ಸೋಮವಾರ, ಫೆಬ್ರವರಿ 12, 2024

ಮಕ್ಕಳ ಮನಿ ಮ್ಯಾನೇಜ್ಮೆಂಟ್

ಮಗಳ ಶಾಲೆಯಲ್ಲಿ, ಆರನೇ ತರಗತಿಯ ಮೇಲ್ಪಟ್ಟ ಮಕ್ಕಳು ತಮಗೆ ಆಸಕ್ತಿಯಿರುವ ಸಾಮಗ್ರಿ ಅಥವಾ ಸೇವೆಗಳ ಅಂಗಡಿಗಳನ್ನು ಹಾಕಿದ್ದ ಎಕ್ಷಿಬಿಷನ್ ಕಮ್ ಸೇಲ್ ಕಾರ್ಯಕ್ರಮವಿತ್ತು. ವಿವಿಧ ಬಗೆಯ ತಿಂಡಿಗಳು, ಆಟಗಳು, ಕ್ರಾಫ್ಟ್, ಮೆಹಂದಿ, ಟ್ಯಾಟೂ, ಹೀಗೆ ನಾನಾ ಬಗೆಯ ವ್ಯಾಪಾರ ವಹಿವಾಟು ಎಲ್ಲವೂ ಮಕ್ಕಳಿಂದಲೇ. ಮಾರಾಟದ ವಸ್ತುಗಳ ನಿಗದಿತ ಬೆಲೆ, ಚೌಕಾಸಿ ಬೆಲೆ, ಅಚ್ಚುಕಟ್ಟಾದ ಬೋರ್ಡ್ಗಳು,  ದುಡ್ಡು ಚಿಲ್ಲರೆಗಳ ವಹಿವಾಟು, ಖರ್ಚಾದ ವಸ್ತುಗಳ ಪಟ್ಟಿ ಮತ್ತು ತಮಗೆ ಸಂದುತ್ತಿರುವ ದುಡ್ಡಿನ ಲೆಕ್ಕಾಚಾರ ಎಲ್ಲದರ ದಾಖಲೆ ಬರೆದುಕೊಂಡು ತಮಗೆಷ್ಟು ಲಾಭ ಸಂದಿದೆ ಇತ್ಯಾದಿ ತಮ್ಮ ತಮ್ಮಲ್ಲೆ ಮಾತುಕತೆ ಮಾಡಿಕೊಳ್ಳುತ್ತಿದ್ದ ಮಕ್ಕಳ ನೋಡಿ ಸಂತೋಷವಾಯಿತು. ಅಲ್ಲಿ ಮಕ್ಕಳ ಆರ್ಥಿಕ ಸಾಕ್ಷರತೆ ಪ್ರಾಯೋಗಿಕವಾಗಿ ಕಂಡುಬರುತ್ತಿತ್ತು. 



ಆರ್ಥಿಕ ಸಾಕ್ಷರತೆ ಎಂದರೇನು?

