ಭಾನುವಾರ, ಆಗಸ್ಟ್ 19, 2018

ಗೋಡೆ ಬರಹ

"ಅದೇನ್ ಕೆಟ್ಟು ಬುದ್ಧಿ ಬಂದಿದ್ಯೇನೋ ನಮ್ಮನೆ ಪಾಪು ಗೆ, ಎಷ್ಟು ಬೈದ್ರೂ ಕಡೆಗೆ ಕದ್ದು ಮುಚ್ಚಿ ಆದ್ರೂ ಗೋಡೆ ಮೇಲೆಗೀಚಿ ಬರ್ತಾನೆ. ನೋಡಿ, ಗೋಡೆ ತುಂಬಾ ಬಣ್ಣ ಬಣ್ಣದ ಪೆನ್ಸಿಲ್ ತಗೊಂಡು ಎಷ್ಟ್ ಅಸಹ್ಯ ಮಾಡಿದಾನೆ,  ಯಾರಾದ್ರೂ ಬಂದ್ರೆ, ನಮ್ಮನೆ ನೋಡ್ಬಿಟ್ಟು, ಎಷ್ಟು ಗಲೀಜು ಅಂದ್ಕೊಂಡಾರು.." ಎನ್ನುತ್ತಾ ವಿಂಧ್ಯಾ ಮಗುಗೆ ಬೈಕೋತಾ ಇದ್ರೆ, ಮಗು ತಾನು 'ಖುಷಿ' ಪಟ್ಟು ಬರೆದ ಚಿತ್ರದಲ್ಲಿರುವ  ಕಥೆಗೆ ಯಾಕಿವರೆಲ್ಲ 'ಬೈತಾರೆ' ಅಂತ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕುರಿತಾದ ಬೈಗುಳವನ್ನ ಕೇಳಿ ಏನು ಮಾಡಬೇಕೆಂದು ತಿಳಿಯದೆ ತಲೆ ತಗ್ಗಿಸಿ ನಿಂತಿತ್ತು. 

ಮಕ್ಕಳಿರುವ ಮನೆಗಳಲ್ಲಿ ಈ ರೀತಿಯ ಗೋಡೆ ಬರಹ ಸರ್ವೇ ಸಾಮಾನ್ಯ. ಕೆಲವು ಮನೆಯ ಎದುರು ಗೋಡೆಯಲ್ಲೇ ಮಕ್ಕಳು ಗೀಚಿ ಬರೆದ ಬ್ರಹ್ಮಾನ್ಡವಿದ್ದರೆ, ಕೆಲವು ಮನೆಯ ಒಳಕೋಣೆಯ ಮೂಲೆಗೊಡೆ ಇನ್ಯಾವುದೋ ಕಥೆ ಸಾರುತ್ತಿರುತ್ತದೆ. ನಿಮ್ಮ ಮನೆಯಲ್ಲೂ ಈ ರೀತಿ ಗೋಡೆ, ನೆಲದ ಮೇಲೆ ಗೀಚುವ ಅಭ್ಯಾಸದ ಮಕ್ಕಳಿದ್ದರೆ, ಅಥವಾ ನಿಮ್ಮ ಮಕ್ಕಳು ಸುಮ್ಮನೆ ಗೊತ್ತು ಗುರಿ ಇಲ್ಲದೆ ಗೀಚುತ್ತ ಕೂರುತ್ತಾರೆ ಎಂದರೆ ಅವರಿಗದನ್ನು ಕೆಟ್ಟದ್ದೆಂದು ತಡೆಯುವ, ತೆಗಳುವ ಮುನ್ನ ಗೀಚುವಿಕೆಯ ಕುರಿತಾಗಿ ಹೀಗೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳಿ. 

ಗೋಡೆ ಒಂದು ಬಿಳಿ ಹಾಳೆಯಂತೆ. 

