪುಟ್ಟುಮರಿಗೆ ಈ ಮನೆ ನೆನಪಿಲ್ಲದಿದ್ದರೂ ಪರ್ವಾಗಿಲ್ಲ, ಏನೂ ತೊಂದರೆಯಲ್ಲಿಲ್ಲದಿದ್ದರೆ ಸಾಕು.." ಎಂದು ಮನಸ್ಸು ಕೇಳತೊಡಗಿತು. ಆದರೆ ಅಂದು ನನಗೆ ಊಟ ತಿಂಡಿಯೇ ಸೇರದಷ್ಟು ಬೇಸರ. ಸುಸ್ತಾಗಿ ಕನ್ನೇಳಿಯುತ್ತಿದ್ದರೂ, ರಾತ್ರೆ ಮಲಗಲು ಮನಸ್ಸಿಲ್ಲದಷ್ಟು ಕಳವಳ. ಪ್ರೀತಿಗೆ ಪ್ರತಿ ಪ್ರೀತಿಯನ್ನುತಕ್ಷಣಕ್ಕೆ ಕೊಟ್ಟ ಆ ಪುಟ್ಟು ಜೀವಿ, ಒಂದು ವಾರದಲ್ಲೇ ಹೃದಯಕ್ಕೆ ಸಮೀಪವಾಗಿ ಹೋಗಿತ್ತು. ಮರುದಿನ ಬೆಳಗಿನ ಜಾವವೇ ಎದ್ದು ಓದಿ ಹೋಗಿ ಬಾಲ್ಕನಿಯ ಕಡೆಗೆ ಓಡಿದೆ. ಇಲ್ಲ, ಬಂಗಾರಿ ಬಂದಿದ್ದರ ಸುಳಿವಿಲ್ಲ... ಅಂದು ಪ್ರಾಣಾಯಾಮಕ್ಕೂ ಮನಸಾಗಲಿಲ್ಲ, ಕೈಯಲ್ಲಿ ಚಾ ಹಿಡಿದು ಬಾಲ್ಕನಿಯ ಕಡೆಗೆ ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದೆ. ಅಂದು ಯಾವ ಕೆಲಸಕ್ಕೂ ಮನಸಾಗಲಿಲ್ಲ. ಒಂದೇ ಸಮನೆ ಮನಸ್ಸು 'ಬಂಗಾರಿ' ಯನ್ನು ಕರೆಯುತ್ತಿತ್ತು...  ಶಬರಿ ರಾಮನಿಗೋಸ್ಕರ ಕಾದದ್ದು ಹೀಗೆ ಇರಬಹುದಾ...! ಆದರೂ ನಿತ್ಯ ಕೆಲಸಗಳಿಗೆ ಬ್ರೇಕ್ ಹಾಕಲಾಗದೆ, ಮಗಳನ್ನು ಬೆಳಿಗ್ಗೆ ಸೈಕಲ್ ರೌಂಡ್ ಹೊಡೆಸಲು ಹೊರಗೆ ಹೊರಟೆ. ಆಗ ಪಕ್ಕದಲ್ಲಿದ್ದ ವಾಚ್ ಮ್ಯಾನ್ ಹೇಳಿದ ಮಾತು ನನಗೆ ಅತೀವ ಆಘಾತ ಉಂಟುಮಾಡಿತು. "ಮೇಡಂ ನಿಮ್ಮ ಮನೆ ಬಾಲ್ಕನಿಗೆ ಜಂಪ್ ಮಾಡ್ಕೊಂಡ್ ಇತ್ತಲ್ಲಾ, ಆ ಅಳಿಲು ನಿನ್ನೆ ಮರದ ಕೊಂಬೆಗೆ ಎಲೆಕ್ಟ್ರಿಕ್ ವೈರ್ ಎಕ್ಸಟೆನ್ಶನ್ ತಾಕ್ಕೊಂಡಿತ್ತಲ ಅಲ್ಲಿ ಓಡಾಡ್ಬೇಕಾದ್ರೆ ಶಾಕ್ ಹೋಡ್ಸ್ಕೊಂಡ್ ಸತ್ತೋಯ್ತು..."!! "ನನ್ನ ಬಂಗಾರಿ ಮತ್ತೆ ವಾಪಸು ಬರದು.." ಆ ಭಾವನೆಯೇ ಒಪ್ಪಿಗೆಯಾಗಲಿಲ್ಲ ನನಗೆ. ಕಣ್ಣಂಚಿನಲ್ಲಿ ನೀರು ಕೇಳದೆಯೇ ತುಂಬಿಕೊಂಡಿತು. "ಅಮ್ಮಾ ಏನಂತೆ, ಅಳಿಲು ಎಲ್ಲೋತು?" ಎಂದು ಮಗಳ ಧ್ವನಿ ಕೇಳುತ್ತಿದ್ದರೂ ಉತ್ತರಿಸಲಾಗದಷ್ಟು ಗದ್ಗದಿತವಾಗಿತ್ತು ನನ್ನ ಗಂಟಲು. ಆದರೂ ಸಾವರಿಸಿಕೊಂಡು ಮಗಳಿಗೂ ಅವಳಿಗರ್ಥವಾಗುವಂತೆ ಉತ್ತರಿಸಿ, "ಛೆ! ರೆಂಬೆ ಕೊಂಬೆ ವೈರ್ ಗೆ ತಾಗದೆ ಇರೋ ಹಾಗೆ ಸ್ವಲ್ಪ ಕಟ್ ಮಾಡಬೇಕೀಗ...ಅನ್ಯಾಯವಾಗಿ ಅಳಿಲು, ಹಕ್ಕಿ ಎಲ್ಲ ಸಾಯ್ತವೆ" ಎಂದು ಅವರಿಗೆ ಪ್ರತ್ಯುತ್ತರ ನೀಡಿ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮತ್ತೆರಡು ದಿನ ನಮ್ಮ ಬಂಗಾರಿ ಮತ್ತೆ ಬಾಲ್ಕನಿಗೆ ಬರುವುದಿಲ್ಲ ಎಂದು ತಿಳಿದಿದ್ದರೂ ಕತ್ತು ಹೊರಳಿ ನೋಡುವುದನ್ನು ನಿಲ್ಲಿಸುತ್ತಿರಲಿಲ್ಲ. ಆದರೂ ಬಂಗಾರಿಗೆ ಆಹಾರ ಕೊಡಲೆಂದು ಇಟ್ಟಿದ್ದ ತಟ್ಟೆ ಮತ್ತು ನೀರಿನ ಕರಟ ಇನ್ನೂ ಹಾಗೆಯೆ ಇದೆ... "ಬಂಗಾರಿಯ ಸಂಬಂಧಿಕರ್ಯಾರಾದರೂ ಬರಬಹುದು.." ಎಂಬ ಹುಚ್ಚು ಆಸೆಯಿಂದ......

ಬುಧವಾರ, ಅಕ್ಟೋಬರ್ 26, 2016

ಮಾತಾಡ್ ಮಾತಾಡ್ ಮಲ್ಲಿಗೆ..

ಇವತ್ತಿಗೆ ನನ್ನ ಪಾಪು ನನ್ನನ್ನು 'ಅಮ್ಮಾ' ಎಂದು ಪೂರ್ತಿಯಾಗಿ ಕರೆದು ೩ ವರ್ಷಗಳಾದವು. ಎಷ್ಟೊಂದು ಸಂತೋಷದ ಕ್ಷಣ! ನಿಜ ಹೇಳಬೇಕೆಂದರೆ ಅಂದು ನನ್ನಲ್ಲಿ ಸಂತೋಷ, ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ಉದ್ಭವವಾಗಿತ್ತು. ಈ ಪಾಪುಗೆ ಹೇಗೆ ತಿಳಿಯಿತು ನನ್ನನ್ನು 'ಅಮ್ಮಾ' ಎಂದೇ ಸಂಭೋದಿಸಬೇಕೆಂದು. ಈ ಪ್ರಶ್ನೆ ಅಸಮಂಜಸ ಎನಿಸಬಹುದು ಆದರೂ ನನಗೆ ಸಂಶಯ ಕಾಡಿದ್ದೆಂತೂ ನಿಜ.. ಇನ್ನೊಂದು ಬಗೆಯಲ್ಲಿ ಹೇಳುತ್ತೇನೆ. ಇಂಗ್ಲೀಷ್ ಮಾತೃಭಾಷೆಯಾಗಿರುವಂತಹ ಮನೆಗಳಲ್ಲಿ,ಮಗುವು ತಾಯಿಗೆ 'Mommy', 'Mamma' ಎಂದೇ ಕರೆಯಲು ಪ್ರಾರಂಭಿಸುತ್ತದೆ.. ಮಗುವಿಗೆ ಹೇಗೆ ತಿಳಿಯಿತು ತಾನು English  ಭಾಷೆಯಲ್ಲಿ ಮಾತನಾಡಬೇಕೆಂದು? ವಿಷಯವಿಷ್ಟೇ, ಮಗುವು ಕಲಿಯುವುದು ಕೇವಲ ಅನುಕರಣೆಯಿಂದ, ಸಹಜವಾಗಿ ಮತ್ತು ತಮಗರಿವಿಲ್ಲದೆ...

ಯಾವುದೇ ಹುಟ್ಟಿದ ಶಿಶು, ಈ ಜಗತ್ತಿನಲ್ಲಿ ಇರುವ ಎಲ್ಲ ಭಾಷೆಗಳಿಗೆ (ಸುಮಾರು ೬೫೦೦ ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ) ಅವಶ್ಯಕತೆ ಇರುವ ೧೫೦ ಕ್ಕೂ  ಹೆಚ್ಚಿನ ಧ್ವನಿಗಳನ್ನು ಗ್ರಹಿಸುವ ಮತ್ತು ತಮ್ಮ ಬಾಯಿಯಿಂದ ಹೊರಡಿಸುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ವಿಷಯವನ್ನು ನಾನು ಓದಿದಾಗ ಇದು ನಮ್ಮ ಕಲ್ಪನೆಗೂ ಮೀರಿದ್ದು ಎಂದೆನಿಸಿತು. ಈಗ ಭಾಷೆ, ಶಬ್ದ, ವಾಕ್ಯ, ವ್ಯಾಕರಣ ಎಲ್ಲವನ್ನೂ ಕಲಿತಿರುವ ನಮ್ಮಿಂದ ಅಷ್ಟೊಂದು ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವು ಈಗಾಗಲೇ ಪಳಗಿ ಹೋಗಿರುತ್ತೇವೆ 'ಭಾಷೆ'ಯ ಬಳಕೆಗೆ. ಆದರೆ ಅದೇ ಹುಟ್ಟಿದ ಮಗುವಿಗೆ ಪ್ರತಿ ಉಚ್ಚಾರಣೆಯೂ ಒಂದು ಸಹಜದತ್ತವಾದ ಪ್ರತಿಕ್ರಿಯೆ ಆಗಿರುತ್ತದೆ. ಮಗುವು ತಾನು ಹುಟ್ಟಿದಾಗಿನಿಂದ ಕೇಳುವ ಎಲ್ಲ ಧ್ವನಿಗಳನ್ನು ಉಚ್ಚರಿಸಲು,  ಪ್ರಯೋಗಿಸಲು ಪ್ರಯತ್ನಿಸುತ್ತಿರುತ್ತದೆ. ಉದಾಹರಣೆಗೆ, ಮಗು ಹಸಿವಿನಿಂದ ಅತ್ತಾಗ, "ಅಮ್ಮ ಬಂದೆ.. " ಎನ್ನುತ್ತಾ ತಾಯಿ ಮಗುವಿನ ಹತ್ತಿರ ಸಮೀಪಿಸಿದಾಗ, ಮ್..ಮ್ಮ್ಮ್ ..ಎಮ್...ಅಮ್.. ಎಂದು  ಪ್ರಾಯೋಗಿಕವಾಗಿ ಮಗು ಹೊರಡಿಸಿದ ದನಿಗೆ ತಾಯಿ ಅಥವಾ ಪೋಷಕರು ಬಂದು ಮಗುವನ್ನು ಎತ್ತಿ ಕರೆದುಕೊಂಡಾಗ, ಓ ಎಂದು ಪ್ರತಿಕ್ರಿಯೆ ನೀಡಿದಾಗ ಮಗುವು ತನ್ನಲ್ಲೇ ಅರ್ಥೈಸಿಕೊಳ್ಳುತ್ತದೆ ಈ 'ಮ್ಮ್.. ' ಉಚ್ಚಾರ ನನಗೆ ಆರಾಮವನ್ನು ನೀಡಲು  ಬರುವಂತದ್ದು ಎಂದು!! ಅಂತೆಯೇ ತನ್ನ ಮೆದುಳಿನಲ್ಲಿ  ನೋಂದಣಿಸಿಕೊಳ್ಳುತ್ತದೆ. ಅದಕ್ಕೆ ರೂಪು ಕೊಡುವಂತೆ ನಾವು ಬಳಸುವ ಅಮ್ಮ ಎಂಬ ಉಚ್ಚಾರಣೆಯನ್ನು ಅನುಕರಣೆ ಮಾಡಿ ಆ ಉಚ್ಚಾರಣೆಯ ಪುನರ್ ಬಳಕೆಯನ್ನು  ಪ್ರಾರಂಭಿಸುತ್ತದೆ. ಒಮ್ಮೆ ಅವಲೋಕಿಸಿ, ಒಂದು ಸಾವಿರ ಜನರ ಹೆಸರುಗಳನ್ನು ನಮಗೆ ತಿಳಿಸಿ ನಂತರದಲ್ಲಿ ಅದನ್ನು ಪುನರುಚ್ಚರಿಸಲು ತಿಳಿಸಿದರೆ ನಮಗೆ ಜ್ಞಾಪಕ ಶಕ್ತಿ ಸಾಲದೇನೋ  ಅದೇ ಮಗುವೊಂದು ತಾನು ಕೇಳಿದ ಲಕ್ಷಗಟ್ಟಲೇ ಧ್ವನಿ ಶಬ್ಧ, ಪದಗಳನ್ನು ಕಲಿತು ಸಾಂಧರ್ಭಿಕವಾಗಿ ಉಚ್ಚರಿಸಲು ಪ್ರಾರಂಭಿಸುವ ಸಾಮರ್ಥ್ಯವನ್ನು ಮತ್ತು ವೇಗವನ್ನು ಪಡೆದಿರುತ್ತದೆ..!! ಈ ಸ್ವಯಂ ಕಲಿಕೆ ಮಗುವಿನಲ್ಲಿ ಅತ್ಯಂತ ಸಹಜದತ್ತವಾದುದು, ನಿರಂತರವಾದುದು ಮತ್ತು ಅವರ ಅರಿವಿಗೇ ಸಿಗದೇ ಆಗುವ ಕ್ರಿಯೆ ಎಂದರೆ ಮೈ ನವಿರೇಳದೆ ಇರದು.

ಮಗುವಿನ ಮಾತು ಕಲಿಕೆಯ ಮೊದಲ ಹಂತ :

ಮಗುವಿನ ಧ್ವನಿ ಗಮನಿಸುವಿಕೆ, ಅದು ತಾಯಿಯ ಹೊಟ್ಟೆಯಲ್ಲಿದ್ದಾಗ ನಡೆದಿರುತ್ತದೆ, ಅಸ್ಪಷ್ಟವಾಗಿ ಶಬ್ಧಗಳನ್ನು ಕೇಳಿದ್ದರೂ, ಹೊರಗಿನ ವಾತಾವರಣಕ್ಕೆ ಬಂದ ನಂತರ, ಸಾಮಾನ್ಯವಾಗಿ ಕೇಳಿಬರುವ ಎಲ್ಲರ ಧ್ವನಿಗಳನ್ನು ಗುರುತಿಸಬಲ್ಲದು, ಅದರಲ್ಲೂ ತಾಯಿಯ ಧ್ವನಿಗೆ ಮೊದಲ ಆದ್ಯತೆ!! ಏಕೆಂದರೆ ತಾಯಿಯ ಹೊಟ್ಟೆಯಲ್ಲಿ ೯ ತಿಂಗಳು ಇದ್ದ ಮಗುವಿಗೆ, ತಾಯಿಯ ಧ್ವನಿಯ ಕಂಪನದ ಹೆಚ್ಚಿನ ಅನುಭವವಿರುತ್ತದೆ..ಇದೇ ಕಾರಣಕ್ಕಾಗಿ, ಎಂತಹ ಗಲಾಟೆಯ ಸ್ಥಳದಲ್ಲಿಯೂ ಮಗುವು ತನ್ನ ತಾಯಿಯ ಧ್ವನಿಯನ್ನು ಗುರುತಿಸಿ, ತಾಯಿಯ ಕಡೆಗೆ ಹೊರಳುವುದು. ಹಾಗೆಯೇ, ಇತರರು ಮಾತನಾಡಿದ ಅನ್ಯ ಭಾಷೆಯ ಉಚ್ಚಾರಣೆ, ತಾನು ಈ ವರೆಗೆ ತನ್ನ ಪಾಲಕರ ಮೂಲಕ ಕೇಳಿದ ಉಚ್ಚಾರಣೆಕಿಂತಲೂ ಭಿನ್ನವಾದುದು ಎನ್ನುವುದೂ ಕೂಡ ಆ ಮಗುವಿನ ಮೆದುಳಿಗೆ ಸಂವಹನೆಯನ್ನು ನೀಡುತ್ತದೆ.

