ಸೋಮವಾರ, ಮಾರ್ಚ್ 25, 2019

ಯೂ ಟರ್ನ್..

ಅದೊಂದು ದಿನ ಸಂಜೆ, ರಭಸವಾಗಿ ಹೆಜ್ಜೆ ಹಾಕುತ್ತ ನನ್ನ ನಿಯಮಿತ ವಾಕಿಂಗ್ ರಸ್ತೆಯ ಬದಿಯಲ್ಲಿ ನಡೆಯುತ್ತಲಿದ್ದೆ. ಆ ರಸ್ತೆಯ ತಿರುವಿಗೆ ಒಂದು ಕಟ್ಟಡ ನಿರ್ಮಾಣ ಹಂತದಲ್ಲಿದೆ. ಸಾಮಾನ್ಯವಾಗಿ ಗೃಹ ನಿರ್ಮಾಣ ಕೆಲಸಕ್ಕೆ ಇರುವ ಕಾರ್ಮಿಕರು ಸಂಸಾರ ಸಮೇತವಾಗಿ ಅಲ್ಲಲ್ಲಿಯೇ ತಾತ್ಕಾಲಿಕ ಸೂರು ಮಾಡಿಕೊಂಡು ವಾಸ ಮಾಡುತ್ತಾರೆ. ಬಿಲ್ಡಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಮತ್ತೊಂದೆಡೆಗೆ ಅವರ ಮನೆಮಠ ಎತ್ತಂಗಡಿಯಾಗುತ್ತದೆ. ಹಾಗೇ ಕಣ್ಣಾಡಿಸುತ್ತಾ ಹೋಗುತ್ತಿರುವಾಗ, ಬಿಲ್ಡಿಂಗ್ ನ ಗ್ರೌಂಡ್ ಫ್ಲೋರಿನಲ್ಲಿ ಓರ್ವ ಕಾರ್ಮಿಕ  ಮಹಿಳೆ ಒಂದು ಮೂಲೆಯಲ್ಲಿ ಕಲ್ಲಿನ ಒಲೆಯ ಮೇಲೆ ಕಾವಲಿ ಇಟ್ಟು ರೊಟ್ಟಿ ಮಾಡುತ್ತಲಿದ್ದಳು. ಪಕ್ಕದಲ್ಲೊಂದು ಪುಟ್ಟ ಮಗುವಿತ್ತು. ಯಾರೋ ದಾನ ಮಾಡಿದ ಹಳೆಯ ಯೂನಿಫಾರ್ಮ್ ಶರ್ಟು ಮತ್ತು ಹಾಫ್ ಪ್ಯಾಂಟ್ ಚಡ್ಡಿಯ ತೊಡುಗೆ, ಎತ್ತಿ ಕಟ್ಟಿದ ಗುಂಗುರು ಜುಟ್ಟಿ, ಮೈಕೈ ತುಂಬಾ ಜಲ್ಲಿಕಲ್ಲಿನಲ್ಲಿ ಓಡಾಡಿ ಆಟಾಡಿದ ಗುರುತುಗಳನ್ನು ಮಾಡಿಕೊಂಡ ಒರಟು ಚರ್ಮದ ಆ ಸಣ್ಣ ಮಗುವು ಕೈಯಲ್ಲಿ ತನಗೆ ಸಿಕ್ಕಿದ್ದ ರೊಟ್ಟಿಯ ಸ್ವಲ್ಪಸ್ವಲ್ಪವೇ ತಿನ್ನುತ್ತಲಿತ್ತು. ಅಲ್ಲಿ ಪಕ್ಕದಲ್ಲೇ ಇನ್ನೂ ಒಂದು ಮಗುವೂ ಈ ಮಗುವಿನ ಜೊತೆಯಲ್ಲಿದ್ದುದ್ದನ್ನು ನಾನು ಗಮನಿಸಿದೆ. ಒಳ್ಳೆಯ ಬಣ್ಣದ ಟೀ ಶರ್ಟ್, ಸ್ಪೋರ್ಟ್ಸ್ ಷೂ ಹಾಕಿಕೊಂಡ ಆ ಮಗು ಕೂಡ  ಅಲ್ಲೇ ಖುಷಿಯಾಗಿ ಓಡಾಡಿಕೊಂಡಿತ್ತು..ಆ ಮಗುವಿನ  ವೇಷ ಭೂಷಣದಿಂದ ಅದು ಕಾರ್ಮಿಕರ ಮಗುವಲ್ಲವೆಂದು ಸುಲಭವಾಗಿ ತಿಳಿಯಿತು. ೨.