ನಾವು ಹೆಚ್ಚಿನ ಭಾರತೀಯ ಪೋಷಕರು ನಮ್ಮ ಮಕ್ಕಳು ಹಣವನ್ನು ನಿಭಾಯಿಸಲು ಅಥವಾ ಅದರ ಕುರಿತು ಮಾತನಾಡಲು ಇನ್ನೂ ತುಂಬಾ ಚಿಕ್ಕವರು ಎಂದು ಭಾವಿಸುತ್ತೇವೆ. ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎಂಬ ಅಸಡ್ಡೆಯ ಮಾತು, ಮಕ್ಕಳಲ್ಲಿ ಅವರಲ್ಲಿನ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಮುಂದೆ ಹದಿಹರೆಯದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಜ್ಞಾನ ಇಲ್ಲದೆ ಮಕ್ಕಳು ಕೆಲವೊಮ್ಮೆ ವಂಚನೆಗೆ ಗುರಿಯಾಗುವ ಸಾಧ್ಯತೆಯಿರುತ್ತದೆ.  ಅಂತೆಯೇ ಕೆಲವರ ಮನೆಯಲ್ಲಿ ಸ್ವೇಚ್ಛೆಯ ಬದುಕು ಅಭ್ಯಾಸವಾಗಿದ್ದರೆ, ಮಕ್ಕಳಿಗೆ ದುಡ್ಡಿನ ಬೆಲೆಯೇ ಅರಿವಿಗೆ ಬರದಂತೆ ಅವರು ಕೇಳಿದ್ದೆಲ್ಲ ಕೊಡಿಸುವ, ಪಾಕೆಟ್ ಮನಿ ಟ್ರೆಂಡ್ ಎಂಬ ಕಾರಣಕ್ಕೆ ಅದರ ಉಳಿತಾಯದ ಸದ್ಬಳಕೆಯ ಅರಿವು ನೀಡದೆ ಕೊಡುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಇಂತಹ ಮಕ್ಕಳಿಗೆ ಮುಂದೆ ಭವಿಷ್ಯದಲ್ಲಿ ತಾವಾಗಿಯೇ ಹಣ ಸಂಪಾದನೆ ಮಾಡುವ ಸಂದರ್ಭಕ್ಕೆ ಸಣ್ಣ ಪುಟ್ಟ ಸೋಲುಗಳನ್ನೂ ಕೂಡ ತೆಗೆದುಕೊಳ್ಳುವ ಸಾಮರ್ಥ್ಯತೆ ಇರುವುದಿಲ್ಲ. ಪ್ರತಿ ನಾಣ್ಯಕ್ಕೆ ಎರಡು ಮುಖಗಳು ಇರುವಂತೆ ದುಡ್ಡಿನ 'ಬಳಕೆ' ಮತ್ತು 'ಉಳಿತಾಯ' ಇವೆರಡನ್ನೂ ನಾವು ಮಕ್ಕಳಿಗೆ ಸಮರ್ಪಕವಾಗಿ ಕಲಿಸಿದಲ್ಲಿ, ಮಕ್ಕಳು ಭವಿಷ್ಯದಲ್ಲಿ ಆರ್ಥಿಕ ನಿರ್ಧಾರಗಳನ್ನು ಯಶಸ್ವಿಯಾಗಿ ತೆಗೆದುಕೊಳ್ಳುವಲ್ಲಿ ಸಮರ್ಥರಾಗುತ್ತಾರೆ.  


ಹೀಗೊಂದಷ್ಟು ಟಿಪ್ಸ್ಗಳು ೭-೮ ವರ್ಷದ ವಯಸ್ಸಿಗೆ ಪುಟ್ಟ ಮಕ್ಕಳಿಗೆ ನಾವು ಮನೆಯಲ್ಲಿಯೇ ಕೊಡಬಹುದಾದ ಆರ್ಥಿಕ ಶಿಕ್ಷಣದ ಬಗ್ಗೆ. 

