ಗುರುವಾರ, ಜೂನ್ 6, 2019

ಶ್ರೀಕಾಳಹಸ್ತಿ ಮತ್ತು ಕಲಂಕಾರಿ



ಆಂಧ್ರಪ್ರದೇಶದ ಶ್ರೀಕಾಳಹಸ್ತಿಗೆ ಭೇಟಿ ನೀಡಿದ ಸಂದರ್ಭ. ಕಲಂಕಾರಿ ಎಂಬ ಟ್ರೆಂಡಿ ಫ್ಯಾಬ್ರಿಕ್ ಡಿಸೈನ್ಗಳ ಪೈಕಿ ಒಂದು ಶೈಲಿ ಶ್ರೀಕಾಳಹಸ್ತಿಯಲ್ಲಿಯೇ (ಶ್ರೀಕಾಳಹಸ್ತಿ ಮತ್ತು ಮಚಲೀಪಟ್ನಮ್  ನ ಎರಡು ಕಲಾ ಪ್ರಕಾರಗಳು ಕಲಂಕಾರಿ ವರ್ಣಚಿತ್ರಗಳಲ್ಲಿ ಕಾಣಸಿಗುತ್ತದೆ)  ಹುಟ್ಟಿರುವುದು ಎಂಬ ಕುತೂಹಲಕಾರಿ ಮಾಹಿತಿ ಅಕ್ಕನಿಂದ ದೊರೆಯಿತು. ಇತ್ತೀಚಿಗೆಂತೂ ಎಲ್ಲಿ-ಯಾವ ಕಾರ್ಯಕ್ರಮಗಳಲ್ಲಿ ನೋಡಿದರೂ ಕಣ್ತುಂಬ ತುಂಬಿಕೊಳ್ಳುವ ಕಲಂಕಾರಿ ಡಿಸೈನ್ ನ ಸೀರೆ, ಬ್ಲೌಸ್ಗಳು, ಕುರ್ತಾಗಳದ್ದೇ ಹಾವಳಿ. ಆ ರಂಗು, ಆ ಚಿತ್ತಾರಗಳು ಅಬ್ಬಬ್ಬಾ ಕಲೆಯಲ್ಲೇ ಅನೇಕ ಕಥೆಗಳನ್ನು ಹೇಳುವಂತಿರುತ್ತದೆ! ಕಲೆಯೊಂದು ಹುಟ್ಟಿದ ಊರಿನಲ್ಲಿದ್ದು ಅದರ ಅನುಭವ ಪಡೆಯದಿದ್ದರೆ ಹೇಗೆಂದು ಗೂಗಲ್ ಮಹಾಗುರುಗಳ ಮೊರೆ ಹೋದೆ. ಹತ್ತಿರದ ಕಲಂಕಾರಿ ಬಟ್ಟೆ ಅಂಗಡಿಗಳ ಮಾಹಿತಿ ಕಲೆ ಹಾಕಿದೆ. ಯಾಕೋ ಮಾರುಕಟ್ಟೆಯ ದೊಡ್ಡ ದೊಡ್ಡ ವಾಣಿಜ್ಯ ಅಂಗಡಿಗಳ ಭೇಟಿಗಿಂತಲೂ ಕಲಂಕಾರಿ ಸಣ್ಣ ಕೈಗಾರಿಕಾ ಗೃಹ ಉತ್ಪನ್ನ ಕೇಂದ್ರದ ವಿಳಾಸದ ಕಡೆಗೆ ಗಮನ ಸರಿಯಿತು. ವಾಪಸು ಬೆಂಗಳೂರಿಗೆ ಹೊರಡುವಷ್ಟರಲ್ಲಿ ಮಿಕ್ಕಿರುವ ಸಮಯವನ್ನು ಪ್ರಯೋಗಿಸಿಯೇ ಬಿಡೋಣ ಎಂದು ತೀರ್ಮಾನಿಸಿ, ಸಿಕ್ಕ ಶೇರ್ಡ್ ಆಟೋ ಹಿಡಿದು ಹೊರಟೆ.

ಕಲಂಕಾರಿ ಆಂಧ್ರಪ್ರದೇಶದ ಹಳ್ಳಿ ಜನರಿಂದ ಹುಟ್ಟಿಕೊಂಡ ಒಂದು ಪ್ರಾಚೀನ ಜನಪದ ಕಲೆ. ಹಿಂದೆ ರಾಜರ ಕಾಲದಲ್ಲಿ ಮನರಂಜನೆಯ ಮೂಲವಾಗಿ (ಹಾಡುಗಾರರು, ನೃತ್ಯಗಾರರಂತೆಯೇ) ಚಿತ್ರಕಲಾಕಾರರು ಒಂದೂರಿನಿಂದ ಮತ್ತೊಂದೂರಿಗೆ ಹೋಗುತ್ತಾ, ರಾಮಾಯಣ,ಮಹಾಭಾರತ, ಪಂಚತಂತ್ರ ದಂತಹ ವಿಶಿಷ್ಟವಾದ ಪೌರಾಣಿಕ ಮತ್ತು ಚಾರಿತ್ರಿಕ ಕಥೆಗಳನ್ನು ತಮ್ಮ ಚಿತ್ರಕಲೆಗಳ ಮೂಲಕ ದೇಶೀಯ ಬಟ್ಟೆಗಳ ಮೇಲೆ ಚಿತ್ರಿಸಿ, ಜನರನ್ನು ರಂಜಿಸುವ ವಾಡಿಕೆಯಿತ್ತಂತೆ(theater play). ರಾಜ ಕುಟುಂಬ ಕಾರ್ಯಕ್ರಮಗಳಲ್ಲಿ, ದೇವಸ್ಥಾನಗಳಲ್ಲಿ/ರಥಗಳಲ್ಲಿ ಮೂರ್ತಿ ಅಲಂಕಾರ ಉದ್ದೇಶದಿಂದ, ಕಲಂಕಾರಿ ವರ್ಣಚಿತ್ರಗಳ ಪರದೆಗಳನ್ನು, ಚಿತ್ರಫಲಕಗಳನ್ನು ಬಳಸುವ ಪದ್ಧತಿಯಿತ್ತು.ಕಲಾರಾಧನೆ ಚಿತ್ರಗಳಾಗಿ ಪೇಂಟಿಂಗ್ ಗಳ ಬಳಕೆ ಹೊರತುಪಡಿಸಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಉಡುಪುಗಳ ಮೇಲೆ ಕಲಂಕಾರಿ ಶೈಲಿಯ ಹ್ಯಾಂಡಿಮೇಡ್ ಪೈಟಿಂಗ್ ಪ್ರಾರಂಭವಾದದ್ದು.. ಇತ್ಯಾದಿ ಮಾಹಿತಿಗಳು ಹಾದಿಯಲ್ಲಿ ಸಾಗುತ್ತಲೇ ಇಂಟರ್ನೆಟ್ ಮೂಲಕ ಮಾಹಿತಿ ಕಲೆಹಾಕಿಟ್ಟುಕೊಂಡೆ.