೫-೩ ವಯಸ್ಸಿನವರಿರಬಹುದಾದ ಆ ಎರಡು ಮಕ್ಕಳ ನಡುವೆ ಉತ್ತಮ ಸ್ನೇಹವಿರುವುದು, ಮಕ್ಕಳು ಮಾಡುತ್ತಿದ್ದ ಮಂಗಾಟದಿಂದಲೇ ತಿಳಿಯುತ್ತಿತ್ತು. ತನಗೂ ರೊಟ್ಟಿ ಬೇಕೆಂಬ ಸಂಜ್ಞೆಯನ್ನು ಈ ಮಗು ಮಾಡುವುದು, ತನ್ನ ಸರದಿಗೆ ಕಾಯುತ್ತಿರುವಂತೆ ಭಾಸವಾಗುತ್ತಿರುವಾಗಲೇ, ಬಿಸಿ ಬಿಸಿ ರೊಟ್ಟಿಯನ್ನು ತಣಿಸಿ ಅರ್ಧ ಭಾಗಕ್ಕೆ ಚೂರು ಮಾಡಿ ಆ ತಾಯಿ ಈ ಮಗುವಿಗೂ ನೀಡಿತ್ತಿರುವುದನ್ನು ನೋಡಿ ನನಗೆ ಒಂದು ಕ್ಷಣ ಆಶ್ಚರ್ಯವಾಯಿತು. ಆ ಕ್ಷಣಕ್ಕೆ ನನ್ನ ಮನಸ್ಸಿನಲ್ಲಿ ಯಾವ ರೀತಿಯ ಯೋಚನಾ ಲಹರಿ ಹರಿಯಲನುವಾಗಿತ್ತೋ ಏನೋ, ಅಷ್ಟರಲ್ಲಿ ಆ ಮತ್ತೊಂದು ಮಗುವಿನ ತಾಯಿ ತನ್ನ ಮಗುವನ್ನು ಹೆಸರಿಡಿದು ಕರೆಯುತ್ತಾ ಆ ಕಡೆಯಿಂದ ಬಂದರು. ಅದನ್ನು ಕಂಡು ನನ್ನ ಬಿರುಸಿನ ನೆಡಿಗೆ, ನಿಧಾನವಾಗಲಾರಂಭಿಸಿತು. ಉತ್ತಮ ದರ್ಜೆಯ ಕುರ್ತಾ, ಜೀನ್ಸ್ ಪ್ಯಾಂಟ್, ಒಳ್ಳೆಯ ಫುಟ್ವೆರ್,ಬಲಗೈಲಿ ಹೊಳೆಯುತ್ತಿರುವ ಚಿನ್ನದ ತೆಳು ಬ್ರೇಸ್ಲೆಟ್, ಕೈಯಲ್ಲಿ ದೊಡ್ಡದೊಂದು ಮೊಬೈಲ್ ಎಲ್ಲವೂ ಆ ತಾಯಿ ಆರ್ಥಿಕವಾಗಿ ಸಧೃಡ ಕುಟುಂಬದವರು ಎಂಬುದನ್ನು ತಿಳಿಸುವಂತಿತ್ತು. ನನ್ನ ನೆಡಿಗೆ ಅದಾಗಲೇ ತುಸು ನಿಧಾನವಾಗಿದ್ದರೂ ಕೂಡ, ಈ ಸನ್ನಿವೇಶದ ಸ್ಥಳವನ್ನು ಕಾಲುಗಳು ಅದಾಗಲೇ ದಾಟಿಯಾಗಿತ್ತು. 'ತನ್ನ ಮಗುವು ಕಾರ್ಮಿಕರ ಮಹಿಳೆ ನೀಡಿದ ತಿಂಡಿಯನ್ನು' ಪಡೆದುಕೊಂಡು ತಿನ್ನಲು ರೆಡಿಯಾಗಿರುವುದರ ಕುರಿತು ಈ ತಾಯಿಯ ಸ್ಪಂದನೆ ಏನಿರಬಹುದು? ಹಿಂದಿನ ಕಾಲಕ್ಕಿಂತಲೂ ಈಗಿನ ಕಾಲದಲ್ಲಿ ಮಕ್ಕಳ ಆಹಾರ ಮತ್ತು ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ಪಾಲಕತ್ವ ಮನೋಭಾವ ಸಾಮಾನ್ಯವಾಗಿ ಈ ರೀತಿಯ ಆಹಾರ ಹಂಚಿಕೆ ಖಂಡಿತ ಒಪ್ಪುವುದಿಲ್ಲಖಂಡಿತವಾಗಿಯೂ ಅವರಿಗೊಂದಷ್ಟು ಬೈಗುಳ ಬೀಳುವುದೆಂತೂ ಖಚಿತವೆನಿಸಿತು..