ಶರ ವೇಗದ ಕಲಿಕೆ :

 ಸಹಜವಾಗಿ ಮಕ್ಕಳಲ್ಲಿ ಈ ರೀತಿಯ ಕಲಿಕೆ, ಹೋಲಿಕೆ, ಅನುಕರಣೆ ಎಲ್ಲವೂ ಅತ್ಯಂತ ವೇಗವಾಗಿ ಅವುಗಳ ಮನಸ್ಸಿನಲ್ಲಿ ನಡೆಯುತ್ತಿರುತ್ತದೆ. ಇದರ ಜೊತೆಗೆ, ಮಗುವಿನೊಂದಿಗೆ ನಾವು ನಡೆಸುವ ಪರಸ್ಪರ ಸಂಭಾಷಣೆ, ಮುಖ ಭಾವಗಳು, ಸೂಚನೆಗಳು, ಸನ್ನೆಗಳು ಮಗುವಿಗೆ ಇನ್ನೂ ಹೆಚ್ಚಿನ ಭಾಷಾ ಸೆಳೆತಕ್ಕೆ ಸಹಾಯಕವಾಗುತ್ತದೆ. ಉದಾಹರಣೆಗೆ, ಒಂದು ೧.೫ ವರ್ಷದ ಮಗುವಿಗೆ, 'ಅಲ್ಲಿ ನೋಡು ಪುಟ್ಟದಾದ ಬಿಳೀ ಮೊಲದ ಮರಿ ಎಷ್ಟು ಚಂಗನೆ ಪುಟಿದು ಓಡುತ್ತಿದೆ" ಎಂದು ಕೈ ಬೆಟ್ಟು ಮಾಡಿ ತೋರಿಸಿದರೆ, ಮಗುವು ನಮ್ಮ ಮುಖದಲ್ಲಿನ ಉತ್ಸಾಹ, ಕೈ ಬೆಟ್ಟು ಮಾಡಿ ತೋರಿಸಿದ ಸನ್ನೆ ಮತ್ತು ನಮ್ಮ ಬಾಯಿಯಿಂದ ಹೊರ ಹೊಮ್ಮಿದ ಪದಪುಂಜಗಳು ಇದೆಲ್ಲವನ್ನೂ ಏಕಕಾಲದಲ್ಲಿ ಗಮನಿಸುತ್ತದೆ. ಹೊರನೋಟಕ್ಕೆ ಮಗುವು ನಾವು ತಿಳಿಸಿದ ಕಡೆಗೆ ತನ್ನ ಕತ್ತು ತಿರುಗಿಸಿದುದು ಕಂಡು ಬಂದರೂ, ಮಗುವು ಮೊದಲು ನೋಡುವುದು ಕೈ ಸನ್ನೆ ಮಾಡಿದ ವಸ್ತುವಿನೆಡೆಗೆ. ಆ ವಸ್ತುವಿಗೆ ಮೊಲ ಎಂದು ಕರೆಯುತ್ತಾರೆ ಎಂಬುದನ್ನು, ನಾವು ಪುನರಾವರ್ತಿಸಿ ತಿಳಿಸುವ ಸಂಧರ್ಭದಲ್ಲಿ ಮನನ ಮಾಡಿಕೊಳ್ಳುತ್ತದೆ. ನಂತರದಲ್ಲಿ ಹಂತ ಹಂತವಾಗಿ, ಆ ವಸ್ತುವಿನ ಆಕಾರ, ಬಣ್ಣ, ರೂಪ ಇತ್ಯಾದಿ ವಿಷಯಗಳನ್ನು ಅರ್ಥೈಸಲು ಪ್ರಾರಂಭಿಸುತ್ತದೆ. ಅದರ ಜೊತೆಗೆ, ನಾವು ಹಿರಿಯರು ಬಳಸಿದ ಅಕ್ಷರಗಳ ಉಚ್ಚಾರಣೆ ಸರಿಯಾಗಿ ಬರದಿದ್ದರೂ, ನಮ್ಮ ಧ್ವನಿಯ ಏರಿಳಿತವನ್ನೇ ಗಮನಿಸಿ ಮಕ್ಕಳು ಪದಗಳನ್ನು ಕಲಿಯುವಲ್ಲಿ ಸಫಲರಾಗುತ್ತಾರೆ. ಒಂದು ತಮಾಷೆಯ ಉದಾರಹಣೆ ಎಂದರೆ, ನಾನು ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಟ್ಟ ಇಂಗ್ಲೀಷ್ ಪದ್ಯ 'ರಿಂಗ ರಿಂಗ ರೋಸಸ್....' ಅನ್ನು ಕೆಲವು ಮಕ್ಕಳು ತಮ್ಮರಿವಿಗೆ ಬಂದಂತೆ, ಟೀಚರ್ ನ ಬಾಯಿಯ ಉಚ್ಚಾರಣೆಯನ್ನು ಗಮನಿಸಿಕೊಂಡು 'ನಿಂಗ ನಿಂಗ ನೋಸಸ್.." ಎಂದು ಹಾಡಿಕೊಂಡು ಹೋಗಿದ್ದಾರೆ :D

ಎರಡನೇ ಹಂತ ಪದಗಳ ಕಲಿಕೆ ಮತ್ತು ಬಳಕೆ :

ಚಿಕ್ಕ ಮಗುವು ಸ್ವಲ್ಪ ಬೆಳವಣಿಗೆ ಹೊಂದಿದಂತೆ, 'ಪದ' ಗಳನ್ನು ಆಲೈಸಿಲು ಪ್ರಾರಂಭಿಸುತ್ತದೆ. ನಿಜ ಹೇಳಬೇಕೆಂದರೆ ಅವು ಕಲಿಯುವುದು 'ಪದ' ಗಳನ್ನಲ್ಲ. ಅವರು ಕಲಿಯುವುದು ಕೇವಲ ಕನಿಷ್ಠ ಸಾರ್ಥಕ ಪದಾಕೃತಿಗಳನ್ನು (morpheme). ಅಂದರೆ ನಿರ್ಧಿಷ್ಟವಾದ ಅರ್ಥವಿರುವ ಧ್ವನಿಗಳನ್ನಷ್ಟೇ. ಒಮ್ಮೆ ಹೀಗಾಯಿತು ... 'ಮಂಗ' ಪದಕ್ಕೆ ಬಹುವಚನವಾಗಿ ನಾವು ಬಳಸಿದ 'ಮಂಗಗಳು' ಎಂಬುದನ್ನು ಗಮನಿಸಿ, 'ಮಕ್ಕಳುಗಳು' ಎಂದು ನನ್ನ ಮಗಳು ಹೇಳಿದಾಗಲೇ ಈ ಲಾಜಿಕ್ ಹೇಗೆ ಮಕ್ಕಳು ಮಾತನಾಡಲು ಬಳಸುತ್ತಾರೆ ಎಂದು ನನಗೆ ಅರಿವಾದದ್ದು. ' ಗಳು' ಎಂಬುದನ್ನು ಒಂದಕ್ಕಿಂತ ಜಾಸ್ತಿ ಇರುವುದಕ್ಕೆ ಹೇಳುತ್ತಾರೆ ಎಂಬುದನ್ನು ಗಮನಿಸಿ, ಮಕ್ಕಳುಗಳು ಎಂಬ ಪದ ಊಹಿಸಿ ಹೇಳಿರುವುದು.

ಮಕ್ಕಳ ಮಾತಿನ ತಪ್ಪುಗಳು ನಿಜವಾಗಿಯೂ ಸರಿ ಮತ್ತು ಒಳ್ಳೆಯದು!!

 ನೀವು ನಿಮ್ಮ ಮನೆಗಳಲ್ಲಿ ಗಮನಿಸಿರಬಹುದು, "ನಿನಗೆ ನೀರು ಬೇಕಾ, ಕೊಡುತ್ತೀನಿ" ಎಂದು ನಾವು ಬಳಸುವ ವಾಕ್ಯದಲ್ಲಿ 'ನೀನು' ಎಂಬುದು 'ತನ್ನನ್ನು' ಉಲ್ಲೇಖಿಸಿ ಹೇಳಲಾಗಿದೆ ಎಂಬುದನ್ನು ಅರಿತ ಮಗು, ನಂತರದಲ್ಲಿ ತಾನು ಆ ಪದವನ್ನು ಅಂತೆಯೇ ಬಳಸಲು ಪ್ರಯತ್ನಿಸುತ್ತದೆ, "ನಿಂಗೆ ನೀರು ಬೇಕು" ಎಂದು ತನ್ನ ನೀರಿನ ಬೇಡಿಕೆಯನ್ನಿಡುತ್ತದೆ, ವ್ಯಾಕರಣ ತಪ್ಪಿದೆ ನಿಜ, ಆದರೆ ಮಗು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದೆ, ತನಗಾಗಿ ಉಲ್ಲೇಖಿಸಿದ ಪದವನ್ನು!! ಜೀನಿಯಸ್ ಎನ್ನಿಸುವುದಿಲ್ಲವೇ ನಿಮಗೆ... ??  ನಿನ್ನೆಗೆ ನಾಳೆ ಎನ್ನುವುದು, ತನ್ನನ್ನು ಕರೆದುಕೊಂಡು ಹೋಗಿ ಎನ್ನುವುದಕ್ಕೆ 'ಬಾ ಬಾ' ಎನ್ನುವುದು ಇತ್ಯಾದಿ ನಾವು ಸಾಮಾನ್ಯವಾಗಿ ಬಳಸುವ ಶಬ್ದಗಳನ್ನು, ತನ್ನ ಚಟುವಟಿಕೆಗಳಿಗೆ ಹೋಲಿಸಿಕೊಂಡು ಬಳಸಲು ಮಕ್ಕಳು ಪ್ರಯತ್ನಿಸುತ್ತಾರೆ, ಯಾವುದೇ ಒಂದು ಶಬ್ದಕ್ಕೆ ಅದರ ಹೋಲಿಕೆಯನ್ನು ಮೊದಲು ಅರ್ಥ ಮಾಡಿಕೊಂಡು ನಂತರದಲ್ಲಿ  'ಆ' ಕ್ಕೆ 'ಹ', 'ರ' ಕ್ಕೆ 'ನ', 'ಲ' ಕ್ಕೆ 'ವ' ಈ ರೀತಿಯಾಗಿ ಇತರೆ ಅಕ್ಷರಗಳನ್ನು ಬಳಸಿದರೂ ಕೂಡ ಸರಿಯಾದ ಪದಗಳನ್ನು ನಿರ್ಮಾಣ ಮಾಡುವ ಹಂತದಲ್ಲಿ ಮಕ್ಕಳಿಂದ ಮಾತಿನ ತಪ್ಪುಗಳು ಸಹಜ. ಸಾಕಷ್ಟು ಕಡೆ ಗಮನಿಸಿದಂತೆ, ಬಣ್ಣ, ಅಕ್ಕರ, ಅಳತೆ ಇವೆಲ್ಲವುಗಳ ಸಂಬಂಧವಾಗಿ ಬಳಸುವ ಶಬ್ದಗಳ ಬಳಕೆ ಮಕ್ಕಳಲ್ಲಿ ಮೊದಲಿಗೆ ತದ್ವಿರುದ್ಧವಾಗಿರುತ್ತದೆ. ಈ ಪ್ರಸಂಗದಲ್ಲಿ ನನಗೊಂದು ಘಟನೆ ನೆನಪಾಗುತ್ತಿದೆ, ಸಂಬಂಧಿಕರ ೨-೩ ವರ್ಷದ ಪೋರನೊಬ್ಬ ಒಂದು ಮದುವೆ ಮನೆಯಲ್ಲಿ, "ನಾನು ಹೆಣ್ ನೋಡಕ್ ಹೋಗ್ತೀನಿ " ಎಂದು ಪದೇ ಪದೇ ಪದೇ ಹೇಳುತ್ತಿದ್ದಾಗ ನಮಗೆಲ್ಲರಿಗೂ ಆಶ್ಚರ್ಯ ಮತ್ತು ನಗು! ನಂತರದಲ್ಲಿಯೇ ತಿಳಿದಿದ್ದು ಆ ಪುಟ್ಟ ಕಂದ ಹೇಳುತ್ತಿದುದು  ಇಂಗ್ಲಿಷ್ ನ 'Hen' ಬಗ್ಗೆ ಎಂದು :) :)

ವಾಕ್ಯ ನಿರ್ಮಾಣ ಹಂತ :

೨ ವರ್ಷ ಮೇಲ್ಪಟ್ಟ ಮಕ್ಕಳು ತಮಗೆ ತಿಳಿದ ಪದಗಳನ್ನು ಜೋಡಿಸಿ ವಾಕ್ಯವನ್ನು ಮಾಡುವ ಹಂತದಲ್ಲಿರುತ್ತಾರೆ. 'ಅಮ್ಮ ನನಗೆ ಹಾಲು ಕೊಡುತ್ತೀಯಾ?" ಎಂದು ಭಾವಿಸುವ ಬೇಡಿಕೆಗೆ, "ಅಮ್ಮ ಹಾವು" ಎಂದು ಕೇಳುವಷ್ಟು ಅನುವಾಗುತ್ತಾರೆ. ನಾನು, ನನಗೆ ಎಂದೆಲ್ಲ ಬಳಸುವ ಅಗತ್ಯತೆಯನ್ನು ಮಕ್ಕಳು ಭಾವಿಸುವುದಿಲ್ಲ. ಕಾಗೆಯೊಂದು ಕೂಗಿದ ಶಬ್ಧವನ್ನು ಆಲೈಸಿ, "ಕಾಗೆ ಕಾಕಾ... " ಎಂದು ಸಂಭೋದಿಸುತ್ತಾರೆ. "ಬೈಕು ಅಪ್ಪ.. " ಎಂದು ಹೇಳುವ ಅರ್ಥದಲ್ಲಿ ಅಪ್ಪ ಬೈಕಿನಲ್ಲಿ ಹೋದನೆಂದು   ಮಗು ತಿಳಿಸುತ್ತದೆ. ಆದರೆ ಯಾವ ಪದದ ನಂತರದಲ್ಲಿ ಯಾವ ಪದವನ್ನು ಬಳಸಬೇಕೆಂಬ ಗೊಡವೆಗೆ ಆ ಮಗು ಹೋಗುವುದಿಲ್ಲ. ಕ್ರಮೇಣ ೩ ವರ್ಷದ ಆಸುಪಾಸಿನಲ್ಲಿ ಮಕ್ಕಳು ಕ್ರಿಯಾಪದಗಳ ಜೋಡಣೆ ಮತ್ತು ನಾಮಪದಗಳ ಬಳಕೆ ಇತರೆ ವ್ಯಾಕರಣ ಸಹಿತ ವಾಕ್ಯಗಳನ್ನು ತಪ್ಪಿಲ್ಲದೆ ತಯಾರು ಮಾಡುವಲ್ಲಿ ನಿಸ್ಸೀಮರಾಗಿಬಿಡುತ್ತಾರೆ.