೪೨ ಡಿಗ್ರಿ ತಾಪಮಾನದಲ್ಲಿ ನಾನು ಹುಡುಕಿಕೊಂಡು ಹೋದ ಸ್ಥಳವು ಒಂದು ಸಣ್ಣ ಮನೆಯ ಆವರಣವಾಗಿತ್ತು. ಹುಡುಕಿ ಹೋದದ್ದಕ್ಕೆ ನಷ್ಟವಿಲ್ಲದಂತೆ, ಮನೆಯ ಒಳಗಡೆ ೪-೫ ಜನ ಹೆಂಗಸರು ಕಲಂಕಾರಿ ಸೀರೆಯೊಂದರ ಮೇಲೆ ಕೆಲಸ ಮಾಡುತ್ತಿದ್ದರು. ತೆಲಗು/ತಮಿಳು ಬಿಟ್ಟರೆ ಬೇರೆ ಭಾಷೆ ಅವರಿಗೆ ಬರುತ್ತಿರಲಿಲ್ಲ. ನನಗೋ ತಮಿಳು ತೆರಿಯಾದು.. ಹೇಗೋ ನಮ್ಮ ನಮ್ಮ ಭಾಷೆಯಲ್ಲೇ, ತೆಲುಗುವಿನ ಅಲ್ಪಸ್ವಲ್ಪ ಕನ್ನಡ ಪದಗಳ ಹೋಲಿಕೆಯ ಮೇಲೆ, ಅವರೊಡನೆ ಮಾತಿಗೆ ಇಳಿದೆ. ಅವರ್ಯಾರೂ ಅಕ್ಷರ ಕಲಿತವರಲ್ಲ, ಆದರೆ ಕಲಂಕಾರಿ ಕಲೆಯ ಕುರಿತು ಟ್ರೇನಿಂಗ್ ತೆಗೆದುಕೊಂಡವರಾಗಿದ್ದರು. ತಮ್ಮ ಮನೆಯಲ್ಲಿಯೇ ಸಾಧ್ಯವಾದ ಮಟ್ಟಿಗೆ ಉಡುಪುಗಳನ್ನು ತಯಾರಿಸಿ ಸ್ವಂತ ಮಾರಾಟ ಮತ್ತು ಮಳಿಗೆಗಳಿಗೆ ಕೊಡುವ ಅಧಿಕೃತ ವ್ಯಾಪಾರ ವ್ಯವಹಾರವನ್ನಿಟ್ಟುಕೊಂಡವರು.

'ಕಲಂ' ಎಂದರೆ ಲೇಖನಿ ಮತ್ತು ಕಾರಿ ಎಂದರೆ ಕಾರ್ಯ ಅಥವಾ ಮಾಡುವುದು. ಬಿದಿರಿನ ಕಡ್ಡಿಯ ಚೂಪಾದ ತುದಿಗೆ ಉಣ್ಣೆಯಂತ ಬಟ್ಟೆಯನ್ನು ಕಟ್ಟಿ, ಅದನ್ನು ಬಣ್ಣದಲ್ಲಿ ಅದ್ದಿ ಸ್ವಲ್ಪ ಸ್ವಲ್ಪವೇ ಒತ್ತುತ್ತಾ ಹೋದರೆ, ಬಣ್ಣವು ಕಡ್ಡಿಯ ಮೂಲಕ ಇಳಿದು ಬಟ್ಟೆಯ ಮೇಲೆ ಚಿತ್ರವನ್ನು ಮೂಡಿಸುತ್ತದೆ. ಸಣ್ಣ ಹಿಡಿದು ಚಿತ್ರವನ್ನು ಬರೆಯಲು, ಬಣ್ಣ ತುಂಬಲು ಈ ರೀತಿಯ ಕುಂಚವನ್ನು ಬಳಸುತ್ತೇವೆ. ಮತ್ತು ಸ್ವಲ್ಪ ದೊಡ್ಡ ಪ್ರಮಾಣದ ಕಲರ್ ಫಿಲ್ಲಿಂಗ್ ಗೆ ಸ್ಪಾಂಜ್ ಅನ್ನು ಬಳಸಿ ಬಣ್ಣಗಳ ಲೇಪನ ಮಾಡುತ್ತೇವೆ ಎಂದು ಅವರು ತಿಳಿಸಿದರು.ಇದಕ್ಕೆ ಹಾಕಿದ ಬಣ್ಣ ನೀರಿನೊಡನೆ ತೊಳೆದು ಹೋಗುವುದಿಲ್ಲವೇಕೆ ಎಂದು ಕೇಳಿದಾಗ, ಅವರು ಕಲಂಕಾರಿ ಉಡುಪುಗಳ ತಯಾರಿಕೆಯ ಕುರಿತಾಗಿ ತಿಳಿಸಿದರು. ಮೈರಾಭಾಲಂ ಎಂಬ ಕೆಲವು ನೈಸರ್ಗಿಕ ವಸ್ತುಗಳಿಂದ ಮಾಡಿದ ಚೂರ್ಣವನ್ನುಹಾಲಿನೊಡನೆ ಬೆರೆಸಿ, ಮೊದಲು ಅದರಲ್ಲಿ ಫ್ಯಾಬ್ರಿಕ್(ಕಾಟನ್/ಸಿಲ್ಕ್ ಬಟ್ಟೆ)  ಅನ್ನು ನೆನೆಹಾಕಿ, ಒಂದು ದಿನ ಬಿಸಿಲಿನಲ್ಲಿ ಒಣಗಿಸಿ ತೆಗೆದಿಡುತ್ತಾರೆ. ಇದರ ಮೇಲೆ ಡಿಸೈನ್ ಚಿತ್ರಿಸಲು ಸಾಮಾನ್ಯವಾಗಿ ಕೆಂಪು, ಹಳದಿ, ಕಪ್ಪು ಮತ್ತು ನೀಲಿ  ಬಳಕೆಯಾಗುವ ಬಣ್ಣಗಳು. ಒಂದೊಂದು ಬಗೆಯ ಬಣ್ಣಗಳಿಗೆ ಒಂದೊಂದು ರೀತಿಯ ಮಿಕ್ಸಿಂಗ್. ಕೆಲವು ಬಗೆಯ ಬೇರು, ಮರದ ತೊಗಟೆ, ಕೆಲವು ಸಸ್ಯಗಳ ದಂಟು, ಎಲೆಗಳು ಮತ್ತು ಕೆಲವು ಹೂವುಗಳಿಂದ ವರ್ಣದೃವ್ಯಗಳನ್ನು ತಯಾರು ಮಾಡುತ್ತಾರೆ. ಕಪ್ಪು ಬಣ್ಣಕ್ಕೆ ಕಬ್ಬಿಣದ ಪುಡಿ, ಬೆಲ್ಲ ಇತ್ಯಾದಿ ವಸ್ತುಗಳನ್ನು ಸೇರಿಸುತ್ತಾರೆ. ಒಂದೇ ಸಲಕ್ಕೆ ನೀರಿನೊಡನೆ ಬಣ್ಣವು ತೊಳೆದು ಹೋಗಬಾರದೆಂದು ಅಂಟು ದೃವ್ಯವೊಂದರ ಜೊತೆಯಲ್ಲಿ ವರ್ಣಗಳ ಲೇಪನ ಮಾಡಲಾಗುತ್ತದೆ. ಕೈಮಗ್ಗದ ಬಟ್ಟೆಯ ಮೇಲೆ ಕಲಂಕಾರಿ ಪೇಂಟಿಂಗ್ ಮಾಡಿ ಸಿದ್ಧ ಉಡುಪು ಮಾಡುವಲ್ಲಿ ಸರಿ ಸುಮಾರು ೧೨ ಹಂತಗಳ ಕೆಲಸ ನಡೆಯುತ್ತದೆಯಂತೆ!! ನಾನು ಹೋದ ಸಮಯಕ್ಕೆ ಫ್ರೀ ಹ್ಯಾಂಡ್ ಕಲಂಕಾರಿ ಡಿಸೈನ್ ಯಾರೂ ಬರೆಯುತ್ತಾ ಇರದ ಕಾರಣ, ಆ ಅತಿವೇಗದ ಕಲಂಕಾರಿ ಪೇಂಟಿಂಗ್ ಚಾಣಾಕ್ಷತೆಯನ್ನು ನಾನು ನೋಡಲಾಗಲಿಲ್ಲ. ಸಾಮಾನ್ಯವಾಗಿ ಮೊದಲಿಗೆ ಕಪ್ಪು ವರ್ಣದಲ್ಲಿ ಅತ್ಯಂತ ಮನೋಜ್ಞವಾಗಿ ಅಷ್ಟೇ ಸುಲಲಿತವಾಗಿ ಡಿಸೈನ್ ಮತ್ತು ಚಿತ್ರಕಥೆಗಳನ್ನು ಚಿತ್ರಿಸಿ, ಅಂಟು ದ್ರವ್ಯಗಳನ್ನು ಹಚ್ಚಿ ಒಣಗಿಸಿ ಮತ್ತೊಮ್ಮೆ ತಿರುವಿ ಹಾಕಿ ಇತರ ಬಣ್ಣಗಳಿಂದ ಚಿತ್ತಾರಗಳನ್ನು ಸೃಷ್ಟಿಸುತ್ತಾರಂತೆ. ಇಲ್ಲಿ ಪ್ರತಿಯೊಂದು ಕೆಲಸವೂ ಹ್ಯಾಂಡ್ಮೇಡ್ ಮತ್ತು ಜೈವಿಕ ವಸ್ತುಗಳಿಂದ ತಯಾರು ಮಾಡಿದಂತವು..! ಹಾಗಾಗಿಯೇ ಈ ರೀತಿಯ ಫ್ಯಾಬ್ರಿಕ್ ಉಡುಪುಗಳು ಅತ್ಯಂತ ಹೊಳಪು ನೀಡುವಂತಹದ್ದಲ್ಲದಿದ್ದರೂ ತೊಟ್ಟಾಗ ಮಾತ್ರ ಹಿರಿಮೆ/ಗಣ್ಯ ಭಾವ ಉಂಟಾಗುತ್ತದೆ. ಇದೇ  ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅಪ್ಪಟ ಕಲಂಕಾರಿ ಉಡುಪುಗಳಿಗೆ ತುಸು ದರ ಹೆಚ್ಚಾದರೂ  ಎಲ್ಲಿಲ್ಲದ ಬೇಡಿಕೆ.