ದೈನಂದಿನ ವ್ಯವಹಾರ ಪರಿಚಯ : ಪ್ರಾರಂಭದಲ್ಲಿ, ಅಂಗಡಿಗೆ ಹೋದಾಗ ಮಕ್ಕಳಿಗೆ ವಸ್ತುಗಳ ಬೆಲೆಯನ್ನು ಓದಿ ಹೇಳಲು ತಿಳಿಸುವುದು, ನಮ್ಮ ಜಾಗರೂಕತೆಯಲ್ಲಿ ಆಗಾಗ್ಗೆ ನಿರ್ಧಿಷ್ಟ ದುಡ್ಡನ್ನು ನೀಡಿ ಅಂಗಡಿಯಿಂದ ಸಾಮಾನುಗಳನ್ನು ತರಲು ಹೇಳುವುದು, ನಮ್ಮ ದಿನಸಿ ಅಂಗಡಿಯ ಬಿಲ್ಲನ್ನು ಕೂಡಿ ಒಟ್ಟು ಮೊತ್ತ ತಿಳಿಸಲು ಹೇಳುವುದು. ದೊಡ್ಡ ಮತ್ತು ಸಣ್ಣ ಪ್ರಮಾಣದ ವಸ್ತುಗಳ ಬೆಲೆಯನ್ನು ವಿಭಜಿಸಲು ಕೇಳುವುದು, ಮಕ್ಕಳು ಅಂಗಡಿಯಲ್ಲಿ ಕೇಳಿ ಪಡೆದ ಚಾಕೊಲೇಟಿನ ಹಣದ ಮೊತ್ತವನ್ನು ತಿಂಗಳಿನ ಪಟ್ಟಿಯಲ್ಲಿ ಬರೆದುಕೊಳ್ಳಲು ತಿಳಿಸುವುದು ಇತ್ಯಾದಿ ದುಡ್ಡಿನ ಕುರಿತಾದ ಮೌಲ್ಯ ಪರಿಚಯ ನೀಡಬಹುದು. ಇದರಿಂದ ಮಕ್ಕಳಿಗೆ ದಿನಿತ್ಯದ ಜೀವನದಲ್ಲಿ ನಾವು ಬಳಸುವ ಮೂಲಭೂತ ವಸ್ತುಗಳ ಪರಿಚಯದ ಜೊತೆಗೆ, ಯಾವ ವಸ್ತುಗಳು ಎಷ್ಟು ಮೌಲ್ಯದ್ದು ಎಂಬಿತ್ಯಾದಿ ಪ್ರಾಪಂಚಿಕ ಜ್ಞಾನವೂ ಹೆಚ್ಚುತ್ತದೆ.

ಆಟ ಮತ್ತು ಚಟುವಟಿಕೆಗಳ ಮೂಲಕ ಕಲಿಕೆ  : ಮಕ್ಕಳಿಗೆ ಚಿಕ್ಕಂದಿನಿಂದಲೇ ಆರ್ಥಿಕ ಶಿಕ್ಷಣ ಅತ್ಯಗತ್ಯ. ಅದಕ್ಕೆ ಪೂರಕವಾಗಿ ಸಣ್ಣ ಮಕ್ಕಳೊಡನೆ ಮನೆಯಲ್ಲಿಯೇ ಅಂಗಡಿ ಮಾದರಿಯ ಆಟಗಳನ್ನು ಆಡುವುದು, ಕೊಳ್ಳುವ ಕೊಡುವ ವ್ಯಾಪಾರದ ಸಂಭಾಷಣೆ, ಅಕ್ಕಪಕ್ಕದವರ ಸಹಕಾರದೊಂದಿಗೆ ವಾರಾಂತ್ಯದಲ್ಲಿ ಮಕ್ಕಳು ತಾವೇ ಖುದ್ದಾಗಿ ತಯಾರಿಸಿದ ಖಾದ್ಯ ಅಥವಾ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಟ್ಟು ಪ್ರೋತ್ಸಾಹ ನೀಡುವುದು, ಅಪಾರ್ಟ್ಮೆಂಟ್ ಗಳಲ್ಲಿ ನಮಗೆ ಅಗತ್ಯವಿಲ್ಲದ ಇತರರಿಗೆ ಸಹಾಯಕವಾಗುವ ಸಣ್ಣ ಪುಟ್ಟ ವಸ್ತುಗಳ ಮರುಖರೀದಿಯ ಪರಿಕಲ್ಪನೆಯಲ್ಲಿ ಮಕ್ಕಳೇ ಹೋಗಿ ಮಾರಾಟ ಮಾಡುವ ಚಟುವಟಿಕೆ ನೀಡುವುದು ಇತ್ಯಾದಿ, ಮಕ್ಕಳಲ್ಲಿ ವಹಿವಾಟಿನ ಕೌಶಲ್ಯದ ಜೊತೆಗೆ, ವಾಕ್ಚತುರ್ಯಕ್ಕೂ ಕಸರತ್ತು ನೀಡಿದಂತಾಗುತ್ತದೆ 