ಮಕ್ಕಳ ಭಾಷಾ ಕಲಿಕೆಗೆ ನಮ್ಮ ಸಹಕಾರ :

ಮಕ್ಕಳ ಬುದ್ಧಿ ವಿಕಸನದ ಜೊತೆ ಜೊತೆಯಲ್ಲಿ ಮಕ್ಕಳ ಮಾತನಾಡುವ ಸಾಮರ್ಥ್ಯಕ್ಕೂ ಪೋಷಕರ ಸಹಕಾರದ ಅವಶ್ಯಕತೆ ಇರುತ್ತದೆ. ಹೆಚ್ಚಿನೆ ಚುರುಕು ಬುದ್ಧಿ ಇದ್ದರೂ ಕೆಲವೊಮ್ಮೆ ಕೆಲವು  ಮಕ್ಕಳು ಕಡಿಮೆ ಮಾತು ಅಥವಾ ಸಂವಹನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮಕ್ಕಳು ಮೂಲತಃ ಕಿವಿಯಿಂದ ಕೇಳಿ ಅಥವಾ ನಮ್ಮ ಮುಖ ಭಾವವನ್ನು ಆಲೈಸಿ/ನೋಡಿ ಅನುಕರಣೆ ಮಾಡುವುದರಿಂದ, ನಾವು ಮಕ್ಕಳೊಂದಿಗೆ ಅವರ ಹುಟ್ಟಿನ ಸಮಯದಿಂದಲೂ ಸಂವಹನೆ ನಡೆಸುವುದು ಅತ್ಯಂತ ಉಪಯೋಗಕಾರಿ. ಇನ್ನೊಂದರ್ಥದಲ್ಲಿ ಹೇಳುವುದಾದರೆ, ನಾವು ಮಕ್ಕಳೊಂದಿಗೆ ಮಾತನಾಡುವಾಗ ನಮ್ಮ ಮುಖ ಅವರಿಗೆ ಗೋಚರಿಸುವಂತಿರಬೇಕು. ಮಕ್ಕಳ ಮಟ್ಟಕ್ಕೆ ಮಂಡಿಯೂರಿ ಕುಳಿತು, ನಾವು ಅವರಿಗೆ ತಿಳಿಸಬೇಕಾದ ವಿಷಯವನ್ನು, ನಿಧಾನವಾಗಿ ತಿಳಿಸಿದರೆ, ಮಕ್ಕಳಿಗೆ ಬಲು ಬೇಗ ನಾವು ಹೇಳಿದುದು ಮನನವಾಗುವುದು. ಚಿಕ್ಕ ಮಕ್ಕಳ ಜೊತೆ ಮಾತನಾಡಲು ಬಳಸುವ ವಾಕ್ಯಗಳು ಚಿಕ್ಕದಾಗಿರಲಿ, ಕೊಡುವ ಸೂಚನೆಗಳು ಆದಷ್ಟು ಸರಳವಾಗಿರುವುದರ ಜೊತೆಗೆ ಸಾಧ್ಯವಾದಷ್ಟು ಕೈ ಸನ್ನೆ ಬಳಸಿದರೆ, ಮಕ್ಕಳಿಗೆ ನೀವು ಕೊಟ್ಟ ಸೂಚನೆಗಳನ್ನು ಪಾಲಿಸಲು ಸುಲಭವಾಗುವುದು, ಉದಾಹರಣೆಗೆ, "ಆ ನಿನ್ನ ಟಾಯ್ಸ್ ತೆಗೆದಿಡು" ಎಂದು ಬೆನ್ನು ಮಾಡಿ ಯಾವದೋ ಕೆಲಸ ಮಾಡುತ್ತಾ ಹೇಳುವುದಕ್ಕಿಂತ, ಕೈ ಮಾಡಿ ತೋರಿಸಿ, "ನಿನ್ನ ಈ ಟಾಯ್ಸ್ ಗಳನ್ನು ಎತ್ತಿಟ್ಟುಕೊಳ್ಳಬಹುದೇ?" ಎಂದು ಕೇಳಿದರೆ, ಮಕ್ಕಳಿಗೆ ನೇರ ಮಾರ್ಗದರ್ಶನ ಸಿಕ್ಕಂತಾಗುತ್ತದೆ.  ಹೊಸ ಪದ, ಹೊಸ ವಿಷಯಗಳನ್ನು ಕೇಳಿದಾಗ, ಮಕ್ಕಳು ಅದನ್ನರಿಯುವ ಕುತೂಹಲಕ್ಕಾಗಿ ಪುನಃ ನಮ್ಮ ಮುಖವನ್ನು ಗಮನಿಸುತ್ತಿರುತ್ತಾರೆ, ಇಲ್ಲವೇ ತಾವು ಪುನರಾವರ್ತಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ಸಮಯದಲ್ಲಿ ಮಕ್ಕಳ ಸಂಶಯವನ್ನು ಗಮನಿಸಿ, ಶಬ್ದಗಳನ್ನು ಪುನರಾವರ್ತಿಸಿ. ಪದಗಳ ಉಚ್ಚಾರಣೆಯ ಏರಿಳಿತವನ್ನು ನಿದಾನವಾಗಿ ಹೇಳಿ ತಿಳಿಸಿ. ಅದರಲ್ಲೂ ಮುಖ್ಯವಾಗಿ ಮಕ್ಕಳ ತಪ್ಪನ್ನು ಹಳಿಯಬೇಡಿ. ಒಂದೇ ದಿನದಲ್ಲಿ ನಿಮಗೆ ಅನ್ಯ ಭಾಷೆಯನ್ನು ಹೇಳಿಕೊಟ್ಟು, ಮರುದಿನವೇ ಚಾಚೂ ತಪ್ಪದೇ, ಪುಂಖಾನುಪುಂಖವಾಗಿ ಮಾತನಾಡು ಎಂದರೆ ನಿಮ್ಮ ಕೈಲಾದೀತೇ? ಇಲ್ಲಾ ತಾನೇ ..ಅಂತೆಯೇ ನಮ್ಮ ಮಕ್ಕಳು, ತಪ್ಪಾದರೂ ಸರಿ, ಮಕ್ಕಳ  ಮಾತಿಗೆ ಗೌರವಿಸಿ. ಮಕ್ಕಳಿಗೆ ತಾವು ಕಲಿತುದರ ಬಗ್ಗೆ ತಿಳಿಸುವ ಕುತೂಹಲವಿರುತ್ತದೆ, ದಿನದಲ್ಲಿ ಸ್ವಲ್ಪ ಸಮಯ ಅವರಿಗಾಗಿಯೇ ಮೀಸಲಿಟ್ಟು, ಆದಷ್ಟು ಪ್ರಶ್ನೆಗಳನ್ನು ಕೇಳದೆ, ಕೇವಲ ಕೇಳುಗರಾಗಿ, ಅವರ ಕುತೂಹಲಕ್ಕೆ ಪ್ರತಿಕ್ರಿಯೆ ನೀಡಿ. ೩ ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಸಾಮಾನ್ಯ ವಿಷಯಗಳನ್ನು ತಿಳಿಸುವಾಗ, ಮುಖ್ಯ ವಿಷಯ ವಸ್ತುವಿಗೆ ಒಂದಕ್ಕಿಂತ ಹೆಚ್ಚಿನ ಅರ್ಥವಿದ್ದರೆ, ಅವುಗಳನ್ನು ತಿಳಿಸಿ. ಸಮಾನಾರ್ಥಕ ಪದಗಳನ್ನೂ ಅವಾಗವಾಗ ಬಳಸುತ್ತೀರಿ. ಮಗುವಿನ ಶ್ರವಣ ಶಕ್ತಿ, ಪ್ರತಿಕ್ರಿಯೆ ನೀಡುವ ಬಗೆ, ವಾಕ್ ಸಾಮರ್ಥ್ಯದ ಬಗ್ಗೆ ಗಮನವಿರಲಿ. ಮಕ್ಕಳೊಂದಿಗೆ ಕುಳಿತು ಸ್ವಲ್ಪ ಸಮಯ ಯಾವುದೇ ಪುಸ್ತಕವನ್ನು ಓದಿಸಿ. ಅದು ಕಥೆ ಪುಸ್ತಕವಾದರೂ ಒಳ್ಳೆಯದೇ, ಇದರಿಂದ ಓದುವ ಕ್ರಿಯೆಯಲ್ಲಿ ಏನಾದರೂ ದೋಷವಿದೆಯೇ, ಮಗುವಿಗೆ ಯಾವುದು ತಿಳಿಯಲು ಕಷ್ಟವಾಗುತ್ತಿದೆ ಎಂಬಿತ್ಯಾದಿ ವಿಷಯಗಳು ನಮಗೆ ತಿಳಿಯುತ್ತದೆ. ಮಕ್ಕಳಿಗೆ ಸರಿಯಾದ ಶಬ್ದ ಉಚ್ಚಾರದ ಕಡೆಗೆ ಆದಷ್ಟು ಮಾರ್ಗದರ್ಶನ ಮಾಡಿ, ಉದಾ, 'ಹೌದು ಎನ್ನಲು ಔದು, ಶಂಖ ಎನ್ನಲು ಸಂಕ, ಇತ್ಯಾದಿ. ಒಟ್ಟಿನಲ್ಲಿ ನಮ್ಮ ಮಕ್ಕಳ ಭಾಷಾ ಕಲಿಕೆಗೆ, ಅವರ ಕಲಿಕೆಯ ವೈವಿಧ್ಯತೆಗೆ ನಮ್ಮ ಬೆಂಬಲವಿರಲಿ.

















ಗುರುವಾರ, ಅಕ್ಟೋಬರ್ 20, 2016

ಭೂಮಿ ಹುಣ್ಣಿಮೆ

ಭೂಮಿ ಹುಣ್ಣಿಮೆ ಒಂದು ಅಪರೂಪದಲ್ಲಿ ಅಪರೂಪದ ಹಬ್ಬ. ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಭೂಮಿ ತಾಯಿಗೆ ಸಲ್ಲಿಸುವ ಪೂಜಾ ಕ್ರಮ. 'ಸೀಗೆ ಹುಣ್ಣಿಮೆ' ಎಂತಲೂ ಕರೆಯಲ್ಪಡುವ ಈ ಹಬ್ಬದಲ್ಲಿ, ಭೂಮಿಯನ್ನು ದೇವತೆ ಎಂದೇ ಭಾವಿಸಿ ಕೃಷಿಕರೆಲ್ಲ ವರ್ಷಪೂರ್ತಿ ತಮಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವ ತಮ್ಮ ನೆಲಕ್ಕೆ ವರ್ಷಕ್ಕೂಮ್ಮೆ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವಾಗಿದೆ. ಇನ್ನೂ ಕೆಲವರ ಪ್ರಕಾರ ಈ ಹಬ್ಬವು, ಭತ್ತ ಮೊಳಕೆಯೊಡೆದು ಪೈರು ಹಿಡಿಯುವ ಈ ಸಂದರ್ಭದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವುದು ಎಂಬ ಪ್ರತೀತಿಯೂ ಇದೆ.




ಭೂಮಿ ಹುಣ್ಣಿಮೆ ಹಬ್ಬದಂದು, ತೋಟ ಗದ್ದೆಗಳಲ್ಲಿ ಪೂಜೆಗೆ ಸೂಕ್ತವಾದ ಜಾಗವೊಂದನ್ನು  ಆಯ್ಕೆ ಮಾಡಿಕೊಂಡು ಹಿಂದಿನ ದಿನವೇ ಆ ಜಾಗವನ್ನು ಸ್ವಚ್ಛಗೊಳಿಸಿ, ಪೂಜಾ ಕಲ್ಲನ್ನು ಪ್ರತಿಷ್ಠಾಪಿಸಿ ಹಸನು ಮಾಡಿಕೊಳ್ಳುತ್ತಾರೆ. ಮರುದಿನ ಮುಂಜಾವಿನಲ್ಲೇ ಮಾವಿನ ತೋರಣ, ಬಾಳೆ ದಿಂಡು, ಕಬ್ಬು, ಹೂವು, ತೆಂಗಿನ ಸಿಂಗಾರ, ಹೂವುಗಳಿಂದ ಸಿಂಗರಿಸುತ್ತಾರೆ. ಮನೆಯ ಮಂದಿಯೆಲ್ಲ ಸೇರಿ ಪೂಜೆಗೆ ಪಾಲ್ಗೊಳ್ಳಲು ಅನುವಾಗುವಂತೆ ಬಾಳೆ ಎಲೆಗಳನ್ನು ತೋಟದಲ್ಲಿ ಹಾಸಿ ಕುಳಿತುಕೊಳ್ಳಲು ಅಣಿಮಾಡಲಾಗುತ್ತದೆ. ಪೂಜೆ, ಮಂಗಳಾರತಿ, ಬಾಗಿನ ಸಮರ್ಪಣೆ ಮತ್ತು ಹಬ್ಬದಡುಗೆಯ ನೈವೇದ್ಯ ಮಾಡಲಾಗುತ್ತದೆ. ಅದರಲ್ಲೂ ಚೀನಿಕಾಯಿ 'ಕಡುಬು', ಸಾಂಬಾರ 'ಬುತ್ತಿ' ಇವೆರಡು ಪ್ರಮುಖವಾದದ್ದು. ಕೋಸಂಬರಿ, ಪಾಯಸ, ಚಿತ್ರಾನ್ನ ಇನ್ನಿತರ ಅಡುಗೆ ಪದಾರ್ಥವನ್ನು ತಯಾರಿಸಿ,  ಭೂತಾಯಿಗೆ ನಮನ ಸಲ್ಲಿಸಿ, ವರ್ಷಪೂರ್ತಿ ಬೆಳೆದ ಬೆಳೆಯನ್ನು ರಕ್ಷಿಸು ತಾಯಿ ಎಂದು ಪ್ರಾರ್ಥಿಸುತ್ತಾರೆ. ಮಾಡಿದ ನೈವೇದ್ಯ ಅಡುಗೆ ಪದಾರ್ಥವನ್ನು, ಮುಂಜಾವಿನಲ್ಲೇ ಬೇಯಿಸಿಟ್ಟ ಸಾಕಷ್ಟು ಜಾತಿಯ ಸೊಪ್ಪಿನೊಡನೆ ಬೆರೆಸಿ, ಗದ್ದೆ ತೋಟಗಳಿಗೆ ಅಲ್ಲಲ್ಲಿ ಬೀರುತ್ತಾರೆ (ಹರಡುತ್ತಾರೆ). ಇನ್ನೂ ಕೆಲವು ಕಡೆ, ತೆಂಗಿನ ಹಾಗೂ ಪ್ರಮುಖ ಇಳುವರಿ ಕೊಡುವ ಮರಗಳ ಬುಡದಲ್ಲಿ ನೈವೇದ್ಯ ಮೃಷ್ಟಾನ್ನವನ್ನು ನೆಲದಲ್ಲಿ ಹುದುಗಿಸಿ, ಭೂಮಿಗೆ ಸಮರ್ಪಣೆ ಮಾಡುತ್ತಾರೆ. ಅದಾದ ನಂತರದಲ್ಲಿ, ಮನೆ ಮಂದಿ ಮತ್ತು ನೆಂಟರಿಷ್ಟರೊಡಗೂಡಿ, ಸಂತಸದಿಂದ ತೋಟದಲ್ಲೇ ಹಬ್ಬದಡುಗೆಯ ಊಟ ಬಡಿಸಿ ತಾವೂ ಸವಿಯುತ್ತಾರೆ.

ನಾವೆಲ್ಲಾ ಚಿಕ್ಕವರಿದ್ದಾಗ ತೋಟದೂಟ ಎಂದು ಸಂಭ್ರಮಿಸುತ್ತಿದ್ದೆವು. ಆ ದಿನ ೭ ಊಟ ಮಾಡಬೇಕು ಎಂಬ ಮಾತಿದೆ.. ಏನೇ ಆಗಲಿ, ಒಬ್ಬರ ಮನೆಯ ಪೂಜೆ ಮುಗಿದ ಮೇಲೆ ಪಕ್ಕದವರ ತೋಟದ ದಿಬ್ಬಕ್ಕೆ ಚಂಗನೆ ಹಾರಿ, ಅವರ ಮನೆಯ ಪೂಜೆ ಮತ್ತು ಪ್ರಸಾದ ಎರಡಕ್ಕೂ ನಾವು ರೆಡಿ ಆಗಿಬಿಡುತ್ತಿದ್ದೆವು. ಮಕ್ಕಳ ವಯಸ್ಸಿನ ನಮಗೆ, ಅಲ್ಲಲ್ಲೇ ಮಂಗಳಾರತಿಗೆ ಜಾಗಟೆ ಯಾರು ಹೆಚ್ಚಿನ ಸಮಯ ಬಾರಿಸುತ್ತಾರೆ, ಎಲ್ಲರ ಮನೆಯ ಊಟ ಮುಗಿಸಿ ಫಸ್ಟ್ ಮನೆ ತಲುಪುವುದು ಯಾರು, ಈ ತರದ ಸ್ಪರ್ಧೆ ಆಟೋಟಗಳು ಹಬ್ಬದ ಸಡಗರಕ್ಕೆ ಜೊತೆಯಾಗಿರುತ್ತಿದ್ದವು. ಆ ವಯಸ್ಸಿನಲ್ಲಿ, ಈ ಹಬ್ಬದ ಪ್ರಾಮುಖ್ಯತೆ ತಿಳಿದಿತ್ತೋ ಇಲ್ಲವೋ ನೆನಪು ಸಾಲ. ಆದರೂ ಊರವರು ನೆಂಟರಿಷ್ಟರು ಬಂಧು ಬಳಗ ಎಲ್ಲರೊಡಗೂಡಿ ಹಬ್ಬ ಆಚರಿಸುವುದೇ ಮಜವಾಗಿರುತ್ತಿತ್ತು. ಕಡುಬು, ಪಾಯಸ ಬೇಯಿಸಿದ ಸೊಪ್ಪು ಸದೆ ಎಲ್ಲವನ್ನೂ ತೋಟದಲ್ಲಿ, ಅಲ್ಲಲ್ಲಿ ಸಿಂಪಡಿಸಿವುದು ನೋಡಿ ಖುಷಿಯಾಗುತ್ತಿತ್ತು...