ಮಕ್ಕಳು ಹುಟ್ಟಿನಿಂದಲೂ ಅನ್ವೇಷಕರು. ಅವರಿಗೆ ಪ್ರತಿಯೊಂದು ವಸ್ತುವನ್ನೂ ಶೋಧಿಸುವ ಕುತೂಹಲವಿರುತ್ತದೆ. ಮನೆಯ ಗೋಡೆ ಎಂಬುದು ಒಂದು ಗ್ರಹಾಲಂಕಾರದ ಮೂಲ ಭೂತ ವಸ್ತು ಎಂಬ ವಾಸ್ತವಿಕತೆ ತಿಳಿದಿರುವುದು ನಾವು ಹಿರಿಯರಿಗೆ ಮಾತ್ರ. ಮಕ್ಕಳ ಮಟ್ಟಿಗೆ ಗೋಡೆ ಎಂಬುದು ಒಂದು ಬಿಳಿಹಾಳೆ ಇಂದ್ದಂತೆ. ಸಹಜವಾಗಿಯೇ ಮನೆಯ ಗೋಡೆಗಳು ಅವರ ಪುಟ್ಟ ಕಣ್ಣಿಗೆ ವಿಶಾಲವಾದ ಜಾಗವೆನಿಸುವುದರಿಂದ ಮತ್ತು ಪೆನ್ಸಿಲ್ ಸ್ಕೆಚ್ ಪೆನ್  ಗಳ ಬಣ್ಣ, ಗೋಡೆಯ ಮೇಲ್ಮೈ ರಚನೆಗೆ ಹೊಂದಿಕೊಂಡು ಕಲೆ  ಕುರುಹುಗಳು ಮೂಡುವುದರಿಂದ ಮಕ್ಕಳಿಗೆ ಗೋಡೆಬರಹ ಅತ್ಯಂತ ಆಪ್ತವೆನಿಸುತ್ತದೆ. 

ಬರವಣಿಗೆಯ ಕಡೆಗೆ ಗೀಚುವ ಬೆಳವಣಿಗೆ 

ನಮಗೆ ನಮ್ಮ ಮಕ್ಕಳು ಶಾಲೆಗೆ ಹೋಗಲಾರಂಭಿಸಿದಾಗ, ಅವರ ಪಾಠ, ಅಕ್ಷರಾಭ್ಯಾಸ, ಹೊಂವರ್ಕ್ ಬಗ್ಗೆ ನಾವು ಎಷ್ಟೊಂದು ಆಸಕ್ತಿ ವಹಿಸುತ್ತೇವೆ. ಅಕ್ಷರಗಳು ಸುಂದರವಾಗಿರಲಿ ಎಂದು ಬಯಸಿ ಅಭ್ಯಾಸ ಮಾಡಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಇದೇ ಕಲಿಕೆ ಮಕ್ಕಳು ತಮ್ಮ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಪ್ರಾರಂಭಿಸಿರುತ್ತಾರೆ ಎಂಬುದು ನಮ್ಮ ಗಮನಕ್ಕೆ ದಕ್ಕಿರುವುದಿಲ್ಲ.ಮಾತನಾಡುವ ಕಲಿಕೆಯಲ್ಲಿ ಧ್ವನಿಹೊರಡಿಸುವಂತೆಯೇ, ಗೀಚುವುದು ಕೂಡ ಮಗು ತನ್ನನ್ನು ತಾನೇ ವ್ಯಕ್ತಪಡಿಸುವ ಒಂದು ಮಾಧ್ಯಮ. ಅದು ಮಕ್ಕಳಿಗೆ ಸಹಜದತ್ತವಾಗಿ ಬರುವ ಕೌಶಲ್ಯ. ಪೆನ್ಸಿಲ್ ಒಂದನ್ನು ಹಿಡಿದು ಗೀಚುವ ಮಗುವಿನ ಕೈಯ ನಿಯಂತ್ರಣ ಕೂಡ ಒಂದು ಅತೀ ಮುಖ್ಯವಾದ ಬೆಳವಣಿಗೆ. 