ಹೀಗೆ ಕಲಂಕಾರಿ ವರ್ಣಚಿತ್ರಗಳ ಶೈಲಿಯ ಫ್ಯಾಬ್ರಿಕ್ ಉತ್ಪನ್ನಗಳ ತಯಾರು ಮಾಡುವುದರ ಕುರಿತಾಗಿ ತಕ್ಕಮಟ್ಟಿಗೆ ತಿಳಿದುಕೊಂಡ ಬಗ್ಗೆ ಸಂತೋಷ ನನಗೆ ಸಿಕ್ಕಿತು. ತಮ್ಮ ಸೀಮಿತ ಶಕ್ತಿಯಲ್ಲಿ, ಸಣ್ಣ ಕೈಗಾರಿಕಾ ಉದ್ಯಮವೊಂದನ್ನು ಜೀವನೋಪಾಯಕ್ಕೆ ನಡೆಸುತ್ತ, ಸ್ಥಳೀಯ ಕಲೆಯೊಂದನ್ನು ಅಳಿಯದಂತೆ ಉಳಿಸಿಕೊಂಡು ಬರುತ್ತಿರುವ ಅವರುಗಳಿಗೆಲ್ಲ ಒಂದು ಥ್ಯಾಂಕ್ಸ್ ತಿಳಿಸಿ, ಅವರ ಬಳಿಯಿದ್ದ ಒಂದಕ್ಕಿಂತ ಒಂದು ಚಂದದ ಚಿತ್ರಗಳ ಬಟ್ಟೆಗಳನ್ನು ನೋಡಿ, ಅವುಗಳಲ್ಲಿ ನನಗೆ ಬೇಕಾದ್ದನ್ನು ಹೆಕ್ಕಿ, ಡೈರೆಕ್ಟ್ ಮೇಕರ್ಸ್ ಗಳಿಂದಲೇ ಕೊಂಡು ಬರುವಾಗ ಮನಸ್ಸಿನಲ್ಲೊಂದು ಧನ್ಯತಾ ಭಾವವಿತ್ತು..