ನನ್ನ ಪ್ರಕಾರ, ಭೂಮಿ ಹುಣ್ಣಿಮೆ ಹಬ್ಬವು ನಿಜವಾಗಿಯೂ ಒಂದು ಒಳ್ಳೆಯ ಹಬ್ಬ. ಒಂದು ನಿರ್ಧಿಷ್ಟ ದಿನವನ್ನು ಭೂಮಿ ತಾಯಿಗಾಗೇ ಮೀಸಲಿಟ್ಟು, ಅದಕ್ಕೆ ವಂದಿಸಿ ಉಣಿಸುವುದು ಎಂಬ ಪರಿಕಲ್ಪನೆಯೇ ಸುಂದರ. ಆದರೆ ನಾವು ಈ ಹಬ್ಬವನ್ನು ಒಂದು ಆಚರಿಸಬೇಕಾದ ಸಂಪ್ರದಾಯ ಎಂದಷ್ಟೇ ಭಾವಿಸದೇ, ಇದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದರ ಅಷ್ಟೇ ಅನಿವಾರ್ಯತೆ ಇದೆ. ಮೊದಲನೆಯದಾಗಿ, ನಮ್ಮ ನೆಲ, ನಾವು ತಿನ್ನುವ ಆಹಾರವನ್ನು ಕೊಡುವ ನಮ್ಮ ಭೂಮಿಯನ್ನು, ನಾವು ಅತ್ಯಂತ ಒಳ್ಳೆ ರೀತಿಯಲ್ಲಿ ನೋಡಿಕೊಳ್ಳಬೇಕು. ಪೂಜೆ ಪುನಸ್ಕಾರವನ್ನೇನ್ನೂ ಮಾಡುತ್ತೇವೆ ನಿಜ, ಅದರ ಮರುದಿನವೇ ಮತ್ತೆ ಪ್ಲಾಸ್ಟಿಕ್ ಕವರ್ ಗಳನ್ನು ಅದೇ ಭೂಮಿಯ ಒಡಲಿಗೆ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಸಹಜವಾಗಿಯೇ ನಾವೆಷ್ಟು ಜನರು ಮಳೆಗಾಲದಲ್ಲಿ ದೊರೆಯುವ ನೀರನ್ನು ಇಂಗು ಗುಂಡಿಗಳ ಮೂಲಕ ಭೂಮಿಗೆ ಇಂಗಿಸುತ್ತೇವೆ? ಎಷ್ಟು ಮರಗಿಡಗಳನ್ನು ಉಳಿಸಿದ್ದೇವೆ ಮತ್ತು ಬೆಳೆಸಲು ಪ್ರಯತ್ನಿಸುತ್ತೇವೆ? ದೊಡ್ಡ ಪ್ರಾಮಾಣದಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಲಾಗದಿದ್ದರೂ, ನಮ್ಮ ನಮ್ಮ ಮನೆಯ ಹಿತ್ತಲ ಜಾಗವನ್ನು ಹಸನು ಮಾಡಿಕೊಂಡರೆ ಸಾಕಲ್ಲವೇ? ಎರಡನೆಯದಾಗಿ ಈಗಾಗಲೇ ಬಹುತೇಕವಾಗಿ ನಶಿಸಿ ಹೋಗುತ್ತಿರುವ ಈ ಹಬ್ಬದ ಆಚರಣೆಯ ಪ್ರಾಮುಖ್ಯತೆಯನ್ನು ನಮ್ಮ ಮಕ್ಕಳಲ್ಲಿ ಬೆಳೆಸುವುದು. ಮಕ್ಕಳ ವಯಸ್ಸಿಗೆ ತಕ್ಕಂತೆ, ಅವರಿಗೆ ಅರಿವಾಗುವ ಶಬ್ದಗಳನ್ನು ಬಳಸಿ,  ನಮಗೆಲಾ ಹಣ್ಣು ತರಕಾರಿಗಳನ್ನು ಬೆಳೆಯಲು ಸಹಾಯ ಮಾಡುವ ನೆಲಕ್ಕೆ ಇವತ್ತೊಂದು ಥ್ಯಾಂಕ್ಸ್ ಹೇಳೋಣ ಎಂದು ತಿಳಿಸಬಹುದು. ಮಕ್ಕಳಿಂದಲೇ ಅಂದು ಪೂಜೆ ಮಾಡಿಸಬಹುದು. ಇವೆಲ್ಲವನ್ನೂ ಕೊಡುತ್ತಿರುವ ಈ ಭೂಮಿಗೆ ನಾವು ಹೇಗೆ ಸಹಾಯ ಮಾಡೋಣ ಎಂಬುದರ ಕುರಿತಾಗಿ ಮಕ್ಕಳ ಜೊತೆ ಚರ್ಚಿಸಬಹುದು. ನಮ್ಮದೇ ಮನೆಯಂಗಳದ ಉದ್ಯಾನವನದಲ್ಲಿ ಒಂದು ದಿನದ ಶ್ರಮದಾನ, ಗಿಡಕ್ಕೆ ನೀರು ಹಾಕಿಸುವುದು ಇತ್ಯಾದಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಅವಕಾಶ ನೀಡಿದರೆ, ಮಕ್ಕಳಲ್ಲಿ ಈ ಕುರಿತಾಗಿ ಜವಾಬ್ದಾರಿ ಹೆಚ್ಚುತ್ತದೆ ಸಾಧ್ಯವಾದಲ್ಲಿ ಮಕ್ಕಳನ್ನು ಈ ಹಬ್ಬದ ದಿನದಂದು ಆದಷ್ಟು ತೋಟ ಗದ್ದೆಗಳಿಗೆ ಕರೆದುಕೊಂಡು ಹೋದರೆ,  ಮಕ್ಕಳಲ್ಲಿ ಪ್ರಾಯೋಗಿಕವಾಗಿ ನಮ್ಮ ಆಚರಣೆಗಳ ಕುರಿತಾಗಿ ತಿಳಿಯುವಂತಾಗುತ್ತದೆ. ಅದರಲ್ಲೂ ಹಿತ್ತಲು, ತೋಟ ಗದ್ದೆ ಇನ್ನಿತರ ನೈಸರ್ಗಿಕಾದ ಜಾಗದಲ್ಲೇ ಅಂದು ಮನೆ ಮಂದಿಯೆಲ್ಲರೂ ಹಾಯಾಗಿ ಒಟ್ಟಿಗೆ ಕುಳಿತು ಉಣ್ಣುವುದರಿಂದ ಮಕ್ಕಳಿಗೆಲ್ಲ ಒಂದು ರೀತಿಯ ಪಿಕ್ನಿಕ್ ಎನ್ನುವಷ್ಟು ಸಂತಸ ಉಂಟಾಗುತ್ತದೆ.

ಮಂಗಳವಾರ, ಸೆಪ್ಟೆಂಬರ್ 27, 2016

ಅನ್ನದ ಋಣ

ನನ್ನ ೩ ವರ್ಷದ ಮಗಳು ಊಟ ತಿಂಡಿ ವಿಷಯದಲ್ಲಿ ಸ್ವಲ್ಪ ಜಾಸ್ತಿಯೇ ಚೂಸಿ. ಶಾಲೆಗೆ ಏನು ತೆಗೆದುಕೊಂಡು ಹೋಗುತ್ತೇನೆ, ರೂಟ್ಟಿಗೆ ನೆಂಚಿಕೊಳ್ಳುವುದಕ್ಕೆ ಏನು ಬೇಕು ಎಂಬುದರ ಬಗ್ಗೆ ನಾನು ಕೇಳುವ ಮೊದಲೇ ತಾನು ತೀರ್ಮಾನ ತೆಗೆದುಕೊಂಡಾಗಿರುತ್ತದೆ. ಸೂಪರ್ ಮಾರ್ಕೆಟಿಗೆ ಹೋದಾಗ ತನಗೆ ಇಷ್ಟವಾಗುವ ವಸ್ತು ಮತ್ತು ತಿಂಡಿಗಳನ್ನು ನಮಗಿಂತ ಮುಂಚೆಯೇ ಆಯ್ಕೆ ಮಾಡಿಟ್ಟಿರುತ್ತಾಳೆ. "ಅಮ್ಮ, ಇವತ್ತು ಮಿಕ್ಕಿ ಮೌಸ್ ದೋಸೆ ಮಾಡ್ಕೋಡ್ತ್ಯ?","ನಂಗೆ ಸ್ಕ್ವೇರ್ ಶೇಪ್, ಆರೆಂಜ್ ಕಲರ್ ಚಪಾತಿ ಮಾಡಿ ಕೊಡು", "ವೆಜಿಟಬಲ್ ಬೋಂಡಾ ನಂಗಿಷ್ಟ", "ಹಣ್ಣಿನ ಜೊತೆ ಐಸ್ ಕ್ರೀಮ್ ಕೊಡ್ತ್ಯ?", "ಇವತ್ತು ಮೊಸರು ಜೊತೆ ಸಕ್ರೆ ಬೇಡ ಉಪ್ಪು ಹಾಕಿಕೊಡು" ಹೀಗೆ ಸಾಗಿರುತ್ತದೆ ನನ್ನ ಮಗಳ ಬಾಯಿ ರುಚಿಗೆ ತಕ್ಕಂತೆ ಇಡುವ ಬೇಡಿಕೆಗಳು. ಬಹುಶಃ ನನ್ನ ಹಾಗೆ ಅನೇಕ ತಾಯಂದಿರಿಗೆ ಇದರ ಅನುಭವವಿದ್ದಿರುತ್ತದೆ. ಒಂದು ದಿನ ಆಹಾರ ಪದಾರ್ಥದ ಸ್ವಚ್ಛತೆಯ ಬಗ್ಗೆ ಏನೋ ಬರೆಯುವ ಪ್ರಯತ್ನದಲ್ಲಿದ್ದೆ. ಮನಸ್ಸು ಹಾಗೆಯೇ ಹಿಂದಕ್ಕೆಳೆಯಿತು. ನಿಜ! ಈಗಿನ ಮಕ್ಕಳಿಗೆ ಯಾವುದು ಪೌಷ್ಟಿಕ ಆಹಾರ, ಯಾವುದು ಹಿತ, ಯಾವುದು ಮಿತ ಎಂದು ಅಳೆದು ಸುರಿದು, ರುಚಿ-ಶುಚಿ ಗಮನಿಸಿ, ನೋಡಲು ಆಸಕ್ತಿ ಬರುವಂತೆಯೂ ಮಾಡಿ ಮಕ್ಕಳು ಚೆನ್ನಾಗಿ ತಿನ್ನುವಂತೆ ಮಾಡಬೇಕಾದ ಸಾಹಸ ಒಂದೆರಡಲ್ಲ. ಅಷ್ಟು ಮಾಡಿದರೂ ಕಡೆಗೆ ಊಟ ತಿಂಡಿ ಮಾಡಿಸಲು, ಲ್ಯಾಪ್ಟಾಪ್ ಮೊಬೈಲ್ ಟ್ಯಾಬ್ ತೋರಿಸಿ ತಿನ್ನಿಸುವ ಅನಿವಾರ್ಯತೆ, ನನ್ನಗಲ್ಲದಿದ್ದರೂ, ನನ್ನಂತಹ ಈಗಿನ ಅನೇಕ ತಾಯಂದಿರಿಗಿದೆ. ದಶಕಗಳ ಹಿಂದೆ ನಾವು ಸಣ್ಣವರಿದ್ದಾಗ, ಪೌಷ್ಟಿಕತೆ ಶುಚಿತ್ವದ ಕೊರತೆಯಾಗದಿದ್ದರೂ, ಇದು ಸೇರಲ್ಲ, ಅದು ಮಾಡಿಕೊಡು, ಚಪಾತಿ ಗಟ್ಟಿಯಾಗಿದೆ ಬೇರೆ ಮಾಡಿಕೊಡು ಎಂದೆಲ್ಲ ನಾನು ಹಠ ಮಾಡಿ ಅಮ್ಮನ ಹತ್ತಿರ ಮತ್ತೆ ಮಾಡಿಸಿಕೊಂಡು ತಿಂದ ನೆನಪಿದೆ. ಮಧ್ಯಮ ವರ್ಗದ ಕುಟುಂಬವಾದ್ದರಿಂದಲೋ ಏನೋ ಹಠಕ್ಕೆ ಅವಕಾಶವಿತ್ತೆನಿಸುತ್ತದೆ. ಮಕ್ಕಳು ಹೊಟ್ಟೆಗೆ ಏನನ್ನಾದರೂ ತಿನ್ನಲಿ, ಬೇರೆ ತಿಂಡಿ ಮಾಡಿಕೊಡಲೂ ಅಡ್ಡಿಯಿಲ್ಲ ಎನ್ನುವ ಪೋಷಕರ ಒತ್ತಾಸೆಯಿಂದಲೋ ಏನೋ, ಒಟ್ಟಿನಲ್ಲಿ ಹೊತ್ತೊತ್ತಿಗೆ ಬೇಕಾದ ಊಟ ತಿಂಡಿ, ಸಂಜೆಯ ತಿಂಡಿ ಹೀಗೆಲ್ಲ ಆಹಾರ ಪೂರೈಕೆ ನಡೆದೇ ಇರುತ್ತಿತ್ತು. ಕಾಲೇಜಿಗೆ ಹೊರಡುವಾಗ, ನಾನು  ಕುಡಿಯಲಿ ಎಂದು ಹಾಲು ರೆಡಿ ಮಾಡಿ ತಂದರೆ, ಅದು ಹೆಚ್ಚಿನ ಬಿಸಿಯಿದೆ, ಕುಡಿಯಲು ಸಮಯವಿಲ್ಲ ಎಂದು ಹಾಗೆಯೇ ಬಿಟ್ಟು ಓಡುತ್ತಿದ್ದುದುಂಟು. ಈಗ ಪಶ್ಚಾತಾಪವಾಗುತ್ತದೆ ಅಮ್ಮನ ಪ್ರೀತಿ ಕಳಕಳಿಯ ಅರಿವಾಗಲಿಲ್ಲ ಎಂದು. ಆವಾಗಿನ ಸಿಲ್ಲಿ ತಗಾದೆಗಾಳ ನೆನಪಾಗಿ ನಗುವೂ ಬಂದಿತು. ಮನಸ್ಸು ಅಲ್ಲಿಗೇ ನಿಲ್ಲಲಿಲ್ಲ, ಯೋಚನಾ ಲಹರಿ ಇನ್ನೂ ಹಿಂದಕ್ಕೆಳೆಯಿತು, ಒಮ್ಮೆ ಅಪ್ಪಾಜಿ ನಮಗೆ ಊಟ ಮಾಡಿಸುತ್ತಿದ್ದಾಗ ಹೇಳಿಕೊಂಡ ತಮ್ಮ ಅನುಭವದ ಬಗ್ಗೆ. ಬಹುಶಃ ಆ ಘಟನೆಯ ನಂತರವೇ ನನಗೆ, ಊಟ-ತಿಂಡಿಗಳ ಬಗೆಗೆ ಗೌರವ ಶುರುವಾದ್ದು ಎನ್ನಬಹುದು. ..ನನ್ನಪ್ಪಾಜಿ ಒಬ್ಬ ಸರ್ವೇ ಸಾಮಾನ್ಯ ಕೃಷಿಕನ ಮಗ. ಆವಾಗಿನ ಕಾಲವೇ ಹಾಗಿತ್ತು. ಮನೆ ತುಂಬಾ ಮಕ್ಕಳು, ದುಡಿಯುವವ ಒಬ್ಬ ಮಾತ್ರ. ಹೊತ್ತೊತ್ತಿಗೆ ಊಟ ತಿಂಡಿಗೆ ವ್ಯವಸ್ಥೆಯಾದರೂ, ಎಲ್ಲವೂ ಅಚ್ಚುಕಟ್ಟು, ಎಲ್ಲರಿಗೂ ಶಿಕ್ಷಣ ಕೊಡಿಸುವಷ್ಟೂ ತಾಕತ್ತಿಲ್ಲದೆ, ಮಕ್ಕಳೆಲ್ಲರೂ ತಾವೇ ಸ್ವಂತ ಬಲದ ಮೇಲೆ ಓದಿ ಮುಂದೆ ಬಂದವರು. ಓದಲು ಅನುಕೂಲವಿಲ್ಲದೆ, ಮನೆಯಿಂದ ಹೊರಟು, ತಮ್ಮ ದೊಡ್ಡಮ್ಮನ ಚಿಕ್ಕಮ್ಮಂದಿರ ಮನೆಯಲ್ಲಿ ಉಳಿದುಕೊಂಡು, ವಾರಾನ್ನದ ಮಾದರಿಯಲ್ಲಿ ಊಟ ತಿಂಡಿ ಮಾಡಿಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರಂತೆ. ಊಟ ಸ್ವಲ್ಪ ಸಾಕು ಜಾಸ್ತಿ ಬೇಕು ಎನ್ನುವ ಮಾತೇ ಇಲ್ಲ. ಆ ತರಕಾರಿ ಹಿಡಿಸುವುದಿಲ್ಲ, ಈ ಪದಾರ್ಥ ಖಾರವಾಗಿದೆ, ನನಗೆ ಒಗ್ಗದು ಎಂಬಿತ್ಯಾದಿ ಯೋಚನೆಯೂ ಹತ್ತಿರ ಸುಳಿಯದಂತೆ ತಟ್ಟೆ ಖಾಲಿಯಾಗುತ್ತಿತ್ತಂತೆ. ಹೀಗೆಯೇ ಮುಂದುವರೆಸಿ, ನಮ್ಮ ತಂದೆ ತಮಗಾದ ಒಂದು ಅನುಭವದ ಬಗ್ಗೆ ತಿಳಿಸಿದರು. ಮೊದಲೆಲ್ಲ ಅಡುಗೆ ಪದಾರ್ಥವನ್ನು ಕೆಡದಂತೆ ಇಡಲು ಈಗಿನ ತರಹ ಫ್ರಿಡ್ಜ್ ಕಬೋರ್ಡ್ ತರಹ ಏನಿರಲಿಲ್ಲವಲ್ಲ. ಆಗೆಲ್ಲ ಅಡುಗೆ ಕೊಣೆಯಲ್ಲಿ ಸಣ್ಣ ಸಣ್ಣ ಗೂಡುಗಳಿರುತ್ತಿದ್ದವು. ಹಾಲು, ಮಜ್ಜಿಗೆ ಇಡಲು ಒಂದು ಗೂಡು, ಅನ್ನ ಈ ತರಹದ ಪದಾರ್ಥ ಇಡಲೊಂದು ಗೂಡು ಹೀಗೆ.. ಒಮ್ಮೆ ಎಲ್ಲರೂ ಊಟಕ್ಕೆ ಕೂರಲು ಅನುವಾಗುತ್ತಿರುವಾಗಲೇ ಅಪ್ಪಾಜಿ ನೋಟಕ್ಕೆ ಬಂದದ್ದು ಇಲಿಯೊಂದು ಅಡುಗೆ ಕೋಣೆಯ ಗೂಡಿನಿಂದ ಹೊರಗೋಡುತ್ತಿತ್ತು, ಬಾಯಿ ಚಪ್ಪರಿಸುತ್ತಾ...!!! ನಂತರದಲ್ಲಿ ಎಲ್ಲರಿಗೂ ಸರತಿಯ ಪ್ರಕಾರದಂತೆ ಹೆಚ್ಚು ಕಡಿಮೆ ಎಂಬ ಮಾತಿಲ್ಲದೆ ಬಾಳೆ ಎಲೆ ಯ ಮೇಲೆ ಅದೇ  ಆಹಾರ ಪದಾರ್ಥವನ್ನು, ಬಡಿಸಿದಷ್ಟು ಊಟ ಮಾಡುವ ಅನಿವಾರ್ಯತೆ ಅವರದ್ದಾಗಿತ್ತು. ಇದನ್ನು ಕೇಳಿ ಅಂದು ಊಟದ ತುತ್ತು ಒಳಗೆ ಹೋಗದಷ್ಟು ದುಃಖ ಗಂಟಲು ಕಟ್ಟಿತ್ತು.  ಇಂದು  ಅಷ್ಟೇ..  ಕ್ಷಣಮಾತ್ರದಲ್ಲಿ ನನ್ನನ್ನು ಎಲ್ಲಿಯೋ ಕೊಂಡೊಯ್ದ ಮನಸ್ಸು, ಕಣ್ಣಂಚಿನಲ್ಲಿ ನೀರು ತರಿಸಿತ್ತು. ಆವಾಗಿನ ಅತ್ಯಂತ ಕನಿಷ್ಠ ಸವಲತ್ತುಗಳ ಬಾಲ್ಯ ಅವರನ್ನಿಂದು ಒಳ್ಳೆಯ ನಾಗರೀಕನನ್ನಾಗಿಯೂ , ಒಬ್ಬ ಯಶಸ್ವೀ ಉನ್ನತ ಶಿಕ್ಷಣ ಅಧಿಕಾರಿಯನ್ನಾಗಿಯೂ ಮಾಡಿದೆ. ಆದರೂ ಅಪ್ಪಾಜಿ ತಮಗೆ ಊಟ ನೀಡಿದವರನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಅವರ ಆ ಅನ್ನದ ಋಣದ ಸ್ಮರಣೆ, ನಮಗೆ ತಿಳಿದುಕೊಳ್ಳಲು ಮತ್ತು ಮಕ್ಕಳಿಗೆ ತಿಳಿಸಿಕೊಡಲು ಒಂದು ಪಾಠವಾಗಿ ಪರಿಣಮಿಸಿದೆ.   