ಗೀಚುವುದು ಬರವಣಿಗೆಯ ಒಂದು ಪ್ರಾರಂಭಿಕ ಹಂತವಷ್ಟೇ. ವಯಸ್ಸಿಗನುಗುಣವಾಗಿ ಮಕ್ಕಳಲ್ಲಿ ತಮ್ಮ ಕೈಬರಹದ ಮೇಲೆ ಕಂಟ್ರೋಲ್ ಬರಲಾರಂಭಿಸುತ್ತದೆ. ಗೀಚುವುದರಲ್ಲೂ ಹಂತಗಳಿವೆ.  ೨ ವರ್ಷದ ಆಸುಪಾಸಿನ ಮಕ್ಕಳು ಪೈಂಟ್ ಬ್ರಷ್ ಅಥವಾ ಬಣ್ಣದ ಪೆನ್ಸಿಲ್ ಗಳಿಂದ ಕೇವಲ ಕಲೆಯನ್ನು ಮೂಡಿಸುವ ಪ್ರಯತ್ನದಲ್ಲಿರುತ್ತಾರೆ.  ಸಮರ್ಪಕವಾಗಿ ಪೆನ್ನನ್ನು ಹಿಡಿಯಲು ಬಾರದಿದ್ದರೂ, ಅದರಿಂದ ಮೂಡುವ ಗುರುತಿನ ಆಕರ್ಷಣೆಗೆ, ತಮ್ಮ ಕೈ ಬೆರಳುಗಳ ಸಂಯೋಜಿಸಿ ಏನನ್ನಾದರೂ ಗೀಚುವ ಪ್ರಯತ್ನಪಡುತ್ತಾರೆ. ಗೊತ್ತು ಗುರಿಯಿಲ್ಲದ ಚುರುಕಾಗಿ ಗೀಚಿ ಮೂಡಿಸುವ ಇಂತಹ ಕಲೆಗಳಿಗೆ ಏನೂ ಅರ್ಥವಿರದಿದ್ದರೂ,  ಮಕ್ಕಳ ಮಟ್ಟಿಗೆ ಹೊಸತೊಂದು ಕಂಡು ಹಿಡಿದ ಅಚ್ಚರಿ ಮತ್ತು ಖುಷಿ ಇರುತ್ತದೆ.  

ಮಕ್ಕಳು ೩ ವರ್ಷದವಧಿಯಷ್ಟರಲ್ಲಿ ಕೈಯಿಂದ ಬಣ್ಣದ ಸಾಧಕವನ್ನು ಹೇಗೆ ಹಿಡಿದುಕೊಂಡರೆ ಚಿತ್ರ ಮೂಡುತ್ತದೆ ಎಂದು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ. ಆಟದ ಸಮಯದಲ್ಲಿ ಕಲ್ಲು ಅಥವಾ ಕೋಲಿನಿಂದ ಮಣ್ಣ ಮೇಲೆ ಗೀರಿ ಮೂಡಿಸುವ ಚಿತ್ರ, ಚೆಲ್ಲಿದ ನೀರಿನ ಹನಿಗಳನ್ನು ಕೈಯಲ್ಲಿ ಎಳೆದು ಮೂಡಿಸುವ ಗೀರು, ಕಡೆಗೆ ಕೈಗೆ ಕೊಟ್ಟ ಪಪ್ಪಾಯ ಹೋಳಿನಿಂದ ತಟ್ಟೆಯ ಮೇಲೆ ಗೀರಿ ಏನು ಮೂಡುತ್ತದೆ ಎಂದು ನೋಡುವ ಕುತೂಹಲ ಕೂಡ ಇದಕ್ಕೆ ಹೊರತಲ್ಲ. ಹೀಗೆ ಮಕ್ಕಳು, ಯಾವ ರೀತಿಯಲ್ಲಿ ಕೈಯನ್ನಾಡಿಸಿದರೆ ಯಾವ ರೀತಿಯ ಗೀರು ಬರುತ್ತದೆ ಎಂದೆಲ್ಲ ಕ್ರಮೇಣ ಕರಗತ ಮಾಡಿಕೊಳ್ಳಲಾರಂಭಿಸುತ್ತಾರೆ. ಈ ವಯಸ್ಸಿಗೆ, ತನ್ನ ಕೈಗಳ ಸ್ನಾಯು ಹಿಡಿತ ಮತ್ತು ಕಣ್ಣಿನೊಂದಿಗಿನ ಕೈಯ ಹೊಂದಾಣಿಕೆ ಮಗುವಿನಲ್ಲಿಸ್ಪಷ್ಟವಾಗುತ್ತ ಹೋಗುತ್ತದೆ. ಇಂತದ್ದೇ ಚಿತ್ರ ಬರೆಯಬೇಕೆಂಬ ಯೋಚನೆಯಲ್ಲದಿದ್ದರೂ, ತಾವು ಗೀಚಿ ತಿದ್ದಿ ಬಿಡಿಸಿದ ಆಕೃತಿ ಯಲ್ಲಿ ಆಕಸ್ಮಿಕವಾಗಿ ಮೂಡಿದ ವರ್ತುಲ, ತ್ರಿಕೋನ ಆಕೃತಿಯನ್ನುಗುರುತು ಹಿಡಿದು ನಮ್ಮನ್ನು ಕರೆದು ತೋರಿಸುವಷ್ಟರ ಮಟ್ಟಿಗೆ ನಮ್ಮ ಮಕ್ಕಳು ತಯಾರಾಗುತ್ತಾರೆ.