ಈ ಕೆಳಗಿನ ಕೊಂಡಿ ಇಂಟರ್ನೆಟ್ ಆಧಾರಿತ ಕಾಲಂಕಾರಿ ಕಲೆಯ ವೀಡಿಯೋ ಆಸಕ್ತರಿಗಾಗಿ

https://www.youtube.com/watch?v=OoRij5jAyDY

ಸೋಮವಾರ, ಜೂನ್ 3, 2019

ಅಡುಗೆ ಆಟ ಮತ್ತು ಸ್ಲಾಯ್ಮ್

"ಹೇ ಇಲ್ನೋಡಿ ಹುಡ್ರಾ..ಈ ಎಲೆ ಇಂದ ಜೆಲ್ಲಿ ಮಾಡಕ್ ಬತ್ತು..ನಾವೆಲ್ಲಾ ಶಣ್ಣುಕಿದ್ದಾಗ  ಅಡುಗೆ ಆಟ ಆಡಕ್ಕಿದ್ದಲ್ಲಿ ಇದನ್ನೇ ಜೆಲ್ಲಿ ಇಡ್ಲಿ/ಕೇಕ್ ಅಂತೆಲ್ಲ ಮಾಡ್ತಿದ್ಯ.." ಎಂದು ತೋಟದ ಸಂಕದ (ದಾಟು) ಪಕ್ಕದಲ್ಲಿ ಕಂಡ ತೆಳ್ಳನೆಯ ಬಳ್ಳಿಯ  ತುಂಬಾ ಹರಡಿದ್ದ ಅಗಲ ಹಾರ್ಟ್ ಆಕೃತಿಯ ಎಲೆಗಳನ್ನು ನೋಡಿ, ನಾನು ಎಲ್ಲಿಲ್ಲದ ಹುಮ್ಮಸ್ಸಿನಿಂದ ಕೂಗಿಕೊಂಡೆ.. ಜೆಲ್ಲಿ ಎಂಬ ಪದ ಕಿವಿಗೆ ಬಿದ್ದ ತಕ್ಷಣಕ್ಕೆ ನನ್ನ ಮಗಳ ಜೊತೆಗೂಡಿ ಅಕ್ಕನ ಮಕ್ಕಳಿಬ್ಬರೂ ದಾಟುತ್ತಿದ್ದ ಸಂಕವನ್ನು ತೆರಗಾಲಿನಲ್ಲಿ ನಡೆದು ವಾಪಸು ನಾನಿದ್ದಲ್ಲಿಗೆ ಓಡಿ ಬಂದರು..'ಏನದು, ಹೇಗದು, ನೀವೆಲ್ಲ ಹೆಂಗೆ ಆಟಾಡ್ತಿದ್ದಿ.. ' ಎಂಬಿತ್ಯಾದಿ ಒಬ್ಬರಾದ ಮೇಲೆ ಒಬ್ಬರು ಪ್ರಶ್ನೆ ಕೇಳುತ್ತ ಆಶ್ಚರ್ಯದಿಂದ ಪಕ್ಕದಲ್ಲಿ ಕುಳಿತರು. ಅಡುಗೆ ಆಟ ಆಡದೆ ಯಾವ ಮಕ್ಕಳು ತಾನೇ ದೊಡ್ಡವರಾಗಿದ್ದಾರೆ ಹೇಳಿ..? ಆದರೂ, ನಮ್ಮ ಕಾಲದ ಅಡುಗೆ ಆಟ ಹೇಗಿತ್ತು, ಎಂದು ಒಂದಷ್ಟು ನನ್ನ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿಕೊಂಡೆ. ಆಗೆಲ್ಲ ಭಾವಯ್ಯಂದಿರ ಜೊತೆಗೂಡಿ, ಈ ಜೆಲ್ಲಿಯನ್ನು ಕೇಕ್ ನಂತೆ ರೂಪಿಸಿ, ಭರ್ಜರಿ ಅಲಂಕಾರ ಮಾಡಿ, ನಮ್ಮ ಮನೆಯಲ್ಲಿ ಆಚರಣೆಯಲ್ಲಿರದ ಹ್ಯಾಪಿ ಬರ್ತಡೇ ಪಾರ್ಟಿಯನ್ನು ಕೂಡ ನಾವು ನಮ್ಮ ಆಟಗಳಲ್ಲಿ ಎಷ್ಟು ಗ್ರಾಂಡ್ ಆಗಿ ಮಾಡುತ್ತಿದ್ದೆವು ಎಂಬಿತ್ಯಾದಿ ಕಥೆಗಳನ್ನು ರಸವತ್ತಾಗಿ ಹೇಳಿದ್ದೆ ತಡ, ಮಕ್ಕಳೆಲ್ಲ "ನಾವೂ ಮಾಡನ, ಲೆಟ್ಸ್ ಡೂ ಇಟ್ ಚಿಕ್ಕಿ.."(ತನ್ನ ಅಣ್ಣ-ತಂಗಿಯರ ಜೊತೆಗಿದ್ದಾಗ ಮಗಳಿಗೂ ಒಮ್ಮೊಮ್ಮೆ ನಾನು ಚಿಕ್ಕಿಯಾಗುತ್ತೇನೆ ;೦ ) ಎಂದು ಹುಮ್ಮಸ್ಸಿನಿಂದ ತಯಾರಾದರು. ಇಷ್ಟು ಉತ್ಸಾಹ ಸಿಕ್ಕ ಮೇಲೆ ಮಕ್ಕಳಿಗೆ ಒಂದು ಪ್ರಾತ್ಯಕ್ಷಿಕೆ ಕೊಡದೇ ಇದ್ದರೆ ಹೇಗೆ? ಸರಿ, ಪಟಪಟನೆ ಪ್ರಯೋಗವೊಂದು ಶುರುವಾಯಿತು.


ಈ ಮಕ್ಕಳಿಗೋ ಪೇಟೆಯಿಂದ ತಂದು ಆಡಿದ್ದ ಸ್ಲಯ್ಮ್ ನ್ನು ನೆನೆದು, ಇದು ಹೇಗೆ ಕಾಣಬಹುದೋ ಏನೋ ಎಂಬ ಕುತೂಹಲ. ಮಕ್ಕಳೆಲ್ಲ ಸೇರಿಕೊಂಡು ಈ ಹಸಿರು ತೆಳ್ಳನೆಯ ಬಳ್ಳಿಯ ಸಾಕಷ್ಟು ಎಲೆಗಳನ್ನು ಕೊಯ್ದರು. ಜೆಲ್ಲಿ ಮಾಡುವ ವಿಧಾನ ಶುರುವಾಯಿತು. ಒಬ್ಬರು ಪಾತ್ರೆಯಲ್ಲಿ ಸ್ವಲ್ಪ ನೀರು ತಂದರೆ, ಇನ್ನೊಬ್ಬರಿಗೆ ಎಲೆಗಳನ್ನು ಸಣ್ಣ ಸಣ್ಣ ಚೂರುಗಳಾಗಿ ಮಾಡಲು ತಿಳಿಸಲಾಯಿತು. ಆ ಎಲೆಯ ಚೂರುಗಳನ್ನು, ಅದರ ಲೋಳೆಯ ಅಂಶ ಸಾಕಷ್ಟು ಹೊರಬಂದು ನೀರಿನೊಡನೆ ಸೇರಿಕೊಳ್ಳುವ ವರೆಗೆ ಹಿಸುಕಿ ತೋರಿಸಿದ್ದಾಯಿತು. ಮಕ್ಕಳಿಗೂ ಮಾಡಲು ಕೊಟ್ಟಾಗ, ಆ ನುಣುಪಾದ ಲೋಳೆ ದ್ರವ್ಯವ ಮುಟ್ಟುವ ಅನುಭವವೇ ಅವರಿಗೆ ಖುಷಿ ಕೊಡುತ್ತಿತ್ತು. ನಾ ಮುಂದು ತಾ ಮುಂದು ಎಂದು ಪ್ರತಿಯೊಬ್ಬರೂ ಮುಗಿಬಿದ್ದು, ಆ ಎಲೆಗಳ ರಸ ನೀರಿನೊಡನೆ ಮಿಳಿತಗೊಂಡು ಗಾಢ ಹಸಿರು ಬಣ್ಣಕ್ಕೆ ತಿರುಗುವ ವರೆಗೆ ಕಲಡಿದರು. ಈ ಜೆಲ್ ಜ್ಯುಸ್ ಎರಕ ಹೊಯ್ಯಲು(ಅಚ್ಛನ್ನಾಗಿ ತಯಾರಿಸಲು)  ನಮ್ಮ ಅಡುಗೆ ಆಟದ ಸಾಂಪ್ರದಾಯಿಕ ಪಾತ್ರೆಗಳಲ್ಲಿ ಒಂದಾದ ತೆಂಗಿನ ಕರಟವನ್ನೇ ಹುಡುಕಿಕೊಂಡು ಬಂದು ಬಳಸಲಾಯಿತು. ಕರಟದ ತುಂಬಾ ಹಸಿರು ರಸವನ್ನು ಹೊಯ್ದು, "ಇನ್ನು ಸ್ವಲ್ಪ ಹೊತ್ತು ಇದನ್ನು ಗಟ್ಟಿಯಾಗಕ್ಕೆ ಬಿಡಕ್ಕು..ಯಾರೂ ಮುಟ್ಟಲಿಲ್ಲೆ.." ಎಂಬೆಲ್ಲ ಸೂಚನೆಯೊಂದಿಗೆ ಕರಟಗಳನ್ನು ಒಂದೆಡೆ ತಟಸ್ಥವಾಗಿ ನಿಲ್ಲಿಸಿ ಇಟ್ಟೆವು.  ಮಕ್ಕಳಿಗೋ ಇವೆಲ್ಲ ಹೊಸ ಅನುಭವ. "ಎಷ್ಟೊತ್ತು ವೇಟ್ ಮಾಡಕ್ಕೂ ಚಿಕ್ಕಿ?..ಅಮ್ಮ ಈಗ ಆಗಿರ್ತ..?" ಎಂದು ಹತ್ತತ್ತು ನಿಮಿಷಕ್ಕೂ ಎಲ್ಲರೂ ಬಾಲ ಸುಟ್ಟ ಬೆಕ್ಕಿನಂತೆ  ಹಿಂದೆ ಮುಂದೆ ಓಡಾಡುತ್ತ, ತಡೆಯಲಾಗದ ತಮ್ಮ ಕೌತುಕಕ್ಕೆ ಮತ್ತೊಂದಷ್ಟು ಪ್ರಶೆಗಳ ಸುರಿಮಳೆ ಸುರಿಯುತ್ತಿದ್ದರು.