ಮಂಗಳವಾರ, ಜುಲೈ 5, 2016

ಮಳೆಗಾಲಕ್ಕೆ ನಮ್ಮ ಮಕ್ಕಳು ರೇಡಿಯೇ?

ಮಳೆಗಾಲವೆಂದರೆ ತುಂತುರು ಹನಿ, ಮಣ್ಣಿನ ಆಹ್ಲಾದಕರ ವಾಸನೆ, ತಣ್ಣನೆಯ ಗಾಳಿ, ನೋಡಲು ಸುಂದರವಾಗಿ ಕಾಣುವ ತುಂಬಿಕೊಂಡ  ಕೆರೆ-ಕೊಂಡಿಗಳು, ಎಲ್ಲೆಲ್ಲೂ ಹಸಿರು, ಮಳೆಗೆ ಮೈ ಒಡ್ಡಿ ಆಡುವ ಆಟ, ನೀರು ಎರಚಾಟ, ಮಕ್ಕಳಿಗೆ ಪೇಪರ್ ದೋಣಿ ಮಾಡಿ ನೀರಿಗೆ ಬಿಡುವ ಮಜಾ, ಹೊರಗೆ ಮಳೆ ನೀರಿನ ತಟ ಪಟ ಸದ್ದು, ಒಳಗೆ ಬಿಸಿ ಬಿಸಿ ಬಜ್ಜಿ ಮತ್ತು ಕಾಫಿ...ಹೀಗೆ ಮುಂದುರೆಯುತ್ತದೆ ಮಳೆಗಾಲದ ಸಂತಸದ ಕ್ಷಣಗಳ ಪಟ್ಟಿ.. ಅಂತೆಯೇ, ಮಳೆಗಾಲವೆಂದರೆ, ಒಳಗೆ ಎತ್ತಿಟ್ಟಿದ್ದ ಛತ್ರಿ, ರೈನ್ ಕೋಟ್ ಎಲ್ಲ ಹೊರತೆಗೆಯುವ ಸಮಯ, ಒಣಗದ ಬಟ್ಟೆಗಳು, ತಣ್ಣನೆಯ ನೆಲ, ಬೆಂಡಾದ ಬಾಗಿಲುಗಳು, ಹೆಚ್ಚಾದ ಸೊಳ್ಳೆ ಕೀಟಗಳು, ಹಸಿ ಅಂಶದ ಬೂಸ್ಟ್ ಶೇಖರಗೊಂಡ ಗೋಡೆ ಮತ್ತು ಹಾಸಿಗೆಗಳು, ಕೊರೆಯುವ ಚಳಿ, ಮನೆಯಲ್ಲಿ ಒಬ್ಬರ ನಂತರ ಮತ್ತೊಬ್ಬರು ಮಲಗಲು ಅಣಿಯಾಗುವ ಕೆಮ್ಮು ನೆಗಡಿ ಜ್ವರ! ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮಳೆಗಾಲ ಸಮೀಪಿಸಿತೆಂದರೆ ಆಟದ ಜೊತೆಗೆ ಅನಾರೋಗ್ಯದ ಪರದಾಟ! 


ಮಳೆಗಾಲದಲ್ಲಿ ಅನಾರೋಗ್ಯ - ಪ್ರಚೋದನಾ ಅಂಶಗಳು :

 ಮಳೆಗಾಲ ಶುರುವಾಯಿತೆಂದರೆ ಸಹಜವಾಗಿಯೇ, ವಾತಾವರಣದಲ್ಲಿ ತಾಪಮಾನದ ವ್ಯತ್ಯಾಸ ಉಂಟಾಗುತ್ತದೆ, ಶುಷ್ಕತೆ ಕಡಿಮೆಯಾಗಿ ಎಲ್ಲೆಡೆ ತೇವಾಂಶ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ, ಮಳೆಗಾಲದ ತಂಪಾದ ವಾತಾವರಣ, ವೈರಸ್ ಮತ್ತು ಬ್ಯಾಕ್ಟೀರಿಯಾ ಗಳ ಉತ್ಪತ್ತಿ ಹಾಗೂ ಹರಡುವಿಕೆಗೆ ಸೂಕ್ತವಾಗಿರುತ್ತದೆ. ಈ ರೀತಿಯಿಂದಾಗಿ ಗಾಳಿಯಿಂದಲೇ ಅನೇಕ ರೀತಿಯ ರೋಗಾಣುಗಳು ಪಸರಿಸುತ್ತದೆ. ಇದರ ಜೊತೆಯಲ್ಲಿ ಮಳೆಗಾಲದ ಸಮಯದಲ್ಲಿ ಅಲ್ಲಲ್ಲಿ ಕಾಣ ಬರುವ ನಿಂತ ನೀರು, ಮಲೇರಿಯಾ ಡೆಂಗ್ಯೂ ಇನ್ನಿತರ ರೋಗ ಹರಡುವ ಸೊಳ್ಳೆ ಹಾಗೂ ಇತರ ಸೂಕ್ಶ್ಮಾಣು ಜೀವಿಗಳಿಗೆ ತಳಿ ಉತ್ಪಾದನೆಗೆ ಸಹಕಾರಿಯಾಗಿರುತ್ತದೆ. ಮಳೆಗಾಲದಲ್ಲಿ ಸಿಕ್ಕ ಸಿಕ್ಕಲ್ಲಿ ಕಾಲು ಹಾಕಿ ನೀರಾಡುವುದು ಮಕ್ಕಳಿಗೆ ಒಂದು ಮೋಜಿನ ಸಂಗತಿ, ಆದರೆ ಅದೇ ನೀರಿನಿಂದಲೇ ಥಂಡಿ, ಜ್ವರ, ಕಾಲೆರಾ, ಟೈಫಾಯ್ಡ್, ಅತಿಸಾರ ಬೇಧಿ, ವಾಂತಿ ಮತ್ತು ಕೆಲವು ಚರ್ಮ ಖಾಯಿಲೆಗಳು ಬರುತ್ತವೆ. ಗಾಳಿಯಲ್ಲಿರುವ ತೇವಾಂಶದಿಂದ ಉಂಟಾಗುವ ಫಂಗಸ್ ನ ಪರಿಣಾಮವಾಗಿ, ನಮ್ಮ ಆಹಾರ ಪದಾರ್ಥಗಳೂ ಕೂಡ  ಬೂಸ್ಟ್ ಹಿಡಿಯಲು ಪ್ರಾರಂಭಿಸಿ, ಅವು ಕಲುಷಿತಗೊಳ್ಳುತ್ತವೆ. ಗಮನಿಸದೇ, ನಾವು ಬಳಕೆ ಮಾಡುವ ವಿಷಮಕಾರಿ ಆಹಾರ ಪದಾರ್ಥಗಳಿಂದ ನಮ್ಮ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆಗಳು ಹೆಚ್ಚು. 

ಸಾಮಾನ್ಯವಾಗಿ ಶಾಲಾ ಮಕ್ಕಳು ಮಳೆಗಾಲದ ಸಮಯದಲ್ಲಿ ಹುಷಾರು ತಪ್ಪುವುದು ಜಾಸ್ತಿ. ಏಕೆಂದರೆ ವಾತಾವರಣದಲ್ಲಿನ ಆರ್ದ್ರತೆ ಒಂದು ಮಗುವಿಗೆ ಉಂಟಾಗಿರುವ ಥಂಡಿ ಜ್ವರದ ರೋಗಾಣುಗಳನ್ನು ಸುಲಭವಾಗಿ ಗಾಳಿಯ ಮುಖಾಂತರ ಬೇರೆ ಮಕ್ಕಳಿಗೆ ಪಸರಿಸಲು ಅನುಕೂಲ ಮಾಡಿಕೊಡುತ್ತದೆ. ಮೊದಲೇ ಥಂಡಿ ಇನ್ನಿತರ ಸೋಂಕು ಖಾಯಿಲೆಗಳಿಂದ ಬಳಲುತ್ತಿರುವ ಯಾವುದೇ ಮಗುವಿನ, ಸೀನು, ಕೆಮ್ಮು ಅಥವಾ ರೋಗಾಣು ಕೈಗಳಿಂದ ಮುಟ್ಟಿದ ವಸ್ತುಗಳ ಹಂಚಿಕೆಯಿಂದಾಗಿ ಜೊತೆಗಿರುವ ಬೇರೆ ಮಕ್ಕಳಿಗೆ ಅನಾರೋಗ್ಯ ಉಂಟಾಗಲು ಕಾರಣವಾಗುತ್ತದೆ. ಅದರಲ್ಲೂ ಪ್ರತಿರಕ್ಷಣಾ ಶಕ್ತಿಯನ್ನು ಇನ್ನೂ ಪಡೆದುಕೊಳ್ಳುತ್ತಿರುವ ಚಿಕ್ಕ ಮಕ್ಕಳಲ್ಲಿ ಈ ರೀತಿಯಾಗಿ ಹರಡುವ ರೋಗಗಳು ಪದೇ ಪದೇ ಮಕ್ಕಳು ಅನಾರೋಗ್ಯದಿಂದ ಒದ್ದಾಡುವಂತೆ ಮಾಡುತ್ತದೆ. 

  ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳು :

೧. ಮನೆಯ ಒಳಾಂಗಣ ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆ  : 
       ಮನೆಯನ್ನು ಸಾಧ್ಯ ವಾದಷ್ಟು ಶುಷ್ಕವಾಗಿ ಹಾಗೂ ಸ್ವಚ್ಛವಾಗಿಡಬೇಕು. ಮನೆಯೊಳಗಿನ ತಾಪಮಾನವನ್ನು ಬದಲಾಯಿಸಲು ಸಾಧ್ಯವಿದ್ದರೆ, ಉದಾ. ಹೀಟರ್ ಬಳಕೆ, ಮಕ್ಕಳಿಗೆ ಅನುಕೂಲಕರವಾದ ತಾಪಮಾನಕ್ಕೆ ಹೊಂದಿಸಿಡಿ. ಇಲ್ಲದಿದ್ದ ಪಕ್ಷದಲ್ಲಿ, ಮಳೆಗಾಲದ ಶೀತ ಗಾಳಿಯನ್ನು ತಡೆಯಲು, ಕಿಟಕಿ ಬಾಗಿಲುಗಳನ್ನು ಮುಚ್ಚಿರಿ. ಆದರೆ, ಬೆಳಕಿನ ಸಮಯದಲ್ಲಿ ಸ್ವಲ್ಪ ಹೊತ್ತು ಸೂರ್ಯನ ಕಿರಣಗಳು ರೂಮಿನ ಒಳಗೆ ತಲುಪುವಂತೆ ಮತ್ತು ಸ್ವಲ್ಪ ಮಟ್ಟಿಗೆ ತಾಜಾ ಗಾಳಿಯು ಒಳಬರಲು ಅನುಕೂಲವಾಗುವಂತೆ ಕಿಟಕಿಯನ್ನು ತೆರೆದಿಡುವುದು ಒಳ್ಳೆಯದು. ಬಾಲ್ಕನಿಯಲ್ಲಿ ಗಿಡಗಳನ್ನು ಇಡುವ ತಟ್ಟೆಯಲ್ಲಿ ಅಥವಾ ಇನ್ನಿತರ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ, ಹಸಿಯಾದ ಕಾಲೊರೆಸುವ ಮ್ಯಾಟ್ ಗಳನ್ನು ಆದಷ್ಟು ಗಾಳಿಗಿರಿಸಿ ಒಣಗಿಸಿಕೊಳ್ಳಿ. ಅಡುಗೆ ಮನೆ ಸಾಧ್ಯವಾದಷ್ಟು ಸ್ವಚ್ಛವಾಗಿರಲಿ. ಕಸದ ಬುಟ್ಟಿಯಿಂದ ಕಸ ವಿಲೇವಾರಿ ನಿಯಮಿತವಾಗಿರಲಿ. ಒದ್ದೆ ಬಟ್ಟೆ, ಮಕ್ಕಳ ಶೂ ಸಾಕ್ಸ್ ಗಳು, ಛತ್ರಿ ರೈನ್ ಕೋಟ್ ಇನ್ನಿತರ ಹಸಿ ತೇವಾಂಶದ ವಸ್ತುಗಳನ್ನು ಸಾಧ್ಯವಾದಷ್ಟು ಹೊರಗಿನ ಗಾಳಿ ಮತ್ತು ಬಿಸಿಲಿಗೆ ಒಣಗಿಸಿಕೊಳ್ಳಿ. ಇಲ್ಲವಾದಲ್ಲಿ ಅವುಗಳ ಮೇಲೆ ಬ್ಯಾಕ್ಟೀರಿಯ ಮತ್ತು ಫಂಗಸ್ ಉತ್ಪತ್ತಿ ಹೆಚ್ಚಾಗುತ್ತದೆ. 
        ಇನ್ನೊಂದು ಮುಖ್ಯ ಮುನ್ನೆಚ್ಚರಿಕೆಯೆಂದರೆ, ಮನೆಯಲ್ಲಿನ ಗೋಡೆಗಳಲ್ಲಿ ಬಿರುಕು ಇದ್ದರೆ, ಮಳೆಗಾಲದ ಸಮಯದಲ್ಲಿ, ಅದರಲ್ಲಿ ನೀರಿಳಿಯುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಎಲೆಕ್ಟ್ರಿಕ್ ವಯ್ರ್ ಗಳು ಹಾದು ಹೋಗಿರುವ ಜಾಗದಲ್ಲಿ ನೀರಿನ ಪಸೆ ಉಂಟಾದರೆ, ವಿದ್ಯುತ್ ಅಪಘಾತಗಳಾಗುವ ಸಂಭವವಿರುತ್ತದೆ. ಆದ್ದರಿಂದಲೇ, ಇಂತಹ ಅವಘಡ ಸಂಭವಿಸದಂತೆ, ಬಿರುಕುಗಳನ್ನು ಮುಚ್ಚಿಸಿ ಮತ್ತು ಎಲೆಕ್ಟ್ರಿಕ್ ವಯ್ರ್ ಗಳು ಸಡಿಲಗೊಂಡು ನೇತು ಬೀಳದಂತೆ ಬೀಳದಂತೆ ತಕ್ಕದಾದ ವ್ಯವಸ್ಥೆ ಮಾಡಿರಿ. 