ಸುಮಾರು ೪ ವರ್ಷದ ವಯಸ್ಸಿಗೆ, ಮಕ್ಕಳಿಗೆ ಅವರ ಗೀಚುವಿಕೆಯಲ್ಲಿ ಇನ್ನಷ್ಟು ನಿಯಂತ್ರಣ ದೊರಕಿರುತ್ತದೆ. ಆಕೃತಿಗಳು ಹೆಚ್ಚೆಚ್ಚು ಖಚಿತವಾಗಿ ಬರೆಯಲಾರಂಬಿಸುತ್ತಾರೆ. ಗೋಳಾಕೃತಿಗೆ ಕೈಯನ್ನು ಹೇಗೆ ತಿರುಗಿಸಬೇಕು ಎನ್ನುವಷ್ಟು ಅಂದಾಜು ಮಗುವಿಗೆ ಸಿಗುತ್ತದೆ. ತಾವು ಬರೆದ ಚಿತ್ರಕ್ಕೆ ಅವುಗಳೇನು ಎಂದು ಹೆಸರಿಸುತ್ತ ಬರುತ್ತಾರೆ. ಈ ವಯಸ್ಸಿಗೆ ಅವರಿಗೆ ತಮ್ಮ ಕಲ್ಪನೆಯ ಚಿತ್ರಗಳನ್ನು ಕುರಿತು ತಿಳಿಸುವ ಹುಮ್ಮಸ್ಸು ಮತ್ತು ಉತ್ಸಾಹ ಹೆಚ್ಚಿರುತ್ತದೆ. ಗೀಚಿದ ಚಿತ್ರಗಳೀಗ ಹೆಚ್ಚೆಚ್ಚು ಅರ್ಥಪೂರ್ಣವಾಗಲಾರಂಭಿಸುತ್ತದೆ. "ಅಮ್ಮನ ಕೈ ಹಿಡಿದುಕೊಂಡು ನಾನು ನಿಂತಿದ್ದೇನೆ, ಅಣ್ಣನೊಬ್ಬ ಗಾಳಿಪಟ ಹಾರಿಸುತ್ತಿದ್ದಾನೆ, ಕೆರೆಯಲ್ಲಿ ಮೀನುಗಳಿವೆ, ಇದು ಸೂರ್ಯ ಇದು ಚಂದ್ರ, ಇದು ಹೂವು.." ಹೀಗೆ ತಂತಾನೇ ಕಲ್ಪನೆ ಮಾಡಿಕೊಳ್ಳುತ್ತ ಹಲವು ಬಗೆಯ ಚಿತ್ರಗಳನ್ನು ಗೀಚಲಾರಂಭಿಸುತ್ತಾರೆ.