ಅವರುಗಳ ಅರಸೊಲವು ತಡೆದು ಹಿಡಿಯಲು, ಅವರನ್ನೆಲ್ಲ ಕೂರಿಸಿಕೊಂಡು ನಮ್ಮ ಕಾಲದ ಅಡುಗೆ ಆಟದ ಕಥೆಗಳನ್ನೆಲ್ಲ ಹೇಳಲು ಪ್ರಾರಂಭಿಸಿದೆ. ಮಸ್ತಕವೆಂಬ ಪುಸ್ತಕದಲ್ಲಿನ ಪುಟಗಳು, ಹಾಗೇ ಹಿಂದಕ್ಕೆ ತಿರುವಿ ಅದೆಷ್ಟೋ ನೆನಪುಗಳನ್ನು ಹೆಕ್ಕಿಕೊಡುತ್ತಿತ್ತು... ರಜೆ ಶುರುವಾದ ತಕ್ಷಣ ಅಜ್ಜನ ಮನೆಗೆ ಒಡ್ಡುತ್ತಿದ್ದ ನಾನು, ನನ್ನ ಮಾವನ ಮಕ್ಕಳ,  ಒನ್ ಆಫ್ ದಿ ಪಾರ್ಟ್ನರ್ ಇನ್ ಕ್ರೈಮ್.. ;) ಅಜ್ಜನ ಮನೆಯಲ್ಲಿ ಅಜ್ಜನ ಶಿಸ್ತಿನ ಹಿಡಿತ ತುಸು ಹೆಚ್ಚೇ ಇತ್ತು.. ನಾವು ಮಕ್ಕಳು ಬಿಸಿಲು ಹೊತ್ತಿನಲ್ಲಿ ಅಲ್ಲಿ ಇಲ್ಲಿ ಬೇಕಾದ ಕಡೆ ಸುತ್ತುವಂತಿರಲಿಲ್ಲ. ಮಧ್ಯಾಹ್ನ ಊಟವಾದ ಕೂಡಲೇ "ಒಂದು ಗಳಿಗೆ ಮಲಗಲೇ ಬೇಕು" ಎಂಬ ನಿಯಮಗಳೆಲ್ಲ ನಮ್ಮ ಮೇಲೆ ಪ್ರತಿದಿನವೂ ಹೇರಿಕೆಯಾಗುತ್ತಿತ್ತು.. ನಾವೋ ಪಟಿಂಗರು :-P :-)..  "ಅಮ್ಮುಮ್ಮನ್ ಜೊತೆ ಮಲ್ಕ್ಯತ್ಯ.." ಎಂದು ದೊಡ್ಡಗುಬ್ಬೆಯಲ್ಲಿ (ನಡುಮನೆ) ಉದ್ದಕ್ಕೆ ಹಾಸಿದ ಕಂಬಳಿ ಮೇಲೆ ಊಟವಾದ ತಕ್ಷಣ ಅಡ್ಡ ಬೀಳುತ್ತಿದ್ದೆವು. ನೋಡುವವರಿಗೆ ನಮ್ಮದು ಭಾರೀ ಗಟ್ಟಿ ನಿದ್ದೆ.. ಮನೆಕೆಲಸ ಮುಗಿಸಿ ಸುಸ್ತಾಗಿ ಒರಗುತ್ತಿದ್ದ ಅಮ್ಮುಮ್ಮಂಗೆ  ಅರೆ ಕ್ಷಣದಲ್ಲಿ ನಿದ್ದೆ ಬರುತ್ತಿತ್ತು. ಅಜ್ಜ, ಮಾವ, ಅತ್ತೆ ಎಲ್ಲರೂ ಮಲಗಿಯಾದ ಸುಳಿವು ಸಿಕ್ಕ ಕೂಡಲೇ ನಾವೆಲ್ಲಾ ಸಂಜ್ಞೆ ಮಾಡಿಕೊಂಡು ಒಬ್ಬೊಬ್ಬರಾಗೆ ಎದ್ದು ಹೋಗಿ ಮನೆಯ ಹಿಂದಿನ ಕಡಿಮಾಡಿನಲ್ಲಿಸೇರಿಕೊಳ್ಳುತ್ತಿದ್ದೆವು. ಅದು ನಮ್ಮ ಅಡುಗೆ ಆಟ ಆಡುವ ಜಾಗ..! ಸಗಣಿ ಬಳಿದು ಹಸನು ಮಾಡಿದ ಮಣ್ಣಿನ ನೆಲವನ್ನು, ಕಟ್ಟಿಗೆ ಕೋಲಿಂದ ಸರಿ ಸಮಾನಾಗಿ ಗೆರೆ ಹೊಡೆದು ಪ್ರತಿಯೊಬ್ಬರ ಮನೆಯ ಜಾಗ ಇಂತಿಷ್ಟು ಎಂದು ಹಂಚಿಕೊಳ್ಳುತ್ತಿದ್ದೆವು. ಆಟಕ್ಕೆ ಅಡುಗೆ ಪಾತ್ರೆಗಳನ್ನು ಒಟ್ಟು ಮಾಡುವುದು ಕೂಡ ಅಷ್ಟೇ ಪರಾಕ್ರಮದ ಕೆಲಸವಾಗಿತ್ತು. ಅಜ್ಜ ಪುರೋಹಿತರಾಗಿದ್ದರಿಂದ ಅವರಿವರು ಬಂದು ನಮಸ್ಕರಿಸಿ ನೀಡುತ್ತಿದ್ದ ಕಾಶೀ ತೀರ್ಥದ ಗಿಂಡಿಗಳು ಅಜ್ಜನ ಮನೆಯಲ್ಲಿ ಸುಮಾರಾಗಿ ಲಭ್ಯವಿದ್ದವು. ನಾವು ಸ್ವಲ್ಪವೂ ಸಪ್ಪಳ ಮಾಡದಂತೆ ಹುಷಾರಾಗಿ ನಮ್ಮ ಕೆಲಸ ಶುರು ಮಾಡುತ್ತಿದ್ದೆವು. ಅಜ್ಜನ ಕೋಣೆಯ ಪಕ್ಕದಲ್ಲಿದ್ದ ಅಕ್ಕಿ ಮರಿಗೆಯ ಪಕ್ಕದ ಮರಿಗೆಯಲ್ಲಿ,  ಇತರ ತಾಮ್ರದ ಚೊಂಬು ತಟ್ಟೆಗಳ ಜೊತೆಯಲ್ಲಿರುತ್ತಿದ್ದ ಪುಟ್ಟ ಪುಟ್ಟ ಕಾಶೀ ಗಿಂಡಿಗಳನ್ನು, ಅರೆಮಬ್ಬು ಬ್ಯಾಟರಿ ಹಿಡಿದು ಹುಡುಕಿ ತೆಗೆಯುವುದು ನಮಗೆ ಬಹು ದೊಡ್ಡ ಸಾಹಸ ಕಾರ್ಯವಾಗುತ್ತಿತ್ತು. ಕತ್ತಲಲ್ಲಿ ಮರಿಗೆ ಒಳಗೆ ಒಬ್ಬ ಇಳಿದುಕೊಂಡು ಗಿಂಡಿ ಹುಡುಕುವವ, ಮತ್ತೊಬ್ಬ ಬ್ಯಾಟರಿ ಬಿಡುವವ, ನಾನು ಇನ್ನೊಬ್ಬಳು ಎತ್ತಿಕೊಟ್ಟ ಗಿಂಡಿ ಸಂಗ್ರಹಿಸುವವಳು.. ಇದರ ಮಧ್ಯೆ ಬೆಳಕು ಕಡಿಮೆಯಿರುವ ಆ ಕೋಣೆಯ ಕತ್ತಲಲ್ಲಿ, ಏನೇನೋ ಗುಸು ಗುಸು ಮಾತನಾಡುವಷ್ಟರಲ್ಲಿ ಕೈ ತಪ್ಪಿ ಒಂದಲ್ಲ ಒಂದು ಗಿಂಡಿ ನೆಲಕ್ಕೆ ಬಿದ್ದು ನಾದ ಹೊರಡಿಸುತ್ತಿದ್ದವು. ಅದು ನಾವಲ್ಲ ಎಂದು ತೋರಿಸುವುದಕ್ಕೆ ಮ್ಯಾವ್ ಎಂದು ಕೂಗುವವ ಒಬ್ಬ. ಆ ಶಬ್ದಕ್ಕೆ ಕಿಸಕ್ಕನೆ ನಗುವವ ಇನ್ನೊಬ್ಬ.. ಅಷ್ಟರಲ್ಲಿ ಅಜ್ಜನ ಕೋಣೆಯಿಂದ "ಯಾರ್ರ.." ಎಂದು ಅರೆನಿದ್ದೆಯಲ್ಲಿಕೇಳಿ ಬರುವ ಧ್ವನಿಗೆ ಹೆದರಿ, ಅರೆಕ್ಷಣಕ್ಕೆ ಅಲ್ಲಿಂದ ಕಾಲ್ಕಿತ್ತು ಹೊರಗೋಡಿ, ಆ ವರೆಗೆ ಕಟ್ಟಿಕೊಂಡಿದ್ದ ನಗುವನ್ನೆಲ್ಲ ನಕ್ಕು ಖಾಲಿ ಮಾಡಿ, ಮತ್ತೆ ಸ್ವಲ್ಪ ಸಮಯ ಬಿಟ್ಟು ಮರಳಿ ನಮ್ಮ ಕಾರ್ಯಾಚರಣೆ ಮುಂದುವರೆಸುತ್ತಿದ್ದೆವು.