೨. ಮಕ್ಕಳಿಗೆ ಉಡುಪು ಮತ್ತು ಅದರ ಸ್ವಚ್ಛತೆ :
          ಮನೆಯವರು ಮತ್ತು ಮಕ್ಕಳು ಸ್ಸಾಧ್ಯವಾದಷ್ಟು ಒಣ ಬಟ್ಟೆಯನ್ನೇ ಧರಿಸಿ. ಹತ್ತಿಯಿಂದ ಮಾರ್ಪಾಡುಗೊಂಡ (ಕಾಟನ್) ಬಟ್ಟೆಗಳು ಮತ್ತು ಸ್ವಲ್ಪ ಸಡಿಲ ರೀತಿಯ ಬಟ್ಟೆಯನ್ನು ಮಕ್ಕಳಿಗೆ ಹಾಕಿ. ಲೆದರ್ ತರಹದ ಬಟ್ಟೆಗಳು ಮತ್ತು ಶೂ ಮಳೆಗಾಲಕ್ಕೆ ಸೂಕ್ತವಲ್ಲ. ಮನೆಯ ನೆಲವು ಥಂಡಿ ಪ್ರೌಕೃತಿಯದ್ದಾಗಿದ್ದರೆ, ಆದಷ್ಟು ಮಕ್ಕಳ ಕಾಲಿಗೆ ಸಾಕ್ಸ್ ಹಾಕಿ ಅವರನ್ನು ಬೆಚ್ಚಗಿಡಿ. ಮಕ್ಕಳನ್ನು ಹೊರಗಡೆ ಕರೆದೊಯ್ಯುವಾಗ ಸಾಧ್ಯವಾದಷ್ಟು ಕೈ ಕಾಲು ಕಿವಿಗಳನ್ನು ಮುಚ್ಚುವಂತಹ ಉದ್ದನೆಯ ತೋಳಿನ ಬಟ್ಟೆಯನ್ನೇ ಹಾಕಿ. ತಲೆಯನ್ನು ಸಂರಕ್ಷಿಸುವಂತಹ ಟೊಪ್ಪಿಹಾಕಿದರೆ ಉತ್ತಮ. ಆದಷ್ಟು ಕೆಸರಿನ ಜಾಗದಲ್ಲಿ ಮತ್ತು ನಿಂತ ನೀರಿನ ಜಾಗದಲ್ಲಿ ಮಕ್ಕಳು ಕಾಲು ಹಾಕದಂತೆ ಜಾಗ್ರತೆ ವಹಿಸಿ.  ಮಕ್ಕಳ ಶಾಲಾ ಸಮವಸ್ತ್ರ ಹಾಗೂ ಇನ್ನಿತರಬಟ್ಟೆಗಳನ್ನು ಡೆಟಾಲ್ ಅಥವಾ ಇತರೆ ನಂಜು, ರೋಗ ನಿವಾರಕಗಳನ್ನು ಹಾಕಿ ತೊಳೆಯಿರಿ. ಸೆಕೆ ಮತ್ತು ಚಳಿಯ ಅನುಭವವನ್ನು ಹೇಳಲು ತಿಳಿಯದಷ್ಟು  ಚಿಕ್ಕ ಮಗುವಿದ್ದರೆ, ಅಂತಹ ಮಕ್ಕಳನ್ನು ಗಮನಿಸಿಕೊಳ್ಳುತ್ತ ಅವರ ಬಟ್ಟೆ ಮತ್ತು  ಹೊದಿಕೆಯ ಕಡಿಮೆ ಮಾಡುವಿಕೆ ಬಗ್ಗೆ ತೀರ್ಮಾನಿಸಿ. ಏಕೆಂದರೆ ಮಳೆಗಾದಲ್ಲಿ ತಾಪಮಾನ ಒಂದೇ ರೀತಿಯಿರುವುದಿಲ್ಲ. 

೩. ಸೊಳ್ಳೆ ಮತ್ತು ಕೀಟಗಳಿಂದ ರಕ್ಷಣೆ :
          ಮನೆ ಮತ್ತು ಮನೆಮಂದಿಯನ್ನು ಸೊಳ್ಳೆ ಮತ್ತು ಇನ್ನಿತರ ಮಳೆಗಾಲದಲ್ಲಿ ಉದ್ಭವಾಗುವ ಕೀಟಗಳಿಂದ ಸಂರಕ್ಷಣೆ ಮಾಡುವುದು ಅತ್ಯಂತ ಪ್ರಮುಖವಾದ ಅಂಶ. ಹಸಿಯಾದ ಮರದಿಂದ ಮಾರ್ಪಟ್ಟ ಕಿಟಕಿ ಮತ್ತು ಬಾಗಿಲುಗಳಲ್ಲಿ, ಇರುವೆಗಳು ತಮ್ಮ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಈ ತರಹದ ಸೂಚನೆಯನ್ನು ಗಮನಿಸಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಸೊಳ್ಳೆಯು ಮನೆಯನ್ನು ಪ್ರವೇಶಿಸುತ್ತದೆ. ಈ ಸಮಯದಲ್ಲಿ ಆದಷ್ಟು ಕಿಟಕಿ ಬಾಗಿಲುಗಳನ್ನು ಹಾಕಿರಿ. ಸೊಳ್ಳೆ ಕಾಯಿಲ್ ಬಳಕೆಯಿಂದ ಅಲೆರ್ಜಿ ಆಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಸೊಳ್ಳೆ ಪರದೆಯನ್ನು ಬಳಸುವುದು ಒಳಿತು. ಮನೆಯಲ್ಲಿರುವ ಕೂಲರ್, ಹೂವುಗಳನ್ನು ಹಾಕಿಡುವ ಹೂದಾನಿ, ಟಾಯ್ಲೆಟ್ ಪಿಟ್ ಮುಂತಾದ ಜಾಗಗಳಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ತಮ್ಮ ಸಂತತಿಯನ್ನು ಜಾಸ್ತಿ ಮಾಡುತ್ತದೆ. ಆದ್ದರಿಂದ ಇವುಗಳೆಲ್ಲವುಗಳ ನಿಯಮಿತವಾದ  ಸ್ವಚ್ಛತೆ ಮತ್ತು ಬಚ್ಚಲು ಮನೆಯ ಬಾಗಿಲುಗಳನ್ನು ಹಾಕುವ ರೂಢಿ ಮಾಡಿಕೊಳ್ಳುವುದು ತುಂಬಾ ಫಲಕಾರಿ. 

೪. ಆಹಾರ ಸಂರಕ್ಷಣೆ ಮತ್ತು ಕುಡಿಯುವ ನೀರಿನ ಪ್ರಾಮುಖ್ಯತೆ :
               ಮಳೆ ಕಾಲದಲ್ಲಿ ಸಿಗುವ ತರಕಾರಿ ಹಣ್ಣುಗಳನ್ನು ಜಾಗರೂಕತೆಯಿಂದ ಎರಡು ಸಲ ತೊಳೆದು ಬಳಸುವುದು ಒಳ್ಳೆಯದು. ಅದರಲ್ಲೂ ಹಸಿ ತರಕಾರಿಗಳ ಸೇವನೆಯ ವಿಷಯದಲ್ಲಿ ಸ್ವಚ್ಛತೆಯ ಗಮನ ಅಗತ್ಯ. ಆದಷ್ಟು ಬಿಸಿ ಪದಾರ್ಥಗಳ ಸೇವನೆ ಸೂಕ್ತವಾದದ್ದು. ಮಳೆಗಾದಲ್ಲಿ ಮಕ್ಕಳಿಗೆ ಬಿಸಿಯಾದ ಹಾಲು, ಸೂಪ್, ಕಷಾಯ ಕೊಡುವುದು ಉತ್ತಮ. ವಿಟಮಿನ್ ಸಿ ಹೇರಳವಾಗಿರವ ಆಹಾರ ಮತ್ತು ಶುಂಠಿ, ತುಳಸಿ, ಜೇನುತುಪ್ಪ, ಅರಿಶಿನ ಈ ತರಹದ ದೇಹದಲ್ಲಿನ ನಂಜನ್ನು ನಿವಾರಿಸುವ ಗಿಡಮೂಲಿಕೆಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಿದರೆ, ಹೆಚ್ಚಿನ ಸೋಂಕು ತೊಂದರೆಯನ್ನು ಕಡಿಮೆಯಾಗಿಸಬಹುದು. 
           ಇನ್ನೊಂದು ಮುಖ್ಯವಾದ ರೋಗ ತಡೆ ಹಿಡಿಯುವ ಎಚ್ಚರಿಕೆಯೆಂದರೆ, ಆದಷ್ಟು ಹೊರಗಡೆಯ ತಿಂಡಿ ಪದಾರ್ಥಗಳನ್ನು ಮಕ್ಕಳಿಗೆ ಕೊಡದಿರುವುದು. ಹೊರಗಿನ ಆಹಾರವು ಮಳೆಗಾಲದಲ್ಲಿ ಹೆಚ್ಚಿನ ರುಚಿ ಕೊಟ್ಟರೂ, ಶುಚಿಯ ವಿಷಯದಲ್ಲಿ ಅಷ್ಟೇ ಕಳಪೆಯಾಗಿರುತ್ತದೆ. ಪುನರ್ ಬಳಸಿದ ಎಣ್ಣೆಯಿಂದ ಮಾಡುವ ಕರಿದ ತಿಂಡಿಗಳು, ಶುದ್ಧವಿಲ್ಲದ ನೀರಿನ ಬಳಕೆ, ಸ್ವಚ್ಛತೆಯೇ ಕಾಣದ ತರಕಾರಿ ಸೊಪ್ಪುಗಳನ್ನು ಬಳಸಿ ಮಾಡಿದ ತಿಂಡಿಗಳು ಇನ್ನಿತರ ಜಂಕ್ ಫುಡ್ ಗಳು, ನಮ್ಮ ಮತ್ತು ಮಕ್ಕಳ ಜೀರ್ಣ ಶಕ್ತಿಯನ್ನು ಕುಂದಿಸುವುದರ ಜೊತೆಗೆ, ನಾನಾ ಬಗೆಯ ರೋಗಗಳನ್ನು ತಂದೊಡ್ಡುತ್ತದೆ. ಹಾಗಾಗಿಯೇ ಆದಷ್ಟು ಮನೆಯಲ್ಲಿಯೇ ಶುಚಿಯಾದ ರುಚಿಯಾದ ಅಡುಗೆ ಪದಾರ್ಥವನ್ನು ಮಾಡಲು ಪ್ರಯತ್ನಿಸಿ. 
          ಹೆಚ್ಚಿನವರಲ್ಲಿ ಮಳೆಗಾಲದ ಥಂಡಿಗೆ ನೀರು ಜಾಸ್ತಿ ಕುಡಿಯುವುದು ಆರೋಗ್ಯಕ್ಕೆ ತೊಂದರೆ ಎಂಬ ತಪ್ಪು ಕಲ್ಪನೆ ಇದೆ. ನೀರು ಯಾವ ಕಾಲದಲ್ಲಿಯೇ ಆದರೂ ನಮ್ಮ ದೇಹಕ್ಕೆ ಅತಿ ಮುಖ್ಯವಾದದ್ದು. ಮಳೆಗಾದಲ್ಲೂ ಕೂಡ ನೀರನ್ನು ಚೆನ್ನಾಗಿ ಸೇವಿಸಿ, ದೇಹವನ್ನು ಹೈಡ್ರೇಟೆಡ್ ಇಡಬೇಕು. ನೀರಿನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಶ್ಮಾಣು ಜೀವಿಗಳು ನಮ್ಮದೇಹವನ್ನು ಸೇರುತ್ತದೆ ಎಂಬುದು ನಿಜ. ಆದ್ದರಿಂದ ಮಳೆಗಾಲದಲ್ಲಿ ಕುಡಿಯುವ ನೀರನ್ನು ಫಿಲ್ಟರ್ ಮುಖಾಂತರ  ಸೋಸಿ ಆರಿಸಿ ಕುಡಿಯುವುದು ಉತ್ತಮ, ನಿಯಮಿತವಾಗಿ ಬಳಸುವ ನೀರಿನ ಫಿಲ್ಟರ್ ನ ಸೋಸುವ ಬುರುಡೆಯನ್ನು ಅದರ ಕಾಲದ ಮಿತಿಯಲ್ಲಿ ಬದಲಾಯಿಸುವುದು ಕೂಡ ಅಷ್ಟೇ ಮುಖ್ಯವಾದದ್ದು. 

೫. ಮಕ್ಕಳ ದೈಹಿಕ ಸಂರಕ್ಷಣೆ ಮತ್ತು ಸ್ವಚ್ಛತೆ :
            ಮಕ್ಕಳು ಹೊರಗಡೆ ಮಳೆಯಲ್ಲಿ ನೆನೆಯದಂತೆ ಛತ್ರಿ ರೈನ್ ಕೋಟ್, ಹ್ಯಾಟ್ ಇತ್ಯಾದಿ ಅಗತ್ಯ ಸಲಕರಣೆಗಳನ್ನು ಸದಾ ಕಳಿಸಲು ಮರೆಯದಿರಿ. ಮಳೆಗಾಲದಲ್ಲಿ ಮಕ್ಕಳು ತಿಳಿದೋ ತಿಳಿಯದೆಯೋ ಮಳೆ ನೀರಿನಲ್ಲಿ ನೆನೆಯುವುದು ಸಹಜ. ಹೀಗೆ ಮೈ ಒದ್ದೆಯಾಗಿದ್ದರೆ, ಸೂಕ್ಶ್ಮಾಣು ಜೀವಿಗಳ ನಿವಾರಣೆಗಾಗಿ ಬಳಸುವ ಯಾವುದಾದರೂ ಲಿಕ್ವಿಡ್ ಅಥವಾ ಮನೆಯಲ್ಲೇ ತಯಾರಿಸಿದ ನೈಸರ್ಗಿಕವಾದ ಕಹಿಬೇವಿನ ರಸ, ಲಾವಂಚ, ನಿಂಬೆ ಹನಿ ಇತ್ಯಾದಿ ಗಳನ್ನು ಹಾಕಿದ ಬಿಸಿನೀರಿನ ಸ್ನಾನ ತುಂಬಾ ಸೂಕ್ತವಾದದ್ದು. ಅಂತೆಯೇ ಶಾಲೆಯಿಂದ ಮರಳಿದ ಮಕ್ಕಳ ಕೈ ಕಾಲುಗಳನ್ನು, ಬಿಸಿನೀರಿನಿಂದ ಸೋಪನ್ನು ಹಚ್ಚಿ ತಿಕ್ಕಿ ತೊಳೆದರೆ, ಚರ್ಮದ ತೊಂದರೆ ಹರಡುವುದು ತಪ್ಪುತ್ತದೆ.  ಮಕ್ಕಳಿಗೆ ಪ್ರತಿ ಸಲವೂ ಕೈಯನ್ನು ಸೋಪ್ ಹಚ್ಚಿ ತಿಕ್ಕಿ ತೊಳೆಯುವ ರೂಢಿ ಮಾಡಿಸಿದರೆ, ಅಥವಾ ಹ್ಯಾಂಡ್ ವಾಷ್ ಹಾಕಿ ಕೈ ತೊಳೆಯಲು ಮಾರ್ಗದರ್ಶನ ನೀಡಿದರೆ, ಸಾಕಷ್ಟು ಬಗೆಯ ವೈರಲ್ ಸೋಂಕು ಜ್ವರಗಳನ್ನು ತಡೆಯಬಹುದಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ಉಂಟಾಗುವ ಧಿಡೀರ್ ವಾತಾವರಣದಲ್ಲಿನ ಬದಲಾವಣೆ ಚಿಕ್ಕ ಶಿಶುಗಳಿಗೆ ಅನಾರೋಗ್ಯವನ್ನುಂಟು ಮಾಡುತ್ತದೆ, ಮೊದಲ ಆಮ್ಲೀಯ ಮಳೆಯೂ ಕೂಡ ಚರ್ಮ ಸೋಂಕನ್ನು ತರುತ್ತದೆ. ಆದ್ದರಿಂದ ವಾತಾವರಣವು ಒಂದು ಹಂತಕ್ಕೆ ಅಚಲವಾಗುವ ವರೆಗೂ ಶಿಶುವನ್ನು ಕರೆದುಕೊಂಡು ಹೆಚ್ಚಿನ ತಿರುಗಾಟ ಮಾಡದೇ ಇದ್ದರೆ ಒಳಿತು. ಇದರ ಜೊತೆಗೆ , ಸಣ್ಣ ಮಕ್ಕಳನ್ನು ಎತ್ತಿಕೊಳ್ಳಲು ಮುಂದಾಗುವ ಭಾಂದವರಿಗೆ, ಮಗುವನ್ನು ಮುಟ್ಟಲು ಮುಂಚೆ ಹ್ಯಾಂಡ್ ಸ್ಯಾನಿಟೈಝೆರ್ ನಿಂದ ಕೈ ಒರೆಸಿಕೊಳ್ಳಲು ಅಥವಾ ಕೈ ತೊಳೆದುಕೊಳ್ಳಲು ಕೋರಿಕೊಳ್ಳುವುದಕ್ಕೆ ಸಂಕೋಚ ಮಾಡಿಕೊಳ್ಳಬೇಡಿ. ನಮ್ಮ ಮಕ್ಕಳ ಆರೋಗ್ಯ ನಮ್ಮ ಜವಾಬ್ದಾರಿ. ಮಕ್ಕಳು ಹಸಿಯಾದ ಮಣ್ಣು ಇತ್ಯಾದಿಗಳನ್ನು ಆಟವಾಡಿ ಬರುವುದರಿಂದ ಅವರ ಉಗುರುಗಳಲ್ಲಿ, ರೋಗಾಣುಗಳು ಇರುವ ಸಾಧ್ಯತೆ ಜಾಸ್ತಿ ಇರುತ್ತದೆ. ಆದ್ದರಿಂದ ನಿಯಮಿತವಾಗಿ ಉಗುರು ಕತ್ತರಿಸಿಕೊಡಿ. ರಾತ್ರಿ ಮಲಗುವ ಮುಂಚೆ, ಮೈ ಕೈಗೆ ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಎಣ್ಣೆ (ಕಹಿಬೇವು) ಹಚ್ಚುವುದರಿಂದ, ಸೊಳ್ಳೆ ಕಚ್ಚುವುದರಿಂದ ಪಾರು ಮಾಡಬಹುದು. 
      