ಮಕ್ಕಳ ಕಲಿಕೆಗೆ ನಮ್ಮ ಪಾತ್ರ

ಅಡ್ಡಾದಿಡ್ಡಿಯಾಗಿ ಗೀಚಲಾರಂಭಿಸಿ, ಕ್ರಮೇಣ ಒಂದು ಬಿಂದುವಿನಿಂದ ಹೊರಟು ಕೈಯನ್ನು ಹೊರಳಿಸಿ ಅನಿರ್ಧಿಷ್ಟವಾಗಿಯಾದರೂ ಸರಿ ಒಂದು ವರ್ತುಲವನ್ನು ಬಿಡಿಸುವಲ್ಲಿ ಸಫಲಗೊಳ್ಳುವ ಮಕ್ಕಳ ಈ ಗೀಚುವಿಕೆಯೇ ಮುಂದೆ ಅಕ್ಷರಗಳನ್ನು ಬರೆಯುವಿಕೆಗೆ ಬುನಾದಿ. ಮನಸೋ ಇಚ್ಛೆ ಸ್ಕ್ರಿಬ್ಬ್ಲ್ ಅಥವಾ ಗೀಚಿ ಬರೆದ ಮಕ್ಕಳಿಗೆ ಇಂಗ್ಲೀಷ್ ನ ಕರ್ಸೀವ್ ಲೆಟರ್ಸ್ ಬರೆಯಲು ಸುಲಭವಾಗಿದೆ ಎನ್ನುತ್ತದೆ ಒಂದು ಸಂಶೋಧನೆ.   ಬರೆಯುವ ಮಕ್ಕಳಲ್ಲಿ ಹೆಚ್ಚೆಚ್ಚುಹಾಗಾಗಿ ಮಕ್ಕ ಳ ಗೀಚುವಿಕೆಯನ್ನು ಅರಿತು ಪ್ರೋತ್ಸಾಹ ನೀಡೋಣ.