ಹೀಗೆ ಕಷ್ಟಪಟ್ಟು ಸಂಗ್ರಹಿಸಿದ ಅಡುಗೆ ಪಾತ್ರೆಗಳನ್ನೆಲ್ಲ ಎಲ್ಲರಿಗೂ ಸಮಾಧಾನವಾಗುವಂತೆ ಸರಿಸಮಾನವಾಗಿ ಹಂಚಿಕೊಳ್ಳುವುದು ಕೂಡ  ಅಷ್ಟೇ ತೊಡಕಿನ ಕಾರ್ಯಭಾರವಾಗಿತ್ತು. ಪ್ಲಾಸ್ಟಿಕ್ಕುಗಳ ಹಾವಳಿ ಆಗಿನ್ನೂ ಪ್ರಾರಂಭವಾಗಿರಲಿಲ್ಲ. ಹಾಗಾಗಿ ದೊಡ್ಡ ಸಣ್ಣ ಕಾಶೀ ಗಿಂಡಿಗಳು ನಮ್ಮ ಅಡುಗೆಯ ದ್ರವ ಪದಾರ್ಥಗಳಾದ ಸಾರು ಸಾಂಬಾರು ಖೀರುಗಳನ್ನು ಮಾಡಲು ಹಂಚಿಕೆಯಾಗುತ್ತಿತ್ತು. ಕಟ್ಟಿಗೆ ರಾಶಿಯ ಪಕ್ಕ ಬಿದ್ದಿರುತ್ತಿದ್ದ ತೆಂಗಿನ ಚಿಪ್ಪುಗಳನ್ನು ಆರಿಸಿ ತಂದು ಕಲ್ಲುನಿಂದ ಉಜ್ಜಿ ನುಣುಪು ಮಾಡಿ ಅವುಗಳನ್ನು ಪಾತ್ರೆಗಳನ್ನಾಗಿ ಮಾಡಿಕೊಳ್ಳುತ್ತಿದ್ದೆವು. ಹುಂಬಾಳೆ (ಅಡಿಕೆ ಹಾಳೆ), ಆಲದ ಎಲೆ, ಅರಳಿ ಎಲೆ ಹಲಸಿನ ಎಲೆ ಇತರ ಗಿಡಗಂಟೆಗಳ ಎಲೆಗಳನ್ನು ಕೊಯ್ದು ತಂದು ಸಣ್ಣ ಪೊರಕೆ ಕಡ್ಡಿಗಳನ್ನು ಅಲ್ಲಲ್ಲಿ ಪೋಣಿಸಿ, ಜೋಡಿಸಿ ದೊಡ್ಡ ದೊನ್ನೆ ಗಳನ್ನಾಗಿ ಪರಿವರ್ತಿಸಿ ಅವು ನಮ್ಮ ಇತರ ಖಾದ್ಯಗಳನ್ನು ಬಡಿಸಲು ಬೇಕಾಗುವ ಪಾತ್ರೆಗಳನ್ನಾಗಿ ಮಾಡಿಕೊಳ್ಳುತ್ತಿದ್ದೆವು. ಊಟಕ್ಕೆ ಬಾಳೆ ಎಲೆಯಂತೂ ಧಾರಾಳವಾಗಿ ಸಿಗುತ್ತಿತ್ತು. ಜಗಳ, ನ್ಯಾಯ ಅನ್ಯಾಯಗಳ ನಡುವೆ ಅಂತೂ ಇಂತೂ ಅಡುಗೆ ಪಾತ್ರೆ ಹಂಚಿಕೆಗಳು ಮುಗಿದು ಆಟದ ಪ್ರಾರಂಭವಾಗುತ್ತಿತ್ತು.