ಲಾಸ್ಟ್ ಡ್ರಾಪ್ :
      ಮಳೆಗಾಲದ ಈ ತರಾತುರಿಗೆ ಮುಖ್ಯವಾದ ಮತ್ತು ಪ್ರಾಥಮಿಕ ಚಿಕಿತ್ಸೆಯೆಂದರೆ ಬಿಸಿನೀರು. ಬಿಸಿ ನೀರು ಪದೇ ಪದೇ ಕುಡಿಯುವುದರಿಂದ, ಬಿಸಿನೀರಿನ ಹಬೆಗೆ  ಮೂಗು ಮತ್ತು ಮುಖವೊಡ್ಡಿ, ಉಗಿಯನ್ನು ಸೇವಿಸುವುದರಿಂದ, ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಕಿ ಗಂಟಲು ಮತ್ತು ಬಾಯಿ ಮುಕ್ಕಳಿಸುವುದರಿಂದ, ಶೀತ ಮತ್ತು ನೆಗಡಿಯಿಂದ ಉಂಟಾಗುವ ಕಿರಿ ಕಿರಿ ಕಡಿಮೆಯಾಗುತ್ತದೆ   
          ಕೊನೆಯದಾಗಿ, ಮಳೆಗಾಲದಲ್ಲಿ ಸೋಂಕು ರೋಗಗಳು ಸರ್ವೇ ಸಾಮಾನ್ಯವಾಗಿ ಬರುತ್ತದೆ. ಆದ್ದರಿಂದ ಮಳೆಗಾಲಕ್ಕೆ ರೆಡಿ ಆಗಿರಿ. ಮಕ್ಕಳಿಗೆ ಬೇಕಾಗುವ ಥಂಡಿ, ಕೆಮ್ಮಿನ ಸಿರಪ್, ಅಗತ್ಯವಾದಲ್ಲಿ ಜ್ವರದ ತಾಪ ಇಳಿಸಲು ಹಾಕುವ ಔಷಧಿ, ವಿಟಮಿನ್ ಸಿ ಸಪ್ಪ್ಲಿಮೆಂಟ್ಸ್. ನೀಲಗಿರಿ ಎಣ್ಣೆ ಎಲ್ಲವೂ ನಿಮ್ಮಲ್ಲಿ ಸಿದ್ಧವಿರಲಿ. ಆದರೆ ತಜ್ಞರ ಮಾರ್ಗದರ್ಶನದ ಮೇರೆಗೆ ಚಿಕಿತ್ಸೆಯನ್ನು ಮಾಡಿ. ಅಸ್ವಸ್ಥತೆ ತೀವ್ರವಾಗಿದ್ದಲ್ಲಿ ತಕ್ಷಣ ತಜ್ಞರನ್ನು ಕಂಡು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.  






ಸೋಮವಾರ, ಏಪ್ರಿಲ್ 11, 2016

ಒಂದು ಚಾಕೊಲೇಟಿನ ಮಹಿಮೆ

ಈ ವರ್ಷದ ಗಣರಾಜ್ಯೋತ್ಸವದ ದಿನದಂದು ನಾನು ಹೈದರಾಬಾದಿನಲ್ಲಿ ನನ್ನ ಅಕ್ಕನ ಮನೆಯಲ್ಲಿದ್ದೆ. ಅವರು ವಾಸವಿರುವ ಟವ್ನ್ ಶಿಪ್ ನಲ್ಲಿ ವಿಜ್ರಂಬಣೆಯ ಗಣರಾಜ್ಯೋತ್ಸವ ಆಚರಣೆ ನಡೆಸಿದ್ದರು. ಆ ಸಮಯದಲ್ಲಿ ನನ್ನ ಪೋಷಕರು,ನಾನು, ನನ್ನ  ಮಗಳು ಸಾನ್ವಿ ಎಲ್ಲರೊಡಗೂಡಿ ಧ್ವಜ ಆರೋಹಣಕ್ಕೆ ಪಾಲ್ಗೊಳ್ಳಲು ಸಂಭ್ರಮದಿಂದ ಹೊರಟೆವು. ಅಕ್ಕನ ಮಕ್ಕಳು ಮತ್ತು ನನ್ನ ಮಗಳಷ್ಟು ಚಿಕ್ಕ ವಯಸ್ಸಿನವರಿಗೆ ರಾಜ್ಯೋತ್ಸವದ ಬಗ್ಗೆ ಏನು ಕಲ್ಪನೆ ಇರಲು ಸಾಧ್ಯ? ಅವರಿಗೆ ಗೊತ್ತಿದ್ದದ್ದು ಒಂದೇ..ಧ್ವಜಾರೋಹಣದ ನಂತರ ಸ್ವೀಟು ಕೊಡ್ತಾರಂತೆ!! ಅಲ್ಲಿವರೆಗೆ ಸುಮ್ನೆ ಕೂತಿರಬೇಕು ಅಷ್ಟೇ ಅವರ ಮನಸ್ಸಿಗೆ ಹೊಕ್ಕ ವಿಷ್ಯ. ಯಥಾ ಪ್ರಕಾರ ಆಚರಣೆಯು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕೊನೆಗೊಂಡಿತು. ಒಳ್ಳೆ ಪೊಟ್ಟಣದಲ್ಲಿ, ಎರಡು ಅಂಬೊಡೆ ಚಟ್ನಿ, ಜಾಮೂನು ಕೊಟ್ಟಿದ್ದರಿಂದ ಎಲ್ಲರೂ ಬಾಯಲ್ಲಿ ನೀರೂರಿಸಿಕೊಂಡು ಸವಿಯುತ್ತಿದ್ದರು. ನಾವೂ ಕೂಡ ತಲಾ ಒಂದೊಂದು ಪೊಟ್ಟಣವನ್ನು ಕೈಗೆರಿಸಿಕೊಂಡೆವು. ನನ್ನ ಮಗಳು ತನ್ನ ಅಜ್ಜನ ಜೊತೆಗೂಡಿ ಇನ್ನೇನು ಸಿಹಿ ಸವಿಯಬೇಕೆನ್ನುತ್ತಿರುವಾಗಲೇ ಅಲ್ಲೊಬ್ಬ ಪುಟ್ಟ ಹುಡುಗನೊಬ್ಬ ಅವರ ಬಳಿಗೆ ಹೋಗಿ ಚಾಕೊಲೇಟ್ ಒಂದನ್ನು ಸಾನ್ವಿಯ ಕೈಗಿತ್ತು ಇಂದು ತನ್ನ ಹ್ಯಾಪಿ ಬರ್ತಡೆ ಎಂದು ತನ್ನ ಸಂಭ್ರಮವನ್ನು ಹಂಚಿಕೊಂಡ. ಚಾಕೊಲೇಟ್ ಸಿಕ್ಕಿದ್ದೇ ತಡ, ಅವಳ ಕೈಯಲ್ಲಿದ್ದ ಜಾಮೂನು ವಾಪಸು ಅಜ್ಜನ ಕೈಗೆ ಬಂದು ಬಿಟ್ಟಿತು. ಆ ವರೆಗೆ ಕಾದು ಕುಳಿತ ಸಿಹಿ ತಿಂಡಿಯ ಮೇಲಿನ ವ್ಯಾಮೋಹ ಒಂದೇ ಕ್ಷಣಕ್ಕೆ ಚಾಕೊಲೇಟ್ ನ ಎದುರು ಜರ್ರೆಂದು ಇಳಿದು ಹೋಯಿತು. ಇದನ್ನು ತಕ್ಷಣ ಗಮನಕ್ಕೆ ತಂದುಕೊಂಡು ನನ್ನ ಬಳಿ ಖೇದ ವ್ಯಕ್ತ ಪಡಿಸಿದರು ನಮ್ಮ ತಂದೆ.. ನಿಜ!! ಒಮ್ಮೆ ಯೋಚಿಸಬೇಕಾದ ವಿಷಯವೇ...!! ಆ ಸಣ್ಣ ಕ್ಯಾಂಡಿ ಚಾಕೊಲೇಟ್, ಸಾಂಪ್ರದಾಯಿಕ ತಿಂಡಿಯನ್ನು ಸೋಲಿಸಿ ವಿಜಯ ಪ್ರಾಪ್ತಿಗಳಿಸಿದ ಗರಿ ತನ್ನ ಮುಡಿಗೇರಿಸಿಕೊಂಡಿತು.

ಹಾಗಾದರೆ ಎಲ್ಲಿ ವ್ಯತ್ಯಾಸವಾಯಿತು? ಸಿಹಿ ತಿಂಡಿಯ ಸಿಹಿಗಿಂತಲೂ ಮದುರವೇ ಆ ಚಾಕೊಲೇಟ್? ಸಾರ್ವತ್ರಿಕವಾಗಿ ಚಾಕೊಲೇಟನ್ನು ಮಕ್ಕಳು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳಲು ಕಾರಣಗಳೇನು? ಹೀಗೆ, ಯೋಚನೆಗಳು ಮುಂದುವರೆದವು. ಚಾಕೊಲೇಟ್ ಮಕ್ಕಳಿಗೆ ನೀಡುವುದು ಸರಿಯೇ  ತಪ್ಪೇ  ಎನ್ನುವ ಜಿಜ್ಞಾಸೆ ಕಿಂತಲೂ, ಒಮ್ಮೆ ಯೋಚಿಸಬೇಕಾದ ಸಂಗತಿ ಎಂದು ನನಗನ್ನಿಸಿ ಈ ಟಿಪ್ಪಣಿಯನ್ನು ಮಾಡಿದ್ದೇನೆ. ಓದಿ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ :)

ಸರ್ವಂ ಚಾಕೊಲೇಟ್ ಮಯಂ ಆಗಿರಲು ಮುಖ್ಯ ಕಾರಣಗಳು :
  • ಪ್ರಮುಖ ಕಾರಣ ಮಕ್ಕಳು ಸಹಜವಾಗಿಯೇ ಸಿಹಿಯನ್ನು ಇಷ್ಟಪಡುತ್ತಾರೆ. ಚಾಕೊಲೇಟ್ ಒಂದು ಅತೀ ಸಿಹಿಯಾದ ತಿನಿಸು. 
  • ಅತೀವ ಸಕ್ಕರೆಯಂಶ ಇರುವ ಚಾಕೊಲೇಟ್ ತಿಂದ ನಂತರ, ಅದರಿಂದ ಸಿಗುತ್ತದೆ ತ್ವರಿತ ಶಕ್ತಿ. 
  • ಚಾಕೊಲೇಟ್ ತಯಾರಿಕೆಯಲ್ಲಿ ಬಳಸುವ ನೂರಾರು ಕೆಮಿಕಲ್ ಗಳುಹಲವು ಬಗೆಯ ಪರಿಣಾಮವನ್ನು ನೀಡುತ್ತದೆ ಉ.ದಾ ಮೆದುಳಿನ ನರಕೋಶಗಳ ಸಂವಹನೆ ಹೆಚ್ಚಿಸಿ, ಮನಸ್ಸಿನ ಒತ್ತಡವನ್ನು ತಡೆಹಿಡಿಯುವ, ಮನಸ್ಸಿಗೆ ಆಹ್ಲಾದವನ್ನು ಕೊಡುವ ಮತ್ತು ಆ ಕ್ಷಣಕ್ಕೆ ಉತ್ಸಾಹವನ್ನು ನೀಡುವ ಕೆಲಸ ಮಾಡುತ್ತದೆ. ಇನ್ನೂ ಕೆಲವು ರಾಸಾಯನಿಕಗಳು ನೋವನ್ನು ಕಮ್ಮಿ ಮಾಡುವ ಸಾಮರ್ಥ್ಯವನ್ನು ಹೊಂದಿರುವಂತದ್ದಾಗಿದೆ. 
  • ಚಾಕೊಲೇಟ್ ನ ಬಣ್ಣ, ಆಕಾರ, ರುಚಿ ಮತ್ತು ಕಣ್ಣಿಗೆ ಕುಕ್ಕುವಂತಹ ಅದರ ಅತ್ಯಂತ ಆಕರ್ಷಣೀಯ ಪ್ಯಾಕಿಂಗ್. 
  • ಸುಲಭವಾಗಿ ಲಭ್ಯವಿರುವ ತಿನಿಸು. ಚಿಕ್ಕ ಚಿಕ್ಕ ಅಂಗಡಿಗಳಲ್ಲೂ ಲಭ್ಯವಾದುದು. ಅಂಗಡಿಯಲ್ಲಿ ಚಿಲ್ಲರೆ ನೀಡುವ ಬದಲು ಅಂಗಡಿಯಾತ ಲಾಭ ಮಾಡಿಕೊಳ್ಳಲು ಸ್ವೇಚ್ಛೆಯಿಂದ ಕೊಡುವ ಒಂದು ಮತ್ತಿನಂತಹ ವಸ್ತು. 
  • ದೈನಂದಿನ ಜೀವನದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಎಂತಹ ಬಡವನಿಗೂ ಕೈಗೆಟುಕುವಂತಹ ವಸ್ತು. 
  • ತಿನ್ನಲು ಮತ್ತು ಸಂಗ್ರಹಿಸಿಡಲು ಸುಲಬದ್ದು, ಅಷ್ಟು ಸುಲಭವಾಗಿ ಹಾಳಗುವಂತದ್ದಲ್ಲ
  • ಪತ್ರಿಕೆ, ಟೀವಿ ಎಲ್ಲಾ ಮಾಧ್ಯಮಗಳಲ್ಲೂ ಹೆಚ್ಚಿರುವ ಕಂಪನಿ ಮಾರ್ಕೆಟಿಂಗ್/ಅಡ್ವರ್ಟೈಸ್ಮೆಂಟ್ 
  • ಕುಟುಂಬದಲ್ಲಿ ಈಗಾಗಲೇ ಚಾಕೊಲೇಟ್ ನ ದಾಸ್ಯಕ್ಕೆ ಒಳಗಾಗಿರುವ ಹಿರಿಯರಿಂದ ದೊರಕುವ ವಸ್ತು. 
  • ನೆಂಟರಿಷ್ಟರಿಗೆ ಮಕ್ಕಳಿರುವವರ ಮನೆಗೆ ತೆಗೆದುಕೊಂಡು ಹೋಗಲು ಸಿಗುವ ಸುಲಭ ಉಡುಗೊರೆ. 
  • ತಯಾರಿಸಲು ಹೆಚ್ಚು ಶ್ರಮ ಪಡದೇ, ಮಕ್ಕಳಿಗೆ ತಿನ್ನಲು ದೊರಕಿಸಬಹುದಾದಂತ ತಿಂಡಿ. 
  • ಮಕ್ಕಳಿಗೆ ಹೇಳಿದ ಕೆಲಸವನ್ನು ಮಾಡಿ ಮುಗಿಸಲು ಒಡ್ಡಬಹುದಾದ ಸುಲಭದ ಆಮೀಷ. 