ಆ ತಾಯಿಯು ತನ್ನ ಮಗುವಿಗೆ, ಕಂಡಿದ್ದೆಲ್ಲ ತಿನ್ನಬಾರದೆಂದು ಗದರಿ, ಒಂದೇಟು ಕೊಟ್ಟು ದರದರನೆ ಎಳೆದುಕೊಂಡು ಹೋಗಿ , ಮತ್ತೆ ಮುಂದಿನ ಸರ್ತಿ ಈ ಮಕ್ಕಳು ಒಟ್ಟಿಗೆ ಆಟಕ್ಕೆ ಸೇರದಂತೆ ನೋಡಿಕೊಳ್ಳುವ ಸಂಭವ, ಎಲ್ಲವೂ ನನ್ನ ತಲೆಯಲ್ಲಿ ಗಾಳಿಗೆ ಹಾರುವ ಪುಟಗಳಂತೆ ಪಟಪಟನೆ ಬರತೊಡಗಿದವು.. ಅಷ್ಟರಲ್ಲಿ ಆ ರಸ್ತೆ ಕೊನೆಗೊಂಡು ನಾನು ಎಡ ತಿರುವು ತೆಗೆದುಕೊಳ್ಳಲೇ ಬೇಕಿತ್ತು. ನನ್ನಲ್ಲಿ ಉದ್ಬವವಾಗಿದ್ದ ಏನೋ ಒಂದು ರೀತಿಯ ಕುತೂಹಲ, ಕಳವಳ, ಎದೆಬಡಿತ ಎಲ್ಲವೂ ಹೆಚ್ಚಾಗಿ ಯಾಕೋ ನನ್ನ ಕಾಲ್ನಡಿಗೆಗೆ ಮುಂದಿನ ತಿರುವು ಸಹನೀಯವಾಗಲೇ ಇಲ್ಲ. ಒಂದು ಕ್ಷಣಕ್ಕೆ ಕಣ್ಣು ಗಟ್ಟಿಯಾಗಿ ಮುಚ್ಚಿ ತೆಗೆದು, ಕೈ ಮುಷ್ಠಿ ಒಮ್ಮೆ ಬಿಗಿಹಿಡಿದು, ಮತ್ತೆ ತಿರುಗಿ ಅದೇ ರಸ್ತೆಯಲ್ಲಿ ಮರಳಿ ನನ್ನ ವಾಕಿಂಗ್ ಮುಂದುವರೆಸಿದೆ..ನಾನು ಆ ತಾಯಿ ಮಗುವಿನ ಸಮೀಪ ನಡೆದು ಬರುತ್ತಿರುವಂತೆಯೂ, "ಎಷ್ಟು ಸರ್ತಿ ಹೇಳ್ಲಿ ನಿಂಗೆ ಮನೇಲಿ ತಿಂಡಿ ತಿನ್ನು ಅಂದ್ರೆ ತಿನ್ನಲ್ಲ ನೀನು.. ನಡಿ ಮನೆಗೆ ಈಗ್ಲೇ, ಹಾಲು ಕೊಡ್ತೀನಿ.." ಎಂದು ತನ್ನ ಮಗುವಿಗೊಂದಷ್ಟು ಗದರಿ, "ನೀನ್ ಯಾಕಮ್ಮ ಹಿಂಗ್ ಮಾಡ್ತೀಯ, ಇದೇ ಕಥೆ ಆಯ್ತಲ್ಲ ..