      (ಸಾನ್ವಿಯ ಊಟದ ಆಟದ ಸಾಂಧರ್ಬಿಕ ಚಿತ್ರ )

ಅಲ್ಲಿಂದ ಶುರು ನಮ್ಮ ಕ್ರಿಯೇಟಿವಿಟಿ. ಒಬ್ಬೊಬ್ಬರು ಒಂದೊಂದು ಸಂದರ್ಭದ ಕಲ್ಪನೆ ಮಾಡಿಕೊಂಡು ಒಬ್ಬರ ಮನೆಗೊಬ್ಬರು ಔತಣಕ್ಕೆ ಆಹ್ವಾನಿಸಿ, ತಾವು ತಯಾರಿಸಿದ ವೈವಿಧ್ಯಮಯ ಖಾದ್ಯಗಳನ್ನು ಉಣಬಡಿಸಿವುದೇ ಆಟ. ಸಾಮಾನ್ಯ ಆಟವಲ್ಲವದು, ತರಹೇವಾರಿ ಅಡುಗೆಗಳನ್ನು,  ಚಿತ್ರ ವಿಚಿತ್ರ ಹೊಸ ಹೆಸರುಗಳಿಂದ ನಾಮಕರಣ ಮಾಡಿ, ಉಣ್ಣಲು ಕೊಟ್ಟು ತೋರಿಸುವ ನಮ್ಮ ಟ್ಯಾಲೆಂಟ್ ನ ಪ್ರದರ್ಶನ. ಜಗಲಿ ಅಂಗಳದಲ್ಲಿನ ತ್ಯಾರಣ ಹೂಗಳಿಂದ ಹಿಡಿದು, ಹಿತ್ತಲಿನ ಕೈತೋಟದ ಹೂವು ಮತ್ತು ಎಲೆಗಳು, ತರಹೇವಾರಿ ದಾಸವಾಳ ಗಿಡಗಳ ಹೂಗಳು, ಕಾಡು ಜಾತಿಯ ಹೂ ಹಣ್ಣು ಕಾಯಿಗಳು ಏನೇನು ಕೈಗೆ ಸಿಗುತ್ತದೋ ಎಲ್ಲವನ್ನೂಅಡುಗೆಗೆ ಬಳಸುತ್ತಿದ್ದೆವು. ಕ್ರೋಟನ್ ಗಿಡಗಳ ಚುಕ್ಕಿ ಚುಕ್ಕಿ ಎಲೆಗಳನ್ನು ಪುಟ್ಟ ಪುಟ್ಟ ವೃತ್ತರಾಕಾರದಲ್ಲಿ ಕತ್ತರಿಸಿ ಮಸಾಲಾ ಪಾಪಡ್ ಮಾಡಿದರೆ, ಕೆಲವು ಬಣ್ಣಗಳನ್ನು ಹಿಂಡುವ ಹೂಗಳಿಂದ ತರಹೇವಾರಿ ಬಣ್ಣಕ್ಕೆ ತಕ್ಕಂತೆ ಹೆಸರಿಟ್ಟು ಜ್ಯೂಸ್, ಸಾರು ಸಾಂಬಾರು ಪಾಯಸ  ಇತ್ಯಾದಿ ಮಾಡುತ್ತಿದ್ದೆವು. ಕೇಪಳ ಹೂವಿನಿಂದ ಸಿಹಿಯಾದ ಕೇಸರಿ ತಯಾರಾದರೆ, ಮಣ್ಣು ನೀರು ಕಲೆಸಿ ಮಾಡಿದ ಹಿಟ್ಟಿನಿಂದ, ಪ್ರಯೋಗಿಕ ಕಡುಬು ತಯಾರಾಗುತ್ತಿತ್ತು. ಕಾಯಿ ಬೀಜಗಳು ಅಕ್ಕಿ-ಅನ್ನದ ಪದಾರ್ಥಗಳಾದರೆ, ಬಣ್ಣ ಬಣ್ಣದ ಎಲೆಗಳಿಂದ ಕಾಯಿ ಪಲ್ಲೆಗಳು ತಯಾರಾಗುತ್ತಿದ್ದವು. ಇನ್ನು ತೋಟಕ್ಕೆ, ತೋಟದ ಬಾವಿಯ ಪಕ್ಕದಲ್ಲಿನ ಕಾಡು ಗಿಡಗಳ ಎಲೆಗಳಿಂದ ಅನೇಕಾನೇಕ ಬಗೆಯ ಖಾದ್ಯಗಳು ತಯಾರಾಗುತ್ತಿದ್ದವು. ವಿವಿಧವರ್ಣಗಳ ಮಣ್ಣುಗಳನ್ನು ಸಂಗ್ರಹಿಸಿ ಅದರಿಂದ ನಾನಾ ತರಹದ ಅಡುಗೆ ತಯಾರಿಸುತ್ತಿದ್ದೆವು.. ಪ್ರತಿಸಲವೂ ಹೊಸ ಹೊಸ ಅನ್ವೇಷಣೆ ನಡೆಯುತ್ತಿತ್ತು.. ಮಾವನ ಮಗನೆಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಕಲ್ಲುಗಳ ಮಧ್ಯೆ ಒಂದಷ್ಟು ಒಣಗಿದ ತೆಂಗಿನ ಗರಿಗಳನ್ನಿಟ್ಟು, ಸೀಮೆ ಎಣ್ಣೆ, ದೀಪದ ಬುಡ್ಡಿ ಯನ್ನು ರೆಡಿ ಇಟ್ಟು, ನಮ್ಮೆದುರೇ, ಸೊಪ್ಪು ನೀರು ಹಾಕಿಟ್ಟುಕೊಂಡಿದ್ದ ಕಾಶೀ ಗಿಂಡಿಯನ್ನು ಬೆಂಕಿ ಹಚ್ಚಿ ಕಾಯಿಸಿ, ವೆಜೆಟೇಬಲ್ ಸೂಪ್ ಮಾಡಿ ಬಡಿಸಿದ್ದಾಗ, ನಾನು ಮತ್ತು ನನ್ನ ಭಾವಯ್ಯ, ಹಾ ಎಂದು ಉದ್ಗರಿಸಿ ಅಚ್ಚರಿಗೊಂಡಿದ್ದೆವು. ಇದರ ಜೊತೆಯಲ್ಲಿ 'ಪಥ' ಎಂಬ ಬಳ್ಳಿಯಲ್ಲಿನ ಎಲೆಯನ್ನು ನೀರಿನಲ್ಲಿ ಹೊಸಕಿ ಅದರ ಲೋಳೆ ದ್ರವದಿಂದ ಜೆಲ್ಲಿಯನ್ನು ಮಾಡುವ ಪ್ರಯೋಗವೂ ಕಂಡು ಹಿಡಿದುಕೊಂಡು, ಮಾಡಿ ಸಂಭ್ರಮಿಸಿದ್ದೆವು.. ಹೀಗೆ ಸಾಗುತ್ತಿತ್ತಲಿತ್ತು ನನ್ನ ನೆನಪಿನ ಬಾಲ್ಯದ ರೋಚಕ ಕತೆಗಳು. ಮಕ್ಕಳೋ ಮಧ್ಯೆ ಮಧ್ಯೆ ಎದ್ದು ಹೋಗಿ ಜೆಲ್ಲಿ ಆಗಿರಬಹುದೇ ಇಲ್ಲವೇ ಎಂದು ಹಣುಕಿಕೊಂಡು ಬರುತ್ತಿದ್ದರು. ಮನೆಯಲ್ಲೇ ಮಾಡಬಹುದಾದ ಸ್ಲಾಯ್ಮ್  (ಜೆಲ್ಲಿ) ಎಂಬುದು ಅವರಿಗೆ ಒಂದು ಸಾಮಾನ್ಯ ವಿಷಯವಾಗಿರಲಿಲ್ಲ.. :-) :-)