  • ಚಿಕ್ಕಮಕ್ಕಳು ಗೋಡೆಯ ಮೇಲೆ ಬರೆದಾಗ ತತ್ತಕ್ಷಣಕ್ಕೆ ಮಕ್ಕಳ ಮೇಲೆ ರೇಗದಿರಿ. ಮಕ್ಕಳ ಗೀಚುವಿಕೆಯ ವಯಸ್ಸು ತಾತ್ಕಾಲಿಕ. ಹಾಗಾಗಿ ತಕ್ಷಣಕ್ಕೆ ಅವರ ಮನಸ್ಸಿಗೆ ಘಾಸಿಯಾಗುವಂತೆ ಬೈಯುವುದು, ಇತರರೆದುರು ಅವಮಾನಿಸುವುದು ಬೇಡ. ಆಗ ಗೀಚುವ ಆಸೆಗೆ ಕದ್ದು ಗೋಡೆಯ ಮೇಲೆ ಬರೆಯಲಾರಂಭಿಸುತ್ತಾರೆ. ಅದರ ಬದಲು ನಿಮ್ಮ ಮಕ್ಕಳ ಚಿತ್ರಗಳನ್ನು ಅವರ ಬರೆದ ವಯಸ್ಸನ್ನುನೆನಪಿನಲ್ಲಿಟ್ಟುಕೊಂಡು, ಹೆಮ್ಮೆ ಪಡಿ. ಮಕ್ಕಳು ದೊಡ್ಡವರಾದಂತೆ ಇತರ ಬರೆಯುವ ಮಾಧ್ಯಮಗಳು ಸಿಕ್ಕ ನಂತರ ಗೋಡೆ ಮೇಲೆ ಬರೆಯಬಾರದೆಂಬುದನ್ನೂ ತಿಳಿದುಕೊಳ್ಳುತ್ತಾರೆ. 
  • ಇದಾಗಿಯೂ ಮನೆಯ ಗೋಡೆಯ ಅಂದ ಹಾಳಾಗುವ ಕುರಿತು ಚಿಂತೆಯಿದ್ದರೆ, ಮಕ್ಕಳಿಗೆ ಬರೆಯಬೇಕೆನಿಸಿದ ಕ್ಷಣಕ್ಕೆ, ಸ್ಲೇಟು, ವೈಟ್ ಬೋರ್ಡ್, ಪೇಪರ್ ಇನ್ನಿತರ ಪರ್ಯಾಯ ವಸ್ತುಗಳನ್ನು, ಬಣ್ಣದ ಪೆನ್ಸಿಲ್, ಬಳಪ, ಮಕ್ಕಳು ಬಳಸಬಹುದಾದಂತಹ ಪೈಂಟ್ ಇತ್ಯಾದಿ ಪರ್ಯಾಯ ವಸ್ತುಗಳಿಂದ ಬೇರೆಡೆಗೆ ಆಕರ್ಷಿಸಿ ಅವರಿಗೆ ಗೀಚಲು ಅವಕಾಶ ನೀಡಿ. ಅವರಲ್ಲಿನ ಬರೆಯುವ ದಾಹ ನೀಗಬೇಕು. ಸಂತೃಪ್ತಿ ಎನಿಸಿದಾಗ ಮಕ್ಕಳು ಕೂಡ ಹೆಚ್ಚಿನ ಹಠ ಮಾಡುವುದಿಲ್ಲ. ಜೊತೆಗೆ ನಿಮ್ಮ ಪ್ರೋತ್ಸಾಹ ಅವರಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸಕ್ಕೆ ಸಹಾಯಕವಾಗುತ್ತದೆ. 
  • ಮಕ್ಕಳ ಚಿತ್ರ ಅಸಂಬದ್ಧವೆನಿಸಿದರೂ, ಇದೇನು ಬರಿ ಗೀಚಿದ್ದೀಯ ಎಂಬ ಅವಹೇಳನೆ ಬೇಡ. ಮಕ್ಕಳ ಪ್ರಯತ್ನಕ್ಕೆ ಭರಪೂರ ಪ್ರಶಂಸೆ ನೀಡಿ. ಮಕ್ಕಳೊಡನೆ ಚಿತ್ರಗಳನ್ನು ಬರೆಯಲು ಅಥವಾ ನೋಡಲು ಸ್ವಲ್ಪ ಸಮಯ ವ್ಯಯಿಸಿ. ಅದೇನು ಬರೆದಿದ್ದೀಯ ಎಂದು ವಿಚಾರಿಸಿ, ಮಕ್ಕಳ ಕಲ್ಪನೆಗೆ ಒಂದಷ್ಟು ನಿಮ್ಮ ಒಲವು, ಹುಸಿ ಆಶ್ಚರ್ಯವನ್ನು ವ್ಯಕ್ತಪಡಿಸಿ. ಹೆಚ್ಚೆಚ್ಚು ನೀವು ಕುತೂಹಲದಿಂದ ಪ್ರಶ್ನಿಸಿದಂತೆಯೂ, ಮಕ್ಕಳ ಮೆದುಳಿನಲ್ಲಿ ಇನ್ನೂ ಸಾಕಷ್ಟು ಕ್ರಿಯಾತ್ಮಕ ಐಡಿಯಾ ಗಳು ಬರುತ್ತಾ ಹೋಗುತ್ತವೆ. ಇದು ಮಕ್ಕಳ ಅತ್ಯುತ್ತಮ ಬೆಳವಣಿಗೆಗೆ ಸಹಕಾರಿ. 