ಶಿಸ್ತಿನ ಚಟುವಟಿಕೆಗಿರಲಿ ಪಿಗ್ಗಿಬ್ಯಾಂಕ್ : ಮಕ್ಕಳು ಉಡುಗೊರೆಯಾಗಿ ಪಡೆಯುವ ಅಥವಾ ಶ್ರಮ ಪಟ್ಟು ಗಳಿಸಿದ  ದುಡ್ಡನ್ನು ಅವರೇ ಉಳಿತಾಯ ಮಾಡಿಡುವ ಪಾಠವನ್ನು ಕಲಿಸಲು ಪಿಗ್ಗಿ ಬ್ಯಾಂಕ್ ಒಂದೊಳ್ಳೆ ಉಪಾಯ. ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ, ಉದಾಹರಣೆಗೆ ಬಟ್ಟೆ ಮಡುಚುವುದು, ಕಸ ಗುಡಿಸುವುದು, ತರಕಾರಿ ಹೆಚ್ಚುವುದು, ಶೂ ಚಪ್ಪಲಿ ಕ್ಲೀನಿಂಗ್ ಇತ್ಯಾದಿ  ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಡಲು ತಿಳಿಸಿ, ಅದಕ್ಕೆ ನಿರ್ಧಿಷ್ಟ ವರಮಾನವೆಂಬಂತೆ ದುಡ್ಡನ್ನು ಕೊಟ್ಟು ಪ್ರೋತ್ಸಾಹಿಸುವ ಮತ್ತದನ್ನು ಮಕ್ಕಳು ತಮ್ಮ ಹುಂಡಿಯಲ್ಲಿ ಕೂಡಿಡುವ ಯೋಜನೆ ಮಕ್ಕಳಿಗೆ ತಮ್ಮ ಕುರಿತಾದ ಅಭಿಮಾನ ಹೆಚ್ಚಿಸುವುದಲ್ಲದೆ, ಮನೆ ನಿರ್ವಹಣೆಯ ಕುರಿತಾದ ಜವಾಬ್ಧಾರಿ ಸಣ್ಣ ವಯಸ್ಸಿನಲ್ಲಿಯೇ ತಿಳಿದಂತಾಗುತ್ತದೆ. 

ಅಗತ್ಯ  ಮತ್ತು ಅನಗತ್ಯ ವಸ್ತುಗಳ ವಿಶ್ಲೇಷಣೆ : ತಮ್ಮ ಸ್ನೇಹಿತರ ಬಳಿ ಇರುವ ವಸ್ತುಗಳ ಕಂಡು ಮೋಹಗೊಂಡು ತನಗೂ ಅವೆಲ್ಲ ಸೌಲಭ್ಯಗಳು ಬೇಕು ಎಂದು ಕೇಳುವುದು ಮಕ್ಕಳ ಸಹಜ ಗುಣ. ಮಕ್ಕಳಿಗೆ 'ಅನಿವಾರ್ಯತೆ' (needs') ಮತ್ತು 'ಇಷ್ಟ' (wants) ಗಳ ಮಧ್ಯದ ವ್ಯತ್ಯಾಸವನ್ನು ಸಹನೆಯಿಂದ ತಿಳಿಸಿದರೆ  ಮಕ್ಕಳಿಗೆ ಯಾವಾಗ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬ ಅರಿವು ದೊರೆಯುತ್ತದೆ. ಅವರ ಆಸೆಗಳಿಗೆ, ನಮ್ಮದೇ ಸ್ಥಿಮಿತದಲ್ಲಿ ಯಾವ ವಸ್ತುಗಳ ಪರ್ಯಾಯ ವ್ಯವಸ್ಥೆಮಾಡಬಹುದು? ಸ್ನೇಹಿತರು ತಮ್ಮ ತಮ್ಮಲ್ಲಿಯೇ ಪುಸ್ತಕ ಮತ್ತು ಆಟಿಕೆಗಳನ್ನು ಹಂಚಿಕೊಂಡು ಬಳಸುವ ವಿಧಾನ ಇತ್ಯಾದಿ ವಿಷಯಗಳ ಮಾದರಿಯನ್ನು ಮಕ್ಕಳಿಗೆ ತಿಳಿಸುತ್ತ ಬಂದರೆ, ಮಕ್ಕಳಲ್ಲಿ ಉತ್ತಮ ನಿರ್ಣಾಯಕ ಮನಸ್ಥಿತಿ ಒಂದೇ ಅಲ್ಲದೆ, ಕ್ರಿಯಾತ್ಮಕತೆಯೂ ಹೆಚ್ಚುತ್ತದೆ. 