ಅಷ್ಟರಲ್ಲಿ ನಾವು ಯಾವ ನೆಂಟರ ಮನೆಗೆ ಹೋಗಿದ್ದೆವೋ ಅವರ ಮನೆಯ ಅಕ್ಕಯ್ಯ ಈ ಬಳ್ಳಿಯ ಔಷಧೀಯ ಮಹತ್ವಗಳ ಬಗ್ಗೆಯೂ  ನಮಗೆತಿಳಿಸಿದರು. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಬಳಸುವ ಬಸಳೆ ಎಲೆಯಂತೆ, ಈ ಬಳ್ಳಿಯ ಬೇರು, ನಾರು ಮತ್ತು ಎಲೆಗಳನ್ನು ಕಷಾಯ ಮಾಡಿ ಕುಡಿಯಬಹುದು. ಚರ್ಮ ಸಂಬಂಧಿ ಖಾಯಿಲೆಗಳಿಗೆ ಇದರ ರಸದ ಲೇಪನದ ಉಲ್ಲೇಖ ಆಯುರ್ವೇದದಲ್ಲಿದೆ. ಹಾವು ಕಚ್ಚಿ ಆದ ಗಾಯಕ್ಕೆ ಈ ಎಲೆಯನ್ನೂ ಕೂಡ ಔಷಧಕ್ಕೆ ಬಳಸುತ್ತಾರೆ, ದೇಹದಲ್ಲಿನ ವಿಷಮ (ಟಾಕ್ಸಿಕ್) ವಸ್ತುಗಳನ್ನು ಹೊರಹಾಕಲು ಅತ್ಯಂತ ಸಹಕಾರಿ ಹೀಗೆ ಅನೇಕ ವಿಚಾರಗಳನ್ನು ತಿಳಿಸಿದ ಮೇಲಂತೂ ನಮಗೆ ಈ ಬಳ್ಳಿಯ ಮೇಲೆ ಕುತೂಹಲ ಮತ್ತು ಗೌರವ ಹೆಚ್ಚಿತು..

ಹೀಗೆ ನಮ್ಮ ಕಾಲದ ಆಟದ ಕುರಿತಾಗಿ ಇವಿಷ್ಟನ್ನೆಲ್ಲ ನೆನಪಿಸಿಕೊಳ್ಳುತ್ತಾ ಸಂಭ್ರಮ ಪಡುತ್ತಿರುವಾಗಲೇ, ತನ್ನ ಕಾತುರತೆ ತಡೆಯಲಾರದೆ ಮಗಳು ಇನ್ನೂ ಗಟ್ಟಿಯಾಗಿರದ ಜೆಲ್ಲಿಯನ್ನು ಮತ್ತೆ ಮತ್ತೆ ಮುಟ್ಟಿ ಅಧ್ಯಯನ ಮಾಡಿ ಕೈಯಲ್ಲಿ ಹಿಡಿದುಕೊಳ್ಳುವ ತರಾತುರಿಯಲ್ಲಿ ತೆಂಗಿನ ಕರಟದಿಂದ ಹೊರತೆಗೆಯಲು ತಿಳಿಯದೇ, ಅದು ಒಡೆದು ಚೂರಾಗಿತ್ತು.. ಅಲ್ಲಿಯವರೆಗೆ ಒಮ್ಮೆಲೇ ಕಾದುಕೊಂಡಿದ್ದ ಕುತೂಹಲ ಮುದುಡಿ, ಮಕ್ಕಳಿಗೆ ಅತೀವ ನಿರಾಸೆಯಾದರೂ, ಅರ್ಧಂಬರ್ಧ ಗಟ್ಟಿಗೊಂಡಿದ್ದ ಆ ಲೋಳೆ ಹಿಂಡಿಯನ್ನೇ ಹಿಡಿದು ಆಟವಾಡಿಕೊಂಡರು.. ನನಗೋ ಆಗಷ್ಟೇ ನನ್ನ ಆಟಗಳ ನೆನಪು ಹಸಿರಾಗಿ ಗಾಢವಾಗುತ್ತಿದ್ದರಿಂದ, ಮಕ್ಕಳಿಗೆ ಮತ್ತೊಮ್ಮೆ ಸಂಪೂರ್ಣ ಸ್ಲಾಯ್ಮ್ ಮಾಡಿ ತೋರಿಸಿಯೇ ಬಿಡುವ ಛಲ ಹತ್ತಿ, ಎಲೆಗಳನ್ನು ಸಂಗ್ರಹಿಸಿ ತಂದು ಜೆಲ್ಲಿ ತಯಾರು ಮಾಡುವ ವಿಧಿ ವಿಧಾನಗಳನ್ನು ಪುನರಾವರ್ತಿಸಿದೆ.. ಮತ್ತು ಈ ಸರ್ತಿ ಮಕ್ಕಳಿಗೆ ಹಿಡಿದುಕೊಳ್ಳಲು ತೆಗೆಯಲು ಸುಲಭವಾಗುವಂತೆ ಲೋಟಗಳಲ್ಲಿ ತುಂಬಿಸಿಟ್ಟೆ.. ಅರ್ಧ ದಿನ ಕಳೆದಿತ್ತು. ಇತರ ಆಟಗಳನ್ನಾಡುತ್ತಿದ್ದ ಮಕ್ಕಳಿಗೆ ರೆಡಿಯಾದ ಜೆಲ್ಲಿ ಇಡ್ಲಿಯನ್ನು ಕೊಟ್ಟಾಗ ಅವರುಗಳಿಗಾದ ಸಂತೋಷ ಅಷ್ಟಿಷ್ಟಲ್ಲ.. ಇಷ್ಟೇ ಸಂತೋಷ ಅಂದು ನಾವೂ ಪಟ್ಟಿದ್ದೆವಿರಬೇಕು ಎಂದು ನಮ್ಮ ಮುಖದಲ್ಲಿ ಮಕ್ಕಳಷ್ಟೇ ನಗು ತುಂಬಿಕೊಂಡಿತ್ತು..

ಹಾಗೆಂದು ಖಂಡಿತ ಇದು ಕೇವಲ ಆಟದ ವಸ್ತುವಾಗಿ ಬಳಕೆ ಮಾಡುವುದಕ್ಕೆ ಎಂಬರ್ಥವಲ್ಲ.. ಎಷ್ಟೋ ಔಷಧೀಯ ಗುಣಗಳುಳ್ಳ ಈ ಸಸ್ಯವನ್ನು ಮನೆಯಲ್ಲಿ ಸಾಧ್ಯವಾದರೆ ನೆಟ್ಟು ಬೆಳೆಸಿಕೊಳ್ಳುವ ಜವಾಬ್ಧಾರಿ ಕೂಡ ನಮ್ಮ ಮೇಲಿದೆ..