  • ಮಕ್ಕಳಿಗೆ ಭೌತಿಕವಾಗಿ ಚಿತ್ರಿಸುವ ಸಾಮಗ್ರಿಗಳನ್ನು ನೀಡಿ. ಪೈಂಟ್ ಡ್ರಾಯಿಂಗ್ ಚಿತ್ರದ ಆಕರ್ಷಣೆ ಮೊಬೈಲ್ ಟ್ಯಾಬ್ ನಲ್ಲೂ ಸಾಧ್ಯ ಆದರೆ ತೋರು ಬೆರಳಿನಿಂದ ಸ್ಮಾರ್ಟ್ ಸ್ಕ್ರೀನನ್ನು ಮುಟ್ಟಿ ಮುಗಿಸುವ ಚಿತ್ರದಿಂದ ನಿಜವಾದ ಕಲಿಕೆಯಾಗುವುದಿಲ್ಲ. ಮಕ್ಕಳಿಗೆ ಮುಂದಕ್ಕೆ ಚಿತ್ರ ಅಥವಾ ಅಕ್ಷರಗಳನ್ನು ಪೆನ್ನು ಪೆನ್ಸಿಲ್ ಹಿಡಿದು ಬರೆಯುವ ಕಲ್ಪನೆಗೆ, ಬಣ್ಣಗಳನ್ನು ಬಳಸಿ ಮೂಡಿಸುವ ಚಿತ್ರಕ್ಕೆ ಸ್ಥಳ ವ್ಯಾಪ್ತಿ, ಆಯಾಮಗಳ ಅಂದಾಜು ಸಿಗುವುದಿಲ್ಲ.   
  • ೪ ವರ್ಷದ ಮಕ್ಕಳಲ್ಲಿ ತನಗಿಂತ ತನ್ನ ಗೆಳೆಯ/ಗೆಳತಿಯರು ಬರೆದ ಚಿತ್ರ ಚೆನ್ನಾಗಿ ಮೂಡಿಬಂದರೆ ಅಥವಾ ತಾನು ಕಲ್ಪಿಸಿದಂತೆ ಚಿತ್ರಿಸಲು ಬರುತ್ತಿಲ್ಲ ಎಂಬ ಹತಾಶೆ ಕೆಲವೊಮ್ಮೆ ಮೂಡುವುದುಂಟು. ಹಾಗಾಗಿ ಮಕ್ಕಳ ಚಿತ್ರಗಳಿಗೆ ತುಲನೆ ಮಾಡದಿರಿ. ಯಾರೂ ಕೂಡ ಹುಟ್ಟಿನಿಂದ ಆರ್ಟಿಸ್ಟ್ ಆಗಿರುವುದಿಲ್ಲ. ಇನ್ನೂ ಚೆನ್ನಾಗಿ ಬರೆಯಬೇಕಿತ್ತು ಎಂದು ಒತ್ತಡ ಹೇರದಿರಿ. ಸಮಾಧಾನಿಸಿ ಮಕ್ಕಳ ಅಷ್ಟರ ಮಟ್ಟಿಗಿನ ಪ್ರಯತ್ನಕ್ಕೆ ಸಂತೋಷ ವ್ಯಕ್ತಪಡಿಸಿ.
  • ಮಕ್ಕಳೇನಾದರೂ ಆಸಕ್ತಿಯಿಂದ ಗೀಚುತ್ತ ಕುಳಿತಿದ್ದರೆ, ಅದು ಸಮಯ ವ್ಯರ್ಥ ಎಂದೆಣಿಸಬೇಡಿ. ಹೆಚ್ಚೆಚ್ಚು ಗೀಚಿ ಬರೆಯುವುದರಿಂದ ಹೆಚ್ಚಿನ ಮಕ್ಕಳ ಮನಸ್ಸಿನ ಯೋಚನೆಗಳು ಹೊರಹೊಮ್ಮುತ್ತದೆ. ಇದೊಂದು expressive ಮಾಧ್ಯವಾದುದ್ದರಿಂದ ಮಕ್ಕಳು ತಾವಾಗಿಯೇ ತಮ್ಮ ಸಮಯವನ್ನು ತೊಡಗಿಸುವ ವಿಧಾನವನ್ನು ಕಲಿಯುತ್ತಾರೆ. ಮತ್ತು ಹಠಮಾರಿತನ ಕಡಿಮೆಯಾಗುತ್ತದೆ.

(ಈ ವಾರದ ಸುಧಾ ಮ್ಯಾಗಝಿನ್ ನಲ್ಲಿ ಪ್ರಕಟಿತ)