ಕೊಡ್ಬೇಡ ಹೀಗೆ ತಿಂಡಿಯೆಲ್ಲಇಲ್ಲಿ.." ಎಂದು ಆ ಮಹಿಳೆಗೊಂದಷ್ಟು ಜೋರು ಧ್ವನಿಯಲ್ಲಿ ಒಂದೇ ಸಮನೆರೇಗುತ್ತಿರುವ ಧ್ವನಿಯನ್ನು ಆಲೈಸಿದವಳಿಗೆ, "ಇದು ಸಾಮಾನ್ಯ ಜಗತ್ತಿನ ಸರ್ವೇ ಸಾಮಾನ್ಯ ಪ್ರತಿಕ್ರಿಯೆ' ಎಂದು ಮನಸ್ಸಿನಲ್ಲಿಯೇ  ಯೋಚಿಸಿ, ತುಸು ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಆ ಸ್ಥಳವನ್ನು ಮತ್ತೊಮ್ಮೆ ದಾಟಿ ಮುಂದಕ್ಕೆ ಬಂದೆ.. ಆದರೆ ಹೆಜ್ಜೆ ಹಾಕಿ ಮುಂದಕ್ಕೆ ಕ್ರಮಿಸಿದಂತೆ ಕ್ಷೀಣವಾಗುತ್ತಿದ್ದ ಆ ತಾಯಿಯ ಮುಂದಿನ ಪದಪುಂಜಗಳು, ಎದೆಯಲ್ಲಿ ಝಲ್ ಎನ್ನುವ ಅನುಭಾವ ನೀಡಿಬಿಟ್ಟಿತು. "ಇವ್ಳು ಬರಿ ಇಲ್ಲಿ ತಿನ್ನೋದೇ ಆಯ್ತು.. ಹೋಗ್ಲಿ, ರೊಟ್ಟಿ ಹಿಟ್ಟು ಕೊಡ್ತೀನಿ ಸ್ವಲ್ಪ ನಿಂಗೆ, ಸಂಜೆ ಬಂದು ತಗೊಂಡ್ ಹೋಗು.." ಎನ್ನುವ ಮುಂದಿನ ಸಾಲುಗಳಿಗೆ ಮುಂದೆ ಸಾಗುತ್ತಿದ್ದ ನನ್ನ ಕಾಲುಗಳು ನನಗರಿವಿಲ್ಲದೆಯೇ ಮತ್ತೊಮ್ಮೆ 'ಯೂ ಟರ್ನ್' ತೆಗೆದುಕೊಂಡು ಬಿಟ್ಟಿತ್ತು .. "ಕೈ ತೋಳ್ಸಿದ್ಯೋ ಇಲ್ವೋ.." ಎಂಬ ಗಟ್ಟಿ ಧ್ವನಿಯ ಆ ತಾಯಿಯ ಪ್ರಶ್ನೆ, "ಅಯ್ಯಾಯ್ಯಾ..  ತೊಳ್ಸಿದೇನ್ರೀ.." ಎಂಬ  ಈ ತಾಯಿಯ ಸಲಿಗೆಯ ಪ್ರತ್ಯುತ್ತರ ಎಲ್ಲವೂ, ಯಾವುದೋ ಸಿನಿಮಾವೊಂದರ  ಕಲ್ಪನೆಯೂ ಮಾಡಿರದ ಕ್ಲೈಮಾಕ್ಸಿನಂತೆ ಕಣ್ಣ ಮುಂದೆ ನಡೆಯುತ್ತಿತ್ತು..ಅಷ್ಟರವರೆಗೆ ಮನಸ್ಸಿನಲ್ಲಿ ಮೂಡುತ್ತಿದ್ದ ಪ್ರಶ್ನೆಗಳಿಗೆ ಸಂಪೂರ್ಣ ಭಿನ್ನವಾಗಿ, ಇವರ ಮಗುವನ್ನು 'ನೋಡಿಕೊಳ್ಳುವ ಕೆಲಸ' ಆ ಕಾರ್ಮಿಕ ಮಹಿಳೆ ಮಾಡುತ್ತಿರಬಹುದು, ಎಂಬಿತ್ಯಾದಿ ಯೋಚನೆಗಳು ನನ್ನಲ್ಲಿ ಬರಲಾರಂಭಿಸಿದವು. ಏನೇ ಆಗಲಿ,ಅರೆಕ್ಷಣದಲ್ಲಿ ನನ್ನ ಮೊಗದಲ್ಲಿ ಸಂತೋಷದ ನಗುವೊಂದು ಮೂಡಿಯಾಗಿತ್ತು. ಮತ್ತು ಆ ನಗುವಿಗೆ, ಆ 'ಬೀಯಿಂಗ್ ಹ್ಯೂಮನ್' ತಾಯಿಯು ತಿರುಗಿ ನೋಡಿ ನೀಡಿದ ಕಿರಿದಾದ ಪ್ರತಿ ನಗುವೊಂದು, "ದೊಡ್ಡವರ ದೊಡ್ಡತನ' ದ ಅನುಭವ ನೀಡಿತ್ತು..