ಖರ್ಚು ವೆಚ್ಚಗಳ ಮಾಹಿತಿ : ಪಾಕೆಟ್ ಮನಿ ಎಂದು ಮಕ್ಕಳ ಸ್ವಂತ ಖರ್ಚುಗಳಿಗೆ ಹಣ ನೀಡುವುದರ ಹಿಂದೆ ಅನುಕೂಲ ಅನಾನುಕೂಲ ಎರಡೂ ಇರುತ್ತದೆ. ಮಕ್ಕಳನ್ನು ಮನೆಯ ನಿಯಮಿತ ಖರ್ಚುವೆಚ್ಚಗಳ ಬಗ್ಗೆ ಮಾಹಿತಿ ನೀಡುವುದು ಒಂದು ಉತ್ತಮ ಅಭ್ಯಾಸ.  ತಿಂಗಳ ಬಡ್ಜೆಟ್ ಮಾಡಿಕೊಳ್ಳುವಾಗ, ತಿಂಗಳ ಪ್ರಾರಂಭಿಕ ಖರ್ಚು, ದೈನಂದಿನ ಖರ್ಚು, ಅಕಸ್ಮಾತ್ ತೊಂದರೆಗಳಿಗೆ ಬೇಕಾಗುವ ಹಣ ಇತ್ಯಾದಿ ವಿಷಯಗಳ ಕುರಿತಾಗಿ  ಮಕ್ಕಳನ್ನೂ ಕೂರಿಸಿಕೊಂಡು ಅವರಿಗೆ ಅರ್ಥವಾಗುವ ರೀತಿಯಲ್ಲಿಚರ್ಚಿಸಿ ಪ್ಲಾನ್ ಮಾಡಿದರೆ, ಮಕ್ಕಳಿಗೆ ಅದಕ್ಕಿಂತ ಉತ್ತಮ ಶಿಕ್ಷಣ ಇನ್ನೊಂದಿಲ್ಲ. ಮಕ್ಕಳಿಗೆ ಅವರ ತಿಂಗಳ ಖರ್ಚುಗಳ ಪಟ್ಟಿ ಮಾಡಲು ತಿಳಿಸಿ, ಅದಕ್ಕೆ ತಕ್ಕಂತೆ ಸ್ವಲ್ಪ ಪ್ರಮಾಣದ ಪಾಕೆಟ್ ಮನಿ ಕೊಟ್ಟು, ತಿಂಗಳ ಕೊನೆಯಲ್ಲಿ ಮಕ್ಕಳು ಯಾವ ರೀತಿಯಲ್ಲಿ ಅದನ್ನು ನಿಭಾಯಿಸಿಕೊಂಡರು ಎಂಬ ಪರಿಶೀಲನೆ ಕೂಡ ಮಕ್ಕಳಿಗೆ ತಾವು ಎಲ್ಲಿ ಎಡವುತ್ತಿದ್ದೇವೆ, ಎಲ್ಲಿ ಉಳಿಸಬಹುದು ಎಂಬ ಮಾಹಿತಿ ಸಿಗುತ್ತಾ ಹೋಗುತ್ತದೆ. 