ಹಿಂದಕ್ಕುಳಿಯಿತು ನಮ್ಮಯ ತಿಂಡಿ. 
     ಒಂದು ಕಾಲದಲ್ಲಿ ಅಮ್ಮ ತೆಂಗಿನಕಾಯಿಯ ಮಿಠಾಯಿ ಮನೆಯಲ್ಲಿ ತಯಾರು ಮಾಡುತ್ತಿದ್ದರೆ, ಅದು ಯಾವಾಗ ಬಾಣಲೆಯಿಂದ ತಟ್ಟೆಗೆ ಜಾರುತ್ತದೆ, ಯಾವಾಗ ನಮಗಿಷ್ಟದ ಡೈಮಂಡ್ ಆಕಾರದಲ್ಲಿ ತಿನ್ನಲು ದೊರೆಯುತ್ತದೆ ಎಂದು ಹಾತೊರೆಯುತ್ತಿದ್ದೆವು. ಅದೇ ಈಗ ಪೇಟೆಗೆ ಹೋಗಿ ದಾರಿಯಲ್ಲಿ ಬರುತ್ತಾ ಅಪ್ಪನ ಹತ್ತಿರ ಒಂದು ಉದ್ದದ ಡೈರಿ ಮಿಲ್ಕ್ ಗಿಟ್ಟಿಸಿಕೊಂಡು ಬಂದರೆ ಅದರಷ್ಟು ಸಂತೋಷ ಬೇರೊಂದಿಲ್ಲ. ಮನೆಯಲ್ಲಿ ತಯಾರಾದ ಏನೂ ಬಣ್ಣ, ಆಕರ್ಷಣೆ ಇಲ್ಲದ ಮಿಠಾಯಿಯನ್ನು ನೋಡಿ,  ಈಗ ಬೇಡ ಆಮೇಲೆ ತಿನ್ನುತ್ತೇನೆ ಎಂಬ ಅಸಡ್ಡೆ ಮಗು ತೋರಿಸಿದಾಗ. ಅದೇ ಅಮ್ಮನಿಗೆ, ಶ್ರಮ ಪಟ್ಟು ಮಾಡಿದ ಸಿಹಿಗೆ ನಿರಾಕರಣೆ ದೊರಕಿ, ಮತ್ತೆ ಇನ್ನೊಮ್ಮೆ ಮಾಡಲು ಇಷ್ಟಪಡದ ನಿರಾಸಕ್ತಿ ಧೋರಣೆ. 

        ಯಾರದ್ದೋ ಭಾಂದವರ ಮನೆಗೆ ಹೋಗಬೇಕಿದೆ. ಹೆಚ್ಚು ಸಮಯವೇ ಇಲ್ಲದ ಓಟದ ಬದುಕಿನಲ್ಲಿ, ಮಕ್ಕಳಿರುವವರ ಮನೆಗೆ ತೆಗೆದುಕೊಂಡು ಹೋಗುವುದೆಂತು? ತಟ್ಟನೆ ನೆನಪಾಗುವುದು ಚಾಕೊಲೇಟ್ ಅಥವಾ ಬಿಸ್ಕತ್ತು. ಎಷ್ಟು ಸುಲಭದ ಕೆಲಸ. ಕಡಿಮೆ ಶ್ರಮ ಮತ್ತು ಖರ್ಚಿನಲ್ಲಿ ಹೋದವರ ಮನೆಯ ಮಗುವಿಗೆ ಚಾಕೊಲೇಟ್ ಕೊಟ್ಟಾಕ್ಷಣ ಆ ಮಗುವಿಗೆ ನೀವು ಫೇವರಿಟ್ ಪರ್ಸನ್ ಆಗಿ ಹೋಗ್ತೀರ. ಸುಲಭ ಮಾರ್ಗದಲ್ಲಿ ಮಗುವನ್ನು ಒಲಿಸಿಕೊಂಡಾಯಿತು. ಚಾಕೊಲೇಟ್ ತಿಂದು ನಂತರದಲ್ಲಿ ಅವರ ಮನೆಯ ಮಕ್ಕಳು ಊಟ ಮಾಡದೇ ನಿರಾಸಕ್ತಿ ತೋರಿದರೆ ಅದು ನಮ್ಮ ತಲೆನೋವೇನಲ್ಲ..!! 

    ಬಸ್ಸಿನಲ್ಲಿ ಪ್ರಯಾಣ ಮಾಡಬೇಕಿದೆ ಮಗುವನ್ನು ಕರೆದುಕೊಂಡು. ನೀರು ಹಣ್ಣು ಮನೆಯಲ್ಲಿ ತಯಾರಿಸಿದ ಅಡುಗೆ ಎಲ್ಲಾ ಹಿಡಿದುಕೊಂಡು ಹೋಗುವ ತಲೆಬಿಸಿ ಯಾಕೆಬೇಕು? ತಿನ್ನಿಸುವುದು, ಕೈ ಬಾಯಿ ತೊಳೆಸುವುದು ಎಲ್ಲವೂ ಸಮಸ್ಯೆಯೇ.. ಒಂದು ೩-೪ ಚಾಕೊಲೇಟ್ ಅಥವಾ ಒಂದು ಬಿಸ್ಕುತ್ತು ಪ್ಯಾಕ್ ಹಿಡಿದುಕೊಂಡರೆ ಸಾಕು. ಲಗ್ಗೇಜ್ ಕಮ್ಮಿಯಾದಂತಾಯಿತು. 

     ನವರಾತ್ರಿ ಹಬ್ಬದ ಸಮಯ. ಮೊಮ್ಮಗ ಸ್ಕೂಲಿನಿಂದ ಸಂಜೆ ಮರಳಿ ಬಂದು ಅಡುಗೆ ಮನೆ ಕಡೆ ಇಣುಕಿ ನೋಡುತ್ತಾನೆ. ಅಜ್ಜಿ ಇವತ್ತು ಏನು ತಿಂಡಿ ಮಾಡಿರಬಹುದು ಎಂದು. ಅಜ್ಜಿ ರುಚಿಯಾದ ಅಪರೂಪದ ಸಿಹಿ ತಿಂಡಿ ಮಾಡಿತ್ತಿದೇನೋ ನಿಜ. ಆದರೆ ಅದೀಗ ತಣ್ಣಗಾಗಿದ್ದು, ಯಾವದೋ ಹಿಂಡಾಲಿಯಮ್ ಪಾತ್ರೆಯಲ್ಲಿದೆ. ತೆಗೆದು ತಿನ್ನುವಷ್ಟು ಆಸೆ ಸಹಜವಾಗಿಯೇ ಬರಲಿಲ್ಲ ಮೊಮ್ಮಗನಿಗೆ. ಹೊರಟೇ ಬಿಟ್ಟ ಹೊರಗಡೆ ಆಟ ಆಡಲು. 

   ನಮ್ಮ ಪಾಪುವಿನ ಬರ್ಥಡೇ ಇವತ್ತು. ಸ್ಕೂಲಿಗೆ ಸಿಹಿ ಹಂಚಬೇಕಲ್ಲ. "ರ್ರೀ ದಾರಿಲಿ ಹೋಗ್ತಾ ೧೦೦ ಚಾಕೊಲೇಟ್ ದು ಪ್ಯಾಕ್ ತಗೊಂಡು ಹೋಗಿ ಕೊಟ್ಟು ಬನ್ನಿ..ವಾಪಾಸ್ ಬರ್ತಾ ಕೇಕ್ ರೆಡಿ ಆಗಿದ್ಯೇ ವಿಚಾರಿಸಿ ಬನ್ನಿ" ಎಂದು ಹೆಂಡತಿ ಗಂಡನಿಗೆ ಆಜ್ಞೆ ಕೊಟ್ಟದಾಯಿತು. ಮಗುವಿಗೆ ಅರ್ಥವಾದದ್ದೂ ಕೂಡ ಅಷ್ಟೇ. ತನ್ನ ಬರ್ಥಡೇ ಗೆ ತಾನು ಸ್ಕೂಲಲ್ಲಿ 'ಚಾಕೊಲೇಟ್' ಕೊಡಬೇಕೆಂದು. 

ಹೀಗೆ ಹತ್ತು ಹಲವು ಬಗೆಯಲ್ಲಿ ನಾವುಗಳು ನಮ್ಮ ಕಾರ್ಯವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ರುಚಿಯಾದ ವಸ್ತುವನ್ನು ಸುಲಭದಲ್ಲಿ ಪಡೆಯಲು ಯೋಚಿಸುತ್ತಿರುತ್ತೇವೆ. ಇಲ್ಲಿ ಚಾಕೊಲೇಟ್ ಒಳ್ಳೆಯದೇ ಕೆಟ್ಟದೇ ಎಂಬ ಜಿಜ್ಞಾಸೆ ಕಿಂತಲೂ, ಇದು ಹೇಗೆ ನಮ್ಮ ಸಾಂಪ್ರದಾಯಿಕ ಪ್ರಕಾರದ ಅಡುಗೆಯ ಸೊಗಸನ್ನು ಕಡಿಮೆಯಾಗಿಸಿದೆ ಎಂಬುದು ಹೆಚ್ಚಿನ ಕಳಕಳಿಯ ವಿಷಯ. ಹೆಚ್ಚಾದರೆ ಅಮೃತವೂ ವಿಷವೇ ಎಂಬ ನಾಣ್ನುಡಿಯೇ ಇಲ್ಲವೇ? ಚಾಕೊಲೇಟ್ ನ ಮದುರತೆ, ನಾನಾ ಬಗೆಯ ಬಣ್ಣ, ರೋಮಾಂಚನಕಾರಿ ಹುಳಿ, ಸಿಹಿ, ಕಹಿ ರುಚಿ, ಕೆಲವೊಂದು ಚಾಕೊಲೇಟ್ ತಿಂದ ನಂತರ ನಾಲಿಗೆಗೆ ಉಂಟಾಗುವ ತಣ್ಣನೆಯ, ಮರಗಟ್ಟುವ (ಅರಿವಳಿಕೆ) ಅನುಭವ ಮತ್ತು ಚಾಕೊಲೇಟ್ ತಿನ್ನುವ ಚಟ ಎಲ್ಲವೂ ಅದರಲ್ಲಿ ಬಳಸುವ ರಾಸಾಯನಿಕಗಳಿಂದ ಉಂಟಾಗುವ ಪರಿಣಾಮವಷ್ಟೇ. ಹಾಗಾದರೆ ನಾವು ಎಡವುತ್ತಿರುವುದಾದರೂ ಎಲ್ಲಿ?
  • ಕೆಲಸ ಕಮ್ಮಿಯಾಗಿಸಿಕೊಳ್ಳಲನುವಾಗಿ, ಅಂಗಡಿಯಲ್ಲಿ ಸಿಗುವ ಧಿಡೀರ್ ಪದಾರ್ಥಗಳನ್ನು ದೈನಂದಿನ ಆಹಾರವಾಗಿ ಬಳಸಿಕೊಳ್ಳುವುದು 
  • ಗಡಿಬಿಡಿಯ ಜೀವನದಲ್ಲಿ, ತಮಗೆ ಮತ್ತು ತಮ್ಮ ಮಕ್ಕಳ ಆಹಾರದ ಬಗೆಗಿನ ರುಚಿ ಮತ್ತು ಶುಚಿಯ ಬಗ್ಗೆ ನಿರಾಸಕ್ತಿ 
  • ಆಹಾರ ತಯಾರಿಕೆಯಲ್ಲಿ ವೈವಿದ್ಯತೆ ಇಲ್ಲದಿರುವುದು. 
  • ಹೊರಗಡೆಯಿಂದ ಬೇರೆಯವರು ತಂದು ಹಂಚುವ ಕೃತಕ ಆಹಾರಗಳನ್ನು ನಿರಾಕರಿಸಲು ಆಗದ ಸಾಮಾಜಿಕ ಕಟ್ಟುಪಾಡು 
  • ಮಕ್ಕಳಿಂದ ನಿರೀಕ್ಷಿಸುವ ಕಾರ್ಯಗಳಿಗೆ ಒಡ್ಡುವ ಹೊರಗಡೆ ತಿಂಡಿಯ ಆಮೀಷ 
  • ಹಿರಿಯರು ಮಕ್ಕಳೆದುರು ಮನೆಯ ಅಡುಗೆಯನ್ನು ಮೂದಲಿಸುವುದು ಮತ್ತು ನಿರಾಸಕ್ತಿ ತೋರುವುದು. ನಮ್ಮ ಅನುಯಾಯಿಗಳಾದ ನಮ್ಮಮಕ್ಕಳಿಗೆ ಇದರಿಂದ ಸಹಜವಾಗಿಯೇ ಆಹಾರ ರುಚಿಯಿಲ್ಲ ಎಂಬ ಭಾವನೆ ಬರುತ್ತದೆ. 
  • ಮಕ್ಕಳ ಹಸಿವೆಯ ಸಮಯವನ್ನು ಸರಿಯಾಗಿ ಗಮನಿಸದೇ, ಹೊತ್ತಲ್ಲದ ಹೊತ್ತಿನಲ್ಲಿ ಚಾಕೊಲೆಟ್ ಇನ್ನಿತರ ತಿಂಡಿಗಳನ್ನು ತಿನ್ನಲು ಅವಕಾಶ ನೀಡುವುದು. ಇದರಿಂದ ಸಹಜವಾಗಿಯೇ ಮಕ್ಕಳಿಗೆ ಹಸಿವು ಇಂಗಿ ಹೋಗುತ್ತದೆ. 
ನಾವೇನು ಮಾಡಬಹುದು?

      ಚಾಕೊಲೇಟ್ ಬೇಡವೇ ಬೇಡ ಎಂದೇನಲ್ಲ. ಕೊಡಲೇ ಬಾರದೆಂಬ ಧೋರಣೆಯಲ್ಲ, ನನ್ನ ಅಭಿಪ್ರಾಯದಲ್ಲಿ, ಚಾಕೊಲೇಟ್ ಮಕ್ಕಳ ಪೌಷ್ಟಿಕ ಆಹಾರಕ್ಕೆ ಪರ್ಯಾಯವಾಗುವುದು ಸರಿಯಲ್ಲವಷ್ಟೇ.  
  • ಮೊದಲ ಪ್ರಯತ್ನವಾಗಿ, ಮಕ್ಕಳಲ್ಲಿ ಚಾಕೊಲೇಟ್ ನಿಂದ ಸಿಗುವ ಸಂತೋಷ ಕೃತಕವಾದದ್ದು ಎಂಬುದರ ಅರಿವು ಮೂಡಿಸಲು ಪ್ರಯತ್ನಿಸಬೇಕು. 
  • ಎರಡನೇ  ಪ್ರಮುಖ ಪ್ರಯತ್ನ, ಎಷ್ಟೇ ಗಡಿಬಿಡಿಯ ಪರಿಸ್ತಿತಿಯಲ್ಲೂ, ಮಕ್ಕಳಿಗೆ ಸಾಕಷ್ಟು ನಮ್ಮ ಮನೆಯ ಅಡುಗೆಯನ್ನು ನೀಡಲು ಪ್ರಯತ್ನಿಸುವುದು. ಕನಿಷ್ಠ ಪಕ್ಷದಲ್ಲಿ ಹಣ್ಣು ಹಂಪಲುಗಳನ್ನು ಹೆಚ್ಚಿ ಕೊಡುವುದು. 
  •  ನಾವು ತಯಾರಿಸುವ ಆಹಾರದಲ್ಲಿ ವೈವಿದ್ಯತೆಯನ್ನು ತರಿಸುವುದು ಮತ್ತು ಆಹಾರವು ಮೇಲ್ನೋಟಕ್ಕೆ ಸುಂದರವಾಗಿ ಕಾಣುವಂತೆಯೂ, ಅನುಭವಕ್ಕೆ ಆಹ್ಲಾದ ಕೊಡುವಂತೆಯೂ ಇರುವಿಕೆಯ ಬಗ್ಗೆ ಪ್ರಯತ್ನಿಸುವುದು. 
  • ಚಾಕೊಲೇಟ್ ಕೊಡಲೇ ಬಾರದೆಂಬ ತತ್ವವೇನಲ್ಲ.. ಅಪರೂಪಕೊಮ್ಮೊಮ್ಮೆ ನಮ್ಮ ಮಕ್ಕಳಿಗೆ ನಾವೇ  ಚಾಕೊಲೇಟ್ ಕೊಡೋಣ... ಪೌಷ್ಟಿಕ ಆಹಾರದ ನಂತರದಲ್ಲಿ ಬೇಕಿದ್ದರೆ ಸಂದರ್ಭಕ್ಕನುಗುಣವಾಗಿ ಮಕ್ಕಳಿಗೆ ಚಾಕೊಲೇಟ್ ನೀಡಿದರೆ, ಮಕ್ಕಳು ಅತಿಯಾಗಿ ಹಾತೊರೆಯುವುದಿಲ್ಲ.