ಮಕ್ಕಳ ಗಳಿಕೆ ಮತ್ತು ಉಳಿತಾಯಕ್ಕೆ ಇರಲಿ ಮೆಚ್ಚುಗೆ : ಯಾವುದೇ ಒಳ್ಳೆಯ ಚಟುವಟಿಕೆಯು ಶಾಶ್ವತವಾಗಲು, ಅದಕ್ಕೆ ನಿರಂತರ ಪ್ರೋತ್ಸಾಹ ಅತ್ಯಗತ್ಯ. ಒಂದಷ್ಟು ಮೆಚ್ಚುಗೆ ಕೂಡ ಅತ್ಯಂತ ಪೂರಕ. ಮಕ್ಕಳು ಮನೆಯಲ್ಲಿ ಅಥವಾ ಹೊರಗಡೆ ಹಣದ ನಿರ್ವಹಣೆ ಕುರಿತಾಗಿ ಸಣ್ಣ ಪುಟ್ಟ ತಪ್ಪು ಮಾಡಿದರೆ, ಹೀನಾಯವಾಗಿ ಶಿಕ್ಷಿಸದೆ, ಮನವರಿಕೆ ಮಾಡಿಕೊಟ್ಟು ಮರು ಅವಕಾಶ ನೀಡಿ ಪ್ರೋತ್ಸಾಹಿಸಬೇಕು. ಮಕ್ಕಳು ಸರಿಯಾದ ರೀತಿಯಲ್ಲಿ ದುಡ್ಡಿನ ಎಣಿಕೆ, ವ್ಯವಹಾರ, ಉಳಿತಾಯ ಮಾಡಿದಾಗ ಮುಕ್ತವಾಗಿ ಪ್ರಶಂಸಿಬೇಕು.  ಇದರಿಂದ ಮುಂದಕ್ಕೆ ಅವರೇ ಖುದ್ದಾಗಿ ಆರ್ಥಿಕ ಯೋಜನೆಗಳನ್ನು ಕೈಗೊಳ್ಳಲು ಪ್ರೇರಣೆ ನೀಡಿದಂತೆ ಆಗುತ್ತದೆ. 

ನಾವೇ ಮಾದರಿ : ಬರುವ ವರಮಾನ, ಖರ್ಚು, ಉಳಿತಾಯ ಮತ್ತು ದಾನಕ್ಕೆ ಇಡಬೇಕಾದಷ್ಟು ಅಂಶ ಇತ್ಯಾದಿ ಶಿಸ್ತು ಇಲ್ಲದೆ ಇರುವ ಕೊಳ್ಳುಬಾಕತನ ರೀತಿಯ ಜೀವನ ಶೈಲಿ ನಮ್ಮದಾಗಿದ್ದರೆ, ಮಕ್ಕಳಿಗೆ ಬಾಯಿಮಾತು ಮತ್ತು ಕಠಿಣ ನಿಯಮಗಳ ಅವರ ಮೇಲೆ ಹೇರಿ, ದುಡ್ಡಿನ ಮೌಲ್ಯದ ಪಾಠ ಕಲಿಸಲು ಸಾಧ್ಯವಿಲ್ಲ. ಕಂಡದ್ದೆಲ್ಲ ಒಂದು ಬೆರಳ ಕ್ಲಿಕ್ ನಲ್ಲಿ ಸಿಗುವಷ್ಟು ಆನ್ಲೈನ್ ಶಾಪಿಂಗ್ ವ್ಯವಸ್ಥೆ ಇರುವಾಗ, ನಮಗಾಗಿ ಅಲ್ಲದೆ, ಇತರರ ಮೆಚ್ಚಿಸುವ ಸಲುವಾಗಿ ಕೊಳ್ಳುವ ಮನಸ್ಥಿತಿ ನಮ್ಮದಾದರೆ, ಮಕ್ಕಳಿಗೆ ಅದೇ ಬದುಕು ಒಗ್ಗಿಹೋಗುತ್ತದೆ. ಮುಂದಕ್ಕೆ ಸ್ಪರ್ಧಾತ್ಮಕ ಸಂದರ್ಭ ಬಂದಾಗ ಯಾವ ರೀತಿಯಲ್ಲಿ ಸನ್ನಿವೇಶಗಳನ್ನು ಸಂಭಾಳಿಸಬೇಕು ಎನ್ನುವುದು ತಿಳಿಯದೆ ಸೋಲುತ್ತಾರೆ. ಹಾಗಾಗಿ ಮನಸ್ಸಿಗೆ ಕಡಿವಾಣ ಹಾಕಿ ಸರಿಯಾದ ಆರ್ಥಿಕ ಪ್ಲಾನಿಂಗ್ ಮಕ್ಕಳಿಗೂ ಮುಂಚೆ ನಾವು ಕಲಿಯುವುದು ಅವಶ್ಯಕ.